ಒಂದು ಹಣ್ಣು From Wikipedia, the free encyclopedia
ಮಾವು ಉತ್ತರ ಆಮ್ರಾ(ಮ್ಯಾಂಗಿಫೆರ ಇಂಡಿಕ) ಉಷ್ಣವಲಯದಲ್ಲಿ ಪ್ರಪಂಚದೆಲ್ಲೆಡೆ ವ್ಯಾಪಕವಾಗಿ ಕಂಡು ಬರುವ ಮರ. ಇದರ ದಾರುವಿಗಿಂತ ಹಣ್ಣೇ ಪ್ರಸಿದ್ಧ. ಇದರ '೩೦'ಕ್ಕಿಂತಲೂ ಹೆಚ್ಚು ತಳಿಗಳು ಪ್ರಚಲಿತವಿದೆ. ಇದು ಸುಮಾರು ೪೦೦೦ ವರ್ಷಗಳಿಂದಲೂ ಭಾರತದ ವ್ಯವಸಾಯದಲ್ಲಿದ್ದು, ಸುಮಾರು ೧೭ ಮತ್ತು ೧೮ನೇ ಶತಮಾನದಲ್ಲಿ ಯುರೋಪ್ನ ಪ್ರವಾಸಿಗರು ಇದನ್ನು ಪಶ್ಚಿಮದ ಉಷ್ಣವಲಯ ದೇಶಗಳಲ್ಲಿ ಪ್ರಸರಿಸಿದರು.
ಮಾವು ಗೋಡಂಬಿ, ಕರಿಗೇರು, ಅಮಟೆ ಮುಂತಾದ ಉಪಯುಕ್ತ ಸಸ್ಯಗಳನ್ನು ಒಳಗೊಂಡಿರುವ ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ್ದು, ಇದರ ಸಸ್ಯಕುಲ ಮ್ಯಾಂಗಿಫೆರಾ ಆಗಿರುತ್ತದೆ. ಭಾರತದಲ್ಲಿ ವ್ಯಾಪಕವಾಗಿರುವ ತಳಿಯ ಸಸ್ಯನಾಮ ಮ್ಯಾಂಗಿಫೆರ ಇಂಡಿಕ ಆಗಿದೆ.[1]
ಸುಮಾರು 4000 ವರ್ಷಗಳಿಂದಲೂ ಭಾರತದಲ್ಲಿ ಮಾವಿನ ಬೇಸಾಯ ಇದೆ ಎನ್ನಲಾಗಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಮಾವು ಅಸ್ಸಾಮ್-ಬರ್ಮ-ಥಾಯ್ಲೆಂಡ್ ವಲಯದಲ್ಲಿ ಉಗಮಿಸಿತು.[2][3][4] ಈ ದೇಶಗಳ ಕಾಡುಗಳಲ್ಲಿ ಇಂದು ಜನಪ್ರಿಯವಾಗಿರುವ ಇಂಡಿಕ ಪ್ರಭೇದದ ಹಾಗೂ ಸಿಲ್ವೇಟಿಕ ಪ್ರಭೇದದ ಕಾಡು ಪ್ರರೂಪಗಳು ಕಾಣದೊರೆಯುತ್ತಿದ್ದು ಮಾವು ಇವೆರಡು ಪ್ರಭೇದಗಳ ನಡುವೆ ಸಂಭವಿಸಿತೆನ್ನಲಾದ ಸಹಜ ಸಂಕರದಿಂದ ಹುಟ್ಟಿದ್ದು ಎಂಬ ಅಭಿಪ್ರಾಯ ಇದೆ.
ಭಾರತಾದ್ಯಂತ, ಉಷ್ಣ ಹಾಗೂ ಉಪೋಷ್ಣ ವಲಯ ಬೆಟ್ಟಗಳ ಕಾಡುಗಳಲ್ಲಿ ಪ್ರಧಾನವಾಗಿ ಹಳ್ಳ ತೊರೆಗಳ ಸನಿಹದಲ್ಲಿ ಮಾವು ಕಾಡುಮರವಾಗಿ ಕಾಣದೊರೆಯುತ್ತದೆ. ಹಿಮಾಲಯ ಪರ್ವತ ಶ್ರೇಣಿಯ ತಪ್ಪಲು, ಪಶ್ಚಿಮ ಹಾಗೂ ಪೂರ್ವ ಘಟ್ಟಗಳು, ಮಧ್ಯಪ್ರದೇಶ, ಬಿಹಾರ, ಒರಿಸ್ಸ, ಅಸ್ಸಾಮ್ ಮತ್ತು ಅಂಡಮಾನ್ ದ್ವೀಪಗಳ ಕಾಡುಗಳಲ್ಲೂ ಇದು ಸಾಮಾನ್ಯ. ಅಲ್ಲದೆ ಮಾವಿನ ಮರವನ್ನು ತೋಪುಗಳಲ್ಲೂ ಮನೆಯ ಹಿತ್ತಲಿನಲ್ಲೂ ಕೃಷಿ ಜಮೀನಿನ ಅಂಚುಗಳಲ್ಲೂ ರಸ್ತೆಯ ಬದಿಗಳಲ್ಲೂ ಬೆಳೆಸುವುದೂ ಇದೆ.
ಹಣ್ಣು ಕೊಡುವ ಸಸ್ಯಗಳ ಬೇಸಾಯದ ಒಟ್ಟು ವಿಸ್ತೀರ್ಣದಲ್ಲಿ ಶೇಕಡಾ 60ರಷ್ಟು ಭಾಗ ಮಾವಿನ ಕೃಷಿಗೆ ವಿನಿಯೋಗವಾಗಿದೆ. (ಒಟ್ಟು 2 ದಶಲಕ್ಷ ಎಕರೆ) ಇವುಗಳ ಪೈಕಿ ಉತ್ತರ ಪ್ರದೇಶ ಮೊದಲನೆಯದು (767,690 ಎಕರೆ). ಎರಡನೆಯ ಸ್ಥಾನ ಬಿಹಾರ ರಾಜ್ಯದ್ದು (217,517 ಎಕರೆ). ಮಾವಿನ ತೋಟಗಾರಿಕೆಗೆ ಹೆಸರಾಂತ ಉಳಿದ ರಾಜ್ಯಗಳೆಂದರೆ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ಒರಿಸ್ಸ. ಕರ್ನಾಟಕವೂ ಸಾಕಷ್ಟು ಪ್ರಸಿದ್ಧವಾಗಿದೆ.
ಪ್ರಪಂಚದ ಇನ್ನಿತರ ದೇಶಗಳಲ್ಲೂ ಮಾವಿನ ಬೇಸಾಯ ಉಂಟು. ದಕ್ಷಿಣ ಚೀನ, ಮಲಯ, ಫಿಲಿಪೀನ್ಸ್, ಹವಾಯಿ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯದ ಉಷ್ಣಪ್ರದೇಶಗಳು, ಮಡಗಾಸ್ಕರ್, ಆಫ್ರಿಕದ ಕರಾವಳಿ, ಉತ್ತರ ಅಮೆರಿಕದ ಫ್ಲಾರಿಡ ಮತ್ತು ಕ್ಯಾಲಿಫೋರ್ನಿಯ ರಾಜ್ಯಗಳಲ್ಲಿ ಮಾವನ್ನು ಕೃಷಿ ಮಾಡಲಾಗುತ್ತಿದೆ.
ಮಾವು 10-45 ಮೀ ಎತ್ತರಕ್ಕೆ ಬೆಳೆಯುವ ದೊಡ್ಡ ಗಾತ್ರದ ನಿತ್ಯಹರಿದ್ವರ್ಣ ಮರ. ಸಾಮಾನ್ಯವಾಗಿ ನೇರವಾಗಿ ದೃಢವಾಗಿ ಬೆಳೆಯುವಂಥ ಪ್ರಧಾನ ಕಾಂಡ, ಗುಮ್ಮಟದಾಕಾರದ ಚೆಲುವಾದ ಹಂದರ ಇದರ ಮುಖ್ಯ ಲಕ್ಷಣಗಳು. ಕಾಂಡ ಒರಟಾದ, ಮಂದವಾದ, ಕಡುಬೂದಿ ಬಣ್ಣದ ತೊಗಟೆಯಿಂದ ಆವೃತವಾಗಿದೆ. ಹಚ್ಚ ಹಸಿರಿನ ದಟ್ಟವಾದ ಎಲೆಗಳು ಇದ್ದು, ಇದು ತೇವಾಂಶವಿರುವ ಮಿಶ್ರಪರ್ಣಪಾತಿ (Mixed Deciduous) ಹಾಗೂ ಅರೆ ನಿತ್ಯಹರಿದ್ವರ್ಣ (Semi evergreen) ಕಾಡುಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಎಲೆಗಳು 10-30 ಸೆಂಮೀ ಉದ್ದ. 2-9 ಸೆಂಮೀ ಅಗಲ ಇರುವಂಥ ಈಟಿ ಮೊನೆಯಾಕಾರದವಾಗಿವೆ. ಇಂತಹ ಕಾಡುಗಳಲ್ಲಿ ಬೆಳೆಯುವ ಮಾವು ಎತ್ತರವಾಗಿ ಸುಮಾರು ೬೦ ಅಡಿಗಳವರೆಗೂ ಬೆಳೆಯುತ್ತದೆ. ಇದರ ದಾರುವು ಮೃದುವಾಗಿದ್ದು ಮರಗೆಲಸಕ್ಕೆ ಸುಲಭವಾಗಿರುತ್ತದೆಯಾದರೂ ಬಾಳಿಕೆಯುತವಲ್ಲ. ಇದನ್ನು ಪದರ ಹಲಗೆ (plywood) ತಯಾರಿಕೆಯಲ್ಲಿ, ಕೆಲವು ತಾತ್ಕಾಲಿಕ ಉಪಯೋಗದ ಕೆಲಸಗಳಿಗೆ ಹಲಗೆಗಳಾಗಿ ಉಪಯೋಗಿಸಬಹುದು. ಕಸಿ ಮಾಡಲ್ಪಟ್ಟ ಅನೇಕ ತಳಿಗಳು ಕೇವಲ ರುಚಿಕರ ಹಣ್ಣಿಗಾಗಿ ಬೆಳೆಸಲ್ಪಡುತ್ತವೆ.
ಎಲೆಗಳನ್ನು ಹೊಸಕಿದರೆ ವಿಶಿಷ್ಟವಾದ ವಾಸನೆ ಹೊರಬರುತ್ತದೆ. ಹೂಗಳು ಚಿಕ್ಕಗಾತ್ರದವು; ಸಹಸ್ರ ಸಂಖ್ಯೆಯಲ್ಲಿ ಪ್ಯಾನಿಕಲ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಒಂದೇ ಮರದಲ್ಲಿ ಗಂಡು ಮತ್ತು ದ್ವಿಲಿಂಗಿ ಹೂಗಳೆರಡೂ ಇರುವುವು. ಕಾಯಿ ಅಷ್ಟಿ ಫಲ (ಡ್ರೂಪ್) ಮಾದರಿಯದು. ಮಾವಿನ ವಿಭಿನ್ನ ಬಗೆಗಳಲ್ಲಿ ಕಾಯಿಯ ಗಾತ್ರ ಮತ್ತು ಆಕಾರಗಳು ಬೇರೆ ಬೇರೆಯಾಗಿರುವುವು. ಕಾಯಿಯ ಸಿಪ್ಪೆ ಮಂದ ಇಲ್ಲವೆ ತೆಳು ಚರ್ಮಿಲವಾಗಿದೆ. ಕಾಯಿ ಎಳೆಯದಿರುವಾಗ ಹಸುರಾಗಿದ್ದು ಬಲಿತು ಮಾಗಿದಂತೆ ಹಳದಿ ಅಥವಾ ಕೆಂಪು ಬಣ್ಣವನ್ನು ತಳೆಯುತ್ತದೆ. ಸಿಪ್ಪೆಯಲ್ಲಿ ಗ್ರಂಥಿಗಳುಂಟು. ತಿರುಳು ತಿಳಿಹಳದಿ, ಹಳದಿ, ಕಿತ್ತಳೆ ಮುಂತಾದ ವಿಭಿನ್ನ ವರ್ಣದ್ದಾಗಿದ್ದು ಗಟ್ಟಿಯಾಗಿರಬಹುದು ಅಥವಾ ಮೃದು ಹಾಗೂ ರಸಭರಿತವಾಗಿರಬಹುದು. ಕೆಲವು ಬಗೆಗಳಲ್ಲಿ ಇದಕ್ಕೆ ಹುಳಿ ರುಚಿಯಿದ್ದರೆ ಇನ್ನು ಕೆಲವಲ್ಲಿ ಸಿಹಿಯಾಗಿ ಮಾಧುರ್ಯದಿಂದ ಕೂಡಿರುತ್ತದೆ. ಅಂತೆಯೇ ಕೆಲವು ತೆರನ ಮಾವುಗಳು ನಾರು ನಾರಾಗಿರುವುದೂ ಉಂಟು. ಒಳಗೆ ಒಂದೇ ಒಂದು ಅಂಡಾಕಾರದ ಬೀಜ ಇದೆ. ಇದರ ಸುತ್ತ ಪೆಡಸಾದ, ನಾರಿನಿಂದ ರಚಿತವಾದ ಕವಚ ಉಂಟು; ಇದೇ ಓಟೆ.
ಮಾವು ಪ್ರಧಾನವಾಗಿ ಉಷ್ಣವಲಯದ ಬೆಳೆ. 80oF ಸರಾಸರಿ ಉಷ್ಣತೆ ಇರುವಂಥ ಹಾಗೂ ವರ್ಷದಲ್ಲಿ ಜೂನ್-ಸೆಪ್ಟೆಂಬರ್ ತಿಂಗಳುಗಳಲ್ಲಿ ಮಾತ್ರ ಸು. 75-250 ಸೆಂಮೀ ಮಳೆ ಬೀಳುವಂಥ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಹೂ ಅರಳುವ ಸಮಯದಲ್ಲಿ ಮಳೆಗಾಳಿ, ಮಂಜು, ಮೋಡ ಮುಸುಕಿದ ವಾತಾವರಣ ಇರಬಾರದು. ಹಣ್ಣುಗಳು ಬಲಿತು ಮಾಗುವ ವೇಳೆಯಲ್ಲೂ ಮಳೆ ಬೀಳಬಾರದು. ಮಾವು ಕಡುಚಳಿಯನ್ನು ಸಹಿಸದು. ಆಳವಾದ ಮತ್ತು ನೀರು ಚೆನ್ನಾಗಿ ಬಸಿದು ಹೋಗುವಂಥ ಮಣ್ಣು ಇದರ ಬೆಳೆವಣಿಗೆಗೆ ಉತ್ತಮ, ಮೆಕ್ಕಲು ಮಣ್ಣು ಅತ್ಯುತ್ತಮ. ನೆಲ ಕ್ಷಾರೀಯವಾಗಿಯಾಗಲಿ ಶಿಲಾಮಯವಾಗಿಯಾಗಲಿ ಇರಬಾರದು.
ಮಾವನ್ನು ಬೀಜಗಳ ಮುಖಾಂತರ ಸುಲಭವಾಗಿ ಬೆಳೆಸಬಹುದಾದರೂ ಹೀಗೆ ಬೆಳೆಸಲಾರದ ಮರಗಳು ಏಕರೀತಿಯ ಗುಣಮಟ್ಟದ ಫಲ ಕೊಡುವುದು ಖಚಿತ ಅಲ್ಲವಾದ್ದರಿಂದ, ಕಸಿಮಾಡಿ ಬೆಳೆಸುವುದೇ ವಾಡಿಕೆ.
ಕಸಿಮಾಡಿದ ಮಾವಿನ ಸಸಿಗಳನ್ನು ಜುಲೈ-ಡಿಸೆಂಬರ್ ತಿಂಗಳುಗಳ ಅವಧಿಯಲ್ಲಿ ಬೇಕೆನಿಸಿದ ಕಡೆ 60-90 ಸೆಂ.ಮೀ ಆಳದ ಗುಂಡಿಗಳನ್ನು ತೋಡಿ ಕೊಟ್ಟಿಗೆ ಗೊಬ್ಬರ, ಬೂದಿ, ಮಣ್ಣು ಇವುಗಳ ಮಿಶ್ರಣವನ್ನು ಹಾಕಿ, ನೆಡಲಾಗುತ್ತದೆ. ಸಸಿಗಳ ನಡುವಣ ಅಂತರ ಅವುಗಳ ಬೆಳೆವಣಿಗೆಯ ತೀವ್ರತೆ, ಸ್ವಭಾವವನ್ನನುಸರಿಸಿ 10.5ರಿಂದ 18 ಮೀಟರಿನವರೆಗೆ ವ್ಯತ್ಯಾಸವಾಗುವುದು.
ಸಸಿ ನೆಟ್ಟ ಮೊದಲ 3-4 ವರ್ಷಗಳ ಕಾಲ ಗಿಡಗಳಿಗೆ ನೀರು ಹಾಯಿಸುವುದು ಕ್ರಮ. ಅನಂತರ ಮಳೆ ಸರಿಯಾಗಿದ್ದರೆ ನೀರು ಹಾಕುವುದು ಅನಗತ್ಯ. ಅಂತೆಯೇ ಗಿಡಗಳು ಸಣ್ಣ ವಯಸ್ಸಿನವಾಗಿರುವಾಗ ಕೊಟ್ಟಿಗೆ ಗೊಬ್ಬರ, ಮೂಳೆ ಗೊಬ್ಬರ, ಬೂದಿ, ಹರಳು ಹಿಂಡಿ, ಅಮೋನಿಯಮ್ ಸಲ್ಫೇಟ್ ಮುಂತಾದವುಗಳ ಮಿಶ್ರಣವನ್ನು ಹಾಕಲಾಗುತ್ತದೆ. ಮರ ದೊಡ್ಡದಾದ ಮೇಲೆ ಗೊಬ್ಬರ ಹಾಕುವ ಕ್ರಮ ಇಲ್ಲ.
ಕಡುಚಳಿಯಿಂದಲೂ ಬೇಸಗೆಯಲ್ಲಿ ಬಿಸಿಗಾಳಿಯಿಂದಲೂ ಮರಗಳಿಗೆ ಹಾನಿಯುಂಟಾಗುವುದರಿಂದ ಇದನ್ನು ತಡೆಯಲು ಮಾವಿನತೋಟದ ಸುತ್ತ ಹಿಪ್ಪು ನೇರಳೆ, ಬಿರಡಿ, ಗಾಳಿಮರ, ಹಾಲವಾಣ, ರಕ್ತಚಂದನ ಮುಂತಾದ ಮರಗಳನ್ನು ಬೆಳೆಸುವುದಿದೆ.
ಮಾವಿನಮರ ವರ್ಷಕ್ಕೊಮ್ಮೆ, ಡಿಸೆಂಬರ್-ಜನವರಿ ತಿಂಗಳುಗಳಲ್ಲಿ ಹೂಬಿಡುತ್ತದೆ. ಚಳಿ ಹೆಚ್ಚಾಗಿರುವಂಥ ಉತ್ತರ ಭಾರತದಲ್ಲಿ ಹೂ ಅರಳುವ ಶ್ರಾಯ ಫೆಬ್ರುವರಿ-ಮಾರ್ಚ್. ಸುಮಾರು 6-8 ವಾರ ಮರದಲ್ಲಿ ಹೂ ಅರಳಿರುವುವು. ಕಾಯಿ ಕಚ್ಚಿ, ಹಣ್ಣು ಪಕ್ವಸ್ಥಿತಿಗೆ ಬರಲು ಸುಮಾರು 4-5 ತಿಂಗಳು ಕಾಲ ಹಿಡಿಯುವುದು.
ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಾವಿನ ಮರಗಳು ಪ್ರತಿವರ್ಷ ಹೂ ಬಿಡುವುವಾದರೂ ವಯಸ್ಸಾದ ಮರಗಳು ವರ್ಷ ಬಿಟ್ಟು ವರ್ಷ ಹೂ ಅರಳಿಸಿ ಫಲ ಕೊಡುವುವು. ಇದಕ್ಕೆ ಕಾರಣ ಹಲವಾರು : ಹವೆ, ನೆಲದಲ್ಲಿಯ ಆರ್ದ್ರತೆ, ರೋಗರುಜಿನಗಳು ಇತ್ಯಾದಿ. ಹೂಗೊಂಚಲಿನ ಎಲ್ಲ ಹೂಗಳೂ ಕಾಯಿಕಚ್ಚವು. ಕಾಯಿಯಾಗುವ ಹೂಗಳ ಸಂಖ್ಯೆ ವಿವಿಧ ಬಗೆಗಳಲ್ಲಿ ಬೇರೆ ಬೇರೆಯಾಗಿವೆ.
ಮಾವಿನಮರಕ್ಕೆ ಹಲವಾರು ರೀತಿಯ ರೋಗಗಳು, ಕೀಟ ಪಿಡುಗುಗಳು ಹಾನಿ ಎಸಗುವುದುಂಟು. ಬೂಷ್ಟು ರೋಗಗಳ ಪೈಕಿ ಪೌಡರಿ ಮಿಲ್ಡ್ಯೂ, ಆಂತ್ರಕ್ನೋಸ್ ಮತ್ತು ಹೂಮಂಜರಿಯ ಕುಚ್ಚುಗಟ್ಟುವಿಕೆ ಮುಖ್ಯವೆನಿಸಿವೆ. ಮೊದಲ ರೀತಿಯ ರೋಗ ಹೂ ಮತ್ತು ಕಾಯಿಗಳಿಗೆ ಅಂಟುವ ಜಾಡ್ಯ. ಗಂಧಕವನ್ನು ಸಿಂಪಡಿಸುವುದರ ಮೂಲಕ ಇದನ್ನು ತಡೆಗಟ್ಟಬಹುದು.
ಆಂತ್ರಕ್ನೋಸ್ ರೋಗದ ಲಕ್ಷಣ ಎಂದರೆ ಎಳೆಯ ಕುಡಿಗಳು, ಎಲೆ ಹಾಗೂ ಹೂಗಳ ಮೇಲೆ ಕಪ್ಪುಚುಕ್ಕೆಗಳು ಕಾಣಿಸಿಕೊಳ್ಳುವುದು. ಕಾಯಿ ಎಳೆಯವಾಗಿದ್ದರೆ ಬಿದ್ದುಹೋಗುವುವು. ಬಲಿತ ಅಥವಾ ಮಾಗಿದ ಹಣ್ಣುಗಳಾದರೆ ಸಿಪ್ಪೆಯ ಮೇಲೆ ಕಪ್ಪುಚುಕ್ಕೆಗಳು ಮೂಡುವುದಲ್ಲದೆ ಒಳಗಿನ ತಿರುಳು ಗಡುಸಾಗುತ್ತದೆ. ಬೋರ್ಡೊ ಮಿಶ್ರಣದ ಸಿಂಪಡಿಕೆಯಿಂದ ರೋಗವನ್ನು ನಿಯಂತ್ರಿಸಬಹುದು.
ಕುಚ್ಚು ರೋಗದ ಕಾರಣ ಖಚಿತವಾಗಿ ತಿಳಿದಿಲ್ಲ. ರೋಗಪೀಡಿತ ಹೂ ಮಂಜರಿಗಳನ್ನು ಕತ್ತರಿಸಿ ಸುಟ್ಟು ಹಾಕುವುದೇ ಈ ರೋಗವನ್ನು ಹತೋಟಿಯಲ್ಲಿಡುವ ಮಾರ್ಗ.
ಜಾಸಿಡ್ ಜಿಗಿಕೀಟ, ಕಾಂಡ ಕೊರಕ, ಸೊಂಡಿಲು ಕೀಟ, ಶಲ್ಕ ಕೀಟ, ಮಕಮಲ್ ತಿಗಣೆ, ಕೆಂಪಿರುವೆ ಮುಂತಾದವು ಮಾವಿನಮರಕ್ಕೆ ಹಾನಿಯುಂಟು ಮಾಡುವ ಕೀಟಗಳ ಪೈಕಿ ಕೆಲವು, ಡಿಡಿಟಿ, ಬಿಎಚ್ಸಿ, ಫಾಲಿಡಾಲ್, ಗೆಸರೋಲ್ ಮುಂತಾದ ಕೀಟನಾಶಕಗಳ ಬಳಕೆಯಿಂದ ಕೀಟಗಳನ್ನು ನಿಯಂತ್ರಿಸಬಹುದು.
ಕಸಿ ಮಾವಿನ ಮರಗಳು 4ನೆಯ ವರ್ಷದಿಂದ ಫಲಕೊಡಲು ಪ್ರಾರಂಭಿಸುವುವು. ಮೊದಮೊದಲು ಇಳುವರಿ ತುಂಬ ಕಡಿಮೆ. ಕಾಯಿಗಳ ಸಂಖ್ಯೆ ಮೊದಲು ಮರಕ್ಕೆ 10-15 ಇರುತ್ತಿದ್ದು 6ನೆಯ ವರ್ಷಕ್ಕೆ 50-75 ಆಗಿ 16ನೆಯ ವರ್ಷಕ್ಕೆ 300-500ಕ್ಕೇರುತ್ತದೆ. 20ರಿಂದ 40 ವರ್ಷ ವಯಸ್ಸಿನ ಮರಗಳು ತಲಾ 1000-3000 ಹಣ್ಣುಗಳನ್ನು ಕೊಡುವುದುಂಟು. ಲಂಗರಾ, ದಸೆರಿ, ರಸಪೂರಿ, ನೀಲಮ್, ತೋತಾಪುರಿ (ಬ್ಯಾಂಗಲೂರ), ಸುವರ್ಣರೇಖ ಮುಂತಾದ ಬಗೆಗಳು ಅಧಿಕ ಇಳುವರಿ ಕೊಡುವವೆಂದು ಹೆಸರಾಗಿದ್ದರೆ (800-3000 ಹಣ್ಣುಗಳು), ಜಹಾಂಗೀರ್ ಬಗೆ ಕೇವಲ 200-250 ಹಣ್ಣುಗಳನ್ನು ಮಾತ್ರ ಕೊಡುತ್ತದೆ.
ಮಾವಿನಹಣ್ಣಿನ ಸುಗ್ಗಿ ದಕ್ಷಿಣ ಭಾರತದಲ್ಲಿ ಫೆಬ್ರುವರಿ-ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿ ಮೇ ವೇಳೆಗೆ ಮುಗಿಯುತ್ತದಾದರೆ ಉತ್ತರ ಭಾರತದಲ್ಲಿ ಜೂನ್ ಸಮಯಕ್ಕೆ ಆರಂಭವಾಗಿ ಆಗಸ್ಟ್ ಕೊನೆಯ ತನಕ ಇರುತ್ತದೆ.
ಕಾಯಿಗಳು ಪೂರ್ಣ ಬಲಿತಾಗ ಆದರೆ ಇನ್ನೂ ಹಸುರಾಗಿರುವಾಗ ಕೊಯ್ಲು ಆರಂಭವಾಗುತ್ತದೆ. ಚೆನ್ನಾಗಿ ಬಲಿತ ಕಾಯಿಗಳನ್ನು ಸಂಗ್ರಹ ಕೋಣೆಗಳಲ್ಲಿ ಬತ್ತದ ಒಣಹುಲ್ಲು ಇಲ್ಲವೆ ಗೋದಿ ತೌಡಿನ ಹಾಸಿನ ಮೇಲಿರಿಸಿ ಒಂದು ವಾರ ಕಾಲ ಇರಿಸಿ ಮಾಗಲು ಬಿಡಲಾಗುತ್ತದೆ. ಬಿದಿರಿನ ಬುಟ್ಟಿಗಳಲ್ಲಿ ಇಲ್ಲವೆ ಮರದ ಪೆಟ್ಟೆಗೆಗಳಲ್ಲಿ ಹಣ್ಣುಗಳನ್ನು ಇರಿಸಿ ಮಾರುಕಟ್ಟೆಗೆ ಕಳಿಸಲಾಗುತ್ತದೆ.
ಮಾವಿನ ಹಣ್ಣು ಸವಿಯಾದದ್ದು ಮಾತ್ರವಲ್ಲ, ಅದರ ವೈದ್ಯಕೀಯ ಉಪಯೋಗಗಳಿಂದಲೂ ವಿಶ್ವದೆಲ್ಲೆಡೆ ಜನಪ್ರಿಯವಾಗಿದೆ. ಕೆಲವು ತಳಿಗಳು ಪಾನೀಯ ತಯಾರಿಕೆಗೆ ಸೂಕ್ತವಾಗಿದ್ದು, ಕಾಡು ಮಾವಿನ ಜಾತಿಗಳಲ್ಲಿ ಅಪ್ಪೆ ಮತ್ತು ಉಪ್ಪಿನಕಾಯಿ ತಯಾರಿಕೆಗೆ ಬಳಸುತ್ತಾರೆ. ಎಳೆಯ ಮತ್ತು ಪಕ್ವವಾಗದ ಹಣ್ಣುಗಳನ್ನು ಉಪ್ಪಿನಕಾಯಿ, ಚಟ್ನಿ ಮುಂತಾದ ವಿವಿಧ ಆಹಾರಗಳೊಂದಿಗೆ ಸೇವಿಸುತ್ತಾರೆ. ಪಕ್ವ ಹಣ್ಣುಗಳನ್ನು ರಸ, ಜಾಮ್, ಜೆಲ್ಲಿ, ಮುರಬ್ಬ, ಮತ್ತು ಮಾವಿನಹಪ್ಪಳ (ಆಮ್ ಪಾಪಡ್) ಇತ್ಯಾದಿ ರೂಪಗಳಲ್ಲಿ ಬಳಸುತ್ತಾರೆ.
ಮಾವಿನ ಎಳೆಯ ಚಿಗುರನ್ನು ಜಾವಾ ಮತ್ತು ಫಿಲಿಪೀನ್ಸ್ ದೇಶಗಳಲ್ಲಿ ತರಕಾರಿಯಾಗಿ ಬಳಸುತ್ತಾರೆ. ಎಲೆತೊಪ್ಪಲು ದನಗಳಿಗೆ ಮೇವು ಆಗಿ ಬಳಕೆಯಾಗುತ್ತದೆ. ಸುಟ್ಟ ಮಾವಿನ ಎಲೆಗಳ ಬೂದಿಯನ್ನು ಸುಟ್ಟಗಾಯಗಳಿಗೆ ಬಳಸಿದರೆ ವಾಸಿಯಾಗುತ್ತದೆ. ಮಾವಿನ ಒಣಗಿಸಿದ ಹೂಗಳು ಅತಿಸಾರ ಮತ್ತು ಆಮಶಂಕೆಗಳ ಚಿಕಿತ್ಸೆಗೆ ಸಹಾಯಕವಾಗಿದೆ. ತೊಗಟೆಯಲ್ಲಿರುವ ಟ್ಯಾನಿನ್ ಚರ್ಮದ ಹದಗೊಳಿಸಲು ಮತ್ತು ಪ್ರತಿಬಂಧಕವಾಗಿ ಉಪಯೋಗಿಸುತ್ತಾರೆ. ತೊಗಟೆಯಿಂದ ಪಡೆಯುವ ರಸವನ್ನು ಹತ್ತಿ, ರೇಷ್ಮೆ ಮತ್ತು ಉಣ್ಣೆ ಬಟ್ಟೆಗಳಿಗೆ ಪಾಸೆ ಬಣ್ಣ ನೀಡಲು ಬಳಸುತ್ತಾರೆ. ಮಾವಿನ ಮರದಿಂದ ಉತ್ತಮ ಗುಣಮಟ್ಟದ ಗೋಂದು ಲಭ್ಯವಿದೆ.
ಮಾವಿನ ಮರದ ಕಾಠ ಶಕ್ತಿಯುತವಾಗಿದ್ದು, ಗಟ್ಟಿಯಾಗಿರುವುದರಿಂದ ಅನೇಕ ಮರದ ಕೆಲಸಗಳಿಗೆ ಬಳಸಲಾಗುತ್ತದೆ, ಇದರಿಂದ ಬಾಳಿಕೆ ಬರುವ ಸಾಧನಗಳನ್ನು ತಯಾರಿಸಬಹುದು.
1. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ (Boosts Immunity)** ಮಾವಿನ ಹಣ್ಣಿನಲ್ಲಿ ವಿಟಮಿನ್ C ಮತ್ತು ವಿಟಮಿನ್ A ಸಮೃದ್ಧವಾಗಿದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದನ್ನು ನಿರಂತರ ಸೇವಿಸಿದರೆ ರೋಗಗಳ ವಿರುದ್ಧ ರಕ್ಷಣೆ ದೊರಕುತ್ತದೆ.
2. ಹೃದಯ ಆರೋಗ್ಯಕ್ಕೆ ಲಾಭ (Benefits Heart Health)** ಮಾವಿನಲ್ಲಿ ಆ್ಯಂಟಿ-ಆಕ್ಸಿಡೆಂಟ್ಗಳು ಮತ್ತು ಫೈಬರ್ ಇರುವುದರಿಂದ ಇದು ಹೃದಯ ಆರೋಗ್ಯವನ್ನು ಕಾಪಾಡುತ್ತದೆ. ಪೋಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ.
3. ಪಚನ ಕ್ರಿಯೆಗೆ ಉತ್ತಮ (Aids in Digestion)** ಮಾವಿನಲ್ಲಿರುವ ಎಂಜೈಮ್ಗಳು ಮತ್ತು ಫೈಬರ್ ಪಚನಕ್ರಿಯೆಯನ್ನು ಸುಗಮಗೊಳಿಸುತ್ತವೆ. ಇದು ಅಜೀರ್ಣ, ಮಲಬದ್ಧತೆ ಮತ್ತು ಅನಾನಾಸ್ತಿತಿಗೆ ಪರಿಹಾರ ಒದಗಿಸುತ್ತದೆ.
4. ಚರ್ಮದ ಆರೋಗ್ಯ ಸುಧಾರಿಸುತ್ತದೆ (Improves Skin Health)** ಮಾವಿನಲ್ಲಿರುವ ವಿಟಮಿನ್ C ಮತ್ತು A ತ್ವಚೆಗೆ ಕಿರುನರತೆ ತಂದುಕೊಳ್ಳದಂತೆ ತಡೆಗಟ್ಟುತ್ತದೆ ಮತ್ತು ತ್ವಚೆಯನ್ನು ಜಲಸಂಚಯವಾಗಿರಿಸುತ್ತದೆ.
5. ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಾಯಕ (Helps in Cancer Prevention)** ಮಾವಿನಲ್ಲಿರುವ ಪೊಲಿಫಿನಾಲ್ಸ್ ಮತ್ತು ಆ್ಯಂಟಿ-ಆಕ್ಸಿಡೆಂಟ್ಗಳು ಕ್ಯಾನ್ಸರ್ ಪ್ರತಿರೋಧಕ ಗುಣವನ್ನು ಹೊಂದಿವೆ, ಇವು ದೇಹವನ್ನು ಕ್ಯಾನ್ಸರ್ಗಳಿಂದ ರಕ್ಷಿಸುತ್ತವೆ.
6. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ (Regulates Cholesterol Levels) ಮಾವಿನಲ್ಲಿರುವ ಫೈಬರ್ ಮತ್ತು ಪೆಕ್ಟಿನ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
7. ದೃಷ್ಟಿ ಶಕ್ತಿಗೆ ಲಾಭಕರ (Benefits Eye Health)** ಮಾವಿನಲ್ಲಿರುವ ವಿಟಮಿನ್ A ಮತ್ತು ಲ್ಯುಟಿನ್ ದೃಷ್ಟಿ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
ಕರ್ನಾಟಕ ರಾಜ್ಯದಲ್ಲಿ ಮಾವು ಇಳುವರಿ ಪ್ರಮಾಣ
ವರ್ಷ | ಇಳುವರಿ | ಪ್ರಮಾಣ/ಟನ್ |
---|---|---|
2009 | ಪೂರ್ಣ | 7,95,000 |
2010 | ಅಲ್ಪ | 2,60,000 |
2011 | ಪೂರ್ಣ | 8,50,000 |
2012 | ಅಲ್ಪ | 2,75,000 |
ದೇಶ | ಟನ್ |
---|---|
ಅಮೇರಿಕಾ | 5000 ಟನ್ |
ಬ್ರಿಟನ್ | 3000 |
ಮಲೇಷ್ಯಾ | 3000 |
ಅರಬ್ ರಾಷ್ಟ್ರ | 3000 |
ಆಸ್ಟ್ರೇಲಿಯಾ | 3000 |
ಪ್ರದೇಶ | ಬೆಳೆಯುವ ಪ್ರದೇಶ- ಲಕ್ಷ ಹೆಕ್ಟೇರ್ | ಇಳುವರಿ ಲಕ್ಷ ಟನ್ |
---|---|---|
ಭಾರತ | 15.2 | 95 |
ಕರ್ನಾಟಕ | 2 | 12-14 |
ಕೋಲಾರ | 40000ಹೆ. | 4 |
ರಾಮನಗರ | 20000ಹೆ. | 20.5 |
ಧಾರವಾಡ | 20000 | 2 |
ಚಿಕ್ಕಬಳ್ಳಾಪುರ | 15000 | 2.25 |
ಹಾವೇರಿ | 15000 | 1.75 |
ಬೆಳಗಾವಿ | 15000 | 1.75 |
ಮಾವಿನಲ್ಲಿ ಬೀಜದಿಂದ ವೃದ್ಧಿಸಲಾಗುವ ಮತ್ತು ಕಸಿ ವಿಧಾನದಿಂದ ವೃದ್ಧಿಸಲಾಗುವ ಎಂದು ಎರಡು ಪ್ರಧಾನ ಗುಂಪುಗಳನ್ನು ಗುರುತಿಸಲಾಗಿದೆ. ಭಾರತದಲ್ಲಿ ಬೆಳೆಯಲಾಗುತ್ತಿರುವ ಮಾವಿನ ವಿವಿಧ ಬಗೆಗಳ ಪೈಕಿ ಮುಕ್ಕಾಲು ಪಾಲು ಮೊದಲನೆಯ ಗುಂಪಿಗೆ ಸೇರಿವೆಯಾದರೂ ಇವು ವಾಣಿಜ್ಯ ದೃಷ್ಟಿಯಿಂದ ಮುಖ್ಯವೆನಿಸಿಲ್ಲ. ಏಕೆಂದರೆ ಇವು ಪುಷ್ಕಳವಾಗಿ ಫಲ ಬಿಡುವುವಾದರೂ ಪ್ರತಿವರ್ಷ ಒಂದೇ ರೀತಿ ಫಲ ಕೊಡುವುವು ಎಂದು ಹೇಳುವಂತಿಲ್ಲ. ಇವುಗಳಲ್ಲಿ ಏಕಭ್ರೂಣೀಯ ಮತ್ತು ಬಹುಭ್ರೂಣೀಯ ಎಂಬ ಎರಡು ಬಗೆಗಳುಂಟು. ಭಾರತದ ಮಾವಿನ ಬಗೆಗಳ ಪೈಕಿ ಬಹುಪಾಲು ಮೊದಲನೆಯ ಗುಂಪಿನವು. ಕೇರಳದ ಕೆಲವಡೆಗಳಲ್ಲಿ ಮಾತ್ರ ಎರಡನೆಯ ಬಗೆಯ ಮಾವು ಕಂಡುಬರುತ್ತದೆ. ಉದಾಹರಣೆಗೆ ಓಲೂರು ಮತ್ತು ಚಂದ್ರಕರಣ. ಆಗ್ನೇಯ ಏಷ್ಯದ ಆರ್ದ್ರಕಾಡುಗಳಲ್ಲಿ ಬೆಳೆಯುವಂಥ ಹೆಚ್ಚಿನ ಪಾಲು ಮಾವುಗಳು ಬಹು ಭ್ರೂಣೀಯ ಗುಂಪಿನವಾಗಿವೆ. ಇಂಡೊಚೀನ ಪ್ರದೇಶದಲ್ಲಿ ಬೆಳೆಯುವ ಕಾಂಬೋಡಿಯಾನ, ಫಿಲಿಪೀನ್ಸ್ನಲ್ಲಿ ಬೆಳೆಯುವ ಕ್ಯಾರಬಾವೊ ಮತ್ತು ಪೈಕೊ ಬಗೆಗಳು ಈ ಗುಂಪಿನವು.
ಒಂದು ಅಂದಾಜಿನ ಪ್ರಕಾರ ದೇಶದ ವಿವಿಧ ಭಾಗಗಳಲ್ಲಿ ಸುಮಾರು 1000ಕ್ಕೂ ಹೆಚ್ಚಿನ ಮಾವಿನ ಬಗೆಗಳು ಕಾಣದೊರೆಯುತ್ತವೆ. ಇವುಗಳಿಗೆ ಒಂದೊಂದಕ್ಕೂ ವಿಶಿಷ್ಟವಾದ ರುಚಿ, ಸ್ವಾದ, ತಿರುಳಿನ ರಚನೆ ಇವೆಯೆನ್ನಲಾಗಿದೆ. ಆದರೆ ಈ ತೆರನ ವರ್ಗೀಕರಣಕ್ಕೆ ವೈಜ್ಞಾನಿಕ ಆಧಾರಗಳಿಲ್ಲವಾದ್ದರಿಂದ ಕಾಯಿಗಳ ಗಾತ್ರ, ಆಕಾರ ಗುಣಮಟ್ಟ, ಮರದ ಬೆಳೆವಣಿಗೆ ಮುಂತಾದ ಲಕ್ಷಣಗಳನ್ನು ಗಣನೆಗೆ ತೆಗೆದುಕೊಂಡು ಮಾವಿನ ಬೇರೆ ರೂಪಭೇದಗಳನ್ನು, ಬಗೆಗಳನ್ನು ಹೆಸರಿಸಲು ಪ್ರಯತ್ನ ನಡೆಸಲಾಗಿದೆ. ಇದರ ಫಲವಾಗಿ ಒಟ್ಟು 77 ಭಾರತೀಯ ಬಗೆಗಳನ್ನೂ 24 ವಿದೇಶೀ ಬಗೆಗಳನ್ನೂ ಗುರುತಿಸಲಾಗಿದೆ. ಇವುಗಳ ಪೈಕಿ ವಾಣಿಜ್ಯದೃಷ್ಟಿಯಿಂದ ಅತಿಮುಖ್ಯವೆನಿಸಿರುವ ಕೆಲವು ಬಗೆಗಳನ್ನೂ ಅವುಗಳ ಕೃಷಿಗೆ ಪ್ರಸಿದ್ಧವಾಗಿರುವ ರಾಜ್ಯಗಳನ್ನೂ ಹೆಸರಿಸಲಾಗಿದೆ: ಆಲಂಪುರ್ ಬನೆಷನ್ (ಆಂಧ್ರ ಪ್ರದೇಶ, ತಮಿಳುನಾಡು), ಆಲ್ಫೊನ್ಸೊ (ಬಾದಾಮಿ, ಆಪೂಸ್ ಇತ್ಯಾದಿ; ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರ), ಬ್ಯಾಂಗಲೂರ (ತೋತಾಪುರಿ, ಕಿಳಿಮುಕ್ಕು; ಆಂಧ್ರ, ತಮಿಳುನಾಡು, ಕರ್ನಾಟಕ), ಬಂಗನ ಪಲ್ಲೆ (ಆಂಧ್ರ), ದಸೆರಿ (ಉತ್ತರ ಪ್ರದೇಶ, ಪಂಜಾಬ್, ದೆಹಲಿ), ಗುಲಾಬ್ ಖಾಸ್ (ಬಿಹಾರ), ಲಂಗರಾ (ಉತ್ತರಪ್ರದೇಶ, ಬಿಹಾರ), ಮಲ್ಗೋವ (ಆಂಧ್ರ, ಮಹಾರಾಷ್ಟ್ರ, ಕರ್ನಾಟಕ), ನೀಲಮ್ (ತಮಿಳುನಾಡು, ಆಂಧ್ರ), ಓಲೂರು (ಕೇರಳ), ಪೈರಿ-ರಸಪೂರಿ (ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಕೇರಳ), ರುಮಾನಿ (ತಮಿಳುನಾಡಿನ ಪೂರ್ವ ಜಿಲ್ಲೆಗಳು), ರಾಜಾಪುರಿ (ಗುಜರಾತ್), ಸುವರ್ಣರೇಖ (ಆಂಧ್ರ), ವನರಾಜ (ಗುಜರಾತಿನ ವಡೋದರ ಭಾಗ), ಫಜ್ಲಿ (ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಬಿಹಾರ), ಜರ್ದಾಲು (ಬಿಹಾರ, ಉತ್ತರ ಪ್ರದೇಶ), ಸಫೇದ (ಲಕ್ನೊ, ಉತ್ತರ ಪ್ರದೇಶ).
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.