Remove ads
ಗಣಿತಜ್ಞ From Wikipedia, the free encyclopedia
ಬರ್ಟ್ರಾಂಡ್ ರಸಲ್ ಒಬ್ಬ ಬ್ರಿಟಿಷ್ ತತ್ವಜ್ಞಾನಿ, ಗಣಿತಜ್ಞ, ಇತಿಹಾಸಕಾರ, ಬರಹಗಾರ, ರಾಜಕೀಯ ಹೋರಾಟಗಾರ, ಸಮಾಜವಾದಿ ಹಾಗೂ ತರ್ಕಶಾಸ್ತ್ರಜ್ಞ. ಇವನೊಬ್ಬ ಶಾಂತಿದೂತ ಹಾಗೂ ಪ್ರಗತಿಪರ ಚಿಂತಕ. ೨೦ನೆಯ ಶತಮಾನದ ಬೌದ್ಧಿಕವಲಯದಲ್ಲಿ ರಸೆಲ್ನದು ಬಹು ದೊಡ್ಡ ಹೆಸರು. ಅವನು ಬಹುಶ್ರುತ ವಿದ್ವಾಂಸ, ಘನ ಪಂಡಿತ. ಇವನ ಕೃತಿಗಳು ಭಾಷಾಶಾಸ್ತ್ರ, ತತ್ವಶಾಸ್ತ್ರ, ಸಮಾಜಶಾಸ್ತ್ರ, ಅಧ್ಯಾತ್ಮಶಾಸ್ತ್ರ, ಜ್ಞಾನಮೀಮಾಂಸೆ, ಗಣಿತಶಾಸ್ತ್ರ, ಮನಶ್ಶಾಸ್ತ್ರಗಳಂತಹ ಹತ್ತಾರು ಅನೇಕ ಗಂಭೀರ ಪ್ರಕಾರಗಳ ಮೇಲೆ ತಕ್ಕ ಮಟ್ಟಿನ ಪ್ರಭಾವ ಬೀರಿವೆ.
ಜನನ | Bertrand Arthur William Russell ೧೮ ಮೇ ೧೮೭೨ Trellech, Monmouthshire,[೧] United Kingdom |
---|---|
ಮರಣ | 2 February 1970 97) Penrhyndeudraeth, Wales, United Kingdom | (aged
ವಾಸ್ತವ್ಯ | United Kingdom |
ರಾಷ್ಟ್ರೀಯತೆ | British |
ಕಾಲಮಾನ | 20th-century philosophy |
ಪ್ರದೇಶ | Western philosophy |
ಪರಂಪರೆ | Analytic philosophy |
ಮುಖ್ಯ ಹವ್ಯಾಸಗಳು |
|
ಗಮನಾರ್ಹ ಚಿಂತನೆಗಳು |
|
ಪ್ರಭಾವಕ್ಕೋಳಗಾಗು
| |
ಪ್ರಭಾವ ಬೀರು
| |
ಪ್ರಶಸ್ತಿಗಳು | De Morgan Medal (1932) Sylvester Medal (1934) Nobel Prize in Literature (1950) Kalinga Prize (1957) Jerusalem Prize (1963) |
ಸಹಿ |
ಇವನ ಜ್ಞಾನದ ವಿಸ್ತಾರ ಆಶ್ಚರ್ಯಕರವಾದುದು. ಗಣಿತಶಾಸ್ತ್ರ, ತರ್ಕಶಾಸ್ತ್ರ, ತತ್ತ್ವಶಾಸ್ತ್ರಗಳ ಅಧ್ಯಯನದ ಬೌದ್ಧಿಕ ಶಿಸ್ತನ್ನು ಅರಗಿಸಿಕೊಂಡ ಈತನ ವಿಷಯ ಸಂಗ್ರಹ, ಜೋಡಣೆ, ಹರಿತವಾದ ತರ್ಕಶಕ್ತಿ, ಯಾವ ವಿಷಯವನ್ನೇ ಆರಿಸಿಕೊಳ್ಳಲಿ ಅದರ ನಿರೂಪಣೆಗೆ ಪರಿಣಾಮ ನೀಡುತ್ತವೆ. ವಿಶಾಲವಾದ ಹಿನ್ನೆಲೆಯಲ್ಲಿ ಪ್ರತಿ ವಿಷಯದ ಮೌಲ್ಯ ನಿರ್ಧರಿಸುವುದು ಈತನ ಮಾರ್ಗ. ಪೂರ್ವನಿಶ್ಚಿತ ಅಭಿಪ್ರಾಯಗಳ ಸಂಕೋಲೆ ಇಲ್ಲದೆ ಯಾವ ಒಂದು ರಾಷ್ಟ್ರ ಅಥವಾ ಪಂಥ ಅಥವಾ ಮತದ ಪ್ರತಿಪಾದನೆಗೆ ಕಟ್ಟುಬೀಳದೆ ನಿರ್ಭಯವಾಗಿ ತನ್ನ ವಿಚಾರ ವಾಹಿನಿಯನ್ನು ಮುಂದಿಟ್ಟ. ರಾಷ್ಟ್ರ ಪ್ರೇಮ, ಸಮಾಜನೀತಿ, ಮೊದಲಾದ ವಿಷಯಗಳನ್ನು ಕುರಿತು ಈತ ವ್ಯಕ್ತಪಡಿಸಿದ ಅಭಿಪ್ರಾಯಗಳು ಹಲವರನ್ನು ಅಸಮಾಧಾನಗೊಳಿಸಿವೆ. ರಸಲ್ ಬುದ್ಧಿಗೆ ಹೆಚ್ಚಿನ ಪ್ರಾಧಾನ್ಯ ಕೊಡುತ್ತಾನೆ; ಹೃದಯದ ಪ್ರಭಾವವನ್ನು ಸಂಪೂರ್ಣವಾಗಿ ಅರಿತಿಲ್ಲ ಎನ್ನುವುದು ಇವನ ಬರೆಹಗಳನ್ನು ಕುರಿತ ಒಂದು ಆಕ್ಷೇಪಣೆ.
ಬರ್ಟ್ರಾಂಡ್ ರಸೆಲ್ ೧೮ ಮೇ ೧೮೭೦ರಲ್ಲಿ ಬ್ರಿಟನ್ನಿನ ಮಾನಮೌಂಟ್ಶೈರ್ ಪ್ರಾಂತ್ಯದ ರವೆನ್ಸ್ಕ್ರಾಫ್ಟ್ನಲ್ಲಿ ಒಂದು ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿದನು. ಇವನ ತಂದೆ ಒಬ್ಬ ಮಹಾನ್ ನಾಸ್ತಿಕವಾದಿ. ಇವನ ತಾತ ಅರ್ಲ್ ರಸಲ್, ವಿಕ್ಟೋರಿಯಾ ಮಹಾರಾಣಿಯ ಬಳಿ ಹಲವು ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿ ಕೆಲಸ ನಿರ್ವಹಿಸಿದರು.[೫೫] ಹೀಗೆ "ರಸಲ್" ಮನೆತನ ಒಂದು ಪ್ರಭಾವಿ ಮನೆತನವಾಗಿತ್ತು.
ರಸಲ್ಗೆ ಒಬ್ಬ ಅಣ್ಣ ಹಾಗೂ ಒಬ್ಬ ಅಕ್ಕ ಇದ್ದಳು. ತನ್ನ ಅಕ್ಕ ಹಾಗೂ ತಾಯಿಯನ್ನು ತನ್ನ ಬಾಲ್ಯದಲ್ಲಿ ಕಳೆದುಕೊಂಡ. ಆದ ಕಾರಣ ಇವನ ಬಾಲ್ಯವನ್ನು ಇವನು ಅಜ್ಜಿ ಮನೆಯಲ್ಲಿ ಕಳೆದನು. ಮಾಜಿ ಪ್ರಧಾನಿ ಆಗಿದ್ದ ಇವನ ತಾತ ಅರ್ಲ್ ರಸಲ್ ಇವನ ಬಾಲ್ಯದ ಮೇಲೆ ತಕ್ಕ ಮಟ್ಟಿನ ಪ್ರಭಾವ ಬೀರಿದ್ದನು. ಬಾಲ್ಯದಲ್ಲಿ ಇವನನ್ನು ಹೆಚ್ಚಾಗಿ ನೋಡಿಕೊಂಡಿದ್ದು ಇವನ ಅಜ್ಜಿ ಕೌಂಟಿಸ್ ರಸಲ್.[೫೬][೫೭] ಈಕೆ ಒಬ್ಬ ಆಜ್ಞೇಯತಾವಾದಿಯಾಗಿದ್ದಳು. ರಸಲ್ನ ಹಲವು ಸಿದ್ಧಾಂತಗಳು ನಾಸ್ತಿಕನಾದ ಅವನ ತಂದೆಯಿಂದ ಹಾಗೂ ಅವನ ಅಜ್ಜಿಯಿಂದ ರೂಪುಗೊಂಡಿತ್ತು.
ಸಾಮಾನ್ಯ ಬಾಲಕರಂತೆ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯದೆ ಮನೆಯಲ್ಲಿಯೇ ಖಾಸಗಿ ಉಪಾಧ್ಯಾಯರಿಂದ ಶಿಕ್ಷಣ ಪಡೆದು ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಲ್ಲಿ ಪರಿಣತನಾದ. ಬಾಲ್ಯದಿಂದಲೇ ರಸಲ್ಗೆ ಗಣಿತ ಹಾಗೂ ಧರ್ಮದ ವಿಚಾರವಾಗಿ ಹೆಚ್ಚು ಆಸಕ್ತಿ ಬೆಳೆದಿತ್ತು. ತನ್ನ ಬಾಲ್ಯವನ್ನು ಆತ ಹೆಚ್ಚು ಸ್ನೇಹಿತರಿಲ್ಲದೆ ಏಕಾಂಗಿಯಾಗಿ ಕಳೆದ. ಹಲವು ಬಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದ. ಕಾಲಾನಂತರ ಗಣಿತದ ಮೇಲಿನ ಆಸಕ್ತಿಯಿಂದ ಆತ್ಮಹತ್ಯೆಯ ವಿಚಾರದಿಂದ ದೂರ ಉಳಿದ.[೫೮] ತನ್ನ ೧೧ನೇ ವಯಸ್ಸಿನಲ್ಲಿ, ಅವನ ಅಣ್ಣ ಫ಼್ರಾಂಕ್ ಅವನಿಗೆ ಯುಕ್ಲಿಡನ್ ಗಣಿತ ಕೃತಿಗಳನ್ನು ಪರಿಚಯಿಸಿದನು. ಯುಕ್ಲಿಡನ್ ಕೃತಿಗಳು ರಸಲ್ನ ಮೇಲೆ ತುಂಬ ಪರಿಣಾಮ ಬೀರಿದವು.[೫೯][೬೦] ಪಿ.ಬಿ.ಶೆಲಿಯ ಗ್ರಂಥಗಳು ಅವನ ಮೇಲೆ ಹೆಚ್ಚು ಪರಿಣಾಮ ಬೀರಿದ್ದವು. ತನ್ನ ೧೮ನೇ ವಯಸ್ಸಿನಲ್ಲಿ ಜೆ.ಎಸ್.ಮಿಲ್ನ "ಆಟೋಬಯೋಗ್ರಫಿ" ಗ್ರಂಥ ಓದಿದ ನಂತರ ನಾಸ್ತಿಕನಾಗಿ ಪರಿವರ್ತನೆಗೊಂಡನು.[೬೧][೬೨]
೧೮೯೦ರ ಹೊತ್ತಿಗೆ ವಿದ್ಯಾರ್ಥಿವೇತನ ಪಡೆದು ರಸಲ್ ಟ್ರಿನಿಟಿ ಕಾಲೇಜಿಗೆ ಗಣಿತಶಾಸ್ತ್ರ ಅಧ್ಯಯನಕ್ಕೆ ಹೋದನು.[೬೩] ಅಲ್ಲಿ ಗಣಿತ ಖ್ಯಾತನಾಮರಾದ ರಾಬರ್ಟ್ ರಮ್ಸಿ, ಜಾರ್ಜ್ ಎಡ್ವರ್ಡ್ ಮೂರ್ ಹಾಗೂ ಆಲ್ಫ಼್ರೆಡ್ ನಾರ್ಥ್ ವೈಟ್ಹೆಡ್ ಮುಂತಾದವರ ಶಿಷ್ಯತ್ವ ಪಡೆದು, ಸ್ನೇಹವನ್ನೂ ಸಂಪಾದಿಸಿಕೊಂಡು ೧೮೯೩ರಲ್ಲಿ ಪ್ರಥಮ ಶ್ರೇಣಿಯೊಂದಿಗೆ ಪದವಿ ಗಳಿಸಿ 1895ರಲ್ಲಿ ಅದೇ ಕಾಲೇಜಿನ ಫೆಲೋ ಆಗಿ ಆಯ್ಕೆಯಾದ. ೧೮೯೫ರ ಹೊತ್ತಿಗೆ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮುಂದುವರಿಸಿದ. ಅಷ್ಟರ ಹೊತ್ತಿಗೆ ಗಣಿತಶಾಸ್ತ್ರ ಹಾಗೂ ತತ್ವಶಾಸ್ತ್ರ ಕ್ಷೇತ್ರದಲ್ಲಿ ಅವನದೇ ಆದ ಮುದ್ರೆ ಹೊತ್ತಿದ್ದ.
ನಂತರದ ದಿನಗಳಲ್ಲಿ ಅವನ ಪ್ರಸಿದ್ಧಿ ತುಂಬ ಬೆಳೆಯಿತು. ಆತ ಮುಟ್ಟಿದ್ದೆಲ್ಲಾ ಚಿನ್ನವಾಯಿತು. ಅವನು ಕೈಹಾಕಿದ ಕ್ಷೇತ್ರಗಳಲ್ಲೆಲ್ಲಾ ಅವನು ಪ್ರಸಿದ್ಧನಾದ. ಪ್ರತಿಭೆ ಹಾಗೂ ಪಾಂಡಿತ್ಯದ ಪಾಕ ರಸಲ್. ೧೮೯೪ರಲ್ಲಿ ಬರ್ಟ್ರಾಂಡ್ ರಸಲ್ ಆಲಿಸ್ ಎಂಬವಳನ್ನು ತನ್ನ ಅಜ್ಜಿಯ ಇಚ್ಛೆಗೆ ವಿರೋಧವಾಗಿ ಪ್ರೇಮ ವಿವಾಹವಾದನು. ಆದರೆ ಅವರ ಸಾಂಸಾರಿಕ ಜೀವನ ಸುಖಕರವಾಗಿರಲಿಲ್ಲ. ೧೯೨೧ರಲ್ಲಿ ವಿಚ್ಛೇಧನ ಪಡೆದರು.
ಈತ ತತ್ತ್ವಶಾಸ್ತ್ರದ ಅಧ್ಯಾಪಕನಾಗಿ ಕೇಂಬ್ರಿಜ್, ಆಕ್ಸ್ಫರ್ಡ್, ಹಾರ್ವರ್ಡ್ ಹಾಗೂ ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ದುಡಿದ. ೧೮೯೬ರಲ್ಲಿ ರಸಲ್ ಜರ್ಮನ್ ಸೋಶಿಯಲ್ ಡೆಮೊಕ್ರಸಿ ಎಂಬ ಗ್ರಂಥವನ್ನು ಬರೆದ. ೧೮೯೬ರಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಜರ್ಮ್ನ್ ಸೋಶಿಯಲ್ ಡೆಮೋಕ್ರಸಿಯ ವಿಷಯವಾಗಿ ಹೇಳಿಕೊಟ್ಟ.[೬೪] ೧೮೯೮ರಲ್ಲಿ ಆ್ಯನ್ ಎಸ್ಸೆ ಆನ್ ದ ಫೌಂಡೇಶನ್ಸ್ ಆಫ್ ಜಾಮೆಟ್ರಿ ಎಂಬ ಹೆಮ್ಮೆಯ ಪ್ರಬಂಧವನ್ನು ರಚಿಸಿದನು. ೧೯೦೦ರಲ್ಲಿ ಪ್ಯಾರಿಸ್ನಲ್ಲಿ ನಡೆದ ಅಂತರರಾಷ್ಟ್ರೀಯ ತತ್ವಶಾಸ್ತ್ರ ಕಾಂಗ್ರೆಸ್ನಲ್ಲಿ ಭಾಗವಹಿಸಿದನು. ಅಲ್ಲಿ ಅವನಿಗೆ ವಿಶ್ವವಿಖ್ಯಾತ ತತ್ವಶಾಸ್ತ್ರಜ್ಞರ ಪರಿಚಯ ಹಾಗೂ ಸ್ನೇಹವಾಯಿತು. ೧೯೦೩ರಲ್ಲಿ ದ ಪ್ರಿನ್ಸಿಪಲ್ಸ್ ಆಫ್ ಮ್ಯಾತಮೆಟಿಕ್ಸ್ ಎಂಬ ಗ್ರಂಥವನ್ನು ಬರೆದರು. ೧೯೦೫ರಲ್ಲಿ ಆನ್ ಡಿನೋಟಿಂಗ್ ಎಂಬ ಪ್ರಸಿದ್ಧ ಪ್ರಬಂಧವನ್ನು ಮಂಡಿಸಿದನು. ೧೯೦೮ರಲ್ಲಿ ಪ್ರತಿಷ್ಠಿತ ಲಂಡನಿನ ರಾಯಲ್ ಸೊಸೈಟಿಯಲ್ಲಿ ಫೆಲೋಶಿಪ್ ಗಳಿಸಿದನು.[೬೫] ೧೯೧೦ರಿಂದ ೧೯೧೩ರ ಸಮಯದಲ್ಲಿ ವೈಟ್ಹೆಡ್ ಎಂಬ ಪ್ರಸಿದ್ಧ ಗಣಿತಜ್ಞನ ಜೊತೆಗೂಡಿ ಪ್ರಿನ್ಸಿಪಿಯ ಮ್ಯಾಥಮ್ಯಾಟಿಕ ಎಂಬ ಗ್ರಂಥವನ್ನು ಬರೆದನು. ಈ ಗ್ರಂಥ ಅವರಿಗೆ ವಿಶ್ವಮನ್ನಣೆ ತಂದು ಕೊಟ್ಟಿತು. ೧೯೧೦ರಲ್ಲಿ ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿ ನೇಮಕಗೊಂಡನು. ಅಲ್ಲಿ ಲುಡ್ವಿಗ್ ವಿಟ್ಗೇನ್ಸ್ಟೇನ್ ಇವನ ಕೈಕೆಳಗೆ ಪಿ.ಎಚ್.ಡಿ ವ್ಯಾಸಂಗ ಮಾಡಿದನು. ನಂತರ ಲುಡ್ವಿಗ್ ವಿಟ್ಗೇನ್ಸ್ಟೇನ್ ವಿಶ್ವವಿಖ್ಯಾತ ತತ್ವಜ್ಞ ಹಾಗೂ ಗಣಿತ ಶಾಸ್ತ್ರಜ್ಞನಾದನು.
ಮೊದಲನೆ ವಿಶ್ವಯುದ್ಧದ ಸಮಯದಲ್ಲಿ ರಸಲ್ ಆಸ್ಟ್ರಿಯಾ ದೇಶದ ಸೈನ್ಯದಲ್ಲಿ ಕಾರ್ಯನಿರ್ವಹಿಸಿದರು. ಇದೇ ಕಾರಣದಿಂದಾಗಿ ಅವನನ್ನು ಕೇಂಬ್ರಿಡ್ಜ್ನಿಂದ ಉಚ್ಚಾಟಿಸಿದರು. ೧೯೧೭ರಲ್ಲಿ ಲೀಡ್ಸ್ ಕನ್ವೆಂಷನ್ ನಡೆಸುವಲ್ಲಿ ರಸಲ್ ಪ್ರಮುಖ ಪಾತ್ರ ವಹಿಸಿದ್ದರು. ಲೀಡ್ಸ್ ಕನ್ವೆಂಷನ್ ಶಾಂತಿಯುತ ಸಮಾಜವಾದಿಗಳ ಒಂದು ಬೃಹತ್ ಸಮ್ಮೇಳನವಾಗಿತ್ತು. ಅಲ್ಲಿ ವಿಶ್ವದ ಮೂಲೆ ಮೂಲೆಗಳಿಂದ ಬಂದ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಂಬಂಧವಾಗಿ ಬರ್ಟ್ರಾಂಡ್ ರಸ್ಸೆಲ್ಗೆ ಇಂಗ್ಲೆಂಡ್ ನ್ಯಾಯಾಲಯ ನೂರು ಯೂರೋಗಳ ದಂಡ ವಿಧಿಸಿತು. ಆದರೆ ಬರ್ಟ್ರಾಂಡ್ ರಸ್ಸೆಲ್ ಆ ದಂಡವನ್ನು ತೆತ್ತಲಿಲ್ಲ. ದಂಡವನ್ನು ತೆತ್ತುವುದರ ಬದಲು ಕಾರಾಗೃಹವಾಸವನ್ನು ಒಪ್ಪಿಕೊಂಡ.[೬೬] ಆದರೆ ಈ ಯೋಜನೆಗೆ ಸಹಕಾರಿಯಾಗಲಿಲ್ಲ. ಆಗ ತಾನು ಬರೆದ ಪುಸ್ತಕಗಳನ್ನು ಹರಾಜು ಹಾಕಿದ. ಒಳ್ಳೆಯ ವ್ಯಾಪಾರ ನಡೆಯಿತು. ಹೀಗೆ ಸಂಗ್ರಹವಾದ ದುಡ್ಡಿನಲ್ಲಿ ದಂಡವನ್ನು ಕಟ್ಟಿದನು. ನಂತರ ಅವನ ಪುಸ್ತಕವಾದ ಕಿಂಗ್ ಜೇಮ್ಸ್ ಬೈಬಲ್ನ ಪ್ರತಿಗಳನ್ನು ಕೇಂಬ್ರಿಡ್ಜ್ ಪೋಲೀಸರು ವಶಪಡಿಸಿಕೊಂಡರು. ೧೯೨೪ರ ಹೊತ್ತಿಗೆ ರಾಜಕೀಯವಾಗಿ ಕ್ರಿಯಾಶೀಲಗೊಂಡನು.
ಮೊದಲನೆಯ ವಿಶ್ವಯುದ್ಧದ ಸಮಯದಲ್ಲಿ ಅಮೇರಿಕ ಬ್ರಿಟನ್ಗೆ ಸಹಾಯ ಮಾಡಿದಾಗ ಅದನ್ನು ವಿರೋಧಿಸಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದನು. ಕಾರಾಗೃಹದಲ್ಲಿ ಮ್ಯಾತಮ್ಯಾಟಿಕಲ್ ಫಿಲೋಸಫಿ ಎಂಬ ಗ್ರಂಥವನ್ನು ಬರೆದನು. ೧೯೨೦ರಲ್ಲಿ ಬ್ರಿಟನ್ ಸರ್ಕಾರ ರಷ್ಯ ಕ್ರಾಂತಿಯ ಪರಿಣಾಮವನ್ನು ತನಿಖೆ ಮಾಡಲು ಬ್ರಿಟನ್ ಸರ್ಕಾರ ಕಳಿಸಿದ ನಿಯೋಗದಲ್ಲಿ ಸದಸ್ಯನಾಗಿದ್ದನು.[೬೭] ಅಲ್ಲಿಂದ ಬಂದ ನಂತರ ದ ಪ್ರಾಕ್ಟೀಸ್ ಆಂಡ್ ಥಿಯರಿ ಆಫ್ ಬೋಲ್ಶ್ವಿಸ್ಮ್ ಎಂಬ ಗ್ರಂಥವನ್ನು ಬರೆದನು.[೬೮] ಅದು ಅವನ ರಷ್ಯಾದ ಅನುಭವಗಳಾಗಿದ್ದವು.
ಕೆಲಕಾಲ ಪೀಕಿಂಗ್ನಲ್ಲಿ (ಬೀಜಿಂಗ್) ತತ್ತ್ವಶಾಸ್ತ್ರದ ಪ್ರಾಧ್ಯಾಪಕನಾಗಿದ್ದ. ಆಲಿಸ್ಗೆ ವಿಚ್ಛೇದನ ಕೊಟ್ಟ ಕೇವಲ ಆರು ದಿನಗಳಲ್ಲಿ ಡೋರಾ ಬ್ಲಾಕ್ ಎಂಬುವವಳನ್ನು ವಿವಾಹವಾದನು. ಡೋರಾ ಬ್ಲಾಕ್ ಅವಳನ್ನು ಮದುವೆಯಾದ ನಂತರ ೧೯೨೭ರಲ್ಲಿ ಡೋರಾಳೊಡನೆ ಸೇರಿ ಬೇಕಾನ್ ಹಿಲ್ ಸ್ಕೂಲ್ ಎಂಬ ಶಾಲೆಯನ್ನು ಸ್ಥಾಪಿಸಿದನು. ೧೯೩೦ರಲ್ಲಿ ಅವನಿಗೆ ಡೋರಾಳಿಂದ ಹಾರಿಯಟ್ ರೂಥ್ ಎಂಬ ಮಗು ಜನನವಾಯಿತು. ೧೯೩೨ರ ಹೊತ್ತಿಗೆ ತನ್ನ ಎರಡನೆ ಹೆಂಡತಿ ಡೋರಾ ಬ್ಲಾಕ್ಗೆ ವಿಚ್ಚೇದನ ಕೊಟ್ಟನು. ಪ್ಯಾಟ್ರಿಕ್ ಸ್ಪೆನ್ಸ್ಳನ್ನು ಮದುವೆಯಾದನು. ಕಾರ್ನಾಡ್ ಸೆಬಾಸ್ಟಿಯನ್ ರಾಬರ್ಟ್ ರಸ್ಸೆಲ್ ಎಂಬ ಮಗ ಹುಟ್ಟಿದನು. ಅವನ ಮುಂದೆ ಲಿಬರಲ್ ಡೆಮೋಕ್ರಾಟ್ ಪಾರ್ಟಿಯ ಮುಖ್ಯಸ್ಥನಾದನು.
ಎರಡನೆ ವಿಶ್ವಯುದ್ಧದ ಸಮಯದಲ್ಲಿ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕನಾದನು. ಸೈದ್ದಾಂತಿಕ ವಿಚಾರವಾಗಿ ಅವನನ್ನು ಪ್ರಾಧ್ಯಾಪಕ ವೃತ್ತಿಯಿಂದ ಮುಕ್ತಿಗೊಳಿಸಲಾಗಿತ್ತು. ಆಗ ಇವನ ಪರವಾಗಿ ಆಲ್ಬರ್ಟ್ ಐನ್ಸ್ಟೀನ್ ಕೂಡ ಧ್ವನಿ ಎತ್ತಿದನು. ನಂತರ ಹಲವಾರು ಕಡೆ ಭಾಷಣವನ್ನು ಕೊಡುತ್ತ ಜೀವನ ನಿರ್ವಹಿಸಿದರು. ಮುಂದೆ ಆ ಭಾಷಣಗಳ ಸಂಗ್ರಹವೇ ಅವನ ಪ್ರಸಿದ್ಧ "ಅ ಹಿಸ್ಟ್ರಿ ಆಫ್ ವೆಸ್ಟರ್ನ್ ಫಿಲಾಸಫಿ" ಕೃತಿಯಾಯಿತು. ಎರಡನೆ ವಿಶ್ವಯುದ್ಧದ ಸಂದರ್ಭದಲ್ಲಿ ಹಿಟ್ಲರ್ನನ್ನು ಕಟುವಾಗಿ ಟೀಕಿಸಿದನು. ಹಿಟ್ಲರ್ನಂಥವನು ಮಾನವ ಕುಲಕ್ಕೆ ಮಾರಕ ಎಂದು ಸಾರಿದನು. ಪ್ರಪಂಚಕ್ಕೆ ಶಾಂತಿ ಸಂದೇಶ ಸಾರಿದನು. ಹೀಗೆ ತನ್ನನ್ನು ತಾನು ಶಾಂತಿವಾದಿ ಎಂದು ಬಿಂಬಿಸಿಕೊಂಡನು. ಅವನು ಜೀವನದ ಎಲ್ಲಾ ಜಂಜಾಟಗಳ ನಡುವೆ ಚೈನಾಗೆ ಭೇಟಿ ಕೊಟ್ಟನು. ಅಲ್ಲಿ ಅವನಿಗೆ ಸ್ವಲ್ಪ ಮನಃಶಾಂತಿ ದಕ್ಕಿತು. ಅವನು ಚೈನಾ ಬಿಡುವುದರೊಳಗೆ ಶ್ವಾಸಕೋಶದ ಉರಿಯೂತ ರೋಗದಿಂದ ಬಳಲಿದನು. ಅದೇ ಸಮಯದಲ್ಲಿ ಕೆಲವು ಜಪಾನ್ ಪತ್ರಿಕೆಗಳು ರಸ್ಸೆಲ್ ಸಾವನ್ನಪ್ಪಿದನು ಎಂದು ಸುಳ್ಳು ವಾರ್ತೆಯನ್ನು ಬಿತ್ತರಿಸಿದವು.[೬೯] ೧೯೪೪ರಲ್ಲಿ ಪುನಃ ಟ್ರಿನಿಟಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾದನು.
೧೯೪೦-೫೦ ದಶಕದಲ್ಲಿ ಬಿ.ಬಿ.ಸಿಗಾಗಿ ಹಲವು ಕಾರ್ಯಕ್ರಮಗಳನ್ನು ನೀಡಿದನು. ೧೯೪೯ರಲ್ಲಿ ರಸಲ್ಗೆ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತು.[೭೦] ೧೯೫೦ರಲ್ಲಿ ಅವನಿಗೆ ಸಾಹಿತ್ಯಕ್ಕಾಗಿ ಪ್ರತಿಷ್ಠಿತ ನೋಬೆಲ್ ಪ್ರಶಸ್ತಿ ದೊರಕಿತು.[೭೧][೭೨] ೧೯೫೨ರಲ್ಲಿ ತನ್ನ ಮೂರನೆ ಹೆಂಡತಿಯಾದ ಪ್ಯಾಟ್ರಿಕ್ ಸ್ಪೆನ್ಸ್ಗೆ ವಿಚ್ಛೇದನ ಕೊಟ್ಟನು. ೧೯೫೨ರಲ್ಲಿ ಎಡಿತ್ ಫಿಂಚ್ಳನ್ನು ಮದುವೆಯಾದನು. ೧೯೬೧ರಲ್ಲಿ ತನ್ನ ೮೯ನೆ ವಯಸ್ಸಿನಲ್ಲಿ ಅವನನ್ನು ೭ ದಿನಗಳ ಕಾಲ ಕಾಲಾಗೃಹಕ್ಕೆ ಕಳಿಸಲಾಯಿತು. ಪರಮಾಣು ವಿರೋಧಿ ನೀತಿ ಇದಕ್ಕೆ ಕಾರಣವಾಗಿತ್ತು. ೧೯೬೨ರಲ್ಲಿ ಬರ್ಟ್ರಾಂಡ್ ರಸ್ಸೆಲ್ ಕ್ಷಿಪಣ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೇರಿಕ ಹಾಗು ಯು.ಎಸ್.ಎಸ್.ಆರ್. ನಡುವೆ ಒಂದು ರೀತಿಯ ಸಂಧಾನಕಾರನಾಗಿ ಕಾರ್ಯ ನಿರ್ವಹಿಸಿದರು. ಅಮೇರಿಕ ಅಧ್ಯಕ್ಷರಾದ ಜಾನ್ ಎಫ್. ಕೆನ್ನಡಿಗೆ ಯು.ಎಸ್.ಎಸ್.ಆರ್ ನಾಯಕ ನಿಖಿತ ಕೃಶೇವ್ ಕಳುಹಿಸಿದ ಸಂದೇಶವನ್ನು ರವಾನಿಸಿದರು. ಅದು ಶೀತಲ ಸಮರದ ಕಾಲ. ಆಗಾಗ್ಗೆ ಯು.ಎಸ್.ಎಸ್.ಆರ್ ನಡುವಿನ ಬೆಸುಗೆಗೆ ಪ್ರಯತ್ನ ಪಟ್ಟರು.
ವಿಯೆಟ್ನಾಮ್ ಯುದ್ಧದ ಸಂದರ್ಭದಲ್ಲಿಯೂ ಸಹ ಶಾಂತಿಯನ್ನು ಕಾಪಾಡಲು ಹಾಗೂ ಯುದ್ಧವನ್ನು ತಡೆಯಲು ಅದನ್ನು ವಿರೋಧಿಸುತ್ತಾ ಬಂದರು. ೧೯೪೮ರ ಒಂದು ಭಾಷಣದಲ್ಲಿ ಯು.ಎಸ್.ಎಸ್.ಆರ್ ನವರು ಇದೇ ರೀತಿ ಕಾರ್ಯವನ್ನು ಮುಂದುವರೆಸಿದರೆ ಅವರ ವಿರುದ್ಧ ಇತರ ದೇಶಗಳು ಅಕ್ರಮಣ ಮಾಡುವುದು ತರವಲ್ಲ, ಏಕೆಂದರೆ ಬೇರೆ ದೇಶದ ಬಳಿ ಅಣುಬಾಂಬ್ ಇದೆ, ಆದರೆ ಯು. ಎಸ್. ಎಸ್. ಆರ್ ಬಳಿ ಇಲ್ಲ.[೭೩] ಹೀಗಾಗಿ ಅಣುಬಾಂಬ್ ಹೊಂದಿರುವ ದೇಶಗಳು ಹೆಚ್ಚಾಗಿ ಶಾಂತಿಯ ವಿರುದ್ಧ ಹೋಗಬಾರದು.
ತರ್ಕ (ಲಾಜಿಕ್) ತತ್ತ್ವಶಾಸ್ತ್ರಕ್ಕೆ ಮೂಲಭೂತವಾದುದೆಂದು ರಸಲ್ಲನ ಅಭಿಪ್ರಾಯ. ತತ್ತ್ವಶಾಸ್ತ್ರದ ವಿವಿಧ ಸಿದ್ಧಾಂತಗಳ ಪ್ರಾಮಾಣ್ಯ ನಿರ್ಧರಿಸುವಾಗ ಅವುಗಳಲ್ಲಿಯ ತರ್ಕವನ್ನೇ ತಳಹದಿಯಾಗಿಟ್ಟುಕೊಳ್ಳಬೇಕು. ತನ್ನ ತರ್ಕದ ಮೂಲಾಂಶಗಳು ಭೌತಪರಮಾಣು ತತ್ತ್ವದಂತೆ ಅಣುರೂಪಗಳೆಂದೂ ಆದ್ದರಿಂದಲೇ ತನ್ನ ಸಿದ್ಧಾಂತ ತರ್ಕಪರಮಾಣುವಾದವೆಂದೂ ಈತ ಕರೆದಿದ್ದಾನೆ. ತರ್ಕಶಾಸ್ತ್ರದಲ್ಲಿ ಇವನದು ಕೇವಲ ವಿಶ್ಲೇಷಣ ವಿಧಾನ. ಇವನ ತತ್ತ್ವಕ್ಕೂ ಇದೇ ತಳಪಾಯ. ಗಣಿತ ಮತ್ತು ಗಣಿತತರ್ಕಶಾಸ್ತ್ರಗಳ (mathematical logic) ಮೂಲಕ ರಸಲ್ ತತ್ತ್ವಶಾಸ್ತ್ರದ ಕ್ಷೇತ್ರ ಪ್ರವೇಶಿಸಿದ. ಆದ್ದರಿಂದಲೇ ಇವನ ಸಿದ್ಧಾಂತಕ್ಕೆ ಅತ್ಯವಶ್ಯವಾದ ಕೆಲವು ಅಂಶಗಳು ಹೊರಬಿದ್ದವು. ಅರಿಸ್ಟಾಟಲನ ಪಂಥದವರು `ಎ' ಯು `ಬಿ' ಯ ತಂದೆ ಎಂಬ ಸಂಬಂಧಾತ್ಮಕ ಪ್ರತಿಜ್ಞಾ ವಾಕ್ಯಗಳನ್ನು ಕೂಡ ವಿಶೇಷ ರೂಪದ ಪ್ರತಿಜ್ಞೆಗಳಾಗಿ ಮಾರ್ಪಡಿಸಲು ಪ್ರಯತ್ನಿಸುತ್ತಿದ್ದರು. ಈ ಪ್ರಯತ್ನ ಕೃತಕವಾದುದೆಂಬುದು ರಸಲ್ಲನ ಅಭಿಪ್ರಾಯ. ಇವನ ತತ್ತ್ವಶಾಸ್ತ್ರದಲ್ಲಿ ಇದೊಂದು ಮುಖ್ಯ ಅಂಶ. ವ್ಯಾಕರಣ ವಾಕ್ಯ ತರ್ಕವಾಕ್ಯದಿಂದ ಭಿನ್ನವಾದದ್ದು; ತರ್ಕವಾಕ್ಯದ ವ್ಯಾಕರಣ ವಿಶ್ಲೇಷಣೆ ತರ್ಕವಿಶ್ಲೇಷಣೆಯಿಂದ ಭಿನ್ನವಾಗಿದೆ.
ನಾವು ಬಳಸುವ ಪದಗಳು ಸಂಕೇತಗಳಾಗಿದ್ದು ಅರ್ಥಯುಕ್ತವಾಗಿವೆ. ಕೆಲವು ಪದಗಳು ವಸ್ತುಸೂಚಕಗಳು. ಪದಗಳಲ್ಲಿ ಎರಡು ಪ್ರಕಾರಗಳು: ವಿಶಿಷ್ಟಪದ, ಸಾಮಾನ್ಯ ಪದ. ಪದಸಮೂಹಗಳು ವಾಕ್ಯಾಂಶಗಳಾಗುತ್ತವೆ. ವಾಕ್ಯದ ಕರ್ತೃವಾಗಿ ನಿಲ್ಲುವ ವರ್ಣನಾತ್ಮಕ ಪದಸಮೂಹ ಕೂಡ ವಸ್ತುಸಂಕೇತವೆಂದು ರಸಲ್ ಮೊದಲು ತಿಳಿದಿದ್ದ. ಆದರೆ ತನ್ನ ವರ್ಣನಾ ಸಿದ್ಧಾಂತದಲ್ಲಿ ಅವೆಲ್ಲವೂ ವಸ್ತುಸೂಚಕಗಳಲ್ಲವೆಂದು ತೋರಿಸಿದ್ದಾನೆ. ವರ್ಣನೆ (ಅಥವಾ ನಿರ್ದಿಷ್ಟವಾದ ವರ್ಣನೆ) ಇಂಥಿಂಥ ಎಂಬ ರೂಪದ ಪದಸಮೂಹವಾಗಿದ್ದು ಒಂದು ಅಂಕಿತನಾಮದಂತೆ ಒಂದೇ ಪದವಾಗಿ ಬಳಸಲ್ಪಡುತ್ತವೆ. ಅಂಕಿತನಾಮದಂತೆಯೇ ಇಂಥ ಪದ ಒಂದು ವ್ಯಕ್ತಿಯನ್ನು ಸೂಚಿಸುತ್ತದೆಂದು ತೋರುತ್ತದೆ. ಉದಾಹರಣೆಗಾಗಿ ಕೆನಡಿ ಮತ್ತು ಅಮೆರಿಕದ ಅಧ್ಯಕ್ಷ ಒಂದೇ ವ್ಯಕ್ತಿಯನ್ನು ಹೆಸರಿಸುವ ಎರಡು ರೀತಿಗಳೆಂದು ಕಾಣುತ್ತವೆ. ಕೆಲವು ತಾರ್ಕಿಕರು ನಿರ್ದಿಷ್ಟ ವರ್ಣನೆಗಳು ಹೆಸರುಗಳು; ಆದರೆ ಕ್ಲಿಷ್ಟವಾದ ಹೆಸರುಗಳೆಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ರಸಲ್ಲನ ವರ್ಣನಾ ಸಿದ್ಧಾಂತದ ಪ್ರಕಾರ ನಿರ್ದಿಷ್ಟ ವರ್ಣನೆಗಳು ಹೆಸರುಗಳಲ್ಲ. ಉದಾಹರಣೆಗೆ ಫ್ರಾನ್ಸಿನ ಸದ್ಯದ ರಾಜ ಎಂಬುದು ಅಸ್ತಿತ್ವದಲ್ಲಿಲ್ಲದ ಒಂದು ವ್ಯಕ್ತಿಯ ಹೆಸರಲ್ಲ. ಇದು ಸಂದರ್ಭದಲ್ಲಿ ಅರ್ಥಕೊಡುವ ಅಪೂರ್ಣ ಸಂಕೇತ. ಆದ್ದರಿಂದ ಫ್ರಾನ್ಸಿನ ಸದ್ಯದ ರಾಜ ಎಂಬುದು ಅರ್ಥಪೂರ್ಣವಾದ ಪದಸಮೂಹವಾದರೂ ಯಾವ ವ್ಯಕ್ತಿಯನ್ನೂ ವರ್ಣಿಸುವುದಿಲ್ಲ. ಯಾವ ವಸ್ತುವನ್ನೂ ಸೂಚಿಸದ ವರ್ಣನೆಗಳನ್ನು ಬಳಸುವುದು ತತ್ತ್ವಜ್ಞಾನಿಗಳಿಗೆ ಒಂದು ದೊಡ್ಡ ಸಮಸ್ಯೆಯಾಗಿದೆ. ಆದರೆ ರಸಲ್ನ ವರ್ಣನಾ ಸಿದ್ಧಾಂತ ಇಂಥವನ್ನು ಬಳಸುವ ರೀತಿಯನ್ನೂ ವಿವರಿಸುತ್ತದೆ. ಭಾಷೆಯಲ್ಲಿಯ ಕೆಲವು ನಾಮಪದಗಳನ್ನೂ ಪದಸಮೂಹಗಳಾದ ನಾಮಗಳನ್ನೂ ತೆಗೆದುಹಾಕಿಯೂ ಅವುಗಳ ಬಗ್ಗೆ ಹೇಳಬೇಕಾದುದನ್ನು ಹೇಳಬಹುದು ಎಂಬ ನಿರ್ಣಯಕ್ಕೆ ಈತ ಬಂದ. ಇಂಥ ತೆಗೆದುಹಾಕಬಹುದಾದ ಮತ್ತು ವಸ್ತುಸೂಚಕಗಳಲ್ಲದ ನಾಮಪದಗಳು ಹಾಗೂ ಪದಸಮೂಹಗಳು ವರ್ಣನೆಗಳೆಂದು ರಸಲ್ ತಿಳಿಸುತ್ತಾನೆ. ವಿಶ್ಲೇಷಣೆಯಲ್ಲಿ ವರ್ಣನೆ ಮಾಯವಾಗುತ್ತದೆ ಮತ್ತು ಅವರಿಂದ ಸೂಚಿತವಾದ ಯಾವ ವಸ್ತುವೂ ಇಲ್ಲವೆಂದು ತಿಳಿಯುತ್ತದೆ. ಇಂಥಿಂಥ ಎಂಬ ವರ್ಣನಾತ್ಮಕ ಪದಸಮೂಹ ಕರ್ತೃವಾಗಿ ಉಳ್ಳ ವಾಕ್ಯ ಒಂದು ವ್ಯಕ್ತಿಗೆ ಸಂಬಂಧಿಸಿದ ವಾಕ್ಯವೆಂದು ಕಂಡರೂ ಅದು ಸಾಮಾನ್ಯ ವಾಕ್ಯವೆಂದೂ ಈ ತರ್ಕವಿಶ್ಲೇಷಣೆಯಿಂದ ರಸಲ್ ತೋರಿಸಿದ. ಈ ತರ್ಕವಿಶ್ಲೇಷಣಾ ಪದ್ಧತಿ ಹಲವು ತತ್ತ್ವಸಿದ್ಧಾಂತಗಳ ಮೇಲೆ ವಿಧ್ವಂಸಕ ಪರಿಣಾಮವನ್ನುಂಟುಮಾಡಿದೆ. ವಾಕ್ಯಗಳಿಗೆ, ವರ್ಗಗಳಿಗೆ ಮತ್ತು ಸಂಖ್ಯೆಗಳಿಗೆ ಈ ಪದ್ಧತಿಯನ್ನು ಬಳಸಿ ಈ ಎಲ್ಲ ಪದಾರ್ಥಗಳು ತರ್ಕರಚನೆಗಳೆಂದು ವಾದಿಸಿದ. ಅವು ತರ್ಕರಚನೆಗಳಾದ್ದರಿಂದ ನಿಜವಾದ ವಸ್ತುಗಳಲ್ಲವೆಂದು ಅಭಿಪ್ರಾಯಪಟ್ಟ.
ರಸಲ್ಲನ ಅಭಿಪ್ರಾಯದಲ್ಲಿ ಭೌತವಸ್ತುಗಳೆಲ್ಲವೂ ತರ್ಕರಚನೆಗಳು. ವಿಜ್ಞಾನ ಭೌತವಸ್ತುಗಳ ವಿವರಣೆ ಮಾಡುವಾಗ ಅವುಗಳಲ್ಲಿಯ ಇಂದ್ರಿಯಗೋಚರವಾಗುವ ಗುಣಗಳನ್ನು ಎತ್ತಿ ಹೇಳುತ್ತದೆ. ಆದ್ದರಿಂದ ಭೌತವಸ್ತುಗಳು ಇಂದ್ರಿಯಗೋಚರವಾಗುವ ಗುಣಗಳೇ ಎಂದು ಹೇಳಬಹುದು. ಬೇರೆ ವಿಧವಾಗಿ ಹೇಳುವುದಾದರೆ ಭೌತವಸ್ತುಗಳು ತರ್ಕರಚನೆಗಳು. ಭೌತವಸ್ತುಗಳಿಗೆ ಬಳಸುವ ಪದ್ಧತಿಯನ್ನೇ ರಸಲ್ ಮನಸ್ಸಿನ ವಿಶ್ಲೇಷಣೆಗೆ ಬಳಸಿದ್ದಾನೆ. ಇದರ ಪರಿಣಾಮವಾಗಿ ಮನಸ್ಸಿನ ಗುಣವಿಶೇಷವಾದ ಚೈತನ್ಯ ಮಾಯವಾಗುತ್ತದೆ. ಚೈತನ್ಯವೆಂಬುದು ವಿಶಿಷ್ಟ ಸಂಬಂಧಗಳನ್ನೊಳಗೊಂಡ ಇಂದ್ರಿಯಾನುಭವಗಳ ಹಾಗೂ ಕಾಲ್ಪನಿಕ ಪ್ರತಿಮೆಗಳ ಗುಂಪು ಮಾತ್ರ. ಆತ್ಮವೆಂಬುದೂ ಚೈತನ್ಯದಂತೆಯೇ ಇಂದ್ರಿಯಾನುಭವಗಳ ಹಾಗೂ ಕಾಲ್ಪನಿಕ ಪ್ರತಿಮೆಗಳ ಗುಂಪು.
ಸ್ಥೂಲವಾಗಿ ಹೇಳುವುದಾದರೆ ಚಿಂತನಾತ್ಮಕ ದರ್ಶನಗಳ ಬಗ್ಗೆ ರಸಲ್ ವೈರಮನೋಭಾವ ತಾಳಿದ್ದಾನೆ. ಆದ್ದರಿಂದ ತತ್ತ್ವಜ್ಞಾನದ ಬಗ್ಗೆ ಈತನ ಅಭಿಪ್ರಾಯ ಈ ರೀತಿಯಿದೆ; ಬುದ್ಧಿಗೆ ತೋರುವ ಕಠಿಣ ಸಮಸ್ಯೆಗಳಿಗೆ ಧೈರ್ಯಯುಕ್ತ ಪರಿಹಾರ ನೀಡುವುದರಲ್ಲಿ ತತ್ತ್ವಜ್ಞಾನ ತಪ್ಪುಮಾಡಿದೆ. ತತ್ತ್ವಜ್ಞಾನವೆಂಬುದು ದೇವತಾಶಾಸ್ತ್ರದ ದುರದೃಷ್ಟದಿಂದ ಕೂಡಿದ ಆಸ್ತಿ. ವಿಜ್ಞಾನದಿಂದ ಬೇರೆಯಾದ ಹಾಗೂ ತನ್ನದೇ ಆದ ವಿಶಿಷ್ಟ ಪದ್ಧತಿಯುಳ್ಳ ವಿಷಯ ಅದೆಂದು ಹೇಳಲು ಸಂಶಯ ಬರುತ್ತದೆ. ಮತಧರ್ಮ ಹಾಗೂ ಧರ್ಮಶಾಸ್ತ್ರಗಳಿಂದ ಸ್ಫೂರ್ತಿಪಡೆಯದೆ ವಿಜ್ಞಾನದಿಂದ ತತ್ತ್ವಜ್ಞಾನ ಸ್ಫೂರ್ತಿಪಡೆಯಬೇಕು. ಗಣಿತಶಾಸ್ತ್ರ ಹಾಗೂ ಭೌತಶಾಸ್ತ್ರಗಳ ವಿಜಯ ರಸಲ್ ತತ್ತ್ವಜ್ಞಾನದ ಬಗ್ಗೆ ತಳೆದ ಧೋರಣೆಗೆ ಕಾರಣವಾಗಿದೆ. ಅಂತೆಯೇ ಅಧ್ಯಾತ್ಮವಾದಿಗಳ ಮಸಕಾದ ಹಾಗೂ ಅಸ್ಪಷ್ಟವಾದ ವಿಚಾರವನ್ನು ಬಿಟ್ಟುಕೊಟ್ಟು ತತ್ತ್ವಜ್ಞಾನ ವಿಜ್ಞಾನದ ಮಾರ್ಗವನ್ನು ಅನುಸರಿಸಬೇಕು ಎಂದು ಹೇಳುತ್ತಾನೆ. ಮನೋಭಾವ ಹಾಗೂ ಸಂವೇದನೆಗಳನ್ನು ತೊರೆದು ತತ್ತ್ವಜ್ಞಾನ ಬುದ್ಧಿಯ ಶಿಸ್ತಿನ ಕ್ರಮವಾಗಬೇಕು. ಈತನ ಅಭಿಪ್ರಾಯದಲ್ಲಿ ತತ್ತ್ವಶಾಸ್ತ್ರ ವಿಜ್ಞಾನದ ಮೂಲಭೂತ ವಿಚಾರಗಳ ತಾರ್ಕಿಕ ವಿಶ್ಲೇಷಣೆ ಮಾಡುವ ಒಂದು ಶಾಸ್ತ್ರ; ಅದು ದಿಕ್ಕು, ಕಾಲ, ದ್ರವ್ಯ, ಕಾರ್ಯಕಾರಣ ಸಂಬಂಧ, ಆತ್ಮ ಮೊದಲಾದ ಭಾವನೆಗಳ ನಿಜ ಸ್ವರೂಪವನ್ನು ಸ್ಪಷ್ಟಪಡಿಸುವ ಒಂದು ಮಾರ್ಗ; ನಿಜವಾಗಿ ಹೇಳಬೇಕಾದರೆ ಸಾಮಾನ್ಯ ಪರಿಜ್ಞಾನ ಮತ್ತು ವಿಜ್ಞಾನಗಳನ್ನು ಬಿಟ್ಟು ತತ್ತ್ವಶಾಸ್ತ್ರವೆಂಬುದು ಪ್ರತ್ಯೇಕ ಜ್ಞಾನವಲ್ಲ. ಪ್ಲೇಟೋ, ಸ್ಪಿನೋಜ, ಹೆಗಲ್-ಮುಂತಾದವರ ಮಹಾದರ್ಶನಗಳು ನೈತಿಕ ಹಾಗೂ ಧಾರ್ಮಿಕ ಉದ್ದೇಶಗಳಿಂದ ಹುಟ್ಟಿದಂಥವು; ಅವು ವಾಸ್ತವಿಕ ಸತ್ಯಗಳಲ್ಲ-ವೈಯಕ್ತಿಕ ಅಭಿಪ್ರಾಯಗಳ ಸಂಕಲನಗಳು ಮಾತ್ರ. ಹೀಗೆ ತಿಳಿದಿದ್ದರಿಂದ ಈತ ಮೌಲ್ಯವಾಕ್ಯಗಳನ್ನು ತತ್ತ್ವಶಾಸ್ತ್ರದಿಂದ ದೂರವಿರಿಸಿದ್ದಾನೆ.
ಗಣಿತಶಾಸ್ತ್ರವೂ ತರ್ಕಶಾಸ್ತ್ರವೂ ಒಂದೇ ಎಂದು ಹೇಳಿ ಶುದ್ಧ ಗಣಿತಶಾಸ್ತ್ರವೆಲ್ಲವನ್ನೂ ತರ್ಕಶಾಸ್ತ್ರದ ಕೆಲವೇ ಆಧಾರ ಸೂತ್ರಗಳಿಂದ ಅನುಮಾನಿಸಬಹುದೆಂದು ರಸಲ್ ತಿಳಿದಿದ್ದ. ಈ ಮಾತನ್ನು ತನ್ನ ಪ್ರಿನ್ಸಿಪಲ್ಸ್ ಆಫ್ ಮ್ಯಾಥಮ್ಯಾಟಿಕ್ಸ್ ಹಾಗೂ ಪ್ರಿನ್ಸಿಪಿಯಾ ಮ್ಯಾಥಮ್ಯಾಟಿಕಾ ಎಂಬ ಗ್ರಂಥದಲ್ಲಿ ವಿವರವಾಗಿ ಕಾಣಿಸಿದ್ದಾನೆ. ಪ್ರಿನ್ಸಿಪಿಯಾ ಮ್ಯಾಥಮ್ಯಾಟಿಕಾ ಎಂಬ ಬೃಹತ್ ಕೃತಿಯಲ್ಲಿ ಮಾಡಿದ ಇಂಥ ಪ್ರಯತ್ನದಲ್ಲಿ ಗಣಿತಶಾಸ್ತ್ರದ ಸಮಷ್ಟಿಸಿದ್ಧಾಂತ ಮತ್ತು ಸಂಖ್ಯಾಸಿದ್ಧಾಂತಗಳು ತರ್ಕಶಾಸ್ತ್ರದ ಸಾಂಕೇತಿಕ ತತ್ತ್ವಗಳ ಮೇಲೆ ಆಧಾರಿತವಾಗಿವೆಯೆಂಬುದನ್ನು ತೋರಿಸಿದ್ದಾನೆ. ವಿಧಗಳ ಸಿದ್ಧಾಂತದ (ಥಿಯರಿ ಆಫ್ ಟೈಪ್ಸ್) ಸಹಾಯದಿಂದ ಸಮಷ್ಟಿ ಸಿದ್ಧಾಂತದ ಸುಪ್ರಸಿದ್ಧ ವಿರೋಧಾಭಾಸಗಳನ್ನು ಬಿಡಿಸುವುದರಲ್ಲಿ ರಸಲ್ ಜಯಶಾಲಿಯಾದ. ವಿಧಗಳ ಸಿದ್ಧಾಂತದ ಭಾಗವೊಂದೆಂದು `ಆಕ್ಸಿಯಮ್ ಆಫ್ ರಿಡ್ಯೂಸಿಬಿಲಿಟಿ' ಎಂಬುದನ್ನು ಪ್ರಾರಂಭಿಸುವುದು ಅವಶ್ಯವೆಂದು ತಿಳಿದ. ಆಕ್ಸಿಯಮ್ ಆಫ್ ರಿಡ್ಯೂಸಿಬಿಲಿಟಿಯನ್ನು ಎಲ್ಲರೂ ಮಾನ್ಯಮಾಡಿಲ್ಲ. ಆದ್ದರಿಂದ ರಸಲ್ ಈ ಸಮಸ್ಯೆಯನ್ನು ಕೊನೆಯದಾಗಿ ಬಿಡಿಸಿದನೆಂದು ಹೇಳಲು ಸಾಧ್ಯವಿಲ್ಲ. ಹೀಗಿದ್ದರೂ ಪ್ರಿನ್ಸಿಪಿಯಾ ಮ್ಯಾಥಮ್ಯಾಟಿಕಾದ ಎರಡನೆಯ ಆವೃತ್ತಿಯಲ್ಲಿ ಗಣಿತಾನುಮಿತಿಗೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸುವ ಚಮತ್ಕಾರಿಕ ದಾರಿಯೊಂದನ್ನು ಈತ ಹುಡುಕಿದ್ದಾನೆ.
ಹುಟ್ಟಿನಿಂದ ೧೯೦೮ ರ ತನಕ - ದ ಹಾನರೆಬಲ್ ಬರ್ಟಾಂಡ್ ಆರ್ಥರ್ ರಸ್ಸೆಲ್.
೧೯೦೮ ರಿಂದ ೧೯೩೧ ರ ತನಕ - ದ ಹಾನರೆಬಲ್ ಬರ್ಟ್ರಾಂಡ್ ಆರ್ಥರ್ ರಸ್ಸೆಲ್, ಎಫ್ ಆರ್ ಎಸ್
೧೯೩೧ ರಿಂದ ೧೯೪೯ ರ ತನಕ - ದ ರೈಟ್ ಹಾನರೆಬಲ್ ದ ಅರ್ಲ್ ರಸ್ಸೆಲ್, ಎಫ್ ಆರ್ ಎಸ್
೧೯೪೯ ರಿಂದ ಸಾವಿನ ತನಕ - ದ ರೈಟ್ ಹಾನರೆಬಲ್ ದ ಅರ್ಲ್ ರಸ್ಸೆಲ್, ಒಎಮ್, ಎಫ್ ಆರ್ ಎಸ್
೧. ಅ ಕ್ರಿಟಿಕಲ್ ಎಕ್ಸ್ಪೊಜಿಷನ್ ಆಫ್ ದ ಫಿಲಾಸಫಿ ಆಫ್ ಲೆಬ್ನೀಸ್
೨. ಅ ಹಿಸ್ಟ್ರಿ ಆಫ್ ವೆಸ್ಟರ್ನ್ ಫಿಲಾಸಫಿ
೩. ಎ. ಬಿ. ಸಿ ಆಫ್ ರಿಲೇಟಿವಿಟಿ
೪. ಆನ್ ಎನ್ಕ್ವೈರಿ ಇಂಟು ಮೀನೆಂಗ್ ಅಂಡ್ ಟ್ರುಥ್
೫. ಆನ್ ಔಟ್ಲೈನ್ ಆಫ್ ಫಿಲೋಸಫಿ
೬. ಅಥೋರಿಟಿ ಆಂಡ್ ದ ಇಂಡಿವಿಜ್ಯುಲ್
೭. ಬೋಶ್ವಿಸ್ಮ್
೮. ಎಜುಕೇಶನ್ ಅಂಡ್ ದ ಗುಡ್ ಲೈಫ್
೯. ಫ್ರೀ ಮ್ಯಾನ್ಸ್ ವರ್ಶಿಪ್
೧೦. ಹೌ ಟು ಬಿ ಅಂಡ್ ಹ್ಯಾಪಿ
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.