From Wikipedia, the free encyclopedia
ಸಸ್ತನಿಗಳು ಕಶೇರುಕಗಳಲ್ಲಿ (ಬೆನ್ನೆಲುಬುಳ್ಳ ಪ್ರಾಣಿ), ಮರಿ ಹಾಕಿ ಅವಕ್ಕೆ ಮೊಲೆಯುಣಿಸುವ ಜೀವ ಜಾತಿ. ಹಲವಾರು ಸಾಕುಪ್ರಾಣಿಗಳು ಸ್ತನಿವರ್ಗಕ್ಕೆ ಸೇರಿವೆ. ಕೆಲವು ಜಲಚರ ಪ್ರಭೇದಗಳನ್ನು ಹೊರತುಪಡಿಸಿದರೆ ಸ್ತನಿಗಳೆಲ್ಲವೂ ನಿಯತತಾಪಿ (ವಾರ್ಮ್ ಬ್ಲಡಡ್) ಚತುಷ್ಪಾದಿಗಳು. ಆಸ್ಟ್ರೇಲಿಯ ಖಂಡದಲ್ಲಿ ಮೊಟ್ಟೆಯಿಡುವ ಕೆಲವು ಸಸ್ತನಿಗಳಿವೆ. ಸ್ತನಿಗಳಲ್ಲಿ ಸು. 4000 ಪ್ರಭೇದಗಳಿವೆ. ಆ ಪೈಕಿ ಸು. 3,000 ಧ್ವಂಸಕ ಪ್ರಾಣಿಗಳು.
ಸಸ್ತನಿಗಳು Temporal range: ಕೊನೆ ಟ್ರಯಾಸಿಕ್ – ಪ್ರಸಕ್ತ | |
---|---|
ಜಿರಾಫೆ (ಜಿರಾಫ ಕ್ಯಾಮೆಲೊಪಾರ್ಡಾಲಿಸ್) | |
Scientific classification | |
ಸಾಮ್ರಾಜ್ಯ: | |
ವಿಭಾಗ: | ಖೋರ್ಡೇಟ |
ಉಪವಿಭಾಗ: | ಬೆನ್ನೆಲಬುಳ್ಳ ಪ್ರಾಣಿಗಳು |
(ಶ್ರೇಣಿಯಿಲ್ಲದ್ದು): | |
ವರ್ಗ: | ಸಸ್ತನಿ ಲಿನ್ನಿಯಸ್, ೧೭೫೮ |
ಉಪವರ್ಗಗಳು ಮತ್ತು ಕೆಳವರ್ಗಗಳು | |
|
ಗಾತ್ರತಃ ಸ್ತನಿಗಳಲ್ಲಿ ಬಹಳ ವ್ಯತ್ಯಾಸಗಳಿವೆ. ಕೇವಲ ಕೆಲವು ಗ್ರಾಮ್ ತೂಕದ ಇಲಿಯಂಥ ಪ್ರಾಣಿಯಿಂದ ಹಿಡಿದು ಸು. 150 ಟನ್ ಭಾರದ ನೀಲಿ ತಿಮಿಂಗಿಲಗಳೂ ಈ ವರ್ಗದಲ್ಲಿ ಸೇರಿವೆ. ಜೊತೆಗೆ ಸ್ತನಿಗಳ ವಿಶಿಷ್ಟ ದೇಹಪ್ರಕೃತಿ, ಚಲನವಲನ, ಜೀವನಶೈಲಿಗಳಿಂದಾಗಿ ಅವು ಇಂದು ಜಗತ್ತಿನ ಎಲ್ಲೆಡೆಯೂ ಪಸರಿಸಿವೆ. ಅವುಗಳ ಗಣನೀಯ ಸಂಖ್ಯೆ ಹಾಗೂ ಮಾನವ ಇದೇ ವರ್ಗಕ್ಕೆ ಸೇರಿದವನಾದ್ದರಿಂದ ಇಡೀ ಪ್ರಾಣಿಪ್ರಪಂಚದಲ್ಲಿ ಸ್ತನಿಗಳಿಗೆ ವಿಶಿಷ್ಟ ಸ್ಥಾನಮಾನವಿದೆ.
ಸಸ್ತನಿಗಳಲ್ಲಿ ಗ್ರಹದ ಅತಿದೊಡ್ಡ ಪ್ರಾಣಿಯಾದ ದೊಡ್ಡ ತಿಮಿಂಗಿಲ ಸೇರಿದೆ, ಹಾಗೆಯೇ ಆನೆಗಳು, ಪ್ರೈಮೇಟ್ಗಳು ಮತ್ತು ತಿಮಿವರ್ಗದ ಪ್ರಾಣಿಗಳಂತಹ ಕೆಲವು ಅತ್ಯಂತ ಬುದ್ಧಿವಂತ ಪ್ರಾಣಿಗಳು ಸೇರಿವೆ. ಮೂಲ ದೇಹದ ಪ್ರಕಾರವೆಂದರೆ ನೆಲದ ಚತುಷ್ಪಾದಿ, ಆದರೆ ಕೆಲವು ಸಸ್ತನಿಗಳು ಸಮುದ್ರದಲ್ಲಿ, ಗಾಳಿಯಲ್ಲಿ, ಮರಗಳಲ್ಲಿ, ನೆಲದ ಕೆಳಗೆ ಅಥವಾ ಎರಡು ಕಾಲುಗಳ ಮೇಲಿನ ಜೀವನಕ್ಕೆ ಹೊಂದಿಕೊಂಡಿವೆ. ಸಸ್ತನಿಗಳ ಅತಿ ದೊಡ್ಡ ಗುಂಪೆಂದರೆ ಜರಾಯುಯುಕ್ತ ಸಸ್ತನಿಗಳು. ಇವು ಜರಾಯುವನ್ನು ಹೊಂದಿರುತ್ತವೆ. ಇದರಿಂದ ಗರ್ಭಾವಸ್ಥೆಯಲ್ಲಿ ಭ್ರೂಣಕ್ಕೆ ಆಹಾರವನ್ನು ಒದಗಿಸುವುದು ಸಾಧ್ಯವಾಗುತ್ತದೆ. ಸಸ್ತನಿಗಳ ಗಾತ್ರ ಬಂಬಲ್ಬೀ ಬಾವಲಿಯ 30-40 ಮಿ.ಮಿ. ದಿಂದ ಹಿಡಿದು ನೀಲಿ ತಿಮಿಂಗಿಲದ 30-ಮೀಟರ್ ವರೆಗೆ ವ್ಯಾಪಿಸುತ್ತದೆ. ಐದು ಪ್ರಭೇದಗಳ ಏಕದ್ವಾರಿಗಳನ್ನು (ಮೊಟ್ಟೆ ಇಡುವ ಸಸ್ತನಿಗಳು) ಹೊರತುಪಡಿಸಿ, ಎಲ್ಲ ಆಧುನಿಕ ಸಸ್ತನಿಗಳು ಜೀವಂತ ಮರಿಗಳಿಗೆ ಜನ್ಮ ನೀಡುತ್ತವೆ. ಆರು ಅತ್ಯಂತ ಪ್ರಭೇದ-ಸಮೃದ್ಧ ಗಣಗಳನ್ನು ಒಳಗೊಂಡಂತೆ, ಬಹುತೇಕ ಸಸ್ತನಿಗಳು ಜರಾಯು ಗುಂಪಿಗೆ ಸೇರಿವೆ. ಪ್ರಭೇದಗಳ ಸಂಖ್ಯೆಯ ಆಧಾರದಲ್ಲಿ ಮೂರು ದೊಡ್ಡ ಗಣಗಳೆಂದರೆ ರೊಡೆಂಷಿಯಾ: ಇಲಿಗಳು, ಮುಳ್ಳುಹಂದಿಗಳು, ಬೀವರ್ಗಳು, ಕ್ಯಾಪಿಬಾರಾಗಳು ಹಾಗೂ ಇತರ ಅಗಿಯುವ ಸಸ್ತನಿಗಳು; ಕೈರೋಪ್ಟೆರಾ: ಬಾವಲಿಗಳು; ಮತ್ತು ಸೊರಿಕೊಮೊರ್ಫಾ: ಶ್ರೂಗಳು, ಮೋಲ್ಗಳು ಮತ್ತು ಸೊಲೆನೊಡಾನ್ಗಳು. ಬಳಸಲಾಗುವ ಜೈವಿಕ ವರ್ಗೀಕರಣ ಯೋಜನೆಗೆ ಅನುಗುಣವಾಗಿ ಮುಂದಿನ ಮೂರು ದೊಡ್ಡ ಗಣಗಳೆಂದರೆ, ದೊಡ್ಡ ಏಪ್ಗಳು ಮತ್ತು ಕೋತಿಗಳು ಸೇರಿದ ಪ್ರೈಮೇಟ್ಗಳು; ತಿಮಿಂಗಿಲಗಳು ಮತ್ತು ಸಮ-ಕಾಲ್ಬೆರಳುಳ್ಳ ಗೊರಸುಳ್ಳ ಪ್ರಾಣಿಗಳು ಸೇರಿದ ಸೆಟಾರ್ಟಿಯೊಡ್ಯಾಕ್ಟೈಲಾ; ಹಾಗೂ ಬೆಕ್ಕುಗಳು, ನಾಯಿಗಳು, ವೀಸಲ್ಗಳು, ಕರಡಿಗಳು ಮತ್ತು ಸೀಲುಗಳನ್ನು ಒಳಗೊಂಡಿರುವ ಕಾರ್ನಿವೋರಾ.
ಸ್ತನಿಗಳ ಅಂಗೋಪಾಂಗಗಳು ತೀವ್ರ ಹಾಗೂ ನಿರಂತರ ಚಲನೆಯಲ್ಲಿರಲು ಸಹಕಾರಿ. ಇವುಗಳ ದೈಹಿಕ ಚಲನೆಗೆ ಅನುಗುಣವಾಗಿ ಅತ್ಯಂತ ಸುಧಾರಿತ ಮಾದರಿ ಕಾಲುಗಳು, ಸುವ್ಯವಸ್ಥಿತ ರೀತಿಯಲ್ಲಿ ಜೀವದ್ರವ್ಯದ ವಿಭಜನೆ, ದೇಹಕ್ಕೆ ಹೊದಿಸಿದಂತಿರುವ ಕೂದಲುಗಳು, ಆಹಾರ ಹಾಗೂ ವಾಯುನಾಳದ ವಿಂಗಡಣೆ, ಮರಿಗಳ ಲಾಲನೆ ಪಾಲನೆ, ವಿವಿಧ ರೀತಿಯ ಕ್ಲಿಷ್ಟಕರ ನಡವಳಿಕೆ, ಮನಃಪರಿಸ್ಥಿತಿ, ಹೆಚ್ಚಿನ ಆಯುಷ್ಯ, ಕುಂಠಿತಗೊಂಡ ಭ್ರೂಣಗಳ ಸಂಖ್ಯೆ ಇತ್ಯಾದಿ ಇವೆ. ಹೀಗಾಗಿ ಸ್ತನಿಗಳು ಎಲ್ಲ ವಿಧದ ಪರಿಸರಗಳಲ್ಲಿ ವಾಸಿಸಬಲ್ಲವು. ಅಲ್ಲದೆ ಯಾವುದೇ ತೊಂದರೆಯಿಲ್ಲದೆ ತಮ್ಮ ಸಂತಾನಾಭಿವೃದ್ಧಿಯನ್ನು ಕೂಡ ನಿರಂತರವಾಗಿ ಸಾಧಿಸಿಕೊಳ್ಳಬಲ್ಲವು. ಇಂದು ಜೀವಂತವಿರುವ ಸ್ತನಿಗಳ ವರ್ಗೀಕರಣ ಸುಲಭಸಾಧ್ಯವಾದರೂ ವಿಲುಪ್ತವಾದವನ್ನು (ಎಕ್ಸ್ಟಿಂಕ್ಟ್) ಕೂಡ ಗಮನಿಸಿದರೆ ಹಲವಾರು ವಿಚಾರಗಳಿಗೆ ಸರಿಯಾದ ಉತ್ತರ ದೊರೆಯುವುದಿಲ್ಲ ಎಂದೇ ಇವುಗಳ ಸಮಗ್ರ ವರ್ಗೀಕರಣ ಕಷ್ಟಸಾಧ್ಯ.
ಮಾನವ ಸಂಸ್ಕೃತಿಯಲ್ಲಿ, ಪಳಗಿಸಿದ ಸಸ್ತನಿಗಳು ನವಶಿಲಾಯುಗದ ಕ್ರಾಂತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವು. ಮಾನವನು ಬೇಟೆಯಾಡುವುದು ಮತ್ತು ಸಂಗ್ರಹಿಸುವುದರ ಬದಲಾಗಿ ಬೇಸಾಯ ಮಾಡಲು ಇವು ಕಾರಣವಾದವು. ಇದು ಮೊದಲ ನಾಗರಿಕತೆಗಳೊಂದಿಗೆ ಮಾನವ ಸಮಾಜಗಳ ಪ್ರಮುಖ ಪುನರ್ರಚನೆಗೆ ಕಾರಣವಾಯಿತು. ಅವುಗಳು ಸಾರಿಗೆ ಮತ್ತು ಕೃಷಿಗೆ ಶಕ್ತಿಯನ್ನು ಒದಗಿಸಿದವು ಮತ್ತು ಒದಗಿಸುವುದು ಮುಂದುವರೆದಿದೆ. ಜೊತೆಗೆ ಮಾಂಸ, ಕ್ಷೀರೋತ್ಪನ್ನಗಳು, ಉಣ್ಣೆ ಮತ್ತು ತೊಗಲಿನಂತಹ ವಿವಿಧ ಪದಾರ್ಥಗಳನ್ನು ಒದಗಿಸುತ್ತವೆ. ಕ್ರೀಡೆಗಾಗಿ ಸಸ್ತನಿಗಳನ್ನು ಬೇಟೆಯಾಡಲಾಗುತ್ತದೆ ಅಥವಾ ಓಡಿಸಲಾಗುತ್ತದೆ. ಇವನ್ನು ವಿಜ್ಞಾನದಲ್ಲಿ ಮಾದರಿ ಜೀವಿಗಳಾಗಿ ಬಳಸಲಾಗುತ್ತದೆ. ಪ್ರಾಚೀನ ಶಿಲಾಯುಗದ ಕಾಲದಿಂದಲೂ ಸಸ್ತನಿಗಳನ್ನು ಕಲೆಯಲ್ಲಿ ಚಿತ್ರಿಸಲಾಗಿದೆ. ಇವು ಸಾಹಿತ್ಯ, ಚಲನಚಿತ್ರ, ಪುರಾಣ ಮತ್ತು ಧರ್ಮದಲ್ಲಿ ಕಾಣಿಸಿಕೊಳ್ಳುತ್ತವೆ.
ಮಾನವ ತನ್ನ ಅಶನ, ವಸನ, ವಸತಿ ಹಾಗೂ ಇತರ ವಸ್ತುಗಳಿಗಾಗಿ ಸ್ತನಿಗಳನ್ನು ಬಹಷ್ಟು ಅವಲಂಬಿಸಿದ್ದಾನೆ. ಪಳಗಿಸಿದ ಸ್ತನಿಗಳು ಮಾನವನ ಸರಕು ಹೊರುವುವೇ ಅಲ್ಲದೆ, ಅವನ ಸಂಚಾರ ಸಾಧನವಾಗಿಯೂ ಉಪಯೋಗವಾಗುತ್ತವೆ. ಇವು ಅವನ ಸಂಗಾತಿಯಾಗಿಯೂ ಇರಬಲ್ಲವು. ಹಲವಾರು ದೊಡ್ಡಗಾತ್ರದ ಸ್ತನಿಗಳು ತಮ್ಮ ಆಹಾರ, ವಿಹಾರ ಹಾಗೂ ಅಸ್ತಿತ್ವಕ್ಕೆ ಮಾನವನೊಂದಿಗೆ ಸ್ಪರ್ಧಿಸಿ, ಸೋತು ವಿಲುಪ್ತವಾಗಿ ಹೋಗಿವೆ. ಇಂದು ಸಹ ಹಲವಾರು ಬಲಿಷ್ಠ ದೊಡ್ಡಗಾತ್ರದ ಸ್ತನಿಗಳು ಪ್ರಾಣಿ ಸಂಗ್ರಹಾಲಯದಂಥ ತೆರೆಮರೆಯಲ್ಲಿವೆ. ಇನ್ನು ಹಲವು ಸ್ತನಿಗಳು ಮಾನವನ ಬೇಟೆ ಹಾಗೂ ಪರಿಸರ ನಾಶದಿಂದ ವಿಲುಪ್ತವಾಗುವ ಅಂಚು ತಲಪಿವೆ.
ಸ್ತನಿಗಳ ಉಗಮ ಸು.180-220 ದಶಲಕ್ಷ ವರ್ಷಗಳ ಹಿಂದೆ ಆಗಿರಬಹುದೆಂದು ಅಂದಾಜು. ಸಣ್ಣದೇಹ, ಚುರುಕು ನಡೆ, ವಿಶಿಷ್ಟ ಹಲ್ಲು ಹಾಗೂ ಕಾಲುಗಳಿದ್ದ ಥಿರಾಪ್ಸಿಡ್ ಎಂಬ ಸರೀಸೃಪ ಸ್ತನಿಗಳ ಪೂರ್ವಜ ಆಗಿರಬೇಕು. ದೈತ್ಯೋರಗಗಳಾದ ಡೈನೊಸಾರ್ಗಳಿದ್ದ ಜುರಾಸಿಕ್ ಕಾಲದಲ್ಲಿಯೇ (ಸು. 250 ದಶಲಕ್ಷ ವರ್ಷಗಳ ಹಿಂದೆ) ಸ್ತನಿಗಳಿದ್ದರೂ ದೈತ್ಯೋರಗಗಳು ನಿರ್ನಾಮವಾದ ಬಳಿಕವಷ್ಟೆ, ಅಂದರೆ ಸು. 70 ದಶಲಕ್ಷ ವರ್ಷಗಳ ಹಿಂದಿನಿಂದ ಇಂದಿನ ತನಕ ಭೂಮಿಯ ಮೇಲೆ ಸ್ತನಿಗಳೇ ಆಧಿಪತ್ಯ ನಡೆಸುತ್ತಿವೆ.
ಹೊಟ್ಟೆ ಚೀಲವುಳ್ಳ ಸ್ತನಿಗಳ (ಉದಾ: ಕಾಂಗರೂ) ಹಾಗೂ ಗರ್ಭವೇಷ್ಟನ ಸ್ತನಿಗಳ ಸ್ತನಗಳಿಗೆ ತೊಟ್ಟು ಇದೆ. ಮರಿ ಈ ತೊಟ್ಟನ್ನು ತನ್ನ ಬಾಯಿಯಲ್ಲಿರಿಸಿ, ಚೀಪಿ ತಾಯಿಯ ಹಾಲು ಹೀರುತ್ತದೆ. ಮೊಟ್ಟೆಯಿಡುವ ಸ್ತನಿಗಳಲ್ಲಿ ತೊಟ್ಟು ಇರುವುದಿಲ್ಲ. ಹಾಗಾಗಿ, ಸ್ರವಿಸಿದ ಹಾಲು ನೇರವಾಗಿ ತಾಯಿಯ ಹೊಟ್ಟೆ ಕೆಳಗೆ ಹರಿದು, ಅಲ್ಲಿಯ ತಗ್ಗಿನಲ್ಲಿ ಶೇಖರಗೊಳ್ಳುತ್ತದೆ. ಶಿಶುಜನನದ ವೇಳೆ ಹೆಣ್ಣಿನ ಸ್ತನಗ್ರಂಥಿಗಳಲ್ಲಿ ಹಾಲಿನ ಉತ್ಪಾದನೆ ಮುಂತಾದವನ್ನು ಹಾರ್ಮೋನುಗಳು ನಿಯಂತ್ರಿಸುತ್ತವೆ. ಗಂಡು ಸ್ತನಿಗಳ ಗ್ರಂಥಿಗಳು ನಿಷ್ಕ್ರಿಯವಾಗಿರುತ್ತವೆ.
ಮರಿಗಳನ್ನು ತಮ್ಮ ಹೊಟ್ಟೆಯ ಹೊರ ಚೀಲದಲ್ಲಿ ಇಟ್ಟುಕೊಂಡು ಸಾಕಿ ಬೆಳೆಸುವ ಕಾಂಗರೂ, ಕೋಲಾ ಕರಡಿ, ಒಪೂಸಮ್ ಮುಂತಾದವುಗಳನ್ನು ಈ ವರ್ಗಕ್ಕೆ ಸೇರಿಸುತ್ತಾರೆ.
ಆಹಾರವನ್ನು ಕಡಿದು ತಿನ್ನುವ ಮೊಲ, ಅಳಿಲು, ಬೀವರ್ ಮೊದಲಾದ ಪ್ರಾಣಿಗಳು ಈ ವರ್ಗಕ್ಕೆ (Rodents) ಸೇರುತ್ತವೆ.
ಮಾಂಸಾಹಾರಿ (Carnivorous) ಪ್ರಾಣಿಗಳಾದ ಹುಲಿ, ಸಿಂಹ, ಕರಡಿ, ತೋಳ ಮುಂತಾದವು ಈ ವರ್ಗಕ್ಕೆ ಸೇರುತ್ತವೆ.
ಮಾಂಸಾಹಾರಿಗಳಲ್ಲದ, ಸಸ್ಯಾಹಾರಿಗಳಾದ ಸಸ್ತನಿಗಳನ್ನು ಪುನಃ ಎರಡು ಗುಂಪುಗಳಾಗಿ ವಿಂಗಡಿಸಿದ್ದಾರೆ. ಕಾಲುಗುರಿನಿಂದ ನೆಲವನ್ನು ಕೆದಕುವ ಸಸ್ಯಾಹಾರಿಗಳದ್ದು ಒಂದು ಗುಂಪಾದರೆ, ಗೊರಸುಳ್ಳ ಜೀಬ್ರಾ, ಜಿಂಕೆ, ದನ, ಕುದುರೆ, ನೀರಾನೆ, ಖಡ್ಗಮೃಗಗಳು ಇನ್ನೊಂದು ಗುಂಪಿಗೆ ಸೇರುತ್ತವೆ.
ವಿಶಿಷ್ಟ ಲಕ್ಷಣಗಳುಳ್ಳ ಅಪೂರ್ವ ಜೀವಿಗಳಾದ ಆನೆ, ಇರುವೆಬಾಕ (Ant-eater), ಜಲಚರಗಳಾದ ತಿಮಿಂಗಿಲ, ಹಂದಿಮೀನು ಹಾಗೂ ಪಕ್ಷಿಯಂತೆ ಕಾಣುವ ಬಾವಲಿ ಕೂಡ ಸಸ್ತನಿ ವರ್ಗಕ್ಕೆ ಸೇರುತ್ತವೆ.
ವಿಕಾಸಗೊಂಡ ಪ್ರಾಣಿವರ್ಗದಲ್ಲಿ ಕಪಿ, ಕೋತಿ, ಬಾಲವಿಲ್ಲದ ಚಿಂಪಾಂಜಿ, ಗೊರಿಲ್ಲಾಗಳು ಸಸ್ತನಿ ವರ್ಗಕ್ಕೆ ಸೇರುತ್ತವೆ. ಕಪಿಕುಲದ ಮುಂದಿನ ಮೆಟ್ಟಿಲಿನಲ್ಲಿಯೇ ವಿಕಾಸದ ಪರಮಾವಧಿ ಸಸ್ತನಿ ಮಾನವ ಕಾಣುತ್ತಾನೆ.
ಬಾವಲಿಗಳು, ಜಿರಾಫೆಗಳು, ತಿಮಿಂಗಿಲಗಳು ಮತ್ತು ಮಾನವ ಸೇರಿದಂತೆ ಬಹುಪಾಲು ಸಸ್ತನಿಗಳು ಏಳು ಕುತ್ತಿಗೆಯ ಕಶೇರುಗಳನ್ನು ಹೊಂದಿವೆ. ಅಪವಾದಗಳೆಂದರೆ ಮ್ಯಾನೇಟಿ ಹಾಗೂ ಎರಡು ಕಾಲ್ಬೆರಳುಳ್ಳ ಸ್ಲಾತ್ (ಇವು ಕೇವಲ ಆರನ್ನು ಹೊಂದಿವೆ) ಮತ್ತು ಒಂಬತ್ತು ಕುತ್ತಿಗೆಯ ಕಶೇರುಗಳನ್ನು ಹೊಂದಿರುವ ಮೂರು-ಕಾಲ್ಬೆರಳುಳ್ಳ ಸ್ಲಾತ್.[1]
ಸಸ್ತನಿಗಳ ಶ್ವಾಸಕೋಶಗಳು ಸ್ಪಂಜಿನಂತಿರುತ್ತವೆ ಮತ್ತು ರಂಧ್ರಗಳನ್ನು ಹೊಂದಿರುತ್ತವೆ. ವಪೆಯು ಎದೆಗೂಡನ್ನು ಉದರದ ಕುಹರದಿಂದ ವಿಭಜಿಸುತ್ತದೆ. ವಪೆಯು ಎದೆಗೂಡಿಗೆ ಪೀನವಾದ ಗುಮ್ಮಟವನ್ನು ರೂಪಿಸುವ ಮೂಲಕ ಉಸಿರಾಟವನ್ನು ಮುಖ್ಯವಾಗಿ ಸಾಧಿಸಲಾಗುತ್ತದೆ. ವಪೆಯ ಸಂಕೋಚನವು ಗುಮ್ಮಟವನ್ನು ಚಪ್ಪಟೆಗೊಳಿಸುತ್ತದೆ. ಇದು ಶ್ವಾಸಕೋಶದ ಕುಹರದ ಪರಿಮಾಣವನ್ನು ಹೆಚ್ಚಿಸುತ್ತದೆ. ಗಾಳಿಯು ಬಾಯಿಯ ಮತ್ತು ಮೂಗಿನ ಕುಹರಗಳ ಮೂಲಕ ಪ್ರವೇಶಿಸುತ್ತದೆ ಮತ್ತು ಧ್ವನಿಪೆಟ್ಟಿಗೆ, ಶ್ವಾಸನಾಳ ಹಾಗೂ ಶ್ವಾಸನಾಳಿಕೆಯ ಮೂಲಕ ಸಾಗುತ್ತದೆ ಮತ್ತು ಗಾಳಿಗೂಡುಗಳನ್ನು ವಿಸ್ತರಿಸುತ್ತದೆ. ವಪೆಯನ್ನು ಸಡಿಲಗೊಳಿಸುವುದರಿಂದ ವಿರುದ್ಧ ಪರಿಣಾಮ ಉಂಟಾಗುತ್ತದೆ. ಇದು ಶ್ವಾಸಕೋಶದ ಕುಹರದ ಪರಿಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದ ಶ್ವಾಸಕೋಶದಿಂದ ಗಾಳಿ ಹೊರತಳ್ಳಲ್ಪಡುತ್ತದೆ.
ಚರ್ಮವ್ಯೂಹವು ಮೂರು ಪದರಗಳಿಂದ ರಚಿತವಾಗಿರುತ್ತದೆ: ಅತ್ಯಂತ ಹೊರಗಿನ ಬಾಹ್ಯತ್ವಚೆ, ನಿಜಚರ್ಮ ಮತ್ತು ತಳಚರ್ಮ. ಬಾಹ್ಯತ್ವಚೆಯು ಸಾಮಾನ್ಯವಾಗಿ 10 ರಿಂದ 30 ಕೋಶಗಳಷ್ಟು ದಪ್ಪವಿರುತ್ತದೆ; ಜಲನಿರೋಧಕ ಪದರವನ್ನು ಒದಗಿಸುವುದು ಇದರ ಮುಖ್ಯ ಕಾರ್ಯವಾಗಿದೆ. ಚರ್ಮದ ಅತ್ಯಂತ ಹೊರಗಿನ ಜೀವಕೋಶಗಳು ನಿರಂತರವಾಗಿ ಕಳೆದುಹೋಗುತ್ತವೆ; ಅದರ ಅತ್ಯಂತ ಕೆಳಗಿನ ಜೀವಕೋಶಗಳು ನಿರಂತರವಾಗಿ ವಿಭಜಿಸುತ್ತಿದ್ದು ಮೇಲಕ್ಕೆ ತಳ್ಳುತ್ತಿರುತ್ತವೆ. ಮಧ್ಯದ ಪದರವಾದ ನಿಜಚರ್ಮವು ಬಾಹ್ಯತ್ವಚೆಗಿಂತ 15 ರಿಂದ 40 ಪಟ್ಟು ದಪ್ಪವಾಗಿರುತ್ತದೆ. ನಿಜಚರ್ಮವು ಎಲುಬಿನಂಥ ರಚನೆಗಳು ಮತ್ತು ರಕ್ತನಾಳಗಳಂತಹ ಅನೇಕ ಘಟಕಗಳಿಂದ ರಚಿತವಾಗಿರುತ್ತದೆ. ಕೆಲವು ಸಸ್ತನಿಗಳು ಬಹಳ ಕಡಿಮೆ ಕೂದಲುಗಳನ್ನು ಹೊಂದಿವೆಯಾದರೂ, ಎಚ್ಚರಿಕೆಯ ಪರೀಕ್ಷೆಯು ಈ ವೈಶಿಷ್ಟ್ಯವನ್ನು ಬಹಿರಂಗಪಡಿಸುತ್ತದೆ. ಕೂದಲುಗಳು ಹಲವುವೇಳೆ ಅವುಗಳ ದೇಹದ ಅಸ್ಪಷ್ಟ ಭಾಗಗಳಲ್ಲಿ ಇರುತ್ತವೆ.[2]: 61 ಸ್ತನಿ ವರ್ಗಕ್ಕೆ ಸೇರಿದ ತಿಮಿಂಗಿಲಗಳ ಪ್ರೌಢಾವಸ್ಥೆಯಲ್ಲಿ ಕೂದಲು ಇರದಿದ್ದರೂ ಭ್ರೂಣಹಂತದಲ್ಲಿ ಅದು ಇದ್ದೇ ಇರುತ್ತದೆ.
ಸಸ್ತನಿಗಳ ಹೃದಯದಲ್ಲಿ ನಾಲ್ಕು ಪ್ರಮುಖ ಕೋಣೆಗಳಿವೆ. ಇದು ಪಕ್ಷಿಗಳ ಹೃದಯದಷ್ಟೇ ಸಮರ್ಥವಾದುದು. ಹೃತ್ಕರ್ಣದ ಅಂತರಪಟಲ ಮತ್ತು ಹೃತ್ಕುಕ್ಷಿಯ ಅಂತರಪಟಲಗಳು ಹೃತ್ಕರ್ಣ ಮತ್ತು ಹೃತ್ಕುಕ್ಷಿಗಳನ್ನು ಎರಡೆರಡು ಭಾಗಗಳನ್ನಾಗಿ ಮಾಡಿವೆ. ಆದ್ದರಿಂದ ಮಲಿನ ರಕ್ತ ಶುದ್ಧ ರಕ್ತದೊಡನೆ ಮಿಶ್ರವಾಗುವುದಿಲ್ಲ. ಸೈನಸ್ ವಿನೋಸಸ್ ಕೋಣೆ ಶೇಷ ಮಾತ್ರವೂ ಇಲ್ಲದೆ ಬಲ ಹೃತ್ಕರ್ಣದೊಡನೆ ಸೇರಿಹೋಗಿದೆ. ಕೋನಸ್ ಕೂಡ ಇಲ್ಲ. ಇದು ಪಲ್ಮನರಿ ಅಯೋರ್ಟ ಮತ್ತು ಸಿಸ್ಟಮಿಕ್ ಮಹಾಪಧಮನಿಗಳಾಗಿ ಪರಿವರ್ತಿತವಾಗಿದೆ. ಬಲಹೃತ್ಕರ್ಣ ಭಿತ್ತಿಯಲ್ಲಿ ಪದವರ್ಧಕ (ಪೇಸ್ಮೇಕರ್) ಅಥವಾ ಸೈನು ಆರಿಕ್ಯುಲಾರ್ ಗೆಣ್ಣಿನ ರಚನೆ ಇದೆ. ಇದು ಸೈನಸ್ ವಿನೋಸಸ್ನ ಅಂಗಾಂಶ. ಹೃತ್ಕರ್ಣಗಳು ಸುಲಭವಾಗಿ ಹಿಗ್ಗಬಲ್ಲವು. ರಕ್ತ ನುಗ್ಗಿದಾಗ ಅದರ ಒತ್ತಡವನ್ನು ಸಮರ್ಪಕವಾಗಿ ಹತೋಟಿಯಲ್ಲಿಟ್ಟುಕೊಳ್ಳುತ್ತವೆ. ಹೃತ್ಕರ್ಣಗಳು ಹೃತ್ಕುಕ್ಷಿಗೆ ತೆರೆಯುವ ಬಳಿ ಜೇಬಿನ ರೀತಿಯ ಕವಾಟಗಳಿವೆ. ಎಡಹೃತ್ಕರ್ಣ ಮತ್ತು ಹೃತ್ಕುಕ್ಷಿಗಳ ನಡುವಣ ದ್ವಾರವನ್ನು ಎರಡು ಪದರಗಳ ಕವಾಟ ರಕ್ಷಿಸುತ್ತದೆ. ಇದೇ ಬೈಕಸ್ಪಿಡ್ ಕವಾಟ (ಮಿಟ್ರಲ್ ಕವಾಟ ಅಥವಾ ದ್ವೈವಲನ). ಬಲ ಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿಗಳ ನಡುವಣ ದ್ವಾರದಲ್ಲಿ ಮೂರು ಪದರಗಳ ಕವಾಟವಿದೆ. ಇದನ್ನು ಟ್ರೈಕಸ್ಪಿಡ್ ಕವಾಟವೆಂದು (ತ್ರೈವಲನ) ಕರೆಯುತ್ತಾರೆ. ಈ ಕವಾಟದ ಅಂಚುಗಳು ಹೃತ್ಕುಕ್ಷಿಯ ಏಣುಗಳಿಗೆ ಅಸ್ಥಿರಜ್ಜಿನ ಹುರಿಗಳಿಂದ ಅಂಟಿಕೊಂಡಿವೆ. ಇವೇ ಕಾರ್ಡ ಟೆಂಡಿನ ಕವಾಟಗಳು. ಇವು ರಕ್ತ ಹೃತ್ಕರ್ಣದಿಂದ ಹೃತ್ಕುಕ್ಷಿಗೆ ಮಾತ್ರ ಹರಿಯಲು ಬಿಡುತ್ತವೆ. ವಾಪಸು ಹೋಗಲು ಬಿಡುವುದಿಲ್ಲ. ಎಡ ಹೃತ್ಕುಕ್ಷಿಯ ಮುಂಭಾಗದಿಂದ ಸಿಸ್ಟಮಿಕ್ ಅಯೋರ್ಟ ಹೊರಡುತ್ತದೆ. ಪಲ್ಮನರಿ ಅಪಧಮನಿ ಬಲ ಹೃತ್ಕುಕ್ಷಿಯಿಂದ ಹೊರಟು ಎರಡು ಕವಲಾಗಿ ಒಂದೊಂದು ಕವಲೂ ಪುಪ್ಪುಸಕ್ಕೆ ಹೋಗುತ್ತದೆ. ಈ ಅಪಧಮನಿಗಳ ಬುಡಗಳಲ್ಲಿ ಮೂರು ಕವಾಟಗಳಿವೆ. ಇವು ರಕ್ತ ವಾಪಸ್ಸು ಬರದ ಹಾಗೆ ತಡೆಯುತ್ತವೆ. ಸಸ್ತನಿಗಳಲ್ಲಿ ಎಡ ಸಿಸ್ಟಮಿಕ್ ಮಹಾಪಧಮನಿ ಮಾತ್ರ ಉಂಟು.
ಹೆಚ್ಚಿನ ಸಸ್ತನಿಗಳು ಜರಾಯುಜಗಳಾಗಿದ್ದು ಮರಿಗಳಿಗೆ ಜನ್ಮ ನೀಡುತ್ತವೆ. ಆದರೆ, ಐದು ಪ್ರಭೇದಗಳ ಏಕದ್ವಾರಿಗಳಾದ ಪ್ಲಾಟಿಪಸ್ ಮತ್ತು ಎಕಿಡ್ನಾದ ನಾಲ್ಕು ಪ್ರಭೇದಗಳು ಮೊಟ್ಟೆಗಳನ್ನು ಇಡುತ್ತವೆ. ಏಕದ್ವಾರಿಗಳು ಬಹುತೇಕ ಇತರ ಸಸ್ತನಿಗಳಿಗಿಂತ ವಭಿನ್ನವಾದ ಲಿಂಗ ನಿರ್ಣಯ ವ್ಯವಸ್ಥೆಯನ್ನು ಹೊಂದಿವೆ.[3] ವಿಶೇಷವಾಗಿ, ಪ್ಲಾಟಿಪಸ್ನ ಲೈಂಗಿಕ ವರ್ಣತಂತುಗಳು ಥೀರಿಯನ್ ಸಸ್ತನಿಗಳಂತಿರದೆ ಹೆಚ್ಚಾಗಿ ಕೋಳಿಯಲ್ಲಿರುವಂತೆ ಇವೆ.[4]
ಸಸ್ತನಿಗಳ ಸ್ತನಗ್ರಂಥಿಗಳು ಹಾಲು ಉತ್ಪಾದಿಸಲು ವಿಶೇಷೀಕೃತವಾಗಿವೆ. ಹಾಲು ನವಜಾತ ಶಿಶುಗಳಿಗೆ ಪೌಷ್ಟಿಕಾಂಶದ ಪ್ರಾಥಮಿಕ ಮೂಲವಾಗಿದೆ. ಏಕದ್ವಾರಿಗಳು ಇತರ ಸಸ್ತನಿಗಳಿಂದ ಮೊದಲೇ ಕವಲೊಡೆದವು ಮತ್ತು ಇವು ಹೆಚ್ಚಿನ ಸಸ್ತನಿಗಳಲ್ಲಿ ಕಂಡುಬರುವ ಮೊಲೆತೊಟ್ಟುಗಳನ್ನು ಹೊಂದಿರುವುದಿಲ್ಲ, ಆದರೆ ಅವು ಸ್ತನಗ್ರಂಥಿಗಳನ್ನು ಹೊಂದಿವೆ. ಮರಿಗಳು ತಾಯಿಯ ಹೊಟ್ಟೆಯ ಮೇಲಿರುವ ಸ್ತನಪಟ್ಟಿಯಿಂದ ಹಾಲನ್ನು ನೆಕ್ಕುತ್ತವೆ.[5] ಸ್ತನ ಗ್ರಂಥಿಗಳು ಹೆಣ್ಣಿನಲ್ಲಿ ಮಾತ್ರ ಕ್ರಿಯಾಶೀಲ.
ಮರಿಗಳು ಜನಿಸಿ ಸಾಕಷ್ಟು ಕಾಲ ಸ್ತನ್ಯಪಾನ ಮಾಡುವುದರಿಂದ, ಆ ಅವಕಾಶ ತಾಯಿ ಅವುಗಳಿಗೆ ಜೀವನಶೈಲಿ ಕಲಿಸಲು ಉಪಯುಕ್ತವಾಗುತ್ತದೆ. ಹೀಗಾಗಿ ಸ್ತನಿಗಳಲ್ಲಿ ಎದ್ದುಕಾಣುವ ಹಲಬಗೆಯ ವರ್ತನೆಗಳು ಅಸ್ತನಿಗಳಲ್ಲಿ ಕಂಡುಬರುವುದಿಲ್ಲ.
ಜರಾಯುಜ ಸಸ್ತನಿಗಳು ಥೀರಿಯಾ ಉಪವರ್ಗದಲ್ಲಿವೆ; ಇಂದು ಜೀವಿಸುವ ಈ ಉಪವರ್ಗದ ಪ್ರಾಣಿಗಳು ಮಾರ್ಸೂಪಿಯಲ್ ಮತ್ತು ಜರಾಯು ಕೆಳವರ್ಗದಲ್ಲಿವೆ. ಮಾರ್ಸೂಪಿಯಲ್ಗಳು ಲಘು ಗರ್ಭಾವಸ್ಥೆ ಅವಧಿಯನ್ನು ಹೊಂದಿವೆ. ಇದು ಸಾಮಾನ್ಯವಾಗಿ ಅದರ ಬೆದೆಚಕ್ರಕ್ಕಿಂತ ಸಣ್ಣದಾಗಿರುತ್ತದೆ ಮತ್ತು ಅವು ಅಭಿವೃದ್ಧಿಯಾಗದ ನವಜಾತ ಶಿಶುವಿಗೆ ಜನ್ಮ ನೀಡುತ್ತವೆ. ಶಿಶುವು ನಂತರ ಮತ್ತಷ್ಟು ಬೆಳವಣಿಗೆ ಹೊಂದುತ್ತದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.