ಜೇನುತುಪ್ಪ (ಮಧು) ಜೇನ್ನೊಣಗಳು ಉತ್ಪಾದಿಸುವ ಒಂದು ಸಿಹಿಯಾದ ಅತಿಮಂದ ದ್ರವ. ಜೇನಿನ ಮೂಲವಸ್ತು ಹೂವುಗಳ ಮಕರಂದ. ನೀರೂ ಸೇರಿದಂತೆ ಇತರ ಯಾವುದೇ ವಸ್ತುವೂ ಸೇರಿಸಲ್ಪಡದೆ ಇರುವ ಜೇನು ಶುದ್ಧ ಜೇನೆನಿಸಿಕೊಳ್ಳುತ್ತದೆ. ಜೇನ್ನೊಣಗಳು ಹೊರತಾಗಿ ಇತರ ಕೆಲವು ಜಾತಿಯ ಕೀಟಗಳು ಸಹ ಜೇನನ್ನು ಉತ್ಪಾದಿಸುತ್ತವೆ. ಪ್ರತಿ ಕೀಟದ ಜೇನು ವಿಭಿನ್ನ ಗುಣಗಳನ್ನು ಹೊಂದಿರುತ್ತದೆ. ಜೇನು ಸಾಮಾನ್ಯ ಸಕ್ಕರೆಗಿಂತ ಹೆಚ್ಚು ಸಿಹಿಯಾಗಿರುವುದು. ಅಲ್ಲದೆ ಜೇನು ಕೆಲ ವಿಶಿಷ್ಟ ರಾಸಾಯನಿಕ ಗುಣಗಳನ್ನು ಹೊಂದಿದ್ದು ಬೇಕರಿ ಉತ್ಪನ್ನಗಳಲ್ಲಿ ಜನಪ್ರಿಯವಾಗಿದೆ. ಜೇನು ಅತಿ ಮಂದದ್ರವವಾಗಿದ್ದು ನೀರಿನಂಶ ಬಲು ಕಡಿಮೆಯಿರುವುದರಿಂದ ಇದರಲ್ಲಿ ಹೆಚ್ಚಿನ ಸೂಕ್ಷ್ಮಜೀವಿಗಳು ಉತ್ಪತ್ತಿಯಾಗಲಾರವು. ಇದರಿಂದ ಜೇನು ಬಲು ದೀರ್ಘಕಾಲ ಕೆಡದೆ ಉಳಿಯಬಲ್ಲುದು. ಆದರೆ ಅತಿ ಹಳೆಯ ಜೇನಿನಲ್ಲಿ ಜಡಾವಸ್ಥೆಯಲ್ಲಿರುವ ಎಂಡೋಸ್ಪೋರ್ ಎಂಬ ಸೂಕ್ಷ್ಮಜೀವಿಗಳಿರುವ ಸಾಧ್ಯತೆಯಿದ್ದು ಶಿಶುಗಳಿಗೆ ಇವು ಅಪಾಯವನ್ನುಂಟುಮಾಡಬಲ್ಲವಾಗಿವೆ. ಹೊಸಜೇನಿನಲ್ಲಿರುವ ಪರಾಗರೇಣುಗಳು ಮತ್ತು ಮಕರಂದಗಳ ಕಣಗಳ ಅಧ್ಯಯನದಿಂದ ಆ ಜೇನಿನ ಮೂಲವನ್ನು ತಿಳಿಯಬಹುದಾಗಿದೆ. ಜೇನುನೊಣಗಳು ಹೂವುಗಳಿಂದ ಮಕರಂದವನ್ನು ಸಂಗ್ರಹಿಸುವಾಗ ಹೂವುಗಳಿಗೆ ಪರಾಗಸ್ಪರ್ಶನ್ನೂ ಸಹ ಮಾಡುವುದು. ಪರಸ್ಪರ ಸಹಕಾರಿಯಾಗುವಂತಹ ಜೀವವ್ಯವಸ್ಥೆಗೆ ಇದೊಂದು ಉದಾಹರಣೆ. ಇಂದು ಗೂಡುಗಳಲ್ಲಿ ಜೇನನ್ನು ಸಾಕಿ ಜೇನುತುಪ್ಪವನ್ನು ಉತ್ಪಾದಿಸುವುದು ಒಂದು ದೊಡ್ಡ ಉದ್ಯಮವಾಗಿದೆ. ನೊಣಗಳಿಗೆ ಪೋಷಕಯುಕ್ತ ಆಹಾರದ ಕೊರತೆಯಾದಾಗ ಜೇನು ಕೃಷಿಕನು ಇವುಗಳಿಗೆ ಹೆಚ್ಚುವರಿಯಾಗಿ ಬೇರೆ ಆಹಾರವನ್ನು ಒದಗಿಸುವನು. ಜೇನು ತುಪ್ಪ ಕರ್ನಾಟಕದಲ್ಲಿ ತುಡವಿಯಿಂದ ಮಾಡಲ್ಪಟ್ಟದ್ದು ಮಾರುಕಟ್ಟೆಗಳಲ್ಲಿ ಸಿಗುವಂತದ್ದಾಗಿದೆ.

Thumb
ಬ್ರೆಡ್ ಮತ್ತು ಬಿಸ್ಕತ್ತುಗಳಿಗೆ ಜೇನಿನ ಸವರುವಿಕೆ
Thumb
ಮಕರಂದದ ಸಂಗ್ರಹಣೆಯಲ್ಲಿ ತೊಡಗಿರುವ ಜೇನ್ನೊಣ

ಜೇನಿನ ತಯಾರಿಕೆ

ಜೇನ್ನೊಣಗಳು ಜೇನನ್ನು ತಮ್ಮ ಆಹಾರಕ್ಕಾಗಿ ತಯಾರಿಸಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಚಳಿಗಾಲದಲ್ಲಿ ನೈಸರ್ಗಿಕ ಆಹಾರದ ಕೊರತೆಯುಂಟಾದಾಗ ಈ ಜೇನುತುಪ್ಪವನ್ನು ಜೇನ್ನೊಣಗಳು ಚೈತನ್ಯದಾಯಕ ಆಹಾರವಾಗಿ ಬಳಸುತ್ತವೆ. ಇಂದು ಜೇನ್ನೊಣಗಳು ಮರದ ಗೂಡಿನ ಒಳಗೆಯೆ ಹುಟ್ಟನ್ನು ನಿರ್ಮಿಸುವಂತೆ ಮಾಡುವಲ್ಲಿ ಯಶ ಸಾಧಿಸಲಾಗಿದೆ. ಒಂದು ಜೇನುಗೂಡಿನಲ್ಲಿ ಮೂರು ಬಗೆಯ ಜೇನ್ನೊಣಗಳಿರುತ್ತವೆ. ಒಂದು ರಾಣಿ ಹುಳ, ಹಲವು ಡ್ರೋನ್ ಗಳು ಮತ್ತು ೨೦ ರಿಂದ ೪೦ ಸಾವಿರದವರೆಗೆ ಕೆಲಸಗಾರರು ಇರುವರು. ಕೆಲಸಗಾರ ನೊಣಗಳು ಲಾರ್ವಾಗಳ ಪೋಷಣೆ ಮತ್ತು ಮಕರಂದದ ಸಂಗ್ರಹಣೆಯಲ್ಲಿ ತೊಡಗುತ್ತವೆ. ಹೂವುಗಳಿಂದ ಹೀರಿತಂದ ಮಕರಂದವು ಹುಟ್ಟಿನೊಳಗೆ ಜೇನಾಗಿ ಪರಿವರ್ತನೆಯಾಗುತ್ತದೆ. ಈ ಮಕರಂದವನ್ನು ಹುಟ್ಟಿನ ಕವಾಟಗಳಲ್ಲಿ ಇಡುವುದಕ್ಕೆ ಮುನ್ನ ನೊಣಗಳು ಇದನ್ನು ಅರೆಜೀರ್ಣಾವಸ್ಥೆಗೆ ತಂದಿರುತ್ತವೆ. ಮಕರಂದದಲ್ಲಿ ನೀರಿನಂಶ ಬಲು ಹೆಚ್ಚಿದ್ದು ಜೊತೆಗೆ ಕೆಲವು ಯೀಸ್ಟ್ ಗಳನ್ನು ಸಹ ಹೊಂದಿರುತ್ತದೆ. ನೀರಿನಂಶವನ್ನು ತೆಗೆಯದೆ ಇದ್ದಲ್ಲಿ ಮಕರಂದವು ಹುಳಿತು ಹೋಗುವುದು. ಇದನ್ನು ತಡೆಯಲು ನೊಣಗಳು ಜೇನುಹುಟ್ಟಿನ ಮುಚ್ಚಳವಿಲ್ಲದ ಕವಾಟಗಳಲ್ಲಿ ಮಕರಂದವನ್ನು ಶೇಖರಿಸುತ್ತವೆ. ನಂತರ ತಮ್ಮ ರೆಕ್ಕೆಗಳ ತೀವ್ರಗತಿಯ ಬೀಸುವಿಕೆಯಿಂದಾಗಿ ಹುಟ್ಟಿನಲ್ಲಿ ಗಾಳಿಯ ಅಲೆಗಳನ್ನು ಎಬ್ಬಿಸುತ್ತವೆ. ಇದರಿಂದಾಗಿ ಮಕರಂದದ ನೀರಿನಂಶದ ಹೆಚ್ಚಿನ ಭಾಗ ಆರಿ ಹೋಗುತ್ತದೆ. ಹೀಗೆ ನೀರಿನಂಶ ಕಡಿಮೆಯಾಗಿ ಜೇನಿನನಲ್ಲಿ ಸಕ್ಕರೆಯ ಸಾಂದ್ರತೆ ಹೆಚ್ಚುತ್ತ ಹೋಗಿ ಹುಳಿ ಇಲ್ಲವಾಗುತ್ತದೆ. ವೇದಗಳಲ್ಲಿ ಕೂಡ ಜೇನಿನ ಬಗ್ಗೆ ಉಲ್ಲೇಖವಿದೆ. ಉದಾಹರಣೆಗೆ ಶಿವನಿಗೆ ಪಂಚಾಮ್ರತ ಅಭಿಷೇಕ ಮಾಡುವಾಗ ಈ ಜೇನು ಮತ್ತು ಇದರ ಮಹತ್ವವನ್ನು ಹೀಗೆ ಹೇಳಿದ್ದಾರೆ. " ಓಮ್ ಮಧುವಾತಾ ಋತಾಯತೇ ಮಧುಕ್ಷರನ್ತಿ ಸಿಂಧವಃ | ಮಾಧ್ವೀರ್ನಃ ಸನ್ತ್ವೋಷಧೀಃ.| ಮಧುನಕ್ತಮುತೋಷಸಿ ಮಧುಮತ್ಪಾರ್ಥಿವಂ ರಜಃ | ಮಧುದೌರಸ್ತು ನಃ ಪಿತಾ| ಮಧುಮಾನ್ನೋ ವನಸ್ಪತಿರ್ಮಧುಗ್ಂ ಅಸ್ತು ಸೂರ್ಯಃ| ಮಾಧ್ವೀರ್ಗಾವೋ ಭವಂತು ನಃ|".

ಜೇನಿನಲ್ಲಿರುವ ಪೋಷಕಾಂಶಗಳು

ಪ್ರತಿ ನೂರು ಗ್ರಾಂ ಜೇನಿನಲ್ಲಿರುವ ಪೋಷಕಾಂಶಗಳ ವಿವರ ಇಂತಿದೆ :

More information ಪೋಷಕಾಂಶ, ಪರಿಮಾಣ ...
ಪೋಷಕಾಂಶಪರಿಮಾಣ
ಚೈತನ್ಯ (kJ)1272
ಪ್ರೊಟೀನ್0.3 g
ಕೊಬ್ಬು0 g
ಶರ್ಕರಪಿಷ್ಟಗಳು82.4 g
- ಸಕ್ಕರೆಗಳು82.12 g
- ನಾರು0.2 g
ಸೋಡಿಯಮ್ (ಮಿ.ಗ್ರಾ.)4
ಪೊಟ್ಯಾಸಿಯಂ (ಮಿ.ಗ್ರಾ.)52
ವಿಟಮಿನ್ ಸಿ (ಮಿ.ಗ್ರಾ.)0.5
ರಿಬೋಫ್ಲಾವಿನ್ (ಮಿ.ಗ್ರಾ.).038
ನಿಯಾಸಿನ್ (ಮಿ.ಗ್ರಾ.).121
ಪಾಂಟೋಥೆನಿಕ್ (ಮಿ.ಗ್ರಾ.).068
ಫೊಲೇಟ್ (ಮೈಕ್ರೋ ಗ್ರಾಂ)2
ಕಬ್ಬಿಣ (ಮಿ.ಗ್ರಾ.).42
ಮೆಗ್ನೀಸಿಯಮ್ (ಮಿ.ಗ್ರಾ.)2
ರಂಜಕ (ಮಿ.ಗ್ರಾ.)4
ಸತುವು (ಮಿ.ಗ್ರಾ.).22
ಕ್ಯಾಲ್ಸಿಯಮ್ (ಮಿ.ಗ್ರಾ.)6
ವಿಟಮಿನ್ ಬಿ೬ (ಮಿ.ಗ್ರಾ.).024
ನೀರು17.10 g
Close

ರಾಸಾಯನಿಕವಾಗಿ ಜೇನು ಹಲವು ಸಕ್ಕರೆಗಳು ಮತ್ತು ಇತರ ಸಂಯುಕ್ತಗಳನ್ನು ಹೊಂದಿರುತ್ತದೆ. ಜೇನಿನಲ್ಲಿರುವ ಶರ್ಕರಪಿಷ್ಟಗಳ ಪೈಕಿ ಫ್ರುಕ್ಟೋಸ್ ಮತ್ತು ಗ್ಲೂಕೋಸ್ ಹೆಚ್ಚಾಗಿರುತ್ತವೆ. ಉಳಿದಂತೆ ಜೇನು ಅಲ್ಪ ಪ್ರಮಾಣದಲ್ಲಿ ಹಲವು ವಿಟಮಿನ್ ಗಳು ಮತ್ತು ಖನಿಜಗಳನ್ನು ಸಹ ಹೊಂದಿದೆ. ಯಾವುದೇ ಜೇನಿನ ರಾಸಾಯನಿಕ ಸಂಯೋಜನೆ ಆ ನೊಣಗಳಿಗೆ ಒದಗುವ ಹೂವುಗಳ ಜಾತಿ ಮತ್ತು ಪರಿಮಾಣಗಳನ್ನು ಅವಲಂಬಿಸಿರುತ್ತದೆ. ಜೇನಿನ ಸಾಮಾನ್ಯ ಸಂಯೋಜನೆ ಕೆಳಕಂಡಂತಿರುವುದು :

  • ಫ್ರುಕ್ಟೋಸ್ : ೩೮%
  • ಗ್ಲೂಕೋಸ್ : ೩೧%
  • ಸುಕ್ರೋಸ್ : ೧%
  • ನೀರು : ೧೭%
  • ಇತರ ಶರ್ಕರಗಳು : ೯%
  • ಇತರ ವಸ್ತುಗಳು : ೩.೫೫%

ಜೇನಿನ ವಿಧಗಳು

ಜೇನು ಸಾಮಾನ್ಯವಾಗಿ ನಾಲ್ಕು ಬಗೆಯದು.

  • ಮಿಶ್ರ - ಒಂದಕ್ಕಿಂತ ಹೆಚ್ಚು ಬಗೆಯ ಜೇನುಗಳನ್ನು ಮಿಶ್ರಮಾಡಿರುವುದು. ಇಂದು ಮಾರುಕಟ್ಟೆಯಲ್ಲಿ ದೊರೆಯುವ ಹೆಚ್ಚಿನ ಜೇನು ಈ ಬಗೆಯದಾಗಿರುತ್ತದೆ.
  • ಹಲವು ಜಾತಿಯ ಹೂವುಗಳ ಮಕರಂದದಿಂದ ತಯಾರಾಗಿರುವಂತಹುದು.
  • ಒಂದೇ ಜಾತಿಯ ಹೂವುಗಳ ಮಕರಂದದಿಂದ ತಯಾರಾಗಿರುವಂತಹುದು.
  • ಹನಿಡ್ಯೂ ಜೇನು - ಆಫಿಡ್ ಕೀಟಗಳ ಹನಿಡ್ಯೂ ದಿಂದ ತಯಾರಾದದ್ದು.

ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಜೇನು

ಮಾನವ ಇತಿಹಾಸದುದ್ದಕ್ಕೂ ಜೇನು ಪ್ರಮುಖ ಸ್ಥಾನವನ್ನು ಪಡೆದಿದೆ. ಸಿಹಿಯಾದ ಮತ್ತು ಮಧುರವಾದ ಎಲ್ಲವನ್ನೂ ಜೇನಿಗೆ (ಮಧು) ಹೋಲಿಸುವುದು ಕಂಡುಬಂದಿದೆ. ಜೇನಿನ ಸಂಗ್ರಹಣೆ ಒಂದು ಪ್ರಾಚೀನ ಪರಂಪರೆಯಾಗಿದೆ. ಹೆಚ್ಚಿನ ಎಲ್ಲಾ ಪ್ರಾಚೀನ ಧರ್ಮಗ್ರಂಥಗಳಲ್ಲಿ ಜೇನಿನ ಉಲ್ಲೇಖ ಕಾಣಬರುವುದು.

Thumb
ಒಂದು ಜೇನುಗೂಡು

ಆಧುನಿಕ ಜಗತ್ತಿನಲ್ಲಿ ಜೇನು

೨೦೦೫ ರಂತೆ ಯು.ಎಸ್.ಎ., ಚೀನಾ ಮತ್ತು ಟರ್ಕಿ ದೇಶಗಳು ಜಗತ್ತಿನ ಪ್ರಮುಖ ಜೇನು ಉತ್ಪಾದಕ ರಾಷ್ಟ್ರಗಳಾಗಿವೆ. ಇಂದು ಜೇನಿನ ಮುಖ್ಯ ಉಪಯೋಗ ಅಡಿಗೆಯಲ್ಲಿ, ಬೇಕರಿ ಉತ್ಪನ್ನಗಳಲ್ಲಿ, ಚಹಾದಂತಹ ಪೇಯದಲ್ಲಿ ಮಿಶ್ರವಸ್ತುವಾಗಿ ಮತ್ತು ಇತರ ಕೆಲವು ಪೇಯಗಳಿಗೆ ಸಿಹಿ ಉಂಟುಮಾಡುವಲ್ಲಿ ಆಗುತ್ತಿದೆ. ಕೆಲ ಔಷಧಿಗಳಲ್ಲಿ ಸಹ ಜೇನಿನ ಬಳಕೆಯಾಗುತ್ತದೆ.

ಔಷಧೀಯ ಉಪಯೋಗಗಳು

ಬಲು ಹಿಂದಿನ ಕಾಲದಿಂದಲು ಸಹ ಜೇನನ್ನು ಸವರುವಿಕೆಯ ಮೂಲಕ ಅಥವಾ ಸೇವನೆಯ ಮೂಲಕ ಔಷಧವನ್ನಾಗಿ ಬಳಸಲ್ಪಡಲಾಗುತ್ತಿದೆ. ಜೇನು ನಂಜುವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಆದರೆ ಒಂದು ವರ್ಷದೊಳಗಿನ ಶಿಶುಗಳಿಗೆ ಜೇನನ್ನು ನೀಡುವುದು ಅಸಾಧುವೆಂದು ವೈದ್ಯಕೀಯ ಸಂಶೋಧನೆಗಳು ತಿಳಿಸುತ್ತವೆ.

ಬಾಹ್ಯ ಸಂಪರ್ಕಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.