ಕಿವಿರುಗಳು
From Wikipedia, the free encyclopedia
ಜಲಚರಗಳಲ್ಲಿ ಅನಿಲವಿನಿಮಯಕ್ಕಾಗಿ ಇರುವ ವಿಶಿಷ್ಟ ಬಗೆಯ ಉಸಿರಾಟದ ಅಂಗಾಂಗಳು (ಗಿಲ್ಸ್). ಇವುಗಳಲ್ಲಿ ಹೊರಮೈ ಪದರ ಅತಿ ತೆಳುವಾಗಿದ್ದು ಅದರ ಮೂಲಕ ಅನಿಲ ವಿನಿಮಯ ನಡೆಯುತ್ತದೆ. ನೀರಿನಲ್ಲಿ ಬೆರೆತಿರುವ ಆಮ್ಲಜನಕ ಈ ಪದರದ ಮೂಲಕ ಹಾದು ರಕ್ತದೊಡನೆ ಬೆರೆಯುತ್ತದೆ. ರಕ್ತದಲ್ಲಿರುವ ಕಾರ್ಬನ್ ಡೈಆಕ್ಸೈಡ್ ಈ ಪದರದ ಮೂಲಕ ಹೊರ ಹಾದು ನೀರಿನೊಂದಿಗೆ ಬೆರೆಯುತ್ತದೆ. ಇದು ಸೂಕ್ಷ್ಮಾಭಿಸರಣೆಗೆ (ಆಸ್ಮಾಸಿಸ್) ಅನುಗುಣವಾಗಿ ನಡೆಯುತ್ತದೆ. ಅನಿಲವಿನಿಮಯಕ್ಕೆ ಸಹಾಯಕವಾಗುವಂತೆ ಕಿವಿರುಗಳು ಅಗಲವಾದ ತಟ್ಟೆಗಳಂತೆಯೋ ನೇರವಾದ ಗರಿಗಳಂತೆಯೋ ಉದ್ದವಾದ ತಂತುಗಳಂತೆಯೊ ರೂಪುಗೊಂಡಿದ್ದು ಸಾಕಷ್ಟು ವಿನಿಮಯಾವಕಾಶವಿರುತ್ತದೆ. ಅಕಶೇರುಕ ಜಲಚರಗಳಾದ ವಲಯವಂತಗಳು (ಅನೆಲಿಡ), ಕಠಿಣ ಚರ್ಮಿಗಳು (ಕ್ರಸ್ಟೇಸಿಯ), ಜಲಕೀಟಗಳು, ಮೃದ್ವಂಗಿಗಳು (ಮೊಲಸ್ಕ) ಮತ್ತು ಕಂಟಕಚರ್ಮಿ (ಎಕಿನೊಡರ್ಮೇಟ) ಹಾಗೂ ಕಶೇರುಕಗಳಾದ ಮೀನು ಮತ್ತು ಕೆಲವು ದ್ವಿಚರಿಗಳಲ್ಲಿ (ಆಂಫಿಬಿಯ) ಕಿವಿರಗಳನ್ನು ಕಾಣಬಹುದು.