ಭಾರತದ ನಗರ From Wikipedia, the free encyclopedia
ಕೊಚ್ಚಿ (ಮಲಯಾಳಂ: കൊച്ചി, pronounced [koˈtʃːi] ( ))ಮುಂಚೆ ಕೊಚ್ಚಿನ್ ಎಂದು ಹೆಸರಾಗಿತ್ತು. ಇದು ಭಾರತದ ಕೇರಳ ರಾಜ್ಯದ ಒಂದು ನಗರ. ಈ ನಗರವು, ರಾಷ್ಟ್ರದ ಪ್ರಧಾನ ಬಂದರುಗಳಲ್ಲಿ ಒಂದಾಗಿದೆ ಹಾಗು ಇದು ಎರ್ನಾಕುಲಂ ಜಿಲ್ಲೆಯಲ್ಲಿ ನೆಲೆ ಹೊಂದಿರುವುದರ ಜೊತೆಗೆ, ಸುಮಾರು220 kilometres (137 mi)ರಷ್ಟು ರಾಜ್ಯದ ರಾಜಧಾನಿ ತಿರುವನಂತಪುರಂನ ಉತ್ತರ ಭಾಗದಲ್ಲಿದೆ. ನಗರವು ಅಂದಾಜು 600,000ದಷ್ಟು ಜನಸಂಖ್ಯೆಯನ್ನು ಹೊಂದಿರುವುದರ ಜೊತೆಗೆ 1.5 ದಶಲಕ್ಷ ವಿಸ್ತಾರವಾದ ಮೆಟ್ರೋಪಾಲಿಟನ್ ಜನಸಂಖ್ಯೆಯನ್ನು ಹೊಂದಿದೆ. ಇದು ನಗರವನ್ನು ಅತಿ ದೊಡ್ಡ ವಿಸ್ತರಿತ ನಗರವನ್ನಾಗಿ ಮಾಡುವುದರ ಜೊತೆಗೆ ರಾಜ್ಯದ ರಾಜಧಾನಿಯ ನಂತರ ಕೇರಳದ ಎರಡನೇ ಅತಿ ದೊಡ್ಡ ನಗರವೆನಿಸಿದೆ.
ಕೊಚ್ಚಿ
ಕೊಚ್ಚಿ | |
---|---|
city | |
Nickname: ಅರಬ್ಬಿ ಸಮುದ್ರದ ರಾಣಿ | |
Population (2001) | |
• city | ೫,೬೪,೫೮೯ |
• Metro | ೧೫,೪೧,೧೭೫ |
Website | www.corporationofcochin.org |
ಕಳೆದ 1102 CEಯಲ್ಲಿ, ಕೊಚ್ಚಿಯು ಕೊಚ್ಚಿನ್ ಸಾಮ್ರಾಜ್ಯದ ಸ್ಥಾನವಾಗಿತ್ತು. ಒಂದು ರಾಜಪ್ರಭುತ್ವದಲ್ಲಿದ್ದ ಈ ನಗರದ ವಂಶಾವಳಿಯ ಕುರುಹು ಕುಲಶೇಖರ ಸಾಮ್ರಾಜ್ಯದ ಜೊತೆಗೆ ಸಿಗುತ್ತದೆ. ಕ್ವೀನ್ ಆಫ್ ಅರೇಬಿಯನ್ ಸೀ ಎಂಬ ಪ್ರಶಂಸೆಯನ್ನು ಪಡೆದಿದ್ದ ಕೊಚ್ಚಿ ನಗರವು 14ನೇ ಶತಮಾನದಿಂದೀಚೆಗೆ ಅರಬ್ಬೀ ಸಮುದ್ರದ ಕರಾವಳಿ ತೀರದ ಪ್ರಮುಖ ಸಂಬಾರ-ಪದಾರ್ಥಗಳ ವ್ಯಾಪಾರ ಕೇಂದ್ರವಾಗಿತ್ತು. ಪುರಾತನ ಪ್ರವಾಸಿಗಳು ಹಾಗು ವ್ಯಾಪಾರಸ್ಥರು ಕೊಚ್ಚಿ ನಗರವನ್ನು ತಮ್ಮ ಬರವಣಿಗೆಗಳ ಮೂಲಕ ಉಲ್ಲೇಖಿಸಿದ್ದಾರೆ, ನಗರವನ್ನು ವಿಧವಿಧವಾಗಿ ಕೋಸಿಂ , ಕೊಚ್ಯಂ , ಕೊಚ್ಚಿನ್ , ಹಾಗು ಕೊಚ್ಚಿ ಎಂದು ಕರೆಯಲಾಗಿದೆ. ಪೋರ್ಚುಗೀಸರಿಂದ 1503ರಲ್ಲಿ ಆಕ್ರಮಣಕ್ಕೊಳಗಾದ ಕೊಚ್ಚಿ ನಗರವು ಭಾರತದಲ್ಲಿ ಯುರೋಪಿಯನ್ ವಸಾಹತು ನೆಲೆಯ ಮೊದಲ ಪ್ರದೇಶವಾಗಿದೆ. ಕಳೆದ 1530ರವರೆಗೂ ಪೋರ್ಚುಗೀಸ್ ಇಂಡಿಯಾದ ರಾಜಧಾನಿಯಾಗಿ ಉಳಿದಿತ್ತು, ಅವರು ನಂತರ ಗೋವಾವನ್ನು ತಮ್ಮ ರಾಜಧಾನಿಯನ್ನಾಗಿ ಆಯ್ಕೆ ಮಾಡಿದರು. ನಗರವು ನಂತರದಲ್ಲಿ ಡಚ್, ಮೈಸೂರು ಹಾಗು ಬ್ರಿಟಿಶ್ ರ ಸ್ವಾಧೀನಕ್ಕೆ ಒಳಪಟ್ಟಿತು.
ಕೊಚ್ಚಿ ನಗರವು 2000ದ ನಂತರ ಆರ್ಥಿಕ ಬೆಳವಣಿಗೆಯ ಅವಧಿಯನ್ನು ಪ್ರವೇಶಿಸಿತು, ಇದು ನಗರದ ಬಿರುಸಿನ ಬೆಳವಣಿಗೆಗೆ ದಾರಿ ಕಲ್ಪಿಸಿತು. ಹಡಗು ನಿರ್ಮಾಣ, ಅಂತಾರಾಷ್ಟ್ರೀಯ ವ್ಯಾಪಾರ, ಪ್ರವಾಸೋದ್ಯಮ ಹಾಗು ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯ ಕೇಂದ್ರವಾದ ಕೊಚ್ಚಿಯು ಕೇರಳದ ವಾಣಿಜ್ಯ ಕೇಂದ್ರವಾಗಿದೆ, ಜೊತೆಗೆ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎರಡನೆ-ಶ್ರೇಣಿಯ ಮೆಟ್ರೋ ಗಳಲ್ಲಿ ಒಂದಾಗಿದೆ. ಅಭಿವೃದ್ಧಿಶೀಲ ಜಗತ್ತಿನ ಇತರ ದೊಡ್ಡ ನಗರಗಳಂತೆ, ಕೊಚ್ಚಿಯು ಸಹ ಸಂಚಾರ ದಟ್ಟಣೆ ಹಾಗು ಪರಿಸರ ನಾಶದಂತಹ ನಗರೀಕರಣ ಸಮಸ್ಯೆಗಳ ಜೊತೆ ಹೋರಾಟವನ್ನು ಮುಂದುವರೆಸಿದೆ.
ಹಲವಾರು ಸಹಸ್ರಮಾನಗಳಲ್ಲಿ ಯಶಸ್ವೀ ವಲಸೆಗಾರರ ಗುಂಪುಗಳು ಕೊಚ್ಚಿ ನಗರವನ್ನು ಒಂದು ಸಾಂಸ್ಕೃತಿಕ ಮೂಸೆಯನ್ನಾಗಿಸಿದೆ. ಅತಿಯಾದ ಅಭಿವೃದ್ಧಿಯಿಂದಾಗುವ ಅಪಾಯದ ಹೊರತಾಗಿಯೂ, ನಗರವು ತನ್ನ ವಿಶಿಷ್ಟವಾದ ವಸಾಹತಿನ ಪರಂಪರೆಯನ್ನು ಹಾಗು ಸಾಂಪ್ರದಾಯಿಕ ಹಾಗು ಆಧುನಿಕತೆಯ ಮಿಶ್ರಣವನ್ನು ಹಾಗೆ ಉಳಿಸಿಕೊಂಡಿದೆ.
"ಕೊಚ್ಚಿ" ಹೆಸರಿನ ಪದದ ವ್ಯುತ್ಪತ್ತಿಗೆ ಸಂಬಂಧಿಸಿದ ಸಿದ್ಧಾಂತಗಳು ಚರ್ಚೆಗೆ ಗ್ರಾಸವಾಗಿದೆ.[1] ಒಂದು ಮೂಲದ ಪ್ರಕಾರ ನಗರದ ಆಧುನಿಕ ಹೆಸರು ಮಲಯಾಳಂ ಪದವಾದ ಕೊಚ್ ಅಜ್ಹಿ ಎಂಬುದರಿಂದ ಹುಟ್ಟಿಕೊಂಡಿದೆ, ಇದು 'ಸಣ್ಣ ತಗ್ಗಾದ ಮರಳು ದಂಡೆ' ಎಂಬ ಅರ್ಥವನ್ನು ನೀಡುತ್ತದೆ. ಮತ್ತೊಂದು ನಿರೂಪಣೆಯ ಪ್ರಕಾರ ನಗರದ ಹೆಸರು ಸಂಸ್ಕೃತ ಪದ ಗೋ ಶ್ರೀ ಎಂಬುದರಿಂದ ವ್ಯುತ್ಪನ್ನವನ್ನು ಹೊಂದಿದೆ, ಇದು 'ಹಸುಗಳಿಂದ ಸಮೃದ್ಧವಾದ' ಎಂಬ ಅರ್ಥವನ್ನು ನೀಡುತ್ತದೆ. ಕೆಲವಾರು ಪುರಾತನ ಗ್ರಂಥಗಳಲ್ಲಿ ನಗರವನ್ನು ಬಾಲಪುರಿ (ಸಂಸ್ಕೃತ ಭಾಷೆಯಲ್ಲಿ 'ಸಣ್ಣ ಪಟ್ಟಣ') ಎಂದು ಕರೆಯಲಾಗಿದೆ, ಇದೇ ಕಾಲಾನಂತರದಲ್ಲಿ ಕೊಚ್ಚಿನ್ ಎಂದು ಮಾರ್ಪಟ್ಟಿತು.[2]
ಕೆಲವೊಂದು ವಿವರಣೆಯ ಪ್ರಕಾರ, ಚೀನಾದ ಸಾಮ್ರಾಟ ಕುಬ್ಲೈ ಖಾನ್ ನ ಆಸ್ಥಾನದಿಂದ ಬಂದ ವ್ಯಾಪಾರಸ್ಥರು ತಮ್ಮ ತಾಯ್ನಾಡಿನ ಹೆಸರು ಕೊಚಿನ್ನನ್ನು ಇಟ್ಟರು. ಮತ್ತೊಂದು ಸಿದ್ಧಾಂತದ ಪ್ರಕಾರ ಕೊಚ್ಚಿ ಎಂಬ ಪದವು 'ಬಂದರು' ಎಂಬ ಅರ್ಥವನ್ನು ನೀಡುವ ಕಸಿ ಎಂಬ ಪದದಿಂದ ವ್ಯುತ್ಪತ್ತಿಯನ್ನು ಹೊಂದಿದೆ.[1] ಪರಿಶೋಧಕರಾದ ಇಟಲಿಯ ನಿಕೊಲೋ ಕೊಂಟಿ(15ನೇ ಶತಮಾನ), ಹಾಗು 17ನೇ ಶತಮಾನದ ಫ್ರಾ ಪೋಲಿನ್ ರ ವಿವರಣೆಯ ಪ್ರಕಾರ ನಗರವನ್ನು ಕೊಚ್ಚಿ ಎಂದು ಕರೆದರು, ಇದನ್ನು ಸಮುದ್ರಕ್ಕೆ ಹಿನ್ನೀರಿನ ಸಂಪರ್ಕ ಕಲ್ಪಿಸುತ್ತಿದ್ದ ನದಿಯ ಹೆಸರನ್ನು ಇರಿಸಲಾಗಿದೆ.
ಪೋರ್ಚುಗೀಸ್ ಹಾಗು ನಂತರದಲ್ಲಿ ಬ್ರಿಟಿಷರ ಆಗಮನದಿಂದ, ಕೊಚ್ಚಿನ್ ಎಂಬ ಹೆಸರು ಅಧಿಕೃತವಾದ ನಾಮಧೇಯವಾಗಿ ಅಂಟಿಕೊಂಡಿತು. ನಗರವು ತನ್ನ ಮೂಲ ಮಲಯಾಳಂ ಹೆಸರು, ಕೊಚ್ಚಿ ಯ ಒಂದು ಸಮೀಪದ ಆಂಗ್ಲ ರೂಪಾಂತರದ ಮರುನಾಮಕರಣಪ್ರಕ್ರಿಯೆಗೆ 1996ರಲ್ಲಿ ಒಳಗಾಯಿತು. ಆದಾಗ್ಯೂ, ನಗರವನ್ನು ವ್ಯಾಪಕವಾಗಿ ಕೊಚ್ಚಿನ್ ಎಂದು ಕರೆಯಲಾಗುತ್ತದೆ, ಜೊತೆಗೆ ನಗರಸಭೆಯು ತನ್ನ ಹೆಸರನ್ನು ಕಾರ್ಪೋರೇಶನ್ ಆಫ್ ಕೊಚ್ಚಿನ್ ಎಂದೇ ಉಳಿಸಿಕೊಂಡಿದೆ.
ಕೊಚ್ಚಿ ಹಲವು ಶತಮಾನಗಳಿಂದ ಭಾರತದ ಸಂಬಾರ-ಪದಾರ್ಥಗಳ ವ್ಯಾಪಾರದ ಕೇಂದ್ರ ಭಾಗವಾಗಿದೆ, ಜೊತೆಗೆ ಈ ನಗರವು ಯವನರಿಗೆ (ಗ್ರೀಕರು)ಮಾತ್ರವಲ್ಲದೇ ರೋಮನ್ನರು, ಯಹೂದಿಗಳು, ಅರಬ್ಬರು, ಹಾಗು ಚೀನಿಯರಿಗೆಪುರಾತನ ಕಾಲದಿಂದಲೂ ಪರಿಚಯವಿತ್ತು.[4] ಕಳೆದ 1341ರಲ್ಲಿ ಪೆರಿಯಾರ್ ನದಿಯ ಪ್ರಚಂಡ ಪ್ರವಾಹದಿಂದ ಕೊಡುಂಗಲ್ಲೂರ್(ಕ್ರಾಂಗನೂರ್)ನ ಬಂದರು ನಾಶವಾದ ನಂತರ ಕೊಚ್ಚಿ ನಗರವು ಒಂದು ವ್ಯಾಪಾರಿ ಕೇಂದ್ರವಾಗಿ ಹೆಚ್ಚಿನ ಮಹತ್ವ ಪಡೆಯಿತು.[5] ಕೊಚ್ಚಿ ನಗರದ ಬಗ್ಗೆ ಮೊದಲ ದಾಖಲೆಯನ್ನು ಚೀನಾದ ಯಾತ್ರಿಕ ಮಾ ಹುಯನ್ ನ ಪುಸ್ತಕಗಳಲ್ಲಿ ಕಾಣಬಹುದಾಗಿದೆ. ಈತ 15ನೇ ಶತಮಾನದಲ್ಲಿ ಅಡ್ಮಿರಲ್ ಜ್ಹೆಂಗ್ ಹೇನ ಟ್ರೆಷರ್ ಫ್ಲೀಟ್(ಸಂಪತ್ತು ಸಾಗಿಸುವ ಹಡಗು)ನೊಂದಿಗೆ ಕೊಚ್ಚಿ ನಗರಕ್ಕೆ ಭೇಟಿ ನೀಡಿದ್ದ.[6] ಕಳೆದ 1440ರಲ್ಲಿ ಕೊಚ್ಚಿ ನಗರಕ್ಕೆ ಭೇಟಿ ನೀಡಿದ್ದ ಇಟಾಲಿಯನ್ ಯಾತ್ರಿಕ ನಿಕೊಲೋ ಡ ಕೊಂಟಿಯ ಬರವಣಿಗೆಗಳಲ್ಲೂ ನಗರದ ಬಗ್ಗೆ ವಿವರಣೆಯನ್ನು ಕಾಣಬಹುದು.[7]
ಹಲವು ಇತಿಹಾಸಜ್ಞರ ಪ್ರಕಾರ, ಕೊಚ್ಚಿ ಪ್ರಭುತ್ವವು 1102ರಲ್ಲಿ ಕುಲಸೇಖರ ಸಾಮ್ರಾಜ್ಯದ ಅವನತಿಯೊಂದಿಗೆ ಅಸ್ತಿತ್ವಕ್ಕೆ ಬಂದಿತು.[8] ಕೊಚ್ಚಿಯ ಅರಸ, ಇಂದಿನ ಕೊಚ್ಚಿ ನಗರ ಹಾಗು ಅದರ ಅಕ್ಕಪಕ್ಕದ ಪ್ರದೇಶಗಳ ಮೇಲೆ ಅಧಿಕಾರವನ್ನು ಹೊಂದಿದ್ದ. ರಾಜ್ಯಭಾರವು ವಂಶಪಾರಂಪರ್ಯವಾಗಿತ್ತು, ಹಾಗು ಕೊಚ್ಚಿ ನಗರವನ್ನು ಆಳಿದ ಕುಟುಂಬವನ್ನು ಕೊಚ್ಚಿನ್ ರಾಜಕುಟುಂಬ ಎಂದು ಕರೆಯಲಾಗುತ್ತಿತ್ತು (ಸ್ಥಳೀಯ ಭಾಷೆಯಲ್ಲಿ ಪೆರುಂಪದಪ್ಪು ಸ್ವರೂಪಂ ಎಂದು ಕರೆಯಲಾಗುತ್ತದೆ). ಕೊಚ್ಚಿಯ ಪ್ರಮುಖ ಭೂಭಾಗವು 18ನೇ ಶತಮಾನದಿಂದಲೂ ರಾಜಪ್ರಭುತ್ವದ ರಾಜಧಾನಿಯಾಗಿ ಉಳಿದಿತ್ತು. ಆದಾಗ್ಯೂ, ಈ ಅವಧಿಯು ಹೆಚ್ಚಾಗಿ ವಿದೇಶಿ ಆಳ್ವಿಕೆಗೆ ಒಳಪಡುವುದರ ಜೊತೆಗೆ ರಾಜ ಸಾಮಾನ್ಯವಾಗಿ ಕೇವಲ ನಾಮಕಾವಾಸ್ತೆ ರಾಜನಾಗಿ ಸೌಲಭ್ಯಗಳನ್ನು ಪಡೆಯುತ್ತಿದ್ದ.
ಕೊಚ್ಚಿಯಲ್ಲಿರುವ ಫೋರ್ಟ್ ಕೊಚ್ಚಿ ಭಾರತದಲ್ಲಿ ಮೊದಲ ಯುರೋಪಿಯನ್ ವಸಾಹತು ನೆಲೆಯಾಗಿದೆ. ಇಸವಿ 1503 ರಿಂದ 1663ರವರೆಗೂ, ಫೋರ್ಟ್ ಕೊಚ್ಚಿಯು ಪೋರ್ಚುಗಲ್ ರ ಆಳ್ವಿಕೆಯಲ್ಲಿತ್ತು. ಪೋರ್ಚುಗೀಸರ ಈ ಆಳ್ವಿಕೆಯ ಅವಧಿಯು, ಈ ಪ್ರದೇಶದಲ್ಲಿ ವಾಸವಿದ್ದ ಯಹೂದಿಗಳಿಗೆ ಒಂದು ಅತ್ಯಂತ ಕಡು ಕಷ್ಟದ ಅವಧಿಯಾಗಿತ್ತು, ಏಕೆಂದರೆ ಆ ಸಮಯದಲ್ಲಿ ಪೋರ್ಚುಗೀಸ್ ಇಂಡಿಯಾದಲ್ಲಿ ತಪಾಸಣೆಯು ಬಹಳ ಸಕ್ರಿಯವಾಗಿತ್ತು. ಕೊಚ್ಚಿಯಲ್ಲಿ ವಾಸ್ಕೋ ಡ ಗಾಮನ ಸಮಾಧಿಯನ್ನು ಸ್ಥಾಪಿಸಲಾಗಿದೆ, ಈತ ಭಾರತಕ್ಕೆ ಬಂದ ಮೊದಲ ಯುರೋಪಿಯನ್ ನಾವಿಕ. ಈತನ ಶವಸಂಸ್ಕಾರವನ್ನು St. ಫ್ರಾನ್ಸಿಸ್ ಚರ್ಚ್ ನಲ್ಲಿ ಮಾಡಲಾಯಿತು, ನಂತರ ಅವನ ದೇಹಾವಶೇಷವನ್ನು 1539ರಲ್ಲಿ ಪೋರ್ಚುಗಲ್ಗೆ ಹಿಂದುರಿಗಿಸಲಾಯಿತು.[9] ಪೋರ್ಚುಗೀಸರ ನಂತರ ಡಚ್ಚರು ಕೊಚ್ಚಿಯನ್ನು ಆಳಿದರು, ಇವರು ಜಾಮೋರಿನ್ ಗಳ ಜೊತೆಗೂಡಿ ಕೊಚ್ಚಿಯನ್ನು ಆಕ್ರಮಿಸಿದರು. 1773ರಲ್ಲಿ, ಮೈಸೂರು ಅರಸ ಹೈದರ್ ಅಲಿ ತನ್ನ ಆಕ್ರಮಣವನ್ನು ಮಲಬಾರ್ ಪ್ರದೇಶದಿಂದ ಕೊಚ್ಚಿಯವರೆಗೂ ವಿಸ್ತರಿಸಿ, ನಗರವನ್ನು ಮೈಸೂರಿನ ಅಧೀನವನ್ನಾಗಿ ಮಾಡಿಕೊಂಡ. ಕೊಚ್ಚಿಯ ವಂಶಪಾರಂಪರ್ಯ ಪ್ರಧಾನಮಂತ್ರಿಗಿರಿಯನ್ನು ಹೊಂದಿದ್ದ ಪಾಲಿಯತ್ ಅಚನ್ ಗಳ ಆಳ್ವಿಕೆಯು ಈ ಅವಧಿಯಲ್ಲಿ ಕೊನೆಗೊಂಡಿತು.
ಈ ನಡುವೆ, ಯುನೈಟೆಡ್ ಪ್ರಾವಿನ್ಸಸ್(ಡಚ್ ಗಣರಾಜ್ಯಗಳು)ಗಳ ಮೇಲೆ ಯುದ್ಧ ಘೋಷಿಸುವರೆಂಬ ಭೀತಿಯಿಂದ ಡಚ್ಚರು ಯುನೈಟೆಡ್ ಕಿಂಗ್ಡಮ್ ಜೊತೆಗೆ ಆಂಗ್ಲೋ-ಡಚ್ ಟ್ರೀಟಿ ಆಫ್ 1814ಗೆ ಸಹಿ ಹಾಕಿದರು, ಇದರಂತೆ ಬಾಂಗ್ಕದ ದ್ವೀಪಕ್ಕೆ ಬದಲಿಯಾಗಿ ಕೊಚ್ಚಿಯನ್ನು ಯುನೈಟೆಡ್ ಕಿಂಗ್ಡಮ್ ವಶಕ್ಕೆ ಒಪ್ಪಿಸಿತು. ಆದಾಗ್ಯೂ, ಈ ಒಪ್ಪಂದಕ್ಕೆ ಸಹಿ ಹಾಕುವ ಮುಂಚೆಯೇ ಆ ಪ್ರದೇಶದಲ್ಲಿ ಇಂಗ್ಲಿಷರ ವಾಸ್ತವ್ಯದ ಬಗ್ಗೆ ಸಾಕ್ಷ್ಯಗಳು ದೊರೆತಿವೆ.[10] ಕಳೆದ 1866ರಲ್ಲಿ, ಫೋರ್ಟ್ ಕೊಚ್ಚಿಯು ಒಂದು ಪುರಸಭೆಯಾಗಿತ್ತು, ಹಾಗು ಇದರ ಮೊದಲ ಮುನಿಸಿಪಲ್ ಕೌನ್ಸಿಲ್ ಚುನಾವಣೆಯನ್ನು 1883ರಲ್ಲಿ ನಡೆಸಲಾಗಿತ್ತು. ಬ್ರಿಟಿಷರ ಅಧೀನದಲ್ಲಿ ಆಳ್ವಿಕೆ ಮಾಡಿದ ಕೊಚ್ಚಿನ್ನ ಮಹಾರಾಜ, 1896ರಲ್ಲಿ ಮಾತ್ತನ್ಚೇರಿ ಹಾಗು ಎರ್ನಾಕುಲಂ ಪಟ್ಟಣ ಮಂಡಲಗಳನ್ನು ರೂಪಿಸುವುದರ ಮೂಲಕ ಸ್ಥಳೀಯ ಆಡಳಿತಕ್ಕೆ ಚಾಲನೆ ನೀಡಿದ. ಕಳೆದ 1925ರಲ್ಲಿ, ಸಾರ್ವಜನಿಕರು ರಾಜ್ಯದ ಮೇಲೆ ಹೇರಿದ ಒತ್ತಡದಿಂದಾಗಿ ಕೊಚ್ಚಿ ಶಾಸನ ಸಭೆಯನ್ನು ರಚಿಸಲಾಯಿತು.
20ನೇ ಶತಮಾನದ ಪ್ರಾರಂಭದ ಹೊತ್ತಿಗೆ, ಮುಖ್ಯವಾಗಿ ಬಂದರುಗಳಲ್ಲಿ ವ್ಯಾಪಾರವು ಗಣನೀಯವಾಗಿ ಹೆಚ್ಚಿತು. ಇದರೊಂದಿಗೆ ಬಂದರಿನ ಅಭಿವೃದ್ಧಿಯ ಅವಶ್ಯಕತೆಯು ಹೆಚ್ಚಾಗಿ ಕಂಡುಬಂದಿತು. ಅಂದಿನ ಮದ್ರಾಸ್ ಗವರ್ನರ್ ಆಗಿದ್ದ ಲಾರ್ಡ್ ವಿಲ್ಲಿಂಗ್ಡನ್ ನ ನಿರ್ದೇಶನದ ಮೇರೆಗೆ 1920ರಲ್ಲಿ ಬಂದರು ಎಂಜಿನಿಯರ್ ರಾಬರ್ಟ್ ಬ್ರಿಸ್ಟೌ ರನ್ನು ಕೊಚ್ಚಿಗೆ ಕರೆಸಲಾಯಿತು. 21 ವರ್ಷಗಳ ಅವಧಿಯಲ್ಲಿ, ಆತ ಕೊಚ್ಚಿಯನ್ನು ಪರ್ಯಾಯ ದ್ವೀಪದ ಅತ್ಯಂತ ಸುರಕ್ಷಿತ ಬಂದರು ನೆಲೆಯಾಗಿ ಮಾರ್ಪಡಿಸಿದ.ಉಗಿಯಂತ್ರದ ಕ್ರೇನುಗಳಿಂದ ಸಜ್ಜುಗೊಂಡ ಹೊಸದಾಗಿ ಪುನರ್ರಚಿಸಿದ ಒಳ ಬಂದರಿನಲ್ಲಿ ಹಡಗುಗಳು ಲಂಗರುಹಾಕಿದವು.[11][12]
ಕಳೆದ 1947ರಲ್ಲಿ, ಭಾರತವು ಬ್ರಿಟಿಷರ ವಸಾಹತಿನ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಗಳಿಸಿದಾಗ, ಭಾರತೀಯ ಒಕ್ಕೂಟಕ್ಕೆ ಸ್ವಇಚ್ಛೆಯಿಂದ ಸೇರ್ಪಡೆಗೊಂಡ ಮೊದಲ ರಾಜಪ್ರಭುತ್ವದ ರಾಜ್ಯ ಕೊಚ್ಚಿಯಾಗಿತ್ತು.[13] ಕಳೆದ 1949ರಲ್ಲಿ, ಕೊಚ್ಚಿನ್ ಹಾಗು ಟ್ರಾವಂಕೋರ್ ನಗರಗಳ ವಿಲೀನದೊಂದಿಗೆ ಟ್ರಾವಂಕೋರ್-ಕೊಚ್ಚಿನ್ ರಾಜ್ಯವು ಅಸ್ತಿತ್ವಕ್ಕೆ ಬಂದಿತು. ಕಳೆದ 1949 ರಿಂದ 1956ರವರೆಗೆ ಟ್ರಾವಂಕೋರಿನ ರಾಜ, ಟ್ರಾವಂಕೋರ್-ಕೊಚ್ಚಿನ್ ಒಕ್ಕೂಟದ ರಾಜಪ್ರಮುಖನಾಗಿದ್ದ. ಟ್ರಾವಂಕೋರ್-ಕೊಚ್ಚಿನ್ ರಾಜ್ಯವು ನಂತರದಲ್ಲಿ ಮದರಾಸು ರಾಜ್ಯದ ಮಲಬಾರ್ ಜಿಲ್ಲೆಯೊಂದಿಗೆ ವಿಲೀನವಾಯಿತು. ಅಂತಿಮವಾಗಿ, ಭಾರತ ಸರ್ಕಾರದ ಸ್ಟೇಟ್ಸ್ ರಿಆರ್ಗನೈಸೇಶನ್ ಆಕ್ಟ್(1956) ಒಂದು ಹೊಸ ರಾಜ್ಯ - ಕೇರಳವನ್ನು -ಉದ್ಘಾಟಿಸಿತು- ಟ್ರ್ಯಾವಂಕೋರ್-ಕೊಚ್ಚಿನ್(ತಮಿಳುನಾಡುನೊಂದಿಗೆ ವಿಲೀನಗೊಂಡ ದಕ್ಷಿಣಭಾಗದ ನಾಲ್ಕು ತಾಲ್ಲೂಕುಗಳನ್ನು ಹೊರತುಪಡಿಸಿ), ಮಲಬಾರ್ ಜಿಲ್ಲೆ ಹಾಗೂಸೌತ್ ಕೆನರಾದ ಕಾಸರಗೋಡುತಾಲೂಕನ್ನು ಸೇರಿಸಿಕೊಂಡಿತು.[14] ಜುಲೈ 9, 1960ರಲ್ಲಿ, ಮಾತ್ತನ್ಚೇರಿ ಆಡಳಿತ ಮಂಡಳಿಯು ಒಂದು ಮಸೂದೆಯನ್ನು ಅಂಗೀಕರಿಸಿತು-ಇದನ್ನು ನಂತರ ಸರ್ಕಾರಕ್ಕೆ ರವಾನಿಸಲಾಯಿತು-ಇದರಲ್ಲಿ ಅಸ್ತಿತ್ವದಲ್ಲಿರುವ ಫೋರ್ಟ್ ಕೊಚ್ಚಿ, ಮಾತ್ತನ್ಚೇರಿ, ಹಾಗು ಎರ್ನಾಕುಲಂನ ಪುರಸಭೆಗಳನ್ನು ಒಂದೇ ನಗರಸಭೆಯನ್ನಾಗಿ ರೂಪಿಸಬೇಕೆಂಬ ಕೋರಿಕೆಯನ್ನು ಒಳಗೊಂಡಿತ್ತು. ಈ ರೀತಿ ಸೂಚಿಸಲಾದ ವಿಲೀನದ ಸಾಧ್ಯಾಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಲು ಸರಕಾರವು ಒಂದು ಸಮಿತಿಯನ್ನು ನೇಮಿಸಿತು. ಸಮಿತಿಯ ವರದಿಯನ್ನು ಆಧರಿಸಿ, ಕೇರಳ ಶಾಸನ ಸಭೆಯು ನಗರಸಭೆಯ ರಚನೆಯನ್ನು ಅಂಗೀಕರಿಸಿತು. ನವೆಂಬರ್ 1, 1967ರಲ್ಲಿ, ಕೇರಳ ರಾಜ್ಯವು ಸ್ಥಾಪನೆಯಾಗಿ ಸರಿಯಾಗಿ ಹನ್ನೊಂದು ವರ್ಷಗಳ ಬಳಿಕ, ಕೊಚ್ಚಿನ್ ನಗರಸಭೆಯು ಅಸ್ತಿತ್ವಕ್ಕೆ ಬಂದಿತು. ನಗರಸಭೆಯ ಸ್ಥಾಪನೆಗೆ ಕಾರಣವಾದ ಪ್ರಮುಖ ವಿಲೀನಗಳಲ್ಲಿ, ಎರ್ನಾಕುಲಂ, ಮಾತ್ತನ್ಚೇರಿ ಹಾಗು ಫೋರ್ಟ್ ಕೊಚ್ಚಿಯ ಪುರಸಭೆಗಳ ವಿಲೀನಗಳ ಜೊತೆಗೆ, ವಿಲ್ಲಿಂಗ್ಡನ್ ದ್ವೀಪ, ನಾಲ್ಕು ಪಂಚಾಯತ್ ಗಳು (ಪಲ್ಲುರುತಿ,ವೆನ್ನಲ, ವೈತ್ತಿಲ ಹಾಗು ಎಡಪ್ಪಲ್ಲಿ), ಹಾಗು ಗುಂಡು ಹಾಗು ರಾಮನ್ತುರುತ್ ನಂತಹ ಸಣ್ಣ ದ್ವೀಪಗಳು ಸಹ ಸೇರಿವೆ.
ಭಾರತದ ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ಕೊಚ್ಚಿಯು ಆರ್ಥಿಕ ನಿಶ್ಚಲತೆಯನ್ನು ಎದುರಿಸಿತು. ಕಳೆದ 1990ರ ದಶಕದ ಮಧ್ಯಭಾಗದಲ್ಲಿ ಕೇಂದ್ರ ಸರ್ಕಾರವು ಪರಿಚಯಿಸಿದ ಭಾರತದ ಆರ್ಥಿಕ ಸುಧಾರಣೆಗಳನಂತರ ನಗರದಲ್ಲಿ ಆರ್ಥಿಕ ಚೇತರಿಕೆಯು ವೇಗ ಪಡೆದುಕೊಂಡಿತು. ಕಳೆದ 2000ದಿಂದೀಚೆಗೆ, ಸೇವಾ ಕ್ಷೇತ್ರವು ನಗರದ ನಿಷ್ಕ್ರಿಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಿತು. ಮಾಹಿತಿ ತಂತ್ರಜ್ಞಾನ (IT)ಆಧರಿಸಿದ ಹಾಗು ಇತರ ಬಂದರು ಆಧಾರಿತ ಮೂಲಸೌಲಭ್ಯಗಳನ್ನು ಆಧರಿಸಿದ ಹಲವಾರು ಕೈಗಾರಿಕಾ ಪಾರ್ಕುಗಳ ಸ್ಥಾಪನೆಯಿಂದ ನಗರದಲ್ಲಿ ನಿರ್ಮಾಣ ಹಾಗು ಸ್ಥಿರಾಸ್ಥಿ ಉತ್ತೇಜನಕ್ಕೆ ಪ್ರಚೋದಿಸಿತು. ವರ್ಷಾಂತರಗಳಲ್ಲಿ, ಕೊಚ್ಚಿ ನಗರವು ಕ್ಷಿಪ್ರವಾದ ವಾಣಿಜ್ಯೀಕರಣಕ್ಕೆ ಸಾಕ್ಷಿಯಾಗಿದೆ, ಹಾಗು ಇಂದು ನಗರವು ಕೇರಳ ರಾಜ್ಯದ ಒಂದು ವಾಣಿಜ್ಯ ಕೇಂದ್ರವಾಗಿ ಬೆಳವಣಿಗೆಯಾಗಿದೆ.[15]
ಕೊಚ್ಚಿ ನಗರವು ಭಾರತದ ನೈಋತ್ಯ ಕರಾವಳಿಯ9°58′N 76°13′Eಲ್ಲಿ ನೆಲೆಹೊಂದಿರುವ ಜೊತೆಗೆ 94.88 ಚದರ ಕಿಲೋಮೀಟರ್ ಗಳಷ್ಟು ಪ್ರದೇಶದ ವ್ಯಾಪ್ತಿಯನ್ನು ಹೊಂದಿದೆ(36.63 ಚದರ ಮೈಲು). ನಗರವು ಪರ್ಯಾಯ ದ್ವೀಪದ ಉತ್ತರಭಾಗದ ಕೊನೆಯಲ್ಲಿ, ಸುಮಾರು 19 ಕಿಲೋಮೀಟರ್ ಗಳ(12 ಮೈ.) ಉದ್ದ ಹಾಗು ಒಂದು ಮೈಲಿಗೂ ಕಡಿಮೆ(1.6 ಕೀ.)ಅಗಲದೊಂದಿಗೆ ಸ್ಥಾಪಿತವಾಗಿದೆ. ನಗರದ ಪಶ್ಚಿಮ ಭಾಗಕ್ಕೆ ಅರಬ್ಬೀ ಸಮುದ್ರವಿದ್ದರೆ, ಪೂರ್ವದಲ್ಲಿ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಸಲೆ ಬತ್ತದ ನದಿಗಳಿಂದ ಹರಿದ ನದಿಮುಖಗಳಿವೆ. ಕೊಚ್ಚಿ ನಗರದ ಹೆಚ್ಚಿನ ಪ್ರದೇಶವು ಸಮುದ್ರ ಮಟ್ಟದಲ್ಲಿ ಇರುವುದರ ಜೊತೆಗೆ 48 ಕಿಲೋಮೀಟರುಗಳಷ್ಟು ಉದ್ದದ ಕಡಲಂಚನ್ನು ಹೊಂದಿದೆ.[16]
ಕೊಚ್ಚಿಯ ಪ್ರಸಕ್ತ ಮೆಟ್ರೋಪಾಲಿಟನ್ ಸರಹದ್ದಿನಲ್ಲಿ ಎರ್ನಾಕುಲಂನ ಪ್ರಧಾನ ಭೂಭಾಗ, ಹಳೆ ಕೊಚ್ಚಿ, ಎಡಪಲ್ಲಿ ಯ ಉಪನಗರಗಳು ಹಾಗು ಈಶಾನ್ಯಕ್ಕೆ ಕಲಮಸ್ಸೇರಿ ಹಾಗು ಕಕ್ಕನಾಡ್; ನೈರುತ್ಯಕ್ಕೆ ತ್ರಿಪುನಿತುರ ಹಾಗು ವೆಂಬನಾಡ್ ಸರೋವರಕ್ಕೆ ಸಮೀಪದಲ್ಲಿ ಚೆದುರಿರುವಂತಹ ದ್ವೀಪಗಳ ಸಮೂಹವು ಸೇರಿದೆ. ಈ ದ್ವೀಪಗಳಲ್ಲಿ ಹೆಚ್ಚಿನವು ಬಹಳ ಸಣ್ಣದಾಗಿವೆ, ಇವುಗಳು ಆರು ಚದರ ಕಿಲೋಮೀಟರ್ಗಳಿಂದ ಹಿಡಿದು ಒಂದು ಚದರ ಕಿಲೋಮೀಟರ್ಗೂ ಕಡಿಮೆ ವ್ಯಾಪ್ತಿಯ ಅಂತರವನ್ನು ಹೊಂದಿದೆ (1,500 ರಿಂದ ಹಿಡಿದು 250 ಎಕರೆ ಗಳಿಗೂ ಕಡಿಮೆ)
ಇಲ್ಲಿನ ಮಣ್ಣು, ಮೆಕ್ಕಲು ಮಣ್ಣು, ಟೆರಿಯ ಬೂದು ಮರಳು, ಮುಂತಾದವುಗಳ ಘನವಸ್ತು ಕಣಗಳನ್ನು ಹೊಂದಿರುತ್ತದೆ. ಹೈಡ್ರೋಮಾರ್ಫಿಕ್ ಲವಣಯುಕ್ತ ಮಣ್ಣು ಸಹ ಹಿನ್ನೀರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬರುತ್ತದೆ.[17]
ಪ್ರಬಲ ಬಂಡೆಯ ಮಾದರಿಗಳು ಇಲ್ಲಿ ಕಂಡುಬರುತ್ತವೆ ಉದಾಹರಣೆಗೆ ಅರ್ಚೆಯನ್-ಪ್ರಧಾನವಾದ ಸ್ತರಪ್ರವಿಷ್ಟಾಗ್ನಿಶಿಲೆಗಳು, ಚಾರ್ನೋಕ್ಕೈಟ್ ಗಳು ಹಾಗು ಗ್ನೈಸ್ಸಿಸ್(ನೈಸ್ ಶಿಲೆ) ಶಿಲೆಗಳು ಕಂಡು ಬರುತ್ತವೆ. ಒಂದು ಸೂಕ್ಷ್ಮ ಪರಿಸರ ಪ್ರದೇಶವನ್ನು ಹೊಂದಿರುವ ಮಂಗಳವನಂ ಬರ್ಡ್ ಸ್ಯಾಂಚುರಿಯು ನಗರದ ಮಧ್ಯಭಾಗದಲ್ಲಿದೆ. ಇಲ್ಲಿ ಒಂದು ವ್ಯಾಪಕ ಶ್ರೇಣಿಯ ಮ್ಯಾಂಗ್ರೋವ್ ಸಸ್ಯ ಜಾತಿಗಳನ್ನು ಹೊಂದಿರುವುದರ ಜೊತೆಗೆ ವ್ಯಾಪಕ ವೈವಿಧ್ಯದ ವಲಸಿಗ ಹಕ್ಕಿಗಳು ಗೂಡುಕಟ್ಟುವ ಪ್ರದೇಶವಾಗಿದೆ.
ಕೊಪ್ಪೆನ್ ಹವಾಮಾನದ ವರ್ಗೀಕರಣದಡಿಯಲ್ಲಿ, ಕೊಚ್ಚಿಯು ಒಂದು ಉಷ್ಣವಲಯದ ಮಾನ್ಸೂನ್ ಹವಾಗುಣ ದ ವೈಶಿಷ್ಟ್ಯವನ್ನು ಹೊಂದಿದೆ. ಕೊಚ್ಚಿ ನಗರವು ಸಮಭಾಜಕವೃತ್ತದ ಸಾಮೀಪ್ಯವನ್ನು ತನ್ನ ಕರಾವಳಿ ನೆಲೆಯೊಂದಿಗೆ ಹೊಂದಿರುವ ಕಾರಣದಿಂದಾಗಿ, ಸಾಧಾರಣ ಮತ್ತು ಅಧಿಕ ಮಟ್ಟಗಳ ಆರ್ದ್ರತೆಗಳೊಂದಿಗೆ ಋತುಮಾನದ ಉಷ್ಣಾಂಶದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ವಾರ್ಷಿಕ ಉಷ್ಣಾಂಶವು 20 ರಿಂದ 35 °C(68–95 °F)ನಷ್ಟಿರುತ್ತದೆ. ಜೊತೆಗೆ ದಾಖಲೆಯಾದ ಹೆಚ್ಚಿನ ಉಷ್ಣಾಂಶವೆಂದರೆ 34 °C (96 °F), ಹಾಗು ದಾಖಲೆಯಾದ ಕಡಿಮೆ ಉಷ್ಣಾಂಶವೆಂದರೆ 17 °C (63 °F).[18] ಜೂನ್ ನಿಂದ ಸೆಪ್ಟೆಂಬರ್ ವರೆಗೆ, ನೈಋತ್ಯ ಮುಂಗಾರು ಕೊಚ್ಚಿ ನಗರಕ್ಕೆ ಹೆಚ್ಚಿನ ಮಳೆಯನ್ನು ತರುತ್ತದೆ, ಏಕೆಂದರೆ ಕೊಚ್ಚಿ ನಗರವು ಪಶ್ಚಿಮ ಘಟ್ಟಗಳ ಗಾಳಿ ಬೀಸುವ ದಿಕ್ಕಿನಲ್ಲಿದೆ. ಅಕ್ಟೋಬರ್ನಿಂದ ಡಿಸೆಂಬರ್ ವರೆಗೂ, ಕೊಚ್ಚಿ ನಗರವು ಈಶಾನ್ಯ ಮುಂಗಾರಿನಿಂದ ಕಡಿಮೆ ಮಳೆಯ ಪ್ರಮಾಣವನ್ನು ಹೊಂದಿರುತ್ತದೆ(ಆದರೂ ಗಮನಾರ್ಹವಾಗಿರುತ್ತದೆ), ಏಕೆಂದರೆ ನಗರವು ಗಾಳಿಮರೆಯ ದಿಕ್ಕಿನಲ್ಲಿದೆ. ಸರಾಸರಿ ವಾರ್ಷಿಕ ಮಳೆಯ ಪ್ರಮಾಣವು 274 ಸೆಮಿ(108 in)ರಷ್ಟಿರುತ್ತದೆ,[19] ಜೊತೆಗೆ ಸರಾಸರಿ ವಾರ್ಷಿಕ 132 ಮಳೆ ದಿನಗಳನ್ನು ಹೊಂದಿರುತ್ತದೆ.
ಕೊಚ್ಚಿ ನಗರದ ಅಧಿಕಾರಿಗಳು
|
ಕೊಚ್ಚಿ ಕಾರ್ಪೋರೇಶನ್ ನಗರದ ಆಡಳಿತವನ್ನು ನಿರ್ವಹಿಸುವುದರ ಜೊತೆಗೆ, ಇದಕ್ಕೆ ಒಬ್ಬ ಮೇಯರ್ ಮುಖ್ಯಸ್ಥರಾಗಿರುತ್ತಾರೆ. ಆಡಳಿತಾತ್ಮಕ ಉದ್ದೇಶಗಳಿಂದ, ನಗರವನ್ನು 70 ವಾರ್ಡ್ ಗಳಾಗಿ ವಿಂಗಡಿಸಲಾಗಿದೆ. ಇದರ ಪ್ರಕಾರವಾಗಿ ಐದು ವರ್ಷಕ್ಕೊಮ್ಮೆ ಕಾರ್ಪೋರೇಶನ್ ಕೌನ್ಸಿಲ್ನ ಸದಸ್ಯರು ಆರಿಸಿ ಬರುತ್ತಾರೆ. ಪೂರ್ವದಲ್ಲಿ; ಫೋರ್ಟ್ ಕೊಚ್ಚಿನ್, ಮಾತ್ತನ್ಚೇರಿ ಹಾಗು ಎರ್ನಾಕುಲಂ ಕೊಚ್ಚಿನ್ ಪ್ರದೇಶದ ಮೂರು ಪುರಸಭೆಗಳಾಗಿದ್ದವು. ಇದನ್ನು ನಂತರ ವಿಲೀನಗೊಳಿಸಿ ಕೊಚ್ಚಿನ್ ಕಾರ್ಪೋರೇಶನ್ ರೂಪಿಸಲಾಯಿತು. ಈ ಕಾರ್ಪೋರೇಷನ್ ಪ್ರಧಾನ ಕಚೇರಿಯು ಎರ್ನಾಕುಲಂನಲ್ಲಿ ಹಾಗು ವಲಯ ಕಛೇರಿಗಳು ಫೋರ್ಟ್ ಕೊಚ್ಚಿ, ಮಾತ್ತನ್ಚೇರಿ, ಪಲ್ಲುರುತಿ, ಎಡಪ್ಪಲ್ಲಿ, ವಡುತಲ ಹಾಗು ವೈತ್ತಿಲನಲ್ಲಿವೆ. ನಗರದ ಪ್ರಾದೇಶಿಕ ಆಡಳಿತವನ್ನು ಸಿಬ್ಬಂದಿ ಇಲಾಖೆ ಹಾಗು ಕೌನ್ಸಿಲ್ ವಿಭಾಗವು ನಿರ್ವಹಿಸುತ್ತವೆ. ಇತರ ಇಲಾಖೆಗಳಲ್ಲಿ ನಗರಾಭಿವೃದ್ಧಿ ಯೋಜನೆ, ಆರೋಗ್ಯ, ಅಭಿಯಂತರ, ಕಂದಾಯ ಹಾಗು ಲೆಕ್ಕ ಪತ್ರ ಇಲಾಖೆಗಳು ಸೇರಿವೆ.[20] ಕಾರ್ಪೊರೇಷನ್ ತ್ಯಾಜ್ಯ ವಿಲೇವಾರಿ, ಒಳಚರಂಡಿ ನಿರ್ವಹಣೆ ಹಾಗು ಪೆರಿಯಾರ್ ನದಿಯಿಂದ ಶುದ್ಧೀಕರಿಸಿದ ಕುಡಿಯುವ ನೀರಿನ ಪೂರೈಕೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.[21] ವಿದ್ಯುಚ್ಛಕ್ತಿಯನ್ನು ಕೇರಳ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ಪೂರೈಕೆ ಮಾಡುತ್ತದೆ.
ಗ್ರೇಟರ್ ಕೊಚ್ಚಿನ್ ಅಭಿವೃದ್ಧಿ ಪ್ರಾಧಿಕಾರ (GCDA), ಕೊಚ್ಚಿ ನಗರದ ಅಭಿವೃದ್ಧಿಯನ್ನು ಪ್ರಾರಂಭಿಸುವ ಹಾಗು ಅದರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಒಂದು ಸರಕಾರೀ ಸಂಸ್ಥೆಯಾಗಿದೆ. ಕೊಚ್ಚಿ ಸಿಟಿ ಪೋಲಿಸ್ ಗೆ ಒಬ್ಬ ಪೋಲಿಸ್ ಆಯುಕ್ತರು ಮುಖ್ಯಸ್ಥರಾಗಿರುತ್ತಾರೆ, ಇವರು ಇಂಡಿಯನ್ ಪೋಲಿಸ್ ಸರ್ವೀಸ್(IPS) ನ ಒಬ್ಬ ಅಧಿಕಾರಿ. ಇದು ಟ್ರ್ಯಾಫಿಕ್ ಪೋಲಿಸ್, ನಾರ್ಕೋಟಿಕ್ಸ್ ಸೆಲ್, ಆರ್ಮ್ಡ್ ರಿಸರ್ವ್ ಕ್ಯಾಂಪ್ಸ್, ಡಿಸ್ಟ್ರಿಕ್ಟ್ ಕ್ರೈಂ ರೆಕಾರ್ಡ್ಸ್ ಬ್ಯೂರೋ, ಸೀನಿಯರ್ ಸಿಟಿಜನ್'ಸ್ ಸೆಲ್ ಹಾಗು ಒಂದು ವುಮೆನ್ಸ್ ಸೆಲ್ ಗಳಿಂದ ರಚಿತವಾಗಿದೆ.[22] ಇದು ರಾಜ್ಯ ಸರ್ಕಾರದ ಗೃಹ ಇಲಾಖೆ ಅಡಿಯಲ್ಲಿ ಕೆಲಸಮಾಡುವ 19 ಪೋಲಿಸ್ ಠಾಣೆಗಳ ಕಾರ್ಯಭಾರವನ್ನು ನಿರ್ವಹಿಸುತ್ತದೆ. ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೆಶನ್ ನ ಒಂದು ಭ್ರಷ್ಟಾಚಾರ-ನಿಗ್ರಹ ದಳವೂ ಸಹ ನಗರದ ಹೊರಭಾಗದಲ್ಲಿ ಕಾರ್ಯ ನಿರ್ವಹಿಸುತ್ತದೆ. ರಾಜ್ಯದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಹೈ ಕೋರ್ಟ್ ಆಫ್ ಕೇರಳ ಕೊಚ್ಚಿಯಲ್ಲಿದೆ.
ವ್ಯಾಪಾರದ ಗಾತ್ರವನ್ನು ಆಧರಿಸಿ ಕೊಚ್ಚಿಯನ್ನು ಅನಧಿಕೃತವಾಗಿ ಕೇರಳದ ಆರ್ಥಿಕ ರಾಜಧಾನಿಯೆಂದು ಉಲ್ಲೇಖಿಸಲಾಗಿದೆ; ಆದಾಗ್ಯೂ, ದಕ್ಷಿಣ ಭಾರತದ ಇತರ ನಗರಗಳಂತೆ, ಕೊಚ್ಚಿಯು ಕೈಗಾರಿಕೀಕರಣಕ್ಕೆ ಬಹಳ ನಿಧಾನವಾಗಿ ಒಗ್ಗಿಕೊಂಡಿತು.[15][23] ಇತ್ತೀಚಿನ ವರ್ಷಗಳಲ್ಲಿ ನಗರವು ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆಯನ್ನು ಕಂಡಿದೆ, ಈ ರೀತಿಯಾಗಿ ಭಾರತದ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವಎರಡನೇ-ಶ್ರೇಣಿಯ ಮೆಟ್ರೋ ನಗರಗಳಲ್ಲಿ ಒಂದೆನಿಸಿದೆ.[24][25] ಕೊಚ್ಚಿ ಮೆಟ್ರೋಪಾಲಿಟನ್ ಪ್ರದೇಶದಿಂದ ಬಂದಂತಹ ಮಾರಾಟ ತೆರಿಗೆಯ ಆದಾಯವು ರಾಜ್ಯದ ಬೊಕ್ಕಸಕ್ಕೆ ಬೃಹತ್ ಪ್ರಮಾಣದ ಕೊಡುಗೆ ನೀಡಿದೆ.[26] ನಗರದ ಆರ್ಥಿಕ ಸ್ವರೂಪವನ್ನು, ಸೇವಾ ಕ್ಷೇತ್ರಗಳಿಗೆ ಪ್ರಾಧಾನ್ಯ ನೀಡುವ ವ್ಯಾಪಾರ ಅರ್ಥನೀತಿ ಎಂದು ವಿಂಗಡಿಸಬಹುದು.[27] ಪ್ರಮುಖ ವ್ಯಾಪಾರ ಕ್ಷೇತ್ರಗಳಲ್ಲಿ ಚಿನ್ನ ಹಾಗು ವಸ್ತ್ರೋದ್ಯಮ ಮಾರಾಟ, ಸಮುದ್ರ ಆಹಾರೋತ್ಪನ್ನಗಲು ಹಾಗು ಸಂಬಾರ-ಪದಾರ್ಥಗಳ ರಫ್ತು, ಮಾಹಿತಿ ತಂತ್ರಜ್ಞಾನ (IT), ಪ್ರವಾಸೋದ್ಯಮ, ಆರೋಗ್ಯ ಸೇವೆಗಳು, ಬ್ಯಾಂಕಿಂಗ್, ನೌಕಾನಿರ್ಮಾಣ ಹಾಗು ಮೀನುಗಾರಿಕೆ ಉದ್ಯಮಗಳು ಸೇರಿವೆ. ಆರ್ಥಿಕತೆಯ ಹೆಚ್ಚಿನ ಭಾಗ ವ್ಯಾಪಾರ ಹಾಗು ಚಿಲ್ಲರೆ ವ್ಯಾಪಾರದ ಚಟುವಟಿಕೆಗಳನ್ನು ಅವಲಂಬಿಸಿದೆ.[28] ಕೇರಳದ ಇತರ ಭಾಗಗಳಂತೆ, ಅನಿವಾಸಿ ಭಾರತೀಯರಿಂದ (NRI) ಬರುವ ಹಣವು ಸಹ ಆದಾಯದ ಒಂದು ಪ್ರಮುಖ ಮೂಲವಾಗಿದೆ.[29]
ನಗರದ ಉತ್ತರಭಾಗಕ್ಕೆ 17 ಕಿಲೋಮೀಟರ್ ದೂರದಲ್ಲಿ ನೆಲೆಯಾಗಿರುವ ಎಲೂರ್, ಕೇರಳದ ಅತ್ಯಂತ ದೊಡ್ಡ ಕೈಗಾರಿಕಾ ವಲಯವಾಗಿದೆ. ಈ ಪ್ರದೇಶವು ರಾಸಾಯನಿಕ ಹಾಗು ಪೆಟ್ರೋರಾಸಾಯನಿಕ ಉತ್ಪನ್ನಗಳು, ಕ್ರಿಮಿನಾಶಕಗಳು, ಅಪರೂಪದ ಭೂಮಿಯ ಲೋಹಗಳು, ರಬ್ಬರ್ ನ್ನು ಸಂಸ್ಕರಿಸುವ ರಾಸಾಯನಿಕಗಳು, ಗೊಬ್ಬರಗಳು, ಸತು ಹಾಗು ಕ್ರೋಮಿಯಂ ಸಂಯುಕ್ತ, ಹಾಗು ಚರ್ಮದ ಉತ್ಪನ್ನ ದಂತಹ 250ಕ್ಕೂ ಹೆಚ್ಚಿನ ವಿವಿಧ ಶ್ರೇಣಿಯ ಉತ್ಪನ್ನಗಳ ತಯಾರಿಕಾ ಘಟಕಗಳನ್ನು ಹೊಂದಿದೆ.[30]
ಕೊಚ್ಚಿ ನಗರದಲ್ಲಿ ಸದರನ್ ನೇವಲ್ ಕಮ್ಯಾಂಡ್ ನ ಪ್ರಧಾನ ಕಚೇರಿಯಿದೆ, ಇದು ಭಾರತೀಯ ನೌಕಾಪಡೆಯ ಪ್ರಾಥಮಿಕ ತರಬೇತಿ ಕೇಂದ್ರವಾಗಿದೆ.[31] ಕೊಚ್ಚಿನ್ ಶಿಪ್ ಯಾರ್ಡ್, ಕಳೆದ 2008ರವರೆಗೂ ಭಾರತದ ಅತ್ಯಂತ ದೊಡ್ಡ ನೌಕಾನಿರ್ಮಾಣದ ಸೌಕರ್ಯವನ್ನು ಒದಗಿಸುತ್ತಿದ್ದು, ನಗರದ ಆರ್ಥಿಕತೆಗೆ ಕೊಡುಗೆ ನೀಡಿದೆ.[32][33] ತೊಪ್ಪುಂಪಡಿಯಲ್ಲಿರುವ ಕೊಚ್ಚಿನ್ ಮೀನುಗಾರಿಕೆ ಬಂದರು, ರಾಜ್ಯದ ಪ್ರಮುಖ ಮೀನುಗಾರಿಕಾ ಬಂದರಾಗಿದೆ ಜೊತೆಗೆ ಸ್ಥಳೀಯ ಹಾಗು ವಿದೇಶಿ ಮಾರುಕಟ್ಟೆಗಳಿಗೆ ಮೀನನ್ನು ಸರಬರಾಜು ಮಾಡುತ್ತದೆ. ಕೊಚ್ಚಿಯಲ್ಲಿ ಸಾರ್ವಕಾಲಿಕ ಆಳಸಮುದ್ರದ ಬಂದರಿನ ಸಾಮರ್ಥ್ಯದ ಲಾಭ ಪಡೆಯುವ ಸಲುವಾಗಿ, ಒಂದು ಅಂತಾರಾಷ್ಟ್ರೀಯ ನೌಕಾಯಾನದ ನಿಲ್ದಾಣ ಹಾಗು ಹಲವಾರು ವಿಹಾರ ದೋಣಿ ಬಂದರುಗಳನ್ನು ನಿರ್ಮಿಸಲಾಗಿದೆ.[34][35]
ನಗರದ ಆರ್ಥಿಕತೆಗೆ ರಫ್ತು ಹಾಗು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳೂ ಸಹ ಪ್ರಮುಖವಾಗಿ ನೆರವಾಗುತ್ತವೆ. ಕೊಚ್ಚಿನ್ ಬಂದರು ಪ್ರಸಕ್ತ ವಿಲ್ಲಿಂಗ್ಡನ್ ದ್ವೀಪದ ತನ್ನ ನಿಲ್ದಾಣದಲ್ಲಿ ಸರಕುಸಾಗಣೆ ಹಡಗಿನ ಆಮದು ಹಾಗು ರಫ್ತಿನ ಚಟುವಟಿಕೆಗಳನ್ನು ನಿರ್ವಹಿಸುತ್ತದೆ. ಒಂದು ಹೊಸ ಅಂತಾರಾಷ್ಟ್ರೀಯ ಕಂಟೇನರ್ ಯಾನಾಂತರಣ(ಹಡಗಿನಿಂದ ಹಡಗಿಗೆ ಬದಲಾಯಿಸುವ) ನಿಲ್ದಾಣವು ವಲ್ಲರ್ಪದಂ ನಲ್ಲಿ ಸಜ್ಜುಗೊಳ್ಳುತ್ತಿದೆ. ಇದು ಭಾರತದ ಒಂದು ಪ್ರಮುಖ ಯಾನಾಂತರಣ ಬಂದರೆಂದು ನಿರೀಕ್ಷಿಸಲಾಗಿದೆ.[36][37][38][39] ವ್ಯಾಪಾರದ ಮೇಲಿನ ಕೊಚ್ಚಿ ನಗರದ ಐತಿಹಾಸಿಕ ಅವಲಂಬನೆಯು ಆಧುನಿಕ ಸಮಯದಲ್ಲೂ ಮುಂದುವರೆಯುತ್ತಿದೆ, ಏಕೆಂದರೆ ನಗರವು ಸಂಬಾರು-ಪದಾರ್ಥಗಳ ಒಂದು ಪ್ರಮುಖ ಪೂರೈಕೆದಾರ ಜೊತೆಗೆ ಕರಿ ಮೆಣಸನ್ನು ವಿಶ್ವವ್ಯಾಪಿಯಾಗಿ ವ್ಯಾಪಾರ ಮಾಡುವ ಇಂಟರ್ನ್ಯಾಷನಲ್ ಪೆಪ್ಪರ್ ಎಕ್ಸ್ಚೇಂಜ್ ನ ತವರಾಗಿದೆ. ಸ್ಪೈಸ್ ಬೋರ್ಡ್ ಆಫ್ ಇಂಡಿಯಾ ಸಹ ತನ್ನ ಪ್ರಧಾನ ಕಛೇರಿಯನ್ನು ಕೊಚ್ಚಿ ನಗರದಲ್ಲಿ ಹೊಂದಿದೆ.
IT ಹಾಗು ITES ಸಂಬಂಧಿತ ಉದ್ಯಮವು ಕೊಚ್ಚಿಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತಿದೆ. ಸಮುದ್ರತಳದ ಕೇಬಲ್ ಗಳ ಮೂಲಕ ಅಗ್ಗದ ಬ್ಯಾಂಡ್ ವಿಡ್ತ್ ದೊರಕುತ್ತದೆ ಹಾಗು ಭಾರತದ ಇತರ ನಗರಗಳಿಗೆ ಹೋಲಿಸಿದರೆ ಇದಕ್ಕೆ ಕಡಿಮೆ ನಿರ್ವಹಣಾ ವೆಚ್ಚ ತಗಲುತ್ತದೆ,ಇದರಿಂದ ನಗರಕ್ಕೆ ಅನುಕೂಲವಾಗಿದೆ. ಸರ್ಕಾರದ ಪ್ರಾಯೋಜಿತ ಇನ್ಫೋಪಾರ್ಕ್ಸೇರಿದಂತೆ ಹಲವಾರು ತಂತ್ರಜ್ಞಾನ ಹಾಗು ಕೈಗಾರಿಕಾ ಕ್ಯಾಂಪಸ್ಗಳು, ಕೊಚ್ಚಿನ್ ಸ್ಪೆಷಲ್ ಇಕನಾಮಿಕ್ ಜೊನ್ ಹಾಗು KINFRA ಎಕ್ಸ್ಪೋರ್ಟ್ ಪ್ರಮೋಶನ್ ಇಂಡಸ್ಟ್ರಿಯಲ್ ಪಾರ್ಕ್ಗಳು ನಗರದ ಹೊರವಲಯದಲ್ಲಿ ಕಾರ್ಯನಿರ್ವಹಿಸುತ್ತವೆ. ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವಾರು ಹೊಸ ಕೈಗಾರಿಕಾ ವಲಯಗಳು ನಿರ್ಮಾಣದ ಹಂತದಲ್ಲಿವೆ. ಮರಡುವಿನಲ್ಲಿರುವ ಶೋಭಾ ಹೈ-ಟೆಕ್ ಸಿಟಿ ಹಾಗು ಕಕ್ಕನಾಡ್ ನಲ್ಲಿರುವ ಸ್ಮಾರ್ಟ್ಸಿಟಿ ಪ್ರಸ್ತಾವನೆಯಲ್ಲಿರುವ ಪ್ರಮುಖ ಯೋಜನೆಗಳಾಗಿವೆ.
ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನೆಡುಂಬಸ್ಸೇರಿಯಲ್ಲಿ ಏರೊಟ್ರೋಪೊಲಿಸ್ ನ್ನು ಸ್ಥಾಪಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.[40][41]
ಕೊಚ್ಚಿಯು ಒಂದು ಎಣ್ಣೆ ಸಂಸ್ಕರಣಾ ಕೇಂದ್ರವನ್ನು ಹೊಂದಿದೆ- ಅಂಬಾಲಮುಗಳ್ ನಲ್ಲಿರುವ ಕೊಚ್ಚಿ ರಿಫೈನರೀಸ್ (BPCL) ಕೇಂದ್ರ ಸರ್ಕಾರದ ಸಂಸ್ಥೆಗಳಾದ ಕೊಕೊನಟ್ ಡೆವಲಪ್ಮೆಂಟ್ ಬೋರ್ಡ್, ಕಾಯರ್ ಬೋರ್ಡ್ ಹಾಗು ಮರೀನ್ ಪ್ರಾಡಕ್ಟ್ಸ್ ಎಕ್ಸ್ಪೋರ್ಟ್ ಡೆವಲಪ್ಮೆಂಟ್ ಅಥಾರಿಟಿ (MPEDA)ಗಳು ನಗರದಲ್ಲಿ ತಮ್ಮ ಪ್ರಧಾನ ಕಚೇರಿಗಳನ್ನು ಹೊಂದಿವೆ.
ನಗರದಲ್ಲಿನ ಸಾರ್ವಜನಿಕ ಸಾಗಣೆ-ವ್ಯವಸ್ಥೆಯು ದೊಡ್ಡ ಮಟ್ಟದಲ್ಲಿ ಖಾಸಗಿ ಬಸ್ಸುಗಳ ಮೇಲೆ ಅವಲಂಬಿತವಾಗಿದೆ. ಟ್ಯಾಕ್ಸಿಗಳು ಹಾಗು ಆಟೋ ರಿಕ್ಷಾಗಳು(ಆಟೋ ಗಳೆಂದು ಕರೆಯಲಾಗುತ್ತದೆ) ದಿನವಿಡೀ ಬಾಡಿಗೆಗೆ ದೊರಕುತ್ತವೆ. ಕಿರಿದಾದ ರಸ್ತೆಗಳು ಹಾಗು ವಿವಿಧ ವಾಹನಗಳ ವ್ಯಾಪಕ ಮಿಶ್ರಣದಿಂದಾಗಿ ನಗರದಲ್ಲಿ ವಾಹನ ದಟ್ಟಣೆಯ ಸಮಸ್ಯೆಯನ್ನು ಉಂಟುಮಾಡಿದೆ. ಮೆಟ್ರೋ ಶೀಘ್ರ ಪ್ರಯಾಣ ಸೇವೆಯನ್ನು, ಸಂಚಾರ ದಟ್ಟಣೆಯನ್ನು ಗಣನೀಯವಾಗಿ ತಗ್ಗಿಸುವ ಸಲುವಾಗಿ ರೂಪಿಸಲು ಉದ್ದೇಶಿಸಲಾಗಿದೆ. ಇದು ಪ್ರಸಕ್ತದಲ್ಲಿ ಕೇಂದ್ರ ಸರ್ಕಾರದ ಅಂಗೀಕಾರಕ್ಕೆ ಎದುರು ನೋಡುತ್ತಿದೆ.[42]
ಇಂಡಿಯನ್ ಓಷನ್ ನ ಅತ್ಯಂತ ಸುರಕ್ಷಿತ ಬಂದರುಗಳಲ್ಲಿ ಒಂದಾದ ಕಾರಣದಿಂದ, ಕೊಚ್ಚಿಯು ಭಾರತದ ಪ್ರಮುಖ ಬಂದರುಗಳಲ್ಲಿ ಒಂದೆಂಬ ಸ್ಥಾನವನ್ನು ಪಡೆದಿದೆ.[43] ಈ ಬಂದರು, ಕೊಚ್ಚಿನ್ ಪೋರ್ಟ್ ಟ್ರಸ್ಟ್ ಎಂಬ ಹೆಸರಿನ ಶಾಸನಬದ್ಧ ಸ್ವಾಯತ್ತ ಸಂಸ್ಥೆಯ ನಿರ್ವಹಣೆಯಲ್ಲಿದೆ. ಇದು ಇಂಧನ ತೊಟ್ಟಿ, ಸರಕು ಹಾಗು ಪ್ರಯಾಣಿಕ ಹಡಗುಗಳ ನಿರ್ವಹಣೆ ಹಾಗು ಉಗ್ರಾಣ ಸ್ಥಳಾವಕಾಶ ಸೌಲಭ್ಯಗಳನ್ನು ಒದಗಿಸುತ್ತದೆ. ಇದು ಕೊಲೊಂಬೋ ಹಾಗು ಲಕ್ಷದ್ವೀಪ್ ಗಳಿಗೆ ಪ್ರಯಾಣಿಕರ ಹಡಗುಗಳ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಕೇರಳ ಶಿಪ್ಪಿಂಗ್ ಅಂಡ್ ಇನ್ಲ್ಯಾಂಡ್ ನ್ಯಾವಿಗೇಶನ್ ಕಾರ್ಪೋರೇಶನ್, ಸ್ಟೇಟ್ ವಾಟರ್ ಟ್ರ್ಯಾನ್ಸ್ಪೋರ್ಟ್ ಡಿಪಾರ್ಟ್ಮೆಂಟ್, ಹಾಗು ಖಾಸಗಿ ಒಡೆತನ ನಿರ್ವಹಿಸುವ ದೋಣಿ ಸೇವೆಗಳು ನಗರದ ಹಲವಾರು ದೋಣಿ ಇಳಿಗಟ್ಟೆಗಳಲ್ಲಿ ಲಭ್ಯವಿವೆ. ದ್ವೀಪಗಳ ನಡುವೆ ಪ್ರಯಾಣಿಕರು ಹಾಗು ವಾಹನಗಳ ಯಾನಾಂತರಣಕ್ಕೆ ಜುಂಕರ್ ದೋಣಿಯು ಎರ್ನಾಕುಲಂ ಹಾಗು ವೈಪಿನ್ ನಡುವೆ, ಹಾಗು ವೈಪಿನ್ ಹಾಗು ಫೋರ್ಟ್ ಕೊಚ್ಚಿ ನಡುವೆ ಕಾರ್ಯಾಚರಿಸುತ್ತಿವೆ. ಆದಾಗ್ಯೂ, ಗೋಶ್ರೀ ಸೇತುವೆಗಳ ನಿರ್ಮಾಣದಿಂದ(ಇದು ಕೊಚ್ಚಿಯ ದ್ವೀಪಗಳ ನಡುವೆ ಸಂಪರ್ಕವನ್ನು ಕಲ್ಪಿಸುತ್ತವೆ), ಹಾಯುವ ದೋಣಿಗಳ ಸಾಗಣೆಯು ಕಡಿಮೆ ಅವಶ್ಯಕತೆಯನ್ನು ಪಡೆದಿದೆ.
ನಗರದ ಉತ್ತರಭಾಗಕ್ಕೆ 25 ಕಿಲೋಮೀಟರ್(15 ಮೈಲಿ)ಗಳ ದೂರದಲ್ಲಿರುವ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು, ಸ್ಥಳೀಯ ಹಾಗು ಅಂತಾರಾಷ್ಟ್ರೀಯ ವಿಮಾನ ಹಾರಾಟಗಳನ್ನು ನಿಭಾಯಿಸುತ್ತದೆ. ಇದು ಕೇರಳದ ಅತ್ಯಂತ ದೊಡ್ಡ ವಿಮಾನ ನಿಲ್ದಾಣ ಹಾಗು ಭಾರತದ ಅತ್ಯಂತ ಚಟುವಟಿಕೆಯ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇದು ಕೇಂದ್ರ ಸರ್ಕಾರದ ನಿಧಿಗಳನ್ನು ಬಳಸದೆ ನಿರ್ಮಾಣವಾದ ಭಾರತದ ಮೊದಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.[44] ನೌಕಾಪಡೆಯ ನಿರ್ವಹಣೆಯಲ್ಲಿರುವ ವಿಮಾನ ನಿಲ್ದಾಣವೂ ಸಹ ನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಂಡಿಯನ್ ಕೋಸ್ಟ್ ಗಾರ್ಡ್ ನ ಉಪಯೋಗಕ್ಕೆ ಮೂರನೇ ವಿಮಾನ ನಿಲ್ದಾಣವು ಉಪನಗರ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದೆ.
ಕೊಚ್ಚಿಯಲ್ಲಿ ಇಂಟ್ರಾ-ಸಿಟಿ ರೈಲು ಸಾರಿಗೆ ವ್ಯವಸ್ಥೆಯಿಲ್ಲ. ನಗರದ ಇಂಟರ್-ಸಿಟಿ ರೈಲು ಸಾರಿಗೆ ವ್ಯವಸ್ಥೆಯನ್ನು ಭಾರತೀಯ ರೈಲ್ವೇಸ್ ನ ದಕ್ಷಿಣ ರೈಲ್ವೆ ವಲಯವು ನಿರ್ವಹಿಸುತ್ತದೆ. ಎರಡು ಪ್ರಮುಖ ರೈಲ್ವೆ ನಿಲ್ದಾಣಗಳಿವೆ-ಎರ್ನಾಕುಲಂ ಜಂಕ್ಷನ್ ಹಾಗು ಎರ್ನಾಕುಲಂ ಟೌನ್(ಸ್ಥಳೀಯವಾಗಿ 'ದಕ್ಷಿಣ' ಹಾಗು 'ಉತ್ತರ' ರೈಲ್ವೆ ನಿಲ್ದಾಣಗಳೆಂದು ಕ್ರಮವಾಗಿ ಹೆಸರಾಗಿವೆ). ಈ ಎರಡೂ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗವು ನಗರವನ್ನು ಉದ್ದವಾಗಿ ಎರಡು ಭಾಗವಾಗಿ ವಿಭಜಿಸುವುದರ ಜೊತೆಗೆ ಎರಡು ಕಿರಿದಾದ ಸೇತುವೆಗಳು ಎರಡು ಭಾಗಗಳಿಗೆ ಸಂಪರ್ಕವನ್ನು ಕಲ್ಪಿಸುತ್ತವೆ.
564,589ರಷ್ಟು ಜನಸಂಖ್ಯೆಯೊಂದಿಗೆAs of 2001[update], ಕೊಚ್ಚಿ ನಗರವು ಪ್ರತಿ km2ಗೆ 5950 ಜನರನ್ನು ಹೊಂದಿರುವುದರ ಜೊತೆಗೆ ಜನಸಂಖ್ಯೆ ಸಾಂದ್ರತೆಯಲ್ಲಿ ಕೇರಳದ ನಗರಗಳ ಪೈಕಿ ಅಗ್ರ ಸ್ಥಾನವನ್ನು ಪಡೆದಿದೆ.2.[ಸೂಕ್ತ ಉಲ್ಲೇಖನ ಬೇಕು] As of 2009[update], ಕೊಚ್ಚಿ ನಗರವು 1,541,175ರಷ್ಟು ಮೆಟ್ರೋಪಾಲಿಟನ್ ಪ್ರದೇಶ ಜನಸಂಖ್ಯೆಯನ್ನು ಹೊಂದಿದೆ.[45] ನಗರದ ಜನಸಂಖ್ಯೆಯಲ್ಲಿ 14%ನಷ್ಟು ಹಿಂದುಳಿದ ಜಾತಿ ಹಾಗು ಪಂಗಡಗಳು ಸೇರಿದ್ದಾರೆ. ಮಹಿಳೆಯರ ಹಾಗು ಪುರುಷರ ಅನುಪಾತವು 1,024:1,000ರಷ್ಟಿದೆ, ಇದು ಅಖಿಲ ಭಾರತದ ಸರಾಸರಿ 933:1,000ಗಿಂತ ಗಮನಾರ್ಹವಾಗಿ ಅಧಿಕವಾಗಿದೆ. ಕೊಚ್ಚಿಯ ಸಾಕ್ಷರತಾ ಪ್ರಮಾಣವು 94%ರಷ್ಟಿದೆ. ಮಹಿಳಾ ಸಾಕ್ಷರತಾ ಪ್ರಮಾಣವು ಪುರುಷರಿಗಿಂತ 1.1%ರಷ್ಟು ಹಿಂದುಳಿದಿದೆ. ಭಾರತದಲ್ಲಿ ಮಹಿಳೆ ಹಾಗೂ ಪುರುಷರ ನಡುವೆ ಈ ರೀತಿ ಅತೀಕಡಿಮೆ ಅಂತರಗಳ ಸಾಕ್ಷರತೆ ಪ್ರಮಾಣದಲ್ಲಿ ಕೊಚ್ಚಿ ಸೇರಿದೆ.[ಸೂಕ್ತ ಉಲ್ಲೇಖನ ಬೇಕು]
ಕೊಚ್ಚಿಯ ಪ್ರಮುಖ ಧರ್ಮಗಳೆಂದರೆ ಹಿಂದೂ ಧರ್ಮ, ಕ್ರಿಶ್ಚಿಯನ್ ಧರ್ಮ ಹಾಗು ಇಸ್ಲಾಂ ಧರ್ಮ; ಜೈನ ಧರ್ಮ, ಜೂಡೆಯಿಸಂ, ಸಿಖ್ ಧರ್ಮ ಹಾಗು ಬೌದ್ಧ ಧರ್ಮದ ಅನುಯಾಯಿಗಳು ಕಡಿಮೆ ಪ್ರಮಾಣದಲ್ಲಿದ್ದಾರೆ. 47%ನಷ್ಟು ಹಿಂದೂ ಧರ್ಮದ ಅನುಯಾಯಿಗಳಿದ್ದರೂ, ಕ್ರಿಶ್ಚಿಯನ್ ಧರ್ಮವನ್ನು ಒಂದು ದೊಡ್ಡ ಮಟ್ಟದಲ್ಲಿ ಅನುಸರಿಸುವುದರಿಂದ (35%), ನಗರವನ್ನು ಭಾರತದ ಅತ್ಯಂತ ದೊಡ್ಡ ಕ್ರಿಶ್ಚಿಯನ್ ಜನಸಂಖ್ಯೆಯನ್ನು ಹೊಂದಿರುವ ನಗರವೆಂದು ಕರೆಯಲಾಗುತ್ತದೆ.[46][47]
ನಿವಾಸಿಗಳಲ್ಲಿ ಹೆಚ್ಚಿನವರು ಮಲಯಾಳಿಗಳು; ಆದಾಗ್ಯೂ, ನಗರದಲ್ಲಿ ಗಮನಾರ್ಹವಾಗಿ ಕಡಿಮೆ ಸಂಖ್ಯೆಯಲ್ಲಿ ಜನಾಂಗೀಯ ಸಮುದಾಯಗಳಿವೆ, ಇವರಲ್ಲಿ ತಮಿಳರು, ಗುಜರಾತಿಗಳು, ಯಹೂದಿಗಳು, ಸಿಕ್ಕಿಂಜನರು, ಆಂಗ್ಲೋ-ಭಾರತೀಯರು, ಕೊಂಕಣಿಗಳು, ಹಾಗು ತುಳುವರಿದ್ದಾರೆ. ಮಲಯಾಳಂ ಸಂವಹನ ಹಾಗು ಶಿಕ್ಷಣ ಮಾಧ್ಯಮದ ಪ್ರಮುಖ ಭಾಷೆಯಾಗಿದೆ, ಆದಾಗ್ಯೂ ವ್ಯಾವಹಾರಿಕ ವಲಯದಲ್ಲಿ ಇಂಗ್ಲಿಷ್ನ್ನು ಸಾಮಾನ್ಯವಾಗಿ ಬಳಕೆ ಮಾಡಲಾಗುತ್ತದೆ. ತಮಿಳು ಹಾಗು ಹಿಂದಿಭಾಷೆಯನ್ನು ವ್ಯಾಪಕವಾಗಿ ಅರ್ಥೈಸಿಕೊಳ್ಳಲಾಗುತ್ತದೆ-ಆದರೂ ಮಾತನಾಡಲು ಅಪರೂಪವಾಗಿ ಬಳಸಲಾಗುತ್ತದೆ.
ಅಭಿವೃದ್ಧಿಶೀಲ ಜಗತ್ತಿನ ಇತರ ವೇಗವಾಗಿ ಬೆಳವಣಿಗೆಯಾಗುತ್ತಿರುವ ನಗರಗಳಂತೆ, ಕೊಚ್ಚಿ ನಗರವೂ ಸಹ ನಗರೀಕರಣ ಸಮಸ್ಯೆಗಳಿಂದ, ಕಳಪೆ ಮಟ್ಟದ ನಿರ್ಮಲೀಕರಣ ಹಾಗು ನಿರುದ್ಯೋಗ ಸಮಸ್ಯೆಗಳನ್ನು ಎದುರಿಸುತ್ತಿದೆ. ಮನೆಯ-ವೆಚ್ಚ ಹಾಗು ಲಭ್ಯತೆ, ಪಟ್ಟಣದಲ್ಲಿ ಕಿಕ್ಕಿರಿದ ನಿವಾಸಿಗಳು ಹಾಗು ನಿವಾಸಿಗಳ ಆದಾಯಗಳಿಗೆ ಸಂಬಂಧಿಸಿದಂತೆ ನಗರವು ಭಾರತದ ಇತರ ನಗರಗಳಿಗಿಂತ ಅತೀಕಡಿಮೆ ಶ್ರೇಣಿಯನ್ನು ಪಡೆದಿದೆ.[48]
ನಗರದಲ್ಲಿ ನಿರುದ್ಯೋಗ ಪ್ರಮಾಣವು 1998ರಲ್ಲಿ 14.8%ರಿಂದ 2003ರಲ್ಲಿ 24.5%ನಷ್ಟಾಗಿದ್ದು, 9.7ರಷ್ಟು ಏರಿಕೆಯನ್ನು ದಾಖಲಿಸಿದೆ.[49] ನಗರದ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ ಕುಡಿಯುವ ನೀರಿನ ಪೂರೈಕೆಯಲ್ಲಿ ಕೊರತೆ.[50] ಈ ಪರಿಸ್ಥಿತಿಯು ಕೈಗಾರಿಕಾ ಪ್ರದೇಶಗಳಲ್ಲಿ ಉಂಟಾಗುವ ಮಾಲಿನ್ಯದ ಬೆದರಿಕೆಯಿಂದ ಮತ್ತಷ್ಟು ಉಲ್ಬಣಗೊಂಡಿದೆ.[51] ಕೊಳೆಗೇರಿ-ನಿವಾಸಿಗಳ ಜನಸಂಖ್ಯೆಯ ಬೆಳವಣಿಗೆಯನ್ನೂ ಸಹ ನಗರವು ಎದುರಿಸುತ್ತಿದೆ.[52] ಸರ್ಕಾರವು 2016ರ ಹೊತ್ತಿಗೆ ನಗರವನ್ನು ಕೊಳೆಗೇರಿ-ಮುಕ್ತವನ್ನಾಗಿ ಮಾಡಬೇಕೆಂಬ ಯೋಜನೆಯನ್ನು ಹೊಂದಿದೆ.[53] ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಪ್ರಕಾರ, ಕೊಚ್ಚಿಯು, ರಾಷ್ಟ್ರದ ಸರಾಸರಿ ಅಪರಾಧ ಪ್ರಮಾಣ 287.3ಕ್ಕೆ ಪ್ರತಿಯಾಗಿ ಭಾರತದಲ್ಲೇ ಅತ್ಯಧಿಕ ಪ್ರಮಾಣ 498.6 ಹೊಂದಿದೆ.[54] ಕಳೆದ 2009ರ ಅಂಕಿ ಅಂಶಗಳ ಪ್ರಕಾರ, ಕೊಚ್ಚಿ ನಗರವು ಹೆಚ್ಚಿನ ಅಪರಾಧ ಪ್ರಮಾಣವನ್ನು ಹೊಂದಿರುವುದರ ಜೊತೆಗೆ ಭಾರತದ ದಾಖಲಾದ ಅಪರಾಧ ಪ್ರಮಾಣಗಳಲ್ಲಿ ನಗರವು ನಾಲ್ಕನೇ ಸ್ಥಾನವನ್ನು ಗಳಿಸಿದೆ.[55] [56]
ಹಲವು ಶತಮಾನಗಳು ಕಳೆದಂತೆ ನಿರಂತರ ವಲಸೆಯ ಫಲವಾಗಿ, ನಗರದ ಜನಸಂಖ್ಯೆಯಲ್ಲಿ ಕೇರಳದ ಎಲ್ಲ ಭಾಗಗಳ ಹಾಗು ಭಾರತದ ಹೆಚ್ಚಿನ ಭಾಗಗಳಿಂದ ಬಂದ ಜನರ ಮಿಶ್ರಣವಿದೆ. ಪ್ಯಾನ್-ಇಂಡಿಯನ್ ಸ್ವರೂಪವು ರಾಷ್ಟ್ರದ ವಿವಿಧ ಭಾಗಗಳಿಂದ ಬಂದ ವಿವಿಧ ಜನಾಂಗೀಯ ಸಮುದಾಯಗಳ ಗಣನೀಯ ಉಪಸ್ಥಿತಿಯಿಂದ ಬೆಳಕಿಗೆ ಬಂದಿದೆ.[57]
ಕೊಚ್ಚಿಯು ಒಂದು ವೈವಿಧ್ಯದ, ಬಹುಸಂಸ್ಕೃತಿಯ ಹಾಗು ಜಾತ್ಯತೀತ ಸಮುದಾಯವನ್ನು ಹೊಂದಿದೆ. ಇದರಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು, ಮುಸ್ಲಿಮರು,ಜೈನರು, ಸಿಖ್ಖರು, ಹಾಗು ಬೌದ್ಧ ಧರ್ಮೀಯರು ಇತರ ವರ್ಗಗಳಲ್ಲಿ ಸೇರಿದ್ದಾರೆ, ಇವರೆಲ್ಲಗೂ ಶಾಂತಿಯುತ ಸಹಬಾಳ್ವೆಯಿಂದ ಜೀವಿಸುತ್ತಿದ್ದಾರೆ. ನಗರದಲ್ಲಿ ಒಂದೊಮ್ಮೆ ಮಲಬಾರ್ ಯಹುದೆನ್ ಎಂದು ಕರೆಯಲ್ಪಡುವ ಒಂದು ದೊಡ್ಡ ಮಟ್ಟದಲ್ಲಿ ಯಹೂದಿಗಳ ಸಮುದಾಯವಿತ್ತು-ಈಗ ಅವರ ಸಂಖ್ಯೆ ಹೆಚ್ಚಾಗಿ ಕೊಚ್ಚಿನ್ ಯಹೂದಿ ಗಳೆನಿಸಿದ್ದಾರೆ. ಇವರು ಕೊಚ್ಚಿಯ ವ್ಯಾಪಾರ ಹಾಗು ಆರ್ಥಿಕ ಸ್ತರದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ.[58] 22 ಸುಯಿ ಇಯುರಿಸ್ ಈಸ್ಟರ್ನ್ ಕ್ಯಾಥೊಲಿಕ್ ಚರ್ಚ್ ಗಳಲ್ಲಿ ಒಂದಾಗಿರುವ ಸೈರೋ-ಮಲಬಾರ್ ಚರ್ಚ್, ಎರ್ನಾಕುಲಂ ನಲ್ಲಿ ತನ್ನ ಸ್ಥಾನವನ್ನು ಹೊಂದಿದೆ. ಕ್ರಿಶ್ಚಿಯನ್ನರ ಆರಾಧನಾ ಮಂದಿರಗಳಲ್ಲಿ St. ಮೇರಿ'ಸ್ ಕೆಥೆಡ್ರಲ್ ಹಾಗು ಕಲೂರ್ನಲ್ಲಿರುವ St. ಆಂತೋನಿ'ಸ್ ಶ್ರೈನ್ ಪ್ರಮುಖವಾಗಿವೆ. ತನ್ನ ಬಹು-ಜನಾಂಗೀಯ ಸಂಯೋಜನೆಗೆ ಸೂಕ್ತವೆನಿಸುವಂತೆ, ಕೊಚ್ಚಿಯು ಕೇರಳದ ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸುತ್ತದೆ ಉದಾಹರಣೆಗೆ ಓಣಂ ಹಾಗು ವಿಷು ಹಬ್ಬಗಳ ಜೊತೆಯಲ್ಲಿ ಉತ್ತರ ಭಾರತದ ಹಿಂದೂ ಹಬ್ಬಗಳಾದ ಹೋಳಿ ಹಾಗು ದೀಪಾವಳಿಯನ್ನು ಹೆಚ್ಚಿನ ಉತ್ಸಾಹದಿಂದ ಆಚರಿಸುತ್ತದೆ. ಕ್ರಿಶ್ಚಿಯನ್ ಹಾಗು ಮುಸ್ಲಿಂ ಹಬ್ಬಗಳಾದ ಕ್ರಿಸ್ಮಸ್, ಈಸ್ಟರ್, ಈದ್ ಉಲ್-ಫಿತ್ರ್ ಹಾಗು ಮಿಲಾದ್-ಎ-ಶೆರಿಫ್ ನ್ನು ಸಹ ಆಚರಿಸುತ್ತದೆ. ಒಂದು ಮೋಜಿನ ಹಬ್ಬವಾದ ಕೊಚ್ಚಿನ್ ಕಾರ್ನಿವಲ್ ನ್ನು ಡಿಸೆಂಬರ್ನ ಕಡೆ ಹತ್ತು ದಿನಗಳಲ್ಲಿ ಫೋರ್ಟ್ ಕೊಚ್ಚಿಯಲ್ಲಿ ಆಚರಿಸಲಾಗುತ್ತದೆ.
ಕೊಚ್ಚಿಯ ನಿವಾಸಿಗಳು ಕೊಚೈಟ್ಸ್(ಕೊಚ್ಚಿ ನಗರದ ವಾಸಿಗಳು) ಎಂದು ಹೆಸರಾಗಿದ್ದಾರೆ; ಇವರು ದಕ್ಷಿಣ ಭಾರತದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದಾರೆ. ಆದಾಗ್ಯೂ, ನಗರದ ಸಂಸ್ಕೃತಿಯು ಶೀಘ್ರವಾಗಿ ಕೊಚ್ಚಿ ನಗರ ವಾಸಿಗಳೊಂದಿಗೆ ವಿಕಸಿಸುವುದರ ಜೊತೆಗೆ ಅವರು ಸಾಮಾನ್ಯವಾಗಿ ಜೀವನದೃಷ್ಟಿಯಲ್ಲಿ ಹೆಚ್ಚು ಕಾಸ್ಮಾಪಾಲಿಟನ್(ವಿಶ್ವಬಂಧುತ್ವ) ಆಗುತ್ತಿದ್ದಾರೆ.[25] ಜನರು ಅಧಿಕವಾಗಿ ಫ್ಯಾಶನ್-ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರಲ್ಲದೆ, ಸಾಮಾನ್ಯವಾಗಿ ಸಾಂಪ್ರದಾಯಿಕ ಕೇರಳ ಉಡುಪಿನಿಂದ ಪಾಶ್ಚಿಮಾತ್ಯ ಉಡುಪಿನ ಶೈಲಿಗೆ ಮೊರೆಹೋಗಿದ್ದಾರೆ.[28]
ಸಾಮಾನ್ಯವಾಗಿ ಕೊಚ್ಚಿಯ ನಿವಾಸಿಗಳು ಕೇರಳದ ಪಾಕಪದ್ದತಿಯ ಭಾಗವಾಗಿದ್ದಾರೆ. ತೆಂಗಿನಕಾಯಿ ಹಾಗು ಸಂಬಾರ ಪದಾರ್ಥಗಳ ವಿಪುಲ ಬಳಕೆಯು ಸಾಮಾನ್ಯವಾಗಿ ಅಡುಗೆಯ ಲಕ್ಷಣವಾಗಿದೆ. ದಕ್ಷಿಣ ಭಾರತದ ಇತರ ಪಾಕ ಪದ್ದತಿಗಳಲ್ಲದೆ ಚೈನೀಸ್ ಹಾಗು ಉತ್ತರ ಭಾರತದ ಅಡುಗೆಗಳೂ ಸಹ ಜನಪ್ರಿಯವಾಗಿದೆ. ಫಾಸ್ಟ್ ಫುಡ್ ಸಂಸ್ಕೃತಿಯೂ ಸಹ ಬಹಳ ಪ್ರಮುಖವಾಗಿದೆ.[59]
ಕೊಚ್ಚಿ ನಗರವು ಮಲಯಾಳಂ ಸಾಹಿತ್ಯದ ಅತ್ಯಂತ ಪ್ರಸಿದ್ಧ ವ್ಯಕ್ತಿಗಳ ತವರಾಗಿತ್ತು, ಇವರಲ್ಲಿ ಚಂಗಂಪುಳ ಕೃಷ್ಣ ಪಿಳ್ಳೈ, ಕೇಸರಿ ಬಾಲಕೃಷ್ಣ ಪಿಳ್ಳೈ, G. ಶಂಕರ ಕುರುಪ್, ಹಾಗು ವೈಲೋಪ್ಪಿಲ್ಲಿ ಶ್ರೀಧರ ಮೆನನ್ ಮುಂತಾದವರು ಸೇರಿದ್ದಾರೆ. ಪ್ರಮುಖ ಸಮಾಜ ಸುಧಾರಕರಾದ ಸಹೋದರನ್ ಐಯಪ್ಪನ್ ಹಾಗು ಪಂಡಿತ್ ಕರುಪ್ಪನ್ ಸಹ ಕೊಚ್ಚಿ ನಗರದವರು.
ಕೊಚ್ಚಿಯ ಮಹಾರಾಜರು (ಹಿಂದಿನ ಕೊಚ್ಚಿನ್) ಮಹಾ ಕಾವ್ಯಗಳನ್ನು ಬಲ್ಲಂತಹ ವಿದ್ವಾಂಸರಾಗಿದ್ದರು ಹಾಗು ಕಲೆಗೆ ಪ್ರೋತ್ಸಾಹ ನೀಡುತ್ತಿದ್ದರು. ಹಿಲ್ ಪ್ಯಾಲೇಸ್ ಹಾಗು ಡಚ್ ಪ್ಯಾಲೇಸ್ ನಲ್ಲಿರುವ ವರ್ಣಚಿತ್ರಗಳು ಕಲೆಯ ಬಗ್ಗೆ ಅವರಿಗಿದ್ದ ಒಲವಿಗೆ ಸಾಕ್ಷಿಯಾಗಿದೆ.
ಕೊಚ್ಚಿ ನಗರದ ನಿವಾಸಿಗಳು ಕ್ರೀಡೆಯ ಬಗ್ಗೆ ತಮಗಿರುವ ಆಸಕ್ತಿಗೆ ಹೆಸರುವಾಸಿಯಾಗಿದ್ದಾರೆ, ವಿಶೇಷವಾಗಿ ಕ್ರಿಕೆಟ್ ಹಾಗು ಫುಟ್ಬಾಲ್.[60] ಕೊಚ್ಚಿಯಲ್ಲಿರುವ ಜವಾಹರ್ ಲಾಲ್ ನೆಹರು ಇಂಟರ್ನ್ಯಾಷನಲ್ ಸ್ಟೇಡಿಯಂ, ಭಾರತದ ಒಂದು ದೊಡ್ಡ ಬಹು-ಬಳಕೆಯ ಕ್ರೀಡಾಂಗಣವಾಗಿದೆ. ಜೊತೆಗೆ ಹಗಲು ಹಾಗು ರಾತ್ರಿ ಪಂದ್ಯಗಳಿಗೆ ಅಂತಾರಾಷ್ಟ್ರೀಯ ದರ್ಜೆಯ ಬೆಳಕಿನ ವ್ಯವಸ್ಥೆಯನ್ನು ಹೊಂದಿದೆ.[61] ರೀಜನಲ್ ಸ್ಪೋರ್ಟ್ಸ್ ಸೆಂಟರ್ ನಗರದ ಕ್ರೀಡಾ ಚಟುವಟಿಕೆಗಳ ಒಂದು ಪ್ರಮುಖ ಕೇಂದ್ರವಾಗಿದೆ.
ನಗರದ ಶಾಲೆಗಳು ಹಾಗು ಕಾಲೇಜುಗಳನ್ನು ಸರಕಾರ ಅಥವಾ ಖಾಸಗಿ ಸಂಸ್ಥೆಗಳು ಮತ್ತು ವೈಯಕ್ತಿಕವಾಗಿ ನಡೆಸಲಾಗುತ್ತದೆ. ಪ್ರತಿಯೊಂದು ಶಾಲೆಯು ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್(ICSE), ಸೆಂಟ್ರಲ್ ಬೋರ್ಡ್ ಫಾರ್ ಸೆಕೆಂಡರಿ ಎಜುಕೇಶನ್(CBSE), ಅಥವಾ ಕೇರಳ ರಾಜ್ಯ ಶಿಕ್ಷಣ ಮಂಡಳಿಯಿಂದ ಅಂಗೀಕೃತವಾಗಿದೆ. ಬಹುತೇಕ ಖಾಸಗಿ ಶಾಲೆಗಳಲ್ಲಿ ಬೋಧನಾ ಮಾಧ್ಯಮವು ಇಂಗ್ಲಿಷ್ ನಲ್ಲಿರುತ್ತದೆ; ಆದಾಗ್ಯೂ ಸರಕಾರೀ ಶಾಲೆಗಳಲ್ಲಿ ಇಂಗ್ಲಿಷ್ ಹಾಗು ಮಲಯಾಳಂ ಎರಡೂ ಭಾಷೆಗಳಲ್ಲಿ ಬೋಧಿಸಲಾಗುತ್ತದೆ. ಹತ್ತು ವರ್ಷಗಳ ಶಾಲಾ ಅವಧಿಯನ್ನು ಒಳಗೊಂಡ ತಮ್ಮ ಮಾಧ್ಯಮಿಕ ಶಿಕ್ಷಣದ ನಂತರ, ವಿದ್ಯಾರ್ಥಿಗಳು ವಿಶೇಷವಾಗಿ ಹೈಯರ್ ಸೆಕೆಂಡರಿ ಸ್ಕೂಲ್ ನಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನಈ ಮೂರರಲ್ಲಿ ಒಂದು ವಿಭಾಗಕ್ಕೆ ದಾಖಲಾಗುತ್ತಾರೆ. ಅವಶ್ಯಕ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ವಿದ್ಯಾರ್ಥಿಯು ಸಾಮಾನ್ಯ ಅಥವಾ ವೃತ್ತಿಪರ ಡಿಗ್ರಿ ಅಧ್ಯಯನಗಳಿಗೆ ದಾಖಲಾಗಬಹುದು.
ಕೊಚ್ಚಿನ್ ಯುನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ(CUSAT)ಯು ನಗರದಲ್ಲಿ ನೆಲೆಗೊಂಡಿದೆ. ಕಾಲೇಜು ಶಿಕ್ಷಣ(ಮೂರನೇ ಹಂತ)ವನ್ನು ಒದಗಿಸುವ ಹಲವು ಕಾಲೇಜುಗಳು ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ ಅಥವಾ ಕೊಚ್ಚಿನ್ ವಿಶ್ವವಿದ್ಯಾಲಯದ ಅಂಗೀಕಾರವನ್ನು ಪಡೆದಿರುತ್ತದೆ. ಇತರ ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಫಿಶರೀಸ್ ನಾಟಿಕಲ್ ಅಂಡ್ ಇಂಜಿನಿಯರಿಂಗ್ ಟ್ರೈನಿಂಗ್, ನ್ಯಾಷನಲ್ ಯುನಿವರ್ಸಿಟಿ ಆಫ್ ಅಡ್ವಾನ್ಸ್ಡ್ ಲೀಗಲ್ ಸ್ಟಡೀಸ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಶಿನೋಗ್ರಾಫಿ ಹಾಗು ಸೆಂಟ್ರಲ್ ಮರೀನ್ ಫಿಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಗಳು ಸೇರಿವೆ.
ಕೊಚ್ಚಿಯಲ್ಲಿ ಪ್ರಕಟವಾಗುವ ಪ್ರಮುಖ ಮಲಯಾಳಂ ದಿನಪತ್ರಿಕೆಗಳಲ್ಲಿ ಮಲಯಾಳ ಮನೋರಮಾ , ಮಾತೃಭೂಮಿ , ಮಾಧ್ಯಮಮ್ , ದೇಶಾಭಿಮಾನಿ , ದೀಪಿಕಾ , ಕೇರಳ ಕೌಮುದಿ ಹಾಗು ವೀಕ್ಷಣಂ ಪತ್ರಿಕೆಗಳು ಸೇರಿವೆ. ಜನಪ್ರಿಯ ಇಂಗ್ಲಿಷ್ ದಿನಪತ್ರಿಕೆಗಳಲ್ಲಿ ದಿ ಹಿಂದೂ, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಹಾಗು ದಿ ಪಯೋನೀರ್ ಪತ್ರಿಕೆಗಳು ಸೇರಿವೆ. ನಗರದಲ್ಲಿ ಹಲವಾರು ಸಂಜೆ ಪತ್ರಿಕೆಗಳೂ ಸಹ ಪ್ರಕಟವಾಗುತ್ತವೆ.[62] ಹಿಂದಿ,ಕನ್ನಡ, ತಮಿಳು ಹಾಗು ತೆಲುಗು ಮುಂತಾದ ಪ್ರಾದೇಶಿಕ ಭಾಷೆಗಳ ದಿನಪತ್ರಿಕೆಗಳೂ ಸಹ ದೊರಕುತ್ತವೆ.
ಕೊಚ್ಚಿನ್ ಷೇರುವಿನಿಮಯ ಪೇಟೆಗೆ ನೆಲೆಯಾಗಿರುವ ನಗರದಲ್ಲಿ ಹಲವಾರು ವಿತ್ತ ಪತ್ರಿಕೆಗಳೂ ಸಹ ಪ್ರಕಟಗೊಳ್ಳುತ್ತವೆ. ಇವುಗಳಲ್ಲಿ ದಿ ಇಕನಾಮಿಕ್ ಟೈಮ್ಸ್ , ಬಿಸಿನೆಸ್ ಲೈನ್ , ದಿ ಬಿಸಿನೆಸ್ ಸ್ಟ್ಯಾಂಡರ್ಡ್ ಹಾಗು ದಿ ಫೈನಾನ್ಶಿಯಲ್ ಎಕ್ಸ್ಪ್ರೆಸ್ ಪತ್ರಿಕೆಗಳು ಸೇರಿವೆ. ಪ್ರಮುಖ ನಿಯತಕಾಲಿಕಗಳು ಹಾಗು ಧಾರ್ಮಿಕ ಪ್ರಕಟಣೆಗಳಾದ ಸತ್ಯದೀಪಂ , ದಿ ವೀಕ್ ಹಾಗು ವನಿತಾ ಸಹ ನಗರದಲ್ಲಿ ಪ್ರಕಟವಾಗುತ್ತವೆ. ಕೊಚ್ಚಿಯಲ್ಲಿರುವ ದೂರದರ್ಶನ ಕೇಂದ್ರಗಳಲ್ಲಿ ಏಶಿಯನೆಟ್ ಕೇಬಲ್ ವಿಷನ್, ಇಂಡಿಯಾವಿಷನ್, ಕೈರಳಿ TV, ಜೀವನ್ TV, ಅಮೃತ TV, ಹಾಗು ಮನೋರಮ ನ್ಯೂಸ್ ಗಳು ಸೇರಿವೆ. ಉಪಗ್ರಹ ದೂರದರ್ಶನ ಸೇವೆಗಳನ್ನು ದೂರದರ್ಶನ್ ಡೈರೆಕ್ಟ್ ಪ್ಲಸ್, ಡಿಶ್ TV, ಸನ್ ಡೈರೆಕ್ಟ್ DTH ಹಾಗು ಟಾಟಾ ಸ್ಕೈ ಮೂಲಕ ಲಭ್ಯವಿದೆ. ಕೊಚ್ಚಿಯಲ್ಲಿ ಐದು FM ರೇಡಿಯೋ ಕೇಂದ್ರಗಳಿವೆ, ಇದರಲ್ಲಿ ಎರಡು ಕೇಂದ್ರಗಳನ್ನು ಆಲ್ ಇಂಡಿಯಾ ರೇಡಿಯೋ ನಿರ್ವಹಿಸುತ್ತದೆ.[63] ಖಾಸಗಿ ಉಪಗ್ರಹ ರೇಡಿಯೋವರ್ಲ್ಡ್ಸ್ಪೇಸ್ ಸಹ ಲಭ್ಯವಿದೆ. ನಗರದಲ್ಲಿರುವ ಹತ್ತು ಸಿನೆಮಾ ಮಂದಿರಗಳು ಮಲಯಾಳಂ, ತಮಿಳು, ಇಂಗ್ಲಿಷ್ ಹಾಗು ಹಿಂದಿ ಭಾಷೆಯ ಚಿತ್ರಗಳನ್ನು ಪ್ರದರ್ಶಿಸುತ್ತವೆ. ಕೊಚ್ಚಿನ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್(CIFF) ಎಂದು ಕರೆಯಲ್ಪಡುವ ಒಂದು ಚಲನಚಿತ್ರೋತ್ಸವವನ್ನು, ಪ್ರತಿ ವರ್ಷವೂ ನಗರದಲ್ಲಿ ಆಯೋಜಿಸಲಾಗುತ್ತದೆ.
ಭಾರತದಲ್ಲೇ ಕೊಚ್ಚಿ ನಗರವು ಅತ್ಯಂತ ಹೆಚ್ಚಿನ ದೂರವಾಣಿ ಸಂಪರ್ಕಗಳನ್ನು ಹೊಂದಿದೆ.[64] ದೂರವಾಣಿ ಸೇವೆಗಳನ್ನು ವಿವಿಧ ಸಂಸ್ಥೆಗಳಾದ ಏರ್ಸೆಲ್, ಏರ್ಟೆಲ್, ಐಡಿಯ ಸೆಲ್ಯುಲಾರ್, ವೊಡಫೋನ್, ರಿಲಯನ್ಸ್ ಇನ್ಫೋಕಾಮ್, ಟಾಟಾ ಡೊಕೊಮೋ, MTS, ಯುನಿನಾರ್, ಟಾಟಾ ಇಂಡಿಕಾಮ್ ಹಾಗು ರಾಜ್ಯ ಸರ್ಕಾರದ BSNL ಸಂಸ್ಥೆಗಳು ಒದಗಿಸುತ್ತವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.