From Wikipedia, the free encyclopedia
ಅಂತರಿಕ್ಷ ಲೆಕ್ಕಾಚಾರದಲ್ಲಿನ ವರ್ಷದೊಂದಿಗೆ ಸಾಮ್ಯತೆ ಕಾಪಾಡಿಕೊಳ್ಳಲು ಒಂದು ದಿನ/ವಾರ/ತಿಂಗಳನ್ನು ಹೆಚ್ಚು ಹೊಂದಿರುವ ಪಂಚಾಂಗದ (ಕ್ಯಾಲೆಂಡರ್) ವರ್ಷವನ್ನು ಅಧಿಕವರ್ಷ ಎನ್ನುವರು. ಸಾಮಾನ್ಯವಾಗಿ ಅಧಿಕವರ್ಷದಲ್ಲಿ ಒಂದು ದಿನ ಹೆಚ್ಚಿರುತ್ತದೆ. ಉದಾಹರಣೆ: ಅಧಿಕವರ್ಷದಲ್ಲಿನ ಫೆಬ್ರುವರಿ ತಿಂಗಳಿನಲ್ಲಿ ೨೮ ದಿನಗಳ ಬದಲಿಗೆ ೨೯ ದಿನಗಳು ಬರುತ್ತದೆ. ಅಧಿಕವರ್ಷವಲ್ಲದ ವರ್ಷವನ್ನು ಸಾಮಾನ್ಯ ವರ್ಷ ಎನ್ನುವರು. ಉದಾಹರಣೆಗೆ ಫೆಬ್ರುವರಿ ತಿಂಗಳಲ್ಲಿ ಕೇವಲ ೨೮ರ ಬದಲಿಗೆ ೨೯ ದಿನಗಳಿರುತ್ತವೆ. ಋತುಗಳು ಮತ್ತು ಖಗೋಳಘಟನೆಗಳು ನಿಶ್ಚಿತ ದಿನಗಳ ನಂತರ ಪುನರಾವೃತ್ತಿಯಾಗದೆ ಪ್ರತಿವರುಷದಲ್ಲಿ ಅಷ್ಟೇ ದಿನಗಳುಳ್ಳ ಪಂಚಾಗವು ತಾನು ತೋರಿಸಬೇಕಾದ ಖಗೋಳ ಘಟನೆಯ ವಿಷಯದಲ್ಲಿ ಕ್ರಮೇಣವಾಗಿ ಲೆಕ್ಕತಪ್ಪುತ್ತದೆ. ಆಗಾಗ್ಗೆ ಒಂದು ಅಧಿಕದಿನ ಅಥವಾ ತಿಂಗಳನ್ನು (ನಿಯಮಿತವಾಗಿ) ಆ ವರ್ಷಕ್ಕೆ ಸೇರಿಸುವ ಮೂಲಕ ,ಅನಿಯಮಿತತೆಯನ್ನು ಸರಿಪಡಿಸಬಹುದು.ಅಧಿಕವರ್ಷವಲ್ಲದ ವರ್ಷವನ್ನು ಸಾಮಾನ್ಯವರ್ಷವೆಂದು ಕರೆಯುತ್ತಾರೆ. (ಪಂಚಾಂಗವನ್ನು ಕಾಲಗಣನೆಯೊಂದಿಗೆ ಸಮೀಕರಣಗೊಳಿಸುವ) ಅಧಿಕವರ್ಷಗಳನ್ನು (ಅಂದಂದಿನ ಗಡಿಯಾರದ ಸಮಯಕ್ಕೆ ಸಮಕಾಲಿಕಗೊಳಿಸುವ) ಅಧಿಕಸೆಕೆಂಡ್ನೊಂದಿಗೆ ಗೊಂದಲಿಸಿಕೊಳ್ಳಬಾರದು.
ಪ್ರಪಂಚದ ಬಹುತೇಕ ರಾಷ್ತ್ರಗಳಲ್ಲಿ ಚಾಲ್ತಿಯಲ್ಲಿರುವ ಗ್ರೆಗೋರಿಯನ್ ಕ್ಯಾಲೆಂಡರ್, ಆ ಒಂದು ಹೆಚ್ಚಿನ ದಿನವನ್ನು ನಾಲ್ಕರಿಂದ ಸಮವಾಗಿ ಭಾಗಿಸಲ್ಪಡುವ ವರ್ಷಗಳಲ್ಲಿ ಬರುವ ಫೆಬ್ರುವರಿ ತಿಂಗಳಿಗೆ ಸೇರಿಸುತ್ತದೆ. ಆದರೆ ಶತಮಾನದವರ್ಷಗಳೆಲ್ಲವೂ (ಅಂದರೆ -೦೦ಯಿಂದ ಕೊನೆಯಾಗುವ) ನಾಲ್ಕರಿಂದ ಭಾಜ್ಯವಾಗುವುದಾದರೂ ಸಹ,ಅವು ೪೦೦ರಿಂದ ಭಾಗಿಸಲ್ಪಟ್ಟಾಗ ಮಾತ್ರ ಅವುಗಳಲ್ಲಿ ಅಧಿಕದಿನಗಳನ್ನು ಸೇರಿಸಲಾಗುತ್ತದೆ.ಹೀಗಾಗಿ ೧೬೦೦ ,೨೦೦೦ ಮತ್ತು ೨೪೦೦ ಅಧಿಕವರ್ಷಗಳೆನಿಸಿಕೊಂಡರೆ,೧೭೦೦,೧೮೦೦,೧೯೦೦ ಹಾಗೂ ೨೧೦೦ ವರ್ಷಗಳು ಅಧಿಕವರ್ಷಗಳಾಗುವುದಿಲ್ಲ.
ಈ ನಿಯಮದ ಹಿಂದೆ ಇರುವ ಕಾರಣ ಹೀಗಿದೆ:
ಈ ಅಲ್ಪ ವ್ಯತ್ಯಾಸವಾದ ೦.೦೦೦೧ ದಿನಗಳು,ಅಂದರೆ ಅಂದಾಜು ೮೦೦೦ ವರ್ಷಗಳಲ್ಲಿ,ಪಂಚಾಂಗವು ಅದು ಇರಬೇಕಾದುದಕ್ಕಿಂತ ಒಂದು ದಿನ ಹಿಂದೆ ಇರುತ್ತದೆ.ಆದರೆ ೮೦೦೦ ವರ್ಷಗಳಲ್ಲಿ ವಿಷುವತ್ಸಂಕ್ರಾಂತಿ (Vernal Equinox-ವಸಂತದ ಹಗಲು-ರಾತ್ರಿ ಸಮನಾದ) ವರ್ಷದಲ್ಲಿ ಎಷ್ಟು ಕಾಲ ವ್ಯತ್ಯಾಸವಾಗಿರಬಹುದೆಂಬುದನ್ನು ಕರಾರುವಾಕ್ಕಾಗಿ ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಗ್ರೆಗೋರಿಯನ್ ಅಧಿಕವರ್ಷದ ನಿಯಮವೇ ಸಾಕಷ್ಟು ಉಪಯುಕ್ತವಾದ ಕೆಲಸವನ್ನು ಮಾಡುತ್ತದೆ.
ಇನ್ನೂ ನಿಷ್ಕೃಷ್ಟವಾದ ಗಣನೆಗಾಗಿ,ಪ್ರತಿ ೪ ವರ್ಷಗಳಿಗೊಂದು ಅಧಿಕವರ್ಷದ ಬದಲು ಪ್ರತಿ ೪೦೦ ವರ್ಷಗಳಲ್ಲಿ ೯೭ ಅಧಿಕದಿನವಿರುವ ವರ್ಷಗಳನ್ನು ನಿರ್ಧರಿಸಲಾಯಿತು.ಈ ಮಾದರಿಯನ್ನು ಅನುಷ್ಠಾನಕ್ಕೆ ತರಲು,"೧೦೦ರಿಂದ ಭಾಗಿಸಲ್ಪಡುವ ವರ್ಷಗಳೆಲ್ಲವೂ ೪೦೦ರಿಂದಲೂ ಭಾಗಿಸಲ್ಪಟ್ಟಾಗ ಮಾತ್ರ ಅಧಿಕವರ್ಷಗಳೆನಿಸಿಕೊಳ್ಳುತ್ತವೆ" ಎಂಬ ನಿಯಮವನ್ನು ವಿಧಿಸಲಾಯಿತು.ಹೀಗಾಗಿ ಕಳೆದ ಸಹಸ್ರಮಾನದಲ್ಲಿ ೧೬೦೦ ಮತ್ತು ೨೦೦೦ ಅಧಿಕವರ್ಷಗಳಾದರೆ,೧೭೦೦,೧೮೦೦,೧೯೦೦ ಅಧಿಕವರ್ಷಗಳಲ್ಲ.ಈ ಸಹಸ್ರಮಾನದಲ್ಲಿ ೨೪೦೦ ನ್ನು ಬಿಟ್ಟರೆ ೨೧೦೦,೨೨೦೦,೨೩೦೦ ಮತ್ತು ೨೫೦೦ ಇವ್ಯಾವೂ ಅಧಿಕವರ್ಷಗಳಲ್ಲ.೧೦೦ರಿಂದ ಭಾಗಿಸಲ್ಪಟ್ಟು,೪೦೦ರಿಂದ ಭಾಗಿತವಾಗದ ವರ್ಷಗಳು "ಅಸಾಧಾರಣ ಸಾಮಾನ್ಯ ವರ್ಷ"ಗಳೆಂದು ಗುರುತಿಸಲ್ಪಟ್ಟಿವೆ.ಈ ಗಣನೆಗೆ ಉಪಯೋಗಿಸಿದ ಗಣಿತದ ಸೂತ್ರವನ್ನು " ಝೆಲ್ಲರ್'ಸ್ ಕಾಂಗ್ರುಯೆನ್ಸ್"(Zeller's Congruence) ಎಂದು ಕರೆಯುತ್ತಾರೆ.ಒಂದು ನಿಶ್ಚಿತ ದಿನಾಂಕ ಯಾವ ವಾರದಂದು ಬೀಳುತ್ತದೆ ಎಂಬುದನ್ನು ತಿಳಿಯಲೂ ಸಹ ಈ ಸೂತ್ರವನ್ನು ಉಪಯೋಗಿಸುತ್ತಾರೆ.
ಗ್ರೆಗೋರಿಯನ್ ಕ್ಯಾಲೆಂಡರ್ ಮೊದಲು ರೋಮನ್ನರು ಉಪಯೋಗಿಸುತ್ತಿದ್ದ ಜೂಲಿಯನ್ ಕ್ಯಾಲೆಂಡರ್ನ ಮಾರ್ಪಡಿತ ರೂಪ.ರೋಮನ್ ಕ್ಯಾಲೆಂಡರ್, ಚಾಂದ್ರಮಾನ ಪಂಚಾಂಗವಾಗಿ ಜನ್ಮ ತಾಳಿತಾದರೂ,ಕ್ರಿ.ಪೂ.೫ನೇ ಶತಮಾನದಿಂದ ನಿಜವಾದ ಚಂದ್ರನನ್ನು ಅನುಸರಿಸದೆ,ಚಂದ್ರನ ಮೂರು ಮಜಲುಗಳನ್ನು ಅನುಸರಿಸಿ ತನ್ನ ದಿನಗಳಿಗೆ ಹೆಸರು ನೀಡಿತು: ಹೊಸ ಚಂದ್ರ(ಕ್ಯಾಲೆಂಡ್ಸ್ ನಿಂದ ವ್ಯುತ್ಪತ್ತಿಯಾದ ಕಾರಣ ಕ್ಯಾಲೆಂಡರ್),ಮೊದಲ ಕಾಲು ತಿಂಗಳು(ನೋನ್ಸ್ nonesಅಂದರೆ ಮಾರ್ಚ್,ಮೇ,ಜುಲೈ,ಅಕ್ಟೋಬರ್ ತಿಂಗಳ ೭ನೇ ತಾರೀಖು,ಉಳಿದ ತಿಂಗಳ ೫ನೇ ತಾರೀಖು) ಮತ್ತು ಪೂರ್ಣ ಚಂದ್ರ(ಐಡ್ಸ್ ides ಅಂದರೆ ಮಾರ್ಚ್,ಮೇ,ಜುಲೈ,ಅಕ್ಟೋಬರ್ ತಿಂಗಳ ೧೫ನೇ ತಾರೀಖು,ಉಳಿದ ತಿಂಗಳ ೧೩ನೇ ತಾರೀಖು). ದಿನಗಳನ್ನು ಮುಂದಿನ ಹೆಸರಿಸಿದ ದಿನಗಳವರೆಗೆ ಎಲ್ಲವನ್ನೂ ಸೇರಿಸಿ(ವ್ಯಾಪಕವಾಗಿ ಒಳಗೊಂಡಂತೆ) ಗಣನೆ ಮಾಡತೊಡಗಿದುದರಿಂದ ,೨೪ ಫೆಬ್ರುವರಿ ದಿನಾಂಕವನ್ನು( ಮಾರ್ಚ್ ಕ್ಯಾಲೆಂಡ್ಸ್ನ ಹಿಂದಿನ ೬ನೇ ದಿನ)ವೆಂದು ಪರಿಗಣಿಸಲಾಯಿತು(ante diem sextum calendas martii)
ಕ್ರಿ.ಪೂ.೪೫ರಿಂದ ಅಧಿಕವರ್ಷದ ಫೆಬ್ರುವರಿ ತಿಂಗಳಿನಲ್ಲಿ "ಮಾರ್ಚ್ ಕ್ಯಾಲೆಂಡ್ಸ್ನ ಹಿಂದಿನ ೬ನೇ ದಿನ"(ಅಂದರೆ ೨೪ನೇ ದಿನಾಂಕ)ವೆಂದು ಪರಿಗಣಿತವಾದ ಎರಡು ದಿನಗಳಿರುತ್ತಿದ್ದವು.ಈ ಅಧಿಕ ದಿನ ಮೊದಲು ಎರಡನೇ ದಿನವಾಗಿದ್ದರೂ, ನಂತರದಲ್ಲಿ ೩ನೇ ಶತಮಾನದಿಂದ ಅದೇ ಮೊದಲ ದಿನವೆಂದು ಪರಿಗಣಿಸಲ್ಪಟ್ಟಿತು.ಹೀಗಾಗಿ ಫೆಬ್ರುವರಿ ೨೪ನೇ ದಿನಾಂಕಕ್ಕೆ ದಿನಾಧಿಕ ವರ್ಷ(bissextile year)ದ ಅಧಿಕದಿನ(bissextile day) ವೆಂಬ ಪರಿಭಾಷೆ ಬಳಕೆಗೆ ಬಂದಿತು. ಈ ಪದ್ಧತಿ ಅನುಸರಿಸಿದ ಕಡೆಯಲ್ಲೆಲ್ಲಾ,ವಾರ್ಷಿಕೋತ್ಸವಗಳನ್ನು ಅಧಿಕವರ್ಷದಲ್ಲಿ ಬರುವ ಒಳಸೇರಿಸಿದ ಅಧಿಕದಿನದ ನಂತರಕ್ಕೆ ಮುಂದೂಡಲಾಯಿತು.ಉದಾಹರಣೆಗೆ,ಸಂತ ಮಥಿಯಾಸ್ನ ಮುನ್ನಾದಿನದ ಹಬ್ಬದ ದಿನವು ಸಾಮಾನ್ಯ ವರ್ಷಗಳಲ್ಲಿ ಫೆಬ್ರುವರಿ ೨೪ ಆಗಿದ್ದರೆ,ಅಧಿಕ ವರ್ಷದಲ್ಲಿ ಅದು ಫೆಬ್ರುವರಿ ೨೫ ಆಗುತ್ತಿತ್ತು.
ಜೂಲಿಯನ್ ಕ್ಯಾಲೆಂಡರ್ ನಲ್ಲಿ ೪ರಿಂದ ಭಾಗವಾಗುವ ವರ್ಷಗಳ ಫೆಬ್ರವರಿ ತಿಂಗಳಿಗೆ ಒಂದು ಅಧಿಕ ದಿನವನ್ನು ಸೇರಿಸಲಾಗುತ್ತದೆ. ಈ ನಿಯಮವು ಒಂದು ಸಾಮಾನ್ಯ ವರ್ಷಕ್ಕೆ ೩೬೫.೨೫ ದಿನಗಳನ್ನು ಕೊಡುತ್ತದೆ. ವಿಷುವತ್ ಸಂಕ್ರಾಂತಿ ವರ್ಷದ (Vernal Equinox) ಅಂದಾಜು ೦.೦೦೭೬ ದಿನಗಳ ಹೆಚ್ಚಳವೆಂದರೆ, ಪ್ರತಿ ೧೩೦ ವರ್ಷಗಳಿಗೊಮ್ಮೆ ಈ ವಿಷುವತ್ ಸಂಕ್ರಾಂತಿಯ ದಿನ ಒಂದು ದಿನ ಮುಂಚಿತವಾಗಿಯೇ ಕ್ಯಾಲೆಂಡರ್ನಲ್ಲಿ ಬರುತ್ತದೆಯೆಂದು ಅರ್ಥವಾಗುತ್ತದೆ
ಪರಿಷ್ಕೃತ ಜೂಲಿಯನ ಕ್ಯಾಲೆಂಡರ್೪ ರಿಂದ ವಿಭಜಿತವಾಗುವ ವರ್ಷಗಳ , ಆದರೆ ೧೦೦ ರಿಂದ ವಿಭಜಿತವಾಗಿ ,೯೦೦ ರಿಂದ ಭಾಗಿಸಿದಾಗ ೨೦೦ ಅಥವಾ ೬೦೦ ಶೇಷ ಉಳಿಯದೆ ಇರುವ ವರ್ಷಗಳನ್ನು ಹೊರತುಪಡಿಸಿ ,ಉಳಿದ ವರ್ಷಗಳ ಫೆಬ್ರುವರಿ ತಿಂಗಳಿಗೆ ಒಂದು ಅಧಿಕ ದಿನವನ್ನು ಸೇರಿಸುತ್ತದೆ.ಈ ನಿಯಮ ೨೭೯೯ರವರೆಗೆ ಗ್ರೆಗೋರಿಯನ್ ಕ್ಯಾಲೆಂಡರ್ನ ನಿಯಮದೊಂದಿಗೆ ಹೊಂದಿಕೆಯಾಗಿತ್ತು.ಪರಿಷ್ಕೃತ ಜೂಲಿಯನ್ ಕ್ಯಾಲೆಂಡರ್ನೊಂದಿಗೆ ಹೊಂದಿಕೆಯಾಗದ ಗ್ರೆಗೋರಿಯನ್ ಕ್ಯಾಲೆಂಡರ್ನ ಮೊದಲ ವರ್ಷವೆಂದರೆ ೨೮೦೦.ಏಕೆಂದರೆ ೨೮೦೦ ಗ್ರೆಗೋರಿಯನ್ ಕ್ಯಾಲೆಂದರ್ನಲ್ಲಿ ಅಧಿಕ ವರ್ಷವಾಗಿತ್ತು ,ಆದರೆ ಪರಿಷ್ಕೃತ ಜೂಲಿಯನ್ ಕ್ಯಾಲೆಂಡರ್ನಲ್ಲಿ ಅಧಿಕ ವರ್ಷವಾಗಿರಲಿಲ್ಲ.
೫ನೆಯ ಶತಮಾನ ದ ಐರ್ಲೆಂಡ್ ನ ಸಂತ ಪ್ಯಾಟ್ರಿಕ್ ಮತ್ತು ಸಾಧ್ವಿ ಬ್ರಿಜೆಟ್ ಕಾಲದಷ್ಟು ಹಳೆಯದಾದ ಒಂದು ಸಂಪ್ರದಾಯ ದ ಪ್ರಕಾರ ಮಹಿಳೆಯರು ಪುರುಷರಿಗೆ ಅಧಿಕ ವರ್ಷದಲ್ಲಷ್ಟೆ ವಿವಾಹ ಪ್ರಸ್ತಾಪ ಮಾಡಬಹುದಾಗಿತ್ತು.
ಸ್ಕಾಟ್ಲೆಂಡ್ ನ ೧೨೮೮ ರ ಒಂದು ಕಾನೂನಿನ ಪ್ರಕಾರ ಇಂಥ ಪ್ರಸ್ತಾಪವನ್ನು ಪುರುಷನು ನಿರಾಕರಿಸಿದಲ್ಲಿ ದಂಡ ವಿಧಿಸಬಹುದಾಗಿತ್ತು. ಈ ದಂಡವು ಚುಂಬನದಿಂದ ಹಿಡಿದು ರೇಷ್ಮೆ ವಸ್ತ್ರ ಕೂಡ ಆಗಬಹುದಾಗಿತ್ತು. ಪುರುಷರಿಗೆ ಇದರಿಂದ ಅಪಾಯ ಎದುರಾಗಬಹುದು ಎಂಬ ಹೆದರಿಕೆಯಿಂದ ಈ ಸಂಪ್ರದಾಯ ಕಡಿಮೆಗೊಳಿಸಲಾಯಿತು.
ಫೆಬ್ರವರಿ ೨೯ ಯಂದು ಹುಟ್ಟಿದವರಿಗೆ "leapling" ಎಂದು ಕರೆಯಬಹುದು. ಸಾಮಾನ್ಯವಾಗಿ ಇವರು ತಮ್ಮ ಹುಟ್ಟುಹಬ್ಬವನ್ನು ಫೆಬ್ರವರಿ ೨೮ ಅಥವಾ ಮಾರ್ಚ್ ೧ ರಂದು ಆಚರಿಸುತ್ತಾರೆ. ಅಧಿಕ ವರ್ಷದ ಹುಟ್ಟುಹಬ್ಬವನ್ನು ಆಧಾರವಾಗಿಟ್ಟುಕೊಂಡು ತಮ್ಮ ವಯಸ್ಸನ್ನು ಇರುವುದಕ್ಕಿಂತ ಕಾಲುಭಾಗದಷ್ಟು ಹೇಳಿಕೊಳ್ಳುವುದನ್ನು ಮಕ್ಕಳ ಸಾಹಿತ್ಯದಲ್ಲಿ ಬಹಳ ಸಂದರ್ಭಗಳಲ್ಲಿ ಕಾಣಬಹುದು.
Seamless Wikipedia browsing. On steroids.