From Wikipedia, the free encyclopedia
ವಿದ್ಯುತ್ ಹೃಲ್ಲೇಖನವು (ಇಸಿಜಿ ಅಥವಾ ಇಕೆಜಿ) ನಿಗದಿತ ಕಾಲದಲ್ಲಿ ಸೆರೆಹಿಡಿಯಲಾದ ಮತ್ತು ಚರ್ಮ ವಿದ್ಯುದ್ಧ್ರುವಗಳಿಂದ ದಾಖಲಿಸಲಾದ ಹೃದಯದ ವಿದ್ಯುತ್ ಕ್ರಿಯೆಯ ಎದೆಗಾಪಿನ ಮುಖಾಂತರದ ನಿರೂಪಣೆ.[1] ಇದು ವಿದ್ಯುತ್ ಹೃಲ್ಲೇಖನ ಯಂತ್ರದಿಂದ ಸೃಷ್ಟಿಸಲ್ಪಟ್ಟ ಒಂದು ಅನತಿಕ್ರಮಿತ ದಾಖಲೆ. ಹೃದಯದಲ್ಲಿ ವಿದ್ಯುತ್ ಪ್ರಚೋದನೆಗಳು ಹೃದ್ಕೋಷ್ಠ ಗ್ರಂಥಿಯಲ್ಲಿ ಉತ್ಪತ್ತಿಯಾಗಿ ಅಂತರ್ಗತ ವಾಹಕ ವ್ಯವಸ್ಥೆಯ ಮೂಲಕ ಹೃದಯದ ಸ್ನಾಯುವಿಗೆ ಸಂಚರಿಸುತ್ತವೆ.
ಮಾನವ ದೇಹದಲ್ಲಿನ ಸ್ನಾಯುಗಳಲ್ಲಿ ಹೃದಯ ಸ್ನಾಯು ಅಪೂರ್ವವಾದುದು. ಅದು ಪ್ರಾಸಬದ್ಧವಾಗಿ ಸ್ವಯಂ ಸಂಕುಚನಗೊಳ್ಳುವ ಶಕ್ತಿಯನ್ನು ಹೊಂದಿದೆ. ಸಂಕುಚನಕ್ಕಿಂತ ಪೂರ್ವಭಾವಿಯಾಗಿ ಹೃದಯದ ಮುಂಚಲನಾ ವ್ಯವಸ್ಥೆಯಲ್ಲಿ ಉದ್ಭವಿಸುವ ಆ ವೇಗಗಳು ಸ್ನಾಯುವಿನಾದ್ಯಂತ ಪಸರಿಸಿ ಹೋಗಿ ಆ ಸ್ನಾಯು ತಂತುಗಳನ್ನು ಪ್ರಚೋದಿಸುತ್ತದೆ.
ಹೃದಯ ಸ್ನಾಯುವಿನ ಉದ್ರೇಕ ಮತ್ತು ಅದರಿಂದಾಗುವ ಸಂಕುಚನ ಉಂಟುಮಾಡುವ ಚುರುಕುಬಲದ ಜೀವ ವಿದ್ಯುತ್ ಕ್ರಿಯೆಯು ದೇಹದ ಮೇಲ್ಮೈಗೆ ಸಾಗಿಸಲ್ಪಡುತ್ತದೆ. ಅದನ್ನು ವಿಶೇಷ ಕಾಗದದ ಮೇಲೆ ತಂತಿಯ ಗ್ಯಾಲ್ವನೋಮೀಟರನ್ನು ಬಳಸಿ ಸ್ಫುಟವಾಗಿ ದಾಖಲೆ ಮಾಡುವಲ್ಲಿ ವಿಲಿಯಂ ಐಂಥೋವನ್ 1901ರ ವೇಳೆಗೆ ಯಶಸ್ವಿಯಾದ.[2]
ದೇಹದ ಮೇಲ್ಮೈ ಮೇಲೆ ಹೃದಯದ ಗುಪ್ತ ಬಲವನ್ನು ಸಂಗ್ರಹಿಸಲು ಲೋಹ ಫಲಕಗಳ ಮುಂಚೂಣಿ (ಲೀಡ್) ಗಳನ್ನು ಎಲೆಕ್ಟ್ರೋಡ್ಗಳಂತೆ ಬಳಸಲಾಗುತ್ತದೆ. ಎಲೆಕ್ಟ್ರೋಡ್ಗಳನ್ನು ಬಲ-ಎಡ ಮುಂದೋಳು ಮತ್ತು ಎಡ ಕಾಲುಗಳಲ್ಲಿ ಧರಿಸಲಾಗುವುದು.[3][4][5] ಬಲಗಾಲಿನ ಎಲೆಕ್ಟ್ರೋಡ್ ಭೂಮಿಗೆ ಸಂಪರ್ಕ ಹೊಂದಿರುತ್ತದೆ. ಸಮಭುಜ ತ್ರಿಕೋನದ ಮೂರು ಪಾರ್ಶ್ವಕೋನಗಳನ್ನು ಜೊತೆಗೂಡಿಸಿ, ಅದರಿಂದ ಉದ್ಭವವಾಗುವ ವಿದ್ಯುಲ್ಲೇಖನ ಡೊಂಕುಗಳ ಸಹಾಯದಿಂದ ಹೃದಯದ ವಿದ್ಯುತ್ ಅಕ್ಷರೇಖೆಯನ್ನು ಎಳೆಯಲಾಗುತ್ತದೆ. ಎರಡು ಧ್ರುವದ ಮುಂಚೂಣಿಗಳನ್ನು ಲೀಡ್ 1,2 ಮತ್ತು 3 ಎಂದು ಕರೆಯಲಾಗುತ್ತದೆ. ಲೀಡ್ 1 ಬಲ ಮತ್ತು ಎಡ ತೋಳುಗಳ ಮಧ್ಯದ ಗಾತ್ರ ಬಲ ವ್ಯತ್ಯಾಸವನ್ನು, ಲೀಡ್ 2 ಎಡ ಕಾಲು ಮತ್ತು ಎಡ ತೋಳಿನ ಮಧ್ಯದ ವ್ಯತ್ಯಾಸವನ್ನು ಹಾಗೂ ಲೀಡ್ 3 ಎಡ ಕಾಲು - ಬಲ ತೋಳುಗಳ ಮಧ್ಯದ ವ್ಯತ್ಯಾಸವನ್ನು ಸೂಚಿಸುತ್ತದೆ. ಲೀಡ್ 2, ಲೀಡ್ 1 ಮತ್ತು ಲೀಡ್ 3 ಕ್ಕೆ ಸಮವೆನಿಸಿದೆ.
ಯಾವುದೇ ವಿದ್ಯುತ್ ಪ್ರವಾಹ ಹರಿದು ಹೋಗದಿರುವಾಗ ಅದು ರೇಖಾಚಿತ್ರದಲ್ಲಿ ನೇರವಾಗಿ ಆಧಾರ ರೇಖೆಯಂತೆ ಬರೆಯಲ್ಪಡುವುದು. ವಿದ್ಯುತ್ ಪ್ರವಾಹ ಉಪಕರಣವನ್ನು ತಲುಪಿದಾಗ ಅಲ್ಲಿನ ರೇಖೆಗಳು ವಕ್ರಕೊಂಡು ಅಕ್ಷ ರೇಖೆಯ ಮೇಲೆ ಇಲ್ಲವೆ ಕೆಳಗೆ ಸಾಗುತ್ತದೆ. ಆರೋಗ್ಯವಂತ ವ್ಯಕ್ತಿಯ ವಿದ್ಯುನ್ಲೇಖನ ಐದು ನಿಯತ ಡೊಂಕುಗಳನ್ನು ತೇಲಿಸುತ್ತದೆ. ಅವುಗಳನ್ನು ಪಿ. ಕ್ಯು. ಆರ್. ಎಸ್ ಮತ್ತು ಟಿ ಎಂಬ ಇಂಗ್ಲೀಷ್ ವರ್ಣಮಾಲೆಯ ಅಕ್ಷರಗಳಿಂದ ಕರೆಯಲಾಗುತ್ತದೆ.[6][7] ಬೇರೆ ಬೇರೆ ಡೊಂಕುಗಳು ಹೃದಯದ ಬೇರೆ ಬೇರೆ ಭಾಗಗಳ ಉದ್ರೇಕ ಮತ್ತು ಸಂಕುಚನಕ್ಕೆ ಸಂಬಂಧಿಸಿದೆ. ಪಿ ಅಲೆಯು ಹಜಾರದ ಸಂಕುಚನವನ್ನು ಸೂಚಿಸಿದರೆ. ಕ್ಯು ಆರ್ಎಸ್ಟಿ ಕುಕ್ಷಿಯ ಸಂಕುಚನವನ್ನು ಪ್ರತಿಫಲಿಸುತ್ತವೆ. ಮೇಲಕ್ಕೆ ಇಲ್ಲವೆ ಕೆಳಕ್ಕೆ ಸಾಗಿ ಹೋಗುವ ಈ ಅಲೆಗಳ ಎತ್ತರ ಅಥವಾ ಆಳವನ್ನು ಮಿಲಿವೋಲ್ಟಿನಿಂದ ಮತ್ತು ಅದರ ಕಾಲಾವಧಿಯನ್ನು ಸೆಕೆಂಡಿನಿಂದ ಅಳೆಯಲಾಗುವುದು.
ಈ ಬಗೆಯ ವಿದ್ಯುತ್ ಹೃದಯ ಚಿತ್ರಣದಿಂದ ಹೃದಯ ರೋಗಗಳಿಂದ ಉಂಟಾಗುವ ಬದಲಾವಣೆಗಳನ್ನು ತಿಳಿಯಲು ಬಹುಮುಖ್ಯ ರೋಗನಿದಾನ ಸಾಧನವಾಗಿ ಬಳಸಲಾಗುತ್ತಿದೆ. ಇ.ಸಿ.ಜಿ. ಎಂಬ ಎದೆ ಪಟ್ಟಿಯ ಮೂಲಕ ದೊಡ್ಡದಾದ ಹೃದಯ ಕುಕ್ಷಿ-ಹಜಾರ, ದಹನದಲ್ಲಿನ ವೈಪರೀತ್ಯಗಳು, ಮತ್ತು ಹೃದಯಾಘಾತದಿಂದ ಉಂಟಾದ ಹೃದಯಸ್ನಾಯು ನಿರ್ಜೀವಸ್ತುವನ್ನು ಗುರುತಿಸಬಹುದು.
ಹೃದಯ ಸಂಕುಚನಕ್ಕೆ ಮೊದಲು ಪ್ರಚೋದನೆ ದೊರೆಯುವುದು ಬಟವೆ ಹಜಾರ ಗಂಟಿನಲ್ಲಿ (ಸೈನೋ ಏಟ್ರಿಯಲ್ ನೋಡ್) ಉದ್ಭವಿಸಿದ ಆ ವೇಗಗಳಿಂದ ಅವು ಹಜಾರದ ಮೂಲಕ ಸಾಗಿ ಹಜಾರದ ಸಂಕುಚನವನ್ನುಂಟು ಮಾಡುತ್ತವೆ. ಆಗ ಪಿ ಎಂಬ ಧನಾತ್ಮಕ ಅಲೆ ಗೋಚರಿಸುವುದು. ನಂತರ ಕುಕ್ಷಿಯ ಸಂಕುಚನ. ಆಗ ಆರ್ ಎಂಬ ಧನಾತ್ಮಕ ಅತಿ ದೊಡ್ಡರೇಖೆ. ಅದರ ಪ್ರಾರಂಭ ಮತ್ತು ಕೊನೆಯಲ್ಲಿ ಚಿಕ್ಕ ಚಿಕ್ಕ ಋಣಾತ್ಮಕ ಕ್ಯು ಮತ್ತು ಎಸ್ ರೇಖೆಗಳು. ಹಜಾರದಿಂದ ಕುಕ್ಷಿಯ ವರೆಗಿನ ಸಂಕುಚನದಲ್ಲಿನ ಕಾಲಾವಧಿ 0.12 ರಿಂದ 0.2 ಸೆಕೆಂಡ್ಗಳು. ಸಂಕುಚನದ ನಂತರ ಹೃದಯ ಸ್ನಾಯುವಿನಲ್ಲಿ ಪುನರಪಿ ಶಕ್ತಿ ಸಂಚಯಕ್ಕೆ ಸಮಯಬೇಕು. ಆಗ ಎಸ್ ನಿಂದ ಗೆರೆ ಆಧಾರ ರೇಖೆಯ ಮೂಲಕ ಸಾಗಿ ಟಿ ಎಂ ಧನಾತ್ಮಕ ಅಲೆಯನ್ನುಂಟು ಮಾಡುವುದು. ಅದು ಕುಕ್ಷಿ ತನ್ನ ಚುರುಕು ಬಲವನ್ನು ಮತ್ತೆ ದೊರಕಿಸಿಕೊಂಡಿರುವುದನ್ನು ಸೂಚಿಸುತ್ತದೆ.
ವಿದ್ಯುತ್ ಹೃದಯ ಚಿತ್ರದ ರೇಖೆಗಳು ಹೃದಯ ಪುತ್ಸೊರೆಯಲ್ಲಿ ದ್ರವ ಸಂಚಯವಾದಾಗ ತೀರ ಚಿಕ್ಕ ಆಕೃತಿ ಪಡೆಯುತ್ತವೆ. ಕವಾಟ ಅಥವಾ ಸ್ನಾಯು ರೋಗಗಳ ಫಲವಾಗಿ ಕುಕ್ಷಿ ಹೀಚಬಹುದು ಇಲ್ಲವೆ ದೊಡ್ಡದಾಗಬಹುದು. ಅದು ಹೃದಯದ ಮೇಲೆ ಬೀರುವ ಒತ್ತಡವನ್ನು ಈ ರೇಖಾಚಿತ್ರಗಳು ತೋರಿಸುತ್ತವೆ. ಹೃದಯಕ್ಕೆ ಕಿರೀಟಕ ನಾಶಗಳಿಂದಾಗುವ ರಕ್ತ ಪೊರೈಕೆಗೆ ಧಕ್ಕೆಯುಂಟಾದರೆ ಅದು ಹೃದಯಕೊಲೆ ಅಥವಾ ಹೃದಯಾಘಾತಕ್ಕೆ ಎಡಮೂಲೆ ಕೆಡುವುದು. ಆಗ ಎಸ್-ಟಿ ರೇಖೆಯಲ್ಲಿ, ಕ್ಯು ಅಲೆಯಲ್ಲಿ ಬದಲಾವಣೆಗಳು ಗೋಚರಿಸುತ್ತವೆ. ಹೃದಯಕ್ಕಾದ ನಿರ್ಜೀವತ್ವ ಹೃದಯದ ಮುಂದಿನ ಭಿತ್ತಿಗೆ, ಇಲ್ಲವೆ ಹಿಂದಿನ ಭಿತ್ತಿಗೆ ಸೀಮಿತವಾಗಿರಬಹುದು. ಇಲ್ಲವೆ ಕುಕ್ಷಿ ನಡುವಣ ತೆರೆಯನ್ನು ಹಾಗೂ ಪಕ್ಕದ ಭಿತ್ತಿಯನ್ನು ಒಳಗೊಂಡಿರಬಹುದು. ಅದನ್ನು ಈ ರೇಖಾ ಚಿತ್ರಗಳು ದೃಢಪಡಿಸುತ್ತವೆ. ಆ ವೇಗಗಳ ದಹನವ್ಯವಸ್ಥೆಗೆ ಅಡ್ಡಿಯುಂಟಾದಾಗ ಇಲ್ಲವೆ ಆಕೃತಿ ತಲೆದೋರಿದಾಗ, ಹೃದಯದ ಪ್ರಾಸಗತಿ ಸ್ಪಂದನ ಅಡ್ಡಾದಿಡ್ಡಿಯಾಗುವುದು ಇಲ್ಲವೆ ತತ್ತರಿಸುವುದು. ಈ ಎಲ್ಲ ಬಗೆಯ ವೈಪರೀತ್ಯಗಳ ನಿದಾನದಲ್ಲಿ ಇ.ಸಿ.ಜಿ. ತುಂಬ ಮಹತ್ವದ ಪಾತ್ರವಹಿಸುತ್ತದೆ. ಶ್ವಾಸ ಹೃದಯರೋಗ ಮತ್ತು ಹೃದಯ ಸುತ್ತು ಪೊರೆ ಉರಿಯೂತದಿಂದ ಉಂಟಾದ ಬದಲಾವಣೆಗಳ ಅಭ್ಯಾಸಕ್ಕೆ ಈ ರೇಖಾಚಿತ್ರಗಳೂ ಉಪಯುಕ್ತ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.