Remove ads
From Wikipedia, the free encyclopedia
ಬೊನಾಲು (ತೆಲುಗು బోనాలు) ಇದು ಒಂದು ಭಾರತೀಯ ಹಬ್ಬ(ಇದು ತೆಲಂಗಾಣದ ಪರಿಶಿಷ್ಟ ಮತ್ತು ಹಿಂದುಳಿದ ಜನಾಂಗದವರಿಂದ ಆಚರಿಸಲ್ಪಡುತ್ತದೆ. ಇದರ ವಿಧಿ ವಿಧಾನಗಳು ಬ್ರಾಹ್ಮಣರಿಂದ ನಿರ್ವಹಿಸಲ್ಪಡುತ್ತದೆ). ಶಕ್ತಿ ದೇವತೆಯಾದ ಮಹಾಕಾಳಿ ಅಥವಾ ಕಾಳಿಯ ಕುರಿತಾದ ಈ ಆಚರಣೆಯು ಭಾರತದ ಹೈದರಾಬಾದ್, ಸಿಕಂದರಾಬಾದ್, ತೆಲಂಗಾಣ ಮತ್ತು ರಾಯಲಸೀಮಾದ ಭಾಗಗಳಲ್ಲಿ ಆಚರಿಸಲ್ಪಡುತ್ತದೆ.[೧] ಇದನ್ನು ಜುಲೈ ಮತ್ತು ಆಗಸ್ಟ್ನಲ್ಲಿ ಬರುವ ಆಷಾಢ ಮಾಸದಲ್ಲಿ ಆಚರಿಸಲಾಗುತ್ತದೆ. ಹಬ್ಬದ ಮೊದಲ ಮತ್ತು ಕಡೆಯ ದಿನದಲ್ಲಿ ಎಲ್ಲಮ್ಮದೇವಿಗೆ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿರುತ್ತವೆ.[೨] ತಮ್ಮ ಬಯಕೆಗಳು ಈಡೇರಿದ ಹಿನ್ನೆಲೆಯಲ್ಲಿ ದೇವರಿಗೆ ಕೃತಜ್ಞತೆಯನ್ನು ಅರ್ಪಿಸಲು ಸಹ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಬೊನಮ್ ಎಂದರೆ ಭೋಜನ ಅಥವಾ ಊಟ ಎಂಬ ಅರ್ಥ ತೆಲುಗುದಲ್ಲಿದ್ದು, ದೇವರಿಗೆ ನೈವೇದ್ಯ ಎಂಬ ಅರ್ಥದಲ್ಲಿ ಹಿನ್ನೆಲೆಯಲ್ಲಿ ಬಳಸಲ್ಪಡುತ್ತದೆ. ಮಹಿಳೆಯರು ಹಾಲಿನೊಂದಿಗೆ ಮಾಡಿದ ಅನ್ನ,ಸಕ್ಕರೆ ಕೆಲವೊಮ್ಮೆ ಈರುಳ್ಳಿಗಳನ್ನು ಹಿತ್ತಾಳೆ ಅಥವಾ ಮಣ್ಣಿನ ಮಡಕೆಯಲ್ಲಿಟ್ಟು ನಿಂಬುವಿನ ಸಣ್ಣ ಸಣ್ಣ ಕೊಂಬೆಗಳಿಂದ ಮತ್ತು ಅರಿಶಿಣ ಕಡುಕೆಂಪು ಬಣ್ಣ (ಕುಂಕುಮ) ಅಥವಾ ಕಡಿ (ಬಿಳಿ ಸುಣ್ಣ)ಯೊಂದಿಗೆ ಅಲಂಕಾರ ಮಾಡಿ ಮೇಲ್ಭಾಗದಲ್ಲಿ ದೀಪವನ್ನು ಇಟ್ಟಿರುತ್ತಾರೆ. ಮಹಿಳೆಯರು ಇದನ್ನು ತಲೆಯ ಮೇಲೆ ಹೊತ್ತುಕೊಂಡು ದೇವಸ್ಥಾನಕ್ಕೆ ಡೋಲಿನವರೊಂದಿಗೆ ಹಾಗೂ ನೃತ್ಯನಿರತ ಪುರುಷರೊಂದಿಗೆ ಸಾಗುತ್ತಾರೆ.
ದೇವಿಯ ಆಲಯವು ಮೈಸಮ್ಮ , ಪೋಚಮ್ಮ , ಎಲ್ಲಮ್ಮ ,ಪೆದ್ದಮ್ಮ , ಡೊಕ್ಕಾಲಮ್ಮ , ಅಂಕಾಲಮ್ಮ , ಪೊಲೆರಮ್ಮ , ಮಾರೆಮ್ಮ , ಪೊಚಮ್ಮೆ , ಮಾರಮ್ಮ, ಎಲ್ಲಮ್ಮ ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತವೆ ಮತ್ತು ದೀಪಾಲಂಕಾರ, ತೋರಣ ಮತ್ತು ಹಾರಗಳಿಂದ ಅಲಂಕರಿಸಲ್ಪಟ್ಟಿರುತ್ತವೆ.
ಬೊನಾಲು ಹಬ್ಬವು ಗೊಲ್ಕೊಂಡಾ ಕೋಟೆಯಲ್ಲಿನ ಗೊಲ್ಕೊಂಡಾ ಮಹಾಕಾಳಿ, ಲಷ್ಕರ್ ಬೊನಾಲು ಎಂದೂ ಕರೆಯಲ್ಪಡುವ ಸಿಕಂದರಾಬಾದ್ನ ಉಜ್ಜಯಿನಿ ಮಹಾಕಾಳಿ ದೇವಸ್ಥಾನ, ಬಲ್ಕಂಪೇಟೆ ಎಲ್ಲಮ್ಮ ದೇವಸ್ಥಾನ ಸೇರಿದಂತೆ ಈ [೩] ಹಳೆ ನಗರದಾದ್ಯಂತ ಈ ಹಬ್ಬ ಆಚರಿಸಲ್ಪಡುತ್ತದೆ.
ಹಬ್ಬದ ದಿನದಂದು ಮಹಿಳೆಯರು ರೇಷ್ಮೆ ಸೀರೆ ಮತ್ತು ಒಡವೆಗಳನ್ನು ತೊಟ್ಟಿರುತ್ತಾರೆ. ಕೆಲವು ಭಾವಪರವಶರಾದ ಮಹಿಳೆಯರು ತಾವು ಹೊತ್ತ ಮಡಿಕೆಯ (ಬೊನಾಮ್) ಸಮತೋಲನವನ್ನು ಕಾಯ್ದುಕೊಳ್ಳುತ್ತ ಡೋಲುಗಳ ಶಬ್ದಕ್ಕೆ ನೃತ್ಯ ಮಾಡುತ್ತ ಸ್ಥಳಿಯ ದೇವತೆಗೆ ಗೌರವವನ್ನು ತೋರುತ್ತಾರೆ.
ದುಷ್ಟ ಶಕ್ತಿಗಳಿಂದ ರಕ್ಷಣೆಗಾಗಿ ಆ ದಿನಗಳಲ್ಲಿ ಜನರು ದೇವಸ್ಥಾನದ ಮುಂದೆ ಕೋಣವನ್ನು ಬಲಿ ಕೊಡುತ್ತಿದ್ದರು ಆದರೆ ಈಗ ಕೆಲವು ವೇಳೆಯಲ್ಲಿ ಮಾತ್ರ ಹುಂಜಗಳನ್ನು ಬಲಿಕೊಡುತ್ತಾರೆ.
ಮಹಿಳೆಯರು ಬೊನಾಲುವನ್ನು ಹೊರುವುದರಿಂದ ದೇವಿಯ ಶಕ್ತಿ, ಕೃಪೆಯನ್ನು ಹೊಂದಬಹುದು ಎಂಬುದಾಗಿ ನಂಬಿದ್ದಾರೆ. ಈ ಮಹಿಳೆಯರು ದೇವಸ್ಥಾನವನ್ನು ಪ್ರವೇಶಿಸುತ್ತಿದ್ದಂತೆಯೆ ಸಹಜವಾಗಿಯೇ ಆಕ್ರಮಣಕಾರಿ ಶಕ್ತಿ ಎಂದು ನಂಬಲಾದ ದೇವಿಯನ್ನು ಸಾಂತ್ವನಗೊಳಿಸಲು ಜನರು ನೀರನ್ನು ತಲೆಯಮೇಲೆ ಸುರಿಯುತ್ತಾರೆ.
ಪ್ರತಿ ಭಕ್ತರ ಗುಂಪು ಸಹ ತೊಟ್ಟೆಲ್ಲ (ಕಡ್ಡಿಯ ಸಹಾಯದಿಂದ ರೂಪಿತವಾದ ಬಣ್ಣದ ಹಾಳೆಗಳ ಆಕೃತಿ)ವನ್ನು ದೇವಿಗೆ ಗೌರವಾರ್ಥವಾಗಿ ನೀಡುತ್ತಾರೆ.
ಆಷಾಢ ಮಾಸದಲ್ಲಿ ದೇವಿ ತನ್ನ ತವರು ಮನೆಗೆ ಮರಳುವುದಾಗಿ ಜನರು ನಂಬಿದ್ದಾರೆ, ಇದೇ ಸಂದರ್ಭದಲ್ಲಿ ಜನರು ದೇವಿಯನ್ನು ನೋಡಲು ಮತ್ತು ಆಕೆಗೆ ಪ್ರೀತಿ ಮತ್ತು ವಾತ್ಸಲ್ಯವನ್ನು ತೋರಿಸಲು ಆಹಾರವನ್ನು ಅರ್ಪಿಸುತ್ತಾರೆ. ತಮ್ಮ ಸ್ವಂತ ಮಗಳು ತಮ್ಮ ಮನೆಗೆ ಬಂದಾಗ ಯಾವ ತರಹದ ಅಡಿಗೆಯನ್ನು ಅವರು ಮಾಡುತ್ತಾರೆಯೋ ಅದೆ ರೀತಿಯಲ್ಲಿ ಈಗಲೂ ಆಹಾರವನ್ನು ಸಿದ್ದಪಡಿಸುತ್ತಾರೆ.
ಪೋತರಾಜು ದೇವಿಯ ಸಹೋದರನಾಗಿದ್ದು, ಈತನ ಪ್ರತಿನಿಧಿಯಾಗಿ ದಪ್ಪ ಆಕಾರದ ಅರೆ ನಗ್ನಾವಸ್ಥೆಯ ಕೆಂಪು ವಸ್ತ್ರವನ್ನು ಬಿಗಿಯಾಗಿ ಸುತ್ತಿಕೊಂಡ ಮತ್ತು ಕಾಲಿಗೆ ಗೆಜ್ಜೆಯನ್ನು ಕಟ್ಟಿಕೊಂಡ, ಎಣ್ಣೆಯೊಂದಿಗೆ ಅರಿಶಿಣ ಮಿಶ್ರಣ ಮಾಡಿ ಮೈಗೆಲ್ಲೆ ಲೇಪಿಸಿಕೊಂಡ ಹಾಗೂ ಹಣೆಗೆ ಕುಂಕುಮವನ್ನು ಹಚ್ಚಿಕೊಂಡಿರುವ ವ್ಯಕ್ತಿ ಮೆರವಣಿಗೆಯಲ್ಲಿ ಕಾಣಿಸಿಕೊಳ್ಳುತ್ತಾನೆ. ಡೋಲುಗಳ ಶಬ್ದಕ್ಕೆ ಈತ ನೃತ್ಯ ಮಾಡುತ್ತಾನೆ.[೪]
ಮೆರವಣಿಗೆಯಲ್ಲಿ ಈತ ಯಾವಾಗಲೂ ಫಲಹಾರದ ಬಂಡಿಯ ಮುಂದೆಯೇ ನೃತ್ಯ ಮಾಡುತ್ತಿರುತ್ತಾನೆ. ಈತನನ್ನು ಉತ್ಸವದ ಆದಿ ದೇವ ಮತ್ತು ಸಮುದಾಯದ ರಕ್ಷಕನೆಂದು ಪರಿಗಣಿಸಲಾಗಿದೆ. ಈತನು ಭಾವಪರವಶವಾದ ಮಹಿಳಾ ನೃತ್ಯನಿರತ ಶಕ್ತಿ ದೇವಿಯ ಅಂಶ (ಶಿಗಂ ಎಂದು ಕರೆಯಲ್ಪಡುವ)ವನ್ನು, ಚಾವಟಿಯಿಂದ ಹೊಡೆದುಕೊಳ್ಳುತ್ತ ಬೇವಿನ ಎಲೆಗಳನ್ನು ಸೊಂಟಕ್ಕೆ ಸುತ್ತಿಕೊಂಡು ತಮಟೆ ಮತ್ತು ಡೊಲ್ಲುಗಳೊಂದಿಗೆ ದೇವಸ್ಥಾನಕ್ಕೆ ಕರೆದೊಯ್ಯುತ್ತಾನೆ.[೫]
ದೇವಿಯನ್ನು ನೈವೇದ್ಯಕ್ಕಾಗಿ ಆಹ್ವಾನಿಸುವ ಮತ್ತು ಮನೆಯವರೊಂದಿಗೆ, ಕುಟುಂಬದ ಸದಸ್ಯರು ಹಾಗೂ ಅತಿಥಿಗಳೊಂದಿಗೆ ಆಹಾರ ಸ್ವೀಕರಿಸುವುದೇ ಬೊನಾಲು ಆಚರಣೆಯ ಉದ್ದೇಶವಾಗಿದೆ. ದೇವರಿಗೆ ನೈವೇದ್ಯ ಅರ್ಪಿಸಿದ ನಂತರ ಕುಟುಂಬದ ಮಾಂಸಹಾರಿ ಹಬ್ಬದೂಟವನ್ನು ಸ್ವೀಕರಿಸುತ್ತವೆ.[೬]
ಅಲ್ಲಿ ಧ್ವನಿವರ್ಧಕಗಳ ಮೂಲಕ ದೇವಿಯ ಜಾನಪದ ಶೈಲಿಯ ಭಕ್ತಿ ಗೀತೆಗಳು ಕೇಳಿಸುತ್ತಿರುತ್ತವೆ, ಮತ್ತು ಊರು ಕೇರಿಗಳು ಬೇವಿನ ಎಲೆಗಳಿಂದ ಸಿಂಗರಿಸಲ್ಪಟ್ಟಿರುತ್ತವೆ. ಈ ಎಲ್ಲವುಗಳಿಂದ ಅಲ್ಲಿನ ಹಬ್ಬದ ಆಚರಣೆಯನ್ನು ಆ ಪರಿಸರದಿಂದಲೇ ಗುರುತಿಸಬಹುದಾಗಿದೆ.
ರಂಗಮ್ ಅಥವಾ ಭವಿಷ್ಯವನ್ನು ಹೇಳುವಿಕೆ , ಇದು ಹಬ್ಬದ ನಂತರದ ಮುಂಜಾನೆಯಂದು ನಡೆಯುವ ಆಚರಣೆಯಾಗಿದೆ. ಭಕ್ತಾದಿಗಳು ಭವಿಷ್ಯದ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ ಮಂತ್ರಶಕ್ತಿಗೆ ಒಳಗಾದ ಮಹಿಳೆ ವರ್ಷದ ಮುಂದಿನ ಭವಿಷ್ಯವನ್ನು ನುಡಿಯುತ್ತಾಳೆ. ಈ ಆಚರಣೆಯು ಮೆರವಣಿಗೆಯ ಪ್ರಾರಂಭಕ್ಕಿಂತ ಮೊದಲೇ ನಡೆಯುತ್ತದೆ.[೭]
ಘಟಂ ಇದು ತಾಮ್ರದ ಕುಂಭವಾಗಿರುತ್ತದೆ ಇದನ್ನು ದೇವಿಯ ರೀತಿಯಲ್ಲಿ ಅಲಂಕರಿಸಲಾಗಿರುತ್ತದೆ. ಸಾಂಪ್ರದಾಯಿಕ ಧೋತಿ ಯನ್ನು ಉಟ್ಟ ಮತ್ತು ಅರಿಷಿಣ ಲೇಪಿತ ಆರಾಧಕ ಘಟಂ ಹೊರುತ್ತಾನೆ. ಘಟಂ ಅನ್ನು ಹಬ್ಬದ ಮೊದಲ ದಿನದಿಂದ ಕೊನೆಯ ದಿನದವರೆಗೂ ಮೆರವಣಿಯಲ್ಲಿ ಒಯ್ಯಲಾಗುತ್ತದೆ, ಮತ್ತು ನೀರಿನಲ್ಲಿ ವಿಸರ್ಜಿಸುವುದರೊಂದಿಗೆ ಇದು ಮುಕ್ತಾಯಗೊಳ್ಳುತ್ತದೆ. ಘಟಂ ಮೆರವಣಿಗೆಯಲ್ಲಿ ಒಯ್ಯುವಾಗ ಡೋಲುಗಳನ್ನು ಬಡಿಯುತ್ತ ಸಾಗುತ್ತಾರೆ.[೮]
ರಂಗಮ್ನ ನಂತರ ಘಟಂ ನೆರವೇರುತ್ತದೆ. ಹಬ್ಬವು ಘಟಂ ಅನ್ನು ನೀರಿನಲ್ಲಿ ವಿಸರ್ಜಿಸುವ ಮೂಲಕ ಮುಕ್ತಾಯವಾಗುತ್ತದೆ. ಹರಿಬೌಲಿಯ ಅಕ್ಕಣ್ಣ ಮಾದಣ್ಣ ದೇವಸ್ಥಾನ[೯][೧೦] ದ ಘಟಂ ಆನೆಯ ಮೇಲೆ ಪ್ರತಿಷ್ಠಾಪಿಸಲ್ಪಟ್ಟು ಕುದುರೆಗಳ ಬೆಂಗಾವಲಿನಲ್ಲಿ ಅಕ್ಕಣ್ಣ ಮತ್ತು ಮಾದಣ್ಣ ಅವರ ಭಿತ್ತಿಚಿತ್ರಗಳೊಂದಿಗೆ ಮೆರವಣಿಗೆಯನ್ನು ಮುಂದುವರೆಸುತ್ತದೆ. ಇದು ಸಾಯಂಕಾಲ ಪ್ರಕಾಶಮಾನವಾದ ಮೆರವಣಿಗೆಯೊಂದಿಗೆ ನಯಪುಲ್ನಲ್ಲಿ ಘಟಂ ಅನ್ನು ವಿಸರ್ಜಿಸುವ ಮೂಲಕ ಸಮಾಪ್ತಿಯಾಗುತ್ತದೆ.[೧೧]
ಹಬ್ಬದ ವಾತಾವರಣದಲ್ಲಿ ಲಾಲ್ ದರ್ವಾಝಾದಿಂದ ನಯಪುಲ್ ವರೆಗಿನ ಮುಖ್ಯ ರಸ್ತೆಗಳಲ್ಲಿ ಸಾವಿರಾರು ಜನರು ರಮ್ಯವಾಗಿ ಅಲಂಕಾರಗೊಂಡ ಘಟಂಗಳನ್ನು ನೋಡಲು ಕಾಯುತ್ತಿರುತ್ತಾರೆ. ಯುವಕರು ಆ ಸಂದರ್ಭದಲ್ಲಿ ಪೋತರಾಜುವಿನ ಸುತ್ತಲು ಡೊಲ್ಲಿನ ತಾಳಕ್ಕೆ ತಕ್ಕಂತೆ ಅನೇಕ ಪೌರಾಣಿಕ ಪಾತ್ರಧಾರಿಗಳಾಗಿ ಒಂದೇ ಶೈಲಿಯಲ್ಲಿ ಹೆಜ್ಜೆ ಹಾಕುತ್ತಾರೆ.
ಹರಿಬೌಲಿಯ ಅಕ್ಕಣ್ಣ ಮಾದಣ್ಣರ ಮಹಾಕಾಳಿ ದೇವಸ್ಥಾನ, ಲಾಲ್ ದರ್ವಾಝಾ,ಉಪ್ಪಗುಡ, ಮಿರಲಮ್ ಮಂಡಿ ಮತ್ತು ಕಸರಟ್ಟ, ಸುಲ್ತಾನಶಾಹಿಯ ಜಗದಾಂಬ ದೇವಸ್ಥಾನ, ಶಾಲಿಬಂದದ ಬಂಗಾರು ಮೈಸಮ್ಮ ದೇವಸ್ಥಾನ, ಅಲಿಜಾ ಕೊಟ್ಲಾ ಮತ್ತು ಗೌಳಿಪುರ, ಮತ್ತು ಸುಲ್ತಾನ್ ಶಾಹಿ, ಅಲಿಯಾಬಾದ್ನ ದರ್ಬಾರ್ ಮೈಸಮ್ಮ, ಮತ್ತು ಚಂದುಲಾಲ್ ಬೆಲದ ಮುತ್ಯಾಲಮ್ಮ ದೇವಸ್ಥಾನದ ಸೇರಿದಂತೆ ಹಳೆನಗರದ ಭಾಗಗಳಲ್ಲಿ ಈ ಮೆರವಣಿಗೆ ಸಾಗುತ್ತದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.