![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/6/6c/Blood_donation_at_Fleet_Week_USA.jpg/640px-Blood_donation_at_Fleet_Week_USA.jpg&w=640&q=50)
ರಕ್ತ ದಾನ
From Wikipedia, the free encyclopedia
ಒಬ್ಬ ವ್ಯಕ್ತಿ ಸ್ವಇಚ್ಛೆಯಿಂದ ರಕ್ತ ನೀಡಲು ಬಂದಾಗ ರಕ್ತದಾನ ಪ್ರಕ್ರಿಯೆ ನಡೆಯುವುದು. ಅಂತಹ ರಕ್ತವನ್ನು ರಕ್ತಪೂರಣಗಳಿಗೆ ಬಳಸಲಾಗುತ್ತದೆ ಅಥವಾ ಅಂಶೀಕರಣ ಎನ್ನುವ ಪ್ರಕ್ರಿಯೆಯ ಮೂಲಕ ಔಷಧಿ ತಯಾರಿಕೆಗಾಗಿ ಬಳಸಲಾಗುತ್ತದೆ.
![Thumb image](http://upload.wikimedia.org/wikipedia/commons/thumb/6/6c/Blood_donation_at_Fleet_Week_USA.jpg/320px-Blood_donation_at_Fleet_Week_USA.jpg)
ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬಹುತೇಕ ರಕ್ತದಾನಿಗಳು ಹಣವನ್ನು ತೆಗೆದುಕೊಳ್ಳದೆ ಸ್ವ ಇಚ್ಛೆಯಿಂದ ಸಮೂಹ ಪೂರೈಕೆಗೆಂದು ರಕ್ತದಾನ ಮಾಡುತ್ತಾರೆ. ಬಡ ರಾಷ್ಟ್ರಗಳಲ್ಲಿ ವ್ಯವಸ್ಥಿತ ರಕ್ತಪೂರೈಕೆಯು ಬಹಳ ಕಡಿಮೆ ಮತ್ತು ರಕ್ತದಾನಿಗಳು ತಮ್ಮ ಕುಟುಂಬದವರಿಗೆ ಅಥವಾ ಸ್ನೇಹಿತರಿಗೆ ರಕ್ತಪೂರಣದ ಅಗತ್ಯ ಇದ್ದಾಗ ಮಾತ್ರ ರಕ್ತದಾನ ಮಾಡುತ್ತಾರೆ. ಬಹುತೇಕರು ದಾನವಾಗಿ ನೀಡುತ್ತಾರೆ ಆದರೂ ಕೆಲವರು ಹಣಕ್ಕಾಗಿ ಮತ್ತು ಕೆಲವು ಸಂದರ್ಭಗಳಲ್ಲಿ ಸಂಬಳ ಸಹಿತ ರಜೆಯಂತಹ ಸವಲತ್ತಿಗೋಸ್ಕರ ಮಾಡುತ್ತಾರೆ. ರಕ್ತದಾನಿಗಳು ತಮ್ಮದೇ ಭವಿಷ್ಯದ ಅಗತ್ಯಕ್ಕಾಗಿಯೂ ತೆಗೆದಿರಿಸಬಹುದು. ರಕ್ತದಾನ ಮಾಡುವುದು ಸುರಕ್ಷಿತವಾದರೂ, ಸೂಜಿ ಚುಚ್ಚುವಾಗ ಅಥವಾ ಆಯಾಸವಾದಾಗ ಕೆಲವರಿಗೆ ನೋವಾಗುವ ಅನುಭವವಾಗಬಹುದು.
ಸಂಭಾವ್ಯ ರಕ್ತ ದಾನಿಗಳು ತಮ್ಮ ರಕ್ತವು ದಾನಮಾಡಲು ಅರ್ಹವಾಗದಿರಬಹುದಾದ ಸಾಧ್ಯತೆ ಇದೆಯೇ ಎಂಬುದಕ್ಕೆ ಪರೀಕ್ಷೆಗೊಳಪಡುತ್ತಾರೆ. ಈ ಪರೀಕ್ಷೆಗಳಲ್ಲಿ ರಕ್ತಪೂರಣದಿಂದ ಹರಡಬಹುದಾದ ಎಚ್.ಐ.ವಿ. ಮತ್ತು ವೈರಸ್ ಪೂರಿತ ಹೆಪಟೈಟಿಸ್ನಂತಹ ರೋಗಗಳ ಸಾಧ್ಯತೆಯ ಪರೀಕ್ಷೆಯೂ ಇರುತ್ತದೆ. ರಕ್ತದಾನ ಸಂದರ್ಭದಲ್ಲಿ ದಾನಿಗಳಲ್ಲಿ ಅವರ ಆರೋಗ್ಯದ ಇತಿಹಾಸದ ಬಗ್ಗೆ ವಿಚಾರಿಸಲಾಗುವುದು ಮತ್ತು ರಕ್ತ ಕೊಡಲು ಆಕೆ ಅಥವಾ ಆತ ಆರೋಗ್ಯವಂತರೇ ಹಾಗೂ ರಕ್ತದಾನದಿಂದ ಅವರಿಗೆ ತೊಂದರೆಯಾಗುವುದೊ ಇಲ್ಲವೊ ಎಂಬುವುದನ್ನು ತಿಳಿಯಲು ಅವರ ದೈಹಿಕ ಪರೀಕ್ಷೆ ನಡೆಸಲಾಗುವುದು. ಆತ ಅಥವಾ ಆಕೆ ಏನನ್ನು ದಾನ ಮಾಡುತ್ತಾರೆ ಎಂಬುದರ ಮೇಲೆ ಮತ್ತು ದಾನ ನಡೆಯುವ ದೇಶದ ನೀತಿ ನಿಯಮಾವಳಿಗಳ ಮೇಲೆ ದಾನಗಳ ನಡುವಿನ ಅವಧಿಯು ತಿಂಗಳುಗಳು ಮತ್ತು ದಿನಗಳ ಮಟ್ಟಿಗೆ ವ್ಯತ್ಯಾಸವಾಗಬಹುದು. ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್ನಲ್ಲಿ ದಾನಿಯು ಒಂದು ಬಾರಿ ರಕ್ತದಾನ ಮಾಡಿದರೆ ಎಂಟು ವಾರಗಳ (56 ದಿನಗಳು) ನಂತರ ಮತ್ತೊಮ್ಮೆ ಸಂಪೂರ್ಣ ರಕ್ತದಾನ ಮಾಡಲು ಅರ್ಹವಾದರೆ ರಕ್ತದ ಕಿರುಬಿಲ್ಲೆ ದಾನಗಳಿಗೆ ಮೂರು ದಿನಗಳ ಸಡಿಲಿಕೆ ಸಾಕಾಗುತ್ತದೆ.[1]
ಪಡೆದುಕೊಳ್ಳುವ ರಕ್ತದ ಪ್ರಮಾಣ ಹಾಗೂ ವಿಧಾನಗಳು ಬದಲಾವಣೆಗಳಾಗಬಹುದು, ಆದರೆ ಒಬ್ಬ ವ್ಯಕ್ತಿ 450 ಮಿಲಿಲೀಟರ್ಗಳಷ್ಟು (ಅಥವಾ ಒಂದು US ಪಿಂಟ್) ಸಂಪೂರ್ಣ ರಕ್ತವನ್ನು ತಮ್ಮ ರಕ್ತದಿಂದ ನೀಡಬಹುದು. ರಕ್ತ ಸಂಗ್ರಹಣೆಯನ್ನು ಸಾಮಾನ್ಯ ರೂಢಿಯಂತೆ ಅಥವಾ ಸ್ವಯಂಚಾಲಿತ ರಕ್ತಸಂಗ್ರಹಣ ಯಂತ್ರದಿಂದಲೂ ರಕ್ತದ ನಿಗದಿತ ಭಾಗಗಳನ್ನು ಮಾತ್ರ ಸಂಗ್ರಹಿಸಬಹುದು. ರಕ್ತಪೂರಣ ನಡೆಸಲು ಬಳಸಲಾಗುವ ರಕ್ತದ ಬಹುತೇಕ ಘಟಕಗಳ ಶೇಖರಣಾ ಅವಧಿ ಅತಿ ಕಡಿಮೆ. ಅವುಗಳ ನಿರಂತರ ಪೂರೈಕೆಯನ್ನು ಮಾಡುವುದು ಚಿರಸ್ಥಾಯಿ ಸಮಸ್ಯೆಯಾಗಿದೆ.