![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/c/cf/Ir_girl.png/640px-Ir_girl.png&w=640&q=50)
ಅತಿಗೆಂಪು
From Wikipedia, the free encyclopedia
ಅತಿಗೆಂಪು ವಿಕಿರಣ ಅಥವಾ ಇನ್ಫ್ರಾರೆಡ್ ರೇಡಿಯೇಶನ್ (ಐಆರ್) ಎನ್ನುವುದು ೦.೭ ಮತ್ತು ೩೦೦ ಮೈಕ್ರೊಮೀಟರ್ ತರಂಗಾಂತರದಲ್ಲಿ ಇರುವ ವಿದ್ಯುತ್ಕಾಂತೀಯ ವಿಕಿರಣವಾಗಿದೆ. ಇದು ಅಂದಾಜು ೧ ಮತ್ತು ೪೩೦ THz ನಡುವಿನ ಆವರ್ತನ ಶ್ರೇಣಿಗೆ ಸಮನಾಗಿರುತ್ತದೆ.[1]
![Thumb image](http://upload.wikimedia.org/wikipedia/commons/thumb/c/cf/Ir_girl.png/640px-Ir_girl.png)
ಹಲವು ಸಾಮಾನ್ಯ ಗುಣಗಳನ್ನುಳ್ಳ ವಿದ್ಯುದ್ಕಾಂತ ಸೂತ್ರವನ್ನು ಪರಿಪಾಲಿಸುವ ಹಲವು ರಶ್ಮಿಪುಂಜಗಳನ್ನು ಒಂದು ಪಂಗಡಕ್ಕೆ ಸೇರಿಸಿ ಇವನ್ನು ವಿದ್ಯುದಯಸ್ಕಾಂತ ರಶ್ಮಿಪುಂಜಗಳೆಂದು ಹೆಸರಿಸುತ್ತೇವೆ. ಈ ಹಲವು ರಶ್ಮಿಗಳ ಮೂಲವೂ, ಕಂಡು ಹಿಡಿಯುವ ಸಾಧನಗಳಲ್ಲಿ ಕೆಲವು ಗುಣಗಳೂ ಬೇರೆ ಬೇರೆಯಾಗಿದ್ದರೂ ಇವೆಲ್ಲ ಒಂದೇ ಬಗೆಯ ಅಲೆಗಳಾಗಿವೆ. ಅಲೆಗಳ ತರಂಗದೂರದ ವ್ಯತ್ಯಾಸವೇ ಹಲವು ರಶ್ಮಿಗಳ ಗುಣಗಳ ವೈವಿಧ್ಯಕ್ಕೆ ಕಾರಣ. ಅತಿ ಹ್ರಸ್ವತರಂಗದೂರದ ರಶ್ಮಿಪುಂಜಗಳು ಗ್ಯಾಮ ರಶ್ಮಿಪುಂಜಗಳಾಗಿದ್ದು, ಅತಿ ದೀರ್ಘ ತರಂಗಮಾನದವು ರೇಡಿಯೋ ರಶ್ಮಿಪುಂಜಗಳಾಗಿರುತ್ತವೆ. ಈ ಎರಡು ತುದಿಗಳ ನಡುವೆ ಎಕ್ಸ್-ಕಿರಣ, ಅತಿನೇರಿಳೆ ವಿಕಿರಣ, ದೃಷ್ಟಿಗೋಚರ ಬೆಳಕು, ಅತಿರಕ್ತವಿಕಿರಣ, ರೇಡಿಯೋ ಅಲೆಗಳು ಕ್ರಮವಾಗಿ ಬರುತ್ತವೆ.[2]
ಅತಿಗೆಂಪು ವಿಕಿರಣದ ತರಂಗಾಂತರವು ಗೋಚರ ಬೆಳಕಿನ ತರಂಗಾಂತರಕ್ಕಿಂತ ದೀರ್ಘವಾಗಿದೆ (ಮತ್ತು ಆವರ್ತನವು ಕಡಿಮೆ), ಆದರೆ ಟೆರಾ ಹರ್ಟ್ಜ್ ಸೂಕ್ಷ್ಮ ತರಂಗಗಳ ವಿಕಿರಣಕ್ಕಿಂತಲೂ ಕಡಿಮೆಯಾಗಿರುತ್ತದೆ (ಮತ್ತು ಆವರ್ತನವು ಹೆಚ್ಚು). ಸಮುದ್ರಮಟ್ಟದಲ್ಲಿ ಪ್ರಖರವಾದ ಸೂರ್ಯನ ಬೆಳಕು ಪ್ರತಿ ಒಂದು ಚದರ ಕಿಲೋಮಿಟರ್ ವ್ಯಾಪ್ತಿಯಲ್ಲಿ ೧ ಕಿಲೋ ವ್ಯಾಟ್ ಪೂರೈಸುತ್ತದೆ. ಇದರಲ್ಲಿ ೫೨೭ ವ್ಯಾಟ್ ಇನ್ಫ್ರಾರೆಡ್ ವಿಕಿರಣ ಆಗಿರುತ್ತದೆ, ೪೪೫ ವ್ಯಾಟ್ ಗೋಚರ ಬೆಳಕಾಗಿದ್ದು, ಮತ್ತು ೩೨ ವ್ಯಾಟ್ ಅತಿನೆರಳೆ ವಿಕಿರಣವಾಗಿರುತ್ತದೆ.[3]
ಅತಿರಕ್ತರಶ್ಮಿಪುಂಜ ಚರ್ಮದ ಮೇಲೆ ಬಿದ್ದಾಗ ಶಾಖದ ಅನುಭವವುನ್ನುಂಟುಮಾಡುತ್ತದೆ. ದೃಷ್ಟಿಗೋಚರ ರಶ್ಮಿಗಳಿಗೆ ಇರುವ ಗುಣಗಳೆಲ್ಲವೂ ಅತಿರಕ್ತ ರಶ್ಮಿಗಳಿಗೂ ಇರುತ್ತವೆ; ಆದರೆ ಪ್ರಮಾಣದಲ್ಲಿ ಮಾತ್ರ ವ್ಯತ್ಯಾಸವಿರುತ್ತದೆ. ಇದರ ಚಲಿಸುವ ವೇಗವೂ ಬೆಳಕಿನ ವೇಗದಷ್ಟೇ. ಅಂದರೆ 3x1010ಸೆಂ.ಮೀ./ಸೆ. ಈ ಕಿರಣಗಳೂ ಕೆಲವು ಪಾರಕ ವಸ್ತುಗಳ ಮೂಲಕ ಹಾಯಬಲ್ಲುವು. ಅಪಾರಕ ವಸ್ತುಗಳು ಇವನ್ನು ಪ್ರತಿಫಲಿಸುತ್ತವೆ. ಆದರೆ ಬೆಳಕಿಗೆ ಪಾರಕವಾದ ವಸ್ತುಗಳು ಅತಿರಕ್ತರಶ್ಮಿಪುಂಜಕ್ಕೆ ಅಪಾರಕವಾಗಿಯೂ ಬೆಳಕಿಗೆ ಅಪಾರಕವಾದ ವಸ್ತುಗಳು ಅತಿರಕ್ತರಶ್ಮಿಪುಂಜಕ್ಕೆ ಪಾರಕವಾಗಿಯೂ ಇರುವುದೂ ಉಂಟು.