Remove ads
ಕನ್ನಡದ ಪ್ರಮುಖ ಬರಹಗಾರ್ತಿ, ಕತೆಗಾರ್ತಿ From Wikipedia, the free encyclopedia
ಸಾರಾ ಅಬೂಬಕ್ಕರ್ (ಜೂನ್ ೩೦, ೧೯೩೬ - ಜನವರಿ ೧೦, ೨೦೨೩) ಕನ್ನಡದ ಕಥೆಗಾರ್ತಿ, ಕಾದಂಬರಿಗಾರ್ತಿ ಮತ್ತು ಮಹಿಳಾ ಸಂವೇದನೆಯ ಪ್ರಮುಖ ಲೇಖಕಿಯಾಗಿದ್ದರು.
ಸಾರಾ ಅಬೂಬಕ್ಕರ್ ಅವರು ಜೂನ್ ೩೦, ೧೯೩೬ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಮತ್ತು ತಾಯಿ ಜೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ ನೆರವೇರಿತು. ಮುಂದೆ ಅವರು ಹೈಸ್ಕೂಲಿನವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಅರೇಬಿಕ್ ಕಲಿತಿದ್ದ ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದಲ್ಲಿ ಏನಾದರೂ ಸಾಧಿಸಬೇಕೆಂಬ ಆಶಯ ಅವರ ಬಾಲ್ಯದಲ್ಲೇ ಮೂಡಿಬಂದಿತ್ತು. ಎಂಜಿನಿಯರ್ ಆಗಿ ನೌಕರಿಯಲ್ಲಿದ್ದ ಅಬೂಬಕ್ಕರ್ ಅವರನ್ನು ಸಾರಾ ಅವರು ವಿವಾಹವಾದರು. ಮದುವೆಯ ನಂತರ ತಮ್ಮ ವಿದ್ಯಾಭ್ಯಾಸವನ್ನು ಮುಂದುರೆಸಲು ಅಸಾಧ್ಯವಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ ಕಾರಂತರು, ಇನಾಂದಾರ್, ಎಸ್ ಎಲ್ ಭೈರಪ್ಪ, ಅನಂತಮೂರ್ತಿ ಇವರ ಬರವಣಿಗೆಗೆ ಮಾರುಹೋಗಿ ಸದಾ ಓದಿನಲ್ಲಿ ಮಗ್ನರಾಗಿರುತ್ತಿದ್ದರು. ಜೊತೆಗೆ ಮನೋವಿಜ್ಞಾನವನ್ನು ಆಧರಿಸಿ ತ್ರಿವೇಣಿಯವರು ಬರೆದ ಕಾದಂಬರಿಗಳು ಸಾರಾ ಅವರಲ್ಲಿ ಆಕರ್ಷಣೆ ಹುಟ್ಟಿಸಿದವು.
ತಾನು ಬದುಕುತ್ತಿದ್ದ ಸುತ್ತಮುತ್ತಲಿನ ಪರಿಸರದಲ್ಲಿ ಮನೋವ್ಯಾಕುಲತೆಗೊಳಗಾಗುತ್ತಿದ್ದ ಬಹಳಷ್ಟು ಸಹ ಧರ್ಮೀಯರ ಕುರಿತು ಸಾರಾ ಅವರ ಮನಸ್ಸು ನಿರಂತರವಾಗಿ ಮಿಡಿಯುತ್ತಿತ್ತು. ತಲಾಕ್ ಸಂಪ್ರದಾಯ, ಮಕ್ಕಳಾದ ನಂತರದ ಅಸಹನೀಯ ಬದುಕು ಇವೆಲ್ಲಾ ಅವರನ್ನು ಕಾಡುತ್ತಿದ್ದವು.
ಅಣ್ಣ ತಂದುಕೊಡುತ್ತಿದ್ದ ವೈಕಂ ಮಹಮದ್ ಬಷೀರ್ ಅವರ ಕಾದಂಬರಿಗಳ ಓದಿನ ಪ್ರಭಾವದಿಂದ ಅವರಲ್ಲಿ ಬರೆಯಬೇಕೆಂಬ ಅಂತರಾಳದ ಒತ್ತಡ ನಿರಂತರವಾಗಿ ಹೊರಹೊಮ್ಮುತ್ತಿತ್ತು. ಹಲವಾರು ವರ್ಷ ಸಾಮಾಜಿಕ ಸಮಸ್ಯೆಗಳ ಮಥನದಿಂದಾಗಿ ಎಂ.ಕೆ.ಇಂದಿರಾ ಅವರಂತೆ ನಲವತ್ತು ದಾಟಿದ ನಂತರ ಸಾರಾ ಅಬೂಬಕ್ಕರ್ ಬರೆಯಲು ಪ್ರಾರಂಭಿಸಿದರು. ಹೀಗೆ ಅವರು ಬರೆದ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಈ ಕಥೆಯಲ್ಲಿ ಹೊರಹೊಮ್ಮಿದ ವಾಸ್ತವಿಕ ಬದುಕಿನ ಚಿತ್ರಣ ಮತ್ತು ಧರ್ಮದ ಕಟ್ಟುಪಾಡುಗಳಲ್ಲಿ ಶೋಷಿತಗೊಂಡ ಮಹಿಳೆಯರ ದ್ವನಿಗಳು ಅಸಂಖ್ಯಾತ ಓದುಗರ ಹೃದಯವನ್ನು ತಟ್ಟಿ ಈ ಕಾದಂಬರಿ ಎಲ್ಲೆಡೆಯು ಮೆಚ್ಚುಗೆ ಪಡೆಯಿತು. ಆ ನಂತರದಲ್ಲಿ ಸಾ.ರಾ.ಅಬೂಬಕ್ಕರ್ ಅವರು ಬರೆದ ಇತರ ಹಲವಾರು ಕಾದಂಬರಿಗಳೆಂದರೆ:
ಮುಂತಾದ ಹಲವಾರು ಪ್ರಮುಖ ಪ್ರಶಸ್ತಿ ಗೌರವಗಳು ಸಂದಿವೆ.
ತಮ್ಮಲ್ಲಿ ಮೂಡಿಬಂದ ಮುಕ್ತ ಮಾನೋಭಾವದ ಬಗ್ಗೆ ಸಾರಾ ಅಬೂಬಕ್ಕರ್ ಹೀಗೆ ಹೇಳುತ್ತಾರೆ: “ನನ್ನ ಅಜ್ಜ ಪುಡಿಯಾಪುರ ಮಹಮದ್ ಅವರು ಕೇರಳದ ಕಾಸರಗೋಡಿನಲ್ಲಿ ಕೃಷಿಕರಾಗಿದ್ದರು. ಹಳೆಯ ಕಾಲದವರಾಗಿದ್ದರೂ ಪ್ರಗತಿಪರ ಧೋರಣೆ ಹೊಂದಿದ್ದರು. ಅವರ ಕಾಲದಲ್ಲೇ ಮಹಿಳಾ ಸ್ವಾತಂತ್ರ್ಯದ ಕನಸು ಕಂಡಿದ್ದರು. ನನ್ನ ತಂದೆ ಪುಡಿಯಾಪುರ ಅಹಮದ್ ವಕೀಲರಾಗಿದ್ದುಕೊಂಡು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಿದ್ದರು. ಏನನ್ನೇ ಆದರೂ ಪ್ರಶ್ನಿಸದೇ ಒಪ್ಪಿಕೊಳ್ಳಬಾರದು ಎಂಬ ಪಾಠ ನನಗೆ ಹೇಳಿಕೊಟ್ಟರು. ನನ್ನನ್ನು ಶಾಲೆಗೆ ಸೇರಿಸಿ ಓದಿಸಿದರು. ಹಾಗಾಗಿ ನಾನು ಪ್ರತಿಯೊಂದನ್ನೂ ಪ್ರಶ್ನಿಸಲು ಆರಂಭಿಸಿದೆ. ಮುಸ್ಲಿಂ ಮಹಿಳೆಗೆ ಪ್ರತಿನಿತ್ಯ ಆಗುವ ಶೋಷಣೆ, ಅವಮಾನಗಳನ್ನು ನನಗೆ ಸಹಿಸಲಾಗಲಿಲ್ಲ. ಅದನ್ನು ಲೇಖನಿಯ ಮೂಲಕ ಬಿಚ್ಚಿಟ್ಟೆ. ನಾನು ಓದಿದ್ದು ಮೆಟ್ರಿಕ್ವರೆಗೆ ಮಾತ್ರ (11ನೇ ತರಗತಿ) ನನ್ನನ್ನು ಮತ್ತಷ್ಟು ಓದಿಸಬೇಕು ಎಂಬ ಆಸೆ ತಂದೆಗೆ ಇತ್ತು. ಆದರೆ ಅಂದಿನ ಸಮಾಜ ಮುಸ್ಲಿಂ ಹೆಣ್ಣು ಮಕ್ಕಳು ಓದುವುದನ್ನು ಸಹಿಸುತ್ತಿರಲಿಲ್ಲ. ಹಾಗಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಲೇಬೇಕು, ಇದಕ್ಕಾಗಿ ಹೋರಾಡಬೇಕು ಎಂದು ನಾನು ಆಗಲೇ ನಿರ್ಧರಿಸಿಕೊಂಡೆ.”
ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಬೇಕೆಂದು ನಿರಂತರವಾಗಿ ಪ್ರತಿಪಾದಿಸುವ ಸಾರಾ ಅಬೂಬಕ್ಕರ್ “ಹೆಣ್ಣು ಮಕ್ಕಳು ಪ್ರಾಣಿಗಳು, ಹೆರಲು ಇರುವ ಯಂತ್ರಗಳು ಎಂದು ಬಿಂಬಿಸಿರುವ ಸಮಾಜ ನಮ್ಮದು. ಇಸ್ಲಾಂನ ಮೂಲದಲ್ಲಿ ಹೆಣ್ಣಿಗೆ ಅಪಾರ ಗೌರವವಿವೆ. ಆದರೆ ಸೌದಿ ಅರೇಬಿಯಾ ಮೂಲದ `ವಹಾಬಿಸಂ’ ಅನ್ನು ಮುಂದಿಟ್ಟುಕೊಂಡು ಈಗೀಗ ವಿಶ್ವದ ನಾನಾ ಭಾಗಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬಾರದು ಎಂದೆಲ್ಲಾ ವಾದಿಸುತ್ತಿದ್ದಾರೆ. ಮಹಿಳೆಗೆ ಶಿಕ್ಷಣ ಸಿಗಬೇಕು. ಅದರಲ್ಲೂ ತಾಯಂದಿರಿಗೆ ಅಕ್ಷರ ಜ್ಞಾನ ಬೇಕು. ಆದರೆ ಕೇರಳ, ಕರ್ನಾಟಕ ಕರಾವಳಿ ಭಾಗದ ಬಹುತೇಕ ಮುಸ್ಲಿಂ ಕುಟುಂಬಗಳಲ್ಲಿನ ತಾಯಂದಿರಿಗೆ ಶಿಕ್ಷಣ ಇಲ್ಲ. ಎಲ್ಲೋ ದೂರದ ದುಬೈನಲ್ಲೋ, ಮತ್ತೊಂದೆಡೆಯೋ ಕುಳಿತ ಪತಿ ಹಣ ಕಳುಹಿಸುತ್ತಾನೆ. ಅದನ್ನು ಮಕ್ಕಳು ಮಜಾ ಮಾಡುತ್ತಾರೆ. ಹಣವನ್ನು ಸರಿಯಾಗಿ ನಿರ್ವಹಿಸಲೂ ಬಾರದ ಮಕ್ಕಳು ಕುಟುಂಬ ಸಮೇತ ಹಾಳಾಗಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ಮಹಿಳೆಯನ್ನು ಶಿಕ್ಷಣದಿಂದ ವಂಚಿಸುವುದು ಸರಿಯಲ್ಲ.” ಎಂದು ಸ್ಪಷ್ಟಪಡಿಸುತ್ತಾರೆ.
ಸಾರಾ ಅಬೂಬಕರ್ ಜನವರಿ ೧೦,೨೦೨೩ರಂದು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ನಿಧನರಾದರು. ಸಾರಾ ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ೮೭ ವರ್ಷ ವಯಸ್ಸಾಗಿತ್ತು.[೧]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.