![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/2/22/Korea_2004-01-04_NASA_MODIS_Aqua_250m.jpg/640px-Korea_2004-01-04_NASA_MODIS_Aqua_250m.jpg&w=640&q=50)
ಕೊರಿಯ
From Wikipedia, the free encyclopedia
ಏಷ್ಯದ ಪೂರ್ವತೀರದ ಮಧ್ಯ ಭಾಗದಲ್ಲಿರುವ ಒಂದು ಪರ್ಯಾಯದ್ವೀಪ; ಉತ್ತರ ಮತ್ತು ದಕ್ಷಿಣ ಕೊರಿಯ ದೇಶಗಳನ್ನೊಳಗೊಂಡಿದೆ. 525 ಮೈ. ಉದ್ದ, 125-200 ಮೈ. ಅಗಲವಾಗಿದೆ. ಮಂಚೂರಿಯ ಮತ್ತು ಸೋವಿಯೆತ್ ಒಕ್ಕೂಟಗಳಿಂದ ದಕ್ಷಿಣಕ್ಕೆ ಚಾಚಿಕೊಂಡಿರುವ ಈ ಪರ್ಯಾಯ ದ್ವೀಪಕ್ಕೆ ಉತ್ತರದಲ್ಲಿ ಯಾಲೂ, ಟೂಮನ್ ನದಿಗಳೂ ದಕ್ಷಿಣದಲ್ಲಿ ಕೊರಿಯ ಜಲಸಂಧಿಯೂ ಪಶ್ಚಿಮದಲ್ಲಿ ಹಳದಿ ಸಮುದ್ರವೂ ಪೂರ್ವದಲ್ಲಿ ಜಪಾನ್ ಸಮುದ್ರವೂ ಮೇರೆಗಳು. 5,400 ಮೈ. ಸಮುದ್ರ ತೀರದ ಉದ್ದಕ್ಕೂ ಒಟ್ಟು 3,500 ದ್ವೀಪಗಳಿವೆ. ಕೊರಿಯದ ವಿಸ್ತೀರ್ಣ 85,543 ಚ.ಮೈ. ಸ್ಥಳೀಯ ಜನ ಕೊರಿಯವನ್ನು ಚೋಸಾನ್ ಎಂದು ಕರೆಯುತ್ತಾರೆ. ಪ್ರಾತಃಶಾಂತಿಯ ಪ್ರದೇಶ ಎಂದು ಇದರ ಅರ್ಥ. ಇದು ಯಿ ವಂಶದ ರಾಜರು (1392-1910) ಬಳಸುತ್ತಿದ್ದ ಹೆಸರು. 1910ರಲ್ಲಿ ಜಪಾನೀಯರು ಕೊರಿಯವನ್ನು ಆಕ್ರಮಿಸಿಕೊಂಡಾಗ ಇದನ್ನು ಚೋಸೆನ್ ಎಂದು ಕರೆದರು. ಕೊರಿಯ ಎಂಬುದು ಪಶ್ಚಿಮದವರಿಟ್ಟ ಹೆಸರು. 935-1392ರಲ್ಲಿ ಕೊರಿಯವನ್ನಾಳಿದ ಕೊರ್ಯೊ (ಕೊರೈ) ರಾಜವಂಶದಿಂದ ಬಂದದ್ದು. ಉತ್ತುಂಗ ಪರ್ವತಗಳ ಹೊಳೆಯುವ ಹೊಳೆಗಳ ನಾಡು ಎಂಬುದು ಕೊರ್ಯೊದ ಅರ್ಥ.[1]
![Thumb image](http://upload.wikimedia.org/wikipedia/commons/thumb/2/22/Korea_2004-01-04_NASA_MODIS_Aqua_250m.jpg/640px-Korea_2004-01-04_NASA_MODIS_Aqua_250m.jpg)
ಎರಡನೆಯ ಮಹಾಯುದ್ಧಾನಂತರ ಕೊರಿಯದ ವಿಭಜನೆಯಾಯಿತು. 38ನೆಯ ಅಕ್ಷಾಂಶದ ಉತ್ತರ ದಕ್ಷಿಣ ಪ್ರದೇಶಗಳು ಪ್ರತ್ಯೇಕ ರಾಜ್ಯಗಳಾದುವು.[2]
ಕೊರಿಯದ ಉತ್ತರ ಭಾಗ ಪರ್ವತಗಳಿಂದ ಕೂಡಿದೆ. ಅಲ್ಲಿ ಹರಿಯುವ ಟೂಮನ್ ಮತ್ತು ಯಾಲೂ ನದಿಗಳು ಉಗಮಿಸುವುದು ಪೆಕ್-ಸಾನ್ನಲ್ಲಿ. ಅಲ್ಲಿಂದ ದಕ್ಷಿಣಕ್ಕೆ ಪೂರ್ವತೀರದ ಹತ್ತಿರದಲ್ಲಿ ಹಬ್ಬಿರುವ ಒಂದು ಮುಖ್ಯ ಪರ್ವತ ಶ್ರೇಣಿಯ ಕವಲುಗಳು ಪಶ್ಚಿಮಕ್ಕೂ ದಕ್ಷಿಣಕ್ಕೂ ಹರಡಿವೆ. ಆದ್ದರಿಂದ ಇಡೀ ಕೊರಿಯ ಪರ್ವತಮಯ. ಪೂರ್ವತೀರ ಅಂಕುಡೊಂಕು. ಅದು ಹಲವಾರು ಅಳಿವೆಗಳಿಂದಲೂ ಸಮುದ್ರದ ಉಬ್ಬರ ಇಳಿತಗಳಿಂದ ಸಂಭವಿಸಿದ ಮಟ್ಟಸ ನೆಲದಿಂದಲೂ ಕೂಡಿದೆ. ಇಲ್ಲಿ ಸಮುದ್ರದ ಭರತ 20'-30' ಎತ್ತರಕ್ಕೆ ಏರುವುದುಂಟು. ಆದ್ದರಿಂದ ಇಲ್ಲಿ ಸಮುದ್ರಯಾನ ಕಠಿಣ. ಕೊರಿಯದ ನದಿಗಳು ಪಶ್ಚಿಮ ದಕ್ಷಿಣಾಭಿಮುಖವಾಗಿ ಹರಿಯುತ್ತವೆ. ಇವುಗಳಲ್ಲಿ ಕೆಲವು ನದಿಗಳ ಕೆಳಭಾಗಗಳಲ್ಲಿ ಸಣ್ಣ ದೋಣಿಗಳು ಸಂಚರಿಸಬಹುದು. ಆಗ್ನೇಯದಲ್ಲಿ ಹರಿಯುವ ನ್ಯಾಕ್ಟಾಂಗ್, ಮಧ್ಯಭಾಗದಲ್ಲಿ ಹರಿಯುವ ಹ್ಯಾನ್, ಉತ್ತರದಲ್ಲಿ ಹರಿಯುವ ಟೇಡಾಂಗ್ ಮತ್ತು ಯಾಲೂ ಮುಖ್ಯವಾದುವು. ಆಗ್ನೇಯ ತೀರದಲ್ಲಿ ಅಸಂಖ್ಯಾತ ದ್ವೀಪಗಳೂ ಪುಟ್ಟ ಪರ್ಯಾಯದ್ವೀಪಗಳೂ ತುಂಬಿವೆ.[3] ಕೊರಿಯದ್ದು ಖಂಡಾಂತರ ವಾಯುಗುಣ. ಬೇಸಿಗೆಯಲ್ಲಿ ಮಳೆ. ಚಳಿಗಾಲದಲ್ಲಿ ಶುಷ್ಕ ಹವೆ. ಕೊರಿಯದ ದಕ್ಷಿಣ ತೀರದಲ್ಲಿ 60" ಮಳೆ ; ಉತ್ತರದ ಒಳನಾಡಿನಲ್ಲಿ 25" ಆಗಸ್ಟ್ನಲ್ಲಿ ಸರಾಸರಿ ಉಷ್ಣತೆ 750 ಫ್ಯಾ.ಗಿಂತ ಅಧಿಕ. ಚಳಿಗಾಲದಲ್ಲಿ ಉತ್ತರದಲ್ಲಿ ನೀರು ಗಡ್ಡೆ ಕಟ್ಟುವ ಬಿಂದುವಿಗಿಂತ ಕಡಿಮೆ ಉಷ್ಣತೆ ಇರುತ್ತದೆ. ಪ್ಯಂಗ್ಯಾಂಗ್ನಲ್ಲಿ ಜನವರಿಯ ಸರಾಸರಿ ಉಷ್ಣತೆ 180 ಫ್ಯಾ. ದಕ್ಷಿಣ ತೀರದಲ್ಲಿ 320 ಫ್ಯಾ.[3]
3,400ಕ್ಕೂ ಹೆಚ್ಚು ಬಗೆಯ ಸಸ್ಯಗಳು ಇಲ್ಲಿವೆ. ಲಾರ್ಚ್, ಸ್ಟ್ರೂಸ್, ಫರ್ ಮತ್ತು ಬರ್ಚ್ ಅತ್ಯಂತ ಉತ್ತರದಲ್ಲಿವೆ. ಯಾಲೂ ಕಣಿವೆಯಲ್ಲೂ ಮಧ್ಯ ಕೊರಿಯದಲ್ಲೂ ಮೇಪಲ್, ಬಾಸ್ವುಡ್, ಬರ್ಚ್ ಓಕ್, ಪಾಪ್ಲರ್, ಆಷ್, ಎಲ್ಮ್ ಮುಂತಾದವು ಬೆಳೆಯುತ್ತವೆ. ದಕ್ಷಿಣದ ತೀರದಲ್ಲಿ ಸದಾ ಹಸಿರಾದ ಓಕ್ ಮತ್ತು ಲಾರೆಲ್ ಜಾತಿಯ ಮರಗಳೂ ಕ್ಯಾಮಿಲಿಯ ಮತ್ತು ಬೊಂಬುಗಳೂ ಹೇರಳವಾಗಿ ಬೆಳೆಯುತ್ತವೆ. ಕೊರಿಯ ಮತ್ತು ಯೂರೋಪಿನ ಪ್ರಾಣಿಗಳಲ್ಲಿ ಬಹಳಮಟ್ಟಿನ ಹೋಲಿಕೆಯಿದೆ. ಜೊತೆಗೆ ಇಲ್ಲಿ ಹುಲಿ, ಹಿಮಚಿರತೆ ಮತ್ತು ಜಿಂಕೆ ಇವೆ. ತೋಳ, ಮೇಕೆ, ಕಾಡುಹಂದಿಗಳೂ ಉಂಟು. ದೇಶೀಯ ಕಾಡುಕೋಳಿಗಳಿವೆ. ಉತ್ತರ ಚೀನ ಮತ್ತು ಯೂರೋಪಿನಲ್ಲಿರುವಂತೆ ಇಲ್ಲೂ ನಾನಾ ಬಗೆಯ ಕಾಡುಕಪ್ಪೆಗಳೂ ಹಲ್ಲಿಗಳೂ ನಾನಾ ವಿಧದ ಹಾವುಗಳೂ ಉಂಟು.[4]