Remove ads
From Wikipedia, the free encyclopedia
ಕಾರಾಗೃಹವು ಅಪರಾಧಿಗಳನ್ನು ಅಥವಾ ಕಾನೂನುಬದ್ಧ ಪ್ರಾಧಿಕಾರ ಒಪ್ಪಿಸಿಕೊಟ್ಟವರನ್ನು ಭದ್ರಸುಪರ್ದಿನಲ್ಲಿ ಅಥವಾ ಬಂಧನದಲ್ಲಿ ಇಡಲು ಬಳಸಲಾಗುವ ಕಟ್ಟಡ ಅಥವಾ ಸ್ಥಳ (ಪ್ರಿಸನ್). ಕಾರಾಗೃಹ, ಜೈಲು, ಬಂದೀಖಾನೆ ಮತ್ತು ಸೆರೆಮನೆ ಇವು ಸಮಾನ ಪದಗಳು. ಭಾರತದ ಕಾರಾಗೃಹಗಳಿಗೆ ಸಂಬಂಧಿಸಿದ ಕಾಯಿದೆಗಳಲ್ಲಿ ಕಾರಾಗೃಹ ಶಬ್ದದ ವ್ಯಾಖ್ಯೆಯನ್ನು ಹೇಳಲಾಗಿದೆ. ಈಗ ಶಾಸನ ವಿರೋಧವೆನಿಸುವ ಸಮಾಜ ಘಾತಕವೆನಿಸುವ ಕ್ರಿಯೆಗಳಿಗೆ ವಿಧಿಸಲಾಗುವ ಕಾರಾಗೃಹ ಶಿಕ್ಷೆ ಹಿಂದೆ ಶಿಕ್ಷೆಯೆನಿಸುತ್ತಿರಲಿಲ್ಲ. ಕಾರಾಗೃಹಗಳನ್ನು ಕೇವಲ ವಿಚಾರಣೆಯ ಮೊದಲು ಮತ್ತು ಶಿಕ್ಷೆಯನ್ನು ವಿಧಿಸುವ ವರೆಗೆ ಆಪಾದಿತನನ್ನು ಕಾವಲಿನಲ್ಲಿಡಲು ಉಪಯೋಗಿಸಲಾಗುತ್ತಿತ್ತು. ಎಲ್ಲ ದೇಶಗಳಲ್ಲೂ ಪ್ರತಿವರ್ಷವೂ ಸಾವಿರಾರು ಜನ ಕಾರಾಗೃಹವಾಸಿಗಳಾಗಿರುತ್ತಾರೆ. ಅವರೆಲ್ಲ ಅಪರಾಧದ ವಿಚಾರಣೆಗೋ ಸ್ಥಳೀಯ ಅಥವಾ ದೇಶದ ಕಾಯಿದೆಗಳನ್ನು ಅತಿಕ್ರಮಿಸಿದ ನಿಮಿತ್ತ ಶಿಕ್ಷೆಗೆ ಗುರಿಯಾಗಿಯೋ ಕಾರಾಗೃಹವಾಸಿಗಳಾಗುತ್ತಾರೆ. ಕಳ್ಳರು, ಕುಡುಕರು, ಕೊಲೆಗಡುಕರು, ಬಾಲದೋಷಿಗಳು, ವ್ಯಭಿಚಾರಿಗಳು, ಅಪರಾಧಿಗಳೆನಿಸಿದ ನಿರ್ದೋಷಿಗಳು, ಅಪರಾಧ ಮಡುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರು, ಸಂದರ್ಭ ಸನ್ನಿವೇಶಗಳಿಗೆ ತುತ್ತಾಗಿ ಅಪರಾಧ ಮಾಡಿದವರು-ಹೀಗೆ ಆಪಾದಿತರಲ್ಲಿ ನಾನಾ ಬಗೆಗಳುಂಟು.
ಕಾರಾಗೃಹಗಳು ಅತಿಪ್ರಾಚೀನ ಕಾಲದಿಂದಲೆ, ಎಂದರೆ ಮಾನವ ಸಂಘಜೀವಿಯಾಗಿ ಬಾಳಲು ಆರಂಭಿಸಿದಾಗಿನಿಂದಲೆ, ಅಸ್ತಿತ್ವದಲ್ಲಿವೆ. ಆದರೆ ಅವು ಇದ್ದ ರೀತಿ ಮತ್ತು ಅವುಗಳ ಉದ್ದೇಶಗಳು ಕಾಲಕಾಲಕ್ಕೆ ಬೇರೆಯಾಗುತ್ತ ಬಂದಿವೆ. ಬಂಡೆಗಳ ಸಂದು, ಮರದ ಪೊಟರೆ, ಗವಿ ಮತ್ತು ಗುಡಿಸಲುಗಳಿಂದ ಆರಂಭವಾಗಿ ಕಗ್ಗತ್ತಲ ಕೋಣೆಗಳವರೆಗೆ ಕಾರಾಗೃಹಗಳ ಬೆಳೆವಣಿಗೆಯಾಗಿದೆ. ಈಗ ಸಾಮಾನ್ಯವಾಗಿ ಅಸ್ತಿತ್ವದಲ್ಲಿರುವ ಕಾರಾಗೃಹಗಳಲ್ಲಿ ಬಂದೀಖಾನೆಗಳು, ಬಯಲ ಸೆರೆಮನೆಗಳು ಮತ್ತು ಸುಧಾರಣಾ ಕೇಂದ್ರಗಳು-ಎಂದು ಮೂರು ವಿಧಗಳುಂಟು.
ಸುಮಾರು 200 ವರ್ಷಗಳಿಗೆ ಮುಂಚೆ ಕಾರಾಗೃಹಗಳನ್ನು ಬಾಕಿ ವಸೂಲಿಗಾಗಿ ಅಥವಾ ಆಪಾದಿತರನ್ನು ವಿಚಾರಣೆಗೆ ಮುನ್ನ ಮತ್ತು ಶಿಕ್ಷೆ ಕೊಡುವುದಕ್ಕೋಸ್ಕರ ಬಂಧನದಲ್ಲಿಡಲು ಉಪಯೋಗಿಸಲಾಗುತ್ತಿತ್ತು. ಹಿಂದಿನ ಕಾಲದಲ್ಲಿ ಅಪರಾಧಕ್ಕನುಗುಣವಾಗಿ ಜುಲ್ಮಾನೆಯ ರೂಪದಲ್ಲೊ ಶಾರೀರಿಕ ದಂಡನೆ, ಮರಣದಂಡನೆ ಹಾಗೂ ಗಡಿಪಾರು ಮುಂತಾದ ರೂಪುಗಳಲ್ಲೋ ಶಿಕ್ಷೆಗಳನ್ನು ವಿಧಿಸಲಾಗುತ್ತಿತ್ತು. ಕಾರಾಗೃಹ ವಾಸವೂ ಶಿಕ್ಷೆಯ ಒಂದು ಪ್ರಕಾರವಾದ ಮೇಲೆ ಅದು ದಮನರೂಪದ ದಂಡನೆಯಾಗಿ ಪರಿಣಮಿಸಿತು. ಒತ್ತಾಯದ ಶ್ರಮ ಮತ್ತು ಸತತವಾಗಿ ಶಾರೀರಿಕ ಮತ್ತು ನೈತಿಕ ಅಪಮಾನಗಳಿಗೆ ಈಡುಮಾಡುವುದರ ಮೂಲಕ ಅಪರಾಧಿಯ ಚಿತ್ತವನ್ನು ಅಧೀನ ಮತ್ತು ನಿಯಂತ್ರಣಕ್ಕೊಳಪಡಿಸುವುದು ಕಾರಾಗೃಹಗಳಲ್ಲಿಯ ಪದ್ಧತಿಯಾಯಿತು. ಅಪರಾಧಿಯನ್ನು ದಂಡಿಸುವುದು ಮತ್ತು ಅವನ ಉಪಟಳದಿಂದ ಸಮಾಜಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಕಾರಾಗೃಹದ ಉದ್ದೇಶಗಳಾದುವು. ಇದರಿಂದಾಗಿ ಸಮಾಜಕ್ಕೆ ಒಂದು ರೀತಿಯ ರಕ್ಷಣೆ ದೊರೆಯಿತು.
ಅಪರಾಧಿಯೂ ಒಬ್ಬ ಮನುಷ್ಯ, ಅವನು ಸುಧಾರಣೆಗೊಂಡು ಉತ್ತಮ ಮಾನವನಾಗಿ, ಸತ್ಪ್ರಜೆಯಾಗಿ, ಸಮಾಜದ ಪ್ರಗತಿಯಲ್ಲಿ ಭಾಗಿಯಾಗುವುದು ವಿಹಿತ, ಅವನಿಗೆ ಇಂಥ ಅವಕಾಶಗಳನ್ನು ಕಲ್ಪಿಸಿಕೊಡುವುದು ಸರ್ಕಾರದ ಮತ್ತು ಸಮಾಜದ ಕರ್ತವ್ಯ ಎಂಬ ಭಾವನೆಗಳು ಕ್ರಮೇಣ ಬೆಳೆದು ಬಂದಿವೆ. ಹೀಗಾಗಿ ಕಾರಾಗೃಹ ಇತ್ತೀಚೆಗೆ ಅಪರಾಧ ಶಾಸ್ತ್ರದಲ್ಲಿ ಶಿಕ್ಷೆ, ಸುಧಾರಣೆ ಮತ್ತು ಪುನರ್ವಸತಿಗಳ ದ್ಯೋತಕವಾಗಿದೆ. ಅಪರಾಧಿಯನ್ನು ಅವನ ಸಂಪತ್ತು, ಸ್ವಜನ ಮತ್ತು ಸಮಾಜಗಳಿಂದ ಮತ್ತು ನಿತ್ಯಜೀವನದ ಆವಶ್ಯಕತೆಗಳಿಂದ ದೂರವಿಡುವುದರ ಮೂಲಕ ಬಂಧನದಲ್ಲಿಡುವುದು ಶಿಕ್ಷೆ. ಅವನ ಮಾನಸಿಕ ದೋಷ ದೌರ್ಬಲ್ಯಗಳನ್ನು ಕಂಡುಹಿಡಿದು ಉಪದೇಶ ಮತ್ತು ಕೃತಿಗಳಿಂದ ಅವನನ್ನು ತಿದ್ದುವುದು ಸುಧಾರಣೆ. ಅನೇಕ ವೃತ್ತಿ ಕೆಲಸಗಳ ಬಗೆಗೆ ತರಬೇತಿ ಕೊಡುವುದರ ಜೊತೆಗೆ ದುಡಿದು ಬಾಳಲು ಪ್ರೇರೇಪಿಸುವುದು ಪುನರ್ವಸತಿಗೆ ಸಹಾಯಕವಾಗುತ್ತದೆ.
ಸಮಾಜ ಘಾತಕರಿಂದ ಸಮಾಜವನ್ನು ರಕ್ಷಿಸುವ ಮತ್ತು ಪಾತಕಿಗಳನ್ನು ಸನ್ಮಾರ್ಗಿಗಳನ್ನಾಗಿ ಮಾರ್ಪಡಿಸುವ ಕಾರಾಗೃಹಗಳು ನಡೆದು ಬಂದಿರುವ ದಾರಿ ಮಾನವಕುಲದ ಇತಿಹಾಸದ ಒಂದು ಮುಖ್ಯ ಬೆಳೆವಣಿಗೆ.
ಪುರಾಣಗಳಲ್ಲಿ, ದಂತಕಥೆಗಳಲ್ಲಿ ಕಾರಾಗೃಹಗಳ ವಿವರಣೆ ಬಂದಿರುವುದಾದರೂ ಪ್ರಾಚೀನ ಭಾರತ ನ್ಯಾಯಶಾಸ್ತ್ರದಲ್ಲಿ ಕಾರಾಗೃಹಶಿಕ್ಷೆಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಸ್ಮøತಿಕಾರರು ಮತ್ತು ನ್ಯಾಯಶಾಸ್ತ್ರಜ್ಞರು ಅಪರಾಧ ಮತ್ತು ಶಿಕ್ಷೆಗಳ ಬಗ್ಗೆ ಹಾಗೂ ಅಪರಾಧಿಗಳ ಮನೋವಿಶ್ಲೇಷಣೆಯ ಬಗ್ಗೆ ವಿವೇಚನೆ ಮಾಡಿದ್ದಾರೆ. ಆಕಸ್ಮಿಕವಾಗಿ ಅಥವಾ ಪ್ರಸಂಗವಶಾತ್ ಅಪರಾಧ ಮಾಡಿದವರು; ಮತ್ತು ಅಪರಾಧಗಳನ್ನು ಮಾಡುವುದನ್ನೇ ಸ್ವಭಾವವಾಗಿ ಉಳ್ಳಂಥ ದುಷ್ಟರು ಎಂದು ಮನುಸ್ಮøತಿಯಲ್ಲಿ ಅಪರಾಧಿಗಳ ವರ್ಗೀಕರಣ ಮಾಡಲಾಗಿದೆ. ಗೌತಮ, ವಸಿಷ್ಠ, ಬೌಧಾಯನ, ವಿಷ್ಣು, ಯಾಜ್ಞವಲ್ಕ್ಯ ಮುಂತಾದವರು ಅಪರಾಧಗಳನ್ನು ಮತ್ತು ಅವುಗಳಿಗೆ ಅನುಗುಣವಾಗಿ ವಿಧಿಸಲಾಗುವ ಶಿಕ್ಷೆಗಳನ್ನು ಹೇಳಿದ್ದಾರೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಅಪರಾಧಿಗಳ ಮತ್ತು ಶಿಕ್ಷೆಗಳ ಒಂದು ಪಟ್ಟಿಯೇ ಇದೆ. ಅವುಗಳಲ್ಲಿ ವಿರೂಪಣ, ದೇಹದಂಡನೆ, ಮರಣದಂಡನೆ ಮುಂತಾದವು ಕಠಿಣ ಶಿಕ್ಷೆಗಳಾಗಿದ್ದುವು. ಕಾರಾಗೃಹಕ್ಕೆ ಶಿಕ್ಷೆಯ ಸ್ವರೂಪ ಇನ್ನೂ ಬಂದಿರಲಿಲ್ಲ. ಆದರೆ ಯುದ್ಧಕೈದಿಗಳನ್ನು ಕಾರಾಗೃಹದಲ್ಲಿಡುತ್ತಿದ್ದುದುಂಟು.
ಭಾರತದಲ್ಲಿ ಮುಸ್ಲಿಂ ರಾಜಮನೆತನಗಳ ಆಡಳಿತ ಬಂದ ಮೇಲೆಯೂ ಈ ಬಗ್ಗೆ ಯಾವ ಬದಲಾವಣೆಯೂ ಆಗಲಿಲ್ಲ. ಏಕೆಂದರೆ ಆಗ ಪ್ರಚಲಿತವಿದ್ದ ಹಿಂದೂ ಮತ್ತು ಇಸ್ಲಾಮೀ ನ್ಯಾಯಸೂತ್ರಗಳ ವ್ಯಾಪ್ತಿಯಲ್ಲಿ ಕಾರಾಗೃಹದ ಕಲ್ಪನೆಯಿರಲಿಲ್ಲ. ಇಸ್ಲಾಮೀ ನ್ಯಾಯಸೂತ್ರಗಳಲ್ಲೂ ಅಪರಾಧಗಳ ವರ್ಗೀಕರಣ ಉಂಟು. ಈಸ್ಟ್ ಇಂಡಿಯ ಕಂಪನಿಯವರು ಕಾರಾಗೃಹಗಳನ್ನು ಸರಿಯಾಗಿ ಇಟ್ಟಿರಲಿಲ್ಲವಾದ ಕಾರಣ ಮಕಾಲೆ 1835ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಭಾರತದ ಕಾರಾಗೃಹಗಳ ದುರವಸ್ಥೆಯನ್ನು ಕುರಿತು ವರದಿ ಮಾಡಿದ. 1836ರಲ್ಲಿ ಈ ಬಗ್ಗೆ ಒಂದು ಸಮಿತಿಯನ್ನು ನೇಮಿಸಲಾಯಿತು. ದಂಡನೆಯ ಪ್ರಾಮುಖ್ಯವುಳ್ಳ ಹಲವು ಶಿಫಾರಸುಗಳನ್ನು ಸಮಿತಿ ಮಾಡಿತು. ಇದರಿಂದಾಗಿ 1846ರಲ್ಲಿ ಭಾರತದ ಪ್ರಥಮ ಕಾರಾಗೃಹವನ್ನು ಆಗ್ರದಲ್ಲಿ ಕಟ್ಟಲಾಯಿತು. ಮುಂದೆ 1848ರಲ್ಲಿ ಬರೈಲಿ ಮತ್ತು ಅಲಹಾಬಾದುಗಳಲ್ಲಿಯೂ 1857ರಲ್ಲಿ ಮದರಾಸಿನಲ್ಲಿಯೂ 1864ರಲ್ಲಿ ಮುಂಬಯಿ ಮತ್ತು ವಾರಾಣಸಿಗಳಲ್ಲಿಯೂ ಕಾರಾಗೃಹಗಳನ್ನು ಕಟ್ಟಲಾಯಿತು. ಆಮೇಲೆ ಲಖನೌ ಮುಂತಾದ ಕಡೆಗಳಲ್ಲಿಯೂ ಕಾರಾಗೃಹಗಳನ್ನು ಕಟ್ಟಲಾಯಿತು. ಭಾರತದ ಕಾರಾಗೃಹಪದ್ಧತಿ ಇಂಗ್ಲಿಷ್ ಕಾರಾಗೃಹಪದ್ಧತಿಯ ಜಾಡಿನಲ್ಲಿ ನಡೆದುಕೊಂಡು ಬಂದಿದೆ. ವಿಶ್ವದ ಕಾರಾಗೃಹಪದ್ಧತಿಗಳ ಮೇಲೆ ಇಂಗ್ಲೆಂಡ್ ಮತ್ತು ಅಮೆರಿಕಗಳ ಕಾರಾಗೃಹಗಳು ಪ್ರಭಾವ ಬೀರಿವೆ.
ಇಂಗ್ಲೆಂಡಿನಲ್ಲಿ : ಇಂಗ್ಲೆಂಡಿನಲ್ಲಿ 1166ರಿಂದಲೂ ಸ್ಥಳೀಯ ಜೈಲುಗಳು ಮತ್ತು ರಾಜನ ನ್ಯಾಯಾಲಯಗಳ ಜೈಲುಗಳು ಇದ್ದ ಬಗ್ಗೆ ಉಲ್ಲೇಖ ದೊರೆಯುತ್ತದೆ. ಇವು ಬಹಳ ಹೀನಾವಸ್ಥೆಯಲ್ಲಿದ್ದುವು. ಮುಂದೆ, 1557ರಲ್ಲಿ, ಸಣ್ಣಪುಟ್ಟ ಅಪರಾಧಗಳನ್ನು ಮಾಡಿದವರು, ನಿರ್ಗತಿಕರು, ನೀತಿಗೆಟ್ಟವರು, ಭಿಕ್ಷುಕರು ಮತ್ತು ಕೆಲಸ ದೊರೆಯದೆ ಕಂಗಾಲಾದವರು ಕೆಲಸ ಮಾಡಿದ, ಕೂಲಿ ಪಡೆದು ಜೀವನ ಸುಧಾರಿಸಿಕೊಳ್ಳಲು ಸಹಾಯವಾಗಲು ಲಂಡನಿನಲ್ಲಿ ಸ್ಥಾಪಿಸಲಾದ ಬ್ರೈಡ್ವೆಲ್ ಮಾದರಿಯ ಕಾರಾಗೃಹಗಳು ಅಸ್ತಿತ್ವಕ್ಕೆ ಬಂದುವು. ಕಾರಾಗೃಹಗಳ ಬಗ್ಗೆ ಸರ್ಕಾರ ಒಂದು ಕಾಯಿದೆಯನ್ನು ಕೂಡ ಮಾಡಿತು. ಆಧುನಿಕ ವಿಚಾರಸರಣಿಗೆ ಸರಿಹೊಂದುವಂಥ ವಿಶ್ವದ ಪ್ರಥಮ ಕಾರಾಗೃಹವನ್ನು 1700ರಲ್ಲಿ 11ನೆಯ ಪೋಪ್ ಕ್ಲೆಮೆಂಟ್ ರೋಮಿನಲ್ಲಿ ಕಟ್ಟಿಸಿದ. ಇದೇ ಮಾದರಿಯ ಎರಡನೆಯ ಕಾರಾಗೃಹ ಬೆಲ್ಜಿಯಂ ದೇಶದಲ್ಲಿ 1773ರಲ್ಲಿ ಅಸ್ತಿತ್ವಕ್ಕೆ ಬಂತು. ಸುಧಾರಣೆಯೇ ಈ ಕಾರಾಗೃಹಗಳ ಉದ್ದೇಶವಾಗಿತ್ತು. ಆದರೆ ಇವು ಪ್ರಭಾವಶಾಲಿಗಳಾಗಿ ಉಳಿಯಲಿಲ್ಲ.
ಸರ್ ವಿಲಿಯಂ ಕೋಕನ ಪ್ರಶಂಸೆಗೆ ಪಾತ್ರವಾಗಿದ್ದ ಬ್ರೈಡ್ವೆಲ್ ಮಾದರಿಯ ಕಾರಾಗೃಹಗಳು ಹದಗೆಟ್ಟುವು. ಅಲ್ಲಿಯ ಕೊಳಕು, ಹಿಂಸೆ, ಕ್ರೂರತನ ಮತ್ತು ಸುಲಿಗೆಯನ್ನು ಕುರಿತು 1729ರಲ್ಲಿ ನೇಮಕವಾಗಿದ್ದ ಸಮಿತಿ ತನ್ನ ವರದಿಯಲ್ಲಿ ಹೇಳಿದ್ದರೂ ಪರಿಸ್ಥಿತಿ ಹಾಗೆಯೇ ಮುಂದುವರಿಯಿತು. ಬೆಡ್ಫರ್ಡ್ಷೈರಿನ ಷರೀಫನಾದ ಜಾನ್ ಹೌವರ್ಡನ ಹೋರಾಟವೇ ಇಂಗ್ಲೆಂಡಿನ ಕಾರಾಗೃಹಗಳ ಸುಧಾರಣೆಗೆ ಸೋಪಾನವಾಯಿತು. ಆತ ದಿ ಸ್ಟೇಟ್ ಆಫ್ ಪ್ರಿಸನ್ ಎಂಬ ತನ್ನ ಕೃತಿಯನ್ನು 1777ರಲ್ಲಿ ಪ್ರಕಟಿಸಿದ. ಅದರಲ್ಲಿ ಕಾರಾಗೃಹದ ಕಟ್ಟಡ, ಅಲ್ಲಿರಬೇಕಾದ ವಾತಾವರಣ, ಸೌಕರ್ಯಗಳು, ಸ್ತ್ರೀಪುರುಷ ಕೈದಿಗಳ ಬೇರ್ಪಡೆ-ಇವನ್ನೆಲ್ಲ ವಿವೇಚಿಸಿರುವುದಲ್ಲದೆ, ಬಾಲದೋಷಿಗಳು, ಪ್ರಥಮಾಪರಾಧಕ್ಕೆ ಗುರಿಯಾದವರು ಮತ್ತು ರೂಢಾಪರಾಧಿಗಳನ್ನು ಬೇರೆಬೇರೆಯಾಗಿ ಇಡುವಂತೆ ಸೂಚಿಸಲಾಗಿದೆ. ಹೌವರ್ಡ್ ಮತ್ತು ಅವನ ಅನುಯಾಯಿಗಳ ಪ್ರಯತ್ನಗಳ ಫಲವಾಗಿ 1774ರಿಂದ 1791ರ ಅವಧಿಯಲ್ಲಿ ಅನೇಕ ಕಾಯಿದೆಗಳು ಜಾರಿಗೆ ಬಂದುವು. ಆದರೆ ಅವು ಆಜ್ಞಾಪಕವಾಗಿರದ ಕಾರಣ ಅವುಗಳಿಂದ ಯಾವ ಪ್ರಯೋಜನವೂ ಆಗಲಿಲ್ಲ. 1817ರಲ್ಲಿ ಕಾರಾಗೃಹ ಶಿಸ್ತು ಸುಧಾರಣಾ ಸಂಸ್ಥೆಯ ಸ್ಥಾಪನೆಯಾಯಿತು. 1818ರಲ್ಲಿ ಅದು ಸಲ್ಲಿಸಿದ ವರದಿಯ ಮೇರೆಗೆ ಆಗ ಇಂಗ್ಲೆಂಡಿನಲ್ಲಿ 518 ಜೈಲುಗಳಿದ್ದುವು. ಅವುಗಳಲ್ಲಿ ಕೈದಿಗಳ ವರ್ಗೀಕರಣವಾಗಲಿ, ಸರಿಯಾದ ಸ್ಥಳಾವಕಾಶವಾಗಲಿ ಇರಲಿಲ್ಲ. ಇದೇ ಸುಮಾರಿಗೆ ಸ್ತ್ರೀಯರ ನ್ಯೂಗೇಟ್ ಕಾರಾಗೃಹವನ್ನು ನೋಡಿ ನೊಂದುಕೊಂಡ ಎಲಿಜûಬೆತ್ ಫ್ರೈ ಇದರ ಸುಧಾರಣೆಗಾಗಿ ಪ್ರಯತ್ನ ನಡೆಸಿದಳು. ನೆಲದ ಮೇಲಿನ ಈ ನರಕವನ್ನು ನಾಕವನ್ನಾಗಿ ಮಾರ್ಪಡಿಸಿದ ಕೀರ್ತಿ ಆಕೆಯದು.
1821ರಿಂದ 1824ರ ಅವಧಿ ಇಂಗ್ಲೆಂಡಿನ ಕಾರಾಗೃಹಗಳ ಇತಿಹಾಸದಲ್ಲಿ ಮತ್ತೊಂದು ಪ್ರಮುಖ ಘಟ್ಟ. 1821ರಲ್ಲಿ ಮಿಲ್ಬ್ಯಾಂಕಿನಲ್ಲಿ ಪ್ರಥಮ ರಾಷ್ಟ್ರೀಯ ಕಾರಾಗೃಹವನ್ನು ಕಟ್ಟಲಾಯಿತು. ಪೀಲ್ 1824ರಲ್ಲಿ ಹಿಂದಿನ 23 ಕಾಯಿದೆಗಳನ್ನು ಕ್ರೋಡೀಕರಿಸಿ, ಒಂದು ಹೊಸ ಯೋಜನೆಯನ್ನು ಅನುಷ್ಠಾನಕ್ಕೆ ತಂದ. ಹೌವರ್ಡನ ಸಲಹೆಗಳ ಆಧಾರದ ಮೇಲೆ ಕಾರಾಗೃಹಗಳ ಆಡಳಿತ ಜರುಗಬೇಕು, ನ್ಯಾಯಾಧೀಶರು ಆಗಾಗ್ಗೆ ಅವನ್ನು ಸಂದರ್ಶಿಸಬೇಕು ಮತ್ತು ಆ ಬಗ್ಗೆ ಮೂರು ತಿಂಗಳುಗಳಿಗೆ ಒಮ್ಮೆ ಗೃಹಾಡಳಿತ ಇಲಾಖೆಯ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸಬೇಕು. ಇವು ಈ ಯೋಜನೆಯ ಮುಖ್ಯ ಅಂಶಗಳು.
1831ರಲ್ಲಿ ಅಲ್ಲಿಯ ಸಂಸತ್ ಸಮಿತಿ ಕಾರಾಗೃಹಗಳನ್ನು ಕುರಿತ ಎಲ್ಲ ವಿಷಯಗಳನ್ನೂ ಕೂಲಂಕಷವಾಗಿ ಪರಾಮರ್ಶಿಸಿ ಎಲ್ಲ ಅಪರಾಧಿಗಳನ್ನೂ ಪ್ರತ್ಯೇಕವಾಗಿ ಇಡಬೇಕೆಂದೂ ಹಾಗೆ ಮಾಡಲು ಅನುಕೂಲವಾಗುವಂತೆ ಏಕಾಂತ ಕೋಣೆಗಳನ್ನು ಕಟ್ಟಬೇಕೆಂದೂ ಸಲಹೆ ಮಾಡಿತು. ಈ ಸುಮಾರಿಗೆ ಆಗಲೇ ಅಮೆರಿಕದಲ್ಲಿ ಕಾರಾಗೃಹಗಳ ಸುಧಾರಣೆ ಅವ್ಯಾಹತವಾಗಿ ನಡೆದಿದೆ ಎಂಬ ಸಮಾಚಾರ ಐರೋಪ್ಯ ದೇಶಗಳಲ್ಲೆಲ್ಲ ಹಬ್ಬಿತ್ತು. ಅಲ್ಲಿಯ ಪ್ರಯೋಗಗಳನ್ನು ನೋಡಿಕೊಂಡು ಬರಲು ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮತ್ತು ಬೆಲ್ಜಿಯಂ ದೇಶಗಳ ಪ್ರತಿನಿಧಿಗಳು ಒಟ್ಟಾಗಿಯೇ ಅಮೆರಿಕಕ್ಕೆ ಹೋದರು. ಅದರ ಫಲವಾಗಿ 1842ರಲ್ಲಿ ಪೆಂಟನ್ವಿಲ್ಲೆಯ ಏಕಾಂತ ಕೋಣೆಗಳ ಕಾರಾಗೃಹವನ್ನೇ ಅಲ್ಲದೆ ಇನ್ನೂ ಅನೇಕ ಕಾರಾಗೃಹಗಳನ್ನು ಕಟ್ಟಲಾಯಿತು.
ಇಂಗ್ಲೆಂಡಿನಲ್ಲಿಯ ಕಾರಾಗೃಹಗಳ ಸುಧಾರಣೆಗೆ ಅಲ್ಲಿಯ ಸಾಮಾಜಿಕ ಜಾಗೃತಿಯ ಜೊತೆಗೆ ಅಪರಾಧಶಾಸ್ತ್ರವನ್ನು ಕುರಿತ ಚಿಂತನ ಸಂಶೋಧನಗಳೂ ಅಪರಾಧಿಗಳನ್ನು ಗಡಿಪಾರು ಶಿಕ್ಷೆಯ ಮೇಲೆ ಅಮೆರಿಕ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯ ಮತ್ತು ಟಾಸ್ಮೇನಿಯ ದೇಶಗಳಿಗೆ ಕಳಿಸುವುದನ್ನು ನಿರ್ಬಂಧಿಸಿದುದೂ ಕಾರಣವೆಂದು ಹೇಳಬಹುದು. 1878ರಲ್ಲಿ ಸರ್ಕಾರ ಎಲ್ಲ ಸ್ಥಳೀಯ ಕಾರಾಗೃಹಗಳನ್ನೂ ತನ್ನ ಹತೋಟಿಗೆ ತೆಗೆದುಕೊಂಡಿತು; ಕಾರಾಗೃಹಗಳ ಆಯೋಗವನ್ನು ನೇಮಿಸಿತು. ಕಾರಾಗೃಹಗಳಲ್ಲಿ ಸಶ್ರಮ ಮತ್ತು ಏಕಾಂತ ಸೆರೆವಾಸದ ವಿಧಾನಗಳು ಸಾಮಾನ್ಯವಾದುವು.
ಮುಂದಿನ ಇಪ್ಪತ್ತು ವರ್ಷಗಳಲ್ಲಿ ಕಾರಾಗೃಹಗಳ ಪರಿಸ್ಥಿತಿ ಕೆಟ್ಟು ಕೈದಿಗಳ ಶಾರೀರಿಕ, ಮಾನಸಿಕ ಅವನತಿಗೆ ಕಾರಣವಾಗುತ್ತಿವೆ ಎಂಬುದಾಗಿ ಅನೇಕ ಆರೋಪಗಳು ಬಂದು ಇವುಗಳ ವಿಚಾರಣೆಗಾಗಿ ಗ್ಲಾಡ್ಸ್ಟನನ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಿಸಲಾಯಿತು. ಅಲ್ಲಿಯ ಕಾರಾಗೃಹಪದ್ಧತಿಯಲ್ಲಿ ದಂಡನೆಯೇ ಪ್ರಧಾನ ದೃಷ್ಟಿಯಾಗಿತ್ತು. ವ್ಯಕ್ತಿಯ ಸುಧಾರಣೆಗೂ ಮಾನ್ಯತೆ ದೊರೆಯಬೇಕೆಂದು ಆ ಸಮಿತಿ ಸಲಹೆ ಮಾಡಿತು. ಕೈದಿಯ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಕಾರಾಗೃಹ ಕಾರಣವಾಗಬೇಕೆಂದೂ ಅದು ಸೂಚಿಸಿತು. ಇದರ ಪರಿಣಾಮವಾಗಿ 1898ರಲ್ಲಿ ಕಾರಾಗೃಹ ಕಾಯಿದೆಯೊಂದು ಅನುಮೋದಿತವಾಯಿತು. ಇಂಗ್ಲೆಂಡಿನ ಕಾರಾಗೃಹ ವ್ಯವಸ್ಥೆಗೆ ಅದೇ ಮುಖ್ಯ ಅಡಿಪಾಯ. ಸಶ್ರಮದ ಎಲ್ಲ ವಿಧಾನಗಳನ್ನೂ ರದ್ದುಗೊಳಿಸಲಾಯಿತು. ಆ ಕಾಯಿದೆಯಲ್ಲಿ ಅಪರಾಧಿಗಳನ್ನು ಮೂರು ಬಗೆಗಳಾಗಿ ವಿಂಗಡಿಸುವ ವಿಧಾನವನ್ನು ಸೂಚಿಸಲಾಗಿದೆ. ದಂಡ ಸಲುವಳಿ ಮಾಡದಿರುವ ತಪ್ಪಿಗಾಗಿ ಒಬ್ಬನಿಗೆ ಕಾರಾಗೃಹ ಶಿಕ್ಷೆ ವಿಧಿಸಿದ್ದಲ್ಲಿ, ಭಾಗಶಃ ದಂಡ ತೆತ್ತು ಕಾರಾಗೃಹ ಶಿಕ್ಷೆಯನ್ನು ಕಡಿಮೆ ಮಾಡಿಸಿಕೊಳ್ಳುವ ಅವಕಾಶವನ್ನೂ ಕಾಯಿದೆಗೆ ವಿರುದ್ಧವಲ್ಲದ ನಿಯಮಗಳನ್ನು ಮಾಡಲು ಸರ್ಕಾರಕ್ಕೆ ಅಧಿಕಾರವನ್ನೂ ನೀಡಲಾಗಿದೆ.
1907 ರಿಂದ 1914ರ ವರೆಗಿನ ಅವಧಿಯನ್ನು ಮತ್ತೊಂದು ಮಹತ್ತ್ವದ ಘಟ್ಟವೆಂದು ಹೇಳಬಹುದು. ಈ ಅವಧಿಯಲ್ಲಿ ಪ್ರೊಬೇಷನ್ ಕಾಯಿದೆ, ಅಪರಾಧ ನಿರೋಧದ ಬಗೆಗಿನ ಕಾಯಿದೆ, ಮಕ್ಕಳಿಗೆ ಸಂಬಂಧಿಸಿದ ಕಾಯಿದೆ, ದಂಡನ್ಯಾಯಿಕ ಕಾಯಿದೆ ಮತ್ತು ಮನೋವಿಕಲತೆಯ ಕಾಯಿದೆಗಳು ಜಾರಿಗೆ ಬಂದುವು.
ಬಾಸ್ರ್ಟಲ್ ಗ್ರಾಮದಲ್ಲಿಯ ಪ್ರಯೋಗದ ಫಲವಾದ, ಬಾಲದೋಷಿಗಳನ್ನು ಸುಧಾರಿಸುವ ಬಾಸ್ರ್ಟಲ್ ಪದ್ಧತಿ 1908ರ ಅಪರಾಧ ನಿರೋಧ ಕಾಯಿದೆಯ ಪ್ರಕಾರ ಜಾರಿಗೆ ಬಂತು. ಕೈದಿ ಬಿಡುಗಡೆ ಹೊಂದಿದ ಮೇಲೆ ತಾನು ಉತ್ತಮ ಮತ್ತು ಉಪಯುಕ್ತ ಬಾಳನ್ನು ಸಾಗಿಸಬೇಕೆಂಬ ಆಶೆ ಕುದುರುವಂತೆ ಕಾರಾಗೃಹಗಳು ಸಹಕರಿಸಲು ಅನುಕೂಲವಾಗುವ ಉಪಬಂಧಗಳನ್ನು 1948ರ ದಂಡನ್ಯಾಯಿಕ ಕಾಯಿದೆಯಲ್ಲಿ ಅಳವಡಿಸಲಾಗಿದೆ.
ವೇಕ್ಫೀಲ್ಡಿನಲ್ಲಿಯ ಅನಾವೃತ ಕಾರಾಗೃಹ ಮತ್ತು ಸಿಬ್ಬಂದಿ ತರಬೇತಿ ಕೇಂದ್ರಗಳು ಈ ದಿಶೆಯಲ್ಲಿಯ ಮುಖ್ಯ ಹೆಜ್ಜೆಗಳು. ವೇಕ್ಫೀಲ್ಡ್, ಮೆಡಾಸ್ಯನ್, ಮ್ಯಾಂಚೆಸ್ಟರ್, ಲಿವರ್ಪೂಲ್, ವ್ಯಾಡ್ಸ್ವರ್ತ್ ಮುಂತಾದವು ಇಲ್ಲಿಯ ಪ್ರಮುಖ ಕಾರಾಗೃಹಗಳು, ಅಮೆರಿಕ, ರಷ್ಯ, ಇಂಗ್ಲೆಂಡ್ಗಳ ಕಾರಾಗೃಹಗಳು ವಿಶ್ವದಲ್ಲಿಯೇ ಉತ್ತಮವಾದವು.
ಅಮೆರಿಕದಲ್ಲಿ : ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ 1787ರ ಸುಮಾರಿಗಾಗಲೇ ಕ್ರೈಸ್ತ ಮಿತ್ರಸಂಘದವರು ಕಾರಾಗೃಹಗಳ ಸುಧಾರಣೆಯ ಕಾರ್ಯದಲ್ಲಿ ತೊಡಗಿದ್ದರು. ಅಪರಾಧಿಗಳು ಏಕಾಂತದಲ್ಲಿದ್ದು, ಬೈಬಲ್ ಓದುವುದರ ಮೂಲಕ ಮತ್ತು ಪಶ್ಚಾತ್ತಾಪಪಡುವುದರಿಂದ ಸುಧಾರಿಸುವರೆಂದು ಅವರು ನಂಬಿದ್ದರು. ಏಕಾಂತವಾಸದ ಕಾಲದಲ್ಲಿ ಚಾಪ್ಲೇನ್ ಮಾತ್ರ ಖೈದಿಗಳನ್ನು ಕಾಣಬಹುದಿತ್ತು. ಈ ರೀತಿಯ ಕಠಿಣ ಏಕಾಂತವಾಸ ಪದ್ಧತಿ ಫಿಲಡೆಲ್ಫಿಯ ಮತ್ತು ಇತರ ಕಡೆಗಳಲ್ಲಿ ಇತ್ತು. 1816ರಲ್ಲಿ ಆಬರ್ನ್ ಕಾರಾಗೃಹವನ್ನೂ 1817ರಲ್ಲಿ ವಾಲ್ನಟ್ ಸ್ಟ್ರೀಟ್ ಜೈಲು ಸಾಲದುದಕ್ಕೆ ಮತ್ತೆರಡು ಜೈಲುಗಳನ್ನೂ ಕಟ್ಟಲಾಯಿತು. ಆಬರ್ನ್ ಕಾರಾಗೃಹವನ್ನುಳಿದು ಇತರ ಕಡೆಗಳಲ್ಲಿ ಏಕಾಂತವಾಸದ ಪೆನ್ಸಿಲ್ವೇನಿಯ ಪದ್ಧತಿ ಇತ್ತು. ಆಬರ್ನ್ ಕಾರಾಗೃಹದ ಅಧಿಕಾರಿಯಾಗಿದ್ದ ಲೂಯಿ ಡ್ವೈಟ್ ಏಕಾಂತವಾಸದ ಪದ್ಧತಿಗೆ ವಿರೋಧವಾಗಿದ್ದ. ಏಕಾಂತವಾಸದಿಂದ ಮನೋದೌರ್ಬಲ್ಯ ಹೆಚ್ಚುವ ಕಾರಣ, ಆಬರ್ನ್ ಕಾರಾಗೃಹದಲ್ಲಿ ಹಗಲು ಹೊತ್ತು ಕೈದಿಗಳೆಲ್ಲರೂ ಸೇರಿ ಮೌನದಿಂದ ಕೆಲಸ ಮತ್ತು ಊಟ ಮಾಡುವುದು ಮತ್ತು ರಾತ್ರಿಯಲ್ಲಿ ಬೇರೆ ಬೇರೆ ಏಕಾಂತ ಕೋಣೆಗಳಲ್ಲಿರುವುದು ರೂಢಿಯಾಯಿತು. ಇದಕ್ಕೆ ಆಬರ್ನ್ ಪದ್ಧತಿ ಎಂದು ಹೆಸರು.
ಕಾರಾಗೃಹವಾಸ ಶಿಕ್ಷೆಯಾಗಿ ಪರಿಣಮಿಸಿದುದು ಅಮೆರಿಕದಲ್ಲಿ. ಅದು ಏಕಾಂತವಾಸದ ಪ್ರಭಾವದ ಫಲ. ಕಾರಾಗೃಹ ಶಿಕ್ಷೆ ಕೂಡಲೆ ಇಂಗ್ಲೆಂಡ್ ಮತ್ತು ವಿಶ್ವದ ಅನೇಕ ದೇಶಗಳಲ್ಲಿ ಆಚರಣೆಗೆ ಬಂದು ಈಗ ಎಲ್ಲ ದೇಶಗಳಲ್ಲೂ ಇದನ್ನು ಜಾರಿಗೆ ತರಲಾಗಿದೆ. ಪೆನ್ಸಿಲ್ವೇನಿಯ ಮತ್ತು ಆಬರ್ನ್ ಪದ್ಧತಿಗಳ ಬಗ್ಗೆ ಅನೇಕ ದೇಶಗಳಲ್ಲಿ ಜಿಜ್ಞಾಸೆ ಆರಂಭವಾಯಿತು. ಚಾಲ್ರ್ಸ್ ಡಿಕನ್ಸ್ ಈ ಸಂಬಂಧದಲ್ಲಿ ಅಮೆರಿಕಕ್ಕೆ ಹಲವು ಬಾರಿ ಹೋಗಿ ಬಂದಿದ್ದ.
ಬಾಲದೋಷಿಗಳ ಸುಧಾರಣೆ ಅಮೆರಿಕದ ಮತ್ತೊಂದು ಕೊಡುಗೆ. 1825ರಲ್ಲಿ ನ್ಯೂಯಾರ್ಕಿನಲ್ಲೂ 1826ರಲ್ಲಿ ಬಾಸ್ಟನ್ ಮತ್ತು ಫಿಲಡೆಲ್ಫಿಯಗಳಲ್ಲೂ ಮಕ್ಕಳ ಸುಧಾರಣಾಕೇಂದ್ರಗಳನ್ನು ಕಟ್ಟಲಾಯಿತು. ವಯಸ್ಕರ ಸುಧಾರಣೆ ಯೂರೋಪಿನಲ್ಲಿ 1840ರಿಂದಲೇ ಆರಂಭವಾಯಿತೆನ್ನಬಹುದು. 1867ರಲ್ಲಿ ನ್ಯೂಯಾರ್ಕ್ ರಾಜ್ಯ 16ನೆಯ ವಯಸ್ಸಿನಿಂದ 30ನೆಯ ವರ್ಷದ ವರೆಗಿನ ಅಪರಾಧಿಗಳ ಸುಧಾರಣೆಗೆ ಕಾಯಿದೆ ಮಾಡಿತು. ಎಲ್ಮೀರಾ ಕಾರಾಗೃಹದ ಮುಖ್ಯಾಧಿಕಾರಿ ಜೆಬುಲೋನ್ ಬ್ರೂಕ್ವೇ ಈ ಬಗ್ಗೆ ಹಲವು ಸಲಹೆಗಳನ್ನು ನೀಡಿದ. ಅವುಗಳಲ್ಲಿ ಕೆಲಸದ ಬಗೆಗಿನ ತರಬೇತಿ, ಕೈದಿಗಳಿಗೆ ಕೊಡಬೇಕಾದ ಶಿಕ್ಷಣ, ವೃತ್ತಿಶಿಕ್ಷಣ, ಶಿಸ್ತು, ಸೈನಿಕ ಶಿಕ್ಷಣ, ಮತ್ತು ಕೈದಿಗಳ ಮತ್ತು ಕಾರಾಗೃಹ ಸಿಬ್ಬಂದಿಯ ನಡುವಣ ಸಹಕಾರ, ಇವು ಮುಖ್ಯವಾದವು. ಅವರ ಅತಿಮುಖ್ಯವಾದ ಸಲಹೆ ಎಂದರೆ ಕೈದಿಯ ಉತ್ತಮ ನಡೆವಳಿಕೆಗಾಗಿ ಕಾರಾಗೃಹ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡುವುದು. ಶಿಕ್ಷೆಯ ಅವಧಿಯನ್ನು ಕಡಿತಗೊಳಿಸುವ ಪದ್ಧತಿ ಈಗ ಸಾಮಾನ್ಯವಾಗಿ ಎಲ್ಲ ದೇಶಗಳಲ್ಲೂ ಇದೆ.
ಅಮೆರಿಕದ ಎಲ್ಲ ರಾಜ್ಯಗಳಲ್ಲಿಯೂ ವಿಶಾಲ ಹಾಗೂ ಉತ್ತಮ ಕಾರಾಗೃಹಗಳಿವೆ. ಅವುಗಳಲ್ಲಿ ಆಟಿಕ, ಆಬರ್ನ್, ಎಲ್ಮೈರ, ಕ್ಲಿಂಟನ್, ಗ್ರೇಟ್ ಮೆಡೋ, ಡೆನ್ವರ್, ಮಿಷಿಗನ್, ಲಾಸ್ ಏಂಜೆಲೆಸ್, ಸಿಂಗ್ ಸಿಂಗ್ ಇವನ್ನು ಹೆಸರಿಸಬಹುದು. ಡೆನ್ವರ್ ಕೌಂಟಿ ಜೈಲು ಮತ್ತು ಡಾಫಿನ್ ಕೌಂಟಿ ಜೈಲುಗಳನ್ನು ಆಧುನಿಕ ರೀತಿಯಲ್ಲಿ ಕಟ್ಟಿಸಲಾಗಿದೆ. ಇಲ್ಲಿಯ ಕಾರಾಗೃಹಗಳು ಭದ್ರತೆಯ ದೃಷ್ಟಿಯಿಂದಲೂ ಉತ್ತಮವಿವೆ. ಕಿಟಕಿಗಳು, ಬಾಗಿಲುಗಳು, ಏಕಾಂತ ಕೋಣೆಗಳ ಯೋಜನೆ, ಗೋಡೆಗಳು, ಪ್ರವೇಶಗಳು, ಒಳಗಡೆ ಉಪಯೋಗಿಸುವ ಗ್ರಿಲ್ಲು, ಉಪಯೋಗಿಸಲಾಗುವ ಕಬ್ಬಿಣ ಸಲಾಕಿಗಳು, ಪಹರೆಯ ಆವಾರ, ಹೆಬ್ಬಾಗಿಲು, ಬೀಗ ಮತ್ತು ಬೀಗ ಹಾಕುವ ತಂತ್ರಗಳು, ಕಾರಾಗೃಹದ ಮೇಲ್ವಿಚಾರಣೆ, ಎಚ್ಚರಿಕೆ ಕೊಡುವ ವಿಧಾನ-ಇವೆಲ್ಲದರಲ್ಲಿಯೂ ಭದ್ರತೆಯ ದೃಷ್ಟಿಯೇ ಮುಖ್ಯವಾಗಿರುತ್ತದೆ.
ಕಾರಾಗೃಹಗಳಲ್ಲಿ ಅಡುಗೆಮನೆ, ಊಟ ಮತ್ತು ಕೆಲಸಕಾರ್ಯಗಳಿಗೆ ಅನುಕೂಲ ಮಾಡಿರುವುದು ಸಹಜ. ಅನೇಕ ಕಾರಾಗೃಹಗಳಿಗೆ ಹೊಂದಿಕೊಂಡು ಕೃಷಿಕ್ಷೇತ್ರಗಳಿವೆ. ಚಿಕಿತ್ಸೆಯ ಸೌಲಭ್ಯ, ಶಿಕ್ಷಣ ಮತ್ತು ತರಬೇತಿಗಳ ವ್ಯವಸ್ಥೆ, ಬಯಲುಗಳು, ಗ್ರಂಥಾಲಯಗಳು, ಮನೋರಂಜನೆಯ ಕಾರ್ಯಕ್ರಮಗಳು-ಇವು ಎಲ್ಲ ಕಾರಾಗೃಹಗಳಲ್ಲಿಯೂ ಇವೆ. ಅಷ್ಟೇ ಅಲ್ಲ, ಕೆಲವು ಕಾರಾಗೃಹಗಳಲ್ಲಿ ಆಗಾಗ್ಗೆ ಪತ್ರಿಕಾಕರ್ತರನ್ನು ಆಮಂತ್ರಿಸಿ, ಕೈದಿಗಳ ಜೊತೆಗೆ ಸಾರ್ವಜನಿಕರ ಸಂಪರ್ಕವನ್ನೂ ಕಲ್ಪಿಸಿಕೊಡಲಾಗುತ್ತಿದೆ.
ಭಾರತದಲ್ಲಿ : ಅಮೆರಿಕ ಮತ್ತು ಇಂಗ್ಲೆಂಡ್ಗಳ ಕಾರಾಗೃಹಗಳಿಗೆ ಹಿಡಿಯುವ ವೆಚ್ಚವನ್ನು ನೋಡಿದರೆ, ಭಾರತದ ಕಾರಾಗೃಹಗಳ ವೆಚ್ಚ ತೀರ ಕಡಿಮೆ. ಇಲ್ಲಿಯ ಕಟ್ಟಡಗಳು ಸಮರ್ಪಕವಲ್ಲ. ಭದ್ರತೆಯ ದೃಷ್ಟಿಯಿಂದಲೂ ಇಲ್ಲಿಯ ಕಾರಾಗೃಹಗಳ ಮಟ್ಟ ಬಹಳ ಕಡಿಮೆ. ಆದರೆ ಕೈದಿಗಳು ಪಾರಾಗಿ ಓಡಿಹೋಗುವ ಘಟನೆಗಳು ಕಡಿಮೆ. ಇದಕ್ಕೆ ಕೈದಿಗಳ ಸ್ವಭಾವವೇ ಕಾರಣ. ಕೈದಿಗಳ ಸ್ಥಿತಿಗತಿಯ ದೃಷ್ಟಿಯಿಂದ ಹೇಳುವುದಾದರೆ, ಅವರಿಗೆ ದೊರಕುತ್ತಿರುವ ಅನುಕೂಲತೆಗಳು ಅತ್ಯಲ್ಪ. ಇದಕ್ಕೆ ದೇಶದ ಆರ್ಥಿಕ ಪರಿಸ್ಥಿತಿಯ ಜೊತೆಗೆ, ಅವುಗಳಲ್ಲಿಯ ಆಡಳಿತ ವ್ಯವಸ್ಥೆಯೂ ಸುಧಾರಣಾ ಪದ್ಧತಿಯ ಮತ್ತು ಪ್ರಯೋಗಗಳ ಅಭಾವವೂ ಕಾರಣವಾಗಿವೆ.
1858ರಲ್ಲಿ ಭಾರತ ಬ್ರಿಟಿಷ್ ಸರ್ಕಾರದ ನೇರ ಆಡಳಿತಕ್ಕೊಳಪಟ್ಟ ಮೇಲೆ ಅನೇಕ ಕೇಂದ್ರ ಕಾರಾಗೃಹಗಳ ಕಟ್ಟಡಗಳು ಅಸ್ತಿತ್ವದಲ್ಲಿ ಬಂದುವು. ವ್ಯವಹಾರಪ್ರಕ್ರಿಯಾ ಸಂಹಿತೆ, ದಂಡಸಂಹಿತೆ ಮತ್ತು ದಂಡಪ್ರಕ್ರಿಯಾ ಸಂಹಿತೆಗಳು ಕಾರಾಗೃಹಗಳ ವ್ಯಾಪ್ತಿಯನ್ನು ಹೆಚ್ಚಿಸಿದವು. ಆಗಿನ ಸರ್ಕಾರ ಎಲ್ಲ ಪ್ರಾಂತ್ಯಗಳಲ್ಲಿಯ ಕಾರಾಗೃಹಗಳಲ್ಲೂ ಸಿವಿಲ್ ಸರ್ಜನರನ್ನು ಸೂಪರಿಂಟೆಂಡೆಂಟರನ್ನಾಗಿ ನೇಮಿಸುವಂತೆ 1864ರಲ್ಲಿ ಆಜ್ಞೆ ಮಾಡಿತು ಮತ್ತು ಅದೇ ವರ್ಷ ಭಾರತದ ಜೈಲುಗಳ ಬಗೆಗಿನ ಎರಡನೆಯ ಸಮಿತಿಯನ್ನು ನೇಮಿಸಿತು. ಈ ಸಮಿತಿಯವರು ಪ್ರತಿಯೊಬ್ಬ ಅಪರಾಧಿಗೂ ಬೇಕಾಗುವ ಕನಿಷ್ಠ ಸ್ಥಳಾವಕಾಶವನ್ನು ನಿಗದಿಗೊಳಿಸಿದರು; ಏಕಾಂತ ಕೋಣೆಗಳ ನಿರ್ಮಾಣ, ಇತರ ಅಪರಾಧಿಗಳಿಂದ ಬಾಲದೋಷಿಗಳ ಪ್ರತ್ಯೇಕತೆ ಮತ್ತು ಅವರಿಗೆ ಸೂಕ್ತ ಶಿಕ್ಷಣ ನೀಡಿಕೆ-ಈ ಬಗ್ಗೆ ಶಿಫಾರಸು ಮಾಡಿದರು. 1870ರಲ್ಲಿ ಭಾರತದ ಕಾರಾಗೃಹಗಳ ಕಾಯಿದೆ ಜಾರಿಗೆ ಬಂತು. ಇದರಲ್ಲಿ ಕಾರಾಗೃಹ ಸಿಬ್ಬಂದಿ ಮತ್ತು ಅದರ ಆಡಳಿತದ ಸಿಬ್ಬಂದಿಯ ನಿಗದಿ ಮಾಡಲಾಗಿದೆ. ಬಾಲದೋಷಿ, ಸ್ತ್ರೀ ಮತ್ತು ಪುರುಷ ಅಪರಾಧಿಗಳನ್ನು-ಅದರಲ್ಲೂ ವ್ಯಾವಹಾರಿಕ ತಪ್ಪುಗಳಿಗೆ ಹೊಣೆಯಾಗಿರುವ ಕೈದಿಗಳು ಮತ್ತು ಗುನ್ಹೆದಾರ ಕೈದಿಗಳನ್ನು-ಬೇರೆಬೇರೆ ಇಡುವಂತೆ ಹೇಳಲಾಗಿದೆ. ಕೈದಿಗಳು ಕಾರಾಗೃಹದಲ್ಲಿ ಮಾಡುವ ಅಪರಾಧಗಳು ಮತ್ತು ಆ ಬಗ್ಗೆ ವಿಧಿಸಲಾಗುವ ಶಿಕ್ಷೆಗಳನ್ನು ಇದರಲ್ಲಿ ಹೇಳಲಾಗಿದೆ. ಭಾರತದ ಕಾರಾಗೃಹಗಳ ಸಮಿತಿಯೊಂದನ್ನು 1877ರಲ್ಲಿ ನೇಮಿಸಲಾಗಿತ್ತಾದರೂ ಅದರ ಶಿಫಾರಸುಗಳನ್ನು ಕಾರ್ಯಗತಗೊಳಿಸಲಿಲ್ಲ.
ಅಖಿಲಭಾರತ ಪ್ರಾತಿನಿಧ್ಯವುಳ್ಳ ನಾಲ್ಕನೆಯ ಜೈಲು ಸಮಿತಿಯನ್ನು 1889ರಲ್ಲಿ ನೇಮಿಸಲಾಯಿತು. ಇದರ ಸಲಹೆಗಳು ಹೆಚ್ಚಾಗಿ ಕಾರಾಗೃಹಗಳ ಆಡಳಿತವನ್ನು ಕುರಿತು ಇದ್ದುವು. ಅವನ್ನು ಪ್ರಾಂತೀಯ ಜೈಲು ಕೈಪಿಡಿಗಳಲ್ಲಿ ಅಳವಡಿಸಲಾಯಿತು. 1892ರಲ್ಲಿ ಮತ್ತೊಂದು ಸಮಿತಿ ಅಸ್ತಿತ್ವ ಕ್ಕೆ ಬಂತು. ಅದರ ವರದಿಯೇ 1894ರ ಕಾರಾಗೃಹಗಳ ಕಾಯಿದೆಗೆ ಆಧಾರವಾಯಿತು. ಭಾರತದ ಇಂದಿನ ಕಾರಾಗೃಹಗಳ ಪದ್ಧತಿಗೆ 1870ರ ಮತ್ತು 1894ರ ಕಾರಾಗೃಹಗಳ ಕಾಯಿದೆಗಳೇ ಅಡಿಪಾಯ. ಈ ಕಾಯಿದೆಯಲ್ಲಿ ಗುನ್ಹೆದಾರ ಕೈದಿಗಳಿಗೆ ಏಕಾಂತ ಮತ್ತು ಸಾಮೂಹಿಕ ವಾಸದ ಪದ್ಧತಿಗಳನ್ನು ಮತ್ತು 9 ಗಂಟೆಗಳ ಕೆಲಸದ ಅವಧಿಯನ್ನು ನಿಗದಿಗೊಳಿಸಲಾಯಿತು. ಕಾರಾಗೃಹಗಳ ಸುಧಾರಣೆಯ ಗಾಳಿ 1897ರಲ್ಲಿ ಭಾರತದ ಕಡೆಗೆ ಬೀಸತೊಡಗಿತು. ಆ ವರ್ಷದಲ್ಲಿ ಬಾಲದೋಷಿ ಸುಧಾರಣಾಶಾಲೆಗಳ ಕಾಯಿದೆ ಜಾರಿಗೆ ಬಂತು. ಪಶ್ಚಿಮ ಭಾರತದ ಮಕ್ಕಳ ರಕ್ಷಣೆಗಾಗಿ 1916ರಲ್ಲಿ ಮುಂಬಯಿಯಲ್ಲಿ ಒಂದು ಸಂಸ್ಥೆಯನ್ನು ಸ್ಥಾಪಿಸಲಾಯಿತು.
ಕಾರಾಗೃಹಗಳ ಹೀನ ಸ್ಥಿತಿಯ ಬಗ್ಗೆ ದೂರುಗಳು ಬಂದು, ಈ ಸಂಬಂಧದಲ್ಲಿ ಒಂದು ಕಮಿಟಿಯನ್ನು ನೇಮಿಸಲಾಯಿತು. 1919ರಲ್ಲಿ ಬಂದ ಅದರ ವರದಿಯಲ್ಲಿ ಕಾರಾಗೃಹಗಳ ಬಗ್ಗೆ ಇಂಗ್ಲೆಂಡಿನ ಜನಾಭಿಪ್ರಾಯದ ಪಡಿನೆಳಲನ್ನು ಕಾಣಬಹುದು. ಈ ಸಮಿತಿ ಅಮೆರಿಕ, ಇಂಗ್ಲೆಂಡ್, ಸ್ಕಾಟ್ಲೆಂಡ್, ಜಪಾನ್, ಫಿಲಿಪೀನ್ಸ್ ಮತ್ತು ಹಾಂಗ್ ಕಾಂಗ್ಗಳಲ್ಲಿಯ ಕಾರಾಗೃಹ ಪದ್ಧತಿಗಳನ್ನು ಅಧ್ಯಯನ ಮಾಡಿ ಮಹತ್ತರವೂ ವಿಶಿಷ್ಟವೂ ಆದ ವರದಿಯನ್ನು ಸಲ್ಲಿಸಿದೆ. ಇದರಲ್ಲಿ ಭಾರತದಲ್ಲಿಯ ಕಾರಾಗೃಹಗಳ ವ್ಯವಸ್ಥೆ ತೀರ ಹಿಂದುಳಿದಿರುವುದನ್ನು ಒತ್ತಿ ಹೇಳಿರುವುದರ ಜೊತೆಗೆ ಅನೇಕ ಶಿಫಾರಸುಗಳನ್ನೂ ಮಾಡಲಾಗಿದೆ. ಕೈದಿಯ ವ್ಯಕ್ತಿತ್ವದ ಮಾರ್ಪಾಡಿಗೆ ಬೇಕಾಗುವಂಥ ಗಾಳಿ, ಬೆಳಕು, ಆಟ, ಊಟ, ಶಿಕ್ಷಣ, ಜನಸಂಪರ್ಕ, ಕೈದಿಗಳನ್ನು ನೋಡಿಕೊಳ್ಳುವ ಕಾರಾಗೃಹದ ಸಿಬ್ಬಂದಿವರ್ಗದ ವರ್ಗೀಕರಣ, ಅವರ ಸೇವಾನಿಯಮಗಳು, ಅವರಿಗೆ ಕೊಡಬೇಕಾದ ತರಬೇತಿ ಇವುಗಳ ಬಗ್ಗೆ ಸಲಹೆಗಳಿವೆ. ರೂಢಾಪರಾಧಿ ಯಾರು ಎಂಬುದನ್ನು ವಿವರಿಸಲಾಗಿದೆ. ಇದು ಕೈದಿಗಳ ವರ್ಗೀಕರಣದಲ್ಲಿ ಮತ್ತೊಂದು ಹೆಜ್ಜೆ. ಕೈದಿಗಳಿಗೆ ತಾಂತ್ರಿಕ ತರಬೇತಿಯನ್ನು ಕೊಡುವ ಹಾಗೂ ಉತ್ಪಾದನೆ ಹೆಚ್ಚಿಸುವ ಆವಶ್ಯಕತೆಯನ್ನು ಹೇಳಲಾಗಿದೆ. ಮತದ್ವೇಷವನ್ನು ನಿರ್ಮೂಲಮಾಡುವಂಥ ಮತ್ತು ನೈತಿಕ ಪ್ರಗತಿಗೆ ಕಾರಣವಾಗುವಂಥ ಪುಸ್ತಕಗಳನ್ನು ಕೈದಿಗಳಿಗೆ ಕೊಟ್ಟು ಅವರಲ್ಲಿ ಮಾನವೀಯ ದೃಷ್ಟಿಯನ್ನೂ ಸಮಾಜದಲ್ಲಿ ಆಸಕ್ತಿಯನ್ನೂ ಹುಟ್ಟಿಸುವುದರ ಅಗತ್ಯವನ್ನೂ ಹೇಳಲಾಗಿದೆ.
ಈ ವರದಿಯ ಪ್ರಕಟಣೆ ಭಾರತದ ಕಾರಾಗೃಹಗಳ ಸುಧಾರಣೆಯ ಬಾಗಿಲನ್ನು ತೆರೆಯಿತು. ಜೈಲು ಇಲಾಖೆಯಷ್ಟೇ ಅಲ್ಲ, ಭಾರತದ ದಂಡ ನ್ಯಾಯಸೂತ್ರಗಳ ಸುಧಾರಣೆಗೂ ಈ ವರದಿ ಕಾರಣವಾಯಿತು. ಇದರ ಪ್ರಭಾವದಿಂದ ಬಾಸ್ರ್ಟಲ್ ಕಾಯಿದೆ, ಮಕ್ಕಳ ಹಗೂ ಪ್ರೊಬೇಷನ್ ಕಾಯಿದೆಗಳು, ಪಂಜಾಬ್ ಸಚ್ಚರಿತ ಕೈದಿಗಳ ತಾತ್ಪೂರ್ತಿಕ ಬಿಡುಗಡೆಯ ಕಾಯಿದೆ ಮುಂತಾದವು ಜಾರಿಗೆ ಬಂದುವು. ಈ ಸುಧಾರಣೆಗಳ ಪ್ರವಾಹವನ್ನು 1919ರ ಭಾರತದ ಆಡಳಿತ ಸ್ವರೂಪಕ್ಕೆ ಸಂಬಂಧಿಸಿದ ಕಾಯಿದೆ ಮಂದಗೊಳಿಸಿತು. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದ್ದ ಕಾರಾಗೃಹಗಳ ಇಲಾಖೆ ಪ್ರಾಂತೀಯ ಸರ್ಕಾರಗಳ ಆಡಳಿತಕ್ಕೆ ಒಳಪಟ್ಟಿತು. ಅಲ್ಲಿಂದೀಚೆಗೆ ಒಂದೊಂದು ಪ್ರಾಂತ್ಯದಲ್ಲೂ ಆಗಿರುವ ಸುಧಾರಣೆಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿದ್ದರೂ ಅವುಗಳ ಮೂಲ ಸ್ವರೂಪದಲ್ಲಿ ಭಿನ್ನತೆಯಿರುವುದಿಲ್ಲ.
1921-22ರಲ್ಲಿ ಭಾರತಾದ್ಯಂತ ಅಸಹಕಾರ ಚಳವಳಿ ಹಬ್ಬಿತ್ತು. ಅನೇಕ ರಾಜಕಾರಣಿಗಳು ಕೈದಿಗಳಾದರು. ಇದರಿಂದಾಗಿ ಕಾರಾಗೃಹಗಳ ಬಗ್ಗೆ ಸಾರ್ವಜನಿಕರಿಂದ ಖಂಡನೆಗಳು ಬಂದುವು; ಅವು ಕಾರಾಗೃಹದ ಸುಧಾರಣೆಗೆ ಸಹಾಯಕವಾದುವು. 1935ರ ಭಾರತ ಸರ್ಕಾರದ ಕಾಯಿದೆಯ ಮೇರೆಗೆ ಚುನಾವಣೆಗಳು ನಡೆದು, ಪ್ರಾಂತ್ಯಗಳಲ್ಲಿ ಜವಾಬ್ದಾರಿ ಸರ್ಕಾರಗಳು ಅಸ್ತಿತ್ವಕ್ಕೆ ಬಂದುದು ಕಾರಾಗೃಹಗಳ ಸುಧಾರಣೆಗೆ ಅನುಕೂಲವಾಯಿತು. ಸುಮಾರು ಎರಡೂಕಾಲು ವರ್ಷಗಳ ಅವಧಿಯಲ್ಲಿ ಅನೇಕ ಪ್ರಾಂತ್ಯಗಳಲ್ಲಿ ಪ್ರೊಬೇಷನ್ ಮತ್ತು ಬಾಸ್ರ್ಟಲ್ ಪದ್ಧತಿಗಳ ಜಾರಿ, ಕೈದಿಗಳ ವರ್ಗೀಕರಣ ಮುಂತಾದ ಹಲವು ಸುಧಾರಣೆಗಳು ಆದುವು. 1939ರಲ್ಲಿ ಮಹಾಯುದ್ಧ ಪ್ರಾರಂಭವಾದ ಮೇಲೆ ಪ್ರಾಂತ್ಯಗಳಲ್ಲಿದ್ದ ಸರ್ಕಾರಗಳು ಅಧಿಕಾರವನ್ನು ಬಿಟ್ಟುಕೊಟ್ಟುವು. ಭಾರತೀಯ ದಂಡ ಸುಧಾರಣಾ ಸಂಸ್ಥೆ 1940ರಲ್ಲಿ ಮುಂಬಯಿಯಲ್ಲಿ ಸಭೆ ಸೇರಿತು. ಈ ಸಂಸ್ಥೆಯ ಕಾರ್ಯವ್ಯಾಪ್ತಿಯಲ್ಲಿ ಕಾರಾಗೃಹ ಸುಧಾರಣೆಯೂ ಸೇರಿತ್ತು. 1942ರ ಸತ್ಯಾಗ್ರಹ ಕಾಳ್ಗಿಚ್ಚಿನಂತೆ ಹಬ್ಬಿದುದು ಕಾರಾಗೃಹಗಳಿಗೆ ಒಂದು ಮಹಾ ಸಮಸ್ಯೆ ಆಯಿತು. ರಾಜಕೀಯ ಕೈದಿಗಳ ಸಂಖ್ಯೆ ಮಿತಿಮೀರಿ, ಇತರ ಕೈದಿಗಳ ಸ್ಥಿತಿ ಕೆಟ್ಟಿತು. ಆದರೂ ಭಾರತ ಸ್ವತಂತ್ರವಾದ ಮೇಲೆ ಕಾರಾಗೃಹಗಳ ಸುಧಾರಣೆಗೆ ಗಮನ ಕೊಡಲು ಈ ಹಿನ್ನೆಲೆ ಸಹಾಯಕವಾಯಿತು.
ಇಂಗ್ಲಿಷರ ಆಡಳಿತದಲ್ಲಿದ್ದ ಪ್ರಾಂತ್ಯಗಳಲ್ಲಿ ಕಾರಾಗೃಹಗಳು ಬಂದ ಜಾಡಿನಲ್ಲಿಯೇ ದೇಶೀಯ ಸಂಸ್ಥಾನಗಳಲ್ಲಿಯ ಜೈಲುಗಳೂ ನಡೆದು ಬಂದುವು. ಉತ್ತರ ಪ್ರದೇಶ, ಮುಂಬಯಿ ಮತ್ತು ಮದ್ರಾಸ್ ಪ್ರಾಂತ್ಯಗಳಲ್ಲಿ ಆದಷ್ಟು ಪ್ರಗತಿ ಈ ಸಂಸ್ಥಾನಗಳಲ್ಲಿ ಆಗಿರಲಿಲ್ಲ. 1943ರಿಂದ ಮೈಸೂರು ಸಂಸ್ಥಾನದಲ್ಲಿ ಸುಧಾರಣೆಗಳು ಆಗುತ್ತಾ ಬಂದವು. ಹೈದರಾಬಾದ್, ಮೈಸೂರು, ಕಾಶ್ಮೀರ ಮುಂತಾದ ಸಂಸ್ಥಾನಗಳಲ್ಲಿ ಆಗಿದ್ದ ಪ್ರಗತಿಗೆ ಆಯಾ ಪ್ರದೇಶಗಳಲ್ಲಿ ಜಾರಿಯಲ್ಲಿದ್ದ ಕಾರಾಗೃಹಗಳ ಬಗೆಗಿನ ಕಾಯಿದೆಗಳು, ಮಕ್ಕಳ ರಕ್ಷಣೆಯ ಕಾಯಿದೆಗಳು, ಪ್ರೊಬೇಷನ್ ಮತ್ತು ಬಾಸ್ರ್ಟಲ್ ಕಾಯಿದೆಗಳು ಸಾಕ್ಷಿಗಳಾಗಿವೆ.
ಸ್ವತಂತ್ರ ಭಾರತದ ಸಂವಿಧಾನದ ಪ್ರಕಾರ ಕಾರಾಗೃಹಗಳು ಮತ್ತು ಅವುಗಳ ಆಡಳಿತ-ಇದು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಇವು ರಾಜ್ಯಗಳ ನಿಯಂತ್ರಣಕ್ಕೊಳಪಟ್ಟಿವೆ. ಆದರೂ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಆಸಕ್ತಿ ವಹಿಸುತ್ತ ಬರುತ್ತಿದೆ. ಕೆಂದ್ರ ಸರ್ಕಾರ ಆರಿಸಿದ ಕೆಲವು ಕಾರಾಗೃಹಗಳ ಅಧಿಕಾರಿಗಳಿಗೆ ತರಬೇತಿ ಕೊಡಲು ಮತ್ತು ಕೈದಿಗಳ ಸುಧಾರಣೆಗೆ ಪುರೋಗಾಮಿ ಕ್ರಮಗಳನ್ನು ಸೂಚಿಸಲು ವಿದೇಶಿ ತಜ್ಞರನ್ನು ಕರೆಸಿಕೊಂಡಿತ್ತು. 1952ರಲ್ಲಿ ಅಖಿಲ ಭಾರತ ಪ್ರಾತಿನಿಧ್ಯವುಳ್ಳ ಎಲ್ಲ ರಾಜ್ಯಗಳ ಕಾರಾಗೃಹಗಳ ಇನ್ಸ್ಪೆಕ್ಟರ್-ಜನರಲರ ಸಭೆಯನ್ನು ಮುಂಬಯಿಯಲ್ಲಿ ಏರ್ಪಡಿಸಲಾಗಿತ್ತು. ಈ ಕ್ರಮಗಳ ಪರಿಣಾಮವಾಗಿ 1957ರಲ್ಲಿ ಅಖಿಲಭಾರತ ಕಾರಾಗೃಹಗಳ ಕೈಪಿಡಿ ಸಮಿತಿಯ ನೇಮಕವಾಯಿತು. ಆ ಸಮಿತಿ 1959ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಈ ವರದಿಯ ಅನೇಕ ಸುಧಾರಣೆಗಳನ್ನು ರಾಜ್ಯಸರ್ಕಾರಗಳು ಕಾರ್ಯಗತಗೊಳಿಸಬೇಕಾಗಿದೆ. ಈ ವರದಿಯ ಮೇರೆಗೆ ಕೇಂದ್ರಸರ್ಕಾರ 1961ರಲ್ಲಿ ಸುಧಾರಣಾ ಶೋಧನ ಸೇವೆಗಳ ಕೇಂದ್ರ ಕಾರ್ಯಾಲಯವನ್ನು ದೆಹಲಿಯಲ್ಲಿ ಸ್ಥಾಪಿಸಿದೆ. ಕೇಂದ್ರ ಸರ್ಕಾರದ 1958ರ ಪ್ರೊಬೇಷನ್ ಕಾಯಿದೆ ಮತ್ತು 1960ರ ಮಕ್ಕಳ ಕಾಯಿದೆಗಳು ಕಾರಾಗೃಹಗಳ ಪ್ರಗತಿಯಲ್ಲಿ ಮಹತ್ತ್ವದ ಹೆಜ್ಜೆಗಳಾಗಿವೆ.
ಭಾರತದ ಇತರ ರಾಜ್ಯಗಳಂತೆ ಮೈಸೂರು ರಾಜ್ಯದಲ್ಲಿಯೂ ಕಾರಾಗೃಹಗಳನ್ನು ಕೇಂದ್ರ ಕಾರಾಗೃಹಗಳು, ಜಿಲ್ಲಾ ಕಾರಾಗೃಹಗಳು, ಉಪಕಾರಾಗೃಹಗಳು ಮತ್ತು ಬಾಸ್ರ್ಟಲ್ ಶಾಲೆಗಳು, ಅನಾವೃತ ಕಾರಾಗೃಹಗಳು ಎಂದು ವರ್ಗೀಕರಣ ಮಾಡಲಾಗಿದೆ. ಬೆಳಗಾಂವಿ, ಬೆಂಗಳೂರು, ಗುಲ್ಬರ್ಗ ಮತ್ತು ಬಳ್ಳಾರಿ ಕೇಂದ್ರ ಕಾರಾಗೃಹಗಳು ಪ್ರಗತಿಯ ಮಾರ್ಗದಲ್ಲಿವೆ. ಧಾರವಾಡದ ಬಾಲದೋಷಿ ಶಾಲೆಯಲ್ಲಿ ಸಾಹಿತ್ಯ ವಿದ್ಯಾಭ್ಯಾಸ ಮತ್ತು ಔದ್ಯೋಗಿಕ ಶಿಕ್ಷಣಗಳಿಗೆ ಅವಕಾಶ ಮಾಡಲಾಗಿದೆ. ಬಾಲದೋಷಿಗಳನ್ನು ಮತ್ತು ಸ್ತ್ರೀ ಮತ್ತು ಪುರುಷ ಕೈದಿಗಳನ್ನು ಬೇರೆಬೇರೆ ಇಡುವ ಪದ್ಧತಿ ಇಲ್ಲಿಯ ಕಾರಾಗೃಹಗಳಲ್ಲಿಯೂ ಇದೆ. ಕೈದಿಗಳನ್ನು ಮೂರು ವಿಧವಾಗಿ ವಿಂಗಡಿಸುವ ಪದ್ಧತಿ ಇದೆ: ಅಪರಾಧ ಮಾಡುವುದನ್ನೇ ಸ್ವಭಾವವಾಗಿ ಉಳ್ಳಂಥ ಕೈದಿಗಳು (ದುಷ್ಟರು), ಒಳ್ಳೆಯವರು ಮತ್ತು ಒಳ್ಳೆಯವರಾಗಬಲ್ಲ ಕೈದಿಗಳು. ಹೀಗೆ ವರ್ಗೀಕರಣ ಮಾಡಿದ ಮೇಲೆ ಆಯಾ ವರ್ಗದವರನ್ನು ಇಡುವುದಕ್ಕೆ ನಿರ್ದಿಷ್ಟಗೊಳಿಸಿದ ಕಾರಾಗೃಹಗಳಿಗೆ ಅವರನ್ನು ಕಳಿಸಲಾಗುವುದು. ಈ ಎಲ್ಲ ರೀತಿಯ ಕೈದಿಗಳ ಬಗ್ಗೆ ಅವರ ವೈಯಕ್ತಿಕ ವಿವರಪಟ್ಟಿಯನ್ನು ತಯಾರಿಸಿಡಲಾಗುತ್ತದೆ. ಕೈದಿಗಳಿಗೆ ಕಾರಾಗೃಹದಲ್ಲಿ ಅವರ ನಡೆವಳಿಕೆಯನ್ನನುಸರಿಸಿ ಹಲವು ರಿಯಾಯಿತಿಗಳನ್ನು ಕೊಡಲಾಗುತ್ತದೆ.
ಭಾರತದ ಎಲ್ಲ ರಾಜ್ಯಗಳಲ್ಲಿಯ ಕಾರಾಗೃಹಗಳಲ್ಲಿ ಕೈದಿಗಳಿಗೆ ದೊರಕುವ ಸೌಕರ್ಯಗಳು ಹೆಚ್ಚು ಕಡಿಮೆ ಒಂದೇ ತೆರನಾಗಿವೆ. ಜೈಲುಗಳಲ್ಲಿ ಅಡುಗೆಮನೆಗಳಿರುತ್ತವೆ. ಇಲ್ಲಿ ದೊರೆಯುವ ಊಟ ಸಾಧಾರಣ ಮಟ್ಟದ್ದು. ಆರೋಗ್ಯವನ್ನು ಕಾಯ್ದುಕೊಳ್ಳುವುದಕ್ಕೆ ಆಟದ ಬಯಲುಗಳು ಉಂಟು. ಪ್ರಾಥಮಿಕ ಮಟ್ಟದ ಶಿಕ್ಷಣವನ್ನು ಸಾಧಾರಣವಾಗಿ ಕೈದಿಗಳಿಗೆ ಕೊಡಲಾಗುತ್ತದೆ. ಗ್ರಂಥಾಲಯಗಳೂ ಸಾಧಾರಣ ಚಿಕಿತ್ಸಾಲಯಗಳೂ ಅಲ್ಲದೆ ಮನೋರೋಗಗಳಂಥ ಕಾಯಿಲೆಗಳ ಚಿಕಿತ್ಸೆಗೂ ಸೌಲಭ್ಯಗಳಿವೆ. ಮನೋರಂಜನೆ, ಕ್ರೀಡಾಕೂಟ ಮತ್ತು ಚರ್ಚಾಕೂಟಗಳಿಗೂ ಏರ್ಪಾಟುಗಳುಂಟು. ಕೈದಿಗಳಿಗೆ ವೃತ್ತಿತರಬೇತಿ ಕೊಡಲಾಗುತ್ತದೆ. ಸಾಮಾನ್ಯವಾಗಿ ಜೈಲುಗಳಿಗೆ ಹೊಂದಿಕೊಂಡು ಕೈದೋಟಗಳು ಅಥವಾ ಕೃಷಿಕ್ಷೇತ್ರಗಳು ಇರುತ್ತವೆ.
ಕಾರಾಗೃಹಗಳ ಕ್ಲಿಷ್ಟ ಸಮಸ್ಯೆಗಳಲ್ಲಿ ಕೈದಿಗಳ ಲೈಂಗಿಕ ಸಮಸ್ಯೆಯೂ ಒಂದು. ಅನೈಸರ್ಗಿಕ ಪ್ರಮಾದಗಳು ನಡೆಯದಂತೆ ಕಾರಾಗೃಹ ಸಿಬ್ಬಂದಿಯವರು ಜಾಗರೂಕತೆ ವಹಿಸುತ್ತಾರೆ. ದೀರ್ಘಾವಧಿಯ ಸೆರೆವಾಸದ ಅನಂತರವೂ ದಾಂಪತ್ಯಜೀವನ ಖಿಲವಾಗದೆ ಇರುವುದು ವಿರಳ. ಅಮೆರಿಕ, ರಷ್ಯ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಪತಿ ಅಥವಾ ಪತ್ನಿಯರು ತಮ್ಮ ಜೀವನ ಸಂಗಾತಿಗಳನ್ನು ಕಾಣುವ ಮತ್ತು ಅವರ ದಾಂಪತ್ಯ ಜೀವನಕ್ಕೆ ನೆರವಾಗುವ ಅನುಕೂಲತೆಗಳುಂಟು. ದಕ್ಷಿಣ ಅಮೆರಿಕದ ದೇಶಗಳಲ್ಲೂ ಈ ಅನುಕೂಲತೆಗಳುಂಟು. ಸ್ವೀಡನಿನಲ್ಲಿ ಈ ಉದ್ದೇಶಕ್ಕಾಗಿ ಉತ್ತಮ ಸ್ವಭಾವದ ಕೈದಿಗಳು ಮನೆಗೆ ಹೋಗಲು ರಜ ಕೊಡಲಾಗುವುದು. ಭಾರತದಲ್ಲಿ, ದಾಂಪತ್ಯಜೀವನದಲ್ಲಿ ಅನುರಾಗ, ಸ್ವಜನರಲ್ಲಿ ಪ್ರೀತಿ ಹಗೂ ಸಾಮಾಜಿಕ ಜೀವನದಲ್ಲಿಯ ಆಸಕ್ತಿಗಳು ಕ್ಷೀಣವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ನಂಬಿಕೆಯ ವಾಗ್ದಾನದ ಮೇಲೆ ಬಿಡುಗಡೆ ಮಾಡುವ (ಪರೋಲ್) ಪದ್ಧತಿ ಮತ್ತು ಗೈರುಹಾಜರಿಯ ರಜೆಗಳನ್ನು ಕೊಡುವ ಪದ್ಧತಿಗಳನ್ನು ಜಾರಿಗೆ ತರಲಾಗಿದೆ. ಒಳ್ಳೆಯ ನಡತೆಗೆ ಶಿಕ್ಷೆಯನ್ನು ಮಾಫಿ ಮಾಡುವ ಪದ್ಧತಿಯೂ ಆಚರಣೆಯಲ್ಲಿದೆ.
ಭಾರತದಲ್ಲಿಯ ಕಾರಾಗೃಹಗಳಲ್ಲಿ ಸಾಮಾನ್ಯವಾಗಿ ನೂಲುವುದು, ನೇಯ್ಗೆ, ಹೊಲಿಗೆ, ಜಮಖಾನೆ ತಯಾರಿಕೆ, ಡೇರೆ ತಯಾರಿಕೆ, ಬಡಗಿ ಕೆಲಸ, ಬೆತ್ತದ ಕೆಲಸ, ಮುದ್ರಣ, ಸಾಬೂನು ತಯಾರಿಕೆ ಮುಂತಾದ ಕೈಗಾರಿಕೆಗಳಲ್ಲಿ ಕೈದಿಗಳನ್ನು ಕೆಲಸಕ್ಕೆ ತೊಡಗಿಸಲಾಗುತ್ತದೆ. ತೆರಿಗೆ ಸಲುವಳಿ ಮಾಡುವ ಶ್ರೀಸಾಮಾನ್ಯನಿಗೆ ಭಾರ ಕಡಿಮೆ ಮಾಡುವ ಮತ್ತು ಬಿಡುಗಡೆಯ ಅನಂತರ ಕೈದಿಯ ಪುನರ್ವಸತಿಗೆ ನೆರವಾಗುವ ಉದ್ದೇಶದಿಂದ ಕೈದಿಗಳನ್ನು ಈ ಕೈಗಾರಿಕೆಗಳಲ್ಲಿ ದುಡಿಯಲು ತೊಡಗಿಸಲಾಗಿದೆ. ಅವರಿಗೆ ಕೂಲಿ ಕೊಡಲಾಗುತ್ತದೆ. ತಯಾರಿಸಿದ ವಸ್ತುಗಳನ್ನು ಸರ್ಕಾರದ ಉಪಯೋಗಕ್ಕೂ ಸಾರ್ವಜನಿಕರಿಗೆ ಮಾರಾಟಕ್ಕೂ ಒದಗಿಸಲಾಗುತ್ತದೆ. ಜಪಾನ್, ಅಮೆರಿಕ, ಇಂಗ್ಲೆಂಡ್, ಭಾರತ, ಸ್ವಿಟ್ಜóರ್ಲೆಂಡ್ ಮುಂತಾದ ದೇಶಗಳಲ್ಲಿ ದುಡಿಮೆಯ ಕಾಲವನ್ನು ನಿಗದಿಗೊಳಿಸಲಾಗಿದೆ. ಅಮೆರಿಕದಲ್ಲಿ ಭಾನುವಾರದ ರಜೆಯೇ ಅಲ್ಲದೆ ಆರೋಗ್ಯ ಪರೀಕ್ಷಣೆಗೂ ರಜೆ ಕೊಡಲಾಗುತ್ತದೆ.
ಬಿಡುಗಡೆ ಹೊಂದಿದ ಕೈದಿಗಳಿಗೆ ಸಹಾಯ ನೀಡುವ ಯೋಜನೆಯನ್ನು ಅಮೆರಿಕದಲ್ಲಿ ನ್ಯೂಯಾರ್ಕಿನ ಕಾರಾಗೃಹ ಸಂಸ್ಥೆ 1846ರಲ್ಲಿ ಆರಂಭಿಸಿತು. ಬಿಡುಗಡೆ ಹೊಂದಿದ ಕೈದಿಗಳಿಗೆ ಇಟಲಿ, ಇಂಗ್ಲೆಂಡ್, ಮುಂತಾದ ಐರೋಪ್ಯ ದೇಶಗಳಲ್ಲಿ ಅನೇಕ ರೀತಿಯ ಸಹಾಯಗಳನ್ನು ಕೊಡಲಾಗುತ್ತದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಕೈದಿಗಳ ಬಿಡುಗಡೆಯ ಅನಂತರ ಅವರಿಗೆ ಸಹಾಯ ಮಾಡಲು ಸಂಸ್ಥೆಗಳು ಇವೆ. ಆದರೆ ದೊರಕುವ ಸಹಾಯ ಸಹಕಾರಗಳು ಅತ್ಯಲ್ಪ.
ವಿಶ್ವದ ಎಲ್ಲ ದೇಶಗಳಲ್ಲೂ ಕಾರಾಗೃಹ ಪದ್ಧತಿ ಉಂಟು. ಕೈದಿಗಳ ಪುನರ್ವಸತಿಯೇ ಕಾರಾಗೃಹಗಳ ಉದ್ದೇಶವಾಗಬೇಕು. ಈ ದಿಶೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಪರಿಶೀಲನೆ ನಡೆಯುತ್ತ ಬಂದಿದೆ. 1872ರಲ್ಲಿಯೇ ಲಂಡನಿನಲ್ಲಿ ಅಂತರರಾಷ್ಟ್ರೀಯ ಕಾರಾಗೃಹ ಕಾಂಗ್ರೆಸ್ಸಿನ ಸಭೆ ಸೇರಿತ್ತು. ಆದರೆ ಆಗ ಇಂಗ್ಲೆಂಡ್ ಅದರಲ್ಲಿ ಭಾಗವಹಿಸಿರಲಿಲ್ಲ. 1910ರಲ್ಲಿ ವಾಷಿಂಗ್ಟನ್ನಲ್ಲಿ ಜರುಗಿದ ಸಭೆಗೆ ಇಂಗ್ಲೆಂಡಿನ ಕಾರಾಗೃಹಗಳ ಕಮಿಷನರ್ ಆಗಿದ್ದ ಆರ್. ಇ. ಬ್ರೈಸ್ ಅಧ್ಯಕ್ಷನಾಗಿದ್ದ ಕಾರಣ, ಆ ದೇಶವೂ ಕಾಂಗ್ರೆಸ್ಸಿಗೆ ಸೇರಿಕೊಂಡಿತು. 1925ರಲ್ಲಿ ಮತ್ತೆ ಈ ಸಭೆ ಲಂಡನಿನಲ್ಲಿ ಸೇರಿತು. ಈಗ ಈ ಬಗೆಯ ಚಟುವಟಿಕೆಗಳನ್ನು ವಿಶ್ವಸಂಸ್ಥೆ ವಹಿಸಿಕೊಂಡಿದೆ.
ಅಲೆಕ್ಸಾಂಡರ್ ಪ್ಯಾಟರ್ಸನ್ನನ, ಕಾರಾಗೃಹ ಏಕೆ?-ಎಂಬ ಕರೆ ಈಗ ವಿಶ್ವದ ಅನೇಕ ದೇಶಗಳಲ್ಲಿ ಮಾರ್ದನಿ ಕೊಡುತ್ತಿದೆ. ಅತಿ ಹೆಚ್ಚಿನ ಭದ್ರತೆಯ ಕಾರಾಗೃಹ ಪದ್ಧತಿಯ ಪ್ರಭಾವ ಕಡಿಮೆಯಾಗಹತ್ತಿದೆ. ಅನಾವೃತ ಕಾರಾಗೃಹಗಳು ಈಗ ಅಮೆರಿಕ, ಇಂಗ್ಲೆಂಡ್, ಇಟಲಿ, ಗ್ರೀಸ್, ಭಾರತ, ರಷ್ಯ, ಸ್ವೀಡನ್, ಸ್ವಿಟ್ಜóರ್ಲೆಂಡ್ ಮುಂತಾದ ಅನೇಕ ದೇಶಗಳಲ್ಲಿ ಇವೆ. ಹೀಗೆ ವಿಶ್ವದ ಕಾರಾಗೃಹಗಳು ತಮ್ಮ ಕೈದಿಗಳ ಸುಧಾರಣೆಯ ಜಾಡಿನಲ್ಲಿ ನಡೆಯುತ್ತ ಮಾನವನ ಮತಿವಿಕಲತೆಯ ಫಲವಾದ ಅಪರಾಧಗಳ ನಿಯಂತ್ರಣಕ್ಕೆ ಸಹಾಯ ಮಾಡುತ್ತಿವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.