From Wikipedia, the free encyclopedia
ಬೈಜಿಕ ಶಸ್ತ್ರಾಸ್ತ್ರ ಎಂದರೆ ತನ್ನ ವಿನಾಶಕಾರಿ ಶಕ್ತಿಯನ್ನು ಬೈಜಿಕ ಕ್ರಿಯೆಗಳಿಂದ (ಪರಮಾಣು ವಿದಳನ ಕ್ರಿಯೆಯಿಂದ (ವಿದಳನ ಬಾಂಬ್) ಅಥವಾ ವಿದಳನ ಮತ್ತು ಸಮ್ಮಿಳನ ಕ್ರಿಯೆಗಳ ಸಂಯೋಜನೆಯಿಂದ (ಉಷ್ಣಬೈಜಿಕ ಬಾಂಬ್)) ಪಡೆಯುವ ಒಂದು ಸ್ಫೋಟಕ ಸಾಧನ. ಪರಿಣಾಮವಾಗಿ ಬೈಜಿಕ ಸ್ಫೋಟವಾಗುತ್ತದೆ.
ಬೈಜಿಕ ಬಾಂಬ್ನಲ್ಲಿ ಎರಡು ಬಗೆಯ ಬಾಂಬುಗಳಿವೆ. ಒಂದು ಪರಮಾಣು ಬಾಂಬು ಹಾಗೂ ಇನ್ನೊಂದು ಜಲಜನಕ ಬಾಂಬು. ಈ ಬಾಂಬುಗಳು ವಿನಾಶಕಾರಿಯಾದ ಅಗಾಧ ಪ್ರಮಾಣದ ಒತ್ತಡ, ಆಘಾತ, ಉಷ್ಣತೆ ಮತ್ತು ವಿಕಿರಣವನ್ನು ಉಂಟುಮಾಡುತ್ತವೆ. ಇವುಗಳು ಸಾಂಪ್ರದಾಯಿಕವಾದ ಸಿಡಿತಲೆ (ಬಾಂಬು) ಗಳಿಗಿಂತ ಸಾವಿರಾರು ಪಟ್ಟು ಅಧಿಕ ಹಾನಿಯನ್ನು ಎಸಗುತ್ತವೆ. ಎರಡನೆ ವಿಶ್ವಯುದ್ಧದಲ್ಲಿ ಪ್ರಥಮವಾಗಿ ಪರಮಾಣು ಬಾಂಬನ್ನು ಜಪಾನ್ ದೇಶದ ಹಿರೋಶಿಮಾ ಹಾಗೂ ನಾಗಾಸಾಕಿ ನಗರಗಳ ಮೇಲೆ ಅಮೆರಿಕ ದೇಶ ಪ್ರಯೋಗಿಸಿತು.
ಪರಮಾಣು ಬಾಂಬ್ ಸ್ಫೋಟನ ಕೇಂದ್ರದ ಬಳಿ ಇರುವವರು ವಿಕಿರಣದ ನೇರ ಹೊಡೆತಕ್ಕೆ ಈಡಾಗುತ್ತಾರೆ. ಇಂಥವರು ರಕ್ತಕ್ಯಾನ್ಸರಿನಿಂದ (ಲ್ಯೂಕೀಮಿಯ) ನರಳುವುದು ವಿರಳವಲ್ಲ.
ಪರಮಾಣು ಸ್ಫೋಟದಿಂದ ಹೊಮ್ಮುವ ವಿಕಿರಣ ಮನುಷ್ಯನಲ್ಲಿ ಉಂಟುಮಾಡುವ ರೋಗಲಕ್ಷಣಗಳನ್ನು ಮೂರು ಪ್ರಧಾನ ವರ್ಗಗಳಲ್ಲಿ ಅಳವಡಿಸಲಾಗಿದೆ:
೧. ತೀವ್ರವಿಕಿರಣ ಗಾಸಿಯ ಕಾರಣವಾಗಿ ರಕ್ತ, ಜಠರ, ಕರುಳು, ನರಮಂಡಲ ಹಾಗೂ ಹೃದಯ ಸಂಬಂಧೀ ರೋಗಗಳು ಕಂಡುಬರುತ್ತವೆ.
ರಕ್ತಸಂಬಂಧೀ ರೋಗಲಕ್ಷಣಗಳು 1-3 ವಾರಗಳವರೆಗೆ ಸುಪ್ತವಾಗಿದ್ದು ಮತ್ತೆ ಉದ್ರೇಕಿಸುತ್ತವೆ. ಆಗ ಜ್ವರ ಮತ್ತು ಚರ್ಮದಲ್ಲಿ ಹಾಗೂ ದೇಹದ್ವಾರಗಳಿಂದ ರಕ್ತಸ್ರಾವವಾಗುತ್ತದೆ. ಆಯಾಸ, ತೂಕನಷ್ಟ ಮುಂತಾದವು ಇತರ ಲಕ್ಷಣಗಳು. ಪೂರ್ತಿ ಶಮನವಾಗಲು ಹಲವಾರು ತಿಂಗಳುಗಳೇ ಬೇಕಾಗಬಹುದು.
ಜಠರ ಮತ್ತು ಕರುಳುಸಂಬಂಧೀ ಲಕ್ಷಣಗಳು: ವಿಕಿರಣ ತಾಡನೆಯಾದ ಕೆಲವೇ ಗಂಟೆಗಳಲ್ಲಿ ಅಗ್ನಿಮಾಂದ್ಯ (ಹಸಿವಾಗದಿರುವಿಕೆ), ವಾಕರಿಕೆ, ವಾಂತಿ, ಭೇದಿ ಮುಂತಾದವು ಕಾಣಿಸಿಕೊಳ್ಳುತ್ತವೆ.[3] ತತ್ಕ್ಷಣ ಚಿಕಿತ್ಸೆ ನೀಡಿದರೆ ಸುಮಾರು 48 ಗಂಟೆಗಳಲ್ಲಿ ಶಮನವಾಗಬಹುದು. ಇಲ್ಲವಾದರೆ ಮರಣ ಖಾತ್ರಿ.
ಇನ್ನು ನರಮಂಡಲ[4] ಮತ್ತು ಹೃದಯಗಳಿಗೆ ಗಾಸಿ ತಟ್ಟಿದರೆ ವಮನ, ಅತಿಸಾರಗಳು ಉಲ್ಬಣಿಸಬಹುದು. ಜೊತೆಗೆ ರಕ್ತದೊತ್ತಡ ತೀವ್ರಗೊಂಡು ಆಘಾತ ಬಡಿಯಬಹುದು. ಕೇವಲ 24-48 ಗಂಟೆಗಳ ಒಳಗೆ ಈ ಎಲ್ಲ ದುಷ್ಪರಿಣಾಮಗಳೂ ಪ್ರಕಟವಾಗಿ ವ್ಯಕ್ತಿ ಮರಣಿಸುತ್ತಾನೆ.
೨. ಸ್ಥಳಿಕವಾಗಿ ಚರ್ಮ ಕೆಂಪಾಗಿ ಕೂದಲು ಉದುರಿ ಹೊರಚರ್ಮ ಗಾಸಿಗೊಳ್ಳಬಹುದು. ಅಧಿಕ ವಿಕಿರಣಶಕ್ತಿಯ ಪರಿಣಾಮವಾಗಿ ಕೂದಲು ಶಾಶ್ವತವಾಗಿ ನಷ್ಟವಾಗಬಹುದು. ಚರ್ಮ ಪೂರ್ತಿ ಸುಟ್ಟಂತಾಗಿ ವ್ಯಕ್ತಿ ಅನೇಕ ಸೋಂಕು ರೋಗಗಳಿಗೆ ಬಲಿ ಆಗುವುದುಂಟು. ನಿರಂತರ ಅಸ್ವಾಸ್ಥ್ಯ ಈತನ ಶಾಶ್ವತ ಸಂಗಾತಿ.
೩. ವಿಕಿರಣಶಕ್ತಿಗೆ ಮೈಯೊಡ್ಡಿದ ಕೆಲವು ತಿಂಗಳು ಅಥವಾ ವರ್ಷಗಳ ಮೇಲೆ ಕೆಲವು ರೋಗಗಳು ಕಾಣಿಸಿಕೊಳ್ಳಬಹುದು: ಫಲವಂತಿಕೆ ನಷ್ಟ, ಸಂತಾನಶಕ್ತಿಯಲ್ಲಿ ಇಳಿಕೆ, ಕಣ್ಪೊರೆ, ಚರ್ಮಬಿರಿತ, ಕೀಲುನೋವು ಮುಂತಾದವು. ಕ್ಯಾನ್ಸರ್ ಸಂಬಂಧೀ ಕಾಯಿಲೆಗಳು ಸುಮಾರು 4-7 ವರ್ಷಗಳಲ್ಲಿ ತಲೆದೋರುತ್ತವೆ. ಥೈರಾಯಿಡ್, ಲಾಲಾರಸಗ್ರಂಥಿ, ಶ್ವಾಸಕೋಶ, ಮೂಳೆ, ಯಕೃತ್ತು, ಗುಲ್ಮ ಮತ್ತು ಸ್ತನ ಇವುಗಳ ಕ್ಯಾನ್ಸರ್ ರೋಗಗಳು ಬರಬಹುದು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.