ಅಕ್ಕಿಯು ಒಂದು ಏಕದಳ ಸಸ್ಯವಾದಆರೈಝಾ ಸಟೀವಾದ ಬೀಜ. ಒಂದು ಧಾನ್ಯವಾಗಿ ವಿಶ್ವದ ಮಾನವ ಜನಸಂಖ್ಯೆಯ ದೊಡ್ಡ ಭಾಗಕ್ಕೆ ಅದು ಅತ್ಯಂತ ಪ್ರಮುಖವಾದ ಅಗತ್ಯದ ಆಹಾರ ವಾಗಿದೆ, ವಿಶೇಷವಾಗಿ ಭಾರತದ ಕರ್ನಾಟಕ, ಕೇರಳ,ಆಂದ್ರಪ್ರದೇಶಗಳಲ್ಲಿ ಏಷ್ಯಾ, ದಕ್ಷಿಣ ಏಷ್ಯಾ, ದಕ್ಷಿಣಪೂರ್ವ ಏಷ್ಯಾ, ಮಧ್ಯಪ್ರಾಚ್ಯ, ಲ್ಯಾಟಿನ್ ಅಮೇರಿಕ, ಮತ್ತು ವೆಸ್ಟ್ ಇಂಡೀಸ್ನಲ್ಲಿ. ಅದು ಮೆಕ್ಕೆ ಜೋಳದ ನಂತರ ವಿಶ್ವದ ಎರಡನೇ ಅತಿ ಹೆಚ್ಚು ಉತ್ಪಾದನೆಯಾಗುವ ಧಾನ್ಯವಾಗಿದೆ.
Quick Facts ಪೌಷ್ಟಿಕಾಂಶದ ಮೌಲ್ಯ ಶೇಕಡವಾರು 100 g (3.5 oz), ಆಹಾರ ಚೈತನ್ಯ ...
ಅಕ್ಕಿ, white, long-grain, regular, unenriched, cooked without salt
ಅಕ್ಕಿ[1]ಯು ಪ್ರಪಂಚದ ಮೂರರಲ್ಲೊಂದು ಪಾಲು ಜನರ ಮುಖ್ಯ ಆಹಾರ (ರೈಸ್). ಪಕ್ವ ಮಾಡಿದ ಅಕ್ಕಿಯನ್ನು ಅನ್ನವೆನ್ನುತ್ತಾರೆ. ಕೂಳು ಕನ್ನಡ ಪದ. ಸಾಮಾನ್ಯವಾಗಿ ಯಂತ್ರಗಳ ಮೂಲಕ ಭತ್ತದಿಂದ ಸಿಪ್ಪೆಯನ್ನು ಬೇರ್ಪಡಿಸಿ ಬರುವ ಕಾಳನ್ನು ಚೆನ್ನಾಗಿ ಪಾಲಿಷ್ ಮಾಡಿದಾಗ ಬಿಳಿಯ ಹೊಳೆಯುವ ಅಕ್ಕಿ ಸಿಗುತ್ತದೆ. ಪಾಲಿಷ್ ಮಾಡಿದ ಅಕ್ಕಿ ತಿನ್ನಲು ಹೆಚ್ಚು ಹಿತಕರವಾಗಿದ್ದರೂ ಪಾಲಿಷ್ ಮಾಡದ ಮಬ್ಬು ಬಣ್ಣದ ಕೊಟ್ಟಣದ ಅಕ್ಕಿಯೇ ನಿಜವಾಗಿ ಹೆಚ್ಚು ಪೌಷ್ಟಿಕ ಆಹಾರ.
ಹಿಂದೆ ಹಳ್ಳಿಗಳವರೆಲ್ಲ ಹೀಗೆ ಕೈಯಿಂದ ಕುಟ್ಟಿದ ಅಕ್ಕಿಯನ್ನೇ ಬಳಸುತ್ತಿದ್ದರು. ಅಕ್ಕಿಯ ಮೂಗು (ಭ್ರೂಣ) ಮತ್ತು ಮೇಲಿನ ತೆಳುಪೊರೆಯ ತೌಡಿನಲ್ಲಿ ಬಿ.ಕಾಂಪ್ಲೆಕ್ಸ್[2] ಮೊದಲಾದ ಉತ್ತಮ ಅನ್ನಾಂಗಗಳಿವೆ. ಬತ್ತವನ್ನು ಬೇಯಿಸಿ ತಯಾರಿಸಿದ ಕುತುಬಲಕ್ಕಿ ಅಥವಾ ಕುಸುಬಲಕ್ಕಿ ಬಹು ಜನಪ್ರಿಯವಾಗಿದೆ. ಇದು ಪಾಲಿಷ್ ಆದ ಅಕ್ಕಿಗಿಂತ ಉತ್ತಮ.
ಪ್ರಾಚೀನ ಕಾಲದ ಬಡ ಜನರು ಅಕ್ಕಿಯನ್ನು ವರ್ಷಕ್ಕೆ ಒಂದೆರಡು ಬಾರಿ, ಅದೂ ಹಬ್ಬ ಹರಿದಿನಗಳಲ್ಲಿ ಮಾತ್ರ ಬಳಸುತ್ತಿದ್ದರು. ಸಂಕ್ರಾಂತಿಯ ಹಬ್ಬದಿಂದಲೇ ಅಕ್ಕಿಯ ಬಳಕೆ ಆರಂಭವಾಗುತ್ತದೆ. ಅಕ್ಕಿಯಲ್ಲಿ ಮುಖ್ಯವಾಗಿ ಬೆಳ್ತಕ್ಕಿ, ಕುಸುಬಲಕ್ಕಿ, ನುಚ್ಚಕ್ಕಿ ಎಂದು ಮೂರು ಪ್ರಧಾನ ವಿಭಾಗಗಳಿವೆ. ದೋಸೆಯಿಂದ ಹಿಡಿದು ಕರಿದ ತಿಂಡಿಗಳವರೆಗೂ ಅಕ್ಕಿ ಬಳಕೆ ಕಂಡು ಬರುತ್ತದೆ.
ಅಕ್ಕಿಯಲ್ಲಿ ಮಾಡುವಂತಹ ಬಗೆ ಬಗೆ ಖಾದ್ಯ-ಅಡುಗೆಗಳನ್ನು ಬಹುಶ: ಬೇರಾವುದೇ ಧಾನ್ಯಗಳಲ್ಲೂ ಮಾಡಲಾಗುವುದಿಲ್ಲ. ಅಕ್ಕಿಯ ಬಳಕೆಯ ಸುತ್ತ ಇರುವ ಆಚರಣೆಗಳಲ್ಲಿ ನಂಬಿಕೆಗಳು ಬಹಳ ಮುಖ್ಯ. ಗೌತಮನು ಇಡೀ ಮಾನವ ಜನಾಂಗವನ್ನು ಹತ್ತು ಭಾಗ ಮಾಡುವಾಗ ಅಕ್ಕಿಗೆ ಎರಡನೇ ಸ್ಥಾವನ್ನು ಕೊಟ್ಟಿದ್ದಾನೆ. ಶುಭಸಮಾರಂಭಗಳಲ್ಲಿ ಅದರಲ್ಲೂ ವಿವಾಹಕ್ಕೆ ಸಂಬಂಧ ಪಟ್ಟ ಕೆಲಸ ಕಾರ್ಯಗಳಲ್ಲಿ ಅಕ್ಕಿ ಪ್ರಮುಖ ಪಾತ್ರ ವಹಿಸುತ್ತದೆ.
ನಿಶ್ಚಿತಾರ್ಥ ಅಥವ ಒಪ್ಪಂದಶಾಸ್ತ್ರದಿಂದಲೇ ಅಕ್ಕಿಯ ಬಳಕೆ ಆರಂಭವಾಗುತ್ತದೆ. ಅಕ್ಕಿಶಾಸ್ತ್ರದ ಸಂದರ್ಭದಲ್ಲಿ ವಧುವಿನ ಮಡಿಲಿಗೆ ಸೇರಕ್ಕಿ, ಬೆಲ್ಲ,ಕೊಬ್ಬರಿ, ಹುರಿಗಡಲೆಗಳಿಂದ ಮಡಿಲು ತುಂಬಿ ಸೋಗ್ಲು ಕಟ್ಟುತ್ತಾರೆ. ಹರಸುವಾಗ ಅಕ್ಷತೆಯ ರೂಪದಲ್ಲೂ ಅಕ್ಕಿಯನ್ನ ಬಳಸಿ, ಅಕ್ಷತೆಯನ್ನು ವಧು-ವರರ ತಲೆಯ ಮೇಲೆ ಹಾಕಿ ಶುಭವನ್ನು ಹಾರೈಸುವರು.
ಮದುಮಗಳು ತವರಿಂದ ಹೊರಬರುವ ಸಂದರ್ಭದಲ್ಲಿ, ಅವಳ ತೌರು ಮನೆಯೊಳಗೆ ಅಪ್ಪ,ಅಣ್ಣ-ತಮ್ಮ, ಬಂಧು-ಬಳಗದವರನ್ನು ಕೂರಿಸಿ ಅವರ ತಲೆಯ ಮೇಲೆ ಮದುಮಗಳ ಕೈಯಿಂದ ಮೂರು ಬೊಗಸೆ ಅಕ್ಕಿಯನ್ನು ಎರಚುವಾಗ, ಮೂರು ಬಾರಿ ಆಕೆ "ನಮ್ಮಪ್ಪನ ಮನೆ ಹಾಲುಕ್ಕುವಂತೆ ಉಕ್ಕಲಿ"ಎಂದು ಹಾರೈಸುತ್ತಾ ಅಕ್ಕಿಯನ್ನು ಅವರ ಮೇಲೇರಚಿ ದು:ಖದಿಂದ ಕಣ್ತುಂಬಿ ಕೊಳ್ಳುತ್ತಾಳೆ.
ಧಾರೆಯಾದ ಬಳಿಕ ಮನೆದೇವರನ್ನು ತಂದ ನೀರಿನಲ್ಲಿ ಅಕ್ಕಿಯನ್ನು ನೆನೆಹಾಕಿ ಬೆಲ್ಲದನ್ನ ಮಾಡಿ ಬಂಧು-ಬಳಗದವರಿಗೆ ಹಂಚುವ ಪರಿಪಾಠವಿದೆ. ಹೊಸದಾಗಿ ಅತ್ತೆ ಮನೆ ಪ್ರವೇಶಿಸುವ ಸೊಸೆ ತಲೆಬಾಗಿಲ ಹೊಸ್ತಿಲಿನ ಮೇಲೆ ಅಕ್ಕಿ,ಬೆಲ್ಲವನ್ನಿಟ್ಟ ಸೇರನ್ನು ತನ್ನ ಬಲಗಾಲಿನಿಂದ ಒದ್ದು ಮನೆಯನ್ನು ಪ್ರವೇಶಿಸುತ್ತಾಳೆ. ಇದಕ್ಕೆ "ಪಡಿಯಕ್ಕಿ" ಇಡುವ ಶಾಸ್ತ್ರ ಎನ್ನುತ್ತಾರೆ.
ಸ್ತ್ರೀ ಗರ್ಭಿಣಿಯಾದಾಗ ಅವಳ ಬಸಿರೊಸಗೆಯ ಸಮಯದಲ್ಲಿ ಮಡಿಲಕ್ಕಿಶಾಸ್ತ್ರ ಮಾಡುವರು. ವ್ಯಕ್ತಿಯು ಸತ್ತಾಗ ಅವನ/ಳ ಬಾಯಿಗೆ ಅಕ್ಕಿ ತುಂಬುತ್ತಾರೆ. ಹೀಗೆ ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಅಕ್ಕಿ ಮನುಷ್ಯರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಇಂದು ಅಕ್ಕಿ ವಿಶ್ವದಾದ್ಯಂತ ಪ್ರಚಲಿತದಲ್ಲಿರುವ ಪ್ರಸಿದ್ದ ಧಾನ್ಯ.
ಅಕ್ಕಿಯಲ್ಲಿ ಪಿಷ್ಟ ಪದಾರ್ಥವೇ (ಕಾರ್ಬೊಹೈಡ್ರೇಟ್) ಹೆಚ್ಚು. ಪ್ರೋಟೀನು ಮತ್ತು ಕೊಬ್ಬು ತೀರ ಕಡಿಮೆ. ಮಾಂಸ, ಎಣ್ಣೆ, ಬೆಣ್ಣೆ, ಹಾಲು, ಬೇಳೆಕಾಳು ಮತ್ತು ತರಕಾರಿಗಳೊಂದಿಗೆ ಸೇರಿದಾಗ ಒಳ್ಳೆಯ ಆಹಾರವಾಗಬಲ್ಲುದು. ಅಕ್ಕಿಯಿಂದ ಕೋಡುಬಳೆ, ಚಕ್ಕುಲಿ,[3]ದೋಸೆ, ಇಡ್ಲಿ, ರೊಟ್ಟಿ,[4][5] ಹಪ್ಪಳ, ಸಂಡಿಗೆ ಮೊದಲಾದ ರುಚಿಕರವಾದ ತಿಂಡಿಗಳನ್ನು ತಯಾರಿಸಿ ಬಳಸಲಾಗುತ್ತಿದೆ. ನೇರವಾಗಿ ಚಿತ್ರಾನ್ನ, ಪುಳಿಯೊಗರೆ, ಪೊಂಗಲು ಮೊದಲಾದುವನ್ನು ಮಾಡುತ್ತಾರೆ.
ಅಕ್ಕಿಯ ಬೇರೆ ರೂಪಗಳಾದ ಅವಲಕ್ಕಿ, ಪುರಿ, ಅರಳುಗಳೂ ಜನಪ್ರಿಯವಾಗಿವೆ. ಇದರ ನುಚ್ಚನ್ನು ದನಗಳಿಗೆ ಹಾಕುತ್ತಾರೆ. ಅಕ್ಕಚ್ಚು ಅವುಗಳಿಗೆ ಬಹು ಪ್ರಿಯವಾದ ಪಾನೀಯ, ತೌಡಂತೂ ಕರೆಯುವ ದನಕ್ಕೆ ಅಗತ್ಯವಾದ ಮೇವು ಅಕ್ಕಿ[6]ಯಿಂದ ಮದ್ಯವನ್ನು ತಯಾರಿಸುವ ವಾಡಿಕೆ ಹಿಂದಿನಿಂದಲೂ ಪ್ರಚಾರದಲ್ಲಿದೆ. ಜಪಾನಿನಲ್ಲಿ ಈಗಲೂ ಅಕ್ಕಿಯ ಮದ್ಯ (ಸಾಕೆ) ತಯಾರಿಸುತ್ತಾರೆ. ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಅಕ್ಕಿಯ ಬಳಕೆ ಬಹಳ ಹೆಚ್ಚು. (ನೋಡಿ-ಭತ್ತ).