From Wikipedia, the free encyclopedia
ಟೆನ್ನಿಸ್ - ಹುಲ್ಲಿನ ಮೈದಾನದಲ್ಲಿ ಅಥವಾ ಕಾಂಕ್ರೀಟ್ ಇಲ್ಲವೆ ವಿಶೇಷ ರೀತಿಯಲ್ಲಿ ಸಿದ್ಧಗೊಳಿಸಿದ ಮಣ್ಣಿನ ಆಟದ ಮೈದಾನದಲ್ಲಿ ಇಬ್ಬರು ಅಥವಾ ನಾಲ್ಕು ಜನ ಆಡಬಹುದಾದಂತ ಒಂದು ಹೊರಾಂಗಣ ಆಟ. ಈ ಆಟದಲ್ಲಿ ಆಟಗಾರರು ಸುಮಾರು ಮೂರೂವರೆ ಅಡಿ ಎತ್ತರದ ಒಂದು ಪರದೆಯ ಎರಡು ಬದಿಗಳಲ್ಲಿ ಇದ್ದು ಒಂದು ರ್ಯಾಕೆಟ್ ಸಹಾಯದಿಂದ ರಬ್ಬರ್ ಚೆಂಡನ್ನು ಬೇರೆ ಆಟಗಾರರ ಬದಿಗೆ ಹೊಡೆಯುತ್ತಾರೆ. ಈ ಆಟದ ಉದ್ದೇಶ ಚೆಂಡನ್ನು ಯಾವ ರೀತಿಯಲ್ಲಿ ಆಡಬೇಕೆಂದರೆ ವಿರೋಧಿ ಆಟಗಾರನಿಗೆ ಉತ್ತಮ ವಾಪಸಾತಿ ಆಡಲು ಸಾಧ್ಯವಾಗಬಾರದು.
ಹಿಂದೆ ಈ ಆಟವನ್ನು ರಾಯಲ್ (ರಾಜ-ಮಹಾರಾಜರ) ಟೆನಿಸ್ ಎಂದು ಕರೆಯುತ್ತಿದ್ದುದುಂಟು. ಇಂಗ್ಲೆಂಡಿನಲ್ಲಿ ಇದೇ ನಿಜವಾದ ಟೆನಿಸ್ ಆಟವಾಗಿತ್ತು. ಫ್ರಾನ್ಸಿನಲ್ಲಿ ಇದಕ್ಕೆ ಷೂಓ ಡ ಪಾಮ್ ಎಂದೂ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕೋರ್ಟ್ ಟೆನಿಸ್ ಎಂದೂ ಹೆಸರಿತ್ತು. ಇದನ್ನು ಲಾನ್ ಟೆನಿಸ್ ಎಂದೂ ಕರೆಯುವುದುಂಟು. ಸ್ಪೇನಿನ ದೊರೆಗಳಿಬ್ಬರ ನಡುವೆ ಜರುಗಿದ ಬಿರುಸಾದ ಟಿನಿಸ್ ಆಟದ ಬಳಿಕ ಇಬ್ಬರೂ ಬಾಯಾರಿಕೆ ಹೋಗಲಾಡಿಸಿಕೊಳ್ಳಲು ತಕ್ಷಣವೇ ತಣ್ಣೀರನ್ನು ಕುಡಿದ ಪರಿಣಾಮವಾಗಿ ಸತ್ತರು ಎಂದು ಪ್ರತೀತಿ. ಟೆನಿಸ್ ಎಂಬ ಪದಕ್ಕೆ ಫ್ರೆಂಚ್ನಲ್ಲಿ ಆಟ ಎಂದು ಅರ್ಥ ಇದೆ. ಯೂರೋಪಿನ ದೊರೆಗಳು ತಮ್ಮ ಅರಮನೆಯೊಳಗೆ ಟೆನಿಸ್ ಆಡಲು ಅವಕಾಶ ಕಲ್ಪಿಸಿಕೊಂಡಿದ್ದರು. ವಿಹಾರದ ದೋಣಿಗಳಲ್ಲೂ ಟೆನಿಸ್ ಆಡಲು ಸ್ಥಳವಿರುತ್ತಿತ್ತು. ಸಾಮಾನ್ಯವಾಗಿ ಟೆನಿಸನ್ನು ಹೊರಗಿನ ಬಯಲು ಪ್ರದೇಶದಲ್ಲಿ ಆಡುತ್ತಾರೆಯಾದರೂ ಈಚೆಗೆ ಒಳಾಂಗಣದಲ್ಲಿ ಆಡುವುದೂ ಉಂಟು. ಪುಸಕ್ತ ಲೇಖನ ಲಾನ್ ಟೆನಿಸ್ ಕುರಿತಂತೆ ಇದೆ.
ಲಾನ್ ಟೆನಿಸ್ 1874ರಲ್ಲಿ ಪ್ರಾರಂಭವಾಯಿತೆನ್ನಬಹುದು. ಇದನ್ನು ಬ್ರಿಟಿಷ್ ಸೈನ್ಯಾಧಿಕಾರಿ ಮೇಜರ್ ವಾಲ್ಟರ್ ಸಿ. ವಿಂಗ್ ಪೀಲ್ಟ್ ಎಂಬಾತ ರೂಪಿಸಿ ಸ್ಪೈರಿಸ್ಟೈಕ್ ಎಂಬ ಹೆಸರಿನಲ್ಲಿ ತನ್ನ ಸ್ನೇಹಿತರಿಗೆ ಪರಿಚಯ ಮಾಡಿಸಿಕೊಟ್ಟ. ಈ ಆಟ ಜನಪ್ರಿಯವಾದರೂ ಆಟದ ಹೆಸರು ಮಾತ್ರ ಜನರಿಗೆ ಹಿಡಿಸಲಿಲ್ಲ. ಮೊದಲ ಬಾರಿಗೆ ಲಾನಿನ ಮೇಲೆ ಒಂದು ಕೂಟವನ್ನು ಏರ್ಪಡಿಸಿ ಆಟದ ಪರಿಚಯ ಮಾಡಿಸಿಕೊಟ್ಟಿದ್ದರಿಂದ ಈ ಆಟವನ್ನು ಟೆನಿಸ್ ಆನ್ ಲಾನ್ (ಹುಲ್ಲಿನ ಮೈದಾನದ ಮೇಲೆ ಆಡುವ ಟೆನಿಸ್) ಎಂದು ಕರೆಯುವುದು ರೂಢಿಗೆ ಬಂತು. ಟೆನಿಸ್ ಎಂಬ ಪದ ಅಧಿಕೃತವಾಗಿ ಬಳಕೆಗೆ ಬಂದದ್ದು ಬಹಳ ದಿವಸಗಳ ಅನಂತರವೇ. ಈ ಪದದ ಮೂಲ ಫ್ರೆಂಚ್ ಭಾಷೆಯ ಟೆನ್-ಈಸ್û (ಎಂದರೆ ಆಟವಾಡಲು ಪ್ರಾರಂಭಿಸಲು) ಇರಬಹುದು ಎಂಬುದು ಕೆಲವರ ಮತ. ಟೆನಿಸ್ ಆಟ ಇಂಗ್ಲೆಂಡಿನಿಂದ ಮೊದಲು ಬಮ್ರ್ಯೂಡಕ್ಕೆ ಹೋಗಿ ಅನಂತರ ಅಮೆರಿಕದಲ್ಲಿ ವ್ಯಾಪಿಸಿತು. ಬಮ್ರ್ಯೂಡದಿಂದ ಅಮೆರಿಕಕ್ಕೆ ಇದನ್ನು ಒಯ್ದ ಕೀರ್ತಿ ಒಬ್ಬ ಮಹಿಳೆಗೆ ಸಲ್ಲುತ್ತದೆ. ಎಂತಲೇ ಮೊಟ್ಟಮೊದಲು ಅಮೇರಿಕದಲ್ಲಿ ಹೆಂಗಸರೇ ಈ ಆಟವನ್ನು ಆಡುತ್ತಿದ್ದರು. ಅನಂತರ ಗಂಡಸರೂ ಆಟದ ಸವಿಯನ್ನು ಕಂಡುಕೊಂಡರು. ಕ್ರಮೇಣ ಬಹುಜನಪ್ರಿಯವಾದ ಈ ಆಟವನ್ನು ಶಿಷ್ಟಗೊಳಿಸುವ ಉದ್ದೇಶದಿಂದ 1881ರಲ್ಲಿ ಅಮೆರಿಕದಲ್ಲಿ ಅಮೆರಿಕನ್ ಲಾನ್ ಟೆನಿಸ್ ಅಸೋಸಿಯೇಷನ್ ಎಂಬ ಸಂಸ್ಥೆ ಜನ್ಮತಾಳಿತು. ಇಂದು ಈ ಸಂಸ್ಥೆ ಟಿನಿಸ್ ಕ್ಷೇತ್ರದಲ್ಲೇ ಪ್ರಮುಖ ಸ್ಥಾನವನ್ನು ಪಡೆದಿದೆ.
ಈ ಆಟವನ್ನು ಒಬ್ಬರು ಅಥವಾ ಇಬ್ಬರಿರುವ ಎರಡು ತಂಡಗಳು ಆಡಬಹುದು. ಒಬ್ಬರು ಆಡಿದರೆ ಸಿಂಗಲ್ಸ್ ಎಂದೂ ಇಬ್ಬರು ಕೂಡಿ ಆಡುವ ಆಟಕ್ಕೆ ಡಬಲ್ಸ್ ಎಂದೂ ಹೆಸರು.
ಸಿಂಗಲ್ಸ್ ಆಟದನಿಯಮಗಳು : ಆಡುವ ಮೈದಾನ ಅಥವಾ ಕೋರ್ಟ್ ಆಯಾಕಾರದಲ್ಲಿದ್ದು ಚಪ್ಪಟೆಯಾದ ಪ್ರದೇಶವಾಗಿರಬೇಕು. ಆಟದ ಕೋರ್ಟಿನ ಉದ್ದ 78', ಅಗಲ 27'. ಅಡ್ಡಗಲದ ಮೂಲಕ ಕೋರ್ಟಿನ ನಡುವೆ ಕಟ್ಟುವ ನೆಟ್ ಅಥವಾ ಬಲೆ ಕೋರ್ಟನ್ನು 39' ಉದ್ದವಾಗಿರುವ ಎರಡು ಸಮಭಾಗಗಳನ್ನಾಗಿ ವಿಂಗಡಿಸುತ್ತದೆ. ಬಲೆಯನ್ನು ಹಗ್ಗ ಅಥವಾ ಉಕ್ಕಿನ ಮಣಿಯಿಂದ ತೂಗಬಿಡಲಾಗುವುದು.
ಹಗ್ಗದ (ಅಥವಾ ಮಿಣಿಯ) ವ್ಯಾಸ 1/3"ಗಿಂತ ಹೆಚ್ಚಿರಬಾರದು. ಹಗ್ಗದ ಎರಡೂ ತುದಿಗಳನ್ನು ಕೋರ್ಟಿನ ಇಕ್ಕೆಲಗಳಲ್ಲಿ ಗಡಿಯಿಂದ 3' ಗಳಾಚೆ ನೆಟ್ಟಿರುವ ಎರಡು ಕಂಬಗಳಿಗೆ ಕಟ್ಟಬೇಕು: ಇಲ್ಲವೆ ಹಗ್ಗ ಕಂಬಗಳ ತಲೆಯ ಮೇಲೆ ಹಾದು ಹೋಗುವಂತಿರಬೇಕು. ಕಂಬಗಳ ಎತ್ತರ 3 1/2' ಗಿಂತ ಹೆಚ್ಚಿರಬಾರದು. ಬಲೆಯ ಎತ್ತರ ನಡುಪ್ರದೇಶದಲ್ಲಿ 3' ಇರಬೇಕು. ಈ ಎತ್ತರದಲ್ಲಿ ಬಲೆ ಬಿಗಿಯಾಗಿ ನಿಲ್ಲುವಂತೆ ಮಾಡಲು 2" ಅಗಲದ ಬಟ್ಟೆಪಟ್ಟಿಯನ್ನು ನೆಲದಲ್ಲಿ ಹೂತಿರುವ ಕೊಂಡಿಯೊಂದಕ್ಕೆ ಲಗತ್ತಿಸಿ, ಪಟ್ಟಿಯ ಇನ್ನೊಂದು ತುದಿ ಬಲೆಯ ಮೇಲೆ ಹಾಯ್ದು ಬರುವಂತೆ ಮಾಡಿ ಅದನ್ನೂ ಕೊಂಡಿಗೇ ಸಿಕ್ಕಿಸಿರಲಾಗುವುದು. ಹಗ್ಗ ಹಾಗೂ ಬಲೆಯ ಮೇಲ್ಭಾಗವನ್ನು ಇಕ್ಕೆಲಗಳಲ್ಲಿ 2"ಗೆ ಕಡಿಮೆಯಾಗದ 2 1/4" ಗೆ ಮೀರದ ಅಗಲವಿರುವ ಬಟ್ಟೆಯ ಪಟ್ಟಿಯಿಂದ ಮುಚ್ಚಲಾಗುವುದು. ಕೋರ್ಟಿನ ಎರಡು ತುದಿ ಮತ್ತು ಪಕ್ಕಗಳಿಗೆ ಗಡಿಯಾಗಿರುವ ಗೆರೆಗಳನ್ನು ಅನುಕ್ರಮವಾಗಿ ಬೇಸ್ ಲೈನ್ ಮತ್ತು ಸೈಡ್ ಲೈನ್ ಎಂದು ಕರೆಯಲಾಗಿದೆ. ಬಲೆಯ ಎರಡು ಕಡೆಯಲ್ಲಿ ಅದಕ್ಕೆ 21' ದೂರದಲ್ಲಿ, ಬಲೆಗೆ ಸಮಾಂತರವಿರುವಂತೆ ಎರಡು ಗೆರೆಗಳನ್ನು ಎಳೆಯಲಾಗುವುದು. ಇವು ಸರ್ವಿಸ್ ಲೈನುಗಳು. ಬಲೆಯ ಎರಡು ಕಡೆಯಲ್ಲಿ ಸರ್ವಿಸ್ ಲೈನ್ ಮತ್ತು ಸೈಡ್ ಲೈನುಗಳ ನಡುವಿನ ಪ್ರದೇಶವನ್ನು, ಸೆಂಟರ್ ಸರ್ವಿಸ್ ಗೆರೆಯಿಂದ ಎರಡು ಸಮಭಾಗ ಪ್ರದೇಶಗಳನ್ನಾಗಿ ವಿಂಗಡಿಸಲಾಗುವುದು. ಈ ಗೆರೆ 2" ಅಗಲವಾಗಿರಬೇಕು; ಮತ್ತು ಇದನ್ನು ಸೈಡ್ ಲೈನಿಗೆ ಸಮಾಂತರವಾಗಿ ಮತ್ತು ಅವುಗಳ ನಡುವೆ ಅರ್ಧದೂರದಲ್ಲಿ ಎಳೆಯಬೇಕು. ಸಮಭಾಗವಾಗಿ ವಿಂಗಡಿಸಿದ ಈ ಪ್ರದೇಶಗಳನ್ನು ಸರ್ವಿಸ್ ಕೋರ್ಟುಗಳು ಎಂದು ಕರೆಯಲಾಗಿದೆ. ಸೆಂಟರ್ ಸರ್ವಿಸ್ ಗೆರೆಯನ್ನು ಎರಡೂ ಕಡೆ ಮುಂದುವರಿಸಿದೆ ಎಂದು ಊಹಿಸಿದರೆ ಅದು ಬೇಸ್ ಲೈನುಗಳನ್ನು ಎರಡು ಸಮಭಾಗಗಳಾಗಿ ವಿಂಗಡಿಸುತ್ತದೆ. ಊಹಾಗೆರೆ ಬೇಸ್ ಲೈನನ್ನು ಮುಟ್ಟುವ ಸ್ಥಳದಲ್ಲಿ 4" ಉದ್ದ ಮತ್ತು 2" ಅಗುಲವಿರುವ ಗೆರೆಯನ್ನು ಕೋರ್ಟಿನ ಒಳಭಾಗದಲ್ಲಿ, ಬೇಸ್ ಲೈನಿಗೆ ಲಂಭವಾಗಿ ಮತ್ತು ಅದನ್ನು ಸ್ಪರ್ಶಿಸುವಂತೆ ಎಳೆಯಲಾಗುವುದು. ಉಳಿದೆಲ್ಲ ಗೆರೆಗಳ ಅಗಲ 1"ಗಿಂತ ಕಡಿಮೆಯಾಗಲೀ ಎರಡು ಇಂಚುಗಳಿಗಿಂತ ಹೆಚ್ಚಾಗಲೀ ಇರಬಾರದು. ಬೇಸ್ ಲೈನಿನ ಅಗಲ 4"ಗಳಿಷ್ಟಿರಬಹುದು. ಎಲ್ಲ ಅಳತೆಗಳನ್ನು ಗೆರೆಗಳ ಹೊರಭಾಗದಿಂದಲೇ ಪ್ರಾರಂಭಿಸಲಾಗುತ್ತದೆ. ಚೆಂಡು: ಚೆಂಡಿನ ಹೊರಮೈ ನಯವಾಗಿದ್ದು ಹೊಲಿಗೆಗಳಿಲ್ಲದಿರಬೇಕು. ಅದರ ವ್ಯಾಸ 2 1/2" ಗಿಂತ ಕಡಿಮೆಯಾಗಲೀ 2 8/5" ಗಿಂತ ಹೆಚ್ಚಾಗಲೀ ಇರಬಾರದು. ತೂಕ 2 ಔನ್ಸಿಗಿಂತ ಕಡಿಮೆಯಾಗಲೀ 2 1/16 ಔನ್ಸಿಗಿಂತ ಹೆಚ್ಚಾಗಿಯಾಗಲೀ ಇರಬಾರದು. ಚೆಂಡನ್ನು ರಬ್ಬರಿನಿಂದ ತಯಾರಿಸಿರುತ್ತಾರೆ. ಒಳಾವಕಾಶವನ್ನು ವಾಯುವಿನಿಂದ ಅಧಿಕ ಒತ್ತಡದಲ್ಲಿ ತುಂಬಲಾಗಿರುತ್ತದೆ. ಇದರ ಹೊರ ಮೈಗೆ ಫೆಲ್ಟ್ ಹೊದಿಕೆ ಇರುತ್ತದೆ. ಚೆಂಡಿನ ಒಳಗಿರುವ ವಾಯುವಿನ ಒತ್ತಡ ಸುಮಾರು, 68' ಎಫ್ ಉಷ್ಣತೆಯಲ್ಲಿ 100" ಎತ್ತರದಿಂದ ಕಾಂಕ್ರೀಟ್ ನೆಲದ ಮೇಲೆ ಬಿದ್ದ ಚೆಂಡು 53"ಗಿಂತ ಕಡಿಮೆ ಮತ್ತು 56"ಗಿಂತ ಹೆಚ್ಚಿನ ಎತ್ತರಕ್ಕೆ ಪುಟಿಯದಷ್ಟಿರಬೇಕು.
ಟೆನಿಸ್ ಆಟಕ್ಕೆಂದೇ ವಿಶೇಷ ರೀತಿಯಲ್ಲಿ ತಯಾರಿಸಲಾಗುವ ಜಾಲರಿ ಬ್ಯಾಟು. ಮೊದಲಿಗೆ ಕುರಿ, ಕುದುರೆ ಮೊದಲಾದ ಪ್ರಾಣಿಗಳಿಂದ ತೆಗೆದ ಕರುಳಿನ ದಾರವನ್ನು ಉದ್ದನೆಯ ಮರದ ಹಿಡಿಯಿರುವ ಅಂಡಾಕಾರದ ಚೌಕಟ್ಟಿಗೆ ಬಿಗಿದು ಕಟ್ಟಿ ರ್ಯಾಕೆಟ್ಟುಗಳನ್ನು ತಯಾರಿಸಲಾಗುತ್ತಿತ್ತು. ಈಗ ಕರುಳಿಗೆ ಬದಲು ಕೃತಕವಾಗಿ ನಿರ್ಮಿಸಿದ ಗಟ್ಟಿಯಾದ ನೈಲಾನ್ ದಾರವನ್ನು ಬಳಸುತ್ತಾರೆ.
ಆಟಗಾರರು ಬಲೆಯ ಎರಡೂ ಕಡೆ ಎದುರು ಬದುರಾಗಿ, ಕೈಯಲ್ಲಿ ರ್ಯಾಕೆಟ್ಟನ್ನು ಹಿಡಿದು, ನಿಲ್ಲಬೇಕು. ಚೆಂಡನ್ನು ಮೊದಲು ಸರ್ವ್ ಮಾಡುವಾತನನ್ನು ಸರ್ವರ್ ಎಂದೂ ಹಿಂದಿರುಗಿಸುವವನನ್ನು ರಿಸೀವರ್ ಎಂದೂ ಕರೆಯುತ್ತಾರೆ. ಮೊದಲು ಸರ್ವ್ ಮಾಡುವವರು ಯಾರು ಎಂಬುದನ್ನು ಸಾಮಾನ್ಯವಾಗಿ ನಾಣ್ಯ ಚಿಮ್ಮಿ ನಿರ್ಧರಿಸಲಾಗುವುದು. ಸರ್ವ್ ಮಾಡುವ ಮುನ್ನ ಸರ್ವರ್ ಬೇಸ್ ಲೈನಿನ ಹಿಂದೆ ಮಧ್ಯದ ಗುರುತು ಮತ್ತು ಸೈಡ್ ಲೈನಿನ್ ನಡುವೆ (ಲೈನುಗಳನ್ನು ಮುಂದುವರಿಸಿದೆ ಎಂದು ಊಹಿಸಿದರೆ) ತನ್ನ ಎರಡೂ ಕಾಲುಗಳನ್ನು ನೆಲದ ಮೇಲೆ ಊರಿ ನಿಲ್ಲಬೇಕು. ಸರ್ವಿಸನ್ನು ಮಾಡುವ ಪರ್ಯಂತವೂ ಆತ ಅಡ್ಡಾಡಿಕೊಂಡು ತನ್ನ ಸ್ಥಾನವನ್ನು ಬದಲಾಯಿಸಬಾರದು; ಕಾಲು ನೆಲದ ಸಂಪರ್ಕದಲ್ಲಿರಬೇಕು. ಮತ್ತು ಎರಡೂ ಕಾಲುಗಳನ್ನೂ ಬೇಸ್ ಲೈನಿನ ಹಿಂದೆಯೇ ಇಟ್ಟಿರಬೇಕು-ಎಂದು ನಿಯಮಗಳಿವೆ.
ಒಂದು ಆಟದ ಪರ್ಯಂತ ಸರ್ವಿಸನ್ನು ಮಾಡುವಾಗ ಕೋರ್ಟಿನ ಬಲ ಮತ್ತು ಎಡಗಡೆಯ ಅರ್ಧಗಳಿಂದ, ಒಂದು ಕಡೆಯಿಂದಾದ ಮೇಲೆ ಮತ್ತೊಂದು ಕಡೆಯಿಂದ-ಹೀಗೆ ಬದಲಾಯಿಸುತ್ತ ಆಡಬೇಕು. ಆಟದ ಪ್ರಾರಂಭದಲ್ಲಿ ಸರ್ವಿಸನ್ನು ಬಲಗಡೆಯಿಂದ ಪ್ರಾರಂಭಿಸಬೇಕು. ಸರ್ವ್ ಮಾಡಿದ ಚೆಂಡು, ಎದುರಾಳಿ ಅದನ್ನು ಹಿಂತಿರುಗಿಸುವ ಮೊದಲು, ಬಲೆಯ ಮೇಲೆ ಹಾದು ಎದುರಾಳಿಯ ಬಲಗಡೆಯ ಸರ್ವಿಸ್ ಕೋರ್ಟನ್ನಾಗಲೀ ಅದರ ಗಡಿ ರೇಖೆಗಳನ್ನಾಗಲೀ ಮುಟ್ಟಿ ಪುಟಿಯಬೇಕು. ಈ ನಿಯಮಗಳನ್ನು ಸರ್ವರ್ ಉಲ್ಲಂಘಿಸುವುದು, ಸರ್ವ್ ಮಾಡುವಾಗ ಚೆಂಡಿಗೆ ಹೊಡೆತ ಬೀಳದಿರುವುದು, ಸರ್ವಿಸ್ ಕೋರ್ಟಿಗೆ ಚೆಂಡು ಬೀಳುವ ಮೊದಲು ಬಲೆ, ಹಗ್ಗ ಮತ್ತು ಮಿಣಿಗಳ ವಿನಾ ಇನ್ನಾವುದೇ ಸ್ಥಿರ ನಿಲುವುಗಳಿಗೆ ಹೊಡೆಯುವುದು-ಇವುಗಳಲ್ಲಿ ಯಾವುದೊಂದಾದರೂ ಆ ಸರ್ವಿಸ್ ತಪ್ಪು ಅಥವಾ ಫಾಲ್ಟ್ ಎನ್ನಿಸಿಕೊಳ್ಳುತ್ತದೆ. ಸರ್ವಿಸ್ ತಪ್ಪಾದಾಗ, ಅದು ಮೊದಲನೆಯದಾದರೆ, ಯಾವ ಕೋರ್ಟಿನ ಅರ್ಧದಿಂದ ಸರ್ವಿಸನ್ನು ಮಾಡಲಾಯಿತೋ ಅದೇ ಅರ್ಧದಿಂದ ಮತ್ತೊಂದು ಬಾರಿ ಸರ್ವ್ ಮಾಡಲು ಅವಕಾಶವುಂಟು. ಗೊತ್ತಾದ ಅರ್ಧದಿಂದ ಸರ್ವ್ ಮಾಡದೆ ಮತ್ತೊಂದು ಅರ್ಧದಿಂದ ಸರ್ವಿಸ್ ಮಾಡಿದ ಕಾರಣದಿಂದ ಸರ್ವಿಸ್ ತಪ್ಪಾಗಿದ್ದರೆ, ಸರಿಯಾದ ಅರ್ಧದಿಂದ ಒಂದು ಸರ್ವಿಸನ್ನು ಮಾಡಲು ಅನುಮತಿ ನೀಡಲಾಗುತ್ತದೆ. ಎರಡನೆಯ ಬಾರಿ ಸರ್ವಿಸ್ ಮಾಡಿದ ಅನಂತರ ಈ ಸೌಲಭ್ಯಗಳು ದೊರೆಯುವುದಿಲ್ಲ. ಉಳಿದೆಲ್ಲ ರೀತಿಗಳಲ್ಲಿ ಸರ್ವಿಸ್ ಸರಿಯಾಗಿದ್ದು, ಹಗ್ಗ, ಬಲೆ ಅಥವಾ ಪಟ್ಟಿಯನ್ನು ಚೆಂಡು ಮುಟ್ಟಿದರೆ ಆ ಸರ್ವಿಸನ್ನು ಲೆಟ್ ಎಂದು ಕರೆಯಲಾಗುವುದು. ಇಂಥ ಸರ್ವಿಸ್ ಗಣನೆಗಿಲ್ಲ. ಆದರೆ ಲೆಟ್ ಸರ್ವಿಸ್ ತನ್ನ ಹಿಂದಿನ ತಪ್ಪು ಸರ್ವಿಸನ್ನು ಸರಿಪಡಿಸುವುದಿಲ್ಲ. ಮೊದಲ ಆಟ ಮುಗಿದ ಅನಂತರ ರಿಸೀವರ್ ಹಾಗೂ ಸರ್ವರ್ಗಳು ಅದಲು ಬದಲಾಗುತ್ತಾರೆ. ಪಂದ್ಯ ಮುಗಿಯುವವರೆಗೆ ಆಟಗಾರರು ಇದೇ ರೀತಿ ಆಡಲು ಬದಲಾಯಿಸಿಕೊಳ್ಳುತ್ತ ಹೋಗುತ್ತಾರೆ.
ಸರ್ವಿಸ್ ಮಾಡಿದ ಕ್ಷಣದಿಂದ (ಲೆಟ್ ಅಥವಾ ತಪ್ಪಾಗದಿದ್ದರೆ) ಪಾಯಿಂಟ್ ಯಾರಿಗೆ ಸೇರಬೇಕು ಎಂಬುದು ನಿರ್ಧಾರವಾಗುವವರೆಗೆ ಚೆಂಡು ಆಟದಲ್ಲಿರುತ್ತದೆ. ಸರ್ವ್ ಮಾಡಿದ ಚೆಂಡು ನೆಲಕ್ಕೆ ಬೀಳುವ ಮುಂಚೆ ರಿಸೀವರನ್ನು ಅಥವಾ ಅವನು ಧರಿಸಿರುವ ಉಡುಪು ಇಲ್ಲವೆ ಅವನ ಕೈಯಲ್ಲಿರುವ ಯಾವುದೇ ವಸ್ತುವನ್ನು ಮುಟ್ಟಿದರೂ ಸರ್ವರಿಗೆ ಪಾಯಿಂಟು ದೊರೆಯುತ್ತದೆ, ಇಲ್ಲವೆ ಮುಂದೆ ತಿಳಿಸಿರುವ ಯಾವುದೇ ರೀತಿಯಲ್ಲಿ ರಿಸೀವರ್ ಪಾಯಿಂಟನ್ನು ಕಳೆದುಕೊಂಡರೂ ಸರ್ವರಿಗೆ ಆ ಪಾಯಿಂಟ್ ದೊರೆಯುತ್ತದೆ. ರಿಸೀವರ್ಗೆ ಪಾಯಿಂಟ್ ದೊರೆಯಬೇಕಾದರೆ ಸರ್ವರ್ ಒಂದಾದ ಮೇಲೊಂದಂರಂತೆ ಎರಡು ಸರ್ವಿಸುಗಳನ್ನು ಲೆಟ್ ರೀತಿಯಲ್ಲಿ ಮಾಡಬೇಕು. ಇಲ್ಲವೆ ಮುಂದೆ ತಿಳಿಸಿರುವ ಯಾವುದೇ ರೀತಿಯಲ್ಲಿ ಸರ್ವರ್, ಪಾಯಿಂಟಿನಿಂದ ವಂಚಿತನಾಗಬೇಕು.
ಆಟಗಾರ ಪಾಯಿಂಟನ್ನು ಕಳೆದುಕೊಳ್ಳವ ಸನ್ನಿವೇಶಗಳಿವು: (1) ಆಟದಲ್ಲಿರುವ ಚೆಂಡನ್ನು ಅದು ಎರಡು ಬಾರಿ ಅನುಗತವಾಗಿ ನೆಲವನ್ನು ಮುಟ್ಟುವ ಮೊದಲು ಬಲೆಯ ಮೇಲೆ ನೇರವಾಗಿ ಹಿಂದಿರುಗಿಸದಿದ್ದರೆ, (2) ಎದುರಾಳಿಯ ಕೋರ್ಟಿನ ಹೊರಕ್ಕೆ ಅಥವಾ ಯಾವುದಾದರೂ ಸ್ಥಿರ ನಿಲುವಿಗೆ ಹೊಡೆಯುವಂತೆ ಚೆಂಡನ್ನು ವಾಪಸ್ಸು ಕಳುಹಿಸಿದರೆ, (3) ಕೋರ್ಟಿನೊಳಗೆ ಇರುವಾಗ ಅಥವಾ ಅದರ ಹೊರಗೆ ನಿಂತಾಗ ಎದುರಾಳಿ ಹೊಡೆದ ಚೆಂಡನ್ನು ಅದು ನೆಲಕ್ಕೆ ಬೀಳುವ ಮೊದಲೇ ವಾಪಸ್ಸು ಕಳಿಸುವ ಪ್ರಯತ್ನದಲ್ಲಿ ಅದನ್ನು ಎದುರಾಳಿಯ ಕೋರ್ಟಿನಿಂದ ಹೊರಕ್ಕೆ ಕಳುಹಿಸಿದರೆ, (4) ಆಟದಲ್ಲಿರುವ ಚೆಂಡನ್ನು ಹೊಡೆಯುವಾಗ ರ್ಯಾಕೆಟ್ಟಿನಿಂದ ಒಂದಕ್ಕಿಂತ ಹೆಚ್ಚು ಬಾರಿ ಮುಟ್ಟಿದರೆ, (5) ಚೆಂಡನ್ನು ಹೊಡೆಯುವಾಗ ಅಥವಾ ಚೆಂಡು ಆಟದಲ್ಲಿರುವ ಪರ್ಯಂತ ಅವನಾಗಲೀ, ಅವನು ಧರಿಸಿರುವ ಉಡುಪಾಗಲೀ, ಅವನ ಕೈಯಲ್ಲಿರುವ ಯಾವುದೇ ವಸ್ತುವಾಗಲೀ, ರ್ಯಾಕೆಟ್ಟಾಗಲಿ (ಕೈಯಲ್ಲಿ ಇರಬಹುದು, ಇಲ್ಲದಿರಬಹುದು) ಬಲೆಯನ್ನೋ, ಕಂಬಗಳನ್ನೋ ಹಗ್ಗವನ್ನೋ ಪಟ್ಟೆ ಅಥವಾ ಎದುರಾಳಿಯ ಕೋರ್ಟನ್ನೋ ಮುಟ್ಟಿದರೆ, (6) ಬಲೆಯನ್ನು ದಾಟುವ ಮೊದಲೇ ಚೆಂಡನ್ನು ಬುತ್ತಿ ಹೊಡೆದರೆ (ವಾಲಿಯಿಂಗ್), (7) ಹೊಡೆಯುವಾಗ ಚೆಂಡು ರ್ಯಾಕೆಟ್ಟು ವಿನಾ ಅವನನ್ನಾಗಲೀ ಆತ ಧರಿಸಿರುವ ಅಥವಾ ಹಿಡಿದಿರುವ ಯಾವುದೇ ವಸ್ತುವನ್ನಾಗಲೀ ಮುಟ್ಟಿದಾಗ ಗೆರೆಯ ಮೇಲೆಯೇ ಚೆಂಡು ಬಿದ್ದರೆ ಆಗ ಅದು ಆ ಗೆರೆಯಿಂದ ಸೀಮಿತವಾದ ಕೋರ್ಟಿನಲ್ಲೇ ಬಿದ್ದಂತೆ ಎಂದು ಪರಿಗಣಿಸಲಾಗುವುದು.
ಎದುರಾಳಿ ಹೊಡೆದ ಚೆಂಡನ್ನು ಹಿಂದಿರುಗಿಸಿದಾಗ ಅದು (1) ಬಲೆ, ಕಂಬಗಳು ಹಗ್ಗ, ಪಟ್ಟೆ-ಇವನ್ನು ಮುಟ್ಟಿದರೆ, ಎದುರಾಳಿಯ ಕೋರ್ಟಿನೊಳಗೆ ಬಿದ್ದರೆ, (2) ಸರ್ವ್ ಮಾಡಿದ ಅಥವಾ ಹಿಂದಿರುಗಿಸಿದ ಚೆಂಡು ಸರಿಯಾದ ಕೋರ್ಟಿಗೆ ಬಿದ್ದು ಚಿಮ್ಮಿಕೊಂಡೋ ಇಲ್ಲವೆ ಗಾಳಿಯಿಂದ ತೂರಿ ಬಂದೋ ಬಲೆಯ ಮೇಲೆ ವಾಪಸ್ಸು ಬಂದರೆ ಆಗ ಚೆಂಡನ್ನು ಹೊಡೆಯುವ ಸರದಿ ಯಾರದೋ ಆತ ತನ್ನ ಉಡುಪು, ರ್ಯಾಕೆಟ್ಟು, ದೇಹ ಮುಂತಾದವು ಬಲೆಯನ್ನು ಮುಟ್ಟದಂತೆ ಎಚ್ಚರಿಕೆ ವಹಿಸಿ, ಬಲೆಯಿಂದಾಚೆ ಆಡಿ ಚೆಂಡು ಕೋರ್ಟಿನೊಳಕ್ಕೆ ಸರಿಯಾಗಿ ಬೀಳುವಂತಾಗಿಸಿದರೆ, (3) ಹಿಂದಿರುಗಿಸಿದ ಚೆಂಡು ಕಂಬದಿಂದಾಚೆ, ಬಲೆಯ ಮೇಲೆ ಅಥವಾ ಕೆಳಗೆ ಹಾಯ್ದರೂ ವಾಪಸ್ಸು ಬಂದು ಸರಿಯಾಗಿ ಕೋರ್ಟಿನೋಳಕ್ಕೆ ಬಿದ್ದರೆ, (4) ಆಟಗಾರನ ರ್ಯಾಕೆಟ್ಟು, ಹೊಡೆದ ಚೆಂಡು ಬಲೆಯನ್ನು ದಾಟಿದ ಅನಂತರ, ಬಲೆಯ ಮೇಲಿಂದಾಚೆಗೆ ಹಾಯ್ದರೆ, ಚೆಂಡು ಸರಿಯಾಗಿ ವಾಪಸ್ಸು ಕಳಿಸಲ್ಪಟ್ಟಿದೆ ಎಂದು ಪರಿಗಣಿಸುವುದು.
ಒಬ್ಬ ಆಟಗಾರ ಮೊದಲ ಪಾಯಿಂಟನ್ನು ಪಡೆದರೆ ಅವನ ಸ್ಕೋರನ್ನು 15 ಎಂದು ಕರೆಯಲಾಗುವುದು. ಪ್ರಾರಂಭದಲ್ಲಿ ಯಾರದೂ ಏನೂ ಸ್ಕೋರ್ ಇಲ್ಲದಿದ್ದಾಗ ಲವ್ ಆಲ್ ಎಂದು ಕರೆಯಲಾಗುವುದು. ಎರಡನೆಯ ಪಾಯಿಂಟನ್ನು ಪಡೆದಾಗ ಆಟಗಾರನ ಸ್ಕೋರ್ 30 ; ಮೂರನೆಯ ಪಾಯಿಂಟನ್ನು ಗೆದ್ದಾಗ ಸ್ಕೋರ್ 40 ಆಗುತ್ತದೆ. ಅದೇ ಆಟಗಾರ ನಾಲ್ಕನೆಯ ಪಾಯಿಂಟನ್ನು ಪಡೆದರೆ ಆತ ಆ ಆಟವನ್ನು ಗೆದ್ದಂತೆಯೇ. ಕೆಲವೊಂದು ಸಂದರ್ಭದಲ್ಲಿ ಮಾತ್ರ ಈ ನಿಯಮ ಅನ್ವಯವಾಗುವುದಿಲ್ಲ. ಇಬ್ಬರು ಆಟಗಾರರ ಸ್ಕೋರ್ 40 ಆದಾಗ, ಎಂದರೆ ಇಬ್ಬರಿಗೂ ಮೂರು ಪಾಯಿಂಟುಗಳು ದೊರೆತಾಗ, ಸ್ಕೋರನ್ನು ಡ್ಯೂಸ್ ಎಂದು ಕರೆಯಲಾಗುವುದು. ಅನಂತರ ಪಾಯಿಂಟನ್ನು ಪಡೆದಾತನಿಗೆ ಅಡ್ವಾಂಟೇಜ್ ಕೊಡಲಾಗುವುದು. ಉದಾಹರಣೆಗೆ, ಸರ್ವಿಸ್ ಮಾಡುವಾತ ಪಾಯಿಂಟನ್ನು ಪಡೆದರೆ ಆಗ ಅದನ್ನು ಅಡ್ವಾಂಟೇಜ್ ಟು ಸರ್ವರ್ ಎಂದು ಕರೆಯುತ್ತಾರೆ. ರಿಸೀವರ್ಗೆ ಪಾಯಿಂಟು ದೊರೆತರೆ ಅದು ಅಡ್ವಾಂಟೇಜ್ ಟು ರಿಸೀವರ್ ಎಂದು ಎನಿಸಿಕೊಳ್ಳುತ್ತದೆ. ಯಾರಿಗೆ ಅಡ್ವಾಂಟೇಜ್ ಇದೆಯೋ ಆತನೇ ಮುಂದಿನ ಪಾಯಿಂಟನ್ನು ಪಡೆದರೆ ಆಗ ಆತ ಆ ಆಟವನ್ನು ಗೆದ್ದಂತೆಯೇ; ಪಾಯಿಂಟನ್ನು ಕಳೆದುಕೊಂಡರೆ ಸ್ಕೋರನ್ನು ಮತ್ತೆ ಡ್ಯೂಸ್ ಎಂದು ಕರೆಯಲಾಗುವುದು. ಯಾರಾದರೊಬ್ಬ ಆಟಗಾರ ಅನುಗತವಾಗಿ ಎರಡು ಪಾಯಿಂಟುಗಳನ್ನು ಪಡೆಯುವವರೆಗೆ ಹೀಗೆಯೇ ಸ್ಕೋರ್ ಮಾಡಲಾಗುವುದು. ಆಟ ಡ್ಯೂಸ್ ಆದ ಅನಂತರ ಯಾರು ಎರಡು ಪಾಯಿಂಟುಗಳನ್ನು ಒಂದೇ ಸಮನಾಗಿ ಪಡೆಯುವರೋ ಅವರದಾಗುವುದು.
ಮುಂದೆ ತಿಳಿಸಿರುವ ಸಂದರ್ಭದ ವಿನಾ, ಯಾವ ಆಟಗಾರ ಆರು ಆಟಗಳನ್ನು ಗೆಲ್ಲುತ್ತಾನೆಯೋ ಆತ ಸೆಟ್ಟನ್ನು ಗೆದ್ದಂತೆ; ಇಬ್ಬರು ಆಟಗಾರರೂ ಐದು ಆಟಗಳನ್ನು ಗೆದ್ದರೆ, ಸ್ಕೋರನ್ನು ಗೇಮ್ಸ್ ಅಲ್ (ಇಬ್ಬರದೂ ಆಟ) ಎಂದು ಕರೆಯಲಾಗುವುದು. ಮುಂದಿನ ಆಟವನ್ನು ಗೆಲ್ಲುವಾತನೇ ಇನ್ನೊಂದು ಆಟವನ್ನು ಗೆದ್ದರೆ, ಸೆಟ್ಟು ಅವನದಾಗುವುದು; ಹಾಗಿಲ್ಲದೆ ಗೇಮ್ಸ್ ಆಟ ಅದ ಅನಂತರ ಆಡುವ ಎರಡನೆಯ ಆಟವನ್ನು ಪ್ರತಿಸ್ಪರ್ಧಿ ಗೆದ್ದರೆ ಪುನಃ ಗೇಮ್ಸ್ ಆಲ್ ಆಗುವುದು. ಒಬ್ಬ ಆಟಗಾರ ತನ್ನ ಎದುರಾಳಿಗಿಂತ ಎರಡು ಆಟಗಳನ್ನು ಹೆಚ್ಚಿಗೆ ಗೆಲ್ಲುವವರೆಗೆ ಪಂದ್ಯ ನಡೆಯುತ್ತದೆ ಮತ್ತು ಗೆದ್ದವನಿಗೆ ಸೆಟ್ ದೊರೆಯುತ್ತದೆ. ಪ್ರತಿ ಸೆಟ್ಟಿನಲ್ಲಿ ಒಂದು, ಮೂರು, ಐದು-ಹೀಗೆ ಬೆಸಸಂಖ್ಯೆಯ ಆಟಗಳಾದ ಮೇಲೆ ಆಟಗಾರರು ಆಟವಾಡುವ ಕಡೆಯನ್ನು ಅದಲು ಬದಲು ಮಾಡಿಕೊಳ್ಳಬೇಕು. ಸೆಟ್ಟು ಮುಗಿದ ಅನಂತರವೂ ಹೀಗೆ ಬದಲಿಸಿಕೊಳ್ಳಬೇಕು; ಅದರೆ ಮುಗಿದ ಸೆಟ್ಟಿನಲ್ಲಿ ಒಟ್ಟು ಏಳು ಆಟಗಳನ್ನು ಮಾತ್ರ ಆಡಿದ್ದರೆ ಮುಂದಿನ ಸೆಟ್ಟಿನಲ್ಲಿ ಒಂದು ಆಟವಾದ ಅನಂತರ ಬದಲಿಸಬೇಕು. ಒಂದು ಪಂದ್ಯ ಕೊನೆಗಾಣಲು, ಪುರುಷರ ಸಂದರ್ಭದಲ್ಲಿ ಐದು, ಮಹಿಳೆಯರ ಸಂದರ್ಭದಲ್ಲಿ ಮೂರು ಸೆಟ್ಟುಗಳು ಪೂರ್ಣವಾಗಬೇಕು.
ಇದರಲ್ಲಿ ಒಂದೊಂದು ಕಡೆಯೂ ಇಬ್ಬಿಬ್ಬರು ಆಟಗಾರರಿರುತ್ತಾರೆ. ಡಬಲ್ಸ್ ಆಟಕ್ಕೆ ಸಿಂಗಲ್ಸ್ ಆಟದ ನಿಯಮಗಳೇ ಅನ್ವಯಿಸಿದರೂ ಕೆಲವೊಂದು ಮಾರ್ಪಾಟುಗಳಿರುತ್ತವೆ. ಡಬಲ್ಸ್ ಕೋರ್ಟಿನ ಅಗಲ 36' ಇರಬೇಕು; ಎಂದರೆ ಸಿಂಗಲ್ ಕೋರ್ಟಿಗಿಂತ ಅದರ ಎರಡು ಕಡೆಯಲ್ಲಿ ಪ್ರತಿಯೊಂದು ಕಡೆ 4 1/2' ಅಗಲವಾಗಿರಬೇಕು. ಎರಡು ಸರ್ವಿಸ್ ಲೈನುಗಳ ಮಧ್ಯೆ ಇರುವ ಸಿಂಗಲ್ಸ್ ಸೈಡ್ ಲೈನುಗಳ ಭಾಗಗಳನ್ನು ಸರ್ವಿಸ್ ಸೈಡ್ ಲೈನುಗಳೆಂದು ಕರೆಯುತ್ತಾರೆ. ಪ್ರತಿಸೆಟ್ಟಿನ ಪ್ರಾರಂಭದ ಆಟದಲ್ಲಿ ಸರ್ವ್ ಮಾಡುವ ಹಕ್ಕನ್ನು ಪಡೆದಿರುವ ಜೋಡಿಗಳ ಪೈಕಿ ಯಾರು ಸರ್ವ್ ಮಾಡಬೇಕು ಎಂಬುದನ್ನು ನಿರ್ಣಯಿಸಿಕೊಳ್ಳಬಹುದು; ಮತ್ತು ಅದೇ ರೀತಿ ಎದುರಾಳಿ ಜೋಡಿ ಸಹ ಎರಡನೆಯ ಆಟದಲ್ಲಿ ಯಾರು ಸರ್ವ್ ಮಾಡಬೇಕು ಎಂಬುದನ್ನು ಗೊತ್ತುಮಾಡಿಕೊಳ್ಳಬಹುದು. ಮೊದಲ ಆಟದಲ್ಲಿ ಸರ್ವ್ ಮಾಡಿದ ಆಟಗಾರನ ಜೊತೆಗಾರ ಮೂರನೆಯ ಆಟದಲ್ಲಿ ಸರ್ವ್ ಮಾಡಬೇಕು; ಎರಡನೆಯ ಆಟದಲ್ಲಿ ಸರ್ವ್ ಮಾಡಿದ ಆಟಗಾರನ ಜೊತೆಗಾರ ನಾಲ್ಕನೆಯ ಆಟದಲ್ಲಿ-ಹೀಗೆ ಸೆಟ್ಟಿನ ಕೊನೆಯವರೆಗೆ ಇದೇ ಕ್ರಮದಲ್ಲಿ ಸರ್ವ್ ಮಾಡಬೇಕು.
ಒಂದು ಸೆಟ್ಟು ನಡೆಯುತ್ತಿರುವ ಪರ್ಯಂತ ಸರ್ವಿಸ್ ಮಾಡುವ ಅನುಕ್ರಮದಲ್ಲಿ ವ್ಯತ್ಯಾಸವಾಗಕೂಡದು. ಆದರೆ ಇನ್ನೊಂದು ಹೊಸ ಸೆಟ್ಟಿನ ಪ್ರಾರಂಭದಲ್ಲಿ ಈ ವ್ಯವಸ್ಥೆಯನ್ನು ಬದಲಾಯಿಸಲವಕಾಶವಿದೆ. ಇದೇ ರೀತಿ ಸರ್ವಿಸನ್ನು ಹಿಂದಿರುಗಿಸುವ ರಿಸೀವರ್ಗಳು ಸಹ ಸರ್ವಿಸನ್ನು ಹಿಂದಿರುಗಿಸುವ ಸಲುವಾಗಿ ತಮ್ಮ ಸ್ಥಾನಗಳನ್ನು ಅದಲುಬದಲು ಮಾಡುವಂತಿಲ್ಲ. ಆದರೆ ಹೊಸ ಸೆಟ್ಟಿನ ಪ್ರಾರಂಭದಲ್ಲಿ ಅವಶ್ಯವೆನಿಸಿದರೆ ಮಾತ್ರ ಅದಕ್ಕೆ ಅವಕಾಶ ಉಂಟು. ವಿರುದ್ಧ ಬಣದಲ್ಲಿ ಒಬ್ಬಾತ ಹೊಡೆದ ಚೆಂಡನ್ನು ಎದುರು ತಂಡದ ಇಬ್ಬರು ಪೈಕಿ ಯಾರಾದರೊಬ್ಬರು ಹಿಂದಿರುಗಿಸಬಹುದು. ಈ ರೀತಿ ಒಂದು ತಂಡದವರು ಹೊಡೆದ ಚೆಂಡನ್ನು ಇನ್ನೊಂದು ತಂಡದವರು ಹಿಂದಿರುಗಿಸುತ್ತ ಆಟವನ್ನು ಮುಂದುವರಿಸಬೇಕು. ಈ ನಿಯಮಕ್ಕೆ ವಿರುದ್ಧವಾಗಿ ಆಟಗಾರ ಚೆಂಡನ್ನು ತನ್ನ ರ್ಯಾಕೆಟಿನಿಂದ ಮುಟ್ಟಿದರೆ ಅವನ ಎದುರಾಳಿಗಳು ಪಾಯಿಂಟನ್ನು ಗೆದ್ದುಕೊಳ್ಳತ್ತಾರೆ.
ಟೆನಿಸ್ ಪ್ರಪಂಚದಾದ್ಯಂತ ಮನ್ನಣೆ ಪಡೆದಿರುವಂಥ ಆಟ. ಸಾಮಾನ್ಯವಾಗಿ ಎರಡು ರಾಷ್ಟ್ರಗಳ ನುರಿತ ಟೆನಿಸ್ ಪಟುಗಳ ನಡುವೆ ಸಹಸ್ರಾರು ಪ್ರೇಕ್ಷಕರೆದುರಿಗೆ ನಡೆಯುವ ಟೆನಿಸ್ ಪಂದ್ಯಗಳು ಬಹು ಜನಪ್ರಿಯವಾಗಿವೆ. ಪಂದ್ಯಗಳಲ್ಲಿ ಅಸಾಧಾರಣ ತಂತ್ರಗಳನ್ನು ಪ್ರದರ್ಶಿಸಿ ಯಶಸ್ಸು ಪಡೆಯುವ ಆಟಗಾರರಿಗೆ ಪ್ರಶಸ್ತಿಯನ್ನೂ ಬಹುಮಾನಗಳನ್ನೂ ನೀಡಲಾಗುತ್ತದೆ. ಇಂಗ್ಲೆಂಡಿನ ವಿಂಬಲ್ಡನ್ ಎಂಬಲ್ಲಿ ನಡೆಯುವ ಪಂದ್ಯಗಳು, ಅಮೆರಿಕದ ಫಾರೆಸ್ಟ್ ಹಿಲ್ಸ್ ನಲ್ಲಿ ನಡೆಯುವ ಪಂದ್ಯಗಳು, ಆಸ್ಟ್ರೇಲಿಯ, ಫ್ರಾನ್ಸ್ ಮುಂತಾದೆಡೆಗಳಲ್ಲಿನ ಪಂದ್ಯಗಳು ಲಕ್ಷಾಂತರ ಟೆನಿಸ್ ಪ್ರೇಮಿಗಳಿಗೆ ಉಲ್ಲಾಸವನ್ನುಂಟುಮಾಡಿವೆ. ಇಂಗ್ಲೆಂಡಿನ ಒಬ್ಬ ಟೆನಿಸ್ ಪ್ರೇಮಿ ಡ್ವೈಟ್ ಎಫ್. ಡೇವಿಸ್ ಎಂಬಾತ 1900ರಲ್ಲಿ ಶ್ರೇಷ್ಠಮಟ್ಟದ ಪ್ರಪಂಚದ ರಾಷ್ಟ್ರಗಳ ನಡುವಣ ಟೆನಿಸ್ ಆಟಕ್ಕೆಂದೇ ಕಪ್ಪು (ಬಹುಮಾನದ ಬಟ್ಟಲು) ಒಂದನ್ನು ನೀಡಿದ. ಡೇವಿಸ್ ಕಪ್ ಪಂದ್ಯಗಳು ಎಂಬ ಹೆಸರಿನಿಂದಲೇ ಅನೇಕ ಟೆನಿಸ್ ಪಂದ್ಯಗಳು ನಡೆದಿವೆ. ಇವು ಗಂಡಸರಿಗೆ ಮೀಸಲಾದವು. ಮೊಟ್ಟಮೊದಲಿಗೆ ಅಮೆರಿಕದ ಸಂಯುಕ್ತಸಂಸ್ಥಾನಗಳು ಮತ್ತು ಬ್ರಿಟಿಷ್ ದ್ವೀಪಗಳ ನಡುವೆ ನಡೆದ ಪಂದ್ಯದಲ್ಲಿ ಅಮೆರಿಕವೇ ಡೇವಿಸ್ ಕಪ್ಪನ್ನು ಪಡೆಯಿತು. 1968ರ ಸ್ಪರ್ಧೆಯಲ್ಲಿ ಭಾಗವಹಿಸಿದ 49 ರಾಷ್ಟ್ರಗಳಲ್ಲಿ ಯೂರೋಪ್ ವಲಯದಿಂದ 32, ಪೂರ್ವವಲಯದಿಂದ 8, ಅಮೆರಿಕದ ವಲಯದಿಂದ 9 ರಾಷ್ಟ್ರಗಳು ಭಾಗವಹಿಸಿದ್ದವು.
ಹ್ವಿಟ್ ಮನ್ ಕಪ್ ಪಂದ್ಯಗಳು ಮಹಿಳೆಯರಿಗಾಗಿಯೇ ಮೀಸಲಿರುವಂಥವು. ಶ್ರೀಮತಿ ಜಾರ್ಜಾ ಹ್ವಿಟ್ ಮನ್ ಎಂಬುವಳು 1923ರಲ್ಲಿ ಲಾನ್ ಟೆನಿಸ್ ಪಂದ್ಯಗಳಿಗಾಗಿಯೇ ಒಂದು ಕಪ್ಪನ್ನು ನೀಡಿದ್ದಳು. ಅಮೆರಿಕದ ಸಂಯುಕ್ತಸಂಸ್ಥಾನ ಮತ್ತು ಇಂಗ್ಲೆಂಡುಗಳು ಮಹಿಳಾ ಟೆನಿಸ್ ಆಟಗಾರರ ನಡುವೆ ಅಮೆರಿಕದಲ್ಲೇ ಟೆನಿಸ್ ಸ್ಪರ್ಧೆಗಳು ನಡೆದುವು (1909, 1910, 1911). ಹ್ವಿಟ್ ಮನ್ ಕಪ್ಪನ್ನು ಗಳಿಸಲು 1923ರಲ್ಲಿ ಅಮೆರಿಕದ ಫಾರೆಸ್ಟ್ ಹಿಲ್ಸ್ ನಲ್ಲಿ ಟೆನಿಸ್ ಪಂದ್ಯ ನಡೆಯಿತು. ವಾರ್ಷಿಕ ಪಂದ್ಯ ಈ ಎರಡು ರಾಷ್ಟ್ರಗಳಲ್ಲಿ ವರ್ಷಕ್ಕೊಂದು ಸಲ ನಡೆಯುತ್ತದೆ. ಈ ಪಂದ್ಯಗಳಲ್ಲಿ ಐದು ಸಿಂಗಲ್ಸ್ ಪಂದ್ಯಗಳೂ ಎರಡು ಡಬಲ್ಸ್ ಪಂದ್ಯಗಳೂ ಇರುತ್ತವೆ. ಮೊದಲ ಸ್ಪರ್ಧೆಯಲ್ಲಿ ಅಮೆರಿಕ ಜಯ ಗಳಿಸಿತು. ಎರಡನೆಯ ಮಹಾಯುದ್ದದ ಕಾರಣ 1940ರಿಂದ 1945ರ ವರೆಗೆ ಪಂದ್ಯಗಳು ನಡೆಯಲಿಲ್ಲ. ಯುದ್ಧದ ಅನಂತರ 1952ರ ವರೆಗೆ ನಡೆದಿರುವ 24 ಪಂದ್ಯಗಳಲ್ಲಿ 20 ಅಮೆರಿಕ ಗೆದ್ದಂಥವು.
ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಲಾನ್ ಟೆನಿಸನ್ನು ಮೊದಲ ಬಾರಿಗೆ ಆಡಿದ್ದು 1875ರಲ್ಲಿ. ಮೊಟ್ಟಮೊದಲ ಸಂಯುಕ್ತ ಸಂಸ್ಥಾನದ ಚಾಂಪಿಯನ್ ಷಿಷ್ ಪಂದ್ಯವಾಗಿದ್ದು 1881ರಲ್ಲಿ. ಅದು ಆದದ್ದು ಇಂಗ್ಲಿಷ್ ನಿಯಮಗಳನುಸಾರ ಮತ್ತು ಇಂಗ್ಲಿಷ್ ಚೆಂಡನ್ನು ಬಳಸಿ. 1875ರ ಹೊತ್ತಿಗೆ ದಕ್ಷಿಣ ಅಮೆರಿಕದ ಬ್ರಜಿûಲ್ನಲ್ಲೂ ಭಾರತದಲ್ಲೂ ಈ ಆಟಗಳು ನಡೆದು ಹೆಚ್ಚು ಜನಪ್ರಿಯತೆ ಗಳಿಸಿದವು. ಜರ್ಮನಿಯಲ್ಲಿ ಮೊದಲಿಗೆ 1876ರಲ್ಲೂ ಹ್ಯಾಂಬರ್ಗಿನಲ್ಲಿ ಜರ್ಮನ್ ಚಾಂಪಿಯನ್ ಷಿಪ್ ಪಂದ್ಯಗಳು 1887ರಲ್ಲೂ ಜರುಗಿದವು. ಫ್ರಾನ್ಸಿನಲ್ಲಿ 1886ರಲ್ಲಿ ಇದು ನಡೆಯಿತು. ಆಸ್ಟ್ರೇಲಿಯದ ಮೆಲ್ ಬರ್ನ್ ಕ್ರಿಕೆಟ್ ಕ್ಲಬ್ ನಲ್ಲಿ ಮೊಟ್ಟಮೊದಲು ಆಸ್ಫಾಲ್ಟ್ ಟೆನಿಸ್ ಕೋರ್ಟ್ 1878ರಲ್ಲಿ ನಿರ್ಮಾಣವಾಯಿತು.
1968ರಿಂದೇಚೆಗೆ 78ಕ್ಕೂ ಹೆಚ್ಚಿನ ರಾಷ್ಟ್ರಗಳು ಅಂತರರಾಷ್ಟ್ರೀಯ ಲಾನ್ ಟೆನಿಸ್ ಫೆಡರೇಷನ್ನಿನ ಸದಸ್ಯತ್ವ ಪಡೆದಿವೆ. ಅಂತರರಾಷ್ಟ್ರೀಯ ಲಾನ್ ಟೆನಿಸ್ ಫೆಡರೇಷನ್ ಎಂಬ ಒಂದು ಸಂಸ್ಥೆ 1913ರಲ್ಲಿ ಲಂಡನ್ನಿನಲ್ಲಿ ಸ್ಥಾಪನೆಗೊಂಡು ಆಟದ ಬಗೆಗಿನ ನಿಯಂತ್ರಣವನ್ನೂ ನಿಯಮಾವಳಿಗಳ ಹೊಣೆಗಾರಿಕೆಯನ್ನೂ ಹೊತ್ತುಕೊಂಡಿತು. ಈ ಸಂಸ್ಥೆಯ ಅಧಿಕೃತ ವ್ಯವಹಾರಭಾಷೆ ಫ್ರೆಂಚ್ ಆಗಿದ್ದರೂ ಇಂಗ್ಲಿಷ್ ಅನುವಾದವನ್ನು ಒದಗಿಸಿಕೊಡುವ ಕ್ರಮ ಇದೆ. ಲಾನ್ ಟೆನಿಸಿನ ಅಧಿಕೃತ ನಿಯಮಾವಳಿಗಳು ಮಾತ್ರ ಇಂಗ್ಲಿಷಿನಲ್ಲೇ ಇರತಕ್ಕದ್ದೆಂದು ಒಪ್ಪಿಕೊಳ್ಳಲಾಗಿದೆ.
ಭಾರತದಲ್ಲೂ ಟೆನಿಸ್ ಆಟಗಳಿಗೆ ಪ್ರೋತ್ಸಾಹವನ್ನು ಕೊಡುವ ಸಲುವಾಗಿ ರಾಷ್ಟ್ರೀಯ ಲಾನ್ ಟೆನಿಸ್ ಫೆಡರೇಷನ್ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಲಾಗಿದೆ. ಇದರ ವತಿಯಿಂದ ರಾಜ್ಯಮಟ್ಟದಲ್ಲಿ ಅನೇಕ ಟೆನಿಸ್ ಪಂದ್ಯಗಳು ಜರುಗಿವೆ. ಲಾನ್ ಟೆನಿಸ್ ಆಟದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯನ್ನು ಪಡೆದ ವಿದೇಶೀಯರಲ್ಲಿ ಆಸ್ಟ್ರೇಲಿಯದ ಕ್ರೇಮರ್, ಲ್ಯೂ ಹೋಡ್, ನೀಲ್ ಫ್ರೇಸûರ್, ರಾಡ್ ಲೇವರ್, ಜಾನ್ ನ್ಯೂಕೂಂಬ್, ಕೆನ್ ರೋಸ್ ವಾಲ್, ರಾಯ್ ಎಮರ್ಸನ್, ಓವೆನ್ ಡೇವಿಡ್ ಸನ್, ಟೋನಿರೋಷ್, ಜೆಫ್ ಮಾಸ್ಟರ್ಸ್, ಜಾನ್ ಕೂಪರ್, ಇವೋನ್ (ಗೂಲಗಾಂಗ್) ಕಾಲಿ, ಜೇನಟ್ ಯಂಗ್ ಮೊದಲಾದವರನ್ನೂ ಅಮೆರಿಕ ಸಂಯುಕ್ತ ಸಂಸ್ಥಾನದ ಟಾಮ್ ಗೋರ್ಮನ್, ಸ್ಟ್ಯಾನ್ ಸ್ಮಿತ್, ಜಿಮ್ ಕಾನರ್ಸ್, ಆರ್ಥರ್ ಆ್ಯಷ್, ಆಲ್ತಿಯ ಗಿಬ್ ಸನ್, ಮಾರೀನ್ ಕಾನೊಲಿ, ಕ್ರಿಸ್ ಈವರ್ಟ್, ಮಾರ್ಗರೆಟ್ ಕೋರ್ಟ್, ಬಿಲಿ ಜೀನ್ ಕಿಂಗ್ ಮುಂತಾದವರನ್ನೂ ಜೆಕೊಸ್ಲೊವಾಕಿಯದ ಯಾನ್ ಕೋಡೆಸ್, ರೂಮೇನಿಯದ ಈಲಿ ನಾಸ್ ಟಾಸೆ, ರಷ್ಯದ ಅಲೆಕ್ಸಿ ಮೆಟ್ರಿವೆಲಿ, ಸ್ಪೇನಿನ ಮ್ಯಾನುವೆಲ್ ಸಂಟಾನ, ಮೆಕ್ಸಿಕೋದ ಪಾಲ್ ರ್ಯಾಮಿರೆಜ್-ಮೊದಲಾದವರನ್ನೂ ಹೆಸರಿಸಬಹುದು.
ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಖ್ಯಾತಿಗಳಿಸಿರುವ ಪ್ರಮುಖ ಭಾರತೀಯ ಆಟಗಾರರ ಪೈಕಿ ಬಿ. ನರೇಸ್ ಕುಮಾರ್, ರಾಮನಾಥನ್ ಕೃಷ್ಣನ್, ಜೈದೀಪ್ ಮುಖರ್ಜಿ, ಪ್ರೇಮ್ ಜಿತ್ ಲಾಲ್, ವಿಜಯ್ ಅಮೃತ್ ರಾಜ್, ಆನಂದ್ ಅಮೃತ್ ರಾಜ್, ಆಶೋಕ್ ಅಮೃತ್ ರಾಜ್, ಶಶಿ ಮೆನನ್, ಜಸ್ ಜಿತ್ ಸಿಂಗ್, ಗೌರವ್ ಮಿಶ್ರ, ಚಿರದೀಪ್ ಮುಖರ್ಜಿ, ನಿರುಪಮ ಮಂಕಡ್, ದೇಚು ಅಪ್ಪಯ್ಯ, ಸೂಸನ್ ದಾಸ್, ಉದಯಾ ಕುಮಾರ್ ಮುಂತಾದವರನ್ನು ಹೆಸರಿಸಬಹುದು. (ಎಚ್.ಎಸ್.ಎಸ್.)
ಯಾವೊಬ್ಬ ಆಟಗಾರ ಇಲ್ಲವೇ ಆಟಗಾರ್ತಿ ಒಂದು ಹಂಗಾಮಿನಲ್ಲಿ ನಡೆಯುವ ಎಲ್ಲ ಪ್ರಮುಖ ಲಾನ್ ಟೆನಿಸ್ ಪ್ರಪಂಚ ಶರ್ಯತ್ತು ಸ್ಪರ್ಧೆಗಳಲ್ಲಿ ಗಳಿಸುವ ಅಸಾಧಾರಣ ಯಶಸ್ಸನ್ನು ಸೂಚಿಸುವ ಪದ ಇದು. ಒಬ್ಬ ಆಟಗಾರ ಒಂದೇ ವರ್ಷ ಆಸ್ಟ್ರೇಲಿಯ, ಫ್ರಾನ್ಸ್, ಇಂಗ್ಲೆಂಡಿನ ವಿಂಬಲ್ಡನ್ ಹಾಗೂ ಅಮೆರಿಕದ ಫಾರೆಸ್ಟ್ ಹಿಲ್ಸ್ ಮುಂತಾದ ಚಾಂಪಿಯನ್ ಷಿಪ್ ಗಳಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಲ್ಲಿ ಆತನನ್ನು ಗ್ರ್ಯಾಂಡ್ ಸ್ಲಾಮ್ ಸಾಧಿಸಿದವ ಎನ್ನಲಾಗುತ್ತದೆ. ಪ್ರಪಂಚದ ಲಾನ್ ಟೆನಿಸ್ ಆಟದಲ್ಲಿ ಈ ಸಾಧನೆಮಾಡಿ ಇಲ್ಲಿಯ ವರೆಗೆ ಖ್ಯಾತಿಗಳಿಸಿರುವವರಲ್ಲಿ ಪುರುಷರೂ ಮಹಿಳೆಯರೂ ಇದ್ದಾರೆ. ಪುರುಷರಲ್ಲಿ ಅಮೆರಿಕದ ರೊನಾಲ್ಡ್ ಬಹ್ ಹಾಗೂ ಆಸ್ಟ್ರೇಲಿಯದ ರಾಡ್ ಲೇವರ್ (ಎರಡು ಬಾರಿ), ಮಹಿಳೆಯರಲ್ಲಿ ಅಮೆರಿಕದ ಮಾರೀನ್ ಕಾನೊಲಿ, ಮಾರ್ಗರೆಟ್ ಕೋರ್ಟ್_ಇವರನ್ನು ಹೆಸರಿಸಬಹುದು. ಗ್ರ್ಯಾಂಡ್ ಸ್ಲಾಮ್ ಎಂಬ ಪದವನ್ನು ಬ್ರೆಜ್ ಆಟದಲ್ಲೂ ಬಳಸಲಾಗುತ್ತದೆ. ಒಂದು ತಂಡ ಎದುರಾಳಿಗೆ ಒಂದು ಪಟ್ಟೂ ಕೊಡದೆ ಗೆದ್ದಲ್ಲಿ ಅದಕ್ಕೆ ಆ ತಂಡದ ಗ್ರ್ಯಾಂಡ್ ಸ್ಲಾಮ್ ಎನ್ನಲಾಗುತ್ತದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.