From Wikipedia, the free encyclopedia
ಲಂಗ್ ಫಿಶ್ ಎಂದರೆ ಡಿಪ್ನಾಯ್ ಕುಟುಂಬಕ್ಕೆ ಸೇರಿರುವ ಮೀನುಗಳ ಸಾಮಾನ್ಯ ನಾಮ.[೧] ಫುಪ್ಫಸ ಮೀನು ಎಂದೂ ಕರೆಯಲ್ಪಡುತ್ತದೆ. ಕಿವಿರುಗಳ ಜೊತೆಗೆ ಶ್ವಾಸಕೋಶಗಳೂ ಇರುವುದು ಈ ಮೀನುಗಳ ವೈಶಿಷ್ಟ್ಯ. ಕೆಲವು ಲಕ್ಷಣಗಳಲ್ಲಿ ಇವು ಉಭಯ ಜೀವಿಗಳನ್ನು ಹೋಲುತ್ತವೆ. ಹಲವಾರು ಕಾರಣಗಳಿಂದ ಇವು ಇತರ ಮೀನುಗಳಿಗಿಂತ ಭಿನ್ನ. ಶ್ವಾಸಕೋಶಗಳು, ಮರಿಗಳಲ್ಲಿರುವ ಹೊರಕಿವಿರುಗಳು, ಶ್ವಾಸಾಪಧಮನಿ ಹಾಗೂ ಅಭಿಧಮನಿಗಳು, ಬಹುಕಣ ಚರ್ಮಗ್ರಂಥಿಗಳು, ಗರ್ಭಕಟ್ಟಿದ ಅಂಡದ ರೂಪ ಹಾಗೂ ಅದರ ಬೆಳೆವಣಿಗೆ, ಇವೆಲ್ಲವೂ ಉಭಯ ಜೀವಿಗಳಲ್ಲಿ ಕಾಣುವ ಲಕ್ಷಣಗಳು. ಹಾಗೆಯೇ ಬೇರೆ ಮೀನುಗಳಲ್ಲಿರುವ ಈಜುರೆಕ್ಕೆಗಳು, ಹುರುಪೆಗಳು, ಕಿವಿರುಗಳು, ಪಾರ್ಶ್ವ ಸಂವೇದನಾ ರೇಖೆಗಳು ಇವುಗಳಲ್ಲೂ ಇವೆ.
ಲಂಗ್ ಫಿಶ್ Temporal range: | |
---|---|
Queensland lungfish | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಕಾರ್ಡೇಟಾ |
ಏಕಮೂಲ ವರ್ಗ: | ಸಾರ್ಕೊಟೆರಿಜೀ |
ಏಕಮೂಲ ವರ್ಗ: | ರೈಪಿಡಿಸ್ಟಿಯಾ |
ಏಕಮೂಲ ವರ್ಗ: | ಡಿಪ್ನೋಮೊರ್ಫಾ Ahlberg, 1991 |
ವರ್ಗ: | ಡಿಪ್ನಾಯ್ J. P. Müller, 1844 |
Living families | |
Fossil taxa, see text |
ಈ ಮೀನುಗಳು ಡಿವೋನಿಯನ್ನ ಕೊನೆಯ ಭಾಗದಲ್ಲಿ ಕಾಣಿಸಿಕೊಂಡುವು. ಪರ್ಮಿಯನ್ ಹಾಗೂ ಟ್ರಯಾಸ್ಸಿಕ್ನಲ್ಲಿ (ಸು.19,00,00,000 –22,50,00,000 ವರ್ಷಗಳ ಹಿಂದೆ) ಅಸಂಖ್ಯವಾಗಿದ್ದುವು. ಕ್ರಮೇಣ ಇವುಗಳ ಸಂಖ್ಯೆ ಇಳಿಯಿತು. ಈಗ ಭೂಮಿಯಲ್ಲಿ ಇವುಗಳ ಆರು ಪ್ರಭೇದಗಳು ಮಾತ್ರ ಇವೆ. ಇವು ಸಾಮಾನ್ಯವಾಗಿ ನದೀ ವಾಸಿಗಳು.[೨]
ಫುಪ್ಫುಸ ಮೀನುಗಳು ಇತರ ಮೀನುಗಳಿಗೆ ಹೋಲಿಸಿದರೆ ದೊಡ್ಡ ಗಾತ್ರದವು; ಸುಮಾರು 1.2 ಮೀಟರ್ಗಳಿಂದ 2 ಮೀಟರ್ಗಳಷ್ಟು ಉದ್ದ ಬೆಳೆಯುತ್ತವೆ. ಕಠಿಣ ಚರ್ಮಿಗಳು, ಮೃದ್ವಂಗಿಗಳು, ಜಲಕೀಟಗಳು, ಹುಳುಗಳು ಮುಂತಾದ ಅಕಶೇರುಕಗಳೇ ಇವುಗಳ ಆಹಾರ. ಕೆಲವೊಮ್ಮೆ ಕೊಳೆತ ಸಸ್ಯಗಳನ್ನೂ ತಿನ್ನುವುದುಂಟು. ಆಹಾರವನ್ನು ಭಾರಿ ಪ್ರಮಾಣದಲ್ಲಿ ತಿನ್ನುತ್ತವೆ. ಜಗಿಯಲು ಸಹಾಯಕವಾಗುವಂತೆ ದೊಡ್ಡ ದಂತಫಲಕಗಳಿವೆ.
ಚರ್ಮದ ಮೇಲೆ ಚಕ್ರಜ ಹುರುಪೆಗಳ ಹೊದಿಕೆಯಿದೆ. ಇತರ ಮೀನುಗಳಲ್ಲಿರುವಂತೆಯೇ ಒಂದೊಂದು ಜೊತೆ ಭುಜದ ಮತ್ತು ಸೊಂಟದ ಈಜುರೆಕ್ಕೆಗಳಿವೆ. ಆದರೆ ಬೆನ್ನಿನ ಈಜುರೆಕ್ಕೆಯಿಲ್ಲ. ಬಾಲದ ಈಜುರೆಕ್ಕೆ ಅರ್ಧಚಂದ್ರಾಕಾರವಾಗಿ ಕೊನೆಗೊಳ್ಳುತ್ತದೆ.
ಸಂತಾನೋತ್ಪತ್ತಿ ಸಾಧಾರಣವಾಗಿ ಮಳೆಗಾಲದಲ್ಲಿ ಆಗುತ್ತದೆ. ಪ್ರೋಟೋಪ್ಟರಸ್ ಎಂಬುದು ನದಿಯ ತಳಭಾಗದಲ್ಲಿ ಸಣ್ಣಗುಂಡಿಯನ್ನು ತೋಡಿ ಮೊಟ್ಟೆಗಳನ್ನಿಡುತ್ತದೆ. ಲೆಪಿಡೋಸೈರನ್ ಮಣ್ಣಿನಲ್ಲಿ ಲಂಬವಾದ ಗೂಡನ್ನು ಕೊರೆದು ಅದರಲ್ಲಿ ಮೊಟ್ಟೆಗಳನ್ನಿಡುತ್ತದೆ. ಆದರೆ ನಿಯೊಸೆ ರೊಡೋಡಸ್ ಗೂಡು ಕೊರೆಯುವುದಿಲ್ಲ. ಅದು ತನ್ನ ಮೊಟ್ಟೆಗಳನ್ನು ಜಲಸಸ್ಯಗಳ ಮಧ್ಯೆ ಇಡುತ್ತದೆ. ಗಂಡು ಮೀನು ಈ ಮೊಟ್ಟೆಗಳನ್ನೂ ತದನಂತರ ಮರಿಗಳನ್ನೂ ಕಾಪಾಡುತ್ತದೆ. ಗಂಡು ಲೆಪಿಡೋಸೈರನ್ನ ವಿಶೇಷತೆಯೇನೆಂದರೆ, ಸಂತಾನೋತ್ಪತ್ತಿಯ ಸಮಯದಲ್ಲಿ, ಅದರ ಸೊಂಟದ ಈಜುರೆಕ್ಕೆಯ ಮೇಲೆ ಸೂಕ್ಷ್ಮ ರಕ್ತನಾಳಗಳಿರುವ ಕುಚ್ಚುಗಳು ಬೆಳೆಯುತ್ತವೆ. ಇವುಗಳು ಬೆಳೆಯುತ್ತಿರುವ ಮರಿಗಳ ಸುತ್ತಲೂ ಆಕ್ಸಿಜನ್ನನ್ನು ಬಿಡುಗಡೆ ಮಾಡುತ್ತವೆ.[೩]
ಗ್ರೀಷ್ಮನಿದ್ರೆ ಅಥವಾ ಗ್ರೀಷ್ಮನಿಶ್ಚೇತನ ಫುಪ್ಫುಸ ಮೀನುಗಳಲ್ಲಿನ ಇನ್ನೊಂದು ವಿಶೇಷತೆ. ನದಿಯ ನೀರು ಬತ್ತಿದಾಗ ಅವು ಮಣ್ಣಿನೊಳಗೆ ಬಿಲವನ್ನು ಕೊರೆಯುತ್ತವೆ. ಪುನಃ ನೀರಿನ ಮಟ್ಟ ಏರುವ ತನಕವೂ ಬಿಲದಲ್ಲಿಯೇ ಕಾಲ ಕಳೆಯುತ್ತವೆ. ಈ ಸಮಯದಲ್ಲಿ, ಸ್ನಾಯುಗಳಲ್ಲಿ ಸಂಗ್ರಹಿಸಿರುವ ಆಹಾರವನ್ನೇ ತಮ್ಮೆಲ್ಲ ಜೈವಿಕ ಕ್ರಿಯೆಗಳಿಗೆ ಉಪಯೋಗಿಸಿಕೊಳ್ಳುತ್ತವೆ. ಅಷ್ಟಲ್ಲದೆ, ಈ ವೇಳೆ ಉತ್ಪತ್ತಿಯಾಗುವ ಯೂರಿಯವನ್ನು ಕೂಡ ಅವುಗಳ ಮೂತ್ರಪಿಂಡಗಳು ರಕ್ತದಿಂದ ಸೋಸಿ ಸಂಗ್ರಹಿಸಿಡುತ್ತವೆ. ಗ್ರೀಷ್ಮನಿದ್ರೆ ಕಳೆದ ಕೆಲವೇ ಗಂಟೆಗಳೊಳಗೆ ಈ ವಿಷಕಾರಿ ಯೂರಿಯವನ್ನು ದೇಹದಿಂದ ಹೊರಹಾಕುತ್ತವೆ. ಗ್ರೀಷ್ಮನಿದ್ರೆಯ ಸಮಯದಲ್ಲಿ ಸಹಜವಾಗಿಯೇ ದೇಹದ ತೂಕವು ಕಡಿಮೆಯಾಗುತ್ತದೆ. ಗ್ರೀಷ್ಮನಿದ್ರೆಯ ತರುವಾಯ ಎರಡು ತಿಂಗಳೊಳಗೆ ತಮ್ಮ ತೂಕವನ್ನು ಸರಿದೂಗಿಸಿಕೊಳ್ಳತ್ತವೆ.
ಫುಪ್ಫುಸ ಮೀನುಗಳು ನೀರು ಮತ್ತು ನೇರ ಗಾಳಿಯ ಮೂಲಕ ನಡೆಯುವ ಉಸಿರಾಟ ಕ್ರಿಯೆಯ ನಡುವಿನ ಅವಸ್ಥೆಯನ್ನು ಪ್ರತಿನಿಧಿಸುತ್ತವೆ. ಮೀನು ಹಾಗೂ ಉಭಯ ಜೀವಿಗಳೆರಡರ ಲಕ್ಷಣಗಳನ್ನೂ ಹೊಂದಿರುವ ಇವು ಬಹುಶಃ ವಿಕಾಸಗೊಂಡು ಮುಂದೆ ಉಭಯ ಜೀವಿಗಳ ಉಗಮಕ್ಕೆ ಕಾರಣವಾಗಿರಬಹುದು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.