ಮಥುರಾ
From Wikipedia, the free encyclopedia
From Wikipedia, the free encyclopedia
ಮಥುರಾ ಉತ್ತರ ಪ್ರದೇಶ ರಾಜ್ಯದ ಒಂದು ನಗರ, ಆಗ್ರ ವಿಭಾಗಕ್ಕೆ ಸೇರಿದ ಒಂದು ಜಿಲ್ಲೆ ಹಾಗೂ ಮಥುರಾ ಜಿಲ್ಲೆಯ ಆಡಳಿತ ಕೇಂದ್ರ. ಅದು ಆಗ್ರಾದ ಉತ್ತರಕ್ಕೆ ಸುಮಾರು ೫೦ ಕಿ.ಮಿ. ದೂರದಲ್ಲಿ ಯಮುನಾ ನದಿ ಬಲದಂಡೆಯ ಮೇಲಿದೆ , ದೆಹಲಿಯ ಆಗ್ನೇಯಕ್ಕೆ ಸುಮಾರು ೧೪೫ ಕಿ.ಮಿ. ದೂರ, ವೃಂದಾವನ ಪಟ್ಟಣದಿಂದ ಸುಮಾರು ೧೧ ಕಿ.ಮಿ. ದೂರ, ಮತ್ತು ಗೋವರ್ಧನದಿಂದ ೨೨ ಕಿ.ಮಿ. ದೂರದಲ್ಲಿ ಸ್ಥಿತವಾಗಿದೆ.
ಶ್ರೀಕೃಷ್ಣನ ಜನ್ಮಸ್ಥಾನವೆಂದು ಪ್ರಸಿದ್ಧವಾಗಿರುವ ಇದು ಹಿಂದೂಗಳ ಯಾತ್ರಾಸ್ಥಳ.
ಮಥುರಾ ಮಾತ್, ಛತ್ ಸದಾಬಾದ್ ತಾಲ್ಲೂಕುಗಳಿಂದ ಕೂಡಿದ ಈ ಜಿಲ್ಲೆಯ ವಿಸ್ತೀರ್ಣ ೩೩೧೭.೨ ಚ.ಕಿ.ಮೀ ಜನಸಂಖ್ಯೆ ೧೫೬೦೪೪೭. ಜಿಲ್ಲೆಯಲ್ಲಿ ಮಳೆ ಕಡಿಮೆಯಾದರೂ ನೀರಾವರಿ ಸೌಕರ್ಯ ಚೆನ್ನಾಗಿದೆ. ಗೋದಿ, ಜೋಳ, ಕಡಲೆ ಮುಖ್ಯ ಬೆಳೆಗಳು. ಗ್ರಾಮ ಕೈಗಾರಿಕೆ ಹಾಗೂ ಸಣ್ಣ ಉದ್ಯಮಗಳು ಹಲವಿವೆ. ಕೋಳಿಸಾಕಣೆಗೆ ಹೆಸರಾಗಿದೆ. ರತ್ನಗಂಬಳಿ ಮತ್ತು ಜಮಖಾನ ತಯಾರಿಕೆ ಇಲ್ಲಿಯ ಜನರ ಪ್ರಧಾನ ಕಸಬುಗಳಲ್ಲೊಂದು.
ಮಥುರಾದ ಮೂಲರೂಪ ಮಥುರೆ. ವೈದಿಕಸಾಹಿತ್ಯದಲ್ಲಿ ಮಥುರೆಯ ಉಲ್ಲೇಖವಿಲ್ಲ. ವಾಲ್ಮೀಕಿ ರಾಮಾಯಣದಲ್ಲಿ ಇದನ್ನು ಮಧುಪುರ ಅಥವಾ ಮಧುದಾನವ ನಗರವೆಂದು ಕರೆದಿದೆ. ಮಹಾಭಾರತದಲ್ಲಿಯ ಉಲ್ಲೇಖದಂತೆ ಇದು ಶೂರಸೇನ ದೇಶದ ರಾಜಧಾನಿ. ಸೆರೆಯಲ್ಲಿದ್ದ ಕಂಸನ ಸೋದರಿ ದೇವಕಿ ಮತ್ತು ವಾಸುದೇವರಿಗೆ ಕೃಷ್ಣ ಜನಿಸಿದ. ಯಮುನಾ ನದಿಯ ಇನ್ನೊಂದು ತೀರದಲ್ಲಿದ್ದ ಗೋಕುಲದಲ್ಲಿ ಯಶೋದೆ ದರ ಸಾಕುಮಗನಾಗಿ ಬೆಳೆದ ಕೃಷ್ಣ ಮೈದುನನಾದ ಜರಾಸಂಧ ಮಥುರೆಗೆ ಮುತ್ತಿಗೆ ಹಾಕಿದಾಗ ಕೃಷ್ಣ ಯಾದವರೊಡನೆ ದ್ವಾರಕೆಗೆ ವಲಸೆ ಹೋದ. ಭಾಗವತದಲ್ಲಿ ಹಲವೆಡೆ ಮಥುರಾ ನಗರದ ವರ್ಣನೆಗಳಿವೆ. ಮೂರು ಕೋಟಿ ಮ್ಲೇಚ್ಛರ ಜೊತೆಗೂಡಿ ಬಂದ ಕಾಲಯವನ ಈ ನಗರವನ್ನು ಮುತ್ತಿದನಂತೆ. ಹರಿವಂಶ ಮತು ವಿಷ್ಣುಪುರಾಣಗಳಲ್ಲಿ ಈ ನಗರವನ್ನು ಮುತ್ತಿದನಂತೆ ಹರಿವಂಶ ಮತ್ತು ವಿಷ್ಣುಪುರಾಣಗಳಲ್ಲಿ ಈ ನಗರದ ವಿಲಾಸವೈಭವಗಳ ಮನೋಹರ ಚಿತ್ರಣ ಕಂಡುಬರುತ್ತದೆ. ಕಾಳಿದಾಸನ ರಘುವಂಶದಲ್ಲಿ ಇಂದುಮತಿಯ ಸ್ವಯಂವರ ವರ್ಣನೆಯ ಸಂದರ್ಭದಲ್ಲಿ ಈ ನಗರ ಶೂರಸೆ. ನಾಧಿಪ ಸುಷೇಣನ ರಾಜಧಾನಿಯಾಗಿತ್ತೆಂದು ಉಲೇಖಿತವಾಗಿದೆ. ಈ ಕಾವ್ಯಕ್ಕೆ ಟೀಕೆ ಬರೆದ ಮಲ್ಲಿನಾಥನು ಮಥುರೆ ಶತ್ರುಘ್ನ ನಿರ್ಮಿತ ನರಗವೆಂದು ಉಲ್ಲೇಖಿಸಿದ್ದಾನೆ.
ಬೌದ್ಧ ಸಾಹಿತ್ಯದಲ್ಲಿ ಈ ನಗರದ ಹಲವು ಉಲ್ಲೇಖಗಳು ಕಂಡುಬರುತ್ತವೆ. ಕ್ರಿ. ಪೂ. ಸು. 600ರ ವೇಳೆಗೆ ಇಲ್ಲಿ ಅವಂತಿಪುತ್ತ (ಅವಂತಿಪುತ್ರ) ಎಂಬ ಅರಸನ ಆಡಳಿತವಿತ್ತೆಂದೂ ಗೌತಮಬುದ್ಧ ಇಲ್ಲಿಗೆ ಭೇಟಿ ನೀಡುತ್ತಿದ್ದನೆಂದೂ `ಅಂಗುತ್ತರ ನಿಕಾಯ ತಿಳಿಸುತ್ತದೆ. ಆ ಕಾಲದಲ್ಲಿಯೂ ಇದೊಂದು ಪ್ರಧಾನ ವೈದಿಕ ಕೇಂದ್ರವಾಗಿತ್ತು. ಚಂದ್ರಗುಪ್ತಮೌರ್ಯನ ಕಾಲದಲ್ಲಿ ಇದು ಮೌರ್ಯ ಸಾಮ್ರಾಜ್ಯದಲ್ಲಿ ಲೀನವಾಯಿತು. ಮೆಗಾಸ್ತನೀಸನು ಈ ಸೂರಸೇನಾ ಮಥೋರಾ ಹಾಗೂ ಕ್ಲೀಸೊಬೋರಾ ಎಂಬ ನಗರಗಳನ್ನು ಉಲ್ಲೇಖಿಸಿ ಅವು ಕೃಷ್ಣೋಪಾಸನೆಯ ಕೇಂದ್ರಗಳಾಗಿದ್ದ ವೆಂದು ತಿಳಿಸಿದ್ದಾನೆ. ಅಶೋಕನ ಕಾಲದ ಹೊತ್ತಿಗೆ ಇಲ್ಲಿ ಬೌದ್ಧಧರ್ಮ ಸಾಕಷ್ಟು ಬೇರೂರಿತ್ತು. ಬೌದ್ಧ ಸಾಹಿತ್ಯ ಮತ್ತು ಹ್ಯೂಯೆನ್ತ್ಸಾಂಗ್ ಪ್ರವಾಸಕಥನಗಳಲ್ಲಿ ಅಶೋಕನ ಗುರುವೆಂದು ಉಕ್ತವಾದ ಉಪಗುಪ್ತ ಮಥುರೆಯ ನಿವಾಸಿ. ಟಾಲೆಮಿ, ಫಾಹಿಯಾನ ಕೃತಿಗಳಲ್ಲೂ ಈ ನಗರದ ಉಲ್ಲೇಖವಿದೆ.
ಜೈನಪರಂಪರೆಯ ಪ್ರಕಾರ ಜೈನ ಸಂಘದ ಎರಡನೆಯ ಪರಿಷತ್ತು ಸಮಾವೇಶಗೊಂಡದ್ದು ಮಥುರೆಯಲ್ಲಿ. ಸ್ಕಂದಿಲಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾವೇಶದಲ್ಲಿ `ಮಾಥುತವಾಚನ ಎಂಬ ಆಗಮನಗಳನ್ನು ರೂಪಿಸಲಾಯಿತ್ತು. ಆದರೆ ಕ್ರಿ.ಶ. ೫ನೆಯ ಶತಮಾನದ ಹೊತ್ತಿಗೆ ಈ ಜೈನಾಗಮಗಳ ವಾಚನ ನಿಂತು ಹೋಗಿದ್ದಿತೆಂದು ತಿಳಿದುಬರುತ್ತದೆ. ಮಥುರೆಯು ಜೈನಯತಿಗಳಾದ ಧರ್ಮರುಚಿ ಹಾಗೂ ಧರ್ಮಘೋಷರ ವಾಸಸ್ಥಾನವೆಂಬುದಾಗಿ `ವಿವಿಧ ತೀರ್ಥಕಲ್ಪ ಎಂಬ ಕೃತಿ ತಿಳಿಸುತ್ತದೆ. ಆಗ ಈ ನಗರ ಹನ್ನೆರಡು ಯೋಜನ ಉದ್ದ ಮತ್ತು ಒಂಬತ್ತು ಯೋಜನ ಅಗಲವಾಗಿದ್ದು, ದೇವಾಲಯ, ಜಿನಮಂದಿರ ಹಾಗೂ ಸರೋವರಗಳಿಂದ ಕಂಗೊಳಿಸುತ್ತಿತ್ತು; ವೃಕ್ಷಗಳಿಂದ ನಿಬಿಡವಾಗಿದ್ದ ಭೂಘರಮಣಿ ಉದ್ಯಾನದಲ್ಲಿ ಜೈನ ಸಾಧುಸಂತರು ವಾಸಿಸುತ್ತಿದ್ದರು. ಈ ಉದ್ಯಾನದ ಪ್ರಭುವಾದ ಕುವೇರ ಇಲ್ಲಿ ಜೈನಸ್ತೂಪವೊಂದನ್ನು ಕಟ್ಟಿಸಿ ಅದರಲ್ಲಿ ಸುಪಾಶ್ರ್ವ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದ, ನಗರದಲ್ಲಿ ಭಂಡೀರ ಯಕ್ಷನ ಮಂದಿರವಿದ್ದಿತು. ತಾಲ, ಭಂಡೀರ,ಕೌಲ, ಬಹುಲ, ಬಿಲ್ವ ಹಾಗೂ ಲೋಹಜಂಘ ಎಂಬ ಉದ್ಯಾನಗಳಿದ್ದುವು. ಅರ್ಕಸ್ಥಲ, ವೀರಸ್ಥಲ, ಪದ್ಯಸ್ಥಲ, ಕುಶಸ್ಥಲ ಹಾಗೂ ಮಹಾಸ್ಥಲ ಎಂಬ ಹೆಸರಿನ ಪವಿತ್ರ ಜೈನಸ್ಥಳಗಳಿದ್ದುವು. ವಿಶ್ರಾಂತಿಕ ತೀರ್ಥ, ಅಸಿಕುಂಡಾತೀರ್ಥ, ವೈಕುಂಠತೀರ್ಥ, ಕಾಲಿಂಜರತೀರ್ಥ, ಚಕ್ರತೀರ್ಥ-ಎಂಬ ಪಂಚತೀರ್ಥಗಳಿದ್ದುವು. ಲೋಹಜಂಘವನ, ಮಧುವನ, ಬಿಲ್ವವನ, ತಾಲವನ, ಕುಮುದನ, ವೃಂದಾವನ, ಭಾಂಡೀರವನ, ಖದಿರವನ, ಕಾರ್ಮಿಕವನ, ಕೋಲವನ, ಬಹೂಲಾವನ, ಮಹಾವನಗಳೆಂಬ ಹನ್ನೆರಡುವನಗಳನ್ನು ಜೈನಸಾಹಿತ್ಯದಲ್ಲಿ ಉಲ್ಲೇಖಿಸಿದೆ. ಕಾವೇಶಿಕ, ಸೋಮದೇವ, ಕಂಬಲ ಮತ್ತು ಸಂಬಲ ಮುಂತಾದ ಜೈನಯುತಿಗಳಿಗೆ ಮಥುರೆಯೊಡನೆ ಸಂಬಂಧ ವಿದ್ದಿತೆಂದು ಭಾವಿಸಲಾಗಿದೆ.
ಕ್ರಿ . ಪೂ. ೨-೧ನೆಯ ಶತಮಾನದಲ್ಲಿ ಶುಂಗವಂಶದ ಅರಸರು ಅಳುತ್ತಿದ್ದಾಗ ಮಥುರೆಗೆ ಹೆಚ್ಚಿನ ಮಹತ್ತ್ವ ಬಂತು; ಇದು ಪಶ್ಚಿಮ ಭಾಗದ ರಾಜಧಾನಿಯಾಗಿತ್ತು. ಇದೇ ಅವಧಿಯಲ್ಲಿ ಯವನರಾಜ ಡೆಮಿಟ್ಟ್ರಿಯಸ್ ಮಥುರೆಯನ್ನು ಕೆಲಕಾಲ ರಾಜಧಾನಿಯನ್ನಾಗಿ ಮಾಡಿಕೊಡಿದ್ದ. ಕ್ರಿ. ಪೂ. ೧ನೆಯ ಶತಮಾನದ ಹೊತ್ತಿಗೆಶುಂಗ ಪ್ರಭುತ್ವದ ಪ್ರಭಾವ ಕ್ಷೀಣಿಸಿ ಶಕಕ್ಷತ್ರಪರು ಪ್ರಬಲರಾದರು. ರಾಜುಲ ಮತ್ತು ಆತನ ಮಗ ಶೋಡಾಸ ಈ ವಂಶದ ಪರಾಕ್ರಮಿ ಅರಸರುಗಳಾಗಿದ್ದು ಇವರು ಯಮುನಾತೀರದಲ್ಲಿ ಸಿಂಹಸ್ತಂಭವೊಂದನ್ನು ಸ್ಥಾಪಿಸಿದರು. ಇವರು ಕಾಲದಲ್ಲಿ ಮಥುರೆ ವಾಸುದೇವ ಕೃಷ್ಣರ ಆರಾಧನಾ ಕೇಂದ್ರವಾಗಿತ್ತೆಂಬ ಸಂಗತಿ ಶೋಡಾಸನ ಶಾಸನವೊಂದರಿಂದ ಸ್ಪಷ್ಟಪಡುತ್ತದೆ. ಕ್ರಿಸ್ತಶಕೆಯ ಆರಂಭದಿಂದ ಸುಮಾರು ೩ ನೆಯ ಶತಮಾನದ ತನಕ ಆಳಿದ ಕುಷಾಣರ ಕಾಲದಲ್ಲಿ ಮಥುರೆ ಪ್ರಧಾನ ಕಲಾಕೇಂದ್ರವಾಯಿತು. ಸ್ವಲ್ಪಮಟ್ಟಿಗೆ ಗಾಂಧಾರ ಶಿಲ್ಪದ ಪ್ರಭಾವಕ್ಕೆ ಒಳಗಾದಂತೆ ಕಂಡರೂ ಮಥುರಾಶಿಲ್ಪ ಉನ್ನತ ಮಟ್ಟಕ್ಕೇರಿತು. ಸಹಸ್ರಾರು ಪ್ರಾಚೀನ ಶಿಲ್ಪಾವಶೇಷಗಳು ಮಥುರೆಯಲ್ಲಿ ಲಭ್ಯವಾಗಿವೆ. ಬುದ್ಧನ ಮಾನವರೂಪದ ಮೂರ್ತಿ ನಿರ್ಮಾಣ ಆರಂಭವಾದದು ಈ ಕಾಲದಲ್ಲೇ. ಕೆಂಪು ಕಣಶಿಲೆಯಲ್ಲಿ ಕಡೆದ ವಿವಿಧ ಭಂಗಿಯ ಯಕ್ಷಯಕ್ಷಿ ಶಿಲ್ಪಗಳು ಕಣ್ಸೆಳೆಯುತ್ತವೆ. ಕುಷಾಣ ಅರಸರ ಶರೀರ ಪ್ರಮಾಣದ ಮೂರ್ತಿಗಳು ಮಥುರಾ ಬಳಿಯ ಮಾತ್ ಎಂಬಲ್ಲಿ ಸಿಕ್ಕಿವೆ. ಕನಿಷ್ಕನ ಶಿರರಹಿತಶಿಲ್ಪ ಗಮನಾರ್ಹ. ಶಿವ, ಸೂರ್ಯ, ವಿಷ್ಣು, ಮಹಿಷಮರ್ದಿನಿ ಮುಂತಾದ ಮೂರ್ತಿಗಳೂ ಈ ಕಾಲದಲ್ಲಿ ನಿರ್ಮಿತವಾದವು. ಮಥುರಾಶಿಲ್ಪ ಶೈಲಿಯ ಅತಿದೊಡ್ಡಸಾಧನೆ ಎಂದರೆ ಅಪ್ಪಟ ಭಾರತೀಯವೆನ್ನಿಸುವ ಬುದ್ಧಮೂರ್ತಿಗಳು. (ನೋಡಿ-ಕುಷಾಣರು-ವಾಸ್ತುಶಿಲ್ಪ) ವಿನ್ಯಾಸ ಹಾಗೂ ಕಂಡರಣೆ, ಸೌಂದರ್ಯದ ಪರಿಕಲ್ಪನೆ ಹಾಗೂ ಅಭಿವ್ಯಕ್ತಿಗಳಲ್ಲಿ ಶಿಲ್ಪಿಯ ಪ್ರತಿಭೆ ಹಾಗೂ ಸ್ವೋಪಜ್ಞತೆಗಳನ್ನು ಈ ಕಾಲದ ಶಿಲ್ಪಗಳಲ್ಲಿ ಕಾಣಬಹುದುದಾಗಿದೆ. ಈ ಕಾಲದ ಶಿಲ್ಪಗಳು ಈಗ ದೆಹಲಿ, ಮಥುರಾ, ಲಕ್ನೋ, ಕಲ್ಕತ್ತ ವಸ್ತುಸಂಗ್ರಹಾಲಯಗಳಲ್ಲಿವೆ.
ಕುಷಾಣರ ತರುವಾಯ ಅಧಿಕಾರಕ್ಕೆ ಬಂದು ಆಳಿದ ಗುಪ್ತರ ಕಾಲದಲ್ಲಿ ಮಥುರಾ ಶಿಲ್ಪಶೈಲಿ ಪರಮೋನ್ನತಿಯನ್ನು ಸಾಧಿಸಿತು. ಇಲ್ಲಿ ನಿರ್ಮಿತವಾದ ಮೂರ್ತಿಗಳು ದೇಶದ ಇತರಡೆಗಳಲ್ಲಿಯ ಶಿಲ್ಪಗಳಿಗೆ ಮಾದರಿಗಳಾದುವು. ದಿವ್ಯಾದರ್ಶಗಳಿಂದ ಮಾರ್ಗದರ್ಶಿತನಾದ ಈ ಕಾಲದ ಕಲಾಕಾರನ ಶಿಲ್ಪದಲ್ಲಿ ಗಾಂಭೀರ್ಯ ಮಿಶ್ರಿತ ಸೌಂದರ್ಯ ಮೈದಳೆಯಿತು. ಸದಭಿರುಚಿ, ಅಲಂಕರಣದಲ್ಲಿ ಸಮತೋಲನೆ, ಲಾಲಿತ್ಯ ಈ ಕಾಲದ ಮಥುರಾ ಶೈಲಿಯ ಶಿಲ್ಪಗಳಲ್ಲಿ ನಿಚ್ಚಳವಾಗಿ ಕಂಡುಬರುತ್ತವೆ. ಇದಕ್ಕೆ ಈ ಕಾಲದ ಬುದ್ಧಮೂರ್ತಿ ಹಾಗೂ ವಿಷ್ಣುಮೂರ್ತಿಗಳನ್ನು ಉದಾಹರಿಸಬಹುದು. ಗುಪ್ತರ ಕಾಲದಲ್ಲಿ ಮಥುರಯ ಇಪ್ಪತ್ತು ಬೌದ್ಧ ವಿಹಾರಗಳಲ್ಲಿ ಮೂರು ಸಾವಿರ ಭಿಕ್ಷುಗಳು ವಾಸಿಸುತ್ತಿದ್ದರೆಂದು ಫಾಹಿಯಾನ್ ತಿಳಿಸಿದ್ದಾನೆ.
ಮುಂದೆ ಹೂಣರು ಮಥುರಾ ಪ್ರದೇಶವನ್ನಾಕ್ರಮಿಸಿ ಲೂಟಿ ಹೊಡೆದರು. ಕ್ರಿ. ಶ. ೭ನೆಯ ಶತಮಾನ ಹೊತ್ತಿಗೆ ಈ ಭಾಗದಲ್ಲಿ ಬೌದ್ಧಧರ್ಮ ಅವನತಿ ಹೊಂದುತ್ತಿದ್ದುದರ ಬಗ್ಗೆ ಹ್ಯೂಯೆನ್ ತ್ಸಾಂಗನ ಪ್ರವಾಸ ಕಥನದಲ್ಲಿ ಸ್ಪಷ್ಟ ಸುಳಿವುಗಳು ದೊರಕುತ್ತವೆ. ಉಪಗುಪ್ತ ಕಟ್ಟಿಸಿದ್ದ ಕಂಕಾಲತೀಲಾದ ಬೌದ್ಧ ವಿಹಾರವನ್ನು ಆತ ಕಂಡಿದ್ದ. ಆದರೆ ಮುಂದೆ ಹಲವು ಕಟ್ಟಡಗಳು ನಾಶವಾದುವು; ಅಳಿದುಳಿದ ಕಟ್ಟಡಗಳೂ ಘಜ್ನಿಮಹಮೂದನ ದಾಳಿಕಾಲದಲ್ಲಿ ನಿರ್ನಾಮವಾದುವು. ಇಲ್ಲಿಂದ ಆತ ಐದು ಚಿನ್ನದ ಮೂರ್ತಿಗಳನ್ನು ಅಪಹರಿಸಿಕೊಂಡು ಹೋದನೆಂದೂ ಮಥುರೆಯಲ್ಲಿಯ ಶ್ರೀಕೃಷ್ಣದೇವಾಲಯವನ್ನು ನಾಶಮಾಡಿದನೆಂದೂ ಪ್ರತೀತಿ.
ಮುಸಲ್ಮಾನ ಸುಲ್ತಾನರ ಕಾಲದಲ್ಲಿ ಈ ನಗರಕ್ಕೆ ಮೊದಲಿನ ಪ್ರಾಶಸ್ತ್ಯ ವಿರಲಿಲ್ಲ. ಅಕ್ಬರ್ ಹಾಗೂ ಜಹಾಂಗೀರರ ಕಾಲದಲ್ಲಿ ಕೆಲವಾರು ಕಟ್ಟಡಗಳು ನಿರ್ಮಿತವಾದುವು. ೧೭ನೆಯ ಶತಮಾನದ ಉತ್ತರಾರ್ಧದಲ್ಲಿ ಔರಂಗಜೇಬನ ಅಧಿಕಾರಿಗಳಲ್ಲೊಬ್ಬನಾದ ಅಬ್ದುಲ್ನಬಿ ಸ್ಥಳೀಯ ದಂಗೆಯಲ್ಲಿ ಮೃತನಾದಾಗ ಅದನ್ನೇ ನೆಪಮಾಡಿಕೊಂಡ ಸುಲ್ತಾನ ಮಥುರೆಯ ಎಲ್ಲ ಪ್ರಮುಖ ದೇವಾಲಯಗಳನ್ನೂ ಹಾಳುಮಾಡಿದ. ಪ್ರಸಿದ್ಧ ಕೃಷ್ಣದೇಗುಲವನ್ನು ಕೆಡವಿ ಈಗಿನ ಮಸೀದಿಯನ್ನು ನಿರ್ಮಿಸಿದ. ಮಥುರೆಗೆ ಇಸ್ಲಾಮಾಬಾದ್ ಎಂದು ಹೊಸ ಹೆಸರನ್ನಿಟ್ಟ. ಆದರೆ ಅದು ಹೆಚ್ಚುಕಾಲ ಚಲಾವಣೆಯಲ್ಲಿ ಉಳಿಯಲಿಲ್ಲ. ಅಹಮದ್ ಅಬ್ಬಾಲಿಯ ಕಾಲದಲ್ಲಿ ಮಥುರೆ ಮತ್ತೊಮ್ಮೆ ದುರ್ದಿನಗಳನ್ನು ಕಂಡಿತು.
ಮೊಗಲರು, ಜಾಟರು ಹಾಗೂ ಮರಾಠರ ನಡುವಣ ಹೋರಾಟಗಳಿಗೆ ಮಥುರೆ ಕಣವಾಯಿತು. ಮಾಧವರಾವ್ ಸಿಂಧಿಯಾಗೆ ನೆಚ್ಚಿನ ಬೀಡಾಗಿದ್ದ ಹಾಗೂ ಜಾಟ ಪ್ರಭು ಸೂರಜಮಲ್ಲನ ಕೇಂದ್ರಸ್ಥಳವಾಗಿದ್ದ ಮಥುರೆಯನ್ನು ೧೮೦೩ ರಲ್ಲಿ ಲಾರ್ಡ್ನ ಕಾಲದಲ್ಲಿ ಬ್ರಿಟಿಷರು ವಶಪಡಿಸಿಕೊಂಡರು.
ಮಥುರಾ ವ್ರಜಮಂಡಲವೆಂದೂ ಪ್ರಸಿದ್ದವಾಗಿವೆ. ಕೃಷ್ಣಭಕ್ತಿಗೆ ಸಂಬಂಧಿಸಿದ ಹಲವಾರು ಸ್ಥಳಗಳೂ ದೇವಾಲಯಗಳೂ ಇಲ್ಲಿವೆ. ಸಾಕಷ್ಟು ಸಾರಿಗೆ ಸಂಪರ್ಕಾನುಕೂಲವಿರುವ ಈ ನಗರ ಒಂದು ಶೈಕ್ಷಣಿಕ ಹಾಗೂ ಕೈಗಾರಿಕಾ ಕೇಂದ್ರ. ಜನಸಂಖ್ಯೆ ೨,೨೨,೪೪೩. ಗೋಸ್ವಾಮಿ ಗೋವರ್ಧನ ಲಾಲ್ಜಿ ೧೯೧೨ರಲ್ಲಿ ನಿರ್ಮಿಸಿದ ಆಸ್ಪತ್ರೆ, ವಿಕ್ಟೋರಿಯ ಮೆಮೋರಿಯಲ್. ಡ್ಯಾಂಪಿಯರ್ ಪಾರ್ಕ ಹಾಗೂ ೧೯೩೩ರಲ್ಲಿ ಆರಂಭವಾದ ಕರ್ಜನ್ ವಸ್ತುಸಂಗ್ರಹಾಲಯಗಳು ಇಲ್ಲಿವೆ. ಕೇದಾರೇಶ್ವರ, ದ್ವಾರಕಾಧೀಶ, ಮದನಮೋಹನ, ಕಾಲಭೈರವ, ಕುಬ್ಜಮಂದಿರ ಮುಂತಾದ ದೇವಾಲಯಗಳು ಅರ್ವಾಚೀನ ಕಾಲವಾದರೂ ವಾಸ್ತು ಶಿಲ್ಪದ ದೃಷ್ಟಿಯಿಂದ ಗಮನಾರ್ಹವಾಗಿವೆ. ಊರಮಧ್ಯದಲ್ಲಿ ಅಬ್ದುಲ್ ನಂಬಿ ಕಟ್ಟಿಸಿದ ( ಕ್ರಿ. ಶ. ೧೬೬೦-೬೧) ಜಾಮಿಮಸೀದಿ ಇದೆ. ಇದರ ಮುಂಭಾಗದ ಮೇಲೆ ಅಲ್ಲಾಹ್ನ ೯೯ ಹೆಸರುಗಳನ್ನು ಬರೆದಿದೆ. ಸು. ೪೦.೨೩ ಮೀ ಎತ್ತರದ ನಾಲ್ಕು ಕಿರುಗೋಪುರಗಳು (ಮಿನಾರ್) ನಾಲ್ಕು ದಿಕ್ಕಿನಲ್ಲಿ ನಿಂತಿದೆ. ಮಥುರೆಯಲ್ಲಿ ಪ್ರತಿವರ್ಷ ಬಹುಳ ಪಂಚಮಿಯಿಂದ ಐದು ದಿನಗಳ ಕಾಲ ಪಂಚತೀರ್ಥ ಮೇಳ ನಡೆಯುತ್ತದೆ. ಕಂಸನ ಅರಮನೆ ಇದ್ದ ಪ್ರದೇಶವೇ ಕಂಸಲೀಲಾ, ನಂದನ ಮಗಳಾದ ಯೋಗ ನಿದ್ರಾಳನ್ನು ಕಂಸ ಅಪ್ಪಳಿಸಲು ಪ್ರಯತ್ನಿಸಿದ ಸ್ಥಳವೇ ಯೋಗಘಾಟ್, ಕಂಸನನ್ನು ಕೊಂದ ಕೃಷ್ಣ ವಿಶ್ರಮಿಸಿಕೊಂಡ ತಾಣವೇ ವಿಶ್ರಾಮಘಾಟ್, ಮಗುವಾಗಿದ್ದ ಕೃಷ್ಣನ ಬಟ್ಟೆಗಳನ್ನು ಸ್ವಚ್ಛಗೊಳಿಸಲು ಬಳಸುತ್ತಿದ್ದ ಕೆರೆಯೇ ಪೋತ್ರ ಕುಂಡ ಎಂದು ಪ್ರತೀತಿಯಿದೆ.
ಮಥುರೆಗೆ ಹೊಂದಿಕೊಂಡಂತೆ ನಗರದ ಸುತ್ತಮುತ್ತ ಅನೇಕ ಪ್ರೇಕ್ಷಣೀಯ ಸ್ಥಳಗಳೂ ಸ್ಮಾರಕಗಳೂ ಇವೆ. ಕಟ್ರಾ ಎಂಬಲ್ಲಿ ಔರಂಗಜೇಬ ಕೆಂಪು ಕಲ್ಲಿನಿಂದ ಕಟ್ಟಿಸಿದ ದೊಡ್ಡ ಮಸೀದಿಯಿದ್ದು ಇದನ್ನು ಕೇಶವ ದೇವಾಲಯದ ಅವಶೇಷಗಳ ಮೇಲೆ ಕಟ್ಟಿರುವುದಾಗಿ ತಿಳಿದುಬರುತ್ತದೆ. ಮಸೀದಿಯ ಹಿಂಭಾಗದಲ್ಲಿ ಈಗಲೂ ದೇವಾಲಯದ ಅಡಿಪಾಯ ಗೋಚರಿಸುತ್ತದೆ. ಸ್ವಾರಸ್ಯದ ಸಂಗತಿ ಎಂದರೆ ಈ ದೇವಾಲಯವಿದ್ದುದೂ ಬೌದ್ಧವಿಹಾರವೊಂದರ ಅವಶೇಷಗಳ ಮೇಲೆ. ಶಾಸನಗಳಿಂದ ಕುಷಾಣ ಕಾಲದ್ದೆಂದು ತಿಳಿದುಬರುವ ಆ ಕಟ್ಟಡ ಗುಪ್ತರ ಕಾಲದ ತನಕ ಸುಸ್ಥಿತಿಯಲ್ಲಿತ್ತು. ೧೮೬೨ ರಲ್ಲಿ ಜನರಲ್ ಕನಿಂಗ್ ಹ್ಯಾಮ್ ಮಥುರೆಯಲ್ಲಿಯ ಬಾವಿಯೊಂದರಿಂದ ಹೊರತೆಗೆಯಿಂದ ಬುದ್ಧಮೂರ್ತಿಯ ಪೀಠದ ಮೇಲಿನ ಶಾಸನ (ಕ್ರಿ. ಶ. ೫೪೯-೫೦) `ಯಶವಿಹಾರವನ್ನು ಉಲ್ಲೇಖಿಸುತ್ತದೆ. ಇದು ಬೌದ್ಧ ವಿಹಾರದ ಹೆಸರಾಗಿರಬೇಕು. ಇಲ್ಲಿಯ ಪ್ರಾಚೀನ ಕೃಷ್ಣಮಂದಿರ ಕ್ರಿ.ಪೂ. 1ನೆಯ ಶತಮಾನದಲ್ಲಿ ನಿರ್ಮಿತವಾಗಿದ್ದಿರಬೇಕು; ಕ್ರಿ.ಶ. ೫ನೆಯ ಶತಮಾನದ ಆದಿಭಾಗದಲ್ಲಿ ಗುಪ್ತರ ಕಾಲದಲ್ಲಿ ಕೃಷ್ಣನ ದೊಡ್ಡ ಮಂದಿರವನ್ನು ಕಟ್ಟಲಾಯಿತು. ಮೀರ್ಮುಂಶಿ ಅಲಮತ್ ಎಂಬಾತ ಈ ಮಂದಿರದ ಸೌಂದರ್ಯಭವ್ಯತೆಗಳು ಶಬ್ದಕ್ಕೆ ಮ್ಭಿರಿದುದೆಂದು ವರ್ಣಿಸಿದ್ದಾನೆ. ಈ ದೇಗುಲವನ್ನು ಘಜ್ನಿಮಹಮೂದ್ ೧೯೧೭ ರಲ್ಲಿ ನಾಶಮಾಡಿದ ಕ್ರಿ. ಶ. ೧೩ನೆಯಶತಮಾನದಲ್ಲಿ ಜಜ್ಜ ಎಂಬಾತ ಕೃಷ್ಣ£ಹೊಸ ಮಂದಿರವನ್ನು ಕಟ್ಟಿಸಿದ. ಕ್ರಿ.ಶ. ೧೬ನೆಯ ಶತಮಾನಮದ ಆದಿಭಾಗದಲ್ಲಿ ಸಿಕ್ಕಂದರ್ ಲೋದಿಯ ಕಾಲದಲ್ಲಿ ಈ ದೇವಾಲಯ ನಾಶವಾಯಿತು. ಮುಂದೆ ಮೊಗಲ್ ಸಾಮ್ರಾಟ ಜಹಾಂಗೀರನ ಕಾಲದಲ್ಲಿ ಓರ್ಛಾದ ವೀರಸಿಂಹದೇವ ಬುದೇಂಲಾ ಮತೊಂದು ಕೃಷ್ಣಯವನ್ನು ನಿರ್ಮಿಸಿದ. ಅಂದು ಇದರ ನಿರ್ಮಾಣಕ್ಕೆ ಮೂವತ್ಮೂರು ಲಕ್ಷ ರೂಪಾಯಿ ವೆಚ್ಚವಾಯಿತಂತೆ. ಔರಂಗಜೇಬನ ಕಾಲದಲ್ಲಿ ಕೆಡವಲಾದುದು ಈ ದೇವಾಲಯವೇ. ಕಟ್ರಾದ ಮಸೀದಿಯ ಹಿಂಭಾಗದಲ್ಲಿ ಈಗಿನ ಕೇಶವ ದೇವಾಲಯವೆದೆ. ಅಂಬರ್ರಾಜ ಭರಮಲ್ಲನ ರಾಣಿ ಸಹಮನ ಮಾಡಿದಾಗ, ಅವರ ಮಗ ಭಗವಾನ್ದಾಸ್ ೧೫೭೪ ರಲ್ಲಿ ನಿಲ್ಲಿಸಿದ ಸತಿವ್ರಜ 55ಅಡಿ ಎತ್ತರದ ಕೆಂಪುಮರಳುಗಳಲ್ಲಿ ಇದರ ಮೇಲ್ಭಾಗ ನಷ್ಟವಾಗಿದೆ. ಜಯಸಿಂಗ್ ಖಗೋಳ ವೀಕ್ಷಣಾಲಯದ ಈಗ ಹಾಳಾಗಿದೆ.
ಈಚೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಮಥುರಾ ಬಳಿಯ ಸೊಂಬ್ ಎಂಬಲ್ಲಿ ಉತ್ಖನನ ನಡೆಸಿದಾಗ ಅಲ್ಲಿ ಮಾನವ ವಸತಿಯ 37ಸ್ಥರಗಳು-ಕುಷಾಣರ ಕಾಲದಿಂದ ಜಾಟರ ಕಾಲದಂತೆ ಔಟರ ಕಾಲದತನಕ-ಕಂಡುಬದುವು. ಕಂಕಾಲತೀಲಾ ಎಂಬಲ್ಲಿಯ ಉತ್ಪನನದಲ್ಲಿ ಕುಷಾಣ ಕಾಲದ ತಟಾಕವೊಂದು (೯.೧೦ ಮೀಉದ್ದ, ೮-೧೦ಮೀ ಅಗಲ ಹಾಗೂ ೩.೯೬ ಆಳ) ಗೋಚರಿಸಿದೆ.
ಮಥುರೆಗೆ ೯ ಕಿ.ಮೀ. ದೂರದಲ್ಲಿ ಯಮುನಾ ತೀರದಲ್ಲಿರುವ ವೃಂದಾವನ, ಕಾಳಿಂಗಮರ್ದನ, ಗೋಪಿಕಾ ವಸ್ತ್ರಾಅಪಹರಣ, ರಾಸನರ್ತನ ಇತ್ಯಾದಿ ಕೃಷ್ಣನ ವಿವಿಧ ಲೀಲೆಗಳಿಗೆ ಸಂಬಂಧಿಸಿದ ಮುಖ್ಯ ಸ್ಥಳ. ಇಲ್ಲಿ ನೂರಾರು ದೇವಾಲಯಗಳಿಗೆ. ಅಂಬರ್ನ ರಾಜ ಮಾನಸಿಂಹ ನಿರ್ಮಿಸಿದ ಗೋವಿಂದ ದೇವಾಲಯ ಒಂದು ಆರ್ಪೂವರಚನೆ; ಆದರೆ ಭಾಗಶಃ ನಾಶವಾಗಿದೆ. ಮದನಮೋಹನ, ಗೋಪಿನಾಥ, ರಾಧಾಗೋಪಾಲ, ಲಕ್ಷ್ಮಿ ನಾರಾಯಣ, ಜುಗಲ ಕಿಶೋರ-ಮುಂತಾದ ದೇವಾಲಯಗಳೂ ಗಮನಾರ್ಹ. ಶ್ರೀಮಂತ ವ್ಯಾಪಾರಿಗಳಾದ ಗೋವಿಂದದಾಸ್ ಹಾಗೂ ರಾಧಾಕೃಷ್ಣ ಎಂಬವರು ೧೮೫೧ರಲ್ಲಿ ಕಟ್ಟ್ಸಿದ ರಂಗನಾಥ ದೇವಾಲಯ (ಸು.೨೩೬ಮೀ ಉದ್ದ, ಸು, ೧೩೪ಮೀ ಅಗಲ ಹಾಗೂ ಸು. ೪೧ ಮೀ ಎತ್ತರ) ಭವ್ಯ ಕಟ್ಟಡವಾಗಿದ್ದು ಔತ್ತರೆಯ ಹಾಗೂ ದಾಕ್ಷಿಣಾತ್ಯ ವಾಸ್ತುಶೈಲಿಗಳ ಸಮ್ಮಿಶ್ರ ರಚನೆಯಾಗಿದೆ. ದಾಕ್ಷಿಣಾತ್ಯ ಸಂಪ್ರದಾಯದಂತೆ ಪೂಜೆ ನಡೆಯುತ್ತಿದೆ. ವೃಂದಾವನದ ಬಳಿ ಇರುವ ಮಹೋಲಿ ಮಧುವನದಲ್ಲಿ ಲವಣಾಸುರನ ಗುಹೆ ಇದೆ.
ಮಹಾಬನ್ ಮಥುರೆಯ ಆಗ್ನೇಯಕ್ಕೆ ಸುಮಾರು ೧೦ ಕಿಮೀ ದೂರದಲ್ಲಿ ಯಮುನಾ ತೀರದಲ್ಲಿರುವ ಯಾತ್ರಾಸ್ಥಳ. ಘಜ್ನಿಮಹಮೂದನ ದಾಳಿಗೀಡಾದ ಊರಿದು; ಆಗ ಇಲ್ಲಿಯ ಹಿಂದೂ ಅರಸ ತನ್ನ ಪತ್ನೀಪುತ್ರರನ್ನು ಕೊಂದು ಆತ್ಮಹತ್ಯೆಮಾಡಿ ಕೊಂಡನಂತೆ. ಕ್ರಿ.ಶ.೧೬೩೪ರಲ್ಲಿ ಇಲ್ಲಿಯ ಕಾಡಿನ ಪ್ರದೇಶದಲ್ಲಿ ಷಹಜಹಾನ್ ಬೇಟೆಯಾಡಿ ನಾಲ್ಕು ಹುಲಿಗಳನ್ನು ಕೊಂದಿದ್ದನಂತೆ. ಆದರೆ ಈಗ ಕಾಡು ನಶಿಸಿಹದೋಗಿದೆ. ಇಲ್ಲಿ ಬೌದ್ಧ ಅವಶೇಷಗಳು ಕಂಡುಬರುತ್ತವೆ. ಮಹಾಬನಕ್ಕೆ ೨ ಕಿಮೀ ದೂರದಲ್ಲಿ ಗೋಕುಲವಿದೆ. ನಂದನ ಅರಮನೆ ಎಂದು ಕರೆಯಲಾಗುವ ಸ್ಥಳದಲ್ಲಿ ಈಗ ಔರಂಗಜೇಬನ ಕಾಲದಲ್ಲಿ ಕಟ್ಟಲಾದ ಎಂಬತ್ತು ಕಂಬಗಳ(ಅಸ್ಸಿಕಂಬ) ಹಜಾರ ಇದೆ. ಕಂಬದ ಮೇಲಿನ ಮೂರ್ತಿಶಿಲ್ಪಗಳು ಸೊಗಸಾಗಿವೆ. ಕಂಬಗಳನ್ನು ವೈವಿಧ್ಯಮಯವಾಗಿ ಕಡೆಯಲಾಗಿದೆ. ಕೃಷ್ಣಲೀಲೆಗೆ ಸಂಬಂಧಿಸಿದ ಹಲವು ಕೆತ್ತನೆಗಳನ್ನಿಲ್ಲಿ ನೋಡಬಹುದು. ವಲ್ಲಭಾಚಾರ್ಯ ಪಂಥದವರಿಗೆ ಗೋಕುಲ ಮುಖ್ಯ ಸ್ಥಳ. ಇಲ್ಲಿ ಹಲವು ದೇಗುಲಗಳಿವೆ. ಕೃಷ್ಣಜನ್ಮಾಷ್ಟಮಿಯನ್ನು ಮಹಾಬನ್ ಮತ್ತು ಗೋಕುಲಗಳಲ್ಲಿ ಸಂಭ್ರಮ ಸಡಗರಗಳಿಂದ ಆಚರಿಸಲಾಗುತ್ತದೆ.
ಮಹಾಬನ್ ದಿಂದ ೮ ಕಿಮೀ ದೂರದಲ್ಲಿರುವ ಬಲದೇವ ಎಂಬಲ್ಲಿ ಕೃಷ್ಣನ ಸೋದರ ಬಲರಾಮನ ದೇವಾಲಯ ಹಾಗೂ ಬೀರ್ ಸಾಗರ್ ಎಂಬ ದೊಡ್ಡ ಕೊಳ ಇವೆ
ಪ್ರತಿ ವರ್ಷ ಮಥುರಾದಲ್ಲಿ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಪ್ರತಿ ವರ್ಷ ೩ ರಿಂದ ೩.೫ ಮಿಲಿಯನ್ ಭಕ್ತರು ಮಥುರಾದಲ್ಲಿ ಜನ್ಮಾಷ್ಟಮಿ ಆಚರಿಸುತ್ತಾರೆ, ಕೇಶವ್ ದೇವ ದೇವಸ್ಥಾನ ಮತ್ತು ದ್ವಾರಕಧೀಶ್ ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯ ಜನರು.[1] [2] ಜನರು ಸಾಮಾನ್ಯವಾಗಿ ಉಪವಾಸವನ್ನು ಆಚರಿಸುತ್ತಾರೆ ಮತ್ತು ಶ್ರೀಕೃಷ್ಣ ಜನಿಸಿದರು ಎಂದು ನಂಬಿದಾಗ ಮಧ್ಯರಾತ್ರಿಯಲ್ಲಿ ಅದನ್ನು ಮುರಿಯುತ್ತಾರೆ. ಮಥುರಾ-ವೃಂದಾವನದುದ್ದಕ್ಕೂ ಭಕ್ತಿಗೀತೆಗಳು, ನೃತ್ಯ ಪ್ರದರ್ಶನಗಳು, ಭೋಗ್ ಮತ್ತು ಆರತಿಗಳನ್ನು ಆಚರಿಸಲಾಗುತ್ತದೆ.
ಮಥುರಾ ೨೭.೨೮ ° N ೭೭.೪೧ ° E ನಲ್ಲಿ ಇದೆ. [36] ಇದು ಸರಾಸರಿ ೧೭೪ ಮೀಟರ್ (೫೭೦ ಅಡಿ) ಎತ್ತರವನ್ನು ಹೊಂದಿದೆ.
ನಗರದಲ್ಲಿ ನೆಲೆಗೊಂಡಿರುವ ಮಥುರಾ ರಿಫೈನರಿ ಏಷ್ಯಾದ ಅತಿದೊಡ್ಡ ತೈಲ ಸಂಸ್ಕರಣಾಗಾರಗಳಲ್ಲಿ ಒಂದಾಗಿದ್ದು, ವರ್ಷಕ್ಕೆ ೮.0 ಮಿಲಿಯನ್ ಟನ್ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್ನ ಈ ತೈಲ ಸಂಸ್ಕರಣಾಗಾರವು ಹೆಚ್ಚು ತಾಂತ್ರಿಕವಾಗಿ ಸುಧಾರಿತ ತೈಲ ಸಂಸ್ಕರಣಾಗಾರವಾಗಿದ್ದು ಸ್ಥಳೀಯ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.[3] [4]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.