ಹುಯಿಲಗೋಳ ನಾರಾಯಣರಾಯರು (೧೮೮೪-೧೯೭೧) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಕರ್ನಾಟಕ ನಾಡಗೀತೆಯೆನಿಸಿದ್ದ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆಯನ್ನು ರಚಿಸಿದವರು.

ಹುಯಿಲಗೋಳ ನಾರಾಯಣರಾಯರು

ಜೀವನ

೧೮೮೪ ಅಕ್ಟೋಬರ್ ೪ ರಂದು ಗದಗದಲ್ಲಿ ಜನಿಸಿದರು. ಇವರ ತಂದೆ ಕೃಷ್ಣರಾಯರು , ತಾಯಿ ರಾಧಾಬಾಯಿ(ಬಹಿಣಕ್ಕ). ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ ಹಾಗೂ ಧಾರವಾಡಗಳಲ್ಲಿ ಪೂರೈಸಿದರು. ೧೯೦೨ ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು (ಮುಂಬೈ ವಿಶ್ವವಿದ್ಯಾಲಯ) ಸೇರಿದರು. ೧೯೦೭ ರಲ್ಲಿ ಬಿ.ಎ. ಪದವಿಯನ್ನು ಪಡೆದ ಬಳಿಕ ಧಾರವಾಡವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, ಮುಂಬೈಗೆ ತೆರಳಿ,ಕಾನೂನು ಪದವಿಯನ್ನು ಪಡೆದು ೧೯೧೧ರಲ್ಲಿ ವಕೀಲಿ ವೃತ್ತಿಯನ್ನು ಗದಗದಲ್ಲಿ ಆರಂಭಿಸಿದರು.

ಸಾಹಿತ್ಯ

ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ,ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ಜೈ ಕರ್ನಾಟಕ ವೃತ್ತ , ಪ್ರಭಾತ , ಧನಂಜಯ ಮೊದಲಾದವುಗಳಲ್ಲಿ ಪ್ರಕಟವಾಗಿವೆ.

ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನು ರಚಿಸಿದ್ದರು. ನಾರಾಯಣ ರಾಯರು ಮೂಡಲು ಹರಿಯಿತು ಎಂಬ ಕಾದಂಬರಿಯನ್ನೂ ಬರೆದಿದ್ದರೆಂದು ತಿಳಿದು ಬಂದಿದೆ. ಆದರೆ ಈ ಕಾದಂಬರಿಯ ಹಸ್ತಪ್ರತಿ ಈಗ ಲಭ್ಯವಿಲ್ಲ.

ನಾಟಕಗಳು

ಹುಯಿಲಗೋಳ ನಾರಾಯಣರು ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಕಾಲ್ಪನಿಕ ನಾಟಕಗಳನ್ನು ರಚಿಸಿದ್ದಾರೆ. ಅವುಗಳ ಪಟ್ಟಿ ಕೆಳಕಂಡಂತಿವೆ.

ಕಾಲ್ಪನಿಕ

  • ವಜ್ರಮುಕುಟ (೧೯೧೦)
  • ಕನಕವಿಲಾಸ (೧೯೧೩)

ಐತಿಹಾಸಿಕ

  • ಪ್ರೇಮಾರ್ಜುನ(೧೯೧೨)
  • ಮೋಹಹರಿ(೧೯೧೪)
  • ಅಜ್ಞಾತವಾಸ(೧೯೧೫)
  • ಪ್ರೇಮವಿಜಯ(೧೯೧೬)
  • ಸಂಗೀತ ಕುಮಾರರಾಮ ಚರಿತ(೧೯೧೭)
  • ವಿದ್ಯಾರಣ್ಯ(೧೯೨೧)

ಪೌರಾಣಿಕ

  • ಭಾರತಸಂಧಾನ(೧೯೧೮)
  • ಉತ್ತರ ಗೋಗ್ರಹಣ(೧೯೨೨)

ಸಾಮಾಜಿಕ

  • ಸ್ತ್ರೀ ಧರ್ಮ ರಹಸ್ಯ(೧೯೧೯)
  • ಶಿಕ್ಷಣಸಂಭ್ರಮ(೧೯೨೦)
  • ಪತಿತೋದ್ಧಾರ(೧೯೫೨)
  • ಸಂಗೀತ ಪುನರಾಗಮನ (೧೯೨೪-೫೬)[1]

ಪ್ರಶಸ್ತಿ ಹಾಗು ಗೌರವಗಳು

  • ಮುಂಬಯಿ ಸರಕಾರವು ಪತಿತೋದ್ಧಾರ ನಾಟಕಕ್ಕೆ ೧೯೫೪ರಲ್ಲಿ ಬಹುಮಾನ ನೀಡಿತು.
  • ಕಲೋಪಾಸಕ ಮಂಡಳಿಯಿಂದ ಸನ್ಮಾನ - ೧೯೫೨
  • ಗದಗ - ಬೆಟಗೇರಿ ನಾಗರಿಕರಿಂದ ಸನ್ಮಾನ - ೧೯೩೫
  • ಗದಗ ವಕೀಲರ ಸಂಗದಿಂದ - ೧೯೫೫
  • ಕರ್ನಾಟಕ ಸರ್ಕಾರ ಪ್ರಥಮ ರಾಜ್ಯೋತ್ಸವ - ೧೯೫೬
  • ಕನ್ನಡ ಸಾಹಿತ್ಯ ಪರಿಷತ್ತು - ೧೯೬೧

ಇತರ ವಿಷಯಗಳು

ನಾರಾಯಣರಾಯರ ಸಂಗಡಿಗರು ಅಥವಾ ನಾಟ್ಯವಿಲಾಸಿಗಳು ಆಡಿದ ಇವರ ನಾಟಕಗಳ ಸಂಪಾದನೆಯನ್ನು ಸಮಾಜಶಿಕ್ಷಣ ಮತ್ತು ಸುಧಾರಣೆಗೆ ವಿನಿಯೋಗಿಸಲು ಇವರು ಉದ್ದೇಶಿಸಿದ್ದರು. ಅದರಂತೆ ಗದಗಿನಲ್ಲಿ ವಿಧ್ಯಾದಾನ ಸಮಿತಿ ಯಿಂದ ಪ್ರೌಢಶಾಲೆಯೊಂದು ನಿರ್ಮಾಣವಾಯಿತು.

ನಾರಾಯಣರಾಯರು ಅನೇಕ ಸಾಮಾಜಿಕ ಸಂಘಟನೆಗಳಲ್ಲಿಯೂ ಸೇವೆ ಸಲ್ಲಿಸಿದ್ದರು.

ಉದಯವಾಗಲಿ ಗೀತೆ

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹುಯಿಲಗೋಳ ನಾರಾಯಣರು ರಚಿಸಿದ ಗೀತೆ ಕರ್ನಾಟಕ ರಾಜ್ಯದ ನಾಡಗೀತೆಯೆಂದು ಖ್ಯಾತಿ ಪಡೆದಿತ್ತು. ಈ ಗೀತೆಯನ್ನು ಬೆಳಗಾವಿಯಲ್ಲಿ ಜರುಗಿದ, ೧೯೨೪ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಗಿತ್ತುಮಹಾತ್ಮ ಗಾಂಧಿಯವರುಈ ಅಧಿವೇಶನದ ಅಧ್ಯಕ್ಷರಾಗಿದ್ದರು. ಈ ಗೀತೆಯನ್ನು ೧೯೨೪ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತಗೀತೆಯಾಗಿ ಹಾಡಲಾಗಿತ್ತು. ಆಗಿನ್ನೂ ಬಾಲಕಿಯಾಗಿದ್ದ ಪದ್ಮಭೂಷಣ ಪ್ರಶಸ್ತಿ ಗಳಿಸಿದ್ದ ಗಂಗೂಬಾಯಿ ಹಾನಗಲ್ ಈ ಗೀತೆಯನ್ನು ಅಂದು ಹಾಡಿದ್ದರು. ೧೯೭೦ ರಲ್ಲಿ ಅಧಿಕೃತ ನಾಡಗೀತೆ ಪಟ್ಟಿಯಿಂದ ಇದನ್ನು ತೆಗೆದು ಹಾಕಲಾಯಿತು,[2]

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು || ಪ ||

ರಾಜನ್ಯರಿಪು ಪರಶುರಾಮನಮ್ಮನ ನಾಡು

ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು

ಓಜೆಯಿಂ ಮೆರೆದರಸುಗಳ ಸಾಹಸದ ಸೂಡು

ತೇಜವನು ನಮಗೀವ ವೀರವೃಂದದ ಬೀಡು

ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು

ಜಕ್ಕಣನ ಶಿಲ್ಪ ಕಲೆಯಚ್ಚರಿಯ ಕರುಗೋಡು

ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು

ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು

ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು

ಕಾವೇರಿ ಗೋದೆಯರು ಮೈದೊಳೆವ ನಲುನಾಡು

ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು

ಕಾವ ಗದುಗಿನ ವೀರನಾರಾಯಣನ ಬೀಡು.

ನಿಧನ

ಹುಯಿಲಗೋಳ ನಾರಾಯಣರಾಯರು ೪, ಜುಲೈ ೧೯೭೧ರಂದು ಹುಬ್ಬಳ್ಳಿಯಲ್ಲಿ ನಿಧನರಾದರು.[3]

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.