ನಕ್ಷತ್ರಪುಂಜ
From Wikipedia, the free encyclopedia
ಆಧುನಿಕ ಖಗೋಳವಿಜ್ಞಾನದಲ್ಲಿ, ನಕ್ಷತ್ರಪುಂಜ ವೆಂಬುದು, ಅಂತರರಾಷ್ಟ್ರೀಯವಾಗಿ ನಿರ್ಣಯಿಸಲಾದ ಬಾನಿನ ಗೋಳದ ಅವಿಭಾಜ್ಯ ಅಂಗವಾಗಿದೆ. ಐತಿಹಾಸಿಕವಾಗಿ, ಪರಸ್ಪರ ಸನಿಹದಲ್ಲಿದ್ದ ನಕ್ಷತ್ರಗಳಿಂದ ರಚನೆಯಾದ ಸಮೂಹಗಳನ್ನು ಗುರುತಿಸಲು/ಉಲ್ಲೇಖಿಸಲು ಈ ಉಕ್ತಿಯನ್ನು ಬಳಸಲಾಗುತ್ತಿತ್ತು; ಈ ಪದ್ಧತಿ ಇಂದೂ ಚಾಲ್ತಿಯಲ್ಲಿದೆ.

ವ್ಯಾಖ್ಯಾನ
ಆಡುಭಾಷೆಯಲ್ಲಿ, ಆಕಾಶಕಾಯಗಳ, ಅದರಲ್ಲೂ ಸಾಮಾನ್ಯವಾಗಿ ನಕ್ಷತ್ರಗಳ ಸಮೂಹ ರಚಿಸುವ ನಿರ್ದಿಷ್ಟ ಆಕಾರವನ್ನು ನಕ್ಷತ್ರಪುಂಜ ಎನ್ನಲಾಗುತ್ತದೆ. ಚಾಲ್ತಿ ವ್ಯವಸ್ಥೆಯಲ್ಲಿ ಮುಖ್ಯವಾಗಿ, ನಕ್ಷತ್ರಪುಂಜಗಳನ್ನು ಆಕಾಶದಲ್ಲಿ ಆಕಾರಗಳಿಗಿಂತಲೂ ಹೆಚ್ಚಾಗಿ ಜಾಲದಂತಿರುವ ಖಂಡಗಳಾಗಿ ಪರಿಗಣಿಸಲಾಗುತ್ತದೆ. ಆದರೂ, ಖಗೋಳವಿಜ್ಞಾನಿಗಳು ನಕ್ಷತ್ರಪುಂಜ ಎಂಬ ಉಕ್ತಿಯನ್ನು ಇಂದಿಗೂ ಬಳಸುವರು. ಅಧಿಕೃತವಾಗಿ ನಕ್ಷತ್ರಪುಂಜ ಎಂದು ವಿಂಗಡಿಸಲಾಗಿರದ ನಕ್ಷತ್ರಗಳ ಸಮೂಹದ ಆಕಾರವನ್ನು ನಕ್ಷತ್ರ-ಗುಂಪು ಎನ್ನಲಾಗಿದೆ. ಬಿಗ್ ಡಿಪ್ಪರ್ (Big Dipper) ಎಂಬ ನಕ್ಷತ್ರ-ಗುಂಪು ಇದಕ್ಕೆ ಚಿರಪರಿಚಿತ ಉದಾಹರಣೆಯಾಗಿದೆ. ಈ ನಕ್ಷತ್ರ-ಗುಂಪು ಇನ್ನೂ ದೊಡ್ಡದಾದ ದೊಡ್ಡ ಕರಡಿ(Ursa Major)ಯ ಆಕೃತಿಯ ನಕ್ಷತ್ರಪುಂಜದ ಭಾಗ ಎಂದು ಪರಿಗಣಿಸಲಾದ ಕಾರಣ, ಅಂತರರಾಷ್ಟ್ರೀಯ ಖಗೋಳವೈಜ್ಞಾನಿಕ ಒಕ್ಕೂಟ (International Astronomical Union) (ಐಎಯು (IAU)) 'ಬಿಗ್ ಡಿಪ್ಪರ್' ಎಂಬ ಉಕ್ತಿಯನ್ನು ಬಳಸುತ್ತಿಲ್ಲ.
1922ರಲ್ಲಿ, ಬಾನಿನ ಗೋಳವನ್ನು 88 ಅಧಿಕೃತ ನಕ್ಷತ್ರಪುಂಜಗಳನ್ನಾಗಿ ವಿಭಾಗಿಸುವಲ್ಲಿ ಐಎಯು ಒಕ್ಕೂಟಕ್ಕೆ ಹೆನ್ರಿ ನೊರಿಸ್ ರಸೆಲ್ ನೆರವಾದರು.[೧] ಮಾದರಿಯಾಗಿ, ಈ ಅಧುನಿಕ ನಕ್ಷತ್ರಪುಂಜಗಳು 'ಒರಿಯಾನ್ (Orion)', 'ಲಿಯೊ (Leo)' ಮತ್ತು 'ಸ್ಕಾರ್ಪಿಯಸ್ (Scorpius)' ಎಂಬ ತಮ್ಮ ಗ್ರೆಕೊ-ರೋಮನ್ ಪೂರ್ವಜರ ಹೆಸರುಗಳನ್ನು ಹಂಚಿಕೊಂಡಿವೆ. ಆಕಾಶದಲ್ಲಿನ ಈ ಆಕೃತಿಗಳನ್ನು ಮೂಲತಃ ಒಂದು ಪೌರಾಣಿಕ ಘಟನೆ, ಜೀವಿ ಅಥವಾ ವ್ಯಕ್ತಿಯೊಂದಿಗೆ ಸಂಬಂಧಿಸಲಾಗಿತ್ತು. ಜೊತೆಗೆ, ದಿಕ್ಸೂಚಿಯ ಆವಿಷ್ಕಾರಕ್ಕೆ ಮುಂಚೆ, ಅಂದರೆ, ಸಂಶೋಧನೆಗಳ ಯುಗದಲ್ಲಿ, ನಕ್ಷತ್ರಪುಂಜಗಳ ಗುರುತಿಸಬಹುದಾದ ಆಕೃತಿಗಳ ಸೂಕ್ತ ವಿಂಗಡಣೆಯು, ನೆಲ ಅಥವಾ ಸಮುದ್ರದಲ್ಲಿ ಸಂಚರಿಸುವ ದೃಷ್ಟಿಯಿಂದ ಬಹಳ ಮುಖ್ಯ ಹಾಗೂ ಉಪಯುಕ್ತವಾಗಿತ್ತು. ಖಗೋಳವಿಜ್ಞಾನದ ತಾಂತ್ರಿಕ ಆಧುನೀಕರಣದಿಂದಾಗಿ, ಆಕೃತಿ-ಆಧಾರಿತ ನಕ್ಷತ್ರಪುಂಜ ನಾಮಕರಣ ವ್ಯವಸ್ಥೆಯಿಂದ ದೂರ ಸರಿದು, ಪ್ರದೇಶ-ಮಾಪನಾ ಆಧಾರಿತ ವ್ಯವಸ್ಥೆ ಆಯ್ದುಕೊಳ್ಳುವುದು ಬಹಳ ಮುಖ್ಯವಾಯಿತು. ಇದರಿಂದಾಗಿ ಹಲವು ಐತಿಹಾಸಿಕ ಆಕೃತಿಗಳ ಗುರುತಿಸುವಿಕೆಗಳು ಗತಕಾಲವಾದವು.[೨]
ಗಡಿರೇಖೆಗಳು
1930ರಲ್ಲಿ, ಯುಜೆನ್ ಡೆಲ್ಪೊರ್ಟ್, ಎಲ್ಲಾ 88 ಅಧಿಕೃತ ನಕ್ಷತ್ರಪುಂಜಗಳ ನಡುವಣ ಗಡಿರೇಖೆಗಳನ್ನು ಮೊದಲ ಬಾರಿಗೆ ಕಲ್ಪಿಸಿದರು. ಈ ಗಡಿಗಳು ಖಗೋಳ ರೇಖಾಂಶ (right ascension) ಮತ್ತು ದಿಕ್ಪಾತ (declination)ಗಳ ಉದ್ದನೆಯ ಹಾಗೂ ಅಡ್ಡ ರೇಖೆಗಳಿಗೆ ಹೊಂದಿಕೊಂಡಿರುತ್ತವೆ. ('ಖಗೋಳ ರೇಖಾಂಶ' ಎಂದರೆ ಯಾವುದೇ ಬಿಂದುವಿನ ಮೂಲಕ ಹಾದು ಹೋಗುವ ಹೊರಾವೃತ್ತ (ಖಗೋಲ ಧ್ರುವಗಳ ಮೂಲಕ ಹಾದು ಹೋಗುವ ಮಹಾವೃತ್ತ)ವೂ ಖಮಧ್ಯ ರೇಖೆಯೂ ಛೇದಿಸುವ ಬಿಂದುವು ಮೇಷ ಸಂಕ್ರಾಂತಿ ಬಿಂದುವಿನಿಂದ ಪೂರ್ವಕ್ಕೆ ಎಷ್ಟು ದೂರವಿದೆಯೋ ಆ ದೂರ. 'ದಿಕ್ಪಾತ' ಎಂದರೆ ಖಾಗೋಳಿಕ ಧ್ರುವಗಳ ಮೂಲಕ ಹಾದು ಹೋಗುವ ಮಹಾವೃತ್ತದ ಮೇಲೆ ಅಳೆಯಲಾಗುವ, ಆಕಾಶಕಾಯವೊಂದು ಖಾಗೋಳಿಕ ವಿಷುವದ್ ವೃತ್ತದಿಂದ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಇರುವ, ಕೋನಿಯ ದೂರ.) ಈ 88 ನಕ್ಷತ್ರಪುಂಜಗಳಲ್ಲಿ 37 ಉತ್ತರ ಗೋಳಾರ್ಧದಲ್ಲಿ ಹಾಗೂ 51 ದಕ್ಷಿಣ ಗೋಳಾರ್ಧದಲ್ಲಿವೆ. ಆದರೂ, ಯುಜೆನ್ ಬಳಸಿದ ದತ್ತಾಂಶ ಸಂಗ್ರಹವು B1875.0 ಕಾಲ (epoch)ದಷ್ಟು ಹಿಂದಿನದಾಗಿತ್ತು. ಆ ಕಾಲದಲ್ಲಿ ಬೆಂಜಮಿನ್ ಎ. ಗೌಲ್ಡ್ ಮೊದಲ ಬಾರಿಗೆ ಬಾನಿನ ಗೋಳದಲ್ಲಿ ಗಡಿಗಳನ್ನು ಕಲ್ಪಿಸುವ ಪ್ರಸ್ತಾಪ ಮುಂದಿಟ್ಟಿದ್ದರು. ಗೌಲ್ಡ್ ಅವರ ಈ ಪ್ರಸ್ತಾಪವನ್ನು ಆಧರಿಸಿ ಡೆಲ್ಪೊರ್ಟ್ ತಮ್ಮ ಕಾರ್ಯ ನಡೆಸಿದ್ದುಂಟು. ಇಷ್ಟು ಮುಂಚಿನ ಕಾಲದ ದಿನಾಂಕದ ಪರಿಣಾಮವಾಗಿ, ವಿಷುವತ್ತುಗಳ ಅಕ್ಷಭ್ರಮಣದಿಂದಾಗಿ, ಆಧುನಿಕ ನಕ್ಷತ್ರ ನಕ್ಷೆಯಲ್ಲಿರುವ ಗಡಿಗಳು (ಉದಾಹರಣೆಗೆ J2000 ಇಪಾಕ್) ಆಗಲೇ ಭಾಗಶಃ ಓರೆಯಾಗಿದ್ದು, ಇನ್ನೆಂದಿಗೂ ನಿಖರವಾಗಿ ಉದ್ದ ಅಥವಾ ಅಡ್ಡಲಾಗಿರದು. ಮುಂಬರುವ ಹಲವು ವರ್ಷ-ಶತಮಾನಗಳ ಕಾಲ ಇದರ ಪ್ರಭಾವವು ಹೆಚ್ಚುತ್ತದೆ.
ಸಾಮೀಪ್ಯ
ನಕ್ಷತ್ರಪುಂಜದಲ್ಲಿನ ನಕ್ಷತ್ರಗಳು ಪರಸ್ಪರ ಖಭೌತವೈಜ್ಞಾನಿಕ ಸಂಬಂಧ ಹೊಂದಿರುವುದು ಬಹಳ ಅಪರೂಪ. ಭೂಮಿಯಿಂದ ನೋಡಿದರೆ ಅವು ಪರಸ್ಪರ ಸನಿಹದಲ್ಲಿರುವಂತೆ ತೋರುತ್ತವೆ; ಬಹಳಷ್ಟು ಜ್ಯೋತಿರ್ವರ್ಷಗಳಷ್ಟು ದೂರ ಸ್ಥಿತವಾಗಿವೆಯೆಂಬುದನ್ನು ಮರೆಮಾಚುತ್ತವೆ. ಆದರೂ, ಇದಕ್ಕೆ ಕೆಲವು ಅಪವಾದಗಳಿವೆ: ದೊಡ್ಡ ಕರಡಿಯ ಆಕೃತಿಯಲ್ಲಿರುವ ನಕ್ಷತ್ರಪುಂಜವು ಬಹುಶಃ ಇಡಿಯಾಗಿ ಪರಸ್ಪರ ಸನಿಹದಲ್ಲಿರುವ ನಕ್ಷತ್ರಗಳಿಂದ ಕೂಡಿದೆ. ಈ ಸಂಗತಿಗೆ ದೊಡ್ಡ ಕರಡಿ ಚಲನಾ ಗುಂಪು ಸಮರೂಪ ಎನ್ನಲಾಗಿದೆ.
ವಿಶ್ವದಾದ್ಯಂತ ನಕ್ಷತ್ರಪುಂಜಗಳು
ಗ್ರೆಕೊ-ರೋಮನ್
ಪಾಶ್ಚಾತ್ಯ ಪ್ರಪಂಚದಲ್ಲಿ, ಉತ್ತರ ಗೋಳಾರ್ಧದ ಆಕಾಶವು ಪುರಾತನ ಗ್ರೀಕರು ನೀಡಿದ ವಿವರಣೆ ಆಧರಿಸಿ ನಕ್ಷತ್ರಪುಂಜಗಳಾಗಿ, ಸಾಂಪ್ರದಾಯಿಕವಾಗಿ ವಿಭಾಗಿಸಲಾಗಿದೆ. ನಕ್ಷತ್ರಪುಂಜಗಳೊಂದಿಗೆ ಸಂಬಂಧಿತ ಮೊದಲ ಪುರಾತನ ಗ್ರೀಕ್ ಕೃತಿಗಳು, ನಕ್ಷತ್ರ ಪೌರಾಣಿಕ ಕಥೆಗಳ ಗ್ರಂಥಗಳಾಗಿದ್ದವು. ಕ್ರಿಸ್ತಪೂರ್ವ ಸುಮಾರು ಎಂಟನೆಯ ಶತಮಾನದಲ್ಲಿ ಹೆಸಿಯೊಡ್ ರಚಿತ ಕವನವು ಇವುಗಳಲ್ಲಿ ಅತಿಪುರಾತನದ್ದಾಗಿದೆ. ಇದರಲ್ಲಿ ಕೇವಲ ತುಣುಕುಗಳು ಮಾತ್ರ ಉಳಿದುಕೊಂಡಿವೆ. ಅಲೆಕ್ಸಾಂಡರ್ ಕಾಲದ ನಂತರದ ಬರಹಗಾರ ಮಿಥ್ಯಾ-ಇರಾಟೊಸ್ಥಿನ್ಸ್ ಹಾಗೂ ಆರಂಭಕಾಲಿಕ ರೋಮನ್ ಬರಹಗಾರ ಶೈಲಿಯ ಮಿಥ್ಯಾ ಹೈಜಿನಸ್ ರಚಿಸಿದ ಕೃತಿಗಳು, ನಕ್ಷತ್ರಪುಂಜಗಳ ಪೌರಾಣಿಕ ಮೂಲಗಳಿಗೆ ಸಂಬಂಧಿಸಿವೆ.
ಕ್ರಿಸ್ತಶಕ ಎರಡನೆಯ ಶತಮಾನದಲ್ಲಿ, ಗ್ರೀಕ್ ಖಗೋಳವಿಜ್ಞಾನಿ ಟಾಲೆಮಿ, 'ಅಲ್ಮಾಗೆಸ್ಟ್ ' ಎಂಬ ತಮ್ಮ ಪ್ರಭಾವೀ ಕೃತಿಯಲ್ಲಿ, ನಕ್ಷತ್ರಪುಂಜಗಳ ಬಗೆಗೆ ಸುದೀರ್ಘ ವಿವರಣೆ ನೀಡಿದರು.
ಚೀನೀ ನಕ್ಷತ್ರಪುಂಜಗಳು
ಚೀನೀ ನಕ್ಷತ್ರಪುಂಜಗಳು ಪಾಶ್ಚಾತ್ಯ ನಕ್ಷತ್ರಪುಂಜಗಳಿಗಿಂತಲೂ ವಿಭಿನ್ನವಾಗಿವೆ. ಚೀನೀಯ ಪುರಾತನ ಖಗೋಳವಿಜ್ಞಾನದ ಸ್ವತಂತ್ರ ಬೆಳವಣಿಗೆಯೇ ಇದಕ್ಕೆ ಕಾರಣ. ಒಂದು ವ್ಯತ್ಯಾಸವೇನೆಂದರೆ, ಪಾಶ್ಚಾತ್ಯ ರಾಶಿಚಕ್ರ(zodiac)ದಲ್ಲಿನ 12 ನಕ್ಷತ್ರಪುಂಜಗಳಿಗೆ ಹೋಲಿಸಿದರೆ, ಚೀನೀ ರಾಶಿಚಕ್ರದಲ್ಲಿ 28 "ಕ್ಸಿಯು" (宿) ಅಥವಾ 'ಭವನಗಳು' (ಅಕ್ಷರಶಃ ಅನುವಾದ) ಇವೆ.
ಭಾರತೀಯ
ವೈದಿಕ ಜ್ಯೋತಿಷ್ಯಶಾಸ್ತ್ರದಲ್ಲಿ, ರಾಶಿಚಕ್ರದ 12 ನಕ್ಷತ್ರಪುಂಜಗಳನ್ನು ರಾಶಿ ಗಳು ಎನ್ನಲಾಗಿದೆ. ಅಂಡಾಕಾರದ ಖಗೋಲ ವೃತ್ತದಲ್ಲಿರುವ ಈ ಹನ್ನೆರಡೂ ರಾಶಿಗಳು, ಪಾಶ್ಚಾತ್ಯ ರಾಶಿ ಸಂಕೇತಗಳೊಂದಿಗೆ ನಿಕಟವಾಗಿ ಸಂಬಂಧಿತವಾಗಿವೆ.
ಆ 360 ಡಿಗ್ರಿಯ ಭಾರತೀಯ ರಾಶಿಚಕ್ರ(ಖಗೋಲ ಕ್ರಾಂತಿವೃತ್ತ)ವನ್ನು 27 ನಕ್ಷತ್ರಗಳ ವಿಭಾಗಗಳನ್ನಾಗಿ(13.33333=13 1/3ಡಿಗ್ರಿ)ವಿಂಗಡಿಸಲಾಗಿದೆ.
ಬ್ಯಾಬಿಲೊನೀಯ
ಗ್ರೀಕರಿಗೆ ತಿಳಿದಿರುವ ರಾಶಿಚಕ್ರದ ನಕ್ಷತ್ರಪುಂಜಗಳು ಮತ್ತು ಹಲವು ಇತರೆ ಅಂಶಗಳ ಮೂಲಗಳನ್ನು, ಮುಲ್. ಹಾಗೂ ಇತರೆ ಬ್ಯಾಬಿಲೊನೀಯ ಪಠ್ಯಗಳಲ್ಲಿ ಕಾಣಬಹುದಾಗಿದೆ. (ಮುಲ್.ಅಪಿನ್.ಎಕ್ಸ್. ಲಿಯೊ)
ಕರಿಮೋಡದಂತಹ ನಕ್ಷತ್ರಪುಂಜಗಳು

ಕರಿಮೋಡ ನಕ್ಷತ್ರಪುಂಜಗಳನ್ನು ಉತ್ತರ ಗೋಳಾರ್ಧಕ್ಕಿಂತಲೂ ಹೆಚ್ಚಾಗಿ ದಕ್ಷಿಣ ಗೋಳಾರ್ಧದ ಆಕಾಶದಲ್ಲಿ ಸುಸ್ಪಷ್ಟವಾಗಿ ಕಾಣಬಹುದಾಗಿದೆ. ಆಕಾಶಗಂಗೆ(Milky Way)ಯ [ಕ್ಷೀರ ಪಥ]ಮಧ್ಯಭಾಗವು ಭೂಮಿಯ ಮೇಲೆ ನೆರಳು ಮೂಡಿಸಿದಾಗ, ಭೂಮಿಯಿಂದ ಆಕಾಶಗಂಗೆಯಲ್ಲಿನ ಕಪ್ಪು ಮಚ್ಚೆಗಳು ಎದ್ದುಕಾಣುತ್ತವೆ. ಕೆಲವು ಸಂಸ್ಕೃತಿಗಳ ಪ್ರಕಾರ, ಈ ಮಚ್ಚೆಗಳು ಕೆಲವು ಆಕೃತಿಗಳಂತೆ ಕಾಣುತ್ತವೆ. ಇವುಗಳಿಗೆ ಅನುಗುಣವಾಗಿ, ಈ 'ಕರಿಮೋಡ ನಕ್ಷತ್ರಪುಂಜ'ಗಳಿಗೆ ಹೆಸರುಗಳನ್ನಿಡಲಾಗುತ್ತದೆ. ಇನ್ಕಾ ನಾಗರೀಕತೆಯ ಸದಸ್ಯರು ಆಕಾಶಗಂಗೆಯಲ್ಲಿ ವಿಭಿನ್ನ ಕಪ್ಪು ಭಾಗಗಳು ಅಥವಾ ಕಪ್ಪು ನೀಹಾರಿಕೆ(nebula)ಗಳನ್ನು ಗುರುತಿಸಿ, ಅವುಗಳ ಆಕಾರಗಳನ್ನು ಋತುವಾರು ಮಳೆಯೊಂದಿಗೆ ಸಂಬಂಧವಿದೆಯೆಂದು ನಿರ್ಣಯಿಸುತ್ತಿದ್ದರು.[೩] ಆಸ್ಟ್ರೇಲಿಯಾದ ಬುಡಕಟ್ಟು ಜನಾಂಗದ ಖಗೋಳವಿಜ್ಞಾನದಲ್ಲಿಯೂ ಸಹ, ಕಪ್ಪು ನೀಹಾರಿಕೆಗಳ ನಕ್ಷತ್ರಪುಂಜಗಳನ್ನು ವಿವರಿಸಲಾಗಿದೆ. ಇದರಲ್ಲಿ ಕೋಲ್‌ಸ್ಯಾಕ್‌ನಿಂದ ಉಂಟಾಗುವ ಆಕಾಶದಲ್ಲಿ ಎಮು (Emu in the sky) ನಕ್ಷತ್ರಪುಂಜವು ಬಹಳ ಚಿರಪರಿಚಿತ.
ಇವನ್ನೂ ಗಮನಿಸಿ
ಟೆಂಪ್ಲೇಟು:Portal box
- ಡೆಂಡೆರಾ ರಾಶಿಚಕ್ರ
- ಹಿಂದೆ ಚಾಲ್ತಿಯಲ್ಲಿದ್ದ ನಕ್ಷತ್ರಪುಂಜಗಳು
- ನಕ್ಷತ್ರಪುಂಜಗಳ ಪಟ್ಟಿ
- ದಿಗಂತ್ಯವ್ಯಾಪ್ತಿಯ ಕ್ರಮದಲ್ಲಿ ನಕ್ಷತ್ರಪುಂಜಗಳ ಪಟ್ಟಿ
- ನಕ್ಷತ್ರಪುಂಜಗಳ ಕ್ರಮವಾಗಿ ನಕ್ಷತ್ರಗಳ ಪಟ್ಟಿ
- ನಕ್ಷತ್ರಪುಂಜಗಳ ಇತಿಹಾಸ
- ಸಮತಲ ಗೋಲ
ನೋಡಿ
ಟಿಪ್ಪಣಿಗಳು
ಹೆಚ್ಚಿನ ಓದಿಗಾಗಿ
ಬಾಹ್ಯ ಕೊಂಡಿಗಳು
Wikiwand - on
Seamless Wikipedia browsing. On steroids.