From Wikipedia, the free encyclopedia
ಜರಾಸಂಧ ಹಿಂದೂ ಗ್ರಂಥಗಳಲ್ಲಿ ಕಾಣಿಸಿಕೊಂಡಿರುವ ರಾಜ. ಹಿಂದೂ ಸಾಹಿತ್ಯದಲ್ಲಿ ಈತನು ಮಗಧ ರಾಜ್ಯದ ಪ್ರಬಲ ಅರಸನಾಗಿದ್ದನು. ಇವನು ಮಗಧ ರಾಜ್ಯದ ರಾಜವಂಶದ ಸ್ಥಾಪಕನಾದ ಬೃಹದ್ರಥ ರಾಜನ ಮಗ. ಜನಪ್ರಿಯ ದಂತಕಥೆಗಳ ಪ್ರಕಾರ, ಬೃಹದ್ರಥನ ವಂಶಸ್ಥರು ೨೬೦೦ ವರ್ಷಗಳ ಕಾಲ ಆಳಿದರು ಮತ್ತು ನಂತರ ಪ್ರದ್ಯೋತ ರಾಜವಂಶ ಮತ್ತು ಹರ್ಯಂಕ ರಾಜವಂಶ ಆಳಿತು. ಅವನನ್ನು ಮಹಾಭಾರತ ಮತ್ತು ವಾಯು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಯಾದವರೊಂದಿಗೆ ಶತ್ರುತ್ವ ಇದ್ದುದರಿಂದ ಕೃಷ್ಣನು ಭೀಮಸೇನನ ಮೂಲಕ ಇವನ ಸಂಹಾರ ಮಾಡುತ್ತಾನೆ.
ಹಿಂದೆ ಜರಾಸಂಧ ಒಂದು ದೊಡ್ಡ ನಗಾರಿಯನ್ನು ಮಾಡಿಸಿ ತನ್ನ ರಾಜಧಾನಿಯ ಹೆಬ್ಟಾಗಿಲಿನಲ್ಲಿ ತೂಗುಹಾಕಿದ್ದ. ಆ ನಗಾರಿಯನ್ನು ಬಡಿದರೆ ಅದರಿಂದ ಹೊರಡುವ ಶಬ್ಧ ಶತ್ರುಗಳ ಎದೆಯಲ್ಲಿ ಬಹುದೊಡ್ಡ ಕಂಪನವನ್ನುಂಟು ಮಾಡುತ್ತಿತ್ತು. ಆ ನಗಾರಿಯ ಶಬ್ಧಕ್ಕೇ ಶತ್ರುಗಳು ಹೃದಯ ಒಡೆದು ಸತ್ತುಹೋಗುತ್ತಿದ್ದರು. ಆ ನಗಾರಿಯನ್ನು ಯಾರು ಒಡೆದು ಹಾಕುತ್ತಾರೋ ಅವರಿಂದ ಜರಾಸಂಧನ ಮರಣ ಎಂಬ ಒಂದು ನಂಬಿಕೆಯಿತ್ತು. ಯುಧಿಷ್ಠಿರನು ಇಂದ್ರಪ್ರಸ್ಥದಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಅವನಿಗೆ ರಾಜಸೂಯ ಯಾಗ ಮಾಡಬೇಕೆನಿಸಿತು. ಅದನ್ನು ಮಾಡಬೇಕೆಂದರೆ ಭೂಮಂಡಲದ ರಾಜರೆಲ್ಲರೂ ಯುಧಿಷ್ಠಿರನಿಗೆ ಸಾಮಂತರಾಗಬೇಕು. ಸ್ನೇಹದಿಂದ ಕೆಲವರು, ಭಕ್ತಿ ಗೌರವಗಳಿಂದ ಕೆಲವರು, ಭಯದಿಂದ ಕೆಲವರು ಪಾಂಡವರ ಸಾಮಂತರಾದರು. ಕೆಲವು ಬಲಿಷ್ಠ ರಾಜರನ್ನು ಯುದ್ಧ ಮಾಡಿಯೇ ಮಣಿಸಬೇಕಾಯ್ತು. ಈ ಪೈಕಿ ಜರಾಸಂಧನೂ ಪಾಂಡವರ ಪಟ್ಟಿಯಲ್ಲಿದ್ದ. ಒಂದು ದಿನ ಶ್ರೀಕೃಷ್ಣ, ಭೀಮ, ಅರ್ಜುನರನ್ನು ಕರೆದು ಕೊಂಡು ಮಗಧಕ್ಕೆ ಬಂದ. ಅರ್ಧರಾತ್ರಿಯಲ್ಲಿ ನಗರ ಪ್ರವೇಶ ಮಾಡಿದ ಈ ಮೂವರೂ ಸೇರಿ ರಾಜಧಾನಿಯ ಹೆಬ್ಟಾಗಿಲಿನಲ್ಲಿದ್ದ ಆ ಬೃಹತ್ ಗಾತ್ರದ ನಗಾರಿಯನ್ನು ಒಡೆದುಹಾಕಿದರು. ಅಲ್ಲಿನ ಸೈನಿಕರು ಇದನ್ನು ನೋಡಿ ದಿಗಿಲುಗೊಂಡರು. ರಾಜ್ಯಕ್ಕೆ ಯಾವುದೋ ಆಪತ್ತು ಬಂತೆಂದು ಮನಗಂಡರು. ಜರಾಸಂಧನಿಗೆ ಈ ವಿಷಯ ಮುಟ್ಟಿಸಿದರು. ಜರಾಸಂಧ ಕೂಡಲೇ ಕೃಷ್ಣಾರ್ಜುನ, ಭೀಮರನ್ನು ತನ್ನ ಬಳಿಗೆ ಕರೆಸಿದ. ಮೂವರೂ ಮಾರುವೇಷದದಲ್ಲಿದ್ದರು. [೧][೨] ಮೂವರನ್ನು ಕುರಿತು ನೀವ್ಯಾರು, ಇಲ್ಲೀಗೇಕೆ ಬಂದಿರಿ, ನಿಮಗೇನು ಬೇಕು? ಎಂದು ಕೇಳಿದ. ಶ್ರೀಕೃಷ್ಣನು ನಾವು ಯಾರಾದರೇನು ನಿನ್ನೊಡನೆ ಯುದ್ಧ ಮಾಡಲು ಬಂದಿದ್ದೇವೆ, ಅನಗತ್ಯ ರಕ್ತಪಾತ ನಮಗಿಷ್ಟವಿಲ್ಲ ಆದ್ದರಿಂದ ನೀನು ನಮ್ಮಲ್ಲಿ ಯಾರಾದರೂ ಒಬ್ಬರನ್ನು ಆಯ್ದುಕೊಂಡು ಮಲ್ಲ ಯುದ್ಧ ಮಾಡಬಹುದು ಎಂದು ಹೇಳಿದ. ಇದಕ್ಕೆ ಒಪ್ಪಿದ ಜರಾಸಂಧ ಕೃಷ್ಣನನ್ನು ನೋಡಿ, "ನೀನು ಪೀಚು ನನಗೆ ಸಾಟಿಯಾಗುವುದಿಲ್ಲ". ಅರ್ಜುನನನ್ನು ಕುರಿತು- "ಇವನಿನ್ನೂ ಶಿಶುವಿನ ಹಾಗಿದ್ದಾನೆ ಇವನೂ ನನಗೆ ಸಾಟಿಯಾಗಲಾರ" ಎನ್ನುತ್ತ ಭೀಮನ ಬಳಿಬಂದು ಅವನ ದಷ್ಟಪುಷ್ಟವಾದ ಮಾಂಸಲ ಶರೀರವನ್ನು ನೋಡುತ್ತಾ ಇವನೇನೋ ಗೂಳಿಯ ಹಾಗಿದ್ದಾನೆ ನನಗೆ ಇವನೇ ಸರಿ ಇವನೊಂದಿಗೆ ಮಲ್ಲಯುದ್ಧ ಮಾಡುತ್ತೇನೆ ಎಂದ. ನಂತರ ಯುದ್ಧ ಪ್ರಾರಂಭವಾಯಿತು. ಅನೇಕ ದಿನಗಳವರೆಗೂ ಇಬ್ಬರೂ ದಣಿವಿಲ್ಲದೆ ಯುದ್ಧ ಮಾಡಿದರು. ಜರಾಸಂಧ ಸತ್ತುಬಿದ್ದ. ಅವನ ಶರೀರ ಬೃಹದಾಕಾರದ ಪರ್ವತದಂತೆ ಭೂಮಿಯಲ್ಲಿ ಬಿತ್ತು. ಜರಾಸಂಧ ಸೆರೆಯಲ್ಲಿಟ್ಟಿದ್ದ ರಾಜರನ್ನೆಲ್ಲಾ ಕೃಷ್ಣಾರ್ಜುನ, ಭೀಮರು ಬಿಡಿಸಿದರು. ಯುಧಿಷ್ಠಿರನ ಸಾರ್ವಭೌಮತ್ವವನ್ನು ಅವರೆಲ್ಲರೂ ಒಪ್ಪಿಕೊಂಡರು. ರಾಜಸೂಯಾಗಕ್ಕೆ ಬಂದು ಸಹಕರಿಸುವುದಾಗಿ ವಚನವಿತ್ತರು. ಲೋಕಕ್ಕೆ ಜರಾಸಂಧನ ಕಂಟಕ ನಿವಾರಣೆಯಾಯಿತು.
ಮಗಧ ರಾಜ್ಯವನ್ನು ಬೃಹದ್ರಥನೆಂಬ ರಾಜನು ಆಳುತ್ತಿದ್ದನು. ಜರಾಸಂಧನ ತಂದೆ, ರಾಜ ಬೃಹದ್ರಥನು ಕಾಶಿ (ವಾರಾಣಸಿ)ಯ ರಾಜನ ಅವಳಿ ಹೆಣ್ಣುಮಕ್ಕಳನ್ನು ವಿವಾಹವಾದನು. ಬೃಹದ್ರಥನು ತನ್ನ ಇಬ್ಬರು ಹೆಂಡತಿಯರನ್ನು ಸಮಾನವಾಗಿ ಪ್ರೀತಿಸುತ್ತಿದ್ದನು ಆದರೆ ಗಂಡು ಮಕ್ಕಳಿರಲಿಲ್ಲ. ಋಷಿ ಚಂದಕೌಶಿಕ ತನ್ನ ರಾಜ್ಯಕ್ಕೆ ಭೇಟಿ ನೀಡಿ ರಾಜನಿಗೆ ವರವಾಗಿ ಹಣ್ಣುಗಳನ್ನು ನೀಡಿದನು. ರಾಜನು ಹಣ್ಣನ್ನು ತನ್ನ ಇಬ್ಬರು ಹೆಂಡತಿಯರಿಗೆ ಸಮಾನವಾಗಿ ಹಂಚಿದನು. ಶೀಘ್ರದಲ್ಲೇ, ಇಬ್ಬರೂ ಹೆಂಡತಿಯರು ಗರ್ಭಿಣಿಯಾದರು ಮತ್ತು ಮಾನವ ದೇಹದ ಎರಡು ಭಾಗಗಳಿಗೆ ಜನ್ಮ ನೀಡಿದರು. ಗುಣಶಾಲಿ ಕ್ಷತ್ರಿಯನೆಂದು ಕೀರ್ತಿವಂತನಾದ ಅವನ ರಾಜಧಾನಿ ಗಿರಿವ್ರಜ. ಕಾಶಿರಾಜನ ಅವಳಿ ಪುತ್ರಿಯರನ್ನು ಮದುವೆಯಾಗಿದ್ದ ಅವನು ಮಕ್ಕಳಿಲ್ಲದ್ದರಿಂದ ಬೇಸರಿಸಿ ವಾನಪ್ರಸ್ಥನಾದನು. ಆ ಕಾಡಿನಲ್ಲಿ ಚಂದ್ರಕೌಶಿಕನೆಂಬ ಋಷಿಯಿದ್ದನು. ಬೃಹದ್ರಥನು ಅವನನ್ನು ಭಕ್ತಿಯಿಂದ ಸೇವಿಸುತ್ತಿರಲು, ಋಷಿಗೆ ಅವನ ಮೇಲೆ ಅನುಕಂಪವುಂಟಾಯಿತು. ಅಷ್ಟರಲ್ಲಿ ಮರದ ಮೇಲಿಂದ ಮಾವಿನ ಹಣ್ಣೊಂದು ಬೀಳಲು, ಅದನ್ನು ಅಭಿಮಂತ್ರಿಸಿ ಕೊಟ್ಟು, ಇದನ್ನು ತಿಂದ ನಿನ್ನ ಪತ್ನಿಯರು ಪುತ್ರನನ್ನು ಪಡೆಯುವರು. ನೀನು ಪುನಃ ಹಿಂದಿರುಗಿ ರಾಜ್ಯವನ್ನಾಳು ಹೋಗು" ಎಂದು ಹೇಳಿದನು. ರಾಜನು ಅದನ್ನು ಎರಡು ಭಾಗ ಮಾಡಿ ತನ್ನ ಇಬ್ಬರು ಪತ್ನಿಯರಿಗೂ ಕೊಡಲು, ಕಾಲಕ್ರಮದಲ್ಲಿ ಇಬ್ಬರೂ ಅರ್ಧರ್ಧ ಮಗುವನ್ನು ಹೆತ್ತರು. ಇದನ್ನು ನೋಡಿ ಅರಮನೆಯಲ್ಲಿ ಎಲ್ಲರೂ ಹೆದರಿದರು. [೩] ದಾಸಿಯು ಈ ಎರಡು ಅರ್ಧ ಮಕ್ಕಳನ್ನೂ ರಾಜಧಾನಿಯಿಂದಾಚೆ ಕಸದ ತೊಟ್ಟಿಯಲ್ಲಿ ಎಸೆಯುತ್ತಾಳೆ. ಆ ರಾತ್ರಿ ಆಹಾರವನ್ನು ಹುಡುಕುತ್ತಿದ್ದ ಜರಯೆಂಬ ರಾಕ್ಷಸಿಯು ಇವುಗಳನ್ನು ಆರಿಸಿ ಒಟ್ಟಿಗೆ ಇಟ್ಟುಕೊಳ್ಳಲು, ಪವಾಡವೆಂಬಂತೆ ಎರಡು ಭಾಗಗಳೂ ಒಟ್ಟುಗೂಡಿ ಜೀವಂತ ಶಿಶುವಾಯಿತು. ಅದನ್ನು ಕೊಲ್ಲಲು ಮನಸ್ಸು ಬಾರದೆ ಅವಳು ರಾಜನ ಬಳಿಗೆ ಹೋಗಿ ನಡೆದುದನ್ನು ತಿಳಿಸಿ ಮಗುವನ್ನು ಒಪ್ಪಿಸಿದಳು. ಸಂತೋಷದಿಂದ ರಾಜನು ಆ ಮಗುವಿಗೆ ಜರಾಸಂಧನೆಂದೇ ಹೆಸರಿಟ್ಟನು. ಚಂದ್ರಕೌಶಿಕ ಮುನಿಯು ಬಂದು, ವಿಶಿಷ್ಟ ಶಕ್ತಿಗಳೊಡನೆ ಹುಟ್ಟಿರುವ ಹಾಗೂ ಭವಿಷ್ಯದಲ್ಲಿ ಶಿವಭಕ್ತನೆನಿಸುವ ಈ ಮಗುವನ್ನು ಸಾಮಾನ್ಯರಾರೂ ಕೊಲ್ಲಲಾರರೆಂದು ತಿಳಿಸಿದನು. [೪]
ಜರಾಸಂಧನು ದೇಹಧಾರಿಯಾದ ಶಂಕರನನ್ನು ನೋಡಿರುವನು ಎಂದು ಹೇಳುವರು. ಅಂಥವನನ್ನು ಯಾರು ಸೋಲಿಸಬಲ್ಲರು? ಎಂದು ಕೃಷ್ಣ ಹೇಳಿದಾಗ ಯುಧಿಷ್ಠಿರನು ಮೌನ ತಾಳಿದನು. ಗಿರಿವ್ರಜದಿಂದ ದ್ವಾರಕೆಯ ಹತ್ತಿರಕ್ಕೆ ಗದೆಯನ್ನು ಎಸೆದನೆಂದು ಹೇಳಿದೆನಲ್ಲವೆ? ಈ ಗದೆಯೇ ಅವನ ಮುಖ್ಯ ಶಕ್ತಿಯಾಗಿತ್ತು. ಭೂಮಿಯೊಳಕ್ಕೆ ಹೊಕ್ಕ ಅದನ್ನು ಮೇಲೆತ್ತಲು ಅವನು ಪ್ರಯತ್ನಿಸಿದನಾದರೂ ಸಾಧ್ಯವಾಗಲಿಲ್ಲ. ಆ ಗದೆಯಿಲ್ಲದ ಅವನನ್ನು ಈಗ ಸೋಲಿಸಬಹುದು. ಅವನೊಂದಿಗೆ ಹೋರಾಡುವುದು ಯುಧಿಷ್ಠಿರನಿಗೆ ಬೇಕಿರಲಿಲ್ಲ. ಆದರೆ ಭೀಮಾರ್ಜುನರು ಬಿಡಲಿಲ್ಲ. ಕೃಷ್ಣನೆಂದನು: "ಅವನ ಸ್ಯೆನ್ಯವನ್ನು ಇಂದ್ರನೂ ಸಹ ಸೋಲಿಸಲಾರನು. ಅದರೆ ಭೀಮನು ಮಲ್ಲಯುದ್ಧದಲ್ಲಿ ಅವನನ್ನು ಮಣಿಸಬಹುದೆಂದು ನನಗನ್ನಿಸುತ್ತದೆ. ಯುಧಿಷ್ಠಿರ, ನಾವು ಮೂವರನ್ನು ಕಳುಹಿಸು. ನಿನ್ನ ಸೋದರರ ಜವಾಬ್ದಾರಿ ನನ್ನದು. ನಾವು ವಿಜಯಿಗಳಾಗಿ ಹಿಂದಿರುಗುತ್ತೇವೆ". ಕೊನೆಗೂ ಯುಧಿಷ್ಠಿರನನ್ನು ಒಪ್ಪಿಸಿ ಮೂವರೂ ಮಗಧ ರಾಜ್ಯಕ್ಕೆ ಹೊರಟರು. ಸರಯು, ಗಂಡಕಿ ನದಿಗಳನ್ನು ದಾಟಿದರು. ಮಿಥಿಲೆಯನ್ನೂ ಹಾಗೂ ಗಂಗಾನದಿಯನ್ನೂ ದಾಟಿದರು. ದೂರದಿಂದ ಗಿರಿವ್ರಜ ಪರ್ವತ ಕಾಣಿಸಿತು. ಅಲ್ಲಿಂದ ಮಗಧ ರಾಜಧಾನಿಗೆ ಬಂದರು. [೫] ಅಲ್ಲಿನ ಶಂಕರ ದೇವಾಲಯದಲ್ಲಿ ಅರ್ಚನೆ ಮಾಡಿದರು. ಸ್ನಾತಕರಂತೆ ಗಂಧ ಪೂಸಿಕೊಂಡು, ಹೂಮಾಲೆಗಳನ್ನು ಹಾಕಿಕೊಂಡರು. ಸ್ನಾತಕ ಎಂದರೆ ಬ್ರಹ್ಮಚರ್ಯಾಶ್ರಮ. ಪ್ರಾಕಾರದ ಗೋಡೆ ಹಾರಿ ಅರಮನೆಯನ್ನು ಪ್ರವೇಶಿಸಿದರು. ಜರಾಸಂಧನು ಪೂಜೆಯಲ್ಲಿ ಮಗ್ನನಾಗಿದ್ದನು. ಇವರಿಗೆ ಮಧುಪರ್ಕವನ್ನು ಕಳುಹಿಸಿ, ಮಧ್ಯರಾತ್ರಿ ಭೇಟಿ ಮಾಡುವೆನೆಂದೂ, ಅಲ್ಲಿಯವರೆಗೆ ಕಾಯಬೇಕೆಂದೂ ತಿಳಿಸಿದನು. ಇವರು ಹಾಗೇ ಆಗಲೆಂದರು, ಮಧ್ಯರಾತ್ರಿಯಾಯಿತು. ಜರಾಸಂಧನು ಇವರನ್ನು ಗೌರವಿಸಿ, "ನೀವು ಸ್ನಾತಕರಂತೆ ಕಾಣುತ್ತೀರಿ. ಆದರೆ ಯಾವ ಸ್ನಾತಕನೂ ಬಳಸದ ಗಂಧಪುಷ್ಪಗಳನ್ನು ಬಳಸಿದ್ದೀರಿ. ಶತ್ರುಗಳಂತೆ ಗೋಡೆ ಹಾರಿ ಬಂದಿದ್ದೀರಿ. ನಾನು ಕಳಿಸಿದ ಮಧುಪರ್ಕವನ್ನು ಸ್ವೀಕರಿಸಲಿಲ್ಲವೆಂದೂ ಕೇಳಿದೆ. ನೀವು ಯಾರೇ ಆಗಿರಿ, ನಿಮಗೆ ಸ್ವಾಗತ. ಬ್ರಾಹ್ಮಣರಿಗೆ ಸಲ್ಲುವ ಪೂಜೆ ನಿಮಗೂ ಸಲ್ಲುತ್ತದೆ. ಆದರೆ ನೀವು ಬ್ರಾಹ್ಮಣರಲ್ಲ, ಕ್ಷತ್ರಿಯರು ಎಂದು ನನ್ನ ಸಂದೇಹ. ಏನೋ ಕಾರಣದಿಂದ ವೇಷ ಮರೆಸಿಕೊಂಡಿದ್ದೀರಿ. ನಿಜ ಹೇಳಿ, ನೀವು ಯಾರು, ನನ್ನಿಂದ ಏನಾಗಬೇಕು?" ಎಂದನು. [೬] ಕೃಷ್ಣನು, "ಜರಾಸಂಧ , ನಿನ್ನ ಊಹೆ ಸರಿ. ನಾವು ನಿನ್ನ ಶತ್ರುಗಳು. ಮಲ್ಲಯುದ್ಧಕ್ಕೆ ಬಂದಿದ್ದೇವೆ. ಅದಕ್ಕಾಗಿಯೇ ನಿನ್ನ ಆತಿಥ್ಯವನ್ನು ಸ್ವೀಕರಿಸಲಿಲ್ಲ" ಎಂದನು. ಜರಾಸಂಧನಿಗೆ ಆಶ್ಚರ್ಯವಾಯಿತು. ನೀವಾರೆಂಬುದೇ ನನಗೆ ಗೂತ್ತಿಲ್ಲ. ಅದು ಹೇಗೆ ಶತ್ರುಗಳಾಗುವಿರಿ? ನನಗೆ ತುಂಬ ಶತ್ರುಗಳಿರುವರು ನಿಜ. ಆದರೆ ನಾನರಿಯದ ಶತ್ರು ಯಾರೂ ಇಲ್ಲ. ಯಾರು ನೀವು, ಏಕೆ ಶತ್ರುಗಳಾಗಿರುವಿರಿ ತಿಳಿಸಿ ಎಂದು ಕೇಳಿದನು. ಅದಕ್ಕೆ ಕೃಷ್ಣನು, "ನೀಚ ರುದ್ರಯಜ್ಞಕ್ಕಾಗಿ ರಾಜರನ್ನು ಬಂಧನದಲ್ಲಿರಿಸಿಕೊಂಡಿರುವುದೇ ಕಾರಣ. ನಾವು ಆ ರಾಜರುಗಳ ಹಕ್ಕುಗಳನ್ನು ಎತ್ತಿ ಹಿಡಿಯಲು ಬಂದಿರುವೆವು. ಸಹಮಾನವರನ್ನು ಕೂಲ್ಲುವ ಮೂಲಕ ಹೇಗೆತಾನೆ ಸ್ವರ್ಗಕ್ಕೆ ಹೋಗುತ್ತೀಯೆ? ಇದರಿಂದ ಯಮನಿಗೆ ಪ್ರೀತಿಯಾಗುವುದೆ? ಇದೋ ಇವನು ಅರ್ಜುನ, ಇವನು ಭೀಮ, ನಾನು ಕೃಷ್ಣ, ನಿನ್ನ ಹಳೆಯ ಪರಿಚಯದವನು. ನಾವು ಮಲ್ಲಯುದ್ಧಕ್ಕೆ ಬಂದಿರುವೆವು. ನಮ್ಮಲ್ಲಿ ನಿನಗೆ ಬೇಕಾದ ಒಬ್ಬರನ್ನು ನೀನು ಆರಿಸಿಕೂಳ್ಳಬಹುದು" ಎಂದನು.
ಜರಾಸಂಧನು ಗಹಗಹಿಸಿ ನಕ್ಕು, ಕೃಷ್ಣನನ್ನು ತಿರಸ್ಕಾರದಿಂದ ನೋಡುತ್ತ,"ಓಹೋ, ನನ್ನನ್ನೆದುರಿಸಲಾರದೆ ಹದಿನೆಂಟು ಬಾರಿ ಓಡಿಹೋದವ, ರೈವತಕ ಪರ್ವತದ ಹಿಂದೆ ಅವಿತುಕೊಂಡಿರುವವ ನಿನಗೆ ನನ್ನ ಮನೆಗೆ ಬಂದು ನನ್ನನ್ನು ಮಲ್ಲಯುದ್ಧಕ್ಕೆ ಕರೆಯುವಷ್ಟು ಸೊಕ್ಕೆ? ನನ್ನನ್ನೆದುರಿಸುವ ಧೈರ್ಯವನ್ನು ಎಲ್ಲಿಂದ ಸಂಪಾದಿಸಿದೆ? ಮೋಸದಿಂದ ಕೊಲ್ಲುವುದಕ್ಕೆ ನಾನೇನೂ ಕಂಸನಲ್ಲ! ನಾನು ದೇವತೆಗಳಿಗೆ ಪ್ರಿಯನೆನಿಸಿದ ಜರಾಸಂಧ. ನನಗೆ ಯಾರ ಭಯವೂ ಇಲ್ಲ. ನಿನಗೆ ತೃಪ್ತಿಯಾಗುವಷ್ಟು ಯುದ್ಧಮಾಡುವೆ. ಆದರೆ ನಿನ್ನೊಡನೆ ಅಲ್ಲ. ಹೇಡಿಯಾದ ನಿನ್ನೊಡನೆ ಕಾದುವುದು ನನಗೆ ಅಪಮಾನ. ಈ ಅರ್ಜುನನಾದರೋ ಇನ್ನೂ ಎಳೆಯ. ದುರ್ಬಲರಾದವರೊಂದಿಗೆ ಹೋರಾಡುವುದು ನನ್ನಂಥವರಿಗೆ ತರವಲ್ಲ. ಈ ಭೀಮ ಸಾಕಷ್ಟು ಅಂಗಸೌಷ್ಠವವುಳ್ಳವನು, ನನ್ನೊಂದಿಗೆ ಯುದ್ಧಮಾಡಲು ತಕ್ಕವನಾಗಿ ಕಾಣುತ್ತಿದ್ದಾನೆ" ಎಂದನು. ಇತ್ಯಾದಿಯಾಗಿ ವಿಜಯ ತನ್ನದೇ ಎಂಬ ಗರ್ವದಿಂದ ಗಳುಹುತ್ತ, ತನ್ನ ಮಗ ಸಹದೇವನನ್ನು ಕರೆದು ಅವನಿಗೆ ಪಟ್ಟಕಟ್ಟಿ, ಅನಂತರ ಯುದ್ಧಕ್ಕೆ ಸಿದ್ಧನಾಗಿ ನಿಂತ. ಮಲ್ಲಯುದ್ಧ ಮೊದಲಾಯಿತು.
ಮಹಾಭಾರತದ ಶಾಂತಿ ಪರ್ವದಲ್ಲಿ, ಜರಾಸಂಧನು ಮಗಳು ಭಾನುಮತಿಯ ಸ್ವಯಂವರದ ನಂತರ ಕರ್ಣನೊಂದಿಗೆ ಹೋರಾಡಿದನು. ಕಠಿಣ ಹೋರಾಟದ ನಂತರ, ಕರ್ಣನು ಅವನನ್ನು ಸೋಲಿಸಿದನು. ಕರ್ಣನನ್ನು ಮೆಚ್ಚಿಸಲು, ಜರಾಸಂಧನು ಅವನಿಗೆ ಆಳಲು ಮಾಲಿನಿ ಭೂಮಿಯನ್ನು ಉಡುಗೊರೆಯಾಗಿ ನೀಡಿದನು. [೭][೮] ಚಕ್ರವರ್ತಿ ಯುಧಿಷ್ಠಿರ ಅರ್ಪಣೆಯನ್ನು ಮಾಡಲು ನಿರ್ಧರಿಸಿದಾಗ ಅವನು ಅವನ ಮುಂದೆ ಪ್ರಮುಖ ಅಡಚಣೆಯಾಗಿದ್ದನು. ಜರಾಸಂಧನು ಪ್ರಬಲ ಯೋಧನಾಗಿದ್ದರಿಂದ, ಅವನನ್ನು ನಿರ್ಮೂಲನೆ ಮಾಡುವುದು ಪಾಂಡವರಿಗೆ ಅಗತ್ಯವಾಗಿತ್ತು. ಕೃಷ್ಣ, ಭೀಮ ಮತ್ತು ಅರ್ಜುನರು ಬ್ರಾಹ್ಮಣರ ವೇಷದಲ್ಲಿ ಮಗಧ ರಾಜ್ಯಕ್ಕೆ ಪ್ರಯಾಣಿಸಿ ಜರಾಸಂಧನನ್ನು ಭೇಟಿಯಾದರು. ಔಪಚಾರಿಕ ಸಭೆಯ ನಂತರ, ಜರಾಸಂಧ ಅವರ ಉದ್ದೇಶಗಳ ಬಗ್ಗೆ ವಿಚಾರಿಸಿದರು. ಕೃಷ್ಣ, ಭೀಮ ಮತ್ತು ಅರ್ಜುನ ತಮ್ಮ ನಿಜವಾದ ಗುರುತನ್ನು ಬಹಿರಂಗಪಡಿಸಿದರು. ನಂತರ ಕೃಷ್ಣನು ಜರಾಸಂಧನಿಗೆ ದ್ವಂದ್ವ ಯುದ್ಧಕ್ಕೆ ಸವಾಲು ಹಾಕಿದನು ಮತ್ತು ಯಾವುದೇ ಯುದ್ಧಕೋರನನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಅವನಿಗೆ ನೀಡಿದನು. ಜರಾಸಂಧನು ಭೀಮನನ್ನು ದ್ವಂದ್ವ ಯುದ್ಧಕ್ಕೆ ಆಯ್ಕೆ ಮಾಡಿದನು. ಭೀಮ ಮತ್ತು ಜರಾಸಂಧ ಇಬ್ಬರೂ ನಿಪುಣ ಕುಸ್ತಿಪಟುಗಳಾಗಿದ್ದರು. ದ್ವಂದ್ವ ಯುದ್ಧವು ಹಲವಾರು ದಿನಗಳವರೆಗೆ ಮುಂದುವರಿಯಿತು ಮತ್ತು ಅವರಿಬ್ಬರೂ ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಹದಿನಾಲ್ಕು ರಾತ್ರಿ ಕಳೆದರೂ ಇಬ್ಬರೂ ಸರಿಸಮನಾಗಿಯೆ ಹೋರಾಡುತ್ತಿದ್ದರು. ಕೃಷ್ಣಾರ್ಜುನರೂ ಇತರರೊಡನೆ ನಿಂತು ನೋಡುತ್ತಿದ್ದರು. ಯಾರೂ ಗೆಲ್ಲುವಂತೆಯೇ ತೋರಲಿಲ್ಲ. ಕೊನೆಗೆ ಭೀಮನು ನಿಧಾನವಾಗಿ ಮೇಲುಗೈ ಸಾಧಿಸತೊಡಗಿದ. ಕೃಷ್ಣನು ಅವನನ್ನು ಪ್ರೋತ್ಸಾಹಿಸುತ್ತ , "ಭೀಮ, ನೀನು ವಾಯುಪುತ್ರನೆಂಬುದನ್ನು ಜ್ಞಾಪಿಸಿಕೋ. ಕ್ಷತ್ರಿಯರಲ್ಲೆಲ್ಲ ನೀನು ಮಹಾಬಲಶಾಲಿ. ಮನಸ್ಸು ಮಾಡಿದರೆ ಅವನನ್ನು ಎರಡಾಗಿ ಸೀಳಿಬಿಡಬಲ್ಲೆ" ಎನ್ನುತ್ತಾನೆ.
ಆಗ ಭೀಮನು ತನ್ನ ತಂದೆಯಾದ ವಾಯುವನ್ನು ಪ್ರಾರ್ಥಿಸಿ, ಜರಾಸಂಧನನ್ನು ಒಮ್ಮೆಲೇ ಮೇಲಕ್ಕೆತ್ತಿ, ಬೀಳುತ್ತಿರುವಾಗ ಒಂದೊಂದು ಕೈಯಲ್ಲಿ ಅವನ ಒಂದೊಂದು ಕಾಲನ್ನು ಹಿಡಿದು, ಅವನ ದೇಹವನ್ನು ಎರಡಾಗಿ ಸೀಳಿಬಿಟ್ಟನು. ಆದರೇನು! ಹತ್ತಿರದಲ್ಲೇ ಬಿದ್ದಿದ್ದ ಎರಡು ಸೀಳುಗಳೂ ಒಂದಾಗಿ ಸೇರಿ, ಪುನಃ ಜರಾಸಂಧನು ಏನೂ ಆಗದವನಂತೆ ಎದ್ದು ಬಂದನು. ಇದನ್ನು ನೋಡಿ ಭೀಮಾರ್ಜುನರಿಗೆ ಜಂಘಾಬಲವೇ ಉಡುಗಿಹೋಯಿತು. ಕೃಷ್ಣನು ಮಾತ್ರ ಭೀಮನನ್ನು ಪ್ರೋತ್ಸಾಹಿಸುತ್ತಲೇ ಇದ್ದನು. ಯುದ್ಧ ಮುಂದುವರೆಯಿತು.
ಕೃಷ್ಣನಿಗೆ ಜರಾಂಸಂಧನ ಹುಟ್ಟಿನ ಹಿನ್ನೆಲೆ ಗೊತ್ತಿತ್ತು. ತಕ್ಷಣ ಚುರುಕಾಗಿ ತಲೆ ಓಡಿಸಿದ ಕೃಷ್ಣ ಒಂದು ಕಡ್ಡಿಯನ್ನು ಎರಡಾಗಿ ಸೀಳಿ ಅದನ್ನು ಉಲ್ಟಾ ಮಾಡಿ ಬಿಸಾಡಿದ. ಇದನ್ನು ಕಂಡ ಭೀಮನಿಗೆ ಅರ್ಥವಾಯಿತು. ಇದನ್ನರಿತ ಭೀಮನು ಜರಾಸಂಧನನ್ನು ಮತ್ತೆ ಮೇಲಕ್ಕಿಸಿದು, ಬೀಳುತ್ತಿರುವಾಗ ಎರಡಾಗಿ ಸೀಳಿ, ಸೀಳುಗಳನ್ನು ಪರಸ್ಪರ ವಿರುದ್ಧವಾಗಿರುವಂತೆ ದೂರ ದೂರಕ್ಕೆ ಎಸೆಯಲು, ಸೀಳುಗಳು ಕೂಡಿಕೊಳ್ಳಲಾಗದೆ ಜರಾಸಂಧನು ಸತ್ತನು. [೯]
ಜರಾಸಂಧನ ಮಗ ಸಹದೇವನನ್ನು (ಕಿರಿಯ ಪಾಂಡವನೊಂದಿಗೆ ಗೊಂದಲಕ್ಕೊಳಗಾಗಬಾರದು) ಮಗಧದ ಸಿಂಹಾಸನದ ಮೇಲೆ ಇರಿಸಲಾಯಿತು ಮತ್ತು ಅವನು ಪಾಂಡವರಿಗೆ ಸಾಮಂತನಾಗಲು ಒಪ್ಪಿಕೊಂಡನು. ಕುರುಕ್ಷೇತ್ರ ಯುದ್ಧದಲ್ಲಿ ಶಕುನಿ ತನ್ನ ಸೋದರಸಂಬಂಧಿ ಜಯದೇವನೊಂದಿಗೆ ಕೊಲ್ಲಲ್ಪಟ್ಟನು.
ಡೌಸನ್, ಜಾನ್ (೧೮೨೦–೧೮೮೧). "ಹಿಂದೂ ಪುರಾಣ ಮತ್ತು ಧರ್ಮ, ಭೌಗೋಳಿಕತೆ, ಇತಿಹಾಸ ಮತ್ತು ಸಾಹಿತ್ಯದ ಶಾಸ್ತ್ರೀಯ ನಿಘಂಟು." ಲಂಡನ್: ಟ್ರುಬ್ನರ್, ೧೮೭೯ ಮರುಮುದ್ರಣ, ಲಂಡನ್: ರೂಟ್ಲೆಡ್ಜ್, ೧೯೭೯. ISBN 0-415-24521-4
Seamless Wikipedia browsing. On steroids.