ಚದುರಂಗ (ಆಟ)
ಎರಡು ಜನ ಆಡಬಹುದಾದ ಒಳಾಂಗಣ ಆಟ From Wikipedia, the free encyclopedia
ಎರಡು ಜನ ಆಡಬಹುದಾದ ಒಳಾಂಗಣ ಆಟ From Wikipedia, the free encyclopedia
ಚದುರಂಗ (ಚೆಸ್) ಇಬ್ಬರು ಆಟಗಾರರಿಂದ ಆಡಲ್ಪಡುವ ಒಂದು ಆಟ - ಇದನ್ನು ೬೪ ಚೌಕಗಳಿರುವ ಮಣೆಯ ಮೇಲೆ ಆಡಲಾಗುತ್ತದೆ. ಮಣೆಯ ಮೇಲಿನ ಚೌಕಗಳು ಕಪ್ಪು ಮತ್ತು ಬಿಳುಪು ಬಣ್ಣಗಳಿಂದ ಕೂಡಿದ್ದ ಒಂದು ಕಪ್ಪು ಮತ್ತು ಒಂದು ಬಿಳಿ - ಹೀಗೆ ಜೋಡಿಸಲ್ಪಟ್ಟಿರುತ್ತವೆ. ಆಟದ ಪ್ರಾರಂಭದಲ್ಲಿ ಪ್ರತಿ ಆಟಗಾರನ ಬಳಿ ೧೬ ಕಾಯಿಗಳಿರುತ್ತವೆ - ಒಂದು ರಾಜ, ಒಂದು ರಾಣಿ, ಎರಡು ಆನೆ, ಎರಡು ಕುದುರೆ, ಎರಡು ಒಂಟೆ ಮತ್ತು ಎಂಟು ಪದಾತಿಗಳು. ಒಬ್ಬ ಆಟಗಾರನ ಕಾಯಿಗಳು ಸಾಮಾನ್ಯವಾಗಿ ಬಿಳಿ ಬಣ್ಣದವಾಗಿದ್ದು ಇನ್ನೊಬ್ಬ ಆಟಗಾರನವು ಕಪ್ಪು ಬಣ್ಣದವಾಗಿರುತ್ತವೆ. ಪ್ರತಿ ಕಾಯಿಯೂ ಸಹ ವಿಶಿಷ್ಟ ರೀತಿಯಲ್ಲಿ ಚಲಿಸುತ್ತದೆ ಹಾಗೂ ಎದುರಾಳಿಯ ಕಾಯಿಗಳ ಮೇಲೆ ದಾಳಿ ನಡೆಸಬಲ್ಲುದು. ಆಟದ ಉದ್ದೇಶ ಎದುರಾಳಿಯ ರಾಜನ ಮೇಲೆ ದಾಳಿ ನಡೆಸಿ ರಾಜನಿಗೆ ತಪ್ಪಿಸಿಕೊಳ್ಲಲು ಯಾವ ಚೌಕಗಳೂ ಇಲ್ಲದ ಹಾಗೆ ಮಾಡುವುದು - ಇದಕ್ಕೆ ಚೆಕ್ಮೇಟ್ ಎಂದು ಕರೆಯಲಾಗುತ್ತದೆ.
ಚದುರಂಗ ಅದೃಷ್ಟವನ್ನು ಅವಲಂಬಿಸಿದ ಆಟವಲ್ಲ. ಶುದ್ಧವಾಗಿ ಆಟಗಾರರ ಆಲೋಚನೆ, ಯೋಜನಾ ಸಾಮರ್ಥ್ಯ ಮತ್ತು ಮುಂದಾಲೋಚನೆಗಳನ್ನು ಅವಲಂಬಿಸಿದ ಆಟ. ಹಾಗಿದ್ದೂ, ಈ ಆಟ ಎಷ್ಟು ಕ್ಲಿಷ್ಟವಾಗಿರಬಲ್ಲುದೆಂದರೆ ಒಂದು ಪಂದ್ಯದಲ್ಲಿ ಸಾಧ್ಯವಿರಬಹುದಾದ ಒಟ್ಟು ನಡೆಗಳ ಸಂಖ್ಯೆ ವಿಶ್ವದಲ್ಲಿರುವ ಎಲ್ಲ ಪರಮಾಣುಗಳ ಸಂಖ್ಯೆಗಿಂತಲೂ ಹೆಚ್ಚು ಎಂದು ಲೆಕ್ಕ ಹಾಕಲಾಗಿದೆ!
ಚದುರಂಗ, ಪ್ರಪಂಚದ ಅತ್ಯಂತ ಜನಪ್ರಿಯ ಆಟಗಳಲ್ಲಿಯೂ ಒಂದು. ಕೆಲವರ ವರ್ಣನೆಯಂತೆ, ಇದು ಕೇವಲ ಆಟವಾಗಿರದೆ ಇದೊಂದು "ಕಲೆ," "ವಿಜ್ಞಾನ," "ವರ್ಚುಯಲ್ ಯುದ್ಧಕಲೆ," ಮತ್ತು ಮಾನಸಿಕ ವ್ಯಾಯಾಮ ಎಂದು ವರ್ಣಿಸಿದವರೂ ಉಂಟು. ಮನರಂಜನೆಗಾಗಿ ಹಾಗೂ ಸ್ಪರ್ಧಾತ್ಮಕವಾಗಿ ಪ್ರಪಂಚದಾದ್ಯಂತ ಈ ಆಟವನ್ನು ಆಡಲಾಗುತ್ತದೆ. ಅಂತರಜಾಲ ತಾಣಗಳ ಮೂಲಕ, ಈಮೇಲ್ ಮೂಲಕ ಸಹ ಇದನ್ನು ಬಹಳಷ್ಟು ಆಡಲಾಗುತ್ತದೆ. ಚದುರಂಗ ಆಟಕ್ಕೆ ಸಂಬಂಧಪಟ್ಟ ಇತರ ಆಟಗಳೂ ಪ್ರಪಂಚದ ವಿವಿಧೆಡೆಗಳಲ್ಲಿ ಜನಪ್ರಿಯ - ಚೀನಾದ್ ಶಿಯಾಂಗ್-ಕಿ, ಜಪಾನ್ ನ್ ಶೋಗಿ ಮೊದಲಾದವು ಈ ಗುಂಪಿಗೆ ಸೇರುತ್ತವೆ.
ಚದುರಂಗ ಉಗಮಗೊಂಡದ್ದು ಎಲ್ಲಿ ಎಂಬುದರ ಬಗ್ಗೆ ಅನೇಕ ಊಹಾಪೋಹಗಳು ಇವೆ - ಗ್ರೀಸ್, ಭಾರತ, ಈಜಿಪ್ಟ್ ಮೊದಲಾದ ದೇಶಗಳಲ್ಲಿ ಉಗಮಗೊಂಡಿತು ಎಂದು ವಿವಿಧ ಚರಿತ್ರಕಾರರ ಅಭಿಪ್ರಾಯ. ಆದರೆ ಸಾಮಾನ್ಯವಾಗಿ ಒಪ್ಪಲ್ಪಟ್ಟಿರುವ ಸಿದ್ಧಾಂತದಂತೆ ಇಂದಿನ ಚದುರಂಗ ಆಟದ ಪೂರ್ವರೂಪದ ಉಗಮ ಸುಮಾರು ಕ್ರಿ.ಶ. ಆರನೇ ಶತಮಾನದ ಭಾರತದಲ್ಲಿ ಆಯಿತು. ಭಾರತದಿಂದ ೧೦ ನೇ ಶತಮಾನದ ನಂತರ ಮಧ್ಯಪೂರ್ವ ದೇಶಗಳ ಮೂಲಕ ಸ್ಪೇನ್ ಮತ್ತು ಇತರ ಯೂರೋಪಿಯನ್ ದೇಶಗಳತ್ತ ಹರಡಿತು ಎಂದು ಹೇಳಲಾಗುತ್ತದೆ.
೧೫ ನೆಯ ಶತಮಾನದಿಂದ ಇತ್ತೀಚೆಗೆ ಚದುರಂಗದ ನಿಯಮಗಳು ಸಾಕಷ್ಟು ಬದಲಾಗಿವೆ. ವಿವಿಧ ಕಾಯಿಗಳು ಚಲಿಸುವ ರೀತಿಯೂ ಸಹ ಸ್ವಲ್ಪ ಬದಲಾಗಿದೆ. ಮೊದಲು ಒಂಟೆ ತನ್ನ ನಾಲ್ಕು ಮೂಲೆಗಳ ದಿಕ್ಕಿನಲ್ಲಿ ಎರಡು ಚೌಕಗಳಷ್ಟು ಮಾತ್ರ ಚಲಿಸಬಹುದಾಗಿತ್ತು. ರಾಣಿ ಇದೇ ದಿಕ್ಕುಗಳಲ್ಲಿ ಒಂದೇ ಚೌಕ ಚಲಿಸುತ್ತಿತ್ತು. ೧೫ ನೆಯ ಶತಮಾನದ ಕೊನೆಗೆ ಇಟಲಿ ದೇಶದಿಂದ ಹೊಸ ನಿಯಮಗಳ ಪಾಲನೆ ಶುರುವಾಯಿತು. ಪದಾತಿಗಳು ತಮ್ಮ ಮೊದಲ ನಡೆಯಲ್ಲಿ ಒಂದು ಅಥವಾ ಎರಡು ಚೌಕಗಳನ್ನು ಕ್ರಮಿಸುವ ಸಾಮರ್ಥ್ಯ ಪಡೆದವು. ರಾಣಿ ಅತ್ಯಂತ ಹೆಚ್ಚು ಸಾಮರ್ಥ್ಯವುಳ್ಳ ಕಾಯಿಯಾಯಿತು. ಆನ್ ಪಾಸಾನ್, ಕ್ಯಾಸಲಿಂಗ್ ಮೊದಲಾದ ವಿಶಿಷ್ಟ ನಿಯಮಗಳು ಸಹ ಬೆಳಕಿಗೆ ಬಂದವು.
ಚೆಸ್ ಕಾಯಿಗಳ ಆಕಾರ ಸಹ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಈಗ ಸರ್ವೇಸಾಮಾನ್ಯವಾಗಿ ಉಪಯೋಗಿಸಲಾಗುವ ವಿನ್ಯಾಸವನ್ನು ಮೊದಲಿಗೆ ೧೮೪೯ ರಲ್ಲಿ ನಥಾನಿಯಲ್ ಕುಕ್ ಪ್ರಾರಂಭಿಸಿದ್ದು. ಆಗಿನ ಪ್ರಸಿದ್ಧ ಆಟಗಾರರಾದ ಹೊವರ್ಡ್ ಸ್ಟಾಂಟನ್[1] ಇದನ್ನು ಪ್ರಸಿದ್ಧಗೊಳಿಸಿದ್ದರಿಂದ ಈ ವಿನ್ಯಾಸಕ್ಕೆ "ಸ್ಟಾಂಟನ್ ವಿನ್ಯಾಸ" ಎಂದೇ ಕರೆಯಲಾಗುತ್ತದೆ. ಚೆಸ್ ಪಂದ್ಯಾವಳಿಗಳಲ್ಲಿ ಉಪಯೋಗಿಸಲ್ಪಡುವ ರೀತಿಯ ಚೆಸ್ ಮಣೆ, ಕಾಯಿಗಳು ಮತ್ತು ಗಡಿಯಾರವನ್ನು ಚಿತ್ರದಲ್ಲಿ ಕಾಣಬಹುದು. ಅಂತಾರಾಷ್ಟ್ರೀಯವಾಗಿ ಈ ಆಟದ ಅಧಿಕೃತ ಉಸ್ತುವಾರಿ ನಡೆಸುವ ಸಂಸ್ಥೆ ಫಿಡೆ (FIDE). ವಿವಿಧ ದೇಶಗಳಲ್ಲಿ ಸಹ ಅನೇಕ ರಾಷ್ಟ್ರೀಯ ಸಂಸ್ಥೆಗಳು ಅಸ್ತಿತ್ವದಲ್ಲಿವೆ.
ಇತ್ತೀಚೆಗೆ ಅತ್ಯಂತ ಸಮರ್ಥವಾಗಿ ಚದುರಂಗವನ್ನು ಆಡಬಲ್ಲ ಕಂಪ್ಯೂಟರ್ ತಂತ್ರಾಂಶಗಳನ್ನು ತಯಾರಿಸಲಾಗಿದೆ. ೮೦ ರ ದಶಕದವರೆಗೂ ಕೇವಲ ಕುತೂಹಲವೆಂದು ಪರಿಗಣಿಸಲಾಗಿದ್ದ ಇಂಥ ತಂತ್ರಾಂಶಗಳು, ಇತ್ತೀಚೆಗೆ ಪ್ರಸಿದ್ಧ ಚೆಸ್ ಆಟಗಾರರನ್ನು ಪಂದ್ಯಾವಳಿಗಳಲ್ಲಿ ಸೋಲಿಸುವಷ್ಟು ಸಾಮರ್ಥ್ಯವನ್ನು ಪಡೆದಿವೆ. ಎಲ್ಲ ಗಣಕಯಂತ್ರಗಳ ಮೇಲೂ ಕೆಲಸ ಮಾಡುವ ಕೆಲವು ಪ್ರಸಿದ್ಧ ತಂತ್ರಾಂಶಗಳೆಂದರೆ ಚೆಸ್ ಮಾಸ್ಟರ್, ಫ್ರಿಟ್ಜ್ (Fritz). ಇನ್ನು ಕೆಲವು ಕೇವಲ ಸಾಫ್ಟ್ವೇರ್ ತಂತ್ರಾಂಶಗಳಾಗಿರದೆ ಅನೇಕ ಸಿಪಿಯು ಗಳನ್ನೊಳಗೊಂಡ ಸಮರ್ಥ ಕಂಪ್ಯೂಟರ್ಗಳು - ಉದಾಹರಣೆಗಳೆಂದರೆ ಡೀಪ್ ಬ್ಲೂ, ಹೈಡ್ರಾ.
ಚದುರಂಗದಲ್ಲಿ ಭಾರತದ ಅತ್ಯಂತ ಪ್ರಸಿದ್ಧ ಆಟಗಾರರೆಂದರೆ ವಿಶ್ವನಾಥನ್ ಆನಂದ್. ಇತರ ಕೆಲವು ಪ್ರಸಿದ್ಧ ಭಾರತೀಯ ಆಟಗಾರರೆಂದರೆ ಮೀರ್ ಸುಲ್ತಾನ್ ಖಾನ್, ಪ್ರವೀಣ್ ತಿಪ್ಸೆ, ದಿಬ್ಯೇಂದು ಬರುವಾ, ಅಭಿಜಿತ್ ಕುಂಟೆ, ಕೃಷ್ಣನ್ ಶಶಿಕಿರಣ್, ಪೆಂಡ್ಯಾಲ ಹರಿಕೃಷ್ಣ, ವಿಜಯಲಕ್ಷ್ಮಿ, ಸ್ವಾತಿ ಘಾಟೆ, ಭಾಗ್ಯಶ್ರಿ ತಿಪ್ಸೆ ಇತ್ಯಾದಿ. ಪ್ರಪಂಚದ ಕೆಲ ಪ್ರಸಿದ್ಧ ಆಟಗಾರರಲ್ಲಿ ಕೆಲವರೆಂದರೆ ಪಾಲ್ ಮಾರ್ಫಿ (೧೮೩೭ - ೧೮೮೪), ವಿಲಹೆಲ್ಮ್ ಸ್ಟೀನಿಟ್ಜ್ (೧೮೩೬ - ೧೯೦೦), ಹೋಸೆ ರಾವುಲ್ ಕಾಪಾಬ್ಲಾಂಕಾ (೧೮೮೮ - ೧೯೪೨), ಬಾಬಿ ಫಿಷರ್, ಅನತೋಲಿ ಕಾರ್ಪೋವ್, ಗ್ಯಾರಿ ಕ್ಯಾಸ್ಪರೋವ್, ವ್ಲಾಡಿಮಿರ್ ಕ್ರಾಮ್ನಿಕ್, ಬೋರಿಸ್ ಗೆಲ್ಫಾಂಡ್, ಮೊದಲಾದವರು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.