ಧೂಮಕೇತು - ಸೂರ್ಯ ನನ್ನು ಪರಿಭ್ರಮಿಸಿ, ಕಡೇ ಪಕ್ಷ ಒಮ್ಮೊಮ್ಮೆ ಒಂದು ವಾಯುಮಂಡಲ ಮತ್ತು ಒಂದು ಬಾಲವನ್ನು ಹೊಂದಿರುವ ಸಣ್ಣ ಕಾಯ. ಧೂಮಕೇತುವನ್ನು ಆಂಗ್ಲಭಾಷೆಯಲ್ಲಿ comet ಎನ್ನುತಾರೆ. ಧೂಮಕೇತು ಎನ್ನುವ ಪದ ಸಂಸ್ಕೃತದ್ದು. ಧೂಮಕೇತು ಸೂರ್ಯನ ಸುತ್ತ ಪರಿಭ್ರಮಿಸುವಾಗ, ದೂರದಲ್ಲಿ ಇದ್ದ ಸಮಯದಲ್ಲಿ ಅತಿಶೀತಲ ವಾಗಿ, ಇದರಲ್ಲಿ ಇರುವ ಪದಾರ್ಥಗಳು, ಆವಿ(gas)ಗಳು ಘನೀಭವಿಸಿ, ಘನಸ್ಥಿತಿಯಲ್ಲಿರುತ್ತವೆ. ಹತ್ತಿರದಲ್ಲಿ ಪರಿಭ್ರಮಿಸುವ ಸಮಯದಲ್ಲಿ, ಸೂರ್ಯನ ಬೇಗೆಯಿಂದ ಕರಗಿ ಹೋಗುತ್ತವೆ. ಒಂದು ಭಾಗದಲ್ಲಿ ತಲೆ, ಕೊನೆಯ ಭಾಗದಲ್ಲಿ ಬಾಲ(Tail)ವನ್ನು ಹೊಂದಿರುತ್ತದೆ. ಧೂಮಕೇತು ತಲೆಭಾಗದಲ್ಲಿ ಮಿಥೇನ್, ಅಮ್ಮೋನಿಯಾ ಆವಿಗಳು ಮತ್ತು ನೀರು ಘನಸ್ಥಿತಿಯಲ್ಲಿ ಇರುತ್ತವೆ. ಇನ್ನು ಗಡ್ಡೆಯಲ್ಲಿ ಕಬ್ಬಿಣ, ನಿಕೆಲ್ ಕ್ಯಾ ಲ್ಷಿಯಂ, ಮೆಗ್ನೀಷಿಯಂ, ಸಿಲಿಕಾನ್, ಸೋಡಿಯಂ ಮುಂತಾದ ಧಾತು (elements)ಗಳು ಇರುತ್ತವೆ.[1]
ಒಬ್ಬ ವ್ಯಕ್ತಿ ಜೀವಿತಾವಧಿಯಲ್ಲಿ ಒಮ್ಮೆ ಅಥವಾ ಎರಡು ಬಾರಿ ಮಾತ್ರ ನೋಡಬಹುದಾದುದೆಂದರೆ ಹ್ಯಾಲಿ ಧೂಮಕೇತು. ಕ್ರಿಸ್ತಪೂರ್ವ ೨೩೯, ಕ್ರಿ.ಪೂ ೧೬೪, ಕ್ರಿ.ಪೂ ೮೭ ನಂತರ ಕ್ರಿಸ್ತಶಕ ೧೫೩೧, ಕ್ರಿ.ಶ ೧೬೦೭, ಕ್ರಿಶ ೧೬೮೨, ಕ್ರಿಶ ೧೭೫೮ ಹೀಗೆ ೭೫-೭೬ ವರ್ಷಗಳ ಅಂತರದಲ್ಲಿ ಇದನ್ನು ಕಂಡ ಚೀನೀಯರು ಮತ್ತು ಬ್ಯಾಬಿಲೋನಿಯನ್ನರು ದಾಖಲಿಸಿದ್ದಾರೆ.
ಈ ನಿರ್ದಿಷ್ಟ ಅವಧಿಯ ಧೂಮಕೇತು ಆಗಮನ ಲೆಕ್ಕ ಹಾಕಿದ ಇಂಗ್ಲೆಂಡಿನ ಖಗೋಳ ವಿಜ್ಞಾನಿ ಎಡ್ಮಂಡ್ ಹ್ಯಾಲಿ ಮುಂದಿನ ಅದರ ಭೇಟಿ ಬಗ್ಗೆ ಮುಂಚಿತವಾಗಿಯೇ ತಿಳಿಸಿದ್ದ. ೧೭೪೨ರಲ್ಲಿ ನಿಧನನಾದ ಎಡ್ಮಂಡ್ ಹ್ಯಾಲಿ ತನ್ನ ಜೀವಿತಾವಧಿಯಲ್ಲಿ ಒಮ್ಮೆಯೂ ಆ ಧೂಮಕೇತುವನ್ನು ನೋಡಲೇ ಇಲ್ಲ. ೧೭೫೮ರಲ್ಲಿ ಪುನಃ ಕಾಣಿಸಿದ ಧೂಮಕೇತು ಹ್ಯಾಲಿ ಎಂದು ನಾಮಕರಣ ಗೊಂಡು ಜಗದ್ವಿಖ್ಯಾತವಾಯಿತು.
ಎಡ್ಮಂಡ್ ಹ್ಯಾಲಿ ಧೂಮಕೇತುವಿನ ನಿರ್ದಿಷ್ಟ ಅವಧಿಯ ಲೆಕ್ಕಾಚಾರವನ್ನು ಸಾಬೀತುಪಡಿಸುವುದಕ್ಕೆ ೧೦೫ ವರ್ಷಗಳ ಮುಂಚೆ ಷೇಕ್ಸ್ಪಿಯರ್ ‘ಜ್ಯೂಲಿಯಸ್ ಸೀಸರ್’ ನಾಟಕದಲ್ಲಿ ಅದರ ಉಲ್ಲೇಖ ಮಾಡಿದ್ದಾನೆ. ೧೩೦೧ರಲ್ಲಿ ಇಟಲಿ ಚಿತ್ರಕಾರ ಗಿಯೆಟ್ಟೋನ ‘ಸ್ಟಾರ್ ಆಫ್ ಬೆತ್ಲೇಹೇಮ್’ ಕೃತಿಗೆ ಪ್ರೇರಣೆ ಈ ಧೂಮಕೇತು ಎಂದು ಬ್ರಿಟಾನಿಕಾ ವಿಶ್ವಕೋಶ ದಾಖಲಿಸಿದೆ.
ಷೇಕ್ಸ್ಪಿಯರ್ ಕೃತಿಯಲ್ಲಿ ಧೂಮಕೇತುವಿನ ಪ್ರಸ್ತಾಪವಾದ ನಂತರ ಖಗೋಳ ವಿದ್ಯಮಾನದ ಅಧ್ಯಯನ ಬಹು ವೇಗದಿಂದ ಬೆಳೆಯಿತು. ೧೯೧೦ ಮತ್ತು ೧೯೮೬ರಲ್ಲಿ ಧೂಮಕೇತು ಹ್ಯಾಲಿ ಹಲವು ಅಧ್ಯಯನಗಳಿಗೆ ತೆರೆದುಕೊಂಡಿತು.
೧೯೮೬ರಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆಯಿಂದ ಧೂಮಕೇತುವಿನ ಸಮೀಪ ದರ್ಶನವಾಯಿತು. ೩೯0 ಲಕ್ಷ ಮೈಲಿಗಳಷ್ಟು ಹತ್ತಿರ ಬಂದಿದ್ದ ಹ್ಯಾಲಿ ಧೂಮಕೇತುವಿನ ಬಳಿಗೆ ವೇಗಾ೧ ಮತ್ತು ವೇಗಾ೨ ಹೆಸರಿನ ವಿಶೇಷ ನೌಕೆಗಳನ್ನು ಅಂದಿನ ಸೋವಿಯೆಟ್ ಯೂನಿಯನ್, ಮತ್ತು ಫ್ರಾನ್ಸ್ ಜಂಟಿಯಾಗಿ ಕಳುಹಿಸಿದ್ದವು. ಧೂಮಕೇತುವಿನ ಹೃದಯ ಭಾಗವೆಂದೇ ಹೆಸರಾದ ನ್ಯೂಕ್ಲಿಯಸ್ನ ಸ್ಪಷ್ಟ ಚಿತ್ರ ಆಗ ಮೊದಲ ಬಾರಿಗೆ ದೊರಕಿತ್ತು.
ಯೂರೋಪಿಯನ್ ಏಜೆನ್ಸಿ ಗಿಯೆಟ್ಟೋ ಸಹ ನ್ಯೂಕ್ಲಿಯಸ್ ಸನಿಹಕ್ಕೆ ತೆರಳಿತ್ತು. ಅಲ್ಲಿಂದ ಭೂಮಿಯೆಡೆಗೆ ತಿರುಗಿ ಅದ್ಭುತ ವಾದ ಭೂಮಿಯ ಚಿತ್ರವನ್ನು ಕಳುಹಿಸಿತು. ಜಪಾನ್ ಬಾಹ್ಯಾಕಾಶ ಯೋಜನೆಯಲ್ಲಿ ‘ಸಾಕಿ ಗಾಕಿ’ ಮತ್ತು ಸ್ಯುಸೈ ಎಂಬ ನೌಕೆಗಳಿಂದ ಕುತೂಹಲಕಾರಿ ಮಾಹಿತಿಯನ್ನು ಕಲೆ ಹಾಕಿತು.
ಹ್ಯಾಲಿ ಬರುತ್ತಿರುವಾಗಲೇ ಬಹಳ ಉತ್ಸುಕವಾಗಿದ್ದ ಅಮೆರಿಕದ ನಾಸಾ ಸಂಸ್ಥೆ, ಖಗೋಳ ವಿಜ್ಞಾನಿಗಳನ್ನು ಹೊತ್ತ ಎಸ್ಟಿಎಸ್೫೧ಎಲ್ ಛಾಲೆಂಜರ್ ಬಾಹ್ಯಾಕಾಶ ನೌಕೆ ಹ್ಯಾಲಿ ಧೂಮಕೇತುವಿನ ಕಕ್ಷೆಯತ್ತ ಧಾವಿಸುವ ಯೋಜನೆ ಹಾಕಿ ಕೊಂಡಿತ್ತು. ೧೯೮೬ರ ಜ. ೨೮ರಂದು ಉಡ್ಡಯನವಾದ ಎರಡು ನಿಮಿಷದಲ್ಲಿಯೇ ಸ್ಫೋಟಗೊಂಡು ದಾರುಣ ಅಂತ್ಯ ಕಂಡಿತು.
ಪುನಃ ೨೦೬೧ರಲ್ಲಿ ಹ್ಯಾಲಿ ಧೂಮಕೇತುವಿನ ನಿರೀಕ್ಷೆಯಿದೆ. ಆಗ ೧೯೮೬ರಲ್ಲಿ ಕಂಡಿದ್ದಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ, ಸೂರ್ಯ ಮತ್ತು ಭೂಮಿಗೆ ಒಂದೇ ಬದಿಯಲ್ಲಿ ಕಾಣ ಸಿಗುತ್ತದೆ.$
$--(ಪ್ರಜಾವಾಣಿ ಟಿ.ಎಸ್.ಮಾಧವ:30-11-2013)
ಸಂಪಾದನೆ:ಕಾಮೆಟ್ ಸಿ /2006 ಪಿ 1 (ಮೆಕ್ನಾಟ್) ವಿಕ್ಟೋರಿಯಾ, ಆಸ್ಟ್ರೇಲಿಯಾ 2007
Randall, Lisa (2015). Dark Matter and the Dinosaurs: The Astounding Interconnectedness of the Universe. New York: Ecco/HarperCollins Publishers. pp. 104–105. ISBN 978-0-06-232847-2.