Remove ads
From Wikipedia, the free encyclopedia
ಯುನೆಸ್ಕೋ ( ವಿಶ್ವಸಂಸ್ಥೆಯ ಸಾಂಸ್ಕೃತಿಕ ಅಂಗ) ವಿಶ್ವದ ಕೆಲವು ವಿಶಿಷ್ಟ ತಾಣಗಳನ್ನು ವಿಶ್ವ ಪರಂಪರೆಯ ತಾಣವಾಗಿ ಘೋಷಿಸುತ್ತದೆ. ಇಂತಹ ತಾಣಗಳು ಅರಣ್ಯ, ಪರ್ವತ, ಸರೋವರ, ಮರುಭೂಮಿ, ಸ್ಮಾರಕ, ಕಟ್ಟಡ, ಸಂಕೀರ್ಣ ಅಥವಾ ಒಂದು ನಗರವಾಗಿರಬಹುದು. ೨೧ ಸದಸ್ಯರಾಷ್ಟ್ರಗಳನ್ನೊಳಗೊಂಡ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಸಮಿತಿಯು ಇಂತಹ ತಾಣಗಳ ಅರ್ಹತೆಯನ್ನು ಅಳೆದು ಸೂಕ್ತವಾದಲ್ಲಿ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸುತ್ತದೆ. ಈ ಸಮಿತಿಯ ಸದಸ್ಯತ್ವವು ನಿಗದಿತ ಅವಧಿಯದಾಗಿದ್ದು ಸದಸ್ಯರಾಷ್ಟ್ರಗಳು ಬದಲಾಗುತ್ತಿರುತ್ತವೆ.
ವಿಶ್ವದ ಎಲ್ಲೆಡೆಯ ಅತಿ ಹೆಚ್ಚಿನ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಮಹತ್ವಗಳನ್ನು ಹೊಂದಿರುವ ತಾಣಗಳನ್ನು ಗುರುತಿಸಿ, ಪಟ್ಟಿಮಾಡಿ ಉಳಿಸಿಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕೆಲವು ಸಂದರ್ಭಗಳಲ್ಲಿ ಇಂತಹ ತಾಣಗಳ ರಕ್ಷಣೆಗಾಗಿ ವಿಶ್ವ ಪರಂಪರೆಯ ನಿಧಿಯಿಂದ ಆರ್ಥಿಕ ನೆರವು ಒದಗಿಸಲಾಗುವುದು. ನವೆಂಬರ್ ೧೬, ೧೯೭೨ರಲ್ಲಿ ಜಾರಿಗೆ ಬಂದ ಈ ಯೋಜನೆಯನ್ನು ಇದುವರೆಗೆ ೧೮೪ ರಾಷ್ಟ್ರಗಳು ಅನುಮೋದಿಸಿವೆ.
ಇಲ್ಲಿಯವರೆಗೆ ವಿಶ್ವದೆಲ್ಲೆಡೆಯ ಒಟ್ಟು ೮೫೧ ತಾಣಗಳನ್ನು ವಿಶ್ವ ಪರಂಪರೆಯ ತಾಣಗಳೆಂದು ಮಾನ್ಯತೆ ನೀಡಲಾಗಿದೆ. ಇವುಗಳ ಪೈಕಿ ೬೬೦ ಸಾಂಸ್ಕೃತಿಕ ನೆಲೆಗಳಾಗಿದ್ದರೆ ೧೬೬ ಪ್ರಾಕೃತಿಕ ತಾಣಗಳು ಮತ್ತು ೨೫ ಈ ಎರಡರ ಮಹತ್ವವನ್ನೂ ಹೊಂದಿವೆ. ಈ ೮೫೧ ತಾಣಗಳು ವಿಶ್ವ ೧೪೨ ರಾಷ್ಟ್ರಗಳಲ್ಲಿ ಹರಡಿವೆ.
ಪ್ರತಿ ವಿಶ್ವ ಪರಂಪರೆಯ ತಾಣವು ಆಯಾ ರಾಷ್ಟ್ರದ ಸ್ವತ್ತಾಗಿದ್ದರೂ ಅವುಗಳನ್ನು ಮುಂದಿನ ತಲೆಮಾರುಗಳಿಗಾಗಿ ಉಳಿಸಿಕೊಳ್ಳುವ ಜವಾಬ್ದಾರಿಯು ಸಮಸ್ತ ಪ್ರಪಂಚಕ್ಕೆ ಸೇರಿದುದಾಗಿರುತ್ತದೆ.
(ಸೂಚನೆ : ಯುನೆಸ್ಕೋ ವು ವಿಶ್ವಪರಂಪರೆಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ರಾಷ್ಟ್ರ ಎಂಬುದರ ಬದಲಾಗಿ State Party ಎಂಬ ನಾಮಧೇಯವನ್ನು ಬಳಸುತ್ತದೆ. ಇವೆರಡೂ ಒಂದೇ ಆಗಿದ್ದು ಈ ಲೇಖನದಲ್ಲಿ ರಾಷ್ಟ್ರ ಎಂಬ ಪದವನ್ನೇ ಬಳಸಲಾಗಿದೆ.)
೧೯೫೯ರಲ್ಲಿ ಈಜಿಪ್ಟ್ ದೇಶವು ನೈಲ್ ನದಿಗೆ ಅಡ್ಡಲಾಗಿ ಅಸ್ವಾನ್ ಉನ್ನತ ಆಣೆಕಟ್ಟನ್ನು ಕಟ್ಟಲು ನಿರ್ಧರಿಸಿತು. ಇದರ ಪರಿಣಾಮವಾಗಿ ಪ್ರಾಚೀನ ನಾಗರಿಕತೆಯ ಅಮೂಲ್ಯ ಸ್ಮಾರಕವಾಗಿದ್ದ ಅಬು_ಸಿಂಬೆಲ್ ನ ದೇಗುಲಗಳು ಆಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾಗುವ ಅಪಾಯವು ತಲೆದೋರಿತು. ಆಗ ಯುನೆಸ್ಕೋ ಈ ದೇವಾಲಯಗಳನ್ನು ಉಳಿಸಿಕೊಳ್ಳಲು ಯೋಜನೆಯೊಂದನ್ನು ಹುಟ್ಟುಹಾಕಿತು. ಈಜಿಪ್ಟ್ ಮತ್ತು ಸುಡಾನ್ ದೇಶಗಳ ಮನವಿಗೆ ವಿರೋಧವಾಗಿ, ಯುನೆಸ್ಕೋ ಅಬು ಸಿಂಬೆಲ್ ಮತ್ತು ಫಿಲೇ ಯ ದೇವಾಲಯಗಳನ್ನು ತಮ್ಮ ಮೂಲಸ್ಥಾನಗಳಿಂದ ಕಲ್ಲು ಕಲ್ಲುಗಳನ್ನಾಗಿ ಕೆಳಗಿಳಿಸಿ ನಂತರ ಎತ್ತರದ ಸ್ಥಳಗಳಲ್ಲಿ ಪುನರ್ಜೋಡಣೆ ಮಾಡಿಸಿತು.
ಈ ಯೋಜನೆಯ ಒಟ್ಟು ವೆಚ್ಚ ಅಂದಿಗೆ ಸುಮಾರು ೮೦ ಮಿಲಿಯನ್ ಡಾಲರ್ಗಳಷ್ಟು. ಇದರಲ್ಲಿ ಅರ್ಧದಷ್ಟು ಹಣವನ್ನು ಪ್ರಪಂಚದ ೫೦ ವಿವಿಧ ರಾಷ್ಟ್ರಗಳು ಕೊಡುಗೆಯಾಗಿ ನೀಡಿದುವು. ಈ ಯೋಜನೆಯ ಅದ್ಭುತ ಯಶಸ್ಸು ಯುನೆಸ್ಕೋ ವನ್ನು ವಿಶ್ವದ ಇತರ ಅಮೂಲ್ಯ ತಾಣಗಳನ್ನು ಉಳಿಸಿಕೊಳ್ಳಲು ಪ್ರೇರೇಪಿಸಿತು. ಇವುಗಳ ಪೈಕಿ ಇಟಲಿಯ ವೆನಿಸ್ , ಪಾಕಿಸ್ತಾನದ ಮೊಹೆಂಜೊ ದಾರೋ , ಇಂಡೋನೇಷ್ಯಾದ ಬೋರೋಬುಡೂರ್ ದೇವಾಲಯಗಳು ಸೇರಿವೆ. ನಂತರ ಯುನೆಸ್ಕೋ ವಿಶ್ವದ ಎಲ್ಲಾ ಪರಂಪರೆಯ ತಾಣಗಳನ್ನು ಉಳಿಸಿಕೊಳ್ಳುವ ಸಲುವಾಗಿ ಒಂದು ಸಾಮಾನ್ಯ ನಡಾವಳಿಯನ್ನು ರಚಿಸಲು ಮುಂದಾಯಿತು.
ಯು.ಎಸ್.ಎ. ವಿಶ್ವದ ಸಂಸ್ಕೃತಿಯ ರಕ್ಷಣೆ ಮತ್ತು ಪ್ರಕೃತಿಯ ರಕ್ಷಣೆಗಳನ್ನು ಒಂದೇ ಕಾರ್ಯಕ್ರಮದಡಿ ತರುವ ಬಗ್ಗೆ ಕೆಲಸವಾರಂಭಿಸಿತು. ೧೯೬೫ರ ಯು.ಎಸ್.ಎ ದ ಆಂತರಿಕ ಸಮ್ಮೇಳನವೊಂದು ವಿಶ್ವದ ಅದ್ಬುತ ಪ್ರಾಕೃತಿಕ ರಮ್ಯ ಸ್ಥಳಗಳು ಮತ್ತು ಸಾಂಸ್ಕೃತಿಕ ತಾಣಗಳನ್ನು ಜಗತ್ತಿನ ಇಂದಿನ ಮತ್ತು ಮುಂದಿನ ಎಲ್ಲಾ ನಾಗರಿಕರಿಗಾಗಿ ಉಳಿಸಿಕೊಳ್ಳುವ ಸಲುವಾಗಿ ಒಂದು ವಿಶ್ವ ಪರಂಪರೆಯ ದತ್ತಿ ಯೊಂದನ್ನು ಹುಟ್ಟುಹಾಕಲು ವಿಶ್ವಕ್ಕೆ ಕರೆನೀಡಿತು. ೧೯೬೮ರಲ್ಲಿ ಅಂತರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಸಂಘವು ಸಹ ಇಂತಹುದೇ ಯೋಜನೆಯನ್ನು ಮುಂದಿಕ್ಕಿ ೧೯೭೨ರಲ್ಲಿ ಸ್ವೀಡನ್ನಿನ ಸ್ಟಾಕ್ ಹೋಮ್ ನಲ್ಲಿ ೧೯೭೨ರಲ್ಲಿ ನಡೆದ ವಿಶಸಂಸ್ಥೆಯ ಪರಿಸರ ಕುರಿತಾದ ಸಮ್ಮೇಳನದಲ್ಲಿ ಮಂಡಿಸಲಾಯಿತು. ಜಗತ್ತಿನ ಹೆಚ್ಚಿನ ರಾಷ್ಟ್ರಗಳು ಇದನ್ನು ಒಪ್ಪಿ ಮುಂದೆ ನವೆಂಬರ್ ೧೬, ೧೯೭೨ರಲ್ಲಿ ಯುನೆಸ್ಕೋದ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು.
ವಿಶ್ವ ಪರಂಪರೆಯ ತಾಣವಾಗಿ ಒಂದು ತಾಣವು ಘೋಷಿಸಲ್ಪಡಬೇಕಾದರೆ ಒಂದು ದೀರ್ಘ ಪ್ರಕ್ರಿಯೆಯಿದೆ. ಒಂದು ರಾಷ್ಟ್ರವು ತನ್ನ ಎಲ್ಲಾ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಆಸ್ತಿಗಳ ಪಟ್ಟಿಯೊಂದನ್ನು ತಯಾರಿಸಬೇಕಾಗುವುದು. ಇದನ್ನು ತಾತ್ಕಾಲಿಕ ( ಟೆಂಟೆಟಿವ್) ಪಟ್ಟಿಯೆನ್ನುವರು. ಮುಂದೆ ಈ ಪಟ್ಟಿಯೊಳಗಿನ ತಾಣಗಳನ್ನು ಮಾತ್ರ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲು ನಾಮಕರಣ ಸಲ್ಲಿಸಬಹುದಾಗಿರುತ್ತದೆ. ಈ ಪಟ್ಟಿಯೊಳಗಿನ ತಾಣವೊಂದನ್ನು ಆ ದೇಶವು ನಾಮಕರಣ ಕಡತಕ್ಕೆ ಸೇರಿಸುವುದು. ಈ ನಾಮಕರಣಕ್ಕೆ ಸಂಬಂಧಿಸಿದಂತೆ ಅವಶ್ಯವಾದ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ಯುನೆಸ್ಕೋ ನೆರವಾಗುತ್ತದೆ. ಈ ನಾಮಕರಣ ಕಡತವು ತಾಣದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಮತ್ತು ದಾಖಲೆಗಳನ್ನು ಒಳಗೊಂಡಿರಬೇಕಾಗಿರುತ್ತದೆ.
ಈ ನಾಮಕರಣ ಕಡತವನ್ನು ಎರಡು ಬೇರೆಬೇರೆ ಸ್ವಾಯತ್ತ ಸಂಸ್ಥೆಗಳು ಅಧ್ಯಯನ ಮಾಡುವುವು. ಈ ಸಂಸ್ಥೆಗಳೆಂದರೆ - ಅಂತಾರಾಷ್ಟ್ರೀಯ ಸ್ಮಾರಕ ಮತ್ತು ತಾಣಗಳ ಸಮಿತಿ ಹಾಗೂ ವಿಶ್ವ ಸಂರಕ್ಷಣಾ ಸಂಘ. ಈ ಸಂಸ್ಥೆಗಳು ತಮ್ಮ ಅಧ್ಯಯನದ ವರದಿಯನ್ನು ಶಿಫಾರಸುಗಳೊಂದಿಗೆ ವಿಶ್ವ ಪರಂಪರಾ ಸಮಿತಿಗೆ ಸಲ್ಲಿಸುತ್ತವೆ. ವರ್ಷಕ್ಕೆ ಒಂದು ಬಾರಿ ಸಭೆ ಸೇರುವ ಈ ಸಮಿತಿಯು ನಾಮಕರಣಗೊಂಡ ತಾಣವನ್ನು ವಿಶ್ವ ಪರಂಪರಾ ಪಟ್ಟಿಗೆ ಸೇರಿಸಬೇಕೇ ಯಾ ಬೇಡವೇ ಎಂಬ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದು. ಕೆಲವೊಮ್ಮೆ ಈ ಬಗೆಗಿನ ನಿರ್ಧಾರವನ್ನು ಮುಂದೂಡಿ ತಾಣದ ಬಗ್ಗೆ ಇನ್ನೂ ಹೆಚ್ಚಿನ ಅಗತ್ಯ ಮಾಹಿತಿ ನೀಡುವಂತೆ ಆ ರಾಷ್ಟ್ರಕ್ಕೆ ತಿಳಿಸಲಾಗುತ್ತದೆ.
ಇಂದು ಯಾವುದೇ ತಾಣವು ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲ್ಪಡಬೇಕಾದರೆ ಒಟ್ಟು ಹತ್ತು ಮಾನದಂಡಗಳಿಂದ ಪರೀಕ್ಷೆಗೊಳಪಡುವುದು.
೨೦೦೪ರ ಅಂತ್ಯದವರೆಗೆ ಸಾಂಸ್ಕೃತಿಕ ಪರಂಪರೆಯನ್ನು ಆರು ಮಾನದಂಡಗಳಿಂದ ಹಾಗೂ ಪ್ರಾಕೃತಿಕ ಪರಂಪರೆಯನ್ನು ನಾಲ್ಕು ಮಾನದಂಡಗಳಿಂದ ಅಳೆಯಲಾಗುತ್ತಿತ್ತು. ೨೦೦೫ರಲ್ಲಿ ಈ ಪದ್ಧತಿಯನ್ನು ಮಾರ್ಪಡಿಸಿ ಒಟ್ಟು ಹತ್ತು ಅಂಶಗಳ ಅರ್ಹತಾಪಟ್ಟಿಯನ್ನು ತಯಾರಿಸಲಾಯಿತು. ನಾಮಕರಣಗೊಂಡ ತಾಣವು ಈ ಹತ್ತರ ಪೈಕಿ ಕನಿಷ್ಟ ಒಂದಾದರೂ ಅರ್ಹತೆಯನ್ನು ಹೊಂದಿದ್ದು "ವಿಶ್ವದ ಅಮೂಲ್ಯ ಆಸ್ತಿ" ಯಾಗಿರಬೇಕಾಗಿರುತ್ತದೆ.
ಸದ್ಯಕ್ಕೆ ಪ್ರಪಂಚದಲ್ಲಿ ೮೫೧ ವಿಶ್ವ ಪರಂಪರೆಯ ತಾಣಗಳಿವೆ. ಇವುಗಳನ್ನು ೫ ಭೌಗೋಳಿಕ ವಲಯಗಳ ಆಧಾರದ ಮೇಲೆ ಗುಂಪುಗೂಡಿಸಲಾಗಿದೆ. ಈ ವಲಯಗಳೆಂದರೆ : ಆಫ್ರಿಕಾ, ಅರಬ್ ರಾಷ್ಟ್ರಗಳು ( ಉತ್ತರ ಆಫ್ರಿಕಾ ಮತ್ತು ಮಧ್ಯ ಪ್ರಾಚ್ಯ ದೇಶಗಳು) , ಏಷ್ಯಾ-ಪೆಸಿಫಿಕ್ ( ಏಷ್ಯಾ, ಆಸ್ಟ್ರೇಲಿಯಾ ಮತ್ತು ಓಷಿಯಾನಾ) , ಯೂರೋಪ್ ಮತ್ತು ಉತ್ತರ ಅಮೇರಿಕ (ಯು.ಎಸ್.ಎ. ಮಾತು ಕೆನಡಾ) ಹಾಗೂ ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್. ಯುನೆಸ್ಕೋ ದ ಮೇಲೆ ತಿಳಿಸಿದ ವಿಭಾಗೀಕರಣವು ಆಡಳಿತಾತ್ಮಕ ದೃಷ್ಟಿಗನುಗುಣವಾಗಿ ಮಾಡಲ್ಪಟ್ಟಿರುತ್ತದೆ.
ಅತಿ ಹೆಚ್ಚಿನ ಸಂಖ್ಯೆಯ ವಿಶ್ವ ಪರಂಪರೆಯ ತಾಣಗಳನ್ನು ಹೊಂದಿರುವ ದೇಶಗಳೆಂದರೆ - ಇಟಲಿ (೪೧), ಸ್ಪೆಯ್ನ್ (೪೦), ಚೀನಾ (೩೫), ಜರ್ಮನಿ (೩೧), ಫ್ರಾನ್ಸ್ (೩೧) ಮತ್ತು ಯು.ಕೆ. (೨೭).
ಮೇಲ್ಕಾಣಿಸಿದ ೫ ವಲಯಗಳಲ್ಲಿರುವ ವಿಶ್ವ ಪರಂಪರೆಯ ತಾಣಗಳ ಸಂಖ್ಯೆ ಇಂತಿದೆ.
ವಲಯ | ನೈಸರ್ಗಿಕ | ಸಾಂಸ್ಕೃತಿಕ | ಮಿಶ್ರ | ಒಟ್ಟು | ಶೇಕಡಾವಾರು |
---|---|---|---|---|---|
ಆಫ್ರಿಕಾ | 33 | 38 | 3 | 74 | 9 |
ಅರಬ್ ರಾಜ್ಯಗಳು | 3 | 58 | 1 | 62 | 7 |
ಏಷ್ಯಾ-ಪೆಸಿಫಿಕ್ | 45 | 126 | 11 | 182 | 21 |
ಯುರೋಪ್ ಮತ್ತು ಉತ್ತರ ಅಮೇರಿಕಾ | 51 | 358 | 7 | 416 | 49 |
ಲ್ಯಾಟಿನ್ ಅಮೇರಿಕಾ | 34 | 80 | 3 | 117 | 14 |
ಒಟ್ಟು | ೧೬೬ | ೬೬೦ | ೨೫ | ೮೫೧ | ೧೦೦ |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.