Remove ads
From Wikipedia, the free encyclopedia
ತಮಿಳುನಾಡಿನ ತಿರುಚಿನಾಪಳ್ಳಿ ಜಿಲ್ಲೆಯಲ್ಲಿರುವ ಶ್ರೀರಂಗಂ, ಕಾವೇರಿ ನದಿಯು ಎರಡು ಕವಲುಗಳಾಗಿ ಹರಿದು ಮತ್ತೆ ಒಂದಾಗುವ ಮಧ್ಯೆ ಇರುವ ದ್ವೀಪ ಪಟ್ಟಣ. ಇದರ ದಕ್ಷಿಣಕ್ಕೆ ಕಾವೇರಿಯ ಬಲ ಕವಲು ಇದ್ದು ಅದರ ದಕ್ಷಿಣ ತಟದಲ್ಲಿ ತಿರುಚಿನಾಪಳ್ಳಿ ಪಟ್ಟಣವಿದೆ. ಶ್ರೀರಂಗಂನ ಉತ್ತರಕ್ಕೆ ಇರುವ, ಕಾವೇರಿಯ ಎಡ ಕವಲನ್ನು ತಮಿಳರು ಕೊಲ್ಲಿಡಂ ಎಂದು ಕರೆಯುತ್ತಾರೆ. ಶ್ರೀರಂಗಂ ವೈಷ್ಣವರ ಹಾಗೂ ಶೈವರ ಅನೇಕ ದೇವಸ್ಥಾನಗಳಿರುವ ಪುಣ್ಯಕ್ಷೇತ್ರ. ಇಲ್ಲಿರುವ ಶ್ರೀರಂಗನಾಥ ಸ್ವಾಮಿಯ ದೇವಾಲಯವು ಜಗತ್ತಿನಲ್ಲೇ ಅತ್ಯಂತ ದೊಡ್ಡ ಮತ್ತು ಪೂಜಾ ಕೈಂಕರ್ಯಗಳು ನಡೆಯುವ ದೇವಾಲಯವಾಗಿದೆ (ಪೂಜಾ ಕೈಂಕರ್ಯಗಳಿಲ್ಲದಿರುವ ದೇವಾಲಯಗಳನ್ನೂ ಪರಿಗಣಿಸಿದರೆ ಕಾಂಬೋಡಿಯಾದಲ್ಲಿರುವ ಅಂಗ್‍ಕೊರ್ ವಾಟ್ ಅತ್ಯಂತ ದೊಡ್ಡ ದೇವಾಲಯ). ಈ ಶ್ರೀರಂಗನಾಥನ ದೇವಸ್ಥಾನದ ಕಾರಣದಿಂದಲೇ ಈ ದ್ವೀಪ ಪಟ್ಟಣಕ್ಕೆ ’ಶ್ರೀರಂಗಂ’ ಅನ್ನುವ ಹೆಸರು ಬಂದಿದೆ.
ಶ್ರೀರಂಗಂ ಪಟ್ಟಣದ ಇತಿಹಾಸ ತ್ರೇತಾಯುಗದವರೆಗೆ ಹಬ್ಬಿದೆ. ಲಂಕಾ ಪುರಿಯಲ್ಲಿ ರಾವಣನೊಡನೆ ಯುದ್ಧ ಮಾಡಿ, ಆತನ ಹತ್ಯೆಗೈದು, ಆತನ ತಮ್ಮ ವಿಭೀಷಣನಿಗೆ ಪಟ್ಟಾಭಿಷೇಕ ಮಾಡಿದ ಶ್ರೀರಾಮ ತನ್ನ ಮಡದಿ ಸೀತೆಯೊಡನೆ ಅಯೋಧ್ಯೆಗೆ ಮರಳುತ್ತಾನೆ. ತನ್ನನ್ನು ಬೀಳ್ಕೊಡಲು ಬಂದ ವಿಭೀಷಣನಿಗೆ ಸೀತಾ ವಿಮೋಚನೆ ಮತ್ತು ರಾವಣ ಮರ್ದನದ ಕಾರ್ಯಗಳಲ್ಲಿ ಸಹಕರಿಸಿದ್ದಕ್ಕೆ ಪ್ರೀತಿಯ ಉಡುಗೊರೆಯಾಗಿ ತಾನು ಆರಾಧಿಸುತ್ತಿದ್ದ, ಮಹಾವಿಷ್ಣುವು ಆದಿಶೇಷನ ಮೇಲೆ ಮಲಗಿರುವ ಶ್ರೀರಂಗನಾಥನ ವಿಗ್ರಹವನ್ನು ಕೊಡುತ್ತಾನೆ. ಆ ವಿಗ್ರಹವನ್ನು ಎಲ್ಲಿ ನೆಲದ ಮೇಲಿಡುತ್ತಾನೋ ಅಲ್ಲೇ ಅದು ಪ್ರತಿಷ್ಠಾಪಿತವಾಗುತ್ತದೆ ಮತ್ತು ಕದಲಿಸಲಾಗುದುವುದಿಲ್ಲ ಎಂಬ ಸೂಚನೆಯನ್ನೂ ಕೊಡುತ್ತಾನೆ. ಸಂತೋಷದಿಂದ ಆ ವಿಗ್ರಹವನ್ನು ಪಡೆದ ವಿಭೀಷಣನು ದಕ್ಷಿಣ ದಿಕ್ಕಿಗೆ ಲಂಕೆಯ ಮಾರ್ಗವಾಗಿ ಹೊರಡುತ್ತಾನೆ. ಒಳ್ಳೆಯವನಾದರೂ ಅಸುರ ಕುಲದವನಾದ ವಿಭೀಷಣನಿಗೆ ಶ್ರೀರಂಗನಾಥನ ಪವಿತ್ರ ವಿಗ್ರಹವನ್ನು ಕೈಯಾರೆ ಕೊಟ್ಟ ಶ್ರೀರಾಮನ ಕಾರ್ಯವು ದೇವತೆಗಳಿಗೆ ಸರಿಕಾಣಲಿಲ್ಲವಾಗಿ, ವಿಗ್ರಹವು ಭಾರತ ಬಿಟ್ಟು ಅಸುರಪುರಿಯಾದ ಲಂಕೆಗೆ ಹೋಗುವುದನ್ನು ಹೇಗಾದರೂ ತಡೆಯಬೇಕೆಂದು ನಿರ್ಧರಿಸಿದ ದೇವತೆಗಳು ಈ ಕಾರ್ಯವನ್ನು ಗಣಪತಿಗೆ ವಹಿಸುತ್ತಾರೆ. ದೇವತೆಗಳ ಮನವಿಯನ್ನು ಮನ್ನಿಸಿದ ಗಣಪತಿಯು ಓರ್ವ ದನಕಾಯುವ ಹುಡುಗನ ರೂಪ ತೆಳೆದು ಕಾವೇರಿ ನದಿಯ ತಟದಲ್ಲಿರುವ ಈ ಜಾಗದಲ್ಲಿ ಪ್ರತ್ಯಕ್ಷನಾಗುತ್ತಾನೆ.
ಇತ್ತ ಲಂಕೆಗೆ ಹೊರಟ ವಿಭೀಷಣನು ಇದೇ ಮಾರ್ಗವಾಗಿ ಬರುತ್ತಿರಲು ನದಿಯನ್ನು ಕಂಡು ತನ್ನ ನೈಮಿತ್ತಿಕ ಧಾರ್ಮಿಕ ಕರ್ಮಗಳನ್ನು ಮುಗಿಸಲು ಇದೇ ಸರಿಯಾದ ಜಾಗವೆಂದು ಬಗೆದು ವಿಗ್ರಹವನ್ನು ಏನು ಮಾಡುವುದು ಎಂದು ಸುತ್ತಮುತ್ತ ನೋಡಲಾಗಿ ದನ ಕಾಯುವ ಹುಡುಗನನ್ನು ಕಾಣುತ್ತಾನೆ. ಆತನನ್ನು ಹತ್ತಿರ ಕರೆದ ವಿಭೀಷಣನು ತನ್ನ ಕೈಂಕರ್ಯಗಳು ಮುಗಿಯುವವರೆಗೂ ವಿಗ್ರಹವನ್ನು ಕೈಯಲ್ಲೇ ಹಿಡಿದುಕೊಂಡಿರಬೇಕೆಂದೂ ನೆಲದ ಮೇಲೆ ಇಡಬಾರದೆಂದೂ ಹೇಳಿ ತನಗೆ ಸಹಾಯ ಮಾಡೆಂದು ಕೋರುತ್ತಾನೆ. ಸಂತೋಷದಿಂದ ಸಹಾಯ ಮಾಡಲೊಪ್ಪಿದ ಹುಡುಗನು ವಿಭೀಷಣ ಅತ್ತ ನೀರಿಗಿಳಿಯುತ್ತಿದ್ದಂತೆಯೇ ಇತ್ತ ವಿಗ್ರಹವನ್ನು ನೆಲದ ಮೇಲಿಡುತ್ತಾನೆ. ಶ್ರೀರಾಮನು ಮೊದಲೇ ಹೇಳಿದಂತೆ ಆ ವಿಗ್ರಹವು ಅಲ್ಲೇ ನೆಲೆಸಿಬಿಡುತ್ತದೆ. ಮುಂದೆ ಅದು ಕಲಿಯುಗದಲ್ಲಿ ಚೋಳ ವಂಶದ ರಾಜನೋರ್ವನು ಬೇಟೆಯಾಡುತ್ತಾ ಬಂದಾಗ ಆತನಿಗೆ ಸಿಕ್ಕಿ ಅವನು ಅಲ್ಲೇ ದೇವಸ್ಥಾನವೊಂದನ್ನು ಕಟ್ಟಿಸುತ್ತಾನೆ.
ಶ್ರೀರಂಗಂ ದ್ವೀಪ ಪಟ್ಟಣವಾದರೂ ದಕ್ಷಿಣದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆಯಿಂದ ತಿರುಚಿನಾಪಳ್ಳಿಗೆ ಜೋಡಿಸಲ್ಪಟ್ಟಿದೆ ಹಾಗೂ ಉತ್ತರದಲ್ಲಿ ಕೊಲ್ಲಿಡಂ ನದಿಗೆ ಕಟ್ಟಿದ ಸೇತುವೆಯಿಂದ ತಂಜಾವೂರು ಮತ್ತು ನಾಮಕ್ಕಲ್ ಪಟ್ಟಣಗಳಿಗೆ ಹೋಗುವ ರಸ್ತೆಗಳಿಗೆ ಜೋಡಿಸಲ್ಪಟ್ಟಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.