From Wikipedia, the free encyclopedia
ಗಂಡಕಿಯು ನೇಪಾಳ, ಭಾರತಗಳಲ್ಲಿ ಹರಿಯುವ ಒಂದು ನದಿ; ಗಂಗಾನದಿಯ ಉಪನದಿ. ತ್ರಿಶೂಲ ಗಂಗಾ ಇದರ ಉಪನದಿ.
ನೇಪಾಳದ ಹಿಮಾಲಯ ಪರ್ವತಭಾಗದಲ್ಲಿ ಉ.ಅ 27° 27' ಮತ್ತು ಪೂ. ರೇ. 83° 56' ನಲ್ಲಿ ಹುಟ್ಟಿ ನೈಋತ್ಯ ದಿಕ್ಕಿಗೆ ಹರಿದು ಭಾರತವನ್ನು ಪ್ರವೇಶಿಸುತ್ತದೆ. ಕಾಲಿ ಗಂಡಕಿ ನದಿ ಮೂಲವು ಟಿಬೆಟ್ನೊಂದಿಗಿನ ಗಡಿಯಲ್ಲಿ ೬೨೬೮ ಮೀ ಎತ್ತರದಲ್ಲಿ, ನೇಪಾಳದ ಮುಸ್ತಾಂಗ್ ಪ್ರದೇಶದಲ್ಲಿ ನುಬೈನ್ ಹಿಮಲ್ ಹಿಮನದಿಯಲ್ಲಿದೆ.[1][2]ಬಿಹಾರದ ಚಂಪಾರಣ್, ಸಾರನ್ ಮತ್ತು ಮುಜಫ್ಫರ್ಪುರ ಜಿಲ್ಲೆಗಳ ಮೂಲಕ ಹರಿದು ಕೊನೆಗೆ ಪಾಟ್ನದ ಬಳಿ ಇದು ಗಂಗಾನದಿಯನ್ನು ಸೇರಿಕೊಳ್ಳುತ್ತದೆ.[3] ಇದರ ಉದ್ದ ಸುಮಾರು 192 ಮೈ. ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಇದು ಬಹುದೂರ ಹರಿಯುತ್ತದೆ. ವಾಸ್ತವವಾಗಿ ಈ ವಲಯದಲ್ಲಿ ಈ ಎರಡು ರಾಜ್ಯಗಳ ನಡುವಣ ಗಡಿ ನಿರ್ಧಾರಕ ನದಿಯಿದು.
ಮಧ್ಯ ಗಂಗಾ ಬಯಲು ಪ್ರದೇಶದಲ್ಲಿ, ಗಂಡಕಿಯು ಪೂರ್ವ ಉತ್ತರ ಪ್ರದೇಶ ಮತ್ತು ವಾಯವ್ಯ ಬಿಹಾರವನ್ನು ಒಳಗೊಂಡಿರುವ ಮೆಕ್ಕಲುಮಣ್ಣಿನ ಅಗಾಧ ಬೀಸಣಿಗೆಯನ್ನು ನಿರ್ಮಿಸಿದೆ.[4]
ಇದನ್ನು ನೇಪಾಳದಲ್ಲಿ ಶಾಲಿಗ್ರಾಮೀ ಎಂದೂ, ಉತ್ತರ ಪ್ರದೇಶದಲ್ಲಿ ನಾರಾಯಣೀ ಮತ್ತು ಸಪ್ತಗಂಡಕೀ ಎಂದೂ ಕರೆಯುತ್ತಾರೆ. ಗಂಡಕ, ಮಹಾಗಂಡಕ ಎಂದೂ ಇದಕ್ಕೆ ಹೆಸರುಗಳುಂಟು. ಮಹಾಭಾರತದಲ್ಲಿ ಸದಾನೀರಾ ಎಂದು ಹೆಸರಿಸಲಾಗಿರುವ ನದಿ ಇದೇ ಎಂಬುದು ಲಾಸೆನ್ನ ಅಭಿಪ್ರಾಯ. ಮಳೆಗಾಲದಲ್ಲಿ ಮಳೆಯ ನೀರಿನಿಂದಲೂ, ಬೇಸಗೆಯಲ್ಲಿ ಹಿಮ ಕರಗಿದ ನೀರಿನಿಂದಲೂ, ಒಟ್ಟಿನಲ್ಲಿ ಸದಾ ಕಾಲವೂ ತುಂಬಿ ಹರಿಯುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಗ್ರೀಸಿನ ಭೂಗೋಳಶಾಸ್ತ್ರಜ್ಞರು ಕೂಂಡೊಚೇಟ್ಸ್ ಎಂದು ಕರೆದಿರುವ ನದಿ ಇದೇ ಎಂದು ಹೇಳಲಾಗಿದೆ.
ಮಳೆಗಾಲದಲ್ಲಿ ಇದರ ಪ್ರವಾಹ ಸುತ್ತಮುತ್ತಣ ಬಯಲು ಪ್ರದೇಶಗಳಿಗೆ ನುಗ್ಗಿ ಬಹಳ ಅನಾಹುತವನ್ನುಂಟು ಮಾಡುತ್ತದೆ. ಇದನ್ನು ತಪ್ಪಿಸಲು ಕೆಲವಡೆಗಳಲ್ಲಿ ನದಿಯ ದಡದಲ್ಲಿ ಅಡ್ಡಗಟ್ಟೆಗಳನ್ನು ನಿರ್ಮಿಸಲಾಗಿದೆ. ನದಿಯಲ್ಲಿ ವರ್ಷಾದ್ಯಂತವೂ ದೋಣಿ ಸಂಚಾರವುಂಟು. ನೇಪಾಳದ ಮತ್ತು ಗೋರಖ್ಪುರದ ಕಾಡುಗಳಿಂದ ಮರದ ದಿಮ್ಮಿಗಳನ್ನು ಸಾಗಿಸಲು ನದಿ ಉಪಯುಕ್ತವಾಗಿದೆ. ಜನವಸತಿಯ ಪ್ರದೇಶವನ್ನು ತಲುಪಿದ ಮೇಲಂತೂ ಕಟ್ಟಡ ಸಾಮಾಗ್ರಿ, ಧಾನ್ಯ, ಸಕ್ಕರೆ ಮೊದಲಾದ ಸರಕುಗಳು ಈ ಜಲಮಾರ್ಗದ ಮೂಲಕ ಸಾಗುತ್ತವೆ. ಈ ನದಿಯಿಂದ ಸಾರನ್ ಮತ್ತು ಚಂಪಾರಣ್ ಜಿಲ್ಲೆಗಳಲ್ಲಿ ನೀರಾವರಿ ಸೌಲಭ್ಯ ಏರ್ಪಟ್ಟಿದೆ. ಹಾಜಿಪುರ, ಶೋಣಪುರಗಳಿಗೂ ಈ ನದಿಯಿಂದ ತುಂಬ ಅನುಕೂಲವುಂಟು.
ಗಂಡಕ್ ಅಣೆಕಟ್ಟಿನ ಸುತ್ತ, ವಾಲ್ಮೀಕಿನಗರ್ನ ಸುತ್ತಮುತ್ತಣ ಪ್ರದೇಶದಲ್ಲಿ, ನೇಪಾಳದ ಚಿತ್ವನ್ ರಾಷ್ಟ್ರೀಯ ಉದ್ಯಾನ ಮತ್ತು ಭಾರತದ ವಾಲ್ಮೀಕಿ ರಾಷ್ಟ್ರೀಯ ಉದ್ಯಾನಗಳು ಒಂದಕ್ಕೊಂದಕ್ಕೆ ಅಕ್ಕಪಕ್ಕದಲ್ಲಿವೆ. ವಾಲ್ಮೀಕಿ ಉದ್ಯಾನವು ಭಾರತದಲ್ಲಿ ಸ್ಥಾಪಿತವಾದ ೧೮ನೇ ಹುಲಿ ಮೀಸಲು ಪ್ರದೇಶವಾಗಿತ್ತು.[5]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.