From Wikipedia, the free encyclopedia
ಚಿನ್ನ(Gold)ವು ಒಂದು ಮೂಲಧಾತು. ರಸಾಯನಶಾಸ್ತ್ರದಲ್ಲಿ ಇದರ ಚಿಹ್ನೆ Au ( ಲ್ಯಾಟಿನ್ ಭಾಷೆಯ ಹೊಳೆಯುವ ಪ್ರಭಾತ ಎಂಬರ್ಥ ಕೊಡುವ ಆರಮ್ ಎಂಬ ಪದದಿಂದ ಆರಿಸಿಕೊಳ್ಳಲಾಗಿದೆ). ಚಿನ್ನದ ಪರಮಾಣು ಸಂಖ್ಯೆ ೭೯. ಬಹು ಜನಪ್ರಿಯ ರಾಜಲೋಹವಾಗಿರುವ ಚಿನ್ನವನ್ನು ಸಹಸ್ರಮಾನಗಳಿಂದಲೂ ಮಾನವನು ಮೋಹಿಸಿರುವನು. ಚಿನ್ನವನ್ನು ಹಿಂದಿನ ಕಾಲದಿಂದಲೂ ಹಣವಾಗಿ, ಆಭರಣಗಳಲ್ಲಿ ಮತ್ತು ಬಹುಮೂಲ್ಯ ವಸ್ತುವಾಗಿ ಮಾನವನು ಬಳಸುತ್ತಿರುವನು. ಚಿನ್ನವು ಭೂಮಿಯಲ್ಲಿ ತುಣುಕುಗಳಾಗಿ ಅಥವಾ ಕಾಳುಗಳಾಗಿ ಶಿಲೆಗಳಲ್ಲಿ ಹುದುಗಿರುತ್ತದೆ. ಚಿನ್ನವು ನಾಣ್ಯಗಳಲ್ಲಿ ಬಳಸಲ್ಪಡುವ ಒಂದು ಲೋಹ. ಚಿನ್ನವು ಮೃದು, ಸಾಂದ್ರ ಮತ್ತು ಹೊಳೆಯುವ ಲೋಹವಾಗಿದೆ. ಇದನ್ನು ತಗಡುಗಳನ್ನಾಗಿ ತಂತಿಯನ್ನಾಗಿ ರೂಪಿಸುವುದು ಬಲು ಸುಲಭ. ಎಲ್ಲಾ ಲೋಹಗಳ ಪೈಕಿ ಚಿನ್ನವು ಅತ್ಯಂತ ಮೃದು. ಶುದ್ಧ ಚಿನ್ನವು ಪ್ರಕಾಶಮಾನವಾದ ಹಳದಿ ಬಣ್ಣವನ್ನು ಹೊಂದಿರುತ್ತದೆ.
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಚಿನ್ನ, Au, ೭೯ | ||||||||||||||
ರಾಸಾಯನಿಕ ಸರಣಿ | Transition metal | ||||||||||||||
ಗುಂಪು, ಆವರ್ತ, ಖಂಡ | ೧೧, ೬, d | ||||||||||||||
ಸ್ವರೂಪ | |||||||||||||||
ಅಣುವಿನ ತೂಕ | 196.966569 g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | |||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು | ೨,೮,೧೮,೩೨,೧೮,೧ | ||||||||||||||
ಭೌತಿಕ ಗುಣಗಳು | |||||||||||||||
ಹಂತ | ಘನ | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | ೧೯.೩ g·cm−3 | ||||||||||||||
ದ್ರವದ ಸಾಂದ್ರತೆ at ಕ.ಬಿ. | ೧೭.೩೧ g·cm−3 | ||||||||||||||
ಕರಗುವ ತಾಪಮಾನ | ೧೩೩೩೭.೩೩ K (೧೦೬೪.೧೮ °C, ೧೯೪೭.೫೨ °ಎಫ್) | ||||||||||||||
ಕುದಿಯುವ ತಾಪಮಾನ | ೩೧೨೯ K (೨೮೫೬ °C, ೫೧೭೩ °F) | ||||||||||||||
ಸಮ್ಮಿಲನದ ಉಷ್ಣಾಂಶ | ೧೨.೫೫ kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | ೩೨೪ kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) ೨೫.೪೧೮ J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | ಘನಾಕೃತಿಯವು | ||||||||||||||
ವಿದ್ಯುದೃಣತ್ವ | ೨.೫೪ (Pauling scale) | ||||||||||||||
ಅಣುವಿನ ತ್ರಿಜ್ಯ | ೧೩೫ pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | ೧೭೪ pm | ||||||||||||||
ತ್ರಿಜ್ಯ ಸಹಾಂಕ | ೧೪೪ pm | ||||||||||||||
ವಾನ್ ಡೆರ್ ವಾಲ್ಸ್ ತ್ರಿಜ್ಯ | ೧೬೬ pm | ||||||||||||||
ಇತರೆ ಗುಣಗಳು | |||||||||||||||
ವಿದ್ಯುತ್ ರೋಧಶೀಲತೆ | (20 °C) ೨೨.೧೪Ω·m | ||||||||||||||
ಉಷ್ಣ ವಾಹಕತೆ | (300 K) ೩೧೮ W·m−1·K−1 | ||||||||||||||
ಉಷ್ಣ ವ್ಯಾಕೋಚನ | (25 °C) ೧೪.೨ µm·m−1·K−1 | ||||||||||||||
ಶಬ್ದದ ವೇಗ (ತೆಳು ಸರಳು) | (r.t.) ೨೦೩೦ m·s−1 | ||||||||||||||
ಯಂಗ್ ಮಾಪಾಂಕ | ೭೮ GPa | ||||||||||||||
ವಿರೋಧಬಲ ಮಾಪನಾಂಕ | ೨೭ GPa | ||||||||||||||
ಸಗಟು ಮಾಪನಾಂಕ | ೨೨೦ GPa | ||||||||||||||
ವಿಷ ನಿಷ್ಪತ್ತಿ | ೦.೪೪ | ||||||||||||||
ಮೋಸ್ ಗಡಸುತನ | ೨.೫ | ||||||||||||||
Vickers ಗಡಸುತನ | ೨೧೬ MPa | ||||||||||||||
ಬ್ರಿನೆಲ್ ಗಡಸುತನ | ೨೪೫೦ MPa | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | ೭೪೪೦-೫೭-೫ | ||||||||||||||
ಉಲ್ಲೇಖನೆಗಳು | |||||||||||||||
ಅಂತಾರಾಷ್ಟ್ರೀಯ ಹಣಹಾಸು ನಿಧಿಯು ಚಿನ್ನವನ್ನು ಆರ್ಥಿಕ ಪ್ರಮಾಣವನ್ನಾಗಿ ಪರಿಗಣಿಸುತ್ತದೆ. ಚಿನ್ನವು ರಾಸಾಯನಿಕ ಕ್ರಿಯೆಗಳಿಗೆ ತೀವ್ರ ಪ್ರತಿರೋಧ ಒಡ್ಡುವುದರಿಂದಾಗಿ ಆಧುನಿಕ ಕೈಗಾರಿಕೆಗಳಲ್ಲಿ ದಂತಶಾಸ್ತ್ರದಲ್ಲಿ ಮತ್ತು ವಿದ್ಯುನ್ಮಾನ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿದೆ.
ಚಿನ್ನವು ಹೆಚ್ಚಿನ ರಾಸಾಯನಿಕಗಳೊಂದಿಗೆ ಪ್ರತಿಕ್ರಿಯೆ ನಡೆಸುವುದಿಲ್ಲ. ಆದರೆ ಕ್ಲೋರಿನ್, ಫ್ಲೂರೀನ್, ರಾಜೊಧಕ(ಅಕ್ವಾ ರೀಜಿಯ) ಮತ್ತು ಸಯನೈಡ್ ಗಳು ಚಿನ್ನದ ಮೇಲೆ ರಾಸಾಯನಿಕ ಪರಿಣಾಮವುಂಟುಮಾಡುತ್ತವೆ. ಚಿನ್ನವು ಪಾದರಸದಲ್ಲಿ ಕರಗಿ ಕೆಲ ಮಿಶ್ರಧಾತುಗಳನ್ನು ಸೃಷ್ಟಿಸುವುದಾದರೂ ಪಾದರಸದೊಂದಿಗೆ ರಾಸಾಯನಿಕ ಕ್ರಿಯೆ ಉಂಟಾಗುವುದಿಲ್ಲ. ಒಂದಕ್ಕೆ ಮೂರರ ಪ್ರಮಾಣದಲ್ಲಿರುವ ಸಾಂದ್ರ ನೈಟ್ರಿಕ್ ಆಮ್ಲ ಮತ್ತು ಹೈಡ್ರೋಕ್ಲೋರಿಕ್ ಆಮ್ಲಗಳ ಮಿಶ್ರಣದಲ್ಲಿ ಮಾತ್ರ ಚಿನ್ನವು ಕರಗುವುದು. ಈ ದ್ರಾವಣವನ್ನು ಅಕ್ವಾ ರೀಜಿಯ ಎಂದು ಕರೆಯುವರು. ನೈಟ್ರಿಕ್ ಆಮ್ಲದಲ್ಲಿ ಚಿನ್ನವು ಕರಗಲಾರದು. ಈ ಗುಣವನ್ನು ವಸ್ತುಗಳಲ್ಲಿ ಚಿನ್ನದ ಇರುವಿಕೆಯನ್ನು ಕಂಡುಕೊಳ್ಳುವಲ್ಲಿ ಬಳಸಲಾಗುತ್ತದೆ. ಅಲ್ಲದೆ ಸಾಮಾನ್ಯವಾಗಿ ಚಿನ್ನವು ಪ್ರಕೃತಿಯಲ್ಲಿ ಬೆಳ್ಳಿಯೊಡನೆ ಬೆರೆತಿರುವುದರಿಂದಾಗಿ ಚಿನ್ನವನ್ನು ಶುದ್ಧೀಕರಿಸಿ ತೆಗೆಯುವಾಗ ನೈಟ್ರಿಕ್ ಆಮ್ಲದ ದ್ರಾವಣದ ಬಳಕೆಯಾಗುವುದು. ಬೆಳ್ಳಿಯು ನೈಟ್ರಿಕ್ ಆಮ್ಲದಲ್ಲಿ ಕರಗುತ್ತದೆ.
ಚಿನ್ನವು ಅತಿ ಮೃದುಲೋಹ. ಕೇವಲ ಒಂದು ಗ್ರಾಮಿನಷ್ಟು ಚಿನ್ನವನ್ನು ಒಂದು ಚದರ ಮೀಟರ್ ಅಗಲ ಹಾಳೆಯಾಗಿ ಬಡಿಯಬಹುದು. ಅರೆಪಾರದರ್ಶಕವಾಗುವಷ್ಟು ತೆಳು ಹಾಳೆಯಾಗಿ ಚಿನ್ನವನ್ನು ರೂಪಿಸಬಹುದಾಗಿದೆ. ಚಿನ್ನವು ಹಲವು ಲೋಹಗಳೊಂದಿಗೆ ಸುಲಭವಾಗಿ ಬೆರೆತು ಮಿಶ್ರಲೋಹಗಳನ್ನು ಸೃಷ್ಟಿಸುವುದು. ವಿಶಿಷ್ಟ ವರ್ಣದ ವಸ್ತುಗಳನ್ನು ತಯಾರಿಸುವಲ್ಲಿ ಇಂತಹ ಮಿಶ್ರಲೋಹಗಳ ಬಳಕೆಯಾಗುತ್ತದೆ. ಭೂಮಿಯಲ್ಲಿರುವ ಚಿನ್ನವು ಸಾಮಾನ್ಯವಾಗಿ ೮ ರಿಂದ ೧೦% ಬೆಳ್ಳಿಯೊಂದಿಗೆ ಮಿಶ್ರವಾಗಿರುತ್ತದೆ.
ಚಿನ್ನವು ವಿದ್ಯುತ್ ಮತ್ತು ಉಷ್ಣದ ಉತ್ತಮ ವಾಹಕವಾಗಿದೆ. ವಾತಾವರಣದ ಉಷ್ಣತೆ, ತೇವ, ಆಮ್ಲಜನಕ ಮತ್ತು ಇತರ ರಾಸಾಯನಿಕ ಅಂಶಗಳು ಚಿನ್ನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಗುಣಗಳು ಚಿನ್ನವನ್ನು ಆಭರಣ ಮತ್ತು ನಾಣ್ಯಗಳ ತಯಾರಿಕೆಯಲ್ಲಿ ಬಳಸಲು ಅತಿ ಸೂಕ್ತವಾಗಿಸಿವೆ. ಶುದ್ಧ ಚಿನ್ನವು ಯವುದೇ ರುಚಿಯನ್ನು ಹೊಂದಿರುವುದಿಲ್ಲ. ಚಿನ್ನವು ಅತಿ ಸಾಂದ್ರ ಲೋಹವಾಗಿದ್ದು ಒಂದು ಘನ ಮೀಟರ್ ಚಿನ್ನವು ೧೯೩೦೦ ಕಿ.ಗ್ರಾ. ಗಳಷ್ಟು ತೂಗುವುದು. ಇದು ಸೀಸಕ್ಕಿಂತ ಹೆಚ್ಚು ಸಾಂದ್ರತೆಯನ್ನು ಹೊಂದಿದೆ.
ಸಾಮಾನ್ಯವಾಗಿ ಅಲ್ಪಪ್ರಮಾಣದ ಚಿನ್ನದ ಸೇವನೆಯು ಶರೀರಕ್ಕೆ ಯಾವುದೇ ಹಾನಿಯುಂಟುಮಾಡುವುದಿಲ್ಲ. ಕೆಲವೊಮ್ಮೆ ಆಹಾರದಲ್ಲಿ ಮತ್ತು ಔಷಧಿಗಳಲ್ಲಿ ಅಲ್ಪಪ್ರಮಾಣದ ಚಿನ್ನವನ್ನು ಬಳಸಲಾಗುತ್ತದೆ. ಆದರೆ ಹೆಚ್ಚಿನ ಪ್ರಮಾಣದ ಚಿನ್ನದ ಸೇವನೆಯು ಇತರ ಭಾರಲೋಹಗಳಂತೆ ಶರೀರಕ್ಕೆ ವಿಷಕಾರಿಯಾಗುವುದೆಂದು ಹೇಳಲಾಗುತ್ತದೆ.
ಹಣಕಾಸಿನ ವಿನಿಮಯದ ಮಾಧ್ಯಮವಾಗಿ ಚಿನ್ನವು ಬಳಸಲ್ಪಡುತ್ತಿದೆ. ವಿಶ್ವದ ಹೆಚ್ಚಿನ ರಾಷ್ಟ್ರಗಳು ಚಿನ್ನವನ್ನೇ ಆರ್ಥಿಕ ಪ್ರಮಾಣವನ್ನಾಗಿ ಮಾನ್ಯ ಮಾಡಿವೆ. ಚಿನ್ನವು ಆಭರಣಗಳಲ್ಲಿ ಮತ್ತು ನಾಣ್ಯಗಳಲ್ಲಿ ಬಳಕೆಯಾಗುತ್ತಿದೆ. ಶುದ್ಧ ಚಿನ್ನವು ಅತಿ ಮೃದುವಾದುದರಿಂದ ಸಾಮಾನ್ಯವಾಗಿ ತಾಮ್ರ, ಬೆಳ್ಳಿ ಅಥವಾ ಇತರ ಮೂಲಲೋಹಗಳ ಮಿಶ್ರಣವಾಗಿ ಬಳಸಲ್ಪಡುವುದು. ಮಿಶ್ರಲೋಹಗಳಲ್ಲಿರುವ ಚಿನ್ನದ ಪ್ರಮಾಣವನ್ನು ಕ್ಯಾರಟ್ ಗಳಲ್ಲಿ ಅಳೆಯಲಾಗುತ್ತದೆ. ಅತ್ಯಂತ ಶುದ್ಧ ಚಿನ್ನವು ೨೪ ಕ್ಯಾರಟ್ ಎಂದು ಪರಿಗಣಿಸಲ್ಪಡುತ್ತದೆ.
ಚಿನ್ನವು ಬಲು ಮೃದುವಾಗಿರುವುದರಿಂದ ಆಭರಣಗಳ ತಯಾರಿಕೆಯಲ್ಲಿ ಅದನ್ನು ತಾಮ್ರ ಅಥವಾ ಬೆಳ್ಳಿಯೊಂದಿಗೆ ಮಿಶ್ರವಾಗಿ ಬಳಸುವರು. ಹೀಗೆ ಮಿಶ್ರಣ ಮಾಡುವುದರಿಂದ ಚಿನ್ನದ ಗಡಸುತನ, ಕರಗುವ ಉಷ್ಣತೆ, ಬಣ್ಣ ಮಾರ್ಪಡುತ್ತದೆ. ಆಭರಣಗಳಲ್ಲಿ ಅತಿ ಹೆಚ್ಚಾಗಿ ಬಳಸುವ ಚಿನ್ನದ ಮಿಶ್ರಧಾತು ೨೨ ಕ್ಯಾರಟ್ ನದು. ಇದರಲ್ಲಿ ೨೨ ಭಾಗ ಚಿನ್ನ ಮತ್ತು ೨ ಭಾಗ ತಾಮ್ರಗಳು ಇರುವುವು. ತಾಮ್ರದ ಮಿಶ್ರಣದಿಂದ ಚಿನ್ನದ ಬಣ್ಣವು ಕೊಂಚ ಕೆಂಪಾಗುತ್ತದೆ. ಬಿಳಿಯತ್ತ ತಿರುಗಿರುವ ಚಿನ್ನದ ಮಿಶ್ರಲೋಹಗಳಲ್ಲಿ ಬೆಳ್ಳಿ, ಪಲಾಡಿಯಮ್ ಅಥವಾ ನಿಕ್ಕೆಲ್ ಗಳನ್ನು ಬಳಸುವರು.
ಪೊಟ್ಯಾಸಿಯಮ್ ಸಯನೈಡ್ ಮತ್ತು ಸೋಡಿಯಮ್ ಸಯನೈಡ್ ಗಳ ಕ್ಷಾರ ದ್ರಾವಣಗಳು ಚಿನ್ನದ ಮೇಲೆ ಪ್ರತಿಕ್ರಿಯಿಸಿ ಕರಗಿಸಿಕೊಳ್ಳುತ್ತವೆ. ಹೀಗೆ ಉತ್ಪತ್ತಿಯಾಗುವ ಚಿನ್ನದ ಸಯನೈಡ್ ಚಿನ್ನದ ಎಲೆಕ್ಟ್ರೋಪ್ಲೇಟಿಂಗ್ ಉದ್ಯಮದಲ್ಲಿ ಬಳಕೆಯಾಗುತ್ತದೆ. ಅತಿ ದುಬಾರಿ ಕೆಂಪು ಬಣ್ಣದ ಗಾಜುಗಳಲ್ಲಿ ಚಿನ್ನದ ಕ್ಲೋರೈಡ್ ನ ಬಳಕೆಯಿದೆ.
ಇತಿಹಾಸಪೂರ್ವಕಾಲದಿಂದಲೂ ಮಾನವನಿಗೆ ಚಿನ್ನವು ಬಹುಮೂಲ್ಯ ವಸ್ತುವೆಂದು ತಿಳಿದಿತ್ತು. ಪ್ರಾಚೀನ ಈಜಿಪ್ಟ್ ಮತ್ತು ನುಬಿಯಾಗಳು ಭಾರೀ ಪ್ರಮಾಣದಲ್ಲಿ ಚಿನ್ನದ ನಿಕ್ಷೇಪವನ್ನು ಹೊಂದಿದ್ದುವು. ಪ್ರಾಚೀನ ಈಜಿಪ್ಟಿನಲ್ಲಿ ಧಾರ್ಮಿಕ ಕ್ರಿಯೆಗಳಲ್ಲಿ ಮತ್ತು ಅಂತ್ಯಸಂಸ್ಕಾರಗಳಲ್ಲಿ ಚಿನ್ನದ ವಿಪುಲ ಬಳಕೆಯಾಗುತ್ತಿತ್ತು. ಅಲ್ಲದೆ ಕಪ್ಪು ಸಮುದ್ರದ ಆಗ್ನೇಯ ಭಾಗವು ತನ್ನ ಚಿನ್ನಕ್ಕಾಗಿ ಹೆಸರಾಗಿತ್ತು. ಲಿಡಿಯಾದಲ್ಲಿ ಕ್ರಿ. ಪೂ. ೬೪೩ ರಿಂದ ೬೩೦ ರ ಮಧ್ಯೆ ಜಗತ್ತಿನಲ್ಲಿ ಪ್ರಪ್ರಥಮ ಬಾರಿಗೆ ಸುವರ್ಣ ನಾಣ್ಯಗಳನ್ನು ಟಂಕಿಸಲಾಯಿತೆಂದು ಊಹಿಸಲಾಗಿದೆ.
ಆಫ್ರಿಕಾದ ಮಾಲಿ ಸಾಮ್ರಾಜ್ಯವು ತನ್ನ ಅಪಾರ ಪ್ರಮಾಣದ ಚಿನ್ನಕ್ಕೆ ಹೆಸರಾಗಿತ್ತು. ಮಾಲಿಯ ಸಮ್ರಾಟ ಮನ್ಸ ಮೂಸಾ ಒಮ್ಮೆ ಹಜ್ ಯಾತ್ರೆ ಕೈಗೊಂಡಾಗ ದಾರಿಯಲ್ಲಿ ಅಗಾಧ ಪ್ರಮಾಣದ ಚಿನ್ನವನ್ನು ಬಡಬಗ್ಗರಿಗೆ ಹಂಚಿದನು. ಇದರಿಂದಾಗಿ ಉತ್ತರ ಆಫ್ರಿಕಾದಲ್ಲಿ ಹಠಾತ್ ಹಣದುಬ್ಬರ ಕಾಣಿಸಿಕೊಂಡಿತ್ತು.
ಅಮೆರಿಕಾದ ಮೂಲನಿವಾಸಿಗಳು ತಮ್ಮಲ್ಲಿಗೆ ಆಗಮಿಸಿದ ಯುರೋಪಿನ ಸಂಶೋಧಕರಿಗೆ ತಮ್ಮಲ್ಲಿ ಸಮೃದ್ಧಿಯಾಗಿದ್ದ ಚಿನ್ನಾಭರಣಗಳನ್ನು ತೋರಿಸಿದುದು ಯುರೋಪಿಯನ್ನರನ್ನು ಅಮೇರಿಕಾದತ್ತ ಸೆಳೆಯಿತೆಂದು ಇತಿಹಾಸ ಹೇಳುತ್ತದೆ. ಮುಖ್ಯವಾಗಿ ಅಂದು ಪೆರು , ಮಧ್ಯ ಅಮೆರಿಕಾ ಮತ್ತು ಕೊಲೊಂಬಿಯಾ ಪ್ರದೇಶಗಳಲ್ಲಿ ಚಿನ್ನದ ಅಪಾರ ರಾಶಿಯಿದ್ದಿತ್ತು.
ಅಂದಿನ ದಿನಗಳಲ್ಲಿ ಚಿನ್ನವನ್ನು ಭೂಮಿಯಿಂದ ಪಡೆಯುವುದು ಸುಲಭವಾಗಿತ್ತು. ಆದರೆ ಇದುವರೆಗೆ ವಿಶ್ವದಲ್ಲಿ ಉತ್ಪಾದನೆಯಾದ ಒಟ್ಟೂ ಚಿನ್ನದ ೭೫% ಭಾಗ ೧೯೧೦ರ ನಂತರವೇ ಆಗಿದೆ. ಒಂದು ಅಂದಾಜಿನ ಪ್ರಕಾರ ಇದುವರೆಗೆ ಶುದ್ಧೀಕರಿಸಿ ತೆಗೆಯಲಾದ ಎಲ್ಲಾ ಚಿನ್ನವನ್ನು ಒಟ್ಟುಗೂಡಿಸಿದರೆ ಅದು ೨೦ ಮೀಟರ್ ಅಳತೆಯ ಘನಾಕೃತಿಯಾಗುವುದು.
ಚಿನ್ನದ ಮೌಲ್ಯ ಮತ್ತು ಅದರ ಮೇಲಿನ ಮಾನವನ ವ್ಯಾಮೋಹವು ರಸವಿದ್ಯೆಯೆಂಬ ಶಾಸ್ತ್ರವನ್ನು ಹುಟ್ಟುಹಾಕಿದವು. ರಸವಿದ್ಯೆಯ ಮೂಲ ಗುರಿ ಸೀಸದಂತಹ ಅಗ್ಗದ ಲೋಹಗಳನ್ನು ಚಿನ್ನವನ್ನಾಗಿ ಪರಿವರ್ತಿಸುವುದು. ಆದರೆ ಯಾರೂ ಇದರಲ್ಲಿ ಯಶ ಸಾಧಿಸಲಿಲ್ಲ. ಆದರೆ ಇದಕ್ಕಾಗಿ ನಡೆಸಲಾದ ನಾನಾ ರಾಸಾಯನಿಕ ಪ್ರಯೋಗಗಳು ಆಧುನಿಕ ರಸಾಯನ ಶಾಸ್ತ್ರಕ್ಕೆ ಉತ್ತಮ ತಳಹದಿ ಹಾಕಿಕೊಟ್ಟುವು. ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಉತ್ಪಾದಿಸಲಾದ ಚಿನ್ನವೆಲ್ಲಾ ಹೆಚ್ಚೂಕಡಿಮೆ ಇಂದು ಸಹ ಒಂದಲ್ಲ ಒಂದು ರೂಪದಲ್ಲಿ ಚಲಾವಣೆಯಲ್ಲಿದೆ.
ದೊಡ್ಡ ನಿಕ್ಷೇಪಗಳಲ್ಲಿ ಪ್ರತಿ ಟನ್ ಅದಿರಿನಲ್ಲಿ ಅರ್ಧ ಗ್ರಾಮ್ ನಷ್ಟು ಚಿನ್ನ ಇದ್ದರೂ ಸಹ ಅದನ್ನು ಲಾಭದಾಯಕವಾಗಿ ಹೊರತೆಗೆಯಬಹುದು. ಸಾಮಾನ್ಯವಾಗಿ ತೆರೆದ ಗಣಿಗಳಲ್ಲಿ ಪ್ರತಿ ಟನ್ ಅದಿರಿನಲ್ಲಿ ೧ ರಿಂದ ೫ ಗ್ರಾಮ್ ನಷ್ಟು ಚಿನ್ನವಿರುತ್ತದೆ. ನೆಲದಾಳದ ಗಣಿಗಳಲ್ಲಿ ಈ ಪ್ರಮಾಣ ೩ ಗ್ರಾಂ ನಷ್ಟು. ಅದಿರಿನಲ್ಲಿರುವ ಚಿನ್ನ ಬರಿಗಣ್ಣಿಗೆ ಕಾಣಬೇಕಾದರೆ ಅದರ ಪ್ರಮಾಣ ಪ್ರತಿ ಟನ್ ಗೆ ೩೦ ಗ್ರಾಂ ನಷ್ಟಾದರೂ ಇರಬೇಕು. ಹಾಗಾಗಿ ಇಂದು ಹೆಚ್ಚಿನ ಎಲ್ಲಾ ಗಣಿಗಳಲ್ಲಿ ಚಿನ್ನವು ಬರಿಗಣ್ಣಿಗೆ ಕಾಣಿಸದು.
೧೮೮೦ರಿಂದ ಈಚೆಗೆ ದಕ್ಷಿಣ ಆಫ್ರಿಕಾ ವಿಶ್ವದ ಅತಿ ದೊಡ್ಡ ಚಿನ್ನದ ಉತ್ಪಾದಕ ದೇಶವಾಗಿದೆ. ಇಲ್ಲಿಯವರೆಗಿನ ಎಲ್ಲ ಚಿನ್ನದ ೫೦% ಭಾಗವು ದಕ್ಷಿಣ ಆಫ್ರಿಕಾದಿಂದಲೇ ಬಂದಿದೆ. ಇಂದು ಅಲ್ಲಿಯ ಚಿನ್ನದ ಸರಾಸರಿ ವಾರ್ಷಿಕ ಉತ್ಪಾದನೆ ೨೯೪ ಟನ್ ಗಳಷ್ಟು. ದಕ್ಷಿಣ ಆಫ್ರಿಕಾ ಶವುಕ ಮತ್ತು ಟೌಟೋನಾ ಗಣಿಗಳು ಪ್ರಪಂಚದ ಅತ್ಯಂತ ಆಳದ ಚಿನ್ನದ ಗಣಿಗಳು. ( ಆಳ ೩,೭೭೭ ಮೀ.)
ಯು.ಎಸ್.ಎ., ರಷ್ಯಾ, ಚೀನಾ, ಪೆರು ಮತ್ತು ಆಸ್ಟ್ರೇಲಿಯ ವಿಶ್ವದ ಇತರ ಪ್ರಮುಖ ಚಿನ್ನದ ಉತ್ಪಾದಕ ರಾಷ್ಟ್ರಗಳು. ಸಾಗರದ ನೀರು ಅಪಾರ ಪ್ರಮಾಣದಲ್ಲಿ ಚಿನ್ನವನ್ನು ಹೊಂದಿದೆ. ಆದರೆ ಇದು ಬಲು ವಿರಳವಾಗಿ ಹರಡಿಹೋಗಿರುವುದರಿಂದ (೧೦ ಬಿಲಿಯನ್ ಅಂಶಗಳಲ್ಲಿ ೧ ರಿಂದ ೨ ಅಂಶ ಚಿನ್ನ) ಸಾಗರದ ನೀರಿನಿಂದ ಚಿನ್ನದ ಉತ್ಪಾದನೆ ವ್ಯಾವಹಾರಿಕವಾಗಿ ಅಸಾಧು. ೨೦೦೧ರ ವರೆಗೆ ಒಟ್ಟು ೧೪೫೦೦೦ ಟನ್ ಗಳಷ್ಟು ಚಿನ್ನವನ್ನು ಉತ್ಪಾದಿಸಲಾಯಿತೆಂದು ಅಂದಾಜು ಮಾಡಲಾಗಿದೆ.
???
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.