From Wikipedia, the free encyclopedia
ವಿಲಿಯಂ ಹೆನ್ರಿ "ಬಿಲ್" ಗೇಟ್ಸ್ III (ಅಕ್ಟೋಬರ್ 28, 1955ರಲ್ಲಿ ಜನನ)[೧] ರವರು ಅಮೆರಿಕದ ಪ್ರಭಾವಿ ಉದ್ಯಮಿ , ಪರೋಪಕಾರಿ ಮತ್ತು ಪಾಲ್ ಅಲೆನ್ ಜೊತೆಗೂಡಿ ತಾವೇ ಸ್ಥಾಪಿಸಿದ ಮೈಕ್ರೋಸಾಫ್ಟ್ ಎಂಬ ಸಾಫ್ಟ್ವೇರ್ ಕಂಪನಿಯ ಅಧ್ಯಕ್ಷ.[೨] ಇವರು ವಿಶ್ವದ ಅತಿದೊಡ್ಡ ಸಿರಿವಂತರಲ್ಲಿ ಒಬ್ಬರೆಂಬ ಸ್ಥಾನವನ್ನು ಹಲವು ವರ್ಷಗಳಿಂದ ಸ್ಥಿರವಾಗಿ ಉಳಿಸಿಕೊಂಡು ಬಂದಿದ್ದಾರೆ[೩] ಮತ್ತು ಒಟ್ಟಾರೆಯಾಗಿ 2009 ರವರೆಗಿನ ವಿಶ್ವದ ಅತಿದೊಡ್ಡ ಸಿರಿವಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.[೪]
ಬಿಲ್ ಗೇಟ್ಸ್ | |
---|---|
Born | |
Alma mater | ಹಾರ್ವರ್ಡ್ ವಿಶ್ವವಿದ್ಯಾಲಯ(ಪದವಿ ಮೊಟಕುಗೊಳಿಸಿದ್ದು - 1975) |
Occupation(s) | ಮೈಕ್ರೋಸಾಫ್ಟ್ ಅಧ್ಯಕ್ಷ ಬಿಲ್ & ಮೆಲಿಂದಾ ಗೇಟ್ಸ್ ಪ್ರತಿಷ್ಠಾನದ ಉಪಾಧ್ಯಕ್ಷ |
Spouse | ಮೆಲಿಂದಾ ಗೇಟ್ಸ್ (1994-೨೦೨೧-೦೫-೦೩) |
Children | ಜೆನಿಫರ್ ಕ್ಯಾಥರೀನ್ ಗೇಟ್ಸ್ (ಹು.1996) ರೋರಿ ಜಾನ್ ಗೇಟ್ಸ್ (ಹು.1999) ಫೋಬ್ ಅಡೆಲ್ ಗೇಟ್ಸ್(ಹು.2002) |
Website | ಬಿಲ್ ಗೇಟ್ಸ್ |
Signature | |
ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿನ ತಮ್ಮ ವೃತ್ತಿಜೀವನದಲ್ಲಿ, CEO ಹಾಗೂ ಮುಖ್ಯ ಸಾಫ್ಟ್ವೇರ್ ವಿನ್ಯಾಸಕನಂತಹ ಉನ್ನತ ಸ್ಥಾನಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಕಂಪನಿಯ ಸಾಮಾನ್ಯ ಸ್ಟಾಕ್ನ ಪೈಕಿ ಶೇ 8ಕ್ಕಿಂತ ಹೆಚ್ಚಿನ ಷೇರುಗಳನ್ನು ಹೊಂದಿರುವ ಮೈಕ್ರೋಸಾಫ್ಟ್ನ ಅತಿಡೊಡ್ಡ ಏಕವ್ಯಕ್ತಿ ಷೇರುದಾರರೆನಿಸಿಕೊಂಡಿದ್ದಾರೆ.[೫] ಹಲವಾರು ಪುಸ್ತಕಗಳಿಗೆ ಅವರು ಲೇಖಕ ಇಲ್ಲವೇ ಸಹ-ಲೇಖಕರಾಗಿದ್ದಾರೆ.
ಪರ್ಸನಲ್ ಕಂಪ್ಯೂಟರ್ ಕ್ರಾಂತಿಯ ವಿಶ್ವಪ್ರಸಿದ್ಧ ಉದ್ಯಮಿಗಳಲ್ಲಿ ಬಿಲ್ ಗೇಟ್ಸ್ ಒಬ್ಬರು.ಹಲವರು ಇವರನ್ನು ಮೆಚ್ಚಿಕೊಂಡಿದ್ದಾರಾದರೂ, ಇವರ ವ್ಯಾಪಾರಿ ಕಾರ್ಯತಂತ್ರಗಳು ಸ್ಪರ್ಧಾಕ್ಮತೆಯ-ವಿರೋಧಿ ಎಂದು ಉದ್ಯಮದೊಳಗಿನ ಬಹಳಷ್ಟು ಮಂದಿ ಟೀಕಿಸುತ್ತಾರೆ. ಈ ಅಭಿಪ್ರಾಯವನ್ನು ಕೆಲವೊಂದು ಪ್ರಕರಣಗಳಲ್ಲಿ ನ್ಯಾಯಾಲಯಗಳು ಎತ್ತಿ ಹಿಡಿದಿವೆ ಮೈಕ್ರೋಸಾಫ್ಟ್ನ ಕುರಿತಾದ ಟೀಕೆಯನ್ನು ನೋಡಿ).[೬][೭]
ತಮ್ಮ ವೃತ್ತಿಜೀವನದ ನಂತರದ ಘಟ್ಟಗಳಲ್ಲಿ, ಬಿಲ್ & ಮೆಲಿಂಡ ಗೇಟ್ಸ್ ಪ್ರತಿಷ್ಠಾನದ ಮೂಲಕ ಹಲವು ದತ್ತಿ ಪ್ರತಿಷ್ಠಾನಗಳಿಗೆ ಮತ್ತು ವೈಜ್ಞಾನಿಕ ಸಂಶೋಧನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಧನ ಸಹಾಯ ಮಾಡುವ ಮೂಲಕ ಹಲವು ಪರೋಪಕಾರಿ ಸಾಹಸಗಳಲ್ಲಿ ಗೇಟ್ಸ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
2000ರ ಜನವರಿಯಲ್ಲಿ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಯಿಂದ ಕೆಳಗಿಳಿದರು. ಇದರ ನಂತರ ಕೇವಲ ಅಧ್ಯಕ್ಷರಾಗಿ ಉಳಿದ ಇವರು ಮುಖ್ಯ ಸಾಫ್ಟ್ವೇರ್ ವಿನ್ಯಾಸಕ ಎಂಬ ನೂತನ ಹುದ್ದೆಯನ್ನು ಸೃಷ್ಟಿಸಿದರು. ತಾವು ಮೈಕ್ರೋಸಾಫ್ಟ್ನ ಪೂರ್ಣಕಾಲಿಕ ಹುದ್ದೆಯಿಂದ ಅರೆಕಾಲಿಕ ಕೆಲಸದಲ್ಲಿ ತೊಡಗಿಕೊಳ್ಳುವುದಾಗಿ ಹಾಗೂ ಬಿಲ್ & ಮೆಲಿಂಡ ಗೇಟ್ಸ್ ಪ್ರತಿಷ್ಠಾನದಲ್ಲಿ ತಮ್ಮನ್ನು ಪೂರ್ಣಕಾಲಿಕವಾಗಿ ತೊಡಗಿಸಿಕೊಳ್ಳುವುದಾಗಿ 2006ರ ಜೂನ್ನಲ್ಲಿ ಗೇಟ್ಸ್ ಪ್ರಕಟಿಸಿದರು. ಇವರು ಕ್ರಮೇಣವಾಗಿ ತಮ್ಮ ಜವಾಬ್ದಾರಿಗಳನ್ನು ಮುಖ್ಯ ಸಾಫ್ಟ್ವೇರ್ ವಿನ್ಯಾಸಕರಾಗಿದ್ದ ರೇ ಓಝೀಹಾಗೂ ಸಂಶೋಧನೆ ಮತ್ತು ಕಾರ್ಯತಂತ್ರಗಳ ಮುಖ್ಯಾಧಿಕಾರಿಯಾದ್ದ ಕ್ರೇಗ್ ಮುಂಡೀಯವರಿಗೆ ವರ್ಗಾಯಿಸಿದರು. 2008ರ ಜೂನ್ 27 ಮೈಕ್ರೋಸಾಫ್ಟ್ನಲ್ಲಿನ ಬಿಲ್ ಗೇಟ್ಸ ತಮ್ಮ ಪೂರ್ಣಕಾಲಿಕ ದುಡಿಮೆಗೆ ವಿದಾಯ ಹೇಳಿದರು. ಈಗ ಅವರು ಮೈಕ್ರೋಸಾಫ್ಟ್ನ ಅಕಾರ್ಯಕಾರಿ ಅಧ್ಯಕ್ಷರಾಗಷ್ಟೇ ಉಳಿದಿದ್ದಾರೆ.
ಇಂಗ್ಲಿಷ್, ದಲ್ಬೈಒದ್ ಜರ್ಮನ್, ಐರಿಷ್, ಸ್ಕಾಟಿಷ್ ತಲೆಮಾರಿನ ವಿಲಿಯಂ ಎಚ್. ಗೇಟ್ಸ್, Sr. ಮತ್ತು ಮೇರಿ ಮ್ಯಾಕ್ಸ್ವೆಲ್ ಗೇಟ್ಸ್ ದಂಪತಿಗಳ ಮಗನಾಗಿ ವಾಷಿಂಗ್ಟನ್ನ ಸಿಯಾಟಲ್ನಲ್ಲಿ ಗೇಟ್ಸ್ ಜನಿಸಿದರು.[೮][೯] ಇವರದು ಮೇಲ್ಮಧ್ಯಮ ವರ್ಗದ ಕುಟುಂಬ; ಇವರ ತಂದೆ ಪ್ರಖ್ಯಾತ ವಕೀಲರಾಗಿದ್ದರು ಮತ್ತು ಇವರ ತಾಯಿ ಫಸ್ಟ್ ಇಂಟರ್ಸ್ಟೇಟ್ ಬ್ಯಾಂಕ್ಸಿಸ್ಟಮ್ ಮತ್ತು ಯುನೈಟೆಡ್ ವೇ ಸಂಸ್ಥೆಗಳ ನಿರ್ದೇಶಕರ ಮಂಡಳಿಯಲ್ಲೊಬ್ಬರಾಗಿ ಸೇವೆ ಸಲ್ಲಿಸಿದ್ದರು. ಆಕೆಯ ತಂದೆ ಜೆ. ಡಬ್ಲ್ಯು. ಮ್ಯಾಕ್ಸ್ವೆಲ್, ನ್ಯಾಷನಲ್ ಬ್ಯಾಂಕ್ನ ಅಧ್ಯಕ್ಷರಾಗಿದ್ದರು. ಗೇಟ್ಸ್ಗೆ ಕ್ರಿಸ್ಟಿ (ಕ್ರಿಸ್ಟಿಯಾನ್ನೆ) ಎಂಬ ಹೆಸರಿನ ಒಬ್ಬರು ಅಕ್ಕ ಮತ್ತು ಲಿಬ್ಬಿ ಎಂಬ ಹೆಸರಿನ ಒಬ್ಬರು ತಂಗಿ ಇದ್ದಾರೆ. ಇವರು ತಮ್ಮ ಕುಟುಂಬದಲ್ಲಿನ ಗೇಟ್ಸ್ ಹೆಸರಿನ ನಾಲ್ಕನೇ ವ್ಯಕ್ತಿಯಾಗಿದ್ದರೂ ಸಹ, ವಿಲಿಯಂ ಗೇಟ್ಸ್ III ಅಥವಾ "ಟ್ರೇ" ಎಂದೇ ಅವರನ್ನು ಕರೆಯಲಾಗುತ್ತಿತ್ತು. ಏಕೆಂದರೆ ಅವರ ತಂದೆ ತಮ್ಮದೇ ಹೆಸರಿನ ಮುಂದಿದ್ದ III ಎಂಬ ಉತ್ತರ ಪ್ರತ್ಯಯವನ್ನು ಕೈಬಿಟ್ಟಿದ್ದರು.[೧೦] ಇವರು ಬಾಲ್ಯದಲ್ಲಿದ್ದಾಗ ತಮ್ಮ ಮಗ ಕಾನೂನು ಕ್ಷೇತ್ರದಲ್ಲಿ ವೃತ್ತಿಜೀವನ ನಡೆಸಬೇಕೆಂಬುದು ಗೇಟ್ಸ್ ಪೋಷಕರ ಬಯಕೆಯಾಗಿತ್ತು.[೧೧]
ಇವರು ತಮ್ಮ 13ನೇ ವಯಸ್ಸಿನಲ್ಲಿ ಲೇಕ್ಸೈಡ್ ಸ್ಕೂಲ್ ಎಂಬ ಒಂದು ಮೀಸಲು ಪ್ರಾಥಮಿಕ ಶಾಲೆಗೆ ದಾಖಲಾದರು[೧೨]. ಇವರು ಎಂಟನೇ ತರಗತಿಯಲ್ಲಿದ್ದಾಗ ಶಾಲೆಯ ಮದರ್ಸ್ ಕ್ಲಬ್, ಲೇಕ್ಸೈಡ್ ಕೊಕ್ಕ್ಗ್ಕ್ಗುಜರಿ ಮಾರಾಟದಿಂದ ಬಂದ ಆದಾಯವನ್ನು ಶಾಲೆಯ ಮಕ್ಕಳಿಗೆ ASR-33 ಟೆಲಿಪ್ರಿಂಟರ್ ಸಾಧನ ಮತ್ತು ಜನರಲ್ ಎಲೆಕ್ಟ್ರಿಕ್(GE) ಕಂಪ್ಯೂಟರ್ನ, ಕಂಪ್ಯೂಟರ್ ಸಮಯದ ಒಂದು ವಿಭಾಗವನ್ನು ಕೊಳ್ಳಲು ಬಳಸಿಕೊಂಡಿತು.[೧೩] ಗೇಟ್ಸ್ BASICನಲ್ಲಿ GE ಸಿಸ್ಟಮ್ನ್ನು ಪ್ರೋಗ್ಯ್ರಾಮ್ ಮಾಡಲು ಆಸಕ್ತಿ ವಹಿಸಿದರು. ಇದನ್ನು ಸಾಧಿಸಲು ಇವರಿಗೆ ಗಣಿತ ತರಗತಿಗಳಿಂದ ವಿಯಾಯಿತಿ ದೊರೆಯಿತು. ಇದೇ ಯಂತ್ರದ ಮೇಲೆ ಗೇಟ್ಸ್ ತಮ್ಮ ಮೊದಲ ಕಂಪ್ಯೂಟರ್ ಪ್ರೊಗ್ರಾಮ್ ಅನ್ನು ಬರೆದರು. ಇದು ಟಿಕ್-ಟ್ಯಾಕ್-ಟೋ ಎಂಬ ವಿಶಿಷ್ಟ ಚೌಕದಾಟದ ಅಳವಡಿಕೆಯಾಗಿದ್ದು, ಕಂಪ್ಯೂಟರ್ಗೆ ಎದುರಾಗಿ ಕುಳಿತು ಬಳಕೆದಾರರು ಆಟಗಳನ್ನಾಡಲು ಇದು ಅವಕಾಶ ಒದಗಿತು. ಈ ಯಂತ್ರದಿಂದ ಮತ್ತು ತಂತ್ರಾಂಶದ ಸಂಕೇತಗಳನ್ನು (ಸಾಫ್ಟ್ವೇರ್ ಕೋಡ್ಗಳನ್ನು) ಎಲ್ಲ ಸಮಯದಲ್ಲೂ ಕರಾರುವಾಕ್ಕಾಗಿ ಕಾರ್ಯರೂಪಕ್ಕೆ ತರುವ ಇದರ ಕಾರ್ಯಕ್ಷಮತೆಯ ಪರಿಯಿಂದ ಗೇಟ್ಸ್ರವರು ಮೋಡಿಗೊಳಗಾಗಿದ್ದರು. ತನ್ನ ವಿಚಾರ ಮಂಥನದಿಂದ ಆ ಕ್ಷಣಕ್ಕೆ ಹಿಂದಕ್ಕೆ ಬಂದ ಅವರು ಆ ಕುರಿತು ವರ್ಣಿಸುತ್ತಾ, "ಈ ಯಂತ್ರದಲ್ಲಿ ಅಚ್ಚುಕಟ್ಟುತನದಿಂದ ಕೂಡಿರುವಂಥಾದ್ದೇನೋ ಇತ್ತು" ಎಂದು ಉದ್ಗರಿಸಿದರು.[೧೪] ಮದರ್ಸ್ ಕ್ಲಬ್ನ ದೇಣಿಗೆ ಖಾಲಿಯಾದ ಮೇಲೆ, ಗೇಟ್ಸ್ ಮತ್ತು ಇತರೆ ವಿದ್ಯಾರ್ಥಿಗಳು DEC [[ಪ್ರೋಗ್ಯ್ರಾಮ್ ಮಾಡಲಾದ ದತ್ತಾಂಶ ಸಂಸ್ಕಾರಕ |PDP]] ಮಿನಿಕಂಪ್ಯೂಟರ್ಗಳನ್ನು ಒಳಗೊಂಡಂತೆ ವಿವಿಧ ವಿನ್ಯಾಸದ ಕಂಪ್ಯೂಟರ್ಗಳಿಗೆ ಸಮಯವನ್ನು ವಿನಿಯೋಗಿಸುತ್ತಾ ಬಂದರು. ಈ ಸಿಸ್ಟಮ್ಗಳಲ್ಲೊಂದಾದ PDP-10, ಕಂಪ್ಯೂಟರ್ ಸೆಂಟರ್ ಕಾರ್ಪೊರೇಷನ್ (CCC)ಸಂಸ್ಥೆಗೆ ಸೇರಿತ್ತು. ಈ ಕಂಪನಿಯು ಲೇಕ್ಸೈಡ್ ಸ್ಕೂಲ್ನ ನಾಲ್ವರು ವಿದ್ಯಾರ್ಥಿಗಳಾದ ಗೇಟ್ಸ್, ಪಾಲ್ ಅಲೆನ್, ರಿಕ್ ವೀಲ್ಯಾಂಡ್, ಮತ್ತು ಕೆಂಟ್ ಇವಾನ್ಸ್ರವರ ಮೇಲೆ ಬೇಸಿಗೆಯ ಅವಧಿಗೆ ಬಹಿಷ್ಕಾರ ಹೇರಿತ್ತು. ಉಚಿತವಾದ ಕಂಪ್ಯೂಟರ್ ಕಾಲಾವಕಾಶವನ್ನು ಪಡೆಯಲು ಕಂಪ್ಯೂಟರ್ನಲ್ಲಿ ಆಪರೇಟಿಂಗ್ ಸಿಸ್ಟಂನಲ್ಲಿದ್ದ ನ್ಯೂನತೆಗಳ ಪ್ರಯೋಜನವನ್ನು ಪಡೆಯುತ್ತಿದ್ದ ಕಾರಣಕ್ಕಾಗಿ ಕಂಪನಿಯು ಅವರನ್ನು ಹಿಡಿದುಹಾಕಿದ ನಂತರ ಈ ಬಹಿಷ್ಕಾರವನ್ನು ಹೇರಿತ್ತು.[೧೫]
ನಿಷೇಧದ ಅವಧಿ ಕೊನೆಯಾಗುವ ಹೊತ್ತಿಗೆ, ತಮಗೆ ಬೇಕಿರುವ ಕಂಪ್ಯೂಟರ್ನ ಕಾಲಾವಕಾಶಕ್ಕೆ ಪ್ರತಿಯಾಗಿ CCCಯ ತಂತ್ರಾಂಶದಲ್ಲಿರುವ ನ್ಯೂನತೆಗಳನ್ನು ಕಂಡುಹಿಡಿದುಕೊಡುವ ಪ್ರಸ್ತಾವವನ್ನು ಈ ನಾಲ್ವರು ವಿದ್ಯಾರ್ಥಿಗಳು ಮುಂದಿಟ್ಟರು.
ಟೆಲಿಪ್ರಿಂಟರ್ ಮೂಲಕವಾಗಿ ಸಿಸ್ಟಮ್ ಅನ್ನು ಬಳಸುವುದಕ್ಕೆ ಬದಲು, CCCಯ ಕಚೇರಿಗಳಿಗೆ ತೆರಳಿದ ಗೇಟ್ಸ್, ಸಿಸ್ಟಮ್ನ್ನು ನಡೆಸುತ್ತಿದ್ದ ವಿವಿಧ ಪ್ರೋಗ್ರ್ಯಾಮ್ಗಳ ಮೂಲ ಸಂಕೇತಗಳನ್ನು (ಸೋರ್ಸ್ ಕೋಡ್) ಅಧ್ಯಯನ ಮಾಡಿದರು. ಈ ಪ್ರೋಗ್ರ್ಯಾಮ್ಗಳಲ್ಲಿ FORTRAN, LISP ಹಾಗೂ ಯಂತ್ರಭಾಷೆ (ಮೆಷೀನ್ ಲಾಂಗ್ವೇಜ್)ಯಲ್ಲಿನ ಪ್ರೋಗ್ರ್ಯಾಮ್ಗಳೂ ಸೇರಿದ್ದವು.
CCC ಸಂಸ್ಥೆಯೊಂದಿಗಿನ ಇವರ ಸಂಬಂಧವು ಕಂಪನಿ ಉದ್ಯಮದಿಂದ ಹೊರಗುಳಿಯುವವರೆಗೂ, ಅಂದರೆ, 1970ರವರೆಗೂ ಮುಂದುವರಿಯಿತು. ಇದರ ನಂತರದ ವರ್ಷದಲ್ಲಿ, ಇನ್ಫರ್ಮೇಷನ್ ಸೈನ್ಸಸ್ ಇಂಕ್ ಎಂಬ ಸಂಸ್ಥೆಯು ಲೇಕ್ಸೈಡ್ ಸ್ಕೂಲ್ನ ಈ ನಾಲ್ಕು ವಿದ್ಯಾರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಂಡು, COBOLನಲ್ಲಿ ಸಂಬಳದಾರರ ಪಟ್ಟಿಯ (ಪೇ ರೋಲ್) ಪ್ರೋಗ್ಯ್ರಾಮ್ ಒಂದನ್ನು ರಚಿಸಲು ಅವಕಾಶನೀಡುವುದರ ಜೊತೆಗೆ, ಕಂಪ್ಯೂಟರ್ ಕಾಲಾವಕಾಶ ಹಾಗೂ ರಾಯಧನವನ್ನೂ ಅವರಿಗೆ ನೀಡಿತು.ಪ್ರೋಗ್ರ್ಯಾಮ್ ಬರೆಯುವುದಕ್ಕೆ ಸಂಬಂಧಿಸಿದಂತೆ ಗೇಟ್ಸ್ ಹೊಂದಿದ್ದ ಸಾಮರ್ಥ್ಯವು ಸಂಸ್ಥೆಯ ಆಡಳಿತಗಾರರ ಅರಿವಿಗೆ ಬಂದನಂತರ, ತಮ್ಮ ಶಾಲೆಯ ತರಗತಿಗಳಲ್ಲಿನ ವಿದ್ಯಾರ್ಥಿಗಳನ್ನು ಪಟ್ಟಿಮಾಡುವುದಕ್ಕೆ ಗೇಟ್ಸ್ ಶಾಲೆಯ ಕಂಪ್ಯೂಟರ್ ಪ್ರೋಗ್ರ್ಯಾಮ್ನ್ನು ಬರೆದರು.ಬಹುತೇಕ ಹುಡುಗಿಯರೇ ತುಂಬಿದ್ದ ತರಗತಿಗಳಲ್ಲಿ ತಮ್ಮನ್ನು ಕೂರಿಸಲೆಂಬ ಉದ್ದೇಶದಿಂದ ಅವರು ಸಂಕೇತಗಳನ್ನು ಮಾರ್ಪಡಿಸಿದರು. ಈ ಕುರಿತು ಅವರು ನಂತರ ಮಾತಾಡುತ್ತಾ, "ನಾನು ಸುಸ್ಪಷ್ಟವಾಗಿ ಯಶಸ್ಸನ್ನು ಪ್ರದರ್ಶಿಸಿದ ಯಂತ್ರವೊಂದರಿಂದ ಒಲ್ಲದ ಮನಸ್ಸಿನಿಂದ ದೂರ ಸರಿಯಲು ತುಂಬಾ ಕಷ್ಟವಾಗಿತ್ತು" ಎಂದು ಅಭಿಪ್ರಾಯಪಟ್ಟರು.[೧೪] ತಮ್ಮ 17ನೇ ವಯಸ್ಸಿನಲ್ಲಿ ಗೇಟ್ಸ್, ಇಂಟೆಲ್ 8008 ಪ್ರೊಸೆಸರ್ ಅನ್ನು ಆಧರಿಸಿ ಟ್ರಾಫಿಕ್ ಕೌಂಟರ್ಗಳನ್ನು ರೂಪಿಸಲು ಸ್ನೇಹಿತ ಅಲೆನ್ ಜೊತೆ ಸೇರಿ ಟ್ರ್ಯಾಫ್-ಓ-ಡಾಟ ಎಂಬ ಹೊಸ ಸಾಹಸಕ್ಕೆ ಕೈಹಾಕಿದರು.[೧೬] 1973ರ ಆರಂಭಿಕ ದಿನಗಳಲ್ಲಿ U.S.ನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಕಾಂಗ್ರೆಸ್ಸಿನ ದೂತನಾಗಿ ಗೇಟ್ಸ್ ಸೇವೆ ಸಲ್ಲಿಸಿದರು.[೧೭]
ಗೇಟ್ಸ್ 1973ರಲ್ಲಿ ಲೇಕ್ಸೈಡ್ ಸ್ಕೂಲ್ನಿಂದ ಪದವಿ ಪಡೆದರು. ಇವರುSAT[೧೮] ಪರೀಕ್ಷೆಯಲ್ಲಿ 1600ಕ್ಕೆ 1590 ಅಂಕ ಗಳಿಸಿದರು. ತರುವಾಯ ಉನ್ನತ ವಿದ್ಯಾಭ್ಯಾಸಕ್ಕಾಗಿ 1973ರ ಅಂತ್ಯದ ವೇಳೆಗೆ ಹಾರ್ವರ್ಡ್ ಕಾಲೇಜ್ಗೆ ಸೇರಿದರು.[೧೯] 1990ರ ದಶಕದ ಮಧ್ಯ ಭಾಗಕ್ಕೂ ಮುಂಚೆ SAT ಪರೀಕ್ಷೆಯಲ್ಲಿ 1590 ಅಂಕ ಗಳಿಸಿದರೆ, ಅಂತಹವರ IQ ಅಂದಾಜು 170[೨೦] ಎಂದು ಭಾವಿಸಲಾಗಿತ್ತು. ಈ ಅಂಶ ಆಗಿನ ಮಾಧ್ಯಮಗಳಲ್ಲಿ ಆಗಿದಾಂಗ್ಗೆ ಪ್ರಕಟವಾಗುತ್ತಲೇ ಇತ್ತು.[೨೧] ಹಾರ್ವರ್ಡ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಗೇಟ್ಸ್, ಸ್ಟೀವ್ ಬಾಲ್ಮರ್ ಎಂಬ ಹೆಸರಿನ ತಮ್ಮ ಭವಿಷ್ಯದ ವ್ಯವಹಾರದ ಪಾಲುದಾರರನ್ನು ಭೇಟಿಯಾದರು. ಇವರೇ ಮುಂದೆ ಮೈಕ್ರೋಸಾಫ್ಟ್ನ CEO ಆಗಿ ನೇಮಕವಾದರು. ಕಂಪ್ಯೂಟರ್ ವಿಜ್ಞಾನಿ ಕ್ರಿಸ್ಟೋಸ್ ಪ್ಯಾಪಡಿಮಿಟ್ರಿಯೊ ಎಂಬುವವರರನ್ನೂ ಇದೇ ಹಾರ್ವರ್ಡ್ನಲ್ಲಿ ಭೇಟಿಯಾದರು. ಗೇಟ್ಸ್ ಮುಂದೆ ಪ್ಯಾನ್ಕೇಕ್ ಸಾರ್ಟಿಂಗ್ ಎಂದು ಹೇಳಲಾಗುವ ವಿಶಿಷ್ಟ ಸಮಸ್ಯಾ ಪರಿಹಾರಕ ಸೂತ್ರದ ಕುರಿತಾದ ಒಂದು ಪತ್ರಿಕೆಯಲ್ಲಿ ಇವರ ಜೊತೆಗೂಡಿ ಕೆಲಸ ಮಾಡಿದರು.[೨೨] ಇವರು ಹಾರ್ವರ್ಡ್ನಲ್ಲಿ[೨೩] ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಒಂದು ನಿಶ್ಚಿತವಾದ ಅಧ್ಯಯನದ ಯೋಜನೆಯನ್ನು ಹೊಂದಿರಲಿಲ್ಲ. ಅಲ್ಲದೆ ಶಾಲೆಯ ಕಂಪ್ಯೂಟರ್ಗಳನ್ನು ಬಳಸುವುದರಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಪಾಲ್ ಅಲೆನ್ರೊಂದಿಗೆ ಸಂಪರ್ಕ ಉಳಿಸಿಕೊಂಡಿದ್ದ ಗೇಟ್ಸ್, 1974ರ ಬೇಸಗೆಯಲ್ಲಿ ಹನಿವೆಲ್ನಲ್ಲಿ ಅವರನ್ನು ಸೇರಿಕೊಂಡರು.[೨೪] ಇದರ ನಂತರದ ವರ್ಷದಲ್ಲಿ ಇಂಟೆಲ್ 8080 CPU ಆಧಾರಿತ MITS ಆಲ್ಟೇರ್ 8800 ಬಿಡುಗಡೆಯಾಯಿತು. ಇದನ್ನು ನೋಡಿದ ಗೇಟ್ಸ್ ಮತ್ತು ಅಲೆನ್, ತಮ್ಮದೇ ಸ್ವಂತ ಕಂಪ್ಯೂಟರ್ ಸಾಫ್ಟ್ವೇರ್ ಕಂಪನಿಯನ್ನು ಸ್ಥಾಪಿಸಲು ಇದು ಸಕಾಲ ಎಂದು ತೀರ್ಮಾನಿಸಿದರು.[೨೫] ಈ ನಿರ್ಧಾರದ ಬಗ್ಗೆ ಗೇಟ್ಸ್ ತನ್ನ ಹೆತ್ತವರೊಂದಿಗೆ ಚರ್ಚಿಸಿದರು. ತನ್ನದೇ ಸಂಸ್ಥೆ ಸ್ಥಾಪಿಸುವ ವಿಚಾರದಲ್ಲಿ ಗೇಟ್ಸ್ ಅವರಿಗಿದ್ದ ಬಯಕೆಯನ್ನು ಕಣ್ಣಾರೆ ಕಂಡಿದ್ದ ಅವರು ತಮ್ಮ ಮಗನ ಕೆಲಸಕ್ಕೆ ಬೆಂಬಲ ಸೂಚಿಸಿದರು.[೨೩]
ಪಾಪುಲರ್ ಎಲೆಕ್ಟ್ರಾನಿಕ್ಸ್ ಪತ್ರಿಕೆಯು ತನ್ನ 1975ರ ಜನವರಿ ಸಂಚಿಕೆಯಲ್ಲಿ ಆಲ್ಟೇರ್ 8800 ಬಗ್ಗೆ ವಿವರವಾಗಿ ಬರೆದಿತ್ತು. ಇದನ್ನು ಓದಿದ ಗೇಟ್ಸ್, ಹೊಸ ಮೈಕ್ರೋಕಂಪ್ಯೂಟರ್ ಸೃಷ್ಟಿಸಿದ ಮೈಕ್ರೋ ಇನ್ಸ್ಟ್ರುಮೆಂಟೇಷನ್ ಅಂಡ್ ಟೆಲಿಮೆಟ್ರಿ ಸಿಸ್ಟಮ್ಸ್ (MITS) ಸಂಸ್ಥೆಯನ್ನು ಸಂಪರ್ಕಿಸಿ, ತಾವು ಮತ್ತು ತಮ್ಮ ಸ್ನೇಹಿತರು ಅದೇ ನೆಲೆಗಟ್ಟಿಗಾಗಿ BASIC ಇಂಟರ್ಪ್ರಿಟರ್ ಒಂದರ ಮೇಲೆ ಈಗಾಗಲೇ ಕೆಲಸ ಮಾಡಲು ಆರಂಭಿಸಿದ್ದುದನ್ನು ತಿಳಿಸಿದರು.[೨೬] ವಾಸ್ತವದಲ್ಲಿ ಗೇಟ್ಸ್ ಮತ್ತು ಅಲೆನ್ ಬಳಿ ಆಲ್ಟೇರ್ ಇರಲೇ ಇಲ್ಲ. ಜೊತೆಗೆ ಇದಕ್ಕಾಗಿ ಯಾವುದೇ ಸಂಕೇತವನ್ನೂ ಬರೆದಿರಲಿಲ್ಲ. MITSನ ಆಸಕ್ತಿಯನ್ನು ಅಳೆಯುವ ಉದ್ದೇಶದಿಂದಷ್ಟೇ ಅವರಿಬ್ಬರೂ ಈ ರೀತಿ ಹೇಳಿದ್ದರು. MITS ಅಧ್ಯಕ್ಷ ಎಡ್ ರಾಬರ್ಟ್ಸ್ ಇವರನ್ನು ಭೇಟಿ ಮಾಡಲು ಒಪ್ಪಿ ಪ್ರಯೋಗಾರ್ಥ ಪ್ರದರ್ಶನಕ್ಕಾಗಿ ಇವರನ್ನು ಆಹ್ವಾನಿಸಿದರು. ಕೆಲವು ವಾರಗಳ ನಂತರ ಇವರು ಮಿನಿಕಂಪ್ಯೂಟರ್ನಲ್ಲಿ ಚಾಲನೆಯಾಗುವ ಆಲ್ಟೇರ್ ಎಮ್ಯುಲೇಟರ್ ಎಂಬ ಸೂತ್ರವನ್ನು ಮತ್ತು ಇದರ ನಂತರ BASIC ಇಂಟರ್ಪ್ರಿಟರ್ ಅನ್ನು ಆಭಿವೃದ್ಧಿಪಡಿಸಿದರು. ಅಲ್ಬುಕರ್ಕ್ನಲ್ಲಿರುವ MITSನ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪ್ರಯೋಗಾರ್ಥ ಪ್ರದರ್ಶನದಲ್ಲಿ ಗೇಟ್ಸ್ಗೆ ಅಮೋಘ ಯಶಸ್ಸು ದೊರೆಯಿತಲ್ಲದೆ, ಇಂಟರ್ಪ್ರಿಟರ್ಗಳನ್ನು ಆಲ್ಟೇರ್ BASIC ಸ್ವರೂಪದಲ್ಲಿ ವಿತರಿಸುವ ಕುರಿತು MITSನೊಂದಿಗೆ ಒಡಂಬಡಿಕೆ ಏರ್ಪಟ್ಟಿತು. ಪಾಲ್ ಅಲೆನ್ ಅವರನ್ನು ಉದ್ಯೋಗಿಯಾಗಿ MITS ನೇಮಿಸಿಕೊಂಡಿತು.[೨೭] ಹಾಗೂ ಗೇಟ್ಸ್ ಅಲ್ಬುಕರ್ಕ್ನಲ್ಲಿನ MITS ಕಚೇರಿಯಲ್ಲಿ ಅಲೆನ್ನೊಂದಿಗೆ ಕೆಲಸ ಮಾಡಲು ಹಾರ್ವರ್ಡ್ನಿಂದ 1975ರ ನವೆಂಬರ್ನಲ್ಲಿ ಗೈರುಹಾಜರಿ ರಜೆಯನ್ನು ಪಡೆದರು. ಗೇಟ್ಸ್ ಮತ್ತು ಅಲೆನ್ ತಮ್ಮ ಪಾಲುದಾರಿಕೆಯನ್ನು "ಮೈಕ್ರೋ-ಸಾಫ್ಟ್" ಎಂದು ಹೆಸರಿಸಿ, ತಮ್ಮ ಮೊದಲ ಕಚೇರಿಯನ್ನು ಅಲ್ಬುಕರ್ಕ್ನಲ್ಲಿ ತೆರೆದರು.[೨೭] ಒಂದೇ ವರ್ಷದಲ್ಲಿ ಕಂಪನಿಯ ಹೆಸರಿನ ನಡುವೆ ಇದ್ದ ಅಡ್ಡಗೆರೆಯನ್ನು(-) ಕೈಬಿಡಲಾಯಿತು. ಅಲ್ಲದೆ 1976ರ ನವೆಂಬರ್ 25ರಂದು "ಮೈಕ್ರೋಸಾಫ್ಟ್" ಹೆಸರಿನ ವ್ಯಾಪಾರನಾಮವನ್ನು ಸೆಕ್ರೆಟರಿ ಆಫ್ ಸ್ಟೇಟ್ ಆಫ್ ನ್ಯೂ ಮೆಕ್ಸಿಕೋ ಕಚೇರಿಯಲ್ಲಿ ನೋಂದಾಯಿಸಲಾಯಿತು.[೨೭] ಇದಾದ ನಂತರ, ಅರ್ಧಕ್ಕೆ ನಿಲ್ಲಿಸಿದ್ದ ವ್ಯಾಸಂಗವನ್ನು ಪೂರ್ಣಗೊಳಿಸಲು ಗೇಟ್ಸ್ರವರು ಮತ್ತೆ ಹಾರ್ವರ್ಡ್ಗೆ ಹಿಂದಿರುಗಲೇ ಇಲ್ಲ.
ಕಂಪ್ಯೂಟರ್ ಹವ್ಯಾಸಿಗಳಲ್ಲಿ ಮೈಕ್ರೋಸಾಫ್ಟ್ನ BASIC ಸಾಕಷ್ಟು ಜನಪ್ರಿಯವಾಯಿತು. ಆದರೆ ಮಾರುಕಟ್ಟೆ ಮಾಡುವುದಕ್ಕೆ ಮುಂಚಿನ ನಕಲೊಂದು ಬಳಕೆದಾರರ ಮಧ್ಯೆ ಸೋರಿಕೆಯಾಗಿ, ಅನಧಿಕೃತ ರೀತಿಯಲ್ಲಿ ವ್ಯಾಪಕವಾಗಿ ವಿತರಣೆಯಾಗುತ್ತಿದೆ ಎಂಬುದನ್ನು ಗೇಟ್ಸ್ ಪತ್ತೆ ಹಚ್ಚಿದರು. 1976ರ ಫೆಬ್ರವರಿಯಲ್ಲಿ ಗೇಟ್ಸ್ MITS ಸುದ್ದಿಪತ್ರದಲ್ಲಿ ಹವ್ಯಾಸಿಗಳಿಗೊಂದು ಮುಕ್ತ ಪತ್ರ ವನ್ನು ಬರೆದರು. ಹಣ ಪಾವತಿಯಾಗದೆ MITS ಸಂಸ್ಥೆಯು ಸಾಫ್ಟ್ವೇರ್ನ ಉತ್ಪಾದನೆ, ವಿತರಣೆಯನ್ನು ಮುಂದುವರೆಸಲು ಸಾಧ್ಯವಿಲ್ಲ ಹಾಗೂ ಸಾಫ್ಟ್ವೇರ್ನ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಸಾಧ್ಯವಾಗುವುದಿಲ್ಲ ಎಂಬ ವಿಷಯವನ್ನು ಆ ಪತ್ರ ಒಳಗೊಂಡಿತ್ತು.[೨೮] ಈ ಮುಕ್ತ ಪತ್ರ ಅನೇಕ ಕಂಪ್ಯೂಟರ್ ಹವ್ಯಾಸಿಗಳ ನಡುವೆ ಅಪಖ್ಯಾತಿಗೆ ಗುರಿಯಾಯಿತು. ಆದರೆ ಸಾಫ್ಟ್ವೇರ್ ಅಭಿವೃದ್ಧಿ ಮಾಡುವವರು ತಮ್ಮ ಉತ್ಪನ್ನಗಳಿಗೆ ಸಲ್ಲಬೇಕಾದ ಪಾವತಿಯನ್ನು ಕೇಳುವ ಸಾಮರ್ಥ್ಯ ಹೊಂದಿರಬೇಕು ಎಂದು ಗೇಟ್ಸ್ ದೃಢವಾಗಿ ನಂಬಿದ್ದರು. ಮೈಕ್ರೋಸಾಫ್ಟ್ 1976ರ ಉತ್ತರಾರ್ಧದಲ್ಲಿ MITS ಕಂಪನಿಯಿಂದ ಹೊರಬಂದು ಸ್ವತಂತ್ರವಾಯಿತು. ಅಲ್ಲದೆ ವಿವಿಧ ಸಿಸ್ಟಮ್ಗಳಿಗೆ ಪ್ರೋಗ್ಯ್ರಾಮಿಂಗ್ ಭಾಷೆ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಮುಂದುವರಿಸಿತು.[೨೭] 1979ರ ಜನವರಿ 1ರಂದು ಅಲ್ಬುಕರ್ಕ್ನಿಂದ ವಾಷಿಂಗ್ಟನ್ನ ಬೆಲ್ಲೆವ್ಯೂ ನಗರದಲ್ಲಿನ ಹೊಸ ಕಚೇರಿಗೆ ಕಂಪನಿಯು ಸ್ಥಳಾಂತರಗೊಂಡಿತು.[೨೬]
ಮೈಕ್ರೋಸಾಫ್ಟ್ನ ಆರಂಭಿಕ ವರ್ಷಗಳಲ್ಲಿ ಕಂಪನಿಯ ವ್ಯವಹಾರಕ್ಕೆ ಸಂಬಂಧಿಸಿ ಎಲ್ಲ ಉದ್ಯೋಗಿಗಳೂ ವ್ಯಾಪಕ ಹೊಣೆಗಾರಿಕೆಯನ್ನು ಹೊಂದಿದ್ದರು.
ಸಾಫ್ಟ್ವೇರ್ ಸಂಕೇತಗಳನ್ನು ಬರೆಯುವ ಕೆಲಸವನ್ನು ಗೇಟ್ಸ್ ಮುಂದುವರಿಸಿದರಲ್ಲದೆ, ಕಂಪನಿಯ ವ್ಯವಹಾರದ ಮೇಲ್ವಿಚಾರಣೆಯನ್ನೂ ನೋಡಿಕೊಂಡರು. ಆರಂಭದ ಐದು ವರ್ಷಗಳಲ್ಲಿ ಕಂಪನಿ ಬರೆಯುವ ಎಲ್ಲ ಕೋಡ್ಗಳನ್ನು ಇವರೇ ಸ್ವತಃ ಪರೀಕ್ಷಿಸಿದರು. ಅಲ್ಲದೆ ಅಗತ್ಯ ಕಂಡುಬಂದಾಗಲೆಲ್ಲಾ ಅದರ ಕೆಲವು ಭಾಗಗಳನ್ನು ಮರು ರಚಿಸುತ್ತಿದ್ದರು.[೨೯]
1980ರಲ್ಲಿ IBM ಕಂಪನಿಯು ತನ್ನ ಮುಂಬರುವ IBM PC ಎಂಬ ಹೆಸರಿನ ಪರ್ಸನಲ್ ಕಂಪ್ಯೂಟರ್ಗೆ BASIC ಇಂಟರ್ಪ್ರಿಟರ್ ಬರೆದುಕೊಡುವಂತೆ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಪ್ರಸ್ತಾವನೆ ಸಲ್ಲಿಸಿತು. ತಮಗೆ ಒಂದು ಆಪರೇಟಿಂಗ್ ಸಿಸ್ಟಮ್ನ ಅಗತ್ಯವಿದೆ ಎಂದು IBMನ ಪ್ರತಿನಿಧಿಗಳು ಹೇಳಿದಾಗ, ಅಗಿನ ಕಾಲದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದ್ದ CP/M ಆಪರೇಟಿಂಗ್ ಸಿಸ್ಟಮ್ನ ತಯಾರಕರಾಗಿದ್ದ ಡಿಜಿಟಲ್ ರಿಸರ್ಚ್(DRI) ಕಂಪನಿಯ ಹೆಸರನ್ನು ಗೇಟ್ಸ್ ಸೂಚಿಸಿದರು.[೩೦] ಡಿಜಿಟಲ್ ರಿಸರ್ಚ್ ಕಂಪನಿಯೊಂದಿಗಿನ IBM ಮಾತುಕತೆಗಳು ನಿರೀಕ್ಷಿತ ಮಟ್ಟದಲ್ಲಿರದಿದ್ದುದರಿಂದ, ಪರವಾನಗಿಯ ಒಪ್ಪಂದವು ಅವರ ಕೈಗೆ ಸಿಗಲಿಲ್ಲ. IBM ಪ್ರತಿನಿಧಿಯಾಗಿದ್ದ ಜಾಕ್ ಸ್ಯಾಮ್ಸ್, ಗೇಟ್ಸ್ರೊಂದಿಗಿನ ತಮ್ಮ ಮುಂದಿನ ಭೇಟಿಯಲ್ಲಿ ಪರವಾನಗಿ ಪಡೆಯುವಲ್ಲಿನ ತೊಂದರೆಗಳನ್ನು ವಿವರಿಸಿ, ಸ್ವೀಕಾರಾರ್ಹ ಆಪರೇಟಿಂಗ್ ಸಿಸ್ಟಮ್ ಒಂದನ್ನು ಅಭಿವೃದ್ಧಿಪಡಿಸಿಕೊಡುವಂತೆ ಕೇಳಿಕೊಂಡರು.ಕೆಲವು ವಾರಗಳ ನಂತರ, ಗೇಟ್ಸ್ CP/Mಗೆ ಸಮಾನವಾಗಿದ್ದ 86-DOS (QDOS) ಎಂಬ ಆಪರೇಟಿಂಗ್ ಸಿಸ್ಟಮ್ ಒಂದನ್ನು ಬಳಸಿಕೊಳ್ಳಲು ಉದ್ದೇಶಿಸಿದರು. ಇದನ್ನು PCಯ ರೀತಿಯಲ್ಲೇ ಇದ್ದ ಯಂತ್ರಾಂಶವೊಂದಕ್ಕೆ ಒಂದಕ್ಕೆ ಸಿಯಾಟಲ್ ಕಂಪ್ಯೂಟರ್ ಪ್ರಾಡಕ್ಟ್ಸ್(SCP)ನ ಟಿಮ್ ಪೀಟರ್ಸನ್ ಎಂಬುವವರು ಅಭಿವೃದ್ಧಿಪಡಿಸಿದ್ದರು. SCP ಕಂಪನಿಯೊಂದಿಗೆ ಮೈಕ್ರೋಸಾಫ್ಟ್ ಒಪ್ಪಂದ ಮಾಡಿಕೊಂಡು, ಅವರ ಏಕೈಕ ಪರವಾನಗಿ ಏಜೆಂಟ್ ಆಯಿತು. ತದನಂತರ 86-DOSನ ಪೂರ್ಣ ಮಾಲೀಕತ್ವವನ್ನು ತಾನೇ ಪಡೆಯಿತು. PCಗೆ ಆಪರೇಟಿಂಗ್ ಸಿಸ್ಟಮ್ ಅನ್ನು ಅಳವಡಿಸಿದ ನಂತರ ಮೈಕ್ರೋಸಾಪ್ಟ್ ಅದನ್ನು IBMಗೆ PC-DOS ಎಂಬ ಹೆಸರಿನಲ್ಲಿ ವಿತರಣೆ ಮಾಡಿ, ಒಂದೇ ಸಲಕ್ಕೆ 50,000$ ಶುಲ್ಕವನ್ನು ಪಡೆದುಕೊಂಡಿತು. ಆದರೆ ಆಪರೇಟಿಂಗ್ ಸಿಸ್ಟಮ್ ಮೇಲಿನ ಹಕ್ಕುಸ್ವಾಮ್ಯವನ್ನು ಮಾತ್ರ ಗೇಟ್ಸ್ ಹಸ್ತಾಂತರ ಮಾಡಲಿಲ್ಲ. ಏಕೆಂದರೆ, ಇತರ ಯಂತ್ರಾಂಶ ಮಾರಾಟಗಾರರು IBM ಸಿಸ್ಟಮ್ ಅನ್ನು ಸ್ವತಃ ಹುಟ್ಟುಹಾಕಬಹುದು ಎಂಬ ನಂಬಿಕೆ ಗೇಟ್ಸ್ಗಿತ್ತು.[೩೧] ಅವರು ಅದನ್ನು ಸಾಧಿಸಿಯೇಬಿಟ್ಟರು ಮತ್ತು MS-DOSನ ಮಾರಾಟದಿಂದಾಗಿ ಮೈಕ್ರೋಸಾಫ್ಟ್ ಕಂಪನಿಯು ಐಟಿ ಉದ್ಯಮದ ದೈತ್ಯ ಸಂಸ್ಥೆಯಾಗಿ ಹೊರಹೊಮ್ಮಿತು.[೩೨]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.