ಲೋಹ ಎಂದರೆ ರಸಾಯನಶಾಸ್ತ್ರ ದಲ್ಲಿ ಮೂಲಧಾತುಗಳಲ್ಲಿ ಒಂದು ಪ್ರಕಾರ. ಸುಮಾರು ಎಂಬತ್ತು ಶೇಕಡಾ ಮೂಲಧಾತುಗಳು ಲೋಹಗಳ ವರ್ಗಕ್ಕೆ ಸೇರುತ್ತವೆ. ಲೋಹಗಳು ಇತರೆ ಮೂಲಧಾತುಗಳಿಗಿಂತ ಹಲವಾರು ರೀತಿಯಲ್ಲಿ ಭಿನ್ನವಾಗಿವೆ. ಲೋಹಗಳಿಗೆ ಹೊಳಪು ಇದೆ. ಹೆಚ್ಚಿನ ಲೋಹಗಳು ಬೆಳಕನ್ನು ಪ್ರತಿಫಲಿಸುತ್ತವೆ. ಇವುಗಳು ಶಾಖ ಹಾಗೂ ವಿದ್ಯುತ್ ನ ಉತ್ತಮ ವಾಹಕಗಳು. ಇವುಗಳನ್ನು ತೆಳು ಹಾಳೆಗಳನ್ನಾಗಿ ಪರಿವರ್ತಿಸಬಹುದು ಹಾಗೂ ಉದ್ದವಾದ ಸರಿಗೆಗಳನ್ನಾಗಿಸಬಹುದು.
ಲೋಹಗಳು ಇಲೆಕ್ಟ್ರಾನ್ ದಾನಿಗಳು ಆದುದರಿಂದ ಇವುಗಳು ವಿದ್ಯುತ್ ಧನೀಯ (electro Positive)ವಾಗಿರುತ್ತದೆ.
ಲೋಹಗಳು ಸಾಮಾನ್ಯವಾಗಿ ಇಲೆಕ್ಟ್ರಾನ ಬಂಧಗಳನ್ನು(Ionic bonding) ಉಂಟುಮಾಡುತ್ತದೆ
ಸಾಮಾನ್ಯವಾಗಿ ಸಾರತೆ ಕಡಿಮೆ ಇರುವ ಆಮ್ಲಗಳಿಂದ(dilute acids) ಹೈಡ್ರೋಜನ್ನ್ನು ಸ್ಥಾನ ಪಲ್ಲಟಗೊಳಿಸುತ್ತದೆ
ಲೋಹಗಳ ಆಕ್ಸೈಡ್ ಗಳು ಪ್ರತ್ಯಾಮ್ಲೀಯ ಗುಣವನ್ನು ಹೊದಿರುತ್ತವೆ. ಆದುದರಿಂದ ಕೆಂಪು ಲಿಟ್ಮಸ್ ನ್ನು ನೀಲಿ ಮಾಡುತ್ತದೆ.
ಲೋಹಗಳ ಆಕ್ಸೈಡ್ ಗಳು ಕೆಲವು ಜಲೀಯ ದ್ರಾವಣಗಳು ಸತುವಿನೊಂದಿಗೆ ವರ್ತಿಸಿ ಹೈಡ್ರೋಜನ್ ಅನಿಲವನ್ನು ಕೊಡುತ್ತದೆ.
ಲೋಹಗಳೋಡನೆ ಗಾಳಿಯ ವರ್ತನೆ: ಲೋಹದಿಂದ ಮಾಡಿದ ಅನೇಕ ವಸ್ತುಗಳು ಬಹುದಿನಗಳ ಕಾಲ ಗಾಳಿಗೆ ತೆರೆದಿಟ್ಟಾಗ ತಮ್ಮ ಹೊಳಪು ಮೇಲ್ಮೈ ಕಳೆದುಕೊಳ್ಳುತ್ತವೆ. ಅವುಗಳನ್ನು ಹುಣಿಸೆ ಹಣ್ಣು ಅಥವಾ ಸೌಮ್ಯ ಆಮ್ಲೀಯ ರಾಸಾಯನಿಕಗಳಿಂದ ಸ್ವಚ್ಚಗೊಳಿಸಬಹುದು. ಇದಕ್ಕೆ ಕಾರಣವೆಂದರೆ ಲೋಹಗಳು ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ವರ್ತಿಸಿ ಆಕ್ಸೈಡುಗಳಾಗಿ ವರ್ತಿಸುತ್ತದೆ. ಗಾಳಿಗೆ ಬಹುದಿನಗಳ ಕಾಲ ತೆರೆದಿಟ್ಟ ಅಲ್ಯೂಮಿನಿಯಂ ನ ಪಾತ್ರೆಯ ಮೇಲ್ಮೈ ಬಿಳಿ-ಬೂದಿ ಬಣ್ಣಕ್ಕೆ ತಿರುಗಿರುವುದನ್ನು ನೀವು ಗಮನಿಸಿರಬಹುದು. ಇದೇ ಕಾರಣಕ್ಕಾಗಿ ಲಿಂಬೆ ರಸ ಅಥವಾ ಹಣ್ಣಿನ ರಸವನ್ನಾಗಲೀ, ಉಪ್ಪಿನ ಕಾಯಿಯನ್ನಾಗಲೀ ಅಲ್ಯೂಮೀನಿಯಂ ಡಬ್ಬಿಗಳಲ್ಲಿ ಸಂಗ್ರಹಿಸಬಾರದು ಎಂದು ಹೇಳುತ್ತಾರೆ.
ಲೋಹಗಳ ಮೇಲೆ ಇತರ ಅಲೋಹಗಳ ವರ್ತನೆ:
ಕೆಲವು ಲೋಹಗಳು ಉನ್ನತ ತಾಪದಲ್ಲಿ ನೈಟ್ರೋಜನ್ನಿನೊಂದಿಗೆ ವರ್ತಿಸಿ ಆಯಾ ನೈಟ್ರೈಡುಗಳನ್ನು ಕೊಡುತ್ತವೆ.[1]
ಲೋಹಗಳು ಸಾಮಾನ್ಯವಾಗಿ ಹೈಡ್ರೋಜನ್ನಿನೊಂದಿಗೆ ವರ್ತಿಸಿ ಆಯಾ ಹೈಡ್ರೈಡುಗಳನ್ನು ಕೊಡುತ್ತದೆ.
ಲೋಹಗಳು ಸಾಮಾನ್ಯವಾಗಿ ಕ್ಲೋರಿನ್ನಿನೊಂದಿಗೆ ವರ್ತಿಸಿ ಆಯಾ ಕ್ಲೋರೈಡುಗಳನ್ನು ಕೊಡುತ್ತದೆ.
ಲೋಹಗಳು ಸಾಮಾನ್ಯವಾಗಿ ಗಂಧಕದೊಂದಿಗೆ ವರ್ತಿಸಿ ಆಯಾ ಸಲ್ಫೈಡುಗಳನ್ನು ಕೊಡುತ್ತದೆ.
ಲೋಹಗಳ ಮೇಲೆ ನೀರಿನ ವರ್ತನೆ: ಸಾಮಾನ್ಯವಾಗಿ ನಾವು ನೀರನ್ನು ಲೋಹಗಳ (ತಾಮ್ರದ ಹಂಡೆ, ಕಬ್ಬಿಣದ ನೀರಿನ ಹಂಡೆ, ಬೆಳ್ಳಿಯ ಲೋಟ, ತಾಮ್ರದ ತಂಬಿಗೆ.. ಇತ್ಯಾದಿ)ಪಾತ್ರೆಯಲ್ಲಿಯೇ ಸಂಗ್ರಹಿಸುತ್ತೇವೆ. ಮತ್ತು ಆ ಪಾತ್ರೆಗಳಲ್ಲಿಯೇ ಕಾಯಿಸುತ್ತೇವೆ. ಇದರರ್ಥ ಲೋಹಗಳು ನೀರಿನೊಂದಿಗೆ ವರ್ತಿಸುವುದಿಲ್ಲ ಎಂಬುದಾಗಿದೆ. ಆದರೆ ಇದಕ್ಕೆ ಅಪವಾದವೆಂಬಂತೆ, ಸೋಡಿಯಂ ಲೋಹವು ನೀರಿನೊಂದಿಗೆ ಬಹಳ ದಿಢೀರನೇ ವರ್ತಿಸಿ ಸೋಡಿಯಂ ಹೈಡ್ರಾಕ್ಸೈಡ್ ನ್ನು ಉತ್ಪತ್ತಿಸುತ್ತದೆ. (ಎಚ್ಚರಿಕೆ: ತಣ್ಣೀರಿನಲ್ಲಿ ಸೋಡಿಯಂ ಲೋಹವನ್ನು ಹಾಕಿದರೆ ಆಸ್ಪೋಟಿಸುತ್ತದೆ.). ಆದರೆ ಮೇಗ್ನೀಶೀಯಂ ಲೋಹವು ಬಿಸಿ ನೀರಿನಲ್ಲಿ ವರ್ತಿಸಿ ಮೇಗ್ನೀಶಿಯಂ ಆಕ್ಸೈಡ್ ಉತ್ಪತ್ತಿಯಾಗುತ್ತದೆ.. ಚಿನ್ನ ಮತ್ತು ಪ್ಲಾಟಿನಂ ಲೋಹವು ನೀರಿನೊಂದಿಗೆ ವರ್ತಿಸುವುದೇ ಇಲ್ಲ. ಆದುದರಿಂದ ಚಿನ್ನದ ಆಥವಾ ಲೋಹದ ಆಭರಣವನ್ನು ನೀರಿನಲ್ಲಾಗಲೀ, ಬಿಸಿ ನೀರಿನಲ್ಲಾಗಲೀ ತೊಳೆದು ಸ್ವಚ್ಛಗೊಳಿಸಬಹುದಾಗಿದೆ.
ಲೋಹಗಳ ಮೇಲೆ ಆಮ್ಲಗಳ ವರ್ತನೆ:
ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲದೊಡನೆ ಸತು, ಅಲ್ಯೂಮಿನಿಯಂ, ಮೇಗ್ನಶೀಯಂ ಮುಂತಾದ ಲೋಹಗಳು ವರ್ತಿಸಿ ಲೋಹದ ಕ್ಲೋರೈಡುಗಳು ರೂಪುಗೊಳ್ಳುತ್ತದೆ ಮತ್ತು ಹೈಡ್ರೋಜನ್ ಅನಿಲ ಬಿಡುಗಡೆಗೊಳ್ಳುತ್ತದೆ
ಸಾರರಿಕ್ತ ಸಲ್ಪ್ಯೂರಿಕ್ ಆಮ್ಲದೊಡನೆ ಸತು, ಮೇಗ್ನೀಶೀಯಂ, ಕಬ್ಬಿಣ ಮುಂತಾದ ಆಮ್ಲಗಳು ವರ್ತಿಸಿ ಆಯಾ ಸಲ್ಪೇಟುಗಳನ್ನು ಉಂಟುಮಾಡಿ ಹೈಡ್ರೋಜನ್ ಅನಿಲವನ್ನು ಬಿಡುಗಡೆಗೊಳಿಸುತ್ತದೆ.
ಸಾರರಿಕ್ತ ನೈಟ್ರಿಕ್ ಆಮ್ಲವೂ ಕೂಡಾ ಸತು, ಮೇಗ್ನಿಶೀಯಂ, ಕಬ್ಬಿಣ ಮುಂತಾದ ಲೋಹಗಳೊಂದಿಗೆ ವರ್ತಿಸಿ ಆಯಾ ನೈಟ್ರೇಟುಗಳನ್ನು ಉಂಟುಮಾಡಿ ಹೈಡ್ರೋಜನ್ನ ಅನಿಲವನ್ನು ಬಿಡುಗಡೆಗೊಳಿಸುತ್ತದೆ.(ಕಬ್ಬಿಣ ಅಥವಾ ಅಲ್ಯೂಮಿನಿಯಂ ಲೋಹದ ತುಂಡನ್ನು ಸಾರಯುತ ನೈಟ್ರಿಕ್ ಆಮ್ಲದಲ್ಲಿ ಮುಳುಗಿಸಿದಾಗ ಯಾವುದೇ ಪರಿವರ್ತನೆ ಉಂಟಾಗುವುದಿಲ್ಲ, ಏಕೆಂದರೆ ನೈಟ್ರಿಕ್ ಆಮ್ಲದಲ್ಲಿದ್ದಾಗ ಕಬ್ಬಿಣ ಅಥವಾ ಅಲ್ಯೂಮಿನಿಯಂ ಲೋಹದ ಆಕ್ಸೈಡುಗಳ ಮೇಲ್ಮೈ ಪದರ ಉಂಟಾಗಿ ಅವು ನಿಷ್ಕ್ರಿಯವಾಗುತ್ತವೆ.)
ಲೋಹಗಳ ಸ್ಥಾನಪಲ್ಲಟ ಕ್ರಿಯೆಗಳು: ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಕಬ್ಬಿಣವು ವರ್ತಿಸಿ ಕಬ್ಬಿಣದ ಸಲ್ಪೇಟ್ ಹಾಗೂ ತಾಮ್ರವು ಉತ್ಪಾದನೆಗೊಳ್ಳುತ್ತದೆ. ಹೀಗೆ ಹಲವಾರು ಲೋಹಗಳ ಸ್ಥಾನಪಲ್ಲಟ ಕ್ರಿಯೆಯನ್ನು ಗಮನಿಸಬಹುದಾಗಿದೆ.
ಲೋಹಗಳು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿವೆ. ಬಹುಶ:ಕಬ್ಬಿಣ ಪ್ರಾಚೀನರಿಗೆ ತಿಳಿದಿದ್ದ ಮೊದಲ ಲೋಹ. ಚಿನ್ನ ಕ್ರಿ.ಪೂ.೩೫೦೦ ರಷ್ಟು ಹಿಂದೆಯೇ ಬಳಕೆಯಲ್ಲಿದ್ದ ಬಗ್ಗೆ ಮೆಸಪಟೋಮಿಯದಲ್ಲಿ ಕುರುಹುಗಳು ದೊರೆತಿವೆ. ಬೆಳ್ಳಿ ಕೂಡಾ ಕ್ರಿಸ್ತ ಪೂರ್ವದಲ್ಲಿಯೇ ಬಳಕೆಯಲ್ಲಿದ್ದ ಇನ್ನೊಂದು ಲೋಹ. ತಾಮ್ರ ಪಾತ್ರೆಗಳನ್ನು ಮಾಡಲು, ಆಯುಧಗಳನ್ನು ತಯಾರಿಸಲು ಉಪಯೋಗಿಸಲ್ಪಡುತ್ತಿತ್ತು. ಕಬ್ಬಿಣ, ಉಕ್ಕು,ಅಲ್ಯುಮಿನಿಯಮ್ ನಿರ್ಮಾಣ ಕಾರ್ಯದಲ್ಲಿ ಬಹಳ ಹಿಂದಿನಿಂದಲೂ ಉಪಯೋಗಲ್ಲಿರುವ ಲೋಹಗಳಲ್ಲಿ ಪ್ರಮುಖವಾಗಿವೆ.
ನಿಖರವಾದ ಆವರ್ತಕ ಕೋಷ್ಟಕದಲ್ಲಿ ಲೋಹಾಭಗಳು 'ಪಿ' ಬ್ಲಾಕ್ ನ ಕರ್ಣದುದ್ದಕ್ಕೂ ಕಂಡು ಬರುತ್ತವೆ. ಈ ಗುಂಪು ಬೋರಾನ್ ನಿಂದ ಆರಂಭವಾಗಿ ಆರಂಭವಾಗಿ ಆಸ್ಟಾಟಿನ್ ನೊಂದಿಗೆ ಮುಕ್ತಾಯಗೊಳ್ಳುತ್ತದೆ. ಆದರೆ ಕೆಲವೊಂದು ಆವರ್ತಕ ಕೋಷ್ಠಕಗಳು ಲೋಹಗಳು ಮತ್ತು ಅಲೋಹಗಳ ಮಧ್ಯೆ ಇವುಗಳನ್ನು ಪ್ರತ್ಯೇಕಿಸುವ ಗೆರೆಯನ್ನು ಹೊಂದಿರುತ್ತವೆ. ಲೋಹಾಭಗಳು ಈ ಗೆರೆಯ ಪಕ್ಕದಲ್ಲಿ ಇರತ್ತವೆ.
ಮುಖ್ಯವಾಗಿ ಗುರಿತಿಸಲ್ಪಡುವ ಲೋಹಾಭಗಳು
ಸಾಮಾನ್ಯವಾಗಿ ಗುರುತಿಸಲ್ಪಡುವ ಆರು ಮುಕ್ಯವಾದ ಲೋಹಾಭಗಳೆಂದರೆ
ಬೋರಾನ್
ಸಿಲಿಕಾನ್
ಜರ್ಮೇನಿಯಂ
ಆರ್ಸೆನಿಕ್
ಆಂಟಿಮೊನಿ
ಟೆಲ್ಲರಿಯಂ
ಲೊಹಾಭಗಳ ಗುಣಗಳನ್ನು ತೋರುವ ಇತರ ಮೂಲವಸ್ತುಗಳು
ಇಂಗಾಲ
ಅಲ್ಯೂಮಿನಿಯಂ
ಸೆಲೆನಿಯಂ
ಪೊಲೊನಿಯಂ
ಆಸ್ಟಾಟಿನ್
ಲೋಹಾಭಗಳು ಸಾಮಾನ್ಯವಾಗಿ ನೋಡಲು ಲೋಹಗಳಂತೆ ಕಾಣುತ್ತವೆ. ಆದರೆ ಅವು ಕಠಿಣವಾಗಿದ್ದು ಉತ್ತಮ ವಿದ್ಯುತ್ ವಾಹಕಗಳಾಗಿರುತ್ತವೆ. ಆದರೆ ರಾಸಾಯನಿಕವಾಗಿ ಅವು ಸಾಮಾನ್ಯವಾಗಿ ಅಲೋಹಗಳಂತೆ ವರ್ತಿಸುತ್ತವೆ. ಅವು ಲೋಹಗಳೊಂದಿಗೆ ಸೇರಿ ಮಿಶ್ರ ಲೋಹಗಳನ್ನು ಉಂಟುಮಾಡುತ್ತವೆ. ಇವುಗಳ ಹೆಚ್ಚಿನ ಗುಣಲಕ್ಷಣಗಳು ಲೋಹ ಮತ್ತು ಅಲೋಹಗಳ ಮಧ್ಯದ ಸ್ಥಿತಿಯನ್ನು ಅಥವಾ ಎರಡನ್ನೂ ಹೋಲುತ್ತವೆ. ಅವುಗಳು ಕಠಿಣವಾದವುಗಳಾದ್ದರಿಂದ ಅವುಗಗಳನ್ನು ಲೋಹಗಳಾಗಿ ಮತ್ತು ಅಲೋಹಗಳಾಗಿ ಬಳಸಲು ಸಾಧ್ಯವಿಲ್ಲ. ಆದರೆ ಅವುಗಳನ್ನು ಮಿಶ್ರಲೋಹಗಳ ತಯಾರಿಕೆಯಲ್ಲಿ, ರಾಸಾಯನಿಕ ಕ್ರಿಯೆಯಲ್ಲಿ ವೇಗವರ್ಧಕಗಳಾಗಿ, ಗಾಜಿನ ತಯಾರಿಕೆಯಲ್ಲಿ, ಸೆಮಿ ಕಂಡಕ್ಟರ್ ಗಳು ಇತ್ಯಾದಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಲೋಹಗಳನ್ನು ಮಾನವನ ದಿನನಿತ್ಯದ ಕೆಲಸ ಕಾರ್ಯಗಳಿಗಾಗಿ ಉಪಯೋಗಿಸುತ್ತಾರೆ
ನಾವು ಬಳಸುವ ನಾಣ್ಯಗಳು ಲೋಹದ್ದಾಗಲೀ, ಲೋಹದ ಮಿಶ್ರಣಗಳದ್ದಾಗಲೀ ಆಗಿರುತ್ತವೆ.
ಲೋಹದ ಪಾತ್ರೆಗಳು ತುಂಬಾ ಹೆಚ್ಚಾಗಿ ಬಳಕೆಯಾಗುತ್ತವೆ.
ಆಭರಣಗಳಲ್ಲಿ ಲೋಹಗಳ ಬಳಕೆಯಾಗುವುದನ್ನು ನಾವು ಗಮನಿಸಿದ್ದೇವೆ(ಬೆಳ್ಳಿ, ಬಂಗಾರ(ಚಿನ್ನ), ಪ್ಲಾಟಿನಂ ಅಲ್ಲದೇ ತಾಮ್ರ, ಅಲ್ಯೂಮಿನಿಯಂ ಆಭರಣಗಳು ಅಂದರೆ ಕೈ ಬಳೆ, ಉಂಗುರ, ಸರ, ಕಡಗ ಇವುಗಳನ್ನು ತಯಾರಿಸುತ್ತಾರೆ.
ವಾಹನಗಳ ಮೇಲ್ಮೈ ಲೋಹದಿಂದಾಗಿರುತ್ತದೆ. ಹಗುರವಾದ ಲೋಹಗಳಿಂದ ವಿಮಾನಗಳ/ರಾಕೆಟ್ ಗಳ ಮೇಲ್ಮೈ ತಯಾರಾಗಿರುತ್ತದೆ.
ಇಂಜಿನುಗಳಾಗಲೀ, ಮೋಟಾರುಗಳಾಗಲೀ ಲೋಹದಿಂದಲೇ ತಯಾರಾಗಿರುತ್ತವೆ. ಇಲೆಕ್ಟ್ರಾನಿಕ್ ಉಪಕರಣಗಳಾದ ಕಂಪ್ಯೂಟರ್, ಮೊಬೈಲ್ ಮುಂತಾದ ಚಿಪ್ ಗಳಲ್ಲಿ ಲೋಹವನ್ನು ಬಳಸಿ ತಯಾರಿಸುತ್ತಾರೆ. ಅಷ್ಟೇ ಏಕೆ? ಸಾಮಾನ್ಯವಾಗಿ ನಾವು ಬಳಸುವ ನೆಟ್ ಬೋಲ್ಟ್ ಮುಂತಾದವುಗಳು ಕೂಡಾ ಲೋಹಗಳಿಂದ ತಯಾರಾಗಿರುತ್ತವೆ.
ಮಾನವನ ಜೀವನದಲ್ಲಿ ಲೋಹಗಳ ಬಳಕೆ ಬಹು ಆಯಾಮವುಳ್ಳದ್ದಾಗಿದೆ. ಇತಿಹಾಸದಲ್ಲಿ ಲೋಹಗಳ ಬಳಕೆಯನ್ನು ಕಂಡು ಹಿಡಿದ ಆದಿ ಮಾನವನೇ ಆಧುನಿಕ ಮಾನವನಾಗಿ ರೂಪುಗೊಂಡಿರುವುದನ್ನು ಪ್ರಮುಖವಾಗಿ ಗಮನಿಸಬಹುದಾಗಿದೆ. ಅಲ್ಲದೇ ಲೋಹಗಳ ಖನಿಜವುಳ್ಳ ಭೂಮಿಯನ್ನು ಸ್ವಾ ಧೀನ ಪಡಿಸಿಕೊಳ್ಳಲು ಸಾಕಷ್ಟು ಯುದ್ಧಗಳು ಕೂಡಾ ಸಂಭವಿಸಿದೆ. ಈಗಲೂ ಕೂಡಾ ದೇಶದ ಆರ್ಥಿಕ ಸ್ಥಿರತೆಯೆಂಬುದು ಆಯಾ ದೇಶಗಳಲ್ಲಿ ಲಭ್ಯವಿರುವ ಬಂಗಾರದ ಪ್ರಮಾಣದ ಮೇಲೆಯೇ ನಿರ್ಧರಿತವಾಗಿರುತ್ತದೆ ಎಂಬುದನ್ನು ಗಮನಿಸಬೇಕಾಗಿದೆ. ಬೆಳಿಗ್ಗೆ ಏಳುವಾಗ ಬಳಸುವ ಟೂಥ್ ಪೇಸ್ಟ್ ನ ಡಬ್ಬಿಯು ಲೋಹದ್ದು, ಕುಡಿಯುವ ನೀರು ಲೋಹದ ಲೋಟದಲ್ಲಿ, ಊಟ ಲೋಹದ ತಟ್ಟೆಯಲ್ಲಿ, ರಾತ್ರಿ ಮಲಗುವ ಮಂಚವೂ ಕೂಡಾ ಲೋಹದ್ದೇ ಆಗಿರುವುದು.
ವಿಗ್ರಹಗಳನ್ನು ಲೋಹಗಳಿಂದ ತಯಾರಿಸುತ್ತಾರೆ. ಹೆಚ್ಚಿನ ವಿಗ್ರಹಗಳು ಮಿಶ್ರಲೋಹಗಳಿಂದ ಸಿದ್ಧವಾಗಿರುತ್ತದೆ.