ಖಂಡ
From Wikipedia, the free encyclopedia
ಖಂಡಗಳು ಎಂದರೆ ಪ್ರಪಂಚದಲ್ಲಿನ ಎಲ್ಲಾ ದೇಶಗಳನ್ನು ಪ್ರಾಂತೀಯವಾಗಿ ವಿಂಗಡಿಸಿರುವ ಭಾಗಗಳು. ಭೂಗೋಳದ ಹೊರಚಿಪ್ಪಿನ ಉಬ್ಬಾದ ಭಾಗವೇ ಭೂಖಂಡ (ಕಾಂಟಿನೆಂಟ್). ಲ್ಯಾಟಿನ್ ಭಾಷೆಯ 'ಕಾಂಟಿನಿಯರ್'(ಎಲ್ಲವನ್ನು ಒಟ್ಟಿಗೆ ಹಿಡಿದಿಡು) (continere) ಪದದಿಂದ ಆಂಗ್ಲದ 'ಕಾಂಟಿನೆಂಟ್'(continent) ಪದವು ರೂಪಗೊಂಡಿದ್ದು ಒಂದು ವಿಶಾಲ ಭೂಮಿ ಪ್ರದೇಶದ ಅರ್ಥ ಕೊಡುತ್ತದೆ.
ಭೂಖಂಡವು ಸಹಸ್ರಾರು ಮಿಲಿಯನ್ ಚದರ ಕಿಲೋಮೀಟರುಗಳಷ್ಟು ವಿಶಾಲವಾಗಿದ್ದು ತೀರದ ಸಮುದ್ರ ಮಟ್ಟದಿಂದ ಸಾಕಷ್ಟು ಎತ್ತರವನ್ನೂ ಮುಟ್ಟಿರುತ್ತದೆ. ಸಮೀಪದಲ್ಲಿರುವ ದ್ವೀಪಗಳನ್ನೂ ಖಂಡದ ಭಾಗಗಳೆಂದೇ ಪರಿಗಣಿಸಬೇಕು. ಉದಾಹರಣೆಗೆ ಶ್ರೀಲಂಕಾ. ಗ್ರೀನ್ಲೆಂಡ್ ಮತ್ತು ಬ್ರಿಟಿಷ್ ದ್ವೀಪಗಳು ಅವುಗಳಿಗೆ ಸಮೀಪದಲ್ಲಿರುವ ಖಂಡಗಳಿಗೆ ಸೇರಿದ ಪ್ರದೇಶಗಳು. ಭೂವಿಜ್ಞಾನದ ದೃಷ್ಟಿಯಲ್ಲಿ ಹೇಳುವುದಾದರೆ ಆರು ಪ್ರಮುಖ ಭೂಖಂಡಗಳಿವೆ. ಯೂರೇಷಿಯ, ಆಫ್ರಿಕಾ, ಉತ್ತರ ಅಮೇರಿಕ, ದಕ್ಷಿಣ ಅಮೇರಿಕ, ಆಸ್ಟ್ರಲೇಷಿಯ ಮತ್ತು ಅಂಟಾರ್ಕ್ಟಿಕ.[1][2] ಭಾರತ ಯೂರೇಷಿಯ ಖಂಡದ ಒಂದು ಭಾಗ. ಭೂಖಂಡ ಮತ್ತು ಅದರ ಪಕ್ಕದಲ್ಲಿರುವ ಸಾಗರ ಇವುಗಳ ಗಡಿರೇಖೆ ಖಂಡದ ತೀರದಿಂದ ಸಮುದ್ರದತ್ತ ಬಹುದೂರದವರೆಗೆ ಒಮ್ಮೊಮ್ಮೆ ನೂರಾರು ಮೈಲಿಗಳ ದೂರದಲ್ಲಿರುತ್ತವೆ. ಸಮುದ್ರದಲ್ಲಿ ವ್ಯಾಪಿಸಿರುವ ಖಂಡದ ಇಳಿಜಾರಾದ ಚಾಚುಪ್ರದೇಶ ಹಠಾತ್ತನೆ ಬಹು ಆಳಕ್ಕೆ ಸರಿಯುವ ಪ್ರದೇಶವೇ ಗಡಿರೇಖೆ. ಈ ಆಳ ಒಂದೇ ಸಮವಾಗಿರದೆ ಕೆಲವು ಕಡೆ ಹತ್ತಾರು ಫ್ಯಾದಂಗಳಷ್ಟು (1 ಫ್ಯಾದಂ-20') ಮತ್ತೆ ಹಲವೆಡೆ ನೂರಾರು ಫ್ಯಾದಂಗಳಷ್ಟಿರುವುದು ಕಂಡುಬಂದಿವೆ.