Remove ads
From Wikipedia, the free encyclopedia
ಕಟ್ಟಡ ಮಾಡು ಮತ್ತು ಗೋಡೆಗಳಿಂದ ನಿರ್ಮಿಸಲ್ಪಟ್ಟ ರಚನೆಗಳನ್ನು ಕಟ್ಟಡ ಎನ್ನುತ್ತೇವೆ.ವಾಸ್ತುಶಾಸ್ತ್ರ, ನಿರ್ಮಾಣ (ಕಾಮಗಾರಿ), ಯಂತ್ರವಿಜ್ಞಾನ ಮತ್ತು ಸ್ಥಿರಾಸ್ತಿ ಅಭಿವೃದ್ಧಿಗಳಲ್ಲಿ ಕಟ್ಟಡ ಶಬ್ದವು ಯಾವುದೇ ಅನುಕೂಲ ಅಥವಾ ನಿರಂತರ ಅನುಭೋಗಕ್ಕಾಗಿ ಆಧಾರ ಅಥವಾ ಆಶ್ರಯ ನೀಡಲು ಬಳಸಲಾಗುವ ಅಥವಾ ಉದ್ದೇಶಿಸಲಾದ ಯಾವುದೇ ಮಾನವ ನಿರ್ಮಿತ ರಚನೆಯನ್ನು ನಿರ್ದೇಶಿಸುತ್ತದೆ.ವಸತಿಗೃಹಗಳು, ದಾಸ್ತಾನು ಮಳಿಗೆಗಳು, ವಿವಿಧ ಸಂಘ ಸಂಸ್ಥೆಗಳ ಕಚೇರಿಗಳು ಮುಂತಾದುವೆಲ್ಲವೂ ಕಟ್ಟಡಗಳೇ. ಒಂದು ಕಟ್ಟಡದ ಪ್ರಧಾನಾವಶ್ಯಕತೆಗಳು ಎರಡು-ರಚನಾತ್ಮಕವಾಗಿ ಅದು ಭದ್ರವಾಗಿರಬೇಕು ಮತ್ತು ಹವೆ ಬೆಂಕಿ ನೀರು ಕಳ್ಳಕಾಕರು ಮುಂತಾದ ಪ್ರತಿಬಲಗಳ ವಿರುದ್ಧ ರಕ್ಷಣೆ ಒದಗಿಸಬೇಕು. ಇಂಥ ಕಟ್ಟಡವನ್ನು ಆದಷ್ಟು ಮಿತವ್ಯಯದಿಂದ ರಚಿಸುವುದು ಕಟ್ಟಡ ಉದ್ಯಮದ ಕೆಲಸ. ಇದಕ್ಕೆ ಒಪ್ಪ ಓರಣ ನೀಡುವುದು ಕಲೆಗಾರಿಕೆ. ಕಟ್ಟಡ ರಚನೆಯಲ್ಲಿ ಕನಿಷ್ಠ ಪ್ರಯತ್ನದಿಂದ ಗರಿಷ್ಠ ದಕ್ಷತೆಯನ್ನು ಸಾಧಿಸುವುದೇ ಮಿತವ್ಯಯ ಅಥವಾ ಹಳತು-ಬಳಸಿದ ವಸ್ತುಗಳು ಗರಿಷ್ಠ ಉಪಯುಕ್ತತೆಯನ್ನು ಕೊಡಬೇಕು; ಪ್ರಯುಕ್ತಿಸಿದ ಜನಬಲ ಗರಿಷ್ಠ ಫಲಿತಾಂಶವನ್ನು ನೀಡಬೇಕು. ಎಂದರೆ ಕೆಲಸಗಾರರ ಮತ್ತು ವಸ್ತುಗಳ ಸಮರ್ಪಕ ಸಮನ್ವಯವೇ ಕಟ್ಟಡದ ಉದ್ಯಮದಲ್ಲಿ ಮಿತವ್ಯಯ.
ಒಂದು ಕಟ್ಟಡದ ಪ್ರಧಾನ ಅಂಗಗಳು ಹತ್ತು : 1 ಅಡಿಪಾಯ, 2 ಗೋಡೆ, 3 ಅಡ್ಡಗೋಡೆಗಳು, 4 ತಡಿಕೆ, 5 ಮಾಡು, 6 ನೆಲ, 7 ಗಿಲಾವು, 8 ಮಹಡಿಯ ಮೆಟ್ಟಿಲು, 9 ಕಿಟಕಿ, 10. ಬಾಗಿಲು. ಕಟ್ಟಡದ ತಾಂತ್ರಿಕ ಕ್ರಮಗಳು ಸಂಪ್ರದಾಯದಿಂದ ಬಂದಿರಬಹುದು. ಇಲ್ಲವೆ ಈಚೆಗೆ ಬೆಳೆದಿರಬಹುದು. ಈ ಕ್ರಮಗಳ ಸ್ಥೂಲವಿವರಣೆಯನ್ನು ಇಲ್ಲಿ ಕೊಟ್ಟಿದೆ.
ಕಟ್ಟಡ ಮತ್ತು ಅದರ ಅಡಿಪಾಯದ ಸಂವಿಧಾನ ತಳದ ಮಣ್ಣಿನ ಸ್ವಭಾವವನ್ನೂ ನೆಲದ ಇಳಿಜಾರನ್ನೂ ಅವಲಂಬಿಸಿವೆ. ಸಾಮಾನ್ಯವಾಗಿ ಕಟ್ಟಡದ ಗೋಡೆಗಳ ಕೆಳಗಡೆ ನೀರು ಇಳಿಯದಂಥ ಗಟ್ಟಿಯಾದ ನೆಲ ಸಿಕ್ಕುವವರೆಗೂ (ಕನಿಷ್ಠಪಕ್ಷ 90 ಸೆಂಮೀ ಆದರೂ) ಅಗೆಯಬೇಕು. ವಿಶೇಷ ಸಂದರ್ಭಗಳಲ್ಲಿ ಅಡಿಪಾಯಗಳನ್ನು ನಾಲ್ಕು ನಮೂನೆಗಳಾಗಿ ವಿಂಗಡಿಸಬಹುದು, ತೊಲೆಯ ಅಡಿಪಾಯ, ಕಂಬದ ಅಡಿಪಾಯ, ತೆಪ್ಪದ ಅಡಿಪಾಯ, ದಸಿಯ ಅಡಿಪಾಯ.
ಇದೇ ಸಾಮಾನ್ಯವಾದ ಮಾದರಿ. ಕಟ್ಟಡದ ಭಾರವನ್ನು ಹೊರುವ ಗೋಡೆಗಳ ಸಾಲಿನಲ್ಲಿ ಅಗೆದು ಗುಂಡಿಗಳ ತಳದಲ್ಲಿ ಕಾಂಕ್ರೀಟನ್ನು ತುಂಬುತ್ತಾರೆ. ಕಾಂಕ್ರೀಟಿನ ಆಳ, ಅಗಲ ಮತ್ತು ದಪ್ಪ-ಇವು ಕೆಳಮಣ್ಣು ಮತ್ತು ಕಟ್ಟಡದ ತೂಕಗಳನ್ನವಲಂಬಿಸಿವೆ. ಮಣ್ಣು ಮೆದುವಾಗಿರುವ ಕಡೆ ಪ್ರಬಲಿತ ಕಾಂಕ್ರೀಟನ್ನು ಅಳವಡಿಸುವುದರಿಂದ ಆಳವಾಗಿ ಅಡಿಪಾಯದಲ್ಲಿ ಅಗೆಯುವುದು ತಪ್ಪುತ್ತದೆ. ತುಂಬುವ ಕಾಂಕ್ರೀಟೂ ಕಡಿಮೆಯಾಗುತ್ತದೆ.
ಕಟ್ಟಡದ ತೂಕ ಅಡಿಪಾಯದ ಮೇಲೆ ಒಂದೇ ಸಮಯವಾಗಿ ಹರಡಿರುವುದಕ್ಕೆ ಬದಲಾಗಿ ಕೆಲವು ಜಾಗಗಳಲ್ಲಿ ಮಾತ್ರವೇ ಕೇಂದ್ರೀಕರಿಸುವ ಕಡೆ ಈ ನಮೂನೆಯನ್ನು ಉಪಯೋಗಿಸುತ್ತಾರೆ. ತಳದಲ್ಲಿ ಸಿಕ್ಕುವ ಮಣ್ಣಿನ ಭಾರವನ್ನು ಹೊರುವ ಸಾಮರ್ಥ್ಯ ಸ್ಥಳದಿಂದ ಸ್ಥಳಕ್ಕೆ ಸೇತುವೆಯ ಅಡಿಪಾಯದಲ್ಲಿರುವ ಹಾಗೆ ಬದಲಾಯಿಸಬಹುದಾದ್ದರಿಂದ ಇವುಗಳ ಸಂವಿಧಾನದಲ್ಲಿಯೂ ಕಟ್ಟಡದಲ್ಲಿಯೂ ಹೆಚ್ಚಿನ ಜಾಗರೂಕತೆ ಬೇಕಾಗುತ್ತದೆ.
ಕಟ್ಟಡದ ಜಾಗದಲ್ಲಿ ಜೌಗಿದ್ದರೆ ಇಲ್ಲವೆ ತುಂಬಿದ ಮಣ್ಣಿದ್ದರೆ ಈ ಮಾದರಿಯನ್ನು ಉಪಯೋಗಿಸುತ್ತಾರೆ. ಮೇಲೆ ಬರುವ ತೂಕದಿಂದ ಕೆಳಗಿನ ಮಣ್ಣು ಹೆಚ್ಚು ಕಡಿಮೆಯಾಗಿ ಕೆಳಕ್ಕೆ ಇಳಿದರೂ ಅಥವಾ ಚಲಿಸಿದರೂ ಇಡೀ ಕಟ್ಟಡವನ್ನು ಹೊರುವ ಹಾಗೆ ಈ ಅಡಿಪಾಯವನ್ನು ಸಂವಿಧಾನಮಾಡಿ ಪ್ರಬಲಿತ ಕಾಂಕ್ರೀಟಿನಿಂದ ಕಟ್ಟಿರುತ್ತಾರೆ. ಸಮುದ್ರವನ್ನು ಆಚೆಗೆ ನೂಕಿ ಬಿಡಿಸಿಕೊಂಡ ನೆಲದ ಮೇಲೆ ಇದನ್ನು ಉಪಯೋಗಿಸುವುದು ರೂಢಿ. ವಾಸದ ಮನೆಗೂ ಇತರ ಸಣ್ಣ ಕಟ್ಟಡಗಳಿಗೂ ಈ ನಮೂನೆ ದುಬಾರಿಯಾಗುತ್ತದೆ.
ಮೇಲುಗಡೆ ಮೆದುವಾದ ಅಥವಾ ಜೌಗಿನ ನೆಲವಿದ್ದು ಸುಮಾರಾಗಿ ಕೆಳಗಡೆ ಭಾರವನ್ನು ಹೊರುವ ಮಣ್ಣಿದ್ದ ಕಡೆ ಇದನ್ನು ಉಪಯೋಗಿಸುತ್ತಾರೆ. ದೊಡ್ಡ ಕಟ್ಟಡಗಳ ಅಡಿಪಾಯಗಳಲ್ಲಿ ಚಚ್ಚೌಕವಾಗಿ ದಸಿಗಳನ್ನು ಪ್ರಬಲಿತ ಕಾಂಕ್ರೀಟಿನಿಂದ ಮಾಡಿ ತುದಿಗೆ ಉಕ್ಕಿನ ಕವಚವನ್ನು ಹಾಕಿ ಯಂತ್ರಗಳಿಂದ ಹೊಡೆದು ಬೇಕಾದ ಆಳಕ್ಕೆ ಇಳಿಸುತ್ತಾರೆ. ಈ ಯಂತ್ರ ದಸಿಯ ಚೌಕಟ್ಟಿನ ಮೇಲೆ ಭಾರಿ ಸುತ್ತಿಗೆಯ ಹಾಗೆ ತನ್ನ ತೂಕದಿಂದಲೇ ಕೆಳಕ್ಕೆ ಬಿದ್ದು ಅದನ್ನು ಮಣ್ಣಿನಲ್ಲಿ ಇಳಿಸುತ್ತದೆ. ಕಾಂಕ್ರೀಟು ಬರುವುದಕ್ಕೆ ಮುಂಚೆ ಮರದ ದಸಿಗಳನ್ನು ಉಪಯೋಗಿಸುತ್ತಿದ್ದರು. ದಸಿಗಳ ತಲೆಗಳ ಮೇಲೆ ಉಕ್ಕಿನ ಇಲ್ಲವೆ ಪ್ರಬಲಿತ ಕಾಂಕ್ರೀಟಿನ ತೊಲೆಗಳನ್ನು ಎಳೆದು ಅವುಗಳ ಮೇಲೆ ಕಟ್ಟಡದ ಭಾರವನ್ನು ಹೊರುವ ಗೋಡೆಗಳನ್ನು ಕಟ್ಟುತ್ತಾರೆ. ಇಂಥ ಅಡಿಪಾಯಕ್ಕೆ ಖರ್ಚು ಬಹಳ, ಬಹಳ ಬೆಲೆಬಾಳುವ ನೆಲದ ಮೇಲೆ ಕಟ್ಟುವ ವಾಣಿಜ್ಯದ ಕಟ್ಟಡಗಳಲ್ಲಿ ಮಾತ್ರ ಇದನ್ನು ಉಪಯೋಗಿಸುವರು. ಇನ್ನೊಂದು ರೀತಿಯ ದಸಿಯ ಅಡಿಪಾಯದಲ್ಲಿ ಮಣ್ಣಿನಲ್ಲಿ ಯಂತ್ರಗಳಿಂದ ಬೇಕಾದ ಆಳದವರೆಗೂ ತೂತುಗಳನ್ನು ಕೊರೆದು ಅದರೊಳಗೆ ಪ್ರಬಲಿತ ಕಾಂಕ್ರೀಟನ್ನು ಸ್ಥಳದಲ್ಲಿಯೇ ತುಂಬುತ್ತಾರೆ.
ಸಾಂಪ್ರದಾಯಿಕವಾಗಿ ಗೋಡೆಗಳನ್ನು ಇಟ್ಟಿಗೆ ಇಲ್ಲವೆ ಕಲ್ಲಿನಿಂದ ಕಟ್ಟುತ್ತಾರೆ. ಮರ ಹೇರಳವಾಗಿ ಸಿಕ್ಕುವಲ್ಲಿ ಮರದಿಂದಲೂ ಬಿದಿರು ಮೆಳೆಗಳು ವಿಪುಲವಾಗಿರುವ ಉಷ್ಣವಲಯಗಳಲ್ಲಿ ಬಿದಿರಿನ ತಡಿಕೆಗಳಿಂದಲೂ ಇನ್ನು ಕೆಲವು ಕಡೆ ಮಣ್ಣಿನಿಂದಲೂ ಗೋಡೆಗಳನ್ನು ಕಟ್ಟುವುದುಂಟು. ಈ ಶತಮಾನದ ಪ್ರಾರಂಭದಿಂದಲೂ ನಡೆದ ಸಂಶೋಧನೆಗಳ ಫಲವಾಗಿ ಗೋಡೆಗಳ ಕಟ್ಟುವಿಕೆಯಲ್ಲಿ ಅನೇಕ ಮಾರ್ಪಾಡುಗಳಾಗಿವೆ. ಈಗ ಉಕ್ಕು, ಕಾಂಕ್ರೀಟು, ಕಲ್ನಾರು, ಸಿಮೆಂಟ್ ಮುಂತಾದ ಸಾಮಗ್ರಿಗಳಿಂದ ಹೊರಗಿನ ಚಳಿಯಾಗಲಿ ಸೆಕೆಯಾಗಲಿ ಕಟ್ಟಡದೊಳಕ್ಕೆ ಬರದ ಹಾಗೂ ಮಳೆಯೂ ಗಾಳಿಯೂ ನುಗ್ಗದ ಹಾಗೂ ಹಗುರವಾದ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಅನೇಕ ದೊಡ್ಡ ಕಟ್ಟಡಗಳು ಹೊರಗಡೆ ನೋಡುವುದಕ್ಕೆ ಇಟ್ಟಿಗೆ ಅಥವಾ ಕಲ್ಲಿನಿಂದ ಕಟ್ಟಿದಂತೆ ಕಾಣುತ್ತಿದ್ದರೂ ಕಟ್ಟಡದ ತೂಕವನ್ನು ಒಳಗಡೆ ಇರುವ ಉಕ್ಕಿನ ಚೌಕಟ್ಟು ಹೊತ್ತಿರುವುದು. ತೂಕವನ್ನು ಹೊರುವುದಕ್ಕೆ ಪ್ರಬಲಿತ ಕಾಂಕ್ರೀಟನ್ನು ಉಪಯೋಗಿಸಿದಾಗ ಹೊರಗಡೆ ಇಟ್ಟಿಗೆಯಾಗಲಿ ಕಲ್ಲಾಗಲಿ ಇರುವುದಿಲ್ಲ. ಆಧುನಿಕ ಕಟ್ಟಡಗಳ ಗೋಡೆಗಳಲ್ಲಿ ಒಳಗಡೆ ಒಂದು ಹೊರಗಡೆ ಒಂದು ಪದರ ಇದ್ದು ನಡುವೆ ಗಾಳಿಯ ಪೊರೆಯಿರುವುದು. ಇದು ಹೊರಗಿನ ಗಾಳಿಯನ್ನು ಕುರಿತು ವಾಯುಬಂಧವಾಗಿದ್ದರೆ ಒಂದು ಉಷ್ಣವಾಹಕ ಗೋಡೆಯಂತೆ ವರ್ತಿಸುತ್ತದೆ. ಆದ್ದರಿಂದ ಹೊರಗಿನ ಉಷ್ಣತೆ ಹೇಗೆಯೇ ಇದ್ದರೂ ಕಟ್ಟಡದ ಒಳಗೆ ಒಂದೇ ವಿಧದ ಉಷ್ಣತೆ ಇರುವುದು. ಒಳಗೋಡೆ ಉಷ್ಣವಾಹಕವಾಗಿದ್ದರೆ ಕಂಬಳಿಯನ್ನೋ ಗಾಜಿನ ಉಣ್ಣೆಯನ್ನೋ ಗೋಡೆಗೆ ತಾಗಿಸಬೇಕು. ಆದರೆ ಗೋಡೆಯನ್ನು ಇಟ್ಟಿಗೆಯಿಂದಲೋ ಕಲ್ಲಿನಿಂದಲೋ ಕಟ್ಟಿದ್ದರೆ ಈ ಎಚ್ಚರಿಕೆ ಬೇಕಾಗಿಲ್ಲ. ಹಾಗಿಲ್ಲದೆ ಹೋದರೆ ಮರಳೂ ದೂಳೂ ಇಲ್ಲದೆ ಇರುವ ಗೂಡುಗೂಡಾದ ಕಾಂಕ್ರೀಟಿನಿಂದ ಒಳಗೋಡೆಯನ್ನು ಕಟ್ಟಬಹುದು.
ಇವನ್ನು 4 - 1 ದಪ್ಪ ಇರುವಂತೆ ಸುಣ್ಣದ ಇಲ್ಲವೆ ಸಿಮೆಂಟಿನ ಗಾರೆಯಿಂದ ಕಟ್ಟಬಹುದು. 23 ಸೆಂಮೀ ದಪ್ಪದ ಹೊರಗೋಡೆಗಳು ಹೊರಗಿನಿಂದ ಚಳಿಯನ್ನೂ ಸೆಕೆಯನ್ನೂ ಒಳಕ್ಕೆ ಬಿಡುತ್ತವೆ. ಅಂಥ ಸನ್ನಿವೇಶಗಳಲ್ಲಿ ಹೊರಗಡೆಯೂ ಒಳಗಡೆಯೂ 4 ದಪ್ಪದ ಗೋಡೆ ಕಟ್ಟಿ ಒಳಗಡೆ ಖಾಲಿ ಜಾಗವನ್ನು ಬಿಡಬೇಕು.
ಇವನ್ನು ಕಲ್ಲು ಹೇರಳವಾಗಿ ಸಿಕ್ಕುವ ಕಡೆ ಗೋಡೆಗಳನ್ನು ಕಲ್ಲಿನಿಂದಲೇ ಕಟ್ಟುತ್ತಾರೆ. ದೊಡ್ಡ ಕಟ್ಟಡಗಳಲ್ಲಿ ಕಲ್ಲನ್ನು ನಯಮಾಡುವುದೂ ಉಂಟು. ಹೆಚ್ಚು ಭಾರವನ್ನು ಹೊರುವ ಅನೇಕ ಮಹಡಿಗಳ ಕಟ್ಟಡಗಳಲ್ಲಿ ಬಲಕ್ಕಾಗಿ ಹಿಂದುಗಡೆ ಉಕ್ಕಿನ ಇಲ್ಲವೆ ಪ್ರಬಲಿತ ಕಾಂಕ್ರೀಟಿನ ಚೌಕಟ್ಟನ್ನಿಟ್ಟು ಹೊರಗಡೆ ತೆಳುವಾದ ಕಲ್ಲಿನ ಗೋಡೆಯನ್ನು ಅಂದಕ್ಕಾಗಿ ಕಟ್ಟುತ್ತಾರೆ.
ಹೊರಗಡೆ ಇಟ್ಟಿಗೆಯ ಗೋಡೆಯನ್ನು ಕಟ್ಟಿ ನಡುವೆ ತೆರಪನ್ನು ಬಿಟ್ಟು ಒಳಗಡೆ ಕಾಂಕ್ರೀಟನ ಗೋಡೆಯನ್ನು ಕಟ್ಟುವುದು ದೊಡ್ಡ ನಗರಗಳಲ್ಲಿ ರೂಢಿಯಲ್ಲಿದೆ ಅಥವಾ ಕಾಂಕ್ರೀಟಿನ ಚೌಕಟ್ಟನ್ನು ಕಟ್ಟಿ ಮಧ್ಯೆ ಇಟ್ಟಿಗೆಯನ್ನೋ ಕಾಂಕ್ರೀಟನ ದಿಮ್ಮಿಗಳನ್ನೋ ತುಂಬಬಹುದು. ದಪ್ಪವಾದ ಕಾಂಕ್ರೀಟನ ಗೋಡೆಗಳ ಮೇಲೆ ಬರುವ ತೂಕವನ್ನು ತಡೆಯುವುಕ್ಕಾಗಿ ಅವನ್ನು ಸೂಕ್ತ ರೀತಿಯಲ್ಲಿ ಉಕ್ಕಿನಿಂದ ಭದ್ರಮಾಡುತ್ತಾರೆ. ಮರಳನ್ನೇ ಹಾಕದೆ ಹಗುರವಾದ ಗೂಡಿನ ಕಾಂಕ್ರೀಟಿನ ವಿಷಯವಾಗಿ ಸಂಶೋಧನೆ ನಡೆಯುತ್ತಿದೆ. ಇದರಲ್ಲಿ ಉಕ್ಕನ್ನಿಡುವುದಿಲ್ಲ. ಆದ್ದರಿಂದ ಬಲ ಕಡಿಮೆ. ಸಾಮಾನ್ಯವಾಗಿ ಒಂದು ಮಹಡಿಯ ಸಣ್ಣ ವಾಸದ ಮನೆಗಳಲ್ಲಿ ಈ ಸಾಮಗ್ರಿಯನ್ನು ಉಪಯೋಗಿಸುತ್ತಾರೆ.
ಇವು ಕಟ್ಟಡವನ್ನು ವಿಭಾಗಗಳಾಗಿ ವಿಂಗಡಿಸುತ್ತವೆ. ಇವುಗಳಲ್ಲಿ ಎರಡು ವಿಧ. ಕೇವಲ ಜಾಗವನ್ನು ವಿಭಾಗಿಸತಕ್ಕವು, ಜೊತೆಗೆ ಕಟ್ಟಡದ ಒಂದು ಭಾಗವನ್ನು ಹೊರತಕ್ಕವು. ಮೊದಲನೆಯ ನಮೂನೆಯಲ್ಲಿ ಮರದ ಚೌಕಟ್ಟು, ಅಲ್ಯೂಮಿನಿಯಂ ಚೌಕಟ್ಟು ಹೆಚ್ಚಾಗಿ ಬಳಕೆಯಲ್ಲಿದೆ. ಇದರ ಅನುಕೂಲವೇನೆಂದರೆ ಯಾವ ಅಡಿಪಾಯವೂ ಇಲ್ಲದೆ ಇದನ್ನು ನೆಲದ ಮೇಲೆ ಇಡಬಹುದು. ಕಾಂಕ್ರೀಟಿನ ಚಪ್ಪಡಿಗಳೂ ಬಳಕೆಯಲ್ಲಿವೆ. ಎರಡನೆಯ ನಮೂನೆಯ ಅಡ್ಡಗೋಡೆಯಲ್ಲಿ ಅದು ಮೇಲಿನ ಮಹಡಿಯ ಭಾರವನ್ನು ಹೊರಬಲ್ಲುದೇ ಎಂಬುದು ಮಾತ್ರ ಮುಖ್ಯ ಪ್ರಶ್ನೆ. ಕಲ್ಲಿನ ಜಲ್ಲಿಗೆ ಬದಲಾಗಿ ಹಗುರವಾದ ಕುಲುಮೆಯ ಕಿಟ್ಟವನ್ನೂ ಪುಡಿಮಾಡಿದ ಇಟ್ಟಿಗೆಯನ್ನೂ ಉಪಯೋಗಿಸಿ ಕಾಂಕ್ರೀಟಿನ ದಿಮ್ಮಿಗಳನ್ನು 75 ಮಿಮಿ. ದಪ್ಪದವರೆಗೆ ಗಟ್ಟಿಯಾಗಿಯೂ ಹೆಚ್ಚಿನ ದಪ್ಪವಿದ್ದರೆ ಟೊಳ್ಳಾಗಿಯೂ 457 ಮಿಮೀ ಉದ್ದ, 229 ಮಿಮೀ ಅಗಲದಲ್ಲಿ ತಯಾರು ಮಾಡಿ ಇಟ್ಟಿಗೆಯ ಕಟ್ಟಡದ ಹಾಗೆ ಕಟ್ಟಿ ಎರಡು ಮುಖಗಳಲ್ಲಿಯೂ ಗಿಲಾವು ಮಾಡಿ ಅಡ್ಡಗೋಡೆಗಳನ್ನು ಕಟ್ಟಬಹುದು. ಚೌಕಟ್ಟಿನ ಅಡ್ಡಗೋಡೆಗಳು: ಕೆಳಗಡೆ ಒಂದು ಮರದ ಪಟ್ಟಿಯನ್ನು ಮೇಲುಗಡೆಯ ಪಟ್ಟಿಗೆ ಲಂಬವಾದ ಪಟ್ಟಿಗಳಿಂದ ಚೌಕಟ್ಟಿನ ಹಾಗೆ ಸೇರಿಸಿ ನಡುವೆ ಕಲ್ನಾರು ಸಿಮೆಂಟಿನ ಹಾಳೆ, ನಾರಿನ ಹಲಗೆಗಳು ಮರದ ದಬ್ಬೆ ಇವುಗಳ ಹಲಗೆಗಳನ್ನು ಮೊಳೆಗಳಿಂದಲೋ ತಿರುಪುಗಳಿಂದಲೋ ಜೋಡಿಸಬಹುದು.
ಪೂರ್ವ ನಿರ್ಮಿತ ಹೊಯ್ದ ಕಾಂಕ್ರೀಟಿನ ಚಪ್ಪಡಿಗಳನ್ನು ಒಂದು ಕ್ಲಪ್ತವಾದ ಉದ್ದ ಮತ್ತು ಅಳತೆಗೆ 51-152 ಮಿಮೀ ದಪ್ಪದವರೆಗೆ ತಯಾರಿಸಿ ಜೋಡಿಸಿ ಗೋಡೆಗಳನ್ನು ಕಟ್ಟುತ್ತಾರೆ. ಈ ಚಪ್ಪಡಿಯನ್ನು ಮಾಡುವಾಗ ಕಲ್ಲಿನ ಜಲ್ಲಿಯನ್ನು ಉಪಯೋಗಿಸುವುದಿಲ್ಲ. ಹಗುರವಾಗುವುದಕ್ಕಾಗಿ ನೊರಜು ಕಲ್ಲು, ಮರಳು ಮತ್ತು ಕಿಟ್ಟಗಳನ್ನು ಬಳಸುತ್ತಾರೆ. ಕೈಗಾರಿಕೆಗಳ ಕಟ್ಟಡಗಳಲ್ಲಿ ಒಂದೇ ರೀತಿಯ ಹಗುರವಾದ ಗೋಡೆಗಳು ಬೇಕಾಗುವ ಕಡೆ ಇಂಥ ಚಪ್ಪಡಿಗಳನ್ನು ಉಪಯೋಗಿಸಬಹುದು. ಹೆಚ್ಚಿನ ಬಲ ಬೇಕಾದರೆ ಮಧ್ಯೆ ಪ್ರಬಲಿತ ಕಾಂಕ್ರೀಟಿನ ಕಂಬಗಳನ್ನು ಉಪಯೋಗಿಸಬೇಕಾಗುತ್ತದೆ.
ಪ್ರಾದೇಶಿಕ ನೆಲದ ವಿಶೇಷ ಲಕ್ಷಣಗಳು ಮತ್ತು ವಾಯುಗುಣದ ಮೇಲೆ ಮಾಡಿನ ಸಂವಿಧಾನ ನಿಂತಿದೆ. ಮಾಡುಗಳನ್ನು ಇಳಿಜಾರಾದುವು ಮತ್ತು ಚಪ್ಪಟೆಯಾದವು ಎಂದು ಎರಡು ದರ್ಜೆಗಳಾಗಿ ವಿಂಗಡಿಸಬಹುದು. ಇಳಿಜಾರಾದ ಮಾಡುಗಳು: ಇವುಗಳಲ್ಲಿ ಒಪ್ಪಾರಗಳು ಎತ್ತರವಾದ ಗೋಡೆಗಳಿಗೆ ಒರಗಿಕೊಂಡಿರಬಹುದು. ಇಲ್ಲವೆ ಸ್ವತಂತ್ರವಾಗಿರಬಹುದು. ಒಪ್ಪಾರದ ಇಳಿಜಾರು ನಾಲ್ಕಕ್ಕೆ ಒಂದು (ಎತ್ತರ) ಇದ್ದರೆ ಸಾಕು. ಮರದಿಂದ ಮಾಡನ್ನು ಮಾಡಿ ಹಂಚುಗಳು, ತಗಡುಗಳು, ಸ್ಲೇಟುಗಳು ಇವುಗಳಿಂದ ಮುಚ್ಚುತ್ತಾರೆ. ಇಳಿಜಾರಾದ ಚಾವಣಿಗಳು: ಮಳೆ ಹೆಚ್ಚಾಗಿ ಬೀಳುವ ಕಡೆ ಮನೆಗಳ ಮಾಡನ್ನು ಮರದಿಂದ ಇಳಿಜಾರಾಗಿ ಕಟ್ಟಿ ಹೆಂಚುಗಳು, ಸ್ಲೇಟುಗಳು, ಹುಲ್ಲು ಇವುಗಳಿಂದ ಮುಚ್ಚುತ್ತಾರೆ. ಕಾರ್ಖಾನೆಗಳಲ್ಲಿ ಉಕ್ಕಿನಿಂದ ಮಾಡನ್ನು ಮಾಡಿ ಕಲ್ನಾರು ಸಿಮೆಂಟಿನ ಹಾಳೆಗಳಿಂದ ಮುಚ್ಚುತ್ತಾರೆ. ಮರದ ಮಾಡುಗಳಲ್ಲಿ ಚೌಕಟ್ಟುಗಳು ಇಲ್ಲವೆ ತೀರುಗಳ ಮೇಲೆ ಉದ್ದ ಸರಳುಗಳನ್ನು ಹಾಕಿ ಮೇಲುಗಡೆಯ ತೀರಿನಿಂದ ಕೆಳಗಿನ ವರೆಗೆ ಸಾಮಾನ್ಯ ತೀರುಗಳನ್ನು ಎಳೆದು ಅವಕ್ಕೆ ಮರದ ರೀಪರುಗಳನ್ನು ಹೊಡೆದು ಮೇಲೆ ಹಂಚನ್ನು ಹೊದೆಸುತ್ತಾರೆ. ಮೊದಲು ಸುಟ್ಟ ಮಣ್ಣಿನ ನಾಡು ಹಂಚುಗಳನ್ನು ಹೊದೆಸುತ್ತಿದ್ದರೆ ಈಗ ಮಂಗಳೂರು ಹಂಚುಗಳು ರೂಢಿಯಾಗಿವೆ. ದೊಡ್ಡ ಅಳತೆಯ ಮಾಡುಗಳಲ್ಲಿ ಉಕ್ಕಿನ ಸರಕಟ್ಟುಗಳನ್ನು ದೂರದಲ್ಲಿಟ್ಟು ಮೇಲೆ ಉದ್ದ ಸರಗಳನ್ನು ಎಳೆದು ಅವುಗಳ ಮೇಲೆ ರೀಪರುಗಳನ್ನು ಹೊಡೆದು ಸತುವಿನ ತಗಡುಗಳನ್ನೋ ಸಿಮೆಂಟ್-ಕಲ್ನಾರಿನ ಹಾಳೆಗಳನ್ನೋ ಹೊದೆಸುತ್ತಾರೆ. ಇಳಿಜಾರಾದ ಮಾಡಿನಲ್ಲಿ ಇಪ್ಪಾರು ಚಾವಣಿ ಮತ್ತು ಬಾಗುಚಾವಣಿ (ಹಿಪ್ ರೂಫ್) ಎಂಬ ಎರಡು ಮಾದರಿಗಳಿವೆ. ಉಪಯೋಗಿಸಬಹುದಾದ ಜಾಗ ಇಪ್ಪಾರುಚಾವಣಿಯಲ್ಲಿ ಹೆಚ್ಚಾಗಿದೆ. ಅಲ್ಲಿ ಕಿಟಕಿಗಳನ್ನಿಡಬಹುದು. ಮಳೆ ಹೆಚ್ಚಾದ ಕಡೆ ಬಾಗುಚಾವಣಿಯನ್ನು ಉಪಯೋಗಿಸುವುದೇ ಹೆಚ್ಚು. ಉತ್ತರದ ಬೆಳಕಿನ ಮಾಡು: ಇದನ್ನು ದೊಡ್ಡ ಕಾರ್ಖಾನೆಗಳಲ್ಲಿ ಉಪಯೋಗಿಸುತ್ತಾರೆ. ಈ ಮಾದರಿಯಲ್ಲಿ ಒಂದು ಪಾರ್ಶ್ವದ ಇಳಿಕಲು ಕಡಿಮೆ. ಇದಕ್ಕೆ ಸಿಮೆಂಟ್-ಕಲ್ನಾರಿನ ತಗಡುಗಳನ್ನು ಹೊದಿಸಿರುತ್ತಾರೆ. ಮತ್ತೊಂದು ಪಾರ್ಶ್ವದ ಇಳಿಕಲು ಹೆಚ್ಚು. ಅದನ್ನು ಮರದ ಇಲ್ಲವೆ ಉಕ್ಕಿನ ಚೌಕಟ್ಟಿನಲ್ಲಿರುವ ಗಾಜಿನಿಂದ ಮುಚ್ಚಿರುತ್ತಾರೆ. ಇದು ಸುಮಾರಾಗಿ ಉತ್ತರದಿಕ್ಕಿನಲ್ಲಿರುವುದು. ಈ ಮಾದರಿಯಲ್ಲಿ ಬಿಸಿಲಿನ ಝಳವಿಲ್ಲದೆ ಗರಿಷ್ಠ ಬೆಳಕು ಒಳಕ್ಕೆ ಬರುತ್ತದೆ. ಮಾಡಿನ ಎರಡು ಇಳಿಕಲುಗಳಿಗೂ ಮಧ್ಯೆ ಮಳೆಯ ನೀರನ್ನು ದೋಣಿಗಳಿಂದ ಸಾಗಿಸುತ್ತಾರೆ. ಚಪ್ಪಟೆ ಮಾಡುಗಳು: ಹಿಂದೆ ದೇವಸ್ಥಾನಗಳಲ್ಲಿ ಕಲ್ಲಿನ ಕಂಬಗಳ ಮೇಲೆ ಚಪ್ಪಡಿಗಳನ್ನು ಕೂರಿಸಿ ಚಪ್ಪಟೆಯಾದ ಮಾಡನ್ನು ಕಟ್ಟುತ್ತಿದ್ದರು. ಈಚೆಗೆ ಪಕ್ಕ ತಾರಸಿ ಎಂಬ ಮಾಡು, ಮಳೆ ಕಡಿಮೆಯಾಗಿರುವ ಪ್ರದೇಶಗಳಲ್ಲಿ ಬಳಕೆಯಲ್ಲಿತ್ತು. ಪ್ರಬಲಿತ ಕಾಂಕ್ರೀಟು ಬಂದ ಮೇಲೆ ಚಪ್ಪಟೆಯಾದ ಮಾಡುಗಳು ಸರ್ವತ್ರ ಬಳಕೆಗೆ ಬಂದಿವೆ. ಮಾಡಿನ ಅಗಲಕ್ಕೆ ಅನುಗುಣವಾಗಿ ಈ ನಮೂನೆಯನ್ನು ಶಾಸ್ತ್ರೀಯವಾಗಿ ಸಂವಿಧಾನ ಮಾಡಬೇಕು. ಅಗಲ ಕಡಿಮೆಯಾಗಿದ್ದರೆ ಗೋಡೆಗಳ ಮೇಲೆ ಚಪ್ಪಡಿಯನ್ನು ಎಳೆಯಬಹುದು. ಅಗಲ ಹೆಚ್ಚಾದರೆ 2.5-3 ಮೀ ಅಂತರದಲ್ಲಿ ಖಿ-ತೊಲೆಗಳನ್ನು ಎಳೆದು ಮೇಲುಗಡೆ ಪ್ರಬಲಿತ ಕಾಂಕ್ರೀಟಿನ ಚಪ್ಪಡಿಯನ್ನು ಇಡಬೇಕಾಗುತ್ತದೆ. ಕಾರ್ಖಾನೆಗಳಲ್ಲಿ ತೊಲೆ ಮತ್ತು ಚಪ್ಪಡಿಯ ಮಾದರಿಯಲ್ಲಿ ಪೂರ್ವನಿರ್ಮಿತ ಕಾಂಕ್ರೀಟಿನ ಮಾಡುಗಳನ್ನು ಕಟ್ಟಡದ ಜಾಗಕ್ಕೆ ಸಾಗಿಸಿ ಸ್ಥಳದಲ್ಲಿ ಜೋಡಿಸಬಹುದು. ಆಗ ತೊಲೆಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವಾಗ ಬೀಳುವ ಹೆಚ್ಚಿನ ತ್ರಾಸವನ್ನು ತಡೆಯುವುದಕ್ಕಾಗಿ ಹೆಚ್ಚು ಉಕ್ಕನ್ನು ಉಪಯೋಗಿಸಬೇಕಾಗುತ್ತದೆ. ಮತ್ತೊಂದು ನಮೂನೆಯ ಚಪ್ಪಟೆಯಾದ ಪ್ರಬಲಿತ ಕಾಂಕ್ರೀಟಿನಿಂದ ಮಾಡಿನಲ್ಲಿ ಮಾಡನ್ನು ಬೇರೆ ಬೇರೆ ಅಳತೆಗಳಲ್ಲಿಯೂ ದಪ್ಪಗಳಲ್ಲಿಯೂ ಕಾಂಕ್ರೀಟಿನಿಂದಲೋ ಸುಟ್ಟ ಮಣ್ಣಿನಿಂದಲೋ ಮಾಡಿದ ಒಂದೇ ಅಳತೆಯ ಚಪ್ಪಡಿಗಳ ರೂಪದಲ್ಲಿ ಮಾಡುತ್ತಾರೆ. ಚಪ್ಪಡಿಗಳ ಮಧ್ಯೆ ಉಕ್ಕಿನ ಕಂಬಿಗಳನ್ನು ಜೋಡಿಸಿ ಸಂದುಗಳಲ್ಲಿ ಸಿಮೆಂಟ್ ಕಾಂಕ್ರೀಟನ್ನು ತುಂಬುತ್ತಾರೆ. ಮೇಲುಗಡೆ ಕೊಂಚ ನಯವಾದ ಕಾಂಕ್ರೀಟಿನಿಂದ ಮುಚ್ಚುತ್ತಾರೆ. ಈಚೆಗೆ ಹಿಂದೆಯೇ ತ್ರಾಸವನ್ನು ಹಾಕಿದ ಕಾಂಕ್ರೀಟಿನಲ್ಲಿ (ಪ್ರೀಸ್ಟ್ರೆಸ್ಡ್ ಕಾಂಕ್ರೀಟ್) ಎರಕ ಹೊಯ್ಯುವುದಕ್ಕೆ ಮುಂಚೆಯೇ ಹೆಚ್ಚಾದ ಎಳೆತದ ಶಕ್ತಿಯುಳ್ಳ ತಂತಿಯನ್ನು ತ್ರಾಸದಲ್ಲಿರಿಸಿ ಆ ಮೂಲಕ ಕಾಂಕ್ರೀಟನ್ನು ಕಡಿಮೆ ಮಾಡುವುದರಿಂದ ಉಕ್ಕಿನ ತೂಕವೂ ವಿಶೇಷವಾಗಿ ಕಡಿಮೆಯಾಗುತ್ತದೆ. ಇದರಿಂದ ಮಾಡನ್ನು ಇಳಿಸುವ ಸಮಸ್ಯೆಗೆ ಸಹಾಯವಾಗುತ್ತದೆ. ಬಾಗಿದ ಮಾಡುಗಳು: ಇವುಗಳನ್ನು ಉಕ್ಕಿನ ಸರಕಟ್ಟುಗಳಿಂದಲೂ ಉದ್ದದ ಸರಳುಗಳಿಂದಲೂ ಕಟ್ಟಿ ಸತುವಿನ ತಗಡುಗಳಿಂದಲೋ ಸಿಮೆಂಟ್-ಕಲ್ನಾರಿನ ಹಾಳೆಗಳಿಂದಲೋ ಮುಚ್ಚುತ್ತಾರೆ. ಭದ್ರ ಕಾಂಕ್ರೀಟಿನಿಂದಲೂ ಬಾಗಿದ ಮಾಡುಗಳನ್ನು ತಯಾರಿಸುತ್ತಾರೆ.
ಈಗಿನ ಕಟ್ಟಡಗಳ ನೆಲದಲ್ಲಿ ಸೌಕರ್ಯದ ದೃಷ್ಟಿಯಿಂದ ಪರಿಷ್ಕರಣಗಳಾಗುತ್ತಿವೆ. ಕಲ್ಲಿನ ಇಲ್ಲವೆ ಮಣ್ಣಿನ ನೆಲವೇ ಮೊನ್ನೆ ಮೊನ್ನೆಯ ವರೆಗೆ ಸಾಕಾಗಿತ್ತು. ಆಮೇಲೆ ಇಟ್ಟಿಗೆಯ ನೆಲ ಬಂತು. ಭೂಮಿಯ ತೇವ ಮನೆಯ ನೆಲದ ಮೇಲೆ ಒಸರುವುದನ್ನು ತಡೆಯುವುದಕ್ಕಾಗಿ ಮರದ ತೊಲೆಗಳ ಮೇಲೆ ಹಾಸಿದರು. ಅನಂತರ ಕೆಳಗಡೆ ಗಟ್ಟಿಯಾದ ನೆಲದ ಮೇಲೆ ತಂಡಿಯನ್ನು ತಡೆಯುವ ಪದರವೂ ಅದರ ಮೇಲೆ ಕಾಂಕ್ರೀಟೊ ಬಂದಮೇಲೆ ಸುಮಾರಾಗಿ ಅನುಕೂಲವಾದ ನೆಲ ದೊರೆತ ಹಾಗಾಯಿತು. ಸಾರ್ವಜನಿಕ ಕಟ್ಟಡಗಳು, ಅಂಗಡಿಗಳೂ, ಕಚೇರಿಗಳು ಮತ್ತು ವಾಸದ ಮನೆಗಳಲ್ಲಿ ಕಾಂಕ್ರಿಟ್ ನೆಲದ ಮೇಲ್ಮೈಯ ಪರಿಷ್ಕರಣ ಮುಖ್ಯವಾಗುತ್ತಿದೆ. ಅನೇಕ ವರ್ಷಗಳಿಂದಲೂ ಮರ, ಹಂಚುಗಳು, ಟೆರಾಸೊ ಮತ್ತು ಅಮೃತಶಿಲೆಯ ನೆಲಗಳು ಉಪಯೋಗದಲ್ಲಿವೆ. ಬೇಗ ಸವೆಯದೆ ಇರುವುದು, ಜಾರದೆ ಇರುವುದು, ಕಟ್ಟುವುದಕ್ಕೂ ರಿಪೇರಿಯಲ್ಲಿ ಇಡುವುದಕ್ಕೂ ತಗಲುವ ಖರ್ಚು-ಇವನ್ನು ಗುರಿಯಾಗಿಟ್ಟುಕೊಂಡು ಈ ಪರಿಷ್ಕರಣಗಳ ಮೇಲೆಯೇ ಅಪಾರವಾದ ಸಂಶೋಧನೆಗಳು ನಡೆದಿವೆ. ಅಸ್ಫಾಲ್ಟ್, ಕಾರ್ಕ್, ರಬ್ಬರ್, ಇವು ಹಂಚುಗಳ ಮತ್ತು ತಗಡುಗಳ ರೂಪದಲ್ಲಿ ಜನಪ್ರಿಯವಾಗುತ್ತಿವೆ. ಗಟ್ಟಿಮರವೂ ಪದರದ ಮರವೂ ಇನ್ನೊಂದು ಕಡೆ ಉಪಯೋಗವಾಗುತ್ತಿವೆ.
ಗೋಡೆಗಳಿಗೂ ಮಾಳಿಗೆಗಳಿಗೂ ಗಾರೆಯಿಂದ ಗಿಲಾವು ಮಾಡುತ್ತಾರೆ. ಸಾಮಾನ್ಯವಾಗಿ ಗಿಲಾವನ್ನು ಎರಡು ಅಥವಾ ಮೂರು ಪದರುಗಳಲ್ಲಿ ಹಾಕುತ್ತಾರೆ. ಗೋಡೆಗಳ ಮೂಲೆಗಳ ಗಿಲಾವಿನ ಕಾರ್ನೀಸುಗಳನ್ನು ಮಾಲುಗಳನ್ನಿಟ್ಟು ಮುಗಿಸುತ್ತಾರೆ. ಇದು ಕುಶಲಕಲೆ. ಮನೆಗಳಿಗೆ ಹೊರಗಡೆ ಒರಟಾಗಿ ಸಿಮೆಂಟ್ ಗಾರೆಯಿಂದ ಗಿಲಾವು ಮಾಡಿದಾಗ ಮೊದಲು ಸಿಮೆಂಟನ್ನು ತೆಳುವಾಗಿ ಹೊಡೆದು ಗಟ್ಟಿಯಾಗುವುದಕ್ಕೆ ಬಿಡುತ್ತಾರೆ. ಆಮೇಲೆ ಅದನ್ನು ಕೊಂಚ ಕೆರೆದು ಮತ್ತೆ ಸಿಮೆಂಟ್ ಗಾರೆಯನ್ನು ಹಾಕಿ ಮುಗಿಸುತ್ತಾರೆ.
ನೆಲಕ್ಕೂ ಮಹಡಿಗೂ ನಡುವೆ ಮರದ ಅಟ್ಟಗಳನ್ನು ಕಟ್ಟುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಆಗ ಮಹಡಿಯನ್ನು ವಾಸಕ್ಕೆ ಉಪಯೋಗಿಸುವುದು ಸಾಧ್ಯವಾಯಿತು. ಕೆಳಗಿನಿಂದ ಮೇಲಿನ ಮಹಡಿಗಳಿಗೆ ಸಾಂಪ್ರದಾಯಿಕವಾಗಿ ಇದ್ದ ಈ ಮೆಟ್ಟಿಲುಗಳನ್ನು ಹಳೆಯ ಕಾಲದಲ್ಲಿ ಮಣ್ಣು, ಮರ, ಕಲ್ಲು, ಇಟ್ಟಿಗೆ ಇವುಗಳಿಂದ ಕಟ್ಟುತ್ತಿದ್ದರು. ಈಗ ಪ್ರಬಲಿತ ಕಾಂಕ್ರೀಟಿನಿಂದಲೂ ಉಕ್ಕಿನಿಂದಲೂ ಕಟ್ಟುತ್ತಾರೆ. ಪೂರ್ವ ನಿರ್ಮಿತ ಕಾಂಕ್ರೀಟಿನ ಮೆಟ್ಟಲುಗಳನ್ನು ಕಲ್ಲಿನ ಮೆಟ್ಟಲುಗಳಂತೆಯೇ ಮಾಡಿ ಜೋಡಿಸುತ್ತಾರೆ. ಉಕ್ಕಿನ ಇಲ್ಲವೆ ಕಬ್ಬಿಣದ ಮೆಟ್ಟಲುಗಳನ್ನು ಸಾಮಾನ್ಯವಾಗಿ ಕಟ್ಟಡದೊಳಗೆ ಇಡುವುದಿಲ್ಲ. ಬೆಂಕಿಯೇನಾದರೂ ಬಿದ್ದರೆ ಕಾರ್ಖಾನೆಗಳಲ್ಲಿಯೂ ಕಚೇರಿಗಳಲ್ಲಿಯೂ ತಪ್ಪಿಸಿಕೊಂಡು ಹೋಗುವುದಕ್ಕೆ ಹೊರಗಡೆ ಇವನ್ನು ಇಟ್ಟಿರುತ್ತಾರೆ. ಮಹಡಿಯ ಮೆಟ್ಟಲುಗಳ ಸಂವಿಧಾನದಲ್ಲಿ ಏರುವಾಗಿನ ಶ್ರಮವನ್ನು ಗಣನೆಗೆ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ಕೆಲವು ಸಾಂಪ್ರದಾಯಿಕ ನಿಯಮಗಳಿವೆ. ಯಾವಾಗಲೂ ಮೆಟ್ಟಲಿನ ಅಗಲಕ್ಕೂ (ಟ್ರೆಡ್) ನಿಲುಪಟ್ಟಿಯ ಎತ್ತರಕ್ಕೂ (ರೈಸ್ó) ಒಂದು ಸಂಬಂಧವಿರಬೇಕು. ವಾಸದ ಮನೆಗಳಿಗೆ ಅನ್ವಯಿಸುವ ಒಂದು ಕ್ರಮದಲ್ಲಿ ಅಂಗುಲಗಳಲ್ಲಿ ಇವೆರಡನ್ನೂ ಗುಣಿಸಿದರೆ 66 ಬರಬೇಕು. ಎಂದರೆ ಮೆಟ್ಟಲುಗಳ ಎತ್ತರ 152 ಮಿಮೀ ಇದ್ದರೆ ಅಗಲ 279 ಮಿಮೀ ಇರಬೇಕು. ಎತ್ತರವಾದ ಮಹಡಿಗಳನ್ನು ಹತ್ತುವಾಗ ಶ್ರಮ ಕಡಿಮೆಯಾಗಲು ಮಧ್ಯೆಮಧ್ಯೆ ನಿಲ್ಲುವುದಕ್ಕೆ ಅವಕಾಶ ಬೇಕು. ಮೆಟ್ಟಲುಗಳು ಪಕ್ಕಕ್ಕೆ ಕಿರಿದಾಗಲೂ ಸಂಪುರ್ಣವಾಗಿ ದಿಕ್ಕನ್ನು ಬದಲಿಸಿದಾಗಲೂ ಅಗಲವಾದ ಜಾಗ ಬಿಡಬೇಕು. ಜಾಗ ಸಾಲದೆ ಹೋದಾಗ ಸುತ್ತು ಮೆಟ್ಟಲುಗಳನ್ನು ಉಪಯೋಗಿಸುತ್ತಾರೆ. ಆದರೆ ಇದು ಅನುಕೂಲವಲ್ಲ. ಒಂದು ಮೆಟ್ಟಲು ಸಾಲಿನಲ್ಲಿ ಎಲ್ಲ ಮೆಟ್ಟಲುಗಳೂ ತಿರುಗುತ್ತಲೇ ಹೋದರೆ ಅದನ್ನು ತಿರುಗುವ ಮೆಟ್ಟಲು ಅಥವಾ ತಿರುವು ಮೆಟ್ಟಲು ಎನ್ನುತ್ತಾರೆ. ಇದನ್ನು ಕಬ್ಬಿಣದಿಂದ ತಯಾರು ಮಾಡುವುದು ರೂಢಿ. ಈಗ ಕಚೇರಿಗಳಲ್ಲಿಯೂ ವಾಣಿಜ್ಯದ ಕಟ್ಟಡಗಳಲ್ಲಿಯೂ ಹತ್ತಾರು ಮಹಡಿಯ ಮನೆಗಳಲ್ಲಿಯೂ ಮೆಟ್ಟಲುಗಳೇನೋ ಇದ್ದರೂ ಅವಕ್ಕೆ ಎರಡನೆಯ ಸ್ಥಾನ ಬಂದಿದೆ. ವಿದ್ಯುತ್ತಿನಿಂದ ಚಲಿಸುವ ಎತ್ತುಗೆಗಳಿಗೆ (ಲಿಫ್ಟ್್ಸ) ಮೊದಲನೆಯ ಸ್ಥಾನ ಬಂದಿದೆ. ಇನ್ನೂ ಆಧುನಿಕವಾದ ಕ್ರಮ ಚಲಿಸುವ ಮಹಡಿಯ ಮೆಟ್ಟಲು (ಇಸ್ಕಲೇಟರ್).
ತೆರೆದು ಹಾಕಿ ಮಾಡುವ ಹಾಗಿರುವ ಪ್ರತಿಯೊಂದು ಕಿಟಕಿಯಲ್ಲಿಯೂ ಒಂದು ಚೌಕಟ್ಟು, ತೆರೆಯುವ ಬಾಗಿಲುಗಳೂ ಇರಬೇಕು. ಚೌಕಟ್ಟಿನಲ್ಲಿ ಬಾಗಿಲುಗಳು ಪಕ್ಕಕ್ಕೆ ತೆರೆಯುವುದು ಸಾಂಪ್ರದಾಯಿಕ ಕ್ರಮ. ಈಚೆಗೆ ಕಿಟಕಿಗಳ ಬಾಗಿಲು ಚೌಕಟ್ಟಿನಲ್ಲಿ ಮೇಲಕ್ಕೂ ಕೆಳಕ್ಕೂ ಸರಿಯುವಂತೆ ಮಾಡುತ್ತಾರೆ ರೈಲ್ವೆಗಾಡಿಗಳಲ್ಲಿ ಮೊದಲಿನಿಂದಲೂ ಈ ನಮೂನೆಯ ಕಿಟಕಿಗಳು ಉಪಯೋಗದಲ್ಲಿವೆ. ಕಿಟಕಿಗಳ ಜಾರುಕದ ಚೌಕಟ್ಟುಗಳನ್ನು ಮೇಲುಗಡೆ ಹಗ್ಗಗಳಿಂದಲೋ ಸರಪಳಿಗಳಿಂದಲೋ ತೂಗುಹಾಕಿ ಅವುಗಳ ತೂಕವನ್ನು ಚೌಕಟ್ಟಿನಲ್ಲಿ ನೇತಾಡುವ ಸೀಸದ ಭಾರಗಳಿಂದ ಸಮತೂಕ ಮಾಡುವುದೂ ಒಂದೂ ಕ್ರಮ. ಇದಲ್ಲದೆ ಅಡ್ಡಗಲವಾಗಿ ಬಾಗಿಲುಗಳು ಸರಿದಾಡುವಂತೆಯೂ ಮಾಡುತ್ತಾರೆ. ಕಿಟಕಿಯ ಬಾಗಿಲುಗಳನ್ನು ಮರ, ಗಾಜು, ಇವುಗಳಿಂದ ಸಾಮಾನ್ಯವಾಗಿ ಮುಚ್ಚುತ್ತಾರೆ. ಈಚೆಗೆ ಅನೇಕ ಹಗುರವಾದ ಹಲಗೆಗಳು ರೂಢಿಗೆ ಬಂದಿವೆ. ಈ ವಿಭಾಗದಲ್ಲಿ ಇನ್ನೂ ಸಂಶೋಧನೆಗಳು ನಡೆಯುತ್ತಲೇ ಇವೆ. ಇವನ್ನು ಬೇರೆ ಬೇರೆ ವ್ಯಾಪಾರೀ ನಾಮಗಳಿಂದ ಕರೆಯುತ್ತಾರೆ. ತಿರುಗುವ ಕಿಟಕಿಯನ್ನು ಮರದ ಚೌಕಟ್ಟಿನಲ್ಲಿ ಪಕ್ಕಗಳಲ್ಲಿ ತೂಗುಹಾಕಿ ಒಳಕ್ಕೂ ಹೊರಕ್ಕೂ ತೆರೆಯುವ ಹಾಗೆ ಮಾಡುತ್ತಾರೆ. ಹೊರಗೆ ತೆರೆದರೆ ಮಳೆಯ ನೀರು ಒಳಗೆ ಬರುವುದಿಲ್ಲ. ಬಾಗಿಲುಗಳು ಮುಚ್ಚಿದ್ದಾಗ ಮೇಲಿನಿಂದ ಗಾಳಿ ಮನೆಯೊಳಕ್ಕೆ ಬರುವ ಹಾಗೆ ಅವುಗಳ ಮೇಲೆಯೂ ಅಡ್ಡ ಕಿಟಕಿಗಳನ್ನಿಟ್ಟಿರುತ್ತಾರೆ. ಈ ಕಿಟಕಿಗಳು ಮೇಲುಗಡೆ ಬಂಧಿತವಾಗಿದ್ದು ಹೊರಗಡೆಗೆ ತೆರೆಯುತ್ತವೆ. ದೊಡ್ಡ ಕಿಟಕಿಗಳ ಬಾಗಿಲುಗಳು ಹೊರಗಡೆಯಾದರೂ ತೆರೆಯಬಹುದು. ಒಳಗಡೆಯಾದರೂ ತೆರೆಯಬಹುದು. ಉಷ್ಣದೇಶಗಳಲ್ಲಿ ಹೊರಗಡೆ ತೆರೆಯುವುದೇ ಅನುಕೂಲ. ಕಿಟಕಿಗಳ ಗಾಜುಗಳು ಪಾರದರ್ಶಕವಾಗಿರಬಹುದು ಇಲ್ಲವೆ ಅಪಾರದರ್ಶಕ ವಾಗಿರಬಹುದು. ಉಕ್ಕಿನ ಕಿಟಕಿಗಳನ್ನು ಈಗ ಮೇಲುಗಡೆಯೂ ಕೆಳಗಡೆಯೂ ಚೌಕಟ್ಟಿನಲ್ಲಿ ಭದ್ರಮಾಡಿ ತಿರಗಣೆ ಕಿಟಕಿಗಳ ಹಾಗೆ ಎಲ್ಲೆಲ್ಲಿಯೂ ಉಪಯೋಗಿಸುತ್ತಿದ್ದಾರೆ. ಈ ಕಿಟಕಿಗಳ ಉಕ್ಕಿಗೆ ತುಕ್ಕು ಹಿಡಿಯದ ಹಾಗೆ ಆಗಾಗ ಬಣ್ಣವನ್ನು ಬಳಿಯುತ್ತಿರಬೇಕು. ಮರದ ಕಿಟಕಿಗಳಿಗೂ ಹೊರಗಡೆ ಬಣ್ಣವನ್ನು ಹಚ್ಚಿ ಒಳಗಡೆ ವಾರ್ನೀಸು ಇಲ್ಲವೇ ಪಾಲಿಷ್ ಮಾಡುತ್ತಾರೆ. ಅಲ್ಯುಮಿನಿಯಮಿನಿಂದಲೂ ಪ್ಲಾಸ್ಟಿಕ್ಕಿನಿಂದಲೂ ಈಚೆಗೆ ಕಿಟಕಿಗಳು ತಯಾರಾಗುತ್ತಿವೆ.
ಬಾಗಿಲುಗಳನ್ನು ಮೂರು ಬಗೆಯಾಗಿ ವಿಂಗಡಿಸಬಹುದು. (1) ಯಾವ ಸಾಮಗ್ರಿಯಿಂದ ಮಾಡಿದೆಯೋ ಅದನ್ನು ಹೇಳಬಹುದು -ಕಬ್ಬಿಣ, ಮರ, ಇತ್ಯಾದಿ (2) ಮರದ ಬಾಗಿಲುಗಳನ್ನು ರಚನೆಯಲ್ಲಿ ಪುಟೀಪಿನಿಂದ ಇಲ್ಲವೆ ಚೌಕಟ್ಟಿನಿಂದ ಮಾಡಿರಬಹುದು. (3) ಬಾಗಿಲುಗಳು ಹೊರಗಡೆ ತೆರೆಯಬಹುದು ಇಲ್ಲವೆ ಒಳಗಡೆ ತೆರೆಯಬಹುದು. ಬಾಗಿಲುಗಳನ್ನು ಬಡಗಿಗಳು ಬೇಕುಬೇಕಾದ ಅಳತೆಗೆ ತಯಾರಿಸುತ್ತಾರೆ. ನಗರಗಳಲ್ಲಿ ಯಂತ್ರಗಳನ್ನು ಉಪಯೋಗಿಸಿ ಶಿಷ್ಟ ಆಯಾಮಗಳ ಅನುಸಾರ ಅವನ್ನು ತಯಾರಿಸಲಾಗುತ್ತದೆ. ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಒಲೆಗಳ ಶಾಖದಲ್ಲಿ ಹದವಾಗಿ ಒಣಗಿಸಿದ ಮರದಿಂದ ಕ್ಲುಪ್ತವಾದ ಎತ್ತರ, ಅಗಲ ಮತ್ತು ದಪ್ಪದಲ್ಲಿ ದೊಡ್ಡ ರೀತಿಯಲ್ಲಿ ಕಾರ್ಖಾನೆಗಳಲ್ಲಿ ಇವನ್ನು ಮಾಡುತ್ತಾರೆ. ಬಾಗಿಲುಗಳಿಗೆ ಎರಡು ಹಾಳೆಗಳಿರಬಹುದು ಇಲ್ಲವೆ ಒಂದೇ ಹಾಳೆಯಿರಬಹುದು. ಈಚೆಗೆ ಲೋಹಕ ಬಾಗಿಲುಗಳು ಹೆಚ್ಚಾಗಿ ಬಳಕೆಗೆ ಬರುತ್ತಿವೆ. ಹೊರಗಿನ ಬಾಗಿಲುಗಳನ್ನು ಯಾವಾಗಲೂ ಅನೇಕ ಕಡೆ ಲೋಹದಿಂದಲೇ ತಯಾರಿಸುತ್ತಾರೆ. ಮನೆಯನ್ನೂ ಕಟ್ಟುವ ಕಲೆ ಬೆಳೆಯುತ್ತಲೇ ಇದೆ. ಈ ವಿಚಾರದಲ್ಲಿ ಸಂಶೋಧನೆಗಳೂ ನಡೆಯತ್ತಲೇ ಇವೆ.
ಒಂದು ದೊಡ್ಡ ಕಟ್ಟಡವನ್ನು ಕಟ್ಟುವ ಯೋಜನೆಯೂ ಅದಕ್ಕೆ ಆವಶ್ಯವಾದ ವ್ಯವಸ್ಥೆಯೂ ಕೆಲಸಗಾರರು ನಿವೇಶನದ ಹತ್ತಿರಕ್ಕೆ ಬರುವುದಕ್ಕೆ ಬಹಳ ಮುಂಚೆ ಪ್ರಾರಂಭವಾಗುತ್ತದೆ. ಭೂಮಿಯನ್ನು ಮೊದಲು ಮೋಜಣಿ ಮಾಡಿ ಮಣ್ಣಿನ ಗುಣವನ್ನು ಪರೀಕ್ಷಿಸಿದ ಮೇಲೆ ಪೀಠಿಕಾ ರೂಪವಾಗಿ ವಿನ್ಯಾಸಗಳನ್ನೂ ಅಂದಾಜುಗಳನ್ನು ತಯಾರಿಸಬೇಕು. ಕಟ್ಟಡವನ್ನು ಕಟ್ಟಲು ನಗರಸಭೆಯ ಅನುಮತಿಬೇಕು. ನಗರದ ಚರಂಡಿಯ ವ್ಯವಸ್ಥೆ ಮತ್ತು ನೀರಿನ ಸರಬರಾಜನ್ನು ಹೊಂದಿಸಿಕೊಳ್ಳಬೇಕು. ಆ ಕಟ್ಟಡದ ಪ್ರತಿಯೊಂದು ಭಾಗವೂ ತನ್ನ ಮೇಲೆ ಬೀಳುವ ಸ್ಥಾವರ ಮತ್ತು ಜಂಗಮ ಭಾರವನ್ನು ತಡೆಯಬಹುದೆಂದು ಇಂಜಿನಿಯರಿಗೆ ಮನದಟ್ಟಾದ ಮೇಲೆ ಅಖೈರಾಗಿ ನಕ್ಷೆಯನ್ನೂ ಲೆಕ್ಕಾಚಾರಗಳನ್ನೂ ತಯಾರಿಸಬೇಕು. ಒಂದೊಂದು ಭಾಗದಲ್ಲಿಯೂ ಉಪಯೋಗಿಸಬೇಕಾದ ಸಾಮಗ್ರಿಗಳನ್ನು ನಿರ್ಧರಿಸಿದ ಮೇಲೆ ಪ್ರತಿಯೊಂದಕ್ಕೂ ಬೇಕಾಗುವ ಸಾಮಗ್ರಿಗಳ ಪ್ರಮಾಣವನ್ನೂ ಅವಶ್ಯವಾದ ಜನಸಹಾಯವನ್ನೂ ಲೆಕ್ಕ ಹಾಕಬೇಕು. ಕೊನೆಯಲ್ಲಿ ಗುತ್ತಿಗೆದಾರರಿಂದ ದರಖಾಸ್ತು ತರಿಸಿ ದರ ಮತ್ತು ಕೆಲಸನಿರ್ವಹಣೆ ಸಮರ್ಪಕವಾಗಿರುವವರಿಗೆ ಕೆಲಸ ಕೊಡಬೇಕಾಗುತ್ತದೆ. ಕೆಲಸವನ್ನು ಮಾಡಲು ಒಪ್ಪಿಕೊಂಡ ಗುತ್ತಿಗೆದಾರರಿಗೂ ಪುರ್ವಭಾವಿಯಾದ ಕೆಲಸ ಬೇಕಾದಷ್ಟು ಇರುವುದು. ಕಟ್ಟಡವನ್ನು ಸಂವಿಧಾನ ಮಾಡಿದ ಇಂಜಿನಿಯರಿನೊಂದಿಗೆ ಕುಳಿತು ಕಟ್ಟಡದ ಕಾರ್ಯಕ್ರಮವನ್ನು ನಿರ್ಧರಿಸಿಕೊಳ್ಳಬೇಕು. ಬೇಕಾದ ಸಾಮಾನುಗಳಿಗೆ ಏರ್ಪಾಡು ಮಾಡಬೇಕು. ಭೂಮಿಯನ್ನು ಅಗೆಯುವುದಕ್ಕೂ ಅಗೆದ ಮಣ್ಣನ್ನು ಸಾಗಿಸುವುದಕ್ಕೂ ಬೇಕಾಗುವ ಯಂತ್ರಗಳು, ಒಂದೊಂದು ಘಟ್ಟದಲ್ಲಿಯೂ ಬೇಕಾಗುವ ಕೆಲಸಗಾರರು-ಇವಕ್ಕೆಲ್ಲ ಏರ್ಪಾಡು ಮಾಡಬೇಕು.
ಇಂಜಿನಿಯರಿಂದ ತಪಶೀಲಾದ ನಕ್ಷೆಗಳು ಬಂದ ಮೇಲೆ ಅವಕ್ಕನುಸಾರವಾಗಿ ನೆಲದ ಮೇಲೆ ಗುರುತು ಮಾಡಿ ತಳಪಾಯದಲ್ಲಿ ಗಟ್ಟಿಯಾದ ಮಣ್ಣುಸಿಕ್ಕುವವರೆಗೂ ಅಗೆದು ಅವಶ್ಯವಾದ ಕಡೆ ಮರ, ಉಕ್ಕು ಇಲ್ಲವೇ ಪ್ರಬಲಿತ ಕಾಂಕ್ರೀಟಿನ ದಸಿಗಳನ್ನು ಭಾರವಾದ ಸಮಷ್ಟಿಯಿಂದ ಹೊಡೆದು ಹೂಳಬೇಕು. ಮಳೆಯ ನೀರಿನ ಚರಂಡಿಗಳು, ಕುಡಿಯುವ ನೀರಿನ ಕೊಳಾಯಿಗಳು, ಗ್ರಾಮಸಾರದ ಕೊಳವಿಗಳು-ಇವುಗಳಿಗೆ ಅಗಳುಗಳನ್ನು ಸೂಕ್ತವಾದ ಕಡೆ ತೆಗೆದು ಅವುಗಳಿಗೆ ಇಟ್ಟಿಗೆಯಿಂದಲೋ ಕಾಂಕ್ರೀಟಿನಿಂದಲೋ ಅಚ್ಚುಕಟ್ಟನ್ನು ಕಟ್ಟಿ ಮೇಲುಗಡೆ ಕಟ್ಟಡದ ಭಾರವನ್ನು ತಡೆಯುವ ಕಾಂಕ್ರೀಟಿನ ಚಪ್ಪಡಿಗಳನ್ನು ಎಳೆಯಬೇಕು-ಕಾರ್ಖಾನೆಯನ್ನು ಕಟ್ಟುವಾಗ ಭಾರವಾದ ಯಂತ್ರಗಳಿಗೆ ವಿಶಿಷ್ಟವಾದ ಅಡಿಪಾಯವನ್ನು ಹಾಕಬೇಕು. ಕಟ್ಟಡದ ಭಾರವನ್ನು ಹೊರುವುದಕ್ಕೆ ಉಕ್ಕಿನ ಚೌಕಟ್ಟನ್ನು ಈ ಘಟ್ಟದಲ್ಲಿಯೇ ತಂದು ಲಂಬವಾಗಿ ನಿಲ್ಲಿಸಿ ಜಾಲಂದರದ (ಲ್ಯಾಟ್ಟೀಸ್) ಚೌಕಟ್ಟಿನ ಹಂದರವನ್ನು (ಸಕೆಲಿಟನ್) ತಯಾರಿಸಬೇಕು. ಈ ಚೌಕಟ್ಟನ್ನು ಪ್ರಬಲಿತ ಕಾಂಕ್ರೀಟಿನಿಂದ ಮಾಡಿದರೆ ಒಳಗಡೆ ಉಕ್ಕಿನ ಕಂಬಗಳನ್ನು ಲೆಕ್ಕಾಚಾರವಾಗಿ ಕೂಡಿಸಿ ಅಚ್ಚಿನ ಹಲಗೆಗಳ ಮಧ್ಯೆ ಕಂಬಿಗಳ ಸುತ್ತಲೂ ಸಿಮೆಂಟ್ ಕಾಂಕ್ರೀಟನ್ನು ಹೊಯ್ಯುಬೇಕು. ಆಮೇಲೆ ಗೋಡೆಗಳನ್ನು ಇಟ್ಟಿಗೆ ಗಾರೆಯಿಂದಲೋ ಕಲ್ಲುಗಾರೆಯಿಂದಲೋ ಕಟ್ಟಬಹುದು. ಈಚೆಗೆ ಮೊದಲೇ ಜೋಡಿಸಿದ ಮರದ ಇಲ್ಲವೆ ಕಾಂಕ್ರೀಟಿನ ತೆಳ್ಳನೆಯ ಪುಟೀಪುಗಳನ್ನು ಚೌಕಟ್ಟಿಗೆ ಅಂಟಿಸುವುದು ವಾಡಿಕೆ, ಬಾಗಿಲುಗಳಿಗೂ ಕಿಟಕಿಗಳಿಗೂ ಜಾಗವನ್ನು ಬಿಟ್ಟು ಆಮೇಲೆ ಅವನ್ನು ಜೋಡಿಸಬಹುದು. ಕಟ್ಟಡ ಮೇಲಕ್ಕೆ ಹೋದ ಹಾಗೆ ಕಾಲಾವಧಿ (ಸಾರುವೆ) ಬೇಕಾಗುತ್ತದೆ. ಆಗ ಸಾಮಾನುಗಳನ್ನು ಕ್ರೇನುಗಳಿಂದಲೋ ಕಪ್ಪಿಗಳಿಂದಲೋ ಮೇಲಕ್ಕೆ ಎತ್ತಿ ಕೆಲಸಗಾರರಿಗೆ ಒದಗಿಸುತ್ತಾರೆ. ಗೋಡೆಗಳೇ ಭಾರವನ್ನು ಹೊರುವುದಾದರೆ, ಅವನ್ನು ಸಾಕಷ್ಟು ಭದ್ರವಾಗಿ ಕಲ್ಲುಗಾರೆ ಇಟ್ಟಿಗೆ ಇಲ್ಲವೆ ಕಾಂಕ್ರೀಟಿನಿಂದ ಕಟ್ಟಬೇಕು. ಮೇಲಿನ ಮಹಡಿಗಳನ್ನು ಕಟ್ಟುತ್ತಿರುವಾಗ ಕೆಳಗಿನ ಅಂತಸ್ತುಗಳಲ್ಲಿ ಬಾಗಿಲು ಮತ್ತು ಕಿಟಕಿಗಳ ಚೌಕಟ್ಟುಗಳನ್ನು ಅದಕ್ಕಾಗಿ ಬಿಟ್ಟಿರುವ ಜಾಗದಲ್ಲಿ ಕೂರಿಸುತ್ತಾರೆ. ಕಟ್ಟಡದ ಒಳಗಡೆಯ ಅಡ್ಡಗೋಡೆಗಳನ್ನು ಈಗ ಹೊರಗಿನ ಗೋಡೆಗಳಂತೆಯೇ ಕಟ್ಟಲು ಪ್ರಾರಂಭಿಸುತ್ತಾರೆ. ಇವು ತೆಳುವಾಗಿದ್ದರೂ ಒಂದು ಕೊಠಡಿಯಿಂದ ಶಬ್ದ ಇನ್ನೊಂದಕ್ಕೆ ಕೇಳದಂತೆ ವಿಶಿಷ್ಟ ರೀತಿಯಲ್ಲಿರುತ್ತವೆ. ಮಹಡಿಯ ಮೆಟ್ಟಲುಗಳು, ಎತ್ತುಗೆಗಳು, ನೀರಿನ ಕೊಳವೆಗಳು, ವಿದ್ಯುತ್ತಿನ ತಂತಿಗಳು-ಇವಕ್ಕೆಲ್ಲ ಸೂಕ್ತವಾಗಿ ಜಾಗವನ್ನು ಬಿಟ್ಟಿರುತ್ತಾರೆ. ಮೇಲಿನ ಮಹಡಿಗಳನ್ನು ಮಟ್ಟವಾದ ತೊಲೆಗಳ ಮೇಲೆ ತೂರಿಸಿ ಮಾಡಿನ ಚಪ್ಪಡಿಗಳನ್ನು ಪ್ರಬಲಿತ ಕಾಂಕ್ರೀಟಿನಿಂದ ಮಾಡಿರುತ್ತಾರೆ. ಬೇರೆ ಬೇರೆ ಮಹಡಿಗಳಲ್ಲಿ ಸ್ವತಂತ್ರವಾಗಿ ಸಂಸಾರಗಳು ವಾಸಮಾಡುವಾಗ ಶಬ್ದ ಒಂದು ಅಂತಸ್ತಿನಿಂದ ಇನ್ನೊಂದಕ್ಕೆ ಸಂಚಾರಮಾಡದ ಹಾಗೂ ಚೌಕಟ್ಟಿಗೂ ಮಧ್ಯೆ ಒಂದು ಮೆದುವಾದ ಕ್ವಿಲ್ಟನ್ನು ಗಾಜಿನ ಉಣ್ಣೆಯಿಂದಲೋ ಇನ್ನು ಯಾವುದಾದರೂ ಪುಟ ಚಿಮ್ಮುವಂಥ ಸಾಮಗ್ರಿಯಿಂದಲೊ ಇಡುತ್ತಾರೆ. ಚಾವಣಿಗಳು ಬಲವಾಗಿಯೂ ಹಗುರವಾಗಿಯೂ ಇರಬೇಕು.
ಕಟ್ಟಡದ ಗುತ್ತಿಗೆದಾರ ಎಲ್ಲ ಕೆಲಸಕ್ಕೂ ಜವಾಬುದಾರನಾದರೂ ಉಕ್ಕಿನ ಕೆಲಸ, ಒಳಗಡೆಯ ಗಾಳಿಯನ್ನು ಒಂದೇ ಕಾವಿನಲ್ಲಿಟ್ಟಿರುವುದು ಮೊದಲಾದ ಕೆಲಸಗಳನ್ನು ಬೇರೆ ಬೇರೆ ಪ್ರವೀಣರಿಗೆ ಕೊಟ್ಟಿರುತ್ತಾರೆ, ಜೊತೆಗೆ ಕೊಳಾಯಿ ಜೋಡಿಸುವವರು, ಬಡಗಿಗಳು, ಬಣ್ಣ ಬಳಿಯುವವರು-ಇವರ ಕೆಲಸವನ್ನು ಒಂದು ವ್ಯವಸ್ಥೆಗೆ ಅನುಗುಣವಾಗಿ ಮಾಡಬೇಕಾಗುತ್ತದೆ. ಹಣವೂ ಕೆಲಸವೂ ಪೋಲಾಗದೆ ಇರಬೇಕಾದರೆ ಸಾಮಗ್ರಿಗಳು ಸಕಾಲಕ್ಕೆ ಒದಗಬೇಕು. ಅನೇಕ ಚಿಲ್ಲರೆ ಕೆಲಸಗಳಲ್ಲಿ ಒಂದೊಂದಕ್ಕೂ ಎಷ್ಟು ದಿನ ಹಿಡಿಯುತ್ತದೆ-ಎಂದು ಅಂದಾಜು ಮಾಡುವುದಕ್ಕೂ ಇವನ್ನೆಲ್ಲ ಒಂದು ಕಾರ್ಯಕ್ರಮಕ್ಕೆ ಹೊಂದಿಸುವುದಕ್ಕೂ ಅಪಾರವಾದ ಅನುಭವವೂ ವಿವೇಚನಾಶಕ್ತಿಯೂ ಬೇಕು. ಕಟ್ಟಡದ ಕೆಲಸ ಮುಂದುವರಿದ ಹಾಗೆ ಇಂಜಿನಿಯರ್ನ ಪ್ರತಿನಿಧಿ ಮೊದಲು ಮಾಡಿಕೊಂಡ ಕಾರ್ಯಕ್ರಮಕ್ಕೆ ತಿಂಗಳು ತಿಂಗಳು ವಾಸ್ತವವಾಗಿ ನಡೆದ ಕೆಲಸವನ್ನು ಹೋಲಿಸುತ್ತಾನೆ. ಮೊದಲು ಮಾಡಿದ ಅಂದಾಜಿನಲ್ಲಿ ಏನಾದರೂ ವ್ಯತ್ಯಾಸವಾಗಬೇಕಿದ್ದರೆ ಇಲ್ಲವೆ ಮಳೆ ಮುಂತಾದ ಅನಿರೀಕ್ಷಿತ ತೊಂದರೆಗಳು ಒದಗಿದರೆ ಗುತ್ತಿಗೆದಾರರಿಗೆ ಕೊಡಬೇಕಾದ ಹಣವನ್ನು ಸರಿಹೊಂದಿಸಬೇಕಾಗುತ್ತದೆ.
ಕಟ್ಟಡಗಳಿಗೆ ಅಪಾಯಕಾರಿಗಳಾದ ನೈಸರ್ಗಿಕ ಕಾರಣಗಳು ಪ್ರಧಾನವಾಗಿ ನಾಲ್ಕು-ಬೆಂಕಿ, ನೀರು. ಸಿಡಿಲು, ಭೂಕಂಪನ, ಆದ್ದರಿಂದ ಕಟ್ಟಡದ ನಿವೇಶನದ ಆಯ್ಕೆ, ಅಲೇಖ್ಯದ ತಯಾರಿ, ಕಟ್ಟಲು ಬಳಸುವ ವಸ್ತುಗಳ ಸಂಗ್ರಹ, ಕಟ್ಟಿದ ತರುವಾಯ ಕಟ್ಟಡದ ವಿದ್ಯುದೀಕರಣ, ಅಲಂಕರಣ ಮುಂತಾದ ಸಮಸ್ತ ಕ್ರಿಯೆಗಳಲ್ಲೂ ಈ ಅಪಾಯಕಾರಕಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ಯೋಗ್ಯ ನಿವಾರಣೋಪಾಯಗಳನ್ನು ಅಳವಡಿಸಿಕೊಳ್ಳುವುದು ಕಟ್ಟಡರಚನೆಯ ಒಂದು ಪ್ರಮುಖ ಆವಶ್ಯಕತೆ.
ಇದರಲ್ಲಿ ಎರಡು ಹಂತಗಳಿವೆ-ವಸ್ತುಗಳ ಆಯ್ಕೆ ಮತ್ತು ಜೋಡಣೆಗಳಲ್ಲಿ ಬೆಂಕಿಯಿಂದ ತಟ್ಟಬಹುದಾದ ಅಪಾಯವನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸುವುದು; ಬೆಂಕಿ ಬಿದ್ದಾಗ ಅದರ ವ್ಯಾಪ್ತಿ ಏರದಂತೆ, ಅಪಾಯ ಹೆಚ್ಚಾಗದಂತೆ ಎಚ್ಚರ ವಹಿಸುವುದು. ಮರಮಟ್ಟುಗಳ ಬಳಕೆಯನ್ನು ಕನಿಷ್ಠ ಮಿತಿಯಲ್ಲಿಡಬೇಕು. ಇಲ್ಲಿಯೂ ಉರಿಯನ್ನು ತಡೆಯುವ ದ್ರಾವಕಗಳಿಂದ ಅವನ್ನು ಸಂಸ್ಕರಿಸುವುದು ಲೇಸು, ಸಿನಿಮಾ, ನಾಟಕಮಂದಿರಗಳು ಮುಂತಾದ ಸಾರ್ವಜನಿಕ ಕಟ್ಟಡಗಳಲ್ಲಿ ಪೀಠೋಪಕರಣಗಳು, ಪರದೆಗಳು, ಒಳಮಾಡಿಗೆ ಬಳಸುವ ಹಲಗೆಗಳು ಮುಂತಾದುವೆಲ್ಲವನ್ನೂ ಇದೇ ಬಗೆಯ ಸಂಸ್ಕರಣಕ್ಕೆ ಒಳಪಡಿಸಬೇಕು. ಅನೇಕ ದೇಶಗಳಲ್ಲಿ ಕಾಯಿದೆಯ ಮೂಲಕ ಇದನ್ನು ನಿಗದಿಮಾಡಿರುವುದುಂಟು. ಉದಾಹರಣೆಗಾಗಿ ಲಂಡನ್ ಕೌಂಟಿ ಸಭೆಯ ನಿಯಮಾವಳಿಗಳಲ್ಲಿ ಮರ, ಕ್ಯಾನ್ವಾಸ, ಹತ್ತಿಯ ಬಟ್ಟೆಗಳು ಮುಂತಾದುವನ್ನು ಕೆಲವು ದ್ರಾವಕಗಳಲ್ಲಿ ಅದ್ದಿ, ಬೆಂಕಿಬಿದ್ದಾಗ ಉರಿಯದಂತೆ ಮಾಡಬೇಕೆಂಬ ನಿಯಮವಿದೆ. ಆದರೆ ಮರಕ್ಕೆ ಬೆಂಕಿ ತಗಲಿದರೆ ಸುಡದ ಹಾಗೆ ಮಾಡುವುದು ಕಷ್ಟವಾದ್ದರಿಂದ, ಅದಕ್ಕೆ ಬದಲಾಗಿ ಬೆಂಕಿಬಿದ್ದರೆ ಉರಿಯದ ಕಲ್ನಾರಿನಂಥ ಪದಾರ್ಥಗಳನ್ನೇ ಬಳಸಬೇಕೆಂಬ ಶಾಸನ ಮಾಡಿದ್ದಾರೆ (1928). ಈಗ ನೆಲಗಳು, ಮಾಡುಗಳು ಇವನ್ನು ಬೆಂಕಿಯನ್ನು ತಡೆಯುವ ಸಾಮಗ್ರಿಗಳಿಂದಲೇ ತಯಾರಿಸಬೇಕು. ಮೆದುವಾದ ಮರವನ್ನು ಉಪಯೋಗಿಸಕೂಡದು. ಬೆಂಕಿಯ ಒಲೆಯನ್ನು ಬಳಸಬಾರದು. ಉರಿಯ ಮೇಲೆ ಕಾಣುವ ಯಾವ ಕಾಸುವ ಏರ್ಪಾಡನ್ನೂ ನಾಟಕರಂಗದ ಮೇಲೆ ಇಡಬಾರದು. ಎಣ್ಣೆ, ಹತ್ತಿ, ಕಾಗದ, ಸೆಣಬು, ಮರದ ಹಲಗೆಗಳು ಮುಂತಾದುವುಗಳ ಕಾರ್ಖಾನೆಗಳು, ದಾಸ್ತಾನುಮಳಿಗೆಗಳು ಇತ್ಯಾದಿಗಳಲ್ಲಿ ನಿರಂತರ ಜಾಗರೂಕತೆಯೊಂದೇ ಬೆಂಕಿಯಿಂದ ರಕ್ಷಣೆ ಒದಗಿಸುವ ಮಾರ್ಗ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 3 ಪಾಲು ಅಮೋನಿಯಂ ಫಾಸ್ಲಫೇಟ್, 2 ಪಾಲು ಅಮೋನಿಯಂ ನೈಟ್ರೇಟ್ ಮತ್ತು 1 ಪಾಲು ಅಮೋನಿಯಂ ಸಲ್ಫೇಟ್ ಇವುಗಳ ಮಿಶ್ರಣವನ್ನು 40 ಪಾಲು ನೀರಿನಲ್ಲಿ ಕರಗಿಸಿ ಹತ್ತಿಯ ಬಟ್ಟೆಗಳನ್ನು ಅದರಲ್ಲಿ ಅದ್ದಿ ಅವಕ್ಕೆ ಬೆಂಕಿ ತಗಲದ ಹಾಗೆ ಮಾಡುತ್ತಾರೆ. ಮುಚ್ಚಿದ ಉರುಳೆಗಳಲ್ಲಿ ಮರವನ್ನು ಇಟ್ಟು ಕೃತಕವಾಗಿ ಒತ್ತಡವನ್ನು ಪ್ರಯೋಗಿಸಿ, ಬೆಂಕಿಯನ್ನು ತಡೆಯುವ ರಾಸಾಯನಿಕಗಳು ಅದರೊಳಕ್ಕೆ ತೂರುವಂತೆ ಮಾಡುತ್ತಾರೆ. ಇಂಥ ಮರವನ್ನು ಬೆಂಕಿ ತಗಲದ ಮರವೆನ್ನುತ್ತಾರೆ. ನ್ಯೂಯಾರ್ಕ್ ನಗರದ ಕಟ್ಟಡಗಳ ಕಾನೂನಿನಲ್ಲಿ ಒಂದು ಕಟ್ಟಡ 150' ಗಿಂತ ಎತ್ತರವಾಗಿದ್ದರೆ ಹೀಗೆ ಸಂಸ್ಕರಿಸಿದ ಮರವನ್ನು ಮಾತ್ರ ಉಪಯೋಗಿಸಬೇಕೆಂಬ ನಿಯಮವಿದೆ.
ಪ್ರಪಂಚದಲ್ಲಿ ಸಂಭವಿಸುವ ವಾರ್ಷಿಕ ದುರ್ಮರಣಗಳು ಮತ್ತು ಸಂಪತ್ತಿನ ನಾಶ-ಇವುಗಳ ಕಾರಕಗಳಲ್ಲಿ ಮೊದಲ ಸ್ಥಾನ ಬೆಂಕಿಗೇ ಮೀಸಲು. ಆದ್ದರಿಂದ ಬೆಂಕಿಯ ಆಕಸ್ಮಿಕಗಳಿಂದ ಜನ ಹಾಗೂ ಸಂಪತ್ತಿನ ರಕ್ಷಣೆ ಎಲ್ಲ ನಾಗರಿಕ ಸರ್ಕಾರಗಳ ಮತ್ತು ಜನರ ಪ್ರಧಾನ ಹೊಣೆ. ದೊಡ್ಡ ನಗರಗಳಲ್ಲಿ ಒಂದೊಂದು ಸಾರಿ ಬೆಂಕಿ ಬಿದ್ದಾಗಲೂ ಬಂಡವಾಳ ಬಹುಪಾಲು ನಷ್ಟವಾಗುತ್ತದೆ. ಆಸ್ತಿಗಳನ್ನು ವಿಮೆ ಮಾಡುವ ಪದ್ಧತಿಯಿಂದ ಈ ನಷ್ಟ ಬಹು ಜನರಲ್ಲಿ ಹಂಚಿಹೋಗುತ್ತದೆ, ನಿಜ, ಆದರೆ ನಷ್ಟಗೊಂಡ ಸಂಪತ್ತನ್ನೂ ಮರಣಗೊಂಡ ಜನರನ್ನೂ ಹಿಂದೆ ಪಡೆಯಲಾಗುವುದಿಲ್ಲವಷ್ಟೆ. ಬೆಂಕಿಯನ್ನು ತಡೆಯಬಲ್ಲ ಸಾಮಗ್ರಿಗಳಿಂದ ಕಟ್ಟಡಗಳನ್ನು ಕಟ್ಟಿ ಒಂದು ವೇಳೆ ಬೆಂಕಿ ಬಿದ್ದಿದ್ದರೂ ಅದು ಹರಡದ ಹಾಗೆ ಮಾಡಲು ಒಂದು ಕಟ್ಟಡವನ್ನು ಇನ್ನೊಂದರಿಂದ ಪ್ರತ್ಯೇಕಿಸಬೇಕು. ಬೆಂಕಿಬಿದ್ದರೆ ಸುಡಬಹುದಾದ ಸಾಮಾನುಗಳನ್ನು ತುಂಬಿರುವ ಅಥವಾ ಅಪಾಯವೊದಗಬಹುದಾದ ಕೈಗಾರಿಕೆಗಳಿರುವ ದೊಡ್ಡ ಕಟ್ಟಡಗಳಲ್ಲಿ ಗೊಡೆಗಳು, ಮಾಡುಗಳು, ನೆಲಗಳು ಮತ್ತು ತೊಲೆಗಳು ಬೆಂಕಿಯನ್ನು ಎದುರಿಸುವ ಹಾಗಿರಬೇಕು. ಒಂದು ವೇಳೆ ಬೆಂಕಿ ತಗಲಿದರೆ ಅದು ಹರಡಬಹುದಾದ ಮಹಡಿಯ ಮೆಟ್ಟಲುಗಳು ಮತ್ತು ಸಾಮಾನುಗಳನ್ನು ಎತ್ತುವ ಯಂತ್ರಗಳು ಅಪಾಯವನ್ನು ಹರಡುತ್ತವೆ. ಒಂದು ಕಟ್ಟಡವನ್ನು ನಾವು ಯಾವುದಕ್ಕಾಗಿ ಬಳಸುತ್ತೇವೆಯೋ ಅದರಲ್ಲಿಯೇ ಬೆಂಕಿಯನ್ನು ಉತ್ಪತ್ತಿಮಾಡಬಹುದಾದ ಕಾರಣಗಳಿರುತ್ತವೆ. ಉದಾಹರಣೆಗೆ ಯಂತ್ರಗಳ ತಿಕ್ಕಾಟ, ಬೆಂಕಿ ಹೊತ್ತಬಹುದಾದ ಧೂಮಗಳು, ದ್ರವೀಕರಿಸಿದ ಮತ್ತು ಪುಡಿಮಾಡಿದ ಇಂಧನಗಳೂ, ಸ್ಥಾಯೀ ವಿದ್ಯುಚ್ಛಕ್ತಿ (ಸ್ಟ್ಯಾಟಿಕ್ ಎಲೆಕ್ಟ್ರಿಸಿಟಿ)-ಇವು ಇರುವಲ್ಲಿ ಬೆಂಕಿ ಹೊತ್ತುವ ಸಂಭವ ಇದ್ದೇ ಇರುತ್ತದೆ. ಬೆಂಕಿಯಲ್ಲಿ ಉರಿಯಬಹುದಾದ ಸಾಮಗ್ರಿಯನ್ನು ಒಂದೇ ಕಡೆ ಕೂಡಿಟ್ಟರೆ ಒಂದು ಸಾರಿ ಬೆಂಕಿ ತಗಲಿದರೆ, ಎಲ್ಲವೂ ಸೂರೆ ಹೋಗಬಹುದು. ಅದಕ್ಕಾಗಿ ಬೆಲೆಬಾಳುವ ಸಾಮಗ್ರಿಗಳನ್ನು ಒಂದು ವೇಳೆ ಬೆಂಕಿ ತಗಲಿದರೂ, ಆಗುವ ನಷ್ಟ ಬಹಳ ಹೆಚ್ಚಾಗದಂತೆ ರಾಶಿಗಳಾಗಿ ಬೇರ್ಪಡಿಸಿ ಕೂಡಿಡುವುದು ಉತ್ತಮ. ಇದೇ ಕಾರಣಕ್ಕಾಗಿ ಸಾಮಾನುದಾಸ್ತಾನು ಮಳಿಗೆಗಳಲ್ಲಿ ಬೆಂಕಿಯನ್ನು ಆರಿಸುವ ಅನುಕೂಲತೆಗಳಿದ್ದರೂ ಅವನ್ನು ಬಹಳ ದೊಡ್ಡದಾಗಿ ಮಾಡಬಾರದು. ಎಲ್ಲಕ್ಕಿಂತಲೂ ಹೆಚ್ಚಾಗಿ, ಒಂದು ಉಗ್ರಾಣಕ್ಕೆ ಬೆಂಕಿ ತಗಲಿದರೆ ಅದರಲ್ಲಿ ಇರುವ ಜನ ಬೇಗ ಹೊರಗೆ ಹೋಗುವಂತೆ ಮಾರ್ಗಗಳಿರುವುದು ಅವಶ್ಯಕ. ಒಂದೊಂದು ಕಾರ್ಖಾನೆಯಲ್ಲಿಯೂ ಕೊನೆಯ ಪಕ್ಷ ಎರಡು ಪ್ರತ್ಯೇಕ ನಿರ್ಗಮನದ್ವಾರಗಳಿಂದ ಜನರು ಹೊರಗೆ ಹೋಗುವ ವ್ಯವಸ್ಥೆ ಇರಬೇಕು. ಪ್ರತ್ಯೇಕವಾದ ಜಾಗಗಳಿಂದ ಒಳಗಿದ್ದ ಜನ ಹೊರಗೆ ಹೋಗುವ ಹಾಗಿರಬೇಕು.
ಮಳೆಗಾಲದಲ್ಲಿ ಇರಿಸಲಿನ ಹೊಡೆತದಿಂದ, ಅಡಿಪಾಯದ ಸುತ್ತಲೂ ನಿಂತ ನೀರಿನಿಂದ, ತೋಡು ಹೊಳೆ ನದಿಗಳ ಪ್ರವಾಹ ಉಕ್ಕಿಬರುವುದರಿಂದ ಕಟ್ಟಡಗಳಿಗೆ ಅಪಾಯ ಉಂಟು. ಸಿಮೆಂಟ್-ಕಾಂಕ್ರೀಟ್ ರಚನೆಗಳಲ್ಲಿ ಇರಿಸಲಿನಿಂದ ಕಟ್ಟಡದ ಗೋಡೆಗಳಿಗೆ ಆಗುವ ಹಾನಿ ಪ್ರಾಯಶಃ ಏನೂ ಇಲ್ಲ. ಆದರೆ ಇದರಿಂದ ಕಟ್ಟಡದ ಒಳಗೆ ತೇವ ವ್ಯಾಪಿಸಿ ಅಲ್ಲಿನ ಸಾಮಗ್ರಿಗಳಿಗೆ ನಷ್ಟ ಉಂಟಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಉದಾಹರಣೆಗೆ ಆಹಾರದ ಪದಾರ್ಥಗಳು, ಕಾಗದ, ಬಟ್ಟೆ ಮುಂತಾದವುಗಳ ಉಗ್ರಾಣಗಳಲ್ಲಿ ಇಂಥ ರಕ್ಷಣೆ ತೀರ ಅವಶ್ಯ. ಕಟ್ಟಡದ ಹೊರವಲಯದ ಭೂಮಿಯ ಮೇಲೆ ನೀರು ನಿಂತರೆ ಅಡಿಪಾಯಕ್ಕೆ ಅಪಾಯವಾಗುವುದುಂಟು. ಆ ಭಾಗವನ್ನೆಲ್ಲ ಹೊರಕ್ಕೆ ಇಳಿಜಾರಾಗಿರುವಂತೆ ಕಾಂಕ್ರೀಟಿನಿಂದ ಮುಚ್ಚಿ ಅಥವಾ ಬೇಕಾದಂತೆ ಚರಂಡಿಗಳನ್ನು ತೋಡಿ ನೀರು ನಿಲ್ಲದಂತೆ ಮಾಡಬೇಕು.
ಜಲಪ್ರವಾಹದಿಂದ ಒದಗುವ ಅಪಾಯ ಗುರುತರವಾದದ್ದು. ಬ್ರಹ್ಮಪುತ್ರಾ, ಗೋದಾವರಿ, ಕೋಸಿ ಮುಂತಾದ ನದಿಗಳು ತುಂಬುನೆರೆಯಿಂದ ಪ್ರವಹಿಸುವಾಗ ಅವುಗಳ ದಂಡೆಗಳಲ್ಲಿರುವ ನಗರಗಳಿಗೆ ತೀವ್ರ ಹಾನಿ ಆಗುವುದು ನಮ್ಮ ದೇಶದಲ್ಲಿನ ವಾರ್ಷಿಕ ಅನುಭವ. ನಗರದ ನಿವೇಶನಗಳನ್ನು ದೂರದ ಎತ್ತರ ಪ್ರದೇಶಗಳಿಗೆ ವರ್ಗಾಯಿಸುವುದು ಒಂದು ರಕ್ಷಣೋಪಾಯ, ಹಲವಾರು ಶತಕಗಳಿಂದ ವಿಕಸಿಸಿ ಬೆಳೆದುಬಂದಿರುವ ಈ ನಗರಗಳ ಬುಡ ಕೀಳುವುದು ಅಷ್ಟೇನು ಸುಲಭ ವಿಧಾನವಲ್ಲ. ನದಿಗಳಿಗೆ ಅಲ್ಲಲ್ಲಿ ಅಣೆಕಟ್ಟುಗಳನ್ನು ಕಟ್ಟಿ ನೀರಿನ ಸ್ವಚ್ಛಂದ ಹರಿವನ್ನು ಅಂಕೆಗೆ ತಂದು ನೆರೆಯ ಹಾವಳಿಯನ್ನು ನಿಯಂತ್ರಿಸುವುದು ಎರಡನೆಯ ರಕ್ಷಣೋಪಾಯ. ಸ್ವಾತಂತ್ರ್ಯಾನಂತರ ಭಾರತದಲ್ಲಿ ತ್ವರಿತಗತಿಯಿಂದ ಅಧಿಕ ಸಂಖ್ಯೆಯಲ್ಲಿ ಕಟ್ಟಿರುವ, ಕಟ್ಟಲಾಗುತ್ತಿರುವ ನೀರಾವರಿ ಯೋಜನೆಗಳ ಉದ್ದೇಶಗಳಲ್ಲಿ ನದೀ ದಂಡೆಗಳ ನಗರ ರಕ್ಷಣೆಯೂ ಒಂದು. ಮೂರನೆಯ ಒಂದು ರಕ್ಷಣೋಪಾಯವೂ ಇದೆ. ನದೀ ದಂಡೆಗಳ ಆಸುಪಾಸಿನಲ್ಲಿ ಕಟ್ಟುವ ಕಟ್ಟಡಗಳ ರಚನೆಯಲ್ಲಿಯೇ ಯೋಗ್ಯಮಾರ್ಪಾಡುಗಳನ್ನು ಮಾಡಬೇಕು. ತಳಪಾಯಗಳ ರಚನೆ, ಗೋಡೆಗಳ ವಿನ್ಯಾಸ, ನೆರೆನೀರು ಬಂದಾಗ ಹರಿದು ಹೋಗಲು ಕಟ್ಟಡ ಕಟ್ಟಡಗಳ ನಡುವೆ ನಾಲೆಗಳು ಮುಂತಾದ ವಿಶಿಷ್ಟ ವಿಧಾನಗಳಿಂದ ಸಮರ್ಪಕ ರಕ್ಷಣೆ ಒದಗಿಸಬಹುದು.
ಗಗನಚುಂಬಿ ಸೌಧಗಳಿಗೆ, ವಿಶಾಲ ಪ್ರದೇಶಗಳಲ್ಲಿ ಒಂಟಿಯಾಗಿ ನಿಂತಿರುವ ಮನೆಗಳಿಗೆ, ವಿಶೇಷವಾಗಿ ಲೋಹಗಳ ಬಳಕೆಯಿಂದ ನಿರ್ಮಿಸಿದ ಕಟ್ಟಡಗಳಿಗೆ ಸಿಡಿಲಿನ ಹೊಡೆತ ತಾಗಿ ಅದರಿಂದ ಬೆಂಕಿಯ ಉತ್ಪಾದನೆಯಾಗುವುದು ವಿರಳವಲ್ಲ. ಇಂಥವುಗಳಿಗೆ ಸಿಡಿಲುಗ್ರಾಹಕಗಳನ್ನು ಅಳವಡಿಸಿ ಮಿಂಚಿನಲ್ಲಿ ಪ್ರವಹಿಸುವ ವಿದ್ಯುಚ್ಛಕ್ತಿಯನ್ನು ಅವುಗಳ ಮೂಲಕ ಭೂಮಿಗೆ ಒಯ್ದು ಕಟ್ಟಡಗಳನ್ನು ರಕ್ಷಿಸುತ್ತಾರೆ.
ನೈಸರ್ಗಿಕ ಭೂಕಂಪದ ಜೊತೆಗೆ ಕಾರ್ಖಾನೆಗಳಿಂದಲೂ ನೆಲದ ಅದಿರುವಿಕೆ ಆಗುತ್ತಿರುತ್ತದೆ. ಉದಾಹರಣೆಗೆ ರೈಲ್ವೆ ಹಳಿಯ ಸಮೀಪದ ಕಟ್ಟಡಗಳ ಅಡಿಪಾಯಗಳು ರೈಲುಬಂಡಿ ಸಾಗುವಾಗಲೆಲ್ಲ ಸಂಭವಿಸುವ ನೆಲದ ಅದಿರುವಿಕೆಯನ್ನು ಇದುರಿಸಿ ಕಟ್ಟಡಗಳಿಗೆ ರಕ್ಷಣೆ ಒದಗಿಸುವಂತಿರಬೇಕು. ಆಧುನಿಕ ಕಟ್ಟಡ ನಿರ್ಮಾಣತಂತ್ರ ಈ ಸಮಸ್ಯೆಯನ್ನು ಪರಿಶೀಲಿಸಿ ಧಕ್ಕಾನಿರೋಧಕ ರಚನೆಗಳನ್ನು ಅಳವಡಿಸುವುದರಲ್ಲಿ ಯಶಸ್ವಿಯಾಗಿದೆ. ಎಲ್ಲ ಮಹಾನಗರಗಳಲ್ಲಿಯೂ ಇಂಥ ಕಟ್ಟಡಗಳು ಈಗ ಸಾಮಾನ್ಯವಾಗಿವೆ.
ನೈಸರ್ಗಿಕ ಭೂಕಂಪನಗಳು ಸರ್ವಪ್ರದೇಶವ್ಯಾಪಿಗಳಲ್ಲ, ಸಾರ್ವಕಾಲಿಕ ಘಟನೆಗಳಲ್ಲ. ಆದರೂ ಅವು ಸಾಮಾನ್ಯವಾಗಿ ತಲೆದೋರುವ ಭೂಕಂಪನಪಟ್ಟಿಯ ಪ್ರದೇಶಗಳಲ್ಲಿ ವಿಶಿಷ್ಟ ಮಾದರಿಯ ನಿರ್ಮಾಣಗಳು ಅನಿವಾರ್ಯವಾಗಿವೆ. ಕಂಪನ ಎಷ್ಟೇ ತೀವ್ರವಾಗಿದ್ದರೂ ಕಟ್ಟಡ ಕುಸಿಯಬಾರದು. ಕುಸಿದಾಗಲೂ ಜನ, ಸಂಪತ್ತುಗಳಿಗೆ ಆಗುವ ನಷ್ಟ ಕನಿಷ್ಠವಾಗಿರಬೇಕು. ಕಟ್ಟಡಗಳು ಸುಲಭಸಾಧ್ಯವಾಗಿರಬೇಕು. ಇವೇ ಮುಂತಾದುವು ಇಂಥ ರಚನೆಗಳ ಹಿಂದೆ ಇರುವ ಮಾರ್ಗದರ್ಶೀ ಸೂತ್ರಗಳು, ಜಪಾನಿನಲ್ಲಿ ಮತ್ತು ಮಹಾರಾಷ್ಟ್ರದ ಕೊಯ್ನಾದಲ್ಲಿ ಇಂಥ ಭೂಕಂಪನ ಧಕ್ಕಾನಿರೋಧಕ ಕಟ್ಟಡಗಳನ್ನು ಕಾಣಬಹುದು.
ಮಾಲೀಕನಿಗೆ ಯಾವ ನಮೂನೆಯ ಕಟ್ಟಡ ಬೇಕೋ ಅದನ್ನು ಸುಲಭ ಖರ್ಚಿನಿಂದಲೂ ಲಕ್ಷಣವಾಗಿಯೂ ಸಂವಿಧಾನ ಮಾಡಿ ಕಟ್ಟುವುದರಲ್ಲಿ ಇಂಜಿನಿಯರ್ನ ಕೌಶಲ ಕಾಣುತ್ತದೆ. ಕಟ್ಟಡದ ಉದ್ದೇಶ, ಅದನ್ನು ಕಟ್ಟತಕ್ಕ ಜಾಗ-ಇವುಗಳಿಗೆ ಅವನು ಸಂವಿಧಾನವನ್ನು ಹೊಂದಿಸಬೇಕು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.