From Wikipedia, the free encyclopedia
ಹತ್ತಿ ಗಾಸಿಪಿಯಮ್ ಜಾತಿಯ ಗಿಡಗಳ ಬೀಜದ ಸುತ್ತಲು ಬೆಳೆಯುವ ಮೃದು ನಾರು. ಗಾಸಿಪಿಯಮ್ ಗಿಡಗಳು ಅಮೇರಿಕ, ಭಾರತ ಮತ್ತು ಆಫ್ರಿಕಗಳ ಮೂಲದವು. ಆದರೆ ಇಂದು ಪ್ರಪಂಚದಾದ್ಯಂತ ಸಾಗುವಳಿಗೆ, ಮೂಲತಃ ಅಮೇರಿಕ ಖಂಡದ ಗಾಸಿಪಿಯಮ್ ಹಿರ್ಸುಟಮ್ ಮತ್ತು ಗಾಸಿಪಿಯಮ್ ಬಾರ್ಬಡೆನ್ಸ್ ತಳಿಗಳು ಉಪಯೋಗಿಸಲ್ಪಡುತ್ತವೆ. ಹತ್ತಿಯ ನಾರಿನಿಂದ ಸೆಣೆದ ದಾರದಿಂದ ಮೃದುವಾದ, ಗಾಳಿ ತೂರಬಲ್ಲ ಬಟ್ಟೆ ತಯಾರಿಸಲಾಗುತ್ತದೆ. ಹತ್ತಿ ನಾರು ಪರಿಷ್ಕರಣೆಯ ನಂತರ ಶುದ್ಧ ಸೆಲ್ಲ್ಯುಲೊಸ್ ಮಾತ್ರ ಉಳಿಯುತ್ತದೆ. ಈ ಸೆಲ್ಲ್ಯುಲೊಸ್ನ ರಚನೆ ಹತ್ತಿಗೆ ಅದರ ತ್ರಾಣ ಮತ್ತು ಹೀರುವಿಕೆಯನ್ನು ನೀಡುತ್ತದೆ. ಹತ್ತಿ ಪ್ರಪಂಚದಲ್ಲಿ ಬಟ್ಟೆಗಾಗಿ ಅತ್ಯಂತ ಹೇರಳವಾಗಿ ಉಪಯೋಗಿಸಲ್ಪಡುವ ನೈಸರ್ಗಿಕ ಪದಾರ್ಥ.
ವಿಶ್ವದಲ್ಲಿ ಒಟ್ಟು ೩೯ ಹತ್ತಿ ಪ್ರಜಾತಿಗಳಿದ್ದರೂ, ಬಟ್ಟೆ ಕೈಗಾರಿಕೆಗೆ ಸರಿಹೊಂದುವ ಹತ್ತಿ ಪ್ರಜಾತಿಗಳು ಕೇವಲ ೪.
ಇದು ಮೂಲತಃ ಭಾರತ ಉಪಖಂಡದ ವಾಯವ್ಯ ಪ್ರದೇಶದ್ದು (ಪಾಕಿಸ್ತಾನ, ಆಫ್ಘಾನಿಸ್ತಾನ). ಇದು ಇಂದಿಗೂ ಇಲ್ಲಿ ವಾರ್ಷಿಕ ಬೆಳೆ. ಹರಪ್ಪ ಹಾಗೂ ಸಿಂಧೂನದಿ ತೀರದ ಸಭ್ಯತೆಯ ಕಾಲದಲ್ಲಿ, ಇದು ಅತ್ಯಂತ ಭಾರಿ ಪ್ರಮಾಣದಲ್ಲಿದ್ದಿತೆಂಬುದು ತಜ್ಞರ ಅಭಿಪ್ರಾಯ. ಕ್ರಿ.ಪೂ. ೨೦ನೇ ಶತಮಾನದಲ್ಲೇ ಪೂರ್ವ ಆಫ್ರಿಕದ ನ್ಯೂಬಿಯದ ’ಮೆರೋ’ ಜನಸಮುದಾಯ ಇದರಿಂದ ಹತ್ತಿಬಟ್ಟೆಗಳನ್ನು ತಯಾರಿಸುವಲ್ಲಿ ಪ್ರಾವೀಣ್ಯತೆಯನ್ನು ಹೊಂದಿದ್ದರು. ೯ನೇ ಶತಮಾನದಲ್ಲಿ ನೈಜೀರಿಯ ಕೂಡ ಹತ್ತಿ ಸಂಬಂಧದ ಉದ್ಯೋಗದಲ್ಲಿ ಮುಂದಿತ್ತು.
ಆಫ್ರಿಕ ಮತ್ತು ಪಶ್ಚಿಮ ಏಷಿಯಾದ ಬೆಳೆ. ಸಹರಾ ಮರುಭೂಮಿ, ಅರ್ಥಮರುಭೂಮಿ ಅರೆಬಿಯ, ಸವನ್ನ ಪ್ರದೇಶಗಳಲ್ಲಿ ಕಾಣುವ ವಾರ್ಷಿಕ ಬೆಳೆ. ದಕ್ಷಿಣ ಆಫ್ರಿಕಾದಿಂದ ಪರ್ಶಿಯ, ಆಫ್ಘಾನಿಸ್ಥಾನ, ಟರ್ಕಿ, ಸ್ಪೆನ್, ಯುಕ್ರೇನ್, ಟುರ್ಕಿಸ್ತಾನ್, ಭಾರತ, ಹಾಗೂ ಚೈನದ ವರೆಗೆ ಇದು ವ್ಯಾಪಕವಾಗಿ ಬೆಳೆದಿದೆ. ಇದು ಚೈನದಲ್ಲಿ ಕ್ರಿ.ಶ. ೬೦೦ ರಲ್ಲಿ ಹತ್ತಿಯು ವಾರ್ಷಿಕ ಬೆಳೆಯಾಗಿತ್ತೆಂದು ಮೂಲಗಳು ವರದಿಮಾಡಿವೆ.
ಹರ್ಸುಟಮ್ ಹತ್ತಿ, ಮುಖ್ಯವಾಗಿ ಮೆಕ್ಸಿಕೊ ದೇಶದ ಬೆಳೆ. ಈ ಕಾಡುಜಾತಿ ಹತ್ತಿಗಿಡಗಳು, ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಮಹಾಸಾಗರಗಳ ತೀರಪ್ರದೇಶಗಳಲ್ಲಿ ಬೆಳೆಯುತ್ತಿದ್ದವು. ಉತ್ತರ ಅಮೇರಿಕದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ, ಮತ್ತು ವೆಸ್ಟ್ ಇಂಡೀಸ್ ದ್ವೀಪಗಳಲ್ಲಿ ಕಾಣಬರುತ್ತವೆ. ಅಲ್ಲಿನ ಜನಜಾತಿ, ತೆಹುಕಾನ್ ಕ್ರಿ.ಪೂ ೨ನೇ ಶತಮಾನದಲ್ಲೆ ಹಗ್ಗ, ಹುರಿ, ಬಟ್ಟೆ-ಬರೆಗಳನ್ನು ಮಾಡಿಕೊಳ್ಳುತ್ತಿದ್ದ ಬಗ್ಗೆ ಪುರಾವೆಯಿದೆ. ಮಾಯಾ ನಾಗರೀಕತೆ ಮತ್ತು ಅಝಟೆಕ್ ನಾಗರೀಕತೆಯ ಜನರೂ ಹತ್ತಿ ಪದಾರ್ಥಗಳನ್ನು ಮಾಡಿಕೊಳ್ಳುತ್ತಿದ್ದರು. ೨ನೇ ಶತಮಾನದಲ್ಲಿ ಅರಿಝೋನ ಪ್ರಾಂತ್ಯದಲ್ಲೂ, ಹತ್ತಿವಸ್ತ್ರದ ಬಳಕೆಯ ಪುರಾವೆಗಳು ಕಂಡುಬಂದಿವೆ. ೧೬ನೇ ಶತಮಾನದಲ್ಲಿ, ಸ್ಪಾನಿಷ್ ವಲಸೆಗಾರರು, ಮೆಕ್ಸಿಕೊ ಮತ್ತು ಅಕ್ಕ-ಪಕ್ಕದ ಪ್ರದೇಶಗಳಲ್ಲಿ ಹತ್ತಿಬೆಳೆ ವ್ಯವಸಾಯವನ್ನು ಮಾಡತೊಡಗಿದರು.
ಇದು ವೆಸ್ಟ್ ಇಂಡೀಸ್ನ ಬಾರ್ಬಡೋಸ್ ದ್ವೀಪಸಮುದಾಯಗಳಲ್ಲಿ ಬೆಳೆಯುವ ವಿಶ್ವದ ಅತ್ಯಂತ ಅಮೂಲ್ಯವಾದ ಹತ್ತಿ- ತಳಿಗಳು. ಪೂರ್ಣ ಬಿಳುಪಿಲ್ಲದ ಬೂದುಬಣ್ಣದ ನಾರನ್ನು ಹೊಂದಿರುವುದು ಈ ಹತ್ತಿಯ ವಿಶೇಷತೆ. ಅತಿ- ಉದ್ದವಾದ ತಂತುಗಳನ್ನು ಹೊಂದಿದ್ದು, ರೇಷ್ಮೆಯಂತೆ, ಮೃದುವಾಗಿರುತ್ತದೆ. ಇದನ್ನು ಉಪಯೋಗಿಸಿ ೧೨೦ ರಿಂದ, ೩೦೦ ಅಂಕಗಳ ಅತ್ಯಂತ ನವಿರಾದ, ನಜೂಕಾದ ಹತ್ತಿದಾರಗಳನ್ನು ನೂಲಬಹುದು. ಈ ಹತ್ತಿಯನ್ನು ಈಜಿಪ್ಟ್ನಲ್ಲಿ ಬಳಕೆಗೆ ತಂದವರು, ಬ್ರಿಟಿಷ್ ಮತ್ತು ಅಮೆರಿಕದ ಕೃಷಿ ವೈಜ್ಞಾನಿಕರು. ಈಗ ಅಮೆರಿಕ ದೇಶದಲ್ಲಿ, ’ಪಿಮ’ ಎಂಬ ಉತ್ಕೃಷ್ಟ ಹತ್ತಿಯ ಆವಿಷ್ಕಾರವಾಗಿದೆ. ಪಿಮ ಹತ್ತಿಗಳಿಗೆ ವಿಶ್ವದಲ್ಲಿ ಬಹಳ ಬೇಡಿಕೆ ಇದೆ.
ಅಮೆರಿಕದಲ್ಲಿ ಬೆಳೆದ ಹತ್ತಿ ಬೆಳೆಯ ಸುಮಾರು ಪಾಲು, ಅಲ್ಲಿನ ಗುಲಾಮ ಕೂಲಿಗಾರರ ಸಹಾಯದಿಂದ ಆಗುತ್ತಿತ್ತು. ಇದು 'ಜಿನ್ನಿಂಗ್ ಯಂತ್ರ' ದ ಆವಿಷ್ಕಾರದ ತರುವಾಯ, ಇನ್ನೂ ಹೆಚ್ಚಾಯಿತು. ಇದರಿಂದ ಮಾರುಕಟ್ಟೆಯಲ್ಲಿ ಮಾರಾಟಾವಾಗುತ್ತಿದ್ದ ಹತ್ತಿಬಟ್ಟೆಗಳ ಪಾಲು ಮೊದಲು ಶೇ. ೫ % ಇದ್ದದ್ದು ಶೇ ೭೫ % ಕ್ಕೆ ಏರಿತು. ೧೮೩೫ರಲ್ಲಿ, ಅಮೆರಿಕದ ದಕ್ಷಿಣ ಪ್ರಾಂತ್ಯಗಳು ಗುಲಾಮಗಿರಿಯನ್ನು ಬಹಿಷ್ಕರಿಸಿದ್ದವು. ಆದರೆ, ಅಮೆರಿಕದ ಆಗ್ನೇಯ ರಾಜ್ಯಗಳಲ್ಲಿ ಇದರ ಪ್ರಭಾವ ಮುಂದುವರೆಯಿತು. ೧೮೫೦ರಲ್ಲಿ, ಇಂಗ್ಲೆಂಡಿಗೆ ಸರಬರಾಜುಮಾಡುತ್ತಿದ್ದ ೮೦% ಹತ್ತಿ ರಫ್ತು , ಈ ರಾಜ್ಯಗಳಿಂದ ಹೋಗುತ್ತಿತ್ತು. ಆದರೆ ೧೯೬೫ರ, ಅಮೇರಿಕದ ಅಂತಃಕಲಹದ ನಂತರ, ಗುಲಾಮ ಕೂಲಿಗಾರರಿಗೆ ಸ್ವಾತಂತ್ರ್ಯ ಬಂದಿತು. ಈ ಕಾರಣಗಳಿಂದಾಗಿ ಹತ್ತಿ- ಬೆಳೆ, ಸ್ವಲ್ಪ ಕಾಲ ನಿಂತೇ ಹೋಯಿತು. ನಂತರ, ಕೂಲಿಗಾರರ ಸಹಾಯವಿಲ್ಲದೆ, ಯಂತ್ರಗಳ ಮುಖೇನ ಹತ್ತಿ ಬಿಡಿಸುವುದರಿಂದ ಹಿಡಿದು, ದಾರ ನೂಲುವ, ಬಟ್ಟೆತಯಾರಿಸುವ ಎಲ್ಲಾ ಪರಿಕ್ರಮಗಳೂ ಯಂತ್ರದ ಮೂಲಕವೇ ನಡೆಯುವ ಪರಿಪಾಠ ಪ್ರಾರಂಭವಾಯಿತು. ಈ ಎಲ್ಲಾ ಬೆಳವಣಿಗೆಗಳೂ ಇಂಗ್ಲೆಂಡಿನ ಹತ್ತಿ ಕಾರ್ಖಾನೆಗಳಿಗೆ ಸರಬರಾಜುಮಾಡುವ ಕಚ್ಚಾಹತ್ತಿಯ ಪ್ರಮಾಣವನ್ನು ನಿಯಂತ್ರಿಸಿದವು.
ದೇಶ | ಸಾಗುವಳಿ ಪ್ರದೇಶ (ಮಿಲಿಯನ್ ಹೆಕ್ಟೇರುಗಳು) | ಉತ್ಪಾದನೆ (ಮಿಲಿಯನ್ ಟನ್ಗಳು) | ಪ್ರತಿ ಹೆಕ್ಟೇರಿಗೆ ಉತ್ಪಾದನೆ (ಕಿಲೊಗ್ರಾಂ) |
---|---|---|---|
ಚೀನ | ೪.೧೦ | ೪.೨೦ | ೧,೦೨೪ |
ಅಮೇರಿಕ ದೇಶ | ೫.೮೦ | ೩.೯೦ | ೬೭೨ |
ಭಾರತ | ೯.೧೦ | ೨.೮೦ | ೩೦೮ |
ಪ್ರಪಂಚ | ೩೩.೮೯ | ೧೯.೬೬ | ೫೭೬ |
೨೦೦೭ರಲ್ಲಿ ವಿಶ್ವದ ೫ ದೊಡ್ಡ ಹತ್ತಿ ಉತ್ಪಾದಕ ರಾಷ್ಟ್ರಗಳು ಕ್ರಮಾಂಕದಲ್ಲಿ ಚೀನ, ಭಾರತ, ಅಮೇರಿಕ ಸಂಯುಕ್ತ ಸಂಸ್ಥಾನ, ಪಾಕಿಸ್ತಾನ ಮತ್ತು ಬ್ರೆಜಿಲ್ ಆಗಿವೆ. [1] ಹತ್ತಿಯ ಬೆಳವಣೆಗೆ ಸಾಕಷ್ಟು ಬಿಸಿಲು ಮತ್ತು ೬-೧೨ ಸೆಂಟಿಮೀಟರ್ ಮಳೆ ಬೇಕಾಗುತ್ತದೆ. ಮಣ್ಣಿನಲ್ಲಿ ಪೋಷಕಾಂಶ ಅತೀವವಾಗಿ ಬೇಕಾಗಿಲ್ಲ. ಹತ್ತಿ ಬೆಳೆ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ನೀರಾವರಿ ಸೌಲಭ್ಯವಿರುವ ಪ್ರದೇಶಗಳಲ್ಲಿ ಇದು ಹೆಚ್ಚಾಗಿ ಬೆಳೆಯಲ್ಪಡುತ್ತದೆ. ಆಧುನಿಕ ಹತ್ತಿ ಸಾಗುವಳಿಯಲ್ಲಿ ಕೃತಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಹೆಚ್ಚು ಬೇಕಾಗುತ್ತದೆ. ವಿಜ್ಞಾನಿಗಳ ಸತತ ಪ್ರಯತ್ನದಿಂದಾಗಿ ಒಂದು ಕಾಲದಲ್ಲಿ ವೃಕ್ಷವಾಗಿದ್ದ ಮರ-ಹತ್ತಿ, ಈಗ ಹೊಲಗಳಲ್ಲಿ ಪೊದೆಯಂತೆ ಬೆಳೆಯುತ್ತಿದೆ. ಮತ್ತು ಮೊದಲು ಬಹುವಾರ್ಷಿಕವಾಗಿದ್ದ ಈ ಬೆಳೆ ಈಗ ವಾರ್ಷಿಕ ಬೆಳೆಯಾಗಿದೆ.
ಅಮೇರಿಕದ ಕ್ರಾಂತಿಕಾರಿ ಯುದ್ಧದ ಸಮಯದಲ್ಲಿ ಇಂಗ್ಲೆಂಡ್ಗೆ ಅಲ್ಲಿನ ವಸಾಹತುಗಳಿಂದ ಬರುವ ಹತ್ತಿ ಕಡಿಮೆಯಾಯಿತು. ಇದು ಇಂಗ್ಲೆಂಡಿನ ಔದ್ಯೋಗಿಕ ಕ್ರಾಂತಿಯ ಸಮಯವಾಗಿದ್ದರಿಂದ ಯಂತ್ರೀಕರಣಕ್ಕೆ ಹೆಚ್ಚು ಒತ್ತು ನೀಡಲಾಯಿತು. ಸ್ಪಿನ್ನಿಂಗ್ ಜೆನ್ನಿಯ ಆವಿಷ್ಕಾರ ಇದಕ್ಕೆ ನಾಂದಿಯಾಯಿತು. ನಂತರ, ಆರ್ಕ್ರೈಟ್ನ ಯಂತ್ರ ಹಾಗು, ಸ್ಯಾಮ್ಯುಯಲ್ ಕ್ರಾಂಟನ್ನ ’ಮ್ಯೂಲ್ ಯಂತ್ರ’ ಕೂಡ ಉಪಯೋಗಕ್ಕೆ ಬಂದವು. ಹತ್ತಿ ಕೀಳುವ ಯಂತ್ರಗಳು ಕ್ರಮೇಣ ಬಲಶಾಲಿಯಾಗಿವೆ. ಕಿತ್ತ ಹತ್ತಿಯ ಶೇಖರಣೆಯಲ್ಲೂ ಯಾಂತ್ರಿಕತೆ ಪ್ರಭಾವ ಬೀರಿದೆ. ಹತ್ತಿ ಮಾಡ್ಯೂಲ್ ಬಿಲ್ಡರ್ ಯಂತ್ರವು ಸಂಗ್ರಹಿಸಲ್ಪಟ್ಟ ಹತ್ತಿಯನ್ನು ಅಡಕವಾಗಿ ದೊಡ್ಡ ಚೌಕಗಳಲ್ಲಿ ಶೇಖರಿಸುತ್ತದೆ.
ಸಂಗ್ರಹಿಸಲ್ಪಟ್ಟ ಹತ್ತಿಯಿಂದ ಮೊದಲು ಬೀಜವನ್ನು ತಗೆಯಲಾಗುತ್ತದೆ. ಇದನ್ನು Ginning ಎಂದು ಕರೆಯಲಾಗುತ್ತದೆ. ಈ ಹತ್ತಿಯನ್ನು ದಾರವಾಗಿ ಸೆಣೆಯಲಾಗುತ್ತದೆ. ಸಂಸ್ಕರಣೆಯಲ್ಲಿ ಯಂತ್ರಗಳ ಪಾತ್ರ ಪ್ರಮುಖ. ಅಮೇರಿಕ ದೇಶದ ಏಲ್ ವಿಶ್ವವಿದ್ಯಾಲಯದ ಎಲಿ ವಿಟ್ನಿ ೧೭೯೩ರಲ್ಲಿ ಹತ್ತಿಯ ಬೀಜವನ್ನು ಬೇರ್ಪಡಿಸುವ ಯಂತ್ರವನ್ನು ನಿರ್ಮಿಸಿ ಒಂದು ಕ್ರಾಂತಿಯನ್ನೇ ತಂದನು.
ಹತ್ತಿಯು ಪ್ರಮುಖವಾಗಿ ಬಟ್ಟೆಯ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ. ಹೆಚ್ಚು ಹೀರುವಿಕೆಯ ಟೆರಿಕ್ಲಾತ್, ಜೀನ್ಸ್ ಅನ್ನು ತಯಾರಿಸುವ ಡೆನಿಮ್ ಬಟ್ಟೆ, ಕಾರ್ಡುರಾಯ್, ಇತ್ಯಾದಿ ಪ್ರಕಾರಗಳಲ್ಲಿ ಹತ್ತಿಯನ್ನು ಉಪಯೋಗಿಸಲಾಗುತ್ತದೆ. ಕೃತಕ ಪದಾರ್ಥಗಳಾದ ರೆಯಾನ್ ಮತ್ತು ಪಾಲಿಯೆಸ್ಟರ್ಗಳ ಜೊತೆಗೂ ಹತ್ತಿಯನ್ನು ಮಿಶ್ರಿಸಿ ಬಟ್ಟೆಯನ್ನು ತಯಾರಿಸುತ್ತಾರೆ. ಆಸ್ಪತ್ರೆಗೆ ಬೇಕಾಗುವ ಬ್ಯಾಂಡೇಜ್ ಹತ್ತಿ, ಬ್ಯಾಂಡೇಜ್ ಕಟ್ಟಲು ಬಳಸುವ ಸರ್ಜಿಕಲ್ ಹತ್ತಿ ಬಟ್ಟೆ, ಹೆಣ್ಣುಮಕ್ಕಳು ಬಳಸುವ 'ಸ್ಯಾನಿಟರಿವೇರ್ಗಳು' ಹತ್ತಿಯ ಇತರ ಉಪಯೋಗಗಳು.
ಬಟ್ಟೆ ಕೈಗಾರಿಕೆಯಲ್ಲದೆ ಮೀನು ಜಾಲ, ಕಾಫಿ ಫಿಲ್ಟರ್, ಸಿಡಿಮದ್ದುಗಳ ತಯಾರಿಕೆಯಲ್ಲೂ ಹತ್ತಿಯ ಉಪಯೋಗವಿದೆ. ಹಾಸಿಗೆಗಳನ್ನು ತುಂಬಲು ಕೂಡ ಹತ್ತಿಯನ್ನು ಉಪಯೋಗಿಸಲಾಗುತ್ತದೆ.
ಹತ್ತಿಯ ಬೀಜಗಳಿಂದ ಅಡಿಗೆ ಎಣ್ಣೆಯನ್ನು ತಯಾರಿಸಲಾಗುತ್ತದೆ. ಎಣ್ಣೆ ತಯಾರಕೆಯಿಂದ ಉಳಿಯುವ ಹಿಂಡಿಯನ್ನು ಪ್ರಾಣಿಗಳ ಆಹಾರವಾಗಿ ಬಳಸಲಾಗುತ್ತದೆ. ಹತ್ತಿ ಕಾರ್ಖಾನೆಗಳಲ್ಲಿ ಶೇಖರವಾಗುವ ತೀರ ನುಸಿಯಂತಹ ಪುಡಿಯಿಂದ (Micro dust) ಬಯೋಗ್ಯಾಸ್ ತಯಾರಿಸಬಹುದು. ತಿನ್ನಲು ಯೋಗ್ಯವಾದ ಅಣಬೆಗಳನ್ನು ಬೆಳೆಸಲು ಕೂಡ ಹತ್ತಿಯ ಉಪಯೋಗವಿದೆ. ಪಾರ್ಟಿಕಲ್ ಬೋರ್ಡ್, ವಿಧ-ವಿಧದ ಕಾಗದಗಳು, ಪ್ಯಾಕಿಂಗ್ ಮಾಡಲು ದಪ್ಪಕಾಗದ, ಕಾರುಗೇಟೆಡ್ ಪೆಟ್ಟಿಗೆಗಳು, ಮುಂತಾದವುಗಳ ತಯಾರಿಕೆಯಲ್ಲೂ ಹತ್ತಿಯ ಬಳಕೆಯಿದೆ.
ಹತ್ತಿಯ ಸಾಗುವಳಿಯಲ್ಲಿ ಉಂಟಾದ ಮುನ್ನಡೆಗಳಂತೆ, ಹತ್ತಿಯ ನಾರಿನ ಗುಣಮಟ್ಟವನ್ನು ಹೆಚ್ಚಿಸಲೂ ಕೂಡ ಪ್ರಪಂಚಾದ್ಯಂತ ಪ್ರಯತ್ನಗಳು ಸಾಗಿದವು.
ಈ ಸಂಸ್ಥೆಯ ಸ್ಥಾಪನೆಯಿಂದ ವಿಶ್ವದ ಹತ್ತಿತಳಿಗಳಲ್ಲಿ ಸುಧಾರಣೆ ಮತ್ತು ಗಮನಾರ್ಹ ಪ್ರಗತಿಯುಂಟಾಯಿತು. ಈ ಸಂಘವನ್ನು ಸ್ಥಾಪಿಸಿದವರು ಸರ್ ಆಲ್ಫ್ರೆಡ್ ಜೋನ್ಸ್ ಮತ್ತು ಜೆ. ಆರ್ಥರ್ ಹಟನ್. ಇದರ ಜೊತೆಯ "ಶರ್ಲಿ ಇನ್ಸ್ಟಿಟ್ಯೂಟ್ ಈಗ (BTTG), ಭಾರತವೂ ಸೇರಿದಂತೆ, ಪ್ರಪಂಚದ ಹತ್ತಿ ಸುಧಾರಿಸುವ ಕೇಂದ್ರಗಳಿಗೆಲ್ಲಾ ತನಿಕೆ ಮತ್ತು ವೈಜ್ಞಾನಿಕ ಸಲಹೆ, ಮತ್ತು ತಾಂತ್ರಿಕ ಸಹಾಯ ಒದಗಿಸಿತು. ಹತ್ತಿ ಗುಣವಿಶೇಷಣೆ ಮತ್ತು ಅದರ ಎಲ್ಲಾ ಮಾಹಿತಿಗಳಿಗೂ ವಿಶ್ವದ ಹತ್ತಿ ಸಂಶೋಧಕರು ಉತ್ಸುಕತೆಯಿಂದ ಇಂದಿಗೂ ಎದುರುನೋಡುತ್ತಾರೆ. ಬಿಸಿಜಿಯ ಕಾರ್ಯವ್ಯಾಪ್ತಿ, ಯುಗಾಂಡ, ಕಿನ್ಯಾ, ದಕ್ಷಿಣ ಆಫ್ರಿಕ, ಟ್ಯಾಂಗನಿಕ, ರೊಢೀಶಿಯ, ಸೂಡಾನ್, ಈಜಿಪ್ಟ್ ಮತ್ತು ಭಾರತಗಳಲ್ಲಾಯಿತು.
ಈ ಸಂಸ್ಥೆಯು ಗಿಝಿರ ದಂಡೆಯಲ್ಲಿರುವ ಹೊಲಗಳಲ್ಲಿ ನೀರಾವರಿ ವ್ಯವಸ್ಥೆಯನ್ನು ಮಾಡಿತು. ಅಲ್ಲಿನ ಸೆನ್ನಾರ್ ಅಣೆಕಟ್ಟನ್ನು ನಿರ್ಮಿಸಿ, ಸಾವಿರಾರು ಎಕರೆ ಭೂಮಿಗೆ ನೀರಿನ ಸೌಲಭ್ಯವನ್ನು ಮಾಡಿಕೊಡಲಾಯಿತು. ಬ್ರಿಟಿಶ ಜನತೆ, ಸರ್ಕಾರದ, ಆರ್ಥಿಕ ಸಹಾಯ, ಮುಂದಾಳತ್ವವನ್ನು ವಹಿಸಿ, ಮಾಡಿದ ಸಹಾಯದಿಂದ ಇಲ್ಲಿ ಉತ್ಪಾದಿಸುವ ಹತ್ತಿ ಗುಣಮಟ್ಟ, ಮತ್ತು ಉತ್ಪಾದನಾ ಸಾಮರ್ಥ್ಯ ಅತಿಹೆಚ್ಚು. ಜೊತೆಗೆ ಕಾರ್ಮಿಕರ ವಿದ್ಯಾಬ್ಯಾಸದ, ಆರೋಗ್ಯದ ವ್ಯವಸ್ಥೆಗಳು, ಇವುಗಳೆಲ್ಲದರ ಮುತುವರ್ಜಿವಹಿಸಿ ಮಾಡಿದ ಕಾರ್ಯಾಚರಣೆಗಳಿಂದ, ಕೇವಲ ೫೦ ವರ್ಷಗಳಲ್ಲಿ ಬ್ರಿಟನ್ನಿನ ಕಾಲೋನಿಗಳಿಂದ ಉತ್ಪಾದನೆಯಾದ ಹತ್ತಿಯ ಪ್ರಮಾಣ - ೧ ಮಿಲಿಯ ಹತ್ತಿ ಬೇಲ್ಗಳಷ್ಟು ಆಯಿತು..
ಮುಂದೆ, ಯಂತ್ರಗಳ ವಿನ್ಯಾಸ, ಹೆಚ್ಚು ಉತ್ಪಾದನೆ, ಹತ್ತಿ ಪೈಬರ್, ಹತ್ತಿದಾರ, ಬಟ್ಟೆಗಳ ಗುಣಮಟ್ಟ ಗಳಲ್ಲೂ ಹಲವಾರು ಸಂಶೋಧನೆಗಳು ನಡೆದವು. ಈ ಕ್ಷೇತ್ರಗಳಲ್ಲೂ, ಅಮೆರಿಕ, ಜಪಾನ್, ಮತ್ತು ಯೂರೋಪಿನ ರಾಷ್ಟ್ರಗಳು ಮಾಡುತ್ತಿರುವ ಅನುಸಂಧಾನಗಳು, ಹತ್ತಿ ವಸ್ತ್ರೋದ್ಯಮವನ್ನು ಹೆಚ್ಚು ಜನಪ್ರಿಯಗೊಳಿಸಿದವು.
ಹತ್ತಿಯ ತಳಿಗಳನ್ನು ಉತ್ತಮಪಡಿಸಲು ಆಧುನಿಕ ವಿಜ್ಞಾನದ ಬಯೋಟೆಕ್ನಾಲಜಿಯ ಸಹಾಯ ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ರೀತಿಯಲ್ಲಿ ಉತ್ಪಾದಿತ ಕೆಲವು ತಳಿಗಳಲ್ಲಿ ಹತ್ತಿ ಕೀಟವಾದ ಬೊಲ್ ವರ್ಮ್, ಹತ್ತಿ- ಕಾಯಿ, ಕೊರೆಯುವ ಹುಳು ವಿನ ಪರಿಣಾಮ ತಟ್ಟುವುದಿಲ್ಲ. ವಿಶ್ವದ ಸ್ತರದಲ್ಲಿ ಬಯೋಟೆಕ್ ಹತ್ತಿ ಬೆಳೆಸುವ ಪ್ರಮಾಣ- ೨೮%, ಭಾರತದ ಬಯೋಟೆಕ್ ಹತ್ತಿ ಬೆಳೆಯ ಪ್ರಮಾಣ-೧೫.೬%.
ಮಾಹಿತಿತಂತ್ರಜ್ಞಾನದಲ್ಲಿ ಆದ ಕ್ರಾಂತಿ, ಹತ್ತಿಸಂಶೋಧನೆ, ಮತ್ತು ಅದರ ಕಾರ್ಯಚಟುವಟಿಕೆಗಳಲ್ಲಿ ಭಾರಿ ಪಾತ್ರವನ್ನು ಹೊಂದಿದೆ. ಮೊದಲು ಹತ್ತಿಯ ಗುಣವಿಶೇಷಗಳನ್ನು ಅರಿಯಲು ಕೆಲವೇ ತಜ್ಞರ ಸಹಾಯದಿಂದ ಮುಂದುವರಿಯಬೇಕಾಗಿತ್ತು. ಆದರೆ ಗಣಕಯಂತ್ರ ಮತ್ತು ಅಂತರಜಾಲ ಗಳಿಂದ ಈಗ ರೈತರು ಈ ಮಾಹಿತಿಯನ್ನು ತಾವಾಗೆ ಪಡೆಯಬಹುದು. ಗಿರಾಕಿಗಳಿಗೆ ಪ್ರತಿಗಳನ್ನು ಕೆಲವೇ ಸೆಕೆಂಡ್ಗಳಲ್ಲಿ ರವಾನಿಸಬಹುದು.
ಈ ಪ್ರಗತಿಯು ಹತ್ತಿಯ ಮಾರಟ ಕ್ರಿಯೆಯನ್ನೂ ಸುಧಾರಿಸಿದೆ.. ಒಂದೇ ತರಹದ ಮಾನಕಗಳಿಂದ ಕೂಡಿದ ಮಾಹಿತಿಗಳು, ವಿಶ್ವದ ೯೦ ಕ್ಕೂಹೆಚ್ಚು ಹತ್ತಿ ಉತ್ಪಾದಿಸುವ ರಾಷ್ಟ್ರಗಳ ಸಮಸ್ಯೆ, ಅನುಕೂಲ-ಪ್ರತಿಕೂಲಗಳನ್ನು ಅರಿತು ಮಾರಾಟವನ್ನು ತ್ವರಿತಗೊಳಿಸಬಹುದು.
'ಭಾರತದಲ್ಲಿ ಹತ್ತಿ'
ಹತ್ತಿಯು ಭಾರತದ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಅನಾದಿಕಾಲದಿಂದಲೂ ಹತ್ತಿ ಭಾರತದ ಜನಜೀವನದಲ್ಲಿ ಹಾಸು-ಹೊಕ್ಕಾಗಿದೆ. ಭಾರತದಲ್ಲೇ ಇದನ್ನು ತಮ್ಮ ಜೀವನಾವಲಂಬನೆಗೆ ಆರಿಸಿಕೊಂಡ ಜನರ ಸಂಖ್ಯೆ -೬೦ ಮಿಲಿಯನ್ ಎಂದು ಅಂದಾಜು ಮಾಡಲಾಗಿದೆ. ನಮ್ಮ ದೇಶದ ಹತ್ತಿಯನ್ನು "ದೇಸಿ ಹತ್ತಿ" ಎಂದು ಕರೆಯುತ್ತಾರೆ. ಇದು ಗಾ. ಆರ್ಬೊರಿಯಮ್ ಮತ್ತು ಗಾ. ಹರ್ಬೆಸಿಯಮ್ ಪ್ರಜಾತಿಯ ಹತ್ತಿಗಳನ್ನು ಒಳಗೊಂಡಿದೆ. ಇದರ ತಂತುಗಳು ಚಿಕ್ಕದಾಗಿಯೂ ಸ್ವಲ್ಪ ಒರಟಾಗಿಯೂ ಇರುತ್ತವೆ. ತಂತು-ಶಕ್ತಿಯೂ ಕಡಿಮೆ. ಆದ್ದರಿಂದ ತಯಾರಾದ ಬಟ್ಟೆಗಳು ಒರಟಾಗಿರುವುದು ಸ್ವಾಭಾವಿಕ.
ಪ್ರಾಚೀನ ಭಾರತದ ಹತ್ತಿ ತಂತ್ರಜ್ಞಾನ ಕೌಶಲ ವಿಶ್ವಪ್ರಸಿದ್ಧವಾಗಿತ್ತು. ಯುರೋಪ್ನ ಸಮುದ್ರನಾವಿಕರು ನಮ್ಮ ದೇಶದ ಹತ್ತಿಬಟ್ಟೆಗಳ ಮತ್ತು ಕರಕುಶಲ ವಸ್ತುಗಳ ಬಗ್ಗೆ ತಿಳಿದುಕೊಂಡರು. ಮೊಘಲರ ಕಾಲದಲ್ಲಿ ಹತ್ತಿ - ವಸ್ತ್ರೋದ್ಯಮ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ೧೮೨೮ರಲ್ಲಿ, ಈಸ್ಟ್ ಇಂಡಿಯ ಕಂಪನಿಯ ಕೆಲವು ಅಧಿಕಾರಿಗಳು ಹತ್ತಿಯ ಬೀಜಗಳನ್ನು ಧಾರವಾಡದ ರೈತರಿಗೆ ತಲುಪಿಸಿದರು. ಆ ಹತ್ತಿ ತಳಿಗಳು- ಬೊರ್ಬೊನ್ ಎಂಬ ಬಹುವಾರ್ಷಿಕ ಮರಹತ್ತಿ. ಮುಂದೆ ನ್ಯೂ ಆರ್ಲಿಯನ್ಸ್ ಮತ್ತು ಜಾರ್ಜಿಯದಿಂದ ಆಗಮಿಸಿದ ಇನ್ನೆರಡು ತಳಿಗಳು ಮುಂದೆ ಧಾರವಾಡ್ ಅಮೆರಿಕನ್-೧ ಹತ್ತಿಗಳೆಂದು ಹೆಸರುವಾಸಿಯಾದವು. ಇದೇ ರೀತಿ, ೧೯೦೬ರಲ್ಲಿ ಇಂಡೋಚೈನದಿಂದ ಹಡಗಿನಲ್ಲಿ ತಂದ ಹತ್ತಿಬೀಜಗಳನ್ನು ಮದ್ರಾಸಿನ ತರಿಭೂಮಿಯಲ್ಲಿ ಬಿತ್ತಿ ಸಾಗುವಳಿಮಾಡಲಾಯಿತು. ಇದನ್ನು "ಕ್ಯಾಂಬೋಡಿಯ ಹತ್ತಿ"ಯೆಂದು (CO2) ಕರೆಯಲಾಯಿತು. ನಮ್ಮ ದೇಶಕ್ಕೆ ಚೆನ್ನಾಗಿ ಹೊಂದಿಕೊಂಡ ಈ ಹತ್ತಿ ತಳಿಯನ್ನು ಉಪಯೋಗಿಸಿಕೊಂಡು, ಮಧ್ಯ ಪ್ರದೇಶ, ಗುಜರಾತ್ನ ಕಾಥೆವಾಡ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಇದನ್ನು ವಿಸ್ತರಿಸಲಾಯಿತು. ಇದೇ ತಳಿ, ಮದ್ರಾಸ್ ರಾಜ್ಯದ ಪ್ರಖ್ಯಾತ ಎಮ್.ಸಿ.ಯು. ಹತ್ತಿಯ ಶ್ರೇಣಿಗೆ ಪ್ರೇರಣೆಯಾಗಿ ಎಮ್.ಸಿ.ಯು-೫ ಇಂದಿಗೂ ಪ್ರಚಾರದಲ್ಲಿದೆ.
ಬ್ರಿಟಿಷರು, ಬೊಂಬಯಿನಲ್ಲಿ ೧೯೧೯ ರಲ್ಲೇ, "ಇಂಡಿಯನ್ ಸೆಂಟ್ರಲ್ ಕಾಟನ್ ಕಮಿಟಿ" ಎಂಬ ಸಂಘವನ್ನು ಹುಟ್ಟುಹಾಕಿದರು.[3] ದೇಶದಾದ್ಯಂತ ಬೆಳೆಸಿದ ಹತ್ತಿಯ ಹೊಲದಲ್ಲಿನ ಫಸಲನ್ನು ಬೊಂಬಾಯಿನ ಹವಾ-ನಿಯಂತ್ರಿತ ವೇದಶಾಲೆಯಾದ "The Technological Laboratory, C.T.R.L." ನಲ್ಲಿ (ಈಗ, CIRCOT) ಮೂಲ್ಯಾಂಕನ ಮಾಡಿ, ಗುಣಮಟ್ಟವನ್ನು ನಿರ್ಧರಿಸಿ, ಉತ್ತಮವಾದ ತಳಿಗಳನ್ನು ಮತ್ತೆ ಮುಂದುವರಿಸುವ ಪರಿಕ್ರಮವನ್ನು ಶುರುಮಾಡಲಾಯಿತು. ಈ ಹತ್ತಿ ಸಂಶೋಧನೆಯ ಮೂಲ ಪರಿಕ್ರಮದ ಪಾದಾರ್ಪಣೆಯನ್ನು ಡಾ. ಆರ್ಥರ್ ಜೇಮ್ಸ್ ಟರ್ನರ್, ಮತ್ತು ರಾಲ್ಫ್ ರಿಚರ್ಡ್ ಸನ್ ರವರು ಡಿಸೆಂಬರ್ ೩, ೧೯೨೪ರಲ್ಲಿ ಪ್ರಾರಂಭ ಮಾಡಿದರು. ೧೯೬೬ರಲ್ಲಿ ಇದರ ಕಾರ್ಯಾಡಳಿತವನ್ನು ಭಾರತೀಯ ಕೃಷಿ ಅನುಸಂಧಾನ ಸಂಸ್ಥಾನ (ICAR) ವಹಿಸಿಕೊಂಡಿತು. ಭಾರತೀಯ ವಿಜ್ಞಾನಿಗಳಾದ, ಡಾ. ನಾಸಿರ್ ಅಹ್ಮೆದ್, ಡಾ. ಡಿ. ಎಲ್. ಸೇನ್, ಡಾ. ಸಿ. ನಂಜುಂಡಯ್ಯ, ಹರಿರಾವ್ ನವಕಲ್, ಡಾ. ವಿ. ಸಂತಾನಂ, ಶ್ರೀ. ಮಾರಪ್ಪನ್, ಡಾ. ಕಾತರ್ಕಿ, ಶ್ರೀ.ಕೃಷ್ಣಮೂರ್ತಿ ಮುಂತಾದ ಹಲವಾರು ಸಂಶೋಧಕರ ಸಹಯೋಗದಿಂದ, ಭಾರತದ ಹತ್ತಿ ಬೆಳೆ ಒಂದು ಮಹತ್ತರ ಹಂತವನ್ನು ಗಳಿಸಿತು. ೧೯೭೦ ರ ಹೊತ್ತಿಗೆ, ಗುಜರಾತ್ ಕೃಷಿ ವಿಶ್ವವಿದ್ಯಾಲಯದ ಸಿ.ಟಿ. ಪಟೇಲ್, ಭಾರತದ ಗುಜರಾತ್-೬೭ ತಳಿ ಮತ್ತು ಅಮೇರಿಕದ ನೆಕ್ಟರಿಲೆಸ್ ತಳಿಗಳ ಸಂಯೋಗದಿಂದ ಹೈಬ್ರಿಡ್ -೪ ಹತ್ತಿಯನ್ನು ತಯಾರಿಸಿದರು. ವಿಶ್ವದ ಪ್ರಥಮ ಹೈಬ್ರಿಡ್ ಹತ್ತಿಗಳಲ್ಲಿ ಒಂದಾದ ಈ ಹತ್ತಿ-ತಳಿ, ಪ್ರತಿ ಹೆಕ್ಟೇರ್ಗೆ ೮೦ ರಿಂದ ೧೦೦ ಕಿ.ಗ್ರಾಂ. ಕಪಾಸ್ ಇಳುವರಿಕೊಟ್ಟು ಒಂದು ಹೊಸ ಅಧ್ಯಾಯವನ್ನೇ ಸ್ಥಾಪಿಸಿತು. ಈ ಅನುಸಂಧಾನದಿಂದ ಪ್ರೇರಿತರಾಗಿ, ಧಾರವಾಡದ ಡಾ. ಕಾತರ್ಕಿಯವರು, ವರಲಕ್ಷ್ಮಿ ಹಾಗೂ ಡಿ. ಸಿ. ಎಚ್ -೩೨, ಎಂಬ ಹೈಬ್ರಿಡ್ ಗಳಿಗೆ ಜನ್ಮಕೊಟ್ಟರು. ಇಂದು ನಮ್ಮ ಹತ್ತಿ ಸಮುದಾಯದಲ್ಲಿ, ಸುಮಾರು ೮೭ ಹೈಬ್ರಿಡ್ ಗಳು ಉಪಯೋಗದಲ್ಲಿವೆ.
ವಲಯಗಳು | ವಲಯದ ಮುಖ್ಯ ರಾಜ್ಯಗಳು | ಸಾಗುವಳಿ ಪ್ರದೇಶ (%) | ಮಿಲಿಯನ್ ಹೆಕ್ಟೇರುಗಳು | ಪ್ರತಿ ಹೆಕ್ಟೇರಿಗೆ ಉತ್ಪಾದನೆ (ಕಿಲೊಗ್ರಾಂ) |
---|---|---|---|---|
ಉತ್ತರ | ಪಂಜಾಬ್, ಹರ್ಯಾಣ, ರಾಜಾಸ್ಥಾನ, ಉತ್ತರ ಪ್ರದೇಶ | ೨೪% | ೨.೨೧ | ೨೨೫ |
ಮಧ್ಯ | ಗುಜರಾತ್, ಮಹಾರಾಷ್ಟ್ರ, ಮಧ್ಯ ಪ್ರದೇಶ | ೫೭% | ೫.೨೫ | ೨೮೫ |
ದಕ್ಷಿಣ | ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು | ೧೯% | ೧.೫೦ | ೩೯೫ |
ಭಾರತದ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿ ಅವರ ಕಾಲದಲ್ಲಿ ICARನ ಮಹಾನಿರ್ದೇಶಕರಾದ ಎಮ್.ಎಸ್.ಸ್ವಾಮಿನಾಥನ್ರವರ ಮುಂದಾಳತ್ವದಲ್ಲಿ ಉಂಟಾದ ಹಸಿರು ಕ್ರಾಂತಿಯ ಪ್ರಭಾವ ಹತ್ತಿ ಬೆಳೆಗೂ ತಟ್ಟಿತು. ಇದರ ಫಲವಾಗಿ, ದೇಶದ ಬಟ್ಟೆ ಸಮಸ್ಯೆಗಳು ಉತ್ತಮಗೊಂಡು, ಹತ್ತಿಯನ್ನು ರಫ್ತುಮಾಡುವ ಪರಿಸ್ಥಿತಿ ಬಂದಿತು. ಸಂಶೋಧನೆಯಿಂದ ಭಾರತಕ್ಕೆ ತಕ್ಕಂತ ತಳಿಗಳ ದೊರೆಯುವಿಕೆ ಇದಕ್ಕೆ ಒಂದು ಕಾರಣ. ಭಾರತ ಸರ್ಕಾರ ೨೦೦೨ ರಲ್ಲಿ ರೈತರಿಗೆ ಉಪಯೋಗಿಸಲು ಬಾಲ್ ವರ್ಮ್ನಿಂದ ರಕ್ಷಿತ ಬೀಟಿ ಹತ್ತಿಯ ೩ ನಮೂನೆಗಳನ್ನು ಬಿಡುಗಡೆಮಾಡಿತ್ತು. ಆಗ ಇದ್ದದ್ದು, ಒಂದು ಕಂಪೆನಿ ಮಾತ್ರ. ಇಂದು, ಸುಮಾರು ೪ ಬೀಜಕಂಪೆನಿಗಳು ಮುಂದೆಬಂದು, ೨೦ ಬೀ.ಟಿ ಹತ್ತಿಯ ಉತ್ತಮ ಬೀಜಗಳನ್ನು ಸರಬರಾಜುಮಾಡುತ್ತಿವೆ. ಈಗ ಭಾರತದ ಬಯೋಟೆಕ್ ಹತ್ತಿ ಬೆಳೆಯ ಪ್ರಮಾಣ-೧೫.೬ %.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.