From Wikipedia, the free encyclopedia
ಅಭಿಜ್ಞಾನ ಶಾಕುಂತಲಮ್ (ಕನ್ನಡದಲ್ಲಿ "ಅಭಿಜ್ಞಾನ ಶಾಕುಂತಳ" ಎಂಬ ಪ್ರಯೋಗವು ಹೆಚ್ಚಾಗಿದೆ) ‘ಕವಿಕುಲಗುರು’ ಎಂದು ಪ್ರಖ್ಯಾತನಾದ ಕಾಳಿದಾಸನು ಸಂಸ್ಕೃತದಲ್ಲಿ ಬರೆದ ಏಳು ಅಂಕಗಳ ನಾಟಕ. ಜಗತ್ತಿನ ಶ್ರೇಷ್ಠ ಕವಿಗಳಲ್ಲಿ ಕಾಳಿದಾಸನೂ ಒಬ್ಬನೆನ್ನುವ ಸ್ಥಾನವನ್ನು ಗಳಿಸಿಕೊಟ್ಟ ನಾಟಕ. "ಕಾವ್ಯೇಷು ನಾಟಕಂ ರಮ್ಯಂ; ತತ್ರ ರಮ್ಯಾ ಶಾಕುಂತಲಾ" ಎಂದು ಹೊಗಳಿಸಿಕೊಂಡ ಶೃಂಗಾರರಸ ಪ್ರಧಾನವಾಗಿರುವ ಕೃತಿ. ಇದರ ಕಥಾವಸ್ತು ಕವಿಯ ಕಲ್ಪನೆಯಲ್ಲ; ವ್ಯಾಸನಿಂದ ರಚಿತವಾದ ಮಹಾಭಾರತದಲ್ಲಿ ಇದರ ಉಲ್ಲೇಖವಿದೆ. ಶಕುಂತಲೆ ಮತ್ತು ದುಷ್ಯಂತರ ಪ್ರೇಮ ಕಥೆಯಿದು.
ಮೇನಕೆ ಮತ್ತು ವಿಶ್ವಾಮಿತ್ರರ ಮಗಳಾಗಿ ಹುಟ್ಟಿ ಕಣ್ವರ ಸಾಕುಮಗಳಾಗಿ ಆಶ್ರಮದಲ್ಲಿ ಹುಲ್ಲೆ-ನವಿಲು, ಗಿಡ-ಬಳ್ಳಿಗಳೊಡನೆ ಒಂದಾಗಿ ಬೆಳೆದ ಶಕುಂತಲೆ (ಶಕುಂತಳೆ ಎಂಬ ಪ್ರಯೋಗವೂ ಕನ್ನಡದಲ್ಲಿದೆ), ದುಷ್ಯಂತನನ್ನು ಮೊದಲ ಬಾರಿ ಕಂಡಾಗ ಪ್ರೇಮಾಂಕುರವಾದದ್ದೂ ಗೊತ್ತಾಗದ ಮುಗ್ದೆ. ಬಳಿಕ ಪ್ರೇಮಪ್ರವಾಹಕ್ಕೆ ಸಿಕ್ಕಿ, ಅವನನ್ನು ಗಾಂಧರ್ವ ವಿವಾಹವಾಗಿ, ಗರ್ಭಿಣಿಯಾಗುತ್ತಾಳೆ. ನಲ್ಲನ ವಿರಹದಲ್ಲಿ ಮೈಮರೆತಿರುವಾಗ ಬಂದ ದುರ್ವಾಸರ ಶಾಪಕ್ಕೆ ಗುರಿಯಾಗುತ್ತಾಳೆ. ಪರಿಣಾಮವಾಗಿ, ತನ್ನನ್ನು ಅರಮನೆಗೆ ಕರೆಸಿಕೊಳ್ಳಲು ಮರೆತ ದುಷ್ಯಂತನ ಬಳಿ ತಾನೇ ಹೋದಾಗ, ಅಲ್ಲಿ ತಿರಸ್ಕೃತಳಾಗುತ್ತಾಳೆ. ಅಲ್ಲಿಂದ ತನ್ನ ತಾಯಿಯ ಸಹಾಯದಿಂದ ಮಾರೀಚಾಶ್ರಮವನ್ನು ಸೇರಿ, ಚಕ್ರವರ್ತಿಯ ಲಕ್ಷಣಗಳುಳ್ಳ ಮಗನನ್ನು ಹಡೆಯುತ್ತಾಳೆ. ಈ ನಡುವೆ ತಾನು ತೊಡಿಸಿ ಹೋಗಿದ್ದು, ಶಕುಂತಲೆಯು ಕಳೆದುಕೊಂಡಿದ್ದ ಅಭಿಜ್ಞಾನದ ಉಂಗುರವು ದುಷ್ಯಂತನ ಕೈಸೇರಿದಾಗ, ಅವನಿಗೆ ಎಲ್ಲಾ ನೆನಪಾಗುತ್ತದೆ. ಮುಂದೆ ಯುದ್ಧವೊಂದರಲ್ಲಿ ಇಂದ್ರನ ಸಹಾಯಕ್ಕೆ ಹೋಗಿ ಮರಳುವಾಗ ಮಾರೀಚಾಶ್ರಮದಲ್ಲಿ ಪತ್ನೀಪುತ್ರರೊಂದಿಗೆ ಸಮಾಗಮವಾಗುತ್ತದೆ.
ಪುರುಷ ಪಾತ್ರಗಳು
ದುಷ್ಯಂತ - ಹಸ್ತಿನಾವತಿಯ ಅರಸ, ನಾಟಕದ ನಾಯಕ
ಮಾಢವ್ಯ - ವಿದೂಷಕ, ಅರಸನ ಬಾಲ್ಯಸ್ನೇಹಿತ
ಸರ್ವದಮನ (ಭರತ) - ದುಷ್ಯಂತನ ಮಗ
ಸೋಮರಾತ - ಆಸ್ಥಾನ ಪುರೋಹಿತ
ಭದ್ರಸೇನ - ಸೇನಾಪತಿ
ಸೂತ - ದುಷ್ಯಂತನ ಸಾರಥಿ
ವಾತಾಯನ - ಕಂಚುಕಿ
ರೈವತಕ - ದ್ವಾರಪಾಲಕ / ಪ್ರತೀಹಾರಿ
ವೈತಾಳಿಕರು - ಹೊಗಳುಭಟರು
ಶ್ಯಾಲ - ನಗರರಕ್ಷಕರ ಮುಖ್ಯಾಧಿಕಾರಿ
ಜಾನುಕ ಮತ್ತು ಸೂಚಕ - ಇಬ್ಬರು ನಗರ ರಕ್ಷಕರು
ಮಾತಲಿ - ಇಂದ್ರನ ಸಾರಥಿ
ಕಣ್ವ (ಕಾಶ್ಯಪ) - ಶಕುಂತಳೆಯ ಸಾಕುತಂದೆ
ಶಾರ್ಙ್ಗರವ ಮತ್ತು ಶಾರದ್ವತ - ಕಣ್ವರ ಇಬ್ಬರು ಶಿಷ್ಯರು
ವೈಖಾನಸರು - ಕಣ್ವರ ಆಶ್ರಮದಲ್ಲಿ ವಾನಪ್ರಸ್ಥಾನಾಶ್ರಮದಲ್ಲಿರುವವರು .
ನಾರದ ಮತ್ತು ಗೌತಮ - ಕಣ್ವರ ಇನ್ನಿಬ್ಬರು ಶಿಷ್ಯರು
ಶಿಷ್ಯ - ಮೂರನೆಯ ಅಂಕದ ವಿಷ್ಕಂಭಕದಲ್ಲಿ ಬರುವವನು
ಶಿಷ್ಯ - ನಾಲ್ಕನೆಯ ಅಂಕದ ಮೊದಲಲ್ಲಿ ಬರುವವನು
ಮಾರೀಚ (ಕಶ್ಯಪ) - ಮಹರ್ಷಿ, ದೇವಾಸುರರ ತಂದೆ
ಗಾಲವ - ಮಾರೀಚರ ಶಿಷ್ಯ
ಸೂತ್ರಧಾರ
ಸ್ತ್ರೀ ಪಾತ್ರಗಳು
ಶಕುಂತಳೆ - ಕಣ್ವರ ಸಾಕುಮಗಳು, ನಾಟಕದ ನಾಯಕಿ
ಪ್ರಿಯಂವದೆ ಮತ್ತು ಅನಸೂಯೆ - ಶಕುಂತಳೆಯ ಇಬ್ಬರು ಸಖಿಯರು
ಸಾನುಮತಿ - ಮೇನಕೆಯ ಸಖಿ, ಅಪ್ಸರೆ
ಗೌತಮಿ - ಕಣ್ವಾಶ್ರಮದ ವೃದ್ಧ ತಾಪಸಿ
ಪರಭೃತಿಕೆ ಮತ್ತು ಮಧುಕರಿಕೆ - ದುಷ್ಯಂತನ ಉದ್ಯಾನವನ ಪಾಲಿಕೆಯರು
ಚತುರಿಕೆ - ರಾಜನ ಸೇವಕಿ
ಪ್ರತೀಹಾರಿ - ರಾಜನ ದ್ವಾರಪಾಲಕಿ
ಅದಿತಿ - ಮಾರೀಚರ ಪತ್ನಿ
ನಟಿ - ಸೂತ್ರಧಾರನ ಪತ್ನಿ
'ರಂಗಮಂಚದ ಮೇಲೆ ಬಾರದವರು'
ದುರ್ವಾಸ, ಇಂದ್ರ, ಕೌಶಿಕ, ನಾರದ, ಜಯಂತ, ವಿಶ್ವಾವಸು, ಪಿಶುನ, ಮೇನಕೆ.
ಮೊದಲ ಅಂಕ
ಹಸ್ತಿನಾಪುರದ ಪುರುವಂಶದ ಅರಸನಾದ ದುಷ್ಯಂತನು ಬೇಟೆಯಾಡುತ್ತಾ, ಮಾಲಿನೀ ತೀರದ ಕಣ್ವ ಋಷಿಯ ಆಶ್ರಮದ ಹತ್ತಿರ ಬರುತ್ತಾನೆ. ಅಲ್ಲಿ ಕಂಡ ಜಿಂಕೆಯೊಂದಕ್ಕೆ ಗುರಿಯಿಡುತ್ತಿದ್ದಾಗ, ವೈಖಾಸನರು ಅಡ್ಡ ಬಂದು ಆಶ್ರಮದ ಮೃಗವನ್ನು ಕೊಲ್ಲಕೂಡದೆಂದು ಹೇಳಿ, ಕಣ್ವಾಶ್ರಮಕ್ಕೆ ಹೋಗಲು ತಿಳಿಸುವರು. ಕಣ್ವರು ಆಶ್ರಮದಲ್ಲಿರದೆ, ಶಕುಂತಲೆಯ ಪ್ರತಿಕೂಲದೈವಶಮನಾರ್ಥವಾಗಿ ಸೋಮತೀರ್ಥಕ್ಕೆ ಹೋಗಿರುತ್ತಾರೆಂದೂ ತಿಳಿಸುವರು. ದುಷ್ಯಂತನು ಕಣ್ವರಿಗೆ ತನ್ನ ಭಕ್ತಿಯನ್ನು ಅವಳ ಮೂಲಕವೇ ನಿವೇದಿಸಲು ಶಕುಂತಲೆಯನ್ನು ಕಾಣಲು ಮುಂದುವರೆಯುವನು. ಅಲ್ಲಿ ಪ್ರಿಯಂವದೆ ಮತ್ತು ಅನಸೂಯೆಯರೊಡನಿದ್ದ ಶಕುಂತಲೆಯಲ್ಲಿ ಮೋಹಕ್ಕೊಳಗಾಗುತ್ತಾನೆ. ರಾಜನನ್ನು ಕಂಡ ಶಕುಂತಲೆಯೂ ಅನುರಾಗಗೊಳ್ಳುತ್ತಾಳೆ.
ಎರಡನೆಯ ಅಂಕ
ಆಶ್ರಮದ ಋಷಿಗಳ ಕೋರಿಕೆಯಂತೆ ತೊಂದರೆ ಕೊಡುತ್ತಿರುವ ರಾಕ್ಷಸರಿಂದ ಯಾಗರಕ್ಷಣೆಗಾಗಿ ದುಷ್ಯಂತ ಆಶ್ರಮದಲ್ಲಿಯೇ ಇರಬೇಕಾಗುತ್ತದೆ. ಇದು ಅವನ ಮತ್ತು ಶಕುಂತಲೆಯ ನಡುವಿನ ಪ್ರೇಮವು ಗಾಢವಾಗಲು ಸಹಾಯಕವಾಗುತ್ತದೆ. ಆದರೆ ರಾಜನ ತಾಯಿಯು ಮಾಡಲು ನಿರ್ಧರಿಸಿರುವ ಪುತ್ರಪಿಂಡಪಾಲನವ್ರತಕ್ಕೆ ಅರಮನೆಯಿಂದ ಕರೆಬರುತ್ತದೆ. ತನ್ನ ಪ್ರತಿನಿಧಿಯಾಗಿ ಮಿತ್ರ ಹಾಗೂ ವಿದೂಷಕ ಮಾಢವ್ಯನನ್ನು ಸಪರಿವಾರನಾಗಿ ಕಳುಹಿಸುತ್ತಾನೆ.
ಮೂರನೆಯ ಅಂಕ
ಯಾಗ ಮುಗಿದ ನಂತರ ವಿರಹವೇದನೆಯಿಂದ ಬಳಲುತ್ತಿರುವ ದುಷ್ಯಂತ ಶಕುಂತಲೆಯರು ಗಾಂಧರ್ವವಿಧಿಯಿಂದ ವಿವಾಹವಾಗುತ್ತಾರೆ. ಶಕುಂತಲೆಯನ್ನು ಬೇಗನೇ ತನ್ನಲ್ಲಿಗೆ ಕರೆಯಿಸಿಕೊಳ್ಳುವೆನೆಂದು ಭಾಷೆಯಿತ್ತು, ಅವಳ ಬೆರಳಿಗೆ ತನ್ನ ನಾಮಾಂಕಿತ ಉಂಗುರವನ್ನು ತೊಡಿಸಿ ರಾಜನು ಹಸ್ತಿನಾವತಿಗೆ ಮರಳುತ್ತಾನೆ.
ನಾಲ್ಕನೆಯ ಅಂಕ
ಆಶ್ರಮದಲ್ಲಿ ದುಷ್ಯಂತನನ್ನೇ ಕುರಿತು ಶಕುಂತಲೆ ಒಬ್ಬಳೇ ಕುಳಿತು ಚಿಂತಿಸುತ್ತಿರುವಾಗ ಅಲ್ಲಿಗೆ ಸುಲಭಕೋಪಿಯಾದ ದುರ್ವಾಸ ಮುನಿಯು ಬರುತ್ತಾನೆ. ಚಿಂತೆಯಲ್ಲಿ ಮೈಮರೆತು, ಆ ಋಷಿಯನ್ನು ಗಮನಿಸದೆ, ಆದರಿಸಲಾಗದೇ ಹೋದ ಶಕುಂತಲೆಗೆ, ‘ಯಾರ ಯೋಚನೆಯಲ್ಲಿ ಮೈಮರೆತಿರುವೆಯೋ, ಅವನು ನಿನ್ನನ್ನು ಮರೆತು ಹೋಗಲಿ’ ಎಂದು ಶಾಪವೀಯುತ್ತಾನೆ. ಅಲ್ಲಿಗೆ ಬಂದ ಪ್ರಿಯಂವದೆಯು, ನಡೆದು ಹೋದ ಅಪ್ರಿಯ ಸಂಗತಿಯನ್ನು ಅರಿತು, ಓಡಿಹೋಗಿ ದುರ್ವಾಸನಿಂದ ‘ಅಭಿಜ್ಞಾನಾಭರಣದರ್ಶನದಿಂದ ಶಾಪವಿಮೋಚನೆಯಾಗುವದು’ ಎಂದು ಪರಿಹಾರವನ್ನು ಪಡೆಯುವಳು. ಸೋಮತೀರ್ಥದಿಂದ ಮರಳಿ ಬಂದ ಕಣ್ವರು ಶಕುಂತಲೆಯು ಬಸುರಿಯಾಗಿರುವುದನ್ನು ತಿಳಿಯುತ್ತಾರೆ. ಅವಳನ್ನು ಗೌತಮಿ, ಶಾರ್ಙ್ಗರವ ಮತ್ತು ಶಾರದ್ವತರೊಡನೆ ಪತಿಗೃಹಕ್ಕೆಂದು ದುಷ್ಯಂತನಲ್ಲಿಗೆ ಕಳುಹಿಸಿಕೊಡುತ್ತಾರೆ.
ಐದನೆಯ ಅಂಕ
ದುರ್ವಾಸರ ಶಾಪದ ಪ್ರಭಾವದಿಂದ ದುಷ್ಯಂತನಿಗೆ ಶಕುಂತಲೆಯ ನೆನಪೇ ಆಗದು. ಜ್ಞಾಪಿಸಲು ಮುಂದಾದ ಶಕುಂತಲೆಗೆ ಬೆರಳಲ್ಲಿದ್ದ ಉಂಗುರವು ಕಳೆದುಹೋದದ್ದರ ಅರಿವಾಗುತ್ತದೆ. ಬೇರೆ ಯಾವ ಪ್ರಯತ್ನವೂ ಫಲಕಾರಿಯಾಗುವುದಿಲ್ಲ. ದುಷ್ಯಂತನಿಂದ ತಿರಸ್ಕೃತಳಾದ ಅವಳನ್ನು ಗೌತಮಿ ಮತ್ತು ಸಂಗಡಿಗರೂ ಪರಿತ್ಯಜಿಸಿ ಆಶ್ರಮಕ್ಕೆ ಮರಳುತ್ತಾರೆ. ಆಗ ಅವಳ ತಾಯಿಯು ಬಂದು ಅವಳನ್ನು ತನ್ನಲ್ಲಿಗೆ ಕರೆದೊಯ್ಯುತ್ತಾಳೆ.
ಆರನೆಯ ಅಂಕ
ಕಣ್ವಾಶ್ರಮದಿಂದ ದುಷ್ಯಂತನ ಅರಮನೆಗೆ ಬರುತ್ತಿರುವಾಗ ದಾರಿಯಲ್ಲಿ ಸಿಕ್ಕ ಶಚೀತೀರ್ಥಕ್ಕೆ ಶಕುಂತಲೆಯು ನಮಸ್ಕರಿಸುತ್ತಿದ್ದಾಗ ಅವಳ ಬೆರಳಿನಿಂದ ರಾಜನಿತ್ತ ಉಂಗುರವು ಜಾರಿ ಬಿದ್ದಿರುತ್ತದೆ. ಅದನ್ನು ಒಂದು ಮೀನು ನುಂಗಿದ್ದು, ಅದನ್ನು ಹಿಡಿದ ಬೆಸ್ತನೊಬ್ಬನು ಆ ಮೀನನ್ನು ಕತ್ತರಿಸಿದಾಗ ಉಂಗುರವು ಸಿಗುತ್ತದೆ. ಅದನ್ನು ಮಾರಲು ರಾಜಧಾನಿಯಲ್ಲಿ ಬೆಸ್ತನು ಪ್ರಯತ್ನಿಸುತ್ತಿದ್ದಾಗ ಅವನನ್ನು ಹಿಡಿದ ನಗರರಕ್ಷಕರು ಉಂಗುರವನ್ನು ದುಷ್ಯಂತನಿಗೆ ಕೊಡುವರು. ಅದನ್ನು ನೋಡುತ್ತಲೇ ದುರ್ವಾಸನ ಶಾಪ ವಿಮೋಚನೆಯಾಗಿ, ಅರಸನಿಗೆ ಶಕುಂತಲೆಯ ನೆನಪೆಲ್ಲಾ ಮರುಕಳಿಸುತ್ತದೆ. ತನ್ನ ಅಪರಾಧಕ್ಕೆ ಪಶ್ಚಾತ್ತಾಪ ಪಡುತ್ತಿರುವಾಗ, ತನ್ನನ್ನು ಪೀಡಿಸುತ್ತಿರುವ ರಾಕ್ಷಸರ ವಿರುದ್ಧ ಯುದ್ಧದಲ್ಲಿ ಸಹಾಯವನ್ನು ಯಾಚಿಸಿ ಇಂದ್ರನಿಂದ ಕರೆಬರುತ್ತದೆ. ದುಷ್ಯಂತನು ಸ್ವರ್ಗಕ್ಕೆ ತೆರಳುತ್ತಾನೆ.
ಏಳನೆಯ ಅಂಕ
ಯುದ್ಧದಲ್ಲಿ ಜಯವನ್ನು ಪಡೆದು, ಇಂದ್ರನಿಂದ ವಿಶೇಷವಾಗಿ ಸನ್ಮಾನಿತನಾದ ದುಷ್ಯಂತನು ಸ್ವರ್ಗದಿಂದ ಭೂಮಿಗೆ ಮರಳುತ್ತಿರುವಾಗ ನಡುವೆ ಹೇಮಕೂಟ ಪರ್ವತದಲ್ಲಿರುವ ಮಾರೀಚಾಶ್ರಮದಲ್ಲಿ ನಿಲ್ಲುವನು. ಅವನನ್ನು ಕರೆತಂದ ಇಂದ್ರಸಾರಥಿಯಾದ ಮಾತಲಿಯು, ಮಾರೀಚ ಮುನಿಗಳ ಸಮಯವನ್ನು ತಿಳಿದು ಬರಲು ಹೋಗುವನು. ಅಲ್ಲಿಯೇ ಅಶೋಕವೃಕ್ಷವೊಂದರಡಿಯಲ್ಲಿ ವಿಶ್ರಮಿಸುತ್ತಿದ್ದ ರಾಜನು ಸಿಂಹದ ಮರಿಯೊಂದಿಗೆ ಆಟವಾಡುತ್ತಿರುವ ಬಾಲಕನನ್ನು ನೋಡುವನು. ಅರಸನಿಗೆ ಆ ಹುಡುಗನಲ್ಲಿ ಮಮತೆಯೂ ಕುತೂಹಲವೂ ಉಂಟಾಗುತ್ತದೆ. ಕ್ರಮೇಣ ಅವನು ತನ್ನ ಮಗನೆಂದು ಗೊತ್ತಾಗುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಶಕುಂತಲೆಯನ್ನೂ ಕಾಣುತ್ತಾನೆ. ಮಾರೀಚಮಹರ್ಷಿಗಳ ಸಮ್ಮುಖದಲ್ಲಿ ದುಷ್ಯಂತ ಶಕುಂತಲೆಯರ ಪುನಸ್ಸಮಾಗಮವಾಗುತ್ತದೆ.
ಈ ಅಭಿಪ್ರಾಯದ ಬಗ್ಗೆ ತೀ ನಂ ಶ್ರೀಕಂಠಯ್ಯನವರು ತಮ್ಮ 'ಕಾವ್ಯ ಸಮೀಕ್ಷೆ'ಯಲ್ಲಿ, ಪದ್ಮಪುರಾಣದ ಕಾಲವು ಅನಿಶ್ಚಿತವೆಂಬುದು ನಿಜವಾದರೂ, ಈ ಕಥೆ ಕಾಳಿದಾಸನಿಗೆ ಮಾತೃಕೆಯಾಗುವಷ್ಟು ಪ್ರಾಚೀನವಲ್ಲವೆಂದು ತೋರುತ್ತದೆ, ಎನ್ನುತ್ತಾರೆ.
ಕಾಳಿದಾಸನಿದ್ದ ಕಾಲವನ್ನು ಕುರಿತು ಇನ್ನೂ ಅನಿರ್ದಿಷ್ಟತೆಯಿರುವಾಗ ಈ ನಾಟಕವನ್ನು ಯಾವಾಗ ಬರೆದನೆಂದು ಹೇಳುವುದು ಕಷ್ಟ. ಈ ನಾಟಕವನ್ನು ಬರೆಯುವ ವೇಳೆಗೆ ಕವಿಗೆ ತನ್ನ ಶಕ್ತಿಯಲ್ಲಿ ಅಪಾರ ಆತ್ಮವಿಶ್ವಾಸವಿದ್ದು, ತನ್ನ ಬದುಕು ಧನ್ಯವಾಯಿತೆಂಬ ಭಾವನೆ ಮೂಡಿದೆ. ಇದರ ಫಲವಾಗಿ ಈ ಭವದಿಂದ ನನಗೆ ಬಿಡುಗಡೆಯಾಗಲಿ; ಮರುಹುಟ್ಟನು ನನಗೆ ಆ ಮಹೇಶನು ಕರುಣಿಸದಿರಲಿ, ಎಂದು ಪ್ರಾರ್ಥಿಸುತ್ತಾ ನಾಟಕವನ್ನು ಕವಿಯು ಮುಗಿಸುತ್ತಾನೆ. ಬದುಕಿನಲ್ಲಿ ಕೃತಕೃತ್ಯನಾದವನು ಆಡುವ ಭರತವಾಕ್ಯವಿದು, ಎನ್ನುತ್ತಾರೆ ವಿಮರ್ಶಕರು[೪]. ಆದ್ದರಿಂದ ‘ಅಭಿಜ್ಞಾನ ಶಾಕುಂತಲ’ ವನ್ನು ಕಾಳಿದಾಸನ ಕೊನೆಯ ಕೃತಿಯೆಂದು ಪರಿಗಣಿಸಬಹುದು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.