ಕಾಸರಗೋಡು (കാസറഗോഡ്) ಕೇರಳ ರಾಜ್ಯಕ್ಕೆ ಸೇರಿರುವ ಒಂದು ಜಿಲ್ಲೆ. ಕರ್ನಾಟಕದ ಮಂಗಳೂರಿನಿಂದ ಕೆಲವೇ ಮೈಲಿಗಳಷ್ಟು ದೂರದಲ್ಲಿದೆ ಹಾಗೂ ಪುತ್ತೂರಿನಿಂದ 60 ಕಿ.ಮೀ ದೂರದಲ್ಲಿದೆ. ಕೇರಳದ ಗಡಿ ಜಿಲ್ಲೆಯಾಗಿದೆ ಕಾಸರಗೋಡು . ಹಾಗಾಗಿ ಕರ್ನಾಟಕದ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನವೂ ಸೇರಿದಂತೆ ಕನ್ನಡ ಸಾಹಿತ್ಯ, ಸಂಸ್ಕೃತಿಗಳ ಹಲವು ಮುಖಗಳನ್ನು ಇಲ್ಲಿ ಕಾಣಬಹುದು. ರಾಷ್ಟ್ರಕವಿ ಗೋವಿಂದ ಪೈ, ಕಯ್ಯಾರ ಕಿಞ್ಞಣ್ಣ ರೈ ಮುಂತಾದ ಕನ್ನಡದ ಕವಿಗಳು ಕಾಸರಗೋಡಿಗೆ ಸೇರಿದವರು. ಈ ಪ್ರದೇಶದಲ್ಲಿ ಅನೇಕ ಮಂದಿ ಸಂಶೋಧಕರನ್ನು ಕೂಡಾ ಕಾಣಬಹುದು.
ವೈಶಿಷ್ಟ್ಯ
ದಕ್ಷಿಣಕನ್ನಡ ಜಿಲ್ಲೆಯನ್ನು ಬಾಚಿ ತಬ್ಬಿಕೊಂಡಂತಿದೆ ಕಾಸರಗೋಡು. ಸುಳ್ಯದಿಂದ ಹರಿದು ಬರುವ ನದಿ ಪಯಸ್ವಿನಿಯು ಕಾಸರಗೋಡಿನ ಪರಿಸರದಲ್ಲಿ ಹಾದು ‘ಚಂದ್ರಗಿರಿ’ ಎಂಬ ಹೆಸರಿನಿಂದ ಸಾಗುತ್ತದೆ. ನದಿಯ ಒಂದು ಬದಿಯಲ್ಲಿ ಬಹುಪಾಲು ಕನ್ನಡಿಗರ ಕಾಸರಗೋಡು ತಾಲ್ಲೂಕು, ಇನ್ನೊಂದು ಬದಿಯಲ್ಲಿ ಬೆರಳೆಣಿಕೆ ಕನ್ನಡಿಗರ ಹೊಸದುರ್ಗ.[೧]
ಬಹುಭಾಷಾ ಭೂಮಿ ಕಾಸರಗೋಡಿನಲ್ಲಿ ಕನ್ನಡ, ತುಳು, ಮಲಯಾಳ, ಅರೆಭಾಷೆ, ಕೊಂಕಣಿ, ಮರಾಠಿ, ಹವ್ಯಕ, ಕೋಟ, ಶಿವಳ್ಳಿ, ಬ್ಯಾರಿ– ಹೀಗೆ ಹಲವು ಭಾಷೆಗಳ ಸೊಗಡು, ಸಾಹಿತ್ಯದ ಕಂಪು ಹರಡಿದೆ. ನೀರ್ಚಾಲು ಮಹಾಜನ ಸಂಸ್ಕೃತ ವಿದ್ಯಾಸಂಸ್ಥೆಗಳು, ಮಂಜೇಶ್ವರ ಗೋವಿಂದ ಪೈಯವರ ‘ಗಿಳಿವಿಂಡು’ ಮತ್ತು ಡಾ. ಕಯ್ಯಾರ ಕಿಞ್ಜಣ್ಣ ರೈಗಳ ನಿವಾಸ ‘ಕವಿತಾ ಕುಟೀರ’ ಅಮೂಲ್ಯ ಗ್ರಂಥಗಳ ಸಂಗ್ರಹವನ್ನು ಹೊಂದಿದೆ. ಕಾಸರಗೋಡಿನಲ್ಲಿ ಯಕ್ಷಗಾನ ‘ಬೊಂಬೆಯಾಟ’ ಮತ್ತು ಅದರ ಸಂಗ್ರಹಾಲಯವೂ ಇದೆ.
ಸಮುದ್ರದ ಅಲೆಗಳಿಗೆ ಸದಾ ಮೈಯೊಡ್ಡುವ ಬೇಕಲಕೋಟೆಯಲ್ಲಿ ಬೀಚ್, ಪಾರ್ಕ್, ಉತ್ಖನನದ ಮೂಲಕ ಕಂಡ ಗತವೈಭವದ ಅರಮನೆಯ ಅಡಿಪಾಯ, ಸುತ್ತಲಿನ ಉದ್ಯಾನ ಮತ್ತು ಐತಿಹಾಸಿಕ ಕೋಟೆಯ ಸೌಂದರ್ಯವನ್ನು ಜತೆಯಾಗಿ ಸವಿಯಬಹುದು. ಜಿಲ್ಲೆಯಲ್ಲಿರುವ ಮಾಯಿಪ್ಪಾಡಿ ಅರಮನೆ, ಚಂದ್ರಗಿರಿ ಕೋಟೆ, ಆರಿಕ್ಕಾಡಿ ಕೋಟೆಗಳಿಗೆ ಐತಿಹಾಸಿಕ ಪ್ರಾಧಾನ್ಯತೆ ಇದೆ.
ಕಾಸರಗೋಡಿಗೆ ಸಮೀಪದ ಸರೋವರ ಕ್ಷೇತ್ರ ಅನಂತಪುರ, ಅಲ್ಲಿನ ಮೊಸಳೆ ‘ಬಬಿಯಾ’, ಪಕ್ಕದ ಮುಜುಂಗಾವಿನಲ್ಲಿರುವ ವಿಶಾಲ ಸರೋವರ ಪ್ರವಾಸಿಗರ ಆಕರ್ಷಣೆಯ ಚುಂಬಕಗಳು. ವಿನಾಯಕನ ದೇವಾಲಯ ಮಧೂರು, ಬೇಳ ಶೋಕಮಾತಾ ಇಗರ್ಜಿಯಲ್ಲಿರುವ ಗುಹೆ, ಮಂಜೇಶ್ವರದ ಜೈನಬಸದಿ, ಕಾಞಂಗಾಡಿನಲ್ಲಿರುವ ಆನಂದಾಶ್ರಮ ಮತ್ತು ನಿತ್ಯಾನಂದಾಶ್ರಮಗಳು ಕಾಸರಗೋಡಿನ ಪರಿಸರದ ಆಧ್ಯಾತ್ಮಿಕ ತಾಣಗಳು. ಪೊಸಡಿಗುಂಪೆ ಮತ್ತು ರಾಣಿಪುರಂ ಚಾರಣಕ್ಕೆ ಅನುಕೂಲಕರವಾದ ಉನ್ನತ ಬೆಟ್ಟಗಳು. ನೀಲೇಶ್ವರದ ಸನಿಹದಲ್ಲಿರುವ ‘ಹಿನ್ನೀರ ಸರೋವರ’ ಮನಸ್ಸಿಗೆ ಮುದವನ್ನು ನೀಡುತ್ತದೆ.
ತೆಂಗು ಕೃಷಿ ಕುರಿತಾದ ಸಂಶೋಧನಾ ಚಟುವಟಿಕೆಗಳಲ್ಲಿ ನಿರತವಾದ ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದಲ್ಲಿ ತಳಿವೈವಿಧ್ಯ, ಒಳಸುರಿಗಳ ಬಗೆಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಹಾಲಿನ ಸಂಸ್ಕರಣೆಯ ವಿಧಾನಗಳನ್ನು ಮಾವುಂಗಾಲ್‌ನಲ್ಲಿರುವ ‘ಮಿಲ್ಮಾ ಡೈರಿ’ಯಲ್ಲಿ ವೀಕ್ಷಿಸಬಹುದು. ಓಣಂ ಹಬ್ಬದ ಸಂದರ್ಭದಲ್ಲಿ ರಚಿಸಲಾಗುವ ಹೂವಿನ ರಂಗವಲ್ಲಿಗಳು, ಮುಸ್ಲಿಂ ಕಲಾಪ್ರಕಾರಗಳಾದ ಒಪ್ಪನ ಮತ್ತು ದಫ್‌ಮುಟ್ಟು ಕಾಸರಗೋಡಿನ ಪಯಣದಲ್ಲಿರುವ ಜನರಿಗೆ ಮನರಂಜನೆಯನ್ನು ನೀಡುತ್ತವೆ.
ಇಲ್ಲಿನ ಜನರ ಪ್ರಧಾನ ಆಹಾರ ಕುಚ್ಚಿಲಕ್ಕಿಯ ಅನ್ನ, ‘ಪರೋಟಾ’ ಮತ್ತು ‘ಪುಟ್ಟು’ ವಿಶೇಷ ತಿನಿಸುಗಳು. ಕಡಲಿನ ಸನಿಹದಲ್ಲೇ ಸಾಗುವ ‘ಡಬಲ್ ಲೈನ್’ ರೈಲು ಮಾರ್ಗ ಮತ್ತು ಸಮಾನಾಂತರವಾಗಿ ಸಾಗುವ ರಾಷ್ಟ್ರೀಯ ಹೆದ್ದಾರಿ ಕಾಸರಗೋಡನ್ನು ಸಂಪರ್ಕಿಸಲಿರುವ ಸೌಕರ್ಯವನ್ನು ಹೆಚ್ಚಿಸಿದೆ. ಒಟ್ಟಿನಲ್ಲಿ ಕಾಸರಗೋಡನ್ನು ಸಂದರ್ಶಿಸುವ ಪ್ರವಾಸಿಗರಿಗೆ ಈ ಜಿಲ್ಲೆಯ ನೈಸರ್ಗಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮುಖಗಳು ಶಿಕ್ಷಣಾಸಕ್ತಿಯನ್ನು ಮೂಡಿಸುತ್ತವೆ, ಮನರಂಜನೆಯನ್ನು ನೀಡುತ್ತವೆ.
ಚರಿತ್ರೆ
ಕಾಸರಗೋಡಿನ ಅಡೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಎಂಟನೆಯ ಶತಮಾನಕ್ಕೆ ಸೇರಿದ ಶಿಲಾಶಾಸನವೊಂದು ದೊರೆತಿದೆ. ಪಶ್ಚಿಮ ಚಾಲುಕ್ಯ ದೊರೆ ಎರಡನೆಯ ಕೀರ್ತಿವರ್ಮನ ಕಾಲದ್ದೆಂದು ಹೇಳಲು ಆಧಾರಗಳು ದೊರೆತಿವೆ.[೨]
ಕಾಸರಗೋಡು ಜಿಲ್ಲೆಯು ಇತಿಹಾಸದ ದಿನಗಳಲ್ಲೇ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿತ್ತು. ಕ್ರಿ.ಶ. 14ರ ಕಾಲಘಟದಲ್ಲೇ ಅನೇಕ ಅರಬರು ಪ್ರವಾಸ ಮತ್ತು ವ್ಯಾಪಾರದ ಉದ್ದೇಶಕ್ಕಾಗಿ ಕಾಸರಗೋಡಿಗೆ ಭೇಟಿ ನೀಡಿದ್ದ ಉಲ್ಲೇಖಗಳು ಚರಿತ್ರೆಯ ಪುಟಗಳಲ್ಲಿ ದಾಖಲಾಗಿವೆ.
ಅರಬರು ಕಾಸರಗೋಡನ್ನು ಒಂದು ಪ್ರಧಾನ ವ್ಯಾಪಾರ ಕೇಂದ್ರವಾಗಿ ಪರಿಗಣಿಸಿದ್ದರು. ಈ ಪ್ರದೇಶವನ್ನು ಅವರು "ಹರ್ಕ್‌ವಿಲ್ಲಿಯಾ' ಎಂದು ಕರೆಯುತ್ತಿದ್ದರು. ಪೋರ್ಚುಗೀಸ್ ಪ್ರವಾಸಿಗರಾಗಿದ್ದ ಬಾಬೋìಸ್ ಎಂಬಾತನು 1514ರಲ್ಲಿ ಕಾಸರಗೋಡಿನ ಕುಂಬಳೆಗೆ ಬಂದಿದ್ದನು. ಅವನು ಇಲ್ಲಿಂದ ಅಕ್ಕಿ ರಫ್ತು ಮಾಡಿ ಹುರಿಹಗ್ಗವನ್ನು ಆಮದು ಮಾಡುತ್ತಿದ್ದನು. ಲಾರ್ಡ್ ವೆಲ್ಲೆಸ್ಲಿಯ ಕುಟುಂಬ ಡಾಕ್ಟರಾಗಿದ್ದ ಡಾ| ಫ್ರಾನ್ಸಿಸ್ ಬುಕಾನಿನ್ 1800ರಲ್ಲಿ ಕಾಸರಗೋಡಿಗೆ ಬಂದಿದ್ದನು.[೩]
ಕಾಸರಗೋಡು ಕುಂಬಳೆ ರಾಜರ ಅಧೀನಕ್ಕೂ ಒಳಪಟ್ಟಿತ್ತು. ಆಗ ಸುಮಾರು 64 ತುಳು ಮತ್ತು ಮಲಯಾಳ ಗ್ರಾಮಗಳು ಈಪ್ರದೇಶದಲ್ಲಿತ್ತು. ಬಳಿಕ ಕಾಸರಗೋಡಿಗೆ ವಿಜಯನಗರ ರಾಜರು ದಾಳಿ ನಡೆಸಿದರು. ಆಗ ಕಾಸರಗೋಡು ನೀಲೇಶ್ವರ ಕೇಂದ್ರೀಕರಿಸಿ ಆಳ್ವಿಕೆ ನಡೆಸುತ್ತಿದ್ದ ಕೋಲತ್ತಿರಿ ರಾಜರ ಅಧೀನದಲ್ಲಿತ್ತು. ಕ್ರಮೇಣ ಕೋಲತ್ತಿರಿ ಸಾಮ್ರಾಜ್ಯ ಅಧಃಪತನಗೊಂಡು ಇಲ್ಲಿ ಇಕ್ಕೇರಿ ನಾಯಕರು ಪ್ರಾಬಲ್ಯ ಹೊಂದಿದರು. 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯ ಅವನತಿ ಹೊಂದಿದ ಬಳಿಕ ಇಕ್ಕೇರಿ ನಾಯಕರು ಮತ್ತಷ್ಟು ಪ್ರಬಲರಾದರು. 1645ರಲ್ಲಿ ಇಕ್ಕೇರಿಯ ವೆಂಕಪ್ಪ ನಾಯಕ ಬಿದನೂರನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡನು. ಕಾಸರಗೋಡಿನ ಚಂದ್ರಗಿರಿ ಕೋಟೆ ಮತ್ತು ಬೇಕಲ ಕೋಟೆಯನ್ನು ಇವರೇ ನಿರ್ಮಿಸಿದರೆಂದು ನಿರ್ಮಾಣಗೊಂಡಿದೆ ಎಂದು ಚರಿತ್ರೆ ಹೇಳುತ್ತದೆ.
1763ರಲ್ಲಿ ಮೈಸೂರಿನ ಹೈದರ್ ಆಲಿಯು ಕೇರಳವನ್ನು ಸ್ವಾಧೀನ ಮಾಡುವ ಉದ್ದೇಶದೊಂದಿಗೆ ಬಿದನೂರಿಗೆ ದಾಳಿ ಮಾಡಿದನು. ಕೇರಳವನ್ನು ಸ್ವಾಧೀನಪಡಿಸುವ ತನ್ನ ಯೋಜನೆಯಲ್ಲಿ ಆತ ವಿಫಲನಾಗಿ ಮೈಸೂರಿಗೆ ಹಿಂತಿರುಗಿ, 1782ರಲ್ಲಿ ಗತಿಸಿದನು. ತಂದೆಯ ಕನಸನ್ನು ನನಸು ಮಾಡುವ ಉದ್ದೇಶದೊಂದಿಗೆ ಟಿಪ್ಪು ಸುಲ್ತಾನ್ ಮಲಬಾರ್ ಪ್ರದೇಶಕ್ಕೆ ದಾಳಿ ಮಾಡಿದನು. 1792ರ ಶ್ರೀರಂಗಪಟ್ಟಣ ಒಪ್ಪಂದದ ಪ್ರಕಾರ ಟಿಪ್ಪು ಸುಲ್ತಾನ್ ತುಳುನಾಡು (ಕೆನರಾ) ಹೊರತುಪಡಿಸಿದ ಮಲಬಾರ್ ಪ್ರದೇಶವನ್ನು ಬ್ರಿಟಿಷರಿಗೆ ಒಪ್ಪಿಸಿದನು.
ಒಂದು ಕಾಲದಲ್ಲಿ ಬೋಂಬೆ ಪ್ರಸಿಡೆನ್ಸಿಯ ದಕ್ಷಿಣ ಕನ್ನಡ ಜಿಲ್ಲೆಯ ಬೇಕಲ ತಾಲೂಕಿನ ಒಂದು ಭಾಗವಾಗಿತ್ತು ಕಾಸರಗೋಡು. 1882 ಎಪ್ರಿಲ್ 16ರಂದು ಬೇಕಲ ತಾಲೂಕು ಮದ್ರಾಸ್ ಪ್ರಸಿಡೆನ್ಸಿಯೊಂದಿಗೆ ವಿಲೀನವಾದಾಗ ಕಾಸರಗೋಡು ತಾಲೂಕು ರಚಿಸಲಾಯಿತು. ಆದರೂ 1913ರಲ್ಲಿ ಮದ್ರಾಸ್ ಗವರ್ನರ್ ಕೌನ್ಸಿಲ್‌ನಲ್ಲಿ ಕಾಸರಗೋಡನ್ನು ಮಲಬಾರ್ ಜಿಲ್ಲೆಯೊಂದಿಗೆ ವಿಲೀನಗೊಳಿಸಬೇಕು ಎಂಬ ಠರಾವು ಮಂಡಿಸಲಾಗಿತ್ತು.ಕನ್ನಡ ಸದಸ್ಯರ ತೀವ್ರ ಪ್ರತಿರೋಧದಿಂದಾಗಿ ಈ ಪ್ರಸ್ತಾವ ಬಿದ್ದು ಹೋಗಿತ್ತು.[೩]
ಬಳಿಕ 1927ರಲ್ಲಿ ಕಲ್ಲಿಕೋಟೆಯಲ್ಲಿ ನಡೆದಿದ್ದ ರಾಜಕೀಯ ಸಮಾವೇಶವೊಂದರಲ್ಲೂ ಕಾಸರಗೋಡನ್ನು ಮಲಬಾರ್ ಜಿಲ್ಲೆಯೊಂದಿಗೆ ವಿಲೀನಗೊಳಿಸುವ ಬೇಡಿಕೆಯ ಠರಾವನ್ನು ಅಂಗೀಕರಿಸಲಾಗಿತ್ತು. ಅದೇ ವರ್ಷ ಮಲಯಾಳಿ ಸೇವಾ ಸಂಘ ಎಂಬ ಸಂಘಟನೆಯೊಂದು ಹುಟ್ಟಿಕೊಂಡಿತು. ಕಾಸರಗೋಡನ್ನು ಮಲಬಾರ್ ಜಿಲ್ಲೆಗೆ ಸೇರಿಸಲು ಇದೂ ಶ್ರಮಿಸಿತು. ಬಳಿಕ ಕೆ.ಪಿ. ಕೇಶವ ಮೆನನ್ ಎಂಬವರ ತೀವ್ರ ಶ್ರಮದ ಪರಿಣಾಮವಾಗಿ ಕಾಸರಗೋಡು ಎಂಬ ಕನ್ನಡ ಭೂಮಿಯನ್ನು 1956 ನವೆಂಬರ್ 1ರಂದು ಅನ್ಯಾಯವಾಗಿ ಕೇರಳಕ್ಕೆ ಸೇರಿಸಲಾಯಿತು.
ಸ್ವಾತಂತ್ರ್ಯ ಹೋರಾಟದಲ್ಲೂ ಕಾಸರಗೋಡಿನವರ ಪಾಲು ಮಹತ್ತರವಾದುದು. ಭೂಸುಧಾರಣಾ ಕಾಯ್ದೆಯೂ ಈ ಪ್ರದೇಶದ ಮೇಲೆ ಗಂಭೀರ ಪರಿಣಾಮ ಬೀರಿದೆ.
ಭಾಷೆಗಳು
- ತುಳು ಇಲ್ಲಿ ಬಹುಜನರು ಬಳಸುವ ಭಾಷೆಯಾಗಿದೆ.
- ತುಳು ಮಾತನಾಡುವ ಜನ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಉಡುಪಿ ಜಿಲ್ಲೆಯ ತೆಂಕು ಭಾಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಬಡಗು ಭಾಗವನ್ನು ಒಟ್ಟಾಗಿ ತುಳುನಾಡು ಎಂದು ಕರೆಯುತ್ತಾರೆ.
ಇತರೆ ಭಾಷೆಗಳು
ಹವಾಮಾನ
ಕಾಸರಗೋಡು ಜಿಲ್ಲೆಯ ಉಷ್ಣತೆ ಮತ್ತು ಮಳೆಯ ಪ್ರಮಾಣವನ್ನು ಈ ಕೆಳಗಿನ ಕೋಷ್ಟಕದಲ್ಲಿ ಕೊಡಲಾಗಿದೆ.
ತಿಂಗಳು | ಸರಾಸರಿ ಹೆಚ್ಚು *C (*F) | ಸರಾಸರಿ ಕಡಿಮೆ *C (*F) | ಮಳೆ mm (Inches) |
---|---|---|---|
ಜನವರಿ | ೩೩.೧ | ೨೧.೧ | ೦.೮ |
ಫೆಬ್ರವರಿ | ೩೩.೩ | ೨೧.೯ | ೦.೦ |
ಮಾರ್ಚ್ | ೩೩.೯ | ೨೩.೭ | ೧೭.೩ |
ಏಪ್ರಿಲ್ | ೩೪.೩ | ೨೪.೯ | ೩೨.೭ |
ಮೇ | ೩೩.೪ | ೨೪.೯ | ೧೮೨.೯ |
ಜೂನ್ | ೨೯.೮ | ೨೩.೫ | ೧೦೧೦.೫ |
ಜೂಲಾಯಿ | ೨೮.೭ | ೨೩.೦ | ೧೦೦೨.೮ |
ಆಗಸ್ಟ್ | ೨೮.೮ | ೨೩.೦ | ೬೬೩.೬ |
ಸೆಪ್ಟೆಂಬರ್ | ೩೦.೧ | ೨೩.೨ | ೨೪೬.೫ |
ಅಕ್ಟೋಬರ್ | ೩೧.೨ | ೨೩.೨ | ೨೨೨.೬ |
ನವೆಂಬರ್ | ೩೨.೭ | ೨೨.೭ | ೬೯ |
ಡಿಸೆಂಬರ್ | ೩೩.೧ | ೨೧.೩ | ೧೨.೪ |
ಸರಾಸರಿ | ೩೧.೮೭ | ೨೩.೦೩ | ೩೪೬೧.೧ |
ಪ್ರಮುಖ ಪ್ರವಾಸ ತಾಣಗಳು
- ಅಡೂರು
- ಅಜಾನೂರು
- ಅನಂತಪುರ ದೇವಸ್ಥಾನ
- ಕಣಿಪುರ ದೇವಸ್ಥಾನ, ಕುಂಬಳೆ
- ಮಧೂರು ದೇವಸ್ಥಾನ
- ಚಂದ್ರಗಿರಿ ಕೋಟೆ
- ಕಣ್ವತೀರ್ಥ ಬೀಚ್ ರೆಸಾರ್ಟ್
- ಬೇಕಲ ಕೋಟೆ
- ಮುಜುಂಗಾವು ದೇವಸ್ಥಾನ
- ಕುಂಟಿಕಾನ ದೇವಸ್ಥಾನ
- ಮಲ್ಲ ದುರ್ಗಾಪರಮೇಶ್ವರಿ ದೇವಸ್ಥಾನ
- ವಿಸ್ಮಯ ವಾಟರ್ ಪಾರ್ಕ್
- ಜಾಂಬ್ರಿ ಗುಹೆ
ವಾಸ್ತುಶೈಲಿ
ಇಲ್ಲಿನ ವಾಸ್ತುಶೈಲಿ ಕನ್ನಡ ಮತ್ತು ಮಲೆಯಾಳ ವಾಸ್ತುಶೈಲಿಗಳ ಸಂಗಮವೆಂದು ಶ್ರುತಪಟ್ಟಿದೆ. ಉದಾಹರಣೆಯಾಗಿ ಅಡೂರು, ಮಧೂರು ಮುಂತಾದ ದೇವಸ್ಥಾನಗಳನ್ನೂ ಮಾಯಿಪ್ಪಾಡಿ ಅರಮನೆಯಂತಹ ಕಟ್ಟೋಣಗಳನ್ನೂ ಕಾಣಬಹುದು.
ಜಿಲ್ಲೆಯ ಖ್ಯಾತ ವ್ಯಕ್ತಿಗಳು
ಕಾಸರಗೋಡು ಜಿಲ್ಲೆಯಲ್ಲಿ ಹುಟ್ಟಿದ ಖ್ಯಾತ ವ್ಯಕ್ತಿಗಳು:-
- ಮಂಜೇಶ್ವರ ಗೋವಿಂದ ಪೈ - ಕವಿ, ಸಾಹಿತಿ, ಕನ್ನಡದ ಪ್ರಥಮ ರಾಷ್ಟ್ರಕವಿ
- ಕಯ್ಯಾರ ಕಿಞ್ಞಣ್ಣ ರೈ - ಕವಿ, ಸಾಹಿತಿ
- ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ - ಯಕ್ಷಗಾನ ಪ್ರಸಂಗ ಕರ್ತೃ. ಹಲವು ಜನ ಯಕ್ಷಗಾನ ಅಧ್ವರ್ಯರುಗಳನ್ನು ತಯಾರಿಸಿದ ಖ್ಯಾತಿ
- ಡಾ.ರಮಾನಂದ ಬನಾರಿ - ಯಕ್ಷಗಾನ ತಾಳಮದ್ದಳೆ ಅರ್ಥದಾರಿ, ವೈದ್ಯ
- ಯು. ಪಿ. ಕುಣಿಕುಳ್ಳಾಯ - ಕಾಸರಗೋಡು ಏಕೀಕರಣ ಸಮಿತಿ ಅಧ್ಯಕ್ಷನಾಗಿದ್ದುಕೊಂಡು ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಹೋರಾಡಿದವರು
- ವೇಣುಗೋಪಾಲ ಕಾಸರಗೋಡು - ಸಾಹಿತಿ
- ಶೇಣಿ ಗೋಪಾಲಕೃಷ್ಣ ಭಟ್ -ಖ್ಯಾತ ಯಕ್ಷಗಾನ ಕಲಾವಿದ
- ಪೆರ್ಲ ಕೃಷ್ಣ ಭಟ್
- ಬಲಿಪ ನಾರಾಯಣ ಭಾಗವತ - ಯಕ್ಷಗಾನ ಭಾಗವತರು
- ಎಂ. ವ್ಯಾಸ
- ಕೆ. ವಿ. ತಿರುಮಲೇಶ್
- ಲೀಲಾವತಿ ಬೈಪಡಿತ್ತಾಯ - ಮೊದಲ ಮಹಿಳಾ ಭಾಗವತರು
- ರಮೇಶಚಂದ್ರ -ಗಾಯಕ
- ಪವನಜ -ವಿಜ್ಞಾನಿ, ತಂತ್ರಜ್ಞಾನಿ, ಕನ್ನಡ ಮತ್ತು ಗಣಕ ತಜ್ಞ, ವಿಜ್ಞಾನ ಲೇಖಕ
- ಸಾರಾ ಅಬೂಬಕ್ಕರ್ - ಖ್ಯಾತ ಲೇಖಕಿ
- ಪ್ರೊ. ಡಾ. ಶ್ರೀ ಕೃಷ್ಣ ಭಟ್ - ಖ್ಯಾತ ಲೇಖಕ,ಸಾಹಿತಿ
- ಡಾ.ಯು. ಮಹೇಶ್ವರಿ. - ಸಾಹಿತಿ
- ವಿ.ಬಿ. ಕುಳಮರ್ವ - ಸಾಹಿತಿ
- ಡಾ. ರತ್ನಾಕರ ಮಲ್ಲಮೂಲೆ - ಸಾಹಿತಿ
- ಪ್ರಸನ್ನ. ವಿ. ಚೆಕ್ಕೆಮನೆ - ಸಾಹಿತಿ
- ವೈ. ಸತ್ಯನಾರಾಯಣ - ಸಾಹಿತಿ
- ಡಾ. ರಾಧಾಕೃಷ್ಣ ಬೆಳ್ಳೂರು
- ರಾಧಾಕೃಷ್ಣ ಉಳಿಯತ್ತಡ್ಕ
ಉಲ್ಲೇಖಗಳು
ಬಾಹ್ಯ ಸಂಪರ್ಕಗಳು
Wikiwand in your browser!
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.