ಗರುಡ (ಹಕ್ಕಿ) ಫಾಲ್ಕನಿ ಫಾರ್ಮೀಸ್ ಗಣದ ಆಕ್ಸಿಪಿಟ್ರಿಡೀ ಕುಟುಂಬದ ಬ್ಯೂಟಿಯಾನಿನೀ ಉಪಕುಟುಂಬಕ್ಕೆ ಸೇರಿದ ಒಂದು ಹಕ್ಕಿ. ಹದ್ದು, ಗಿಡುಗ, ಡೇಗೆ, ರಣಹದ್ದು, ಗೂಬೆ ಮುಂತಾದವುಗಳ ಹತ್ತಿರ ಸಂಬಂಧಿ. ಹ್ಯಾಲಿಯಾಸ್ಟರ್ ಇಂಡಸ್ ಇದರ ವೈಜ್ಞಾನಿಕನಾಮ. ಬ್ರಾಹ್ಮಣಿ ಕೈಟ್ ಎಂಬುದು ಇಂಗ್ಲಿಷಿನಲ್ಲಿ ಸಾಮಾನ್ಯ ಬಳಕೆಯಲ್ಲಿರುವ ಹೆಸರು.

Quick Facts Brahminy kite, Conservation status ...
Brahminy kite
In Pilbara, Western Australia
Conservation status

Least Concern  (IUCN 3.1)[1]
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
Aves
ಗಣ:
Accipitriformes
ಕುಟುಂಬ:
Accipitridae
ಕುಲ:
Haliastur
ಪ್ರಜಾತಿ:
H. indus
Binomial name
Haliastur indus
Boddaert, 1783
Close


ಗರುಡ

ಭೌಗೋಳಿಕ ಹಂಚಿಕೆ

ಗರುಡ ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಪಾಕಿಸ್ತಾನಗಳಲ್ಲಿ ಕಂಡುಬರುತ್ತದೆ. ಇದರ ಹಲವು ಬಗೆಗಳು ಬರ್ಮ, ಇಂಡೋಚೀನ, ಮಲಯಗಳಿಂದ ಹಿಡಿದು ಸಾಲೊಮನ್ ದ್ವೀಪಗಳವರೆಗೂ ಹರಡಿವೆ.

ವಿವರಣೆ

  • ಸುಮಾರು 48 ಸೆಂಮೀ. ಉದ್ದದ ಸುಂದರವಾದ ಹಕ್ಕಿಯಿದು. ತಲೆ, ಕುತ್ತಿಗೆ, ಎದೆ, ಮತ್ತು ಬೆನ್ನಿನ ಮುಂಭಾಗಗಳು ಬಿಳುಪು. ದೇಹದ ಉಳಿದ ಭಾಗ ಕೆಂಪು ಮಿಶ್ರಿತವಾದ ಕಂದು. ಈ ಕೆಂಪು ಮಿಶ್ರಿತ ಕಂದು ಬಣ್ಣವೇ ಇದಕ್ಕೆ ಇಂಗ್ಲಿಷ್ ಹೆಸರಿನ ಪೂರ್ವಪದ ‘ಬ್ರಾಹ್ಮಿನಿ’ಯನ್ನು ತಂದುಕೊಟ್ಟಿದೆ. ನಮ್ಮಲ್ಲಿ ಬ್ರಾಹ್ಮಣಿ ಮೈನಾ, ಬ್ರಾಹ್ಮಿಣಿ ಬಾತುವೂ ಇವೆ. ಹೊರನೋಟಕ್ಕೆ ಗಂಡು ಹೆಣ್ಣುಗಳು ಒಂದೇ ಬಗೆ.
  • ಗರುಡ ಸಾಮಾನ್ಯವಾಗಿ ನದಿ, ಕೊಳ, ಝರಿ, ಸಮುದ್ರ ತೀರ, ನೀರು ತುಂಬಿದ ಗದ್ದೆಗಳು, ಬಂದರು, ಅಣೆಕಟ್ಟುಗಳಿರುವ ಪ್ರದೇಶಗಳಲ್ಲಿ ಒಂಟೊಂಟಿಯಾಗಿ ಕಂಡು ಬರುತ್ತವೆ. ಹದ್ದಿನ ಕೊಕ್ಕಿನಂತೆ ಇದರ ಕೊಕ್ಕೂ ಬಲವಾಗಿದ್ದು ಬಾಗಿದೆ. ಅಂಚು ಬಲು ಹರಿತ. ಕೊಕ್ಕಿನ ಬಣ್ಣ ನಸುನೀಲಿ. ಮೇಲುಕೊಕ್ಕಿನ ಬುಡಭಾಗದಲ್ಲಿ ಸೆರೆ ಎಂಬ ಹಳದಿ ಬಣ್ಣದ ರಚನೆಯಿದೆ.
  • ಇದರ ಬಳಿ ಅಗಲ ಹಾಗೂ ದುಂಡಗಿನ ಮೂಗಿನ ಹೊಳ್ಳೆಗಳಿವೆ. ಕಣ್ಣಿನ ವರ್ಣಪಟಲ ಕಂದು ಅಥವಾ ಹಳದಿಮಿಶ್ರಿತವಾದ ಕಂದು ಬಣ್ಣದ್ದು. ದೃಷ್ಟಿ ಬಲು ಸೂಕ್ಷ್ಮ. ರೆಕ್ಕೆಗಳು ಅತ್ಯಂತ ಬಲಯುತವಾಗಿದ್ದು ತುಂಬ ಉದ್ದವಾಗಿ ಬಾಲದ ತುದಿಯವರೆಗೂ ಚಾಚಿವೆ. ಹರಡಿದಾಗ ಒಂದೊಂದು ರೆಕ್ಕೆಯೂ 38-39 ಸೆಂಮೀ ಅಗಲವಿರುತ್ತದೆ. ಬಾಲ ಕೂಡ ಉದ್ದ ಮತ್ತು ದುಂಡು.
  • ಕಾಲು ಮತ್ತು ಪಾದಗಳು ಬೂದು ಮಿಶ್ರಿತ ಇಲ್ಲವೆ ಹಸಿರು ಮಿಶ್ರಿತವಾದ ಹಳದಿಬಣ್ಣದಿಂದ ಕೂಡಿವೆ. ಕಾಲಿನ ಮೇಲ್ಭಾಗ ಗರಿಗಳಿಂದ ಮುಚ್ಚಿದ್ದು ತಳಭಾಗ ಬೋಳಾಗಿದೆ. ತಳಭಾಗದಲ್ಲೂ ಮತ್ತು ಬೆರಳುಗಳ ಮೇಲೂ ಶಲ್ಕೆಗಳಿವೆ. ಉಗುರುಗಳು ಕಪ್ಪು; ಬೇಟೆ ಹಿಡಿಯಲು ಅನುಕೂಲವಾಗುವಂತೆ ಬಾಗಿವೆ, ಬಲಯುತವಾಗಿವೆ. ಅಂಗಾಲಿನಲ್ಲಿ ಮುಳ್ಳುಮಯವಾದ ಸಣ್ಣಸಣ್ಣ ಶಲ್ಕೆಗಳಿವೆ. ಗರುಡಪಕ್ಷಿಯ ಧ್ವನಿ ತೀಕ್ಷ್ಣವಾದ ಸಿಳ್ಳಿನಂತಿದೆ.

ಆಹಾರ

ಮೀನು, ಕಪ್ಪೆ, ಸಣ್ಣ ಸಣ್ಣ ಹಾವುಗಳು, ಹಲ್ಲಿ, ಸಣ್ಣಗಾತ್ರದ ಸ್ತನಿಗಳು, ಕೋಳಿ, ಕೀಟಮತ್ತು ಅವುಗಳ ಡಿಂಬಗಳು ಮುಂತಾದವು ಗರುಡಪಕ್ಷಿಯ ಮುಖ್ಯ ಆಹಾರ. ಅಪರೂಪವಾಗಿ ಇದು ಹದ್ದು, ರಣಹದ್ದುಗಳಂತೆ ಸತ್ತ ಪ್ರಾಣಿಗಳನ್ನು ತಿನ್ನುವುದುಂಟು.

ಸಂತಾನೋತ್ಪತ್ತಿ

  • ಗರುಡ ಪಕ್ಷಿಯ ಸಂತಾನೋತ್ಪತ್ತಿಯ ಕಾಲ ಡಿಸೆಂಬರ್ -ಏಪ್ರಿಲ್ ತಿಂಗಳುಗಳು. ಹಳ್ಳಿಗಳ ಹೊರವಲಯದಲ್ಲಿ ನೀರಿನ ಆಸರೆಯಿರುವಂಥ ಪ್ರದೇಶಗಳಲ್ಲಿ, ಬೆಳೆಯುವ ಅರಳಿ, ಆಲ, ಹುಣಿಸೆ, ಗಾಳಿಮರ ಮತ್ತು ತೆಂಗಿನ ಗಿಡಗಳ ಮೇಲೆ ಇದು ಗೂಡು ಕಟ್ಟುತ್ತದೆ. ಗೂಡಿನ ರಚನೆಯಲ್ಲಿ ಮುಖ್ಯವಾಗಿ ಕಡ್ಡಿಪುಳ್ಳೆಗಳು ಮತ್ತು ಕೆಲವೊಮ್ಮೆ ಹತ್ತಿ, ಉಣ್ಣೆ, ಎಲೆಗಳು ಮೊದಲಾದವನ್ನು ಬಳಸುವುದುಂಟು.
  • ಸಾಮಾನ್ಯವಾಗಿ ಒಂದು ಸೂಲಿನಲ್ಲಿ ಎರಡು ಇಲ್ಲವೆ ಮೂರು ಮೊಟ್ಟೆಗಳಿರುತ್ತವೆ. ಮೊಟ್ಟೆಯ ಉದ್ದ 5 ಸೆಂಮೀ. ಅಗಲ 4 ಸೆಂಮೀ; ಬಣ್ಣ ಬೂದಿಮಿಶ್ರಿತ ಬಿಳಿ. ಮೇಲೆಲ್ಲ ಕಂದುಬಣ್ಣದ ಚುಕ್ಕೆಗಳಿವೆ. ಹೆಣ್ಣುಗಂಡುಗಳೆರಡೂ ಸೇರಿ ಗೂಡುಕಟ್ಟುತ್ತವೆ. ಕಾವು ಕೊಡುವುದು ಹೆಣ್ಣು. ಕಾವು ಕೊಡುವ ಹೆಣ್ಣಿಗೆ ಆಹಾರವನ್ನು ತಂದು ಕೊಡುವ ಕೆಲಸ ಗಂಡಿನ ಪಾಲಿನದು.
  • 26-27 ದಿನಗಳ ಕಾಲ ಕಾವು ಕೊಟ್ಟ ಮೇಲೆ ಮೊಟ್ಟೆಯಿಂದ ಮರಿಗಳು ಹೊರಗೆ ಬರುತ್ತವೆ. ಪ್ರಾಯಕ್ಕೆ ಬರುವ ಮುನ್ನ ಮರಿಗಳ ಬಣ್ಣ ಕಂದು. ವರ್ಷಂಪ್ರತಿ ಮರಿಗಳ ಗರಿ ಉದುರುತ್ತವೆ. ನಾಲ್ಕು ವರ್ಷಗಳಾದ ಮೇಲೆ ಮರಿಗಳು ಪ್ರೌಢಾವಸ್ಥೆಗೆ ಬರುತ್ತವೆ. ಮರಿಗಳ ಬಾಲ ಗುಂಡಾಗಿರುತ್ತದೆ ಮತ್ತು ವಯಸ್ಕ ಹಕ್ಕಿಗಳಿಗೆ ತಲೆ ಹಾಗೂ ಎದೆಯ ಮೇಲೆ ಬಿಳಿಯ ಬಣ್ಣ ಇರುವುದಿಲ್ಲ.

ಪುರಾಣದಲ್ಲಿ

Thumb
ಗರುಡ ದೇವತೆ
  • ಭಾರತದಲ್ಲಿ ಗರುಡನಿಗೆ ಸಂಬಂಧಿಸಿದಂತೆ ಹಲವು ಪೌರಾಣಿಕ ಕಥೆಗಳಿವೆ. ಗರುಡ ಪಕ್ಷಿಗಳ ರಾಜ. ಗರುಡನ ಶಕ್ತಿ ಸಾಮರ್ಥ್ಯವನ್ನು ಮೆಚ್ಚಿದ ಮಹಾವಿಷ್ಣು ಅದನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾನೆ. ಶಿಲ್ಪಕಲೆಯಲ್ಲಿ ಗರುಡನ ಆಕೃತಿ ಮನುಷ್ಯನಂತಿದ್ದು ಬಾಗಿದ ಕೊಕ್ಕು ಮತ್ತು ರೆಕ್ಕೆಗಳಿಂದ ಕೂಡಿರುತ್ತದೆ. ಇಂಥ ವಿಗ್ರಹಗಳನ್ನು ಹಲವು ವೈಷ್ಣವ ದೇವಾಲಯಗಳಲ್ಲಿ ಕಾಣಬಹುದು.
  • ಗರುಡನಿಗೂ ನಾಗರಹಾವುಗಳಿಗೂ ಇರುವ ಬದ್ಧ ದ್ವೇಷಕ್ಕೆ ಸಂಬಂಧಿಸಿದ ಕಥೆಗಳೂ ಉಂಟು. ಗರುಡ ಮತ್ತು ಸೂರ್ಯನ ಸಾರಥಿಯಾದ ಅರುಣ ಎಂಬುವರು ಕಶ್ಯಪಮುನಿ ಮತ್ತು ವಿನತೆಯರ ಮಕ್ಕಳು. ಇವರ ಮಲತಾಯಿ ಕದ್ರು, ಸರ್ಪಗಳ ತಾಯಿ. ಕಾರಣಾಂತರದಿಂದ ವಿನತೆ ಕದ್ರುವಿನ ದಾಸಿಯಾಗಿರಬೇಕಾದ ಸಂದರ್ಭ ಒದಗಿತು.
  • ನಾಗರಾಜನು ಗರುಡನ ಬೆನ್ನುಹತ್ತಿ ಸವಾರಿ ಮಾಡಲು ಪ್ರಾರಂಭಿಸಿದ. ಇದರಿಂದ ಗರುಡನಿಗೆ ತುಂಬಾ ಅವಮಾನವಾದಂತಾಯಿತು. ತಾಯಿಯ ದಾಸ್ಯವನ್ನು ತೊಡೆದುಹಾಕಲು ಮಾರ್ಗವೇನೆಂದು ವಿಚಾರಿಸಿದ. ಸ್ವರ್ಗಲೋಕದಿಂದ ಅಮೃತವನ್ನು ಕದ್ರುವಿಗೆ ತಂದು ಕೊಟ್ಟರೆ ತಾಯಿಯ ದಾಸ್ಯ ನಿವಾರಣೆಯಾಗುವುದು ಎಂದು ತಿಳಿದುಬಂತು.
  • ಆಗ ಗರುಡ ಸ್ವರ್ಗಲೋಕಕ್ಕೆ ಹೋಗಿ ಅಲ್ಲಿ ಅಮೃತ ಕಲಶದ ರಕ್ಷಕರಾದ ಗಂಧರ್ವರನ್ನು ಕೊಂದು, ಘಟಸರ್ಪಗಳನ್ನು ಸಂಹರಿಸಿ, ಇಂದ್ರನೊಡನೆ ಹೋರಾಡಿ ಕೊನೆಗೆ ಅಮೃತ ಕುಂಭವನ್ನು ತಂದು ಮಲತಾಯಿಗೆ ಕೊಟ್ಟು ದಾಸ್ಯ ಸಂಕಲೆಯಿಂದ ತಾಯಿಯನ್ನು ಬಿಡಿಸಿದ. ಇವನ ಪರಾಕ್ರಮಕ್ಕೆ ಮೆಚ್ಚಿ ಇಂದ್ರ ಇವನಿಗೆ ಸರ್ಪಗಳು ಆಹಾರವಾಗಿರುವಂತೆ ವರವನ್ನಿತ್ತ.
  • ವಿಷ್ಣು ಇವನ ಸಾಹಸ ಸಾಮರ್ಥ್ಯಗಳಿಗೆ ಮಾರುಹೋಗಿ ಇವನಿಗೆ ಸಂಪರ್ಣನೆಂದು ಬಿರುದು ಕೊಟ್ಟು ತನ್ನ ವಾಹನವನ್ನಾಗಿ ಮಾಡಿಕೊಂಡುದಲ್ಲದೇ ತನ್ನ ಧ್ವಜದಲ್ಲಿ ಲಾಂಛನವನ್ನಾಗಿರಿಸಿಕೊಂಡ.ಮಹಾಭಾರತಆದಿಪರ್ವದಲ್ಲಿ ಈ ಕತೆ ಬಹು ವಿಸ್ತಾರವಾಗಿ ಬಂದಿದೆ.

ಜಾಗತಿಕವಾಗಿ

  • ಪುರಾತನ ಕಾಲದಿಂದಲೂ ತನ್ನ ಗಾತ್ರ, ಗಾಂಭೀರ್ಯ ಮತ್ತು ವೈಭವಯುತ ಹಾಗೂ ಪ್ರಯಾಸವಿಲ್ಲದ ಹಾರಾಟದಿಂದಾಗಿ ಗರುಡ ಪಕ್ಷಿಗಳ ರಾಜನೆಂದು ಮಾನ್ಯತೆ ಪಡೆದಿದೆ. ಇದು ಶಕ್ತಿ, ಶೌರ್ಯ ಮತ್ತು ವೈಭವಗಳ ಪ್ರತೀಕ. ಈಟಿಗಳ ಮೇಲೆ ಗರುಡಪಕ್ಷಿ ಪ್ರ.ಶ.ಪು. 104ರ ಹೊತ್ತಿಗೆ ರೋಮನರ ಮುಖ್ಯ ಲಾಂಛನವಾಯಿತು. ಅಲ್ಲದೆ ಅವರು ಇದನ್ನು ನಾಣ್ಯ ಮತ್ತು ಪದಕಗಳ ಮೇಲೂ ಹಾಕಿಕೊಂಡರು.
  • ರೋಮನ್ ಪುರಾಣದಲ್ಲಿ ಬರುವ ದೇವತೆ ಹಾಗೂ ಮಾನವರ ಪ್ರಭುವಾದ ಜ್ಯೂಪಿಟರ್ನಿಗೆ ಪ್ರಿಯವಾದದ್ದು, ಈ ಗರುಡಪಕ್ಷಿ. 1200ರ ಅನಂತರ ಯುರೋಪಿನ ಹಲವು ರಾಜರು ಮತ್ತು ರಾಜ ಮಾನ್ಯರು ತಮ್ಮ ಗುರಾಣಿಗಳ ಮೇಲೆ ಗರುಡಪಕ್ಷಿಯ ಲಾಂಛನವನ್ನು ಉಪಯೋಗಿಸಲಾರಂಭಿಸಿದರು.
  • ಎರಡು ತಲೆಯ ಗರುಡ ಪಕ್ಷಿ, ಜರ್ಮನಿ, ರಷ್ಯ, ಆಸ್ಟ್ರಿಯ, ಪೋಲೆಂಡ್ ಚಕ್ರವರ್ತಿಗಳ ರಾಷ್ಟ್ರಲಾಂಛನವಾಯಿತು. ಕಪ್ಪು ಗರುಡ ಪ್ರಷ್ಯದೇಶದ ಲಾಂಛನವಾಯಿತು. ಈ ಗರುಡಪಕ್ಷಿಯ ಮುದ್ರೆ ಅಮೆರಿಕನರ ನಾಣ್ಯಗಳಲ್ಲಿ 1776ರಲ್ಲಿಯೇ ಬಳಕೆಗೆ ಬಂದಿರುವುದನ್ನು ಗಮನಿಸಬಹುದು.

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.