From Wikipedia, the free encyclopedia
ಬಿಳಿ ಗರುಡವು (ವೈಜ್ಞಾನಿಕನಾಮ - ಹ್ಯಾಲಿಯಾಸ್ಟರ್ ಇಂಡಸ್ ) (ಕೆಂಪು ಬೆನ್ನಿನ ಸಮುದ್ರ ಹದ್ದು ಎಂದೂ ಕರೆಯಲ್ಪಡುತ್ತದೆ) ಒಂದು ಮಧ್ಯಮ ಗಾತ್ರದ ಅಳಿವಿನಂಚಿನಲ್ಲಿರುವ ಪಕ್ಷಿಯಾಗಿದ್ದು ಫಾಲ್ಕನಿಫಾರ್ಮೀಸ್ ಗಣದ ಆಕ್ಸಿಪಿಟ್ರಿಡೀ ಕುಟುಂಬದ ಬ್ಯೂಟಿಯಾನಿನೀ ಉಪಕುಟುಂಬಕ್ಕೆ ಸೇರಿದೆ. ಬ್ರಾಹ್ಮಣಿ ಕೈಟ್ ಎಂಬುದು ಇಂಗ್ಲಿಷಿನಲ್ಲಿ ಸಾಮಾನ್ಯ ಬಳಕೆಯಲ್ಲಿರುವ ಹೆಸರು. ಇತರ ಪಕ್ಷಿಗಳಾದ ಕಡಲ ಡೇಗೆ, ಹ್ಯಾರಿಸ್ ಡೇಗೆ, ಹದ್ದು, ಗಿಡುಗ, ಡೇಗೆ, ರಣಹದ್ದು, ಗೂಬೆ ಮುಂತಾದ ಪಕ್ಷಿಗಳ ಸಾಲಿನಲ್ಲಿ ಸೇರುತ್ತದೆ. ಅವುಗಳ ಹತ್ತಿರ ಸಂಬಂಧಿ. ಇವು ಪ್ರಮುಖವಾಗಿ ಭಾರತೀಯ ಉಪಖಂಡದಲ್ಲಿ,ಆಗ್ನೇಯ ಏಷ್ಯಾದಲ್ಲಿ ಮತ್ತು ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತವೆ. ಇವು ಹೆಚ್ಚಾಗಿ ಸತ್ತ ಮೀನುಗಳು ಮತ್ತು ಸುಲಭವಾಗಿ ಬೇಟೆ ಸಿಗುವ ಕರಾವಳಿ ಪ್ರದೇಶಗಳು ಮತ್ತು ಆರ್ದ್ರತೆ ಇರುವ ಒಳನಾಡುಗಳಲ್ಲಿ ಕಂಡುಬರುತ್ತವೆ. ಬೆಳೆದ ಹಕ್ಕಿಗಳು ಕೆಂಪು ಮಿಶ್ರಿತ ಕಂದುಬಣ್ಣದ ಗರಿಗಳನ್ನು ಹೊಂದಿರುತ್ತವೆ ಮತ್ತು ಅದಕ್ಕೆ ತದ್ವಿರುದ್ಧವಾದ ಬಿಳಿಯ ತಲೆ ಮತ್ತು ಎದೆಯನ್ನು ಹೊಂದಿ ಇತರ ಬೇಟೆಯಾಡುವ ಪಕ್ಷಿಗಳಿಗಿಂತ ಬಿನ್ನವಾಗಿದೆ.
ಸುಮಾರು 48 ಸೆಂಮೀ. ಉದ್ದದ ಸುಂದರವಾದ ಹಕ್ಕಿಯಿದು. ಬಿಳಿ ಗರುಡ ಒಂದು ವಿಶಿಷ್ಟವಾದ ಮತ್ತು ತದ್ವಿರುದ್ಧವಾದ ಬಣ್ಣಗಳನ್ನು ಹೊಂದಿದ, ಬಿಳಿಯಾದ ತಲೆ, ಕುತ್ತಿಗೆ, ಎದೆ, ಹಾಗೂ ಬೆನ್ನಿನ ಮುಂಭಾಗಗಳು ಮತ್ತು ರೆಕ್ಕೆಯ ಮೊನೆಯಲ್ಲಿನ ಕಪ್ಪು ಬಣ್ಣವನ್ನು ಹೊರತುಪಡಿಸಿ ಕಡುಕೆಂಪು ಬಣ್ಣದ ಗರಿಗಳನ್ನು ಹೊಂದಿರುವ ಪಕ್ಷಿಯಾಗಿದೆ. ದೇಹದ ಉಳಿದ ಭಾಗ ಕೆಂಪು ಮಿಶ್ರಿತವಾದ ಕಂದು. ಈ ಕೆಂಪು ಮಿಶ್ರಿತ ಕಂದು ಬಣ್ಣವೇ ಇದಕ್ಕೆ ಇಂಗ್ಲಿಷ್ ಹೆಸರಿನ ಪೂರ್ವಪದ ‘ಬ್ರಾಹ್ಮಿನಿ’ಯನ್ನು ತಂದುಕೊಟ್ಟಿದೆ. ಭಾರತದಲ್ಲಿ ಬ್ರಾಹ್ಮಣಿ ಮೈನಾ, ಬ್ರಾಹ್ಮಿಣಿ ಬಾತುವೂ ಇವೆ. ಹೊರನೋಟಕ್ಕೆ ಗಂಡು ಹೆಣ್ಣುಗಳು ಒಂದೇ ಬಗೆ. ಎಳೆಯ ಮರಿಗಳು ಕಂದುಬಣ್ಣದಲ್ಲಿರುತ್ತವೆ. ಆದರೆ ಏಷ್ಯಾದಿಂದ ವಲಸೆ ಬರುವ ಕಪ್ಪು ಹದ್ದುಗಳ ನಿಸ್ತೇಜ ವರ್ಣಕ್ಕಿಂತ ಇವು ಬೇರೆಯಾಗಿದ್ದು ಸರಳವಾಗಿ ಗುರುತಿಸಬಹುದಾಗಿದೆ ಮತ್ತು ಇವುಗಳು ಗಿಡ್ಡನೆಯ ರೆಕ್ಕೆಗಳು ಮತ್ತು ವರ್ತುಲಾಕಾರದ ಬಾಲವನ್ನು ಹೊಂದಿರುತ್ತವೆ. ಇವುಗಳ ಮಣಿಕಟ್ಟು ಮತ್ತು ರೆಕ್ಕೆಯ ಕೆಳಪದರದಲ್ಲಿ ಚೌಕಾಕಾರದ ಆಕಾರವಿದ್ದು ಬ್ಯುಟಿಯೋ ಡೇಗೆಗಳಿಗಿಂತ ಭಿನ್ನವಾಗಿವೆ.
ಬಿಳಿ ಗರುಡ ಸಾಮಾನ್ಯವಾಗಿ ಬ್ಲ್ಯಾಕ್ ಕೈಟ್ನಷ್ಟೇ ಆಕಾರವನ್ನು ಹೊಂದಿದ್ದು ಅಷ್ಟೇ ಒಂದು ಕೋನದಲ್ಲಿ ರೆಕ್ಕೆಗಳನ್ನು ಹೊಂದಿ ಹಾರಾಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಇವುಗಳ ಬಾಲವು ವೃತ್ತಾಕಾರದಲ್ಲಿದ್ದು ಮಿಲ್ವಸ್ ವರ್ಗಗಳಿಗಿಂತ ಭಿನ್ನವಾಗಿದೆ.ಹೋಲಿಕೆಯಲ್ಲಿ ಅತ್ಯಂತ ಸಾಮೀಪ್ಯವಿರುವ ರೆಡ್ ಕೈಟ್ ಮತ್ತು ಬ್ಲ್ಯಾಕ್ಕೈಟ್ಗಳ ಬಾಲವು ಸೀಳಿರುತ್ತವೆ.[೨] ಈ ಎರಡೂ ಪಂಗಡಗಳು ಹೆಚ್ಚು ಕಡಿಮೆ ಸಮಾನವಾಗಿವೆ.[೩] ಇದು ಕಿಂಯಾಂವ್ ಎಂದು ಕೂಗುತ್ತದೆ.[೨]
ಬಿಳಿ ಗರುಡ ಮೊದಲ ಬಾರಿಗೆ ಡಚ್ ಪರಿಸರವಾದಿಯಾದ ಪಿಟರ್ ಬೊಡ್ಡಾಯೆರ್ಟ್ರಿಂದ ೧೭೮೩ರಲ್ಲಿ ವ್ಯಾಖ್ಯಾನಿಸಲ್ಪಟ್ಟಿತು. ಮತ್ತು ಇದರ ಇತರ ನಾಲ್ಕು ಉಪ ವರ್ಗಗಳನ್ನು ಹೆಸರಿಸಲಾಯಿತು:[೪]
ಇವುಗಳು ಸರ್ವೆಸಾಮಾನ್ಯವಾಗಿ ಶ್ರೀಲಂಕಾ, ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮತ್ತು ಉತ್ತರಪೂರ್ವ ಏಷ್ಯಾ ದೇಶಗಳ ಆಕಾಶದಲ್ಲಿ ಕಾಣಸಿಗುವ ಪಕ್ಷಿಯಾಗಿದೆ. ಇದರ ಹಲವು ಬಗೆಗಳು ಬರ್ಮ, ಇಂಡೋಚೀನ, ಮಲಯಗಳಿಂದ ಹಿಡಿದು ಸಾಲೊಮನ್ ದ್ವೀಪಗಳವರೆಗೂ ಹರಡಿವೆ. ನ್ಯೂ ಸೌತ್ ವೇಲ್ಸ್ನ ಉತ್ತರ ಭಾಗದಲ್ಲಿ, ಆಸ್ಟ್ರೇಲಿಯಾಗಳಲ್ಲಿ ಹರಡಿಕೊಂಡು ವಾಸಮಾಡುತ್ತವೆ. ಅವು ಮಳೆಗಾಲಕ್ಕೆ ಅನುಗುಣವಾಗಿ ಅವುಗಳ ಪ್ರಾಂತ್ಯದೊಳಗೆ ಸ್ಥಳ ಬದಲಾವಣೆ ಮಾಡುತ್ತಿರುತ್ತವೆ.[೫] ಇವು ಸಾಮಾನ್ಯವಾಗಿ ಬರಿದಾದ ಆಗಸದಲ್ಲಿ ಕಾಣಸಿಗುತ್ತವೆ ಆದರೆ ಕೆಲವು ಬಾರಿ ಹಿಮಾಲಯದ ೫೦೦೦ ಅಡಿ ಎತ್ತರದ ಪ್ರದೇಶಗಳಲ್ಲಿ ಕೂಡ ಕಾಣಸಿಗುತ್ತವೆ.[೬]
IUCN ಪಟ್ಟಿಮಾಡಿದ ವಿನಾಶದಂಚಿನಲ್ಲಿರುವ ಪಕ್ಷಿಗಳಲ್ಲಿ ಸೇರಿದ್ದು ಜಾವಾದಂತಹ ಪ್ರದೇಶಗಳಲ್ಲಿ ಸಂಪೂರ್ಣ ಅಳಿವಿನಂಚಿಗೆ ತಲುಪಿದೆ. ಅದೇನೆ ಇದ್ದರೂ ಕೂಡ ಕೆಲವು ಪ್ರದೇಶಗಳಲ್ಲಿ ಉದಾಹರಣೆಗೆ ಜಾವಾದಂತಹ ಪ್ರದೇಶಗಳಲ್ಲಿ ಈ ವಂಶವು ವಿನಾಶದ ಅಂಚಿನಲ್ಲಿದೆ.[೭]
ಉತ್ತರ ಏಷ್ಯಾಗಳಲ್ಲಿ ಸಂತಾನೋತ್ಪತ್ತಿಯ ಕಾಲವು ಡಿಸೆಂಬರ್ನಿಂದ ಏಪ್ರಿಲ್ನವರೆಗೆ ಆಗಿರುತ್ತದೆ.[೮] ಉತ್ತರ ಮತ್ತು ಪಶ್ಚಿಮ ಆಸ್ಟ್ರೇಲಿಯಾಗಳಲ್ಲಿ ಈ ಕಾಲವು ಆಗಸ್ಟ್ನಿಂದ ಅಕ್ಟೋಬರ್ ಆಗಿರುತ್ತದೆ, ಮತ್ತು ದಕ್ಷಿಣ ಮತ್ತು ಪೂರ್ವ ಆಸ್ಟ್ರೇಲಿಯಾದಲ್ಲಿ ಎಪ್ರಿಲ್ನಿಂದ ಜೂನ್ ಆಗಿರುತ್ತದೆ.[೯] ಇವುಗಳು ಗೂಡನ್ನು ಮರದ ಸಣ್ಣ ರೆಂಬೆಗಳಲ್ಲಿ ಕಟ್ಟುತ್ತವೆ. ಗೂಡುಗಳನ್ನು ಚಿಕ್ಕ ಕೋಲುಗಳಿಂದ ಮಾಡಿದ್ದು ಎಲೆಗಳಿಂದ ಒಳಗಡೆ ವೃತ್ತಾಕಾರದಲ್ಲಿ ಹೆಣೆದಿರುತ್ತವೆ ಮತ್ತು ಇವುಗಳನ್ನು ಬೇರೆ ಬೇರೆ ಮರಗಳಲ್ಲಿ ಇಟ್ಟಿರುತ್ತವೆ ಆದರೆ ಕಂದಾಳ ಮರದಲ್ಲಿ ಹೆಚ್ಚಾಗಿ ಗೂಡು ಕಟ್ಟುವುದು ಕಂಡುಬರುತ್ತದೆ.[೯] ಹಳ್ಳಿಗಳ ಹೊರವಲಯದಲ್ಲಿ ನೀರಿನ ಆಸರೆಯಿರುವಂಥ ಪ್ರದೇಶಗಳಲ್ಲಿ, ಬೆಳೆಯುವ ಅರಳಿ, ಆಲ, ಹುಣಸೆ, ಗಾಳಿಮರ ಮತ್ತು ತೆಂಗಿನ ಗಿಡಗಳ ಮೇಲೆ ಇದು ಗೂಡು ಕಟ್ಟುತ್ತದೆ. ಗೂಡಿನ ರಚನೆಯಲ್ಲಿ ಮುಖ್ಯವಾಗಿ ಕಡ್ಡಿಪುಳ್ಳೆಗಳು ಮತ್ತು ಕೆಲವೊಮ್ಮೆ ಹತ್ತಿ, ಉಣ್ಣೆ, ಎಲೆಗಳು ಮೊದಲಾದವನ್ನು ಬಳಸುವುದುಂಟು. ಇವುಗಳು ಪ್ರತೀ ವರ್ಷವೂ ನಿಷ್ಠೆಯಿಂದ ಒಂದೇ ಪ್ರದೇಶದಲ್ಲಿ ಗೂಡನ್ನು ಕಟ್ಟುವುದು ಕಂಡುಬರುತ್ತದೆ. ಕೆಲವು ಅಪರೂಪದ ಸಂದರ್ಭದಲ್ಲಿ ಮರದ ಕೆಳಗಿನ ಮಣ್ಣಿನಲ್ಲಿಯೂ ಗೂಡು ಕಟ್ಟುವುದು ಕಂಡುಬರುತ್ತದೆ.[೧೦][೧೧] ಕಂದು ಬಿಳಿಯ ಅಥವಾ ಸ್ವಲ್ಪ ನೀಲಿ ಬಣ್ಣವನ್ನು ಹೋಲುವ ೫೨ x ೪೧ಮಿಮಿ ಗಾತ್ರದ ಗುಂಡನೆಯ ಎರಡು ಅಥವಾ ಮೂರು ಮೊಟ್ಟೆಗಳನ್ನು ಸಮನಾಗಿ ಜೋಡಿಸಿದಂತೆ ಗೂಡಿನಲ್ಲಿ ಇಡುತ್ತದೆ. ಮೇಲೆಲ್ಲ ಕಂದುಬಣ್ಣದ ಚುಕ್ಕೆಗಳಿವೆ. ಎರಡೂ ಪಾಲಕ ಪಕ್ಷಿಗಳು ಗೂಡು ಕಟ್ಟುವಲ್ಲಿ ಕೆಲಸ ಮಾಡುತ್ತವೆ ಮತ್ತು ಮರಿಯನ್ನು ಬೆಳೆಸುವಲ್ಲಿಯೂ ಕೂಡ ಸಮನಾಗಿ ಕೆಲಸ ಮಾಡುತ್ತವೆ ಆದರೆ ಮೊಟ್ಟೆಗೆ ಕಾವು ಕೊಡುವಲ್ಲಿ ಹೆಣ್ಣು ಪಕ್ಷಿಯ ಪಾತ್ರವು ಪ್ರಮುಖವಾಗಿರುತ್ತದೆ. ಮೊಟ್ಟೆಗೆ ಕಾವು ಕೊಡುವ ಅವಧಿಯು ೨೬ ರಿಂದ ೨೭ ದಿನಗಳಾಗಿರುತ್ತವೆ.[೧೨] ಕಾವು ಕೊಡುವ ಹೆಣ್ಣಿಗೆ ಆಹಾರವನ್ನು ತಂದು ಕೊಡುವ ಕೆಲಸ ಗಂಡಿನ ಪಾಲಿನದು.
26-27 ದಿನಗಳ ಕಾಲ ಕಾವು ಕೊಟ್ಟ ಮೇಲೆ ಮೊಟ್ಟೆಯಿಂದ ಮರಿಗಳು ಹೊರಗೆ ಬರುತ್ತವೆ. ಪ್ರಾಯಕ್ಕೆ ಬರುವ ಮುನ್ನ ಮರಿಗಳ ಬಣ್ಣ ಕಂದು. ವರ್ಷಂಪ್ರತಿ ಮರಿಗಳ ಗರಿ ಉದುರುತ್ತವೆ. ನಾಲ್ಕು ವರ್ಷಗಳಾದ ಮೇಲೆ ಮರಿಗಳು ಪ್ರೌಢಾವಸ್ಥೆಗೆ ಬರುತ್ತವೆ. ಮರಿಗಳ ಬಾಲ ಗುಂಡಾಗಿರುತ್ತದೆ ಮತ್ತು ವಯಸ್ಕ ಹಕ್ಕಿಗಳಿಗೆ ತಲೆ ಹಾಗೂ ಎದೆಯ ಮೇಲೆ ಬಿಳಿಯ ಬಣ್ಣ ಇರುವುದಿಲ್ಲ.
ಇದೊಂದು ಮೂಲತಃ ಕೊಳೆತ ಮಾಂಸವನ್ನು ತಿನ್ನುವ ಪಕ್ಷಿಯಾಗಿದ್ದು ಮರಿಗಳನ್ನು ಬೆಳೆಸಲು ಆರ್ದ್ರ ಪ್ರದೇಶ ಮತ್ತು ಜವುಗು ಪ್ರದೇಶಗಳನ್ನು ಆಯ್ದು ಕೊಳ್ಳುತ್ತದೆ.[೮] ಸತ್ತ ಮೀನುಗಳು ಮತ್ತು ಏಡಿಗಳನ್ನು ತಂದು ಮರಿಗಳಿಗೆ ತಿನ್ನಿಸುತ್ತವೆ.ಮತ್ತು ಅಪರೂಪಕ್ಕೆ ಮೊಲಗಳನ್ನು ಮತ್ತು ಬಾವಲಿಗಳಂತಹ ಪ್ರಾಣಿಗಳನ್ನು ಬೇಟೆಯಾಡಿ ತರುತ್ತವೆ,[೧೩] ಮತ್ತು ಬೇರೆ ಪಕ್ಷಿಗಳ ಬೇಟೆಗಳನ್ನು ಕದ್ದು ತರುವ ಮೂಲಕವೂ ತನ್ನ ಆಹಾರದ ದಾಹವನ್ನು ತೀರಿಸಿಕೊಳ್ಳುತ್ತವೆ.[೧೪] ಅಪರೂಪದ ಪ್ರಸಂಗದಲ್ಲಿ ಆಪಿಸ್ ಫ್ಲೋರಿಯಾ ದಲ್ಲಿ ಜೇನುಗೂಡಿನಿಂದ ಜೇನುತುಪ್ಪವನ್ನು ತಂದು ಮರಿಗಳನ್ನು ಬೆಳೆಸುವ ಉದಾಹರಣೆಗಳೂ ದೊರೆತಿವೆ.[೧೫]
ಮೀನು, ಕಪ್ಪೆ, ಸಣ್ಣ ಸಣ್ಣ ಹಾವುಗಳು, ಹಲ್ಲಿ, ಸಣ್ಣಗಾತ್ರದ ಸ್ತನಿಗಳು, ಕೋಳಿ, ಕೀಟ ಮತ್ತು ಅವುಗಳ ಡಿಂಬಗಳು ಮುಂತಾದವು ಗರುಡಪಕ್ಷಿಯ ಮುಖ್ಯ ಆಹಾರ. ಅಪರೂಪವಾಗಿ ಇದು ಹದ್ದು, ರಣಹದ್ದುಗಳಂತೆ ಸತ್ತ ಪ್ರಾಣಿಗಳನ್ನು ತಿನ್ನುವುದುಂಟು.
ಇವು ಪ್ರಾಯದ ಕಾಲದಲ್ಲಿ ಆಟವಾಡುವ ವರ್ತನೆಯನ್ನು ಹೊಂದಿದ್ದು ಮರದ ಎಲೆಗಳನ್ನು ಬೀಳಿಸಿ ಗಾಳಿಯಲ್ಲಿ ಹಿಡಿಯುವುದು ಮುಂತಾದವುಗಳನ್ನು ಮಾಡುತ್ತವೆ.[೧೬] ನೀರಿನಲ್ಲಿ ಮೀನಿನ ಬೇಟೆಯಾಡುವ ಸಂದರ್ಭಗಳಲ್ಲಿ ಅವು ಕೆಲವು ಕಾಲ ನೀರಿನ ಮೇಲೆ ಆರಾಮವಾಗಿ ಈಜುತ್ತಾ ನಿಲ್ಲಬಲ್ಲವುಗಳಾಗಿದ್ದು ಯಾವುದೇ ಪರಿಶ್ರಮವನ್ನು ಪಡುವುದಿಲ್ಲ.[೧೭]
ಬಹಳಷ್ಟು ಪಕ್ಷಿಗಳು ಒಂದೇ ಮರದ ಮೇಲೆ ಅಥವಾ ಅಕ್ಕಪಕ್ಕದಲ್ಲಿ ಕುಳಿತುಕೊಳ್ಳುವ ರೂಢಿಯನ್ನು ಹೊಂದಿದ್ದು ಒಂದೇ ಸ್ಥಳದಲ್ಲಿ ೬೦೦ರಷ್ಟು ಪಕ್ಷಿಗಳು ಕಂಡುಬಂದ ಉದಾಹರಣೆ ಇದೆ.[೧೮]
ಅಕ್ವಿಲಾ ಹದ್ದುಗಳಂತೆ ಇವು ಕೂಡ ಗುಂಪಾಗಿ ಬೇಟೆಯಾಡುವ ರೂಢಿಯನ್ನೂ ಹೊಂದಿವೆ. ಕೆಲವು ಸಂದರ್ಭಗಳಲ್ಲಿ ಬಿಳಿ ಗರುಡಗಳು ಗುಂಪುಗೂಡಿ ಏಷ್ಯಾದ ಹುಲ್ಲುಗಾವಲಿನ ಹದ್ದುಗಳ (ಅಕ್ವಿಲಾ ರೆಪೆಕ್ಸ್) ಮೇಲೆ ದಾಳಿಮಾಡಿ ಅವುಗಳನ್ನು ಗಾಯಗೊಳಿಸುತ್ತವೆ ಅಥವಾ ಕೊಲ್ಲುವ ಸಂದರ್ಭಗಳೂ ಇವೆ.[೧೯]
ಬಹಳಷ್ಟು ಈ ಪಕ್ಷಿಗಳು ಕುರೋಡಿಯಾ ಪರಾವಲಂಬಿ ಪ್ರಧಾನ ಜಾತಿಯ ಉಪಜಾತಿಗೆ ಸೇರಿವೆ. ಕೊಲ್ಪೊಸೆಫಾಲಮ್ ಮತ್ತು ಡಿಗಿರಿಯೆಲ್ಲಾ ಇವುಗಳನ್ನು ಸಹ ಈ ಗುಂಪಿನಲ್ಲಿ ಗುರುತಿಸಲಾಗಿದೆ.[೨೦]
ಇಂಡೋನೇಷಿಯಾದಲ್ಲಿ ಇವುಗಳನ್ನು ಇಲಾಂಗ್ ಬೊಂಡೊಲ್ ಎಂದು ಕರೆಯುತ್ತಾರೆ, ಬಿಳಿ ಗರುಡ ಜಕಾರ್ತಾದ ಅಧಿಕೃತ ಲಾಂಚನವಾಗಿದೆ. ಭಾರತದಲ್ಲಿ ಇದನ್ನು ವಿಷ್ಣುವಿನ ವಾಹನವಾದ ಗರುಡ ಪಕ್ಷಿಯ ಪ್ರತಿರೂಪವೆಂದು ನಂಬಲಾಗಿದೆ. ಮಲೇಷ್ಯಿಯಾದಲ್ಲಿ ಲಾಂಗ್ಕವಿ ಎಂಬ ದ್ವೀಪವನ್ನು ಈ ಪಕ್ಷಿಯ ಹೆಸರಿನಿಂದಲೇ ಕರೆಯಲಾಗುತ್ತದೆ (ಕವಿ ಎಂದರೆ ಗಡಿಗೆಗಳಂತಹ ವಸ್ತುಗಳನ್ನು ಮಾಡಲು ಬಳಸುವ ಗಟ್ಟಿಯಾದ ಕಂದು ಬಣ್ಣದ ಜೇಡಿಮಣ್ಣು ಎಂದು ಅರ್ಥ, ಮತ್ತು ಇದು ಈ ಪಕ್ಷಿಯ ಮೂಲ ಗರಿಗಳ ಬಣ್ಣವನ್ನು ಸೂಚಿಸುತ್ತದೆ).
ಮಧ್ಯ ಬೌಗಾನವಿಲ್ಲೆಯಲ್ಲಿನ ಕಟ್ಟು ಕಥೆಯೊಂದರ ಪ್ರಕಾರ ತಾಯಿಯೊಂದು ತೋಟದ ಕೆಲಸ ಮಾಡುವಾಗ ತನ್ನ ಮಗುವನ್ನು ಬಾಳೆ ಮರದ ಕೆಳಗೆ ಬಿಟ್ಟಿದ್ದಳಂತೆ, ಮತ್ತು ಆ ಮಗುವು ಕೂಗುತ್ತಾ ಆಕಾಶಕ್ಕೆ ನೆಗೆದು ಕಾನಾಂಗ್ ಆಗಿ ಪರಿವರ್ತನೆಯಾಯಿತಂತೆ. ಆ ಪಕ್ಷಿಯೇ ಪಕ್ಷಿಗಳ ಜಗತ್ತಿನ ಕಂಠಹಾರದಂತೆ ಶೋಭಿಸುವ ಬಿಳಿ ಗರುಡ ಆಗಿದೆ.[೨೧]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.