From Wikipedia, the free encyclopedia
ಯಲ್ಲಾಪುರ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಮತ್ತು ಅದರ ಆಡಳಿತ ಕೇಂದ್ರ. ಹುಬ್ಬಳ್ಳಿಯನ್ನು ಅಂಕೋಲಾಗೆ ಸಂಪರ್ಕಿಸುವ NH63ರಲ್ಲಿ ಸಾಗಿದರೆ ಸಿಗುವ ಪ್ರಕೃತಿ ಸೊಬಗಿನ ರಮ್ಯ ತಾಣ.
ಯಲ್ಲಾಪುರ
Yellapur | |
---|---|
ಪಟ್ಟಣ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಉತ್ತರ ಕನ್ನಡ |
Elevation | ೫೪೧ m (೧,೭೭೫ ft) |
Population (2001) | |
• Total | ೧೭,೯೩೮ |
ಭಾಷೆಗಳು | |
• ಅಧಿಕೃತ | ಕನ್ನಡ |
• ಪ್ರಾದೇಶಿಕ | ಸಿರ್ಸಿ ಕನ್ನಡ |
Time zone | UTC+5:30 (IST) |
ಹೆಚ್ಚಾಗಿ ಕೃಷಿಕರನ್ನೇ ಹೊಂದಿರುವ ಈ ತಾಲೂಕು ಅಡಿಕೆ ಬೆಳೆಯನ್ನು ಜಾಸ್ತಿ ಹೊಂದಿದೆ.
ಯಲ್ಲಾಪುರವೆಂದರೆ ಅಚ್ಚ ಮಲೆನಾಡು. ತಂಪಾದ ವಾತಾವರಣದೊಂದಿಗೆ ಸಸ್ಯ ಶ್ಯಾಮಲೆಯ ವಾಸವು ಹೇರಳವಾಗಿದೆ. .
ಇಲ್ಲಿ ಅನೇಕ ವಿಧವಾದ ಜನಾಂಗಗಳಿದ್ದು ಹವ್ಯಕ, ಒಕ್ಕಲಿಗ, ಗೌಡ, ಸಿದ್ದಿ ಜನಾಂಗದವರೂ ಕೂಡ ವಾಸವಾಗಿದ್ದಾರೆ. ಇಲ್ಲಿ ಭತ್ತವನ್ನು ಆಹಾರ ಬೆಳೆಯಾಗಿ ನಂಬಿಕೊಂಡರೆ, ಅಡಿಕೆ, ತೆಂಗು, ಏಲಕ್ಕಿ, ಮೆಣಸು, ಬಾಳೆ ಮುಂತಾದವು ವಾಣಿಜ್ಯ ಬೆಳೆಯಾಗಿದೆ.
ದಕ್ಷಿಣಕ್ಕೆ ಸಿರ್ಸಿ, ನೈಋತ್ಯಕ್ಕೆ ಅಂಕೋಲ, ಪಶ್ಚಿಮ ಮತ್ತು ವಾಯುವ್ಯಕ್ಕೆ ಕಾರವಾರ, ಉತ್ತರಕ್ಕೆ ಹಳಿಯಾಳ ತಾಲ್ಲೂಕುಗಳು ಈಶಾನ್ಯದಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕು ಸುತ್ತುವರಿದಿವೆ. ಮಂಚಿಕೇರಿ, ಯಲ್ಲಾಪುರ ಹೋಬಳಿಗಳು. 133 ಹಳ್ಳಿಗಳಿವೆ. ವಿಸ್ತೀರ್ಣ 1525 ಚ.ಕಿ.ಮೀ. ಈ ತಾಲ್ಲೂಕಿನ ಜನಸಂಖ್ಯೆ 73,504 (2001). ಪಟ್ಟಣದ ಜನಸಂಖ್ಯೆ 17,938 (2001). ಈ ತಾಲ್ಲೂಕು ಸುಂದರವಾದ ಪರ್ವತ ಶ್ರೇಣಿ, ಕೊಳ್ಳ, ಅರಣ್ಯ, ಜಲಪಾತ ಮತ್ತು ವನ್ಯಪ್ರಾಣಿಗಳಿಂದ ಶೋಭಿಸುತ್ತಿದೆ. ಇದು ಮಲೆನಾಡು, ಕೊಂಕಣ ಬಯಲು ಸೀಮೆಗಳ ಮಧ್ಯವರ್ತಿ ಸ್ಥಳ. ಇಲ್ಲಿಯ ಹವೆ ತಂಪು. ಸರಾಸರಿ ವಾರ್ಷಿಕ ಮಳೆ 2286 ಮಿಮೀ. 1,18,703 ಚ.ಕಿಮೀ ವಿಸ್ತೀರ್ಣವುಳ್ಳ ಅರಣ್ಯವಿದೆ. ಮುಖ್ಯ ಬೆಳೆ ಬತ್ತ. 5440 ಹೆಕ್ಟೇರ್ ಪ್ರದೇಶದಲ್ಲಿ ಇದನ್ನು ಬೆಳೆಸಲಾಗುತ್ತಿದೆ. ಕಬ್ಬು, ತೆಂಗು, ಅಡಿಕೆ, ಯಾಲಕ್ಕಿ, ಮೆಣಸು, ಬಾಳೆ ಇತರ ಬೆಳೆಗಳು. ಅಲ್ಪ ಪ್ರಮಾಣದಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಬೇಡ್ತಿನದಿ (ಗಂಗಾವಳಿ) ಈಶಾನ್ಯ ದಿಕ್ಕಿನಿಂದ ನೈಋತ್ಯಕ್ಕೆ ಹರಿದು ಅಂಕೋಲದ ದಕ್ಷಿಣದಲ್ಲಿ ಅರಬ್ಬೀ ಸಮುದ್ರ ಸೇರುತ್ತದೆ. ಕಾಳೀನದಿ ಉತ್ತರ ಮತ್ತು ವಾಯುವ್ಯದ ಗಡಿಯಾಗಿ ಹರಿಯುತ್ತದೆ. ಸುತ್ತಲೂ ಪಟ್ಟಣಗಳಿಗೆ ಮತ್ತು ಕರಾವಳಿ ಬಂದರುಗಳಿಗೆ ಉತ್ತಮ ಮಾರ್ಗಗಳಿದ್ದು ವ್ಯಾಪಾರ, ವಾಣಿಜ್ಯಕ್ಕೆ ಅನುಕೂಲಕರವಾಗಿವೆ. ಪಶ್ಚಿಮದಲ್ಲಿ ಸುಮಾರು 14 ಕಿ.ಮೀ. ದೂರದಲ್ಲಿ ಗಣೇಶ ಗುಡ್ಡ ಘಾಟ್ ಮಾರ್ಗವಿದೆ. ಅಣಸೆ ಮತ್ತು ಅರೆಬೈಲ ಕಣಿವೆ ಮಾರ್ಗಗಳು ಕಾರವಾರ, ಅಂಕೋಲ, ಕುಮಟ, ಹೊನ್ನಾವರಗಳೊಡನೆ ಸಂಪರ್ಕ ಕಲ್ಪಿಸುತ್ತವೆ. ಇಲ್ಲಿರುವ ಸಿದ್ಧಿ ಜನಾಂಗ ಈ ಜಿಲ್ಲೆಯ ವೈಶಿಷ್ಟ್ಯವೆನಿಸಿದೆ.
ವಿದೇಶಗಳಿಗೆ ರಫ್ತುಮಾಡಿ ಹಣ ತರುವಂಥ ಮ್ಯಾಂಗನೀಸು ಕಲ್ಲುಗಳು ಬಿಸಗೋಡ. ತಳಕೆಬೈಲಗಳಲ್ಲಿ ದೊರೆಯುತ್ತವೆ. ಚುನಾಹುಕ್ಕಲಿ ಎಂಬಲ್ಲಿ ಸುಣ್ಣದ ಕಲ್ಲುಗಳು ಲಭ್ಯ. ಗಾಜಿನ ಹರಳುಗಳನ್ನು ತಯಾರಿಸಲು ಅನುಕೂಲವಾದ ಮಣ್ಣು ಸಹ ಹುತ್ಕಂಡದ ಸಮೀಪ ದೊರೆಯುವುದೆಂದು ಭೂವಿಜ್ಞಾನ ಸಂಶೋಧನೆಯಿಂದ ತಿಳಿದುಬಂದಿದೆ. ಹಿಂದೆ ಬ್ರಿಟಿಷರು ಬೇಟೆಯಾಡಲು ಬಂದಾಗ ವಾಸಿಸುತ್ತಿದ್ದ ಬಂಗಲೆಯ ಅವಶೇಷಗಳನ್ನು ಇಲ್ಲಿ ಕಾಣಬಹುದು. ಅಡವಿಯಲ್ಲಿ ಬಿದಿರು, ಶ್ರೀಗಂಧ ತೇಗ, ಮತ್ತಿ, ಬೀಟೆ, ಹಾಗೂ ಇತರ ಅಮೂಲ್ಯ ವೃಕ್ಷ ಸಂಪತ್ತಿದೆ. ಕಿರಿವತ್ತಿಯ ಕಟ್ಟಿಗೆಯ ಡಿಪೋ ರಾಜ್ಯದಲ್ಲಿಯೇ ಹೆಸರಾದ್ದು. ಕಾಡುಗಳಲ್ಲಿ ಜೇನುತುಪ್ಪ ವಿಪುಲವಾಗಿ ದೊರೆಯುತ್ತದೆ. ವಿಭಾಗೀಯ ಅರಣ್ಯ ಕಚೇರಿಯೂ ಇಲ್ಲಿದೆ. ಅರಣ್ಯ ರಕ್ಷಕರನ್ನು ತರಬೇತಿ ಮಾಡಲು ಯಲ್ಲಾಪುರದಲ್ಲಿ ತರಬೇತಿ ಶಾಲೆ ಇದೆ.
ಯಲ್ಲಾಪುರ ತಾಲ್ಲೂಕಿನ ಆಡಳಿತ ಕೇಂದ್ರ. ಇಲ್ಲಿ ಗ್ರಾಮದೇವಿ ದೇವಾಲಯವಿದ್ದು ಪ್ರತಿ ಮೂರು ವರ್ಷಕ್ಕೆ ಜರುಗುವ ಜಾತ್ರೆ ತನ್ನದೇ ಆದ ವಿಶಿಷ್ಟ ಆಚರಣೆ,ನಂಬಿಕೆಗಳಿಂದ ಪ್ರಸಿದ್ಧವಾಗಿದೆ.ಯಲ್ಲಾಪುರ ಸಣ್ಣ ಪಟ್ಟಣವಾದರೂ ಇಲ್ಲಿ ಮೂರು ವರ್ಷಕ್ಕೊಮ್ಮೆ ಜರುಗುವ ಜಾತ್ರೆಯು ಲಕ್ಷಾಂತರ ಜನರನ್ನು ತನ್ನತ್ತ ಸೆಳೆಯುತ್ತದೆ.
ಪುರಸಭೆ ಊರಿನ ಆಡಳಿತ ನೋಡಿಕೊಳ್ಳುತ್ತದೆ. ಇಲ್ಲಿ ಸರ್ಕಾರಿ ಆಡಳಿತ ಕಚೇರಿಗಳು, ನ್ಯಾಯಾಲಯಗಳು, ಮರ ಕೊಯ್ಯುವ ಕಾರ್ಖಾನೆ, ಸಹಕಾರಿ ಸಂಸ್ಥೆಗಳು, ಬ್ಯಾಂಕುಗಳು, ಶಿಕ್ಷಣಸಂಸ್ಥೆ ಆರೋಗ್ಯ ಕೇಂದ್ರ ವಿದ್ಯುಚ್ಛಕ್ತಿ ಅಂಚೆತಂತಿ ದೂರವಾಣಿ ಪ್ರವಾಸಿಮಂದಿರಗಳ ಸೌಲಭ್ಯಗಳಿವೆ. ಇದಲ್ಲದೆ ತಾಲ್ಲೂಕಿನಲ್ಲಿ ಯುವಕ ಸಂಘಗಳು, ಮಹಿಳಾ ಮಂಡಳಿಗೂ ಸಕ್ರಿಯವಾಗಿವೆ.
ಪಶ್ಚಿಮ ಘಟ್ಟಗಳ ಸೆರಗಿನಲ್ಲಿರುವ ಈ ಪ್ರದೇಶವು ಹೇರಳ ಸಂಖ್ಯೆಯ ಝರಿ-ತೊರೆಗಳಿಂದ ಕೂಡಿದ್ದು, ಮನಸ್ಸಿಗೆ ಮುದ ನೀಡುವ ಹತ್ತು ಹಲವು ಜಲಪಾತಗಳನ್ನು ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡಿದೆ. ಅವುಗಳಲ್ಲಿ ಪ್ರಮುಖವಾದುವೆಂದರೆ ಸಾತೊಡ್ಡಿ ಮತ್ತು ಮಾಗೋಡು ಜಲಪಾತಗಳು. ಇವಲ್ಲದೇ, ಅಜ್ಜಿಗುಂಡಿ, ಬೆಣ್ಣೆಜಡ್ಡಿ, ಕಂಚಿನಗದ್ದೆ, ದಬ್ಬೇಸಾಲು ಜಲಪಾತಗಳು ಇನ್ನೂ ಎಲೆ ಮರೆಯ ಕಾಯಿಗಳಂತೆ ಇವೆ. ಬಹುಶಃ ಇವುಗಳನ್ನು ತಲುಪಲು ಸರಿಯಾದ ದಾರಿ ಇಲ್ಲದಿರುವುದರಿಂದಲೇ ಏನೋ ಇವು ಇನ್ನೂ ಬೆಳಕಿಗೆ ಬಂದಿಲ್ಲ.ಮಾಗೋಡು ಜಲಪಾತಕ್ಕೆ ಹೊಗುವ ದಾರಿಯಲ್ಲಿ ಸಿಗುವ ಕವಡೀಕೆರೆ, ಚಂದಗುಳಿ, ಜೇನ್ ಕಲ್ ಗುಡ್ಡ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಯಲ್ಲಾಪುರದಿಂದ 22 ಕಿ.ಮೀ. ಹಾಗೂ ಮಂಚಿಕೇರಿಯಿಂದ 8 ಕಿ.ಮೀ ದೂರದಲ್ಲಿ ಗಂಗಾವಳೀ ಬಳಿ 274 ಮೀ. ಎತ್ತರದಿಂದ ಧುಮುಕುವ ಪ್ರಸಿದ್ಧ ಮಾಗೋಡ ಜಲಪಾತವಿದೆ. ಇದರ ಸೌಂದರ್ಯ ಜೋಗದ ಜಲಪಾತಕ್ಕೆ ಸರಿಸಾಟಿ. ಇಲ್ಲೊಂದು ಪ್ರವಾಸಿಮಂದಿರ ಉಂಟು. ಈ ಜಲಪಾತದಿಂದ ವಿದ್ಯುತ್ ತಯಾರಿಸುವ ಸಲುವಾಗಿ ಮಂಚಿಕೇರಿಯಿಂದ 6 ಕಿ.ಮೀ. ದೂರದಲ್ಲಿ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಕೆಲಸ ನಡೆಯುತ್ತಿದೆ. ಇಲ್ಲಿ ಒಂದು ಪ್ರಸಿದ್ಧ ಚಕ್ರವ್ಯೂಹದ ಮಾದರಿಯ ಕೋಟೆ ಇದ್ದು. ಇದಕ್ಕೆ ಹೊಲತಿ ಕೋಟೆ ಎಂಬ ಹೆಸರಿದೆ. ಈ ಕೋಟೆಯನ್ನು ಬೇಡತಿ, ಶಾಲ್ಮಲ ನದಿಗಳು ಸುತ್ತುವರಿದಿದೆ.
ಯಲ್ಲಾಪುರದ ಉತ್ತರಕ್ಕೆ 15 ಕಿ.ಮೀ. ದೂರದಲ್ಲಿ ಲಾಲಗುಳಿ ಗ್ರಾಮದ ಹತ್ತಿರದ ತಟ್ಟೆ ಹಳ್ಳ ಕಾಳಿನದಿಗೆ ಲಾಲಗುಳಿ ತಡಸಲು ಅಥವಾ ಮಾಲಾ ಜಲಪಾತ 91.5 ಮೀ. ಎತ್ತರದಿಂದ ಧುಮುಕುತ್ತದೆ. ಈ ದೃಶ್ಯ ರಮಣೀಯ. ಈ ಪ್ರದೇಶಕ್ಕೆ ಒಡೆಯರಾಗಿದ್ದ ಸ್ವಾದಿ ಅರಸರು ಅಪರಾಧಿಗಳನ್ನು ಇಲ್ಲಿ ತಂದು ಕೆಳಗುರುಳಿಸಿ ಕೊಲ್ಲುತ್ತಿದ್ದರೆಂದು ಹೇಳಲಾಗಿದೆ. ಯಲ್ಲಾಪುರ ಮಾಗೋಡು ರಸ್ತೆಯಲ್ಲಿರುವ (ಯಲ್ಲಾಪುರದಿಂದ 10 ಕಿ.ಮೀ.) ಅಣಲಗಾರಿನಲ್ಲಿ ಗೋಪಾಲಕೃಷ್ಣ ದೇವಾಲಯ ಇದೆ. ವಿಜಯನಗರ ಶೈಲಿಯಲ್ಲಿ ಇದು ನಿರ್ಮಾಣಗೊಂಡಿದೆ. ಮುಖ್ಯ ಮಂಟಪ, ನವರಂಗ ಮತ್ತು ಗರ್ಭಗೃಹಗಳು ಈ ದೇವಾಲಯದಲ್ಲಿದೆ. ನವರಂಗದ ಮೇಲೆ ಅಷ್ಟದಿಕ್ಪಾಲಕರನ್ನು ಕಂಡರಿಸಲಾಗಿದೆ. ಗೋಪಾಕೃಷ್ಣನ ವಿಗ್ರಹ ಕಪ್ಪು ಶಿಲೆಯದಾಗಿದ್ದು ಪ್ರವೇಶದ್ವಾರದ ಎರಡು ಬದಿಗೆ ಗೋಪಿಕೆ ಮತ್ತು ದ್ವಾರಪಾಲಕರಿದ್ದಾರೆ. ದೇವಾಲಯದ ಹೊರಭಾಗದ ಗೋಡೆಗಳ ಮೇಲೆ ಹಿಂದೂ ಪುರಾಣ ಕತೆಗಳನ್ನು ಚಿತ್ರಿಸಲಾಗಿದೆ. ಉತ್ತರ ಕನ್ನಡದ ಮೂರು ಶ್ರೀ ಕ್ಷೇತ್ರಗಳಲ್ಲಿ ಅಣಲಗಾರ ಒಂದೆಂದು ಹೇಳಲಾಗಿದೆ.
ಈ ತಾಲ್ಲೂಕಿನ ಇತಿಹಾಸ ಪ್ರಾಚೀನವಾದ್ದು ರಾಮಾಯಣ, ಮಹಾಭಾರತದ ಕಾಲದಲ್ಲಿಯ ಕೆಲವು ಐತಿಹ್ಯಗಳಿವೆ. ಸಮೀಪದಲ್ಲಿ ಪಾಂಡವರ ಹೊಳೆಯೂ ಇರುವುದರಿಂದ ಪಾಂಡವರು ಸಹ ಕೆಲಕಾಲ ಇಲ್ಲಿ ವಾಸಿಸಿದ್ದರೆನ್ನಲಾಗಿದೆ. ಶೂರ್ಪಣಖಿ ಸೂಪಾದಲ್ಲಿ (ಈಗ ಮುಳುಗಡೆಯಾಗಿದೆ) ವಾಸಮಾಡಿ. ಯಲ್ಲಾಪುರದಿಂದ ಮುಂಡಗೋಡದವರೆಗೆ ರಾಜ್ಯಭಾರ ಮಾಡುತ್ತಿದ್ದಳೆನ್ನಲಾಗಿದೆ. ಈಗಿನ ಯಲ್ಲಾಪುರದ ಬಹುಭಾಗ ಸ್ವಾದಿಯ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. 1900ರವರೆಗೂ ಸೂಪಾ ತಾಲ್ಲೂಕಿನ ಮುಖ್ಯಸ್ಥಳವಾಗಿದ್ದ ಇದನ್ನು 1959ರಲ್ಲಿ ಸ್ವತಂತ್ರ ತಾಲ್ಲೂಕು ಮಾಡಲಾಯಿತು.
ಭಾರತ ಸ್ವಾತಂತ್ರ್ಯಕ್ಕಾಗಿ ಈ ಭಾಗದ ಜನತೆ ಮಾಡಿದ ತ್ಯಾಗ ಅನುಪಮ ಹಾಗೂ ಅವಿಸ್ಮರಣೀಯ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.