Remove ads
From Wikipedia, the free encyclopedia
ರೋಗವು ಒಂದು ಜೀವಿಯ ಭಾಗ ಅಥವಾ ಎಲ್ಲವನ್ನೂ ಬಾಧಿಸುವ ಒಂದು ನಿರ್ದಿಷ್ಟ ಅಸಹಜ ಸ್ಥಿತಿ, ಒಂದು ರಚನೆ ಅಥವಾ ಕ್ರಿಯೆಯ ಅಸ್ವಸ್ಥತೆ.[೧] ಯಾವುದಾದರೊಂದು ಪೆಟ್ಟು ಇಲ್ಲವೆ ಗಾಯದಿಂದ ಪ್ರಚೋದನೆಗೊಂಡಿರುವ, ಉಪಕೋಶೀಯ ಮಟ್ಟದಲ್ಲಿ ಸಂಭವಿಸುವ, ಗಾಸಿಗೆ ಈಡಾಗಿರುವ ಜೀವಿಯ (ಮನುಷ್ಯ ಇಲ್ಲವೆ ಪ್ರಾಣಿ) ವ್ಯತ್ಯಸ್ತರಚನೆಯಲ್ಲೊ ಕಾರ್ಯದಲ್ಲೊ ಸಾಮಾನ್ಯವಾಗಿ ಪ್ರಕಟಗೊಳ್ಳುವ ಪ್ರತಿಸ್ಪಂದನ (ಡಿಸೀಸ್). ಕಾಯಿಲೆ, ಅಸ್ವಸ್ಥತೆ, ವ್ಯಾಧಿ, ಅನಾರೋಗ್ಯ ಮುಂತಾದವು ಪರ್ಯಾಯ ಪದಗಳು. ರೋಗದ ಅಧ್ಯಯನವನ್ನು ರೋಗವಿಜ್ಞಾನವೆಂದು ಕರೆಯಲಾಗುತ್ತದೆ ಮತ್ತು ಇದು ರೋಗನಿದಾನ ಶಾಸ್ತ್ರದ ಅಧ್ಯಯನವನ್ನು ಒಳಗೊಳ್ಳುತ್ತದೆ. ರೋಗವನ್ನು ಹಲವುವೇಳೆ ರೋಗಲಕ್ಷಣಗಳು ಮತ್ತು ವೈದ್ಯಕೀಯ ಚಿಹ್ನೆಗಳಿಗೆ ಸಂಬಂಧಿಸಿದ ವೈದ್ಯಕೀಯ ಸ್ಥಿತಿ ಎಂದು ಅರ್ಥೈಸಲಾಗುತ್ತದೆ. ಅದು ರೋಗಕಾರಕಗಳಂತಹ ಬಾಹ್ಯ ಅಂಶಗಳಿಂದ, ಅಥವಾ ಪ್ರತಿರಕ್ಷಣಾ ಶಕ್ತಿಯ ಕೊರತೆಯಂತಹ ವಿಶೇಷವಾಗಿ ಪ್ರತಿರಕ್ಷಣಾ ವ್ಯವಸ್ಥೆಯ ಆಂತರಿಕ ಅಪಸಾಮಾನ್ಯ ಕ್ರಿಯೆಗಳಿಂದ, ಅಥವಾ ಅಲರ್ಜಿಗಳು ಮತ್ತು ಸ್ವರಕ್ಷಣೆಯನ್ನು ಒಳಗೊಂಡಂತೆ ಅತಿಸೂಕ್ಷ್ಮತೆಯಿಂದ ಉಂಟಾಗಿರಬಹುದು.
ರೋಗವು ಆನುವಂಶೀಯತೆ, ಸೋಂಕು, ಆಹಾರ ಇಲ್ಲವೆ ಪರಿಸರದ ಪರಿಣಾಮದಿಂದ ಉಂಟಾಗುವ, ದೋಷಯುಕ್ತ ಕ್ರಿಯೆಯಿಂದ ಕೂಡಿದ ದೇಹದ ಅಂಗ, ಅಂಗಭಾಗ, ರಚನೆ ಅಥವಾ ವ್ಯವಸ್ಥೆಯ ಒಂದು ಪ್ರಕಟಿತ ಲಕ್ಷಣ.[೨] ರೋಗಗಳಿಗೆ ಇರುವ ಮೂಲಕಾರಣಗಳು ಜೀವಕೋಶದ ಒಳಗೇ ನಡೆಯುವ ಜೀವರಾಸಾಯನಿಕ ಮತ್ತು ಜೀವಭೌತಪ್ರತಿಕ್ರಿಯೆಗಳನ್ನು ಆಧರಿಸಿವೆ ಎಂಬುದು ಈಗಾಗಲೇ ನಡೆದಿರುವ ಸೂಕ್ಷ್ಮಸಂವೇದೀ ಶೋಧನೆಗಳಿಂದಲೂ ಅಭಿವರ್ಧನೆಗಳಿಂದಲೂ ಸ್ಪಷ್ಟವಾಗಿದೆ. ಈ ಪ್ರತಿಕ್ರಿಯೆಗಳನ್ನು ವರ್ಗೀಕರಿಸಲಾಗಿದ್ದು ಕ್ರಮೇಣ ಅವುಗಳ ಕ್ರಿಯಾತಂತ್ರವನ್ನು ತಿಳಿದುಕೊಳ್ಳುವ ಪ್ರಯತ್ನಗಳೂ ನಡೆದಿವೆ.
ಮಾನವರಲ್ಲಿ, ರೋಗ ಪದವನ್ನು ಹಲವುವೇಳೆ ಸ್ಥೂಲವಾಗಿ ಪೀಡಿತ ವ್ಯಕ್ತಿಗೆ ನೋವು, ಅಪಸಾಮಾನ್ಯತೆ, ಸಂಕಟ, ಸಾಮಾಜಿಕ ಸಮಸ್ಯೆಗಳು, ಅಥವಾ ಸಾವನ್ನು ಉಂಟುಮಾಡುವ, ಅಥವಾ ಆ ವ್ಯಕ್ತಿಯ ಸಂಪರ್ಕದಲ್ಲಿರುವವರಿಗೆ ಹೋಲುವ ಸಮಸ್ಯೆಗಳನ್ನು ಉಂಟುಮಾಡುವ ಯಾವುದೇ ಸ್ಥಿತಿಯನ್ನು ಸೂಚಿಸಲು ಬಳಸಲಾಗುತ್ತದೆ. ಈ ವಿಶಾಲವಾದ ಅರ್ಥದಲ್ಲಿ, ಅದು ಕೆಲವೊಮ್ಮೆ ಗಾಯಗಳು, ಅಂಗವಿಕಲತೆಗಳು, ಅಸ್ವಸ್ಥತೆ, ಲಕ್ಷಣಕೂಟ, ಸೋಂಕುಗಳು, ಪ್ರತ್ಯೇಕಿತ ರೋಗಲಕ್ಷಣಗಳು, ವಕ್ರ ವರ್ತನೆಗಳು, ಮತ್ತು ರಚನೆ ಹಾಗೂ ಕ್ರಿಯೆಯ ವಿಲಕ್ಷಣ ಬದಲಾವಣೆಗಳನ್ನು ಒಳಗೊಳ್ಳುತ್ತದೆ. ರೋಗಗಳು ಜನರ ಮೇಲೆ ಕೇವಲ ಶಾರೀರಿಕವಾಗಿ ಅಲ್ಲದೆ, ಭಾವನಾತ್ಮಕವಾಗಿಯೂ ಪ್ರಭಾವ ಬೀರಬಲ್ಲವು, ಏಕೆಂದರೆ ರೋಗದಿಂದ ಪೀಡಿತವಾಗಿ ಅದರ ಜೊತೆ ಬಾಳುವುದು ಜೀವನದ ಬಗ್ಗೆ ಪೀಡಿತ ವ್ಯಕ್ತಿಯ ದೃಷ್ಟಿಕೋನವನ್ನು ಬದಲಿಸಬಹುದು.
ಜೀವಿಯೊಂದರಲ್ಲಿಯ ಕ್ರಿಯಾತ್ಮಕ ಸಮತೋಲನ ಮತ್ತು ಅದು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವ ಪ್ರಕ್ರಿಯೆಗಳಿಗೆ ಸಮನಿಲುವೆ (ಹೋಮಿಯೋಸ್ಟೇಸಿಸ್) ಎಂದು ಹೆಸರು. ಇಲ್ಲಿ ಒಂದು ಪ್ರಸಾಮಾನ್ಯ ಪರಿಮಿತಿ ಉಂಟು. ಈ ಪರಿಮಿತಿಯ ಆಚೀಚೆಗೆ ಜೀವಕೋಶಗಳು ದಬ್ಬಲ್ಪಟ್ಟಾಗ ಅವುಗಳ ರಚನೆಯಲ್ಲಿ ಇಲ್ಲವೆ ಕಾರ್ಯದಲ್ಲಿ ಚ್ಯುತಿ ಏರ್ಪಡಬಹುದು. ಇಂಥ ಚ್ಯುತಿಗಳು ವಿಪರ್ಯಯಶೀಲವೋ (ರಿವರ್ಸಿಬಲ್) ಅವಿಪರ್ಯಯಶೀಲವೋ (ರ್ರಿವರ್ಸಿಬಲ್) ಆಗಿರಬಹುದು. ಎರಡನೆಯ ಬಗೆಯದ್ದಾದರೆ ಆ ಕೋಶಗಳು ಮಡಿಯುತ್ತವೆ. ಹೀಗಾಗಿ ವ್ಯತ್ಯಸ್ತ ಅಂಗಾಂಶಗಳು, ಅಂಗಗಳು ಮತ್ತು ಈ ಕಾರಣದಿಂದಾಗಿ ಜೀವಿಗಳಲ್ಲಿ ಉಪಕೋಶೀಯ ಬದಲಾವಣೆಗಳು ಅನುರಣಿಸಿ ಅಸ್ವಾಸ್ಥ್ಯ ತಲೆದೋರುತ್ತದೆ.[೩]
ಸಾಮಾನ್ಯವಾಗಿ ರೋಗಪ್ರಕ್ರಿಯೆಯ ಪ್ರಕಟಿತರೂಪ ಎಂದರೆ ಸುಸ್ತು, ನೋವು ಮತ್ತು ಆಯಾಸ. ಇವೇ ರೋಗದ ಅನುಭವಜನ್ಯ ಲಕ್ಷಣಗಳು. ಇವುಗಳ ಪರಿಣಾಮವಾಗಿ ಜ್ವರ, ರಕ್ತದೊತ್ತಡ, ಉಸಿರಾಟದ ದರದಲ್ಲಿ ಬದಲಾವಣೆಗಳು ತಲೆದೋರುತ್ತವೆ. ದೇಹದ ಅಂಗಗಳಿಗೋ ಅಂಗಭಾಗಗಳಿಗೋ ಬೇರೆ ಬೇರೆ ಲಕ್ಷಣಗಳನ್ನು ತೋರ್ಪಡಿಸುವ ಸ್ಥಿತಿ ಏರ್ಪಟ್ಟು ದೇಹ ರೋಗಪೀಡಿತವಾಗುತ್ತದೆ. ರೋಗಗಳ ಪ್ರಕಟಿತ ಲಕ್ಷಣಗಳನ್ನು ಆಧರಿಸಿ ರೋಗಗಳನ್ನು ವರ್ಗೀಕರಿಸುವುದಿದೆ. ಹೀಗೆ ವಿಂಗಡಿಸಬೇಕಾದರೆ ತೊಂದರೆಗಳು ಯಾವ ಯಾವ ಅಂಗಗಳಿಂದ ಉತ್ಪತ್ತಿಯಾಗುತ್ತಿರುವುವೋ ಆಯಾ ಅಂಗಗಳ ಕಾರ್ಯರೀತಿಗಳನ್ನು ಬೇರೆ ಬೇರೆ ದರ್ಜೆಗಳಾಗಿ ವಿಂಗಡಿಸಬೇಕಾಗುತ್ತದೆ. ದೇಹಾಂತರ್ಗತವಾದ ವಿಷಕ್ರಿಮಿಗಳಿಂದ ಉದ್ಭವಿಸುವ ಎಲ್ಲ ರೋಗಗಳ ಶುಶ್ರೂಷೆಗೆ ಬಳಕೆಯಾಗುವ ನಾನಾ ಬಗೆಯ ಔಷಧಿಗಳನ್ನು ಇಂದಿನ ಚಿಂತನೆ ಪ್ರಕಾರ ರಾಸಾಯನಿಕಗಳ ಗುಂಪಿಗೆ ಸೇರಿಸಿದೆ. ಔಷಧಿಗಳ ಸೇವನೆಯಿಂದ ರೋಗಗಳು ಬಲುಮಟ್ಟಿಗೆ ಪೂರ್ಣವಾಗಿ ಗುಣವಾಗುತ್ತವೆ. ಇನ್ನೂ ಕೆಲವು ರೋಗಗಳು ಪೂರ್ಣ ಗುಣವಾಗದಿದ್ದರೂ ಅವುಗಳ ತ್ರಾಸ ಬಲುಮಟ್ಟಿಗಾದರೂ ತಗ್ಗುತ್ತದೆ. ರೋಗಕಾರಕ ಕ್ರಿಮಿಗಳನ್ನು ನಾಶಗೊಳಿಸಿ ರೋಗನಿವಾರಣೆ ಮಾಡಲು ಬಳಸುವ ಔಷಧಿಗಳನ್ನು ಪ್ರಯೋಗಿಸುವ ಚಿಕಿತ್ಸೆಗೆ ರಾಸಾಯನಿಕ ಚಿಕಿತ್ಸೆ (ಕೀಮೋತೆರಪಿ) ಎಂದು ಹೆಸರು.
ದೇಹ ಒಂದು ಅಖಂಡ ವ್ಯವಸ್ಥೆ ಆಗಿದ್ದು ಅದರ ಯಾವುದೇ ಭಾಗ ರೋಗಗ್ರಸ್ತವಾದರೆ ಇಡೀ ದೇಹವೇ ಪ್ರತಿಕ್ರಿಯಿಸುತ್ತದೆ. ಅಧ್ಯಯನ ಮತ್ತು ಚಿಕಿತ್ಸೆ ಸಲುವಾಗಿ ರೋಗಗಳನ್ನು ಈ ಮುಂದಿನಂತೆ ವರ್ಗೀಕರಿಸಿದೆ: ಜೀರ್ಣನಾಳದ ರೋಗಗಳು, ಯಕೃತ್ತಿನ ರೋಗಗಳು, ಮೂತ್ರಪಿಂಡಗಳ ರೋಗಗಳು, ಫುಪ್ಫುಸಗಳ ರೋಗಗಳು, ಹೃದಯ ಮತ್ತು ರಕ್ತನಾಳಗಳ ರೋಗಗಳು, ನರಸಂಬಂಧೀ ರೋಗಗಳು, ಅಂತರಸ್ಸ್ರಾವಕ ಗ್ರಂಥಿಗಳ ರೋಗಗಳು, ಹೈಪೋತೆಲಮಸ್ ಸಂಬಂಧೀ ರೋಗಗಳು, ಅಸ್ಥಿ ಸಂಬಂಧೀ ವ್ಯಾಧಿಗಳು, ನ್ಯೂನಪೋಷಣೆಯ ಕಾರಣವಾಗಿ ಬರುವವು, ಸೋಂಕುರೋಗಗಳು, ಮನೋವ್ಯಾಧಿಗಳು ಇತ್ಯಾದಿ.
ಪ್ರತಿಯೊಂದು ರೋಗವನ್ನು ಅದರ ಲಕ್ಷಣಗಳ ಪ್ರಕಾರ ಅಭ್ಯಸಿಸಿ ಸಮಗ್ರ ದೇಹದ ಸ್ವಾಸ್ಥ್ಯವನ್ನು ಲಕ್ಷ್ಯದಲ್ಲಿಟ್ಟುಕೊಂಡು ಚಿಕಿತ್ಸಿಸಬೇಕು. ರೋಗನಿದಾನಕ್ಕೆ ವರ್ತಮಾನ ದಿನಗಳಲ್ಲಿ ತಂತ್ರವಿದ್ಯೆಯ ಬಳಕೆ ವ್ಯಾಪಕವಾಗಿ ಚಲಾವಣೆಗೆ ಬಂದಿದೆ: ರಕ್ತ, ಉಗುಳು, ಮೂತ್ರ, ಮಲ ಮುಂತಾದವುಗಳ ಪರೀಕ್ಷೆ, ಇಸಿಜಿ, ಇಇಜಿ ಮುಂತಾದ ತಪಾಸಣೆಗಳೂ ಎಕ್ಸ್-ಕಿರಣ ಛಾಯಾಚಿತ್ರ ಇತ್ಯಾದಿ. ಇನ್ನೂ ಒಂದೊಂದು ವ್ಯವಸ್ಥೆಯಲ್ಲಿಯೂ (ಎಲೋಪತಿ, ಹೋಮಿಯೋಪತಿ, ಆಯುರ್ವೇದ, ಯುನಾನಿ ಇತ್ಯಾದಿ) ಹೇರಳ ಸಂಖ್ಯೆಯಲ್ಲಿ ಔಷಧಿಗಳು ಲಭ್ಯವಿವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.