ಟ್ಯಾರೋ(ಭವಿಷ್ಯ ಹೇಳಲು ಬಳಸುವ ಇಸ್ಪೀಟೆಲೆಗಳ ಪ್ಯಾಕ್)
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
ಟ್ಯಾರೋ (ಮೊದಲಿಗೆ ಇದನ್ನು ಟ್ಯಾರೋಚಿ ,/ta.ʁo/, ಟ್ಯಾರಾಕ್ ಮತ್ತು ಅದೇ ವಿಧದ ಹೆಸರುಗಳಿಂದ ಗುರುತಿಸುತ್ತಿದ್ದರು) ಒಂದು ಕಾರ್ಡ್ ಗಳ ಕಟ್ಟು(ಸಾಮಾನ್ಯವಾಗಿ ಒಂದು ಕಟ್ಟಿನಲ್ಲಿ 78 ಕಾರ್ಡ್ ಗಳಿರುತ್ತವೆ); ಇದನ್ನು ಇಟಾಲಿಯನ್ ಟ್ಯಾರೋಚಿನಿ ಮತ್ತು ಫ್ರೆಂಚ್ ಟ್ಯಾರೋ ಆಟಗಳನ್ನಾಡಲು ಯೂರೋಪ್ ನ ಹಲವಾರು ಭಾಗಗಳಲ್ಲಿ ಹದಿನೈದನೆಯ ಶತಮಾನದ ಮಧ್ಯಭಾಗದಿಂದ ಬಳಸಲಾಗುತ್ತಿದೆ. 18ನೆಯ ಶತಮಾನದಿಂದ ಇಂದಿನವರೆಗೆ ಟ್ಯಾರೋಗಳನ್ನು ಆಧ್ಯಾತ್ಮವಾದಿಗಳು ಮತ್ತು ಭವಿಷ್ಯ ನುಡಿಯುವವರು ಕಣಿ ಹೇಳಲು, ಅಥವಾ ಆಧ್ಯಾತ್ಮಿಕ ಅಥವಾ ಮಾನಸಿಕ ಮಾರ್ಗಗಳನ್ನು ರೂಪಿಸಲು ಬಳಸುವುದು ವಾಡಿಕೆಯಲ್ಲಿದೆ.
ಬಳಕೆಯಲ್ಲಿರುವ ಇಸ್ಪೀಟ್ ಎಲೆಗಳಲ್ಲಿರುವಂತೆಯೇ ಟ್ಯಾರೋವಿನಲ್ಲೂ ನಾಲ್ಕು ವಿಧದ ಕಾರ್ಡುಗಳು (ಸ್ಯೂಟ್ ಗಳು) ಇವೆ. ಈ ನಾಲ್ಕೂ ಸ್ಯೂಟ್ ಗಳಲ್ಲಿ ಏಸ್ ನಿಂದ 10ರವರೆಗಿನ ಸಂಖ್ಯೆಯ ಪಿಪ್ ಕಾರ್ಡ್ ಗಳು ಮತ್ತು ನಾಲ್ಕು ಫೇಸ್ ಕಾರ್ಡುಗಳು ಇದ್ದು, ಒಟ್ಟು 14 ಕಾರ್ಡುಗಳಿರುತ್ತವೆ. ಇವಲ್ಲದೆ, ಟ್ಯಾರೋವಿನ ವಿಭಿನ್ನತೆಯೆಂದರೆ 21 ಕಾರ್ಡ್ ಗಳ ಪ್ರತ್ಯೇಕ ಟ್ರಂಪ್ ಸ್ಯೂಟ್ ಮತ್ತು ಫೂಲ್ ಎಂಬ ಒಂದು ಕಾರ್ಡ್ ಪ್ರತಿ ಪ್ಯಾಕ್ ನಲ್ಲಿರುತ್ತವೆ. ಆಟದ ರೀತಿಯನ್ನನುಸರಿಸಿ, ಫೂಲ್ ಪ್ರಮುಖ ಟ್ರಂಪ್ ಆಗಬಹುದು ಅಥವಾ ಕ್ರಮವನ್ನು ತಪ್ಪಿಸಲು ಬಳಸುವ ಕಾರ್ಡ್ ಆಗಿ ಬಳಸಲಾಗಬಹುದು.[1]
ರಾಬೆಲಾಯ್ಸ್ ತಮ್ಮ ಗಾರ್ಗಾಂಟುವಾ ಎಂಡ್ ಪಾಂಟಾಗ್ರುಯೆಲ್ ನಲ್ಲಿ ಗಾರ್ಗಾಂಟುವಾ ಆಡುವ ಆಟಗಳಲ್ಲಿ ಒಂದರ ಹೆಸರು ಟಾರಾವ್ ಎಂದು ಬರೆದಿದ್ದಾರೆ;[2] ಇದು ಪ್ರಾಯಶಃ ಆ ಹೆಸರಿನ ಫ್ರೆಂಚ್ ಮಾದರಿಯ ಪ್ರಾಥಮಿಕ ಖಚಿತಗೊಳಿಸುವಿಕೆಯಾಗಿದೆ. ಕಾರ್ಡ್ ಆಟಗಳನ್ನು ಆಡುವ ಸಲುವಾಗಿ ಯೂರೋಪ್ ನ ಬಹುತೇಕ ಜಾಗಗಳಲ್ಲಿ ಟ್ಯಾರೋ ಕಾರ್ಡ್ ಗಳನ್ನು ಬಳಸಲಾಗುತ್ತದೆ. ಇಂಗ್ಲಿಷ್ ಮಾತನಾಡುವ ದೇಶಗಳಲ್ಲಿ, ಈ ಆಟಗಳ ಪರಿಚಯವೇ ಇಲ್ಲದ ಜಾಗಗಳಲ್ಲಿ, ಟ್ಯಾರೋ ಕಾರ್ಡುಗಳನ್ನು ಪ್ರಮುಖವಾಗಿ ಭವಿಷ್ಯ ಹೇಳುವ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.[1][3] ರಹಸ್ಯೋಪದೇಶಕರು ಪ್ಯಾಕ್ ನ ಟ್ರಂಪ್ ಕಾರ್ಡುಗಳು ಮತ್ತು ಫೂಲ್ ಅನ್ನು "ಮೇಜರ್ ಅರ್ಕಾನಾ" ಎಂದು ಕರೆಯುತ್ತಾರೆ ಮತ್ತು ಹತ್ತು ಪಿಪ್ ಗಳು ಮತ್ತು ನಾಲ್ಕು ಕೋರ್ಟ್ (ದರ್ಬಾರ್) ಕಾರ್ಡುಗಳನ್ನು ಮೈನರ್ ಅರ್ಕಾನಾ ಎಂದು ಕರೆಯುತ್ತಾರೆ. ಕೆಲವು ನಿಗೂಢವಿಷಯ ಲೇಖಕರು ಈ ಕಾರ್ಡುಗಳು ಪ್ರಾಚೀನ ಈಜಿಪ್ಟ್ ಅಥವಾ ಕಬ್ಬಾಲಾದ ಕಾಲದ್ದೆಂದು ಪತ್ತೆ ಹಚ್ಚಿರುವುದಾಗಿ ಹೇಳುವರಾದರೂ ತತ್ಸಂಬಂಧಿತ ಮೂಲಗಳ ಬಗ್ಗೆಯಾಗಲೀ, 18ನೆಯ ಶತಮಾನಕ್ಕೆ ಮುಂಚೆ ಟ್ಯಾರೋ ಕಾರ್ಡುಗಳು ಕಣಿ ಹೇಳಲು ಬಳಸಲ್ಪಡುತ್ತಿದ್ದವು ಎಂಬುದಕ್ಕಾಗಲೀ ಯಾವುದೇ ನಿಖರ ಪುರಾವೆಗಳು ದೊರೆತಿಲ್ಲ.[1]