From Wikipedia, the free encyclopedia
ಒಂಟೆಯು ಅದರ ಬೆನ್ನ ಮೇಲೆ "ಡುಬ್ಬ"ಗಳೆಂದು ಕರೆಯಲಾಗುವ ವಿಶಿಷ್ಟ ಕೊಬ್ಬಿನ ಸಂಗ್ರಹವನ್ನು ಹೊಂದಿರುವ, ಕಮೇಲುಸ್ ಜಾತಿಯಲ್ಲಿನ ಒಂದು ಸಮ ಕಾಲ್ಬೆರಳುಗಳಿರುವ ಗೊರಸುಳ್ಳ ಪ್ರಾಣಿ. ಮಧ್ಯಪ್ರಾಚ್ಯ ಹಾಗು ಆಫ಼್ರಿಕಾದ ಕೊಂಬಿನಲ್ಲಿ ನೆಲೆಸಿರುವ ಡ್ರಮಿಡರಿ ಅಥವಾ ಒಂಟಿ ಡುಬ್ಬದ ಒಂಟೆ (ಕಮೇಲುಸ್ ಡ್ರೋಮೆಡೇರಿಯಸ್) ಮತ್ತು ಮಧ್ಯ ಏಷ್ಯಾದಲ್ಲಿ ನೆಲೆಸಿರುವ ಬ್ಯಾಕ್ಟ್ರಿಯನ್ ಅಥವಾ ಎರಡು ಡುಬ್ಬಗಳ ಒಂಟೆ (ಕಮೇಲುಸ್ ಬ್ಯಾಕ್ಟ್ರಿಯೇನಸ್) ಒಂಟೆಯ ಎರಡು ಜೀವಂತವಿರುವ ಪ್ರಜಾತಿಗಳಾಗಿವೆ. ಎರಡೂ ಪ್ರಜಾತಿಗಳನ್ನು ಪಳಗಿಸಲಾಗಿದೆ; ಅವು ಹಾಲು, ಮಾಂಸ, ಬಟ್ಟೆಗಳು ಅಥವಾ ಉಣ್ಣೆಬಟ್ಟೆ ಸಂಚಿಗಳಂತಹ ಸರಕುಗಳಿಗೆ ಕೂದಲನ್ನು ಒದಗಿಸುತ್ತವೆ, ಮತ್ತು ಅವು ಮಾನವ ಸಾರಿಗೆಯಿಂದ ಭಾರ ಹೊರುವವರೆಗೆ ವ್ಯಾಪಿಸುವ ಕಾರ್ಯಗಳಲ್ಲಿ ಕೆಲಸದ ಪ್ರಾಣಿಗಳಾಗಿವೆ. ಒಂಟೆಯಂಬ ಪದವನ್ನು ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳ ಮೂಲದಿಂದ ಬಂದಂತಹ ಪದವಾಗಿದೆ.
Camel Temporal range: | |
---|---|
Dromedary (Camelus dromedarius) | |
Bactrian camel (Camelus bactrianus) | |
Scientific classification | |
Unrecognized taxon (fix): | Camelus |
Type species | |
Camelus dromedarius [೨] Linnaeus, 1758 | |
Species | |
Distribution of camels worldwide | |
Synonyms | |
List
|
ಒಂಟೆ ಕಶೇರುಕ ವಂಶದ ಸ್ತನಿವರ್ಗದ ದ್ವಿಖುರಗಣದ ಕಮೆಲಿಡೀ ಕುಟುಂಬದ ಕಮೀಲಸ್ ಜಾತಿಯ ಪ್ರಾಣಿ (ಕ್ಯಾಮೆಲ್). ಲಕ್ಷಾಂತರ ವರ್ಷಗಳ ಹಿಂದೆ ಒಂಟೆಯ ಪುರ್ವಜರ ಸಂತತಿ ಉತ್ತರ ಅಮೇರಿಕ, ಯುರೋಪ್ ಖಂಡಗಳಲ್ಲಿ ವಾಸಿಸುತ್ತಿದ್ದುವು. ಅವುಗಳ ಅವಶೇಷಗಳು ಪಳೆಯುಳಿಕೆಯ ಎಲುಬುಗಳಾಗಿ ಉಳಿದಿವೆ. ಒಂಟೆಯ ಅತ್ಯಂತ ಪುರ್ವನಿವಾಸಿ ಗಾತ್ರದಲ್ಲಿ ಮೊಲಕ್ಕಿಂತ ದೊಡ್ಡದಾಗಿರಲಿಲ್ಲ.
ಇದರಲ್ಲಿ ಎರಡು ಪ್ರಭೇದಗಳಿವೆ: ಕಮೀಲಸ್ ಡಾವಿಡೆರಿಯಸ್ (ಅರೇಬಿಯದ ಒಂಟೆ) ಮತ್ತು ಕಮೀಲಸ್ ಬ್ಯಾಕ್ಟ್ರಿಯೆನಸ್, ಬ್ಯಾಕ್ಟ್ರಿಯನ್ ಒಂಟೆಯ ಬೆನ್ನಿನ ಮೇಲೆ ಎರಡು ಡುಬ್ಬಗಳೂ ಅರೇಬಿಯದ ಒಂಟೆಯ ಬೆನ್ನಿನ ಮೇಲೆ ಒಂದು ಡುಬ್ಬವೂ ಇವೆ. ಬ್ಯಾಕ್ಟ್ರಿಯನ್ ಒಂಟೆ ಅರೇಬಿಯದ ಒಂಟೆಗಿಂತ ಕುಳ್ಳು. ಪುರ್ವ ತುರ್ಕಿಸ್ತಾನ ಮತ್ತು ಮಂಗೋಲಿಯ ಎರಡು ಡುಬ್ಬಗಳ ಒಂಟೆಗಳ ಜನ್ಮಸ್ಥಾನಗಳು, ಅಲ್ಲಿಯ ಅಪಾರವಾದ ಚಳಿಯನ್ನು ತಡೆಯಲು ಅನುಕೂಲವಾಗುವಂತೆ ಚಳಿಗಾಲದಲ್ಲಿ ಉದ್ದವಾದ ಕೂದಲುಗಳು ಹುಟ್ಟಿ ಇವುಗಳ ಶರೀರಗಳನ್ನು ರಕ್ಷಿಸುತ್ತವೆ. ವಸಂತ ಋತು ಪ್ರಾರಂಭವಾದ ಮೇಲೆ ಈ ಕೇಶರಾಶಿ ಮುದ್ದೆಮುದ್ದೆಯಾಗಿ ಉದುರಿಹೋಗುತ್ತದೆ. ಆಗ ಒಂಟೆಗಳು ಗೋಬಿ ಮರಳುಗಾಡಿನತ್ತ ಹೊರಡುತ್ತವೆ.
ಸುಮಾರು 4 ಕೋಟಿ ವರ್ಷಗಳ ಹಿಂದೆ ಒಂಟೆಗಳು ಉತ್ತರ ಅಮೆರಿಕದಲ್ಲಿ ಜನಿಸಿ ಸುಮಾರು 10 ಲಕ್ಷ ವರ್ಷಗಳಷ್ಟು ಹಿಂದೆ ದಕ್ಷಿಣ ಅಮೆರಿಕ ಹಾಗೂ ಏಷ್ಯಗಳಲ್ಲಿ ಹರಡಿದ್ದುವು. ಮುಂದೆ ಅವು ಅಮೆರಿಕ ಖಂಡದಲ್ಲಿ ನಿರ್ನಾಮಗೊಂಡವು. 1850ರಲ್ಲಿ ಅಮೆರಿಕದ ಸೈನ್ಯಬಲ ಒಂಟೆಯನ್ನು ಏಷ್ಯದಿಂದ ತಂದು ಆ ರಾಷ್ಟ್ರದಲ್ಲಿ ಉಪಯೋಗಿಸಲಾರಂಭಿಸಿತು. ಒಂಟೆ ನೋಡಲು ಕುರೂಪಿ, ಉದ್ದವಾದ ತಲೆ ಮತ್ತು ಕತ್ತು ಅದರ ವೈಶಿಷ್ಟ್ಯ. ಮರಳುಗಾಡಿನ ಜೀವನಕ್ಕೆ ಹೊಂದಿಕೊಳ್ಳುವಂತೆ ಅಂಗರಚನೆ ಮಾರ್ಪಡಾಗಿದೆ. ಮರಳು ದೂಳನ್ನು ಹೊರಗಿಡಲು ಮೂಗಿನ ರಂಧ್ರಗಳು ಮುಚ್ಚಿಕೊಳ್ಳಬಲ್ಲವು. ಕಣ್ಣುರೆಪ್ಪೆಯ ಕೂದಲುಗಳು ಬಲು ನೀಳವಾಗಿದ್ದು ಬಿಸಿಲಿನ ಧಗೆಯಿಂದ ಕಣ್ಣುಗಳನ್ನು ರಕ್ಷಿಸುತ್ತವೆ. ಮೇಲ್ತುಟಿಯ ಮಧ್ಯೆ ಆಳವಾಗಿ ಬಿರುಕುಬಿಟ್ಟಿದ್ದು ಅದು ಮೂಗನ್ನೂ ಬಾಯಿಯನ್ನೂ ಒಂದುಗೂಡಿಸುತ್ತದೆ. ಮುಂಗಾಲು ಮತ್ತು ಹಿಂಗಾಲುಗಳಲ್ಲಿ ಎರಡೆರಡು (ಮೂರನೆಯ ಮತ್ತು ನಾಲ್ಕನೆಯ) ಬೆರಳುಗಳು ಮಾತ್ರ ಇವೆ; ಅವುಗಳಿಗೆ ಗೊರಸುಗಳಿವೆ. ಮಂಡಿಯ ಹೊರ ಆವರಣದಲ್ಲಿ ಚರ್ಮದ ಮೆತ್ತೆಗಳಿವೆ. ಒಂಟೆ ನಡೆಯುವಾಗ ಅದರ ಪಾದಗಳು ಅಗಲವಾಗಿ ಹಿಗ್ಗುವುದರಿಂದ ಮರಳಿನಲ್ಲಿ ಕಾಲುಗಳು ಹೂತುಕೊಳ್ಳುವುದಿಲ್ಲ.
ಮರಳುಗಾಡಿನಲ್ಲಿ ಬೆಳೆಯುವ ಮುಳ್ಳಿನ ಗಿಡಗಂಟೆಗಳೇ ಒಂಟೆಗಳ ಆಹಾರ. ತಿನ್ನಲು ಏನೂ ಸಿಕ್ಕದೆ ಇದ್ದಾಗ ಇವು ಮೀನು, ತೊಗಲು, ಹಣ್ಣು ಮತ್ತು ಬೀಜಗಳನ್ನು ಸಹ ತಿನ್ನುವುದುಂಟು. ಇವುಗಳ ದಂತಸೂತ್ರ-ಬಾಚಿಹಲ್ಲು 1/3, ಕೋರೆಹಲ್ಲು 1/1, ಮುಂದವಡೆ ಹಲ್ಲು 3/2, ಹಿಂದುವಡೆ ಹಲ್ಲು 3/3=34 ಹಲ್ಲುಗಳು. ಮೆಲುಕುಹಾಕುವ ಸಸ್ತನಿಯಾದ್ದರಿಂದ ಜಠರದಲ್ಲಿ ಮೂರು ಕೋಶಗಳಿವೆ. ಒಂಟೆ ನೀರನ್ನು ಜಠರದಲ್ಲಿ ಶೇಖರಿಸುತ್ತದೆ. ಜಠರದಲ್ಲಿ ಚಿಕ್ಕ ಚಿಕ್ಕ ಕುಜಾಯಿಯಂಥ ರಚನೆಗಳಿವೆ. ಇವುಗಳ ಬಾಯ ಬುಡದಲ್ಲಿ ಸಂಕುಚಿಸುವ ಮಾಂಸಖಂಡಗಳು ಸುತ್ತುವರಿದಿವೆ. ಒಂಟೆ ಕುಡಿದ ನೀರು ಜಠರದಲ್ಲಿ ತುಂಬಿಕೊಂಡೊಡನೆ ಕುಜಾಯಿ ರಚನೆಗಳ ಬಾಯಿಗಳು ತೆರೆದುಕೊಳ್ಳುತ್ತವೆ. ನೀರು ಅವುಗಳೊಳಗೆ ಶೇಖರಗೊಳ್ಳುತ್ತದೆ. ಈ ನೀರು ಅಲ್ಲೇ ಉಳಿದಿದ್ದು ಪ್ರಾಣಿಗೆ ನೀರು ಬೇಕಾದಾಗ ಅವುಗಳಿಂದ ತೊಟ್ಟಿಕ್ಕಲು ಪ್ರಾರಂಭಿಸುತ್ತದೆ. ಇವುಗಳಲ್ಲಿರುವ ನೀರು ಮುಗಿದ ಮೇಲೆ ಮತ್ತೂ ನೀರಿನ ಆವಶ್ಯಕತೆ ಇದ್ದರೆ ಆಗ ಒಂಟೆ ತನ್ನ ಡುಬ್ಬದಲ್ಲಿರುವ ಮೇದಸ್ಸಿನಿಂದ ನೀರನ್ನು ದೇಹದಲ್ಲಿಯೇ ಉತ್ಪತ್ತಿಸಿಕೊಳ್ಳಬಲ್ಲುದು. ಹಸಿವು ಬಾಯಾರಿಕೆಗಳಿಂದ ಪೀಡಿತವಾದ ಒಂಟೆಯ ಡುಬ್ಬ ಒಂದು ಕಡೆಗೆ ಜೋತು ಬಿದ್ದಿರುತ್ತದೆ. ಮಿಕ್ಕ ಎಲ್ಲ ಸ್ತನಿಗಳ ಕೆಂಪು ರಕ್ತಕಣಗಳು ದುಂಡಗಿದ್ದರೆ ಒಂಟೆಯವು ಅಂಡಾಕಾರವಾಗಿವೆ.
ನಾಲ್ಕು ಸಹಸ್ರ ವರ್ಷಗಳಿಂದಲೂ ಒಂಟೆ ಮಾನವನ ಸೇವೆಯಲ್ಲಿದೆ. ಮರಳುಗಾಡಿನ ಜನರಿಗೆ ಇದರ ನೆರವಿಲ್ಲದೆ ಜೀವನ ಸಾಗಿಸಲು ಸಾಧ್ಯವಿಲ.್ಲ ಮರಳುಗಾಡಿನ ಏಕೈಕ ಸಂಪರ್ಕಸಾಧನ ಒಂಟೆ. ಇದರ ಕೂದಲಿನಿಂದ ಹಗ್ಗ, ಬಟ್ಟೆ, ಕಂಬಳಿಗಳನ್ನು ತಯಾರಿಸುತ್ತಾರೆ. ಈ ಪ್ರಾಣಿ ಎಷ್ಟು ಕುರೂಪಿಯೋ ಅಷ್ಟೇ ಮಂದಬುದ್ಧಿಯದೂ ಹೌದು. ಗಂಡು ಒಂಟೆ ಮದವೇರಿದಾಗ ಬಹು ಕ್ರೂರಿಯಾಗಿ ವರ್ತಿಸಬಲ್ಲದು. ಹೆಣ್ಣು ಒಂಟೆ 11 ತಿಂಗಳ ತನಕ ಗರ್ಭವನ್ನು ಧರಿಸಿ ಒಂದು ಮರಿಯನ್ನು ಈಯುತ್ತದೆ. ಒಂಟೆಯ ಆಯುಷ್ಯ ಸು. 50 ವರ್ಷಗಳು.
ಒಂಟೆ 500-800 ಪೌಂಡುಗಳಷ್ಟು ಭಾರವನ್ನು ಹೊರಬಲ್ಲುದು. 200-240 ಕಿಮೀಗಳನ್ನು ಒಂದೇ ದಿವಸದಲ್ಲಿ ನಡೆಯಬಲ್ಲುದು. ಅರೇಬಿಯ ದೇಶದ ಹೈರೀ ಎಂಬ ತಳಿ ಟ್ಯುನಿಸಿನಿಂದ ಟ್ರಿಪೋಲಿಗೆ ಪ್ರಯಾಣ ಮಾಡಲು ಕೇವಲ 4 ದಿವಸಗಳನ್ನು ತೆಗೆದುಕೊಂಡಿತು. ಈ ಎರಡು ಊರುಗಳಿಗೂ ಇರುವ ಅಂತರ 960 ಕಿಮೀಗಳು. ಪ್ರಯಾಣಕಾಲದಲ್ಲಿ ಅದು ಒಬ್ಬ ಸವಾರನನ್ನೂ 250 ಪೌಂಡು ಭಾರದ ಸಾಮಾನಗಳನ್ನೂ ಹೊತ್ತು ನಡೆಯಿತು. ತುರ್ಕಿಸ್ತಾನ ಮತ್ತು ಸ್ಪೇನ್ ದೇಶದ ಮರಳುಗಾಡುಗಳಲ್ಲಿ ಕಾಡು ಒಂಟೆಗಳಿವೆ.
ಭಾರತದ ಒಂಟೆಗಳು ಗಟ್ಟಿಮುಟ್ಟಾಗಿವೆ. 6.5ದಿ-7.25ದಿ ಎತ್ತರದವರೆಗೆ ಇವು ಬೆಳೆಯುವುದುಂಟು. ಕಾಲು ಮತ್ತು ಕುತ್ತಿಗೆ ಉದ್ದವಾಗಿವೆ. ಬೆನ್ನಿನ ಮೇಲೆ ಕೇವಲ ಒಂದೇ ಒಂದು ಡುಬ್ಬವಿದೆ. ಭಾರತದಲ್ಲಿ ಇವು ಇರುವ ಸ್ಥಳಗಳು ರಾಜಸ್ತಾನ, ಪಂಜಾಬ್ ಮತ್ತು ಉತ್ತರ ಪ್ರದೇಶಗಳು. ವ್ಯವಸಾಯಕ್ಕಾಗಿ ಕಾಡುಗಳನ್ನು ಕಡಿದು ಗಿಡಗಳನ್ನು ನಾಶಮಾಡುತ್ತಿರುವ ಪರಿಣಾಮವಾಗಿ ಪಂಜಾಬಿನಲ್ಲಿ ಒಂಟೆಯ ನಾನಾ ತಳಿಗಳು ನಾಶವಾಗುತ್ತಿವೆ. ಇವುಗಳಲ್ಲಿ ಅತಿಮುಖ್ಯ ತಳಿಗಳು ರೋಜನ್ ಮತ್ತು ಕಲಾಚಿತ್ತ. ರಾಜಸ್ತಾನದಲ್ಲಿರುವ ಮುಖ್ಯ ತಳಿ ಬಿಕನೀರ್ ಒಂಟೆ. ಇದು ಸಾಮಾನ್ಯವಾಗಿ ಭಾರತದ ಎಲ್ಲೆಡೆಗಳಲ್ಲಿಯೂ ವಾಸಿಸಬಲ್ಲುದು. ಇದು ಸವಾರಿಗೆ ಬಹು ಚೆನ್ನ. ಮರುಭೂಮಿಯನ್ನು ವಾಯುಗುಣವನ್ನು ತಡೆದುಕೊಳ್ಳುವಂತೆ ಇದನ್ನು ತಳೀಕರಿಸಲಾಗಿದೆ. ಶರೀರದ ಮೇಲೆ ಉತ್ತಮ ರೋಮಗಳಿಂದ ಕೂಡಿದ ಹೊದಿಕೆಯಿದೆ. ಮೂಗು ಮೇಲ್ಮುಖವಾಗಿದ್ದು ಮೂತಿ ಉದ್ದವಾಗಿದೆ. ಕಿವಿ ಚಿಕ್ಕವು. ಇದೇ ತಳಿಯನ್ನು ಹೋಲುವ ಮತ್ತೊಂದು ತಳಿ ಅಲ್ವಾರಿನಲ್ಲಿ ಕಂಡುಬರುತ್ತದೆ. ಆದರೆ ಇದರಲ್ಲಿ ಗುಡ್ಡಗಾಡಿನ ಒಂಟೆಯ ಲಕ್ಷಣಗಳೂ ಇವೆ. ಉತ್ತರ ಪ್ರದೇಶದಲ್ಲಿರುವ ತಳಿಗಳು ರೋಜನ್ ತಳಿಯನ್ನು ಹೋಲುತ್ತವೆ. 1945ರಲ್ಲಿ ಸುಮಾರು 65,000 ಒಂಟೆಗಳು ಭಾರತದಲ್ಲಿದ್ದುವೆಂದು ವರದಿಯಾಗಿದೆ.
ಒಂಟೆಗಳಿಗೆ ಬರುವ ಕೆಲವು ವಿಶಿಷ್ಟ ರೋಗಗಳಲ್ಲಿ ಸಾಮಾನ್ಯವಾದದ್ದು ಸರ್ರಾ ರೋಗ. ಇದು ಹರಡಲು ಟ್ರಿಪನೋಸೊಮ ಇವ್ಯಾನ್ಸಿ ಎಂಬ ಏಕಕೋಶಿಕ ಜೀವಿ ಕಾರಣ. ಟಬಾನಿಡಿ ಕುಟುಂಬಕ್ಕೆ ಸೇರಿದ ರಕ್ತ ಹೀರುವ ನೊಣಗಳಲ್ಲಿ ಈ ಜೀವಿಗಳು ಇರುತ್ತವೆ. ನೊಣ ತನ್ನ ಆಹಾರಕ್ಕಾಗಿ ಒಂಟೆಯ ರಕ್ತವನ್ನು ಹೀರುವಾಗ ಅದರ ಲಾಲಾರಸದಲ್ಲಿರುವ ಟ್ರಿಪನೋಸೊಮ ಇವ್ಯಾನ್ಸಿ ಜೀವಗಳು ಒಂಟೆಯ ರಕ್ತವನ್ನು ತಲಪುತ್ತವೆ. ಒಂದು ಒಂಟೆಯಿಂದ ಮತ್ತೊಂದು ಒಂಟೆಗೆ ಈ ರೋಗವನ್ನು ಹರಡಲು ಇವೇ ನೊಣಗಳು ಸಹಾಯ ಮಾಡುತ್ತವೆ. ಈ ರೋಗದ ಮುಖ್ಯ ಲಕ್ಷಣಗಳೆಂದರೆ ಬಿಟ್ಟು ಬಿಟ್ಟು ಜ್ವರ ಬರುವುದು, ಕೂದಲು ಉದುರಿಹೋಗುವುದು, ನಿಶ್ಯಕ್ತಿ ಮತ್ತು ರಕ್ತಹೀನತೆ. ಪಂಜಾಬ್ ಪ್ರಾಂತ್ಯದಲ್ಲಿನ ಶೇಕಡ ಸು. 25 ಒಂಟೆಗಳು ಈ ರೋಗಕ್ಕೆ ತುತ್ತಾಗುತ್ತವೆ. ಒಂಟೆಗೆ ಬರುವ ಇತರ ರೋಗಗಳು ನ್ಯುಮೋನಿಯ, ಆರ್ಟಿಕೇರಿಯ ಮಾನ್ಗೇ ಮುಂತಾದ ಚರ್ಮರೋಗಗಳು, ಕ್ಷಯ, ಫಿಲೇರಿಯಾಸಿಸ್, ಏಡಿಗಂತಿ, ಒಂಟೆಸಿಡುಬು ಇತ್ಯಾದಿ.
ಒಂಟೆಗಳಿಂದೊದಗುವ ಅತಿ ಮುಖ್ಯ ಉತ್ಪನ್ನಗಳೆಂದರೆ ಅದರ ರೋಮ ಮತ್ತು ಹಾಲು. ರೋಮ ಬಹಳ ಬೆಲೆ ಬಾಳುತ್ತದೆ. ಇದು ಮೃದು ಮತ್ತು ಹಗುರವಾಗಿದೆ. ಬಾಳಿಕೆ ಹೆಚ್ಚು, ದೇಹದ ಉಷ್ಣತೆಯನ್ನು ಚೆನ್ನಾಗಿ ಹಿಡಿದಿಡುತ್ತದೆ. ಭಾರತದ ಒಂಟೆಗಳ ರೋಮಗಳು ಮೇ ತಿಂಗಳಿಂದ ಜೂನ್ ತಿಂಗಳ ವರೆಗೆ ಉದುರುತ್ತವೆ. ಆಗ ಇವನ್ನು ಶೇಖರಿಸಲಾಗುತ್ತದೆ. ಅಲ್ಲದೆ ವರ್ಷಕ್ಕೊಮ್ಮೆ ಕತ್ತರಿಸಿಯೂ ಶೇಖರಿಸುತ್ತಾರೆ. ಬೆನ್ನು, ಕುತ್ತಿಗೆ ತೊಡೆ ಮತ್ತು ಕಾಲುಗಳಲ್ಲಿನ ರೋಮಗಳು ಉದ್ದವಾಗಿದ್ದು ಉಪಯೋಗಕ್ಕೆ ಬರುತ್ತವೆ. ಶೀತವಲಯದ ಒಂಟೆಗಳು ವರ್ಷಕ್ಕೆ 12 ಪೌಂಡು ರೋಮ ಕೊಡುವುದುಂಟು. ಆದರೆ ಭಾರತದಲ್ಲಿ ಕೇವಲ 2 ಪೌಂಡು ಮಾತ್ರ ರೋಮ ಸಿಕ್ಕುತ್ತದೆ. ಈ ರೋಮಗಳಿಂದ ಮೇಲುಹಾಸು, ಕಂಬಳಿ ಮತ್ತು ಕೋಟು, ಗೌನುಗಳು ಮುಂತಾದುವನ್ನು ನೇಯುತ್ತಾರೆ. ಇವು ಇತರ ಉಣ್ಣೆಯ ಪದಾರ್ಥಗಳಿಗಿಂತ ಉತ್ತಮವಾಗಿವೆ.
ಒಂಟೆಯ ಹಾಲು ಅತ್ಯುತ್ತಮ ಆಹಾರ. ಎಮ್ಮೆ ಅಥವಾ ಹಸುವಿನ ಹಾಲಿನ ಹಾಗೆ ಇದನ್ನು ಬಳಸಬಹುದು. ಆರೋಗ್ಯವಾಗಿರುವ ಒಂಟೆ ಒಂದು ದಿವಸದಲ್ಲಿ ಸು. 14 ಲೀಟರ್ ಹಾಲು ಕೊಡುತ್ತದೆ. ಇದರಲ್ಲಿ ಕೊಬ್ಬು ಬಲು ಕಡಿಮೆ. ಆದರೆ ನೈಟ್ರೊಜನ್ ಅಂಶಗಳು ಬಲು ಹೆಚ್ಚು. ಹಾಲಿಗೆ ಒಂದು ರೀತಿಯ ವಾಸನೆ ಇದೆ. ಇದರ ಸೇವನೆ ಕೆಲವರಲ್ಲಿ ವಿರೇಚವನ್ನುಂಟುಮಾಡುತ್ತದೆ. ಇದರ ಸೇವನೆಯಿಂದ ಗುಲ್ಮರೋಗಗಳ ನಿವಾರಣೆಯಾಗುತ್ತದೆಯೆಂಬ ನಂಬಿಕೆ ಇದೆ. ಒಂಟೆಯ ಹಾಲಿನ ಹಲ್ವವನ್ನು ಪರ್ಷಿಯ ದೇಶದಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ರಾಜಸ್ತಾನ, ಪಂಜಾಬು ಮುಂತಾದ ಕಡೆಗಳಲ್ಲಿ ಮಕ್ಕಳು ಒಂಟೆಹಾಲು ಕುಡಿದೇ ಬೆಳೆಯುತ್ತವೆ. ಒಂಟೆಯ ಚರ್ಮ ಹೆಚ್ಚಿನ ಉಪಯೋಗಕ್ಕೆ ಬರುವುದಿಲ್ಲ. ಚರ್ಮದ ಪೆಟ್ಟಿಗೆಗಳು, ಪಟ್ಟಿಗಳು ಮುಂತಾದುವನ್ನು ಇದರಿಂದ ತಯಾರಿಸುತ್ತಾರೆ. ಇದರ ಚರ್ಮದ ಚೀಲಗಳಲ್ಲಿ ಎಣ್ಣೆ, ತುಪ್ಪ ಮುಂತಾದವುಗಳನ್ನು ಶೇಖರಿಸುತ್ತಾರೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.