ಲಸಿಕೆ ಎಂದರೆ ಸೂಕ್ಷ್ಮಜೀವಿ ಅಥವಾ ವೈರಸ್ಗಳನ್ನು ಕೊಂದು ಇಲ್ಲವೇ ದುರ್ಬಲೀಕರಿಸಿ ತಯಾರಿಸಿದ ದ್ರವಪದಾರ್ಥ (ವ್ಯಾಕ್ಸಿನ್). ಇದನ್ನು ಚುಚ್ಚುಮದ್ದಾಗಿ ರಕ್ತಪರಿಚಲನ ವ್ಯವಸ್ಥೆಗೆ ಹೊಗಿಸಿದಾಗ ಅದರಲ್ಲಿ ಪ್ರತಿಕಾಯಗಳು ಜನಿಸಿ ವ್ಯಕ್ತಿಗೆ ಆಯಾ ರೋಗದ ಎದುರು ರಕ್ಷೆ ಒದಗಿಸುತ್ತವೆ.
ಯಾವುದೇ ಸಾಂಕ್ರಾಮಿಕ ರೋಗ ದೇಹಕ್ಕೆ ತಟ್ಟದಂತೆ ರಕ್ಷಣೆ ಒದಗಿಸಲು ಲಸಿಕೆ ಚುಚ್ಚುವ ಪ್ರಕ್ರಿಯೆ (ವ್ಯಾಕ್ಸಿನೇಶನ್). ಮೂಲತಃ ಸಿಡುಬು ಅಂಟದಂತೆ ರಕ್ಷಣೆ ಒದಗಿಸಲು ಲಸಿಕೆ ಹಾಕುವ ತಂತ್ರವನ್ನು ಯಶಸ್ವಿಯಾಗಿ ಬಳಸಲಾಯಿತು (1885ರ ಸುಮಾರಿಗೆ). ತದನಂತರದ ದಿನಗಳಲ್ಲಿ ಬೇರೆ ಬೇರೆ ಅಂಟುರೋಗಗಳನ್ನು ತಡೆಯಲು ಮುಂದಾಗಿಯೇ ಲಸಿಕೆ ಹಾಕುವ ತಂತ್ರಗಳು ಬಳಕೆಗೆ ಬಂದಿವೆ.[1]
ವಿಜ್ಞಾನಿಗಳು ಯಾವ ರೋಗಾಣುವಿನ ವಿರುದ್ಧ ಲಸಿಕೆ ಕಂಡುಹಿಡಿಯಬೇಕೋ, ಆ ರೋಗಾಣುವನ್ನು ಕೂಲಂಕಷವಾಗಿ ಅಧ್ಯಯನಕ್ಕೆ ಒಳಪಡಿಸುವರು. ಆ್ಯಂಟಿಜೆನ್ನುಗಳ(ಶತ್ರುಜೀವಕೋಶಕ್ಕೆ ಪ್ರತಿಜನಕ - ಆಂಟಿಜೆನ್ ಎಂದಿದೆ; ಅವನ್ನು ನಾಶಮಾಡುವ ಪ್ರತಿಜನಕಗಳು;ರೋಗನಿರೋಧಕ ಜೀವಾಣುಗಳು- ಆ್ಯಂಟಿಬಾಡಿಗಳು) ಆ್ಯಂಟಿಜೆನ್ನುಗಳನ್ನು ಪಟ್ಟಿ ಮಾಡಿ, 'ಕಾಯಿಲೆ- ಕಾರಕವಾದದ್ದನ್ನು ಬಿಟ್ಟು' ರೋಗನಿರೋಧಕ ಶಕ್ತಿ ಉದ್ದೀಪಿಸುವುದನ್ನು ಗುರುತಿಸುತ್ತಾರೆ. ಆಯ್ದ ಕೆಲವು ಪ್ರಾಣಿಗಳಿಗೆ ಆಯ್ಕೆ ಮಾಡಿದ ಉದ್ದೀಪಕ ಆ್ಯಂಟಿಜೆನ್ನ್ನು ಕೊಡುತ್ತಾರೆ. ನಂತರ ಆ ಪ್ರಾಣಿಗಳ ರಕ್ತಮಾದರಿ ಸಂಗ್ರಹಿಸಿ, ರೋಗಾಣುವಿನ ವಿರುದ್ಧ ಆ್ಯಂಟಿಬಾಡಿಗಳು ಉತ್ಪತ್ತಿಯಾಗಿವೆಯೇ ಎಂದು ಪರೀಕ್ಷಿಸುತ್ತಾರೆ. ಪ್ರಾಣಿಯನ್ನು ನಿಜವಾದ ರೋಗಾಣುವಿಗೆ ಒಡ್ಡಿ- ಗುರಿಮಾಡಿ ಅದಕ್ಕೆ ಸೋಂಕು ತಗುಲುವಂತೆ ಮಾಡಿ, ಅದಕ್ಕೆ ರೋಗನಿರೋಧಕ ಶಕ್ತಿ ಬಂದಿದೆಯೇ ಎಂದು ಪರಿಶೀಲಿಸುತ್ತಾರೆ. ಈ ಪ್ರಯೋಗ ಸಫಲವಾದರೆ ಆರೋಗ್ಯವಂತ ಮನುಷ್ಯರನ್ನು ಆಯ್ದು, ಅವರ ಸಮ್ಮತಿ ಪಡೆದು,ಅವರಿಗೆ ಲಸಿಕೆ ನೀಡುವರು. ಅವರ ರೋಗನಿರೋಧಕ ಶಕ್ತಿ ಹೆಚ್ಚಿತೇ? ಆ ಅಪಾಯಕಾರಿ ರೋಗಾಣುವಿನ ಸಂಪರ್ಕವಾದಾಗ ರೋಗ ಬರದಂತೆ ತಡೆಗಟ್ಟಿತೇ- ಂದು ಪರಿಶೀಲಿಸುವರು. ಆ ಲಸಿಕೆಯನ್ನು ಕೊಟ್ಟಾಗಯಾವ ಅಡ್ಡಪರಿಣಾಮವಾಗದೆ ಇರುವ ಸುರಕ್ಷತೆ, ಮತ್ತೆ ಕೆಲವರಮೇಲೆ ಪ್ರಯೋಗಿಸಿ ಅದರ ವಿಶ್ವಾಸಾರ್ಹತೆ ಮತ್ತು ಪರಿಣಾಮಗಳೇನು ಎಂಬ ಬಗೆಗೆ ವಿಸ್ಕೃತವಾದ ವೈದ್ಯಕೀಯ ಪ್ರಯತ್ನಗಳು (ಕ್ಲಿನಿಕಲ್ ಟ್ರಯಲ್ಗಳು) ಆದ ನಂತರ ಆ ವ್ಯಾಕ್ಸೀನ್ ಅಥವಾ ಲಸಿಕೆಯನ್ನು ಮಾರುಕಟ್ಟೆಗೆ ಬಿಡುವರು. ಈ ಕ್ರಮ ಕೆಲವು ತಿಂಗಳು ಅಥವಾ ವರ್ಷಗಳನ್ನೇ ತೆಗೆದುಕೊಳ್ಳಬಹುದು.[2]
ತನ್ನ ಜೀವಮಾನವಿಡಿ ಮಾರಕ ರೋಗಗಳಿಗೆ ಲಸಿಕೆ ಕಂಡುಹಿಡಿದ ಮೊದಲಿಗ ಲೂಯಿ ಪಾಶ್ಚರ್ನ ಜೀವನಸಾಧನೆಯ ಸಂಕ್ಷಿಪ್ತ ವರದಿಯನ್ನು ಕೆಳಗೆ ನೋಡಬಹುದು.
ಪಾಸ್ತರ್, ಲೂಯಿ 1822-1895. ಫ್ರಾನ್ಸಿನ ಸೂಕ್ಷ್ಮಾಣುಜೀವಿ ವಿಜ್ಞಾನಿ. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಅದ್ಭುತ ಪ್ರಾಯೋಗಿಕ ವ್ಯಾಸಂಗಗಳನ್ನು ಇತಿಹಾಸ ಪ್ರವರ್ತಕ ಫಲಿತಾಂಶಗಳನ್ನು ಪಡೆದು ಸಾರ್ವಜನಿಕ ಆರೋಗ್ಯ ಪಾಲನೆಗೆ ಹಿರಿಯ ಕೊಡುಗೆಗಳನ್ನು ನೀಡಿದ ಮಹಾ ಪ್ರತಿಭಾಶಾಲಿ ಅನ್ವೇಷಕ. ಮೂಲತಃ ರಸಾಯನವಿಜ್ಞಾನ, ಮಾದಕ ಪಾನೀಯ ಬೀರಿನ ಕಂಪು ಮತ್ತು ರುಚಿ ರಕ್ಷಣೆ, ರೇಷ್ಮೆ ಹುಳುಗಳಿಗೆ ಅಂಟಿ ಮಾರಕವಾಗಿ ಪರಿಣಮಿಸುತ್ತಿದ್ದ ಸೋಂಕು ಮುಂತಾದವನ್ನು ಕುರಿತು ತೀವ್ರ ಸಂಶೋಧನೆ ಹಾಗೂ ಅಧ್ಯಯನ ಮಾಡಿದ ಪಾಸ್ತರ್ ಮುಂದೆ ಪ್ರೌಢ ವೈದ್ಯಕೀಯ ಆವಿಷ್ಕಾರಗಳನ್ನು ಮಾಡಲು ವಿಶೇಷ ಅರ್ಹತೆ ಗಳಿಸಿದ.
ಬಾಲ್ಯ
ಲೂಯಿ ಪಾಸ್ತರ್ 1822 ಡಿಸೆಂಬರ್ 27 ರಂದು ಫ್ರಾನ್ಸಿನ ಜ್ಯೂರ ಪ್ರದೇಶಕ್ಕೆ ಸೇರಿದ ಡೋಲಿ ಎಂಬಲ್ಲಿ ಜನಿಸಿದ. ಇವನ ತಂದೆ ಜೀನ್ ಜೋಸೆಫ್ ಪಾಸ್ತರ್, ನೆಪೋಲಿಯನ್ನನ ಸೈನ್ಯದಲ್ಲಿ ಸಾರ್ಜೆಂಟ್-ಮೇಜರ್ ಆಗಿದ್ದ. ನೆಪೋಲಿಯನ್ನನ ಪತನಾನಂತರ ವಂಶಪರಂಪರೆಯಾಗಿ ನಡೆದು ಬಂದಿದ್ದ ಚರ್ಮ ಹದ ಮಾಡುವ ಉದ್ಯಮಕ್ಕೆ ಇಳಿದ. ಲೂಯಿಯ ಜನನವಾದ ಸ್ವಲ್ಪ ಕಾಲದಲ್ಲಿ ಸಂಸಾರ ಹತ್ತಿರದ ಆರ್ಬಾಯ್ ಎಂಬಲ್ಲಿಗೆ ಹೋಗಿ ನೆಲೆಸಿತು. ಅಲ್ಲೆ ಲೂಯಿಯ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ ನಡೆಯಿತು. ಈತ ಪ್ರತಿಭಾನ್ವಿತ ವಿದ್ಯಾರ್ಥಿ ಎಂದು ಶಾಲೆಯ ಮುಖ್ಯೋಪಾಧ್ಯಾಯನಿಗೆ ಮನದಟ್ಟಾಗಿದ್ದುದರಿಂದ ಪ್ಯಾರಿಸ್ಸಿನ ಇಕೋಲಿ ನಾರ್ಮೇಲಿಗೆ ಸೇರಿಕೊಳ್ಳಲು ತಯಾರಾಗುವಂತೆ ಶಿಕ್ಷಣ ಪಡೆಯಬೇಕೆಂದೂ ಅದಕ್ಕಾಗಿ ಇವನನ್ನು ಪ್ಯಾರಿಸ್ಸಿಗೆ ಕಳುಹಿಸಬೇಕೆಂದೂ ಆತ ಆಗ್ರಹ ಮಾಡಿದ. ಅದರಂತೆ ಲೂಯಿಯನ್ನು ದೂರದ ಪ್ಯಾರಿಸ್ಸಿಗೆ ಕಳುಹಿಸಲಾಯಿತು (1838). ಆದರೆ ಮನೆ ಗೀಳು ಹಿಡಿದು ವ್ಯಾಸಂಗ ಮುಂದುವರಿಸಲಾಗದೆ ಅವನು ಶೀಘ್ರದಲ್ಲಿ ಆರ್ಬಾಯಿಗೆ ವಾಪಸಾದ. ಅನಂತರ ಹತ್ತಿರದ ಪರಿಚಿತ ಬೆಸಾನ್ಕಾನಿನ ರಾಯಲ್ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿ 1840 ಮತ್ತು 1842 ರಲ್ಲಿ ಪದವಿಗಳನ್ನು ಪಡೆದ. ಇಕೋಲಿ ನಾರ್ಮೆಲೀಗೆ ಸೇರುವ ಉದ್ದೇಶದಿಂದ ಪುನಃ ಪ್ಯಾರಿಸ್ಸಿಗೆ ತೆರಳಿ (1843) ಆಯ್ಕೆಗಾಗಿ ನಡೆದ ಪರೀಕ್ಷೆಯನ್ನು ತೆಗೆದುಕೊಂಡು ಉತ್ತೀರ್ಣರಾದ ವಿದ್ಯಾರ್ಥಿಗಳ ಪೈಕಿ ನಾಲ್ಕನೆಯ ಸ್ಥಾನ ಗಳಿಸಿದ. ಪ್ಯಾರಿಸ್ಸಿನಲ್ಲಿ ಆಗ ಪ್ರಸಿದ್ಧ ವಿಜ್ಞಾನಿಗಳಾಗಿದ್ದ ಡ್ಯೂಮಾಸ್, ಬಲಾರ್ಡ್ ಮುಂತಾದವರ ಸಂಪರ್ಕ ಹೊಂದಿ ವ್ಯಾಸಂಗ ಮುಂದುವರಿಸಿ ಡಾಕ್ಟರೇಟ್ ಪದವಿ ಪಡೆದ (1847).
ಸಂಶೋಧನೆ
ರೆಸಿಮಿಕ್ ಟಾರ್ಟಾರಿಕ್ ಆಮ್ಲವನ್ನು ಕುರಿತು ಸಂಶೋಧನೆಯಲ್ಲಿ ಪಾಸ್ತರ್ ಉದ್ಯುಕ್ತನಾದ (1848). ಟಾರ್ಟಾರಿಕ್ ಆಮ್ಲ ಸಾಮಾನ್ಯವಾದ ರೆಸಿಮಿಕ್ ಎಂಬ ವಿಶೇಷವಾದ ಎರಡು ರೂಪಗಳಲ್ಲಿ ಇರುವುದು ತಿಳಿದಿತ್ತು. ಟಾರ್ಟಾರಿಕ್ ಆಮ್ಲ ಮತ್ತು ಅದರ ಉತ್ಪನ್ನಗಳ ಜಲೀಯ ದ್ರಾವಣಗಳು ಧ್ರುವೀಕೃತ ಬೆಳಕಿನ ತಲವನ್ನು ಬಲಕ್ಕೆ ತಿರುಗಿಸುವುವೆಂದೂ (ದಕ್ಷಿಣಾವರ್ತಕಗಳು ಅಥವಾ ಬಲಮುರಿಗಳೆಂದೂ) ರೆಸಿಮಿಕ್ ಆಮ್ಲ ಮತ್ತು ಅದರ ಉತ್ಪನ್ನಗಳಿಗೆ ಈ ಗುಣ ಇಲ್ಲವೆಂದೂ 1844 ರಲ್ಲಿ ಮಿಟ್ಷರ್ಲಿಕ್ ಎಂಬಾತ ತಿಳಿಯಪಡಿಸಿದ. ರೆಸಿಮಿಕ್ ಆಮ್ಲಜನ್ಯ ಲವಣಗಳ ಸ್ಪಟಿಕಗಳು ಎರಡು ಬಗೆಯವಾಗಿರುವುವೆಂದು ಪಾಸ್ತರ್ ಮೊತ್ತಮೊದಲಿಗೆ ಕಂಡುಕೊಂಡು ಸೂಕ್ಷ್ಮದರ್ಶಕದ ಸಹಾಯದಿಂದ ಈ ಎರಡು ಬಗೆಯ ಸ್ಫಟಿಕಗಳನ್ನೂ ಬೇರ್ಪಡಿಸಿದ. ಅನಂತರ ಅವುಗಳಿಂದ ಟಾರ್ಟಾರಿಕ್ ಆಮ್ಲವನ್ನು ತಯಾರಿಸಿ ಒಂದೊಂದರಿಂದ ತಯಾರಿಸಿದ ಆಮ್ಲವೂ ಒಂದೊಂದು ಬಗೆಯದೆಂದು ತೋರಿಸಿದ. ಒಂದು ಬಗೆಯದು ಪೂರ್ವಪರಿಚಿತ ಟಾರ್ಟಾರಿಕ್ ಆಮ್ಲದ ಸಾಮಾನ್ಯ ರೂಪ. ಇನ್ನೊಂದು ಧ್ರುವೀಕೃತ ಬೆಳಕಿನ ತಲವನ್ನು ಬಲಗಡೆಗೆ ಬದಲಾಗಿ ಸಮಪ್ರಾಬಲ್ಯದಿಂದ ಎಡಗಡೆಗೆ ತಿರುಗಿಸಬಲ್ಲ ಲಕ್ಷಣವಿದ್ದ ಆದರೆ ಆತನಕ ತಿಳಿದಿರದಿದ್ದ ಹೊಸ ಆಮ್ಲ. ಇವೆರಡೂ ಸಮಪ್ರಮಾಣದಲ್ಲಿ ಮಿಲನವಾಗಿ ರೆಸಿಮಿಕ್ ಆಮ್ಲವಾಗುತ್ತದೆ ಎಂದು ಪಾಸ್ತರ್ ವಿಶದೀಕರಿಸಿದ. ಫ್ರಾನ್ಸಿನ ಅತ್ಯುನ್ನತ ರಸಾಯನ ವಿಜ್ಞಾನಿಗಳ ತನಿಖೆಗೆ ಈ ಆವಿಷ್ಕಾರ ಒಳಗಾಗಿ ಇದು ಸತ್ಯವೆಂದು ಸ್ಥಿರಪಟ್ಟಿತು; ಪಾಸ್ತರ್ ಬಲು ಮೇಲ್ಮಟ್ಟದ ವಿಜ್ಞಾನಿಯೆಂದು ಪ್ರಸಿದ್ಧನಾದ. (ಮುಂದೆ ಟಾರ್ಟಾರಿಕ್ ಆಮ್ಲದ ನಾಲ್ಕನೆಯ ರೂಪ ಮಿಸೋಟಾರ್ಟಾರಿಕ್ ಆಮ್ಲವನ್ನೂ ಅವನೆ ಆವಿಷ್ಕರಿಸಿದ.) ಈ ವ್ಯಾಸಂಗಗಳನ್ನು ಆತ ಮುಂದೆ ವರ್ಗವಾಗಿ ಹೋದ ಡಿಜಾನ್ ಹಾಗೂ ಸ್ಯಾಸ್ಬರ್ಗಿನಲ್ಲಿಯೂ ಮುಂದುವರಿಸಿ ಮುಕ್ತಾಯ ಮಾಡಿದ್ದು ಆತನ ಸಾಧನೆಯ ಪ್ರತೀಕ.
1854 ರಲ್ಲಿ ಲಿಲ್ಲೆ ಎಂಬಲ್ಲಿ ಹೊಸದಾಗಿ ಪ್ರಾರಂಭವಾದ ಕಾಲೇಜಿನ ಮುಖ್ಯಸ್ಥನಾಗಿ ಪಾಸ್ತರ್ ವರ್ಗಮಾಡಲ್ಪಟ್ಟ. ಅಲ್ಲಿ ಅವನು ಬೀರನ್ನು ಕುರಿತು ಅಧ್ಯಯನ ಕೈಗೊಳ್ಳುವ ಅವಕಾಶ ಒದಗಿತು. ಬೀರ್ ನಿರ್ಮಾಪಕ ಸಂಸ್ಥೆಗಳು ಅಲ್ಲಿ ಹಲವಿದ್ದು ಫ್ರಾನ್ಸ್ ದೇಶದ ಬೀರಿನ ರುಚಿಗೆ ಹಾಗೂ ಪ್ರಸಿದ್ಧಿಗೆ ಕಾರಣವಾಗಿದ್ದುವು. ಆದರೆ ಈಚೆಗೆ ಶೀಶೆಗಳಲ್ಲಿ ಮೊಹರು ಮಾಡಿದಂತೆಯೇ ಅದರ ರುಚಿ ಹಾಗೂ ಕಂಪು ಕೆಟ್ಟು ಹೋಗುತ್ತಿದ್ದು ಗಿರಾಕಿಗಳು ತಪ್ಪಿ ಹೋಗುವ ಸಂಭವ ಬಂದಿತ್ತು. ಬೀರ್ ತಯಾರಿಕೆಯಲ್ಲಿ ಬಳಸುತ್ತಿದ್ದ ಯೀಸ್ಟ್ ಎಂಬ ಹುದುಗುಕಾರಕ ವಸ್ತುವನ್ನು ಪಾಸ್ತರ್ ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿ ಅದರಲ್ಲಿ ಸಾಮಾನ್ಯ ಹಾಗೂ ವಿಶೇಷ ರೂಪಗಳು ಇರುವುದನ್ನೂ ವಿಶೇಷ ರೂಪದ ಯೀಸ್ಟಿನಿಂದ ತಯಾರಾದ ಬೀರ್ ಕಾಲಕ್ರಮದಲ್ಲಿ ಕೆಟ್ಟುಹೋಗುವುದನ್ನೂ ಗಮನಿಸಿದ. 1857 ರಲ್ಲಿ ಪಾಸ್ತರ್ ಇಕೋಲಿ ನಾರ್ಮೆಲ್ಲಿನಲ್ಲಿ ಪ್ರಾಧ್ಯಾಪಕನಾಗಿ ವರ್ಗವಾದ ಮೇಲೂ ಈ ಬಗ್ಗೆ ಅನ್ವೇಷಣೆ ಮಾಡುತ್ತಿದ್ದು ಹುದುಗುಕಾರಕ ವಸ್ತು ಹಾಗೂ ಹುಳಿ ಬರಿಸುವ ವಸ್ತು ವಾಸ್ತವವಾಗಿ ಸೂಕ್ಷ್ಮ ಕ್ರಿಮಿಗಳೆಂದೂ ವಾತಾವರಣದಲ್ಲಿ ಅವು ಸಾಮಾನ್ಯವಾಗಿ ಇರುವುವೆಂದೂ ಜನ ವಾಸವಾಗಿರದ ಮತ್ತು ಸ್ವಚ್ಛ ವಾತಾವರಣವುಳ್ಳ ಪರ್ವತಾಗ್ರದ ಮೇಲಿನ ವಾಯುವಿನಲ್ಲಿ ಇರುವುದಿಲ್ಲವೆಂದೂ ಅಲ್ಲಿ ಪದಾರ್ಥ ತಾನಾಗಿಯೇ ಹುದುಗೇಳುವುದಾಗಲೀ ಹುಳಿ ಬಂದು ಕೆಟ್ಟು ಹೋಗುವುದಾಗಲೀ ಬೇಗ ಕಂಡುಬರುವುದಿಲ್ಲವೆಂದೂ ವಿಶದೀಕರಿಸಿದ. ಇಂಥ ಕ್ರಿಮಿಗಳು ನಾನಾ ಬಗೆಯವು; ಹುದುಗೇಳುವಾಗ ಬಗೆಬಗೆಯ ಕ್ರಿಮಿಗಳಿಂದ ಅನುರೂಪ ರಾಸಾಯನಿಕ ಕ್ರಿಯೆಗಳು ಜರಗಿ ಅಂತ್ಯಪರಿಣಾಮಗಳು ಬದಲಾಗುತ್ತವೆ ಎಂದು ತೋರಿಸಿದ. ಅಪೇಕ್ಷಿತ ಪರಿಣಾಮ ಕಂಡುಬಂದ ಬಳಿಕ ವಸ್ತುವನ್ನು 550ಅ-700ಅ ಯಷ್ಟು ಉಷ್ಣತೆಗೆ ಒಡ್ಡಿದರೆ ಈ ಕ್ರಿಮಿಗಳು ಸತ್ತು ಹೋಗಿ ಮುಂದೆ ಯಾವ ರೀತಿಯ ಅನಪೇಕ್ಷಿತ ಪರಿಣಾಮ ಕಂಡುಬರುವುದಿಲ್ಲವೆಂದೂ ಬೀರ್ ತಯಾರಿಸಿ ಶೀಶೆಗೆ ಹಾಕಿ ಮೊಹರು ಮಾಡಿದ ಮೇಲೆ ಅದನ್ನು ಈ ರೀತಿ ಸಂಸ್ಕರಿಸುವುದರಿಂದ ಬೀರಿನ ರುಚಿ ಮತ್ತು ಕಂಪು ಕೆಡುವುದಿಲ್ಲವೆಂದೂ ತೋರಿಸಿ, ಹೆಚ್ಚು ಕಡಿಮೆ ನಾಶವಾಗಿಯೇ ಹೋಗಿದ್ದ ಫ್ರಾನ್ಸಿನ ಬೀರ್ ಕೈಗಾರಿಕೆಯ ಪುನರುತ್ಥಾನಕ್ಕೆ ಕಾರಣನಾದ.
ಕ್ರಿಮಿಗಳು ನಿರ್ಜೀವ ವಸ್ತುಗಳಿಂದ ಉದ್ಭವಿಸಲಾರವು
ಇದೇ ವ್ಯಾಸಂಗದಿಂದ ವಿಶದವಾದ ಇನ್ನೊಂದು ಮುಖ್ಯ ವಿಷಯವೆಂದರೆ ಕ್ರಿಮಿಗಳು ತಾವಾಗಿಯೇ ನಿರ್ಜೀವ ವಸ್ತುಗಳಿಂದ ಉದ್ಭವಿಸಲಾರವು ಎಂಬುದು. ನಿರ್ಜೀವ ವಸ್ತುಗಳಿಂದ ಜೀವಿಗಳು ಉತ್ಪತ್ತಿಯಾಗಬಲ್ಲವು ಎಂದು ಆಗ ಒಂದು ಸಾಮಾನ್ಯ ನಂಬಿಕೆ ಇತ್ತು. ಮಾಂಸವನ್ನಾಗಲಿ ಮಾಂಸಸಾರವನ್ನಾಗಲಿ ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿದರೆ ಜೀವಂತ ಸೂಕ್ಷ್ಮಾಣುಗಳು ಯಾವುವೂ ಕಾಣಬರದಿದ್ದರೂ ಕೆಲಕಾಲಾನಂತರ ಅವೇ ವಸ್ತುಗಳನ್ನು ಪುನಃ ಪರೀಕ್ಷಿಸಿದರೆ ಸೂಕ್ಷ್ಮಾಣುಗಳು ಅವುಗಳಲ್ಲಿ ಉದ್ಭವಿಸಿರುವುದು ತಿಳಿಯುತ್ತದೆ. ಮಾಂಸ ಅಥವಾ ಅದರ ಸಾರವಿರುವ ಪಾತ್ರೆಯ ಬಾಯಿಯನ್ನು ಬಿಗಿಯಾಗಿ ಮುಚ್ಚಿಟ್ಟಿದ್ದರೂ ಹೀಗಾಗುವುದು ನಿಶ್ಚಯ ಎಂಬುದನ್ನು ಕೆಲವರು ಪ್ರಾಯೋಗಿಕವಾಗಿ ಸಾಧಿಸಿಯೂ ಇದ್ದರು. ಅವರ ಪ್ರಯೋಗಗಳು ಹೇಗೆ ದೋಷಪೂರ್ಣವಾಗಿದ್ದುವು, ಆ ದೋಷಗಳನ್ನು ಸರಿಪಡಿಸಿದರೆ ಅವು ಹೇಗೆ ನಿಷ್ಫಲವಾಗುವುವು ಎಂಬುದನ್ನು ಪಾಸ್ತರ್ ತೋರಿಸಿ ವಸ್ತುಗಳ ವೃದ್ಧಿಗೆ ಮೂಲವಾಗಿ ಜೀವಂತ ವಸ್ತುಗಳು ಇದ್ದೇ ಇರಬೇಕು ಎಂದು ತೋರಿಸಿದ.
ರೇಷ್ಮೆ ಹುಳುಗಳ ರೋಗ ನಿರೋಧಕ
1865 ರಲ್ಲಿ ಸರ್ಕಾರದ ಮತ್ತು ಅವನ ಗುರು ಡ್ಯೂಮಾಸನ ಅಪೇಕ್ಷೆಯಂತೆ ಪಾಸ್ತರ್ ರೇಷ್ಮೆ ಹುಳುಗಳ ವಿಚಾರವಾಗಿ ವ್ಯಾಸಂಗ ಕೈಗೊಂಡ. ಹಲವು ವರ್ಷಗಳಿಂದ ಫ್ರಾನ್ಸಿನಲ್ಲಿ ರೇಷ್ಮೆ ಹುಳುಗಳಿಗೆ ಏನೋ ರೋಗ ಬಂದು ಅವು ಗೂಡು ಕಟ್ಟುವುದಕ್ಕೆ ಮೊದಲೇ ಸತ್ತುಹೋಗುತ್ತಿದ್ದುದು ರೇಷ್ಮೆ ತಯಾರಕರಿಗೆ ದಿಗ್ಭ್ರಮೆಯಾಗಿತ್ತು. ಕೆಲವೇ ವರ್ಷಗಳ ಹಿಂದೆ ಫ್ರಾನ್ಸಿನ ಬೀರ್ ಕೈಗಾರಿಕೆ ಸ್ಥಗಿತಗೊಂಡಿತೇನೋ ಎಂದು ಹೆದರಿದ್ದಂತೆಯೇ ಈಗ ಫ್ರಾನ್ಸಿನ ರೇಷ್ಮೆ ತಯಾರಿಕೆಗೆ ಕೊನೆಗಾಲ ಬಂತು ಎನ್ನುವಂತಾಗಿತ್ತು. ಪಾಸ್ತರ್ ರೇಷ್ಮೆಹುಳುಗಳನ್ನು ಅರೆದು ಸಾರವನ್ನು ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಿ ರೇಷ್ಮೆ ಹುಳುಗಳ ರೋಗ ಹಾಗೂ ಮರಣಕ್ಕೆ ಕಾರಣವಾದ ಕ್ರಿಮಿಗಳು ಇರುವುದನ್ನು ತೋರಿಸಿದ. ಮೊಟ್ಟೆ ಇಟ್ಟ ಮೇಲೆ ಆ ಚಿಟ್ಟೆಗಳನ್ನು ಅರೆದು ಪರೀಕ್ಷಿಸಿ ಸೋಂಕು ಇದ್ದ ಚಿಟ್ಟೆಗಳ ಮೊಟ್ಟೆಗಳನ್ನು ನಾಶ ಮಾಡುತ್ತ ಸೋಂಕುಳ್ಳ ರೇಷ್ಮೆ ಹುಳುಗಳ ಸಂತತಿಯನ್ನು ನಿರ್ಮೂಲ ಮಾಡುವ ವಿಧಾನವನ್ನು ತೋರಿಸಿಕೊಟ್ಟ. ರೇಷ್ಮೆ ಹುಳುಗಳಿಗೆ ತಗಲುವುದು ಪೆಬ್ರೈನ್ ಎಂಬ ಸೋಂಕು ಒಂದೇ ಅಲ್ಲ. ಫ್ಲಾಚೆರಿ ಎಂಬ ಇನ್ನೊಂದು ಸೋಂಕಿನಿಂದಲೂ ಅವು ನಾಶವಾಗುವುವು ಎಂಬುದಾಗಿ ವಿಶದೀಕರಿಸಿ ಆ ಸೋಂಕಿನಿಂದಲೂ ಬಿಡುಗಡೆ ಆದ ಸಂತತಿಯನ್ನು ವೃದ್ಧಿ ಮಾಡುವುದೇ ತಕ್ಕ ಮಾರ್ಗ ಎಂದು ತೋರಿಸಿದ.
ಕೋಳಿಗಳಿಗೆ ಕೋಳಿಕಾಲರಾ ವ್ಯಾಕ್ಷೀನ್/ಲಸಿಕೆ
ನಿರಂತರವಾಗಿ ಪ್ರಯೋಗ ಮತ್ತು ತೀವ್ರ ಚಿಂತನೆಗಳಲ್ಲಿ ಉದ್ಯುಕ್ತನಾಗಿದ್ದ ಪಾಸ್ತರನ ಆರೋಗ್ಯ 1868 ರಲ್ಲಿ ಹದಗೆಟ್ಟಿತು. ಅವನು ಪಾಶ್ರ್ವವಾಯುಗ್ರಸ್ತನಾದ. ಆದರೆ ಶೀಘ್ರದಲ್ಲಿ ತಕ್ಕಷ್ಟು ಚೇತರಿಸಿಕೊಂಡು ಪುನಃ ವ್ಯಾಸಂಗಗಳನ್ನು ಮುಂದುವರಿಸಿದ. ಅಂದು ಅವನ ಆಸಕ್ತ ಕ್ಷೇತ್ರ ಕುರಿಗಳಿಗೆ ಮಾರಿಯಾಗಿ ಬರುತ್ತಿದ್ದ ನೆರಡಿ ರೋಗದ ಅಧ್ಯಯನ. ನೆರಡಿ ರೋಗ ಕುರಿಗಳಿಗೆ ವ್ಯಾಪಕ ಮಾರಕವಾಗಿದ್ದಂತೆಯೇ ಕೋಳಿಗಳಿಗೆ ಕೋಳಿಕಾಲರಾ ಎಂಬ ವ್ಯಾಧಿ ಮಾರಕವಾಗಿತ್ತು. ಇದರ ಕಾರಕ ಕ್ರಿಮಿಯನ್ನು ಪ್ರತ್ಯೇಕಿಸಿ ಅದನ್ನು ಪ್ರಯೋಗಾಲಯದಲ್ಲಿ ಮತ್ತೆ ಮತ್ತೆ ಕೃಷಿ ಮಾಡಿ ದುರ್ಬಲ ಕ್ರಿಮಿಯಾಗಿ ಮಾರ್ಪಡಿಸುವ ವಿಧಾನವನ್ನು ಪಾಸ್ತರ್ ಆವಿಷ್ಕರಿಸಿದ. ಈ ದುರ್ಬಲ ಕ್ರಿಮಿಯನ್ನು ಚುಚ್ಚುಮದ್ದಾಗಿ ಕೋಳಿಮರಿಗಳ ದೇಹದ ಒಳಹೊಗಿಸಿದರೆ ಮುಂದೆ ಇವು ಕಾಲರಾ ವ್ಯಾಧಿಯಿಂದ ಮೃತವಾಗುವುದಿಲ್ಲ ಎಂದೂ ತೋರಿಸಿದ. ಇದೇ ರೀತಿ ನೆರಡಿ ರೋಗಕಾರಕ ಸೂಕ್ಷ್ಮಾಣುವನ್ನು ದುರ್ಬಲೀಕರಿಸಿ ಇದನ್ನು ಆರೋಗ್ಯವಾಗಿದ್ದ ಕುರಿಗಳಿಗೆ ಚುಚ್ಚುಮದ್ದಾಗಿ ಕೊಟ್ಟು ಮುಂದೆ ಇವು ನೆರಡಿ ರೋಗಕ್ಕೆ ತುತ್ತಾಗದಂತೆ ರಕ್ಷಣೆ ಒದಗಿಸಬಹುದೆಂದೂ ತೋರಿಸಿದ. ವಿಜ್ಞಾನಿಗಳಿಗೂ ಜನಸಾಮಾನ್ಯರಿಗೂ ಈ ವಿಧಾನ ಮನದಟ್ಟಾಗುವಂತೆ ಈತ 1881 ರಲ್ಲಿ ಮೆಲುನ್ ನಗರದಲ್ಲಿ ನಡೆಸಿದ ಪ್ರಯೋಗ ಲೋಕವಿಖ್ಯಾತವಾಯಿತು.
ಹುಚ್ಚುನಾಯಿ ಕಡಿತಕ್ಕೆ ಚಿಕಿತ್ಸೆ
ಕೊನೆಯದಾಗಿ ಮತ್ತು ವೈದ್ಯಕೀಯ ಗಣನೆಯಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಪಾಸ್ತರನ ವ್ಯಾಸಂಗ ವಿಷಯವಾಗಿ ಇದ್ದುದು ಹುಚ್ಚುನಾಯಿಕಡಿತದಿಂದ ಉಂಟಾಗುವ ರೇಬೀಸ್ ಅಥವಾ ಹೈಡ್ರೊಫೋಬಿಯ ಎಂಬ ಮಾರಕರೋಗ. ಹುಚ್ಚುನಾಯಿ ಕಚ್ಚುವುದರಿಂದಲೇ ಈ ರೋಗ ಹರಡುವುದಾದ್ದರಿಂದ ರೋಗಾಣು ಇಂಥ ನಾಯಿಯ ಜೊಲ್ಲಿನಲ್ಲಿ ಇರಬೇಕೆಂದು ಪಾಸ್ತರ್ ತರ್ಕಿಸಿದ. ಪ್ರಾರಂಭದಲ್ಲಿ ಆತ ಈ ಕ್ರಿಮಿಯನ್ನು ಹುಚ್ಚುನಾಯಿಯ ಜೊಲ್ಲಿನಲ್ಲಿದ್ದ ಅನೇಕ ಬಗೆಯ ಸೂಕ್ಷ್ಮಾಣುಗಳಿಂದ ಪ್ರತ್ಯೇಕಿಸಬೇಕೆಂದು ಪ್ರಯತ್ನಿಸಿ ವಿಫಲನಾದ (ಈ ರೋಗಾಣು ಸೂಕ್ಷ್ಮದರ್ಶಕದಲ್ಲೂ ಕಾಣದಷ್ಟು ಸೂಕ್ಷ್ಮವಾದುದೆಂದು ಇಂದು ತಿಳಿದಿರುವುದರಿಂದ ಪಾಸ್ತರ್ ವಿಫಲನಾದುದು ಆಶ್ಚರ್ಯವಲ್ಲ). ಅನಂತರ ರೋಗ ಪ್ರಧಾನವಾಗಿ ನರಮಂಡಲಕ್ಕೆ ಸಂಬಂಧಪಟ್ಟಿರುವುದು ಮನದಟ್ಟಾಗಿ ನರಮಂಡಲದಿಂದ ರೋಗಾಣುಗಳನ್ನು ಪಡೆಯಲು ಪ್ರಯತ್ನಿಸಿದ. ರೋಗಾಣು ಪತ್ತೆ ಆಗದಿದ್ದರೂ ರೋಗಗ್ರಸ್ತ ನಾಯಿಯ ಮಿದುಳಿನ ಅಥವಾ ಮಿದುಳುಬಳ್ಳಿಯ ಸಾರವನ್ನು ಚುಚ್ಚು ಮದ್ದಾಗಿ ಕೊಟ್ಟು ಆರೋಗ್ಯವಂತ ಪ್ರಾಣಿಗಳಲ್ಲಿ ರೋಗವನ್ನು ಉಂಟುಮಾಡಬಹುದೆಂದು ತೋರಿಸಿದ. ರೋಗಾಣು ಇಂಥದೇ ಎಂದು ಪತ್ತೆ ಆಗದಿದ್ದುದರಿಂದ ಅದನ್ನು ಪ್ರಯೋಗಾಲಯದಲ್ಲಿ ಕೃಷಿ ಮಾಡಲು ಸಾಧ್ಯವಾಗದೆ, ದುರ್ಬಲೀಕರಿಸುವುದಕ್ಕೂ ಆಗದೇ ರೋಗರಕ್ಷಣೆಗಾಗಿ ಕೋಳಿಕಾಲರಾ, ನೆರಡಿ ಮುಂತಾದ ರೋಗಗಳಲ್ಲಿ ಅನುಸರಿಸಿದ ಮಾರ್ಗವನ್ನು ಬಿಟ್ಟು ಬೇರೆ ಮಾರ್ಗವನ್ನು ಅನುಸರಿಸಬೇಕಾಯಿತು. ಮೊಲದಲ್ಲಿ ರೋಗವನ್ನು ಉಂಟುಮಾಡಿ ಅದರ ಮಿದುಳುಬಳ್ಳಿಯನ್ನು ಕೆಲವು ದಿವಸಗಳ ಕಾಲ ಒಣಗಿಸಿದಾಗ ಅದರ ಸಾರದ ರೋಗಕಾರಕ ಸಾಮಥ್ರ್ಯ ಕ್ರಮೇಣ ಕುಂದುವುದೆಂದು ಹದಿನಾಲ್ಕು ದಿವಸಗಳ ಮೇಲ್ಪಟ್ಟು ಒಣಗಿಸಿದರೆ ಅದು ಪೂರ್ಣವಾಗಿ ನಾಶವಾಗುವುದೆಂದೂ ತಿಳಿಯಿತು. ಹದಿಮೂರು ದಿವಸಗಳು ಒಣಗಿಸಿದ ಮಿದುಳುಬಳ್ಳಿಯ ಸಾರವನ್ನು ಚುಚ್ಚುಮದ್ದಾಗಿ ಕೊಟ್ಟರೆ ಅದು ರೋಗರಕ್ಷಣೆಯನ್ನು ಒದಗಿಸಲಾರದು. ಆದರೆ ಒಂದೆರಡು ದಿವಸಗಳು ಒಣಗಿಸಿದ ಮಿದುಳುಬಳ್ಳಿಯ ಸಾರವನ್ನು ಕೊಟ್ಟರೆ ತೀವ್ರರೋಗವೇ ಕಂಡು ಬಂದು ಪ್ರಾಣಿ ಸತ್ತು ಹೋಗುವುದು ಎಂದು ತಿಳಿಯಿತು. ಇದರ ಬದಲು ಹದಿನಾಲ್ಕು ದಿವಸಗಳು ಒಣಗಿಸಿದ ಮಿದುಳುಬಳ್ಳಿಯ ಸಾರದಿಂದ ಪ್ರಾರಂಭಿಸಿ ಹದಿಮೂರು ದಿವಸ, ಹನ್ನೆರಡು ದಿವಸ ಇತ್ಯಾದಿ ಕಾಲ ಒಣಗಿಸಿದ ಬಳ್ಳಿಯ ಸಾರವನ್ನು ದಿನದಿನವೂ ಕ್ರಮವಾಗಿ ಕೊಡುತ್ತಾ ಬಂದರೆ ಅನಂತರ ಒಣಗಿಸದ ಸಾಕ್ಷಾತ್ ರೋಗಗ್ರಸ್ತ ಪ್ರಾಣಿಯ ಮಿದುಳಿನ ಸಾರವನ್ನು ಕೊಟ್ಟರೂ ರೋಗ ಬರದು ಎಂದು ಮೊಲಗಳಲ್ಲಿ ಪದೇ ಪದೇ ಪ್ರಯೋಗ ಮಾಡಿ ಪಾಸ್ತರ್ ದೃಢಪಡಿಸಿಕೊಂಡ. ಆದರೆ ಇದು ಮನುಷ್ಯರಲ್ಲೂ ಉಪಯೋಗವಾಗಬಹುದಾದ ಕ್ರಮವೇ? ಗೊತ್ತುಮಾಡಿಕೊಳ್ಳುವುದು ಹೇಗೆ? ಎಂದು ತಿಳಿಯದೆ ಹಲವು ತಿಂಗಳುಗಳು ಕೈಕಟ್ಟಿ ಕುಳಿತುಕೊಳ್ಳಬೇಕಾಯಿತು. ಒಂದು ದಿನ (6 ಜುಲೈ 1885) ಜೋಸೆಫ್ ಮೀಸ್ಟರ್ ಎಂಬ ಹುಡುಗನಿಗೆ ಹುಚ್ಚುನಾಯಿ ಕಡಿದು ತೀವ್ರ ಗಾಯಗಳಾಗಿದ್ದು, ಆತನ ತಾಯಿ ಪಾಸ್ತರ್ ಹತ್ತಿರ ಬಂದು ಹೇಗಾದರೂ ಮಾಡಿ ಆತನನ್ನು ಬದುಕಿಸಿ ಕೊಡಬೇಕೆಂದು ಕೇಳಿಕೊಂಡಳು. ಹುಚ್ಚುನಾಯಿ ಕಡಿತಕ್ಕೆ ಆಗಿನ ಕಾಲದಲ್ಲಿ ರೂಢಿಯಲ್ಲಿದ್ದ ಚಿಕಿತ್ಸಾ ಕ್ರಮವೆಂದರೆ ನಾಯಿ ಕಡಿದ ಅರ್ಧ ಗಂಟೆಯೊಳಗೆ ಕೆಂಪಗೆ ಕಾಯಿಸಿದ ಕಬ್ಬಿಣದಿಂದ ಕಡಿದ ಗಾಯದ ಮೇಲೆಯೇ ಬರೆ ಹಾಕುವುದು. ಇಂಥ ಭೀಕರ ಕ್ರಮಕ್ಕೆ ತಾಯಿಯ ಮನಸ್ಸು ಒಪ್ಪದೆ, ಪಾಸ್ತರನ ವ್ಯಾಸಂಗ ವಿಷಯವನ್ನು ಕೇಳಿ ಅವನಲ್ಲಿಗೆ ಬಂದಿದ್ದಳು. ಬಲುದಿನಗಳಿಂದ ನಿರೀಕ್ಷಿಸುತ್ತಿದ್ದ ಅವಕಾಶ ಒದಗಿಬಂದು ಪಾಸ್ತರ್ ಆ ಹುಡುಗನಿಗೆ ತಾನು ಸಿದ್ಧಪಡಿಸಿ ಇಟ್ಟುಕೊಂಡಿದ್ದ ಹದಿನಾಲ್ಕು ದಿವಸಗಳು ಒಣಗಿಸಿದ, ಹದಿಮೂರು ದಿವಸಗಳು ಒಣಗಿಸಿದ, ಇತ್ಯಾದಿ, ಮಿದುಳು ಬಳ್ಳಿ ಸಾರಗಳನ್ನು ಪ್ರತಿದಿನ ಚುಚ್ಚುಮದ್ದಾಗಿ ಕೊಡುತ್ತಾ ಬಂದ. ಹುಡುಗ ಸಾಯದೆ ಬದುಕಿಕೊಂಡದ್ದು ಪಾಸ್ತರನ ಆವಿಷ್ಕಾರಕ್ಕೆ ದೊರಕಿದ ಅತ್ಯದ್ಭುತ ವಿಜಯ. ಸ್ವಲ್ಪ ಕಾಲ ಮುಂದೆ ಇದೇ ರೀತಿ ಚಿಕಿತ್ಸೆಯಿಂದ ಪಾಸ್ತರ್ ಜ್ಯೂಪಿಲ್ಲೆ ಎಂಬ ಇನ್ನೊಬ್ಬ ಹುಡುಗನನ್ನು ಹುಚ್ಚುನಾಯಿ ಕಡಿತದ ಪರಿಣಾಮದಿಂದ ರಕ್ಷಿಸಿದ. ಈ ವ್ಯಕ್ತಿ ಮುಂದೆ ಜೀವನ ಪರ್ಯಂತ ಪಾಸ್ತರನನ್ನು ನೆರಳಿನಂತೆ ಅನುಸರಿಸುತ್ತಿದ್ದು ಅವನ ಸೇವಾನಿರತನಾಗಿದ್ದ.
ಮಾನವಕೋಟಿಗೆ ಅಪಾರ ಲಾಭ
ಹುಚ್ಚುನಾಯಿ ಕಡಿತದಿಂದ ಉಂಟಾಗುವ ರೋಗದ ವಿರುದ್ಧ ರಕ್ಷಣೆಯ ಈ ಕ್ರಮದಿಂದ ಮಾನವಕೋಟಿಗೆ ಅಪಾರ ಲಾಭವಾಯಿತು. ಪ್ರಪಂಚದಲ್ಲೆಲ್ಲಾ ಈ ಕ್ರಮದ ಉಪಯುಕ್ತತೆ ಮನದಟ್ಟಾಗಿ ಇದನ್ನು ಎಲ್ಲೆಲ್ಲೂ ಅನುಸರಿಸಲು ತಕ್ಕಷ್ಟು ಮಿದುಳುಬಳ್ಳಿ ಸಾರವನ್ನು ತಯಾರಿಸುವ ಅನುಕೂಲತೆ ಲಭಿಸುವಂತೆ ನಿಧಿಯನ್ನು ನಾನಾಕಡೆಗಳಿಂದ ಸಂಗ್ರಹಿಸಲಾಯಿತು. ಇಪ್ಪತ್ತೈದು ಲಕ್ಷ ಫ್ರಾಂಕುಗಳ ಮೌಲ್ಯದ ಈ ನಿಧಿಯಿಂದ ಪ್ಯಾರಿಸ್ನಲ್ಲಿ ಭವ್ಯಸೌಧವನ್ನು ಕಟ್ಟಿ ಸಂಸ್ಥೆಯನ್ನು ಸ್ಥಾಪಿಸಿ ಅದಕ್ಕೆ ಪಾಸ್ತರ್ ಇನ್ಸ್ಟಿಟ್ಯೂಟ್ ಎಂದು ಹೆಸರಿಡಲಾಯಿತು. 1838 ರಲ್ಲಿ ಪೂರ್ಣಗೊಳಿಸಿದ ಈ ಸಂಸ್ಥೆಗೆ ಪಾಸ್ತರನನ್ನೇ ಮೊದಲ ನಿರ್ದೇಶಕನಾಗಿ ನೇಮಿಸಿ ಗೌರವಿಸಲಾಯಿತು. ಇಲ್ಲಿ ಪಾಸ್ತರ್ ಪ್ರಯೋಗಗಳನ್ನು ಮುಂದುವರಿಸುತ್ತಾ 1895 ಸೆಪ್ಟಂಬರ್ 28 ರಂದು ನಿಧನನಾದ.
ಪಾಸ್ತರನ ಹಿರಿಮೆ
ಒಂದೇ ವ್ಯಕ್ತಿಯಲ್ಲಿ ಸಾಮಾನ್ಯವಾಗಿ ಕಂಡುಬರದ ಅನೇಕ ರೀತಿಯ ಸಾಮಥ್ರ್ಯ ಸ್ವಭಾವಗಳು ಪಾಸ್ತರನಲ್ಲಿ ಕೇಂದ್ರೀಕೃತವಾಗಿದ್ದುದೇ ಆತನ ಘನ ಸಾಧನೆಗಳಿಗೆ ಕಾರಣ. ವೈಜ್ಞಾನಿಕ ಸಂಶೋಧನೆಗಳಲ್ಲಿ ಸಂಪೂರ್ಣ ಮಗ್ನನಾಗಿರುವಷ್ಟು ಆಸಕ್ತಿ ಇದ್ದುದರಿಂದಲೇ ಅವನಿಗೆ ಪಾಶ್ರ್ವವಾಯು ತಗುಲಿದ್ದೂ ಅಲ್ಲದೆ ವಾಸಿಯಾಗಿದ್ದು ಕೂಡ ಎಂದು ಭಾವಿಸಬಹುದು. ಪ್ರಯೋಗಗಳ ವಿಷಯವಾಗಿ ಮನಸ್ಸಿಗೆ ಅಪೂರ್ವ ಯೋಜನೆಗಳು ಹೊಳೆಯುತ್ತಿದ್ದುದೂ ಅವನ್ನು ಕಾರ್ಯಗತ ಮಾಡುವ ವಿಧಾನಗಳ ಆವಿಷ್ಕಾರಗಳನ್ನು ಮಾಡುತ್ತಿದ್ದುದೂ ಪಾಸ್ತರನ ಹಿರಿಮೆ. ಕೈಗಾರಿಕೆಗಳಿಗೆ ಅಥವಾ ವಿಶಿಷ್ಟವಾದ ರೋಗಗಳಿಗೆ ಸಂಬಂಧಪಟ್ಟಂತೆ ಪ್ರಯೋಗಗಳನ್ನು ಕೈಗೊಂಡರೂ ಅವೇ ಪ್ರಯೋಗಗಳು ಆಯಾ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿರದೇ ವ್ಯಾಪಕ ತತ್ತ್ವವೊಂದನ್ನು ವಿಶದೀಕರಿಸುವಂಥವಾಗಿದ್ದವು. ಸಾಮಾನ್ಯವಾಗಿ ಒಂಟಿಯಾಗಿಯೇ ಪ್ರಯೋಗ ನಿರತನಾಗಿದ್ದರೂ ಅವಶ್ಯವಾದಾಗ ಜನರ ಜೊತೆ ಸಂಪರ್ಕ ಬೆಳೆಸುವುದಕ್ಕಾಗಲೀ ವಾದಮಾಡಿ ತನ್ನ ನಿಲವನ್ನು ದೃಢೀಕರಿಸುವುದಕ್ಕಾಗಲಿ ಇವನೆಂದೂ ಹಿಂದೇಟು ಹೊಡೆದವನಲ್ಲ. ತಂದೆಯಲ್ಲಿ ಪರಮ ಭಕ್ತಿ ವಿಶ್ವಾಸಗಳಿದ್ದವನು. ತಾನು ವಿಖ್ಯಾತ ವಿಜ್ಞಾನಿಯಾಗಿ ಯಶಸ್ಸಿನ ಪಾವಟಿಗೆಗಳನ್ನು ಏರುತ್ತಿದ್ದ ಒಂದೊಂದು ಹಂತದಲ್ಲೂ ತಂದೆಯ ಆಶೀರ್ವಾದ ಪಡೆಯುತ್ತಿದ್ದ. ತಂಗಿಯರ ವಿಷಯದಲ್ಲೂ ಅಷ್ಟೇ ವಿಶ್ವಾಸ. ತನ್ನ ಸಂಸಾರದಲ್ಲಿ ಹೆಂಡತಿ ಮಕ್ಕಳೊಡನೆ ಆನಂದದಿಂದ ಕಾಲ ಕಳೆದವ. ಪ್ರೀತಿಯ ಮಗಳು ಮೃತಳಾದಾಗ ದಿಕ್ಕು ತೋರದಂತಾಗಿದ್ದರೂ ಶೀಘ್ರದಲ್ಲಿ ಚೇತರಿಸಿಕೊಂಡು ತನ್ನ ತಂದೆಗೂ ತನ್ನ ಹೆಂಡತಿಗೂ ಸಮಾಧಾನ ಹೇಳುತ್ತ ಮಾಮೂಲಿನಂತೆ ವ್ಯಾಸಂಗಗಳಲ್ಲಿ ನಿರತನಾಗುವಷ್ಟು ಸ್ಥೈರ್ಯವಂತನಾಗಿದ್ದ. ವಿಜ್ಞಾನಿಯಾಗಿ ಪಾಸ್ತರ್ ಎಷ್ಟು ದೊಡ್ಡವನೊ ಕರುಣಾದ್ರ್ರ ಹೃದಯಿಯಾಗಿಯೂ ಅಷ್ಟೇ ದೊಡ್ಡವನು. (ಎಸ್.ಆರ್.ಆರ್.)[3]
ಕೋವಿಡ್- 19 ಸಾಂಕ್ರಾಮಿಕಕ್ಕೆ ಲಸಿಕೆ
ಹೈದರಾಬಾದ್ (ಭಾರತ)ಮೂಲದ ಭಾರತ್ ಬಯೋಟೆಕ್ ಭಾರತದ ಮೊದಲ ಕರೋನವೈರಸ್ ಲಸಿಕೆ ಕೋವಾಕ್ಸಿನ್ ಅಭಿವೃದ್ಧಿಪಡಿಸಿದೆ. ಮಾನವರ ಮೇಲಿನ ಚಿಕಿತ್ಸಾ ಪ್ರಯೋಗ (ಹ್ಯೂಮನ್ ಕ್ಲಿನಿಕಲ್ ಟ್ರಯಲ್) ಪ್ರಾರಂಭಿಸಲು ಭಾರತದ ಔಷಧ ನಿಯಂತ್ರಣ ಮಹಾನಿರ್ದೇಶನದಿಂದ (ಡಿಸಿಜಿಐ)ಯಿಂದ ಅನುಮೋದನೆ ಪಡೆದಿದೆ. ವಿಸ್ಕಾನ್ಸಿನ್ ವಿಶ್ವವಿದ್ಯಾಲಯ, ಐಸಿಎಂಆರ್ ಮತ್ತು ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ತನ್ನ 3 ಕೋವಿಡ್ -19 ಲಸಿಕೆಗಳನ್ನು ಘೋಷಿಸಲು ಕೋವಾಕ್ಸಿನ್ ತಯಾರಕ ಸಂಸ್ಥೆ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ. ವಿಸ್ಕಾನ್ಸಿನ್ ವಿಶ್ವವಿದ್ಯಾಲಯ, ಐಸಿಎಂಆರ್ ಮತ್ತು ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಲಸಿಕೆಯ ಮೊದಲ ಮತ್ತು ಎರಡನೇ ಹಂತದ ಪ್ರಯೋಗವು ಜುಲೈನಿಂದ ಪ್ರಾರಂಭವಾಗಲಿದೆ, ಅದು ಜನರಿಗೆ ಲಭ್ಯವಾಗುವುದು ವೈಜ್ಞಾನಿಕವಾಗಿ ಪ್ರಯೋಗಗೊಂಡ ನಂತರ. ಹಾಗಾಗಿ ಅದರ ಲಭ್ಯತೆ ಯಾವಾಗ ಎನ್ನುವುದನ್ನು ತಿಳಿಯಲಾಗದು. ವಿಶ್ವಸಂಸ್ಥೆಯು, ಜಗತ್ತಿನಾದ್ಯಂತ ಸುಮಾರು 140 ಲಸಿಕೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇವುಗಳಲ್ಲಿ 16 ಲಸಿಕೆ ಮಾತ್ರ ಚಿಕಿತ್ಸೆಗೆ ಬಳಸಲಾಗುತ್ತಿದೆ. ಚೀನಾದ 5, ಅಮೆರಿಕದ 3, ಇಂಗ್ಲೆಂಡ್ನ 2 ಮತ್ತು ಜರ್ಮನಿ, ಆಸ್ತ್ರೇಲಿಯಾ, ರಷ್ಯಾದ ತಲಾ ಒಂದು ಲಸಿಕೆ ಸೇರಿವೆ, ಎಂದು ಹೇಳಿತ್ತು. ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.[4][5]
ಕೋವಿಡ್ -19: ಎರಡನೇ ಅಲೆಯನ್ನು ತಡೆಗಟ್ಟಲು ಲಾಮಾಗಳ 'ನ್ಯಾನೊಬಾಡಿ'ಗಳು
ಕೋವಿಡ್ -19 ಸೋಂಕಿನಿಂದ ರಕ್ಷಿಸಲು ಲಸಿಕೆಗಾಗಿ ಹುಡುಕಾಟವು ಜಗತ್ತಿನಾದ್ಯಂತ ಯುದ್ಧದ ವೇಗದಲ್ಲಿ ಮುಂದುವರಿಯುತ್ತಿದೆ. ಮತ್ತು ಇತ್ತೀಚಿನ ವರದಿಯ ಪ್ರಕಾರ, ಕೊರೊನಾವೈರಸ್ ಸೋಂಕಿನ ಉತ್ತರವು "ನ್ಯಾನೊಬಾಡಿ"ಗಳು("ನ್ಯಾನೊಕಣ"ಗಳು) ಎಂದು ಕರೆಯಲ್ಪಡುವ ಸಣ್ಣ ಪ್ರತಿಕಾಯಗಳಲ್ಲಿ ಕಂಡುಬರುತ್ತದೆ, ಇದು ಆಲ್ಪಾಕಾಗಳ ಮತ್ತು ಲಾಮಾಗಳ ದೇಹದ ಒಳಗೆ ಕಂಡುಬರುತ್ತದೆ, ಅವು ಒಂಟೆ ಕುಟುಂಬದ ಪ್ರಾಣಿಗಳಾಗಿವೆ. ಸ್ವೀಡನ್ ಮತ್ತು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳ ಪ್ರಕಾರ, ಈ ಪ್ರಾಣಿಗಳಲ್ಲಿನ ನ್ಯಾನೊಬಾಡಿಗಳನ್ನು ವೈರಸ್ ವಿರುದ್ಧ ರೋಗನಿರೋಧಕ ಚುಚ್ಚುಮದ್ದು ಮಾಡಬಹುದು, ನಂತರ ಇದನ್ನು ಮಾನವರಲ್ಲಿ ವೈರಸ್ ಹರಡುವುದನ್ನು ತಡೆಯಲು ಬಳಸಬಹುದು. ಇದು ಕರೋನವೈರಸ್ನ ಎರಡನೇ ತರಂಗವನ್ನು ತಡೆಯಬಹುದೆಂದು ವಿಜ್ಞಾನಿಗಳು ಭಾವಿಸುತ್ತಾರೆ.[6]
ಕೋವಿಡ್ ಚಿಕಿತ್ಸೆಯ ಲಸಿಕೆಗಾಗಿ ಜಗತ್ತಿನ ಅನೇಕ ಸರ್ಕಾರಗಳು ತಯಾರಿಕೆಯ ಅವಸರದಲ್ಲಿ ಬಿದ್ದಿರುವುದರಿಂದ, ೨೦೨೦ರ ಅಂತ್ಯದದೊಳಗೆ ಕೆಲವೇ ತಿಂಗಳಲ್ಲಿ ಸಂಶೋಧನೆಯಲ್ಲಿ ಮಹತ್ವದ ಪ್ರಗತಿ ಸಾಧಿಸುವ ನಂಬುಗೆ ಇದೆ.
ಮೊದಲ ಹಂತ: ವೈರಾಣುವಿನ ಗುಣಲಕ್ಷಣ, ಅದರ ವರ್ತನೆ ಅರಿಯುವುದು
ಎರಡನೇ ಹಂತ: ವೈರಾಣುವಿನ ಪ್ರಭಾವವನ್ನು ನಿಷ್ಕ್ರಿಯಗೊಳಿಸುವಂತೆ ಮಾನವನ ದೇಹದಲ್ಲಿ ರೋಗ ನಿರೋಧ ಶಕ್ತಿ ವೃದ್ಧಿಮಾಡುವ 'ಲಸಿಕೆ ಕ್ಯಾಂಡಿಡೇಟ್'ಗಳ ಪತ್ತೆ ಮಾಡುವುದು.
ಮೂರನೇ ಹಂತ: ವೈದ್ಯಕೀಯ ಪೂರ್ವ ಪ್ರಯೋಗ ನಡೆಸುವುದು; ಅಂದರೆ ಪ್ರಾಣಿಗಳ ಮೇಲೆ ಲಸಿಕೆ ಪ್ರಯೋಗ ಮಾಡುವುದು. ಇದರಿಂದ ಲಸಿಕೆಯು ಮನುಷ್ಯನ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನುವ ಹೊಳಹು- ಸೂಚನೆ ಸಂಶೋಧಕರಿಗೆ ಸಿಗುತ್ತದೆ.
ನಾಲ್ಕನೇ ಹಂತ: ಮನುಷ್ಯರ ಮೇಲೆ ಪ್ರಯೋಗ ನಡೆಸುವ ವೈದ್ಯಕೀಯ ಪ್ರಯತ್ನ (ಕ್ಲಿನಿಕಲ್ ಟ್ರಯಲ್) ಹಂತ ಇದು. ಇದರಲ್ಲೂ ಮೂರು ಹಂತಗಳಿವೆ. ಮೊದಲ ಹಂತದಲ್ಲಿ ಸಣ್ಣ ಪ್ರಮಾಣದ "ಡೋಸ್"ಗಳನ್ನು ನೀಡುವ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಆರೋಗ್ಯವಂತ ವ್ಯಕ್ತಿಗಳ ಮೇಲೆ ಈ ಪ್ರಯೋಗ ನಡೆಯುತ್ತದೆ. ಪರಿಣಾಮಗಳನ್ನು ಪರಿಶೀಲಿಸಿ, "ಡೋಸ್"ನ ಪ್ರಮಾಣವನ್ನು ನಿಗದಿ ಮಾಡಲಾಗುತ್ತದೆ. ಈ ಪ್ರಕ್ರಿಯೆ ಮುಗಿಯಲು 3–6 ತಿಂಗಳು ಬೇಕು.
ಎರಡನೇ ಹಂತದಲ್ಲಿ ರೋಗಿಗಳಿಗೂ ಲಸಿಕೆ ನೀಡಿ ವಿಸ್ತೃತ ಪರೀಕ್ಷೆ ನಡೆಸಲಾಗುತ್ತದೆ. ನೂರಾರು ರೋಗಿಗಳನ್ನು ಈ ಉದ್ದೇಶಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದಕ್ಕೆ ಸಾಮಾನ್ಯ ಸಂದರ್ಭದಲ್ಲಾದರೆ 2–4 ವರ್ಷ ಬೇಕು. ಅಲ್ಲಿನ ಫಲಿತಾಂಶವನ್ನು ನೋಡಿಕೊಂಡು ಕ್ಷಮತೆ ಪರೀಕ್ಷಿಸುವುದು ಕೊನೆಯ ಹಂತ. ಈ ಸಂದರ್ಭದಲ್ಲಿ ಸಾವಿರಾರು ಜನರ ಮೇಲೆ ಪ್ರಯೋಗ ಮಾಡಲಾಗುತ್ತದೆ.
ಐದನೇ ಹಂತ: ಸರ್ಕಾರದ ನಿಯಂತ್ರಣ ಪ್ರಾಧಿಕಾರವು ಲಸಿಕೆಯನ್ನು ಪರಿಶೀಲಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಲು ಒಪ್ಪಿಗೆ ನೀಡುವುದು.
ಭಾರತದಲ್ಲಿ:ಹೈದರಾಬಾದ್ನ ಭಾರತ್ ಬಯೋಟೆಕ್ ಕಂಪನಿಯು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್) ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಈಗಾಗಲೇ ಮೊದಲ ಹಂತದ ಕ್ಲಿನಿಕಲ್ ಟ್ರಯಲ್ಗೆ ಬಂದಿದೆ. ಅಹಮದಾಬಾದ್ನ ಝೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿರುವ ಝೈಕೋವ್–ಡಿ ಲಸಿಕೆಯೂ ಕ್ಲಿನಿಕಲ್ ಟ್ರಯಲ್ಗೆ ಬಂದಿದೆ. ಇವು ಕೊರೊನಾವೈರಸ್ ವಿರುದ್ಧ ಸೃಷ್ಟಿಯಾಗುವ ಪ್ರತಿಕಾಯಗಳ ಸಂಖ್ಯೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ. ಈ ವರ್ಷದ ಅಂತ್ಯದೊಳಗೆ ಅಥವಾ ಮುಂಚೆ ಉಪಯೋಗಕ್ಕೆ ಕೊಡುವ ನಿರೀಕ್ಷೆ ಇದೆ.[7]
ನಾಲ್ಕನೇ ಹಂತ:
ಚಂದೀಗಡದ ಭಾರತ್ ಬಯೊಟೆಕ್ ಸಂಸ್ಥೆಯು ಕೋವಿಡ್-19 ಚಿಕಿತ್ಸೆಗೆ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಮನುಷ್ಯನ ಮೇಲೆ ಪ್ರಯೋಗಿಸುವ ಪ್ರಕ್ರಿಯೆಗೆ ರೋಹ್ಟಕ್ನ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಾಲನೆ ನೀಡಿತು ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಟ್ವೀಟ್ ಮಾಡಿದ್ದಾರೆ. ಮನುಷ್ಯನ ಮೇಲೆ ಕೊವ್ಯಾಕ್ಸಿನ್ನ ಪ್ರಯೋಗ ಆರಂಭವಾಯಿತು. ಮೂವರನ್ನು ಇದಕ್ಕಾಗಿ ಇಂದು ನೋಂದಾಯಿಸಲಾಗಿದೆ. ಎಲ್ಲರಿಗೂ ಲಸಿಕೆ ಕೊಡಲಾಗಿದ್ದು, ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೂ ಆಗಿರುವ ವಿಜ್ ಶುಕ್ರವಾರ ತಿಳಿಸಿದ್ದಾರೆ.[8]
ಎರಡನೇ ಡೋಸ್ ಲಸಿಕೆಗೆ ಮುನ್ನವೇ ಸೋಂಕು
ಕೊರೋನಾ ಅಥವಾ ಕೊವಿಡ್-೧೯ ರಿಂದ ರಕ್ಷಣೆಗೆ ಮೊದಲ ಡೋಸ್ ಹಾಕಿಸಿಕೊಂಡ 21 ದಿನಗಳ ಬಳಿಕ ಎರಡನೇ ಡೋಸ್ ಹಾಕಿಸಿಕೊಳ್ಳಬೇಕು. ಫೈಜರ್ ಹಾಗೂ ಮೋಡರ್ನಾ ಈ ಎರಡೂ ಬಗೆಯ ಲಸಿಕೆಗಳಲ್ಲಿ ಜೀವಂತ ಅಥವಾ ಸತ್ತ ವೈರಸ್ ಇಲ್ಲ. ಬದಲಾಗಿ ಈ ಲಸಿಕೆ ನಿರಪಾಯಕಾರಿ ಪ್ರೊಟೀನ್ ತಯಾರಿಸುವಂತೆ ದೇಹಕ್ಕೆ ಸೂಚನೆ ನೀಡುತ್ತದೆ. ಲಸಿಕೆ ತೆಗೆದುಕೊಂಡ ವ್ಯಕ್ತಿಗೆ ಕೊರೊನಾ ವೈರಸ್ ತಗಲಿದರೆ, ಅದರ ವಿರುದ್ಧ ಹೋರಾಡಲು ದೇಹ ಸಜ್ಜಾಗಿರುತ್ತದೆ. ಆದರೆ ಲಸಿಕೆಯ ಎರಡೂ ಡೋಸ್ ತೆಗೆದುಕೊಂಡಾಗ ಮಾತ್ರ ಈ ಸಾಮರ್ಥ್ಯ ದೇಹಕ್ಕೆ ಲಭ್ಯವಾಗುತ್ತದೆ ಎಂದು ವಿವರಣೆ ನೀಡಲಾಗಿದೆ- ಇದನ್ನು ಫೈಜರ್ ಲಸಿಕೆ ತಯಾರಿಕಾ ಕಂಪನಿ ತನ್ನ ವೆಬ್ಸೈಟ್ನಲ್ಲಿ ಹಾಕಿಕೊಂಡಿದೆ.[9]
2021 ಮಾರ್ಚಿ12 ರ ಸರ್ಕಾರದ ವರದಿಯಂತೆ ದೇಶೀಯವಾಗಿ ತಯಾರಿಸಲಾಗಿರುವ, ಭಾರತ್ ಬಯೊಟೆಕ್ನ ಕೋವ್ಯಾಕ್ಸಿನ್ ಲಸಿಕೆಯು ಮನುಷ್ಯರ ಮೇಲೆ ಪ್ರಾಯೋಗಿಕ ಪರೀಕ್ಷೆ (ಕ್ಲಿನಿಕಲ್ ಟ್ರಯಲ್) ಹಂತವನ್ನು ಪೂರ್ಣಗೊಳಿಸಿದ್ದು, ಅದಕ್ಕೆ ನಿಯಮಿತ ನಿರ್ಬಂಧಿತ ತುರ್ತು ಬಳಕೆಯ ದೃಢೀಕರಣ ನೀಡಲಾಗಿದೆ. ಸೀರಂ ಇನ್ಸ್ಟಿಟ್ಯೂಟ್ನ ಕೋವಿಶೀಲ್ಡ್ ಹೊಂದಿರುವ ಮಾನ್ಯತೆಯನ್ನೇ ಈಗ ಕೋವ್ಯಾಕ್ಸಿನ್ ಪಡೆದುಕೊಂಡಿದೆ ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್ ಅವರು ತಿಳಿಸಿದ್ದಾರೆ. ಲಸಿಕೆಯು ಕ್ಲಿನಿಕಲ್ ಟ್ರಯಲ್ ಹಂತದ ಕೊನೆಯ ಘಟ್ಟದಲ್ಲಿ ಇದ್ದಾಗಲೇ ತುರ್ತು ಬಳಕೆಗೆ ನಿರ್ಬಂಧಿತ ಅನುಮತಿ ನೀಡಲಾಗಿತ್ತು. 19 ಲಕ್ಷ ಮಂದಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕಲಾಗಿದೆ.[10]