ಭಾರತೀಯ ರಾಜ್ಯ From Wikipedia, the free encyclopedia
ತಮಿಳುನಾಡು(தமிழ்நாடு) ಭಾರತದ ದಕ್ಷಿಣ ತುದಿಯಲ್ಲಿರುವ ರಾಜ್ಯ. ಭಾರತ ಗಣರಾಜ್ಯದ ದಕ್ಷಿಣದ ಒಂದು ರಾಜ್ಯ.ಚೆನ್ನೈ ತಮಿಳುನಾಡಿನ ರಾಜಧಾನಿ ಮತ್ತು ಅತಿ ದೊಡ್ಡ ನಗರವಾಗಿದೆ. ಇದಕ್ಕೆ ಹೊಂದಿಕೊಂಡಿರುವ ಪ್ರದೇಶಗಳೆಂದರೆ ಪಾಂಡಿಚೇರಿ, ಕೇರಳ, ಕರ್ನಾಟಕ ಮತ್ತು ಆಂಧ್ರ ಪ್ರದೇಶ. ದಕ್ಷಿಣಪೂರ್ವಕ್ಕೆ ಹಿಂದೂ ಮಹಾಸಾಗರದಲ್ಲಿ ಶ್ರೀಲಂಕಾ ರಾಷ್ಟ್ರವಿದೆ. ತಮಿಳುನಾಡು ಉತ್ತರದಲ್ಲಿ ಪೂರ್ವ ಘಟ್ಟಗಳಿಂದ, ಪಶ್ಚಿಮದಲ್ಲಿ ನೀಲಗಿರಿ ಮಲೆಗಳು, ಆನಮಲೆ ಹಾಗು ಪಾಲಕ್ಕಾಡಿನಿಂದ, ಪೂರ್ವದಲ್ಲಿ ಬಂಗಾಳ ಕೊಲ್ಲಿಯಿಂದ, ಆಗ್ನೇಯದಲ್ಲಿ ಮನ್ನಾರ್ ಖಾರಿ, ಪಾಲ್ಕ್ ಜಲಸಂಧಿಯಿಂದ, ದಕ್ಷಿಣದಲ್ಲಿ ಹಿಂದು ಮಹಾಸಾಗರದಿಂದ ಸುತ್ತುವರೆಯಲ್ಪಟ್ಟಿದೆ. ತಮಿಳುನಾಡು ವಿಸ್ತೀರ್ಣದಲ್ಲಿ ಭಾರತದ ಹನ್ನೊಂದನೆಯ ಅತಿ ದೊಡ್ಡ ರಾಜ್ಯವಾಗಿದೆ ಹಾಗು ಜನಸಂಖ್ಯೆಯಲ್ಲಿ ಏಳನೆಯ ಅತಿ ದೊಡ್ಡ ರಾಜ್ಯವಾಗಿದೆ. ತಮಿಳುನಾಡು ನಿವ್ವಳ ದೇಶೀಯ ಉತ್ಪನ್ನಕ್ಕೆ ಐದನೆಯ ಅತಿ ದೊಡ್ಡ ಕೊಡುಗೆ ನೀಡುವ ರಾಜ್ಯವಾಗಿದೆ.ತಮಿಳುನಾಡು ಭಾರತದಲ್ಲಿ ಅತಿ ಹೆಚ್ಚು(೧೦.೫೬%) ವ್ಯಾಪಾರ ಉದ್ಯಮಗಳನ್ನು ಹೊಂದಿದೆ. ತಮಿಳುನಾಡು ಹಲವು ನೈಸರ್ಗಿಕ ಸಂಪನ್ಮೂಲಗಳಿಗೆ, ದ್ರಾವಿಡ ವಾಸ್ತುಶಿಲ್ಪ ಶೈಲಿಯ ಭವ್ಯವಾದ ಹಿಂದು ದೇವಾಲಯಗಳಿಗೆ, ಗಿರಿಧಾಮಗಳಿಗೆ, ಸಮುದ್ರತೀರದ ವಿಹಾರಧಾಮಗಳಿಗೆ, ತೀರ್ಥಯಾತ್ರಾ ಸ್ಥಳಗಳಿಗೆ ಹಾಗು ಐದು ಯುನೆಸ್ಕೋ ವಿಶ್ವ ಪಾರಂಪರಿಕ ನಿವೇಶನಗಳಿಗೆ ಬೀಡಾಗಿದೆ.
ತಮಿಳುನಾಡು | |
ರಾಜಧಾನಿ - ಸ್ಥಾನ |
ಚೆನ್ನೈ - |
ಅತಿ ದೊಡ್ಡ ನಗರ | ಚೆನ್ನೈ |
ಜನಸಂಖ್ಯೆ (2004) - ಸಾಂದ್ರತೆ |
62,405,679 (6ನೇ) - 478/km² |
ವಿಸ್ತೀರ್ಣ - ಜಿಲ್ಲೆಗಳು |
130,058 km² (11ನೇ) - 30 |
ಸಮಯ ವಲಯ | IST (UTC+5:30) |
ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ನವೆಂಬರ್ ೧,೧೯೫೬ - ಶ್ರೀ ಭನ್ವರಿ ಲಾಲ್ ಪುರೋಹಿತ್ - ಪಳನಿಸ್ವಾಮಿ - Unicameral (235) |
ಅಧಿಕೃತ ಭಾಷೆ(ಗಳು) | ತಮಿಳು |
Abbreviation (ISO) | IN-TN |
ಅಂತರ್ಜಾಲ ತಾಣ: www.tn.gov.in | |
ತಮಿಳುನಾಡು ರಾಜ್ಯದ ಮುದ್ರೆ |
ಪರ್ಯಾಯ ದ್ವೀಪದ ಆಗ್ನೇಯ ತುದಿಯಲ್ಲಿ, ಉ. ಅ 8o 5' —13o 3 ಪೂ. ರೇ. 76o 15 — 80o 20 ನಡುವೆ ಇದೆ. ಉತ್ತರದಲ್ಲಿ ಆಂಧ್ರಪ್ರದೇಶ, ಪೂರ್ವದಲ್ಲಿ ಬಂಗಾಳ ಕೊಲ್ಲಿ, ದಕ್ಷಿಣದಲ್ಲಿ ಹಿಂದೂ ಸಾಗರ, ಪಶ್ಚಿಮದಲ್ಲಿ ಕೇರಳ, ವಾಯವ್ಯ ಮತ್ತು ಉತ್ತರದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಇವು ಇದರ ಮೇರೆಗಳು. ಪಶ್ಚಿಮದ ಅಂಚಿನಲ್ಲಿ ಪಶ್ಚಿಮ ಘಟ್ಟಗಳು ಹಬ್ಬಿವೆ. ತಮಿಳುನಾಡಿಗೆ ಪೂರ್ವದಲ್ಲಿ ಸು. ೯೯೮ ಕಿ.ಮೀ ಉದ್ದದ ಸಮುದ್ರ ತೀರವಿದೆ.
೩೦ ಜಿಲ್ಲೆಗಳೂ, ೮೩೨ ಪಟ್ಟಣಗಳೂ ಸು. ೧೬,೩೧೭ ಗ್ರಾಮಗಳೂ ಇರುವ ರಾಜ್ಯದ ವಿಸ್ತೀರ್ಣ ೧,೩೦,೦೫೮ ಚ.ಕಿ.ಮೀ. ಇಲ್ಲಿಯ ಪುರುಷ ಸಂಖ್ಯೆ ೩೧,೪೦೦,೯೦೯ ಸ್ತ್ರೀಯರು ೩೧,೦೦೪,೭೭೦ ಒಟ್ಟು ಜನಸಂಖ್ಯೆ ೬೨,೪೦೫,೬೭೯ (೨೦೦೧). ಇದಕ್ಕೆ ಸು. ೮೧೨ಕಿ.ಮೀ. ಉದ್ದದ ಕಡಲ ತೀರವಿದೆ. ಇದರ ವಿಸ್ತೀರ್ಣ ೫೦, ೧೮೦ ಚ.ಮೈ. (೧,೨೯,೯೬೬ ಚ.ಕಿಮೀ.) ಜನಸಂಖ್ಯೆ ೧,೩೦,೦೫೮.ಚ.ಕಿ.ಮೀ. ಜನಸಂಖ್ಯೆ ೬,೨೧,೧೦,೮೩೯ (೨೦೦೫) ಹಳೆಯ ಮದ್ರಾಸ್ ಪ್ರಾಂತ್ಯದಲ್ಲಿ ತಮಿಳು ಭಾಷೆಯಾಡುವ ಜನರಿದ್ದ ಪ್ರದೇಶವನ್ನು ೧೯೫೬ರ ರಾಜ್ಯ ಪುನರ್ವಿಂಗಡಣೆಯ ಅಧಿನಿಯಮದ ಪ್ರಕಾರ ಪ್ರತ್ಯೇಕಿಸಿ ಈ ರಾಜ್ಯವನ್ನು ನಿರ್ಮಿಸಲಾಯಿತು. ವಿಸ್ತೀರ್ಣದಲ್ಲಿ ಇದು ಭಾರತದ ಹತ್ತನೆಯ ರಾಜ್ಯ, ಜನಸಂಖ್ಯೆಯಲ್ಲಿ ಇದಕ್ಕೆ ಐದನೆಯ ಸ್ಥಾನ. ರಾಜಧಾನಿ ಚೆನ್ನೈ.
ತಮಿಳು ನಾಡನ್ನು ಸ್ಥೂಲವಾಗಿ ಎರಡು ಭಾಗಗಳಾಗಿ ವಿಂಗಡಿಸಬಹುದು: 1 ಪೂರ್ವತೀರಪ್ರದೇಶ : ಇದು ಮೈದಾನ. 2 ಉತ್ತರ ಮತ್ತು ಪಶ್ಚಿಮ ಪ್ರದೇಶ, ಇದು ಉನ್ನತ ಭೂಮಿ, ಮೈದಾನವನ್ನು ಮತ್ತೆ ಮೂರು ಭಾಗಗಳಾಗಿ ವಿಂಗಡಿಸಬಹುದು:1 ಚೆಂಗಲ್ ಪಟ್ಟು ಮತ್ತು ದಕ್ಷಿಣ ಆರ್ಕಾಟ್ ಜಿಲ್ಲೆಗಳನ್ನೊಳಗೊಂಡ ಕೋರಮಂಡಲ ಮೈದಾನ, ತಿರುಚ್ಚಿರಾಪ್ಪಳ್ಳಿ ಮತ್ತು ತಂಜಾವೂರು ಜಿಲ್ಲೆಯ ಕಾವೇರಿ ಬಯಲು ಮತ್ತು ೩ ಮಧುರೈ ಮತ್ತು ರಾಮನಾಥಪುರಂ ಜಿಲ್ಲೆಗಳನ್ನೊಳಗೊಂಡ ದಕ್ಷಿಣದ ಬಯಲು. ಈ ಮೂರರಲ್ಲಿ ಕಾವೇರಿ ಬಯಲೇ ಬಲು ಅಗಲವಾದ್ದು. ಪೂರ್ವ ಘಟ್ಟಗಳು ಹಲವು ಬಿಡಿ ಬೆಟ್ಟಗಳ ರೂಪದಲ್ಲಿ ಈ ರಾಜ್ಯದೊಳಕ್ಕೆ ವಿಸ್ತರಿಸಿವೆ. ಇವುಗಳಲ್ಲಿ ಮುಖ್ಯವಾದವು ಜವಾದಿ, ಷೆವರಾಯ್, ಕಲ್ಲೈ ಮಲೈ ಮತ್ತು ಪಚ್ಚೈ ಮಲೈ. ಈ ಬೆಟ್ಟಗಳ ಸಾಲು ಮುಂದೆ ಇನ್ನೂ ದಕ್ಷಿಣಕ್ಕೆ ಸಾಗಿ ಮಧುರೈ ಜಿಲ್ಲೆಯಲ್ಲಿ ಏಲಕ್ಕಿ ಬೆಟ್ಟಗಳನ್ನು ಸೇರುತ್ತದೆ. ಪೂರ್ವ ಘಟ್ಟಗಳು ಸೋಪಾನದೋಪಾದಿಯಲ್ಲಿರುವುದರಿಂದ ಇವಕ್ಕೆ ಘಟ್ಟಗಳೆಂದು ಹೆಸರು ಬಂದಿದೆ. ಇವು ಸ್ಥೂಲವಾಗಿ ದಕ್ಷಣೋತ್ತರವಾಗಿ ಹಬ್ಬಿವೆ.
ಪಶ್ಚಿಮದಲ್ಲಿರುವ ಪಶ್ಚಿಮ ಘಟ್ಟಗಳು ಪೂರ್ವಘಟ್ಟಗಳಿಗಿಂತ ತೀರ ಭಿನ್ನವಾದವು. ಅವು ಏಕಪ್ರಕಾರವಾಗಿ ಹಬ್ಬಿರುವ ಶ್ರೇಣಿಗಳು. ಬೃಹತ್ತಿನಲ್ಲಿಯೂ ಮಹತ್ತಿನಲ್ಲಿಯೂ ಅವುಗಳ ಮುಂದೆ ಪೂರ್ವಘಟ್ಟಗಳು ಬಲು ಕುಬ್ಜ. ಪಾಲಕ್ಕಾಡ್ ಬಳಿಯ ಘಾಟಿನ ಅಗಲ ಸುಮಾರು ೨೪ಕಿ.ಮೀ. ಈ ಘಾಟಿನಿಂದ ದಕ್ಷಿಣಕ್ಕೆ ಪಶ್ಚಿಮ ಘಟ್ಟಗಳು ಮತ್ತೆ ಏರಿ, ಅಣ್ಣಾಮಲೈ ಬೆಟ್ಟಗಳಾಗಿ ಪರಿಣಮಿಸುತ್ತವೆ. ಇವುಗಳ ಪೂರ್ವ ಶಾಖೆಯೇ ಪಳನಿ ಬೆಟ್ಟ. ಇದರಲ್ಲಿರುವ ಕೋಡೈಕ್ಕಾನಾಲ್ ಒಂದು ಬೇಸಗೆ ಗಿರಿಧಾಮ. ಅಲ್ಲಲ್ಲಿ ೬,೦೦೦-೭,೦೦೦ ಅಡಿಗಳ ಎತ್ತರಕ್ಕಿರುವ ಪಶ್ಚಿಮ ಘಟ್ಟಗಳಿಗೆ ಪಾಲಕ್ಕಾಡ್ ಮತ್ತು ಷೆನ್ಕೊಟ್ಟಾ ಬಳಿ ಮಾತ್ರ ತೆರಪುಗಳವೆ. ಪೂರ್ವ ಪಶ್ಚಿಮ ಘಟ್ಟಗಳು ನೀಲಗಿರಿ ಜಿಲ್ಲೆಯಲ್ಲಿ ಸಂಧಿಸಿ ಒಂದು ಪರ್ವತ ಗ್ರಂಥಿಯಾಗಿ ಪರಿಣಮಿಸಿವೆ. ತಮಿಳು ನಾಡಿನಲ್ಲಿರುವ ಶಿಖರಗಳು ದೊಡ್ಡ ಬೆಟ್ಟ (೮,೬೫೦') ಮಾಕುರ್ತಿ (೮,೩೮೦') ಮತ್ತು ಅಣ್ಣೈ ಮುಡಿ (೮,೮೩೭'). ಇವುಗಳಲ್ಲಿ ಮೊದಲನೆಯ ಎರಡು ನೀಲಗಿರಿ ಬೆಟ್ಟಗಳಲ್ಲೂ ಕೊನೆಯದು ಅಣ್ಣಾ ಮಲೈ ಬೆಟ್ಟಗಳಲ್ಲೂ ಇವೆ. ವೈಗೈ, ತಾಮ್ರಪರ್ಣಿ ಮುಂತಾದ ಮುಖ್ಯ ನದಿಗಳು ಪಶ್ಚಿಮ ಘಟ್ಟಗಳಲ್ಲಿ ಹುಟ್ಟುತ್ತವೆ. ಪಾಲಾರ್, ಪೊನ್ನೈಯಾರ್, ಕಾವೇರಿ_ಇವು ಅಂತರರಾಜ್ಯ ನದಿಗಳು. ಸ್ಥಳೀಯ ಪ್ರಾಮುಖ್ಯವುಳ್ಳ ನದಿಗಳು ಅರಣಿಯಾರ್, ಕೋರ್ತಲಿಯಾರ್, ಕೂವಮ್, ಗಡಿಲಾಮ್, ಗೋಮುಖಿ, ಮಣಿಮುಕ್ತ, ಉತ್ತರವೆಲ್ಲಾರ್, ಅಗ್ನಿಯಾರ್, ದಕ್ಷಿಣ ವೆಲ್ಲಾರ್, ದಕ್ಷಿಣ ಪಾಲಾರ್, ವೈಪ್ಪಾರ್, ಚಿತ್ತಾರ್, ಕೋಡೈಯಾರ್ ಮತ್ತು ಪಟಿಯಾರ್, ಕೋಡೈಯಾರ್ ಮತ್ತು ಪಟಿಯಾರ್ಗಳನ್ನುಳಿದು ಎಲ್ಲ ನದಿಗಳೂ ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಹರಿದು ಬಂಗಾಳ ಕೊಲ್ಲಿ ಸೇರುತ್ತವೆ. ಈ ನದಿಗಳ ಮೇಲ್ದಂಡೆಗಳು ಬಂಡೆಗಲ್ಲು ಪ್ರದೇಶಗಳಾದ್ದರಿಂದ ಅಲ್ಲಿ ಜಲೋತ್ಸರಣ ಮಾಡಿಕೊಂಡು ಹರಿಯುವುದರಿಂದ ಕೆಳದಂಡೆಗಳ ಮೈದಾನ ಹಾಗೂ ಕರಾವಳಿಗಳಲ್ಲಿ ಅವಕ್ಕೆ ಕಟ್ಟೆಗಳನ್ನು ಕಟ್ಟಿ ನೀರಾವರಿಗೂ ವಿದ್ಯುತ್ತಿನ ಉತ್ಪಾದನೆಗೂ ನೀರನ್ನು ಬಳಸಿಕೊಳ್ಳಲಾಗಿದೆ. ತಮಿಳು ನಾಡಿನ ಅತ್ಯಂತ ದೊಡ್ಡ ನದಿ ಕಾವೇರಿ (ನೋಡಿ- ಕಾವೇರಿನದಿ). ಕರ್ನಾಟಕದ ಮಡಿಕೇರಿ ಜಿಲ್ಲೆಯಲ್ಲಿ ಹುಟ್ಟುವ ಈ ನದಿ ಆಗ್ನೇಯಾಭಿಮುಖವಾಗಿ ಹರಿದು ಶಿವನಸಮುದ್ರದ ಜಲಪಾತಗಳಿಂದ ಕೆಳಕ್ಕೆ ತಮಿಳು ನಾಡನ್ನು ಪ್ರವೇಶಿಸುತ್ತದೆ. ಭವಾನಿ, ನೊಯ್ಯಾಲ್, ಅಮರಾವತಿ_ಇವು ತಮಿಳು ನಾಡಿನಲ್ಲಿ ಕಾವೇರಿಯ ಮುಖ್ಯ ಉಪನದಿಗಳು ಜೂನ್ನಿಂದ ಸೆಪ್ಟೆಂಬರ್ ವರೆಗೆ ಕಾವೇರಿಯಲ್ಲಿ ಪ್ರವಾಹ ವಿಶೇಷವಾಗಿರುತ್ತದೆ.
ತಮಿಳು ನಾಡಿನದು ಮೂಲಭೂತವಾಗಿ ಉಷ್ಣವಲಯದ ವಾಯುಗುಣ. ಉಷ್ಣತೆಯಲ್ಲಿ ಅತಿಯಾದ ಏರಿಳಿತಗಳಿಲ್ಲ. ಗರಿಷ್ಠ ಉಷ್ಣತೆ 43o ಅ (110o ಈ)ನ್ನು ಸಾಮಾನ್ಯವಾಗಿ ಮೀರುವುದಿಲ್ಲ. ಕನಿಷ್ಠ ಉಷ್ಣತೆ 18o ಅ (65o ಈ) ಗಿಂತ ಕೆಳಕ್ಕೆ ಇಳಿಯುವುದು ಅಪರೂಪ. ಅತ್ಯಂತ ಕಡಿಮೆ ಉಷ್ಣತೆ ದಾಖಲಾಗುವುದು ಡಿಸೆಂಬರ್ ಮತ್ತು ಜನವರಿಗಳಲ್ಲಿ : ಅತ್ಯಂತ ಹೆಚ್ಚಿನ ಉಷ್ಣತೆ ಏಪ್ರಿಲ್ ನಿಂದ ಜೂನ್ ವರೆಗೆ. ಆಗ್ನೇಯ ಮತ್ತು ಈಶಾನ್ಯ ಮಾನ್ಸೂನುಗಳ ಕಾಲದಲ್ಲಿ ರಾಜ್ಯದಲ್ಲಿ ಮಳೆಯಾಗುತ್ತದೆ. ಇವೆರಡರ ನಡುವೆ ಸುಮಾರು ಆರು ವಾರಗಳ ಅಂತರ ಇರುತ್ತದೆ. ಸಾಮಾನ್ಯವಾಗಿ ಆಗ್ನೇಯ ಮಾನ್ಸೂನ್ ಮಳೆ ಕ್ರಮಪ್ರಾಪ್ತವಾದ್ದು. ಈಶಾನ್ಯ ಮಾನ್ಸೂನ್ ಕೆಲಮೊಮ್ಮೆ ಮಳೆ ತಾರದಿರುವುದುಂಟು. ಎರಡರಿಂದ ಐದು ವರ್ಷಗಳವರೆಗೆ ಹೀಗಾಗಬಹುದು. ಒಂದೇ ವರ್ಷದಲ್ಲಿ ಎರಡೂ ಮಾನ್ಸೂನ್ಗಳ ನಿರಾಶೆಗೊಳಿಸುವುದು ಬಲು ವಿರಳ. ಒಟ್ಟು ವಾರ್ಷಿಕ ಮಳೆಯಲ್ಲಿ ಈಶಾನ್ಯ ಮಾನ್ಸೂನಿನ ಪಾಲು ಕರಾವಳಿ ಜಿಲ್ಲೆಗಳಲ್ಲಿ ಸೇ. ೬೦. ಒಳನಾಡಿನಲ್ಲಿ ಸೇ. ೪೦. ಅಕ್ಟೋಬರ್ ನಿಂದ ನವೆಂಬರ್ ವರೆಗಿನ ಅವಧಿಯಲ್ಲೇ ಬಹುತೇಕ ಮಳೆ. ಒಳನಾಡಿನಲ್ಲಿ ಅಕ್ಟೋಬರ್ನಲ್ಲಿ ಹೆಚ್ಚು ಮಳೆಯಾದರೆ, ಕರಾವಳಿ ಜಿಲ್ಲೆಗಳಲ್ಲಿ ನವೆಂಬರಿನಲ್ಲಿ ಹೆಚ್ಚು ಮಳೆ. ಈಶಾನ್ಯ ಮಾನ್ಸೂನ್ ಮಳೆ ಎಲ್ಲ ಜಿಲ್ಲೆಗಳಲ್ಲೂ ವರ್ಷದಿಂದ ವರ್ಷಕ್ಕೆ ವ್ಯತ್ಯಾಸವಾಗುತ್ತಿರುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆ ಬಹಳ ಮಟ್ಟಿಗೆ ಅವನಮನ (ಡಿಪ್ರೆಷನ್) ಮತ್ತು ಚಂಡಮಾರುತಗಳನ್ನು ಅವಲಂಬಿಸಿರುತ್ತದೆ. ಮಾರ್ಚ್-ಮೇ ತಿಂಗಳುಗಳಲ್ಲಿ ಗುಡುಗಿನಿಂದ ಕೂಡಿದ ಮಳೆ 5em—15emವರಗೆ ಮಳೆ ಆಗುವುದು ನೀಲಗಿರಿ ಮತ್ತು ಇತರ ಬೆಟ್ಟಸೀಮೆಗಳಲ್ಲಿ. ರಾಮನಾಥಪುರಂ ಮತ್ತು ತಿರುನೆಲ್ವೇಲಿ ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ಮಳೆ.
ತಮಿಳು ನಾಡಿನ ಸಸ್ಯ ಅಲ್ಲಿಯ ವಾಯುಗುಣ ಮತ್ತು ಮಣ್ಣಿಗೆ ಅನುಗುಣವಾದ್ದು. ರಾಜ್ಯದ ಸೇ. ೧೫ ಭಾಗ ಅರಣ್ಯಾವೃತ. ನೀಲಗಿರಿ, ಅಣ್ಣಾಮಲೈ ಮತ್ತು ಪಳನಿ ಬೆಟ್ಟಗಳ ಉನ್ನತ ಭಾಗಗಳಲ್ಲಿ ಉಪ ಅಲ್ಪೈನ್ ಸಸ್ಯ ಬೆಳೆಯುತ್ತದೆ. ಪಶ್ಚಿಮ ಘಟ್ಟಗಳ ಪೂರ್ವ ಪಾಶ್ರ್ವದಲ್ಲೂ ಉತ್ತರ ಮತ್ತು ಮಧ್ಯ ಜಿಲ್ಲೆಗಳ ಬೆಟ್ಟಗಳ ಪ್ರದೇಶದಲ್ಲೂ ನಿತ್ಯ ಹಸುರಿನ ಮತ್ತು ಪರ್ಣಪಾತಿ ಸಸ್ಯಗಳೂ ಕುರುಚಲುಗಳೂ ಇವೆ. ಕೆಳ ಕಾವೇರಿ ಕಣಿವೆಯಲ್ಲಿ ಅತ್ಯಂತ ಸಮೃದ್ಧವಾದ ನಿತ್ಯ ಹಸುರಿನ ಆರ್ದ್ರ ಅರಣ್ಯಗಳುಂಟು. ನಾನಾ ಸ್ತರಗಳಿಂದ ಕೂಡಿದ ಸಸ್ಯಜಾತಿಗಳನ್ನಿಲ್ಲಿ ಕಾಣಬಹುದು. ಮಧ್ಯಕಣಿವೆಯ ಕಾಡುಗಳನ್ನೆಲ್ಲ ಕಡಿದು ಇಲ್ಲಿಯ ನೆಲವನ್ನೆಲ್ಲ ವ್ಯವಸಾಯಕ್ಕೆ ಬಳಸಿಕೊಂಡಿರುವುದರಿಂದ ಮೂಲ ನೈಸರ್ಗಿಕ ಸಸ್ಯ ಇಲ್ಲಿ ಕಾಣುವುದಿಲ್ಲ. ಅಲ್ಲಲ್ಲಿ ಕುರುಚಲೂ ನೀರಿನ ಹರಿವಿನ ಬಳಿಯಲ್ಲಿ ಮತ್ತು ತಗ್ಗಿನ ನೆಲೆಗಳಲ್ಲಿ ಕಾಡುಗಳೂ ಇವೆ.
ರಾಜ್ಯದ ಜಲಪಕ್ಷಿಗಳ ವೈವಿಧ್ಯವನ್ನು ವೇದಾಂತಂಗಳ್ ಪಕ್ಷಿಧಾಮದಲ್ಲೂ ಇತರ ವನ್ಯ ಜೀವಿಗಳ ಬಗೆಗಳನ್ನು ಮುದು ಮಲೈ ಅಭಯಾರಣ್ಯದಲ್ಲೂ ಕಾಣಬಹುದು. ತಮಿಳುನಾಡಿನ ಮುಖ್ಯ ಅಭಯಾರಣ್ಯಗಳು ಇವು (ಇವುಗಳ ವಿಸ್ತೀರ್ಣಗಳನ್ನು ಹೆಕ್ಟೇರುಗಳಲ್ಲಿ ಆವರಣಗಳೊಳಗೆ ಕೊಟ್ಟಿದೆ)
ದೇವಾಲಯ ಇಲ್ಲದ ಊರಿನಲ್ಲಿ ವಾಸಮಾಡಬಾರದು ಎಂದು ಒಂದು ತಮಿಳು ಗಾದೆ ಇದೆ. ತಮಿಳು ನಾಡಿನಲ್ಲಿ ದೇವಾಲಯ ಇಲ್ಲದ ದೊಡ್ಡ ಊರೇ ಇಲ್ಲ. ಮಧುರೈ ಜಿಲ್ಲೆಯ ರಾಜಧಾನಿಯಾಗಿರುವ ಮಧುರೆಯಲ್ಲಿ ಪ್ರಸಿದ್ಧವಾದ ಮೀನಾಕ್ಷಿ ದೇವಾಲಯ ಇದೆ. ಶಕ್ತಿಯ (ಪಾರ್ವತಿಯ) ಹಿರಿಮೆಯನ್ನು ಇದು ತೋರಿಸುತ್ತದೆ. ಮಧುರೈಗೆ ಸಮೀಪದಲ್ಲಿ ತಿರುಪ್ಪರಕ್ಕುನ್ಅಮ್ ಇದೆ. ಇದು ಪ್ರಸಿದ್ಧವಾದ ಮುರುಗನ ಗುಡಿ.ಕಾಂಚೀಪುರದಲ್ಲಿ ಸಂಸ್ಕೃತ ಮತ್ತು ತಮಿಳು ಸಂಸ್ಕೃತಿಯನ್ನು ಕಾಣಲಾಗುವುದು. ಹಳೆಯ ಕಾಲದಲ್ಲಿ ಕಂಚಿಯಲ್ಲಿ ಪಸಿದ್ಧ ವಿಶ್ವವಿದ್ಯಾಲಯ ಇತ್ತು. ಕಂಚಿಯಲ್ಲಿ ಹಲವು ದೇವಾಲಯಗಳಿದ್ದರೂ ಕಾಮಾಕ್ಷಿ ದೇವಾಲಯವೂ ವರದರಾಜ ದೇವಾಲಯವೂ ಹೆಸರಿಸುವಂಥವಾಗಿವೆ. ರಾಮೇಶ್ವರಮ್ ಎಂಬ ಸ್ಥಳ ರಾಮನಾಥಪುರಮ್ ಜಿಲ್ಲೆಯಲ್ಲಿದೆ. ರಾವಣನನ್ನು ಕೊಂದ ಪಾಪನಿವಾರಣೆಗಾಗಿ ರಾಮ ಶಿವನನ್ನು ಪೂಜಿಸಿದ ಸ್ಥಳ ಇದೆಂದು ಹಿಂದೂಗಳ ನಂಬಿಕೆ, ಈ ದೇವಾಲಯ ತಮಿಳು ನಾಡಿನ ವಾಸ್ತುವಿನ ಹಿರಿಮೆಗೆ ಸಾಕ್ಷಿಯಾಗಿದೆ. ಈ ಗುಡಿಯ ಉದ್ದ ೧,೦೦೦ ಅಡಿ, ಅಗಲ 657 ಅಡಿ. ಉತ್ತರ ಆರ್ಕಾಟ್ ಜಿಲ್ಲೆಯಲ್ಲಿರುವ ತಿರುವಣ್ಣಾಮಲೈ ಕಾರ್ತಿಕೈ ದೀಪದಿಂದ ಪ್ರಸಿದ್ಧಿ ಪಡೆದಿದೆ.ದಕ್ಷಿಣ ಆರ್ಕಾಟ್ ಜಿಲ್ಲೆಯ ಚಿದಂಬರದಲ್ಲಿ ಇರುವುದು ನಟರಾಜ ದೇವಾಲಯ. ಇಲ್ಲಿ ಶಿವ ನೃತ್ಯ ಮಾಡುವ ರೂಪದಲ್ಲಿ ದರ್ಶನ ಕೊಡುತ್ತಾನೆ. ಅವನ ಅಟ ಪ್ರಪಂಚವನ್ನೇ ಆಡಿಸುವುದು ಎನ್ನುವರು. ಚಿದಂಬರದಲ್ಲಿ ಆಚರಿಸುವ ಆರಿದ್ರಾದರ್ಶನ ಪ್ರಖ್ಯಾತ ಪಡೆದಿದೆ. ಚಿದಂಬರಕ್ಕೆ ಪೂರ್ವ ದೆಸೆಯಲ್ಲಿರುವುದು ಅಣ್ಣಾಮಲೈ ನಗರ. ಅಲ್ಲಿ ಅಣ್ನಾಮಲೈ ವಿಶ್ವವಿದ್ಯಾಲಯ ಇದೆ. ತಿರುಚ್ಚಿರಾಪ್ಪಳ್ಳಿಗೆ ಸಮೀಪದಲ್ಲಿರುವ ಶ್ರೀರಂಗಮ್ ವಿಷ್ಣುಕ್ಷೇತ್ರ. ಶ್ರೀ ರಂಗನಾಥ ಶ್ರೀರಂಗದ ದೇವಾಲಯದಲ್ಲಿ ಮಲಗಿಕೊಂಡಿದ್ದಾನೆ. ಶ್ರೀರಂಗಕ್ಕೆ ಸಮೀಪದಲ್ಲಿರುವುದು ತಿರುವಾನೈಕ್ಕಾ. ಇಲ್ಲಿ ಇರುವ ಅಖಿಲಾಂಡೇಶ್ವರಿ ಜಂಬುಕೇಶ್ವರನ ದೇವಾಲಯ ಪ್ರಸಿದ್ಧವಾಗಿದೆ.ತಂಜಾವೂರ್ ಜಿಲ್ಲೆಯ ಕೇಂದ್ರವಾದ ತಂಜಾವೂರಿಗೆ ೩೫ ಮೈ. ದೂರದಲ್ಲಿರುವ ತಿರುವಾರೂರಿನಲ್ಲಿ ತ್ಯಾಗರಾಜರ ಸಮಾಧಿ ಇದೆ. ತಿರುವಾರೂರಿನ ತೆಪ್ಪಶ್ತಿರು¿¿õÁ (ತೆಪ್ಪೋತ್ಸವ) ಹೆಸರಿಸುವಂಥದು. ತಿರುವಾರೂರಿನಲ್ಲಿ ಇರುವ ರಥ ತುಂಬ ದೊಡ್ಡದು, ಬಲು ಸುಂದರವಾದ್ದು. ಚೆಂಗಲ್ಪಟ್ಟು ಜಿಲ್ಲೆಯಲ್ಲಿರುವುದು ತಿರುಕ್ಕರುಕ್ಕನ್ರಮ್ ಎಂಬ ಸ್ಥಳ. ಪಳನಿಯಲ್ಲಿ ಮುರುಗನ ದೇವಾಲಯವಿದೆ. ತಂಜಾವೂರು ಜಿಲ್ಲೆಯ ಕುಂಭಕೋಣದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಮಹಾಮಖಮ್ ಎಂಬ ಹಬ್ಬ ನಡೆಯುತ್ತದೆ. ಮಹಾಮಖಮ್ ಕೊಳದಲ್ಲಿ ಸ್ನಾನಮಾಡುವುದಕ್ಕೆ ಇತರ ಭಾರತದ ಭಾಗಗಳಿಂದ ಯಾತ್ರಿಕರು ಬರುವರು. ತಂಜಾವೂರಿನಲ್ಲಿರುವ ಬೃಹದೀಶ್ವರ ದೇವಾಲಯ ತುಂಬ ದೊಡ್ಡದು. ಇದನ್ನು ದೊಡ್ಡ ದೇವಾಲಯ ಎಂದೇ ಜನರು ಕರೆಯುವರು. ತಿರುತ್ತಣಿ, ತಿರುನೆಲ್ವೇಲಿ ಜಿಲ್ಲೆಯ ತಿರುಚ್ಚೆಂದೂರ್, ಕನ್ಯಾಕುಮಾರಿ_ಇವು ಪ್ರಸಿದ್ಧ ಪುಣ್ಯಸ್ಥಳಗಳು.
ತಮಿಳು ನಾಡಿನ ಪುಣ್ಯಸ್ಥಳಗಳು ಚರಿತ್ರೆ, ಸಾಹಿತ್ಯ, ಸಮಯ, ತತ್ತ್ವ, ಪುರಾಣಗಳಿಂದ ಪ್ರಸಿದ್ಧಿ ಪಡೆದಿವೆ. ಹಲವು ಶೈವ ಸ್ಥಳಗಳನ್ನು ಕುರಿತು ಅಪ್ಪರ್, ಸಂಬಂಧರ್, ಸುಂದರರ್ ಮುಂತಾದವರು ತೇವಾರಗಳನ್ನು ಹಾಡಿದ್ದಾರೆ. ಶ್ರೀವೈಷ್ಣವ ಸ್ಥಳಗಳಿಗೆ ಮಂಗಳಾಶಾಸನಗಳಿವೆ; ಎಂದರೆ ಆಳ್ವಾರಗಳು ಇವನ್ನು ಹಾಡಿ ಹೊಗಳಿದ್ದಾರೆ. ೬೩ ನಾಯನ್ಮಾರ್ಗಳೂ ೧೨ ಆಳ್ವಾರ್ಗಳೂ ಹುಟ್ಟಿದ ಗ್ರಾಮಗಳೂ ಪುಣ್ಯಸ್ಥಳಗಳೇ. ತಮಿಳು ನಾಡಿನಲ್ಲಿ ಇತರ ಮತದವರ ಪುಣ್ಯಸ್ಥಳಗಳೂ ಉಂಟು. ತಂಜಾವೂರು ಜಿಲ್ಲೆಯ ನಾಗಪಟ್ಟಿನಕ್ಕೆ ಸಮೀಪದಲ್ಲಿರುವ ವೇಳಾಂಗಣ್ಣಿ ಕ್ರೈಸ್ತರ ಪವಿತ್ರ ಸ್ಥಳ. ನಾಗೂರ್ ಎಂಬುದು ಮಹಮ್ಮದೀಯರ ಪವಿತ್ರ ಕ್ಷೇತ್ರ. ವೇಳಾಂಗಣ್ಣಿಯ ಹಬ್ಬವನ್ನೂ ನಾಗೂರ್ ಕಂದೂರಿ ಹಬ್ಬವನ್ನೂ ನೋಡಲು ಹಿಂದೂಗಳೂ ಗುಂಪು ಗುಂಪಾಗಿ ಹೋಗುತ್ತಾರೆ.
ತಮಿಳು ನಾಡಿನ ಸರ್ಕಾರ ವ್ಯವಸ್ಥೆ ಭಾರತ ಗಣರಾಜ್ಯದ ಇತರ ರಾಜ್ಯಗಳವುಗಳದರಂತೆಯೇ ಇದೆ. ರಾಷ್ಟ್ರಪತಿಯಿಂದ ನೇಮಕ ಹೊಂದಿದ ರಾಜ್ಯಪಾಲ ರಾಜ್ಯದ ಮುಖ್ಯ. ರಾಜ್ಯ ವಿಧಾನಮಂಡಲದಲ್ಲಿ ವಿಧಾನ ಪರಿಷತ್ತು (ಮೇಲ್ಮನೆ) ಮತ್ತು ವಿಧಾನ ಸಭೆ ಇವೆ. ವಿಧಾನ ಸಭೆಯ ಸದಸ್ಯರು ಸಾಮಾನ್ಯವಾಗಿ ಐದು ವರ್ಷಗಳಿಗೊಮ್ಮೆ ಸಾರ್ವತ್ರಿಕ ಮತದಾನದಿಂದ ನೇರವಾಗಿ ಆಯ್ಕೆಯಾಗುತ್ತಾರೆ. ವಿಧಾನ ಸಭೆ, ಸ್ಥಳೀಯ ಸಂಸ್ಥೆಗಳು, ಪದವೀಧರರು. ಅಧ್ಯಾಪಕ ಕ್ಷೇತ್ರಗಳಿಂದ ಆಯ್ಕೆ ಹೊಂದಿದವರು, ಮತ್ತು ರಾಜ್ಯಪಾಲರಿಂದ ನಾಮಕರಣವಾದವರು ವಿಧಾನ ಪರಿಷತ್ತಿನ ಸದಸ್ಯರು. ಮುಖ್ಯಮಂತ್ರಿ ಮತ್ತು ಆತನ ಸಂಪುಟ ಸದಸ್ಯರು ವಿಧಾನ ಮಂಡಲಕ್ಕೆ ಉತ್ತರವಾದಿಗಳಾಗಿರುತ್ತಾರೆ.ರಾಜ್ಯದ ನ್ಯಾಯವ್ಯವಸ್ಥೆ ಉಚ್ಚ ನ್ಯಾಯಾಲಯದ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಜಿಲ್ಲೆಯ ಮತ್ತು ಅದಕ್ಕಿಂತ ಕೆಳಗಿನ ನ್ಯಾಯಾಲಯಗಳಿವೆ.ರಾಜ್ಯವನ್ನು 30 ಜಿಲ್ಲೆಗಳಾಗಿ ವಿಂಗಡಿಸಲಾಗಿದೆ: ಜಿಲ್ಲೆಯ ಉನ್ನತ ಅಧಿಕಾರಿ ಕಲೆಕ್ಟರ್.
ಜಿಲ್ಲೆ | ಜಿಲ್ಲಾ ಕೇಂದ್ರ | ವಿಸ್ತೀರ್ಣ | ಜನಸಂಖ್ಯೆ (2011) | ಜನಸಂಖ್ಯೆ ಸಾಂದ್ರತೆ | |
---|---|---|---|---|---|
1 | ಅರಿಯಾಲೂರು | ಅರಿಯಾಲೂರು | ೧,೯೪೪ km2 | ೭,೫೨,೪೮೧ | ೩೮೭ /km2 |
2 | ಚೆನ್ನೈ | ಚೆನ್ನೈ | ೧೭೪ km2 | ೪೬,೮೧,೦೮೭ | ೨೬,೯೦೩ /km2 |
3 | ಕೊಯಮತ್ತೂರು | ಕೊಯಮತ್ತೂರು | ೪,೬೪೨ km2 | ೩೧,೭೨,೫೭೮ | ೬೪೮ /km2 |
4 | ಕಡಲೂರು | ಕಡಲೂರು | ೩,೭೦೫ km2 | ೨೬,೦೦,೮೮೦ | ೭೦೨ /km2 |
5 | ಧರ್ಮಪುರಿ | ಧರ್ಮಪುರಿ | ೪,೫೨೭ km2 | ೧೫,೦೨,೯೦೦ | ೩೩೨ /km2 |
6 | ಡಿಂಡಿಗಲ್ | ಡಿಂಡಿಗಲ್ | ೬,೦೫೪ km2 | ೨೧,೬೧,೩೬೭ | ೩೫೭ /km2 |
7 | ಈರೋಡು | ಈರೋಡು | ೫,೬೯೨ km2 | ೨೨,೫೯,೬೦೮ | ೩೯೭ /km2 |
8 | ಕಾಂಚೀಪುರಂ | ಕಾಂಚೀಪುರಂ | ೪,೩೦೫ km2 | ೨೬,೯೦,೮೯೭ | ೬೬೬ /km2 |
9 | ಕನ್ಯಾಕುಮಾರಿ | ನಾಗರ್ಕೋಯಿಲ್ | ೧,೬೮೫ km2 | ೧೮,೬೩,೧೭೪ | ೧,೧೦೬ /km2 |
10 | ಕರೂರು | ಕರೂರು | ೨,೯೦೨ km2 | ೧೦,೭೬,೫೮೮ | ೩೭೧ /km2 |
11 | ಕೃಷ್ಣಗಿರಿ | ಕೃಷ್ಣಗಿರಿ | ೫,೦೯೧ km2 | ೧೮,೮೩,೭೩೧ | ೩೭೦ /km2 |
12 | ಮದುರೈ | ಮದುರೈ | ೩,೬೯೫ km2 | ೨೪,೪೧,೦೩೮ | ೬೬೩ /km2 |
13 | ನಾಗಪಟ್ಟಿಣಂ | ನಾಗಪಟ್ಟಿಣಂ | ೨,೪೧೬ km2 | ೧೬,೧೪,೦೬೯ | ೬೬೮ /km2 |
14 | ನಮಕ್ಕಲ್ | ನಮಕ್ಕಲ್ | ೩,೪೦೨ km2 | ೧೭,೨೧,೧೭೯ | ೫೦೬ /km2 |
15 | ನೀಲಗಿರಿ | ಉದಕಮಂಡಲಂ | ೨,೫೫೨ km2 | ೭,೩೫,೦೭೧ | ೨೮೮ /km2 |
16 | ಪೆರುಂಬಲೂರು | ಪೆರುಂಬಲೂರು | ೧,೭೪೮ km2 | ೫,೬೪,೫೧೧ | ೩೨೩ /km2 |
17 | ಪುದುಕೊಟ್ಟೈ | ಪುದುಕೊಟ್ಟೈ | ೪,೬೫೨ km2 | ೧೬,೧೮,೭೨೫ | ೩೪೮ /km2 |
18 | ರಾಮನಾಥಪುರಂ | ರಾಮನಾಥಪುರಂ | ೪,೧೮೦ km2 | ೧೩,೩೭,೫೬೦ | ೩೨೦ /km2 |
19 | ಸೇಲಂ | ಸೇಲಂ | ೫,೨೪೯ km2 | ೩೪,೮೦,೦೦೮ | ೬೬೩ /km2 |
20 | ಶಿವಗಂಗ | ಶಿವಗಂಗ | ೪,೧೪೦ km2 | ೧೩,೪೧,೨೫೦ | ೩೨೪ /km2 |
21 | ತಂಜಾವೂರ್ | ತಂಜಾವೂರ್ | ೩,೪೭೭ km2 | ೨೩,೦೨,೭೮೧ | ೬೬೧ /km2 |
22 | ಥೇಣಿ | ಥೇಣಿ | ೨,೮೭೨ km2 | ೧೧,೪೩,೬೮೪ | ೩೯೭ /km2 |
23 | ತೂತುಕುಡಿ | ತೂತುಕುಡಿ | ೪,೫೯೯ km2 | ೧೭,೩೮,೩೭೬ | ೩೭೮ /km2 |
24 | ತಿರುಚಿರಾಪಳ್ಳಿ | ತಿರುಚಿರಾಪಳ್ಳಿ | ೪,೫೦೮ km2 | ೨೭,೧೩,೮೫೮ | ೬೦೨ /km2 |
25 | ತಿರುನೆಲ್ವೇಲಿ | ತಿರುನೆಲ್ವೇಲಿ | ೬,೭೦೯ km2 | ೩೦,೭೨,೮೮೦ | ೪೫೮ /km2 |
26 | ತಿರುಪೂರ್ | ತಿರುಪೂರ್ | ೫,೧೯೨ km2 | ೨೪,೭೧,೨೨೨ | ೪೭೬ /km2 |
27 | ತಿರುವಳ್ಳೂರು | ತಿರುವಳ್ಳೂರು | ೩,೫೫೨ km2 | ೩೭,೨೫,೬೯೭ | ೧,೦೪೯ /km2 |
28 | ತಿರುವಣ್ಣಾಮಲೈ | ತಿರುವಣ್ಣಾಮಲೈ | ೬,೧೮೮ km2 | ೪೧,೨೧,೯೬೫ | ೬೬೭ /km2 |
29 | ತಿರುವಾರೂರು | ತಿರುವಾರೂರು | ೨,೩೭೯ km2 | ೧೨,೬೮,೦೯೪ | ೫೩೩ /km2 |
30 | ವೆಲ್ಲೂರು | ವೆಲ್ಲೂರು | ೬,೦೮೧ km2 | ೪೦,೨೮,೧೦೬ | ೬೭೧ /km2 |
31 | ವಿಲ್ಲುಪುರಂ | ವಿಲ್ಲುಪುರಂ | ೭,೧೮೫ km2 | ೩೪,೬೩,೨೮೪ | ೪೮೨ /km2 |
32 | ವಿರುಧನಗರ | ವಿರುಧನಗರ | ೪,೨೮೦ km2 | ೧೯,೪೩,೩೦೯ | ೪೫೪ /km2 |
ಜಿಲ್ಲೆಯಿಂದ ಕೆಳಗಿನ ಹಂತಗಳ ಆಡಳಿತ ಘಟಕಗಳು ತಾಲ್ಲೂಕು, ಫಿರ್ಕಾ ಮತ್ತು ಗ್ರಾಮಗಳು. ತಮಿಳು ನಾಡಿನಲ್ಲಿ 29 ಜಿಲ್ಲಾ ಅಭಿವೃದ್ಧಿ ಮಂಡಲಿಗಳೂ 374 ಪಂಚಾಯಿತಿ ಮಂಡಲಿಗಳೂ (ಬ್ಲಾಕ್) 12,490 ಗ್ರಾಮ ಪಂಚಾಯಿತಿಗಳೂ ಇವೆ. ಕ್ಷೇತ್ರಾಭಿವೃದ್ಧಿ, ಸಮಾಜ ಕಲ್ಯಾಣ, ಶಿಕ್ಷಣ ವಿಸ್ತರಣೆ, ಸ್ಥಳೀಯ ಸಂಸ್ಥೆಗಳು ಮತ್ತು ನಾಯಕತ್ವದ ವಿಕಾಸ ನೆರವಿನೊಂದಿಗೆ ಸ್ವಸಹಾಯ-ಇವನ್ನು ಸಾಧಿಸಲು ಸಮುದಾಯ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತರಲಾಗಿದೆ.
1964-65 ರಿಂದ ಇಡೀ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯ. ಮೊದಲನೆಯ ತರಗತಿಗೆ ಪ್ರವೇಶದ ಕನಿಷ್ಠ ವಯಸ್ಸು 5+. ವಿದ್ಯಾರ್ಥಿಗಳ ಮಧ್ಯಾಹ್ನದ ಊಟದ ಯೋಜನೆಯನ್ನು 1956ರಲ್ಲಿ ಜಾರಿಗೆ ತರಲಾಯಿತು. ಸ್ವಸಹಾಯದ ತಳಹದಿಯ ಮೇಲೆ ತರಲಾದ ಈ ಯೋಜನೆಯ ಅನ್ವಯದಲ್ಲಿ ಸರ್ಕಾರವೂ ಕೇರ್ ಸಂಸ್ಥೆಯೂ ಅನಂತರ ಆಸಕ್ತಿ ವಹಿಸಿದುವು. ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಬರುತ್ತಿರುವ ವಿಧ್ಯಾರ್ಥಿಗಳ ಅಧಿಕ ಸಂಖ್ಯೆಯಿಂದಾಗಿ ಕಾಲೇಜು ಶಿಕ್ಷಣದ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ. ಇದು ಅಗಾಧವಾಗಿ ವಿಸ್ತರಿಸಿದೆ. ಸರ್ಕಾರದ ವೆಚ್ಚದಲ್ಲಿ ಸೇ. 25ಕ್ಕಿಂತ ಹೆಚ್ಚು ಭಾಗ ಶಿಕ್ಷಣಕ್ಕೆ ಮೀಸಲಾಗಿದೆ. ಪ್ರಿ-ಯೂನಿವರ್ಸಿಟಿ ಘಟ್ಟದ ವರೆಗೆ ರಾಜ್ಯದಲ್ಲಿ ಶಿಕ್ಷಣ ಉಚಿತ.
ರಾಜ್ಯದಲ್ಲಿರುವ ವಿಶ್ವ ವಿದ್ಯಾನಿಲಯಗಳು ಇವು : ಮದ್ರಾಸ್ ವಿಶ್ವವಿದ್ಯಾನಿಲಯ, ಮದ್ರಾಸು; ಅಣ್ಣಾಮಲೈ ವಿಶ್ವವಿದ್ಯಾನಿಲಯ, ಅಣ್ಣಾಮಲೈ ನಗರ, ಮಧುರೈ ವಿಶ್ವದ್ಯಾನಿಲಯ ಮಧುರೈ. ಜನಸಂಖ್ಯೆಗನುಗುಣವಾಗಿ ಶಾಲಾ ಕಾಲೇಜುಗಳು ಹೆಚ್ಚಾಗಿವೆ. ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ.
ತಮಿಳು ನಾಡಿನ ಕಲೆ, ಸಾಹಿತ್ಯ, ಸಂಸ್ಕøತಿಗಳು ಬಹಳ ಪ್ರಾಚೀನವೂ ವಿಶಿಷ್ಟವೂ ಆದಂಥವು. ಭಾರತೀಯ ಹಾಗೂ ವಿಶ್ವ ಚಿಂತನಕ್ಕೆ ತಮಿಳು ನಾಡಿನ ಒಂದು ದೊಡ್ಡ ಕೊಡುಗೆಯೆಂದರೆ ವಳ್ಳುವರ್ ಅವರ ತಿರುಕ್ಕುರಳ್. ಇದು ಜೀವನಕ್ಕೆ ಸಂಬಂಧಿಸಿದ ನೀತಿ ಸಂಹಿತೆಯಾಗಿರುವುದಲ್ಲದೆ ತಮಿಳರ ಅಂತ:ಸತ್ವದ, ಅವರ ಕ್ರಿಯಾಶೀಲ ಚೈತನ್ಯದ ಪ್ರತೀಕವಾಗಿದೆ. ತಂಜಾವೂರು, ಮಹಾಬಲಿಪುರಂ, ಕಾಂಚೀಪುರಂ ಮುಂತಾದ ಸ್ಥಳಗಳಲ್ಲಿಯ ದೇಗುಲ ಗೋಪುರಗಳೂ ಬಂಡಿಗಳ ಮೇಲೆ ಕೊರೆದ ಶಿಲ್ಪಗಳೂ ತಂಜಾವೂರಿನ ನವಿರಾದ ಕರಕುಶಲ ಕಲಾಕೃತಿಗಳೂ ಭರತನಾಟ್ಯವೂ ಈ ರಾಜ್ಯದ ದೀರ್ಘ ಹಾಗೂ ಭವ್ಯ ಸಾಂಸ್ಕøತಿಕ ಪರಂಪರೆಯನ್ನು ಸಾರುತ್ತವೆ. ತಮಿಳು ವಾಸ್ತುಶಿಲ್ಪದ ಮಹೋನ್ನತ ಕಾಲವೆಂದರೆ 9 ನೆಯ ಶತಮಾನದ ನಡುವಿನಿಂದ 11ನೆಯ ಶತಮಾನದ ಕೊನೆಯವರೆಗಿನದು. ಮಹಾಬಲಿಪುರದಲ್ಲಿರುವ, ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚು ಪ್ರಾಚೀನವಾದ, ಬಂಡೆಯಲ್ಲಿ ಕೊರೆದ, ಗುಹಾ ವಾಸ್ತುಗಳೂ ಏಕಶಿಲಾ ದೇವಾಲಯಗಳೂ ಅದ್ಭುತ ಕೃತಿಗಳು. ತಮಿಳುನಾಡು ಹಿಂದಿನಿಂದಲೂ ನೆರೆಯ ದೇಶ ಪ್ರದೇಶಗಳೊಂದಿಗೂ ವಿಭಿನ್ನ ಸಂಸ್ಕøತಿಗಳೊಂದಿಗೂ ಸ್ನೇಹಯುತ ಸಂಬಂಧ ಬೆಳೆಸಿ, ತನ್ನ ವೈಶಿಷ್ಟ್ಯಕ್ಕೆ ಕುಂದು ಬಾರದಂತೆ ಇತರ ಸಂಸ್ಕøತಿಗಳ ಉತ್ಕøಷ್ಟ ಅಂಶಗಳನ್ನು ಜೀರ್ಣಿಸಿಕೊಂಡಿದೆ. ಕರ್ನಾಟಕ ಸಂಗೀತ ಹಾಗೂ ಭರತನಾಟ್ಯದ ಬೆಳವಣಿಗೆಗೆ ತಮಿಳುನಾಡು ವಿಶಿಷ್ಟವಾದ ಕಾಣಿಕೆ ಸಲ್ಲಿಸಿದೆ. ಲೋಹದ ಎರಕದಲ್ಲಿ ತಮಿಳು ಕೆಲಸಗಾರರು ಶ್ರೇಷ್ಠವಾದ ತಾಂತ್ರಿಕ ಪರಿಪೂರ್ಣತೆ ಸಾಧಿಸಿದರು. ಇತಿಹಾಸದ ಉದ್ದಕ್ಕೂ ಸಾಹಿತ್ಯ, ಜ್ಞಾನ, ಕಲೆ, ವಾಸ್ತು, ಶಿಲ್ಪ, ಆಡಳಿತ ಪದ್ಧತಿಗಳು ಮತ್ತು ದರ್ಶನಗಳಲ್ಲಿ ತಮಿಳರ ಪ್ರತಿಭೆ ಅದ್ಭುತವಾಗಿಯೂ ದಟ್ಟವಾಗಿಯೂ ಅಭಿವ್ಯಕ್ತವಾಗಿದೆ. ಪುರಾತತ್ವ ಕ್ಷೇತ್ರದಲ್ಲಿ ತಮಿಳುನಾಡು ಸಂಪದ್ಯುಕ್ತವಾದ್ದು. ಪ್ರಾಚೀನ ಭಾರತದ ಸಂಸ್ಕøತಿಯ ವಿಶಿಷ್ಟತೆಯನ್ನು ಯಶಸ್ವಿಯಾಗಿ ಉಳಿಸಿಕೊಂಡು ಬಂದಿರುವ ರಾಜ್ಯ ತಮಿಳುನಾಡು.
ತಮಿಳುನಾಡಿನ ಜನರ ಮುಖ್ಯ ಕಸುಬು ವ್ಯವಸಾಯ. ಸೇ. 61.54 ಕ್ಕಿಂತ ಕಡಿಮೆಯಿಲ್ಲದಷ್ಟು ಮಂದಿ ಕೃಷಿಯನ್ನು ಅವಲಂಬಿಸಿದ್ದಾರೆ. ರಾಜ್ಯದ ಮುಖ್ಯ ವಾಣಿಜ್ಯ ಬೆಳೆಗಳು-ಅವನ್ನು ಬೆಳಯುವ ನೆಲದ ವಿಸ್ತೀರ್ಣಕ್ಕೆ ಅನುಗುಣವಾಗಿ—ನೆಲಗಡಲೆ, ಹತ್ತಿ, ಕಬ್ಬು, ಎಳ್ಳು, ತೆಂಗು, ಮರಗೆಣಸು ಮತ್ತು ಹರಳು ರಾಜ್ಯದ ಮುಖ್ಯ ಆಹಾರ ಬೆಳಗಳು ಬತ್ತ ಮತ್ತು ಇತರ ಧಾನ್ಯಗಳು, ಕಾಳುಗಳು ಈರುಳ್ಳಿ, ಆಲೂಗಡ್ಡೆ, ಗೆಣಸು, ಮರಗೆಣಸು, ಮತ್ತು ಬಾಳೆ. ಭಾರತದ ಕ್ವಿನೈನ್ ಉತ್ಪಾದಿಸುವ ಎರಡು ರಾಜ್ಯಗಳ ಪೈಕಿ ತಮಿಳು ನಾಡೂ ಒಂದು. ಸಾಗುವಳಿಗೆ ಒಳಪಟ್ಟಿರುವ ಒಟ್ಟು ನೆಲದ ವಿಸ್ತೀರ್ಣ 59,34,000 ಹೆಕ್ಟೇರ್. ಇದರಲ್ಲಿ 23,99,000 ಹೆಕ್ಟೇರ್ಗಳು ನೀರಾವರಿಗೆ ಒಳಪಟ್ಟಿವೆ ಹೆಚ್ಚು ಇಳುವರಿಯ ತಳಿಗಳನ್ನು ಬಳಸಲಾರಂಭಿಸಿದ್ದರಿಂದ ರಾಜ್ಯದ ಸಂಪ್ರದಾಯ ಬದ್ಧ ಬೇಸಾಯಕ್ರಮದಲ್ಲಿ ಅಗಾಧ ಬದಲಾವಣೆಗಳಾಗಿವೆ. ಒಂದು ಬೆಳೆ ತೆಗೆಯುತ್ತಿದ್ದ ಅನೇಕ ರೈತರು ಎರಡು-ಮೂರು ಬೆಳೆ ತೆಗೆಯಲಾರಂಭಿಸಿದ್ದಾರೆ.
ರಾಜ್ಯದ ಮುಖ್ಯ ನೀರಾವರಿ ಕಾಮಗಾರಿಗಳು ಮೆಟ್ಟೂರ್ (ಸೇಲಂ ಮತ್ತು ಕೊಯಮತ್ತೂರು ಜಿಲ್ಲೆಗಳು), ಕೆಳ ಭವಾನಿ (ಕೊಯಮತ್ತೂರು ಮತ್ತು ತಿರುಚಿ ಜಿಲ್ಲೆಗಳು), ಅರಣಿಯಾರ್ (ಚೆಂಗಲ್ಪಟ್ಟು ಜಿಲ್ಲೆ) ಅಮರಾವತಿ (ಕೊಯಮತ್ತೂರು ಜಿಲ್ಲೆ), ಸಾತನೂರ್ (ಉತ್ತರ ಮತ್ತು ದಕ್ಷಿಣ ಆರ್ಕಾಟ್).
ರಾಜ್ಯದ ಮುಖ್ಯ ವಿದ್ಯುತ್ ಉತ್ಪಾದನ ಕಾಮಗಾರಿಗಳು ಇವು: 1 ಮುಚಕುಂದ್ ಜಲ ವಿದ್ಯುತ್ ಯೋಜನೆ, 2. ಪೈಕಾರ ಜಲವಿದ್ಯುತ್ ಯೋಜನೆ, 3. ಮೆಯರ್ ಜಲವಿದ್ಯುತ್ ಯೋಜನೆ, 4. ಚೆನ್ನೈ ಶಾಖ ವಿದ್ಯುತ್ ಯೋಜನೆ, 5. ಪಾಪನಾಶಂ ವಿದ್ಯುತ್ ವ್ಯವಸ್ಥೆ, 6. ಮೆಟ್ಟೂರ್ ಜಲ ವಿದ್ಯುತ್ ಯೋಜನೆ. ರಾಜ್ಯದ ಅತ್ಯಂತ ದೊಡ್ಡ ವಿದ್ಯುತ್ ಯೋಜನೆಯೆಂದರೆ ಕುಂದಾ ವಿದ್ಯುತ್ ವ್ಯವಸ್ಥೆಯದು. ಕೊಲೊಂಬೋ ಯೋಜನೆಯ ಅಡಿಯಲ್ಲಿ ಕೆನಡದ ನೆರವಿನಿಂದ ಈ ಯೋಜನೆಯನ್ನು ಆರಂಭಿಸಲಾಯಿತು. ನೀಲಗಿರಿ ಬೆಟ್ಟಗಳ ನಡುವೆ ಈ ವಿದ್ಯುತ್ ಕೇಂದ್ರ ನೆಲೆಗೊಂಡಿದೆ. ಗ್ರಾಮೀಣ ವಿದ್ಯುದೀಕರಣದಲ್ಲಿ ತಮಿಳು ನಾಡು ಇತರ ರಾಜ್ಯಗಳಿಗಿಂತ ಮುಂದೆ ಇದೆ.
1967_68 ರಲ್ಲಿ ತಮಿಳು ನಾಡಿನಲ್ಲಿ ರೂ.23.05 ಕೋಟಿ ಮೌಲ್ಯದ 2.05 ಲಕ್ಷ ಟನ್ ಸಮುದ್ರ ಮೀನನ್ನೂ ರೂ.7.31 ಕೋಟಿ ಮೌಲ್ಯದ 1.16 ಲಕ್ಷ ಟನ್ ಸಿಹಿನೀರಿನ ಮತ್ಸ್ಯಗಳನ್ನೂ ಹಿಡಿಯಲಾಯಿತು. ಹಿಂದಿನಿಂದ ರೂಢಿಯಲ್ಲಿರುವ ಕಟ್ಟಮರಾನ್ಗಳ ನೆರವಿನಿಂದ ಸಮುದ್ರದಲ್ಲಿ ಮತ್ಸ್ಯೋದ್ಯಮವನ್ನು ಬೆಳೆಸಲು ಈ ರಾಜ್ಯ ಹಿಂದಿನಿಂದಲೂ ಶ್ರಮಿಸುತ್ತಿತ್ತು. ಯಾಂತ್ರೀಕೃತ ದೋಣಿಗಳನ್ನು ಬಳಕೆಗೆ ತರುವ ಯೋಜನೆಯನ್ನು 1955ರಲ್ಲಿ ಸರ್ಕಾರ ಜಾರಿಗೆ ತಂದಿತು. ಇದು ವಿಶೇಷವಾಗಿ ಪ್ರಗತಿ ಹೊಂದಿದೆ. ಮೀನುಗಾರರಿಗೆ ತರಬೇತನ್ನೂ ನೀಡಲಾಗುತ್ತಿದೆ. ಎಲ್ಲ ಮೀನುಗಾರಿಕೆ ಕೇಂದ್ರಗಳಲ್ಲೂ ಬರ್ಫ ಯಂತ್ರಗಳನ್ನೂ ಶೈತ್ಯಾಗಾರಗಳನ್ನೂ ಸ್ಥಾಪಿಸಲಾಗಿದೆ. ಒಳನಾಡಿನ ಮೀನುಗಾರಿಕೆಯಲ್ಲೂ ತಮಿಳು ನಾಡು ವಿಶೇಷ ಪ್ರಗತಿ ಸಾಧಿಸಿದೆ. ಭವಾನಿ ಸಾಗರದ ಒಳನಾಡಿನ ಮೀನುಗಾರಿಕೆ ಸಂಶೋಧನ ಕೇಂದ್ರ ಮತ್ತು ಎನ್ನೋರ್, ಕನ್ಯಾಕುಮಾರಿ, ತೂತ್ತುಕುಡಿ ಮತ್ತು ಮದ್ರಾಸ್ ಸಮುದ್ರ ಮೀನುಗಾರಿಕೆ ಸಂಶೋಧನ ಕೇಂದ್ರಗಳು ಮೀನುಗಾರಿಕೆ ಅಭಿವೃದ್ಧಿಯಲ್ಲಿ ಮಹತ್ತ್ವದ ಪಾತ್ರವಹಿಸಿವೆ. ತಮಿಳುನಾಡಿನ ನೀರಾವರಿ ಭೂವಿಸ್ತೀರ್ಣ ಈಗ ಹೆಚ್ಚಾಗಿದ್ದು ಅದಕ್ಕೆ ತಕ್ಕಂತೆ ನಾಡಿನ ಬೆಳೆಗಳ ಉತ್ಪಾದನೆ ಹೆಚ್ಚಾಗಿದೆ. ಹಾಗೆಯೇ ವಿದ್ಯುತ್, ಮತ್ಸೋದ್ಯಮ, ಮುಂತಾದವುಗಳನ್ನು ಈಗ ಹೆಚ್ಚು ಉತ್ಪಾದಿಸಲಾಗುತ್ತಿದೆ. 2001-2002ರಲ್ಲಿ ರಾಜ್ಯದ ಒಟ್ಟು ಕೃಷಿಭೂಮಿ 6.23ಮಿಲಿಯ ಹೆಕ್ಟೇರುಗಳಿದ್ದು ಒಟ್ಟು 10 ಮಿಲಿಯ ಟನ್ಗಳ ಧಾನ್ಯೋತ್ಪತ್ತಿಯಾಗಿತ್ತು.
ರಾಜ್ಯದ ಮೀಸಲು ಅರಣ್ಯಗಳ ವಿಸ್ತೀರ್ಣ 17,258 ಚ.ಕಿಮೀ. ರಾಜ್ಯದ ಒಟ್ಟು ವಿಸ್ತೀರ್ಣದಲ್ಲಿ 15.5% ಭಾಗ ಅರಣ್ಯಾವೃತ. ಸಾಗುವಾನಿ, ಸೌದೆ, ಬೊಂಬು, ಶ್ರೀಗಂಧ, ಚರ್ಮಹದಕ್ಕೆ ಬೇಕಾದ ತೊಗಟೆ ಮುಂತಾದವು ಅರಣ್ಯೋತ್ಪನ್ನಗಳು. ಪಶ್ಚಿಮದ ಕಾಡುಗಳಲ್ಲಿ ತೇಗ, ಬೀಟೆ ಮುಂತಾದ ಸಾಗುವಾನಿ ಮರಗಳೂ ಸಿಗುತ್ತವೆ. ಸಾಗುವನಿ ಮರಗಳ ಕಾಡುಗಳು ಬಹುತೇಕ ಪಶ್ಚಿಮ ಘಟ್ಟಗಳ ಹೆಚ್ಚು ಮಳೆ ಬೀಳುವ ಪ್ರದೇಶಗಳಿಗೆ ಸೀಮಿತವಾಗಿವೆ. ಕೊಯಮತ್ತೂರು, ಮದುರೈ ಮತ್ತು ತಿರುನೆಲ್ವೇಲಿ ಜಿಲ್ಲೆಗಳ ಕಾಡುಗಳಲ್ಲಿ ನಲವತ್ತಕ್ಕಿಂತ ಹೆಚ್ಚಿನ ಸಂಖ್ಯೆಯ ಸಾಗುವಾನಿ ಜಾತಿಗಳಿವೆ. ತೇಗದ ಆನಂತರ ಅತ್ಯಂತ ಪ್ರಮುಖವಾದ ಅರಣ್ಯೋತ್ಪನ್ನವೆಂದರೆ ಶ್ರೀಗಂಧ.
ತಮಿಳು ನಾಡಿನಲ್ಲಿ ಕಬ್ಬಿಣ ಅದಿರು, ಬಾಕ್ಸೈಟ್, ಜಿಪ್ಸಂ, ಅಭ್ರಕ, ಸುಣ್ಣಕಲ್ಲು, ಪಿಂಗಾಣಿ ಮಣ್ಣು, ಮ್ಯಾಗ್ನೆಸೈಟ್, ಲವಣ, ಇಲ್ಮೆನೈಟ್, ಮೊನಾಜೈಟ್, ಜಿರ್ಕಾನ್, ಮುಂತಾದ ಖನಿಜಗಳ ನಿಕ್ಷೇಪಗಳಿವೆ. ತಿರುನೆಲ್ವೇಲಿ ಮತ್ತು ಕನ್ಯಾಕುಮಾರಿ, ಜಿಲ್ಲೆಗಳ ಕರಾವಳಿಯಲ್ಲಿ ಅಲೆಗಳ ಪ್ರಕ್ರಿಯೆಯಿಂದಾಗಿ ಸಂಗ್ರಹವಾಗಿರುವ ಮರಳಿನಲ್ಲಿ ತೋರಿಯಂ ಸಿಗುತ್ತದೆ. ಕಾವೇರಿ ಜಲಾನಯನ ಭೂಮಿಯ ಪ್ರಥಮ ಯುಗೀಣ ಸಂಕೀರ್ಣದಲ್ಲಿ ಭಿನ್ನಸ್ತರಶಿಲೆ, ಗ್ರಾನೈಟ್, ನೀಸ್ ಮುಂತಾದವು ಇವೆ. ಸೇಲಂ_ಕೊಯಮತ್ತೂರು ವಲಯ ಖನಿಜಸಂಪದ್ಯುಕ್ತವಾದ್ದು. ತಲಮೈ, ಕಂಜಮಲೈ, ಗೋಡುಮಲೈಗಳಲ್ಲಿ ಸೇ.60ಕ್ಕಿಂತ ಹೆಚ್ಚು ಕಬ್ಬಿಣಾಂಶ ಇರುವ ಕಬ್ಬಿಣ ಅದಿರುಗಳಿವೆ. ಜಲವಿದ್ಯುತ್ ಶಕ್ತಿಯಿಂದ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯನ್ನು ಸ್ಥಾಪಿಸಲು ವಿಶೇಷ ಅವಕಾಶವುಂಟು. ತಮಿಳು ನಾಡಿನಲ್ಲಿ ಕಲ್ಲಿದ್ದಲಿನ ನಿಕ್ಷೇಪಗಳಿಲ್ಲ. ಆದರೆ ನೈವೇಲಿಯ ಬಳಿ 200 ಕೋಟಿ ಟನ್ ಲಿಗ್ನೈಟ್ ನಿಕ್ಷೇಪಗಳಿವೆ.
ರಾಜ್ಯದಲ್ಲಿರುವ ದೊಡ್ಡ ಕೈಗಾರಿಕೆಗಳು ಕೆಳಗಿನಂತಿವೆ.
ಮೇಲೆ ಹೇಳಿದವಲ್ಲದೆ ಹೊಗೆಸೊಪ್ಪು, ಬೆಂಕಿಕಡ್ಡಿ, ಎಣ್ಣೆ ತೆಗೆಯುವುದು, ಇಟ್ಟಿಗೆ, ಹೆಂಚು, ಸುಣ್ಣ, ಕುಂಭ, ಹತ್ತಿ ಹಿಂಜುವುದು, ಹೆಣಿಗೆ, ರೇಷ್ಮೆ, ಮೂಳೆ ಗೂಬ್ಬರ, ಬಣ್ಣ, ಸಾಬೂನು, ಕಾಗದ, ಗಾಜು, ಮರಕೊಯ್ತ, ಹಗ್ಗ ಮುಂತಾದ ಕೈಗಾರಿಕೆಗಳೂ ಇವೆ. ಗಣಿಗಾರಿಕೆಯಲ್ಲಿ ಸಾಕಷ್ಟು ಮಂದಿಗೆ ಉದ್ಯೋಗ ಒದಗಿಸಿರುವ 18,095 ಘಟಕಗಳಿವೆ. ಭಾರತದ ಒಟ್ಟು ಚರ್ಮೋದ್ಯೋಗದಲ್ಲಿ ಸೆ. 60 ಭಾಗ ತಮಿಳುನಾಡಿನಲ್ಲಿದೆ. ಕುಡ್ಡಲೂರು ಮತ್ತು ಟುಟಿಕೋರಿನ್ಗಳಲ್ಲಿ ಗೊಬ್ಬರ ಮತ್ತು ರಾಸಾಯನಿಕಗಳ ಕಾರ್ಖಾನೆಗಳಿವೆ.
ಗಿಂಡಿಯ ಬಳಿ ಹಿಂದೂಸ್ತಾನ್ ಟೆಲಿಪ್ರಿಂಟರ್ಸ್ ಲಿ. ತಿರುಚ್ಚಿರಾಪ್ಪಳ್ಳಿಯಲ್ಲಿ ಅಧಿಕ ಒತ್ತಡ ಬಾಯಿಲರ್ ಕಾರ್ಖಾನೆ, ಉದಕಮಂಡಲದಲ್ಲಿ ಕಚ್ಚಾ ಫಿಲಂ ಕಾರ್ಖಾನೆ. ಆವಡಿಯಲ್ಲಿ ಭಾರಿ ವಾಹನಗಳ (ಟ್ಯಾಂಕ್) ಕಾರ್ಖಾನೆ, ಪೆರಂಬೂರಿನ ಇಂಟೆಗ್ರಲ್ ಕೋಚ್ (ರೈಲ್ವೆ ಗಾಡಿ) ಕಾರ್ಖಾನೆ, ನೈವೇಲಿಯ ಲಿಗ್ನೈಟ್ ಕಾರ್ಪೋರೇಷನ್ ಇವು ಕೇಂದ್ರ ಸರ್ಕಾರದ ಕೊಡ್ಡ ಕೈಗಾರಿಕಾ ಸಂಸ್ಥೆಗಳು. ತಮಿಳು ನಾಡು ಸರ್ಕಾರದ ಅಧೀನದಲ್ಲಿರುವ ಎರಡು ದೊಡ್ಡ ಕಾರ್ಖಾನೆಗಳು ಮದ್ರಾಸ್ ರಸಗೊಬ್ಬರ ಕಾರ್ಖಾನೆ ಮತ್ತು ಉಣ್ಣೆ ಪರಿಷ್ಕರಣ ಕೇಂದ್ರ.
ತಮಿಳು ನಾಡಿನ ಗೃಹಕೈಗಾರಿಕೆಗಳು ಪ್ರಾಚೀನವಾದವು. ಧರ್ಮ ಸರಕು, ಕುಂಭ ಕಲೆ, ಛತ್ರಿ, ಹಿತ್ತಾಳೆ ಸಾಮಾನು ಕೈಮಗ್ಗ, ಕಲ್ಲಿನ ಪಾತ್ರೆಗಳು, ಗಾಜಿನ ಬಳೆ, ಬೆಂಕಿಕಡ್ಡಿ, ಜರತಾರಿ, ಅಲ್ಯೂಮಿನಿಯಂ ಪದಾರ್ಥಗಳು, ದಂತ ಕೆಲಸ, ಕಲ್ಲು ಹಲಗೆ, ಮತಗೊರೆತ, ಖಾದಿ, ತಾಳೆಬೆಲ್ಲ, ಚಾಪೆ, ತೆಂಗಿನನಾರಿನ ಸರಕು ಮುಂತಾದವು ಹಳೆಯ ಗೃಹಕೈಗಾರಿಕೆಗಳು.
ಬಹಳ ಪ್ರಾಚೀನ ಕಾಲದಿಂದ ತಮಿಳು ನಾಡು ವಿದೇಶಗಳೊಂದಿಗೆ ವ್ಯಾಪಾರ ನಡೆಸುತ್ತ ಬಂದಿದೆ. ಅದರ ಅನೇಕ ನೈಸರ್ಗಿಕ ಸರಕುಗಳಿಗೆ ಹಿಂದಿನಿಂದಲೂ ವಿದೇಶಿ ಬೇಡಿಕೆಯಿದೆ. ಮೆಣಸು, ಮುತ್ತು, ದಂತ, ಲವಂಗ, ಶ್ರೀಗಂಧ, ತೇಗ, ಬೀಟೆ, ಕುರುಂದ-ಇವು ಕೆಲವು ಸರಕುಗಳು. ಪ್ರಾಚೀನ ಮೆಸೆಪೊಟೋಮಿಯಕ್ಕೆ ತಮಿಳು ನಾಡಿನಿಂದ ಅಕ್ಕಿ ರಫ್ತಾಗುತ್ತಿತ್ತು.
ಸಹಕಾರ ಚಳವಳಿಯಲ್ಲಿ ವಿಶೇಷವಾಗಿ ಮುಂದುವರೆದಿರುವ ರಾಜ್ಯಗಳಲ್ಲಿ ತಮಿಳು ನಾಡೂ ಒಂದು. ವಿವಿಧ ಬಗೆಯ ಸಹಕಾರ ಸಂಘಗಳ ಸಂಖ್ಯೆಯನ್ನು ಮುಂದೆ ಕೊಟ್ಟಿದೆ:-
ವಿಶ್ವ ವಿದ್ಯಾಲಯಗಳಲ್ಲಿ ಸಹಕಾರವೂ ಒಂದು ಬೋಧನ ವಿಷಯವಾಗಿದೆ.
ತಮಿಳುನಾಡಿನಲ್ಲಿ ಒಟ್ಟು 1,50,095 ಕಿ.ಮೀ ಮಾರ್ಗವಿದ್ದು ಇದರಲ್ಲಿ 60,901, ಕಿ.ಮೀ ಉತ್ತಮ ರಸ್ತೆಯಿದೆ. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು ದಕ್ಷಿಣ ಭಾರತದ ಮುಖ್ಯ ವಿಮಾನ ಸಂಪರ್ಕವಾಗಿದೆ. ಸೇಲಂ, ಕೊಯಮತ್ತೂರು, ತಿರುಚಿನಪಳ್ಳಿ, ಮಧುರೆ ವಿಮಾನ ನಿಲ್ದಾಣಗಳಿವೆ. ಚೆನ್ನೈ, ಮಧುರೈ, ತಿರುಚಿನಾಪಳ್ಳಿ, ಕೊಯಂಬತ್ತೂರು ಮತ್ತು ತಿರುನೇಲ್ವೇಲಿ ಮುಖ್ಯ ರೈಲು ನಿಲ್ದಾಣಗಳಿದ್ದು ಒಟ್ಟು 4181 ಕಿ.ಮೀ ರೈಲು ಮಾರ್ಗವಿದೆ. ತಮಿಳು ನಾಡಿನಲ್ಲಿ 876.03 ಕಿಮೀ. ಬ್ರಾಡ್ ಗೇಜ್ ಮತ್ತು 2,889.05 ಕಿಮೀ. ಮೀಟರ್ ಗೇಜ್ ರೈಲುಮಾರ್ಗಗಳಿವೆ. ದಕ್ಷಿಣ ಭಾರತದಲ್ಲಿ ಬಹಳ ಹೆಚ್ಚಿನ ರೈಲ್ವೆ ಸೌಲಭ್ಯ ಉಳ್ಳ ರಾಜ್ಯ ತಮಿಳು ನಾಡು. ಮದ್ರಾಸಿನೊಂದಿಗೆ ರಾಜ್ಯದ ಎಲ್ಲ ಪ್ರಮುಖ ಕೇಂದ್ರಗಳೂ ಭಾರತದ ಮುಖ್ಯ ನಗರಗಳೂ ರೈಲ್ವೆ ಸಂಪರ್ಕ ಹೊಂದಿವೆ. ದಕ್ಷಿಣ ರೈಲ್ವೆಯ ಮುಖ್ಯ ಕಚೇರಿ ಮದ್ರಾಸಿನಲ್ಲಿದೆ. ಈಗ ತಮಿಳುನಾಡಿನಲ್ಲಿ ಒಟ್ಟು 1,50,095 ಕಿ.ಮೀ. ರಸ್ತೆಯಿದ್ದು ಇದರಲ್ಲಿ 60,901 ಕಿ.ಮೀ ಟಾರ್ ಹಾಗೂ ಕಾಂಕ್ರೀಟಿನಿಂದ ಕೂಡಿವೆ. ಒಟ್ಟು 4181 ಕಿ.ಮೀ ರೈಲು ಮಾರ್ಗವಿದೆ. ಚೆನ್ನೈ, ತಿರುಚಿನಾಪಳ್ಳಿ, ಮಧುರೈ, ಕೊಯಮತ್ತೂರು ಮತ್ತು ಸೇಲಂಗಳಲ್ಲಿ ವಿಮಾನ ನಿಲ್ದಾಣಗಳಿವೆ. ಚೆನ್ನೈ ಟುಟಿಕೋರಿನ್, ಕುಡಲೂರು ಮತ್ತು ನಾಗಾಪಟ್ಟಣಮ್ಗಳಲ್ಲಿ ಬಂದರುಗಳಿವೆ. ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪೂರ್ವತೀರದ ಮುಖ್ಯ ಬಂದರೂ ಆಗಿದೆ. ಚೆನ್ನೈ ಜೊತೆಗೆ ನಾಗಪಟ್ಟಿನಮ್, ತುತುಕೋರಿನ್, ಕುಡಲೂರು ಬಂದರುಗಳಿವೆ. (
ದಕ್ಷಿಣ ಭಾರತದ ಇತರ ಪ್ರದೇಶಗಳಂತೆ ತಮಿಳು ನಾಡಿನಲ್ಲೂ ಪ್ರಾಗೈತಿಹಾಸಿಕ ಮಾನವನ ಅವಶೇಷಗಳಿವೆ. ತಮಿಳುನಾಡಿನಲ್ಲಿ ಮಾನವ ಎಂದಿನಿಂದ ವಾಸಿಸುತ್ತ ಬಂದಿದ್ದಾನೆಂದು ಹೇಳುವುದು ಸಾಧ್ಯವಿಲ್ಲದಿದ್ದರೂ, ಕಲ್ಲಿನಲ್ಲಿ ಆಯುಧಗಳನ್ನು ಮಾಡಿಕೊಳ್ಳಲು ಪ್ರಾರಂಭಿಸಿದನಿಂದ —ಎಂದರೆ ಮಧ್ಯ ಪ್ಲೀಸ್ಟೊಸೀನ್ ಕಾಲದಿಂದ —ಅವನ ಅಸ್ತಿತ್ವದ ಅವಶೇಷಗಳು ಹೇರಳವಾಗಿ ದೊರಕಿವೆ. 1863ರಲ್ಲಿ ರಾಬರ್ಟ್ ಬ್ರೂಸ್ಫೂಟರಿಗೆ ಮದ್ರಾಸಿನ ಹತ್ತಿರ ಪಲ್ಲಾವರಮ್ನಲ್ಲಿ ದೊರೆತ ಪುರಾತನ ಶಿಲಾಯುಗಧ ಆಯುಧದಿಂದ ತಮಿಳುನಾಡಿಗೆ ಸಂಬಂಧಿಸಿದಂತೆ ಮಾತ್ರವಲ್ಲದೆ ಭಾರತದಲ್ಲೇ ಪ್ರಾಗೈತಿಹಾಸಿಕ ಮಾನವನ ಅವಶೇಷಗಳ ಸಂಶೋಧನೆಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು.ಚೆಂಗಲ್ಪಟ್ಟು ಜಿಲ್ಲೆಯಲ್ಲಿರುವ ಕೋರ್ತಲಯಾರ್ ನದಿಯ ಪ್ರದೇಶದಲ್ಲಿ, ಈ ನದಿಯ ಹಳೆಯ ದಂಡೆಗಳ ಮೇಲೆ, ಆದಿ ಶಿಲಾಯುಗದ ಕಾಲದಲ್ಲೆ ಮಾನವರು ವಾಸಿಸುತ್ತಿದ್ದರೆಂಬುದು, ಡಿ ಟೆರ್ರ, ವಿ.ಡಿ. ಕೃಷ್ಣಸ್ವಾಮಿ, ಕೆ,ವಿ. ಬ್ಯಾನರ್ಜಿ ಇವರು ಮಾಡಿರುವ ಸಂಶೋಧನೆಗಳಿಂದ ತಿಳಿದುಬಂದಿದೆ. ಇವರು ಬಯಲು ಪ್ರದೇಶದಲ್ಲಿ ಹಾಗೂ ನೈಸರ್ಗಿಕ ಗುಹೆಗಳಲ್ಲಿ ವಾಸಿಸುತ್ತಿದ್ದರು : ಬೇಟೆಯಾಡುವುದು ಮತ್ತು ಗೆಡ್ಡೆ ಗೆಣಸುಗಳನ್ನು ಅಗೆದು ತಿನ್ನುವುದೇ ಇವರ ಮುಖ್ಯ ಕಸುಬಾಗಿತ್ತು. ಇವರು ಕ್ವಾರ್ಟ್ಸೈಟ್ ಉಂಡೆಕಲ್ಲಿನ ತಿರುಳಿನಲ್ಲಿ ಮಾಡಿದ ಕೈಗೊಡಲಿ. ಬಾಚಿ ಮತ್ತು ಅಂಡಾಕಾರದ ಆಯುಧಗಳನ್ನು ಉಪಯೋಗಿಸುತ್ತಿದ್ದರು-ಎಂಬುದಾಗಿ ಗೊತ್ತಾಗಿದೆ.ಮಧ್ಯ ಪ್ಲೀಸ್ಟೊಸೀನ್ ಕಾಲದ ಆಯುಧಗಳನ್ನು ದಕ್ಷಿಣ ಭಾರತದ ಇತರ ಸ್ಥಳಗಳಲ್ಲಿ, ದಕ್ಷಿಣ ಆಫ್ರಿಕ ಮತ್ತು ಯೂರೋಪ್ನಲ್ಲಿ ದೊರಕುವ ಅಬ್ಬೆವಿಲಿಯನ್ ಮತ್ತು ಅಷೀಲಿಯನ್ ಆಯುಧಗಳ ರೀತಿಯವು. ಈ ಕಾಲದ ನೆಲೆಗಳು ತಮಿಳು ನಾಡಿನ ಹಲವಾರು ಕಡೆಗಳಲ್ಲಿ ದೊರಕಿದ್ದರೂ ಅವುಗಳ ಅಧ್ಯಯನ ಇನ್ನೂ ನಡೆದಿಲ್ಲ.
ಪ್ಲೀಸ್ಟೊಸೀನ್ ಯುಗದ ಅಂತಿಮ ಕಾಲದಲ್ಲಿ ಪ್ರಚಲಿತವಾಗಿದ್ದ ಮಧ್ಯ ಶಿಲಾಯುಗದ ಸಂಸ್ಕøತಿಯ ನೆಲೆಗಳು ಚೆಂಗಲ್ಪಟು, ಉತ್ತರ ಅರ್ಕಾಟ್, ಧರ್ಮಪುರಿ ಮತ್ತು ಮಧುರೈ ಜಿಲ್ಲೆಗಳಲ್ಲಿ ಕಂಡುಬಂದಿವೆ. ಈ ಸಂಸ್ಕøತಿಗೆ ಕಾರಣರಾದ ಜನರೂ ಬಯಲು ಹಾಗೂ ನೈಸರ್ಗಿಕ ಗುಹೆಗಳಲ್ಲಿ ಜೀವಿಸುತ್ತಿದ್ದಂತೆ ಕಂಡುಬರುತ್ತದೆ. ಇವರ ಆಯುಧಗಳು ಹಿಂದಿನವುಗಳಿಗಿಂತ ಸಣ್ಣವು ಹಾಗೂ ಹೆಚ್ಚು ವೈವಿಧ್ಯಪೂರ್ಣ. ಇವರು ಕೈಗೂಡಲಿ, ಬಾಣದ ತುದಿ ಮತ್ತು ರಂಪಿಗೆಗಳನ್ನು ಹರೆಯಲು ಮತ್ತು ಕುಯ್ಯಲು ಅನುಕೂಲವಾದ ಮತ್ತು ನೀಳ ಚಕ್ಕೆ ಕಲ್ಲುಗಳಲ್ಲಿ ಮಾಡಿದ ಆಯುಧಗಳನ್ನು ಉಪಯೋಗಿಸುತ್ತಿದ್ದರು. ತೊಗಲನ್ನು ಬೇಕಾದ ಆಕಾರಕ್ಕೆ ಹೊಲೆಯುವುದಕ್ಕೂ ಬೇಟೆಯಾಡುವುದಕ್ಕೂ ಇವನ್ನು ಉಪಯೋಗಿಸುತ್ತಿದ್ದರು.
ಕ್ರಿ.ಪೂ. 4000ಕ್ಕಿಂತ ಹಿಂದಿನದೆಂದು ನಂಬಲಾಗಿರುವ ಅಂತ್ಯ ಶಿಲಾಯುಗ (ಸೂಕ್ಷ್ಮ ಶಿಲಾಯುಗ) ಸಂಸ್ಕøತಿಯ ನೆಲೆಗಳು ಚೆಂಗಲ್ಪಟು,್ಟ ಧರ್ಮಪುರಿ, ಮಧುರೈ ಮತ್ತು ರಾಮನಾಡು ಜಿಲ್ಲೆಗಳಲ್ಲಿ ದೊರೆತಿವೆ. ಈ ಕಾಲದ ಆಯುಧಗಳು ಇನ್ನೂ ಸಣ್ಣವು. ಬಾಣದ ತುದಿ, ರಂಪಿಗೆ ಹಾಗೂ ಹೆರೆಯಲು ಮತ್ತು ಕುಯ್ಯಲು ಅನುಕೂಲವಾದ ಆಯುಧಗಳು. ಅರ್ಧ ಚಂದ್ರಾಕೃತಿಯ ಮತ್ತು ತ್ರಿಕೋಣಾಕೃತಿಯ ಚಿಕ್ಕ ಆಯುಧಗಳು ಉಪಯೋಗದಲ್ಲಿದ್ದುವು. ಬಯಲುಗಳಲ್ಲಿದ್ದ ಇವರ ನೆಲೆಗಳಲ್ಲಿ ಸಿಕ್ಕಿರುವ ಆಯುಧಗಳಿಂದ ಈ ಜನರು ಸಣ್ಣ ಬೇಟೆಗಳನ್ನು ಆಡುತ್ತಿದ್ದರು ಮತ್ತು ಮೀನುಗಳನ್ನು ಹಿಡಿದು ಹಾಗೂ ಕಾಡು ದವಸ ಧಾನ್ಯಗಳನ್ನು ತಿಂದು ಜೀವಿಸುತ್ತಿದ್ದರು-ಎಂಬುದು ತಿಳಿದುಬರುತ್ತದೆ.
ನವಶಿಲಾಯುಗ ಸಂಸ್ಕೃತಿಯ ನೆಲೆಗಳು ಧರ್ಮಪುರಿ ಮತ್ತು ಉತ್ತರ ಅರ್ಕಾಟ್ ಜಿಲ್ಲೆಗಳಲ್ಲಿ ಮಾತ್ರ ಕಂಡುಬಂದಿವೆ. ಈ ಪ್ರಾಂತ್ಯದ ಬೇರೆಡೆಗಳಲ್ಲಿ ಈ ಜನ ಉಪಯೋಗಿಸುತ್ತಿದ್ದ, ಉಜ್ಜಿ ನಯಮಾಡಿದ ಕೊಡಲಿಗಳು ದೊರೆತಿದ್ದರೂ ಬೇರಾವ ಅವಶೇಷಗಳೂ ಇದುವರೆಗೂ ದೊರೆತಿಲ್ಲ.
ಉತ್ತರ ಅರ್ಕಾಟ್ ಜಿಲ್ಲೆಯ ಪೈಯಂಪಲ್ಲಿ ಗ್ರಾಮದಲ್ಲಿಯ ಉತ್ಖನನದಿಂದ ಈ ಜನರ ಜೀವನ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿದೆ. ಕ್ರಿ.ಪೂ.ಸು.1800ರಷ್ಟು ಹಿಂದೆ ಇವರು ನೀರಿನ ಸೌಕರ್ಯ ಇದ್ದ ಸ್ಥಳಕ್ಕೆ ಹತ್ತಿರದಲ್ಲಿ ದೊಡ್ಡ ಬಂಡೆಗಳಿಂದ ಕೂಡಿದ ಬೆಟ್ಟಗಳ ಬುಡದಲ್ಲಿ, ತಡಿಕೆ ಮತ್ತು ಮಣ್ಣಿನ ಗೋಡೆಗಳಿಂದ ಚಿಕ್ಕ ಗೋಲಾಕೃತಿಯ ಗುಡಿಸಲುಗಳನ್ನು ಕಟ್ಟಿಕೊಂಡು ಸಣ್ಣ ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಇವರು ನಾಯಿ ಕುರಿ, ಹಸು ಮುಂತಾದ ಪ್ರಾಣಿಗಳನ್ನು ಸಾಕುತ್ತಿದ್ದರು: ಹಳ್ಳಿಯ ಸುತ್ತ ಧಾನ್ಯಗಳನ್ನು ಬೆಳೆಸುತ್ತಿದ್ದರು. ಚಿಕ್ಕ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ತಿಳಿಬೂದು ಬಣ್ಣದ ನಯವಾದ ಕಲ್ಲಿನಿಂದ ತೆಗೆದ ಚಕ್ಕೆಗಳಲ್ಲಿ ಕೈಯಿಂದ ಮಾಡಿದ ಸಣ್ಣ ಆಯುಧಗಳನ್ನು ಉಪಯೋಗಿಸುತ್ತಿದ್ದರು. ಇವರಿಗೆ ಲೋಹಗಳ ಬಳಕೆ ಗೊತ್ತಿರಲಿಲ್ಲ. ಇವರು ತಮಿಳು ನಾಡಿನ ಪ್ರದೇಶಕ್ಕೆ ಉತ್ತರದಿಂದ, ಈಗಿನ ಕರ್ನಾಟಕ ಪ್ರದೇಶದಿಂದ, ಬಂದರೆಂದು ಊಹಿಸಲಾಗಿದೆ.
ತಮಿಳು ನಾಡಿನಲ್ಲಿ ನವಶಿಲಾಯುಗದವರು ವಾಸಿಸುತ್ತಿದ್ದಂತೆಯೇ ದೊಡ್ಡ ಕಲ್ಲುಗಳ ಗೋರಿಗಳನ್ನು ಕಟ್ಟುವ ಜನಾಂಗದವರು ಬಹುಶಃ ಕರ್ನಾಟಕದಿಂದ ಬಂದರೆಂಬುದು ಪೈಯಂಪಲ್ಲಿ ಉತ್ಖನನದಿಂದ ತಿಳಿದುಬರುತ್ತದೆ. ಇವರು ಕ್ರಿ.ಪೂ. 500ಕ್ಕೆ ಹಿಂದೆ ತಮಿಳು ನಾಡಿಗೆ ಬಂದರೆಂದು ಊಹಿಸಲಾಗಿದೆ. ಈ ಜನರು ತಮ್ಮೊಡನೆ ಕಬ್ಬಿಣದ ಬಳಕೆಯ ಕೌಶಲವನ್ನೂ ಚಕ್ರದ ಮೇಲೆ ಕಪ್ಪು ಕೆಂಪು ಹಾಗೂ ಕಪ್ಪು -ಕೆಂಪುಬಣ್ಣದ ಮಣ್ಣಿನ ಪಾತ್ರೆಗಳನ್ನು ಮಾಡುವ ವಿಧಾನವನ್ನೂ ತಂದರು. ತಮಿಳು ನಾಡಿನಲ್ಲಿ ಕೆರೆಗಳನ್ನು ಕಟ್ಟಿ ಜಮೀನನ್ನು ಸಾಗುವಳಿ ಮಾಡುವ ವಿಧಾನವನ್ನು ಈ ಜನಾಂಗದವರು ಆರಂಭಿಸಿದರೆಂದು ಊಹಿಸಲಾಗಿದೆ. ನವ ಶಿಲಾಯುಗದವರಂತೆಯೇ ಇವರೂ ಮನೆಗಳನ್ನು ಕಟ್ಟಿಕೊಂಡು ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ವ್ಯವಸಾಯ, ಮೀನು ಹಿಡಿಯುವುದು-ಇವು ಇವರ ಮುಖ್ಯ ಕಸುಬುಗಳಾಗಿದ್ದುವು.
ಇವರ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಶಿಲಾಗೋರಿಗಳು. ಇವರು ನಿರ್ಮಿಸುತ್ತಿದ್ದ ಬೃಹತ್ ಶಿಲಾಗೋರಿಗಳಲ್ಲಿ ನಾನಾ ವಿಧಗಳಿದ್ದುವು. ನಾಲ್ಕು ಅಥವಾ ಹಲವು ಹಲಗೆ ಕಲ್ಲುಗಳನ್ನು ಕೋಣೆಯಾಕಾರದಲ್ಲಿ ಜೋಡಿಸಿ ಅದರಲ್ಲಿ ಅಸ್ಥಿಯನ್ನೋ ಅಸ್ಥಿಯುಳ್ಳ ಗಡಿಗೆಯನ್ನೋ ಇಟ್ಟು ಮೇಲೊಂದು ಹಲಗೆ ಕಲ್ಲನ್ನು ಮುಚ್ಚಿ ಸುತ್ತಲೂ ದೊಡ್ಡ ದೊಡ್ಡ ಬಂಡೆಕಲ್ಲುಗಳನ್ನಿಟ್ಟು, ಮಧ್ಯದಲ್ಲಿ ಸಣ್ಣ ಸಣ್ಣ ಕಲ್ಲುಗಳನ್ನು ತುಂಬುವುದು ಒಂದು ವಿಧ. ಆಳವಾದ ಗುಂಡಿಯಲ್ಲಿ ಆಸ್ಥಿವುಳ್ಳ ಮಣ್ಣಿನ ಪಾತ್ರೆಯನ್ನೂ ಇತರ ವಸ್ತುಗಳನ್ನೂ ಹೂತು ಸುತ್ತಲೂ ಬಂಡೆಕಲ್ಲುಗಳನ್ನು ಇಟ್ಟು ಮಧ್ಯದಲ್ಲಿ ಸಣ್ಣ ಕಲ್ಲುಗಳನ್ನು ತುಂಬುವುದು ಇನ್ನೊಂದು ವಿಧ ಪ್ರಾಣಿಯಾಕಾರದ ಉದ್ದನೆಯ ದೊಡ್ಡ ಬಾನೆಯಲ್ಲಿ ಅಸ್ಥಿ ಮತ್ತು ಇತರ ವಸ್ತುಗಳನ್ನು ಇಟ್ಟು ಹೂತು ಸುತ್ತಲೂ ಬಂಡೆಕಲ್ಲುಗಳನ್ನಿಟ್ಟು ಮಧ್ಯದಲ್ಲು ಸಣ್ಣಕಲ್ಲುಗಳನ್ನು ತುಂಬುವುದು, ಮತ್ತೊಂದು ವಿಧ. ಇಂಥ ಹಲವು ರೀತಿಗಳಿದ್ದುದು ಕಂಡುಬರುತ್ತದೆ. ಸತ್ತವನ ಆತ್ಮಕ್ಕೆ ಮುಂದೆ ಬೇಕಾಗಬಹುದೆಂಬ ನಂಬಿಕೆಯಿಂದ ಮಣ್ಣಿನ ಚಿಕ್ಕ ಚಿಕ್ಕ ಪಾತ್ರೆಗಳಲ್ಲಿ ಆಹಾರ ಮತ್ತಿತರ ಪರ್ದಾಥಗಳನ್ನು ಹಾಗೂ ಅವರ ನಿತ್ಯೋಪಯೋಗದ ವಸ್ತುಗಳನ್ನು ಇಟ್ಟು ಅಲ್ಲಿ ಹೂಳುತ್ತಿದ್ದರು.
ತಮಿಳು ನಾಡಿನ ಇತಿಹಾಸ ಬಲು ಪ್ರಾಚೀನವಾದ್ದು. ಭಾಷೆ ವೈಜ್ಞಾನಿಕವಾಗಿ ಭಾರತ ಉಪಖಂಡದಲ್ಲಿ ಇದು ಬಹುಶಃ ಅತ್ಯಂತ ಹಳೆಯ ಭಾಷೆ ಮೊತ್ತ. ಗತ ಶತಮಾನಗಳಲ್ಲಿ ಈ ಪ್ರದೇಶದಲ್ಲಿ ಸಂಸ್ಕøತಿ ನಾಗರಿಕತೆಗಳ ಭಾಷೆ ಸಾಹಿತ್ಯಗಳೂ ಚಿತ್ರಕಲೆ ವಾಸ್ತುಶಿಲ್ಪಗಳೂ ಸಂಗೀತವೂ ಬೆಳೆದಂತೆ ದೇಶ ಬೇರೆಡೆಯಲ್ಲೆಲ್ಲೂ ಬೆಳೆಯಲಿಲ್ಲ. ಉನ್ನತ ಬೆಳೆವಣಿಗೆ ಹೊಂದಿದ ತಮಿಳು ಭಾಷೆ ಅದರಲ್ಲಿ ಸೃಷ್ಟಿಯಾದ ಅನಶ್ವರ ಸಾಹಿತ್ಯ, ಉದಾತ್ತವಾದ ಗೋಪುರಗಳು, ಮಧುರೈ ಮಹಾಬಲಿಪುರಂ ತಂಜಾವೂರು ಕಾಂಚೀಪುರಗಳಲ್ಲಿ ಕೆತ್ತಲಾದ ಅಮರ ವಾಸ್ತು ಶಿಲ್ಪಗಳು ತಂಜಾವೂರಿನ ಉತ್ಕøಷ್ಟ ಕರಕೌಶಲ, ಭರತನಾಟ್ಯ ಕಲಾವಿದರ ಲಲಿತ ಚಲನೆಗಳು - ಇವು, ಮತ್ತು ಇಂಥ ಹಲವು, ತಮಿಳು ನಾಡಿನ ಸಾಂಸ್ಕøತಿ ಪರಂಪರೆಯ ಅಂಶಗಳು.ತಮಿಳು ನಾಡಿಗೆ ಸಂಬಂಧಿಸಿದಂತೆ ಬೃಹದ್ಬಾರತದ ಇತಿಹಾಸವನ್ನು ದಕ್ಷಿಣ ಭಾರತದ ಇತಿಹಾಸದ ಒಂದು ಉಜ್ವಲ ಅಧ್ಯಾಯವೆಂದು ಪರಿಗಣಿಸಬಹುದು.
ತಮಿಳುನಾಡಿನ ಸಂಸ್ಕøತಿಕ ಪ್ರಭಾವಗಳು -- ಮುಖ್ಯವಾಗಿ ಲಿಪಿ. ನಂಬಿಕೆಗಳು, ಕಲೆಗಳು ಮುಂತಾದುವುಗಳಲ್ಲಿ—ಮಲಯ, ಸುಮಾತ್ರ, ಜಾವ, ಬಾಲಿ, ಕಾಂಬೋಡಿಯ ಮತ್ತು ಸೈಯಾಮ್ಗಳನ್ನು ತಲಪಿವೆ. ಇತರ ದೇಶಗಳು ಮತ್ತು ಸಂಸ್ಕøತಿಗಳೊಂದಿಗಿನ ಸಂಪರ್ಕದ ಅವಕಾಶವನ್ನು ತಮಿಳು ನಾಡು ಬಳಸಿಕೊಳ್ಳುವುದರಲ್ಲಿ, ಅವುಗಳಲ್ಲಿಯ ಉತ್ತಮಾಂಶಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಎಂದೂ ಹಿಂದೆ ಬಿದ್ದಿಲ್ಲ.
ತಮಿಳು ನಾಡಿನ ಪ್ರಾಚೀನ ಇತಿಹಾಸವನ್ನು ಅದರ ಭಾಷೆಯಿಂದ ಮತ್ತು ಇತಿಹಾಸ ಪೂರ್ವಕಾಲದ ಪಳೆಯುಳಿಕೆಗಳ ಅಧ್ಯಯನದಿಂದ ಅರಿಯಬಹುದು. ತಮಿಳಿನ ಅತ್ಯಂತ ಪ್ರಾಚೀನ ನಷ್ಟವಾಗಿದೆ. ತಮಿಳಿನ ತೊಲ್ಕಾಪ್ಪಿಯಮ್ ಎಂಬ ಪ್ರಸಿದ್ಧ ವ್ಯಾಕರಣ ಗ್ರಂಥವನ್ನು ಕ್ರಿ. ಪೂ. 325 - ಕ್ರಿ.ಪೂ.88 ಕಾಲಕ್ಕೆ ನಿರ್ದೇಶಿಸಬಹುದು. ಕೆಲವು ವಿದ್ವಾಂಸರು ಇದು ಇನ್ನೂ ಹಿಂದಿನ ಕಾಲದ್ದೆಂದು ಹೇಳುತ್ತಾರೆ. ತಿರುಕ್ಕುರಳ್, ಶಿಲಪ್ಪದಿಕಾರಂ, ಮಣಿಮೇಖಲೈ ಮುಂತಾದ ಪ್ರಾಚೀನ ತಮಿಳು ಸಾಹಿತ್ಯ ಕೃತಿಗಳನ್ನು ಸಂಗಮ್ ಸಾಹಿತ್ಯವೆಂದು ಕರೆಯಲಾಗಿದೆ. ಇವು ಸೃಷ್ಟಿಯಾದ ಕಾಲವನ್ನು ತಮಿಳು ಸಾಹಿತ್ಯದ ಸುವರ್ಣ ಯುಗವೆಂದು ಕರೆಯಲಾಗಿದೆ. ಕ್ರಿ.ಶ. ಮೊದಲ ಮೂರು ಶತಮಾನಗಳನ್ನು ಸಂಗಮ್ ಯುಗವೆಂದು ಕರೆಯಲಾಗಿದೆ. ಆ ಕಾಲದ ತಮಿಳರು ಕಟ್ಟು ನಿಟ್ಟಾದ ಜಾತಿಗಳಾಗಿ ವಿಂಗಡವಾಗಿರಲಿಲ್ಲ. ಆಗಿನ ಜನಜೀವನ ಬಹುತೇಕ ಗ್ರಾಮೀಣವಾಗಿತ್ತು. ಹಳ್ಳಿಗಳು ಸ್ವಸಂಪೂರ್ಣವಾಗಿದ್ದುವು. ರೂಢಿಯ ನಿಯಮಗಳೇ ಕಾನೂನುಗಳ ಸ್ಥಾನ ಪಡೆದಿದ್ದುವು. ಒಂದು ಪ್ರದೇಶದ ಜನರು ಇನ್ನೊಂದು ಪ್ರದೇಶದ ಜನರೊಂದಿಗೆ ಪದಾರ್ಥಗಳ ವಿನಿಮಯ ಮಾಡಿಕೊಳ್ಳತೊಡಗಿದಾಗ ಪಟ್ಟಣಗಳು ಎದ್ದವು. ಕ್ರಿ.ಪೂ.500—ಕ್ರಿ,ಪೂ.100ರ ಅವಧಿಯಲ್ಲಿ ತಮಿಳು ನಾಡಿನ ವಿದೇಶಿ ವ್ಯಾಪಾರ ವಿಶೇಷವಾಗಿ ಬೆಳೆದದ್ದರ ಫಲವಾಗಿ ಅನೇಕ ರೇವುಪಟ್ಟಣಗಳು ಬೆಳೆದುವು.
ತಮಿಳು ನಾಡಿನ ಇತಿಹಾಸಕಾಲ ಕ್ರಿ.ಪೂ 4ನೆಯ ಶತಮಾನದಿಂದ ಆರಂಭವಾಗುತ್ತದೆ. ಸಂಗಮ್ ಯುಗದ ಕೊನೆಯ ವರೆಗೆ (ಕ್ರಿ.ಶ 3ನೆಯ ಶತಮಾನ) ಅದರ ಇತಿಹಾಸ ಸ್ಪಷ್ಟವೂ ಸಮಗ್ರವೂ ಆಗಿ ತಿಳಿದುಬಂದಿಲ್ಲ. ಚೇರ, ಚೋಳ ಮತ್ತು ಪಾಂಡ್ಯರು ನೆರೆಯ ಸ್ವತಂತ್ರ ರಾಜ್ಯಗಳನ್ನಾಳುತ್ತಿದ್ದರೆಂಬುದು ಅಶೋಕನ 2ನೆಯ ಮತ್ತು 13ನೆಯ ಶಿಲಾಶಾಸನಗಳಿಂದ ತಿಳಿದುಬರುತ್ತದೆ. ಸತ್ಯಪುತ್ರರು ಬಹುಶ: ಕೊಂಗುನಾಡನ್ನಾಳುತ್ತಿದ್ದವರು. ಆ ಕಾಲದ ಇತಿಹಾಸದ ಕೆಲವು ಹೊಳಹುಗಳು ಮುಖ್ಯವಾಗಿ ಸಂಗಮ್ ಕೃತಿಗಳಿಂದ ದೊರಕುತ್ತವೆ. ಇವನ್ನು ಇತಿಹಾಸ ಗ್ರಂಥಗಳೆನ್ನಲಾಗದಿದ್ದರೂ ತತ್ಕಾಲದ ಜನರ, ಅವರ ದೊರೆಗಳ, ಪಾಳೆಯಗಾರರ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಮತೀಯ ಜೀವನಕ್ಕೆ ಸಂಬಂಧಿಸಿದ ಐತಿಹಾಸಿಕ ಸಾಮಗ್ರಿ ನಮಗೆ ದೊರಕುತ್ತದೆ.
ಸಂಗಮ್ ಯುಗದ ಅಂತ್ಯದ ಅನಂತರದ ಮೂರು ಶತಮಾನಗಳ ಇತಿಹಾಸ ಶೂನ್ಯವಾಗಿದೆ. ಇದನ್ನು ಕಳಭ್ರ ವಿಚ್ಚಿತ್ತಿ ಅವಧಿ ಎಂದು ಹೇಳಲಾಗಿದೆ ಕಳಭ್ರರು ಕಾಡುಜನರು. ಇವರು ಬಹುಶ: ಕರ್ನಾಟಕದ ಪ್ರದೇಶದಿಂದ ಬಂದರು. ಇವರು ಕ್ರಿ.ಶ. 6ನೆಯ ಶತಮಾನದ ನಡುಗಾಲದವರೆಗೆ ತಮಿಳು ನಾಡನ್ನು ಆಕ್ರಮಿಸಿಕೊಂಡಿದ್ದರು. ಮಧುರೆಯ ಸುತ್ತಮುತ್ತಣ ಪ್ರದೇಶದಲ್ಲಿ ಮತ್ತೆ ಪ್ರಬಲರಾದ ಪಾಂಡ್ಯರೂ ಕಾಂಚೀಪುರವನ್ನು ರಾಜಧಾನಿಯಾಗಿ ಮಾಡಿಕೊಂಡು ತೊಂಡೈ ಮಂಡಲವನ್ನಾಳತೊಡಗಿದ ಪಲ್ಲವರು ಕಲಭ್ರರ ಆಳ್ವಿಕೆಯನ್ನು ಕೊನೆಗೊಳಿಸಿದರು. 9ನೆಯ ಶತಮಾನದ ನಡುಗಾಲದವರೆಗೂ ತಮಿಳು ನಾಡನ್ನು ಪಾಂಡ್ಯರೂ ಪಲ್ಲರೂ ವಾಸ್ತವವಾಗಿ ಹಂಚಿಕೊಂಡು ಆಳಿದರು. ದಕ್ಷಿಣಭಾರತದ ಇತಿಹಾಸದಲ್ಲಿ ಈ ಅವಧಿ ಅತ್ಯಂತ ಕ್ರಿಯಾಶೀ¯ವಾದ್ದು. 9ನೆಯ ಶತಮಾನದ ವರೆಗೆ ಚೋಳರು ಅಜ್ಞಾತರಾಗಿದ್ದರು. ಆಗ ಅವರು ತಲೆಯೆತ್ತ ತೊಡಗಿ ಮುಂದಿನ ಸುಮಾರು ನಾಲ್ಕು ಶತಮಾನಗಳ ಕಾಲ ರಾಜ್ಯವಾಳಿದರು. ಪಲ್ಲವ ಆಳ್ವಿಕೆ ಕೊನೆಗೊಂಡಿತು. ಪಾಂಡ್ಯ ಮತ್ತು ಚೇರ ರಾಜ್ಯಗಳು ಅವರ ಅಧೀನಕ್ಕೆ ಬಂದುವು. ರಾಜರಾಜ ಮತ್ತು ರಾಜೇಂದ್ರ ಗಂಗೈಕೊಂಡರ (985-1044) ಆಳ್ವಿಕೆಯಲ್ಲಿ ಚೋಳ ಸಾಮ್ರಾಜ್ಯದ ಅಧಿಕಾರ ಮಹೋನ್ನತ ಶಿಖರ ಮುಟ್ಟಿತು. ರಾಜೇಂದ್ರ ಗಂಗೈಕೊಂಡ ಉತ್ತರಕ್ಕೆ ಗಂಗಾ ನದಿಯ ವರೆಗೂ ದಂಡೆತ್ತಿ ಹೋಗಿದ್ದ. ಸಾಗರದಾಚೆಗಿನ ಶ್ರೀವಿಜಯನ ರಾಜ್ಯದ ಮೇಲೂ ಏರಿಹೋದ. ಚೋಳರ ಆಳ್ವಿಕೆಯ ಕಾಲದಲ್ಲಿ ತಮಿಳು ನಾಡು ಬಲಿಷ್ಠ ಗರಿಷ್ಠ ರಾಜಕೀಯ ಶಕ್ತಿಯಾಗಿತ್ತು. ಸ್ವಾಯತ್ತಾತ್ಮಕ ಗ್ರಾಮಸಭೆಗಳೊಂದಿಗೆ ಸಾಮರಸ್ಯದಿಂದ ಕೆಲಸ ಮಾಡುತ್ತಿದ್ದ ಅತ್ಯಂತ ಸುಸಂಘಟಿತ ಆಡಳಿತ ವ್ಯವಸ್ಥೆ, ಸಾಹಿತ್ಯಕ ಧಾರ್ಮಿಕ ಚಟುವಟಿಕೆಗಳ ಉನ್ನತಿಕೆ, ವಾಸ್ತುಶಿಲ್ಪ ಕಲಾವೈಭವ-ಇವು ಈ ಕಾಲದ ಮಹತ್ತ್ವದ ಸಾಧನೆಗಳು. 13ನೆಯ ಶತಮಾನದಲ್ಲಿ ಚೋಳರ ಕ್ಷೀಣದಶೆಯೊಂದಿಗೆ ಪಾಂಡ್ಯರು ಸ್ವಲ್ಪ ಕಾಲ ಮತ್ತೆ ಪ್ರಬಲರಾದರು. ಇವರು ಬಹುತೇಕ ಇಡೀ ತಮಿಳು ನಾಡನ್ನಾಳಿದರು.
ತಮಿಳರ ನಾಗರಿಕತೆ ಅವರು ವಾಸವಾಗಿದ್ದ ಪ್ರದೇಶಗಳಿಷ್ಟೆ ಸೀಮಿತವಾಗಿರಲಿಲ್ಲ. ಚೋಳರ ಆಳ್ವಿಕೆಯ ಸುವರ್ಣಯುಗದಲ್ಲಿ ಸಾಹಸಿ ನಾವಿಕರು ಅನೇಕ ಅಪರಿಚಿತ ಸಮುದ್ರಗಳನ್ನು ದಾಟಿ ದೂರದೂರ ದೇಶಗಳಲ್ಲಿ ತಮಿಳು ಸಂಸ್ಕøತಿ ನಾಗರಿಕತೆಗಳನ್ನು ಪ್ರಸಾರ ಮಾಡಿದರು. ಈಗಲೂ ದೂರ ಪ್ರಾಚ್ಯದಲ್ಲಿ ಈ ಪ್ರವಾಸಿಗಳ ನಿಷ್ಕøಷ್ಟ ದಾಖಲೆಗಳು ಕಾಣಸಿಗುತ್ತವೆ.
14ನೆಯ ಶತಮಾನದ ಮೊದಲ ವರ್ಷಗಳಲ್ಲಿ ನಡೆದ ಮಲ್ಲಿಕಾಫರ್ನ ದಂಡಯಾತ್ರೆಯೊಂದಿಗೆ ಆರಂಭವಾಗಿ ಆಗಿಂದಾಗ್ಗೆ ನಡೆಯುತ್ತಿದ್ದ ಮುಸ್ಲಿಂ ದಾಳಿಗಳಿಂದಾಗಿ ದಕ್ಷಿಣ ಭಾರತಕ್ಕೆ ಭಾರಿ ಆಘಾತ ಉಂಟಾಯಿತು. 1334ರಲ್ಲಿ ಮಧುರೆಯಲ್ಲಿ ಮುಸ್ಲಿಂ ಸುಲ್ತಾನನೊಬ್ಬನ ಆಳ್ವಿಕೆ ಸ್ಥಾಪಿತವಾಯಿತು. ಇಸ್ಲಾಮೀ ಆಕ್ರಮಣದಿಂದ ದಕ್ಷಿಣ ಭಾರತವನ್ನು ಉಳಿಸಲು ಪ್ರಯತ್ನಗಳಾದುವು. 1336ರಲ್ಲಿ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯ ಇಸ್ಲಾಂ ಆಕ್ರಮಣಕ್ಕೆ ಹಿಂದೂ ಪ್ರತಿಭಟನೆಯ ಪ್ರತೀಕವಾಗಿ ನಿಂತಿತು. ಪುನರುಜ್ಜೀವನಗೊಂಡ ಹಿಂದೂ ಸಂಸ್ಕøತಿಯ ಸಂಘಟನೆಯ ಕೇಂದ್ರವಾಗಿ ಪರಿಣಮಿಸಿತು. 14ನೆಯ ಶತಮಾನದ ಕೊನೆಯ ವೇಳೆಗೆ ತಮಿಳು ನಾಡು ಆ ಸಾಮ್ರಾಜ್ಯದ ಭಾಗವಾಯಿತು. ಅದನ್ನು ರಾಜಮನೆತನದವರಾಗಲಿ, ಸ್ಥಳೀಯ ನಾಯಕರಾಗಲಿ, ರಾಜ್ಯಪಾಲರಾಗಲಿ ಆಳಿದರು. ಅನಂತರ ಮಧುರೈ. ತಂಜಾವೂರು ಮತ್ತು ಜಿಂಜೀಯಿಂದ ಮೂರು ನಾಯಕ ವಂಶಗಳು ವಿಜಯನಗರದ ಆಶ್ರಯದಲ್ಲಿ ಆಳತೊಡಗಿದವು. 17ನೆ ಶತಮಾನದಲ್ಲಿ ವಿಜಯನಗರದ ಕೇಂದ್ರ ಆಡಳಿತ ದುರ್ಬಲವಾದಾಗ ಇವು ಬಹುತೇಕ ಸ್ವತಂತ್ರವಾದುವು. ವಿಜಯನಗರದ ಪ್ರಾಂತ್ಯಗಳ ಪೈಕಿ ಮೊಟ್ಟಮೊದಲು ಸ್ವತಂತ್ರವಾದ್ದು ಮಧುರೈ. ಬಿಜಾಪುರದ ಮತ್ತು ಗೋಲ್ಕೋಂಡದ ಸುಲ್ತಾನರೂ ಅನಂತರ ಮೊಗಲ್ ಸೈನ್ಯಗಳೂ ತಮಿಳು ನಾಡಿನ ಮೇಲೆ ದಾಳಿ ನಡೆಸಿದವು.
ಮುಸ್ಲಿಮರ ಕರ್ಣಾಟಕ ಆಕ್ರಮಣ ಸಂಪೂರ್ಣವಾದ್ದು 1652ರಲ್ಲಿ. 1693ರಲ್ಲಿ ಮಧುರೈ ಮತ್ತು ತಂಜಾವೂರು ಔರಂಗ್ಜೇಬನ ಅಧೀನ ರಾಜ್ಯಗಳಾದವು. 1686ರಲ್ಲಿ ಪುದುಕೋಟೈಯ ತೊಂಡಮಾನರು ಸ್ವತಂತ್ರ ರಾಜ್ಯಸ್ಥಾಪನೆ ಮಾಡಿದರು. ಮಧುರೆಯ ರಾಜಪ್ರತಿನಿಧಿಯಾಗಿದ್ದ (1689-1706) ರಾಣಿ ಮಂಗಮ್ಮಾಳ್ ರಸ್ತೆಗಳನ್ನೂ ದೇವಸ್ಥಾನಗಳನ್ನೂ ಕೊಳಗಳನ್ನು ಛತ್ರಗಳನ್ನೂ ಕಟ್ಟಿಸಿದಳು. ಜನೋಪಯುಕ್ತ ಕಾರ್ಯಗಳಿಂದಾಗಿ ಇಂದಿಗೂ ಅವಳ ನೆನಪು ತಮಿಳು ನಾಡಿನಲ್ಲಿ. ಇನ್ನೊಬ್ಬ ರಾಜಪ್ರತಿನಿಧಿಯಾಗಿದ್ದ (1732-1736) ರಾಣಿ ಮೀನಾಕ್ಷಿಗೆ ಆರ್ಕಾಟ್ ನವಾಬ್ ದೋಸ್ತ್ಅಲಿ ಮೋಸ ಮಾಡಿ ಅವಳನ್ನು ಸೆರೆಹಿಡಿದು ಅವಳ ರಾಜ್ಯವನ್ನು ವಶಪಡಿಸಿಕೊಂಡ. ಕರ್ನಾಟಕದ ನವಾಬರು 18ನೆಯ ಶತಮಾನದ ಆರಂಭದ ವೇಳೆಗೆ ಬಹುತೇಕ ಇಡೀ ತಮಿಳುನಾಡಿನ ಮೇಲೆ ಒಡೆತನ ಸ್ಥಾಪಿಸಿದರು.
ತಂಜಾವೂರಿನ ನಾಯಕರು ಹೆಚ್ಚು ಕಡಿಮೆ ಸ್ವತಂತ್ರರಾಗಿದ್ದರೂ ಕೇಂದ್ರ ಅಧಿಕಾರಕ್ಕೆ ವಿಧೇಯರಾಗಿದ್ದರು. ಅನೇಕ ಮುಖ್ಯ ಸಂದರ್ಭಗಳಲ್ಲಿ ಅದರ ನೆರವಿಗೆ ಹೋದರು. ಇವರ ಪೈಕಿ ಕೊನೆಯವನು ವಿಜಯರಾಘವ (1633-73). ಇವನು ದುರ್ಬಲನೂ ಅಸಮರ್ಥನೂ ಆದ ಆಡಳಿತಗಾರನಾಗಿದ್ದ. ಇತರ ನಾಯಕರೂ ಮುಸ್ಲಿಮರೂ ಯರೋಪಿಯನ್ನರೂ ನೀಡಿದ ಕೋಟಲೆಗಳನ್ನು ಎದುರಿಸಲಾರದೆ ಹೋದ. ತಂಜಾವೂರು ಸ್ವಲ್ಪ ಕಾಲ ಬಿಜಾಪುರ ಸುಲ್ತಾನನ ಆಳ್ವಿಕೆಗೆ ತುತ್ತಾಗಿತ್ತು (1659). ಮದುರೆಯ ನಾಯಕ ಚೊಕ್ಕನಾಥ ತಂಜಾವೂರಿನ ಮೇಲೆ ಆಕ್ರಮಣ ನಡೆಸಿದಾಗ (1673) ವಿಜಯರಾಘವ ಮಡಿದ. 1676ರಲ್ಲಿ ಏಕೋಜಿ (ವೆಂಕೋಜಿ) ತಂಜಾವೂರಿನ ಸಿಂಹಾಸನವನ್ನಾಕ್ರಮಿಸಿಕೊಂಡ, ತಂಜಾವೂರು ನಾಯಕರ ಆಳ್ವಿಕೆ ಕೊನೆಗೊಂಡಿತು. ಏಕೋಜಿಯ ಅನಂತರ ಅವನ ವಂಶದವರು ಕರ್ನಾಟಕದ ನವಾಬನ ಆಶ್ರಯದಲ್ಲೂ ಅನಂತರ ಈಸ್ಟ್ ಇಂಡಿಯ ಕಂಪನಿಯ ಆಶ್ರಿತರಾಗಿಯೂ ಮುಂದುವರಿದರು. 1799ರಲ್ಲಿ ವೆಲ್ಲೆಸ್ಲಿಯ ಒತ್ತಡದಿಂದಾಗಿ ತಂಜಾವೂರಿನ ರಾಜ ಸರ್ಪೋಜಿ ಜೀವನಾಂಶ ಪಡೆದು ತನ್ನ ರಾಜ್ಯವನ್ನು ಬ್ರಿಟಿಷ್ ಆಡಳಿತದಲ್ಲೆ ಒಪ್ಪಿಸಿದ. 1855ರಲ್ಲಿ ಕೊನೆಯ ರಾಜ ತೀರಿಕೊಂಡ, ಅವನಿಗೆ ಗಂಡು ಸಂತಾನ ಇರಲಿಲ್ಲ. ಆದ್ದರಿಂದ ರಾಜಪದವಿ ಕೊನೆಗೊಂಡಿತು. ಒಟ್ಟಿನಲ್ಲಿ ದೌರ್ಬಲ್ಯ, ಉತ್ತರಾಧಿಕಾರದ ಬಗ್ಗೆ ವಾದವಿವಾದಗಳು, ಅದರ ಆಡಳಿತಗಾರರಿಂದಲೂ ಹೊರಂಗಣ ಆಕ್ರಮಣಕಾರರಿಂದಲೂ ಆ ಪ್ರದೇಶದ ಸಂಪತ್ತಿನ ಲೂಟಿ_ಇವು ತಂಜಾವೂರಿನ ಮರಾಠಿ ಆಡಳಿತದ ಹೆಗ್ಗುರುತುಗಳೆನ್ನಬಹುದು.
ವಿಜಯನಗರದ ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ ಜಿಂಜೀಯಲ್ಲಿ ನಾಯಕರ ಆಳ್ವಿಕೆ ಆರಂಭವಾಯಿತು. 1649ರಲ್ಲಿ ಬಿಜಾಪುರದ ಸೇನೆಯಿಂದ ಜಿಂಜೀಯ ನಾಯಕರ ಆಳ್ವಿಕೆ ಕೊನೆಗೊಂಡಿತು. ಫ್ರಾಂಕ್ವಾ ಮಾರ್ಟಿನ್ ಎಂಬ ಫ್ರೆಂಚನಿಗೆ ಪುದುಚೇರಿಯಲ್ಲಿ ನೆಲೆ ಏರ್ಪಡಿಸಿಕೊಳ್ಳಲು 1674ರಲ್ಲಿ ಬಿಜಾಪುರದ ರಾಜ್ಯಪಾಲ ಅನುಮತಿ ನೀಡಿದ. ಮೂರು ವರ್ಷಗಳಲ್ಲಿ ಶಿವಾಜಿ ಕರ್ನಾಟಕದ ದಂಡೆಯಾತ್ರೆ ನಡೆಸಿದ. ಅವನು ಕರ್ನಾಟಕದಲ್ಲಿ ಸ್ಥಾಪಿಸಿದ ಸರ್ಕಾರಕ್ಕೆ ಜಿಂಜೀ ಆಡಳಿತಕೇಂದ್ರವಾಯಿತು. ಆದರೆ 1698 ರಲ್ಲಿ ಅದು ಮೊಗಲರ ವಶವಾಯಿತು. ಕರ್ನಾಟಕದಲ್ಲಿ ಕೋಲೆರೂನ್ ಉತ್ತರಕ್ಕೆ ಮೊಗಲರ ನೇರ ಆಡಳಿತ ಆರಂಭವಾಯಿತು.
ತಮಿಳು ನಾಡಿನ ಆಧುನಿಕ ಇತಿಹಾಸ ಆರಂಭವಾಗುವುದು 16-17ನೆಯ ಶತಮಾನಗಳಲ್ಲಿ : ಪಶ್ಚಿಮದ ರಾಷ್ಟ್ರಗಳು ಇಲ್ಲಿಗೆ ಬಂದಾಗ, ಈಗಿನ ಚೆನ್ನೈ ನಗರದಲ್ಲಿ ಮತ್ತು ಅದರ ಸುತ್ತಮುತ್ತ ಪೋರ್ಚುಗೀಸರು, ಇಂಗ್ಲಿಷರು ಮುಂತಾದವರು ವ್ಯಾಪಾರ ಕೋಠಿಗಳನ್ನು ಸ್ಥಾಪಿಸಿದಾಗ, ಚೆನ್ನೈನಲ್ಲಿ ಈಗ ಫೋರ್ಟ್ ಸೇಂಟ್ ಜಾರ್ಜ್ ಇರುವ ಪ್ರದೇಶವನ್ನು ಬ್ರಿಟಿಷರು ಪ್ರವೇಶಿಸಲು 1639ರ ಆಗಸ್ಟ್ 22ರಂದು ಫ್ರಾನ್ಸಿಸ್ ಡೇ ಎಂಬವನಿಗೆ ಫರ್ಮಾನ್ ನೀಡಿದವನು ನಾಯಕ ವೆಂಕಟಾದ್ರಿ. ಅಂದಿನಿಂದ ಚೆನ್ನೈ ನಗರ ತಮಿಳು ನಾಡಿನ ಎಲ್ಲ ರಾಜಕೀಯ ಶೈಕ್ಷಣಿಕ ಆರ್ಥಿಕ ಸಾಂಸ್ಕøತಿಕ ಬೆಳವಣಿಗೆಯ ಕೇಂದ್ರವಾಗಿದೆ. 1639ರಲ್ಲಿ ಸ್ಥಾಪಿತವಾದಾಗ 7,000 ಜನರ ವಸತಿಯಾಗಿ ಆರಂಭವಾದ ನಗರ ಕ್ರಮವಾಗಿ ಬೆಳೆದಿದೆ.
ಚಕ್ರವರ್ತಿ ಔರಂಗಜೇಬನ ಮರಣಾನಂತರ ದಕ್ಷಿಣದ ಮೇಲೆ ಮೊಗಲ್ ಚಕ್ರವರ್ತಿಗಳ ಹತೋಟಿ ಸಡಿಸಲಾಯಿತು. ಆರ್ಕಾಟ್ ನವಾಬನನ್ನು ತನ್ನ ಆಶ್ರಿತನನ್ನಾಗಿ ಮಾಡಿಕೊಂಡು ನಿಜಾಮ 1724ರಲ್ಲಿ ತನ್ನ ಅಧಿಕಾರ ಸ್ಥಾಪಿಸಿದ. ನಿಜಾಮನಿಗೂ ಮರಾಠರಿಗೂ ನಡುವೆ ಅಧಿಕಾರಕ್ಕಾಗಿ ನಡೆಯುತ್ತಿದ್ದ ಕಚ್ಚಾಟ ಈ ವ್ಯವಸ್ಥೆಯಿಂದೇನೂ ಬದಲಾಗಲಿಲ್ಲ. ಆ ವೇಳೆಗೆ ಯೂರೋಪಿಯನ್ ಕಂಪನಿಗಳು ಬಲಿಷ್ಠವಾಗಿದ್ದವು. 1748ರಲ್ಲಿ ನಜಾಮ್-ಉಲ್-ಮುಲ್ಕನ ಮರಣಾನಂತರ ಅಧಿಕಾರಕ್ಕಾಗಿ ನಡೆದ ಯುದ್ಧಗಳಲ್ಲಿ ಇಂಗ್ಲಿಷರೂ ಫ್ರೆಂಚರೂ ಪರಸ್ಪರ ವಿರುದ್ಧ ಪಕ್ಷಗಳನ್ನು ವಹಿಸಿ ಕಾದಾಡಿದರು. ವ್ಯಾಪಾರ ಮತ್ತು ರಾಜ್ಯಕಾರಣದಲ್ಲಿ ತಮ್ಮ ನಡುವಣ ಸ್ಪರ್ಧೆಯ ಇತ್ಯರ್ಥಕ್ಕಾಗಿ ಸೆಣಸಿದುವು. ಅಂತಿಮವಾಗಿ ಇಂಗ್ಲಿಷರಿಗೆ ಜಯ ಒಲಿಯಿತು. ಅವರ ಪಕ್ಷಕಾರ ಮಹಮ್ಮದ್ ಅಲಿವಲಾಜಾ ಕರ್ನಾಟಕದ ನವಾಬನಾದ (1752). ಭಾರತದ ಉಳಿದ ಭಾಗಗಳಂತೆ ತಮಿಳು ನಾಡೂ 18ನೆಯ ಶತಮಾನದಲ್ಲಿ ಅವ್ಯವಸ್ಥೆ ಮತ್ತು ದುರಾಡಳಿತಗಳಿಗೆ ಒಳಗಾಗಿತ್ತು: ಬಹುತೇಕ ಅರಾಜಕತೆಯೇ ಹಬ್ಬಿತ್ತು. ಮದ್ರಾಸಿನಲ್ಲಿದ್ದ ಕಂಪನಿ ಸರ್ಕಾರ ದುರ್ಬಲವಾಗಿತ್ತು : ನಿಜಾಮ ಮತ್ತು ಮಹಮ್ಮದ್ ಅಲಿ ಇವರ ನಡುವೆಯಾಗಲಿ ಮಹಮ್ಮದ್ ಅಲಿ ಮತ್ತು ಇತರ ಸಣ್ಣಪುಟ್ಟ ಆಡಳಿತಗಾರರ ನಡುವೆಯಾಗಲಿ ಶಾಂತಿ ಸ್ಥಿರಗೊಳಿಸಲು ಅಸಮರ್ಥವಾಗಿತ್ತು; ಮಹಮ್ಮದ್ ಅಲಿಯ ಅನ್ಯಾಯಗಳನ್ನು ನಿಲ್ಲಿಸಲಾರದಾಗಿತ್ತು. ಮಹಮ್ಮದ್ ಅಲಿಯ ಕೋಟೆಗಳು ಇಂಗ್ಲಿಷರ ಅಧೀನದಲ್ಲಿದ್ದುವು. ಯುದ್ಧ ಕಾಲದಲ್ಲಿ ಇಡೀ ಆಡಳಿತವನ್ನು ಇಂಗ್ಲಿಷರು ವಹಿಸಿಕೊಳ್ಳಬಹುದಿತ್ತು. ಯೂರೋಪಿಯನ್ ಸಾಲಿಗರಿಂದ ನವಾಬ ಬಹಳ ಸಾಲ ಮಾಡಿದ್ದ. ಕಂಪನಿಗೆ ಇದು ಒಂದು ಸಮಸ್ಯೆಯಾಗಿತ್ತು. ನವಾಬ ಟಿಪ್ಪು ಸುಲ್ತಾನನೊಂದಿಗೆ ಪತ್ರವ್ಯವಹಾರ ನಡೆಸುತ್ತಿದ್ದಾನೆಂದು ವೆಲ್ಲೆಸ್ಲಿ ಕಂಡುಹಿಡಿದ. ಕರ್ನಾಟಕದ ಆಡಳಿತವನ್ನು ವಹಿಸಿಕೊಳ್ಳುವುದಕ್ಕೆ ಅದೇ ಒಂದು ನೆರವಾಯಿತು. ಇದಕ್ಕೆ ಪ್ರತಿಯಾಗಿ ವರಮಾನದ ಐದನೆಯ ಒಂದು ಭಾಗವನ್ನು ನವಾಬನಿಗೆ ವರ್ಷಾಶನವಾಗಿ ನೀಡಲಾಯಿತು. ಇದಕ್ಕೆ ಮುಂಚೆ, 3ನೆಯ ಮೈಸೂರು ಯುದ್ಧದ (1792) ಫಲವಾಗಿ ದಿಂಡಿಗಲ್ ಮತ್ತು ಅದರ ಸುತ್ತಮುತ್ತಣ ಪ್ರದೇಶವನ್ನೂ ಇನ್ನು ಕೆಲವು ಪ್ರದೇಶಗಳನ್ನೂ ಟಿಪ್ಪು ಸುಲ್ತಾನನಿಂದ ಕಿತ್ತುಕೊಳ್ಳಲಾಗಿತ್ತು. 1799ರಲ್ಲಿ ಕೊಯಮತ್ತೂರು ಇಂಗ್ಲಿಷರಿಗೆ ಸೇರಿತು.
ಹೀಗೆ 19ನೆಯ ಶತಮಾನದ ಆರಂಭದ ವೇಳೆಗೆ ಇಡೀ ತಮಿಳು ನಾಡು ಕಂಪನಿಯ ಆಡಳಿತಕ್ಕೆಒಳಪಟ್ಟಿತ್ತು. ವಾರನ್ ಹೇಸ್ಟಿಂಗ್ಸ್ ಗವರ್ನರ್ ಆದಾಗಿನಿಂದ ಇಂಗ್ಲಿಷರು ದೇಶದ ಆಳ್ವಿಕೆಯಲ್ಲಿ ಹೆಚ್ಚು ಆಸಕ್ತರಾದರು. ತಮಿಳು ನಾಡಿನ ಬಹುಭಾರವನ್ನೂ ತೆಲುಗು ಮಲಯಾಳಂ ಕನ್ನಡ ಭಾಷೆಗಳನ್ನಾಡುತ್ತಿದ್ದ ಜನರಿದ್ದ ಕೆಲವು ಪ್ರದೇಶಗಳನ್ನೂ ಒಳಗೊಂಡ ಮದ್ರಾಸ್ ಪ್ರಾಂತ್ಯದ ರಚನೆಯಾಯಿತು. ಮದ್ರಾಸ್ ನಗರ ರಾಜಧಾನಿಯಾಯಿತು. ಮಧುರೈ, ತಂಜಾವೂರು, ಕಾಂಚೀಪುರ, ಗಂಗೈಕೊಂಡ ಚೋಳಪುರ ಇವೆಲ್ಲ ತಮ್ಮ ಪ್ರಾಮುಖ್ಯವನ್ನು ಕಳೆದುಕೊಂಡುವು. ಬ್ರಿಟಷರು ಪ್ರಥಮವಾಗಿ ವ್ಯಾಪಾರದಲ್ಲಿ ಆಸಕ್ತರಾಗಿದ್ದುದರಿಂದ ಬಂದರು ನಗರವಾದ ಮದ್ರಾಸ್ ಅವರ ಗಮನ ಸೆಳೆಯಿತು. ಬ್ರಿಟಿಷ್ ಆಡಳಿತದ ಕಾಲದ ಮದ್ರಾಸ್ ಪ್ರಾಂತ್ಯದಲ್ಲಿ 25 ಜಿಲ್ಲೆಗಳಿದ್ದುವು. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಅದರ ಅಂಗವಾದ ಮದ್ರಾಸ್ ಪ್ರಾಂತ್ಯ ಕೂಡ ಸ್ವತಂತ್ರವಾಯಿತು. 1950ರಲ್ಲಿ ಭಾರತ ಗಣರಾಜ್ಯವಾದಾಗ ಚೆನ್ನೈ ಒಂದು ರಾಜ್ಯವಾಯಿತು. ತೆಲುಗು ಮಾತನಾಡುವ ಜನರು ಬಹುಸಂಖ್ಯೆಯಲ್ಲಿದ್ದ ಭಾಗವನ್ನು 1953ರಲ್ಲಿ ಆಂಧ್ರ ರಾಜ್ಯವೆಂದು ಪ್ರತ್ಯೇಕಿಸಲಾಯಿತಲ್ಲದೆ, ಬಳ್ಳಾರಿ ಜಿಲ್ಲೆಯನ್ನು ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. 1956ರಲ್ಲಿ ಭಾರತದ ರಾಜ್ಯಗಳ ಪುನರ್ವಿಂಗಡಣೆಯಾದಾಗ ದಕ್ಷಿಣ ಕನ್ನಡ ಜಿಲ್ಲೆ ಮೈಸೂರು ರಾಜ್ಯಕ್ಕೂ (ಕರ್ನಾಟಕ) ಮಲಬಾರು ಕೇರಳ ರಾಜ್ಯಕ್ಕೂ ಹಿಂದಿನ ತಿರುವಾಂಕೂರು ಸಂಸ್ಥಾನದ ದಕ್ಷಿಣ ಭಾಗದ ತಮಿಳು ಪ್ರದೇಶಗಳು ಮದ್ರಾಸ್ ರಾಜ್ಯದ ಪ್ರದೇಶಕ್ಕೂ ಸೇರಿದುವು. ರಾಜ್ಯಕ್ಕೆ ಅಧಿಕೃತವಾಗಿ ತಮಿಳು ನಾಡು ಎಂದು ನಾಮಕರಣವಾಯಿತು.
ತಮಿಳು ನಾಡಿನಲ್ಲಿ ಕ್ರಿ.ಶ. 7ನೆಯ ಶತಮಾನಕ್ಕೆ ಹಿಂದಿನ, ಯಾವುದೇ ಧರ್ಮಕ್ಕೆ ಸೇರಿದ, ಕಟ್ಟಡಗಳು ಉಳಿದುಬಂದಿಲ್ಲ. ಆದರೆ ಕ್ರಿ.ಪೂ. ಸು. 2ನೆಯ ಶತಮಾನದಿಂದ ಕ್ರಿ.ಶ 2ನೆಯ ಶತಮಾನದವರೆಗಿನ ಸಂಗಮ್ ಸಾಹಿತ್ಯದಲ್ಲೂ ಅನಂತರ ಆಳ್ವಾರ್ಗಳು ಮತ್ತು ನಾಯನ್ಮಾರ್ಗಳು ರಚಿಸಿದ ಭಕ್ತಿ ಸಾಹಿತ್ಯದಲ್ಲೂ ಧಾರ್ಮಿಕ ಕಟ್ಟಡಗಳಿಗೆ ಸಂಬಂಧಿಸಿದ ಹಲವಾರು ಉಲ್ಲೇಖಗಳಿವೆ. ಇಳಙÉ್ಕೂೀಯಿಲ್. ಮಾಡಕ್ಕೋಯಿಲ್ ಆಲರ್ ಕೋಯಿಲ್ಗಳು ಇವುಗಳ ಪೈಕಿ ಕೆಲವು. ಅಲ್ಲದೆ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಅನೇಕ ಪಾರಿಭಾಷಿಕ ಪದಗಳೂ ಸಾಹಿತ್ಯದಲ್ಲಿ ಕಂಡುಬಂದಿವೆ. ಇದರಿಂದ ಸಂಗಮ್ ಕಾಲದಲ್ಲೇ ತಮಿಳು ನಾಡಿನಲ್ಲಿ ಹಲವಾರು ಕಟ್ಟಡಗಳು ನಿರ್ಮಾಣಗೊಂಡಿದ್ದುವೆಂದು ಹೇಳಬಹುದು. ಬೇಗನೆ ನಶಿಸುವ ಮರಮುಟ್ಟುಗಳನ್ನು ಬಹುಶ: ಆಗ ಉಪಯೋಗಿಸಿದ್ದುದು ಆ ಕಟ್ಟಡಗಳು ಇಂದು ಉಳಿದಿಲ್ಲದಿರುವುದಕ್ಕೆ ಕಾರಣವಾಗಿರಬಹುದು.
ಆದರೆ ಅನಂತರ ವೈಷ್ಣವ ಹಾಗೂ ಶೈವ ಭಕ್ತಿಪಂಥಗಳು ತಮಿಳು ನಾಡಿನಲ್ಲೆಲ್ಲ ಹಬ್ಬಿದುವು. ಈ ಚಳವಳಿಗಳ ಫಲವಾಗಿ ಎಲ್ಲೆಲ್ಲೂ ದೇವಾಲಯಗಳು ನಿರ್ಮಿತವಾಗಿವೆ. ರಚನಾಕ್ರಮದಲ್ಲಿ, ಅಲಂಕರಣದಲ್ಲಿ ಇವು ವಿಭಿನ್ನವಾಗಿದ್ದರೂ ಇವುಗಳಲ್ಲಿ ಅನುಸರಿಸಿದ ಶೈಲಿ ಮಾತ್ರ ಒಂದೇ. ಅದು ದ್ರಾವಿಡ ಶೈಲಿ. ಗೋಪುರಾಕಾರದ ಮೇಲ್ಕಟ್ಟಡ. ಸರಳವಾದ ಹೊರಮೈಗೋಡೆ, ಎಂಬ ಸಾಲುಗಳುಳ್ಳ ಮಂಟಪಗಳು-ಇವು ಈ ಶೈಲಿಯ ಪ್ರಮುಖ ಲಕ್ಷಣಗಳು.
ಶತಮಾನಗಳ ಅನಂತರ ಬಂದ ಶಿಲ್ಪಶಾಸ್ತ್ರ ಗ್ರಂಥಗಳು ಮತ್ತು ಆಗಮಗಳು ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಅನೇಕ ವಿವರಗಳನ್ನೂ ನೀಡಿವೆ. ಕಟ್ಟಡಗಳಿಗಾಗಿ ಸೂಕ್ತವಾದ ಕ್ಷೇತ್ರದ ಹಾಗೂ ಸಾಮಗ್ರಿಗಳ ಆಯ್ಕೆ, ಭಿನ್ನ ವಿನ್ಯಾಸಗಳಿಗೆ ಸಂಬಂಧಿಸಿದ ಮಾನಗಳು, ದೇವಾಲಯಗಳಲ್ಲಿ ಸ್ಥಾಪಿಸುವ ಪ್ರತಿಮೆಗಳ ಲಕ್ಷಣಗಳು. ಪೂಜಾವಿಧಿ ಪೂಜಾಸಾಮಗ್ರಿ, ತಾತ್ತ್ವಿಕ ಹಿನ್ನೆಲೆ, ಮುಂತಾದ ಎಲ್ಲ ವಿವರಗಳನ್ನೂ ಈ ಗ್ರಂಥಗಳಲ್ಲಿ ಕೊಟ್ಟಿದೆ. ಅನೇಕ ಸ್ತರಗಳ ವಿಮಾನಗಳನ್ನೂ ಒಂದರಿಂದ ಹಿಡಿದು ಸಾವಿರದವರೆಗಿನ ಕಂಬಗಳನ್ನುಳ್ಳ ಮಂಟಪಗಳನ್ನೂ ರಚಿಸುವ ವಿಧಾನಗಳನ್ನು ವಿವರಿಸಿದೆ. ವಿಮಾನ (ಗರ್ಭಗೃಹ). ಮಂಟಪಗಳು, ಪ್ರಾಕಾರ, ಧ್ವಜ ಸ್ತಂಭ ಹಾಗೂ ಗೋಪುರ-ಇವು ದೇವಾಲಯದಲ್ಲಿ ಪ್ರಮುಖವಾದ ಭಾಗಗಳು. ವಿಮಾನದಲ್ಲೂ ಅಧಿಷ್ಠಾನ, ಭಿತ್ತಿ, ಪ್ರಸ್ತರ, ಹಾರ, ಶಿಖರ ಮತ್ತು ಸ್ತೂಪಿ ಎಂಬ ಷಡಂಗಗಳಿರುತ್ತವೆ.
ತಮಿಳುನಾಡಿನ ಅತ್ಯಂತ ಪ್ರಾಚೀನ ದೇವಾಲಯದ ವಾಸ್ತುಶಿಲ್ಪವನ್ನು ಪಲ್ಲವ 1ನೆಯ ಮಹೇಂದ್ರವರ್ಮ (ಸು.580-630) ಬಂಡೆಯಲ್ಲಿ ಕೊರೆಯಿಸಿದ ದೇವಾಲಯಗಳಲ್ಲಿ ಕಾಣಬಹುದು. ಮಂಡಗ ಪಟ್ಟುವಿನ ಗುಹಾ ದೇವಾಲಯವೊಂದರಲ್ಲಿ ದೊರೆತ ಆತನ ಶಾಸನದಲ್ಲಿ ಅವನು ಬ್ರಹ್ಮ ವಿಷ್ಣು ಮಹೇಶ್ವರರಿಗಾಗಿ ಮರ, ಲೋಹ ಮತ್ತು ಗಾರೆಗಳಿಂದ ಕೂಡಿದ ಆಯತನವನ್ನು ಕಟ್ಟಿಸಿದುದಾಗಿ ಹೇಳಿದೆ. ಈ ಕಾಲಕ್ಕೆ ಸೇರಿದ ಇಂಥ ಗುಡಿಗಳು ಮದ್ರಾಸಿನ ಬಳಿಯ ಪಲ್ಲವರಂ, ತಿರುಚನಾಪಲ್ಲಿ, ದಳವಾನೂರು ಮುಂತಾದ ಕಡೆಗಳಲ್ಲಿ ಸಿಕ್ಕಿವೆ. ಇವುಗಳಲ್ಲಿ ಒಂದು, ಮೂರು ಅಥವಾ ಹೆಚ್ಚಿನ ಗರ್ಭಗೃಹಗಳಿವೆ. ಅಷ್ಟಕೋನಾಕಾರದ ನಡು ಭಾಗದಿಂದ ಕೂಡಿದ ಚಚ್ಚೌಕನೆಯ ಕಂಬಗಳಿರುತ್ತವೆ. ಈ ಕಂಬಗಳ ಚಚ್ಚೌಕದ ಬದಿಗಳ ಮೇಲೆ ಕಮಲ ಫಲಕಗಳಿವೆ. ಒಂದು ಬಾಗು ಇರುವ, ಏಣುಗಳುಳ್ಳ, ಮನುಷ್ಯನ ಮುಖವನ್ನು ಕೆತ್ತಿರುವ ಕಪೋತ ಪಾಲಿಕೆಗಳೂ ಗುಡಿಯ ದ್ವಾರದ ಎರಡೂ ಕಡೆ ಇರುವ ಎರುಡು ಕಥೆಗಳ ದ್ವಾರಪಾಲಕ ಮೂರ್ತಿಗಳೂ ಇರುತ್ತವೆ. ಇವು ಈ ಗುಡಿಗಳ ಪ್ರಮುಖ ಲಕ್ಷಣಗಳು.
ಒಂದನೆಯ ಮಹೇಂದ್ರವರ್ಮನ ಮಗ 1ನೆಯ ನರಸಿಂಹವರ್ಮ ಮಾಮಲ್ಲ(7ನೆಯ ಶತಮಾನದ ನಡುಗಾಲ) ಬಾದಾಮಿಗೆ ದಂಡೆತ್ತಿ ಹೋದಾಗ ಅಲ್ಲಿ ಬಯಲಿನಲ್ಲಿ ಕಟ್ಟಿದ್ದ, ಕಿರಿದಾದರೂ ಮುದ್ದಾದ, ಗುಡಿಗಳನ್ನು ಕಂಡ. ಆ ವೇಳೆಗಾಗಲೇ ಆ ಶೈಲಿಯಲ್ಲಿ ರೂಪುಗೊಂಡಿತ್ತು ಅವುಗಳಿಂದ ಪ್ರಭಾವಿತನಾದ ಆತ ಮಹಾಬಲಿಪುರದಲ್ಲಿ ಸಮುದ್ರತೀರದ ಮೇಲಿದ್ದ ಹೆಬ್ಬಂಡೆಗಳನ್ನು ಕೊರೆಯಿಸಿ ರಥಗಳೆಂದು ಕರೆಯಲಾದ ಅಖಂಡವಾದ ಗುಡಿಗಳನ್ನು ಕಟ್ಟಿಸಿದ, ಬಯಲಿನಲ್ಲಿ ಗುಡಿಗಳನ್ನು ಕಟ್ಟುವ ಪ್ರವೃತ್ತಿ ಇಲ್ಲಿಂದ ಆರಂಭವಾಯಿತು ಗುಡಿಸಿಲಿನ ಆಕಾರದ ಭೀಮರಥ ಮತ್ತು ಗಜಪೃಷ್ಠಾಕಾರದ ನಕುಲ ಸಹದೇವರಥಗಳು ತಮಿಳು ನಾಡಿನಲ್ಲಿ ಉಳಿದಿರುವ ಅತ್ಯಂತ ಪ್ರಾಚೀನ ದೇವಾಲಯಗಳ ಉದಾಹರಣೆಗಳು. ಇವುಗಳ ಶಿಖರಗಳು ಚೌಕ, ಅಷ್ಟಕೋನ ಅಥವಾ ಜಗಪೃಷ್ಠಾಕಾರಗಳಲ್ಲಿವೆ. ಗೋಡೆಯನ್ನು ಗೋಡೆಗಂಬಗಳಿಂದ ಅಂಕಣಗಳಾಗಿ ವಿಭಜಿಸಲಾಗಿದೆ. ಈ ಕಂಬಗಳ ತುದಿಯಲ್ಲಿ ತರಂಗಬೋದಿಗೆಗಗಳನ್ನು ಕೂಡಿಸಲಾಗಿದೆ. ಇವುಗಳ ನಡುವೆ ಮಾನವ ಹಾಗೂ ದೈವಆಕೃತಿಯ ವಿವಿಧ ಭಂಗಿಯ ವಿಗ್ರಹಗಳನ್ನು ಬಿಡಿಸಲಾಗಿದೆ. ಅವುಗಳ ಭಿನ್ನ ರೂಪಗಳಿಂದಾಗಿಯೂ ಅಚ್ಚುಕಟ್ಟಾದ ಪ್ರಮಾಣ, ನಾಜೂಕಾದ ಕೆತ್ತನೆ ಮತ್ತು ಅಲಂಕಾರಗಳಿಂದಾಗಿಯೂ ಈ ಕಂಬಗಳು ಇಂದಿಗೂ ಸಾಟಿಯಿಲ್ಲದವುಗಳೆನಿಸಿವೆ. ಈ ಗುಡಿಗಳಾವುದಕ್ಕೂ ಪ್ರಾಕಾರ, ಮಹಾದ್ವಾರ, ಗೋಪುರ ಮುಂತಾದವು ಇಲ್ಲ.
ಪಲ್ಲವ 1ನೆಯ ಪರಮೇಶ್ವರವರ್ಮನ, ಎಂದರೆ 7ನೆಯ ಶತಮಾನದ ಉತ್ತರಾರ್ಧದ, ಕಾಲದಿಂದ ಹೊಸ ನಮೂನೆಯ ಆಲಯಗಳು ನಿರ್ಮಾಣವಾಗತೊಡಗಿದುವು. ಇವು ಏಕಶಿಲೆಯಲ್ಲಿ ಬಿಡಿಸಿದವುಗಳಾಗಿರದೆ ಕಲ್ಲಿನ ತುಂಡುಗಳಿಂದ ನಿರ್ಮಿತವಾದವು. ಚೆಂಗಲ್ಪಟ್ಗೆ ಸಮೀಪದ ಕೂರಮ್ನಲ್ಲಿಯ ಶಿವಾಲಯ ಇದಕ್ಕೆ ಒಂದು ಪ್ರಾಚೀನ ನಿದರ್ಶನ. ಇದು ಮಹಾಬಲಿಪುರದ ನಕುಲ-ಸಹದೇವ ರಥದಂತೆ ಗಜಪೃಷ್ಠಾಕಾದಲ್ಲಿರುವುದು ಗಮನಾರ್ಹ. ತಿರುಕ್ಕಳು ಕುನ್ಚಮ್ನಲ್ಲಿ ಇಂಥ ಇನೊಂದು ಆಲಯವಿದೆ. ಈ ದೇವಾಲಯಗಳೂ ಅಷ್ಟು ದೊಡ್ಡವೇನೂ ಅಲ್ಲ. ಇವಕ್ಕೂ ಪ್ರಾಕಾರವಾಗಲಿ ಗೋಪುರವಾಗಲಿ ಇಲ್ಲ.
ರಾಜಸಿಂಹ ಇಮ್ಮಡಿ ನರಸಿಂಹವರ್ಮನ ಕಾಲದಲ್ಲಿ ವಾಸ್ತುಶಿಲ್ಪ ಅದುವರೆಗೂ ಅಭಿವೃದ್ಧಿ ಹೊಂದಿದಷ್ಟು ಅಭಿವೃದ್ಧಿ ಹೊಂದಿತ್ತು. ಇದು ಮುಂದಿನ ಹಲವು ಶತಮಾನಗಳಿಗೆ ಮಾದರಿಯಾಗಿ ಉಳಿಯಿತು. ತಮಿಳು ನಾಡಿನ ವಾಸ್ತು ಶಿಲ್ಪ ಅದೇ ಜಾಡಿನಲ್ಲಿ ಮುಂದುವರಿಯಿತೆನ್ನಬಹುದು. ರಾಜಧಾನಿಯಾದ ಕಾಂಚೀಪುರದ ಕೈಲಾಸನಾಥ ಮತ್ತು ಪನಮಲೈ ಗ್ರಾಮದ ತಾಲಗಿರೀಶ್ವರ ದೇವಾಲಯಗಳೂ ಮಹಾಬಲಿಪುರದ ಸಮುದ್ರತೀರದಲ್ಲಿರುವ, ಮೂರು ಗರ್ಭಗುಡಿಗಳಿಂದ ಕೂಡಿದ ಅಪೂರ್ವ ದೇವಾಲಯವೂ ಇವನ ಕಾಲದಲ್ಲಿ ವಾಸ್ತುಶಿಲ್ಪ ಕ್ಷೇತ್ರದಲ್ಲಿ ಆದ ಸಾಧನೆಯ ಪ್ರತೀಕಗಳಾಗಿವೆ. ಇವು ಮೂರೂ ಕಲ್ಲಿನ ಕಟ್ಟಡಗಳು. ಇವು ಹಲವು ತಲಗಳ ಉನ್ನತ ಮೇಲ್ಕಟ್ಟಡಗಳಿಂದ ಕೂಡಿವೆ. ತಾಲಗಿರೀಶ್ವರ ಆಲಯ ವಿನಾ ಉಳಿದ ಎರಡಕ್ಕೆ ಪ್ರಾಕಾರಗಳಿವೆ. ಕಂಚಿಯ ಕೈಲಾಸನಾಥಾಲಯದ ಪ್ರಾಕಾರದ ಒಳಹೊರ ಪಾಶ್ರ್ವಗಳಲ್ಲಿ ಹಲವಾರು ಸಣ್ಣ ಗುಡಿಗಳ ಸಾಲುಗಳಿರುವುದು ಗಮನಾರ್ಹ. ಸಣ್ಣ ಗೋಪುರ ಸಹ ಈ ಆಲಯಕ್ಕಿದೆ; ಈ ಬಗೆಯ ರಚನೆಗಳಲ್ಲಿ ಇದೇ ಅತ್ಯಂತ ಪ್ರಾಚೀನವಾದ್ದು. ಮಧ್ಯದ ಗುಡಿಯಲ್ಲಿ ಲಿಂಗವನ್ನು ಪ್ರತಿಷ್ಠಿಸಿದೆ. ಇದಕ್ಕೆ ಪೂರಕವಾಗಿ ಹೊರಮುಖವಾಗಿ ಇನ್ನೂ ಏಳು ಗುಡಿಗಳಿವೆ. ಆದರೆ ಅನಂತರದ ಕಾಲದಲ್ಲಿ ಈ ಉಪಗುಡಿಗಳನ್ನು ಮುಖ್ಯ ಗುಡಿಯಿಂದ ಪ್ರತ್ಯೇಕಿಸಿ ದೇವಾಲಯದ ಅಂಗಳದಲ್ಲಿ ಕಟ್ಟುವ ಪದ್ಧತಿ ಅಸ್ತಿತ್ವಕ್ಕೆ ಬಂತು. ಮಹಾಬಲಿಪುರದ ಕಡಲಕರೆಯ ದೇವಾಲಯದ ಗೋಪುರ ಈಗ ಉಳಿದಿಲ್ಲ. ಆದರೆ ಅದರ ಪ್ರಾಕಾರದಲ್ಲಿ ತಲೆ ಎತ್ತಿ ಮಲಗಿದ ವೃಷಭಗಳನ್ನು ಸಾಲಾಗಿ ಕೆತ್ತಲಾಗಿತ್ತು. ಅವುಗಳಲ್ಲಿ ಕೆಲವು ಇನ್ನೂ ಇವೆ.
ಕಾಂಚೀಪುರದ ವೈಕುಂಠ ಪೆರುಮಾಳ್ ದೇವಾಲಯ ಸಹ ಸುಮಾರು ಇದೇ ಕಾಲದ್ದು; ಎಂದರೆ ಎಂಟನೆಯ ಶತಮಾನದ ಮಧ್ಯಭಾಗಕ್ಕೆ ಸೇರಿದ್ದು. ಅನ್ಯತ: ಮೇಲಿನ ಗುಡಿಗಳಂತೆಯೇ ಇದ್ದರೂ, ಇದಕ್ಕೆ ಮೂರು ಅಂತಸ್ತುಗಳ ವಿಮಾನವಿದೆ. ಇಂಥ ವಿಮಾನಗಳನ್ನು ಅಷ್ಟಾಂಗ ವಿಮಾನಗಳೆಂದು ಕರೆಯಲಾಗಿದೆ. ಈ ಬಗೆಯ ವಿಮಾನಕ್ಕೆ ಇದು ಬಹುಶ: ಅತ್ಯಂತ ಪ್ರಾಚೀನ ನಿದರ್ಶನ.
ಅನಂತರದ ಶತಮಾನಗಳಲ್ಲಿ ಚೌಕ ಅಥವಾ ಗಜಪೃಷ್ಠಾಕಾರದ ಶೀಲಾ ದೇವಾಲಯಗಳು ಸಾಮಾನ್ಯವಾಗಿ ನಿರ್ಮಿತವಾಗಿತ್ತಿದ್ದುವು. ಕೆಲವು ದೇವಾಲಯಗಳು ಚೌಕನೆಯ ಮೈಯ, ಆದರೆ ಗಜಪೃಷ್ಠಾಕೃತಿಯ ಮೇಲ್ಕಟ್ಟಡವುಳ್ಳಂಥವಾಗಿದ್ದುವು. ಇನ್ನು ಕೆಲವು ದೇವಾಲಯಗಳಲ್ಲಿ ವರ್ತುಲಾಕಾದ ಗರ್ಭಗುಡಿಗಳೂ ಚೌಕಾಕಾರದ ಪ್ರಾಕಾರಗಳೂ ಇದ್ದುವು. ಪುದುಕೋಟೈ ಜಿಲ್ಲೆಯ ನಾರ್ತಾಮಲೈ ಗ್ರಾಮದ ವಿಜಯಾಲಯ ಚೋಳೇಶ್ವರ ದೇವಾಲಯದಲ್ಲಿ ಇಂಥ ವರ್ತುಲಾಕಾರದ ಗರ್ಭಗುಡಿ ಇದೆ. ಚೋಳ ಶೈಲಿಯ ಆರಂಭದ ದೆಸೆಯನ್ನು ಇಲ್ಲಿ ಗುರುತಿಸಬಹುದು. ಇದು ಬಹುಶ: 9ನೆಯ ಶತಮಾನದ ಮಧ್ಯಭಾಗದಲ್ಲಿ ವಿಜಯಾಲಯ ಚೋಳನಿಂದ ನಿರ್ಮಿತವಾಯಿತೆಂದು ಹೇಳಲಾಗಿದೆ. ಇಲ್ಲಿ ಮಧ್ಯದ ಮುಖ್ಯ ಗುಡಿಯ ಸುತ್ತಲೂ ಉಪಗುಡಿಗಳನ್ನು ನಿರ್ಮಿಸಲಾಗಿದೆ. ಈ ಹೊಸ ಪದ್ಧತಿಯಲ್ಲಿ ಸ್ವಲ್ಪ ಕಾಲದ ಅನಂತರ ನಿರ್ಮಿಸಲಾದ ಕಟ್ಟಡದ ಉದಾಹರಣೆಯೆಂದರೆ ಪುದುಕೋಟೈ ಬಳಿಯ ತಿರುಕ್ಕಟ್ಟಳ್ಳೆ ಗ್ರಾಮದ ಸುಂದರೇಶ್ವರಾಲಯ. ಸುಮಾರು ಇದೇ ಅವಧಿಯ, ಆದರೆ ಪಾಂಡ್ಯರ ಆಳ್ವಿಕೆಗೆ ಒಳಪಟ್ಟ ಪ್ರದೇಶದ ಕಛಿಗುಮಲೈಯಲ್ಲಿಯ ವೆಟ್ಟುವನ್ ಕೋವಿಲ್ನಲ್ಲಿ ಸಹ ಚೋಳರ ಪ್ರದೇಶದ ದೇವಾಲಯ ವಾಸ್ತು ಲಕ್ಷಣಗಳನ್ನು ಕಾಣಬಹುದು. ಇಲ್ಲಿಯದು ಏಕಶಿಲಾ ದೇವಾಲಯ.
ಈ ಶೈಲಿಯ ದೇವಾಲಯಗಳಲ್ಲಿ ಮುಖ್ಯವಾಗಿ ಆರು ಅಥವಾ ಎಂಟು ಮೂಲೆಗಳ ಅಥವಾ ಗೋಳಾಕಾರದ ಶಿಖರಗಳು, ಗರ್ಭಗುಡಿಯ ಸುತ್ತಲಿನ ಗೋಡೆಯ ಒಳಮುಖದಲ್ಲಿ ಅಳವಡಿಸಲಾದ ದೇವಕೋಷ್ಠಗಳು. ಆಯಾಕಾರದ ಬೋದಿಗೆಗಳನ್ನುಳ್ಳ ಕಂಬಗಳು ಮತ್ತು ಗೋಡೆಗಂಬಗಳು ಇರುತ್ತವೆ. ಈ ಬೋದಿಗೆಗಳ ಎರಡು ತುದಿಗಳನ್ನು ಒಂದು ಕೋನದಲ್ಲಿ ತುಂಡರಿಸಿದಾಗ ಮಧ್ಯಭಾಗ ಮುಂಚಾಚಿದಂತೆ ತೋರುತ್ತದೆ. ದೇವಕೋಷ್ಠಗಳಲ್ಲಿ ಸಾಮಾನ್ಯವಾಗಿ ಗಣೇಶ, ದಕ್ಷಿಣಾಮೂರ್ತಿ, ಅರ್ಧನಾರೇಶ್ವರ ಮತ್ತು ದುರ್ಗೆಯರ ವಿಗ್ರಹಗಳನ್ನು ಸ್ಥಾಪಿಸಲಾಗಿರುತ್ತದೆ.
ವಿಜಯಾಲಯನ ಮಗ ಆದಿತ್ಯ ಕಾವೇರಿಯ ಎರಡೂ ತೀರಗಳಲ್ಲಿ ಹಲವಾರು ಗುಡಿಗಳನ್ನು ಕಟ್ಟಿಸಿದ. ಅವುಗಳಲ್ಲಿ ಹಲವು ಈಗಲೂ ಇವೆ. ಇವನು ಸಂಪ್ರದಾಯವನ್ನು ಮುಂದುರಿಸಿದುದಲ್ಲದೆ ಕೆಲವು ಹೊಸ ರೀತಿಗಳನ್ನೂ ಪ್ರಾರಂಭಿಸಿದ. ಉಪಾನದಿಂದ ಸ್ತೂಪಿಯ ವರೆಗೂ ಚೌಕಾಕಾರದ ದೇವಾಲಯಗಳು ನಿರ್ಮಿತವಾದ್ದು ಈ ಕಾಲದಲ್ಲಿ, ಕುಂಭಕೋಣದ ನಾಗೇಶ್ವರಾಲಯ ಇದಕ್ಕೊಂದು ನಿದರ್ಶನ. ಶ್ರೀನಿವಾಸನಲ್ಲೂರಿನ ಕೊರಂಗನಾಥ ದೇವಾಲಯದಲ್ಲೂ ಇದೇ ವಿನ್ಯಾಸವಿದೆಯಾದರೂ ಇದರಲ್ಲಿ ಇನ್ನೊಂದು ನಾವೀನ್ಯವನ್ನು ಕಾಣಬಹುದು. ಗರ್ಭಗುಡಿಯನ್ನು ಆವರಿಸುವ ಮಂಟಪದ ಎತ್ತರವನ್ನು ಇಲ್ಲಿ ದ್ವಿಗುಣೀಕರಿಸಲಾಗಿದೆ. ಇದರಿಂದ ಇಡೀ ಕಟ್ಟಡದ ಭವ್ಯತೆ ಹೆಚ್ಚಿದೆ. ತಂಜಾವೂರಿನ ರಾಜ ರಾಜೇಶ್ವರ ಅಥವಾ ಬೃಹದೀಶ್ವರಾಲಯ ಇದಕ್ಕೊಂದು ಉತ್ಕøಷ್ಟ ಮಾದರಿ. ಇದನ್ನು ಕಟ್ಟಿಸಿದವನು 1ನೆಯ ರಾಜರಾಜ ಚೋಳ. ಆದಿತ್ಯನ ಕಾಲದಲ್ಲಿ ನಿರ್ಮಿಸಲಾದ ದೇವಾಲಯಗಳ ಮಾದರಿಯ ಹಲವು ಶಿಲಾ ದೇವಾಲಯಗಳನ್ನು 10ನೆಯ ಶತಮಾನದಲ್ಲಿ ಕಟ್ಟಲಾಯಿತು. ಇವೆಲ್ಲ ಸರಳ, ಅಷ್ಟು ದೊಡ್ಡವಲ್ಲ, ಆಡಂಬರಪೂರಿತವಲ್ಲ. ಇಂಥ ದೇಗುಲದ ಸುತ್ತಲೂ ಒಂದೇ ಒಂದು ಪ್ರಾಕಾರ ಇರುತ್ತದೆ. ಇದರ ಮೇಲ್ಕಟ್ಟಡ ಮೂರು ಅಂತಸ್ತುಗಳಿಗಿಂತ ಹೆಚ್ಚು ಎತ್ತರವಾಗಿರುವುದಿಲ್ಲ. ಮೇಲ್ಕಟ್ಟಡದ ಪಾಗಾರಗಳಲ್ಲಿ ಕೂಟ, ಶಾಲಾ ಹಾಗೂ ಪಂಜರಗಳನ್ನು ಉಬ್ಬು ಚಿತ್ರಗಳಲ್ಲಿ ಕಡೆಯಲಾಗಿದೆ.
11ನೆಯ ಶತಮಾನದ ಪ್ರಥಮಾರ್ಧದಲ್ಲಿ ದೇವಾಲಯ ವಾಸ್ತು ಶೈಲಿಯಲ್ಲಿ ವಿಶೇಷವಾದ ಬದಲಾವಣೆಗಳಾದುವು. ಆಕೃತಿ, ಭವ್ಯತೆ ಹಾಗೂ ವಿವರಗಳಿಗೆ ಪ್ರಾಶಸ್ತ್ಯ ಲಭಿಸಿತು. ಈ ಪರಿಪೂರ್ಣ ದ್ರಾವಿಡ ವಾಸ್ತು ಶೈಲಿಗೆ ಮೇಲೆ ಹೇಳಿದ ಬೃಹದೀಶ್ವರಾಲಯ ಒಂದು ಉತ್ತಮ ಉದಾಹರಣೆ. ಅಂದಿನಿಂದ ಇಂದಿನವರೆಗೂ ಇದು ಅತ್ಯಂತ ಭವ್ಯವಾದ ಉದಾಹರಣೆಯಾಗಿ ಉಳಿದು ಬಂದಿದೆ. ಗೋಪುರಾಕೃತಿಯ ವಿಮಾನ 13 ಅಂತಸ್ತುಗಳ ವರೆಗೂ ಮೇಲೆ ಹೋಗಿದೆ. ಇದರ ಎತ್ತರ 180 ಅಡಿ. ದೇವಾಲಯದ ಉದ್ದ 180 ಅಡಿ. ಇದರ ಮೇಲ್ಭಾಗದಲ್ಲಿ ಅಷ್ಟಭುಜದ ಒಂದೇ ಕಲ್ಲಿನಲ್ಲಿ ಕೊರೆದ ಬೃಹತ್ ಶಿಖರವಿದೆ. ಗರ್ಭಗೃಹದ ಸುತ್ತಲಿನ ಗೋಡೆ ಅದಕ್ಕೆ ಇಮ್ಮಡಿ ಎತ್ತರದ್ದು. ಪ್ರತಿಯೊಂದು ಮುಖದಲ್ಲೂ ಸಮಾನಾಂತರಗಳಲ್ಲಿ ದೇವಕೋಷ್ಠಗಳು, ಮಧ್ಯಗುಡಿಯ ಮುಂದೆ ಕಂಬಗಳಿರುವ ಉದ್ದನೆಯ ಮಂಟಪ. ಇದರ ತೆರೆದ ಅಂಗಳದ ಸುತ್ತಲೂ ಪ್ರಾಕಾರ. ಪ್ರಾಕಾರದ ನಡುವೆ ಅಲ್ಲಲ್ಲಿ ಕಿರುಗುಡಿಗಳು, ಪ್ರಾಕಾರದ ಪ್ರವೇಶ ದ್ವಾರದಲ್ಲಿ, ಹೊರಗಿನ ಪ್ರಾಕಾರದಲ್ಲಿ ಒಂದೊಂದು ಗೋಪುರ. ವಿಮಾನಕ್ಕೆ ಹೋಲಿಸಿದರೆ ಇವು ಕುಬ್ಜ. ಆದರೆ ಇವು ಗಾತ್ರದಲ್ಲಿ ಹಿರಿದಾಗಿವೆ. ಇವು ಸುಂದರವಾದ ಪ್ರಮಾಣಬದ್ಧವಾದ ರಚನೆಗಳು. ಅಧಿಷ್ಠಾನದ ವಿವಿಧ ಅಚ್ಚು ಪಟ್ಟೆಗಳು, ಕಂಬ ಮತ್ತು ಗೋಡೆಗಂಬಗಳಲ್ಲಿಯ ಅಲಂಕರಣ, ಮಂಟಪದಲ್ಲಿಯ ಸರಳವಾದ ಅಲಂಕಾರವನ್ನುಳ್ಳ ಏಕಶಿಲಾಸ್ತಂಭಗಳು, ಕದಲಿಕಾಕರಣ ಪದ್ಧತಿಯಲ್ಲಿ ನಿರ್ಮಿಸಲಾದ ಮೇಲ್ಕಟ್ಟಡಗಳು ಈ ಆಲಯದ ಭವ್ಯತೆಯನ್ನು ಹೆಚ್ಚಿಸಿವೆ. ಇದನ್ನು ಕಟ್ಟುವ ಮೊದಲು ಪ್ರಾಕಾರದಲ್ಲಿ ಚಂಡಿಕೇಶ್ವರ ಗುಡಿ ಮಾತ್ರವಿತ್ತು. ಇದರಲ್ಲಿಯ ದೇವಿ ಗುಡಿ ಮುಂತಾದವೆಲ್ಲ ಅನಂತರ ನಿರ್ಮಿತವಾದುವು.1ನೆಯ ರಾಜೇಂದ್ರಚೋಳ ಕಟ್ಟಿಸಿದ ಗಂಗೆ ಕೊಂಡ ಚೋಳಪುರಂನ ದೇವಾಲಯ ಸುಮಾರು ಇಷ್ಟೇ ಗಾತ್ರದ್ದು. ಆದರೆ ಇದರ ಮೇಲ್ಕಟ್ಟಡದ ಹೊರರೇಖೆ ಬೃಹದೀಶ್ವರಾಲಯದಲ್ಲಿದ್ದಂತೆ ನೇರವಾಗಿರದೆ ನಿಮ್ನ ಮಧ್ಯಾಕಾರದಲ್ಲಿದೆ. ಇದು ಮುಖ್ಯವಾಗಿ ಎದ್ದು ಕಾಣುವ ವ್ಯತ್ಯಾಸ.
ಅನಂತದ ಶತಮಾನಗಳಲ್ಲಿ ದೇವಾಲಯದ ಪ್ರಾಕಾರದೊಳಗೆ ಇತರ ಕಟ್ಟಡಗಳನ್ನು ಜೋಡಿಸುವ ಪದ್ಧತಿ ಬೆಳೆಯಿತು. ಸ್ತ್ರೀ ದೇವತೆಗಳಿಗೆ ಪ್ರತ್ಯೇಕವಾದ ಗುಡಿಗಳು ಕಟ್ಟಲ್ಪಟ್ಟುವು. ಕಂಬಗಳಲ್ಲಿ, ಗೋಡೆಗಂಬಗಳಲ್ಲಿ ಜಟಿಲವಾದ ಕೆತ್ತನೆಗಳನ್ನು ಅಳವಡಿಸಿ ಮಂಟಪಗಳನ್ನು ಪರಿಷ್ಕರಿಸಲಾಯಿತು. ಕಂಬಗಳ ಎರಡು ತುದಿಗಳ ಬೋದಿಗೆಗಳು ಗೆಡ್ಡೆಯಾಕಾರ ತಾಳಿದುವು. ಕುದುರೆಗಳಿಂದ ಎಳೆಯಲ್ಪಟ್ಟ ರಥವನ್ನು ಹೋಲುವ ಮುಂಭಾಗವುಳ್ಳ ಮಂಟಪಗಳು ಅಸ್ತಿತ್ವಕ್ಕೆ ಬಂದುವು. ಎತ್ತರವಾದ ವಿಮಾನ, ಕುಬ್ಜವಾದ ಗೋಪುರ ಮತ್ತು ಒಂದೇ ಪ್ರಾಕಾರವನ್ನೊಳಗೊಂಡ, 12ನೆಯ ಶತಮಾನದ ಜೋಳ ಶೈಲಿಯ ದೇವಾಲಯಗಳಿಗೆ ದಾರಾಸುರಮ್ದ ಶಿವಾಲಯ, ತ್ರಿಭುವನದಲ್ಲಿಯ ಕಂಪಹರೇಶ್ವರಾಲಯ- ಇವು ನಿದರ್ಶಗಳಾಗಿವೆ.
ಅನಂತರದ ಪಾಂಡ್ಯರ ಕಾಲದಲ್ಲಿ ಗೋಪುರಗಳು ಸಹ ಅನೇಕ ಅಂತಸ್ತುಗಳನ್ನೊಳಗೊಂಡು ಎತ್ತರವಾದುವು. ಪ್ರಾಕಾರಗಳ ಸಂಖ್ಯೆ ಬೆಳೆಯಿತು. ಒಳಗಿನ ಬೇರೆ ಬೇರೆ ದೇವತೆಗಳಿಗೂ ಸ್ತ್ರೀ ದೇವತೆಗಳಿಗೂ ಪ್ರತ್ಯೇಕ ಗುಡಿಗಳನ್ನು ಕಟ್ಟಲಾಯಿತು. ನೂರು ಅಥವಾ ಸಾವಿರ ಕಂಬಗಳ ಮಂಟಪಗಳು ಕಾಣಿಸಿಕೊಂಡುವು. ಚಿದಂಬರಂ, ತಿರುವಣ್ಣಾಮಲೈಗಳ ಆಲಯಗಳನ್ನು ನೋಡಿದಾಗ ಈ ಅಂಶಗಳು ವ್ಯಕ್ತವಾಗುತ್ತವೆ. ಈ ಹೊಸ ಪ್ರವೃತ್ತಿಯ ಫಲವಾಗಿ ವಿಮಾನಗಳಲ್ಲಿ ನಯ ಗೆಲಸ ಕಡಿಮೆಯಾಗಿ, ಅವು ತಮ್ಮ ಪ್ರಾಧಾನ್ಯವನ್ನು ಕಳೆದುಕೊಂಡುವು.
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಗೋಪುರಗಳ, ಮಂಟಪಗಳು ಮತ್ತು ಪ್ರಾಕಾರಗಳ ರಚನೆಯಲ್ಲಿ ಇನ್ನಷ್ಟು ಪ್ರಗತಿಯಾಯಿತು. ಇದು ಇಡೀ ತಮಿಳು ನಾಡಿಗೂ ಹಬ್ಬಿತು. ಈ ಘಟ್ಟದ ರಚನೆಗಳ ಉತ್ಕøಷ್ಟ ಉದಾಹರಣೆಗಳನ್ನು ನಾವು ವಿಜಯನಗರದ ರಾಜಧಾನಿಯ ವಿಠಲ, ಹಜಾರ ರಾಮ ಮುಂತಾದ ದೇಗುಲಗಳಲ್ಲೇ ಅಲ್ಲದೆ ಪ್ರಾಂತೀಯ ಪಟ್ಟಣಗಳಾದ ವೆಲ್ಲೂರು, ಕಂಚಿ, ಕುಂಭಕೋಣ, ಶ್ರೀರಂಗಂ, ಮುಂತಾದವುಗಳಲ್ಲಿಯ ದೇವಾಲಯಗಳಲ್ಲೂ ಕಾಣಬಹುದು. ವೆಲ್ಲೂರಿನ ಕಲ್ಯಾಣಮಂಟಪ (15ನೆಯ ಶತಮಾನ), ಚಿದಂಬರಂ ಶ್ರೀರಂಗಂ ತಿರುವಣ್ಣಾಮಲೈಗಳ ಗೋಪುರಗಳು ಗಮನಾರ್ಹ ಉದಾಹರಣೆಗಳು. ಮಂಟಪದಲ್ಲಿಯ ಅಖಂಡ ಶಿಲಾಸ್ತಂಭಗಳು ಕ್ರಮೇಣ ಬೇಟೆಯ ದೃಶ್ಯಗಳು, ಅಲಂಕೃತ ವ್ಯಾಳಗಳು ಮುಂತಾದವುಗಳಿಂದ ಚಿತ್ರಿತವಾದ ಕಲಾಕೃತಿಕಡೆತಗಳಾದುವು. ಈ ಸ್ತಂಭಗಳೇ ಅಲ್ಲದೆ ಶಿಲಾಮಂಟಪಗಳೂ ವಿಶಿಷ್ಟ ಕಲಾಕೃತಿಗಳಾದುವು. ಇವುಗಳಲ್ಲಿರುವ, ಮುಂಜಾಜಿದ, ಎರಡು ಬಾಗುಗಳುಳ್ಳ ಏಣುಗಳೂ (ಕೊಡಂಗೈ) ಅವುಗಳಲ್ಲಿ ತೋರುವ ಕೆತ್ತನೆಯ ಕೆಲಸವೂ ವಿಚಿತ್ರವಾದಂಥವು. ಅವುಗಳ ಅಡಿಯಲ್ಲಿ, ಮರಕ್ಕೆ ಮೊಳೆ ಹೊಡೆದಂತೆ ಅಥವಾ ತಿರುಪುಮೊಳೆ ತಿರುಗಿಸಿದಂತೆ ಕಾಣುವ ಕೆತ್ತನೆಯ ಕೆಲಸವೂ ಅದ್ಭುತವಾದಂಥವು. ಕಲ್ಲಿನ ಕೆಲಸದ ಈ ರೂವಾರಿಗಳು ತಮ್ಮ ಕಾಲದ ಬಡಗಿಗಳನ್ನು ಮೀರಿಸಲು ಯತ್ನಿಸುತ್ತಿದ್ದರೆಂಬುದನ್ನು ತೋರಿಸುವ ಈ ಕಂಡೆತಗಳು ಮರಗೆಲಸಗಳೇಯೋ ಏನೋ ಎಂಬ ಭ್ರಮೆ ಬರಿಸುತ್ತವೆ. ಮುಖ್ಯ ಗುಡಿಯ ಸುತ್ತ ಹೆಚ್ಚು ಹೆಚ್ಚು ಪ್ರಾಕಾರಗಳನ್ನು ನಿರ್ಮಿಸುವ ಪದ್ಧತಿಯಿಂದ ಇಡೀ ವಾಸ್ತುಶಿಲ್ಪ ಸಂಕೀರ್ಣಕ್ಕೆ ಒಂದು ಭವ್ಯತೆಯನ್ನು ದೊರಕಿಸಿ ಕೊಡುವ ಪ್ರಯತ್ನ ಸಫಲವಾಯಿತು. ಕಾವೇರಿ ತೀರದ ಜಂಬುಕೇಶ್ವರಮ್ನ ಪಂಚ ಪ್ರಾಕಾರ ಸಂಕೀರ್ಣ, ಶ್ರೀರಂಗದ ಸಪ್ತ ಪ್ರಾಕಾರ ಸಂಕೀರ್ಣ-ಇವು ಈ ಅಮೋಘ ಬೆಳೆವಣಿಗೆಗೆ ಸಾಕ್ಷಿಗಳಾಗಿ ನಿಂತಿವೆ. ಈ ಆಲಯಗಳ ಅತ್ಯಂತ ಹೊರ ಪ್ರಾಕಾರದ ನಾಲ್ಕು ಪ್ರವೇಶದ್ವಾರಗಳ ಮೇಲೂ ಉನ್ನತವಾದ ಗೋಪುರಗಳಿವೆ. ಈ ಬೃಹದ್ಗೋಪುರಗಳನ್ನು ಸಾಮಾನ್ಯವಾಗಿ ರಾಯಗೋಪುರಗಳೆಂದು ಕರೆಯುತ್ತಾರೆ. ಈ ಗೋಪುರಗಳ ನಿರ್ಮಾಣಕ್ಕೆ ಅಗತ್ಯವಾದ ಅಗಾಧವಾದ ಸಾಮಗ್ರಿಯನ್ನೂ ಮಾನವಶಕ್ತಿಯನ್ನೂ ಧರ್ಮನಿಷ್ಠ ಜನರನೇಕರು ಮನ:ಪೂರ್ವಕವಾಗಿ ಒದಗಿಸಿದ್ದರಿಂದಲೂ ಧರ್ಮನಿಷ್ಠ ದೊರೆಗಳು ಅವರಿಗೆ ಸ್ಫೂರ್ತಿ ನೀಡಿದ್ದರಿಂದಲೂ ಇಂಥ ಕಟ್ಟಡಗಳ ನಿರ್ಮಾಣ ಸಾಧ್ಯವಾಯಿತೆನ್ನಬಹುದು. ಹಲವು ಬಗೆಯ ಸಾಮಗ್ರಿಗಳಿಂದಲೂ ಭಾಗಗಳಿಂದಲೂ ಸಂಯೋಜಿತವಾದಂತೆ ತೋರುವಂತೆ ಮಂಟಪಗಳನ್ನೂ ಸ್ತಂಭಗಳನ್ನೂ ಕೊರೆಯುತ್ತಿದ್ದರು. ಕಂಬದ ಬೋದಿಗೆಗಳು ಮೊದಲಿನಂತೆ ಗೆಡ್ಡೆಯಂತಿರುವ ಬದಲು ಬಾಳೆಯ ಹೂವಿನ ಆಕಾರ ತಾಳಿದುವು. ಇವನ್ನು ಪುಷ್ಪ ಬೋದಿಗೆಗಳೆಂದು ಕರೆಯಲಾಗಿದೆ. ಇಸ್ಲಾಂ ವಾಸ್ತುಶಿಲ್ಪದ ಪ್ರಭಾವದಿಂದ ವಿಜಯನಗರದ ಅರಸರು ಮತ್ತು ಅವರ ಮಾಂಡಲಿಕರು ಇಟ್ಟಿಗೆ ಹಾಗೂ ಗಾರೆಗಳನ್ನು ಉಪಯೋಗಿಸಿ ಕಮಾನುಗಳನ್ನು ಕಟ್ಟಲು ಆರಂಭಿಸಿದರು.
16-17ನೆಯ ಶತಮಾನಗಳಲ್ಲಿ ಮಧುರೆಯ ನಾಯಕರು ಗೋಪುರ ವಿನ್ಯಾಸಕ್ಕೂ ಕಂಬಗಳ ಕೆತ್ತನೆಯ ಕೆಲಸಕ್ಕೂ ಹೆಚ್ಚಿನ ಪ್ರೋತ್ಸಾಹ ಕೊಟ್ಟರು. ಮಧುರೈ ಮೀನಾಕ್ಷಿ ದೇವಾಲಯ ಈ ಕಲೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಗೋಪುರಗಳಲ್ಲಿ ಅನೇಕ ಗಾರೆಯ ವಿಗ್ರಹಗಳನ್ನು ರಚಿಸಲಾಗಿದೆ. ಹೊರರೇಖೆ ಒಳಬಾಗಿ ತೊನೆದಾಡುವಂತೆ ತೋರುವ ಈ ಗೋಪುರಗಳು ಸುಂದರ ಕೃತಿಗಳು. ಇಂಥದೇ ಶೈಲಿಯನ್ನು ಶ್ರೀವಿಲ್ಲಿಪುತ್ತೂರ್, ತಿರುನೆಲ್ವೇಲಿ ಸುಚೀಂದ್ರಂಗಳಲ್ಲಿ ಕಾಣಬಹುದು. ಆದರೆ ಈ ರಚನೆಗಳು ಮಧುರೈ ಮೀನಾಕ್ಷಿ ದೇವಾಲಯ ಕಲೆಗೆ ಸಾಟಿಯಾಗಲಾರವು.
ಈ ಕಾಲದಲ್ಲಿ ಮಂಟಪ ನಿರ್ಮಾಣಕ್ಕೆ ವಿಶೇಷವಾದ ಗಮನ ನೀಡಲಾಯಿತು. ಅವುಗಳಲ್ಲಿಯ ಕಂಬಗಳು ಬಹಳವಾಗಿ ಪರಿಷ್ಕಾರಗೊಂಡುವು. ಕಂಬಗಳ ದುಂಡನೆಯ ದಿಂಡುಗಳಲ್ಲಿ ಪುರಾಣಗಳಿಂದ ಆಯ್ದ ಕಥೆಗಳನ್ನು ನಿರೂಪಿಸುವ ಚಿತ್ರಗಳನ್ನೂ ಗ್ರಾಮ ಜೀವನ ಚಿತ್ರಗಳನ್ನೂ ಕೊರೆಯಲಾಯಿತು. ಕೆಲವು ಕಂಬಗಳಲ್ಲಿ ಅರಸರ ಮತ್ತು ಅವರ ಸಂಬಂಧಿಕರ ಪ್ರತಿಕೃತಿಗಳನ್ನು ಕೊರೆಯಲಾಗುತ್ತಿತ್ತು. ಇನ್ನು ಹಲವು ಕಂಬಗಳ ದಿಂಡುಗಳಲ್ಲಿ ಬಹುಮುಖಗಳ ಸಣ್ಣ ಸಣ್ಣ ಕಂಬಗಳನ್ನು ಕೊರೆದು, ಅವನ್ನು ಬಡಿದರೆ ಸಂಗೀತಸ್ವರಗಳು ಹೊರಡುವಂತೆ ಮಾಡಲಾಯಿತು. ಆಧುನಿಕ ಸಂಗೀತಶಾಸ್ತ್ರಜ್ಞರು ಇವನ್ನು ಸಂಗೀತ ಸ್ತಂಭಗಳೆಂದು ಕರೆದಿದ್ದಾರೆ. ಮಧುರೈ ಮೀನಾಕ್ಷಿಯ ಪುದುಮಂಟಪದಲ್ಲಿ ಈ ನಾನಾ ಬಗೆಯ ಕಂಬಗಳನ್ನು ಕಾಣಬಹುದು. ಪುದುಕೋಟೈ ಜಿಲ್ಲೆಯ ಅವಿಂದೈಯಾರ್ಕೋವಿಲ್ನ ಆತ್ಮನಾಥಸ್ವಾಮಿ ದೇವಾಲಯದಲ್ಲೂ ತಿರುನೆಲ್ವೇಲಿಯ ನೆಲ್ಲೈಯಪ್ಪರ್ ದೇವಾಲಯದಲ್ಲೂ ಇಂಥವೇ ಮಂಟಪಗಳಿವೆ.
17ನೆಯ ಶತಮಾನದ ಕೊನೆಯ ಮತ್ತು 18 ನೆಯ ಶತಮಾನದ ಆರಂಭದ ದಶಕಗಳಲ್ಲಿ ತಮಿಳುನಾಡಿನ ವಾಸ್ತುಶಿಲ್ಪದಲ್ಲಿ ಇನ್ನೊಂದು ಹೊಸ ಬೆಳೆವಣಿಗೆಯನ್ನು ಗುರುತಿಸಬಹುದು. ಅದುವರೆಗೆ ಪ್ರಾಕಾರದ ಗೋಡೆಗಳನ್ನು ತೆರವಾಗಿ ಬಿಡುತ್ತಿದ್ದರು. ಅಲ್ಲಲ್ಲಿ ಅವುಗಳೊಳಗೆ ಮಂಟಪಗಳನ್ನು ನಿರ್ಮಿಸುತ್ತಿದ್ದರು. ಅಂಗಣದೊಳಗಣ ಆ ಬಿಡಿ ಕಟ್ಟಡಗಳನ್ನು ಒಂದುಗೂಡಿಸಿ ಉದ್ದನೆಯ ಮುಚ್ಚಿದ ಮೊಗಸಾಲೆಗಳನ್ನು ಕಟ್ಟುವುದು ಆಗ ಆರಂಭವಾಯಿತು. ಬಿಸಿಲು ಮಳೆಗಳ ಬಾಧೆಯಿಲ್ಲದೆ ಎಲ್ಲ ಋತುಗಳಲ್ಲೂ ಉತ್ಸವಗಳನ್ನು ನಡೆಸಲು ಈ ಮೊಗಸಾಲೆಗಳನ್ನು ಬಳಸಿಕೊಳ್ಳುವುದು ಸಾಧ್ಯವಾಯಿತು. ರಾಮೇಶ್ವರದ ರಾಮನಾಥೇಶ್ವರ ದೇವಾಲಯದ ದೀರ್ಘವಾದ ಮೊಗಸಾಲೆ ಇದಕ್ಕೆ ಉತ್ತಮ ನಿದರ್ಶನ.
ದಕ್ಷಿಣ ಭಾರತದಲ್ಲಿ ತಮಿಳು ನಾಡು ಮತ್ತು ಕೇರಳ ರಾಜ್ಯಗಳಲ್ಲಿ ಅಶೋಕನ ಕಾಲದ ಶಾಸನಗಳು ಇಲ್ಲ. ಆದರೆ ತಮಿಳು ಶಾಸನಗಳು ಕ್ರಿ.ಪೂ ಸುಮಾರು 3ನೆಯ ಶತಮಾನದಲ್ಲಿ ಕಾಣಿಸಿಕೊಳ್ಳತೊಡಗುತ್ತವೆ. ಕೆಲವು ಶಾಸನಗಳಲ್ಲಿ ಅಪರೂಪವಾಗಿ ಸ.ಧ.ಶ ಎಂಬ ಅಕ್ಷರಗಳನ್ನು ಉಪಯೋಗಿಸಿದ್ದರೂ, ಸಾಮಾನ್ಯವಾಗಿ ಇವುಗಳಲ್ಲಿ ಚ,ತ,ಚ ಎಂಬ ವರ್ಗಪ್ರಥಮಾಕ್ಷರ ಅಥವಾ ತತ್ಸಮಗಳನ್ನೇ ಉಪಯೋಗಿಸಿದೆ. ಮಧುರೈ, ತಿರುನೆಲ್ವೇಲಿ ಮತ್ತು ರಾಮನಾಥಪುರಮ್ ಜಿಲ್ಲೆಗಳಲ್ಲಿ ದೊರೆತ ಬ್ರಾಹ್ಮೀಲಿಪಿಯ ಶಾಸನಗಳು ತಮಿಳು ಮತ್ತು ಪ್ರಾಕೃತಗಳಿಂದ ಕೂಡಿದ ಮಿಶ್ರಭಾಷೆಯಲ್ಲಿವೆ. ಸಾಮಾನ್ಯವಾಗಿ ಗುಡ್ಡಗಳಲ್ಲಿರುವ ನೈಸರ್ಗಿಕ ಗುಹೆಗಳಲ್ಲಿ ನಿರ್ಮಿಸಿದ ಕಲ್ಲಿನ ಹಾಸುಗಳ ಮೇಲಿರುವ ಈ ಶಾಸನಗಳಲ್ಲಿ ಆ ಹಾಸುಗಳನ್ನು ಅಲ್ಲಿ ಅಳವಡಿಸಿದ ದಾನಿಗಳ ಹಾಗೂ ಆ ಸ್ಥಳಗಳ ಹೆಸರುಗಳಿವೆ. ಒಮ್ಮೊಮ್ಮೆ ಆ ದಾನಿಯ ವೃತ್ತಿಯನ್ನು ಸೂಚಿಸಲಾಗಿದೆ; ಪೊನ್ ವಾಣಿಕನ್, ಉಪು ವಾಣಿಕನ್ ಪಾಣಿತ ವಾಣಿಕನ್, ಎಂದು ಮುಂತಾಗಿ ಅವುಗಳಲ್ಲಿ ಹೇಳಿದೆ. ಈ ಗುಹೆಗಳನ್ನು ಪಾಳಿ, ತಾಣಮ್, ಅರಿಟ್ಟಾನಮ್ ಎಂದೆಲ್ಲ ಕರೆಯಲಾಗಿದೆ. ನೆಡುಂಜಯನ್, ಪೆರುಞ, ಕಡುಞಕೋನ್ ಇತ್ಯಾದಿಗಳು ವೈಯಕ್ತಿಕ ಹೆಸರುಗಳು. ಸಾಮಾನ್ಯವಾಗಿ: ಇವು ಕಲ್ಲಿನ ಈ ಹಾಸುಗಳ ಕೊಡುಗೆಗಳ ದಾಖಲೆಗಳು. ಇವು ಜೈನಮತಕ್ಕೆ ಸೇರಿದವರ ಶಾಸನಗಳೆಂದು ತಿಳಿಯಲಾಗಿದೆ. ಪುದುಚೇರಿಯ ಹತ್ತಿರದ ಅರಿಕಮೇಡು ಮತ್ತು ತಿರುವ್ವಿರಾಪ್ಪಳ್ಳಿ ಜಿಲ್ಲೆಯ ಉಜೈಯೂರ್. ತಿರುನೆಲ್ವೇಲಿ ಜಿಲ್ಲೆಯ ಕೊ ಮುಂತಾದ ಸ್ಥಳಗಳಲ್ಲಿ ನಡೆಸಿದ ಉತ್ಖನನಗಳಲ್ಲಿ ಗೀರುಬರಹಗಳಿಂದ ಕೂಡಿದ ಮಡಕೆಗಳು ದೊರಕಿವೆ. ಅರಿಕಮೇಡಿನ, ಕ್ರಿ.ಶ.1-2ನೆ ಶತಮಾನದವೆಂದು ನಿರ್ಣಯಿಸಲಾದ, ಕೆಲವು ಗೀರುಬರಹಗಳವು ಪ್ರಾಕೃತಭಾಷೆಗಳಲ್ಲೂ ಉಳಿದವು ತಮಿಳು ಭಾಷೆಯಲ್ಲೂ ಇವೆ. ಈರೋಡಿನ ಬಳಿಯ ಅರಚಲೂರಿನಲ್ಲಿ ದೊರೆತ ಗುಹಾಶಾಸನಗಳು ಕ್ರಿ.ಶ. 3ನೆಯ ಶತಮಾನಕ್ಕೆ ಸೇರಿದವು. ಬ್ರಾಹ್ಮೀಲಿಪಿಯ ಎರಡು ಸಾಲಿನ ಶಾಸನ ತಮಿಳಿನಲ್ಲಿದೆ. ಇವು ಪ್ರಾಚೀನತಮ ತಮಿಳು ಶಾಸನಗಳೆಂದು ಹೇಳಲಾಗಿದೆ. ಸಮೀಪದಲ್ಲಿ ಕೊರೆಯಲಾದ, ಸಂಗೀತ ಮತ್ತು ನೃತ್ಯಗಳಿಗೆ ಸಂಬಂಧಿಸಿದ ಚಿಹ್ನೆಗಳನ್ನು ಈ ಶಾಸನ ನಿರೂಪಿಸುವಂತೆ ತೋರುತ್ತದೆ. ಈ ಚಿಹ್ನೆಗಳನ್ನು ರೂಪಿಸಿದಾತ ತೇವನ್ ಜಾತ್ತನ್ ಎಂಬ ಹೂವಾಡಿಗ. ತಿರುನಾಥರ್ಕುಣ್ರಿ ಎಂಬಲ್ಲಿ ಕ್ರಿ.ಶ.ಸು.5ನೆಯ ಶತಮಾನಕ್ಕೆ ಸೇರಿದ ವಟ್ಟೆಯಿತ್ತು ಬರಹದ ಶಾಸನವೊಂದು ದೊರೆತಿದ್ದು ಅದು ಬಹುಶಃ ಜೈನಮತದವನಾದ ಚಂದ್ರನಂದಿ ಆಚಾರ್ಯನೆಂಬವನನ್ನು ನಿರೂಪಿಸುತ್ತದೆ. ಧರ್ಮಪುರಿ, ಸೇಲಂ ಮೊದಲಾದ, ಕರ್ನಾಟಕಕ್ಕೆ ಸೇರಿದಂತಿರುವ, ಜಿಲ್ಲೆಗಳಲ್ಲಿ ಕಂಗ, ಕಟ್ಟಿ, ವಾಣ ಮುಂತಾದ ಮಾಂಡಲಿಕ ಮನೆತನಗಳವರ ಶಾಸನಗಳು ಈಗ ದೊರೆತಿವೆ. ಇವುಗಳಲ್ಲಿ ತಮಿಳು ಹಾಗೂ ವಟ್ಟೆಯಿತ್ತು ಲಿಪಿಗಳಿಗೆ ಸಮಾನವಾದ ಲಿಪಿಯ ರೂಪಗಳನ್ನು ಕಾಣಬಹುದು. ಇವೆಲ್ಲ ಬಹುಮಟ್ಟಿಗೆ ವೀರಗಲ್ಲುಗಳ ಮೇಲಿನ ಶಾಸನಗಳು. ಪಲ್ಲರ ತಾಮ್ರಶಾಸನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಮೊದಲನೆಯದು ಪ್ರಾಕೃತ ಶಾಸನಗಳದು. ಶಿವಸ್ಕಂಧವರ್ಮನ್ನ ಮೈದವೋಲು ಮತ್ತು ಹಿರೆಗಡಗಲಿ ತಾಮ್ರಶಾಸನಗಳು. ಸಿಂಹವರ್ಮನ್ನ ಸಕ್ರೆಪಟ್ಟಣ ತಾಮ್ರಶಾಸನ-ಇವು ಈ ಶಾಸನಗಳಲ್ಲಿ ಕೆಲವು ಅನಂತರದ ಗುಂಪಿನ ಶಾಸನಗಳು ಗ್ರಂಥ ಲಿಪಿಯಲ್ಲಿ, ಸಂಸ್ಕ್ರತ ಮತ್ತು ತಮಿಳು ಭಾಷೆಗಳಲ್ಲಿವೆ. ಇವೂ ದಾನ ಶಾಸನಗಳೇ. ಪಲ್ಲವರ ಶಿಲಾಶಾಸನಗಳು ಚುಟುಕಾಗಿವೆ. ಅನೇಕ ವೇಳೆ ಅವನ್ನು ಚಿತ್ರಗಳ ಕೆಳಗಿನ ಪಟ್ಟಿಗಳಲ್ಲಿ ಕೊರೆಯಲಾಗಿದೆ. ಅವು ದಾನಿಯ ಅಥವಾ ಶಿಲ್ಪಿಯ ಹೆಸರನ್ನು ಉಲ್ಲೇಖಿಸುತ್ತವೆ. ಕಾಂಚೀಪುರದ ವೈಕುಂಠನಾಥ ದೇವಾಲಯದಲ್ಲಿ ಪಲ್ಲವಮಲ್ಲ ಪಟ್ಟಾಭಿಷೇಕಕ್ಕೆ ಬಂದ ಘಟನೆಗಳನ್ನು ನಿರೂಪಿಸುವ ಶಿಲ್ಪಗಳನ್ನು ಹಾಗೂ ಅವುಗಳ ಕೆಳಗಿನ ಪಟ್ಟಿಗಳ ಶಾಸನಗಳನ್ನು ಉದಾಹರಿಸಬಹುದು. ಈ ಕಾಲದ ಪಾಂಡ್ಯರ ತಾಮ್ರಶಾಸನಗಳಲ್ಲಿಯ ತಮಿಳುಭಾಗದಲ್ಲಿ ಅರಸನ ಸಾಧನೆಗಳನ್ನು ವರ್ಣಿಸುವ ಪದ್ಯಗಳಿರುತ್ತವೆ.
ಚೋಳರ ಆದಿತ್ಯನ ಕಾಲದಿಂದ ತಮಿಳು ನಾಡಿನಲ್ಲಿ ಅನೇಕ ಶಿವಾಲಯಗಳನ್ನು ಕಟ್ಟಲಾಯಿತು. ಆ ದೇವಾಲಯಗಳ ಗೋಡೆಗಳಲ್ಲಿ ಅಳವಡಿಸಲಾದ ಕಲ್ಲುಗಳ ಮೇಲೆ ಶಾಸನಗಳನ್ನು ಕೊರೆಯತೊಡಗಿದರು. ಆರಂಭದಲ್ಲಿ ಅರಸನ ಹೆಸರು, ಬಿರುದು, ಶಾಸನ ಹುಟ್ಟಿದ ತಿಂಗಳು (ಸೌರಮಾನ), ನಕ್ಷತ್ರ ಮತ್ತು ವಾರ ದಿನಗಳನ್ನು ನಮೂದಿಸಲಾಗುತ್ತಿತ್ತು. ಚೋಳರ ಶಾಸನಗಳು ತಮಿಳು ಅಕ್ಷರದಲ್ಲಿ, ಸಂಸ್ಕೃತ ಹಾಗೂ ತಮಿಳು ಭಾಷೆಗಳಲ್ಲಿ ಇವೆ. ಹಲವರು ದೇವಾಲಯಗಳ ಗೋಡೆಗಳ ಮೇಲೆ ಕೊರೆದ ಈ ಶಾಸನಗಳು ದೀರ್ಘವಾಗಿವೆ. ಇವು ತಮಿಳು ನಾಡಿನ ಸಾಮಾಜಿಕ ಜೀವನದ ವಿವಿಧ ಮುಖಗಳನ್ನು ಕುರಿತು ಬಹಳ ವಿವರಗಳನ್ನೊದಿಗಿಸುತ್ತವೆ. ಒಂದನೆಯ ರಾಜನಿಂದ ಪ್ರಾರಂಭವಾಗಿ ಅವನ ಉತ್ತರಾಧಿಕಾರಿಗಳು ಮುಂದುವರಿಸಿದ ಮೈ ಕೀರ್ತಿಗಳು (ಪ್ರಶಸ್ತಿ) ಐತಿಹಾಸಿಕ ವಿವರಗಳಿಂದ ತುಂಬಿವೆ. ಅರಸನ ಆಳ್ವಿಕೆಯ ವರ್ಷಗಳು ಹೆಚ್ಚಿದಂತೆ ಈ ಪ್ರಶಸ್ತಿಗಳು ಧೀರ್ಘವಾಗಿ, ಹೊಸ ಸಾಧನೆಗಳ ಉಲ್ಲೇಖಗಳು ಅವುಗಳಲ್ಲಿರುತ್ತವೆ. ಹಲವಾರು ಉತ್ಪ್ರೇಕ್ಷೆಗಳಿದ್ದರೂ ಇವು ಐತಿಹಾಸಿಕ ದಾಖಲೆಗಳೆಂದೇ ಹೇಳಬೇಕು. ಸಾಮಾನ್ಯವಾಗಿ ಇತರ ವಿವರಗಳ ಜೊತೆಗೆ ಅರಸನ ಆಳ್ವಿಕೆಯ ವರ್ಷಗಳನ್ನು ಇವುಗಳಲ್ಲಿ ಕೊಟ್ಟಿರುತ್ತದೆ. ಚೋಳರ ತಾಮ್ರಶಾಸನಗಳಲ್ಲಿ ತಿರುವಾಲಂಗಾಡು ಮತ್ತು ಕರಂದೈ ತಾಮ್ರಪಟಗಳು ಈವರೆಗೆ ತಿಳಿದ ಇಂಥ ಶಾಸನಗಳಲ್ಲಿ ಅತ್ಯಂತ ದೊಡ್ಡವು. ಚೋಳರ ಸಮಕಾಲೀನರಾದ ಪಾಂಡ್ಯರು ತಮ್ಮ ಶಾಸನಗಳಿಗಾಗಿ ತಮಿಳು ಮತ್ತು ವಟ್ಟೆಯಿತ್ತು ಲಿಪಿಗಳನ್ನು ಬಳಸಿದರು. ಪಾಂಡ್ಯರ ಶಾಸನಗಳಲ್ಲಿ ಕಾಲವನ್ನು ಸೂಚಿಸುವಾಗ 4+6, 8+3 ಮುಂತಾದ ಎರಡೆರಡು ತೇದಿಗಳನ್ನು ನಮೂದಿಸಲಾಗಿದೆ. ಇದಕ್ಕೆ ಕಾರಣವೇನೆಂಬುದು ಗೊತ್ತಿಲ್ಲವಾದರೂ, ಇವು 10, 11 ಇತ್ಯಾದಿ ವರ್ಷಗಳನ್ನು ಸೂಚಿಸುತ್ತವೆ ಎಂದು ಭಾವಿಸಲಾಗಿದೆ.ವಿಜಯನಗರ ಶಾಸನಗಳನ್ನು ತೆಲಗು ಲಿಪಿ ಮತ್ತು ಭಾಷೆಯಲ್ಲಿ ಅಂತೆಯೇ ನಂದಿನಾಗರೀ ಲಿಪಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಬರೆಯಲಾರಂಭವಾಯಿತು. ಈ ಬಗೆಯ ತಾಮ್ರಶಾಸನಗಳ ಎಷ್ಟೋ ಮಾದರಿಗಳನ್ನು ಮದ್ರಾಸಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಶೇಖರಿಸಲಾಗಿದೆ.
{{cite web}}
: Check date values in: |accessdate=
(help)ದಕ್ಷಿಣ ಭಾರತದ ರಾಜ್ಯಗಳುಕರ್ನಾಟಕ | ಆಂಧ್ರ ಪ್ರದೇಶ | ತಮಿಳುನಾಡು | ಕೇರಳ | ತೆಲಂಗಾಣ |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.