![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/50/Venous_and_arterial_blood.jpg/640px-Venous_and_arterial_blood.jpg&w=640&q=50)
ರಕ್ತ
From Wikipedia, the free encyclopedia
ರಕ್ತ ಎಂಬುದು ಮನುಷ್ಯ ಹಾಗೂ ಇನ್ನಿತರ ಕಶೇರುಕಗಳ (ವರ್ಟಿಬ್ರೇಟ್ಸ್) ದೇಹದಲ್ಲಿಯ ಪ್ರಮುಖ ರಕ್ತನಾಳ ವ್ಯವಸ್ಥೆಯಲ್ಲಿ (ವಾಸ್ಕುಲರ್ ಸಿಸ್ಟಮ್) ಪರಿಚಲಿಸುವ, ಕೆಂಪುಬಣ್ಣದ ದ್ರವ (ಬ್ಲಡ್). ನೆತ್ತರು, ರುಧಿರ, ಪರ್ಯಾಯನಾಮಗಳು. ರಕ್ತವು ದೇಹದಲ್ಲಿ ಜೀವಕಣಗಳನ್ನು ಹೊತ್ತೊಯುತ್ತದೆ. ರಕ್ತವೇ ಎಲ್ಲಾ ಜೀವಿಗಳ ಪೋಷಕ ಶಕ್ತಿ. ಇದು ಒಂದು ಅಮೂಲ್ಯ ಜೀವದ್ರವ. ಅದಕ್ಕೆ ರಕ್ತವನ್ನು ಒಂದು ವಿಶಿಷ್ಟ ವರ್ಗಕ್ಕೆ ಸೇರಿದ, "ಸಂಯೋಜಕ ಊತಕ" ಎನ್ನುತ್ತಾರೆ.[1] ರಕ್ತದ ಬಹುಮುಖಿ ಮಹತ್ವವನ್ನು ಸರಿಯಾಗಿ ತಜ್ಞರಿಂದ ಅರಿತು, ಸಮತೋಲನದ ಆಹಾರವನ್ನು ಸೇವಿಸಿ, ಕಾಯಿಲೆಗಳಿಗೆ ದಾಸರಾಗುವುದನ್ನು ಕಡಿಮೆಮಾಡಬಹುದು.
![Thumb image](http://upload.wikimedia.org/wikipedia/commons/thumb/5/50/Venous_and_arterial_blood.jpg/640px-Venous_and_arterial_blood.jpg)
ಕಾರಣಾಂತರಗಳಿಂದ ದೇಹದ ಒಳಗೆ ಇಲ್ಲವೆ ಹೊರಗೆ ಎಲ್ಲಿ ಗಾಯವಾದರೂ ರಕ್ತ ಹೊರಬರುತ್ತದೆ. ಎಲ್ಲ ಕಶೇರುಕಗಳ ದೇಹದಲ್ಲೂ ಅನಿಲಿಡ ವಂಶಕ್ಕೆ ಸೇರಿದ ಎರೆಹುಳು, ಜಿಗಣೆ ಮತ್ತು ಇನ್ನಿತರ ಸಮುದ್ರವಾಸಿ ಹುಳುಗಳು ಹಾಗೂ ಅವುಗಳಿಗಿಂತ ಮೇಲ್ದರ್ಜೆಯ ಅಕಶೇರುಕಗಳ ದೇಹದಲ್ಲೂ ರಕ್ತ ಇದೆ. ಕೆಲವು ಹುಳುಗಳಲ್ಲಿ ರಕ್ತ ಮಾಸಲು - ಹಸರು ಬಣ್ಣಕ್ಕೂ ಕೆಲವೊಂದು ಚಿಪ್ಪುಪ್ರಾಣಿಗಳು ಹಾಗೂ ಸಂಧಿಪದಿಗಳಲ್ಲಿ ತಿಳಿನೀಲಿ ಬಣ್ಣಕ್ಕೂ ಇರುವುದುಂಟು. ಮನುಷ್ಯನ ವಿಚಾರವಾಗಿ ಹೇಳುವುದಾದರೆ ಕಣಗಳೂ (ಸೆಲ್ಸ್) ಕಣೀತ್ರಗಳೂ (ಕಿರುತಟ್ಟೆಗಳು; ಪ್ಲೇಟ್ಲೆಟ್ಸ್) ನಿಲಂಬಿತಗೊಂಡಿರುವ (ಸಸ್ಪೆಂಡೆಡ್) ರಕ್ತದ್ರವದಿಂದ (ಜೀವಿರಸ; ಪ್ಲಾಸ್ಮ) ಈ ದ್ರವ ಕೂಡಿದೆ. ಕ್ಷಾರೀಯ ಗುಣವುಳ್ಳದ್ದು ಈ ದ್ರವ. ಸಾಪೇಕ್ಷ ಸಾಂದ್ರತೆ 1.050 - 1.060.