ಮೀನು
From Wikipedia, the free encyclopedia
ಮೀನು ಎಂದರೆ ಬೆರಳುಗಳಿಂದ ಕೂಡಿದ ಅವಯವಗಳು ಇಲ್ಲದಿರುವ ಎಲ್ಲ ಕಿವಿರು ಹೊಂದಿರುವ ಜಲವಾಸಿ ತಲೆಬುರುಡೆಯಿರುವ ಪ್ರಾಣಿಗಳನ್ನು ಒಳಗೊಂಡಿರುವ ಪ್ಯಾರಫ಼ೈಲೆಟಿಕ್ ಜೀವಿಗಳ ಗುಂಪಿನ ಯಾವುದೇ ಸದಸ್ಯ. ಈ ವ್ಯಾಖ್ಯಾನದಲ್ಲಿ ಜೀವಂತ ಹ್ಯಾಗ್ಫಿಶ್, ಲ್ಯಾಂಪ್ರೀಗಳು, ಮತ್ತು ಮೃದ್ವಸ್ಥಿ ಹೊಂದಿರುವ ಹಾಗು ಎಲುಬು ಹೊಂದಿರುವ ಮೀನು, ಜೊತೆಗೆ ವಿವಿಧ ನಿರ್ನಾಮವಾದ ಸಂಬಂಧಿತ ಗುಂಪುಗಳನ್ನು ಒಳಗೊಂಡಿವೆ. ವಿಶಾಲಾರ್ಥದಲ್ಲಿ ಯಾವುದೇ ಜಲವಾಸಿ ಪ್ರಾಣಿಗೆ-ಕಶೇರುಕ ಅಥವಾ ಅಕಶೇರುಕ-ಅನ್ವಯವಾಗುವ ಹೆಸರು ಮೀನು, ಉದಾಹರಣೆಗೆ ಗೆಂಡೆಮೀನು, ನಕ್ಷತ್ರಮೀನು, ಅಂಬಲಿಮೀನು, ಕಟಲ್ ಮೀನು ಇತ್ಯಾದಿ. ಆದರೆ ನಿಷ್ಕೃಷ್ಟ ಅರ್ಥದಲ್ಲಿ ಈ ಹೆಸರು ನೀರಿನಲ್ಲಿ ಮಾತ್ರ ಜೀವಿಸುವಂಥ ಕಶೇರುಕ ಪ್ರಾಣಿಗಳಿಗೆ ಅನ್ವಯವಾಗುತ್ತದೆ. ಬಹುತೇಕ ಮೀನುಗಳು ಸುತ್ತಲಿನ ಉಷ್ಣಾಂಶ ಬದಲಾದಂತೆ ತಮ್ಮ ದೇಹದ ಉಷ್ಣಾಂಶ ಬದಲಾಗಲು ಅನುವು ಮಾಡಿಕೊಡುವ ಶೀತರಕ್ತದ ಜೀವಿಗಳು, ಆದರೆ ದೊಡ್ಡ ಸಕ್ರಿಯ ಈಜುಗಾರ ಮೀನುಗಳ ಪೈಕಿ ಬಿಳಿ ಶಾರ್ಕ್ ಮತ್ತು ಟ್ಯೂನಾದಂತಹ ಕೆಲವು, ಹೆಚ್ಚಿನ ಆಂತರಿಕ ಉಷ್ಣಾಂಶವನ್ನು ಹಿಡಿದಿಟ್ಟುಕೊಳ್ಳಬಹುದು.[1][2]
ಈ ಪ್ರಾಣಿಗಳು ನೀರಿನಲ್ಲಿ ಕರಗಿರುವ ಆಕ್ಸಿಜನ್ನನ್ನು ಬಳಸಲು ಸಮರ್ಥವಾಗಿರುವುದರ ಜೊತೆಗೆ, ಈಜು ರೆಕ್ಕೆಗಳಾಗಿ ಮಾರ್ಪಾಟಾಗಿರುವ ಚಲನಾವಯವಗಳನ್ನೂ[3] ಸಾಮಾನ್ಯವಾಗಿ ಕದಿರಿನಾಕಾರದ ಮತ್ತು ಶಲ್ಕ ಅಥವಾ ಹುರುಪೆಗಳಿಂದ (ಸ್ಕೇಲ್ಸ್) ಆವೃತವಾಗಿರುವ ದೇಹವನ್ನೂ ದೇಹದ ಹಿಂತುದಿಯಲ್ಲಿ ಬಾಲದ ಈಜುರೆಕ್ಕೆಯನ್ನೂ ಪಡೆದಿರುವುವು. ಹಳೆಯ ವರ್ಗೀಕರಣಗಳ ಪ್ರಕಾರ ಇವು ಪಿಸೀಸ್ ವರ್ಗಕ್ಕೆ ಸೇರಿವೆಯಾದರೆ ಆಧುನಿಕ ವರ್ಗೀಕರಣ ಪದ್ಧತಿಗಳ ಅನುಸಾರ ಮೀನುಗಳು ಸೈಕ್ಲೊಸ್ಟೋಮಟ, ಇಲ್ಯಾಸ್ಮೊಬ್ರಾಂಕಿಯೈ, ಹಾಲೊಸೆಫಲೈ, ಡಿಪ್ನಾಯ್ ಮತ್ತು ಟೀಲಿಯೊಸ್ಟೋಮೈ (ಆಸ್ಟಿಕ್ತಿಯೀಸ್) ವರ್ಗಗಳಿಗೆ ಸೇರಿವೆ.