ಕನಾ೯ಟಕದ ಒಂದು ಕ್ರೀಡೆ From Wikipedia, the free encyclopedia
ಕಂಬಳ ಕರಾವಳಿ ಕರ್ನಾಟಕದ ಒಂದು ಜನಪದ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಈಗಿನ ಉಡುಪಿ ಜಿಲ್ಲೆಯ ಜಾನಪದದೊಂದಿಗೆ ಹಾಸು ಹೊಕ್ಕಾಗಿದೆ ಈ ಕ್ರೀಡೆ. ಕರಾವಳಿಯ ರೈತಾಪಿ ಜನರು ಭತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಈ ಕ್ರೀಡೆಯನ್ನು ಏರ್ಪಡಿಸುತ್ತಿದ್ದರು. ಆದರೆ ಕಳೆದ ಅನೇಕ ವರ್ಷಗಳಿಂದ ಸಾಂಘಿಕ ಬಲದೊಂದಿಗೆ ಬೆಳೆಯುತ್ತಿದೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುವ ಈ ಕ್ರೀಡೆಯಲ್ಲಿ ಕೋಣಗಳೊಂದಿಗೆ ಅವುಗಳನ್ನು ಓಡಿಸುವಾತನ ಪಾತ್ರವೂ ಮುಖ್ಯ.
ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಎನ್ನುತ್ತಾರೆ. ಹಿಂದಿನ ಕಾಲದಲ್ಲಿ ರಾಜರುಗಳ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ಈ ಕ್ರೀಡೆ ನಡೆಯುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳುಮೆಗಾಗಿ ಕೋಣಗಳನ್ನು ಬಳಸುವುದು ಸಾಮಾನ್ಯ. ಅವುಗಳಲ್ಲಿ ಬಲಿಷ್ಠವಾದವುಗಳ ಮಧ್ಯೆ ಓಟದ ಸ್ಪರ್ಧೆ ಏರ್ಪಡಿಸಿ ವಿಜೇತರಾದವರನ್ನು ಸನ್ಮಾನಿಸುವದರ ಹಿಂದೆ ಕೃಷಿಕರ ಕ್ರೀಡಾ ಮನೋಭಾವಕ್ಕೆ ಇಂಬು ಕೊಡುವ ಉದ್ದೇಶ ಸ್ಪಷ್ಟ. ಅಂತೆಯೇ ಕೋಣಗಳನ್ನು ಚೆನ್ನಾಗಿ ಸಲಹಲು ಇದೊಂದು ನೆಪವು ಹೌದು. ಭತ್ತದ ಮೊದಲ ಕೊಯಿಲಿನ ನಂತರ ಈ ಕ್ರೀಡೆ ನಡೆಯುತ್ತದೆ. ನವೆಂಬರ್-ಡಿಸೆಂಬರ್ ನಂತರದ ಛಳಿಗಾಲದಲ್ಲಿ ಆರಂಭವಾಗುವ ಕಂಬಳ ಕರಾವಳಿಯ ಬಿಸಿಲ ಬೇಗೆ ಏರುವ ಮೊದಲೇ ಫೆಬ್ರವರಿ-ಮಾರ್ಚ್ನಲ್ಲಿ ಮುಗಿಯುತ್ತದೆ. ಇದನ್ನು ನೋಡಿದರೆ ಕೃಷಿಕರಿಗೆ ಮನರಂಜನೆ ಒದಗಿಸುವ ಸಾಧನವಾಗಿಯೂ ಕಂಬಳ ಕಾಣುತ್ತದೆ. ಕರಾವಳಿಯಲ್ಲಿ ಯಕ್ಷಗಾನ ಬಯಲಾಟಗಳು ಹೆಚ್ಚಾಗಿ ನಡೆಯುವುದೂ ಇದೇ ಸಮಯದಲ್ಲಿ. ಕಂಬಳದ ಕೋಣಗಳನ್ನು ಸಾಕುವುದೂ, ಸ್ಪರ್ಧಿಸುವುದೂ, ವಿಜಯಿಯಾಗುವುದೂ ಪ್ರತಿಷ್ಠೆಯ ಸಂಕೇತವೂ ಹೌದು.
ಕಂಪ ಎಂಬುದಕ್ಕೆ ಕೆಸರು ಎಂಬ ಅರ್ಥವಿದೆ. ಆದ್ದರಿಂದ ಕಂಪ+ಪೊಲ>ಕಂಬುಲ ಆಯಿತು ಎಂದು ಹೇಳಲಾಗುತ್ತದೆ. ಕಳ ಎಂಬುದಕ್ಕೆ ಸ್ಪ್ರರ್ಧೆಯ ವೇದಿಕೆ, ಕಣ ಎಂಬ ಅರ್ಥವಿರುವುದರಿಂದ ಕಂಪದ ಕಳ> ಕಂಬಳ ಆಗಿರಬಹುದು ಎಂದೂ ಹೇಳಲಾಗುತ್ತದೆ. ಸಾಮಾನ್ಯವಾಗಿ ಗದ್ದೆಗಳ ಸಾಲಿನಲ್ಲಿ ಕೊನೆಯದಾದ, ಅತ್ಯಂತ ಕೆಳಗಿನ ಗದ್ದೆಗೆ ತುಳುವಿನಲ್ಲಿ ಕಂಬಳ ಎನ್ನುತ್ತಾರೆ. ಕೊನೆಯಲ್ಲಿರುವ ಗದ್ದೆಯಾದ ಕಾರಣ ಇದರಲ್ಲಿ ಸಾಮಾನ್ಯವಾಗಿ ಕೆಸರು ಜಾಸ್ತಿ. ಆದ್ದರಿಂದ ತುಳುವಿನಲ್ಲಿ ಕಂಪದ ಕಂಡ (ತುಳುವಿನಲ್ಲಿ ಗದ್ದೆಗೆ ಕಂಡ ಎನ್ನುತ್ತಾರೆ) ಹೀಗಾಗಿ ಇದಕ್ಕೆ ಕಂಬಳ ಆಗಿರಬಹುದು.
ಕೊಯಿಲಿನ ನಂತರ ಬಿಡುವಾದ ಅಥವಾ ಉಪಯೋಗಿಸದೆ ಬಿಟ್ಟಿರುವ ಗದ್ದೆಗಳಲ್ಲಿ ಕಂಬಳ ನಡೆಯುತ್ತದೆ. ಆದರೆ ಇತ್ತೀಚೆಗೆ ಹೆಚ್ಚಾಗಿ ಕಂಬಳಕ್ಕಾಗಿಯೇ ಮೀಸಲಾದ ಕಣಗಳನ್ನು ನಿರ್ಮಿಸಲಾಗಿದೆ. ಸುಮಾರು ನೂರರಿಂದ ಇನ್ನೂರು ಮೀಟರುಗಳಷ್ಟು ಉದ್ದದ ಓಟದ ಕಣಗಳಲ್ಲಿ ಕಂಬಳ ನಡೆಯುತ್ತದೆ. ಹಸನಾದ ಗದ್ದೆಯ ಮಣ್ಣಿನೊಂದಿಗೆ ಜಿಗುಟಾಗದಿರಲು ಅಗತ್ಯವಾದಷ್ಟು ಮರಳು ಸೇರಿಸಿ ಅದರ ಮೇಲೆ ನೀರು ನಿಲ್ಲಿಸಿ ಮಾಡಿದ ಕೆಸರು ಗದ್ದೆಯೇ ಕಂಬಳ ಓಟದ ಕಣ. ಕಂಬಳದ ಕಣವು ನೆಲ ಮಟ್ಟಕ್ಕಿಂತ ಕೆಲವು ಆಡಿಗಳಷ್ಟು ಆಳದಲ್ಲಿ ಇರುತ್ತದೆ. ಕಣದ ಒಂದು ಕೊನೆಯಲ್ಲಿ ಒಂದು ಬದಿಯಿಂದ ಇಳಿಜಾರಾಗಿ ಕಣದೊಳಕ್ಕೆ ಕೋಣಗಳನ್ನು ಇಳಿಸಲು ದಾರಿ ಇರುತ್ತದೆ. ಅಲ್ಲಿ ಮೇಲೆ ಕಟ್ಟಿದ ಮಾವಿನ ಎಲೆಗಳ ತೋರಣವು ಓಟದ ಆರಂಭದ ಗೆರೆಯನ್ನು ಸೂಚಿಸುತ್ತದೆ. ಕಣದ ಇನ್ನೊಂದು ಕೊನೆಯಲ್ಲಿ ಕಟ್ಟಿದ ಮಾವಿನ ಎಲೆಗಳ ತೋರಣವು ಮುಕ್ತಾಯದ ಗೆರೆಯನ್ನು ಸೂಚಿಸುತ್ತದೆ. ಮುಕ್ತಾಯದ ಕೊನೆಯಲ್ಲಿ ಕಣದಿಂದ ಏರಿಯೊಂದನ್ನು ರಚಿಸಿರುತ್ತಾರೆ. ವೇಗವಾಗಿ ಓಡಿ ಬಂದ ಕೋಣಗಳು ಮಂಜೊಟ್ಟಿ ಎಂದು ಕರೆಯಲಾಗುವ ಆ ಏರಿಯನ್ನೇರಿ ವೇಗ ಕಳಕೊಂಡು ನಿಲ್ಲುತ್ತವೆ (ಅಥವಾ ಅವುಗಳನ್ನು ಹಿಡಿದು ನಿಲ್ಲಿಸಲಾಗುತ್ತದೆ). ಕಂಬಳದ ಗದ್ದೆಗಳಲ್ಲಿ ಎರಡು ವಿಧ:
ಜೋಡುಕರೆ ಕಂಬಳಗಳಲ್ಲಿ ಅಕ್ಕ-ಪಕ್ಕ ಎರಡು ಕಣಗಳಿದ್ದು ಎರಡರಲ್ಲೂ ಏಕಕಾಲಕ್ಕೆ ಕೋಣಗಳನ್ನು ಓಡಿಸಿ ಅವುಗಳ ಮಧ್ಯೆ ಸ್ಪರ್ಧೆ ನಡೆಸಲಾಗುತ್ತದೆ. ಕೆನೆ ಹಲಗೆ ಪಂದ್ಯವನ್ನು ಒಂದೇ ಕಣದಲ್ಲಿ ನಡೆಸಲಾಗುತ್ತದೆ ಏಕೆಂದರೆ ಇದರಲ್ಲಿ ಓಡುವ ವೇಗದ ಬದಲಿಗೆ ಓಡುವಾಗ ಕೆಸರು ಚಿಮ್ಮುವ ಎತ್ತರದ ಆಧಾರದ ಮೇಲೆ ಸ್ಪರ್ಧೆ ನಡೆಯುವುದರಿಂದ. ಹೆಚ್ಚಾಗಿ ಜೋಡುಕರೆ ಕಂಬಳಗಳಿಗೆ ಪುರಾಣ, ಜಾನಪದದಲ್ಲಿ ಸಿಗುವ ಅವಳಿ-ಜವಳಿಗಳ ಅಥವಾ ಜೋಡಿಗಳ ಹೆಸರಿಡುವುದು ಸಾಮಾನ್ಯ. ಕೆಲವು ಜೋಡುಕರೆ ಕಂಬಳಗಳ ಹೆಸರು ಹೀಗಿವೆ:
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಲವಾರು ಕಂಬಳದ ಗದ್ದೆಗಳಿವೆ. ಕದ್ರಿ, ಮಿಯಾರು, ಮೂಡುಬಿದಿರೆ ಅವುಗಳಲ್ಲಿ ಪ್ರಮುಖವಾದವು.
ಕಂಬಳದ ಕೋಣವನ್ನು ಸಾಕುವುದೆಂದರೆ ಅದು ಸಾಮಾನ್ಯವಲ್ಲ. ಒಳ್ಳೆಯ ಜಾತಿಯ ಕೋಣವನ್ನು ಆರಿಸಿ ಅದರ ಚೆನ್ನಾದ ಆರೈಕೆ ಮಾಡಿ, ಕಂಬಳಕ್ಕೆ ತಯಾರಿ ಮಾಡುವುದರೊಂದಿಗೆ, ಅಂತಹ ಕೋಣಗಳನ್ನು ಓಡಿಸಲು ಬೇಕಾದ ಜನವನ್ನು ತಯಾರಿ ಮಾಡುವುದೂ ಕೋಣದ ಯಜಮಾನನಿಗೆ ಅಗತ್ಯ. ಇದು ಖರ್ಚಿನ ಬಾಬ್ತೂ ಹೌದು, ಆ ಕಾರಣಕ್ಕಾಗಿ ಪ್ರತಿಷ್ಠೆಯ ಸಂಕೇತವೂ ಹೌದು. ಪ್ರತಿ ದಿನವೂ ಅವುಗಳಿಗೆ ಚೆನ್ನಾದ ಹುಲ್ಲು, ಬೇಯಿಸಿದ ಹುರುಳಿ ತಿನ್ನಿಸಲಾಗುತ್ತದೆ. ಅಂತೆಯೇ ಎಣ್ಣೆ ಹಚ್ಚಿ ಆರೈಕೆ ಮಾಡಲಾಗುತ್ತದೆ. ಕಂಬಳದ ಓಟಕ್ಕೆ ತಯಾರಿಯೂ ಮುಖ್ಯ. ಜೊತೆಯ ಕೋಣದೊಂದಿಗೆ ಸಮನಾಗಿ ಕೆಸರು ಗದ್ದೆಯಲ್ಲಿ ಗಲಾಟೆ ಗೌಜುಗಳ ಮಧ್ಯೆ ಓಡುವ ತರಬೇತಿಯನ್ನು ಈ ಕೋಣಗಳಿಗೆ ನೀಡಲಾಗುತ್ತದೆ. ಕಂಬಳದ ಓಟಕ್ಕೆ ಯೋಗ್ಯವೆಂದು ತೋರಿದ ಕೋಣಗಳ ಖರೀದಿ-ಮಾರಾಟ ಲಕ್ಷಗಟ್ಟಲೆ ರೂಪಾಯಿಗಳಲ್ಲಿ ನಡೆಯುತ್ತದೆ. ಅದೇ ರೀತಿ ಕೋಣಗಳ ಆರೈಕೆಯೂ ಬಹಳ ಮುತುವರ್ಜಿಯಿಂದ, ಕಾಳಜಿಯಿಂದ ನಡೆಯುತ್ತ.
ಕಂಬಳದಲ್ಲಿ ಸ್ಪರ್ಧೆ ನಡೆಯುವುದು ಕೋಣಗಳ ಜೋಡಿಗಳ ಮಧ್ಯೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳ ಜೊತೆಗೆ ಓಡಿಸುವಾತನೂ ಸೇರಿದರೆ ಒಂದು ಜೋಡಿ ಸ್ಪರ್ಧಿಯಾಗುತ್ತದೆ. ಇಂತಹ ಜೋಡಿಗಳ ಮಧ್ಯ ಸ್ಪರ್ಧೆ ನಡೆಯುತ್ತದೆ. ಈ ರೀತಿಯ ನೂರಾರು ಸ್ಪರ್ಧಿಗಳು ಪ್ರತಿ ಕಂಬಳದಲ್ಲಿಯೂ ಪಾಲ್ಗೊಳ್ಳುತ್ತಾರೆ. ಈ ಓಟದಲ್ಲೂ ಕೆಲವು ವಿಧಗಳಿವೆ:
ಈ ಮೇಲಿನ ವಿಧಗಳಲ್ಲಿ ಹಗ್ಗ, ನೇಗಿಲು ಮತ್ತು ಹಲಗೆ ಓಟಗಳಲ್ಲಿ ವೇಗ ಮುಖ್ಯ - ಯಾವ ಜೋಡಿ ಇತರೆಲ್ಲವುಗಳಿಗಿಂತ ವೇಗವಾಗಿ ಓಟ ಮುಗಿಸುತ್ತವೆಯೋ ಅವು ವಿಜಯೀ ಜೋಡಿಗಳು. ಆದರೆ ಕೆನೆ ಹಲಗೆ ಓಟ ಸ್ವಲ್ಪ ಭಿನ್ನ. ಓಟದ ಗದ್ದೆಯ ಮಧ್ಯೆ ಅಡ್ಡ ಹಾಯುವಂತೆ ನಿಗದಿತ ಎತ್ತರದಲ್ಲಿ ಮೇಲೆ ಕಟ್ಟಲಾದ ಬಟ್ಟೆಗೆ ತಾಗುವಂತೆ ಕೆನೆ ಹಲಗೆಯ ಮೂಲಕ ಕೆಸರು ನೀರು ಚಿಮ್ಮಿಸಬೇಕು. ಯಾವ ಜೋಡಿ ಅತೀ ಎತ್ತರಕ್ಕೆ ಕೆಸರು ನೀರನ್ನು ಚಿಮ್ಮಿಸುತ್ತವೆಯೋ ಅವು ವಿಜಯಿಯಾಗುತ್ತವೆ. ಹೆಚ್ಚಾಗಿ ೬.೫ ಕೋಲು (ಒಂದು ಕೋಲು = ೨.೫ ಅಡಿ) ಎತ್ತರದಿಂದ ಈ ಸ್ಪರ್ಧೆ ಆರಂಭವಾಗುತ್ತದೆ. ಈ ಪ್ರತಿಯೊಂದು ವಿಧದಲ್ಲೂ ಕಿರಿಯ ಮತ್ತು ಹಿರಿಯ ವಿಭಾಗಗಳಿರುತ್ತವೆ. ಕೋಣಗಳ ವಯಸ್ಸನ್ನು ಆಧರಿಸಿ ಅವುಗಳನ್ನು ಕಿರಿಯ ಅಥವಾ ಹಿರಿಯ ಎಂದು ವರ್ಗೀಕರಿಸುತ್ತಾರೆ. ಇದಕ್ಕಾಗಿ ಕೋಣಗಳ ಬಾಯಿಯಲ್ಲಿ ಉದುರಿದ ಹಲ್ಲುಗಳನ್ನು ಎಣಿಸುತ್ತಾರೆ. ಈ ರೀತಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಸಿ ವಿಜೇತರಾದ ಕೋಣಗಳ ಜೋಡಿಗಳಿಗೆ ಬಹುಮಾನ ನೀಡಲಾಗುತ್ತದೆ. ಸಾಮಾನ್ಯವಾಗಿ ಚಿನ್ನದ ಪದಕಗಳನ್ನು (೨ ಪವನು, ೧ ಪವನು ಇತ್ಯಾದಿ) ವಿಜೇತ ಜೋಡಿಯ ಯಜಮಾನನಿಗೆ ನೀಡುವುದು ವಾಡಿಕೆ. ಅಂತೆಯೇ ವಿಜಯೀ ಕೋಣಗಳ ಜೋಡಿಯನ್ನು ಓಡಿಸಿದಾತನಿಗೂ ಬಹುಮಾನ ನೀಡುತ್ತಾರೆ.
ಕಂಬಳವು ಇತ್ತೀಚಿನ ದಿನಗಳಲ್ಲಿ ವಾರಾಂತ್ಯದ ಶನಿವಾರ, ಭಾನುವಾರಗಳಲ್ಲಿ ನಡೆಯುತ್ತದೆ. ಅದಕ್ಕೂ ಹಲವು ದಿನಗಳ ಮೊದಲೇ ಗದ್ದೆಯ ತಯಾರಿ, ಚಪ್ಪರ, ವೇದಿಕೆಯ ತಯಾರಿ ನಡೆಯುತ್ತದೆ. ನಿಗದಿತ ದಿನದಂದು ವಿಧ್ಯುಕ್ತ ಉದ್ಘಾಟನೆಯೊಂದಿಗೆ ಕಂಬಳ ಆರಂಭವಾಗುತ್ತದೆ. ಇತ್ತೀಚಿನ ಕಂಬಳಗಳಲ್ಲಿ ವಿವಿಧ ವಿಭಾಗಗಳಲ್ಲಿ ಇನ್ನೂರಕ್ಕೂ ಹೆಚ್ಚಿನ ಜೋಡಿಗಳ ಭಾಗವಹಿಸುವಿಕೆ ಇರುತ್ತದೆ. ಕಂಬಳದ ಗದ್ದೆಯು ಒಂಟಿಯೋ ಅಥವಾ ಜೋಡಿಯೋ ಎಂಬುವುದರ ಮೇಲೆ ಸ್ಪರ್ಧೆಯ ರೀತಿ ನಿಯಮಗಳು ನಿರ್ಧಾರವಾಗುತ್ತದೆ. ಉಳಿದ ಪಂದ್ಯಗಳಲ್ಲಿನಂತೆಯೇ ಲೀಗ್, ಸೆಮಿಫೈನಲ್, ಫೈನಲ್ ಓಟಗಳು ನಡೆಯುತ್ತವೆ. ಜೋಡುಕರೆ ಕಂಬಳದಲ್ಲಿ ಏಕ ಕಾಲಕ್ಕೆ ಎರಡು ಜೊತೆಗಳನ್ನು ಬಿಟ್ಟು ವಿಜಯಿಯಾದವುಗಳ ಮಧ್ಯೆ ಮತ್ತೆ ಸ್ಪರ್ಧೆ ಏರ್ಪಡಿಸಿ ಅಂತಿಮ ವಿಜೇತ ಜೋಡಿಗಳನ್ನು ನಿರ್ಧರಿಸಲಾಗುತ್ತದೆ.
ಕಂಬಳ ಗದ್ದೆಯ ಆರಂಭದ ಕೊನೆಯಲ್ಲಿ ಕೋಣದ ಜೋಡಿಯನ್ನು ಕೆರೆಗಿಳಿಸಿ ಅವುಗಳನ್ನು ಆರಂಭದ ತೋರಣದ ಕೆಳಗೆ ನಿಲ್ಲಿಸಲಾಗುತ್ತದೆ. ಅವುಗಳನ್ನು ನಿಲ್ಲಿಸುವುದೇ ಒಂದು ಕಸರತ್ತು. ಕೋಣಗಳನ್ನು ಓಡಿಸುವಾತನೂ ಆತನ ಸಹಾಯಕರೂ ಸೇರಿ ಅವುಗಳನ್ನು ಗದ್ದೆಗಿಳಿಸಿ, ಕೋಣಗಳು ಹಠಮಾರಿಯಾಗಿದ್ದಲ್ಲಿ ಅವುಗಳನ್ನು ಮಣಿಸಿ, ಅವುಗಳೊಂದಿಗೇ ಕಲವು ಸುತ್ತು ಕೆಸರಲ್ಲಿ ತಿರುಗಿ ಏಗಾಡಿ ಅಂತೂ ಇಂತೂ ನಿಂತವು ಎನ್ನುವಾಗ ಪಕ್ಕದ ಕೋಣವೋ ಅಥವಾ ಜೋಡುಕರೆಯಾಗಿದ್ದಲ್ಲಿ ಆ ಕಡೆಯ ಜೋಡಿಯೋ ಮುಖ ಸಿಂಡರಿಸಿ ಕೊಸರಾಡಿ ಎಲ್ಲೋ ತಿರುಗಿರುತ್ತದೆ. ಎಲ್ಲವೂ ತಯಾರಾದರೆ ದಡದ ಮೇಲೆ ನಿಂತಾತ ಕೆಂಪು ಬಾವುಟ ಎತ್ತಿ ಓಟದ ಆರಂಭ ಸೂಚಿಸುತ್ತಲೇ ಛಟೀರ್ ಎಂದು ಬೆನ್ನಿಗೆ ಏಟು ಬಿದ್ದ ಕೋಣಗಳು ಓಡಲಾರಂಭಿಸುತ್ತವೆ. ಪ್ರೇಕ್ಷಕರ ಹೊಯ್ಕಾರ, ಹುರಿದುಂಬಿಸುವಿಕೆಯೊಂದಿಗೆ, ಓಡಿಸುವಾತನ ಬೊಬ್ಬೆಯೂ ಸೇರಿ ಕೆಲವೇ ಕ್ಷಣಗಳಲ್ಲಿ ಕೋಣಗಳೂ ಓಡಿಸುವಾತನೂ ಮಂಜೊಟ್ಟಿಯನ್ನೇರುತ್ತಿದ್ದಂತೆಯೇ ಮೊದಲೇ ಈ ತುದಿಯಲ್ಲಿ ತಯಾರಾಗಿ ನಿಂತಿದ್ದ ಇನ್ನು ಕೆಲವು ಸಹಾಯಕರು ಓಟ ಮುಗಿಸಿದ ಕೋಣಗಳನ್ನು ಹಿಡಿದು ನಿಲ್ಲಿಸುತ್ತಾರೆ. ಅದೇ ಸಮಯಕ್ಕೆ ನಿರ್ಣಾಯಕರಿಂದ ಓಟದ ಫಲಿತಾಂಶ ಪ್ರಕಟವಾಗುತ್ತದೆ, ಇನ್ನೊಬ್ಬರಿಂದ ದಾಖಲೂ ಆಗುತ್ತದೆ. ಈಗಿನ ದಿನಗಳಲ್ಲಿ ಮುಕ್ತಾಯದ ಗೆರೆಯಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ ಗಣಕ ಯಂತ್ರಗಳನ್ನಿರಿಸಿ ಫಲಿತಾಂಶ ಹಾಗೂ ಸಮಯವನ್ನು ನಿಖರವಾಗಿ ಅಳೆಯಲಾಗುತ್ತದೆ. ಈ ರೀತಿ ಎಲ್ಲಾ ಜೋಡಿಗಳ ಪಂದ್ಯಗಳೂ ಮುಗಿದು ವಿವಿಧ ವಿಭಾಗಗಳಲ್ಲಿನ ಅಂತಿಮ ಫಲಿತಾಂಶ ಪ್ರಕಟವಾಗುವುದು ಎರಡನೆಯ ದಿನ ಮಧ್ಯಾಹ್ನವೋ ಸಂಜೆಯೋ ಆದ ಮೇಲೆಯೇ. ಹಾಗಾಗಿ ಕಂಬಳಗಳು ಆರಂಭದ ದಿನ ಬೆಳಗ್ಗಿನಿಂದ ರಾತ್ರಿ ಮುಗಿದು ಮಾರನೆಯ ದಿನದವರೆಗೂ ಎಡೆ ಬಿಡದೆ ನಡೆಯುತ್ತವೆ. ರಾತ್ರಿ ಪ್ರಖರ ದೀಪಗಳ ಬೆಳಕಿನಲ್ಲಿ ನಡೆಯುವ ಕಂಬಳವನ್ನು ನೋಡುವುದೇ ವಿಶೇಷ ಅನುಭವ. ಕಂಬಳದ ಕೋಣಗಳನ್ನು ಲಾರಿಯಿಂದ ಇಳಿಸಿ ಕಣದ ಬಳಿ ತರುವಾಗ ಅಥವಾ ಸ್ಪರ್ಧೆಯಲ್ಲಿ ಓಡಿಸುವ ಮೊದಲು ಭರ್ಜರಿ ವಾಲಗ, ಕಹಳೆ, ಡೋಲುಗಳ ಗೌಜು ನಡೆಯುವುದೂ ಇದೆ. ಕಂಬಳದ ಗದ್ದೆಯ ಇಕ್ಕೆಲಗಳಲ್ಲೂ ಕೈಯಲ್ಲಿ ನಾಗರ ಬೆತ್ತವನ್ನು ಹಿಡಿದು ತಿರುಗಾಡುತ್ತಿರುವ ಕೋಣಗಳ ಯಜಮಾನರುಗಳು, ಕೋಣಗಳನ್ನು ಓಡಿಸುವ ಕಟ್ಟುಮಸ್ತಾದ ಕಟ್ಟಾಳುಗಳು, ಅವರೊಡನೆ ಕೋಣಗಳ ಆರೈಕೆ ಮಾಡುವ ಹಾಗೂ ನೋಡಿಕೊಳ್ಳುವ ಸಹಾಯಕರು, ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕರು, ಧ್ವನಿವರ್ಧಕಗಳ ಮೂಲಕ ವಿವರಣೆ ಕೊಡುವ ಉದ್ಘೋಷಕರು ಇವರೆಲ್ಲರಿಂದ ಅಲ್ಲಿ ಒಂದು ಸಂಭ್ರಮದ ವಾತಾವರಣ ನಿರ್ಮಾಣವಾಗಿರುತ್ತದೆ. ಕಂಬಳದ ಅಂತಿಮ ಸುತ್ತಿನ ಓಟ ಮುಗಿದು ಫಲಿತಾಂಶ ತಯಾರಾಗುತ್ತಿದ್ದಂತೆಯೇ ವೇದಿಕೆಯ ಮೇಲೆ ಬಹುಮಾನ ವಿತರಣೆಯ ಸಮಾರಂಭ ಆರಂಭವಾಗುತ್ತದೆ. ಮುಖ್ಯ ಅತಿಥಿಗಳಿಂದ ವಿಜೇತ ಕೋಣಗಳ ಒಡೆಯನಿಗೆ ಶಾಲು ಹೊದೆಸಿ ಚಿನ್ನದ ಪದಕ ನೀಡಲಾಗುತ್ತದೆ. ಮೊದಲನೆಯ ಮತ್ತು ಎರಡನೆಯ ಸ್ಥಾನ ಪಡೆದ ಜೋಡಿಯ ಯಜಮಾನರಿಗೆ ಬಹುಮಾನಗಳಲ್ಲದೆ, ಕೋಣಗಳ ಜೋಡಿಗಳನ್ನು ಓಡಿಸಿದವರಿಗೂ ಬಹುಮಾನ ನೀಡಲಾಗುತ್ತದೆ. ಅದ್ದೂರಿ ಡೋಲು, ಕೊಂಬು, ಕಹಳೆ, ಕದನಿಗಳ ಮಧ್ಯೆ ಪ್ರೇಕ್ಷಕರ ಕರತಾಡನದೊಡನೆ ವಿಜೇತ ಕೋಣಗಳ ಯಜಮಾನ ಕೈಯಲ್ಲಿ ಅಲಂಕೃತ ಕಟ್ಟು ಹಾಕಿದ ನಾಗರ ಬೆತ್ತವನ್ನು ಹಿಡಿದು ಬಹುಮಾನ ಪಡೆಯುತ್ತಾನೆ.
ಕೋಣಗಳ ಜೋಡಿಯನ್ನು ಇತರೆಲ್ಲವುಗಳಿಗಿಂತ ವೇಗವಾಗಿ ಓಡಿಸಲು ಅವುಗಳ ಆರೈಕೆ, ತರಬೇತು ಮುಖ್ಯವಾದರೂ ಓಡುವ ಮೊದಲು ಮತ್ತು ಓಟದಲ್ಲಿ ಬೆತ್ತದಿಂದ ಹೊಡೆಯುವುದು ಸಾಮಾನ್ಯ. ನಾಗರ ಬೆತ್ತದಿಂದ ಕೋಣಗಳ ಬೆನ್ನಿಗೆ ಛಟೀರ್ ಎಂದು ಹೊಡೆಯುವುದನ್ನು ನೋಡಿದರೆ ಅಳ್ಳೆದೆಯವರು ದಂಗಾದಾರು. ಏಟು ಬೀಳದಿದ್ದರೆ ಕೋಣಗಳು ಓಡವು ಎಂದು ಸಾಮಾನ್ಯ ನಂಬಿಕೆ. ಕೆಲವು ಪರಿಣತರು ಏಟಿಲ್ಲದೆಯೇ ಅಥವಾ ಕೇವಲ ಸಾಂಕೇತಿಕವಾಗಿ (ಓಟದ ಆರಂಭವನ್ನು ಸೂಚಿಸಲು) ಹೊಡೆದು ಓಟ ಮುಗಿಸುವುದೂ ಬಹುಮಾನ ಗೆಲ್ಲುವುದೂ ಇದೆ. ಆದರೆ ಕೋಣಗಳ ಬೆನ್ನಿಗೆ ಏಟು ಬೀಳುವ ನೋಟ ಸಾಮಾನ್ಯ. ಈ ಕಾರಣಕ್ಕಾಗಿ ಕಂಬಳವನ್ನು ಪ್ರಾಣಿ ಹಿಂಸೆ ಎಂದು ಅನೇಕರು ದೂಷಿಸುತ್ತಾರೆ. ಹಾಗಾಗಿ ಈ ಕ್ರೀಡೆಯನ್ನು ನಿಷೇಧಿಸಬೇಕೆನ್ನುವ ಕೂಗು ಕೇಳಿ ಬಂದದ್ದೂ ಇದೆ. ಆದರೆ ಏಟು ಹೊಡೆದರೂ ಸ್ಪರ್ಧೆಯ ನಂತರ ಕೋಣಗಳ ಆರೈಕೆಯನ್ನು ಸ್ವಂತ ಮಕ್ಕಳಂತೆಯೇ ಮಾಡುವೆವು ಎಂಬ ಮಾಲೀಕರ ಮುತುವರ್ಜಿಯಿಂದ ಮತ್ತು ಸಂಘಟಕರಿಂದ ಕಂಬಳದ ಗೌಜು ಗಮ್ಮತ್ತು ಮುಂದುವರೆಯುತ್ತಾ ಬಂದಿದೆ. ಈಗಿನ ಆಧುನಿಕ ಕಂಬಳಗಳಲ್ಲಿ ಓಟ ಮುಗಿಸಿ ಮಂಜೊಟ್ಟಿಯನ್ನು ಏರಿದ ಮೇಲೆ ಕೋಣಗಳಿಗೆ ಹೊಡೆಯಬಾರದೆನ್ನುವ ನಿಯಮವೂ ಇದೆ.
ಜಲ್ಲಿ ಕಟ್ಟು ಕ್ರೀಡೆಯ ರೀತಿಗೂ, ಕಂಬಳದ ರೀತಿ ನೀತಿಗೂ ಸಾಕಷ್ಟು ವ್ಯತ್ಯಾಸವಿದ್ದು ಇಲ್ಲಿ ಕೋಣಗಳೆಗೆ ಯಾವುದೇ ಬಗೆಯ ಹಿಂಸೆಯಾಗದಂತೆ ಸಾಕಷ್ಟು ಮುತುವರ್ಜಿಯನ್ನು ವಹಿಸಲಾಗುತ್ತದೆ. ಜಲ್ಲಿಕಟ್ಟು ನಿಷೇಧಕ್ಕೆ ಪ್ರಮುಖ ಹಿನ್ನೆಲೆ ಇದ್ದಿದ್ದು ಸಾವು-ನೋವು. ಆದರೆ, ಕಂಬಳದ ಇಷ್ಟೂ ಇತಿಹಾಸದಲ್ಲಿ ಒಂದೇ ಒಂದು ಸಾವು ಸಂಭವಿಸಿದ ಉಲ್ಲೆಖವಿಲ್ಲ. ಪ್ರಾಣಿಗಳಾಗಲೀ, ನೋಡಿಕೊಳ್ಳುವವರಾಗಲೀ, ಪ್ರೇಕ್ಷಕರಿಗಾಗಲೀ ಗಾಯಗಳಾದದ್ದೂ ಕಡಿಮೆ ಕೋಣಗಳ ಸಾಕುವಿಕೆ, ಅದರ ಪಾಲನೆ, ಕಂಬಳದ ಗದ್ದೆಯಲ್ಲಿನ ವಸತಿ, ಆಹಾರ ವ್ಯವಸ್ಥೆಗಳಲ್ಲಿ ಯಾವುದೇ ನಕಾರಾತ್ಮಕ ಅಂಶಗಳಿಲ್ಲ. ಇನ್ನೂ ಹೇಳಬೇಕೆಂದರೆ ಹಿಂದೆಲ್ಲಾ ಕಂಬಳದ ಜತೆಗೆ ನಡೆಯುತ್ತಿದ್ದ ಕೊರಗರ ಡೋಲು, ಪನಿ ಕುಲ್ಲುನು ಮೊದಲಾದ ಆಚರಣೆಗಳನ್ನು ಅದಾಗಲೇ ಕೈಬಿಡಲಾಗಿದೆ.
ಈ ಮುಂದಿನ ಊರುಗಳಲ್ಲಿ ಸಾಮಾನ್ಯವಾಗಿ ಪ್ರತಿ ವರ್ಷ ಕಂಬಳ ನಡೆಯುತ್ತದೆ. ಕಂಬಳದ ದಿನಾಂಕವನ್ನು ಜಿಲ್ಲಾ ಕೇಂದ್ರ ಕಂಬಳ ಸಮಿತಿಯು ನಿರ್ಧರಿಸುತ್ತದೆ. ಸಾಮಾನ್ಯವಾಗಿ ನವೆಂಬರ್ ತಿಂಗಳಿನಲ್ಲಿ ಕಂಬಳ ದಿನಾಂಕಪಟ್ಟಿ ತಯಾರಾಗಿರುತ್ತದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.