From Wikipedia, the free encyclopedia
ಪ್ರಾಣಿಗಳು ಜೈವಿಕ ಸಾಮ್ರಾಜ್ಯ ಅನಿಮಾಲಿಯಾದ ಬಹುಕೋಶೀಯ, ಯೂಕ್ಯಾರಿಯೋಟಿಕ್ ಜೀವಿಗಳು. ಕೆಲವು ವಿನಾಯಿತಿಗಳೊಂದಿಗೆ, ಪ್ರಾಣಿಗಳು ಸಾವಯವ ಪದಾರ್ಥವನ್ನು ಸೇವಿಸುತ್ತವೆ, ಆಮ್ಲಜನಕವನ್ನು ಉಸಿರಾಡುತ್ತವೆ, ಸ್ನಾಯುಕೋಶಗಳನ್ನು ಹೊಂದಿರುತ್ತವೆ ಮತ್ತು ಇವುಗಳಿಗೆ ಚಲಿಸಲು ಸಾಧ್ಯವಿರುತ್ತದೆ ಹಾಗೂ ಇವುಗಳು ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡಬಲ್ಲವು ಮತ್ತು ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಜೀವಕೋಶಗಳ ಟೊಳ್ಳಾದ ಗೋಳವಾದ ಬ್ಲಾಸ್ಟುಲಾದಿಂದ ಬೆಳೆಯುತ್ತವೆ. ೨೦೨೨ ರ ಹೊತ್ತಿಗೆ, ೨.೧೬ ದಶಲಕ್ಷ ಜೀವಂತ ಪ್ರಾಣಿ ಪ್ರಭೇದಗಳನ್ನು ವಿವರಿಸಲಾಗಿತ್ತು. ಅದರಲ್ಲಿ ಸುಮಾರು ೧.೦೫ ಮಿಲಿಯನ್ ಕೀಟಗಳು, ೮೫,೦೦೦ ಕ್ಕಿಂತ ಹೆಚ್ಚು ಮೃದ್ವಂಗಿಗಳು ಮತ್ತು ಸುಮಾರು ೬೫,೦೦೦ ಕಶೇರುಕಗಳು. ಒಟ್ಟಾರೆಯಾಗಿ ಸುಮಾರು ೭.೭೭ ದಶಲಕ್ಷ ಪ್ರಾಣಿ ಪ್ರಭೇದಗಳಿವೆ ಎಂದು ಅಂದಾಜಿಸಲಾಗಿದೆ. ಪ್ರಾಣಿಗಳ ಉದ್ದವು ೮.೫ ಮೈಕ್ರೋಮೀಟರ್ನಿಂದ ೩೩.೬ (೧೧೦ ಅಡಿ) ಮೀಟರ್ಗಳವರೆಗೆ ಇರುತ್ತದೆ. ಅವು ಇತರ ಪ್ರಾಣಿಗಳೊಂದಿಗೆ ಮತ್ತು ತಮ್ಮ ಪರಿಸರದೊಂದಿಗೆ ಸಂಕೀರ್ಣವಾದ ಸಂವಹನಗಳನ್ನು ಹೊಂದಿವೆ. ಅಲ್ಲದೆ ಅವು ಸಂಕೀರ್ಣವಾದ ಆಹಾರ ಜಾಲಗಳನ್ನು ರೂಪಿಸಿಕೊಳ್ಳುತ್ತವೆ. ಪ್ರಾಣಿಗಳ ವೈಜ್ಞಾನಿಕ ಅಧ್ಯಯನವನ್ನು ಪ್ರಾಣಿಶಾಸ್ತ್ರ ಎಂದು ಕರೆಯಲಾಗುತ್ತದೆ.
ಹೆಚ್ಚಿನ ಜೀವಂತ ಪ್ರಾಣಿ ಪ್ರಭೇದಗಳು ಬೈಲೇಟರಿಯಾದಲ್ಲಿವೆ. ಇದು ಒಂದು ಏಕಮೂಲ ವರ್ಗವಾಗಿದ್ದು ಇದರ ಸದಸ್ಯರು ಇಬ್ಬದಿಯಲ್ಲೂ ಸಮ್ಮಿತೀಯ ದೇಹ ಯೋಜನೆಯನ್ನು ಹೊಂದಿವೆ. ಬೈಲೇಟೇರಿಯಾವು ನೆಮಟೋಡ್ಗಳು, ಸಂಧಿಪದಿಗಳು, ಚಪ್ಪಟೆಹುಳುಗಳು, ವಲಯವಂತ ಪ್ರಾಣಿಗಳು ಮತ್ತು ಮೃದ್ವಂಗಿಗಳಂತಹ ಪ್ರಾಣಿಗಳನ್ನು ಹೊಂದಿರುವ ಪ್ರೋಟೋಸ್ಟೋಮ್ಗಳನ್ನು ಒಳಗೊಂಡಿದೆ. ಸುಮಾರು ೫೩೯ ಮಿಲಿಯನ್ ವರ್ಷಗಳ ಹಿಂದೆ ಪ್ರಾರಂಭವಾದ ಕ್ಯಾಂಬ್ರಿಯನ್ ಸ್ಫೋಟದ ಅವಧಿಯಲ್ಲಿ ಅನೇಕ ಆಧುನಿಕ ಪ್ರಾಣಿ ವಿಭಾಗಗಳು ಪಳೆಯುಳಿಕೆ ದಾಖಲೆಯಲ್ಲಿ ಸಮುದ್ರ ಪ್ರಭೇದಗಳಾಗಿ ಸ್ಪಷ್ಟವಾಗಿ ಸ್ಥಾಪಿತವಾದವು. ಎಲ್ಲ ಜೀವಂತ ಪ್ರಾಣಿಗಳಿಗೆ ಸಾಮಾನ್ಯವಾದ ಜೀನ್ಗಳ ೬,೩೩೧ ಗುಂಪುಗಳನ್ನು ಗುರುತಿಸಲಾಗಿದೆ; ಇವು ೬೫೦ ದಶಲಕ್ಷ ವರ್ಷಗಳ ಹಿಂದೆ ಬದುಕಿದ್ದ ಒಬ್ಬ ಸಾಮಾನ್ಯ ಪೂರ್ವಜದಿಂದ ಹುಟ್ಟಿಕೊಂಡಿರಬಹುದು.
ಐತಿಹಾಸಿಕವಾಗಿ, ಅರಿಸ್ಟಾಟಲ್ ಪ್ರಾಣಿಗಳನ್ನು ರಕ್ತವಿರುವ ಮತ್ತು ರಕ್ತವಿಲ್ಲದ ಪ್ರಾಣಿಗಳಾಗಿ ವಿಂಗಡಿಸಿದನು. ಕಾರ್ಲ್ ಲಿನೆಯಸ್ ೧೭೫೮ ರಲ್ಲಿ ತನ್ನ ಸಿಸ್ಟಮಾ ನ್ಯಾಚುರೇ ನೊಂದಿಗೆ ಪ್ರಾಣಿಗಳಿಗೆ ಮೊದಲ ಕ್ರಮಾನುಗತ ಜೈವಿಕ ವರ್ಗೀಕರಣವನ್ನು ರಚಿಸಿದನು, ಇದನ್ನು ಜೀನ್-ಬ್ಯಾಪ್ಟಿಸ್ಟ್ ಲಾಮಾರ್ಕ್ ೧೮೦೯ ರ ಹೊತ್ತಿಗೆ ೧೪ ವಿಭಾಗಗಳಾಗಿ ವಿಸ್ತರಿಸಿದರು. ೧೮೭೪ ರಲ್ಲಿ, ಅರ್ನ್ಸ್ಟ್ ಹೆಕೆಲ್ ಪ್ರಾಣಿ ಸಾಮ್ರಾಜ್ಯವನ್ನು ಬಹುಕೋಶೀಯ ಮೆಟಾಜೋವಾ (ಈಗ ಅನಿಮೇಲಿಯಾಕ್ಕೆ ಸಮಾನಾರ್ಥಕ) ಮತ್ತು ಪ್ರೊಟೊಜೋವಾ ಎಂದು ವಿಂಗಡಿಸಿದರು, ಏಕಕೋಶೀಯ ಜೀವಿಗಳನ್ನು ಈಗ ಪ್ರಾಣಿಗಳೆಂದು ಪರಿಗಣಿಸಲಾಗುವುದಿಲ್ಲ. ಆಧುನಿಕ ಕಾಲದಲ್ಲಿ, ಪ್ರಾಣಿಗಳ ಜೈವಿಕ ವರ್ಗೀಕರಣವು ಆಣ್ವಿಕ ಜಾತಿವಿಕಾಸಶಾಸ್ತ್ರದಂತಹ ಸುಧಾರಿತ ತಂತ್ರಗಳನ್ನು ಅವಲಂಬಿಸಿದೆ. ಇದು ವರ್ಗಗಳ ನಡುವಿನ ವಿಕಸನೀಯ ಸಂಬಂಧಗಳನ್ನು ಪ್ರದರ್ಶಿಸುವಲ್ಲಿ ಪರಿಣಾಮಕಾರಿಯಾಗಿದೆ.
ಮಾನವರು ಆಹಾರಕ್ಕಾಗಿ (ಮಾಂಸ, ಹಾಲು ಮತ್ತು ಮೊಟ್ಟೆಗಳನ್ನು ಒಳಗೊಂಡಂತೆ), ವಸ್ತುಗಳಿಗೆ (ಚರ್ಮ ಮತ್ತು ಉಣ್ಣೆಯಂತಹ), ಸಾಕುಪ್ರಾಣಿಗಳು ಮತ್ತು ಸಾರಿಗೆಗೆ ಸೇರಿದಂತೆ ಕೆಲಸ ಮಾಡುವ ಪ್ರಾಣಿಗಳಾಗಿ ಅನೇಕ ಪ್ರಾಣಿ ಪ್ರಭೇದಗಳನ್ನು ಬಳಸುತ್ತಾರೆ. ಬೇಟೆಯಾಡುವ ಪಕ್ಷಿಗಳಂತೆ ನಾಯಿಗಳನ್ನು ಬೇಟೆಯಾಡಲು ಬಳಸಲಾಗುತ್ತದೆ. ಆದರೆ ಅನೇಕ ಭೂ ಮತ್ತು ಜಲಚರ ಪ್ರಾಣಿಗಳನ್ನು ಕ್ರೀಡೆಗಾಗಿ ಬೇಟೆಯಾಡಲಾಗುತ್ತದೆ. ಅಮಾನವೀಯ ಪ್ರಾಣಿಗಳು ಪ್ರಾಚೀನ ಕಾಲದಿಂದಲೂ ಕಲೆಯಲ್ಲಿ ಕಾಣಿಸಿಕೊಂಡಿವೆ ಮತ್ತು ಪುರಾಣ ಹಾಗೂ ಧರ್ಮದಲ್ಲಿ ಕಾಣಿಸಿಕೊಂಡಿವೆ.
ಮೆಟಜೋವಗಳ ಉಗಮದ ಬಗ್ಗೆ ಕೆಲವು ಪರಿಕಲ್ಪನೆಗಳಿವೆ. ಸಮೂಹ ಜೀವನ ನಡೆಸುವ ಏಕಕಣಜೀವಿ, ಭಿತ್ತಿರಹಿತ ಕೋಶಗಳನ್ನು ಹೊಂದಿರುವ ಏಕಕಣಜೀವಿ ಹಾಗೂ ಮೆಟಫೈಟಗಳಿಂದ ಉಗಮಿಸಿರಬಹುದೆಂಬ ಪರಿಕಲ್ಪನೆಗಳು ಹೆಚ್ಚು ಪ್ರಚಲಿತ.
ಹೆಕೆಲನ ಪ್ರಕಾರ ಟೊಳ್ಳು ಚೆಂಡಿನಂತಿರುವ ಹಾಗೂ ಕಶಾಂಗಗಳನ್ನು ಪಡೆದಿರುವ ವಾಲ್ವಾಕ್ಸನಂಥ ಜೀವಿಯಿಂದ ಮೆಟಜೋವಗಳು ಉಗಮಿಸಿವೆ. ಇಂಥ ಜೀವಿಗೆ ಹೆಕಲ್ `ಬ್ಲಾಸ್ಟಿಯ' ಎಂದು ಕರೆದ. ಹೆಕೆಲನ `ಜೀವಾನುವಂಶೀಯ' (ಬಯೋಜೆನಿಟಿಕ್) ತತ್ತ್ವದ ಪ್ರಕಾರ ಪ್ರಾಣಿಗಳ ಬೆಳವಣಿಗೆಯ ಹಂತಗಳು ಅವುಗಳ ವಿಕಾಸದ ಹಂತಗಳನ್ನು ಪ್ರತಿನಿಧಿಸುತ್ತವೆ. ಮೆಟಜೋವ ಪ್ರಾಣಿಗಳ ಜೀವನಚರಿತ್ರೆಯಲ್ಲಿ ಕಂಡುಬರುವ ಬ್ಲಾಸ್ಟುಲಾ ಹಂತ ಈ ಬ್ಲಾಸ್ಟಿಯ ಹಂತಕ್ಕೆ ಸಮನಾದುದು. ಕೋಶಗಳ ಒಂದು ಪದರವನ್ನು ಹೊಂದಿರುವ ಬ್ಲಾಸ್ಟಿಯ ಎರಡು ಪದರಗಳನ್ನು ಪಡೆದರೆ ಸರಳ ಮೆಟಜೋವಾ ಆದಂತಾಯಿತು. ಇದರ ಜೊತೆಯಲ್ಲಿ ಸಂರಕ್ಷಣೆ, ಚಲನೆ ಹಾಗೂ ಪಚನ ಕ್ರಿಯೆಗೆ ಕೋಶಗಳ ವಿಭೇದನೆಯಾಗಬೇಕು. ಹೆಕೆಲನ ಪ್ರಕಾರ ಹೊರಚರ್ಮ ಒಳತಿರುವಿಕೆಗೊಂಡಿರುವುದರಿಂದ ಆ ಪ್ರಾಣಿ, ಕೋಶಗಳ ಎರಡು ಪದರಗಳನ್ನು ಪಡೆಯಿತು. ಇದರೊಂದಿಗೆ ಬಾಯಿಯ ರಚನೆಯೂ ಆಯಿತು. ಹೆಕೆಲನು ಈ ಪ್ರಾಣಿಯನ್ನು `ಗ್ಯಾಸ್ಟ್ರಿಯ' ಎಂದು ಕರೆದ. ಇದು ಮೆಟಜೋವ ಜೀವನ ಚರಿತ್ರೆಯಲ್ಲಿ ಬರುವ ಗ್ಯಾಸ್ಟ್ರುಲಾ ಹಂತಕ್ಕೆ ಸಮನಾದುದು. ಮೆಚ್ನಿಕಾಫ್ನ ಪ್ರಕಾರ ಪುರಾತನ ಮೆಟಜೋವ ಟೊಳ್ಳಿರದ ಗುಂಡಿನಂತಿರುವ ಪ್ಯಾರಂಕೈಮೆಲಾದಂತಿತ್ತು. ಈ ಪ್ಯಾರಂಕೈಮೆಲಾ ಸ್ಪಂಜು ಪ್ರಾಣಿಗಳ ಲಾರ್ವವನ್ನು ಹೋಲುತ್ತಿತ್ತು. ಟೊಳ್ಳಾಗುವುದು ಮತ್ತು ಬಾಯಿಯ ರೂಪುಗೊಳ್ಳುವಿಕೆಗಳು ದ್ವಿತೀಯಕ ಬೆಳೆವಣಿಗೆ. ಆದರೆ ಇದಕ್ಕೆ ಪೂರ್ತಿ ಪುಷ್ಟಿದೊರೆಯಲಿಲ್ಲ. ಇನ್ನು ಕೆಲವರು ಮೆಟಜೋವ ಪ್ರೋಟಿರೊಸ್ಪಾಂಜೀಯ ಎಂಬ ಪ್ರಾಣಿಯಿಂದ ಉದ್ಭವಿಸಿತು ಎಂದು ಊಹಿಸುತ್ತಾರೆ.
ಕೆಲವು ಕಾಲ ಹೆಕೆಲನ ವಾದವೇ ಎಲ್ಲರಿಗೂ ಒಪ್ಪಿಗೆಯಾಗಿ ಅದು ಬಳಕೆಯಲ್ಲಿತ್ತು. ಇದಕ್ಕೆ ವಿರೋಧಗಳು ಇವೆ. ಒಳಚರ್ಮ ಮೆಟಜೋವಗಳ ಬೆಳೆವಣಿಗೆಯಲ್ಲಿ ಒಳತಿರುವಿಗಿಂತ ಬೇರೆ ವಿಧಾನದಲ್ಲಿ ಉದ್ಭವಿಸುತ್ತದೆಂದು ತರ್ಕಿಸುತ್ತಾರೆ. ಪುರಾತನ ಜೀವಿಗೆ ಅತಿ ಹತ್ತಿರದ ಸಂಬಂಧಿ ಎನ್ನಲಾದ ಕಂಟಕಚರ್ಮಿಗಳಲ್ಲಿ ಕೂಡ ಒಳತಿರುವಿಕೆಯಿಂದ ಗ್ಯಾಸ್ಟ್ರುಲಾ ಹಂತದ ನಿರ್ಮಾಣವಾಗುವುದಿಲ್ಲ. ಆದ್ದರಿಂದ ಕೆಲವು ಜೀವವಿಜ್ಞಾನಿಗಳು ಮೆಚ್ನಿಕಾಫನ ವಾದವನ್ನು ಒಪ್ಪುತ್ತಾರೆ.
ಹೈಮನ್ನಳ ಪ್ರಕಾರ ಟೊಳ್ಳು ಚೆಂಡಿನಂತಿದ್ದು, ಕಶಾಂಗಗಳನ್ನು ಹೊಂದಿರುವ ಸಮೂಹ ಜೀವನ ಜೀವಿಯಿಂದ ಮೆಟಜೋವಗಳ ಉದಯವಾಗಿರಬೇಕು. ಈ ಪ್ರಾಣಿಗಳಲ್ಲಿ ಮೊಟ್ಟಮೊದಲ ವಿಭೇದನ ಎಂದರೆ ಕಾಯ ಮತ್ತು ಲಿಂಗಭಾಗಗಳು. ಚಲಿಸುವ ಕೆಲವು ಕೋಶಗಳು ಪಚನಕ್ಕೆ ಸಂವೇದನೆಗೆ ವಿಭೇದನೆ ಹೊಂದಿ ಇವು ಪ್ಯಾರಂಕೈಮೆಲಾ ಅಥವಾ ಸ್ಟೀರಿಯೋಗ್ಯಾಸ್ಟ್ರುಲಾ ಅಗಿರಬೇಕು. ಈ ಜೀವಿಯ ಹೊರಾವರಣದಲ್ಲಿರುವ ಕೋಶಗಳು ಆಹಾರ ಸಂಗ್ರಹಿಸಿ ಒಳ ತಳ್ಳುತ್ತಿದ್ದವು. ಅಲ್ಲಿ ಅಮೀಬಗಳಂಥ ಕೋಶಗಳಿಂದ ಪಚನ ನಡೆಯುತ್ತಿದ್ದಿರಬೇಕು. ಲಿಂಗ ಶರೀರದ ಒಳಭಾಗಕ್ಕೆ ಚಲಿಸಿ ಮುಂಭಾಗದ ಕೆಲವು ಸಂವೇದನಾ ಕೋಶಗಳನ್ನು ಅಥವಾ ಕಶಾಂಗಗಳನ್ನು ಹೊಂದಿರಬೇಕು. ಇಂಥ ಪ್ರಾಣಿಯಿಂದ ಮೆಟಜೋವಗಳು ಉದಯವಾದವು. ಈಗ ಹೈಮನ್ನಳ ಸಿದ್ಧಾಂತ ಬಹುಜನರ ಒಪ್ಪಿಗೆ ಪಡೆದಿದೆ.
ಪ್ರಾಣಿಗಳು ಹಲವಾರು ಗುಣಲಕ್ಷಣಗಳನ್ನು ಹೊಂದಿವೆ, ಅದು ಅವುಗಳನ್ನು ಇತರ ಜೀವಿಗಳಿಂದ ಭಿನ್ನವಾಗಿಸುತ್ತದೆ. ಪ್ರಾಣಿಗಳು ಯುಕ್ಯಾರಿಯೋಟಿಕ್ ಮತ್ತು ಬಹುಕೋಶೀಯಗಳಾಗಿವೆ.[1][2] ಇವುಗಳ ದೇಹದಲ್ಲಿ ವಿಭೇದಗೊಂಡ ಕೋಶಗಳುಂಟು. ಏಕಕೋಶ ಜೀವಿಗಳು ವಿಭೇದನೆಯನ್ನು ಹೊಂದದ ಒಂದೇ ಕೋಶ ಅಥವಾ ಕೋಶಗಳ ಸಮೂಹವನ್ನು ಹೊಂದಿರುತ್ತದೆ. ಆದರೆ ಮೆಟಜೋವ ಗುಂಪಿನ ಪ್ರಾಣಿಗಳಲ್ಲಿ ವಿಭೇದನೆ ಹೊಂದದ ಕೋಶಗಳ ಹಲವು ಪದರಗಳಿದ್ದು ದೇಹ ಮುಂಭಾಗ ಮತ್ತು ಹಿಂಭಾಗ ಎಂಬ ವಿಭೇದನೆಯನ್ನೂ ವಿವಿಧ ಅಂಗಗಳನ್ನೂ ನರವ್ಯೂಹವನ್ನೂ ಪ್ರದರ್ಶಿಸುವುವು. ಎಲ್ಲ ಪ್ರಾಣಿಗಳು ಕನಿಷ್ಠ ಪಕ್ಷ ತಮ್ಮ ಜೀವನ ಚಕ್ರದ ಒಂದು ಭಾಗದಲ್ಲಿ ಚಲನಶೀಲವಾಗಿರುತ್ತವೆ[3] (ಸ್ವಯಂಪ್ರೇರಿತವಾಗಿ ತಮ್ಮ ದೇಹವನ್ನು ಚಲಿಸಲು ಸಾಧ್ಯವಿರುತ್ತದೆ). ಆದರೆ ಸ್ಪಂಜುಗಳು, ಹವಳಗಳು, ಶಂಬೂಕಗಳು ಮತ್ತು ಕಲ್ಲಗಳಂತಹ ಕೆಲವು ಪ್ರಾಣಿಗಳು ನಂತರ ಅಚಲವಾಗುತ್ತವೆ. ಬ್ಲಾಸ್ಟುಲಾ ಭ್ರೂಣದ ಬೆಳವಣಿಗೆಯ ಒಂದು ಹಂತವಾಗಿದ್ದು ಪ್ರಾಣಿಗಳಿಗೆ ವಿಶಿಷ್ಟವಾಗಿದೆ. ಇದು ಜೀವಕೋಶಗಳನ್ನು ವಿಶೇಷೀಕೃತ ಅಂಗಾಂಶಗಳು ಮತ್ತು ಅಂಗಗಳಾಗಿ ಭೇದಮಾಡಲು ಅನುವು ಮಾಡಿಕೊಡುತ್ತದೆ.[4]
ಎಲ್ಲ ಪ್ರಾಣಿಗಳು ಜೀವಕೋಶಗಳಿಂದ ಕೂಡಿವೆ ಹಾಗೂ ಕಾಲಜನ್ ಮತ್ತು ಸ್ಥಿತಿಸ್ಥಾಪಕ ಗ್ಲೈಕೊಪ್ರೋಟೀನ್ಗಳಿಂದ ಕೂಡಿದ ವಿಶಿಷ್ಟವಾದ ಕೋಶಬಾಹ್ಯ ಮಾತೃಕೆಯಿಂದ ಆವೃತವಾಗಿವೆ.[5][6] ಬೆಳವಣಿಗೆಯ ಸಮಯದಲ್ಲಿ, ಪ್ರಾಣಿಗಳ ಕೋಶಬಾಹ್ಯ ಮಾತೃಕೆಯು ತುಲನಾತ್ಮಕವಾಗಿ ನಮ್ಯವಾದ ಚೌಕಟ್ಟನ್ನು ರೂಪಿಸುತ್ತದೆ. ಅದರ ಮೇಲೆ ಜೀವಕೋಶಗಳು ಚಲಿಸಬಹುದು ಮತ್ತು ಮರುಸಂಘಟಿಸಬಹುದು. ಇದು ಸಂಕೀರ್ಣ ರಚನೆಗಳು ರೂಪಗೊಳ್ಳುವುದನ್ನು ಸಾಧ್ಯವಾಗಿಸುತ್ತದೆ. ಪ್ರಾಣಿ ಕೋಶಗಳು ಬಿಗಿಯಾದ ಸಂಧಿಸ್ಥಾನಗಳು, ಅಂತರ ಸಂಧಿಸ್ಥಾನಗಳು ಮತ್ತು ಡೆಸ್ಮೋಸೋಮ್ಗಳು ಎಂದು ಕರೆಯಲ್ಪಡುವ ಕೋಶ ಸಂಧಿಸ್ಥಾನಗಳನ್ನು ಅನನ್ಯವಾಗಿ ಹೊಂದಿರುತ್ತವೆ.[7]
ಕೆಲವು ವಿನಾಯಿತಿಗಳೊಂದಿಗೆ - ನಿರ್ದಿಷ್ಟವಾಗಿ, ಸ್ಪಂಜುಗಳು ಮತ್ತು ಪ್ಲಕೋಜೋವನ್ಗಳು - ಪ್ರಾಣಿಗಳ ದೇಹಗಳನ್ನು ಅಂಗಾಂಶಗಳಾಗಿ ಭೇದಮಾಡಲಾಗಿದೆ.[8][9] ಇವುಗಳಲ್ಲಿ ಸ್ನಾಯುಗಳು ಸೇರಿವೆ ಹಾಗೂ ಇವು ಚಲನವನ್ನು ಸಾಧ್ಯವಾಗಿಸುತ್ತವೆ ಮತ್ತು ನರ ಅಂಗಾಂಶಗಳು ಸಂಕೇತಗಳನ್ನು ರವಾನಿಸಿ ದೇಹವನ್ನು ಸುಸಂಘಟಿತವಾಗಿಸುತ್ತವೆ. ವಿಶಿಷ್ಟವಾಗಿ, ಒಂದು ರಂಧ್ರವುಳ್ಳ (ಟೆನೊಫೊರಾ, ಸಿನಿಡೇರಿಯಾ ಮತ್ತು ಚಪ್ಪಟೆ ಹುಳುಗಳಲ್ಲಿ) ಅಥವಾ ಎರಡು ರಂಧ್ರಗಳುಳ್ಳ (ಬಹುತೇಕ ಬೈಲ್ಯಾಟರಿಯನ್ಗಳಲ್ಲಿ) ಒಂದು ಆಂತರಿಕ ಜೀರ್ಣ ಕೋಶ ಸಹ ಇರುತ್ತದೆ.[10][11]
ಮೆಟಜೋವಗಳ ರಚನೆಯಲ್ಲಿ ಜಟಿಲತೆಯ ವಿವಿಧ ಹಂತಗಳುಂಟು. ಕೆಲವು ಮೆಟಜೋವಗಳು ಕಡಿಮೆ ಜಟಿಲತೆಯನ್ನೂ ಮತ್ತೆ ಕೆಲವು ಮೆಟಜೋವಗಳು ಸಾಕಷ್ಟು ಜಟಿಲತೆಯನ್ನೂ ಹೊಂದಿರುತ್ತವೆ. ಜಟಿಲತೆಯ ವಿವಿಧ ಹಂತಗಳು, ಗರಿಷ್ಠ ಪ್ರಾಣಿಗಳು ಕನಿಷ್ಠ ಪ್ರಾಣಿಗಳಿಂದ ವಿಕಾಸ ಹೊಂದಿರುವ ವಿವಿಧ ಹಂತಗಳನ್ನು ತೋರಿಸುತ್ತವೆ ಎಂದು ನಂಬಲಾಗಿದೆ. ಬಹುಶಃ ಮೊಟ್ಟಮೊದಲ ಮೆಟಜೋವ ಕೇವಲ ಹೊರಚರ್ಮ ಮತ್ತು ಒಳಚರ್ಮ ಎಂಬ ಕೋಶಪದರಗಳನ್ನು ಹೊಂದಿದ್ದು ಯಾವುದೇ ಅಂಗಗಳಿಲ್ಲದೆ ವಿಭೇದನೆಯನ್ನು ಹೊಂದದೇ ಇರುವಂಥ ಪ್ರಾಣಿಯಾಗಿರಬೇಕು. ಈ ಪ್ರಾಣಿಯಲ್ಲಿ ವಿಭೇದನೆಯಾದರೆ ಕೆಲವು ಲೈಂಗಿಕ ಕೋಶಗಳು ಮಾತ್ರ ಇತರ ಭಾಗಗಳಿಂದ ಬೇರ್ಪಟ್ಟಿರಬೇಕೆಂದು ಊಹಿಸಲಾಗಿದೆ. ಗ್ರಂಥಿ, ಮಾಂಸಖಂಡ, ಬಂಧ ಅಂಗಾಂಶ, ನರಕೋಶ ಮುಂತಾದವು ಬಹುಶಃ ಅನಂತರದ ಬೆಳೆವಣಿಗೆಯಾಗಿರಬೇಕು. ಈ ಹಂತವನ್ನು ಸ್ಪಂಜು ಪ್ರಾಣಿಗಳಲ್ಲಿ ಹಾಗೂ ಕುಟುಕು ಕಣವಂತಗಳಲ್ಲಿ (ಸೀಲೆಂಟರೇಟ) ಕಾಣಬಹುದು. ತರುವಾಯ ನಡುಚರ್ಮವೊಂದು (ಮೀಸೊಡರ್ಮ್) ಹೊರಚರ್ಮ ಮತ್ತು ಒಳಚರ್ಮಗಳ ಮಧ್ಯೆ ಬೆಳೆದು ಪ್ರಾಣಿಗಳು ಮೂರು ಪದರಗಳುಳ್ಳ ಶರೀರವನ್ನು ಪಡೆಯುವಂತಾಗಿರಬೇಕು. ನಡುಚರ್ಮದಿಂದ ಹಲವಾರು ಅಂಗಗಳು ರೂಪುಗೊಳ್ಳುವುದು. ಮಾಂಸಖಂಡ, ಪರಿಚಲನಾಂಗ, ವಿಸರ್ಜನಾಂಗ, ಪ್ರಜನನಾಂಗ, ಮುಂತಾದವು ಮಧ್ಯಚರ್ಮದಿಂದ, ಹೊರಚರ್ಮದಿಂದ ಚರ್ಮ, ನರಮಂಡಲ ಹಾಗೂ ಅದಕ್ಕೆ ಸಂಬಂಧಿಸಿದ ಅಂಗಗಳೂ ಒಳಚರ್ಮದಿಂದ ಅನ್ನನಾಳವೂ ರೂಪುಗೊಳ್ಳುತ್ತದೆ. ಚಪ್ಪಟೆಹುಳುಗಳು ಈ ಹಂತದಲ್ಲಿರುವ ಪ್ರಾಣಿಗಳು. ಚರ್ಮ ಮತ್ತು ಅನ್ನನಾಳದ ಮಧ್ಯೆ ಅವಕಾಶವೊಂದು ರಚಿತವಾಗಿ ಈ ಅವಕಾಶದಲ್ಲಿ ಹಲವು ಮುಖ್ಯ ಅಂಗಗಳು ಸೇರಿಕೊಂಡಿವೆ. ಇದರೊಂದಿಗೆ ಶರೀರ ವಲಯಗಳಾಗಿ ವಿಭಾಗಗೊಂಡಿದೆ. ವಲಯವಂತ, ಸಂಧಿಪದಿ, ಮೃದ್ವಂಗಿ ಮತ್ತು ಕಂಟಕಚರ್ಮಿಗಳು (ಎಕೈನೋಡರ್ಮೇಟ) ಈ ಗುಂಪಿಗೆ ಸೇರಿದ ಪ್ರಾಣಿಗಳು. ಈ ಜೀವಿಗಳು ಇನ್ನೂ ಸಂಕೀರ್ಣಗೊಳ್ಳುತ್ತಾ ಹೋಗಿ ಬೆನ್ನೆಲುಬನ್ನು ಪಡೆದು ಕಶೇರುಕಗಳ ವಿಕಾಸಕ್ಕೆ ಹಾದಿಮಾಡಿಕೊಟ್ಟಿದೆ.
ಬಹುತೇಕ ಎಲ್ಲ ಪ್ರಾಣಿಗಳು ಯಾವುದೋ ರೂಪದ ಲೈಂಗಿಕ ಸಂತಾನೋತ್ಪತ್ತಿಯನ್ನು ಬಳಸಿಕೊಳ್ಳುತ್ತವೆ.[12][13] ಅವು ಅರೆವಿದಳನದಿಂದ ಅಗುಣಿತ ಜಂಪತಿಗಳನ್ನು ಉತ್ಪಾದಿಸುತ್ತವೆ; ಹೆಚ್ಚು ಚಿಕ್ಕದಾದ, ಚಲನಶೀಲ ಜಂಪತಿಗಳು ರೇತ್ರಾಣು ಮತ್ತು ಹೆಚ್ಚು ದೊಡ್ಡದಾದ ಚಲನರಹಿತ ಜಂಪತಿಗಳು ಅಂಡಾಣು ಎಂದು ಕರೆಯಲ್ಪಡುತ್ತವೆ.[14][15] ಅವು ಒಂದುಗೂಡಿ ಯುಗ್ಮಜಗಳನ್ನು ರೂಪಿಸುತ್ತವೆ.[16] ಇವು ಕೋಶ ವಿಭಜನೆಯ ಮೂಲಕ ಬ್ಲಾಸ್ಟುಲಾ ಎಂಬ ಟೊಳ್ಳಾದ ಗೋಳವಾಗಿ ಬೆಳೆಯುತ್ತವೆ. ಸ್ಪಂಜುಗಳಲ್ಲಿ, ಬ್ಲಾಸ್ಟುಲಾ ಡಿಂಬಗಳು ಹೊಸ ಸ್ಥಳಕ್ಕೆ ಈಜಿ, ಸಮುದ್ರತಳಕ್ಕೆ ಅಂಟಿಕೊಂಡು ಹೊಸ ಸ್ಪಂಜಾಗಿ ಬೆಳೆಯುತ್ತವೆ.[17] ಬಹುತೇಕ ಇತರ ಗುಂಪುಗಳಲ್ಲಿ, ಬ್ಲಾಸ್ಟುಲಾ ಹೆಚ್ಚು ಸಂಕೀರ್ಣವಾದ ಮರುಜೋಡಣೆಗೆ ಒಳಗಾಗುತ್ತದೆ.[18] ಮೊದಲು ಅದು ಜೀರ್ಣ ಕೋಶ ಮತ್ತು ಎರಡು ಪ್ರತ್ಯೇಕ ಅಂಕುರ ಪದರಗಳಾದ ಬಾಹ್ಯ ಕೋಶಸ್ತರ ಮತ್ತು ಒಳಕೋಶಪದರಗಳುಳ್ಳ ಗ್ಯಾಸ್ಟ್ರುಲಾವನ್ನು ರೂಪಿಸಲು ಮಡಚಿಕೊಳ್ಳುತ್ತದೆ.[19] ಬಹುತೇಕ ಸಂದರ್ಭಗಳಲ್ಲಿ, ಮೂರನೇ ಅಂಕುರಪದರವಾದ ಮಧ್ಯಪದರವೂ ಅವುಗಳ ನಡುವೆ ಬೆಳೆಯುತ್ತದೆ.[20] ಹೊರಚರ್ಮ (ಎಕ್ಟೋಡರ್ಮ್) ವಾತಾವರಣದ ಏರಿಳಿತಗಳಿಂದ ರಕ್ಷಣೆಯನ್ನೂ ನೀಡಲು ಹಾಗೂ ಜ್ಞಾನವಾಹಕ ಅಂಗವಾಗಿಯೂ ಕೆಲಸ ಮಾಡುತ್ತದೆ. ಒಳಚರ್ಮ (ಎಂಡೊಡರ್ಮ್) ಪಚನಾಂಗವಾಗಿ ಮಾರ್ಪಾಡಾಗಿದೆ. ನಡುಚರ್ಮ (ಮೀಸೊಡರ್ಮ್) ವಿಸರ್ಜನಾಂಗ, ಪರಿಚಲನಾಂಗ ಹಾಗೂ ಪ್ರಜನನಾಂಗಗಳಾಗುತ್ತವೆ. ನಂತರ ಅಂಗಾಂಶಗಳು ಮತ್ತು ಅಂಗಗಳನ್ನು ರೂಪಿಸಲು ಈ ಅಂಕುರಪದರಗಳು ವಿಭೇದನಗೊಳ್ಳುತ್ತವೆ.[21]
ನಿಶೇಚಿತ ಅಂಡ ಅಥವಾ ಜೈಗೋಟು ಒಂದೇ ಕೋಶವಾಗಿದ್ದು ವಿಭಜನೆಗೊಳ್ಳುತ್ತ ಹಂತಹಂತವಾಗಿ ಬೆಳೆಯುತ್ತ ರೂಪದಲ್ಲಿ ಬದಲಾವಣೆ ಹೊಂದಿ ಪ್ರಬುದ್ಧ ಮೆಟಜೋವ ಆಗುತ್ತದೆ. ಮೆಟಜೋವದ ದೇಹ ಕಾಯಭಾಗ ಮತ್ತು ಲಿಂಗಭಾಗ ಅಥವಾ ಜನನಭಾಗ ಎಂದು ವಿಭೇದನೆಗೊಂಡಿರುತ್ತದೆ. ಕಾಯಭಾಗ ಮತ್ತು ಲಿಂಗಭಾಗ ಹಲವಾರು ಜೈವಿಕ ಕ್ರಿಯೆಗಳನ್ನೊಳಗೊಂಡು ನಿರ್ದಿಷ್ಟಕಾಲದ ತನಕ ಕೆಲಸಮಾಡಿ ಅನಂತರ ಸಾಯುತ್ತದೆ. ಲಿಂಗಭಾಗ ಕಾಯದ ಭಾಗದ ಮೇಲೆ ಪರತಂತ್ರ ಜೀವನವನ್ನು ನಡೆಸುತ್ತಿದ್ದು ನಿಯಮಿತಕಾಲದಲ್ಲಿ ಆಯಾ ಜೀವಿಗಳ ಹಲವಾರು ಪ್ರತಿಗಳನ್ನು ತಯಾರಿಸುತ್ತದೆ. ಒಂದು ದೃಷ್ಟಿಯಲ್ಲಿ ಲಿಂಗಭಾಗ ಚಿರಂಜೀವಿ.
ಲೈಂಗಿಕ ಸಂತಾನೋತ್ಪತ್ತಿಯ ಅವಧಿಯಲ್ಲಿ ನಿಕಟ ಸಂಬಂಧಿಯೊಂದಿಗೆ ಕೂಡುವ ಪುನರಾವರ್ತಿತ ನಿದರ್ಶನಗಳು ಸಾಮಾನ್ಯವಾಗಿ ಜೀವಿಗಳೊಳಗೆ ಅಂತಸ್ಸಂಬಂಧ ಅವನತಿಗೆ ಕಾರಣವಾಗುತ್ತದೆ. ಇದಕ್ಕೆ ಹಾನಿಕಾರಕ ಅಪ್ರಭಾವಿ ಗುಣಲಕ್ಷಣಗಳ ಹೆಚ್ಚಿದ ವ್ಯಾಪನೆ ಕಾರಣವಾಗಿದೆ.[22][23] ನಿಕಟ ಅಂತಸ್ಸಂಬಂಧವನ್ನು ತಪ್ಪಿಸಲು ಪ್ರಾಣಿಗಳು ಹಲವಾರು ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸಿಕೊಂಡಿವೆ.[24]
ಕೆಲವು ಪ್ರಾಣಿಗಳು ಅಲೈಂಗಿಕ ಸಂತಾನೋತ್ಪತ್ತಿ ಮಾಡಿಕೊಳ್ಳಲು ಸಮರ್ಥವಾಗಿವೆ. ಇದು ಸಾಮಾನ್ಯವಾಗಿ ಪೋಷಕರ ಅನುವಂಶಿಕ ತದ್ರೂಪಿಗೆ ಕಾರಣವಾಗುತ್ತದೆ. ಇದು ವಿಘಟನೆಯ ಮೂಲಕ; ಹೈಡ್ರಾ ಮತ್ತು ಇತರ ಸಿನಿಡೇರಿಯನ್ಗಳಲ್ಲಿ ನಡೆಯುವ ಮೊಳಕೆಯೊಡೆಯುವಿಕೆ ಮೂಲಕ; ಅಥವಾ ಗಿಡಹೇನುಗಳಲ್ಲಿ ನಡೆಯುವ ಅನಿಷೇಕಜನನದ (ಇದರಲ್ಲಿ ಫಲವತ್ತಾದ ಮೊಟ್ಟೆಗಳು ಸಂಭೋಗವಿಲ್ಲದೆ ಉತ್ಪತ್ತಿಯಾಗುತ್ತವೆ) ಮೂಲಕ ನಡೆಯಬಹುದು.[25][26]
ಮಾಂಸಾಹಾರಿಗಳು, ಸಸ್ಯಾಹಾರಿಗಳು, ಸರ್ವಭಕ್ಷಕಗಳು, ಶೀರ್ಣಿತವಸ್ತುಭಕ್ಷಿಗಳು,[27] ಮತ್ತು ಪರಾವಲಂಬಿಗಳು[28] ಸೇರಿದಂತೆ ಅವು ಸಾವಯವ ವಸ್ತುಗಳನ್ನು ಹೇಗೆ ಪಡೆಯುತ್ತವೆ ಅಥವಾ ಸೇವಿಸುತ್ತವೆ ಎಂಬುದರ ಆಧಾರದ ಮೇಲೆ ಪ್ರಾಣಿಗಳನ್ನು ಪರಿಸರ ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಪ್ರಾಣಿಗಳ ನಡುವಿನ ಅಂತರಕ್ರಿಯೆಗಳು ಸಂಕೀರ್ಣ ಆಹಾರ ಜಾಲಗಳನ್ನು ರೂಪಿಸುತ್ತವೆ. ಪರಭಕ್ಷಕವು ಮತ್ತೊಂದು ಜೀವಿಯನ್ನು ತಿನ್ನುತ್ತದೆ (ಅದರ ಬೇಟೆ ಎಂದು ಕರೆಯಲ್ಪಡುತ್ತದೆ).[29] ಪರಸ್ಪರರ ಮೇಲೆ ಹೇರಲಾದ ಆಯ್ದ ಒತ್ತಡಗಳು ಪರಭಕ್ಷಕ ಪ್ರಾಣಿ ಮತ್ತು ಬೇಟೆ ಪ್ರಾಣಿ ನಡುವೆ ವಿಕಸನೀಯ ಶಸ್ತ್ರಾಸ್ತ್ರ ಸ್ಪರ್ಧೆಗೆ ಕಾರಣವಾಗುತ್ತವೆ.
ಬಹುತೇಕ ಪ್ರಾಣಿಗಳು ದ್ಯುತಿಸಂಶ್ಲೇಷಣೆಯ ಮೂಲಕ ಸಸ್ಯಗಳು ಉತ್ಪಾದಿಸುವ ಜೀವರಾಶಿ ಮತ್ತು ಶಕ್ತಿಯನ್ನು ಅವಲಂಬಿಸಿವೆ. ಸಸ್ಯಾಹಾರಿಗಳು ನೇರವಾಗಿ ಸಸ್ಯ ಪದಾರ್ಥಗಳನ್ನು ತಿನ್ನುತ್ತವೆ. ಆದರೆ ಮಾಂಸಾಹಾರಿಗಳು ಮತ್ತು ಹೆಚ್ಚಿನ ಪೋಷಕ ಮಟ್ಟಗಳಲ್ಲಿರುವ ಪ್ರಾಣಿಗಳು ಇತರ ಪ್ರಾಣಿಗಳನ್ನು ತಿನ್ನುವ ಮೂಲಕ ಪರೋಕ್ಷವಾಗಿ ಅದನ್ನು ಪಡೆದುಕೊಳ್ಳುತ್ತವೆ. ಪ್ರಾಣಿಗಳು ಕಾರ್ಬೋಹೈಡ್ರೇಟ್ಗಳು, ಲಿಪಿಡ್ಗಳು, ಪ್ರೋಟೀನ್ಗಳು ಮತ್ತು ಇತರ ಜೈವಿಕ ಅಣುಗಳನ್ನು ಉತ್ಕರ್ಷಿಸುತ್ತವೆ. ಇದು ಪ್ರಾಣಿಗಳಿಗೆ ಬೆಳೆಯಲು ಮತ್ತು ಚಲನೆಯಂತಹ ಜೈವಿಕ ಪ್ರಕ್ರಿಯೆಗಳನ್ನು ನಡೆಸಲು ಅನುವು ಮಾಡಿಕೊಡುತ್ತದೆ.[30][31][32] ಬೆಳಕಿಲ್ಲದ ಸಮುದ್ರದ ತಳದ ಮೇಲಿನ ಜಲೋಷ್ಣೀಯ ದ್ವಾರಗಳು ಮತ್ತು ಶೀತ ಒಸರು ನೆಲಗಳ ಹತ್ತಿರದಲ್ಲಿ ವಾಸಿಸುವ ಪ್ರಾಣಿಗಳು ಈ ಸ್ಥಳಗಳಲ್ಲಿ ರಾಸಾಯನಿಕ ಸಂಶ್ಲೇಷಣೆಯ ಮೂಲಕ ಉತ್ಪತ್ತಿಯಾದ (ಹೈಡ್ರೋಜನ್ ಸಲ್ಫೈಡ್ನಂತಹ ಅಜೈವಿಕ ಸಂಯುಕ್ತಗಳನ್ನು ಉತ್ಕರ್ಷಿಸುವ ಮೂಲಕ) ಆರ್ಕಿಯಾ ಮತ್ತು ಬ್ಯಾಕ್ಟೀರಿಯಾದ ಸಾವಯವ ಪದಾರ್ಥವನ್ನು ಸೇವಿಸುತ್ತವೆ.[33]
ಪ್ರಾಣಿಗಳು ಮೂಲತಃ ಸಮುದ್ರದಲ್ಲಿ ವಿಕಸನಗೊಂಡವು. ಸಂಧಿಪದಿಗಳ ಪೀಳಿಗೆಗಳು ಭೂ ಸಸ್ಯಗಳಂತೆಯೇ ಸುಮಾರು ಅದೇ ಸಮಯದಲ್ಲಿ ಭೂಮಿಯಲ್ಲಿ ವಲಸೆ ಹೂಡಿದವು (ಬಹುಶಃ ೫೧೦ ಮತ್ತು ೪೭೧ ದಶಲಕ್ಷ ವರ್ಷಗಳ ಹಿಂದೆ, ನಂತರದ ಕ್ಯಾಂಬ್ರಿಯನ್ ಅಥವಾ ಮುಂಚಿನ ಆರ್ಡೋವಿಶಿಯನ್ ಅವಧಿಯಲ್ಲಿ).[34] ಹಾಲೆಗಳಿರುವ ಈಜುರೆಕ್ಕೆಯುಳ ಮೀನಾದ ಟಿಕ್ಟಾಲಿಕ್ನಂತಹ ಕಶೇರುಕಗಳು ಸುಮಾರು ೩೭೫ ದಶಲಕ್ಷ ವರ್ಷಗಳ ಹಿಂದೆ, ನಂತರದ ಡೆವೊನಿಯನ್ ಕಲ್ಪದಲ್ಲಿ ಭೂಮಿಗೆ ಚಲಿಸಲು ಪ್ರಾರಂಭಿಸಿದವು.[35][36][37] ಉಪ್ಪು ನೀರು, ಜಲೋಷ್ಣೀಯ ದ್ವಾರಗಳು, ಸಿಹಿ ನೀರು, ಬಿಸಿನೀರಿನ ಬುಗ್ಗೆಗಳು, ಜೌಗು ಪ್ರದೇಶಗಳು, ಕಾಡುಗಳು, ಹುಲ್ಲುಗಾವಲುಗಳು, ಮರುಭೂಮಿಗಳು, ಆಕಾಶ ಮತ್ತು ಇತರ ಪ್ರಾಣಿಗಳು, ಸಸ್ಯಗಳು, ಶಿಲೀಂಧ್ರಗಳು ಹಾಗೂ ಬಂಡೆಗಳ ಒಳಭಾಗ ಸೇರಿದಂತೆ ಭೂಮಿಯ ಎಲ್ಲ ಆವಾಸಸ್ಥಾನಗಳು ಮತ್ತು ಸೂಕ್ಷ್ಮ ಆವಾಸಸ್ಥಾನಗಳಲ್ಲಿ ಪ್ರಾಣಿಗಳು ನೆಲೆಸುತ್ತವೆ.[38][39] ಆದರೆ ಪ್ರಾಣಿಗಳು ವಿಶೇಷವಾಗಿ ಶಾಖ ಸಹಿಷ್ಣುವಾಗಿಲ್ಲ. ಅವುಗಳಲ್ಲಿ ಕೆಲವೇ ಕೆಲವು ೫೦°C ಕ್ಕಿಂತ ಹೆಚ್ಚಿನ ಸ್ಥಿರ ತಾಪಮಾನದಲ್ಲಿ ಬದುಕಬಲ್ಲವು.[40] ಕೆಲವೇ ಕೆಲವು ಪ್ರಾಣಿ ಪ್ರಭೇದಗಳು (ಬಹುತೇಕವಾಗಿ ನೆಮಟೋಡ್ಗಳು) ಅಂಟಾರ್ಕ್ಟಿಕಾ ಖಂಡದ ಅತ್ಯಂತ ತೀವ್ರವಾದ ಶೀತ ಮರುಭೂಮಿಗಳಲ್ಲಿ ವಾಸಿಸುತ್ತವೆ.[41]
ಅಭಿಜಾತ ಯುಗದಲ್ಲಿ, ಅರಿಸ್ಟಾಟಲ್ ತನ್ನ ಸ್ವಂತ ಅವಲೋಕನಗಳ ಆಧಾರದ ಮೇಲೆ ಪ್ರಾಣಿಗಳನ್ನು ರಕ್ತ ಹೊಂದಿರುವ (ಸರಿಸುಮಾರು, ಕಶೇರುಕಗಳು) ಮತ್ತು ಹೊಂದಿಲ್ಲದ ಎಂದು ವಿಂಗಡಿಸಿದನು. ನಂತರ ಪ್ರಾಣಿಗಳನ್ನು ಒಂದು ಶ್ರೇಣಿಯ ಮೇಲೆ ಜೋಡಿಸಲಾಯಿತು, ಮನುಷ್ಯರಿಂದ (ರಕ್ತ, ೨ ಕಾಲುಗಳು, ವಿವೇಚನಾಯುಕ್ತ ಚೇತನವುಳ್ಳ) ಹಿಡಿದು ಕೆಳಗೆ ಜರಾಯುಜ ಚತುಷ್ಪಾದಿಗಳನ್ನು (ರಕ್ತ, ೪ ಕಾಲುಗಳು, ಸೂಕ್ಷ್ಮ ಚೇತನವುಳ್ಳ) ಹಿಡಿದು ಕಠಿಣಚರ್ಮಿಗಳಂತಹ ಇತರ ಗುಂಪುಗಳವರೆಗೆ (ರಕ್ತವಿಲ್ಲದ, ಅನೇಕ ಕಾಲುಗಳು, ಸೂಕ್ಷ್ಮ ಚೇತನವುಳ್ಳ).
೧೭೫೮ ರಲ್ಲಿ, ಕಾರ್ಲ್ ಲಿನೇಯಸ್ ತನ್ನ ಸಿಸ್ಟಮಾ ನ್ಯಾಚುರೇನಲ್ಲಿ ಮೊದಲ ಶ್ರೇಣೀಕೃತ ವರ್ಗೀಕರಣವನ್ನು ರಚಿಸಿದನು.[42][43] ಅವನ ಮೂಲ ಯೋಜನೆಯಲ್ಲಿ, ಪ್ರಾಣಿ ಸಾಮ್ರಾಜ್ಯ ಮೂರು ಸಾಮ್ರಾಜ್ಯಗಳ ಪೈಕಿ ಒಂದಾಗಿತ್ತು, ಪ್ರಾಣಿಗಳನ್ನು ವರ್ಮಿಸ್, ಇನ್ಸೆಕ್ಟಾ, ಪಿಸೀಸ್, ಆಂಫೀಬಿಯಾ, ಏವೀಸ್ ಮತ್ತು ಮಮೇಲಿಯಾ ಎಂಬ ವರ್ಗಗಳಾಗಿ ವಿಂಗಡಿಸಲಾಗಿತ್ತು. ಅಂದಿನಿಂದ ಕೊನೆಯ ನಾಲ್ಕನ್ನು ಒಂದೇ ವಿಭಾಗವಾದ ಕಾರ್ಡೇಟಾಗೆ ಸೇರಿಸಲಾಗಿದೆ. ಆದರೆ ಅವನ ಇನ್ಸೆಕ್ಟಾ (ಇದರಲ್ಲಿ ಕಠಿಣಚರ್ಮಿಗಳು ಮತ್ತು ಅಷ್ಟಪಾದಿಗಳು ಸೇರಿದ್ದವು) ಮತ್ತು ವರ್ಮಿಸ್ಗಳನ್ನು ಮರುಹೆಸರಿಸಲಾಗಿದೆ ಅಥವಾ ವಿಭಜಿಸಲಾಗಿದೆ. ಈ ಪ್ರಕ್ರಿಯೆಯನ್ನು ೧೭೯೩ ರಲ್ಲಿ ಜೀನ್-ಬ್ಯಾಪ್ಟಿಸ್ಟ್ ಡ ಲಾಮಾರ್ಕ್ ಪ್ರಾರಂಭಿಸಿದರು. ಅವರು ವರ್ಮಿಸ್ ಅನ್ನು ಅವ್ಯವಸ್ಥೆಯ ಸ್ಥಿತಿ ಎಂದು ಕರೆದರು ಮತ್ತು ಈ ಗುಂಪನ್ನು ಮೂರು ಹೊಸ ವಿಭಾಗಗಳಾಗಿ ವಿಭಜಿಸಿದರು. ಅವುಗಳೆಂದರೆ ಹುಳುಗಳು, ಕಂಟಕಚರ್ಮಿಗಳು ಮತ್ತು ಪಾಲಿಪ್ಗಳು (ಇದು ಹವಳಗಳು ಮತ್ತು ಅಂಬಲಿ ಮೀನುಗಳನ್ನು ಒಳಗೊಂಡಿತ್ತು). ೧೮೦೯ ರ ಹೊತ್ತಿಗೆ, ತನ್ನ ಫಿಲಾಸಫಿ ಝೂಲಾಜಿಕ್ನಲ್ಲಿ, ಲಾಮಾರ್ಕ್ ಕಶೇರುಕಗಳ (ಅದರಲ್ಲಿ ಅವನು ಇನ್ನೂ ೪ ವಿಭಾಗಗಳನ್ನು ಹೊಂದಿದ್ದನು: ಸಸ್ತನಿಗಳು, ಪಕ್ಷಿಗಳು, ಸರೀಸೃಪಗಳು ಮತ್ತು ಮೀನುಗಳು) ಮತ್ತು ಮೃದ್ವಂಗಿಗಳ ಹೊರತಾಗಿ ೯ ವಿಭಾಗಗಳನ್ನು ಸೃಷ್ಟಿಸಿದ್ದನು. ಅವುಗಳೆಂದರೆ ಕುಂತಲಪಾದಿಗಳು, ವಲಯವಂತ ಪ್ರಾಣಿಗಳು, ವಲ್ಕವಂತಪ್ರಾಣಿಗಳು, ಅಷ್ಟಪಾದಿಗಳು, ಹುಳುಗಳು, ಕೀಟಗಳು, ರೇಡಿಯೇಟ್ಗಳು, ಪಾಲಿಪ್ಗಳು ಮತ್ತು ಇನ್ಫ್ಯೂಸೋರಿಯನ್ಗಳು.[44]
ಪ್ರಾಚೀನ ಈಜಿಪ್ಟ್ನಲ್ಲಿರುವಂತೆ ಐತಿಹಾಸಿಕ ಮತ್ತು ಲ್ಯಾಸೋನಲ್ಲಿನ ಗುಹಾ ವರ್ಣಚಿತ್ರಗಳಲ್ಲಿರುವಂತೆ ಇತಿಹಾಸಪೂರ್ವ ಎರಡೂ ಸೇರಿದಂತೆ, ಅತಿ ಮುಂಚಿನ ಕಾಲದಿಂದಲೂ ಪ್ರಾಣಿಗಳು ಕಲೆಯ ವಿಷಯಗಳಾಗಿವೆ. ಕೀಟಗಳು, ಪಕ್ಷಿಗಳು ಮತ್ತು ಸಸ್ತನಿಗಳು ಸಾಹಿತ್ಯ ಮತ್ತು ಚಲನಚಿತ್ರಗಳಲ್ಲಿ ಪಾತ್ರಗಳನ್ನು ನಿರ್ವಹಿಸುತ್ತವೆ,[45][46] ಉದಾಹರಣೆಗೆ "ದೈತ್ಯ ಕೀಟ ಚಲನಚಿತ್ರ"ಗಳಲ್ಲಿ.[47][48][49][50]
ಕೀಟಗಳು[51] ಮತ್ತು ಸಸ್ತನಿಗಳು[52] ಸೇರಿದಂತೆ ಪ್ರಾಣಿಗಳು ಪುರಾಣ ಮತ್ತು ಧರ್ಮದಲ್ಲಿ ಕಂಡುಬರುತ್ತವೆ. ಜಪಾನ್ ಮತ್ತು ಯುರೋಪ್ ಎರಡರಲ್ಲೂ, ಚಿಟ್ಟೆಯನ್ನು ವ್ಯಕ್ತಿಯ ಚೇತನದ ಮೂರ್ತರೂಪವಾಗಿ ನೋಡಲಾಯಿತು.[53][54][55] ಪ್ರಾಚೀನ ಈಜಿಪ್ಟ್ನಲ್ಲಿ ಸ್ಕಾರಬ್ ಜೀರುಂಡೆ ಪವಿತ್ರವಾಗಿತ್ತು.[56] ಸಸ್ತನಿಗಳ ಪೈಕಿ, ದನಗಳು,[57] ಜಿಂಕೆಗಳು, ಕುದುರೆಗಳು,[58] ಸಿಂಹಗಳು,[59] ಬಾವಲಿಗಳು,[60] ಕರಡಿಗಳು,[61] ಮತ್ತು ತೋಳಗಳು[62] ಪುರಾಣಗಳು ಮತ್ತು ಆರಾಧನೆಯ ವಿಷಯಗಳಾಗಿವೆ. ಪಾಶ್ಚಾತ್ಯ ಮತ್ತು ಚೀನೀ ರಾಶಿಚಕ್ರದ ಚಿಹ್ನೆಗಳು ಪ್ರಾಣಿಗಳನ್ನು ಆಧರಿಸಿವೆ.[63][64]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.