ಅಹಿಂಸಾತ್ಮಕ ವಿಧಾನಗಳ ಮೂಲಕ ಭಾರತದಲ್ಲಿ ಬ್ರಿಟಿಷ್ ಆಡಳಿತದ ಪ್ರತಿರೋಧ From Wikipedia, the free encyclopedia
ಅಸಹಕಾರ ಚಳುವಳಿಯು ಭಾರತದ ಪ್ರಥಮ ದೇಶಾದ್ಯಂತ ಜನರ ಅಹಿಂಸಾತ್ಮಕ ಚಳುವಳಿಯಾಗಿದ್ದು ಇದನ್ನು ಮಹಾತ್ಮಾ ಗಾಂಧಿಯವರ ಮುಂದಾಳತ್ವದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಏರ್ಪಡಿಸಿತ್ತು. ಈ ಚಳುವಳಿಯಿಂದ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಯುಗದ ಪ್ರಾರಂಭವಾಯಿತು.
ಈ ಚಳುವಳಿ ೪ ಸೆಪ್ಟೆಂಬರ್ 1920ರಂದು ಪ್ರಾರಂಭವಾಯಿತು.
ರೌಲತ್ ಕಾಯ್ದೆಗಳು ಭಾರತೀಯರ ಮೇಲೆ ಬ್ರಿಟಿಷರಿಗೆ ಪರಮಾಧಿಕಾರ ಕೊಟ್ಟಿದ್ದವು. ಪೊಲೀಸರು ಮತ್ತು ಸೈನಿಕರು ಲವಲೇಶದ ಸಾಕ್ಷಿ-ಪುರಾವೆಗಳಿಲ್ಲದೇ ಸಾರ್ವಜನಿಕರನ್ನು ಶೋಧಿಸುವ, ಅವರ ಆಸ್ತಿಯನ್ನು ಜಫ್ತು ಮಾಡುವ, ಮತ್ತು ಅಂತಹವರನ್ನು ಬಂಧಿಸುವ ಅಧಿಕಾರವನ್ನು ಹೊಂದಿದ್ದರು. ಈ ಕಾಯ್ದೆಗಳು ಬ್ರಿಟಿಷ್ ಸಂಸತ್ತಿನಿಂದ ಹೊರಟು ಏಪ್ರಿಲ್ ೬, ೧೯೧೯ರಂದು ಚಾಲ್ತಿಗೆ ಬರಬೇಕಿತ್ತು. ಇದರ ಜೊತೆ, ಮೊದಲನೇ ಮಹಾಯುದ್ಧಕ್ಕೆ ಭಾರತೀಯರನ್ನು ಮಾತುಕತೆಗೆ ಕರೆಯದೆ ಭಾರತದ ಸೈನಿಕರನ್ನು ಬಳಸಿದ್ದು ಅವರನ್ನು ಉದ್ರೇಕಿಸಿತ್ತು. ಕಾಂಗ್ರೆಸ್ಸಿನ ಸೌಮ್ಯವಾದಿ ನಾಯಕರಾದ ಮುಹಮ್ಮದ್ ಅಲಿ ಜಿನ್ನಾ, ಅನ್ನಿ ಬೆಸೆಂಟ್, ಬಾಲ ಗಂಗಾಧರ ತಿಲಕ್, ಮತ್ತು ಗೋಪಾಲ ಕೃಷ್ಣ ಗೋಖಲೆಯವರ ಸ್ವರಾಜ್ಯದ ಕೂಗಿನ ಜೊತೆ ನಾಮಮಾತ್ರದ ಪ್ರತಿರೋಧ ಕೇಳಿಬಂದಿತ್ತು. ಇದರಿಂದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಹೇಳಿಕೊಳ್ಳುವಂತಹ ಧಕ್ಕೆ ಉಂಟಾಗಲಿಲ್ಲ. ಹೀಗಿದ್ದಾಗಿಯೂ ಸಹ ಬ್ರಿಟಿಷರು ಲಷ್ಕರಿ ಶಾಸನದಂತಹ ಸ್ಥಿತಿಯನ್ನು ಸೃಷ್ಟಿಸಿದರು.
ಮಹಾತ್ಮಾ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಹಾಗೂ ನಂತರ ೧೯೧೮ರಲ್ಲಿ ಚಂಪಾರಣ್ (ಬಿಹಾರ) ಮತ್ತು ಖೇಡಾ (ಗುಜರಾತ್)ಗಳಲ್ಲಿ ಗೌರವ ಸಂಪಾದಿಸುವ ಒಂದೇ ಮಾರ್ಗವೆಂದರೆ ಕಾನೂನು ಭಂಗದ ಮೂಲಕ ಸರ್ಕಾರಕ್ಕೆ ಸವಿನಯ ವಿರೋಧ ತೋರಿಸುವುದು ಎಂದು ತೋರಿಸಿಕೊಟ್ಟಿದ್ದರು. ಚಂಪಾರಣ ಮತ್ತು ಖೇಡಾಗಳ ಶೋಷಿತ ರೈತರನ್ನು ಒಗ್ಗೂಡಿಸಿ, ಸಂಘಟಿತ ಕಾರ್ಯಕರ್ತರ ಸಹಾಯದಿಂದ ರೈತರ ಶೋಷಣೆಗಳ ಬಗ್ಗೆ ವಿವರವಾದ ವರದಿಯನ್ನು ತಯಾರು ಮಾಡಿದರು. ಇದರಿಂದ ಜನರು ತೆರಿಗೆ ಕೊಡುವುದನ್ನು ಬಿಟ್ಟು ವಿರೋಧ ಪ್ರದರ್ಶನಗಳನ್ನು ಏರ್ಪಡಿಸಿದರು. ಈ ಪ್ರದರ್ಶನಕಾರರನ್ನು ಮತ್ತು ಸ್ವತಃ ಗಾಂಧಿಯವರನ್ನು ಬಂಧಿಸಿದಾಗ ಬಿಹಾರ ಮತ್ತು ಗುಜರಾತ್ ಪ್ರಾಂತ್ಯಗಳಲ್ಲಿ ಸಾವಿರಾರು ಜನರು ವಿರೋಧ ಪ್ರದರ್ಶನಗಳನ್ನೇರ್ಪಡಿಸಿದಾಗ ಗಾಂಧಿಯವರನ್ನು ಬಿಡುಗಡೆ ಮಾಡಲಾಯಿತು. ಇದರ ನಂತರ ಈ ಎರಡು ಪ್ರಾಂತ್ಯದ ಸರ್ಕಾರಗಳು ಒಪ್ಪಂದಗಳಿಗೆ ಸಹಿ ಮಾಡಿ ಬರಗಾಲದಲ್ಲಿಯೂ ಹಾಕುತ್ತಿದ್ದ ತೆರಿಗೆಗಳನ್ನು ಹಿಂತೆಗೆದುಕೊಂಡು ಎಲ್ಲ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡಿ ಜಫ್ತಿ ಮಾಡಿದ ಭೂಮಿ ಮತ್ತು ಆಸ್ತಿಗಳನ್ನು ವಾಪಾಸು ಮಾಡಬೇಕಾಯಿತು. ಅಮೆರಿಕಾದ ಕ್ರಾಂತಿಯ ನಂತರ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಯಾರಾದರೂ ಗೆದ್ದಿದ್ದು ಇದೇ ಮೊದಲು. ಗಾಂಧೀಜಿಯವರಿಗೆ ಭಾರತದ ಯುವ ನಾಯಕರಾದ ರಾಜೇಂದ್ರ ಪ್ರಸಾದ್ ಮತ್ತು ಜವಾಹರಲಾಲ್ ನೆಹರು ಅವರ ಬೆಂಬಲವಿದ್ದಿತು. ಖೇಡಾದಲ್ಲಿ ಇಡೀ ದಂಗೆಯ ನಾಯಕತ್ವವನ್ನು ಸರ್ದಾರ್ ಪಟೇಲ್ ಅವರು ವಹಿಸಿಕೊಂಡು ಗಾಂಧೀಜಿಯವರ ಬಲಗೈ ಆದರು.
ಬ್ರಿಟಿಷ್ ಸರ್ಕಾರ ಟರ್ಕಿ ದೇಶದ ಮುಸ್ತಫಾ ಕಮಾಲ್‍ಗೆ ಟರ್ಕಿಯ ಸುಲ್ತಾನನನ್ನು ಮೆಟ್ಟಿ ಹಾಕಲು ನೀಡಿದ ಬೆಂಬಲಕ್ಕಾಗಿ ಭಾರತದ ಲಕ್ಷಾಂತರ ಮುಸ್ಲಿಮರು ವಿರೋಧಿಸಿದರು. ಮುಸ್ಲಿಮ್ ನಾಯಕರು ಸರ್ಕಾರದ ಈ ದುಷ್ಕಾರ್ಯವನ್ನು ವಿರೋಧಿಸಲು ಖಿಲಾಫತ್ ಸಮಿತಿಯನ್ನು ರಚಿಸಿದರು.
ಪಂಜಾಬಿನ ಅಮೃತಸರದ ಜಲಿಯನ್‌ವಾಲಾ ಬಾಗ್ ಎಂಬಲ್ಲಿ ಶಸ್ತ್ರರಹಿತರಾಗಿ ಶಾಂತ ರೀತಿಯಲ್ಲಿ ವಿರೋಧಿಸುತ್ತಿದ್ದ ಸಾವಿರಾರು ಜನರನ್ನು ರೆಜಿನಾಲ್ಡ್ ಡಯರ್ ಎಂಬ ಬ್ರಿಟಿಷ್ ಸೈನ್ಯಾಧಿಕಾರಿ ಗುಂಡಿಟ್ಟು ಕೊಲ್ಲಲು ಸೈನಿಕರಿಗೆ ಆಜ್ಞೆ ಮಾಡಿದನು. ಸಾವಿರಾರು ಮಂದಿ ಸ್ಥಳದಲ್ಲೇ ಪ್ರಾಣತ್ಯಾಗ ಮಾಡಿದರು.[1][2] ಮಕ್ಕಳು-ಮಹಿಳೆಯರು-ವೃದ್ಧರನ್ನೂ ಬಿಡಲಿಲ್ಲ. ಪಂಜಾಬಿನಲ್ಲಿ ವಿರೋಧಿಸಿದವರನ್ನೆಲ್ಲ ಬಂಧಿಸಿ, ಶೋಷಿಸಿ, ಕೊಲ್ಲಲಾಯಿತು. ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ಭಾರತದಲ್ಲಿ ಬ್ರಿಟಿಷ್ ಅಧಿಪತ್ಯದ ಅತಿ ಕರಾಳ ಅಧ್ಯಾಯವಾಯಿತು. ಬ್ರಿಟಿಷರ ವಿರುದ್ಧ ಸಂಘರ್ಷಕ್ಕಿಳಿಯಲು ಕಾಲ ದೂರವಿರಲಿಲ್ಲ.
ಗಾಂಧಿಯವರ ಉದ್ದೇಶ ರಾಷ್ಟ್ರದಾದ್ಯಂತ ರೌಲತ್ ಕಾಯ್ದೆಗಳ ವಿರುದ್ಧ ಪ್ರದರ್ಶನ ಮಾಡುವುದಾಗಿತ್ತು. ಎಲ್ಲ ಕಛೇರಿಗಳು ಮತ್ತು ಕಾರ್ಖಾನೆಗಳು ಮುಚ್ಚಬೇಕು, ಬ್ರಿಟಿಷರ ಪೊಲೀಸ್ ಇಲಾಖೆ, ಸೇನೆ ಮತ್ತು ನಾಗರಿಕ ಸೇವೆಗಳಿಂದ ಮತ್ತು ಮಕ್ಕಳನ್ನು ಶಾಲೆಗಳಿಂದ ಹಿಂತೆಗೆಯಬೇಕು ಎಂಬ ಯೋಜನೆ ಹೊರಡಿಸಿದರು.[3] ಅವರ ಇರಾದೆ ಕರ ವಿರೋಧ ಮಾಡುವುದಾಗಲೀ, ಶೀಘ್ರ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸುವುದಾಗಲೀ, ಅಥವಾ ಹಿಂಸೆ ಮತ್ತು ಶಕ್ತಿ ಪ್ರದರ್ಶನ ಮಾಡುವುದಾಗಲೀ ಅಗಿರಲಿಲ್ಲ. ಪ್ರತಿ ಪ್ರದರ್ಶಕನೂ ಬಂಧಿತನಾಗಬೇಕು ಹಾಗೂ ಪೊಲೀಸರು ಹೊಡೆದರೆ ಹೊಡೆತ ಸಹಿಸಬೇಕೆ ಹೊರತು ತಿರುಗಿ ಹೊಡೆಯಬಾರದೆಂದು ಹಾಗೂ ಹಿಂದೂ-ಮುಸ್ಲಿಮ್ ಏಕತೆ ಕಾಪಾಡಬೇಕೆಂದು ಬಯಸಿದ್ದರು.
ಗಾಂಧೀಜಿಯವರ ಈ ಯೋಜನೆಗಳನ್ನು ಹಿರಿಯ ಕಾಂಗ್ರೆಸ್ ನಾಯಕರು ತೀವ್ರವಾಗಿ ವಿರೋಧಿಸಿದರು. ಮುಸ್ಲಿಮ್ ಲೀಗ್ ಕೂಡ ಪ್ರತಿಭಟಿಸಿತು. ಆದರೆ ಭಾರತದ ಯುವ ಪೀಳಿಗೆ ಗಾಂಧಿಯವರ ಉದ್ದೇಶದಿಂದ ರೋಮಾಂಚನಗೊಂಡು ಅವರಿಗೆ ಬೆಂಬಲ ಸೂಚಿಸಿತು.[4] ಇದರಿಂದ ಕಾಂಗ್ರೆಸ್ ಪಕ್ಷ ಮತ್ತು ಮುಸ್ಲಿಮ್ ಲೀಗ್ ತಮ್ಮ ವಿರೋಧ ಮರೆತು ಬೆಂಬಲ ಸೂಚಿಸಿದವು. ಗಾಂಧಿಯವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿ ೧೯೧೯ ಮತ್ತು ೧೯೨೦ರಲ್ಲಿ ಆರಿಸಲಾಯಿತು.
ಈ ಚಳುವಳಿಯ ಹಠಾತ್ ಯಶಸ್ಸು ಬ್ರಿಟಿಷರಿಗೆ ಆಘಾತ ತಂದುಕೊಟ್ಟು ಲಕ್ಷಾಂತರ ಭಾರತೀಯರಿಗೆ ಸ್ಫೂರ್ತಿಯಾಯಿತು. ಬ್ರಿಟಿಷ್ ಸಂಸ್ಥೆಗಳ ಸಂಪೂರ್ಣ ಬಹಿಷ್ಕಾರವಾಯಿತು. ಗಾಂಧಿ ಸಹಿತ ಹಲವು ನಾಯಕರ ಬಂಧನವಾಯಿತು. ಬ್ರಿಟಿಷ್ ಸೈನ್ಯವು ಅಗತ್ಯ ಸೇವೆಗಳನ್ನು ಪೂರೈಸಬೇಕಾಯಿತು. ದೇಶಾದ್ಯಂತ ಲಕ್ಷಾಂತರ ಜನರನ್ನು ಬಂಧಿಸಲಾಯಿತಾದರೂ ವಿರೋಧ ಪ್ರದರ್ಶನವು ಹಳ್ಳಿ-ಹಳ್ಳಿಗಳಿಗೂ ವ್ಯಾಪಿಸಿತು. ಐರೋಪ್ಯ ಬಟ್ಟೆಗಳನ್ನು ಸುಡಲು ಸಾರ್ವಜನಿಕವಾಗಿ ಬೆಂಕಿ ಹಚ್ಚಲಾಯಿತು. ಆದರೆ ಪೊಲೀಸರ ಮತ್ತು ಸೈನ್ಯದ ದೌರ್ಜನ್ಯದಿಂದ ಸಾವಿರಾರು ಮಂದಿಗಳನ್ನು ಬಂಧಿಸಿ ಹಿಂಸಿಸಲಾಯಿತು ಮತ್ತು ನೂರಾರು ಮಂದಿ ಪ್ರಾಣ ತೆತ್ತರು.
ಮೂರು ವರ್ಷಗಳ ಕಾಲ ದಂಗೆಗಳು ಮುಂದುವರೆದವು. ಆದರೆ ೧೯೨೨ರಲ್ಲಿ ಚೌರಿ ಚೌರ ಎಂಬುವಲ್ಲಿ ೧೫ ಪೊಲೀಸರನ್ನು ಜನರ ಗುಂಪು ಸುತ್ತುವರೆದು ಸಾಯಿಸಿ ಪೊಲೀಸ್ ಠಾಣೆಯನ್ನು ಸುಟ್ಟುಹಾಕಲಾಯಿತು.[5] ಪೊಲೀಸರು ಇದರ ಹಿಂದೆ ಇಬ್ಬರು ಪ್ರದರ್ಶನಕಾರರನ್ನು ಹಿಂಸಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು. ಆದರೆ ಹತರಾದ ಎಲ್ಲ ಪೊಲೀಸರು ಭಾರತೀಯರೆ. ಗಾಂಧಿಯವರು ಚಳುವಳಿಯ ಉದ್ದೇಶ ಬದಲಾಗಿ ಹಿಂಸಾಚಾರಕ್ಕೆ ತಿರುಗುತ್ತಿರುವುದನ್ನು ಮನಗಂಡು ಅಸಹಕಾರ ಚಳುವಳಿಯನ್ನು ನಿಲ್ಲಿಸುವ ನಿರ್ಧಾರ ತಳೆದರು.[6] ಈ ಹಿಂಸಾಚಾರಕ್ಕೆ ತಮ್ಮನ್ನೇ ಹೊಣೆಗಾರರನ್ನಾಗಿ ಮಾಡಿಕೊಂಡರು.
ಗಾಂಧೀಜಿ ಈ ಹಿಂಸಾಚಾರವನ್ನು ತಡೆಯಲು ಆಮರಣಾಂತ ಉಪವಾಸ ಪ್ರಾರಂಭ ಮಾಡಿದರು. ನಿಧಾನವಾಗಿ ೨೧ ದಿನಗಳಲ್ಲಿ ಲಕ್ಷಾಂತರ ರಾಷ್ಟ್ರವಾದಿಗಳು ಸಂದಿಗ್ಧಗೊಂಡು ಗಾಂಧೀಜಿಯವರನ್ನು ಉಳಿಸಲು ಚಳುವಳಿಯನ್ನು ಕೈ ಬಿಟ್ಟರು. ಬಹಳಷ್ಟು ಕಾಂಗ್ರೆಸ್ ನಾಯಕರು ಇದರಿಂದ ನಿರಾಶೆ-ಆಕ್ರೋಶಗೊಂಡರೂ ಕೊನೆಗೆ ಒಪ್ಪಿ ಚಳುವಳಿಯನ್ನು ಸಮಾಪ್ತಿಗೊಳಿಸಿದರು.
ಈ ಸಮಯದಲ್ಲಿ ವಿಜಯಪುರ ಜಿಲ್ಲೆಯಲ್ಲಿ ನಡೆದ ʼಗಾಂಧಿ ಟೋಪಿ ಪ್ರಕರಣʼ ಗಾಂಧೀಜಿ ಗಮನ ಸೆಳೆದಿದ್ದಲ್ಲದೆ, ಅವರ ಯಂಗ್ ಇಂಡಿಯಾ ಹಾಗೂ ಬಾಲ ಗಂಗಾಧರ ತಿಲಕರ ಮರಾಠಿ ಪತ್ರಿಕೆ ಕೇಸರಿಯಲ್ಲೂ ಗಮನ ಸೆಳೆದಿತ್ತು.
ಜಿಲ್ಲೆಯ ಅಪ್ರತಿಮ ಸ್ವಾತಂತ್ರ್ಯದ ಹೋರಾಟಗಾರ ಕೌಜಲಗಿ ಹನುಂತರಾಯರು ಈ ಗಾಂಧಿ ಟೋಪಿ ಪ್ರಕರಣದ ಕಥಾ ನಾಯಕ. ಅಸಹಕಾರ ಚಳವಳಿಯಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನು, ವಕೀಲರು ನ್ಯಾಯಾಲಯಗಳನ್ನು ಬಹಿಷ್ಕರಿಸಿದರೆ, ಗಣ್ಯರು ಬ್ರಿಟಿಷರು ನೀಡಿದ್ದ ಪ್ರಶಸ್ತಿಗಳನ್ನು ಹಿಂದಿರುಗಿಸಿ ನಡೆಸಿದ ಅಹಿಂಸಾತ್ಮಕ, ಅಸಹಕಾರ ಹೋರಾಟ ಭಾರಿ ಸಂಚಲನವನ್ನು ಮೂಡಿಸಿತ್ತು. ಗಾಂಧಿ ಕರೆಗೆ ಪಂಡಿತ ಮೋತಿಲಾಲ ನೆಹರು, ಚಿತ್ತರಂಜನದಾಸ್, ಸಿ. ರಾಜಗೋಪಾಲಚಾರಿ ಮುಂತಾದ ನಾಯಕರು ವಕೀಲ ವೃತ್ತಿ ತ್ಯಜಿಸಿದಾಗ ವಿಜಾಪುರ (ವಿಜಯಪುರ) ಜಿಲ್ಲೆಗೂ ಅದರ ಬಿಸಿ ತಟ್ಟಿತು.
ಜಿಲ್ಲಾ ಕೇಂದ್ರವಾದ ವಿಜಾಪುರದಲ್ಲಿ ಜರುಗಿದ ಸಾರ್ವಜನಿಕ ಸಭೆಯಲ್ಲಿ ಜಯರಾವ್ ನರಗುಂದ, ಶ್ರೀನಿವಾಸರಾವ್ ಕೌಜಲಗಿ, ರಂಗರಾವ್ ತಿಳಿಗೂಳ, ಜನಾಬ್ ಜಾನವೇಕರರ್ ವಕೀಲ ವೃತ್ತಿಯನ್ನು ತ್ಯಜಿಸಿ ಅಸಹಕಾರ ಚಳವಳಿಯಲ್ಲಿ ತೊಡಗಿಸಿಕೊಂಡರು. ಇವರೊಂದಿಗೆ ಕಿರಸೂರು, ಕಟ್ಟಿ, ಬಾಳಾಚಾರ, ಕೆರೂರು ಮುಂತಾದವರೂ ಕೂಡಿಕೊಂಡರು. ಈ ವಿದ್ಯಮಾನ ತಿಳಿದು ಬಾಗಲಕೋಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕೌಜಲಗಿ ಹನುಮಂತರಾಯತು ವಕೀಲ ವೃತ್ತಿಯನ್ನು ತೊರೆದು ಚಳವಳಿಗೆ ಧುಮುಕಿದರು.
1920ರ ನಾಗಪುರ ಕಾಂಗ್ರೆಸ್ ಸಮಾವೇಶದಲ್ಲಿ ಕರ್ನಾಟಕಕ್ಕೆ ಪ್ರತ್ಯೇಕ ಕಾಂಗ್ರೆಸ್ ಸಮಿತಿ ಸ್ಥಾಪಿಸಲು ಅನುಮತಿ ಲಭಿಸಿತು. ಅಖಿಲ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿ 1921ರಲ್ಲಿ ಗದಗದಲ್ಲಿ ಆರಂಭಗೊಂಡಾಗ ಗಂಗಾಧರರಾವ್ ದೇಶಪಾಂಡೆ ಮೊದಲ ಅಧ್ಯಕ್ಷರಾದರು. ಹೀಗೆ ರೂಪುಗೊಂಡ ಸಮಿತಿಯಲ್ಲಿ ವಿಜಾಪುರ ಜಿಲ್ಲೆಯ ಕೌಜಲಗಿ ಹನುಮಂತರಾಯ, ನೀಲಕಂಠಪ್ಪ ಸುಗಂಧಿ, ದಿವಾನ್ ಸಾಹೇಬ ಜನಾಬ್ ಜಾನವೇಕರ್ ಹಾಗೂ ನಿಕ್ಕಂ ಸದಸ್ಯರಾಗಿದ್ದರು.
ಅಸಹಕಾರ ಚಳವಳಿಯ ಪ್ರಚಾರಕ್ಕಾಗಿ ಕೌಜಲಗಿ ಶ್ರೀನಿವಾಸರಾವ್ ಹಾಗೂ ಕೌಜಲಗಿ ಹನುಮಂತರಾಯರು ವಾರದಲ್ಲಿ ಎರಡು ಬಾರಿ ಬೆಳಗಾವಿಗೆ ಹೋಗಿ ಸಾರ್ವಜನಿಕ ಭಾಷಣ ಮಾಡಿ ಬರುತ್ತಿದ್ದರು. ಕೌಜಲಗಿ ಹನುಮಂತರಾಯರು ಹಳ್ಳಿಗಳಿಗೆ ಭೇಟಿ ಕೊಟ್ಟು ಗಾಂಧಿ ಸಂದೇಶವನ್ನು ಬಿತ್ತರಿಸುತ್ತಾ ಖಾದಿ ಪ್ರಚಾರ, ಮದ್ಯಪಾನದ ನಿಷೇಧಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಅವರನ್ನೂ ಅಸಹಕಾರ ಚಳವಳಿಯತ್ತ ಆಕರ್ಷಿಸಲು ಯತ್ನಿಸಿದರು. ಇದು ಸಹಜವಾಗಿ ಬ್ರಿಟಿಷ್ ಸರ್ಕಾರಕ್ಕೆ ಸಹ್ಯವಾಗಲಿಲ್ಲ. ಅದರಿಂದಾಗಿ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದಾರೆಂದು ಆಪಾದಿಸಿ 108ನೇ ಕಲಂ ಪ್ರಕಾರ ಸರ್ಕಾರ ಹನುಮಂತರಾಯರ ಮೇಲೆ ಕೇಸ್ ಹಾಕಿತು.
ಈ ರಾಜದ್ರೋಹ ಪ್ರಕರಣದ ವಿಚಾರಣೆಯು ಜಿಲ್ಲಾ ಮ್ಯಾಜಿಸ್ಟ್ರೇಟ್ ಹ್ಯಾಂಡರ್ಸನ್ ಮುಂದೆ ಬಂತು. ಪೊಲೀಸರು ಗಾಂಧಿ ಟೋಪಿಧಾರಿ ಹನುಮಂತರಾಯರನ್ನು ನ್ಯಾಯಾಲಯದೊಳಗೆ ಕರೆತಂದು ನಿಲ್ಲಿಸಿದಾಗ, ರಾಯರ ತಲೆಯ ಮೇಲೆ ರಾರಾಜಿಸುತ್ತಿದ್ದ ಗಾಂಧಿ ಟೋಪಿಯನ್ನು ಕಂಡು ಹ್ಯಾಂಡರ್ಸನ್ ಸಿಟ್ಟಾಗಿ ಟೋಪಿಯನ್ನು ತೆಗೆದಿಟ್ಟು ಬರುವಂತೆ ಆಜ್ಞಾಪಿಸುತ್ತಾನೆ. ಆದರೆ, ಹೊರಹೋದ ಹನುಮಂತರಾಯರು ಮತ್ತೆ ಗಾಂಧಿ ಟೋಪಿಯೊಂದಿಗೆ ಒಳಬಂದಿದ್ದರು. ತನ್ನ ಆದೇಶವನ್ನು ಧಿಕ್ಕರಿಸಿದ ಹನುಮಂತರಾಯರನ್ನು ಕಂಡು ಹ್ಯಾಂಡರ್ಸನ್ ಸಿಟ್ಟಾಗಿ ಟೋಪಿಯನ್ನು ತೆಗೆಯಲು ಮೂರು ಬಾರಿ ಆದೇಶಿಸಿದರೂ ಹನುಮಂತರಾಯರು ಅದಕ್ಕೆ ಸೊಪ್ಪು ಹಾಕದೆ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.
ಒಂದು ಬಾರಿ ಟೋಪಿ ಧರಸಿದ್ದಕ್ಕೆ 200 ರೂ.ಗಳಂತೆ ಮೊದಲೆರಡು ಬಾರಿಗೆ ಜುಲ್ಮಾನೆ ವಿಧಿಸಿದ್ದನಾದರೂ, ಮೂರನೆಯ ಬಾರಿಗೂ ಹನುಮಂತರಾಯರು ಗಾಂಧಿ ಟೋಪಿಯೊಂದಿಗೆ ಮತ್ತೆ ಕಾಣಿಸಿಕೊಂಡಾಗ ಹ್ಯಾಂಡರ್ಸನ್ ದಂಡ ವಿಧಿಸುವ ಗೋಜಿಗೆ ಹೋಗದೆ ವಿಚಾರಣೆಯನ್ನು ಭಾರತ ದಂಡ ಸಂಹಿತೆ 268ನೆಯ ಕಲಮಿನ ಅನ್ವಯ ಹಿರೇಮಠರ ಕೋರ್ಟಿಗೆ ವರ್ಗಾಯಿಸಿದ. ವಿಜಾಪುರದ ವಕೀಲ ವೃಂದ ಹನುಮಂತರಾಯರಿಗೆ ಹ್ಯಾಂಡರ್ಸನ್ ಎರಡು ನೂರು ರೂಪಾಯಿಗಳಂತೆ ಎರಡು ಸಲ ದಂಡ ವಿಧಿಸಿದ್ದರ ವಿರುದ್ಧ ಅಪೀಲು ಹೋಗಲು ಸಿದ್ಧವಾಯಿತು. ಪಾಂಡುರಂಗರಾವ್ ದೇಸಾಯಿ ವಕಾಲತ್ತು ನಡೆಸಲು ಮುಂದೆ ಬಂದರು. ವಿಜಾಪುರದ ಈ ಗಾಂಧಿ ಟೋಪಿ ಪ್ರಕರಣ ಮುಂಬಯಿ ಪ್ರಾಂತ್ಯದ ಎಲ್ಲ ಭಾಷಾ ಪತ್ರಿಕೆಗಳಲ್ಲೂ ವಿಶೇಷ ಮಹತ್ವ ಪಡೆಯಿತು.
ಪತ್ರಿಕೆಗಳಲ್ಲಿ ವ್ಯಾಪಕ ಖಂಡನೆ
ಜಯರಾವ್ ನರಗುಂದರ ಸಂಪಾದಕತ್ವದಲ್ಲಿ ವಿಜಾಪುರದಿಂದ ಪ್ರಕಟಣೆಯಾಗುತ್ತಿದ್ದ ಕರ್ನಾಟಕ ವೈಭವ ಸಾಪ್ತಾಹಿಕವು 1921 ಜೂನ್ 21ರ ಸಂಚಿಕೆಯಲ್ಲಿ ಹ್ಯಾಂಡರ್ಸನ್ ಕ್ರಮವನ್ನು ಟೀಕಿಸಿ ಅದನ್ನು 'ಮಂಗಚೇಷ್ಟೆ' ಎಂದು ಗೇಲಿ ಮಾಡಿತು. ತಿಲಕರು ಆರಂಭಿಸಿದ್ದ ಮರಾಠಿ ಪತ್ರಿಕೆ 'ಕೇಸರಿ' ಹ್ಯಾಂಡರ್ಸನ್ ಧೋರಣೆಯನ್ನು ಉಗ್ರವಾಗಿ ಖಂಡಿಸುತ್ತಾ, ಒಂದು ಗಾಂಧಿ ಟೋಪಿಯನ್ನು ಇಲ್ಲದಂತೆ ಮಾಡುವ ಆಜ್ಞೆಯಿಂದ ನೂರಾರು, ಸಾವಿರಾರು ಗಾಂಧಿ ಟೋಪಿಗಳು ತಮ್ಮ ಮುಂದೆ ನರ್ತಿಸಲಿವೆ ಎಂಬುವುದನ್ನು ಹ್ಯಾಂಡರ್ಸನ್ ಮರೆಯಬಾರದೆಂದು ಎಚ್ಚರಿಸಿತು. 'ಲೋಕ ಸಂಗ್ರಹ' ಪತ್ರಿಕೆ ಹ್ಯಾಂಡರ್ಸನ್‌ನ 'ಧಡಪಶಾಹಿ' ಎಂದು ಕರೆದು ಹನುಮಂತರಾಯರ ದೇಶಭಕ್ತಿಯನ್ನು ಮನಃಪೂರ್ವಕವಾಗಿ ಕೊಂಡಾಡಿತು.
ಧಾರವಾಡದಿಂದ ಪ್ರಕಟವಾಗುತ್ತಿದ್ದ 'ಶುಭೋದಯ' ಪತ್ರಿಕೆ ಬ್ರಿಟಿಷ್ ಆಡಳಿತವನ್ನು 'ಸುಡುಗಾಡು ಸಿದ್ಧʼರಿಗೆ ಹೋಲಿಸಿ, ಇದನ್ನು ಕುಚೇಷ್ಟೆ ಎಂದು ವರದಿ ಮಾಡಿತು. ಈ ಘಟನೆ ಮಹಾತ್ಮ ಗಾಂಧಿ ಅವರ ಗಮನವನ್ನೂ ಸೆಳೆಯಿತು. ಗಾಂಧೀಜಿ ತಮ್ಮ 'ಯಂಗ್ ಇಂಡಿಯಾ' ಪತ್ರಿಕೆಯಲ್ಲಿ ಇದನ್ನು ಮ್ಯಾಜಿಸ್ಟ್ರೇಟರ ಉದ್ಧಟತನ ಎಂದು ಹೇಳುತ್ತಾ, ಅಧಿಕಾರಿಗಳು ಅಸಹಕಾರಿಗಳಿಗೆ ಕಾಯ್ದೆ ಭಂಗ ವೃತ್ತಿ ಕೈಗೊಳ್ಳಲು ಆಹ್ವಾನಿಸುತ್ತಿದ್ದಾರೆ. ಇದನ್ನು ಅಸಹಕಾರಿಗಳು ಆನಂದದಿಂದ ಸ್ವೀಕರಿಸಬೇಕು ಎಂದು ಬರೆದರಷ್ಟೇ ಅಲ್ಲದೆ ಸರ್ಕಾರದ ಆಜ್ಞೆಯನ್ನು ಮುರಿಯುವಲ್ಲಿ ಹನುಮಂತರಾಯರು ತೋರಿದ ವಿನಯಶೀಲತೆಯನ್ನು ಬಹಳ ಮೆಚ್ಚಿಕೊಂಡರು. ಹೀಗೆ ಕರ್ನಾಟಕದಲ್ಲಿ ಕಾನೂನು ಭಂಗ ಚಳವಳಿಯ ಆದ್ಯ ಪ್ರವರ್ತಕರಾಗಿ ಮೆರೆದ ಕೌಜಲಗಿ ಹನುಮಂತರಾಯರು, ಗಾಂಧೀಜಿಗೆ ತಮ್ಮ ಸವಿನಯ ಕಾಯ್ದೆ ಭಂಗ ಚಳವಳಿಯ ಬಗ್ಗೆ ಮತ್ತಷ್ಟು ಆಳವಾಗಿ ಚಿಂತಿಸಲು ಅನುವು ಮಾಡಿಕೊಟ್ಟರು.
ಹನುಮಂತರಾಯರಿಗೆ ಹ್ಯಾಂಡರ್ಸನ್ ವಿಧಿಸಿದ್ದ 400 ರೂಪಾಯಿ ಜುಲ್ಮಾನೆಯ ವಿರುದ್ಧ ಪಾಂಡುರಂಗರಾವ್ ದೇಸಾಯಿ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮನವಿಯ ವಿಚಾರಣೆ ಎಲಿಸನ್ನರ ಮುಂದೆ ನಡೆದು, ಅವರು ವಿಧಿಸಿದ್ದ ಜುಲ್ಮಾನೆಯನ್ನು ರದ್ದುಪಡಿಸಿ, ಸಂಗ್ರಹಿಸಿರುವ ಜುಲ್ಮಾನೆಯನ್ನು ಹಿಂತಿರುಗಿಸುವಂತೆ ಆಜ್ಞೆ ಮಾಡಲಾಯಿತು. ಇದರಿಂದ ಅಪಮಾನಿತನಾದ ಹ್ಯಾಂಡರ್ಸನ್, ಹನುಮಂತರಾಯರನ್ನು ಹೇಗಾದರೂ ಮಾಡಿ ಶಿಕ್ಷಿಸಬೇಕೆಂದು ಕ್ರಿಮಿನಲ್ ಪ್ರೊಸೀಜರ್ ಕೋಡ್ 108ನೇ ಕಲಂ ಅಡಿಯಲ್ಲಿ ಮೊಕದ್ದಮೆ ಹೂಡಿದ. ಹನುಮಂತರಾಯರ ಕೋರಿಕೆಯಂತೆ ಈ ಖಟ್ಲೆಯ ವಿಚಾರಣೆಯನ್ನು ಸೊಲ್ಲಾಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ವರ್ಗಾಯಿಸಲಾಯಿತು. ಸೊಲ್ಲಾಪುರದ ಜಡ್ಜ್ ಮುಂದೆ ನಡೆದ ವಿಚಾರಣೆಯಲ್ಲಿ ಹ್ಯಾಂಡರ್‌ಸನ್ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿದ ಪರಿಣಾಮ ಅಂತಿಮವಾಗಿ ನ್ಯಾಯಾಲಯ ಹನುಮಂತರಾಯರಿಗೆ ಒಂದು ವರ್ಷದ ಸದ್ವರ್ತನಾ ಜಾಮೀನು ನೀಡಬೇಕು. ಇಲ್ಲವೇ ಒಂದು ವರ್ಷ ಶಿಕ್ಷೆ ಅನುಭವಿಸಬೇಕೆಂದು ತೀರ್ಪು ನೀಡಿತು.
ಹನುಮಂತರಾಯರು ಜೈಲು ಶಿಕ್ಷೆ ಅನುಭವಿಸಲು ಸಿದ್ಧರಿದ್ದರೂ ಅವರ ಸೋದರಮಾವ ಗೋವಿಂದರಾವ್ ಬೆಳಗಲ್ ತಾವೇ ಖುದ್ದಾಗಿ ಮ್ಯಾಜಿಸ್ಟ್ರೇಟರನ್ನು ಕಂಡು ಹನುಮಂತರಾಯರ ಪರವಾಗಿ ತಾವೇ ಸದ್ವರ್ತನಾ ಜಾಮೀನು ನೀಡಿ ಹನುಮಂತರಾಯರನ್ನು ಬಿಡುಗಡೆ ಮಾಡಿಸಿಕೊಂಡು ಬಾಗಲಕೋಟೆಗೆ ಹಿಂದಿರುಗಿದರು. ಆದರೆ ಬಾಗಲಕೋಟೆಗೆ ಹಿಂತಿರುಗಿದ ಹನುಮಂತರಾಯರು, ಗೆಳೆಯರಾದ ಮೊಹರೆ ಹನುಮಂತರಾಯ, ಸಾಲಿ ರಾಮಚಂದ್ರರಾಯ, ರಂಗರಾವ್ ತಿಳಗೂಳ ಹಾಗೂ ನಾನಾಸಾಹೇಬ ಮಸೂರಕರರೊಂದಿಗೆ ಸಮಾಲೋಚಿಸಿ ಸೆರೆಮನೆ ಶಿಕ್ಷೆ ಅನುಭವಿಸುವುದೇ ಸೂಕ್ತವೆಂದು ತೀರ್ಮಾನಿಸಿ, ಮನೆಯವರಾರಿಗೂ ಗೊತ್ತಾಗದಂತೆ ಮಸೂರಕರ ಹಾಗೂ ತಿಳಗೂಳರೊಡನೆ ಸೊಲ್ಲಾಪುರಕ್ಕೆ ಹೋಗಿ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟರನ್ನು ಕಂಡು, ತಮ್ಮ ಸೋದರಮಾವ ನೀಡಿದ್ದ ಸದ್ವರ್ತನಾ ಜಾಮೀನನ್ನು ಹಿಂತೆಗೆದುಕೊಂಡು ತಮಗೆ ಜೈಲು ಶಿಕ್ಷೆ ವಿಧಿಸಬೇಕೆಂದು ಕೋರಿದರು. ಅದರಂತೆ ವೀಸಾಪುರ ಜೈಲು ಸೇರಿದರು.
ಹೀಗೆ ಹನುಮಂತರಾಯರ 'ಗಾಂಧಿ ಟೋಪಿ ಪ್ರಕರಣ' ಐತಿಹಾಸಿಕ ದಾಖಲೆಯಾಯಿತು. ಇದರ ಪ್ರಭಾವ ಎಷ್ಟಿತ್ತೆಂದರೆ ಅಂದಿನವರೆಗೆ ರುಮಾಲನ್ನೇ ಸುತ್ತಿಕೊಳ್ಳುತ್ತಿದ್ದ ಲಾಲಾ ಲಜಪತರಾಯರು ಈ ಪ್ರಕರಣದ ನಂತರ ರುಮಾಲು ತ್ಯಜಿಸಿ ಗಾಂಧಿ ಟೋಪಿ ಧರಿಸಲಾರಂಭಿಸಿದರು. ಗಾಂಧೀಜಿ ಅವರು ಚಿಂತಿಸುತ್ತಿದ್ದ ಸವಿನಯ ಕಾಯ್ದೆ ಭಂಗ ಚಳವಳಿಗೆ ಇದೊಂದು ರೀತಿಯಲ್ಲಿ ಮೂರ್ತ ರೂಪ ನೀಡಿತೆಂದರೆ ತಪ್ಪಾಗಲಾರದು.[7][8]
ರಾಷ್ಟ್ರೀಯ ದಂಗೆಯನ್ನು ಏಕಾಂತವಾಗಿ ನಿಲ್ಲಿಸಿದರೂ ಗಾಂಧಿಯವರನ್ನು ರಾಜದ್ರೋಹದ ಆರೋಪದ ಮೇಲೆ ಎರಡು ವರ್ಷಗಳ ಕಾಲ ಬಂಧಿಸಲಾಯಿತು. ಈ ಆಜ್ಞೆಯನ್ನು ಓದುವಾಗ ಬ್ರಿಟಿಷ್ ನ್ಯಾಯಾಧೀಶರು ಮೆಚ್ಚುಗೆ ಮತ್ತು ಅಭಿಮಾನಗಳಿಂದ ಮಾತಾಡಿ ಸರ್ಕಾರವು ಗಾಂಧಿಯವರನ್ನು ಬಿಡುಗಡೆಗೊಳಿಸಿದರೆ ತಮಗೆ ಅತೀವ ಸಂತೋಷವಾಗುವುದೆಂದು ಹೇಳಿದರು. ಬಹುತೇಕ ಕಾಂಗ್ರೆಸ್ ನಾಯಕರು ಗಾಂಧೀಜಿಗೆ ಬೆಂಬಲ ಸೂಚಿಸಿದರೂ ನಿರಾಶರಾದ ಕೆಲವರು ಅವರ ಸಂಗವನ್ನು ತ್ಯಜಿಸಿದರು. ಇವರಲ್ಲಿ ಪ್ರಮುಖರಾದ ಅಲಿ ಸಹೋದರರು ಗಾಂಧಿಯವರನ್ನು ತೀವ್ರವಾಗಿ ಟೀಕಿಸಿದರು. ಮೋತಿಲಾಲ್ ನೆಹರು ಮತ್ತು ಚಿತ್ತರಂಜನ್ ದಾಸ್ ಸ್ವರಾಜ್ ಪಕ್ಷವನ್ನು ಹುಟ್ಟುಹಾಕಿದರು. ಬಹುತೇಕ ರಾಷ್ಟ್ರೀಯವಾದಿಗಳು ಚಳುವಳಿ ನಿಲ್ಲಿಸಿದ ಕಾರಣಕ್ಕೆ ಅಸಮ್ಮತಿ ತೋರಿಸಿ ಬಹಳ ದುಃಖಿತರಾದರು.
ಇತಿಹಾಸಕಾರರ ಮತ್ತು ವಿಮರ್ಶಕರ ಪ್ರಕಾರ ಈ ಚಳುವಳಿಯು ಬ್ರಿಟಿಷ್ ಆಡಳಿತದ ಮೂಳೆ ಮುರಿಯುವಲ್ಲಿ ಸಾಕಷ್ಟು ಸಫಲವಾಯಿತು. ಬಹುಶಃ ೧೯೪೭ರ ವರೆಗೆ ಭಾರತೀಯರ ಹೋರಾಡಿದ ಸ್ವಾತಂತ್ರ್ಯಕ್ಕೆ ಇದರ ಕೊಡುಗೆಯೂ ಇತ್ತು. ಆದರೆ ಅನೇಕ ಇತಿಹಾಸಕಾರರು ಮತ್ತು ರಾಷ್ಟ್ರೀಯ ನಾಯಕರು ಗಾಂಧೀಜಿಯವರ ನಿರ್ಧಾರ ಸರಿಯಾದದ್ದೆಂದು ನಂಬುತ್ತಾರೆ. ಗಾಂಧೀಜಿಯವರು ಚಳುವಳಿಯನ್ನು ನಿಲ್ಲಿಸದೇ ಹೋಗಿದ್ದರೆ ಭಾರತವು ಬಂಡುಕೋರರ ದಂಗೆಯ ಮಟ್ಟಕ್ಕೆ ಇಳಿದುಹೋಗಿ ಸಾಮಾನ್ಯ ಜನರನ್ನು ದೂರ ಮಾಡುತ್ತಿತ್ತು. ಅಹಿಂಸೆಯ ತತ್ವವನ್ನು ಎತ್ತಿ ಹಿಡಿದಿದ್ದರಿಂದ ಎಷ್ಟೋ ಸಾಮಾನ್ಯ ನಾಗರಿಕರು ಹೆಮ್ಮೆಯಿಂದ ಮತ್ತು ಗೌರವಾತ್ಮಕವಾಗಿ ಸಾವು-ನೋವು ಮಾಡದೇ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಅನುವು ಮಾಡಿಕೊಟ್ಟಿತು.
ಮಹಾತ್ಮಾ ಗಾಂಧಿಯವರ ಅಹಿಂಸೆಯ ತತ್ತ್ವಕ್ಕೆ ಪ್ರತಿಫಲ ದೊರೆತಿದ್ದು ಲಕ್ಷಾಂತರ ಜನರು ಉಪ್ಪಿನ ಸತ್ಯಾಗ್ರಹದಲ್ಲಿ ಅವರನ್ನು ಬೆಂಬಲಿಸಿ ಭಾರತದ ಅಹಿಂಸಾತ್ಮಕ ಚಳುವಳಿಯನ್ನು ಪ್ರಪಂಚಕ್ಕೆ ಮನವರಿಕೆ ಮಾಡಿಕೊಟ್ಟು ಸ್ವಾತಂತ್ರ್ಯಕ್ಕಾಗಿ ಆಗ್ರಹ ಪಡಿಸಿದಾಗ. ಸತ್ಯಾಗ್ರಹವು ಅತ್ಯಂತ ಯಶಸ್ವಿಯಾಯಿತು. ಭಾರತೀಯರ ಸ್ವಾತಂತ್ರ್ಯದ ಬೇಡಿಕೆ ಈಡೇರಿತು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.