ಇಲಿ
From Wikipedia, the free encyclopedia
ಇಲಿಯು ದಂಶಕಗಳ ಗಣಕ್ಕೆ ಸೇರಿದ, ವಿಶಿಷ್ಟ ಲಕ್ಷಣವೆಂಬಂತೆ ಚೂಪಾದ ಮೂತಿ, ಸಣ್ಣ ದುಂಡನೆಯ ಕಿವಿಗಳು, ಮತ್ತು ಒಂದು ಉದ್ದ ಬೆತ್ತಲೆ ಅಥವಾ ಬಹುತೇಕ ಬೋಳು ಬಾಲವನ್ನು ಹೊಂದಿರುವ ಒಂದು ಚಿಕ್ಕ ಸಸ್ತನಿ. ಸಾಮಾನ್ಯವಾದ ಮನೆ ಇಲಿಯು (ಮುಸ್ ಮುಸ್ಕುಲಸ್) ಅತ್ಯಂತ ಪರಿಚಿತವಾಗಿರುವ ಇಲಿ ಪ್ರಜಾತಿ. ಅದು ಒಂದು ಜನಪ್ರಿಯ ಸಾಕುಪ್ರಾಣಿ ಕೂಡ. ಇಲಿಯು ದಂಶಕವರ್ಗದ ಮಧ್ಯಮಗಾತ್ರದ ಉದ್ದಬಾಲದ ಪ್ರಾಣಿ (ರ್ಯಾಟ್). ಇದೇ ಹೆಸರಿನ ಪಂಗಡದ ಇನ್ನೊಂದು ಸದಸ್ಯ ಹೆಗ್ಗಣ. ಒಟ್ಟಾರೆ ಇವನ್ನು ಇಂಗ್ಲಿಷಿನಲ್ಲಿ ಲೇಮಿಂಗ್ಸ್ ಮತ್ತು ಮೋಲ್ಸ್ ಎಂದು ಕರೆದಿದೆ. ಇವುಗಳ ಮುಖ್ಯ ಲಕ್ಷಣಗಳು ಬೋಳಾದ ಹುರುಪೆಗಳು, ಉದ್ದ ಬಾಲ, ದೊಡ್ಡ ಕಣ್ಣುಗಳು ಮತ್ತು ಮೊನಚು ಮುಸುಡು, ಇವು ಬಲು ಚಟುವಟಿಕೆಯವು. ಈ ಜಾತಿಯಲ್ಲಿ ನೂರರಷ್ಟು ಪ್ರಭೇದಗಳಿವೆ. ಇವುಗಳ ವ್ಯಾಪ್ತಿ, ವಿತರಣೆ ಇಡೀ ಪ್ರಪಂಚಕ್ಕೆ ಅನ್ವಯಿಸುತ್ತದೆ. ಮೂಲತಃ ಇಲಿಯ ಉಗಮ ಮಧ್ಯ ಏಷ್ಯದಲ್ಲಿ ಆಗಿರಬಹುದು. ಕಾಲ-ಆಲಿಗೋಸೀನ್ (40 ದಶಲಕ್ಷ ವರ್ಷ ಪ್ರಾಚೀನ) ಕಲ್ಪದಿಂದೀಚೆಗೆ. ಇಲಿಗಳು ನೆಲಜೀವಿಗಳು. ಇವಿರದ ಊರಿಲ್ಲ. ಸಾಮಾನ್ಯವಾಗಿ ಯಾವ ಆಹಾರವೂ ತ್ಯಾಜ್ಯವಲ್ಲವಾದರೂ ಮನುಷ್ಯ ಮೆಚ್ಚುವ ಕಾಳುಕಡ್ಡಿಗಳು, ದಿನಸುಗಳು, ಅವನು ತಯಾರಿಸುವ ತಿಂಡಿ ತಿನಿಸುಗಳು ಇಲಿಗಳಿಗೆ ಬಲು ಪ್ರಿಯ. ಹೀಗಾಗಿ ಮನುಷ್ಯನ ದೊಡ್ಡ ಪಿಡುಗುಗಳಲ್ಲಿ ಇವೂ ಒಂದು. "ಅಲ್ಲೇನಿಲಿಗಳ ಕಾಟವೆ ಕಾಟ. ಅಲ್ಲಿಯ ಜನಗಳಿಗತಿ ಗೋಳಾಟ" ಎಂಬ ಜನಪ್ರಿಯ ಕವಿನುಡಿಯ ಹಿನ್ನೆಲೆ ಇಲ್ಲಿದೆ. ಆತ್ಮ ರಕ್ಷಣೆಗೋಸ್ಕರ ಇಲಿ ಸದಾ ಜಾಗರೂಕವಾಗಿರಬೇಕು. ಸಹಜವಾಗಿಯೇ ಅದರ ಸ್ವಭಾವ ಬಲು ಚುರುಕು; ನಿವಾಸ ಬಲು ಗುಪ್ತ. ಉಗ್ರಾಣದ ಮೂಲೆಗಳಲ್ಲಿ, ಸಾಮಾನು ಸರಂಜಾಮುಗಳ ಕೈಗೆಟುಕದ ಎಡೆಗಳಲ್ಲಿ, ಮರದ ಪೊಟರೆಗಳಲ್ಲಿ, ಕಲ್ಲ ಸೆರೆಗಳಲ್ಲಿ, ನೆಲದಡಿಯ ಬಿಲಗಳಲ್ಲಿ, ಇಲಿಗಳ ಠಾವು ಸಾಮಾನ್ಯ. ಕಚ್ಚಿ ಮೃದು ಮಾಡಿದ ಉಣ್ಣೆ, ಕಾಗದ ಬಟ್ಟೆ, ಹುಲ್ಲಿನ ತುಣುಕುಗಳು-ಇವನ್ನು ಸೇರಿಸಿ ಗೂಡು ಕಟ್ಟುತ್ತವೆ. ಸಂಚಾರ ಹೆಚ್ಚಾಗಿ ರಾತ್ರಿ ವೇಳೆ. ಆದರೆ ಜನ, ಇತರ ಶತ್ರುಪ್ರಾಣಿ ಸಂಚಾರವಿಲ್ಲವೆಂದು ಖಾತ್ರಿಯಾದಾಗ ಬಲು ಧೈರ್ಯದಿಂದ ಹಗಲು ಹೊತ್ತಿನಲ್ಲೂ ಹೊರಗೆ ಬಂದು ಕಣ್ಣಿಗೆ ಬಿದ್ದ ತಿಂಡಿ ತಿನ್ನುವುದುಂಟು. ಯಾರಾದರೂ ಬಂದೊಡನೆ ಅಥವಾ ಸಂಶಯಕಾರಣವಾದ ಸದ್ದು ಉಂಟಾದೊಡನೆ ಸರಕ್ಕನೆ ಬಿಲಕ್ಕೆ ಜಿಗಿದು ಬಿಡುತ್ತವೆ. ಆಹಾರವನ್ನು ಅಳಿಲಿನಂತೆ ಮುಂಗಾಲುಗಳಲ್ಲಿ ಹಿಡಿದು ಹಿಂಗಾಲುಗಳ ಮೇಲೆ ಕುಳಿತು ತಿನ್ನುವುದು ರೂಢಿ. ಇಲಿ ಬಹಳ ಎತ್ತರವ ಹಾರಲಾರದು. ಆದರೆ ಕಡಿದಾದ ಸ್ಥಳ ಏರಬಲ್ಲುದು. ವೇಗವಾಗಿ ಓಡುವಾಗ ಬೆಕ್ಕಿನಂತೆ ಹಿಂಗಾಲುಗಳಿಂದ ಕುಪ್ಪಳಿಸುತ್ತ ಮುಂಗಾಲುಗಳಿಂದ ಜಿಗಿಯುತ್ತ ಧಾವಿಸುತ್ತದೆ.
ಇಲಿಯ ಗಾತ್ರ ಪ್ರಭೇದಾನುಸಾರ ವ್ಯತ್ಯಾಸವಾಗುತ್ತದೆ. ಬಯೀಮಿಸ್ ಎಂಬವು ಉದ್ದದಲ್ಲಿ 100 ಮಿ. ಮೀ. ಗಿಂತಲೂ ಚಿಕ್ಕವು. ಮುಸ್ಕ್ರಟ್ ಎಂಬುವು 800 ಮಿ. ಮೀ. ಗಿಂತಲೂ ಹೆಚ್ಚು ಉದ್ದದವು. ಇಲಿಯ ಕೆಲವು ಮುಖ್ಯ ಪ್ರಭೇದಗಳು ಹೀಗಿವೆ : ಕೌಚ ಇಲಿ, ಪಾಲ್ಲಿಟ್ ಇಲಿ, ರಾಜಾ ಇಲಿ, ಗದ್ದಲ ಇಲಿ, ಹಾರು ಇಲಿ, ಚಿಂಚಿಲ್ಲ ಇಲಿ, ಥೈಲೆಂಡಿನ ಇಲಿ, ಸೂರಿಲಿ, ಸುಂಡಿಲಿ, ಮೂಗಿಲಿ, ಹೊಲದ ಇಲಿ, ಬಿಳಿಕಾಲಿನ ಇಲಿ, ಮರದಿಲಿ, ಹೆಗ್ಗಣ, ಕಾಡಿಲಿ, ಇವುಗಳಲ್ಲಿ ಕೆಲವು ಪ್ರಭೇದಗಳ ವಿವರಗಳನ್ನು ಮುಂದೆ ಕೊಟ್ಟಿದೆ. ಪಟ್ಟಿಯನ್ನು ಹೀಗೆಯೇ ಬೆಳೆಸಿಕೊಂಡು ಹೋಗಬಹುದು; ಎಷ್ಟು ಬೆಳೆಸಿದರೂ ಸದಸ್ಯರ ಹೆಸರು ಮುಗಿಯದು. ಒಂದೊಂದು ಪ್ರಭೇದವೂ ಬೆಳೆಯುವ ವೇಗವನ್ನು ಪರಿಶೀಲಿಸಿದರೆ ನಾವಿರುವುದು ಮನುಷ್ಯರ ಪ್ರಪಂಚದಲ್ಲಿಯೋ ಅಥವಾ ಇಲಿಗಳ ಪ್ರಪಂಚದಲ್ಲಿಯೋ ಎಂಬ ಸಂದೇಹ ಮೂಡುವಂತಿದೆ. ಒಂದು ಪ್ರಭೇದದ ಉದಾಹರಣೆ ಪರಿಶೀಲಿಸಬಹುದು. ಸುಗ್ಗಿ ಇಲಿ ಹೆಸರೇ ಸೂಚಿಸುವಂತೆ ಹೊಯ್ಲು ಸಮಯದಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ವರ್ಷದಲ್ಲಿ ಎರಡು ಸಲ ಮರಿ ಹಾಕುತ್ತದೆ. ಏಪ್ರಿಲ್ ಮತ್ತು ಸೆಪ್ಟಂಬರ್ ತಿಂಗಳುಗಳು ಋತುಕಾಲಗಳು; ಆಗ ಗಂಡಿನ ತೀವ್ರ ಧ್ವನಿಯ ಸಿಳ್ಳಿನ ಆಕರ್ಷಣೆ ಪ್ರಾರಂಭ. ಹೆಣ್ಣಿಗೆ ಋತು ಮುಗಿದು ಸುಮಾರು ಇಪ್ಪತ್ತನಾಲ್ಕು ದಿವಸಗಳ ತರುವಾಯ ಮೂರರಿಂದ ಏಳರವರೆಗೆ ಜಡಮರಿಗಳು ಹುಟ್ಟುತ್ತವೆ. ಇವುಗಳ ಭಾರ 1/20 ಔನ್ನಿಗಿಂತಲೂ ಕಡಿಮೆ; ಇವುಗಳಿಗೆ ರೋಮದ ಕವಚವಿಲ್ಲ ; ನೋಡಲು ಕಂಗಳಿಲ್ಲ. ಮುಂದಿನ ಎಂಟು ದಿವಸಗಳಲ್ಲಿ ಕಣ್ಣುಗಳು ತೆರೆಯುತ್ತವೆ; ಮೊದಲ ಹಲ್ಲುಗಳು ಮೊಳೆಯುತ್ತವೆ. ಸುಮಾರು ಎರಡು ವಾರ ಪ್ರಾಯವಾಗುವಾಗ ತಾಯಿ ಇಲಿ ಮೊಲೆಯೂಡಿಸುವುದನ್ನು ನಿಲ್ಲಿಸುತ್ತದೆ; ಮತ್ತೆ ಹತ್ತು ದಿವಸಗಳಲ್ಲಿ ಮರಿ ಇಲಿಗಳು ಸ್ವತಂತ್ರವಾಗುವುವು. ಐದುವಾರಗಳು ಮುಗಿಯುವಾಗ ಹೊಸ ಪೀಳಿಗೆ ಪೂರ್ಣವಿಕಸನಗೊಂಡಿರುತ್ತದೆ. ಇಂಥ ಒಂದೊಂದು ಇಲಿಯ ಭಾರ ಸುಮಾರು 1/3 ಔನ್ಸ್. ಒಂದು ವರ್ಷ ಮುಗಿಯುವಾಗ ಸುಗ್ಗಿ ಇಲಿ ಮುದಿಯಾಗಿರುತ್ತದೆ. ಈ ಪ್ರಭೇದಕ್ಕಿಂತಲೂ ಅದೆಷ್ಟೋ ತೀವ್ರ ವೇಗದಿಂದ ವೃದ್ಧಿಯಾಗುವ ಇತರ ಪ್ರಭೇದಗಳು ಹಲವಾರು. ಆದರೆ ಇಲಿಗಳಿಗಿರುವ ಶತ್ರುಗಳ ಸಂಖ್ಯೆ ಏನೂ ಕಡಿಮೆಯಿಲ್ಲ. ಹಕ್ಕಿ, ಹಾವು, ಬೆಕ್ಕು, ನಾಯಿ ಮುಂತಾದುವೆಲ್ಲ ಇಲಿಯ ಸಹಜ ಶತ್ರುಗಳು. ಈ ಕಾರಣದಿಂದ ನಿಸರ್ಗದ ಸಮತೋಲ ಉಳಿದಿದೆ. ಬಿಳಿ ಮತ್ತು ಕಂದು ಇಲಿಗಳನ್ನು ಮನೆಯಲ್ಲಿ ಸಾಕುವುದಿದೆ. ಕೋಗಿಲೆಯಂತೆ ಹಾಡುವ ಇಲಿಗಳು, ವರ್ತುಲಾಕಾರವಾಗಿ ಓಡುವ, ಕುಣಿಯುವ ಇಲಿಗಳು ರೋಗಗ್ರಸ್ತ ಇಲಿಗಳೇ ವಿನಾ ಬೇರೆ ಪ್ರಭೇದಗಳಲ್ಲ. ಉದ್ದ ಬಾಲದ ಕಾಡಿಲಿಗಳು ಮನೆಯ ಇಲಿಗಳಿಗಿಂತ ದೊಡ್ಡವು. ಎಲ್ಲ ಸಸ್ತನಿಗಳಿಗಿಂತ ಇಲಿಗಳ ಸಂಖ್ಯೆ ಹೆಚ್ಚು.