![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/c/ce/AminoAcidball.svg/langkn-640px-AminoAcidball.svg.png&w=640&q=50)
ಅಮಿನೊ ಆಮ್ಲ
From Wikipedia, the free encyclopedia
ಅಮಿನೊ ಆಮ್ಲಗಳು[ಟಿಪ್ಪಣಿ 1] (ಅಮೈನೊ ಆಮ್ಲ) ಜೈವಿಕವಾಗಿ ಮುಖ್ಯವಾದ ಅಮೈನ್ (-NH2) ಮತ್ತು ಕಾರ್ಬೋಕ್ಸಿಲಿಕ್ ಆಮ್ಲ (-COOH) ಕ್ರಿಯಾ ಗುಂಪುಗಳಿರುವ ಸಾವಯವ ಸಂಯುಕ್ತಗಳು. ಅಲ್ಲದೆ ಸಾಮಾನ್ಯವಾಗಿ ಪ್ರತಿ ಅಮಿನೊ ಆಮ್ಲಕ್ಕೂ ವಿಶಿಷ್ಟವಾಗಿರುವ ಪಕ್ಕದ-ಸರಪಳಿ ಸಹ ಇರುತ್ತದೆ.[1][2][3] ಅಮಿನೊ ಆಮ್ಲದ ಪ್ರಮುಖ ಧಾತುಗಳು ಇಂಗಾಲ, ಜಲಜನಕ, ಆಮ್ಲಜನಕ ಮತ್ತು ಸಾರಜನಕಗಳು. ಆದರೆ ಕೆಲವೊಂದು ಅಮಿನೊ ಆಮ್ಲಗಳ ಪಕ್ಕದ-ಸರಪಳಿಯಲ್ಲಿ ಬೇರೆ ಧಾತುಗಳಿರುತ್ತವೆ. ಸುಮಾರು ೫೦೦ ಅಮಿನೊ ಆಮ್ಲಗಳು ತಿಳಿದಿದ್ದು ಅವನ್ನು ಹಲವು ರೀತಿಯಲ್ಲಿ ವರ್ಗೀಕರಿಸಲಾಗುತ್ತದೆ.[4] ಅವನ್ನು ಪ್ರಮುಖ ರಾಚನಿಕ ಕ್ರಿಯಾ ಗುಂಪುಗಳ ಇರುವಿಕೆಯ ಸ್ಥಾನದ ಆಧಾರದ ಮೇಲೆ ಆಲ್ಫಾ(α), ಬೀಟಾ (β), ಗಾಮ (γ) ಅಥವಾ ಡೆಲ್ಟಾ (δ)[ಟಿಪ್ಪಣಿ 2] ಅಮಿನೊ ಆಮ್ಲಗಳೆಂದು ವರ್ಗೀಕರಿಸಬಹುದು. ಇತರ ವರ್ಗೀಕರಣಗಳು ಧ್ರುವೀಯತೆ, ಪಿಹೆಚ್ ಮಟ್ಟ ಅಥವಾ ಪಕ್ಕದ-ಸರಪಣಿಗಳ ಗುಂಪಿನ ನಮೂನೆಯ ಮೇಲೆ ವರ್ಗೀಕರಿಸುವುದನ್ನು ಒಳಗೊಂಡಿದೆ. ಪ್ರೋಟೀನ್ನ ರೂಪದಲ್ಲಿ ಮಾನವನ ಸ್ನಾಯುಗಳು, ಜೀವಕೋಶಗಳು ಮತ್ತು ಅಂಗಾಶಗಳಲ್ಲಿ ಕಂಡು ಬರುವ ಎರಡನೆಯ ದೊಡ್ಡ ಅಂಶ ಅಮಿನೊ ಆಮ್ಲಗಳು (ಮೊದಲನೆಯನದು ನೀರು).[5] ಪ್ರೋಟೀನ್ ಹೊರಗೆ ಅಮಿನೊ ಆಮ್ಲಗಳಿಗೆ ನರಪ್ರೇಕ್ಷಕ[ಟಿಪ್ಪಣಿ 3] ರವಾನೆ ಮತ್ತು ಜೈವಿಕ ಸಂಯೋಜನೆಗಳಂತಹ[ಟಿಪ್ಪಣಿ 4] ಪ್ರಮುಖ ಪ್ರಕ್ರಿಯೆಗಳಲ್ಲಿ ಪಾತ್ರವಿದೆ.
![Thumb image](http://upload.wikimedia.org/wikipedia/commons/thumb/c/ce/AminoAcidball.svg/640px-AminoAcidball.svg.png)
![Thumb image](http://upload.wikimedia.org/wikipedia/commons/thumb/a/a9/Amino_Acids.svg/320px-Amino_Acids.svg.png)
ಜೀವರಸಾಯನಶಾಸ್ತ್ರದಲ್ಲಿ ಅಮೈನ್ ಮತ್ತು ಕಾರ್ಬೋಕ್ಸಿಲಿಕ್ ಗುಂಪುಗಳು ಮೊದಲನೆಯ ಅಥವಾ (ಆಲ್ಫಾ) ಇಂಗಾಲ ಅಣುವಿಗೆ ಅಂಟಿಕೊಳ್ಳುವುದು ಅಮಿನೊ ಆಮ್ಲಗಳಲ್ಲಿ ಮಹತ್ವ ಪಡೆದಿದೆ. ಇವನ್ನು ೨-, ಆಲ್ಫಾ ಅಥವಾ α-ಅಮಿನೊ ಆಮ್ಲ ಎಂದು ಕರೆಯಲಾಗುತ್ತದೆ. (ಬಹಳಷ್ಟು ಅಮಿನೊ ಆಮ್ಲಗಳ ಸಾಮಾನ್ಯ ಸೂತ್ರ H2NCHRCOOH.[6] ಇಲ್ಲಿ R ಒಂದು ಆದೇಶ್ಯ[ಟಿಪ್ಪಣಿ 5] ಮತ್ತು ಇದನ್ನು “ಪಕ್ಕದ-ಸರಣಿ” ಎಂದು ಕರೆಯಲಾಗುತ್ತದೆ.[7] ಕೆಲವೊಮ್ಮೆ “ಅಮಿನೊ ಆಮ್ಲ” ಪದವನ್ನು ನಿರ್ದಿಷ್ಟವಾಗಿ ಇವಕ್ಕೆ ಬಳಸಲಾಗುತ್ತದೆ.) ಇವು ಒಂದಕ್ಕೊಂದು ದೊಡ್ಡ ಸಮೂಹಗಳಾಗಿ ಸೇರಿ ಪೆಪ್ಟೈಡ್ ಸರಪಣಿಯಾಗುವ (ಪಾಲಿಪೆಪ್ಟೈಡ್)[8] ಮೂಲಕ ಪ್ರೋಟೀನ್ಗಳಾಗುವ ೨೩ ಪ್ರೋಟಿನೊಜನಕ (ಪ್ರೋಟೀನ್ ರಚಿಸುವ) ಅಮಿನೊ ಆಮ್ಲಗಳನ್ನು ಒಳಗೊಂಡಿವೆ.[9][10][11] ಇವೆಲ್ಲವು ಎಲ್-ಸಮಸ್ಥಾನಿಕಗಳು.[ಟಿಪ್ಪಣಿ 6] ಕೆಲವು ಡಿ-ಅಮಿನೊ ಆಮ್ಲಗಳು (ಬಲಗೈಯ) ಇದ್ದು ನ್ಯೂರೋಮಾಡುಲೇಟರ್ (ಡಿ-ಸೆರಿನ್) ಆಗಿ ಬ್ಯಾಕ್ಟೀರಿಯದ ಕವಚದಲ್ಲಿಯೂ ಮತ್ತು ಕೆಲವೊಂದು ಪ್ರತಿಜೀವಕಗಳಲ್ಲಿಯೂ ಇರುತ್ತವೆ.[12] ಇಪ್ಪತ್ತು ಪ್ರೋಟೀನ್ಜನಕ ಅಮಿನೊ ಆಮ್ಲಗಳು ಜೆನೆಟಿಕ್ ಕೋಡ್ನಲ್ಲಿ ನೇರವಾಗಿ ತ್ರಿವಳಿಗಳಾಗಿ ಸಂಕೇತಿಸಲ್ಪಟ್ಟಿವೆ ಮತ್ತು ಇವನ್ನು “ಪ್ರಮಾಣಕ” ಅಥವಾ ಸ್ಟಾಂಡರ್ಡು ಅಮಿನೊ ಆಮ್ಲಗಳೆಂದು ಕರೆಯಲಾಗಿದೆ. ಇತರ ಮೂರು (“ಪ್ರಮಾಣಕವಲ್ಲದ” ಅಥವಾ “ಅಧಿಕೃತವಲ್ಲದ”) ಪ್ರೋಟೀನೊಜನಕ ಅಮಿನೊ ಆಮ್ಲಗಳು ಸೆಲೆನೊಸಿಸ್ಟೇಯಿನ್ (ಹಲವು ಯೂಕ್ಯಾರಿಯೋಟ್ಗಳು ಅಲ್ಲದ ಜೀವಿಗಳಲ್ಲಿಯೂ ಮತ್ತು ಬಹಳಷ್ಟು ಯೂಕ್ಯಾರಿಯೋಟ್ಗಳಲ್ಲಿಯೂ ಇರುತ್ತದೆ, ಇದು ನೇರವಾಗಿ ಡಿಎನ್ಎಯಿಂದ ಸಂಕೇತಿಸಲ್ಪಟ್ಟಿಲ್ಲ), ಪೈರ್ರೋಲೈಸಿನ್ (ಒಂದು ಬ್ಯಾಕ್ಟೀರಿಯ ಮತ್ತು ಕೆಲವು ಆರ್ಕಿಯಗಳಲ್ಲಿ ಮಾತ್ರ ಕಂಡುಬರುತ್ತದೆ) ಮತ್ತು ಎನ್-ಫಾರ್ಮೈಲ್ಮಿಥಿಯೊನಿನ್ (ಕೆಲವೊಮ್ಮೆ ಬ್ಯಾಕ್ಟೀರಿಯ, ಮೈಟೊಕಾಂಡ್ರಿಯನ್ ಮತ್ತು ಹರಿದ್ರೇಣುವಿನಲ್ಲಿನ ಪ್ರೋಟೀನ್ಗಳ ಆರಂಭಿಕ ಅಮಿನೊ ಆಮ್ಲ). ಪೈರ್ರೋಲೈಸಿನ್ ಮತ್ತು ಸೆಲೆನೊಸಿಸ್ಟೇಯಿನ್ಗಳು ಭಿನ್ನ ಕೋಡಾನಿನಲ್ಲಿ ಸಂಕೇತಿಸಲ್ಪಟ್ಟಿವೆ. ಉದಾಹರಣೆಗೆ ಸೆಲೆನೊಸಿಸ್ಟೇಯಿನ್ ನಿಲ್ಲಿಸು ಕೋಡಾನು{ಜೆನೆಟಿಕ್ ಕೋಡ್ನಲ್ಲಿ ಮೂರು ನಿಲ್ಲಿಸು ಕೋಡಾನುಗಳಿರುತ್ತವೆ.} ಮತ್ತು SECIS ಅಂಶದಿಂದ ಸಂಕೇತಿಸಲ್ಪಟ್ಟಿದೆ.[13][14][15] ಪ್ರಕೃತಿಯಲ್ಲಿ ಕಾಣಬರದ ಕೋಡಾನು-ಟಿಆರ್ಎನ್ಎ ಸಂಯೋಗವನ್ನು ಬಳಸಿ ಪ್ರೋಟೀನ್ಜನಕವಲ್ಲದ ಅಮಿನೊ ಆಮ್ಲಗಳನ್ನು ಬಳಸಿ ಅಲೊಪ್ರೋಟೀನ್ಗಳೆಂದು ಕರೆಯಲಾದ ಹೊಸ ಪ್ರೋಟೀನ್ಗಳನ್ನು ತಯಾರಿಸಬಹುದು.[16][17][18]
ಹಲವು ಪ್ರಮುಖ ಪ್ರೋಟಿನೊಜನಕ ಮತ್ತು ಪ್ರೋಟಿನೋಜನಕವಲ್ಲದ ಅಮಿನೊ ಆಮ್ಲಗಳು ದೇಹದಲ್ಲಿ ಬೇರೆ ಪ್ರೋಟೀನ್ನೇತರ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತವೆ. ಉದಾಹರಣೆಗೆ ಮಾನವನ ಮಿದುಳಿನಲ್ಲಿ ಗ್ಲುಟಮೇಟ್ (ಪ್ರಮಾಣಕ ಗ್ಲುಟಾಮಿಕ್ ಆಮ್ಲ) ಮತ್ತು ಗಾಮ-ಅಮಿನೊ-ಬುಟೈರಿಕ್ ಆಮ್ಲ (“ಜಿಎಬಿಎ” ಪ್ರಮಾಣಿಕವಲ್ಲದ ಗಾಮ ಅಮಿನೊ ಆಮ್ಲ) ಕ್ರಮವಾಗಿ ಪ್ರಚೋದಕ ಮತ್ತು ಪ್ರತಿಬಂಧಕ ನರಪ್ರೇಕ್ಷಕಗಳಾಗಿ[ಟಿಪ್ಪಣಿ 3] ಕೆಲಸಮಾಡುತ್ತವೆ.[19] ಹೈಡ್ರೊಕ್ಸಿಪ್ರೊಲಿನ್ (ಸಂಯೋಜಕ ಅಂಗಾಂಶ ಕಾಲಜನ್ನ ಪ್ರಮುಖ ಅಂಶ) ಪ್ರೊಲಿನ್ನಿಂದ ಸಂಯೋಜಿತವಾಗುತ್ತದೆ. ಕೆಂಪು ರಕ್ತ ಕಣಗಳಲ್ಲಿ ಬಳಕೆಯಾಗುವ ಪೋರ್ಫೈರಿನ್ಗಳು ಪ್ರಮಾಣಕ ಅಮಿನೊ ಆಮ್ಲ ಗ್ಲೈಸಿನ್ನಿಂದ ಸಂಯೋಜಿತವಾಗುತ್ತವೆ. ಪ್ರಮಾಣಕವಲ್ಲದ ಕಾರ್ನಿಟಿನ್ ಲಿಪಿಡ್ ಅಥವಾ ಮೇದಸ್ಸುಗಳ ರವಾನೆಯಲ್ಲಿ ಬಳಕೆಯಾಗುತ್ತದೆ.
ಒಂಬತ್ತು ಪ್ರೋಟಿನೊಜನಕ ಅಮಿನೊ ಆಮ್ಲಗಳನ್ನು “ಅವಶ್ಯಕ” ಅಮಿನೊ ಆಮ್ಲಗಳೆಂದು ಕರೆಯಲಾಗಿದೆ. ಇವುಗಳನ್ನು ಮಾನವನ ದೇಹದಲ್ಲಿ ಇತರ ಸಂಯುಕ್ತಗಳನ್ನು ಬಳಸಿ ತಯಾರಿಸಲು ಆಗುವುದಿಲ್ಲ ಮತ್ತು ಆದ್ದರಿಂದ ಆಹಾರದ ಮೂಲಕ ತೆಗೆದುಕೊಳ್ಳಬೇಕು. ಇತರ ಅಮಿನೊ ಆಮ್ಲಗಳು ಕೆಲವು ಸಂದರ್ಭಗಳಲ್ಲಿ (ಕೆಲವು ವಯಸ್ಸಿನಲ್ಲಿ ಮತ್ತು ವೈದಕೀಯ ಸ್ಥಿತಿಯಲ್ಲಿ) ಮಾತ್ರ ಅವಶ್ಯವಾಗುತ್ತವೆ. ಅವಶ್ಯ ಅಮಿನೊ ಆಮ್ಲಗಳು ಜೀವಸಂಕುಲದಿಂದ ಜೀವಸಂಕುಲಕ್ಕೆ ಬೇರೆ ಬೇರೆಯಾಗಬಹುದು.[20]
ಪೋಷಕಾಂಶಗಳಲ್ಲಿ ಅಮಿನೊ ಆಮ್ಲಗಳ ಜೈವಿಕ ಮಹತ್ವದ ಹಿನ್ನೆಲೆಯಲ್ಲಿ ಸಾಧಾರಣವಾಗಿ ಪೋಷಕಾಂಶಗಳ ಪೂರಕಗಳಾಗಿ, ಗೊಬ್ಬರಗಳಾಗಿ ಮತ್ತು ಆಹಾರ ತಂತ್ರಜ್ಞಾನದಲ್ಲಿ ಬಳಕೆಯಾಗುತ್ತವೆ. ಅವುಗಳ ಕೈಗಾರಿಕಾ ಬಳಕೆ ಔಷಧಿಗಳ, ಜೈವಿಕ ವಿಘಟನೀಯ ಪ್ಲಾಸ್ಟಿಕ್ಗಳ ಮತ್ತು ಕೈರಲ್[ಟಿಪ್ಪಣಿ 7] ವೇಗವರ್ಧಕಗಳ ಉತ್ಪಾದನೆಯಲ್ಲಿ ಇದೆ.